೪೨೪

ಗುರುವಿನ ಗುರು ಪರಮಗುರು
ಜಂಗಮವೆಂದೆನಿಸಿಕೊಂಡ ಬಳಿಕ,
ಗುರುವಾಗಿ ದೀಕ್ಷೆಯ ಮಾಡಲಾಗದು.
ಮುನ್ನ ಗುರು ಕಾರುಣ್ಯವಾಗಿ ದೀಕ್ಷೆಯಂ ಮಾಡಿದಲ್ಲಿ
ದಾಸೋಹವ ಮಾಡಿಸಿಕೊಳಲು ಕರ್ತನಲ್ಲದೆ,
ತನ್ನ ಪ್ರಾಣಲಿಂಗವ ಕೊಡ ಕರ್ತನಲ್ಲ,
ಪ್ರಾಣಲಿಂಗವ ಕೊಟ್ಟು ಗುರುವಾದ ಬಳಿಕ
ಬಳಿಕ ಸ್ಥಲಕ್ಕೆ ಭಂಗ ಹೊದ್ದಿತ್ತು
ಕೂಡಲ ಚೆನ್ನಸಂಗಮದೇವಾ.         ||೪೨||

೪೨೫

ಲಿಂಗವ ಕಟ್ಟಿ ಸುಳಿವಾತ ಜಂಗಮವಲ್ಲ.
ಆ ಜಂಗಮಕ್ಕೆ ಮಾಡುವಾತ ಭಕ್ತನಲ್ಲ.
ಈ ಉಭಯ ಕುಳವಳಿದಾತ ಜಂಗಮ.
ಆ ಜಂಗಮಕ್ಕೆ ಮಾಡುವಾತ ಭಕ್ತ.
ಇದು ಕಾರಣ ಕೂಡಲಚೆನ್ನಸಂಗದಲ್ಲಿ
ಉಭಯ ಕುಳವಳಿದಾತ ಭಕ್ತನು ಅಪೂರ್ವ;
ಅಂತಹ ಜಂಗಮವು ಅಪೂರ್ವವು     ||೪೩||

೪೨೬

ಕೇಶಕಾಶಾಂಬರವನಿಕ್ಕಿದರೇನು?
ವಿಭೂತಿ, ರುದ್ರಾಕ್ಷಿ ಮಕಟುವ ಧರಿಸಿದರೇನು?
ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ.
ಪರಮಾರ್ಥದಲ್ಲಿ ಪರಿಣಾಮಿಗಳಲ್ಲ.
ಇದು ಕಾರಣ ಕೂಡಲ ಚೆನ್ನಸಂಗಮದೇವಾ
ತುರುಬಾಗಲಿ, ಬೋಳಾಗಲಿ, ಜೆಡೆಯಾಗಲಿ ಅರಿವುಳ್ಳಡೆ ಜಂಗಮವು.       ||೪೪||

೪೨೭

ಉಪಚಾರದ ಗುರುವಿಂಗೆ ಉಪಚಾರದ ಶಿಷ್ಯ,
ಉಪಚಾರದ ಲಿಂಗ, ಉಪಚಾರದ ಜಂಗಮ,
ಉಪಚಾರದ ಪ್ರಸಾದವ ಕೊಂಡು;
ಗುರುವಿಂಗೆ ಭವದ ಲೆಂಕನಾಗಿ,
ಅಂಧಕನ ಕೈಯನಂಧಕ ಹಿಡಿದಂತೆ
ಹೊಲಬುಗೆಟ್ಟರು ಕಾಣಾ ಗುಹೇಶ್ವರಾ            ||೪೫||

೪೨೮

ಲಿಂಗ ಜಂಗಮದ ಸಂಬಂಧವ
ಸ್ವಯವ ಮಾಡಿಹೆನೆಂಬವರು ನೀವು ಕೇಳಿಭೊ,
ಗುರು ಮುನ್ನವೊ? ಶಿಷ್ಯ ಮುನ್ನವೊ?
ಆವುದು ಮುನ್ನ ನೀವು ಹೇಳಿರೆ.
ಇದು ಕಾರನ ಆವ ಸಂಬಂಧವನು ಅರಿಯದೆ ಕೆಟ್ಟರು ಗುಹೇಶ್ವರಾ ||೪೬||

ಇನ್ನು ಪಂಚ ಸೂತಕಂಗಳ ಕಳವ ಕ್ರಮ ಕಟ್ಟಣೆಗಳ ಬಸವಾದಿ ಪ್ರಮಥರ ಸಮಯಕ್ಕೆ ಬಿನ್ಹಂ ಮಾಡಿಹೆನದೆಂತನಲು: ಬ್ರಾಹ್ಮಣನೆಂಬ ರುದ್ರ, ಕ್ಷತ್ರಿಯನೆಂಬ ವಿಷ್ಣು, ವೈಶ್ಯನೆಂಬ ಬ್ರಹ್ಮ, ಶೂದ್ರನೆಂಬ ಇಂದ್ರ, ಈ ನಾಲ್ವರು ಈಶ್ವರನ ಮುಖ, ಭುಜ, ತೊಡೆ, ಮೇಗಾಲು ಈ ನಾಲ್ಕು ಠಾವಿಯಲ್ಲಿ ಹುಟ್ಟಿದರು ಎಂ

[1]ದು ಹೇಳುವಿರಿ[2]. ಇತ್ತಣವರು ಮುಖ, ಭುಜ, ತೊಡೆ, ಮೇಗಾಲು ಈ ನಾಲ್ಕು ಠಾವುಗಳೊಳಗೆ[3] ಹೆರುವವರೊಳರೊ[4] ಹೆತ್ತಡೆಯೂ ಇತ್ತಂಡದವರು ಸೂತಕ ಜಡದೇಹಿಗಳಹರು. ಅದೇಕೆಂದಡೆ, ಶಿವನಂಗದಲ್ಲಿ ಹುಟ್ಟಿದವರಿಗೆ ಸಕಲ ಸೂತಕವುಂಟೆ? ಇಲ್ಲಿಲ್ಲ. ಅದು ಕಾರಣ ಎಂಟರಿಂದತ್ತಣ ಪರಶಿವನು ಸರ್ವ[5] ಸೂತಕ ರಹಿತನು. ಅಂತಪ್ಪ ಪರಬ್ರಹ್ಮದಂಗದಲ್ಲಿ ಹುಟ್ಟಿದವರಿಗೆ ಸರ್ವ ಸೂತಕವು ಇಲ್ಲ. ಮತ್ತೆಲ್ಲಿ ಹುಟ್ಟಿದವರಿಗೆ ಸರ್ವ ಸೂತಕ ಉಂಟೆಂದರೆ, ಮನ ಮಾಯೆ ಷಡುದೇವತೆಗಳೆಂಬೆಂಟರ ಶುಕ್ಲಶ್ರೋಣಿತಾತ್ಮಸಂಗದೊಳಗೆ ಹುಟ್ಟಿದವರಿಗೆ ಸರ್ವ ಸೂತಕ ಉಂಟು. ಈ ಎಂಟರಿಂದತ್ತಣ ಪರಶಿವನಂಗದೊಳಗುದಯಿಸಿದವರು ಬಸವಾದಿ ಪ್ರಮಥರುಗಳು ಮುಖ್ಯವಾದ ನಂತಕೋಟಿ ಗಣಂಗಳಲ್ಲದೆ ನಿಷ್ಕಳರು, ಪ್ರಳಯಾಳಕರು ವಿಜ್ಞಾನಕಲರು ಸಕಲರು ಸಕಲಾಕಲರೆಂಬೀ ಪಂಚತಂಡದವರುಗಳೊಬ್ಬರೂ ಅಲ್ಲ. ಅದು ಕಾರಣ ಶರಣರುಗಳು ಪರಬ್ರಹ್ಮದಂತಿಹರು. ಅವರುಗಳ ಕಂಡೆಹೆನೆಂಬ ಭಕ್ತರು, ಭಕ್ತೆಯರು, ಮಾಹೇಶ್ವರರು, ಪಂಚಸೂತಕಂಗಳನು ಸರ್ವೆ ಪ್ರಪಂಚುಗಳನು ಬಿಡಬೇಕು. ಬಿಡದಿರ್ದಡವರು ಷಡುಸ್ಥಲ[6] ಮಾರ್ಗಕ್ಕೆ ಸಲ್ಲರು. ಇಂತೆಂಬ ಪುರಾಣನರಗಣಿತ ವಚನರಸಂಗಳಿಗೆ ಸಾಕ್ಷಿ.

೪೨೯

ಕುಲಹೀನ ಶಿಷ್ಯಂಗನುಗ್ರವ ಕೊಟ್ಟು,
ತನ್ನ ಪ್ರಾಣಲಿಂಗವನವಗೆ ಸಿಕ್ಕಿಸಿ,
ಕರ್ಣ ಮಂತ್ರವ ಹೇಳಿ ಹೋಗಿ
ಮತ್ತೆ ಆ ಶ್ರೀಗುರು ಬಂದು ಶಿಷ್ಯನ ಮನೆಯ ಹೊಗಲೊಲ್ಲದೆ
ಅಕ್ಕಿ ತುಪ್ಪವ [7]ತರಿಸಿ[8] ಕೊಂಬವನ ಕೇಡಿಂ[9]ಗೆ ಇನ್ನೇವೆನಯ್ಯಾ[10]?
ತನ್ನ ಪ್ರಾಣಲಿಂಗವನವನಿಗೆ ಕೊಟ್ಟು
ತಾ ಹೋಗೆನೆಂಬ ವ್ರತಗೇಡಿಯ ಇನ್ನೇನೆನಬಹುದಯ್ಯಾ?
ಅವನ ಧನಕ್ಕೆ ತಂದೆಯಾದನಲ್ಲದೆ, ಅವನಿಗೆ ತಂದೆಯಲ್ಲ.
ಇದು ಕಾರಣ ಕೂಡಲಚನ್ನಸಂಗಯ್ಯ
ಆ ಲಿಂಗವ ಮಾರಿಕೊಂಡುಂಬ[11]ಭಂಗಗೇಡಿ ಮಾವನರು ಕೆಟ್ಟ ಕೇಡನೇನೆಂಬೆನಯ್ಯ.[12] ||೪೭||

೪೩೦

[13]ತನ್ನ ಸಮಯಾಚಾರಕ್ಕೆ ಸಲ್ಲದವರಿಗೆ
ಉಪದೇಶವ ಮಾಡುವಾತ ಗುರುವಲ್ಲ; ಮಾಡಿಸಿಕೊಂಡಾತ ಶಿಷ್ಯನಲ್ಲ.
ಲಿಂಗವ ಮಾರಿಕೊಂಬಡುಂಬವಾಳಕರು
ಗುರು ಲಿಂಗ ಜಂಗಮಕ್ಕೆ ದೂರಹರು.
ಕೂಡಲ ಚನ್ನಸಂಗಯ್ಯಾ, ಆ ಈರ್ವರಿಗೆಯೂ ನರಕ ತಪ್ಪದು.[14]   ||೪೮||

೪೩೧

ತನ್ನ ಮನೆಯ ಹೊಗದ ಗುರುವನರಸಿಕೊಂಡು
ಹೋಗುವಾತ ಶಿಷ್ಯನಲ್ಲ.
ತಾ ಹೊಗದ ಮನೆಯ[15] ಉಪದೇಶವ ಮಾಡುವಾತ ಗುರುವಲ್ಲ.
ಅಂಗವ ಮಾರಿಕೊಂಡುಂಬ ಶಿಷ್ಯ ಗುರುದ್ರೋಹಿ.[16] ಈ ಗುರು ಶಿಷ್ಯರಿಬ್ಬರ ಭಕ್ತ ಜಂಗಮವೆಂಬವರ
ಕೂಡಲಚೆನ್ನಸಂಗಯ್ಯ ನಾಯಕ ನರಕದಲ್ಲಿಕ್ಕುವನು.    ||೪೯||

೪೩೨

ಭವಿಯ ತಂದು ಭಕ್ತನ ಮಾಡಿ
ಪೂರ್ವಾಶ್ರಯವ ಕಳದ ಬಳಿಕ,
ಪೂರ್ವವನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು.
ಹೆಸರಿಲ್ಲದ ಲಿಂಗಕ್ಕೆ ಹೆಸರ ಕೊಡುವ
ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವದಲ್ಲಿ ಹೆಸರಿಲ್ಲದ ಗುರು, ಹೆಸರಿಲ್ಲದ ಲಿಂಗ, ಹೆಸರಿಲ್ಲದ [17]ಜಂಗಮ.[18] ಇಂತೀ ತ್ರಿವಿಧ ಸ್ಥಲವನಱೆಯದೆ ಕೆಟ್ಟರು ಗುಹೇಶ್ವರಾ   ||೫೦||

೪೩೩

ಕುಲಮದ, ಛಲಮದ, ವಿದ್ಯಾಮದದವರ ಎನಗೆ ತೋರದಿರಾ.
ಅವರ ಆರೂಢಪದವಿಯನೆನಗೆ ತೋರದಿರಾ.
ಅವರ [19]ಗುರು[20] ಗಾಂಭೀರತ್ವವನೆನಗೆ ತೋರದಿರಾ.
ಶಮೆದಮೆಯಳಿಯದೆ ದಶಮುಖ ನಿಂದ[21] ಲಿಂಗದಲ್ಲಿ
ಲೀಯವಾದವರನಲ್ಲದೆ ಎನಗೆ ತೋರದಿರಾ ಗುಹೇಶ್ವರಾ           ||೫೧||

೪೩೪

ಸತಿ ಭಕ್ತೆಯಾದಡೆ ಹೊಲೆಗಂಜಲಾಗದು,
ಪತಿ ಭಕ್ತನಾದಡೆ ಕುಲಕಂಜಲಾಗದು,
ಸತಿಪತಿಯರೆಂಬ ಅಂಗಸುಖ ಹೋಗಿ ಲಿಂಗವೆ ಪತಿಯಾದ ಬಳಿಕ
ಸತಿಗೆ ಪತಿ ಉಂಟೆ? ಪತಿಗೆ ಸತಿ ಉಂಟೆ?
ಹಾಲುಂಡ ಮೇಲೆ ಮೇಲುಂಬರೆ ಗುಹೇಶ್ವರಾ?            ||೫೨||

೪೩೫

ಗುರು ಕರುಣಿಸಿ ಪ್ರತ್ಯಕ್ಷ ಲಿಂಗವನೆ
ಪುರುಷನವ ಮಾಡಿಕೊಟ್ಟ ಬಳಿಕ
ಹೊಲೆ ಗಂಡನೆಂದು ತೊಲಗಲೇತಕೊ?
ಈ ಹೊಲತಿ ಲಿಂಗವ ಪೂಜಿಸಲೇಕೊ?
ಈ ಹೊಲೆ ಮನ ಬಿಡದವರಿಗೆ [22]ಗುರುವಿಲ್ಲ ಲಿಂಗ[23]ವಿಲ್ಲವೆಂದ
ಬಸವಪ್ರಿಯ ಕೂಡಲ ಚನ್ನಸಂಗಮದೇವನು.  ||೫೩||

೪೩೬

ಆವಾಶ್ರಯದಲ್ಲಿ ಜನಿತನಾದಡೇನು,
ಪೂರ್ವವಳಿದು ಪುನರ್ಜಾತನಾದ ಶರಣನು?  ||ಪಲ್ಲವಿ||

ಭೂತಾದಿಗಳೈದು ಕೂಡಿದ ತನುಗುಣದ
ಭ್ರಾಂತನಳಿದು, ಗುರುಕರುಣಿಸಿ ಪೂರ್ವ ಕರ್ಮದ
ಪಾತಕ ಲಿಪಿಯ ತೊಡೆದು, ಪುನರ್ಜಾತನೆನಿಸಲು,
ಆತನೆ ಸರ್ವಾಂಗಶುದ್ಧ ಲಿಂಗದೇಹಿ              ೧

ಕುಲಸೂತಕ, ಛಲಸೂತಕ, ಮನಸ್ಸೂತಕ
ಹಲವು ಕರ್ಮಜಾಡ್ಯ, ಜನ್ಮ ಭಾವಸೂತಕ:
ಹೊಲೆ ಹೊದ್ದಲಿಕಾಗದೆಂಬ ನೆಲೆಯನಱೆದು
ತಿಳಿದು, ಪೂರ್ವಭಾವವಳಿದು ಉಳಿದ ನಿತ್ಯನು            ೨

ಕ್ಷೀರದಿಂದಲಾದ ತುಪ್ಪ ಕ್ಷೀರವಪ್ಪುದೇ?
ನೀರೊಳಾದ ಮುತ್ತು ಮರಳಿ ಉದಕವಪ್ಪುದೇ?
ಮೀಱೆ ಪೂರ್ವಕರ್ಮವನ್ನು ಹಱೆದ ಭಕ್ತಗೆ
ಬೇಱೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ?         ೩

ಲಿಂಗದಿಂದಲಂಗಭಾವ ಚಿಹ್ನವಳಿದು,
ಜಂಗಮ ಪ್ರಸಾದದಿಂದಲಂತರಂಗದ
ಭಂಗ ಹಿಂಗಿ, ಒಳಗು ಹೊಱಗು ಶುದ್ಧವಾದ
ಲಿಂಗದೇಹಿಯಾದ ಮಹಿಮಂಗಿಲ್ಲ ಸೂತಕ      ೪

ಬಂದ ಬಟ್ಟೆಯಳಿದು, ಲಿಂಗಸುಖದ ಪಥದಲಿ
ಮುಂದನಱೆದು, ಭಾವಶುದ್ಧವಾಗಿ ಚರಿಸುತ,
ಸಂದು – ಶಂಕೆಯಳಿದು, ನಿಜದೊಳೊಂದಿ ಬೆರಸಿದಾ –
ನಂದಮಯನು, ಸಂಗ, ನಿಮ್ಮ ಶರಣನನುಪಮ          ೫

ಇನ್ನು ಶಿವಪೂಜೆಯ ಮಾಡುವ ಕ್ರಮ ಕಟ್ಟಣೆಗಳ ಸೇವ್ಯವಪ್ಪಂತೆ ಬಸವಾದಿ ಪ್ರಮಥರ ಷಡುಸ್ಥಲಮಾರ್ಗವ ಬಲ್ಲಂಥಾ ಭಕ್ತ ಮಾಹೇಶ್ವರರಿಗೆ ಭಿನ್ನಹಂ ಮಾಡಿಹೆನದು ಹೇಂಗೆನಲು; ಷಡು ಸಾಮಾರ್ಜನೆಯನರಿದು, ಅಷ್ಟತನುವಿನ ಪೂರ್ವಾಶ್ರಯವಂ ಕಳದು, ಅಷ್ಟ ವಿಧಾರ್ಚನೆಯ ಷೋಡಶೋಚಾರಂಗಳಂ ಮಾಡುತ್ತ ಜಂಗಮಾರಾಧನೆಗಳಳವಡಿಸಿ ನಡಸುತ್ತ ಅವರ ಶೇಷ ಪ್ರಸಾದವ ಲಿಂಗಕ್ಕೆ ಕೊಟ್ಟಾ ರೋಗಿಸುತ್ತ ದಶವಿಧ ಪಾದೋದಕ, ಏಕಾದಶ ಪ್ರಸಾದವನರಿದು ಸಜ್ಜನ, ಸದ್ಭಾವ ಸದಾಚಾರಗಳಲ್ಲಿರ್ದಡೆ ತಮ್ಮ ಅಷ್ಟ ತನುಗ[24]ಳ ಮದವು[25] ನಷ್ಟವಗಿ ಲಿಂಗ ತನುಗಳಹವು. ತಮ್ಮ ದಶ ಪ್ರಾಣ ವಾಯುಗಳ ಹೆಸರಳಿದು ಲಿಂಗ ಪ್ರಾಣಂಗಳಹವು. ತಮ್ಮ ಸಪ್ತ ವ್ಯಸನಂಗಳ ಹೆಸರಳಿದು ಲಿಂಗ ವ್ಯಸನಂಗಳಹವು. ತಮ್ಮ ಸರ್ವಾಂಗದ, ಸರ್ವೇಂದ್ರಿಯಂಗಳ ಹೆಸರಳಿದು ಲಿಂಗ ಸರ್ವೇಂದ್ರಿಯಂಗಳಹವು. ಆದ ಬಳಿಕ ಮಹಾಲಿಂಗದಲ್ಲಿ ಐಕ್ಯವಹುದು ಜೋದ್ಯವಲ್ಲ. ಜಂಗಮಶಕ್ತಿ ಹೊರತಾಗಿ ಒಂದು ಗೋಟಡಕೆಯ ಸೋಲ ಶಿವನು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೪೩೭

ಪೃಥ್ವಿಯ ಪೂರ್ವಾಶ್ರಯವ ಕಳೆಯದನ್ನಕ್ಕ[26] ಅಪ್ಪುವಿನ ಪೂರ್ವಾಶ್ರಯವ ಕಳೆಯದನ್ನಕ್ಕ[27] ತೇಜದ ಪೂರ್ವಾಶ್ರಯವ ಕಳೆಯದನ್ನಕ್ಕ[28] ವಾಯುವಿನ ಪೂರ್ವಾಶ್ರಯವ ಕಳೆಯದನ್ನಕ್ಕ[29] ಆಕಾಶದ ಪೂರ್ವಾಶ್ರಯವ ಕಳೆಯದನ್ನಕ್ಕ[30] ಚಂದ್ರ ಸೂರ್ಯರ ಪೂರ್ವಾಶ್ರಯವ ಕಳೆಯದನ್ನಕ್ಕ[31] ಆತ್ಮನ ಪೂರ್ವಾಶ್ರಯವ ಕಳೆಯದನ್ನಕ್ಕ[32] ಭಕ್ತರೆಂದು ಲಿಂಗವ ಪೂಜಿಸುವವರ ಕಂಡು
ಬೆರಗಾದೆನು[33]ಕಾಣಾ ಗುಹೇಶ್ವರಾ.               ||೫೫||

೪೩೮

ಪೃಥ್ವಿಯ ಪೂರ್ವಾಶ್ರಯವು ರಂಗವಲ್ಲಿ[34]ಯಿಂದ ಹೋಹುದು.
ಅಪ್ಪುವಿನ ಪೂರ್ವಾಶ್ರಯವು ಮಂತ್ರವಿಭೂತಿಯಿಂದ ಹೋಹುದು.
ತೇಜದ ಪೂರ್ವಾಶ್ರಯವು ಧೂಪದೀಪದಿಂದ ಹೋಹುದು.
ವಾಯುವಿನ ಪೂರ್ವಾಶ್ರಯವು ಧ್ಯಾನದಿಂದ ಹೋಹುದು.
ಆಕಾಶದ ಪೂರ್ವಾಶ್ರಯವು ಸ್ತುತ್ಯದಿಂದ ಹೋಹುದು.
ಚಂದ್ರ ಸೂರ್ಯರ ಪೂರ್ವಾಶ್ರಯವು ಮಾಡುವಕ್ರಿಯಿಂದ ಹೋಹುದು.
ಆತ್ಮನ ಪೂರ್ವಾಶ್ರಯವು ಕಿಂಕುರ್ವಾಣದಿಂದ ಹೋಹುದು.
ಇಂತಹ ಭಕ್ತನ ಕಾಯವೆ ನಿನ್ನ ಕಾಯ
ಕೂಡಲ ಚನ್ನಸಂಗಮದೇವಾ.         ||೫೬||

೪೩೯

ನೇತ್ರ, ಶ್ರೋತ್ರ, ತ್ವಕ್ಕು, ಚಿಹ್ವೆ, ಘ್ರಾಣವೆಂಬ
ಬುದ್ಧೀಂದ್ರಿಯಂಗಳ ಕೂಡಿಕೊಂಡು
ಇಚ್ಚೈಸುವ ವಾಯುಗಳಾವಾವೆಂದಡೆ:
ರೇಚಕ, ಪೂರಕ ಕುಂಭಕ ರೂಪಿ[35]ನಿಂದ
ಚೇಷ್ಟಿಸೂದೊಂದು ಪ್ರಾಣವಾಯು.
ರಂಸಗಳ ನೀರಸಂಗಳ ಮಾಡಿ
ಮಲಮೂತ್ರಂಗಳ ನಡಸೂದೊಂದು ಅ[36]ಪಾನವಾಯು.
ಶಕ್ತಿಯ ಚೇಷ್ಟೆಯ ಮಾಡಿ ನಡಸೂದೊಂದು ವ್ಯಾನವಾಯು.
ಪಾದಂಗಳ ನೆಲಕಿಕ್ಕಿ ನಡಸೂದೊಂದು ಉದಾನವಾಯು.
ಸಮಧಾತುಗಳನರಿದು ಅಮಗಪಾನಾದಿಗಳ
ಪಸರಿಸೂದೊಂದು ಸಮಾನವಾಯು.
ರಸವ್ಯಾಪ್ತಿಯ ಮಾಡಿಸೂದೊಂದು ನಾಗವಾಯು.
ಪುರವಟ್ಟಿಗೆಯ ತೊಳಲಿಸೂದೊಂದು ಕೂರ್ಮವಾಯು.
ಆಕಳಿಕೆಯನು ಮೈಮುರಿವುದನು
ಮಾಡಿಸೂದೊಂದು [37]ಕ್ರುಕರ[38]ವಾಯು.
ವಾಕರಿಕೆಯ ಮಾಡಿಸೂದೊಂದು ದೇವದತ್ತವಾಯು.
ನುಡಿಯ ಬುದ್ಧಿಯ ನಡುಸೂದೊಂದು ಧನಂಜಯವಾಯು.
ಇಂತೀ ದಶವಾಯುಗಳಿಹ ಸ್ಥಾನವಾ[39]ವುದಯ್ಯಾ ಎಂ[40]ದಡೆ:
ಗುದದಲ್ಲಿ ಅಪಾನವಾಯು, ಗುಹ್ಯದಲ್ಲಿ ನಾಭಿಯಲ್ಲಿ ಸಮಾನವಾಯು,
ಹೃದಯದಲ್ಲಿ ಪ್ರಾಣವಾಯು, ಕಂಠದಲ್ಲಿ ಉದಾನವಾಯು,
ಸಮಸ್ತ ಸಂದುಗಳಲ್ಲಿ ವ್ಯಾನವಾಯು,
ಈಡನಾಳದಲ್ಲಿ ನಾಗವಾಯು,
ಪಿಂಗಳನಾಳದಲ್ಲಿ ಕೂರ್ಮವಾಯು,
ಸುಷುಮ್ನನಾಳದಲ್ಲಿ [41]ಕ್ರುಕರ[42] ವಾಯು,
ಹಸ್ತದಲ್ಲಿ ದೇವದತ್ತವಾಯು,
ಜಿಹ್ವೆಯಲ್ಲಿ ಧನಂಜಯವಾಯು –
ಇಂತೀ ವಾಯು ಪ್ರಾಣಿಯ ಕಳದು
ಲಿಂಗಪ್ರಾಣಿಯ ಮಾಡಬಲ್ಲಡೆ
ಕೂಡಲಚನ್ನಸಂಗಯ್ಯನಲ್ಲಿ ಅದೆ ಯೋಗ.      ||೫೭||

೪೪೦

ತನುವ್ಯಸನ, ಮನವ್ಯಸನ, ಧನವ್ಯಸನ[43]ವಾಹನ ವ್ಯಸನ,[44] ಉತ್ಸಾಹವ್ಯಸನ,
ವಿಶ್ವಾವ್ಯಸನ, ಸೇವಕಾ, ವ್ಯಸನ –
ಇಂತೀ ಸಪ್ತವ್ಯಸನಂಗಳ ವಿವರ:
ತನುವ್ಯಸನವೆತ್ತಿದರೆ ವಸ್ತ್ರಾಭರಣ
ವೀಳ್ಯೆಯ ಅನುಲೇಪನಾದಿಗಳಂ ಬಸಯುತ್ತಿಹುದು.
ಮನವ್ಯಸನವೆತ್ತಿದರೆ ಹುಸಿ ಕಳವು ಪಾರದ್ವಾರಮಂ ಬಯಸೂದು.
ಧನವ್ಯಸನವೆತ್ತಿದರೆ ಧನ ಧಾನ್ಯಮಂ ಬಯಸೂದು.
ವಾಹನ ವ್ಯಸನವೆತ್ತಿದರೆ ಆನೆ, ಕುದುರೆ, ಸೇನೆಯಂ ಬಯಸೂದು.
ಉತ್ಸಾಹ ವ್ಯಸಹನ ಪುತ್ರ ಮಿತ್ರ ಕಳತ್ರಯವಂ ಬಯಸೂದು
ವಿಶ್ವವ್ಯಸನವೆತ್ತಿದ ಚತುರ್ವಿಧ ಪದ
ಕರ್ತವ್ಯವಂ ಬಯಸೂದು.
ಸೇವಕಾವ್ಯಸನವೆತ್ತಿದರೆ ಗಳಿಸಲಾರೆ, ನೆತ್ತಲಾರೆ,
ಕೊಡಲಾರೆನೆನುತ್ತಿಹುದು.
ಇಂತೀ ಸಪ್ತವ್ಯಸನಂಗಳಂ ಬಿಟ್ಟು
ಲಿಂಗವ್ಯಸನಂಗಳಾಗಿರಬಲ್ಲಡೆ
ಕೂಡಲ ಚನ್ನಸಂಗಯ್ಯನಲ್ಲಿ
ಆತನೆ ಪ್ರಾಣಲಿಂಗ ಸಂಬಂಧಿ         ||೫೮||

೪೪೧

ಮಜ್ಜನಕ್ಕೆರವುದ ಮಾದಬಳಿಕ,
ಮನವು ಮತ್ತೊಂದಕ್ಕೆ ಎರಗಲಾಗದು,
ಪೂಜಿಪ ಪೂಜೆಯ ಮಾಡೂದು ಮಾದಬಳಿಕ,
ಪರರ ಬೋಧಿಸಲಾಗದು.
ಅರ್ಪಿತವ ಮಾದಬಲಿಕ ಅಂಗಭೋಗಗಳ ನೆರೆ ಮಾಣಬೇಕು.
ಇಂತಿದು ಮೀಱೆದ ಘನ ಅಗಮ್ಯವು.
ಅದನಱೆಯಬಾರದಂಥಾದು, ಅದಂತಿರಲಿ.
ನಾನು ನೀನೆಂಬ ಭ್ರಾಂತುಳ್ಳನ್ನಕ್ಕರ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಬೇಕು.
ಕೂಡಲಚನ್ನಸಂಗಯ್ಯನಲ್ಲಿ ಇವ ಮಾಡದಿರ್ದಡೆ  ನಾಯಕ ನರಕ. ||೫೯||

೪೪೨

ಗುರುವಿಲ್ಲದ ಕೂಟ, ಲಿಂಗವಿಲ್ಲದ ನೋಟ,
ಜಂಗಮವಿಲ್ಲದ ಮಾಟ, ಪ್ರಸಾದವಿಲ್ಲದ ಊಟ –
ಈ ನಾಲ್ಕರ ಬೇಟವಿಲ್ಲದ ಕೂಟ
ಕೂಡಲಚನ್ನಸಂಗಯ್ಯನಲ್ಲಿಲ್ಲದಾಟ.  ||೬೦||


[1] ದರಿಹಿರಿ (ಬ)

[2] ದರಿಹಿರಿ (ಬ)

[3] ಗೇಕೆ ಹೆರುವದಿಲ್ಲ (ಬ)

[4] ಗೇಕೆ ಹೆರುವದಿಲ್ಲ (ಬ)

[5] ರ್ವಾಂಗ (ಬ)

[6] ಮಾರ್ಗದ ವೀರಶೈವದ (ಬ)

[7] ನಿಸ (ಬ)

[8] ನಿಸ (ಬ)

[9] ಗೇನೇನೆಂಬೆನಯ್ಯಾ (ಬ)

[10] ಗೇನೇನೆಂಬೆನಯ್ಯಾ (ಬ)

[11] ಭಂಗಗಾರರು ಕೆಟ್ಟ ಕೇಡಿಂಗೇನೆಂಬೆನಯ್ಯ (ಬ)

[12] ಭಂಗಗಾರರು ಕೆಟ್ಟ ಕೇಡಿಂಗೇನೆಂಬೆನಯ್ಯ (ಬ)

[13] ‘ಬ’ ಪ್ರತಿಯಲಿಲ್ಲ.

[14] ‘ಬ’ ಪ್ರತಿಯಲಿಲ್ಲ.

[15] + ಲ್ಲಿ (ಬ)

[16] +ಸಾಕ್ಷಿ: ನಾಮಧಾರಕ ಶಿಷ್ಯಾನಾಂ ನಮಧಾರೀ ಗುರುಸ್ತಥಾ!
ಅಂಧsಕೋಂಧಕರಾಸಕ್ತೋ ಭವೇತಾಂ ಪತಿತಾವುಭೌ|| ಎಂದುದಾಗಿ (ಚಬವ)

[17] ಶಿಷ್ಯ (ಚಬವ)

[18] ಶಿಷ್ಯ (ಚಬವ)

[19] ಗುರುವ (ಅವಚಂ)

[20] ಗುರುವ (ಅವಚಂ)

[21] ದು(ಬ)

[22] ಗುರುಲಿಂಗ ಜಂಗಮ ಪಾದೋದಕ ಪ್ರಸಾವ (ಬ)

[23] ಗುರುಲಿಂಗ ಜಂಗಮ ಪಾದೋದಕ ಪ್ರಸಾವ (ಬ)

[24] ಳು (ಬ)

[25] ಳು (ಬ)

[26] + ರ (ಬ)

[27] + ರ (ಬ)

[28] + ರ (ಬ)

[29] + ರ (ಬ)

[30] + ರ (ಬ)

[31] + ರ (ಬ)

[32] + ರ (ಬ)

[33] x (ಬ)

[34] +ಯಲ್ಲಿ (ಬ)

[35] x (ಬ)

[36] ಉ (ಬ)

[37] ಕಿಂಕಿಲ (ಬ)

[38] ಕಿಂಕಿಲ (ಬ)

[39] ವವಾವೆ (ಬ)

[40] ವವಾವೆ (ಬ)

[41] ವ(ಬ)

[42] ವ(ಬ)

[43] ರಾಜ್ಯವ್ಯಸನ (ಚಬವ)

[44] ರಾಜ್ಯವ್ಯಸನ (ಚಬವ)