ಭಕ್ತ ಜಂಗಮವಿಬ್ಬರ ಸ್ಥಲದ ಲಕ್ಷಣಮಂ ಪುರಾತನ ಷಡುಸ್ಥಲ ಬ್ರಹ್ಮಿಗಳಿಗೆ ಬಿನ್ನಹಂ ಮಾಡಿಹೆನು:

೩೯೩

ಶರೀರಾ ತಾ ಮುನ್ನ ಮರಹು.
ಶರೀರದ ಅವಧಾನ ತಾ ಮುನ್ನ ಮರಹು.
ಮನ ತಾ ಮುನ್ನವೆ ಮರಹು.
ಮನವೆಂಬ ಮರ್ಕಟನ ಮರವೆಯ
ನೆನವು ತಾ ಮುಂದೆ ಮರಹು.
ಮನದಾಳಾಪನೆ ತಾ ಮುನ್ನವೆ ಮರಹು.
ಮನ ಶರೀರ ಭಾವಂಗಳನರಿದು ನೋಡಾ,
ತಿಳಿದು ನೋಡಾ, ಎಚ್ಚತ್ತು ನೋಡಾ,
ಸತ್ಯ ನಿತ್ಯ, ಶಬ್ದ ನಿತ್ಯ ಊರ್ಧ್ವ ಮುಖದಲ್ಲಿ
ಉತ್ಪತ್ಯವ ಮಾಡುವೆನೆಂದು

[1] ಕರುಣಿ ನಿತ್ಯ ಸಿಂಹಾಸನದ ಮೇಲೆ
ದಯವನೆ ಚರಣವ ಮಾಡಿ
ಮೂರ್ತಿಗೊಂಡು ಕಾರುಣ್ಯದಿಂ ನೋಡಿದ ಶಿವನು.
ಉದಯಕಾಲ ವಿನೋದಕಾಲ
ಶಿವನನು ಮಹಾ ದಯವನು ಬೇಡುವ ಬನ್ನಿ ರಯ್ಯಾ.
ಮನದಲ್ಲಿ ದಾಸೋಹ ಪರಿಪೂರ್ಣವಾಗಿ,
ದಾಸೋಹವ ಬೇಡುವ ಬನ್ನಿರಯ್ಯಾ.
ಸಂಸಾರ ಸಾಗರದೊಳದ್ದಿ ಹೋದರೆಂದು
ಮಾಯೆಯೆಂಬ ಕಾಲನು ಬಿನ್ನಹಂ ಮಾಡಿದನು.
ಬ್ರಹ್ಮನರ್ಥ[2], ವಿಷ್ಣು ವರ್ಥ[3], ರುದ್ರಾದಿಗಳರ್ಥ[4],
ವೇದ ಶಾಸ್ತ್ರಾಗಮ ಪುರಾಣಂಗಳರ್ಥ[5]ವು.
ಸಪ್ತ ಕೋಟಿ ಮಹಾ ಮಂತ್ರಂಗಳರ್ಥ[6]ವು.
ದೇವಾದಿ ದೇವಂಗಳರ್ಥ[7]ವು.[8]ವೇದ ಮಂತ್ರವಿಡಿದು, ಪ್ರಾಣಘಾತಕರಾಗಿ
ದ್ವಿಜರೆಲ್ಲ ಅದ್ದಿ ಹೋದರೆಂದು
ಮಾಯೆಯೆಂಬ ಕಾಲನು ಎಲ್ಲರ ಹಿಂದೆ ಇಕ್ಕಿಕೊಂಡು
ಶಿವಂಗೆ ಬಿನ್ನಹಂ ಮಾಡುವಲ್ಲಿ ಗಣಂಗಳು
ಅದ್ದಿ ಹೋದುದುಂಟೆಯೆಂದು
ನಂದಿಕೇಶ್ವರ ದೇವರು ಬೆಸಗೊಂಡರು.
ಆ ನಿರೂಪಕ್ಕೆ ಮಾಯೆಯೆಂಬ ಕಾಲನು
ಕರ್ಣವ ಮುಚ್ಚಿ; ಸ್ವಯಂ ಸ್ವಹಸ್ತಂಗಳಂ ಮುಗಿದು
ಹೀಗೆಂದು ನಿರೂಪವ ಕರುಣಿಸಿ ಕೊಡುವರೆ ದೇವಯೆಂದು
ಎನ್ನ ನಿರ್ಮಿಸಿದವರಾರು?
ಈ ಸಂಸಾರವ ನಿರ್ಮಿಸಿದವರಾರು?
ತ್ರಿಭುವನಂಗಳ ಮಾಡಿದವರಾರು?
ಗಣಂಗಳದ್ದು ಹೋದುದುಂಟೆ ದೇವ?
ಯಂತ್ರವಾಹಕ ನೀನು: ಸಕಲ ಪಾವಕ ನೀನು.
ನಿಮ್ಮ ಭಕ್ತರು ನಿತ್ಯರು.
ನಿಮ್ಮ ಗಣಂಗಳು ದಯಾಪಾರಿಗಳು.
ನಿಮ್ಮ ಶಣರಣ ನೆನಹಿಂದ
ಸಮಸ್ತ ಲೋಕದವರುಗಳಿಗೆ ಚೈತನ್ಯಾತ್ಮವಹುದು.
ಅವಧಾರವಧಾರೆಂದು ಭಿನ್ನಹಂ ಮಾಡಿ
ಮತ್ತೆ ಕಾಲನು ನಿತ್ಯ ಸಿಂಹಾಸನದ ಮೇಲೆ ಕುಳಿತಿರ್ದು
ಭಕ್ತಿ ನಿತ್ಯ ದಾಸೋಹವಂ ಮಾಡಲಿಕೆ ಕರ್ಮವೆಲ್ಲಿಯದು,
ಮಹಾದಾನಿ ಕರುಣವಿಡಿದೆತ್ತಿದಿರೆನುತ ತಿರುಗಿದನು
ತನ್ನವರು ಸಹಿತಿತ್ತ.
ಅತ್ತ ಮಹಾಸಂಪಾದನೆಯಲ್ಲಿ ಶರಣ ಬಸವಣ್ಣನಿಗೆ
ಶರಣೆನುತಿರ್ದೆ ಕಾಣಾ ಕಲಿದೇವರದೇವಾ.     ||೧||

೩೯೪

ಹುಟ್ಟುವ ಹೊಂದುವ ಜೀವನ ಮಾಯವನು
ಮುಟ್ಟಿಹ [9]ಘನವದರೊ[10]ಳಗೊ ಹೊರಗೊ      ||ಪಲ್ಲ||

[11]ಹಸುವಿನ ಬಸುರೊಳು ಮುಸುಕಿಹ ಹಾಲನು
ವಸುಧೆಯ ಜೀವರು ಜೀವನಕ್ಕಾಗಿ
ಹಸುವಿನ ಶಿಶುವನು ವಂಚಿಸಿ ಹಿಂಡಲು
ಒಸದು ಕರವದದು ಮೊಲೆಯೊ, ಮೋಹವೊ?          ೧

ಧರೆಯೊಳು ವೃಷ್ಟಿಯ ಬಿಂದುಗಳುದುರಲು
ನೆರದಿಹ ನೀರಿನ ಭೂರುಷವ ಕಂಡು
ಪರಿತಹ ನದಿಗಿದಿರೇರುವ ಮೀನಿಗೆ
ನಿರುತಾಧಾರವು ನೀರೋ, ನೆಲವೊ?            ೨

ಸುತ್ತಿಹ ಸಾಗರದೊತ್ತಿನ ಹೊಳೆಯೊಳು
ಬಿತ್ತಿದೆ ಬೆಳದಿಹ ಚಿಪ್ಪಿನ ನಡುವೆ
ಚಿತ್ತಿಯ ಮರುಮಳೆ ಬತ್ತದೆ ಕರೆಯಲು
ಮುತ್ತಾಗಿಹುದದು ಹೊಳೆಯೊ, ಮಳೆಯೊ?   ೩

ಕುರುಹಿಲ್ಲದ ತತ್ತಿಯನೊಡದುದೈಸಿದ
ಮರಿಯಾಕಾರವ ಮಾಡಲು ಪಕ್ಷಿ
ತೆರನಾಗಿಯಾಕಾಶದ ಪಥದೊಳು
ನೆರೆಹಾರೂದದು ಗಾಳಿಯೋ, ಗರಿಯೊ?      ೪

ನಾನಾಕಾರದ ರೂಪಿನೂಳುದೈಸಿ
ನಾನೀನೆಂಬ ಸಂದೇಹವ ಮರದು
ಜ್ಞಾನಾನಂದ ಗುಹೇಶ್ವರ ಲಿಂಗದೊಳು
ನಾ ನೀನೆಂಬುದು ತನುವೋ, ಮನವೊ?       ೫

೩೯೫

ಬೆಳಗಾಯಿತೇಳಿ ಸಾಸಿರ ದಳದ ಮಧ್ಯದೊಳು
ಬೆಳಗು ಪಸರಿಸಿ ಹೊಳದು ಥಳಥಳಸಿತಾ ಪ್ರಭೆಯು
ಬೆಳಗ ಬೀರುತ ಪರಂಜ್ಯೋತಿಯುದೈಸಿ
ಮಹಾ ಬೆಳಗಿನೊಳು ಬೆಳಗಾದುದು  ||ಪಲ್ಲ||

[12]ಮೇರು ಮಂದಿರವನು ಓರಂತೆ ಜಲಗೊಂಡು
ಸೂರ್ಯನು ತಿರುಗಿತಿಹನಾತಂಗೆಯದು ಸಹಜಾ
ಧಾರುಣೆಯ ಮನುಜರಾತನ ಕಂಡುದೇ ಉದಯ ಕಾಣದುದೆ ಅಸ್ತಮಯವು
ಮೇರುಮಂದಿರವನು ಮರೆಯಾಗಿ ತಿರುಗಲು
ಸೂರ್ಯ ಜಗಕೆಲ್ಲಾ ಕಾರಿರುಳು ಕವಿದು, ಕಡುನಿ
ದಿರೆಯೊಳು ಮೈಮರದು ಘೋರಿಗೊಳಿಸುತ ತ್ರಿವಿಧ ಹಸ್ತಗಳ
ನೊಳಕೊಂಡು ಮರದೊರಗಿದವರೆಲ್ಲರೂ       ೧

ಜಗಕೆ ಜಾಗರವಾಗಿ ಹಗಲಾಗಿ ತೋರಿತ್ತು,
ಜಗಕೆ ಜಾಗರವಡಗೆ ಇರುಳಾಗಿ ತೋರಿತ್ತು,
ಜಗವು ಹಗಲಿರುಳಿಂದ ಸತ್ತು ಹುಟ್ಟುತ್ತಿಹುದು ಜಾಗ್ರಸ್ವಪ್ನಂಗಳಿಂದಾ
ಜಗವು ಅನುದಿನ ಕಾಲ ಸಂವತ್ಸರಂಗಲ ನಡಸಿ
ಯುಗ ಜುಗಂಗಳನರಿದು ಅಳವ ಕೊಳಗಗಳಾಗಿ
ಹಗಲು ರವಿ ಇರುಳು ಶಶಿ ತೊಳಲಿಬಹರದರಿಂದ
ಹಗಲಿರುಳು ಅವರಿಗಿಲ್ಲಾ    ೨

ಅಡಿಯ ಮಡ[13]ದಿಂದೊ[14]ತ್ತಿ ದೃಢವಿಡಿದು ಬಂದದಿಂದ
ದಡರಿಯನಲನ ಕುಡಿಯ ತೇಜಗಳು ಪ್ರಜ್ವಲಿಸಿ
ಅಡಿಯಿಡುವ ಸೂರ್ಯನನು ನಾಭಿಮಂಡೇ ದಿಂದ
ಚಂದ್ರಮಂಡಲವನಡರಿ
ಎಡ ಬಲನ ತಡದು ನಡು  ಮಧ್ಯ ಮಾರ್ಗದಿ ನಿಂದು
ಸಡಗರಿಪ ಮನ ಪವನ ರವಿ ಶಶಿಯು ಶಿಖಿ ಬಿಂದು
ಒಡಗೂಡಿ ಒಂದಾಗಿ ಸಮರಸ ಸಮಾಧಿಯೊಳು
ಎಡೆವಿಡದೆ ನೋಡುತಿರಲು ೩

ಅಷ್ಟ ದಸದೆಸಳ ತುದಿಯಂ ನಡವ ಗ[15]ತಿ ಜಾಗ್ರ
ಮೆಟ್ಟಿ ಕರ್ಣಿಕೆಗಾಗಿ ಇಳಿವ ಗತಿಯ ಸ್ವಪ್ನ
ನಟ್ಟನಡು ಮಧ್ಯದಲಿ ಶಶಿಯ ನಡಗಿಸಿ ಹಂಸ ಸುಷುಪ್ತಿಯೆಂದೆನಿಸಿತು
ಮುಟ್ಟಿ ಜಾಗ್ರ ಸ್ವಪ್ನ ಸುಷುಪ್ತಿಗಳ ಮೀರಿ
ತುಟ್ಟ ತುದಿ ಪದಕೈದು ತುರಿಯಾವಸ್ಥೆಯೊಳು
ನೆಟ್ಟನೆಯಧೋಮುಖಗಳೆಲ್ಲಾ ಊರ್ಧ್ವ ಮುಖಗಳಾಗಿ
ಆರೈದು ನೋಡುತಿರಲು    ೪

ಎಪ್ಪತ್ತು ಎರಡು ಸಾವಿರ ನಾಡಿಯಲ್ಲ[16]ಕ್ಕೆ
ಒಪ್ಪುತ್ತಿಹ ಸುಷುಮ್ನ ನಾಡಿ ಮುಖ ತಾನಾಗಿ
ತಪ್ಪದದು ಬ್ರಹ್ಮರಂಧ್ರಕೆ ನಡವ ಪಥವಾಗಿ ಪ್ರಾಣಾಪಾನೋರ್ಧ್ವದಿಂದ
ಇಪ್ಪುದದರ ಸ್ಥಿತಿಯ ಓಂಕಾರದ ಧ್ವನಿಯ
ನಪ್ಪಿ ಕಿವಿಗಳು ಕೇಳೆ ಲಾಲಿಸುತ ಬಂದದಿಂ
ದೊಪ್ಪಿದ ಮಹಾಘನದ ಬೆಳಗಿನೊಳು ಬೆಳಗಾಗಿ ಜ್ಯೋತಿರ್ಲಿಂಗವ ನೋಡುತಾ     ೫

ಮನದ ಸಂಚಲವಳಿದು ಮರುತನುಲ್ಲಾಸದಿಂ
ದಿನನ ಕಳೆಗಳು ಚಂದ್ರ ಕಳೆಗಳು ಕೂಡಿ ಒಂದಾಗಿ
ಅನಲ ಕಳೆಮೃತ ಕಳೆಗಳನುಂಡು ತೃಪ್ತಿಲಿ
ಪರಿಣಾಮ ತಲೆದೋರಿತು

ಅನುಮಿಷದ ದೃಷ್ಟಿಯಾನಂದದಿಂ ನೋಡುತ್ತ
ಅನುಭಾವದಿಂದರಿವ ಸಂಧಾನ ಮಾಡುತ್ತ
ಮನಕೆ ಮಂಗಳವಾಗಿ ಬೆಳಗು ತೋರುತ್ತಿರೆ ಪರತತ್ವ ಪರಮ ಪ್ರಕಾಶದಿಂದಾ         ೬

ನಾದವೆ ಶಬ್ದ ನಿಃಶಬ್ದವೆ ನಾದವಾನಾ
ದಾದೊಳಗಣ ಸುನಾದ ಧ್ವನಿಯು ಓಂಕಾರ
ನಾದವಡಗಲು ಪರಂಜ್ಯೋತಿ ಉದೈಸಿ ಮಹಾಘನ ಚಿಂದಾನಂದದಿಂದ
ನಾದ ಬಿಂದುಕಳಾತೀತದಲ್ಲಿ ಮೈಮರದು
ಅನಾದಿ ಘನಗುರು ಕೂಡಲಚೆನ್ನಸಂಗನೊಳು
ಭೇದವರಿಯದೆ ಬೆರಸಿ ಬೆಳಗಿನೊಳು ಬೆಳಗಾಗಿ ಬೆಳಗು ಪರಿಪೂರ್ಣವಾಯ್ತು         ೭

 

ಭಕ್ತ ಜಂಗಮದರಿವಿನ ಸ್ಥಲದ ಲಕ್ಷಣವಾವುದೆಂದಡೆ:

೨೯೬

ಹೇಳಿ ಹೇಳಿ ಕೇಳಿರಣ್ಣಾ.
ಮೂರರ ಹೊಲಿಗೆಯ ಬಿಚ್ಚಿ ಆರು ಮಾಡಬೇಕು.
ಆರರ ತಿರುಳ ತೆಗದು ಒಂದೂರೊಳಗೆ ನಿಲಿಸಬೇಕು.
ಐದು ಮುಸುಕನುಗಿದು, ಐದರ ಕೆಳೆಯ ಕೆಡಿಸಿ
ಐದರ ನಿಲವ ನಡಗಿಸಿ
ಮೂರರ ಮುದ್ರೆಯನೊಡದು, ನಾಲ್ಕರೊಳಗೆ ನಿಲ್ಲದೆ
ಮೂರು ಮುಖವವು ಒಂದೆ ಭಾವವಾಗಿರಬೇಕು.
ಈ ಭೇದವನರಿಯದೆ ಸುಳಿವವರ ಕಂಡು
ಬೆರಗಾದೆನು ಕಾಣಾ ಗುಹೇಶ್ವರಾ     ||೪||

೨೯೭

ಜೀವರು ಜೀವಿಸಿ ಜೀವನ್ಮುಕ್ತವೆಂತೆಂದರಿಯರು.
ಜೀವಂಗೆ ಆತ್ಮ ಸ್ಥಲ ಸಲ್ಲದು.
ತಮ್ಮ ಜೀವಾತ್ಮನನು ಶಿವನೆಂದು,
ತಮ್ಮ ಶರೀರವನು ಶಿವನೆಂದು
ಅನಂತ ಋಷಿಯರು ಅರ್ಚಿಸಿಕೊಂಬರು.
ಆರಾರುವೆಂದಡೆ: ವಶಿಷ್ಠ, ವಾಲ್ಮೀಕಿ
ಭೃಗು, ದಧೀಚಿ, ಕಾಸ್ಯಪ, ಅಗಸ್ತ್ಯ, ಮಾರ್ಕಂಡೇಯ
ಮೊದಲಾದ ಮಹಾಋಷಿಯರು.
ಅವರ ಶಾಪಾನುಗ್ರಹ ಸಾಮರ್ಥಿಕೆಯ ಪೇಳುವಡೆ
ಅನಂತ ಶೃತಿಗಳೈದಾವೆ, ಅನಂತ ಶಾಸ್ತ್ರಂಗಳೈದವು.
ಶಿವನ ಕರದೋಯೆನಿಸಬಲ್ಲ[17]ರು.
ಅಂತಹರು ಅಕಟಕಟ ಭಕ್ತಿಯ ಕುಳವನರಿಯದೆ ಭವಭಾರಕರಾದರು.
ಅಂತು ಜೀವನ ಬಲುಹಿಂದಲು
ಸುರರು, ಖೇಚರರು, ಗರುಡ, ಗಂಧರ್ವರು
ಸಿದ್ಧ ವಿದ್ಯಾಧರರು, ಗುಹ್ಯಕರು
ಯಕ್ಷ[18]ರಾಕ್ಷಸರು, ಹರಿವಿರಂಚಿಗಳು
ಮೊದಲಾದ ದೈವಂಗಳೆಲ್ಲಾ ಪ್ರಳಯಚಕ್ರಕ್ಕೊಳಗಾದರು.
ಭಾವಾದ್ವೈತರು ವಾಗಾದ್ವೈತರು ಸ್ವಾನಜ್ಞಾನಿಗಳಾಗಿ ಕೆಟ್ಟರು.
ಭಕ್ತರು ಭಕ್ತಿಯ ಸ್ಥಿತಿ ಕುಳವನರಿಯದೆ
ಧ್ಯಾನ, ಮೌನ, ಅನುಷ್ಠಾನ, ಜಪ, ತಪ, ಸಮಾಧಿ
ಸಂಜೆ, ಹೋಮ, ನೇಮ, ನಿತ್ಯ ಅಷ್ಟವಿಧಾರ್ಚನೆ, ಷೋಡಶೋಪಚಾರ
ಇಂತೀ[19] ವ್ರತ ಭಾವ ಭಕ್ತಿಯ ಮಾಡಿದ[20]ರಲ್ಲದೆ
ಭಕ್ತಿ ದಾಸೋಹನವರಿಯದೆ ಕೆಟ್ಟರು.
ಅಂದು ನಮ್ಮ ಬಸವಣ್ಣ ಸ್ವತಂತ್ರನಾದ ಕಾರಣ
ಭಕ್ತಿ ದಾಸೋಹವಳವಟ್ಟಿತ್ತು;
ಲಿಂಗಸ್ಥಲ, ಜಂಗಮಸ್ಥಲ, ಪ್ರಸಾದಸ್ಥಲವಳವಟ್ಟಿತ್ತು.
ಜಂಗಮ ಲಿಂಗವೆಂಬುದು ಸಂಗನ ಬಸವಣ್ಣಂಗೆ ಅಳವಟ್ಟಿತ್ತು.
ದ್ವೈತನಲ್ಲ ಅದ್ವೈತನಲ್ಲ ಬಸವಣ್ಣ.
ಭಾವಿಯಲ್ಲ ನಿರ್ಭಾವಿಯಲ್ಲ ಬಸವಣ್ಣ.
ದೇಹಿಯಲ್ಲ ನಿರ್ದೇಹಿಯಲ್ಲ ಬಸವಣ್ಣ.
ಖಂಡಿತನಲ್ಲ ಅಖಂಡಿತನಲ್ಲ ಬಸವಣ್ಣ.
ಇಂತಪ್ಪ ಬಸವಣ್ಣಂಗೆ ಆವ ಗುಣಗಳು ಇಲ್ಲ.
ನಿರ್ಗುಣ ನಿರಂಜನ ನಿಸ್ಸೀಮ ಶಿವನು
ಬಸವಣ್ಣನೊಡನೆ ಆಡುತ್ತಿಪ್ಪನು, ಹಾಡುತ್ತಿಪ್ಪನು.
ಅದು ಕಾರಣ ಬಸವಣನ್ನ ಮನ ಪರುಷ,
ಬಸವಣ್ಣನ ನೋಟ ಪರುಷ,
ಭಾವ ಪರುಷ, ನಡೆ ಪರುಷ,
ನುಡಿ ಪರುಷ, ಹಸ್ತ ಪರುಷ,
ತನು ಮನ ಧನವ ನಿವೇದಿಸಿದಾತ ಬಸವಣ್ಣ.
ಲಿಂಗವು ಬಸವಣ್ಣ, ಜಂಗಮವು ಬಸವಣ್ಣ, ಗುರು ಬಸವಣ್ಣ
ಆದಿ ಅನಾದಿಯಿಲ್ಲದಂದಿನ ಬಸವಣ್ಣನ ನೆನೆವುದೆ ಪರತತ್ವವು.
ಬಸವಣ್ಣನ ನೆನವುದೆ ಪರಮ ಜ್ಞಾನವು.
ಬಸವಣ್ಣನ ನೆನವುದೆ [21]ಪರ[22] ಮಹಾನುಭಾವವು.
ಎಲೆ ಕಲಿದೇವ ನಿಮ್ಮ ಶರಣ ಬಸವಣ್ಣನ
ಸಮಸ್ತ ಗಣಂಗಳೆಲ್ಲಾ ನೆನದು ಶುದ್ಧರಾದರು.              ||೫||

ಮೂರು ಮುಖವೆಂಬ ಪರಶಿವ ಪರಶಕ್ತಿ, ಪರಮ ಶರಣ ಬಸವಣ್ಣ ಆ ತ್ರಿವಿಧವನು ಹದಿನಾಲ್ಕು ಷಡುಸ್ಥಲಗಳಿಂದ ಇಷ್ಟ ಪ್ರಾಣ ತೃಪ್ತಿ ಲಿಂಗಂಳಿಂದರಿದಂಥ ಶ್ರೀಗುರು ತನ್ನನಾಶ್ರೈಸಿ ಬಂದ ಶಿಷ್ಯೋತ್ತಮನ ಷಡು ಚಕ್ರ ಸ್ಥಾನಂಗಳಲ್ಲಿಹ ತ್ರಿವಿಧ ಕರ್ಮ, ತ್ರಿವಿಧ ಮಲ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ ಮನವೆಂಬ ಷಡ್ಭೂತಂಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ ಸದಾಶಿವ, ಪರಮೇಶ್ವರನೆಂಬ ಷಡುದೇವತೆಗಳು, ಇವರ ಶಕ್ತಿಗಳು ಇಪ್ಪತ್ತುನಾಲ್ಕು ತತ್ವಂಗಳ ಹುದಿದುಕೊಂಡಿರ್ದ ಅಕಾರ ಉಕಾರ, ಮಕಾರ, ಓಂಕಾರ, ನಕಾರ, ಮಕಾರ, ಶಿಕಾರ, ವಕಾರ, ಯಕಾರವೆಂಬೀ ಶೈವಾಕ್ಷರಂಗಳೊಂಬತ್ತನು, ಈ ಒಂಬತ್ತಕ್ಷರಂಗಳ ಹುದಿದುಕೊಂಡುರ್ದ, ಐವತ್ತೊಂದಕ್ಷರಂಗಳನು ಈ ಐವತ್ತೊಂದಕ್ಷರಂಗಳ ಹುದಿದುಕೊಂಡಿರ್ದ ವೇದಶಾಸ್ತ್ರಾಗಮ ಪುರಾಣಂಗಳನು ಈ ಶ್ರುತಿಗಳ ಹುದಿದುಕೊಂಡುರ್ದ ಹದಿನೆಂಟು ಯುಗಂಗಳು, ಹದಿನೆಂಟು ಕುಲಂಗಳು, ನವಗ್ರಹಂಗಳು ಇಪ್ಪತ್ತೇಳು ನಕ್ಷತ್ರಂಗಳು ವಿಘಳಿಗೆ, ಘಳಿಗೆ ಜಾವ, ದಿನ, ವಾರ, ಮಾಸ, ವರುಷ, ತಿಥಿ, ಯೋಗ, ಕರಣ, ಲಗ್ನ, ಮುಹೂರ್ತ ಆ ತತ್ವಂಗಳೆಲ್ಲವನು [23]ಪರಮ[24] ಮೂಲಜ್ಞಾನಿ ಶರಣನ ಮೂಲ ಪ್ರಣಮ ಮಂತ್ರಂಗಳ ಹನ್ನೆರಡರಿಂದ ಭಸಿತ, ರುದ್ರಾಕ್ಷಿಗಳು ಸಹಿತ ತನುವಿಗೇಳು ದೀಕ್ಷೆ, ಪ್ರಾಣನಿಗೇಳು ದೀಕ್ಷೆ, ಮನಕ್ಕೇಳು ದೀಕ್ಷೆ, ಈ [25]ಇಪ್ಪತ್ತೊಂದು[26] ಸಹಜ ದೀಕ್ಷೆಗಳ ಕೊಟ್ಟು ಕಳವುದು. ಕಳೆದ ಬಳಿಕ ಆ ಶಿಷ್ಯೋತ್ತಮನ[27] ಮಸ್ತಕದಲ್ಲಿಪ್ಪ ಶಿವಶಕ್ತಿ ಶರಣನೆಂಬ ಚಿತ್ಕಳೆಗಳ ಸುಜ್ಞಾನ ಹಸ್ತ ಕಮಲದೊಳಗೆ ಸೆಳದು ತ್ರಿವಿಧ ಲಿಂಗಂಗಳಂ ಮಾಡಿದ ಬಳಿಕ ಸ್ಥೂಲ ತನುವಿನ ಮೇಲೆ ಇಷ್ಟಲಿಂಗವೆಂದು ಕುರುಹಿಟ್ಟು ಸ್ಥಾಪಿಸೂದು. ಸೂಕ್ಷ್ಮ ತನುವಿನ ಮೇಲೆ ಇಷ್ಟಲಿಂಗವೆಂದು ಕುರುಹಿಟ್ಟು ಸ್ಥಾಪಿಸೂದು. ಕಾರಣ ತನುವಿನ ಮೇಲೆ ಪ್ರಾಣಲಿಂಗವೆಂದು ಕುರುಹಿಟ್ಟು ಸ್ಥಾಪಿಸೂದು. ಕಾರಣ ತನುವಿನ ಮೇಲೆ ತೃಪ್ತಿಲಿಂಗವೆಂದು ಕುರುಹಿಟ್ಟು ಸ್ಥಾಪಿಸೂದು. ಆ ತ್ರಿವಿಧಲಿಂಗಂಗಳಿಂದು ದೈಸಿದ ಆಚಾರ ಲಿಂಗ ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗಂಗಳೆಂಬ ಷಡುವಿಧ ಲಿಂಗಂಗಳನು, ಷಡು ಚಕ್ರದ ಕಮಲಂಗಳೊಳಗೆ ಸ್ಥಾಪಿಸೂದು. ಈ ಪ್ರಕಾಋದಲ್ಲಿ ಸ್ಥಾಪಿಸಿದ ಬಳಿಕ ಷಡು ಚಕ್ರಂಗಳೊಳಗೆ ಷಡುಸ್ಥಲ ಬ್ರಹ್ಮಿಗಳ ಸ್ಥಾಪಿಸೂದು. ಈ ಕ್ರಮದಲ್ಲಿ ಸ್ಥಾಪಿಸಿದ ಮತ್ತು ಶಿಷ್ಯೋತ್ತಮನಲ್ಲಿ ಭಕ್ತ ಮಹೇಶ್ವರನೆಂಬೆರಡು ಸ್ಥಲವನು ಸ್ಥೂಲ ತನುವಿನೊಳಗೆ ಪ್ರತಿಷ್ಠಿಸೂದು. ಪ್ರಸಾದಿ ಪ್ರಾಣಲಿಂಗಿ ಎಂಬ ಎರಡು ಸ್ಥಲವನು ಸೂಕ್ಷ್ಮ ತನುವಿನೊಳಗೆ ಪ್ರತಿಷ್ಠಿಸೂದು. ಶರಣನೈಕ್ಯನೆಂಬೆರಡು ಸ್ಥಲವನು ಕಾರಣ ತನುವಿನೊಳಗೆ ಪ್ರತಿಷ್ಠಿಸೂದು. ಆ ವರ್ಮದಲ್ಲಿ ಷಡುಸ್ಥಲ ಸಂಪನ್ನನ ಮಾಡಿದ ಬಳಿಕ ಮೂಲ ಪ್ರಣಮ ಮಂತ್ರವನೊಂದನು ಆತ್ಮನಿಗೆ ವೇಧಿಸಿಕೊಟ್ಟು, ಮೂಲ ಪಂಚಾಕ್ಷರಿಗಳ ಜಿಹ್ವೆಗೆ ವೇಧಿಸಿ ಕೊಟ್ಟು, ಮುಲ ಷಡಾಕ್ಷರಿಗಳ ಷಡಾಂಗಕ್ಕೆ ವೇಧಿಸಿಕೊಟ್ಟು ಆ ಹನ್ನೆರಡು ಪ್ರಣಮಂಗಳನು ಐದು ತೆರದ ಜಪಂಗಳಿಗೆ ವೇಧಿಸಿಕೊಟ್ಟು, ಇಂತು ಪರಾತ್ಪರತರವಾದ ವರ್ಮ ದೀಕ್ಷೆಗಳ ಕೊಂಡ ಶಿಷ್ಯೋತ್ತಮಂಗೆ ಗುರೋತ್ತಮನು ನಿರೂಪವ ಕೊಟ್ಟಂತೆ ವಿಭೂತಿ ರುದ್ರಾಕ್ಷಿಗಳ ಸ್ಥಾನ ಸ್ಥಾನಂಗಳಿಗೆ ಧರಿಸಿಕೊಂಡು ಮಾಡುತ್ತಿಹುದು. ಆ ವ[28]ರ್ಮ ಸಂ[29]ದೇಶಂಗಳು ಸತ್ಯವೆಂದು ಅರಿದು ತ್ರಿವಿಧ ದಾಸೋಹಂಗಳ ಮಾಡುವ[30]ದು. ಈ[31] ಭಕ್ತ ಮಾಹೇಶ್ವರರೆ ಇಹಪರಕ್ಕೆ ಪೂಜ್ಯರು. ಇಂತೆಂಬ ಪುರಾತ ನರಗಣಿತ ವಚನರಸಂಗಳಿಗೆ ಸಾಕ್ಷಿ.

೩೯೮

ಆಧಾರದಲ್ಲಿ ಬ್ರಹ್ಮಸ್ವಾಯತ,
ಸ್ವಾಯದಿಷ್ಠಾನದಲ್ಲಿ ವಿಷ್ಣು ಸ್ವಾಯತ,
ಮಣಿಪೂರಕದಲ್ಲಿ ರುದ್ರ ಸ್ವಾಯತ,
ಅನಾಹತದಲ್ಲಿ ಈಶ್ವರ ಸ್ವಾಯತ,
ವಿಶುದ್ಧಿಯಲ್ಲಿ ಸದಾಶಿವ ಸ್ವಾಯತ,
ಆಜ್ಞೇಯಲ್ಲಿ ವ್ಯೋಮಾತೀತ ಸ್ವಾಯತ,
ಇವರೆಲ್ಲರು ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳದು
ಬಯಲ ಲಿಂಗವನೆ ಆರಾಧಿಸಿ
ಬಯಲಾಗಿ ಹೋಯಿತ್ತ ಕಂಡೆ ಗುಹೇಶ್ವರಾ.    ||೬||

೩೯೯

ಆರು ಚಕ್ರದೊಳಗೆ ಆರು ಭೂತಂಗಳೇರಿಪ್ಪವಯ್ಯಾ.
ಅವರೊಳಗೆ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ,
ಆತ್ಮತತ್ವವೆಂಬ ಆರು ಅಧಿದೇವತೆಗಳಿಪ್ಪವಯ್ಯಾ,
ಇಂತಪ್ಪ ಷಟ್ಕರ್ಮ ಸಾದಾಖ್ಯರ ಹಾನಿ ಮಾಡಿ
ದಾಂಟುವ[32]ರನೆ ಭಕ್ತ ಜಂಗಮವೆಂಬೆನು ಕಾಣಾ ಗುಹೇಶ್ವರಾ.    ||೭||

೪೦೦

ಆಧಾರ ಲಿಂಗ ಕುಂಡಲಿವಿಡಿದು.
ಹೃದಯ ಕಮಲದಲ್ಲಿ ಬ್ರಹ್ಮ,
ವಿಷ್ಣು ದ್ವಾರದಲ್ಲಿ, ರುದ್ರ ಭ್ರೂಮಧ್ಯದಲ್ಲಿ,
ಈಶ್ವರನು ಬ್ರಹ್ಮರಂಧ್ರದಲ್ಲಿ,
ಸದಾಶಿವನು [33]ನಾಶಿಕಾ[34]ಗ್ರದಲ್ಲಿ,
ಸರ್ವಗತ ಶಿವನು ಆದಿ ಅನಾದಿಗಳಿಲ್ಲದಂದು
ಗುಹೇಶ್ವರಲಿಂಗ ನಿರಾಳನು.           ||೮||


[1] ದಂ (ಬ)

[2] ರ್ದ(ಬ)

[3] ರ್ದ(ಬ)

[4] ರ್ದ(ಬ)

[5] ರ್ದ(ಬ)

[6] ರ್ದ(ಬ)

[7] ರ್ದ(ಬ).

[8] ಈ (ಬ)

[9] ಮನದೊ (ಬ).

[10] ಮನದೊ (ಬ).

[11] ಪದ (ಬ)

[12] ಮಹಾ (ಬ)

[13] ದೊಳ ಗೊ (ಬ)

[14] ದೊಳ ಗೊ (ಬ)

[15] ನ (ಬ)

[16] ವ (ಅ)

[17] ಲ್ಲದ (ಬ)

[18] ಏಕಾ (ಬ)

[19] ತಿವು (ಬ)

[20] + ವ (ಬ)

[21] x (ಬ)

[22] x (ಬ)

[23] ಪ್ರಣಮ (ಬ)

[24] ಪ್ರಣಮ (ಬ)

[25] ಒಂಭತ್ತು (ಬ)

[26] ಒಂಭತ್ತು (ಬ)

[27] ಗೆ (ಬ)

[28] ರ್ಮೋಪ (ಬ).

[29] ರ್ಮೋಪ (ಬ).

[30] x (ಬ)

[31] x (ಬ)

[32] ವ(ಬ)

[33] ಶಿಖಾ (ಬ)

[34] ಶಿಖಾ (ಬ)