೫೩೭

ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ
ಮುಖಸೆಜ್ಜೆ ಅಂಗಸೋಂಕೆಂಬಿವು ಷಡುಸ್ಥಲದ
ಬಹಿರಂಗದ ಲಾಂಛನವಯ್ಯ.
ಅಂತರಂಗದಲ್ಲಿ ನಾಲ್ಕು ಸ್ಥಾನವು.
ಅವಾವುವೆಂದಡೆ:
ಬ್ರಹ್ಮರಂಧ್ರ, ಭ್ರೂಮಧ್ಯ, ನಾಶಿಕಾಗ್ರ, ಚೌಕಮಧ್ಯ
ಇಂತೀ ಸ್ಥಾನಂಗಳನರಿಯರಾಗಿ
ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ
ನಾಶಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭವ ಸ್ವಾಯತ
ಅಷ್ಟದಳ ಕಮಲದಲ್ಲಿ ಸ್ವಾನುಭಾವ ಸ್ವಾಯತ.
ಇದು ಕಾರಣ ಗುಹೇಶ್ವರ ನಿಮ್ಮ ಶರಣರು ಸದಾ ಸನ್ನಹಿತರು.     ||೧೪೬||

೫೩೮

ಅನಾದಿಯೆಂಬ ಮನ, ಆದಿಯೆಂಬ ಮಾಯೆ,
ಅತೀತನೆಂಬ ಪರಮೇಶ, ಶಯವ ಪ್ರಣಮ ಪಂಚಾಕ್ಷರೀ ಶ್ರುತಿಗಳು,
ಪಂಚ ಸಾದಾಖ್ಯರು

[1], ಪಂಚಭೂತಂಗಳು.
ಇಂತಿವೆಲ್ಲವನಂತರ್ಗತ ಚಕ್ರಂಗಳಿಂದ ಕಳದಲ್ಲೆ,
ಭಕ್ತ ಜಂಗಮವಾಗಬಾರದುಯೆಂದು ಪರಮ ಮೂಲಜ್ಞಾನಿಯೆಂಬ
ಪರಶಿವ ಪರಶಕ್ತಿ ಪರಮ ಬಸವಾದಿ ಪ್ರಮಥರು
ಏಕೆ ನಿರೂಪಂಗಳ ಕೊಟ್ಟರೆಂದಡೆ, ಅವರೆಲ್ಲ ಪ್ರೇತಲಿಂಗ ಸಂಸ್ಕಾರಿಗಳಾಗಿ,
ನಾದಚಕ್ರ, ಬಿಂದುಚಕ್ರ, ಕರ್ಮಚಕ್ರ, ಕಾಲಚಕ್ರ,
ಪ್ರಳಯಚಕ್ರವೆಂಬ ಬಹಿರ್ಗತ ಚಕ್ರಗಳಿಗೆ ಒಳಗಾಗುತ್ತಿಹರಾಗಿ,
ಕಳೆಯಬೇಕೆಂದು ನಿರೂಪವಕೊಟ್ಟರು.
ಅವರೆಲ್ಲ ಉತ್ಪತ್ಯ ಸ್ಥಿತಿ ಲಯಂಗಳಿಗೆ
ಒಳಗಾಗುತ್ತಿಹರೆಂಬುದಕ್ಕೆ ಬಸವಾದಿ ಪ್ರಮಥರ ವಚನ
ನಿರೂಪಕವಾಗಿದುಂಟೆಯೆಂದು ವಿಚಾರಿಸಿದಡುಂಟು.
ಅದು ಹೇಗೆಂದಡೆ:
ಮಹಾಪ್ರಳಯದೊಳು ಧರೆ ಜಲದಲ್ಲಿ ಅಡಗಿತ್ತು; ಬ್ರಹ್ಮ ವಿಷ್ಣು ವಿನಲ್ಲಡಗಿದ;
ಜಲವಗ್ನಿಯಲ್ಲಡಗಿತ್ತು; ವಿಷ್ಣು ರುದ್ರನಲ್ಲಡಗಿದ;
ಅಗ್ನಿ ವಾಯುವಿನಲ್ಲಡಗಿತ್ತು; ರುದ್ರ ಈಶ್ವರನಲ್ಲಡಗಿದ;
ವಾಯುವಾಕಾಶದಲ್ಲಡಗಿತ್ತು; ಈಶ್ವರ ಸದಾಶಿವನಲ್ಲಡಗಿದ;
ಆಕಾಶ ಅಕ್ಷರಮೂರೆಂಬ ಓಂಕಾರದಲ್ಲಡಗಿತ್ತು; ಸದಾಶಿವ ಅತೀತನಲ್ಲಡಗಿದ;
ಅತೀತ ಆದಿಯಲ್ಲಡಗಿದ; ಆದಿ ಅನಾದಿಯಲ್ಲಡಗಿತ್ತು;
ಅನಾದಿ ನಿಜದಹಂಕಾರದಲ್ಲಿ[2] ಅಳಿಯಿತ್ತು[3]; ನಿಜವು ತಾನುತಾನಾಗಿದ್ದಿತ್ತು.
ಈ ಭೇದವ ಕೂಡಲ[4]ಸಂಗನಲ್ಲಿ ಪ್ರಭುವೆ ಬಲ್ಲ
ಕಾಣಾ ಚೆನ್ನಬಸವಣ್ಣಾ.       ||೧೪೭||

೫೩೯

ಕಾಳ ಮೇಘಮಂದಿರದ
ಜಾಳೇಂದ್ರದ ಮನೆಯೊಳಗೊಬ್ಬ ಸೂಳೆಯಿದ್ದಾಳೆ.
ಆ ಸೂಳೆಯ ಬಾಗಿಲಲ್ಲಿ ಎಂಭತ್ತು ನಾಲ್ಕು ಲಕ್ಷ ಮಿಂಡಗಾರರು.
ಅವಳ ಸಂಗದಲ್ಲಿ ಇರಲಮ್ಮರು, ಅವಳು ತಾನೆ ಬರಲೆಂದು ಕರೆಯದಿಹಳು.
ಅವಳಿಗೆ ಯೋನಿ ಹಿಂದು, ಅಂಡ ಮುಂದು,
ಕಣ್ಣು ಅಂಗಾಲಲ್ಲಿ, ತಲೆ ಮೇಗಾಲಲ್ಲಿ,
ಕಿವಿ ಭುಜದಲ್ಲಿ, ಮೂಗು ಹಣೆಯಲ್ಲಿ, ಮೂಗಿನದ್ವಾರ ಅಂಗುಷ್ಠದಲ್ಲಿ,
ಕೈ ಮಂಡೆಯ ಮೇಲೆ, ಬಸುರು ಬಾಯಲ್ಲಿ,
ನಡವಳು ತಲೆಮುಂದಾಗಿ, ಅವಳ ಕೂಡುವ
ಪರಿಯ ಹೇಳಾ ಅಲೇಕನಾಥ ಶೂನ್ಯವಾಗಿದ್ದೆಯಲ್ಲಾ
ಕಲ್ಲಿ[5]ನಾಥನ ಹೊರೆಯಲ್ಲಿ[6]. ||೧೪೫||

೫೪೦

ಆಧಾರಚಕ್ರದಲ್ಲಿ ನಕಾರನೆಂಬ ಬೀಜಾಕ್ಷರವಿಹುದು,
ಅಲ್ಲಿ ಬ್ರಹ್ಮನು ಉತ್ತರ ಖಂಡಣೆಯೆಂಬ ವೇದವನುಚ್ಚರಿಸುತ್ತಿಹನು.
ಸ್ವಾದಿಷ್ಠಾನುಚಕ್ರದಲ್ಲಿ ಮಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ವಿಷ್ಣು ಪ್ರೌಢಲಕ್ಷಿತವೆಂಬ ವೇದವನುಚ್ಚರಿಸುತ್ತಿಹನು,
ಮಣಿಪೂರಕಚಕ್ರದಲ್ಲಿ ಶಿಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ರುದ್ರನು[7] ಋಗ್ವೇದವನುಚ್ಚರಿಸುತ್ತಿಹನು.
ಅನಾಹತಚಕ್ರದಲ್ಲಿ ವಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಈಶ್ವರನು ಯಜುರ್ವೇದವನುಚ್ಚರಿಸುತ್ತಿಹನು,
ವಿಶುದ್ಧಿಚಕ್ರದಲ್ಲಿ ಯಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಸದಾಶಿವ ಸಾಮವೇದವನುಚ್ಚರಿಸುತ್ತಿಹನು.
ಆಜ್ಞಾಚಕ್ರದಲ್ಲಿ ಓಂಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಉಪಮಾತೀತನು ಅಥರ್ವಣ ವೇದವನುಚ್ಚರಿಸುತ್ತಿಹನು.
ಬ್ರಹ್ಮರಂಧ್ರದಲ್ಲಿ ಅಕಾರ ಉಕಾರ ಮಕಾರವೆಂಬ ಬೀಜಾಕ್ಷರವಿಹುದು,
ಅಲ್ಲಿ ಪ್ರಕೃತಿ ವಿಕೃತಿಗಳು ಗಾಯತ್ರಿಯನುಚ್ಚರಿಸುತ್ತಿಹವು.
ಇಂತಿವೆಲ್ಲವನರಿದು ಮರದು ನಿಜಲಿಂಗ ನಿಜಮಂತ್ರಗಳಲ್ಲಿ ಪರವಶ
ನಾಗಿದ್ದೆನು ಕಾಣಾ ಬಸವಪ್ರಿಯ ಕೂಡಲಚನ್ನಸಂಗಮದೇವಾ. ||೧೪೬||

ಇಂತೆಂಬ ವಚನ ವ್ಯಾಖ್ಯಾನಂಗಳ ವಾಕು ಶಸ್ತ್ರಧಾರೆಯಲ್ಲಿ ಆಧಾರ, ಮಣಿಪೂರಕ ಅನಾಹತ ವಿಶುದ್ಧಿ ಆಗ್ನೆಯೆಂಬ ಆರು ಚಕ್ರಗಳು. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮನವೆಂಬ ಆರು ಭೂತಂಗಗಳು, ಚತುಃಕೋಣೆ ಧನುರ್ಗತಿ ತ್ರಿಕೋಣೆ ಷಟ್ಕೋಣೆ ವರ್ತುಳಾಕಾರ ತಮಂಧಾಕಾರವೆಂಬಾರು ಸ್ಥಾನಂಗಳು. ಚತುರ್ದಳ ಷಡುದಳ ದ್ವಾದಶದಳ ಷೋಡಶದಳ ದ್ವಿದಳವೆಂಬಾರು ಕಮಲಂಗಳು. ಐವತ್ತೊಂದು ಅಕ್ಷರ ಅವಕ್ಕೆ ಪೀತ ಹರಿತ ಕೃಷ್ಣ ಶ್ಯಾಮ ಶ್ವೇತ ಮಾಣಿಕ್ಯವೆಂಬಾರು ವರ್ಣ. ದಾಕ್ಷಾಯಣೆಯೆಂಬ ಬ್ರಹ್ಮ, ಬ್ರಹ್ಮನೆಂಬ ವಿಷ್ಣು, ವಿಷ್ಣುವೆಂಬ ಮಹೇಶ್ವರ, ಮಹೇಶ್ವರನೆಂಬ ಈಶ್ವರ, ಸದ್ಗುರುವೆಂಬ ಸದಾಶಿವ, ಶ್ರೀಗುರುವೆಂಬ ಪರಮೇಶ. ಇಂತಾರು ಅಧಿದೇವತೆಗಳು. ಈ ಬೇಧವೆಲ್ಲವನು ತಿಳಿದು ನೋಡಿ ಸವರಿ ಇವನತಿಗಳದು ಉನ್ಮನೀಜ್ಯೋತಿ ಬ್ರಹ್ಮರಂಧ್ರದೊಳಗಿಪ್ಪ ಸಹಸ್ರದಳ ಪದ್ಮದಲ್ಲಿಯ ಮೃತಬಿಂದುವಿನೊಳಗೆ ಮೂಲಪ್ರಣಯ ಸ್ವರೂಪಾಗಿರುವ ಲಿಂಗದಲ್ಲಿ ಒಡಗೂಡಬಲ್ಲಡೆ ಅದೀಗ ಪ್ರಾಣಲಿಂಗ ಸಂಬಂಧ, ಶರಣ ಸಂಬಂಧ, ಐಕ್ಯ ಸಂಬಂಧ, ಇಂತೆಂಬ ವಾಕ್ಯಂಗಳಿಗೆ ಸಾಕ್ಷಿ.

೫೪೧

ಗುದಸ್ಥಾನದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ,
ಚತುಃಕೋಣೆ, ಚೌದಳ ಪದ್ಮ, ಅಲ್ಲಿಹ ಅಕ್ಷರ ನಾಲ್ಕು : ವಶ ಷ ಸ.
ಅವರ ವರ್ಣ ಸುವರ್ಣದ ವರ್ಣ, ಅದಕ್ಕಧಿದೇವತೆ ದಾಕ್ಷಾಯಣಿ.
ಲಿಂಗಸ್ಥಾನದಲ್ಲಿ ಸ್ವಾದಿಷ್ಟಾನ ಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ,
ಷಡುದಳ ಪದ್ಮ, ಅಲ್ಲಿಹ ಅಕ್ಷರವಾರು: ಬ ಭ ಮ ಯ ರ ಲ,
ಅವಕ್ಕೆ ಪಚ್ಚೆಯ ವರ್ಣ, ಅದಕ್ಕಧಿದೇವತೆ ಬ್ರಹ್ಮನು.
ನಾಭಿಸ್ಥಾನದಲ್ಲಿ ಮಣಿಪೂರಕ ಚಕ್ರ, ತೇಜವೆಂಬ ಮಹಾಭೂತ,
ತ್ರಿಕೋಣೆ, ದಶದಳಪದ್ಮ, ಅಲ್ಲಿಹ ಅಕ್ಷರ ಹತ್ತು : ಡ ಢ ಣ ತ ಥ ದ ಧ ನ
ಪ ಫ. ಅವಕ್ಕೆ ಕೃಷ್ಣ ವರ್ಣ, ಅವಕ್ಕೆ ಅಧಿದೇವತೆ ವಿಷ್ಣು.
ಹೃದಯಸ್ಥಾನದಲ್ಲಿ ಅನಾಹತ ಚಕ್ರ, ವಾಯುವೆಂಬ ಮಹಾಭೂತ,
ಷಟ್ಕೋಣೆ, ದ್ವಾದಶ ದಳಪದ್ಮ, ಅಲ್ಲಿಹ ಅಕ್ಷರ ಹನ್ನೆರಡು:
ಕ ಖ ಗ ಓ ಚ ಛ ಜ ಝ ಞ ಟ ಠ. ಅವಕ್ಕೆ ಕುಂಕುಮ ವರ್ಣ,
ಅಧಿದೇವತೆ ಮಾಹೇಶ್ವರನು.
ಕಂಠಸ್ಥಾನದಲ್ಲಿ ವಿಶುದ್ಧಿ ಚಕ್ರ, ಆಕಾಶವೆಂಬ ಮಹಾಭೂತ,
ವರ್ತುಳಾಕಾರ, ಷೋಡಶದಳ ಪದ್ಮ, ಅಲ್ಲಿಹ ಅಕ್ಷರ ಅದಿನಾರು:
ಅ ಆ ಇ ಈ ಉ ಊ ಋ ಋ ಲೃ ಲೃ ಎ ಐ ಒ ಔ ಅಂ ಅಃ
ಅವಕ್ಕೆ ಶ್ವೇತವರ್ಣ, ಅಧಿದೇವತೆ, ಸದಾಶಿವನು,
ಭ್ರೂಮಧ್ಯದ ಸ್ಥಾನದಲ್ಲಿ ಅಜ್ಞಾಚಕ್ರ, ಮನವೆಂಬ ಮಹಾಭೂತ,
ತಮಂಧಾಕಾರ, ದ್ವಿದಳ ಪದ್ಮ, ಅಲ್ಲಿಹ ಅಕ್ಷರವೆರಡು; ಹಂ ಸ
ಅದಕ್ಕೆ ಮಾಣಿಕ್ಯವರ್ಣ, ಅದಕ್ಕೆ ಅಧಿದೇವತೆ ಶ್ರೀಗುರು.
ಇಂತಿವೆಲ್ಲವನತಿಗಳದು ಉನ್ಮನೀಜ್ಯೋತಿ
ಬ್ರಹ್ಮರಂಧ್ರದ ಮೇಲೆ ಸಹಸ್ರದಳಪದ್ಮ.
ಅಲ್ಲಿ ಅಮೃತವಿಹುದು, ಅಲ್ಲಿ ಓಂಕಾರ ಸ್ವರೂಪವಾಗಿ
ಗುಹೇಶ್ವರಲಿಂಗವು ಸದಾಸನ್ನಹಿತನು.          ||೧೪೭||

೫೪೨

ತನು ಮನ ಧನವ ನಿವೇದಿಸಿದಲ್ಲಿ ಭಕ್ತನೆಂಬೆನು.
ಅರ್ಥ ಪ್ರಾಣಾಭಿಮಾನವ ನಿವೇದಿಸಿದಲ್ಲಿ ಪ್ರಸಾದಿಯೆಂಬೆನು.
ಹೊನ್ನು ಹೆಣ್ಣು ಮಣ್ಣು ನಿವೇದಿಸಿದಲ್ಲಿ ಶರಣನೆಂಬೆನು.
ನವಸ್ಥಲವನರ್ಪಿಸಿದಡೇನಯ್ಯ, ನವಬ್ರಹ್ಮ ಕುಳವ[8]ಳಿಯದನ್ನಕ್ಕ.
ನವಬ್ರಹ್ಮರ ಕುಳವು[9] ನಷ್ಟವಾದಡೆ,
ಕೂಡಲಚನ್ನಸಂಗಯ್ಯನಲ್ಲಿ ಲಿಂಗೈಕ್ಯರೆಂಬೆನು.           ||೧೪೮||

೫೪೩

ಅಂಗೈಯೊಳಗಳ ನಾರಿವಾಳದ ನಸಿ
ಅಂಬರದೆರಳೆಯನುಂಗಿ[10]ತ್ತಲ್ಲಯ್ಯ[11].
ಕಂಬದೊಳಗಣಮಾಣಿಕ್ಯದ ಬಿಂದು ನವಕೋಟಿ
ಬ್ರಹ್ಮರ ನುಂಗಿ[12]ತ್ತಲ್ಲಯ್ಯ[13].
ಆಡುತಾಡುತಲೊಂದು ಕೋಡಗನ ಮರಿ
ಜಪಮಾಡುವ ತಪಸಿಯನುಂಗಿ[14]ತ್ತಲ್ಲಯ್ಯ[15].
ಸರ್ವನೆಂಬ ಪಕ್ಷಿ ಹಲವು ತತ್ತಿಯ ನುಂಗಿತ್ತಲ್ಲಯ್ಯ.
ಸರ್ವಜನೆಂಬ ಪಕ್ಷಿ ಹಲವು ತತ್ತಿಯನಿಕ್ಕಿತ್ತು.
ಅಂಡಜನೆಂಬ ತತ್ತಿ ಹಲವು ಪಕ್ಷಿಯ ನುಂಬಿ
ನಿರ್ವಯಲಾಯಿ[16]ತ್ತಯ್ಯ[17] ಗುಹೇಶ್ವರ           ||೧೪೯||

೫೪೪

ಮನು ಮನೀಶ್ವರ ವೇದಶಾಸ್ತ್ರ ಸ್ಮೃತಿಯೆ೪ಲ್ಲ
ತನತನಗೆ ಹೊಗಳುತಿರುತಿಹವು ಶಿವಘನತೆಯಂ
ಘನತರಾಂತರಗಾಣದತ್ಯತಿಷ್ಠದ್ದಶಾಂಗುಲನೆಂದು ವರಲುತಿಹವು.
ಎನಲಾ ಘನವದಾದ ದರ್ಶನಾಗಮ ತರ್ಕ
ದನುಮತಕೆ ಸಾಧ್ಯ ಲಿಂಗದ ಮಹಾತ್ಮೆಗೆ ಕಡೆ
ಯನೆಣಿಸಲಿಲ್ಲಾಗಿ ಪ್ರಣವಾದಿ ಪಂಚಾಕ್ರಿಯೊಳಡಕವಾಗಿಹುದು ಸತ್ಯ.

ನಿತ್ಯವನಿತ್ಯ ದೇವತೆಗಳಿರಯಲಿಕಳವೆ
ಸಚ್ಚಿದಾನಂದ ಶಿವಜ್ಞಾನಾನುಭಾವ ಭಾ
ವೋತ್ತಮರ ಭಾವಕರಣದ ಕರದೊಳಮೃತಕರಕಿರಣ ಸಮ್ಯಗ್ಜ್ಯೋತಿಯ
ಬಿತ್ತರಿಸಿ ತೊಳತೊಳಗುವತ್ಯಂತ ನಿರವಯದ
ಮತ್ತೆ ಸಚ್ಚಿತ್ಸುಖನಿರಂಜನದ ನಿರ್ಮಲದ
ನಿತ್ಯ ಕೂಡಲಚನ್ನ ಸಂಗನಂಗವನುಪ್ರಭುಲಿಂಗದಲ್ಲಿಯೆ ಕಂಡೆನು.          

ಭಕ್ತ ಜಂಗಮದ ಲಕ್ಷಣದರಿವಿನ ಸಂಭ್ರಮಸ್ಥಲ ಸಮಾಪ್ತ ಮಂಗಳಮಹಾ

* * * 

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ರ(ಬ)

[2] ಅಡಗಿತ್ತು (ಬ)

[3] ಅಡಗಿತ್ತು (ಬ)

[4] + ಚೆನ್ನ

[5] ನಕೊರೆಯಲ್ಲಿ (ಬ)

[6] ನಕೊರೆಯಲ್ಲಿ (ಬ)

[7] x (ಬ)

[8] + ತಿ(ಅ)

[9] x (ಬ)

[10] ತಲ್ಲಾ (ಬ)

[11] ತಲ್ಲಾ (ಬ)

[12] ತಲ್ಲಾ (ಬ)

[13] ತಲ್ಲಾ (ಬ)

[14] ತಲ್ಲಾ (ಬ)

[15] ತಲ್ಲಾ (ಬ)

[16] ತ್ತು (ಬ)

[17] ತ್ತು (ಬ)