೧೮೯

ತಲೆಯಲಿ ಅಟ್ಟುಂಬುದ ಒಲೆಯಲಟ್ಟುಂಬರು.
ಒಲೆಯಲಟ್ಟುಂಬದ ಹೊಟ್ಟೆಯಲುಂಬನ್ನಕ್ಕರ ಹೊಗೆ ಘನವಾಯಿತ್ತು.
ಇದ ಕಂಡು ಹೇಸಿ ಬಿಟ್ಟೆನು ಕಾಣಾ ಗುಹೇಶ್ವರ.            ||೫೧||

೧೯೦

ಹಿಂದಣ ನಾಕವನು, ಮುಂದಣ ನರಕವನು,
ಒಂದೆ ದಿನ ಒಳಕೊಂಡಿತ್ತು ನೋಡಾ !
ಆ ಒಂದು ದಿನವನೊಳಕೊಂಡು ಮಾತನಾಡುವ
ಮಹಾಂತನಕಂಡು ಬಲ್ಲವರಾರಯ್ಯಾ.
ಆದ್ಯರು ವೇದ್ಯರು ಅನಂತ ಹಿರಿಯರು.
ಲಿಂಗದಂತುವನರಿಯದೆ ಹೋದರು ಕಾಣಾ ಗುಹೇಶ್ವರ.            ||೫೨||

ಆದ್ಯರೆಂಬವರು ಷಡುದೇವತೆಗಳು. ವೇದ್ಯರೆಂಬವರು ಅವರ ಕೆಳಗಣ ಪಡೆಗತಳು ಅನಂತರೆಂಬವರು ಮನು ಮುನಿ

[1]ಗಳು[2] ಇಂತಿವರೆಲ್ಲರಿಂದ ಒದಗಿದ ವೇದ ಶಾಸ್ತ್ರ ಆಗಮ ಪುರಾಣಂಗಳ ಓದಿ ತಿಳಿದರಿಮರುಳುಗಳ ಬಿಡುಗಡೆ ವೈರಾಗ್ಯ. ಆರಾರ ವೈರಾಗ್ಯದಂತಯ್ಯಾ ಎಂದಡೆ: ವ್ಯಾದಿಗಳನು ದಾರಿದ್ಯ್ರವನು ತಾಳಲಾರದೆ ಬಾವಿಯೊಳು ಬಿದ್ದು ಸತ್ತೆಹೆನೆಂದು ಘಮ್ಮನೆ ಹೋಗಿ ಕೂಪವ ನೋಡಿ ಇಳಿವುದಕ್ಕೆ ಸೋಪಾನವಿಲ್ಲವೆನುತ್ತ ತಿರುಗುವ ಬರುವೈರಾಗ್ಯದವನಂತೆ. ದೂರದ ಹುಯ್ಯಲೊಳಗಳಿದ ಗಂಡನ ಪ್ರಾಣದ ಕೂಡೆ ತನ್ನ ಪ್ರಾಣವ ಬೆರಸೆಹೆನೆಂದು ಊರ ಹೊರಗಣ ಕೊಂಡಕ್ಕೆ ಶೀಘ್ರದಲ್ಲಿ ನಡೆದು ಹೋಗಿ ತಡಿಯಲ್ಲಿ ನಿಂದು ಸೆರಗನೋಸರಿಸಿಕೊಳ್ಳುತ್ತ ಸತ್ತಮಕ್ಕಳಿಗೆ ಕಣಿಯ ಕೇಳುವಂತೆ ಕರುಸತ್ತ ಮೂರುದಿನಕ್ಕೆ ಪೃಷ್ಟವ ಬರೆವನ[3]ಂತೆ, ಸಮುದ್ರದಾಚೆಯ ತಡಿಯಲ್ಲಿರ್ದಾತನ ಈಚೆಯ ತಡಿಯಲ್ಲಿದ್ದಾತನು[4] ಮುನಿದು ಬೇವಂತೆ ಎನುತ ಆತಬಂದ ಬಟ್ಟೆ ಆತನಿಗೆ, ನಾಬಂದ ಬಟ್ಟೆ ನನಗೆನುತ್ತ ತಿರುಗಿದವಳ ವೈರಾಗ್ಯದಂತೆ. ತೊರೆಯೊಳೊಕ್ಕಿ ಹೋಗುವ ಕರಡಿಯ ಕಂಬಳಿಯೆಂದು ಹಿಡಿದು ಹೋದ ಕುಳಿಗೊಂಡು ಒರಲುವನ ವೈರಾಗ್ಯದಂತೆ ಕಬ್ಬಿನ ಹೊರೆಯೊಳಗೊಂದಿ ಸುಳಿಯದಂತೆ ಕಡಿದೆಹೆನೆಂದು ಹಮ್ಮ ನುಡಿದು ಕಡಿಯಲು ಅವೆಲ್ಲಾ ಹರಿದುವೊಂದುವಸವಲ್ಲದೆ ಸೋತ ಸಟೆಯ ಬರಿಯ ವೈರಾಗ್ಯದಂತೆ, ಕೈಕೊಂಡು ತ್ರಿವಿಧದಾಸೆಯಂ ಬಿಟ್ಟು ವೈರಾಗ್ಯಮಂ ಕೈಕೊಂಡು ಅರಣ್ಯಮಂ ಸಾರಿದ ಮುನಿಯ ಮುಂದೆ ಬೇಂಟೆಯ ಹೋದ ಶುನಕನೊಂದು ಹೋಗಿ ನಿಲಲದನು ಸಿಂಹನಂ ಮಾಡಿದಡದು ಆನೆಗಳಂ ಕೊಲ್ಲುತ್ತಿಪ್ಪುದಂ ನೋಡಲಾರದೆ ಆನೆಯಾಗೆಂದು ಕಲ್ಪಿಸಿದಡದು ಶೃಂಗಾರದ ತೋಪಮುರಿಯಲದರ ಮೊರೆಯಂ ಕೇಳಲಾರದೆ ಅದ ಮತ್ತೆ ಹುಲಿಯಾಗೆಂದು ಕಲ್ಪಿಸಿದಡದು ಪಶುಗಳಂ ಮುರಿಯುತ್ತಿಪ್ಪ ಮೊರೆಯಂ ಕೇಳಲಾರದೆ ಅದಮತ್ತೆ ಒಂದು ವೃಷಭನಂ ಮಾಡಿದಡದು ಹೊಲದೊಳಗಣ ಸಸಿಗಳಂ ಮೇದ ದೂಷ್ಯಮಂ ತಾಳಲಾರದೆ ಅದನು ಒಬ್ಬ ಮನುಷ್ಯನಾಗೆಂದು ಕಲ್ಪಿಸಿ[5] ಶಿಷ್ಯನ ಮಾಡಿರಿಸಿ ಕೊಂಡ ಬಳಿಕವ ಬಲಿದು ಮರ್ಕಟನ ಮೈಥುನವಂ ಮಾಡೂದಂ ಕಂಡು ಮನನೊಂದು; ಅವನನು ಕರ್ಣಿಕೆಯಾಗೆಂದು ಶಪಿಸಿದಡವಳ ಒಬ್ಬರಸು ಬೇಟೆಯ ಬಂದು ಕಂಡವಳ ಚಂದಮಂ ನೋಡಿ ಖುಷಿಯನೊಡಂಬಡಿಸಿ ಕರಕೊಂಡು ಹೋಗಿ ಕಲ್ಯಾಣಮಾಗಿ ನೆರದಂತ್ಯದಲ್ಲಿ ಅರಸು ನಿದ್ರೆಯಮಾಡುತ್ತಿರಲು, ಆ ಸಮಯದಲ್ಲಿ, ಅವಳ ಮೊದಲಂತೆ ಕುಕ್ಕರನಾಗಿ ಹಣತೆಯ ಹಕ್ಕ ಮೆಲುವುದಂ ಕೆಲಸತಿಯರಿಂದ ಅರಸು ಕೇಳಿ ಕಂಡಾಕ್ಷಣವೆ ಹೆಣ್ಣಾಗಲವಳನು ಮುನಿಯಬಳಿಗೆ ಕಳುಹಲು, ತಂದವರೊಪ್ಪಿಸಿ ಸರಿಯಲತ್ತವಿವಳನೆಂದು ಹೆಕ್ಕುಳಿಗೊಂಬ ಖುಷಿಯ ವೈರಾಗ್ಯದಂತೆ ಹೆಂಡರು ಮಕ್ಕಳು ಮಠವೆಂಬಿವ ತೊರೆದು ಪರ್ವತಾಗ್ರವನೇರಿ ತಪಂಗೆಯ್ದಿರ್ದವನಮುಂದೆ ಶಿವನು ಒಂದು ಗುಂಡು ಕಲ್ಲಂ ಹೇಮದ ಗ್ರವನೇರಿ ತಪಂಗೆಯ್ದಿರ್ದವನಮುಂದೆ ಶಿವನು ಒಂದು ಗುಂಡು ಕಲ್ಲಂ ಹೇಮದ ನಟ್ಟು ಗುಂಡಿನಂತೆ ಕಾಣಿಸಲವನು ಹಿಡಿದು ಸತ್ವನಿಕ್ಕಿ ಕಿತ್ತಡೆ ಬಾರದಿಪ್ಪುದಂ ನೋಡಿ ಸುತ್ತಿಗೆ ಚಾಣವಿಲ್ಲದಪ್ಪುದೇತರ ತಪವೆನುತ ಸರಿದೂರಿಗೆ ಬಂದು ಅದನ ಸಾಗಿಸಿಕೊಂಡೊಯ್ದು ನೋಡುವಾಗ ಆ ಹೇಮ ಕಲ್ಲಾಗಿಪ್ಪುದಂ ಕಂಡು ಕೆಟ್ಟ ತಪಸಿಯ ಬರಿ ವೈರಾಗ್ಯದಂತೆ ಅಗಳದಾಂಟಿ ಬಿದ್ದವನಂತೆ ಇಂತಪ್ಪ ಮಾಯಿಕದ ವ್ಯಾಪಾರಂಗಳಿಗೆ ಪರತತ್ವ ಸಾಧ್ಯವಾಗದೆಂಬ ವಚನಂಗಳಿಗೆ ಸಾಕ್ಷಿ.

೧೯೧

ಆರಕ್ಕೆಯ ಸಿರಿಗೆ [6]ಆರು[7] ಚಿಂತಿಸುವರು.
ಆರಕ್ಕೆಯ ಬಡತನಕ್ಕೆ ಆರು ಮಱುಗುವರು.
ಇದಾರಕ್ಕೆ? ಏನಕ್ಕೆ? ಮಾಯದ ಬೇಳುವೆ ಹುರುಳಿಲ್ಲ.
ಕೊಂದು ಕೂಗಿತ್ತು ನೋಡಾ ಗುಹೇಶ್ವರ.        ||೫೩||

೧೯೨

ತೋಂಟವ ಬಿತ್ತಿದರೆಮ್ಮವರು,
ಕಾಹಕೊಟ್ಟರು ಜವನವರು.
ನಿತ್ಯವಲ್ಲದ ಸಂಸಾರ ವೃಥಾಹೋಯಿತ್ತಲ್ಲಾ.
ಗುಹೇಶ್ವರನಿಕ್ಕಿದ ಕಿಚ್ಚು ಹೊತ್ತಿಕ್ಕಲುಂಟು ಅಟ್ಟುಣಲಿಲ್ಲ, ||೫೪||

೧೯೩

ನೆಳಲ ಹೂಳಿಹೆನೆಂದು ಬಳಲುತ್ತಿದೆ ಜಗವೆಲ್ಲ !
ನೆಳಲು ಸಾಯಬಲ್ಲುದೆ ಅಂಗಪ್ರಾಣಿಗಳಿಗೆ?
ಸಮುದ್ರದಾಚೆಯ ತಡಿಯಲ್ಲಿದ್ದ ಕಳ್ಳನಂ ಕಂಡು,
ಇಲ್ಲಿ[8] ಮುನಿದು ಬೈದಡವ ಸಾಯಬಲ್ಲನೆ?
ಭಾ[9]ವದಲಿ ಹೊಲಿದ ಹೊಲಿಗೆಯ ಭೇದನರಿಯರು;
ಕಾಮಿಸಿದಡುಂಟೆ ನಮ್ಮ ಗುಹೇಶ್ವರ ಲಿಂಗವು?            ||೫೫||

೧೯೪

ಲೋಕದವರನೊಂದು ಭೂತ ಹೊಡದಡೆ,
ಆ ಭೂತದಿಚ್ಛೆಯಲ್ಲಿ ನುಡಿದು ನಡವುತ್ತಿಪ್ಪರು ನೋಡಾ.
ಲಾಂಛನ ಧಾರಿ ವೇಷಧರಿಸಿ ಆಸೆಯಿಂದ ಘಾಸಿಯಾಗಲೇಕಯ್ಯಾ?
ಆನೆಯ ಚೋಹವ ತೊಟ್ಟು ನಾಯಾಗಿ ಬೊಗಳುವ
ಮಾನವರನೇನೆಂಬೆ ಗುಹೇಶ್ವರ.     ||೫೬||

೧೯೫

ಅಪರಿಮಿತದ ಕತ್ತಲೆಯೊಳಗೆ
ಅಪರಿಮಿತದ ಬೆಳಗನಿಕ್ಕಿದಡೆ, ಉದಯವೂ ಅದೆ, ಕತ್ತಲೆಯೂ ಅದೆ.
ಅದೇನು ಚೋದ್ಯವು ಒಂದಕ್ಕೊಂದಂಜದು?
ಆನೆಯೂ ಸಿಂಹವೂ ಒಂದಾಗಿ ಉಂಬುದ ಕಂಡು
ಬೆರಗಾದೆನು ಕಾಣಾ ಗುಹೇಶ್ವರ.      ||೫೭||

೧೯೬

ಬ್ರಹ್ಮ ಪಾಶ, ವಿಷ್ಣು ಮಾಯೆ, ರುದ್ರ ಸಂಕಲೆ,
ಈಶ್ವರ ಕಮ್ಮಾರ, ಸದಾಶಿವ ಪ್ರಧಾನಿ,
ಪರಮೇಶನರಸೆಂಬ [10]ಬಲೆಯ ಬೀಸಿ[11] ಹೊನ್ನು ಹೆಣ್ಣು ಮಣ್ಣೆಂಬವ ತೋರಿ,
ಮುಕ್ಕಣ್ಣನಾಡಿದ ಬೇಂಟೆಯನು.
ಆಸೆಯೆಂಬ ಕುಟುಕನಿಕ್ಕಿ ಹೇಸದೆ ಕೊಂಡೆಯಲ್ಲಾ ಗುಹೇಶ್ವರ.     ||೫೮||

ಈ ಷಡುದೇವತೆಗಳು ಮೊದಲಾದ ಎರಡೆಂಬತ್ತೇಳು ಕೋಟಿ ಜಡಪ್ರಮಥರನು ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು, ನಂದಿವಾಹನ ರುದ್ರನು ಅಹಂಕಾರ ಗಿರಿಯೆಂಬ ಕೈಲಾಸಪುರಕ್ಕೆ ಒಡೆಯನಾದಪ್ರಾದೇಶಿಕ ಪರಮೇಶ್ವರನ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಈ ಚತುರ್ವಿಧ ಪದವೆಂಬ ದೇವಿಯರ ಕಾಲ ಸರಮಾಲೆಯಲ್ಲಿ ಡಾವಣಿಯಾಗಿ,  ಕಟ್ಟುವಳು ಮಾಯೆ, ಈ ಭೇದವ ಶ್ರುತಿಗಳ ಓದಿನ ಜಡರುಗಳರಿಯದೆ ಜಂಗಮ ಭಕ್ತಿಯಂ ಬಿಟ್ಟು ಪ್ರಾದೇಶಿಕ ಪರಮೇಶ್ವರನ ಪದಂಗಳ ಬಯಸಿ ಲಿಂಗಕ್ಕೆ ಬಹಿರಂಗದ ಕ್ರಿಯಗಳನು ಅಂತರಂಗದ ಕ್ರಿಯೆಗಳನುಮಾಡಿ, ಈ ಜಡ ಕೈಲಾಸವೆಂಬ ದೇವಲೋಕಕ್ಕಲೋಡಿ ಪ್ರಮಥರೆನಿಸಿಕೊಂಡಲ್ಲಿ ಆ ಭೋಗಂಗಳನುಂಡು ಮರಳಿ ಮರ್ತ್ಯಕ್ಕಿಳಿತಂದು ಪುಣ್ಯ ಪಾಪವನನುಭವಿಸಿ ಇತ್ತ ಲಜ್ಜೆಯೊಳಿರುತ್ತಿಹರು. ಇಂತೆಂಬ ಪುರಾತನರಗಣಿತ ವಚನ ಸಾರಂಗಳಿಗೆ ಸಾಕ್ಷಿ.

೧೯೭

ದೇವರೆಲ್ಲರ ಹೊಡತಂದು, ದೇವಿಯರೊಳಗೆ ಕೂಡಿತ್ತು ಮಾಯೆ.
ಹರಾ ಹರಾ ಮಾಯೆಯಿದ್ದೆಡೆಯನೋಡಾ.
ಶಿವ ಶಿವಾ ಮಾಯೆಯಿದ್ದೆಡೆಯನೋಡಾ.
ಎರಡೆಂಬತ್ತು ಕೋಟಿ ಪ್ರಮಥಗಣಂಗಳು,
ಅಂಗಾಲ ಕಣ್ಣವರು, ಮೈಯೆಲ್ಲಾ ಕಣ್ಣವರು,
ನಂದಿವಾಹನ ರುದ್ರರು, ಇಂತಿವರೆಲ್ಲಾ ಮಾಯೆಯ ಕಾಲುಗಾಹಿನ
ಸರಮಾಲೆ ಕಾಣಾ ಗುಹೇಶ್ವರ.        ||೫೯||

೧೯೮

ಗಗನದ ಮೇಲೊಂದು ಸರೋವರ ಆ ಜಲದಲ್ಲಿ ಮೊಗವ ತೊಳದು,
ಹೂವ ಕೊಯಿದು, ದೇವರಿಗೆ ಮುಖಮಜ್ಜನವೆಂಬುದನೆಱೆದು.
ಪೂಜಿಸಿ ಒಮ್ಮೆ ಹೊಡವಟ್ಟಡೆ ನಾಯಕ ನರಕವಪ್ಪುದಲ್ಲಾ !
ದೇವಲೋಕದ ಪ್ರಮಥರ ಲಜ್ಜೆಯನೇನಹೇಳುವೆ ಗುಹೇಶ್ವರ.     ||೬೦||

ಇಂತೆಂಬ ಪರಶಿವನ ವಚನ [12]ಸೂತ್ರ[13]ಂಗಳ ವ್ಯಾಖ್ಯಾನಂಗಳಿಂದ ಶಿಲ್ಪಶಾಸ್ತ್ರದ ತುದಿ ಮೊದಲು ನಡುವೆ ಬಲ್ಲಂಥಾ, ಸ[14]ಮಸ್ತರಿಗೆ ನಾನು ಮಹಾಕ್ರಮಂಗಳ ಹೇಳಿಹೆನು. ಅದು ಹೇಂಗಯ್ಯಾಯೆಂದಡೆ: ಪೃಥ್ವಿಯ ಮೇಲೆ ಮುನ್ನ ಕಾಣಿಸಿ ಕೊಂಡಿರ್ದ ಲಿಂಗಂಗಳಾಗಲಿ ಮುಂದೆ ಕಾಣಿಸಿಕೊಂಬ ಲಿಂಗಂಗಳಾಗಲಿ ಷಡುದೇವತೆಗಳಿಂದತ್ತತ್ತಣ ಮಹಾಳಿಂಗಂಗಳೆಂದರಿದು, ಆ ಮಹಾಲಿಂಗಂಗಳ ಗೃಹಂಗಳ ಗೋಡೆ ಥರದ ಒಳಹೊರಗೆಯು ಶಿಶಖರದ ತುದಿಮೊದಲ ನಡುವೆಲ್ಲಿಯೂ, ಆ ಮಹಾ ಪರಬ್ರಹ್ಮದ ನಂದೀಶವರ ಭೃಂಗೀಶ್ವರ ವೀರಭದ್ರ ದೇವರು ಮುಖ್ಯವಾದನಂತಕೋಟಿ ಗಣಂಗಳ ಮೇಲೆ ತೊಂಬತ್ತಾರುಸಾವಿರ ಪ್ರಮಥ ಗಣೇಶ್ವರರುಗಳೊಳಗೆ ತಮಗೆ ಬೇಕಾದಷ್ಟು ಗಣೇಶ್ವರರುಗಳಂ ತೆಗೆದು[15]ಗಳಾಗಿ ಕುರುಹಿಟ್ಟು ಚಿತ್ರಿಸೂದು. ಆ ಶಿವಾಲಯಕ್ಕೆ ಮೂರು ಬಾಗಿಲ ಮಾಡೂದು. ಆ ಶಿವಾಲಯದ ಗೋಡೆಯಿಂದೀಚೆ ಹದಿನೆಂಟು ಜಂಘೆಯಷ್ಟಂ ಬಿಟ್ಟು ಪ್ರತಿ ಸೂತ್ರದ ಗೋಡೆಯಂ ನಿಲಿಸೂದು. ನಿಲಿಸಿದ ಬಳಿಕೀಗೋಡೆಯ ಹೊರವಳಯದೊಳು ಕಿರಿಕಿರಿದಾಗಿ ಎಂಟು ಗುಡಿಗಳನಾದಡೆಯು ಕಟ್ಟಿ ಅವರೊಳಗೆ ಪರಮೇಶ್ವರ ಸದಾಶಿವ ಈಶ್ವರ ರುದ್ರ ಈ ನಾಲ್ವರಿಗೆ ಪಂಚ ತ್ರಿಣೇತ್ರ, ಡಕ್ಕೆ ಡಮರುಗ, ತ್ರಿಶೂಲ, ಪಿನಾಕಿ,  ಪಣಿಗಳಾಭರಣ, ತಲೆ ತೊಡೆಗಳಮೇಲಿಕ್ಕದ ಶಕ್ತಿಗಳು ಇವು ಮೊದಲಾದನಂತ ಕಿರಣಗಳ ತಿಳಿದು ತಿದ್ದಿಯಳವಡಿಸಿ ನಿಲಿಸೂದು. ನಿಲಿಸಿದಬಳಿಕೀ ನಾಲ್ವರ ಗುಡಿಗಳ ಗೋಡೆಗಳ ಒಳಹೊರಗೆಯು ಶಿಖರಂಗಳಲ್ಲಿಯು ಇವರ ಕೆಳಗೆ ನಂದಿ ಭೃಂಗಿ ವೀರಭದ್ರ ಷಣ್ಮುಖ ವಿನಾಯಕ ಭೈರವ ಇವರು ಮೊದಲಾದನಂತಕೋಟಿ ರುದ್ರರ ಮೇಲೆ ಎರಡೆಂಬತ್ತೇಳು ಕೋಟಿ ರುದ್ರರುಗಳೊಳಗೆ ತಮಗೆ ಬೇಕಾದವರುಗಳ ತೆಗೆದು ಸಾಲು ಸಾಲಾಗಿ ನಿಲಿಸೂದು. ನಿಲಿಸಿದ ಬಳಿಕಿವರುಗಳ ಕೆಳಗೆ ಬ್ರಹ್ಮ ವಿಷ್ಣುಗಳನು ಪಂಚ ಮುಖ ಶಕ್ತಿಗಳು ಸಹಿತ ಆಭರಣ ಆಯುಧಂಗಳ ಕಿರಣಮಾಡಿ ನಿಲಿಸೂದು. ಈ ಷಡುದೇವತೆಗಳ ಮುಂದೆ ಮನು ಮುನಿ ದೇವದಾನವ ಮಾನವರು ದ್ವಾರಪಾಲಕರು ದಿಕ್ಪಾಲಕರು ಮಹಾ ವಾಹನಂಗಳು ರಂಭೆಯೋರ್ವಶಿಯರು, ದುರ್ಗಿ ಚೌಡಿ ಚಾಮುಂಡಿ ಸಪ್ತಮಾತೃಕೆಯರು, ಇಂತಿವರು ಮೊದಲಾದವರೊಳಗೆ ಬೇಕಾದವರುಗಳ ತೆಗೆದು ನಿಲಿಸೂದು. ಈ ಮಹಾ ಪ್ರಸಂಗದ ದಾರಿಮೇರೆಯ ತಿಳಿದು ನೋಡಿ ನಿಲಿಸಿದ ಶಿಲ್ಪಿಗೆ ಮೋಕ್ಷವಹುದು. ಈ ಜಡ ರುದ್ರರ ಲಿಂಗವೆಂದುಮಾಡಿ ಅಜಹರಿಗಳು ಮೊದಲಾದನಂತ ದೇವತೆಗಳ ಒಳಹೊರಗೆ ನಿಲಿಸಿದರೆ ಪುಣ್ಯ ಪಾಪಯೆಂದೆಂದಿಗೂ ಬಿಡದು. ಇಂತೀ ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ ಮಾನವರೆಲ್ಲರೂ ಕಾಮದಲ್ಲಿ ಲೋಲುಪ್ತರಾಗಿ ಕಾಮಾರಿ ಲಿಂಗದ [16]ಓಲಗ[17]ದೊಳಗಿವರಿಲ್ಲ. ಕಾಮಾರಿಗಣಂಗಳುಂಟು. ಆ ಮಹಾಲಿಂಗವು [18]ಬಣ್ಣದ[19] ಹೆಣ್ಣುಗೂಸೆಂಬ ಮಾಯಾ ಜಾಲದಲ್ಲಿರ್ದ ಕಾಮಖಂಡಂಗಳ ಮುಂದಿಲ್ಲ. [20]ಇದಲ್ಲದ[21] ಕಾರಣ ಪ್ರಸಾದ ರಸವಜ್ರದ ಮಹಾಮೇರುಮಂದಿರದ ಹದಿನೆಂಟು ಜಂಘೆಯಷ್ಪಂ ಬಿಟ್ಟು ಹೊರವಳಯದೊಳು ಓಲೈಸಿಪ್ಪರಾಗಿ ಇಲ್ಲಿಂಗೆಯೂ ಹಾಂಗೆಂದರಿವುದು. ಇಂತೆಂಬ ಪುರಾತನರಗಣಿತ ವಚನ ಸಾರಾಯಂಗಳಿಗೆ ಸಾಕ್ಷಿ

೧೯೯

ಕಾಮದಲ್ಲಿ ಲೋಲುಪ್ತರಾದವರೆಲ್ಲರು
ಮಹವನೆತ್ತ ಬಲ್ಲರೊ?
ಕಾಮಹರನ ಓಲಗದೊಳಗೆ ಕಾಮಗಣಂಗಳುಂಟೆ
ಕಾಮಾರಿ ಗಣಂಗಳಲ್ಲದೆ?
ಈ[22] ಬಣ್ಣದ ಹೆಣ್ಣೆಂಬ ಮಾಯಾಜಾಲವ ಬೀಸಿದಲ್ಲದೆ
ಕಾಮ ಖಂಡಂಗಳಿಗೆ ತನ್ನ ತೋರುವನೆ
ದೇವರಾಯ ಸೊಡ್ಡಳನು?  ||೬೧||

೨೦೦

ಹಿರಿದಪ್ಪ ಜಲಧಿಯ ಮಡುವಿನೊಳಗೆ
ಕರಿಯ ಕಬ್ಬಿಲ ಜಾಲವ ಬೀಸಿದ ನೋಡಯ್ಯ.
ಅರಿದ ತಲೆ ಐದು, ಅರಿಯದ ತಲೆ ಐದು
ಕರಿಯ ತಲೆ ಐದು ಮುಂದಿದ್ದಾನೆ ನೋಡಯ್ಯ.
ಆ ಕರಿಯ ಕಬ್ಬಿಲಲ ಜಾಲವ ಹೊತ್ತುಕೊಂಡು ಹಿಓದರೆ,
ನೇತ್ರದ ಲೋಕುಳಿಯನಾಡಿತ್ತ ಕಂಡೆ ಗುಹೇಶ್ವರ.        ||೬೨||

೨೦೧

ಮಹಾಲಿಂಗದ ರೂಪುಗಳು ಮಹಾಲಿಂಗದ ಹೆಸರಲ್ಲದೆ,
ಲಿಂಗಬೇರೆ ರೂಪನಲ್ಲ ನಿರೂಪನಲ್ಲ.
ಲಿಂಗಬೇರೆ, ಕಾಯಬೇರೆ, ಕಾಯ ಸಂಬಂಧಿಯಲ್ಲ.
ಲಿಂಗಬೇರೆ ಮಹಾಘನದಿಂದತ್ತತ್ತಲೆ.
ಕೂಡಲಸಂಗಮದೇವರ ನಿಲವು ಅರಿಗೆಯೂ ಅಳವಡದು.           ||೬೩||

೨೦೨

ವೇದದವರನೊಲ್ಲದೆ ನಮ್ಮ ಮಾದಾರ ಚೆನ್ನಯ್ಯಂಗೊಲಿದ.
ಶಾಸ್ತ್ರದವರನೊಲ್ಲದೆ ಶಿವರಾತ್ರೆಯ ಸಂಕಣ್ಣಂಗೊಲಿದ.
ಆಗಮದ ಕರ್ಮಿಗಳನೊಲ್ಲದೆ ತೆಲುಗು ಜೊಮ್ಮಣ್ಣಂಗೊಲಿದ.
ಲಿಂಗದೇವರು ಪುರಾಣ ಕರ್ಮಿಗಳೆಂಬುವ ಶಿಷ್ಟ ಬ್ರಹ್ಮರನೊಲ್ಲದೆ
ಉದ್ಭಟಯ್ಯಂಗೊಲಿದ.
ಅಣ್ಣ ಕೇಳಾ ಸೋಜಿಗವ ದಾಸಿದುಗ್ಗಳಿಯರಿಗೊಲಿದು
ಮುಕ್ಕಣ್ಣ ಸೊಡ್ಡಳ ಹಾರುವಣ್ಣಗಳಿಗೆ ಹೇಸಿ
ಕದವನಿಕ್ಕಿಕೊಂಡನು.        ||೬೪||

೨೦೩

ವೇದಂಗಳು ನಿಜವಬಲ್ಲಡೆ ವಟ್ಟಂಕುರರಮೆರೆಯ ಬೇಕಲ್ಲದೆ
ಚೆನ್ನ ಕಕ್ಕಯ್ಯಗಳು ಮೆರೆಯಲೇಕೆ?
ಶಾಸ್ತ್ರಂಗಳು ಸತ್ಯವ ನುಡಿವಡೆ ಶಾಸ್ತ್ರಂಗಳಮಾತಿಂಗೆ ಹೇಸಿ
ಕಿರಾತ ಬೊಮ್ಮಣ್ಣಗಳು ಮೆರೆಯಲೇಕೆ?
ಆಗಮಂಗಳು ಆಚಾರವನರಿವಡೆ ಆ ಆಗಮಂಗಳು ಮೆರೆಯದೆ
ಕೆಂಭಾವಿ ಬೋಗಣ್ಣನ ಹಿಂದೆ ಉರುಳುತ್ತ ಹೋಗಿ ಮೆರೆಯಲೇಕೆ?
ವೇದ ಶಾಸ್ತ್ರಾಗಮಂಗಳು ಶಿವನಾದಿಯಂತುವನರಿಯದೆ
ಸಾಮವೇದಿಗಳು ಸ್ವಪಚಯ್ಯಂಗೆ ಶಿಷ್ಯನಾಗಲೇಕೆ?
ವಾದಿಸಿದವರು ಪ್ರತಿವಾದಿಗಳಾಗಿ ನಿನ್ನಂತರವನರಿಯದೆ
ಅಭೇದ್ಯವು ಘನಕ್ಕೆ ಘನ ಶಂಭುಸೊಡ್ಡಳಾ.     ||೬೫||

೨೦೪

ಸದಾಚಾರಿಯಾದಡೆ ಉಪ್ಪರ ಗುಡಿ ಸಿಂಧು ಪತಾಕೆ.
ಒಬ್ಬರಿಗೊಬ್ಬರು ಶರಣೆಂಬುದೆ ಸರ್ವತೀರ್ಥ.
ಭಕ್ತನ ದೇಹವೇ ತ್ರಿಕೂಟದ ಶಿವಾಲಯ.
ಕಾಲೆ ಕಂಬ ಶಿರವೇ ಸುವರ್ಣದ ಕಳಸ,
ಶಿವಾಚಾರವೆ ಪೌಳಿ. ಆ ಪೌಳಿಯಂ ವಿಭೂತಿಯಲ್ಲಿಧವಳಿಸಿ
ಪರ ದೈವಂಗಳ ಹೊಗಲೀಸೆನೆಂಬ
ಪ್ರಣಮ ಪಂಚಾಕ್ಷರಿಯೆಂಬ ಅಗುಳಿ
ದಾರವಟ್ಟವೊಪ್ಪುತ್ತಿರೆ,
ವಿನಯವೆ ಅಗ್ಘವಣೆ, ಸಜ್ಜನವೆ ಮಜ್ಜನ,
ಸದಾಸನ್ನಹಿತವೆ ಲಿಂಗಕ್ಕೆ ಪೂಜೆ,
ಸತ್ಯವೆ ಅಡ್ಡಣಗೆ, ಸಮತೆಯೇ ಪರಿಯಾಣ.
ಮನಮೀಸಲೆಂಬಲ ಓಗರವಲಿಂಗಾರೋಗಣೆಯ ಮಾಡುತ್ತಿರಲು,
ಹರುಷವೇ ಹಸ್ತಮಜ್ಜನ, ಪ್ರೀತಿ ಪ್ರೇಮವೆ ಕರ್ಪುರದ ವೀಳೆಯ.
ಕಲಿತನವೆ ಜಯಘಂಟೆ, ಫಲಪದವೆ ಕಾಳೆ ಭೇರಿ.
ವೀರವಂದನವೆ ಮದ್ದಳೆ.
ಶರಣಸತಿ ಲಿಂಗಪತಿ ಎಂಬುದೆ ಗೀತಾಸಂಪ್ರದಾಯದ ಕೇಳುವೆ.
ಇದುಕಾರಣ ಕೂಡಲ ಚೆನ್ನಸಂಗಮದೇವ
ನಿಮ್ಮ  ಶರಣ ಸರ್ವಾಂಗ ಲಿಂಗಿ.      ||೬೬||

೨೦೫

ಅಪಾರ ಮಹಿಮನೆಂಬುದು ನಿಮ್ಮ ಭೇರಿ.
ಬೇಡಿತ್ತನೀವೆನೆಂಬುದು ನಿಮ್ಮ ಕಮ್ಮಟ.
ತ್ರಿಜಗವಂದಿತ ಲೋಕದೊಡೆಯನೆಂಬುದು ನಿಮ್ಮ ಶಂಖ.
ಪರದೈವವಿಲ್ಲವೆಂಬ ನಿಮ್ಮ ಡಮರುಗವಯ್ಯಾ.
ಶಿವನು ಕೊಡನೆಂಬವನ ಬಾಯ ತ್ರಿಶೂಲದೊಳಿರಿವುದು,
ಬಳ್ಳೇಶ್ವರನ ಡಂಗುರ ಮೂಜಗದೊಳಯ್ಯ.     ||೬೭||

ಇಂತೆಂಬ ಪುರಾತನರಗಣಿತ ವಚನ ಶೃತದೃಷ್ಟನುಮಾನಂಗಳಿಂದ ಪರಶಿವನ ಮಸ್ತಕದಲ್ಲಿಂದ ಗಂಗೆಹುಟ್ಟಿತ್ತೆಂಬುದನು ಹರಿಹರನು ಒಂದಲ್ಲವೆಂಬುದನು, ವಿಷ್ಣುವಿನ ಕಾಲಲ್ಲಿ ಗಂಗೆಹುಟ್ಟಿತ್ತೆಂಬುದನು[23]ಹರಿಹರವೊಂದೆಂಬುದನು[24] ಈ ನಾಲ್ಕು ಮಾತುಗಳನು ಖಂಡಿಸಿ ಹೇಳಿಹೆನು, ಬಲ್ಲಂಥಾ ವಿವೇಕಿಗಳಿಗೆ. ಅದು ಹೇಂಗೆನಲು: ಮಹಾಘನವೆಂಬ ಪರಮೇಶ್ವರನ, ಘನವೆಂಬ [25]ಈಶ್ವರನ[26] ಈ ಇಬ್ಬರಿಂದತ್ತತ್ತಣ ವಾಙ್ಮನಕ್ಕಗೋಚರವಾದ ಪರಬ್ರಹ್ಮವನರಿಯದೆ, ಈ ಜಡ ಪರಮೇಶ್ವರನ ಪರಶಿವನರಂದು ಮಾಡಿಕೊಂಡು ಕೆಲಶ್ರುತಿ ಪುರುಷರುಗಳು ಶಿವನ[27] ಜಟಾ ಮಕುಟದಲ್ಲಿ ಗಂಗೆಹುಟ್ಟಿ ಮರ್ತಕ್ಕೆ ಇಳಿಯಿತ್ತೆಂದರು. ಎಂದರಾಮಾತುಹುಸಿ. ಅದೆಕೆಂದಡೆ ಶಿವನ ಮಕುಟದಲ್ಲಿಂದ ಬಂದ ಗಂಗೆಯಾದಡೆ ಶಿವನಭಕ್ತರು ಶೌಚವ ಮಾಡಲಿಲ್ಲ. ಅದೇಕೆಂದಡೆ ಅದು ಮಜ್ಜನೋದಕವೆನಿಸೂದಾಗಿ. ಅವರ ಪೂರ್ವಾರ್ಶರಯವ ಕಳೆದೆಹೆವೆಂದು ಮಂತ್ರೋದಕವ ಮಾಡಲಿಲ್ಲ. ಅದೇಕೆಂದಡೆ ಅದನು ಮುನ್ನವೆ ಪವಿತ್ರ[28]ದಲ್ಲಿ[29]ಂದ ಬಂದಿತೆಂದರಾಗಿ. ಇಂತಾ ಹೆಚ್ಚು ಕುಂದಿಗೆ ಬಂದಿತ್ತಾಗಿ ನೀರು ಆ ಗಂಗೆಯಲ್ಲ. ಅಲ್ಲವಾಯಿತ್ತಾಗಿ ನೀರು ಗಂಗೆಯೆಂಬ ಹೆಸರನೊಳಕೊಂಡು ನಾಲ್ಕುಭೂತದೊಳಗೆ ಇದೊಂದು ಭೂತವೆನಿಸಿಕೊಂಬುದು. ಈ ನೀರನೆ ಶಿವನ ಮಕುಟದ ಗಂಗೆಯೆಂದು ಕಂಡಡಿದು ಹೊರ[30]ತಾಗಿ ಪಂಚಭೂತವೆಂಬುದಕ್ಕೆ ಲೆಕ್ಕಸಾಲದು. ಸಾಲದ ಕಾರಣ ಪರಶಿವನ ಮಸ್ತಕದ ಗಂಗೆ ಚಿದ್ಭಿಂದುವಾಗಿಪ್ಪುದರಿಂದದನು ಈ ಗಂಗೆ ತಾನೆಯನಲಿಲ್ಲ. ಎನಲಿಲ್ಲವಾಗಿ ಅಪ್ಪು ಮೂಲ ಜೀವನೆಂಬ ಪರಮೇಶ್ವರನ ಪಂಚಮುಖದಲ್ಲಿ ಹುಟ್ಟಿದ ಪಂಚಭೌತಿಕದೊಳಗೆ ಅಪ್ಪುವೊಂದು ಭೂತವೆಂಬುದು ಕಾಣಪಟ್ಟರ್ಥ [31]ಭೂತಾದಿಗಳೈದು ಮುಖ್ಯವಾದ ಹದಿನಾಲ್ಕು ಲೋಕಂಗಳನು, ಮನ ಲಮಾಯೆ ಷಡುದೇವತೆಗಳು ಮುಖ್ಯವಾದ ಸಮಸ್ತ ದೇಹಿಗಳನು ಇಂತಿವರೆಲ್ಲರನು ಪರತತ್ವದ ಗಣೇಶ್ವರರುಗಳ ಹಣೆಗಣ್ಣೆಂಬ ಕಾಲಾಗ್ನಿ ದಹಿಸಿ ಮುಗಿದು ಮತ್ತಲ್ಲಿಗೆ ಹೋಗಿಪ್ಪ ಕಾರಣ ಅಗ್ನಿಬೇರೆ. ಆ ಪ್ರಳಯಾಗ್ನಿಯಂತೆ ಪಂಚಭೂತಯುಗವೇಳುಲೋಕಂಗಳನು ಮನ ಮಾಯೆ ಷಡು ಸಾದಾಖ್ಯರು [32]ಮುಖ್ಯ[33]ವಾದ ಸಕಲ ದೇಹಿಗಳೆಲ್ಲರನು ಪರಶಿವ ಗಣೇಶ್ವರರುಗಳ ಮಸ್ತಕದಲ್ಲಿರ್ದ ಮಹಾ ಜ್ಞಾನಾಗ್ನಿ ಬಂದು ಮಹಾ ಪ್ರಳಯ ಜಲವಾಗಿ ತೇಂಕಾಡಿಸಿ ಮುಗಿದ ಮತ್ತಲ್ಲಿಗೆ ಬಿಜಯಂಗೈದ ಕಾರಣ ಗಂಗೆ ಬೇರೆ ವಿಷ್ಣುವಿನ ಕಾಲಲ್ಲಿ ಗಂಗೆ ಹುಟ್ಟಿತೆಂದರೆ ವಿಷ್ಣುವಿನ ಭಕ್ತರು ತಮ್ಮ ಪೃಷ್ಟವ ತೊಳೆಯಲಿಲ್ಲ. ಕೈಕಾಲ್ಗಳ ತೊಳೆಯಲಿಲ್ಲ. ನಾಮಾಂಕಿತರು ಮಾಂಸವಕುದಿಸಬಾರದು. ಅದೇಕೆಂದಡೆ ಅವರೀ ನೀರನು ವಿಷ್ಣುವಿನ ಪಾದೋದಕವೆಂಬರಾಗಿ. ತಾವು ಮತ್ತೆ ಮಂತ್ರೋದಕವ ಮಾಡಲಿಲ್ಲ. ಇನ್ನೊಂದುದಕಂ ಕಂಡಣೆ; ಮಹಾಪ್ರಳಯ ಕಾಲದಲ್ಲಿ ಮಹಾತ್ಮನೆಂಬ ಮಾಯೆ ಭೂತಾತ್ಮನೆಂಬ ಮಗ ಸ್ವಯಂಭೂ ಎಂಬ ಈಶ್ವರ, ಸದಾಶಿವ ಪರಮೇಶ್ವರ ಶಂಭು ಎಂಬ ಬ್ರಹ್ಮ ವಿಷ್ಣು ರುದ್ರ ಇಂತಪ್ಪಷ್ಟ ಜೀವಾತ್ಮರು ಮುಖ್ಯವಾದ ಸಕಲಜೀವಾತ್ಮರು ಪಂಚಭೂತ ಮೊದಲಾದ ಸಕಲ ಲೋಕಂಗಳು ಇಂತಿವನೆಲ್ಲವನು ಸಂಹರಿಸಿದ ಹರನೆಂಬ ಪರಬ್ರಹ್ಮವನು ಹರಿಯನ್ನು ಒಂದೆಂಬವರ ಮಾತು ಅಬದ್ಧ. ಅದೇಕೆಂದಡೆಹರಿಗೆ ಕರ್ತುವಾದ ನಾಲ್ವರಿಂದತ್ತತ್ತಣ ನಿತ್ಯನಿರಂಜನವಾದ ಪರವಸ್ತುವನು ಸತ್ತುಹುಟ್ಟುವವರನು ಸಮವೆಂದಡೆ ಬಾಯಿ ಹುಳಿವುದು. ಮೂದೇವತೆಗಳಿಂದ ತ್ತಣ ಜಡರುದ್ರನೆಂಬ ಹರನು ಹರಿಯನು ಒಂದಲ್ಲವೆಂಬವರಮಾತಂತಿರಲಿ. ಅದೇಕೆಂದಡೆ ಈ ಜಡರುದ್ರನೆಂಬ ಹರನಲ್ಲಿ ಹರಿಹುಟ್ಟಿ ಮಗನಾಗಿ ರುದ್ರನ ವಾಮಾಂಗವನೆಮ್ಮಿಹುದರಿಂದ ರುದ್ರನೆಂಬ ಹರನು ಹರಿಯನು ಏಕವೆನಬಹಲ್ಲದೆ ಅಗಮ್ಯ ಅಗೋಚರ ಅಪ್ರಮಾಣವಾಗುತ್ತವಿದ್ದಂಥಾ ಪರಂಜ್ಯೋತಿರ್ಮಯ ಲಿಂಗವನು ನಾಲ್ಕು[34] ದೇವತೆಗಳಿಂದ ಹುಟ್ಟಿದ ವಿಷ್ಣುವನು ಒಂದೆನಲಿಲ್ಲ. ಇಂತೆಂಬ ಪುರಾತನರಗಣಿತ ವಚನ ಸಾರಾಯವಪ್ಪ ಅಮೃತ ವಾಕುಗಳಿಗೆ ಸಾಕ್ಷಿ.


[1] ದೇವದಾನವರು (ಬ)

[2] ದೇವದಾನವರು (ಬ)

[3] x (ಬ)

[4] + ಮುನಿ (ಬ)

[5] + ದ (ಬ)

[6] ಆರಕ್ಕೆ (ಬ)

[7] ಆರಕ್ಕೆ (ಬ)

[8] + ಮುನಿ (ಬ)

[9] ಭ (ಬ)

[10] ಬಯಲ ಬೀಸ (೨೫೭)

[11] ಬಯಲ ಬೀಸ (೨೫೭)

[12] ಶ್ರುತ (೨೫೭)

[13] ಶ್ರುತ (೨೫೭)

[14] ಕ್ರ (ಬ)

[15] + ಪಂತಿ (ಬ)

[16] ಒಂದುಗ್ಗ (೨೫೭)

[17] ಒಂದುಗ್ಗ (೨೫೭)

[18] ಬಂದದ (ಬ)

[19] ಬಂದದ (ಬ)

[20] ಇಲ್ಲವಾದ (ಬ)

[21] ಇಲ್ಲವಾದ (ಬ)

[22] ಬಂದದ (ಬ)

[23] x (ಬ)

[24] x (ಬ)

[25] ಸದಾಶಿವನ (ಬ)

[26] ಸದಾಶಿವನ (ಬ)

[27] + ಅ (ಬ)

[28] ದಿಂ (ಬ)

[29] ದಿಂ (ಬ)

[30] ಸ (ಬ)

[31] + ಆ(ಬ)

[32] ಮೊದ (ಬ)

[33] ಮೊದ (ಬ)

[34] + ಅಧಿ (ಬ)