೪೦೧

ವಸ್ತುಕ, ವರ್ಣಕ, ಭೂತಿಕವೆಂಬ
ತ್ರಿಸ್ಥಾನ ಮೇಲೆ ನುಡಿವ ನುಡಿಗಳೆಲ್ಲವು
ಇತ್ತಿತ್ತಲಲ್ಲದೆ ಅತ್ತತ್ತಲಾರು ಬಲ್ಲರೊ?
ಇವರೆತ್ತಲೆಂದರಿಯರು.
ಗಿಳಿವಿಂಡುಗೆಡುವವರು ನಿಮ್ಮನೆತ್ತಬಲ್ಲರೊ ಗುಹೇಶ್ವರಾ?          ||೯||

೪೦೨

ಅರಿವಿನಾಪ್ಯಾಯನವೆ ಅಪೂರ್ವ ಕಂಡಯ್ಯಾ,
ಪೂರ್ವಜ್ಞಾನವೆಂಬುದೆ ವೇದ

[1]ಶಾಸ್ತ್ರ ಆಗಮಂಗಳು[2] [3]ಎಂಬವು ಪೂರ್ವ [4]ಪ್ರಮಾಣ ಇವಲ್ಲ[5] ಕಂಡಯ್ಯಾ,
ಇಂತೀ [6]ಪ್ರಮಾಣವನರಿಯದನಿಂದು[7] ನಿಮ್ಮ ಶರಣರ ತೋರಾ ಕಲಿದೇವಯ್ಯಾ.       ||೧೦||

೪೦೩

[8]ಅರಿಯವಾದ[9] ಬಂದ ಪರಿಯ,
ಅಕಾರ, ಉಕಾರ, ಮಕಾರವೆಂಬೀ
ತ್ರಿಯಕ್ಷರವ ಶರಣರು ಸೋಂಕದ ಪರಿಯ,
ಈ ಜಗಕ್ಕೆಲ್ಲ ಆಧಾರವಾದ ಪರಿಯ
ಕಲಿದೇವಯ್ಯಾ ನಿಮ್ಮ ಶರಣ ಬಸವಣ್ಣ[10] ಬಲ್ಲನು          ||೨೧||

೪೦೪

ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬೀ
ಮಲತ್ರಯಂಗಳ ಕಳದು,
ಆ ಜ್ಞಾನದೀಕ್ಷೆ, ಉಪಮಾದೀಕ್ಷೆ, ಸ್ವಸ್ಥಿಕಾರೋಹಣ
ವಿಭೂತಿಯ ಪಟ್ಟ, ಕಳಶಾಭಿಷೇಕ
ಲಿಂಗಾಯತ, ಲಿಂಗಸ್ವಾಯತ –
ಈ  ಏಳನು ಕಾಯಕ್ಕೆ ಉಪದೇಶವ ಮಾಡೂದು.
ಸಮಯ, ನಿಸ್ಸಂಸಾರ, ನಿರ್ವಾಣ, ತತ್ವದೀಕ್ಷೆ,
ಆಧ್ಯಾತ್ಮ, ಅನುಗ್ರಹ, ಶುದ್ಧವಿದ್ಯೆ –
ಈ ಏಳನು ಪ್ರಾಣಕ್ಕುಪದೇಶವ ಮಾಡೂದು.
ಏಕಾಗ್ರಚಿತ್ತು, ದೃಢ ವ್ರತ, ಪಂಚೇಂದ್ರಿಯಾರ್ಪಿತ,
ಅಹಿಂಸೆ, ಮನೋರ್ಲಯ, ಲಿಂಗನಿಜ, ಸದ್ಯೋನ್ಮುಕ್ತಿ –
ಈ ಏಳನು ಮನಕ್ಕೆ ಉಪದೇಶವ ಮಾಡೂದು.
ಈ ಪ್ರಕಾರದುಪದೇಶವು ಕೂಡಲಚನ್ನಸಂಗಯ್ಯನಲ್ಲಿ ಸಹಜದೀಕ್ಷೆ ||೨೨||

೪೦೫

ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವಾ.
ಘಳಿಗೆ ಘಳಿಗೆಗೆ ಮಗುವು ಹುಟ್ಟಿ ಕೈಗೆ ಬಾಯಿಗೆ ಬಂದಿತವ್ವಾ.
ಅರಿವು ಕುರುಹನು ಮದುವೆ ನುಂಗಿತ್ತು,
ಗುಹೇಶ್ವರನುಳಿದನವ್ವಾ.   ||೨೩||

೪೦೬

ಪರಿಣಾಮ ಅಪರಿಮಿತ ದೊರಕೊಂಡಾತಂಗೆ
ಬಳಿಕೇಕೊ ಬರಿಮಾತಿನವರೊಡನೆ ಗೋಷ್ಠಿ?
ಬಳಿಕೇಕೊ ಬಯಲ ಸಂಭ್ರಮಿಗಳೊಡತಣ ಅನುಭಾವ?
ಐ[11]ವತ್ತೊಂದಕ್ಷರ[12] ತಮ್ಮಲ್ಲಿ ತಾವು ಉಲಿದಂತೆ ಉಲಿದುಹೋದವು.
ಗುಹೇಶ್ವರಲಿಂಗವನರಿದಾತಂಗೆ ಬಳಿಕೇಕೊ?  ||೨೪||

೪೦೭

ಶಿವಶ[13]ಕ್ತಿ ಸಂಪನ್ನನಾದ ಮಹಾ ಮಹಿಮನ ನಿಲವು
ನಾದದುತ್ಪತ್ಯವ ಸೋಂಕದು;
ಬಿಂದುವಿನ ಉತ್ಪತ್ಯವ ಸೋಂಕದು;
ರವಿಯಾಶ್ರಯದಲ್ಲಿ ಬೆಳೆಯದು;
ಶ್ಲುಕಶ್ರೋಣಿತಾಮೇದ್ಯ ಮಜ್ಜೆಶ್ಲೇಷ್ಮವೆಂಬ
ಪಂಚ ವರ್ಣಾಶ್ರಮವನು ಹೊದ್ದದು;
ಸತ್ವ, ರಜ, ತಮವೆಂಬ ತ್ರಿಗು[14]ಣದ ಹೊದ್ದದು;
ಮನ, ಬುದ್ಧಿ ಚಿತ್ತಾಹಂಕಾರವೆಂಬ
ಅಂತಃಕರಣ ಚತುಷ್ಟಯಂಗಳಲ್ಲಿ ನಡೆಯದು;
ಪೃಥ್ವಿ, ಅಪ್ಪು, ತೇಜ ವಾಯುವಾಕಾಶವೆಂಬ
ಪಂಚಭೂತದಾಶ್ರಯವನು ಹೊದ್ದದು;
ಅಷ್ಟದಳವೆಂಬವ ಮೆಟ್ಟದು;
ಪ್ರಾಣ ಅಪಾನ ವ್ಯಾನ ಉದಾನ ಸಮಾನ
ನಾಗ ಕೂರ್ಮ[15]ಕ್ರಕರ[16] ದೇವದತ್ತ ಧನಂಜಯನೆಮಬ
ದಶವಾಯುಗಳಿಚ್ಛೆಯಲ್ಲಿ ಸುಳಿಯದು.
ಜ್ಞಾನದಲ್ಲಿ ಬೆಳವುದು; ನಿರಾಲಂಬದಲ್ಲಿ ಆಡುವುದು.
ಹೃದಯ ಕಮಲ ಪತ್ರದ[17]ಉಸುರ[18] ನಾಶಿಕ ಸಂಪುಟದಲ್ಲಿ
ಜಂಗಮದಾಟವನಡುವುದು.
ಲಿಂಗದ ನೋಟವ ನೋಡುವುದು.
ಮಹಾಪ್ರಸಾದದಲ್ಲಿ ಬೆಳವುದು.
ಮಹಾಘನದಲ್ಲಿ ನಿವಾಸಿಯಾಗಿಪ್ಪುದು.
ಕಲಿದೇವ ನಿಮ್ಮ ಶರಣಬಸವಣ್ಣನ ನಿಲವು.     ||೨೫||

೪೦೮

ಕಳೆ ನಾದದೊಳಡಗಿ,
ಆ ನಾದ ಪರಿಚರಪರಿನಾದದೊಳಡಗಿ,
ಆ ಚರ ಪರಿನಾದ ಪರಿಚರನಾದದೊಳಡಗಿ,
ಆ ಪರಿಚರನಾದ ತ್ರಿಭಾವ ತ್ರಿಕೂಟನಾದದೊಳಡಗಿ,
ಆ ತ್ರಿಭಾವ ತ್ರಿಕೂಟನಾದ ಸ್ಥಿರ ಪ್ರಣಮಂಗಳ
ಪ್ರಜ್ವಲಿತನಾದದೊಳಡಗಿ,
ಕಲಿದೇವನಿಮ್ಮ ಶರಣಮೂಲ ಪ್ರಣಮಂಗಳ
ಸ್ಥಿರನಾದದೊಳಡಗಿದನು.  |೨೬||

೪೦೯

ಪ್ರಣಮ ಪ್ರಜ್ವಲಿತವಾಯಿತ್ತು.
ಪ್ರಸಾದ ನಿಂದ ಸ್ಥಲವು ಪ್ರಸಾದ ಪ್ರಜ್ವಲಿತವಾಯಿತ್ತು.
ಅನುಭಾವ ನಿಂದ ಸ್ಥಲವು ಅನುಭಾವ ಪ್ರಜ್ವಲಿತವಾಯಿತ್ತು.
ಇಂತಾ ಮಹಾ ಘನವು ಕಲಿದೇವ ನಿಮ್ಮ ಶರಣ ಬಸವಣ್ಣನ ನಿಲವು.          ||೨೭||

೪೧೦

ಆಧಾರದಲ್ಲಿ ಅಭವನು, ಸ್ವಾದಿಷ್ಠಾನದಲ್ಲಿ ರುದ್ರನು ಸ್ವಾಯತನಾದ.
ಮಣಿಪೂರ[19]ದಲ್ಲಿ ಮೃಡನು ಸ್ವಾಯತನಾದನು.
ಅನಾಹತದಲ್ಲಿ ಈಶ್ವರನು ಸ್ವಾಯತನಾದನು.
ವಿಶುದ್ಧಿಯಲ್ಲಿ ಸದಾಶಿವನು ಸ್ವಾಯತನಾದನು.
ಆಜ್ಞೆಯಲ್ಲಿ ಶಾಂತಾತೀತನು ಸ್ವಾಯತನಾದನು.
ಗುಹೇಶ್ವರ ಲಿಂಗವು [20]ಯ್ಯೋಮಯೋಮ[21]ವ ಕೂಡಿದಂತೆ.      ||೨೮||

೪೧೧

ಎತ್ತಣ ಮಾಮರನೆತ್ತಣ ಕೋಗಿಲೆ?
ಎತ್ತಣೆಂದೆತ್ತ ಸಂಬಂಧವಯ್ಯಾ?
ಬೆಟ್ಟದ ನೆಲ್ಲಿಯಕಾಯಿ ಸಮುದ್ರದೊಳಗಣ ಉಪ್ಪು,
ಎತ್ತಣೆಂದೆತ್ತ ಸಂಬಂಧವಯ್ಯಾ?
ಗುಹೇಶ್ವರ ಲಿಂಗಕ್ಕೆಯೂ ನಮಗೆಯೂ
ಎತ್ತಣೆಂದೆತ್ತ ಸಂಬಂಧವಯ್ಯಾ?      ||೨೯||

೪೧೨

ಕಾಣಬಾರವ ಲಿಮಗವು ಕರಸ್ಥಲಕ್ಕೆ ಬರಲು
ಎನಗಿದು ಸೋಜಿಗವಯ್ಯಾ.
ಅಹುದೆನಲಮ್ಮೆ ಅಲ್ಲವೆನಲ್ಲಮ್ಮೆ.
ಗುಹೇಶ್ವರಲಿಂಗವು ನಿರಾಳ
ನಿರಾಕಾರ ಬಯಲುವಾಕಾರವಾದಡೆ.            ||೩೦||

೪೧೩

ಗೋಳಕ, ಮೂಲಕ, ಮುಕ್ತಕ, ದಾರುಕ, ರುದ್ರಕ, ಕರ್ಣಿಕ
ಈ ಷಡು ಶಕ್ತಿಗಳು ಈ ಪಟ್ಟಣದ ಭಕ್ತಿಯರು.
ಇವರ ಮನೆಯ ಜಂಗಮ ನಾನು,
ಇವರ ಗಂಡರಿಗಾನು ಒಕ್ಕುದನಿಕ್ಕುವೆನು.
ಇವರೆನಗೆ ತನು, ಮನ, ಧನವ ನಿವೇದಿಸುವರು.
ಇದ್ದುದ ವಂಚಿಸದೆ ನಿವೇದಿಸುವರು.
ಅರ್ಥ ಪ್ರಾಣಾಭಿಮಾನಂಗಳ ನಿವೇದಿಸುವರು.
ನಾ ಸಹಿತ ಸರ್ವ ಲಿಂಗಾರ್ಚನೆಯ ಮಾಡುವರು.
ನಾ ಸಹಿತ ಸರ್ವ ಅನುಭಾವವ ಮಾಡುವರು.
ನಾ ಹಿಡಿದುದನೆ ಹಿಡಿವರು, ನಾ ಬಿಟ್ಟುದನೆ ಬಿಡುವರು.
ನಾ ಬಸವಣ್ಣನ ಮನೆಯ ಜಂಗಮವೆಂದು ಏನ ಹೇಳಿತ್ತ ಕೇಳುವರು.
ನಾ ಮಹಾದ್ವಾರದಲ್ಲಿ ಬಂದರೆ ಎನ್ನೊಡನೆ ಬಮದರು.
ಹಂಸದ್ವಾರದಲ್ಲಿ ಬಂದರೆನ್ನೊಡನೆ ಬಮದರು.
ಪಶ್ಚಿಮ ದ್ವಾರದಲ್ಲಿ ಉತ್ತರ ದ್ವಾರ
ದಕ್ಷಿಣ ದ್ವಾರ ಇವರೊಳಗೆ ಎನ್ನೊಡನೆ[22] ಬಂದರು.
ಎನ್ನ ಪ್ರಸಾದವೆ ವಿಸ್ತಾರವಾಗಿದ್ದರು.
ನಾನವರ ಮನೆಯ ಜಂಗಮವು ಕಾಣಾ ಕಲಿದೇವಯ್ಯಾ.            ||೩೧||

೪೧೪

ಕರುಣ ಜಲ, ವಿನಯಜಲ, ಸಮತೆ ಜಲ;
ಕರುಣ ಜಲವೆಂಬ ಗುರುಪಾದೋದಕವ ಕೊಂಡಲ್ಲಿ
ಸಂಚಿತ ಕರ್ಮ ನಾಸ್ತಿ,
ವಿನಯ ಜಲವೆಂಬ ಲಿಂಗ ಪಾದೋದಕವ ಕೊಂಡಲ್ಲಿ
ಆಗಾಮಿ ಕರ್ಮ ನಾಸ್ತಿ.
ಸಮತೆ ಜಲವೆಂಬ ಜಂಗಮ ಪಾದೋದಕವ ಕೊಂಡಲ್ಲಿ
ಪ್ರಾರಬ್ಧ ಕರ್ಮ ನಾಸ್ತಿ.
ಈ[23]ತ್ರಿವಿಧ ಪಾದೋದಕ್ಕೆ ತ್ರಿವಿಧ ಕರ್ಮ ನಾಸ್ತಿ.
ಈ ತ್ರಿವಿದ ಪಾದೋದಕದ ಭೇದವ
ಕೂಡಲ ಚನ್ನಸಂಗಾ ನಿಮ್ಮ ಶರಣರು ಬಲ್ಲರಲ್ಲದೆ
ಮತ್ತಾರು ಅರಿಯರು.        ||೩೨||

ಇಂತಪ್ಪ ವೀರಶೈವ ಧರ್ಮೋಪದೇಶ ಪಡದು, ಗುರುಪುತ್ರರಾದ ಹೆಣ್ಣು ಗಂಡುಗಳ ಮಾರಬಾರದು, ಕೊಳಬಾರದು, ಬೆಲೆಗಟ್ಟಬಾರದು. ಅದೇಕೆಂದಡೆ, ಬಿನ್ನಹಂ ಮಾಡಿಹೆನು. ಅವರೆಲ್ಲಾ ಗುರುಸ್ವರೂಪರಾಗಿ ಅಂಗದ ಮೇಲೆ ಮಹಾಲಿಂಗವ ಧರಿಸಿಕೊಂಡಿಪ್ಪ ಕಾರಣ ಹಾಂಗೆ ಸಲ್ಲದು. ಮತ್ತೆ ಹೇಂಗೆ ತರುವಣ, ಹೇಂಗೆ ಕೊಡುವಣ, ಹೇಂಗೆ ಬೆಲೆಗಟ್ಟುವಣವೆಂದಡೆ, ಸ್ವಶೀಲ, ಸ್ವಮಾರ್ಗ, ಸ್ವಧರ್ಮಾಚರಣೆಯುಕ್ತರಾದರಂ ಏಕ ಲಿಂಗ ನಿಷ್ಠಾಪರರಾದವರಿಗೆ ತಮ್ಮ ಗುರು ಪುತ್ರರಾದಂಥ ಗುರು ಪುತ್ರರಂ ನೋಡಿ ತಮ್ಮಲ್ಲಿದ್ದ ಗುರುಪುತ್ರಿಯರ ಭಕ್ತಿಯಿಂದವರಿಗೆ ಕಲ್ಯಾಣಮಂ ಮಾಡುವದು. ಮಾಡದ ಬಳಿಕ ಕೈಕೊಂಡು ಅವರು ತಮ್ಮ ಗುರು ಸೊಮ್ಮೆಂದು ಆರೈದುಕೊಂಬುದು. ಈ ಮರಿಯಾದಿಯಲ್ಲದೆ ಬೆಲೆಗಟ್ಟಿ ಕೊಟ್ಟಡೆ, ಬೆಲೆಗಟ್ಟಿಕೊಂಡಡೆ, ಆ ಮಹಾಗುರುವನು ಮಹಾಲಿಂಗವನು ಬೆಲೆಗಟ್ಟಿ ಮಾರಿದಂತೆ, ಬೆಲೆಗಟ್ಟಿಕೊಂಡಂತಹುದು. ತಥಾಪಿಸಿದೊಡಲ ಕಕ್ಕುಲಿತೆಗೋಸ್ಕರವಾಗಿ ಮಾರಕೊಟ್ಟವರಿಗೆಯೂ ಮಾರಕೊಂಡವರಿಗೆಯೂ, ತಮ್ಮ ಗುರು ತಮ್ಮ ಲಿಂಗವೂ ಫಲಿಸದು. ನಿರಾಸೆಯನುಳ್ಳ ಭಕ್ತ ಮಾಹೇಶ್ವರರು ಮೆಚ್ಚರು. ಇದು ಸತ್ಯ; ಬಸವಪ್ರಭುವಿನ ಆಣೆ. ಶ್ರೀವಿಭೂತಿ ರುದ್ರಾಕ್ಷಿಗಳನು ಪ್ರೇಮವಾಗಿ ಧರಿಸುವಂಥಾ ಅವರಿಗೆ ತಂದು ಬೆಲೆಗೊಂಡು ಮಾತಾಡದೆ ಕೊಡುವುದು. ಕೊಟ್ಟ ಬಳಿಕ ಕೈಕೊಂಡವರು ನೀವು ಬಳಲಿ ಬಂದಿರಿ. ನಿಮ್ಮ ದೇವರಿಗೆ ಕಾಯಕವ ಚಿತ್ತೈಸಿಯೆಂದು ಒಪ್ಪಚ್ಚಿ ಮಿಗಿಲೆಂಬಂತೆ ಭಕ್ತಿಯಿಂದ ಕೊಡುವುದು. ಹೀಂಗಲ್ಲದೆ ಬೆಲೆಗಟ್ಟಿ ಕೊಟ್ಟಡೆ, ಬೆಲೆಗಟ್ಟಿಕೊಂಡಡೆ ತಮ್ಮ ತಮ್ಮ ಮಹತ್ವವನು ತಮ್ಮ ತಮ್ಮ ಧರ್ಮವನು ಬೆಲೆಗಟ್ಟಿ ಮಾರಿಕೊಂಡಂತೆ. ಮಾರಿಕೊಟ್ಟಂತೆ ಅಹುದು. ಅಥವಾ ಸಂಸಾರಕ್ಕೋಸ್ಕರವಾಗಿ ತಂದು ಮಾರಕೊಟ್ಟವರಿಗೆಯೂ ಆ ಮಹಾಚಿದ್ಘನ ಭಸಿತ ರುದ್ರಾಕ್ಷಿಗಳು ಸಿದ್ಧಿಯಾಗವು. ಇದು ಸತ್ಯ; ಬಸವಾದಿ ಪ್ರಮಥರಾಣೆ. ಪುರಾತನದಲ್ಲಿ ಷಡುಸ್ಥಲದ ಪುಸ್ತಕಂಗಳ ಕೊಡಬೇಕಾಯಿತ್ತಾದಡೆ, ಅವರ ವಚನಂಗಳ ಮೇಲೆ ಮೋಹವನುಳ್ಳ ಭಕ್ತ ಮಹೇಶ್ವರರಿಗೆ ಬೆಲೆಗೆಂದು ಮಾತಾಡದೆ ಭಕ್ತಿಯಿಂದ ಕೊಡುವುದು. ಈ ಪ್ರಕಾರವಲ್ಲದೆ ಬೆಲೆಗಟ್ಟಿ ಕೊಟ್ಟಡೆ ಬೆಲೆಗಟ್ಟಿಕೊಂಡಡೆ ಆ ವಚನಂಗಳಿದ್ದ ಅರಿವು ಮತಿ ಭಕ್ತಿ ಜ್ಞಾನ ವೈರಾಗ್ಯ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ಪ್ರಣಮ ಮಂತ್ರಂಗಳು ಇಂತಿವೆಲ್ಲವೂ ಮಾರಕೊಟ್ಟಂತೆ, ಮಾರಕೊಂಡಂತಹುದು. ತಥಾಪಿ ಹಣವಿನಾಸೆಗೆ ಬೆಲೆಗಟ್ಟಿ ಕೊಟ್ಟವರಿಗೆಯೂ ಕೊಂಡವರಿಗೆಯೂ ಆ ವಸ್ತುಗಳು ಎಂದೆಂದಿಗೆಯೂ ಸಿದ್ಧಿಸವು. ಇದು ಸತ್ಯ; ಷಡಸ್ಥಲಂಗಳೊಳಗಿದ್ದ ಪಂಚ ಸದಾಚಾರದಾಣೆ. ಲಿಂಗಮುದ್ರೆಯ ಕಲ್ಲನುಳ್ಳ ಸೀಮೆಯ ಕೊಡ ಬೇಕಾಯಿತ್ತಾದಡೆ, ಬೆಲೆಗೆಂದು ಮಾತಾಡದೆ ಗುರುಲಿಂಗಜಂಗಮಕ್ಕೆ ದಾಸೋಹವ ಮಾಡುವಂಥಾ ಭಕ್ತ ಮಹೇಶ್ವರರ ನೋಡಿ ಅವರಿಗಡ್ಡ ಬಿದ್ದು ನಿಮ್ಮ ಗುರುವಿನ ಸೀಮೆಯ ನಿಮ್ಮ ಗುರುವಿಂಗೆ ಕೈಕೊಳಬೇಕೆಂದು ಅತಿ ಭಕ್ತಿ ಮುಂತಾಗಿ ಕೊಡುವುದು. ಹೀಂಗಲ್ಲದೆ ಬೆಲೆಗಟ್ಟಿ ಕೊಟ್ಟಡೆ ಬೆಲೆಗಟ್ಟಿ ಕೊಂಡಡೆ ಆ ಲಿಂಗಮುದ್ರೆಯನು ತಾವು ಮಾಡುವ ಶಿವಾನುಭಾವ. ಕ್ರಿಯೆಗಳ ಮಾರಕೊಟ್ಟಂತೆ, ಮಾರಕೊಂಡಂತೆ ಅಹುದು. ಅಥವಾ, ದ್ರವ್ಯದಾಸೆಗೆ ಬೆಲೆಗಟ್ಟಿ ಕೊಟ್ಟವರಿಗೆಯೂ ಬೆಲೆಗಟ್ಟಿಕೊಂಡವರಿಗೆಯೂ ತ್ರಿವಿಧ ಕರ್ಮವು ತ್ರಿವಿಧ ಮಲವು ಕೆಲಕಾಲ ಸತ್ತುಸತ್ತು ಹುಟ್ಟಿಯೂ ಬಿಡವು. ಇದು ಕಾರಣ ಸತ್ತ ನಿರಾಸೆ ಯನುಳ್ಳ ಭಕ್ತ ಮಾಹೇಶ್ವರರಾಣೆ. ಕರ್ಮತ್ರಯ ಮಂತ್ರಯಂಗಳು ಮೊದಲಾದ ಸಕಲ ಪ್ರಪಂಚಗಳ ದೂರವ ಮಾಡುವ ಭಸಿತರುದ್ರಾಕ್ಷೆ, ಲಿಂಗ ಷಡುಸ್ಥಲಂಗಳನು ಗುರುಪುತ್ರರು ಗುರುಪುತ್ರಿಯರು ಇಂತಿವೆಲ್ಲವನು ಮಾರಕೊಂಡುಂಬುವರು. ಲಿಂಗಮುದ್ರೆಯ ಬಸವಗಳನು ಲಿಂಗಮುದ್ರೆಯ ಬಸವಿಯರನೂ ಬೆಲೆಗಟ್ಟಿ ಭಕ್ತರಂತಹವರಲ್ಲ. ಇಹಪರಕ್ಕೆ ದೂರರೆಂದು ಡಂಗುರವನೇರಿಸಿ ಶಿಕ್ಷೆಗಳ ಮಾಡೂದು. ಸಲುಹುದೆ? ಸಲ್ಲದು. ಸಲುಹೂದುಂಟಾದಡೆ ಭಸಿತ, ರುದ್ರಾಕ್ಷೆಗಳನ್ನು ಅಂಗದ ಮೇಲೆ ಲಿಂಗವುಳ್ಳ ಪಿಂಡಗಳನು ಮಾರಕೊಡಬಾರದು, ಮಾರಕೊಳ್ಳಬಾರದು. ಈ ವರ್ಮವನರಿಯದೆ ಮಾರಕೊಟ್ಟವರು, ಮಾರಕೊಂಡವರು ಗುರುಲಿಂಗಜಂಗಮದ ವಾಕ್ಯಂಗಳಿಗೆ ಸಲ್ಲದೆ ಒಂದನೊಂದು ಹೊದ್ದದ ಪಶು, ಮೃಗ ಜೀವಿಗಳಂತೆಯತ್ತರ ತತ್ತರವಾಗಿಹರು. ಇದು ಸತ್ಯ; ಬಸವ ಪ್ರಭು ವಿನಾಣೆ. ಇಂತೆಂಬ ಪುರಾತನರಗಣಿತ ವಚನ ರಸಂಗಳಿಗೆ ಸಾಕ್ಷಿ.

೪೧೫

ಗುರು ಪ್ರಸಾದ, ಲಿಂಗ ಪ್ರಸಾದ, ಜಂಗಮ ಪ್ರಸಾದ
ಆ ತ್ರಿವಿಧ ಪ್ರಸಾದಂಗಳ ಕೊಂಡು ನಂಬದ
ಸ್ವಯ ವಚನ ವಿರೋಧಿಗಳ ಮಾತ ಕೇಳಲಾಗದು.
ಕೇಳುವರು ಮಹಾ ಪಾತಕರು.
ಲಿಂಗವ ಮಾರಿಕೊಂಡುಂಬವರು ನರಕವ ತಿಂಬುದ ಮಾಣ್ಬರೆ ಕಲಿದೇವಯ್ಯಾ?      ||೩೩||

೪೧೬

ತಮ್ಮ ಪುತ್ರರಂಗದ ಮೇಲೆ
ತಮ್ಮ ಶ್ರೀಗುರುವಿನ ಹಸ್ತದಲ್ಲಿ
ಲಿಂಗ ಸಾಹಿತ್ಯವ ಮಾಡಿಸಿದ ಬಳಿಕ
ಆ ಗುರುವಿನ ಪುತ್ರರಲ್ಲದೆ ತಮ್ಮ ಪುತ್ರರಲ್ಲ.
ತಾವವರೂ ಗುರುವಿನ ಸೊಮ್ಮೆಂದರಿದು[24]ಮತ್ತೆ[25] ತಮ್ಮ ಪುತ್ರಿಯರೊಂದು ಮಾರಿಕೊಂಡುಂಡು
ನಾನು ಭಕ್ತ, ನಾನು ಮಹೇಶ್ವರನೆಂಬ
ಶಿವಾಚಾರ ಭ್ರಷ್ಟರುಗಳ
ವೀರ ಸೊಡ್ಡಳ ಮೆಚ್ಚುವನೆ ಚನ್ನಬಸವಣ್ಣಾ?     ||೩೪||

೪೧೭

ಪರುಷಕ್ಕೆ ಬೆಲೆಯಿಲ್ಲ, ಪ್ರಾಣಕ್ಕೆ ನಿರ್ಮಾಲ್ಯವಿಲ್ಲ,
ಪ್ರಸಾದ ರುಚಿಗೆ ಎಂಜಲಿಲ್ಲ, ಸುಖಕ್ಕೆ ಆರೋಚಕವಿಲ್ಲ,
ಗುಹೇಶ್ವರ ನಿಮ್ಮ ಶರಣಂಗೆ ಭವವಿಲ್ಲ.           ||೩೫||

೪೧೮

ಕಂಗಳ ಬೆಳಗ ಕಲ್ಪಿಸಬಾರದು.
ಕರ್ಣದ ನಾದವ ವರ್ಣಿಸಬಾರದು.
ಜಿಹ್ವೆ [26]ರುಚಿಗೆ ಪ್ರತಿಷ್ಠೆ ಇಲ್ಲೆಂದಿತ್ತು.
ಮತಿಗೆ ಮಹಾಘನವಪ್ಪ ಸುಷುಮ್ನ ನಾಳದ
ಸುಯಿದಾನವ ಪ್ರಮಾಣಿಸಬಾರದು.
ಅಣುರೇಣು ತೃಣ ಕಾಷ್ಠದೊಳಗೆ
ಭರಿತ, ಮನೋಹರನಿಂದ ನಿರಾಳ ಗುಹೇಶ್ವರಾ.          ||೩೬||

೪೧೯

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ,
ಆಗಲಿ ಮಹಾಪ್ರಸಾದವೆಂದೆನಯ್ಯಾ.
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ,
ಆಗಲಿ ಮಹಾಪ್ರಸಾದವೆಂದೆನಯ್ಯಾ,
ದ್ವಾಪಾರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ,
ಆಗಲಿ ಮಹಾಪ್ರಸಾದವೆಂದೆನಯ್ಯಾ,
ಕಲಿಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಕಲಿಸಿದರೆ,
ಆಗಲಿ ಮಹಾಪ್ರಸಾದವೆಂದೆನಯ್ಯಾ,
ಗುಹೇಶ್ವರಾ ನಿಮ್ಮ ಕಾಲದ ಕಟ್ಟಣೆಯ ಕಲಿತನಕ್ಕೆ
ನಾನು ಬೆರಗಾದೆನಯ್ಯಾ.  ||೩೭||

೪೨೦

ಕೋಣನನು, ಕುದುರೆಯನು, ಹದ್ದನು, ಹಾವನು
ಮೊಲನನು, ನಾಯನು, ಇಲಿಯನು, ಬೆಕ್ಕನು ಮೇಳೈಸುವಂತೆ
ಮೇಳವಿಲ್ಲದವರೊಗತನ ದಾಳಿಯ ಬಾಳುವೆ.
ಕಾಡ [27]ಬೆಕ್ಕಿಂಗೆ[28] ತುಯ್ಯಲನಿಕ್ಕುವಂತೆ
ಕೇಳು ಗುಹೇಶ್ವರಾ ನಿರಾಳ ಬೋಳಿಂಗೆ ತೊಂಡಿಲು
ಬಾಸಿಂಗ ಉಂಟೆ?            ||೩೮||

ಇನ್ನು ಒಬ್ಬ ಗುರುವಿನ ಹಸ್ತದಲ್ಲಿಯೆ ದೀಕ್ಷೆಯಾಗಬೇಕು. ಇಬ್ಬರು ಗುರುಗಳ ಹಸ್ತದಲ್ಲಿ ದೀಕ್ಷೆ ಬೇಡ, ಬೇಕೆ ಎಂಬ ಸಂದೇಹಿಗಳ ಕಳವುದಕ್ಕೆ ಷಡುಸ್ಥಲ ಬ್ರಹ್ಮಿಗಳಿಗೆ ಬಿನ್ನಹಂ ಮಾಡಿಹೆನು. ಒಬ್ಬ ಗುರುವಲ್ದೆ ಇಬ್ಬರು ಮೂವರು ಗುರುಗಳ ಮಾಡಿಕೊಂಡಡೆ ಆ ಗುರು ಶಿಷ್ಯರುಗಳೆಂಬ ಇತ್ತಂಡಕ್ಕೂ ಶಿವ ಸುಖ ತಟ್ಟದು. ಅದು ಕಾರಣ ಲಿಂಗೋಪದೇಶವನೊಬ್ಬ ಗುರುವಿನಲ್ಲಿ ಪಡೆದು, ಕಟ್ಟಿಗೆ ಕರ್ಪುರ ಉಪದೇಶವನೊಬ್ಬ ಗುರುವಿನಲ್ಲಿ ಪಡೆದು, ಅನುಭವ ಜಪಮಂತ್ರ ಉಪದೇಶವನೊಬ್ಬ ಗುರುವಿನಲ್ಲಿ ಪಡೆದು, ಇಂತು ಪದೇಶದ ಕೊಂಬ ಶಿಷ್ಯನು ಇಂತುಪದೇಶವ ಮಾಡುವ ಗುರುಗಳು [29]ಈ ತಂ[30]ಡದವರುಗಳು ಜ್ಞಾನಿಗಳಲ್ಲ. ಇದು ಕಾರಣ ಹಣವಿನಾಸೆಯ ಗುರು ಶಿಷ್ಯ ಸಂಬಂಧದ ಭಕ್ತಿ ಹಾಳಹುದು ಇಂತೆಂಬ ಪುರಾತನರಗಣಿತ ವಚನರಸಂಗಳಿಗೆ ಸಾಕ್ಷಿ.

೪೨೧

ಮುನ್ನ ಗುರುವಿಂಗೆ ಜ್ಞಾನವಿಲ್ಲ;
ಇನ್ನು ಶಿಷ್ಯಂಗೆ ಜ್ಞಾನವಿಲ್ಲ.
ಇಂತವರ ಮಗನಹ ಕುನ್ನಿಗಳನೇನೆಂಬೆ.
ಗುಹೇಶ್ವರಾ, ಅದು ಕಾರಣ ತನ್ನ ಗುರುವಲ್ಲದೆ,
ಅನ್ಯ[31]ಹಸ್ತ ಮಂಡೆಯ ಮೇಲೆ ಬಿದ್ದರೆ
ಆ ಭಕ್ತಿ ಮುನ್ನವೆ ಹಾಳಹುದು ಎಂದ ಕಲಿದೇವಯ್ಯಾ.    ||೩೯||

೪೨೨

ಒಂದರ ಮೋರೆಯನೊಂದು ಮೂಸಿ ನೋಡಿ,
ಮತ್ತೊಚ್ಚಿ ಬೆದಕಿ ಕಚ್ಚಿಯಾಡಿ ಹೋದಂತಾಯಿತ್ತು ನೋಡಿರೆ,
ಕಲಿಯುಗದೊಳಗಣ ಮೇಳಾಪವ.
ಗುರುವೆಂಬಾತ ಶಿಷ್ಯನಂತುವನರಿಯ,
ಶಿಷ್ಯನೆಂಬಾತ ಗುರುವಿನಂತುವನರಿಯ,
ಭಕ್ತರೆಂಬವರು ಭಕ್ತರೊಳಗೆ ಸಮವಿಲ್ಲ,
ಜಂಗಮವೆಂಬವರು ಜಂಗಮದೊಳಗೆ ಸಮವಿಲ್ಲ,
ಇದು ಕಾರಣ ಕಲಿಯುಗದೊಳಗೆ ಉಪದೇಶವ [32]ತೋರುವ[33] ಕಾಳಗೂಗೆಯ ಮಕ್ಕಳನೇನೆಂಬೆ ಗುಹೇರ್ಶವರಾ.        ||೪೦||

೪೨೩

ರಂಗದಕ್ಕಿಯ ಹೊಯಿ[34]ಯೆಂದು ನಿಂದ ನಾಲ್ವರಿಗೆ
ತಂದಲ್ಲಿ ಶ್ರೀ ಕಳಸವ ಹಿಡಿಸಿ, ಭಕ್ತಿಗೆ ಚಂದವಾಯಿತ್ತು;
ಮುಂದಲ್ಲಿ ಏನ ಬೇಡಲುಂಟು?
ಬೆಂದ ಮನೆಯಲ್ಲಿ ಹುರಿ[35]ಗಾವಲಿಯಾ[36]ದರೆಯೂ[37] ಬರಲಿಯೆಂದು
ಶ್ರೀ ಕಳಸಕ್ಕೆ ದಂಡವನಾಗಳೆ ಕೊಡುವರೆ ಕಲಿದೇವಯ್ಯಾ          ||೪೧||


[1] ಶಾಸ್ತ್ರಾಗಮ ಕಂಡಯ್ಯಾ (ಇ)

[2] ಶಾಸ್ತ್ರಾಗಮ ಕಂಡಯ್ಯಾ (ಇ)

[3] ವೇದ ಶಾಸ್ತ್ರ (ಬ)

[4] ಪ್ರಾಣವಲ್ಲ (ಬ)

[5] ಪ್ರಾಣವಲ್ಲ (ಬ)

[6] ಪ್ರಣಮೋದಯದ (ಬ)

[7] ಪ್ರಣಮೋದಯದ (ಬ)

[8] ಲೀಯವಾದಿ (ಬ)

[9] ಲೀಯವಾದಿ (ಬ)

[10] + ನೇ (ಬ).

[11] ಐವತ್ತೆರಡಕ್ಷರ (ಅವಚಂ)

[12] ಐವತ್ತೆರಡಕ್ಷರ (ಅವಚಂ)

[13] ಭ (ಬ)

[14] ಕರ (ಬ)

[15] ಕಿಂಕಿಲ (ಬ)

[16] ಕಿಂಕಿಲ (ಬ)

[17] ದುರುಸ (ಬ)

[18] ದುರುಸ (ಬ)

[19] + ಕ (ಬ)

[20] ಹೇಮಾಹೇಮ (ಬ)

[21] ಹೇಮಾಹೇಮ (ಬ)

[22] ನೊಡನೆ (ಬ)

[23] ಇಂತೀ (ಬ)

[24] ತಮ್ಮ (ಬ)

[25] ತಮ್ಮ (ಬ)

[26] ಯ (ಬ)

[27] ಬೆಂಕಿಂಗೆ (ಬ)

[28] ಬೆಂಕಿಂಗೆ (ಬ)

[29] ಇತ್ತಂ (ಬ)

[30] ಇತ್ತಂ (ಬ)

[31] + ರ(ಬ)

[32] ಹೇಳುವ (ಬ)

[33] ಹೇಳುವ (ಬ)

[34] x (೨೫೭)

[35] ಲಿ (ಬ)

[36] ರಿಗೆಯೂ ಉಪದೇಶ (ಬ)

[37] ರಿಗೆಯೂ ಉಪದೇಶ (ಬ)