೧೧೫

ಅಚಲ ಸಿಂಹಾಸನವನಿಕ್ಕಿ
ನಿಶ್ಚಲಮಂಟಪದ ಸಂಚದೋವರಿಯೊಳಗೆ
ರುಚಿಗಳೆಲ್ಲವನಿಲಿಪಿ, ಪಂಚರತ್ನದ ಶಿಖರ
ಮಿಂಚುಕೋಟೆಯ ಕಳಸ, ವಚನಚಿತ್ರದ ಪುಷ್ಪ ರಚನೆಯ
ನವರಂಗದಲ್ಲಿ ಖೇಚರಾದಿಯ ಗಮನ
ವಿಚಾರಪರ ನುಂಗಿ ಗುಹೇಶ್ವರ ನಿಂದನಿಲವು
ಸಚರಾಚರಮೀರಿತ್ತು.        ||೬೩||

೧೧೬

ಕಳಸವುಳ್ಳ ಶಿವಾಲಯಕ್ಕೆ ಚೌಕದವೆಱಡು ಕಂಬ ಮೂಱು
ಭಾವಪೂಜಕರಾರೋ? ಅನುಭಾವಿಗಳಿನ್ನಾರೊ?
ಪೂಜಿಸುವರಿನ್ನಾರೊ?
ಇದರ ಸ್ಥಾನದ ನೆಲೆಗತಿಯನಾರು ಬಲ್ಲರು ಗುಹೇಶ್ವರ,
ನಿಮ್ಮ ಶರಣರಲ್ಲದೆ.          ||೬೪||

೧೧೭

ಕಾಲೆ ಕಂಬಗಳಾದವೆನ್ನ
ದೇಹವೇ ದೇಗುಲವಾಯಿತ್ತಯ್ಯಾ.
ಎನ್ನ ನಾಲಿಗೆಯ ಗಂಟೆ
ಶಿರಸುವರ್ಣದ ಕಳಸ ಇದೇನಯ್ಯಾ?
ಸರ

[1]ವೆ[2] ಶಿವಲಿಂಗಕ್ಕೆ  [3]ಸಿಂಹಾಸನವಾಗಿದ್ದಿತ್ತಯ್ಯಾ.
ಗುಹೇಶ್ವರ, ನಿಮ್ಮ ಪ್ರಾಣಲಿಂಗ ಪ್ರತಿಷ್ಠೆ
ಪಲ್ಲಟವಾಗದಂತಿದ್ದೆನಯ್ಯಾ.           ||೬೫||

೧೧೮

ವಾಮಭಾಗದಲ್ಲಿ ಒಂದು ಶಿಶು ಹುಟ್ಟಿತ್ತಕಂಡೆ.
ಜೋ ಜೋ ಎಂದು ಜೋಗುಳವಾಡಿತ್ತ ಕಂಡೆ.
ಜೋಗುಳವಾಡಿದ ಶಿಶುವಲ್ಲಿಯೇ ಲಯವಾಯಿತ್ತು.
ಗುಹೇಶ್ವರನೆಂಬ ಶಬ್ದವಲ್ಲಿಯೇ ನಿಂದಿತ್ತು.       ||೬೬||

೧೧೯

ಉದಕ ಮೂರುತಿಯಾಗಿ ಉದಯವಾಯಿತ್ತ ಕಂಡೆ.
ಪಿಂಡಿಗೆಯಲ್ಲಿ ಮೂಲ [4]ಸ್ಥಾನ[5] ಸ್ಥಾಪ್ಯವಾಯಿತ್ತು.
ಸ್ವದೇಹದ [6]ಶಿವ[7] ಪುರದಲ್ಲಿ ವಾಯು
ಪೂಜಾರಿಯಾಗಿ ಪರಿಮಳದಿಂಡೆಯ ಕಟ್ಟಿ ಪೂಜಿಸುತ್ತಿರ್ದುದು.
ನವದ್ವಾರ ಶಿವಾಲಯದಾದಿ ಮಧ್ಯಸ್ಥಾನದಲ್ಲಿ;
ಗುಹೇಶ್ವರನೆಂಬ ಲಿಂಗದಲ್ಲಿಯೇ ನಿಂದಿತ್ತು.    ||೬೭||

೧೨೦

ಷಡುಸ್ಥಲ ಷಡುಸ್ಥಲವೆಂದು ನುಡಿವುತ್ತಿರ್ಪಿರಿ ಕೇಳಿರಣ್ಣಾ
ಒಬ್ಬ ರಾಯನ ಕೆಳಗೆ ಆರುಬಲ ಉಂಟಾಗಿಪ್ಪಂತೆ
ಆ [8]ಪರಶಿವತತ್ವಕ್ಕೆ ಪ್ರಾಣದವಪ್ಪರು[9] ಭಕ್ತರು[10]ಂಟು.
ಆ ಭಕ್ತರಿಗೆ ಗುರು [11]ಲಿಂಗ[12] ಜಂಗಮದ ದಾಸೋಹ.
ಪಾದೋದಕ ಪ್ರಸಾದ ಪಂಚ ಸದಾಚಾರ,
ಇಂತಿವೆಲ್ಲವು ಪ್ರಾಣಪದವಾಗಿಪ್ಪವು.
ಇವೆರೆಲ್ಲರಿಗೆಯೂ ಶರಣಸತಿ ಲಿಂಗಪತಿಗಳೆಂಬವೆ
ಪ್ರಾಣಪದವಾಗಿ ರೇಕಣ್ಣಪ್ರಿಯ ನಾಗಿನಾಥನಲ್ಲಿ ನಿಂದ[13]ರು         ||೬೮||

ಇಂತು ನಿಲಲಾಗಿ ಆ ಮಹಾಮೇರುವಿನಾದಿ ಮಧ್ಯಾಂತದೊಳಗೆ ಪೂರ್ಣೀಕರಿಸಿಕೊಂಡಿಪ್ಪ ಶರಣ ಲಿಂಗಾಂಗಳಿಬ್ಬರಿಂದುದೈಸಿದ ಷಡುಸ್ಥಲ ಬ್ರಹ್ಮಿಗಳು ಅವರ ಶಕ್ತಿಗಳು, ಆ ದ್ವಾದಶ ತತ್ವಂಗಳು ತಮ್ಮ ಲೀಲೆಯಿಂದ ಮಹಾಜ್ಞಾನ ರೂಢವಾದಂಥ ರುದ್ರಗಣಂಗಳಾಗಬೇಕೆಂದಿಚ್ಛೈಸಲೊಡನೆ, ಮಹಾತೇಜೋ ಮಯವಪ್ಪ ಆದಿ ರುದ್ರನುದೈಸಲು, ಆತನ ಸ್ವರ ಊಪು ಹೇಂಗಾಗಿ [14]ನಿಂದಿ[15]ಹುದೆಂದಡೆ: ಸಹಸ್ರ ಶಿರ, ಸಹಸ್ರ ಹಣೆ, ಸಹಸ್ರ ಕರ್ಣ, ಸಹಸ್ರ ಮುಖ, ಸಹಸ್ರ ಚಕ್ಷು,ಕ ಸಹಸ್ರ ನಾಶಿಕ, ಸಹಸ್ರ ಜಿಹ್ವೆ, ಸಹಸ್ರ ದೇಹ, ಸಹಸ್ರ ಬಾಹು, ಸಹಸ್ರ ಹಸ್ತ, ಸಹಸ್ರ ಜಾನು, ಸಹಸ್ರ ಜಂಘೆ, ಸಹಸ್ರ ಪಾದವನುಳ್ಳ ಸ್ವಯಂಭು ಮೂರ್ತಿಯಾಗಿ ನಿಂದಿಹುದು. ನಿಂದ ಬಳಿಕ ಸ್ವಯಂಜ್ಯೋತಿ ಮೂರ್ತಿಯ ಸಹಸ್ರ ಮುಖಂಗಳ ಲೀಲೆಯಿಂದ ಹತ್ತು ಲಕ್ಷ ರುದ್ರಗಣಂಗಳುದೈಸಿದರು. ಅವರ ಭಿನ್ನ ನಾಮಂಗಳಾವುವೆಂದಡೆ; ಸ್ವಯಂಭು ನಂದಿಕೇಶ್ವರ ನೆಂಬಾತನೊಬ್ಬ ಗಣೇಶ್ವರನು, ಸ್ವಯಂಭು ಭೃಂಗೀಶ್ವರನೆಂಬಾತನೊಬ್ಬ ಗಣೇಶ್ವರನು, ಸ್ವಯಂಭು ವೀರಭದ್ರನೆಂಬಾತನೊಬ್ಬ ಗಣೇಶ್ವರನು, ಶ ಂಕರನೆಂಬಾತನೊಬ್ಬ ಗಣೇಶ್ವರನು, ಸ್ವಯಂಭು ವೀರಭದ್ರನೆಂಬಾತನೊಬ್ಬ ಗಣೇಶ್ವರನು, ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು, ತ್ರಿಯಂಬಕನೆಂಬಾತನೊಬ್ಬ ಗಣೇಶ್ವರನು, ಗಂಗಾಪತಿಯೆಂಬಾತನೊಬ್ಬ ಗಣೇಶ್ವರನು, ಅಂಬಿಕಾಪತಿಯೆಂಬಾತನೊಬ್ಬ ಗಣೇಶ್ವರನು, ಉಮಾಪತಿಯೆಂಬಾತನೊಬ್ಬ ಗಣೇಶ್ವರನು, ಪಶುಪತಿಯೆಂಬಾತನೊಬ್ಬ ಗಣೇಶ್ವರನು, ಸರ್ವಜೀವದಯಾಪರನೆಂಬಾತನೊಬ್ಬ ಗಣೇಶ್ವರನು, ಸರ್ವಜೀವ ಪ್ರಳಯನೆಂಬಾತನೊಬ್ಬ ಗಣೇಶ್ವರನು, ವಿರಾಟ ಜನನನೆಂಬಾತನೊಬ್ಬ ಗಣೇಶ್ವರನು, ವಿರಾಟ[16]ಜಪುರುಷನೆಂಬಾತನೊಬ್ಬ ಗಣೇಶ್ವರನು, ಉದಯ ಮುಖನೆಂಬಾತನೊಬ್ಬ ಗಣೇಶ್ವರನು, ಉದನ್ಮುಖನೆಂಬಾತನೊಬ್ಬ ಗಣೇಶ್ವರನು, ವೇದನಾದ ಪುರುಷನೆಂಬಾತನೊಬ್ಬ ಗಣೇಶ್ವರನು, ವೇದನಾದಾತೀತನೆಂಬಾತನೊಬ್ಬ ಗಣೇಶ್ವರನು, ಜ್ಯೋತಿ ಪುರುಷನೆಂಬಾತನೊಬ್ಬ ಗಣೇಶ್ವರನು, ಜ್ಯೋತ್ಯಾತೀತನೆಂಬಾತನೊಬ್ಬ ಗಣೇಶ್ವರನು, ತ್ರಿಪಾದ ಪುರುಷನೆಂಬಾತನೊಬ್ಬ ಗಣೇಶ್ವರನು, ತ್ರಿಪಾದಾತೀತನೆಂಬಾತನೊಬ್ಬ ಗಣೇಶ್ವರನು, ಉರ್ಧ್ವಪುರುಷನೆಂಬಾತನೊಬ್ಬ ಗಣೇಶ್ವರನು, ಉರ್ದ್ವಾತ ನೆಂಬಾತನೊಬ್ಬ ಗಣೇಶ್ವರನು, ಆದಿ ಪುರುಷನೆಂಬಾತನೊಬ್ಬ ಗಣೇಶ್ವರನು, ಆದಿಪುರುಷಾತೀತನೆಂಬಾತನೊಬ್ಬ ಗಣೇಶ್ವರನು, ಅನಾದಿ ಪುರುಷನೆಂಬಾತನೊಬ್ಬ ಗಣೇಶ್ವರನು, ಅನಾದಿತೀತನೆಂಬಾತನೊಬ್ಬ ಗಣೇಶ್ವರನು, ವಿಯತ್ಪುರುಷನೆಂಬಾತನೊಬ್ಬ ಗಣೇಶ್ವರನು, ತದ್ವಿಯತ್ಪುರುಷನೆಂಬಾತನೊಬ್ಬ ಗಣೇಶ್ವರನು, ತತ್ಪುರುಷನೆಂಬಾತನೊಬ್ಬ ಗಣೇಶ್ವರನು, ತತ್ಪುರುಷಾತೀತನೆಂಬಾತನೊಬ್ಬ ಗಣೇಶ್ವರನು, ಏಕತೂರ್ಯನೆಂಬಾತನೊಬ್ಬ ಗಣೇಶ್ವರನು, ಏಕತೂರ್ಯತೀತನೆಂಬಾತನೊಬ್ಬ ಗಣೇಶ್ವರನು, ಪರಬ್ರಹ್ಮನೆಂಬಾತನೊಬ್ಬ ಗಣೇಶ್ವರನು, ಪರಬ್ರಹ್ಮಾತೀತನೆಂಬಾತನೊಬ್ಬ ಗಣೇಶ್ವರನು, ಪರಮನೆಂಬಾತನೊಬ್ಬ ಗಣೇಶ್ವರನು, ಪರಮಾತೀತನೆಂಬಾತನೊಬ್ಬ ಗಣೇಶ್ವರನು. ಪರಮೇಶ್ವರನೆಂಬಾತನೊಬ್ಬ ಗಣೇಶ್ವರನು, ಪರಮೇಶ್ವರಾತೀತನೆಂಬಾತನೊಬ್ಬ ಗಣೇಶ್ವರನು, ನಿರವಯನೆಂಬಾತನೊಬ್ಬ ಗಣೇಶ್ವರನು, ನಿರಾಕಾರನೆಂಬಾತನೊಬ್ಬ ಗಣೇಶ್ವರನು, ಚಿದನೆಂಬಾತನೊಬ್ಬ ಗಣೇಶ್ವರನು, ಚಿದಸಂವೇದ್ಯನೆಂಬಾತನೊಬ್ಬ ಗಣೇಶ್ವರನು, ಅಹಂಕಾರನೆಂಬಾತನೊಬ್ಬ ಗಣೇಶ್ವರನು, ನಿರಹಂಕಾರನೆಂಬಾತನೊಬ್ಬ ಗಣೇಶ್ವರನು, ಓಂಕಾರನೆಂಬಾತನೊಬ್ಬ ಗಣೇಶ್ವರನು, ನಕಾರವೆಂಬವ,[17] ಮಕಾರವೆಂಬವ, ಶೀಕಾರವೆಂಬವ, ವಕಾರವೆಂಬವ, ಯಕರವೆಂಬವರಿವರು ಗಣೇಶ್ವರರು, ಅಕಾರನೆಂಬವ, ಉಕಾರನೆಂಬವ, ಮಕಾರನೆಂಬವ ಮೂವರು ಗಣೇಶ್ವರರು, ಅಕ್ಷರಾತ್ಮಕನೆಂಬಾತನೊಬ್ಬ ಗಣೇಶ್ವರನು, [18]ಸುಚಿತ್ತ[19]ನೆಂಬಾತನೊಬ್ಬ ಗಣೇಶ್ವರನು, ಸುಬುದ್ಧಿಯೆಂಬಾತನೊಬ್ಬ ಗಣೇಶ್ವರನು, ಸುಜ್ಞಾನವೆಂಬವ, ಸದ್ಭಾವನೆಂಬವ, ವ್ಯಕ್ತನೆಂಬವ, ಅವ್ಯಕ್ತನೆಂಬವ, ಕಲ್ಪನೆಂಬವ, ನಿರ್ವಿಕಲ್ಪನೆಂಬವ, ನಿರ್ವಾಣನೆಂಬವ, ಸರ್ವಜೀವರಕ್ಷಕನೆಂಬವ, ಇಂತಪ್ಪ ಸ್ವಯಂಭು ರುದ್ರಗಣ ಮುಖ್ಯವಾದ ಅಸಂಖ್ಯಾತರು ಸುಜ್ಞಾನ ಮರುಳು ತಂಡಂಗಳು ಅವರೆಲ್ಲ ಮಹಾಬೆಳಗಿನೊಳು ಬೆಳದುದೈಸಿ ಬೆಳಗಾಗಿರುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೧೨೧

ಉದಙ್ಮುಖನೊಬ್ಬ ಪುರುಷ –
ನುದಯ ಮುಖನೊಬ್ಬನು,
ವಿರಾಡ್ಜನನೊಬ್ಬ ಪುರುಷ,
ವಿರಾಜ ಪುರುಷನೊಬ್ಬನು.

ಸಹಸ್ರಶೀರ್ಷನಾದಿ ಪುರುಷ
ವೇದ ಪುರುಷನೊಬ್ಬನು,
ಜ್ಯೋತಿ ಪುರುಷನೊಬ್ಬ ಪುರುಷ,
ತ್ರಿಪಾದೂರ್ಧ್ವಪುರುಷನೊಬ್ಬನು.

ಆದಿ ಪುರುಷನೊಬ್ಬ ಪುರುಷ,
ವಿಯತ್ಪುರುಷನೊಬ್ಬನು
ತದ್ವಿಯತ್‌ಪುರುಷಾತ್‌ಪುರುಷ –
ರಿಲ್ಲದ ಪ್ರಭೆಯನೋಡಿರೆ.   ೨

ಏಕಂ ತುರ್ಯಂ ಪರಬ್ರಹ್ಮ!
ವೇದ ತಸ್ಮೈನಮೋಸ್ತು !
ವೇದ ನಾದಾತೀತಂ ತುರ್ಯಂ
ಪರಮಂ ನಿರವಯಂ         ೩

ಚಿದಂಶವೇದ್ಯಂ
ನಿರ್ವಿಕಲ್ಪಂ
ನಿರಹಂ ನಿರಾಕಾರಮೋಂಕಾರಂ
ಗುಣಾತೀತಮವ್ಯಕ್ತಂ.        ೪

ಷಟ್‌ತ್ರಿಂಶತ್‌ಪ್ರಭಾಪಟಲದ
ಪ್ರಭೆಯ ಬೆಳಗಿದೆ ನೋಡಿರೆ,
ಬೆಳಗಿನೊಳಗಣ ಮಹಾಬೆಳಗಿನ
ಬೆಳಗು ಕೂಡಲ[20]ಸಂಗಯ್ಯ.           ೫         ||೬೯||

ಆ ಸುಜ್ಞಾನ ಮರುಳು ತಂಡಂಗಳೊಳಗೆ ಕೆಲ ಮರುಳುಗಳು ಆ ಮಹಾನುಭಾವ ಪ್ರಸಾದ ರಸವಜ್ರ ಮಂಟಪವೆಮಬ ಮಹಾಮೇರುವೆಯ ಕೆಳಗೇಳು ನೆಲೆಯಂ ಬಿಟ್ಟು ಮೇಲಾರು ನೆಲೆಯಂ ಮಿಗಿಸಿ ಆ ಹದಿಮೂರು ನೆಲೆಯ ಮಧ್ಯದಲ್ಲಿ ಕಂಕಣವ ತೊಡಿಸದ ಹಾಂಗೆ ಇಪ್ಪತ್ತೈದು ಸಾವಿರ ಯೋಜನ ಪ್ರಮಾಣಿನಗಲದಲ್ಲಿ ಮರುಳ ಮಂಟಪವೆಂಬನಾಮದಿಂ ಓಲಗದ ಹಜಾರ ಚಾವಡಿಯಾಗಿ ಬಳಸಿ ನೆಮ್ಮಿ ಕೈಗಳಂ ನೀಡಿ ಬೆಳದೊಪ್ಪಿ ನಿಂದಿರುತ್ತಿರ್ದವು. ಇರ್ದ ಕಾರಣ ವಜ್ರಾದಿಯ ತುದಿಯ ನೆಲೆಯ ಮೊದಲ  ನೆಲೆಯ ಆ ಎರಡರ ಮಧ್ಯದ ಹನ್ನೆರಡು ನೆಲೆಗೆ ಇಪ್ಪತ್ತೆಂಟು ಕಂಕಣ ತೋರಿದ್ದವು. ಇದ್ದ ಕಾರಣ ಇಪ್ಪತ್ತೆಂಟು ಕಂಕಣಂಗಳ ಮಧ್ಯ ಮಧ್ಯಕ್ಕೊಂದು ಕಂಕಣಂಗಳು ಮತ್ತೆ ತೋರಿ ಮೆರದಿರ್ದವು. ಅಂತಪ್ಪ ಮಹಾ ಮೇರುವನುಳ್ಳ ವಜ್ರದ ಪರ್ವತವಾದ ಕಾರಣ ತನ್ನೊಳಹೊರಗಣ ನೆಲೆ ನೆಲೆಗಳ ಕಂಕಂಣ ಕಂಕಣಂಗಳ ಮಧ್ಯ ಮಧ್ಯಂಗಳೊಳಗೆಲ್ಲಿಯೂ ಮನೋಹರದ ಹೆಸರನುಳ್ಳ ಜ್ಞಾನ ರತ್ನಂಗಳ  ಬೆಳಗಿನ ಮಣಿ ಮಾಲೆಗಳು, ಮನೋಹರದ ಜ್ಞಾನ ರತ್ನಂಗಳ ಬೆಳಗಿನ ಚಿತ್ರಪತ್ರಂಗಳು ತೋರಿಪ್ಪವು. ಇಪ್ಪ ಕಾರಣ ಮತ್ತೆ ಮನೋಹರವನುಳ್ಳ ಸದ್ವಾಸನೆಯೆಂಬ ಪುಷ್ಪಂಗಳು, ಪುಷ್ಪದ ವೃಕ್ಷಂಗಳು, ಲತೆಗಳು, ಕರುಕು ದಂಡಾವಳಿಗಳು, ತುದಿ ಮೊದಲು ನಡುವೆಲ್ಲ ಠಾವಿನಲ್ಲಿಯು ಬಳಸಿ ಬಳಸಿ ಪಂತಿ ಪಂತಿಗಳಾಗಿ ಒಪ್ಪಿರುತ್ತಿರ್ದ ವಜ್ರ ಶೈಲದ ಹದಿನಾಲ್ಕು ನೆಲೆಗೆ ಅಭವ, ರುದ್ರ, ಮೃಡ, ಈಶ್ವರ, ಸದಾಶಿವ, ಶಾಂತ್ಯಾತೀತ ನಿಂತಪ್ಪ ಷಡುಸ್ಥಲ ಬ್ರಹ್ಮಿಗಳಿಪ್ಪ ನೆಲೆಯ ಮಧ್ಯದ ನೆಲೆಗೆ ತ್ರಿಯಂಬಕ, ಗಂಗಾಪತಿ, ಅಂಬಿಕಾಪತಿ, ಉಮಾಪತಿ, ಪಶುಪತಿ ಸ್ವಯಂಜ್ಯೋತಿ ರುದ್ರನು. ಇಂತಪ್ಪ ಸ್ವಾಮಿಗಳು ತಮ ತಮಗೆ ಬೇಕು ಬೇಕಾದಷ್ಟು ಗಣಂಗಳ ಕೂಡಿ ಕೊಂಡಿರುತ್ತಿರ್ದರು. ಇಂತಪ್ಪನಂತ ಕೋಟಿ ಗಣಂಗಳ ಗರ್ಭೀಕರಿಸಿಪ್ಪ ಪರಶಿವ ಪರಮ ಬಸವಣ್ಣ ಅವರಡಿ ಮುಡಿಯಲಿಪ್ಪರು. ಅಂತಪ್ಪ ಮಹಾ ಗಣಂಗಳನೊಳಕೊಂಡಿಪ್ಪ ಮಹಾಮೇರುವಿನ ಮರುಳು ಮಂಟಪವಿರ್ದ ನೆಲೆಯೊಳಗೂ ಮೂರು ಸುತ್ತಾಗಿರುತ್ತಿದ್ದಿತ್ತು. ಇರಲಾಗಿ ಹೊರಗಣ ಸುತ್ತಿಗೆ ಒಂಬತ್ತು ಬಾಗಿಲು, ನಡುವಣ ಸುತ್ತಿಗೆ ನಾಲ್ಕು ಬಾಗಿಲು, ಗರ್ಭಗೃಹದ ಸುತ್ತಿಗೆ ಎರಡು ಬಾಗಿಲು, ಆ ಪ್ರಕಾರವಾಗಿಪ್ಪ ನೆಲಗಳನಂತ ಕೋಟಿ ಗಣಂಗಳೆಲ್ಲರು ವಿಭೂತಿ ರುದ್ರಾಕ್ಷಿಗಳ ಭೂಷಣದಿಂ ಮೂಲ ಪ್ರಣಮ ಮಂತ್ರಂಗಳ ಜಪಿಸುತ್ತ ಶಿವ ಬಸವರಾಜನ ಸಮ್ಮೇಳನವಾಗಿ ಬಿಜಯಂಗೆಯ್ದ ನೆಲೆಗೆ, ಮಹಾಕೈಲಾಸವೆಂಬ ನಾಮವಂ ಕೊಟ್ಟು, ಆ ಕೈಲಾಸದ ಗರ್ಭಪೀಠ ಮಧ್ಯದಲ್ಲಿ ಸ್ವಯಂಭು ಆದಿ ರುದ್ರನ ಮೂರ್ತಿಗೊಳಿಸಿ ಆತನ ಸುತ್ತಿ ಮುತ್ತಿರ್ದ ಪರಮಜ್ಞಾನ ಶಾಂತಿಯ ತೆಗೆದು, ಪಾರ್ವತಿಯೆಂಬ ಶಕ್ತಿಯಂ ಮಾಡಿ ಆತನ ಷಡುಸ್ಥಲ ಮಾರ್ಗದ ತಿಳಿವಿನ ಬರುವಿಕೆಯಂ ತೆಗೆದು ಗೌರಿಯೆಂಬ ಶಕ್ತಿಯಂ ಮಾಡಿ ಆ ಎರಡು ಶಕ್ತಿಗಳ ಸ್ವಯಂಜ್ಯೋತಿ ಸ್ವರೂಪಂಗೆ ಸಂಬಂಧಿಸಿ ಹವಿದ ಮಾಡಿ ಬಸವಾದಿ ಪ್ರಮಥಗಣಂಗಳೆಲ್ಲರು ಕರುಣಾ ಜಲಮಂ ಮೂಲಮಂತ್ರ ನಾದಂಗಳಿಲಂದ ಪಟ್ಟಾಭಿಷೇಕವಂ ಮಾಡಿ ಚಿದ್ವಿಭೂತಿಯಧರಿಸಿ, ಚಿದ್‌ರುದ್ರಾಕ್ಷಸಿಗಳನಳವಡಿಸಿ, ಕೈಲಾಸಪತಿಯೆಂಬ ನಾಮವಂ ಬಸವಣ್ಣನು ಎಲ್ಲಾ ಗಣಂಗಳ  ಮುಂದೆ ಕೊಟ್ಟಬಳಿಕ, ಆ ಮಹಾಪುರುಷನು ಷಡುಸ್ಥಲದನುಭಾವಸುಖಸಂಕಥಾ ವಿನೋದಂಗಳಿಂದ ವೀರಶೈವ ಭಕ್ತಿ ಸಾಮ್ರಾಜ್ಯ ಸಂಪತ್ತುಗಳನಾಳುತ್ತಿರುತ್ತಿರ್ದನು. ಇರ್ದಬಳಿಕ ಪರಶಿವ ಬಸವಣ್ಣ ಮೊದಲಾದ ಗಣಂಗಳೆಲ್ಲರೂ ತಮ್ಮ ತಮ್ಮ ಜಂಗಮದೇವರುಗಳು ಸಹಿತ ತಮ್ಮ ತಮ್ಮ ನೆಲೆಗಳಿಗೆಯ್ದಿ ಮೂರ್ತಿಗೊಂಡು ವಚನಾನುಭಾವದಮೃತ ಸುಖರಸದೊಳಗೋಲಾಡುತ್ತ ನಿತ್ಯ ತೃಪ್ತರಾಗಿರುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ:

೧೨೨

ಶರಣು ಶರಣು ಎನ್ನಗುರುವೆ ಶರಣಯ್ಯ
ಶರಣು ಉಪಮಾತೀತ ಜ್ಞಾನ ಗುರುವೆ;
ಲಿಂಗ ಜಂಗಮವೆ ಘನವೆಂದು ಪ್ರಸಾದವನು,
ಹಿಂಗದಾ ನಿಜಪದವ ತೋರಿದ ಗುರುವೆ.       ||ಪ||

ಸಾಕಾರ ರೂಪವನೆ ತಾಳಿ, ಬಿಜ್ಜಳಗೆ
ಬೇಕಾದ ದೃಷ್ಟವನು ತೋರಿದ ಗುರುವೆ,
ವಿಸ್ತರಿಸಿ ಜಗಕೆ ನೀನಾಗಿ ಎನ್ನುವನು ತ
ಪ್ಪಿಸಿ ಹೋದೆನ್ನ ಪರಮಗುರುವೆ.      ೧

ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣೈಕ್ಯಸ್ಥಲದಲ್ಲಿ ನಡೆದ ಗುರುವೆ,
ಸೋಹಿದಾಸೋಹಿ ನೀನಾಗಿ ಭಕ್ತರಿಗೆ
ಇಹಪರದ ಸುಖವನ್ನು ತೋರಱೆದ ಗುರುವೆ.  ೨

ನಾದ ಬಿಂದು ಕಳಾತೀತ ಮಹಾಘನದ
ಆದಿಲಿಂಗ ಅನಾದಿ ಶರಣ ಗುರುವೆ,
ಮಿಂಚು ಮಿಂಚನೆ ಕೂಡಿದಂತೆ, ಇದಱ
ಸಂಚವನು ಏನೆನ್ನಬಹುದು ಗುರುವೆ?            ೩

ಅಱೆವು ಕುರುಹನೆ ಅಱಸಿ ಬರಲು, ಆ ಕುಱುಹು
ಅಱೆವನೊಳಕೊಂಡುದನು ಅರಿದಗುರುವೆ,
ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧವ
ಮಾತುವನು ಹಿಂಗಿದ ಜ್ಞಾನಗುರುವೆ.            ೪

ಭಾವ ಭಾವವನೆ ಭಾವಿಸಲು, ಅನುಭಾವ ನಿ –
ರ್ಭಾವ ಏಕಾರ್ಥವೆಂದರಿದ ಗುರುವೆ,
ಕೂಡಲಚೆನ್ನಸಂಗಯ್ಯ, ನಿಮ್ಮುವನು
ಬಸವಲಿಂಗಾ ಲಿಂಗ ಎನುತಿರ್ದೆನು.  ೫         ||೭೦||

೧೨೩

ಉಪಮಿಸಬಾರದ ಮಹಾಘನಲಿಂಗವು
ಕರಸ್ಥಲದೊಳಗಳವಡಲು
ಅತಿಶಯವನು ಬೇರಱಸಲಿಲ್ಲ;
ಮತ್ತಲ್ಲಿಕಯೇ ಕಾಬುದು ನಿಜ ಸುಖವ.           ||ಪ||

ನಾದಬಿಂದು ಕಳೆಗತೀತವಾದ ಆ
ನಾದಿ ಲಿಂಗವನ್ನು ಗುರು ಕರಸ್ಥಲಕ್ಕೆ
ತೋರಿಸಿಕೊಟ್ಟ ಬಳಿಕ
ಬೇಱೆ ಮತ್ತ ಱಸಿಹೆನೆಂದು ನೆನೆಯಲಿಲ್ಲ.        ೧

ಉನ್ಮನಿಯ ಲೌಕಿಕದನು ಸಂ
ಧಾನವ ಪರಿಹರಿಸಲಿಕೆ
ಚಿನ್ಮಯಮೂರುತಿ ಲಿಂಗವು ಹಸ್ತದೊಲ
ಳಿರಲಲ್ಲಿಯೇ ಕಾಬುದು ನಿಜ ಸುಖವ.            ೨

ಅಂಗದೊಳಗಳವಟ್ಟ ಕ್ರೀಗಳಲಿ
ಮಂಗಳ ಮಯವಾಗಿ ತೋರುತಿರೆ,
ಕಂಗಳು ತುಂಬಿ ನೋಡಿ ಸುಖಿಯಹುದಲದೆ
ಬೇಱೆ ಮತ್ತ ರಸಿಹೆನೆನಲಿಲ್ಲ.           ೩

ಕೈಲಾಸ ಕರತಳದೊಳಗೆ ಕರ –
ತಳಾಮಳಕವಾಗಿ ತೋರುತ್ತಿರೆ,
ಬೇರೆ ಕೈಲಾಸಕ್ಕೆ ಹೋಗಿ ಲಿಂಗವ
ಕಂಡಹೆನೆಂದೆಂಬಡೆ ತೆಱಹುಂಟೆ.     ೪

ಆಯತವಾಗಿಹ ಲಿಂಗದೊಳಗೆ ನಿಜ –
ಸ್ವಾಯತ ಸಂಬಂಧವಿರುತ್ತಿರಲು,
ಆಯತವನು ಮತ್ತರಸಲಿಲ್ಲ
ಕೂಡಲಚೆನ್ನಸಂಗ ನಿಮ್ಮನಱೆದಂಗೆ. ೫         ||೭೧||

ಸ್ಥೂಲ ಸೂಕ್ಷ್ಮಕಾರಣದೊಳಗಣ ಬೆಳಗು ಮಹಾಬೆಳಗಾಗಿ
ಹೊಳೆವ ಜ್ಞಾನದ ಜ್ಯೋತಿ [21]ದಳ[22]ಗಳೆಲ್ಲವೆ ಮೀರಿ
ನೆಳಲ ನುಂಗಿದ ಬಿಸಿಲಿನೊಳಗೆ
ಚಂದ್ರಮನುದಯ ಜಲಧಿಯ ವಲಯದ ಬೆಳಸ ಹೇಳಲಾರಳವಲ್ಲ.
ಆಳು ಆಳ್ದನ ನುಂಗಿ ಈರೇಳು ಭುವನವ ದಾಂಟಿ
ಗುಹೇಶ್ವರನಿಂದ ನಿಲವು [23]ಮೇರುಗಗನವ[24] ನುಂಗಿತ್ತು.            ||೭೨||


[1] x ಸ (ಬ)

[2] x (ಬ)

[3] x (ಬ)

[4] x (ಬ)

[5] x (ಬ)

[6] x (ಬ)

[7] x (ಬ)

[8] x (ಬ)

[9] x (ಬ)

[10] x (ಬ)

[11] x (ಬ)

[12] x (ಬ)

[13] ದಿ (೨೫೭)

[14] x (ಬ)

[15] x (ಬ)

[16] x (ಬ)

[17] + ಬಾತನೊಬ್ಬ ಗಣೇಶ್ವರನು (ಬ)

[18] ಸಚ್ಚಿದಾನಂದ (ಬ)

[19] ಸಚ್ಚಿದಾನಂದ (ಬ).

[20] + ಚೆನ್ನ (ಅ)

[21] x (ಬ)

[22] x (ಬ)

[23] ಹೊರಗು ಒಳಗನೆ ನುಂಗಿತ್ತು (ಅ.ವ.ಚಂ.)

[24] ಹೊರಗು ಒಳಗನೆ ನುಂಗಿತ್ತು (ಅ.ವ.ಚಂ.)