೧೭೧

ಆದಿಯಿಲ್ಲದಿರ್ದಡೆ ಲಿಂಗಪ್ರಸಾದಿಯೆಂಬೆ.
ವ್ಯಾದಿಯಿಲ್ಲದಿರ್ದಡೆ ಜಂಗಮ ಪ್ರಸಾದಿಯೆಂಬೆ.
ಲೌಕಿಕವ ಸೊಂಕದಿರ್ದಡೆ ಸಮಯ ಪ್ರಸಾದಿಯೆಂಬೆ.
ಇಂತೀ ತ್ರಿವಿಧ ಪ್ರಸಾದಿಯಾದಡಾತನಚ್ಚಪ್ರಸಾದಿಯೆಂಬೆನು
ಕಾಣಾ ಗುಹೇಶ್ವರಾ.          ||೩೩||

೧೭೨

ಅರ್ಥವುಳ್ಳವರೆಲ್ಲ ಅರಸಂಗಂಜುವರಯ್ಯಾ.
ಭಕ್ತಿಕ್ರೀ

[1]ವುಳ್ಳವರೆಲ್ಲ ಜಂಗಮಕ್ಕಂಜುವರಯ್ಯಾ.
ಸೂಳೆಗೊಲಿದವರೆಲ್ಲ ಸೂಳೆಯೆಂಜಲ ತಿಂಬುವರಯ್ಯಾ.[2]ಮಾಂಸವ[3] ಮಚ್ಚಿದವರೆಲ್ಲ ಸೊಣಗನೆಂಜಲ ತಿಂಬುವರಯ್ಯಾ.
ಕೂಡಲಸಂಗನ ಶರಣರು ಒಕ್ಕುಮಿಕ್ಕುದ ಲಿಂಗಕ್ಕೆ ಕೊಟ್ಟುಕೊಂಡು
ಯೋಗ್ಯವಾದವರ ನಮ್ಮ ಚಿಕ್ಕ ಬಸವಣ್ಣಬಲ್ಲ. ||೩೪||

ಅಷ್ಟರಿಂದ ಮೇಲೆ ಚತುರ್ವಿಧ ಪದಾರ್ಥಂಗಳೆಂಬ ಮೂಲಬೀಜದಲ್ಲಿ ಕಲ್ಪವೃಕ್ಷ ಚೂತವೃಕ್ಷ ಜಂಬುವೃಕ್ಷ ವಟವೃಕ್ಷ ಈ ನಾಲ್ಕು ವೃಕ್ಷಂಗಳು ಪುಟ್ಟಿದವು. ಪುಟ್ಟಿದಬಳಿಕ ಅವರೊಳಗೆ ಪ್ರಮುಖ ನಾರಿಕೇಳ ತಾಂಬೂಲ, ಘನಸಾರ, ಕರ್ಪೂರ ವಾಳೆ, ಶ್ರೀವೃಕ್ಷ, ಮುತ್ತಗದ ಮರ, ಗುಗ್ಗಳವೃಕ್ಷ, ಶ್ರೀಗಂಧದಮರ, ರಾಜಾನ ಸಸಿ, ಇಕ್ಷು, ಸರಶಿಜ ಇಂತಿವು ಮೊದಲಾದ ವೃಕ್ಷ ಸಸಿಗಳು ಹುಟ್ಟಿದವು. ಅಷ್ಟರಿಂದ ಮೇಲೆ ಪಂಚಬ್ರಹ್ಮರುಗಳಿಗೆ ಚೈತನ್ಯಾತ್ಮಕನಾದ ಪರಮೇಶ್ವರನೆಂಬ ಪಶುವಿನಲ್ಲಿ ತೋರುವ ಜ್ಞಾನೇಂದ್ರಿಯಗಳೊಳಗೆ ಪಂಚವರ್ಣದ ಗೋವುಗಳು ಹುಟ್ಟಿ ಗೋಮಿತವ ಬಿಡಲೊಡನೆ ಆ ಗೋಮಯವನು ಷಡುಸಾಧಾಖ್ಯರು ಮುಖ್ಯವಾದ ಶ್ರೀಕಂಠರೆನಿಸುವ ಎರಡೆಂಬತ್ತೇಳುಕೋಟಿ ಪ್ರಮಥರುಗಳು ಮುಖ್ಯವಾದ ಮನು ಮುನಿ ದೇವದಾನವರೆಲ್ಲರು ಶ್ರುತಿಗಳ ಮಥನದಿಂ ದಹಿಸಿ, ಧರಿಸುತ್ತಿಹರು. ಆ ಪಂಚವರ್ಣದ ಸುರಭಿಗಳಲ್ಲಿ ನಾನಾವರ್ಣದ ಹೋರಿಗಳು ಹುಟ್ಟಿ ಪಶುನಂದಿಗಳೆನಿಸಿಕೊಂಡು ಷಡುದೇವತೆಗಳು ಮೊದಲಾದ ಗಂಗೆವಾಳುಕರೆಲ್ಲಕ್ಕೂ ವಾಹನಂಗಳಾದವು ಎಂಬ ಪುರಾತನರಗಣಿತ ವಚನ ಸಾರಾಯಂಗಳಿಗೆ ಸಾಕ್ಷಿ.

೧೭೩

ಹತ್ತು ಬಣ್ಣದ ಗಿಡವಿಂಗೆ
ಹತ್ತೆಲೆ, ಹತ್ತು ಹೂ, ಹತ್ತು ಕಾಯಾಯಿತ್ತು.
ಹತ್ತು ಹತ್ತು ಘನದಲ್ಲಿ ಅಳವಟ್ಟು,
ಹತ್ತು ಹತ್ತು ಆಚಾರ ಕ್ರಮದಲ್ಲಿ ವಿಚಾರವ ಕಾಣಬಲ್ಲಡೆ,
ಆ ಕಾಯ ಲಿಂಗಮಯವಹುದು ಕಾಣಾ ಗುಹೇಶ್ವರ.       ||೩೫||

೧೭೪

ಐದು ಬಣ್ಣದ ಗಿಡವಿಂಗೆ
ಐದೆಲೆ, ಐದು ಹೂ, ಐದು ಕಾಯಾಯಿತ್ತು.
ಮತ್ತೈದರ ಠಾವಿನೊಳು ಐದು ಹೂವಿನ ಕ್ರಮದಲ್ಲಿ;
ಹಣ್ಣ ಮೇಲಬಲ್ಲಡೆ ಗುಹೇಶ್ವರನೆಂಬ ಲಿಂಗವು ತಾನೆ [4]ನೊಡಾ[5]   ||೩೬||

೧೭೫

ಹೃದಯದ[6] ಭಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತಲ್ಲಾ.
ಆ ಬಾಳೆಯಹಣ್ಣ ಮೇಲಬಂದ ಸರ್ಪನ ಪರಿಯನೋಡಾ !
ಆ ಬಾಳೆ ಬೀಗಿ, ಸರ್ಪನೆದ್ದಡೆ ನಿರಾಳವು ಕಾಣಾ ಗುಹೇಶ್ವರ.       ||೩೭||

೧೭೬

ಮಾನದ ತೋರಿಹ ಆವಿಂಗೆ,
ಕೊಳಗದ ತೋರಿಹ ಕೆಚ್ಚಲು.
ತಾಳೆಮರದುದ್ದವೆರಡು ಕೋಡು ನೋಡಾ !
ಅದನಱಸ ಹೋಗಿ ಆಱದಿನ; ಅದು ಕೆಟ್ಟು ಮೂರು ದಿನ.
ಅಘಟಿತ ಘಟಿತ ಗುಹೇಶ್ವರ, ಅಱಸುವಬಾರೈ.            ||೩೮||

೧೭೭

ಪಂಚಬ್ರಹ್ಮಾತ್ಮಕದಿಂದುದಯವಾದ
ಪಂಚಗಮ್ಯ ಗೋಮಯವನು,
ಆಗಮಮತದಿಂದ ದಹಿಸಿ, ಸಮಸ್ತ ಜನಂಗಳು ಧರಿಸುವ
ಭಸಿತವಿದು ನೋಡಾ ಕೂಡಲಸಂಗಯ್ಯ.       ||೩೯||

ಅಂತಪ್ಪ ಮೂಲ ಜೀವನೆಂಬ ಪರಮೇಶ್ವರನೆ ಭೂತಾದಿಗಳೈದು, ಸಬ್ದಾದಿಗಳೈದು, ಜ್ಞಾನೇಂದ್ರಿಯಂಗಳೈದು, ಕರ್ಮೇಂದ್ರಿಯಗಳೈದು, ಕರಣ ಲನಾಲ್ಕು, ಸಾದಾಖ್ಯಗಳೈದು, ಶಕ್ತಿಗಳಾರು, ಅಂತೂ ಮೂತ್ತಾಋಉ ತತ್ವಂಗಳು ತಾನೆಯಾದನಾಗಿ ಪರವೆ ಹಮ್ಮಿಂದ ಜೀವನಾಯಿತ್ತೆಂಬರು. ಆತ್ಮಂ ಪಶು ಪಾಶ ಬದ್ದನು. ಅನಾದಿ ಮಲಯುಕ್ತನೆಂಬರು. ಇಂತು ಪರವೆ ಹಮ್ಮಿಂದ ಜೀವನಾದನೆನಿಸಿಕೊಂಡ ಪರಮೇಶ್ವರನಲ್ಲಿ ಮನ ಮಾಯೆಗಳ ಸಂಕಲ್ಪ ವಿಕಲ್ಪದಿಂದ ಮತ್ತೆ ಷಡುವರ್ಗ, ಷಡೂರ್ಮೆ, ಷಡ್ಭ್ರಮೆ, ಷಡ್ಭಾವವಿಕಾರ, ಹಿಂದೆ ಹೇಳಿದ ತತ್ವಂಗಳು ಇಂತಿವೆಲ್ಲವು ತೊಂಬತ್ತಾರು ಕರಣಂಗಳಾಗಿ ತೋರಿದವು.. ಆ ತೊಂಬತ್ತಾರು ಕರಣಂಗಳಲ್ಲಿ ನೂರನಾಲ್ವತ್ತೆಂಟು ದೇಹವಿಕಾರಂಗಳಾದವು. ಇಂತಿವೆಲ್ಲರ ಪ್ರಕೃತಿ ವಿಕೃತಿಗಳಿಂದ ಅರುವತ್ತಾರುಕೋಟಿ ಅಸುರಪಡೆಯಂಬುದಾಯಿತ್ತು. ಆಗಲ್ಕೆ ಷಡುದೇವತೆಗಳು ತಮ್ಮ ಗರ್ವಮೇರುವ ಮೊದಲಾದ ಚತುರ್ದಶ ಭುವನ ಭವನಂಗಳಿಗೆಯೂ ಸಪ್ತವ್ಯಸನ, ಸಪ್ತಧಾತು ಪಿಂಡಂಗಳ [7]ಮನ[8] ಮಾಯೆಗಳ ವಿಕಾರಂಗಳಿಂದ ಹುಟ್ಟಿಸುತ್ತ ಕಾಲ ನಿಯತಿ ಕಲೆ ವಿದ್ಯಾ ರಾಗ ಪುರುಷ ಮಾಯೆ ಈ ಏಳರಿಂದಲ್ಲರಿಸುತ್ತ ಇಂತೀ ಸಕಲ ವ್ಯಾಪಾರ ಕರಣ ಪಸರವನಿಕ್ಕಿಕೊಂಡಿರುವಾಗ ಆ ಪ್ರಸಾದರಸವಜ್ರ ಕೈಲಾಸಪತಿ ಅಖಂಡಿತನಾಗಿ ಜಲನೊಳಗಣ ಸೂರ್ಯನಂತೆ ಭಿನ್ನಾಭಿನ್ನವಾಗಿ ತಮ್ಮೆಲ್ಲರ ಹೃದಯದೊಳಗಿರುತ್ತ ತಾವು ಮಾಡುವ ಪ್ರಕೃತಿ ವಿಕೃತಿಗಳ ನೋಡುತ್ತಿರುತ್ತಿರ್ದನು. ಇಂತೆಂಬ ಪುರಾತನರಗಣಿತ ವಚನ ರಸಂಗಳಿಗೆ ಸಾಕ್ಷಿ.

೧೭೮

ಜಂಬೂದ್ವೀಪದ ವ್ಯವಹಾರಿ ಖಂಡ ಭಂಡವ ತುಂಬಿ
ಕುಂಭಿನಿಯುದರದಮೇಲೆ ಪಸರವನಿಕ್ಕಿದ.
ಉಷ್ಣತೃಷೆ ಘನವಾಗಿ, ಕಡಲೇಳು ಸಮುದ್ರವನು ಕುಡಿದು
ನೀರಡಿಸಿದಾತ ಅಱಲುಗೊಂಡು ಬೆಱಗಾದ.
ಶಿಶು ತಾಯ ಹೆಣನಹೊತ್ತುಕೊಂಡು ಹೆಸರ ಹೇಳುತ್ತೈದಾನೆ.
ಗುಹೇಶ್ವರನೆಂಬ ಲಿಂಗವ ವಸುಧೆಯಾಕೃತಿ ನುಂಗಿತ್ತು. ||೪೦||

೧೭೯

ಊರ ಮಧ್ಯದ ಕಣ್ಣಕಾಡಿನೊಳಗೆ ಬಿದ್ದೈದಾವೆ ಐದು ಹೆಣನು.
ಬಂದು ಬಂದಳುವರು ಬಳಗ ಘನವಾದ ಕಾರಣ.
ಹೆಣನು ಬೇಯದು, ಕಾಡು ನಂದದು
ಮಾಡು ಉರಿಯಿತ್ತು ಗುಹೇಶ್ವರ.      ||೪೧||

ಇಂತಪ್ಪ ಭವಾರಣ್ಯದೊಳಗೆ ಮಾಯಾ ಚೋಹವ ಕೊಟ್ಟ ಷಡುದೇವತೆಗಳನು, ಯುಗವೇಳು ಲೋಕಂಗಳೊಳಗಿರ್ದ ಜಡಾತ್ಮರುಗಳು ದೇವರೆಂದು ಹಿಡಿದಾಡುವರು. ಆರ[9]ರಿಂದತ್ತತ್ತಣ ಮಹಾ ಘನಲಿಂಗವನು, ಗಣಂಗಳನು ಅರಿಯದೆ ಮತ್ತೆ ಜಾತಿ ವರ್ಣಾಶ್ರಮ ಕುಲಗೋತ್ರ ನಾಮಂಗಳೆಂಬವ ಹಿಡಿದು ನಡೆಸುತ್ತ ತ್ರಿವಿಧ ಮಲಂಗಳು ಹೊದ್ದುಕೊಂಡು ತ್ರಿವಿಧ ಕರ್ಮಂಗಳಂ ಹಣಿಗೆ ಮಸಿಯ ಬೊಟ್ಟನಿಡುವಂತೆ ಇಟ್ಟುಕೊಂಡು ಕಾವವರ ದೇವರೆಂದು ಭಾವಿಸಿ; ಮತ್ತೆಯೂ ಕಡೆಗೆ ಹತ್ತದೆ, ರಾಟಾಳದ ಘಟದಂತೆ ಮೊಗವುತ್ತ ಸುರಿವುತ್ತ ಗಾಣ ದೆತ್ತಿನಂತೆ ಮೆಟ್ಟದ ಹೆಜ್ಜೆಯಲ್ಲಿ ಮೆಟ್ಟಿ ಮೆಟ್ಟಿ ಬರುತ್ತ ನೆಗೆಯವೇಣುಸೂತ್ರದಂತೆರಡು ಕಡಿಯ ಮುಟ್ಟಿ ಮುಟ್ಟಿ ಬರುತ್ತ ಸಾಸವೆಯನೊಕ್ಕುವ ಎತ್ತಿನಂತೆ, ಆಶೆಯೆಂಬೀ ಸಂಸಾರಮಾಂಸಮಂ ಮೆದ್ದು ಮೂಗನೂ ಬಾಯನೂ ಮುಚ್ಚುತ್ತ ತೆರವುತ್ತ, ಮೋರೆಯ ತಿರುಹಿ ಉರುಹಿಸುತ್ತ; ಮತ್ತೆ ತಲೆಯೂರಿ ಕೆಡವುತ್ತ ಅಷ್ಟಮದಂಗಳಷ್ಟಸುರೆಯಂ ಕೊಂಡು ಸೊಕ್ಕುತ್ತ, ಗುರುಲಿಂಗ ಜಂಗಮದ ಸೇವೆಯಲ್ಲಿ ಹೊದಕುಳಿಗೊಂಬುದಂ ಬಿಟ್ಟು, ಪುತ್ರ ಮಿತ್ರ ಕಳತ್ರಯಂಗಳ ಉದರಕ್ಕೋಸ್ಕರವಾಗಿ ಹೊದಕುಳಗೊಳುತ್ತ ಹೊದಕುಳಿಗೊಂಡು ಹೇಸದೆ ಅಲಸದೆ ನಾಚದೆ, ತೊಲಗದೆ ಮಾಯೋನ್ಮತ್ತವೆಂಬ ಕನಕಹಣ್ಣಿಂಗೆ ಕುಲರಸವೆಂಬ ಹಾಲು ತುಪ್ಪವಂ ಬೆರಸಿ ಮೆದ್ದು ಅರಿವು ಮರವೆಯನು ಭ[10]ವಂಗಳನೊಳಕೊಂಡು ವೇದಶಾಸ್ತ್ರಾಗಮ ಪುರಾಣ ಈ ನಾಲ್ಕು ತೆರದ [11]ಜಡ[12]ಶಬ್ದಂಗಳ ಸುದ್ದಿಯಂ ಅರಿವುಮರವೆಯಿಂದ ಹೇಳುತ್ತಿಹ ಷಡುತರ್ಕಿಗಳು ಮುಖ್ಯವಾದ ಶ್ರುತಿಗಳ ಓದಿನವರು; ಅಷ್ಟಾದಶ ಕುಲದವರು, ಅಷ್ಟಾದಶ ಯುಗಂಗಳು, ಇಂತಿವರೆಲ್ಲರು ನವಸಾಸಿರ ಪ್ರಳಯ ಪರಿಯಂತರದಲಿ ಮಹದರವಿಲ್ಲದಿರುತ್ತಿಪ್ಪರು. ಆ ಮಹಾ [13]ಘನ[14] ಲಿಂಗವನರಿಯದಿರ್ದಡೆಯು ಷಡುದೇವತೆಗಳನರಿದು ನಂಬಿ ಭೋಗ ಭುಕ್ತಿಯಂ ಕಂಡುಂಡು ನಿತ್ಯರಾಗಿರ್ದುದಿಲ್ಲ. ಅದೇಕೆ ನಿತ್ಯರಾಗಿರ್ದುದಿಲ್ಲ ಎಂದಡೆ: ತಮ್ಮ ಬಾಯಲ್ಲಿ ಪರಬ್ರಹ್ಮವೆನಿಸಿಕೊಂಬ ಪರಮೇಶ್ವರ ತಾನು ಪಂಚಬ್ರಹ್ಮರನು ಚತುರ್ವಿಧ ಸಂಪದ ಸಂಸಾರವನು ಭವಾರಣ್ಯವನು ಕಾಳಾಂಧರವನು ಯುಗವೇಳು ಲೋಕಂಗಳನು ಅನೇಕ ಪ್ರಳಯಂಗಳನು ಇಂತಿವೆಲ್ಲವನೊಳಕೊಂಡಿರ್ದು ಮತ್ತಿವೆಲ್ಲವು ಲಯವಾದ ಬಳಿಕ ತಾನು ಮಹಾ ಪ್ರಳಯದಲ್ಲಿ ಮೃತವಾಗಿ ಮತ್ತೆ ಹುಟ್ಟುದನರಿಯದಿಪ್ಪನಾಗಿ ಆತನ ಕಂಡಡೆಯು ನಿತ್ಯರಾಗಿರಬಾರದು. ಈತನ ನಿಲವಾವುದೆಂದಡೆ:

ಸಿಡಿಲಂತೆಯೂ, ಕನಸಿನಂತೆಯೂ, ತುಂಬಿಯಂತೆಯೂ, ಇಂದ್ರಚಾಪದಂತೆಯೂ, ಬಯಲಲ ಫಳದಂತೆಯೂ, ಇಂದ್ರಜಾಲಕನ ಪಶುವಿನಂತೆಯೂ, ಇಂತಿವರೆಲ್ಲರಂತೆಯೂ ಅತ್ಯಂತವಾಗಿಹನು. ಇದು ಮೂಲಜೀವನಸ್ವರೂಪವೆಂದು ಅರಿವುದು. ಇಂತೆಂಬ ಪುರಾತನರಗಣಿತ ವಚನಂ[15]ಗಳಿಗೆ[16] ಸಾಕ್ಷಿ.

೧೮೦

ಕೋಣನ ಕೊಂಬಿನ [17]ಮೇಲೆ[18] ಏಳುನೂರೆಪ್ಪತ್ತು ಸೇದೆಯಬಾವಿ.
ಆ ಬಾವಿಯೊಳಗೊಂದು ಬಗರಿಗೆ.
ಆ ಬಗರಿಗೆಯೊಳಗೊಬ್ಬ ಸೂಳೆ.
ಆ ಸೂಳೆಯ ಕೊರಳಲ್ಲಿ ಏಳನೂರೆಪ್ಪತ್ತು ಆನೆ
ಎರಿತ್ತು ಕಂಡೆ ಗುಹೇಶ್ವರಾ. ||೪೨||

೧೮೧

ಆನೆಯ ಹೆಣ ಬಿದ್ದಿರ್ದ ಕಂಡೆ,
ಕೋಡಗಬಂದು ಮುದ್ದಾಡಿಸಿತ್ತ ಕಂಡೆ.
ಕಾಡೊಳಗೊಬ್ಬ ಸೂಳೆ ಕರೆಕರೆದು ಒತ್ತೆಯಕೊಂಬುದ ಕಂಡೆ.
ಹಾಳೂರೊಳಗೆ ನಾಯ ಜಗಳವ ಕಂಡೆ.
ಇದೇನು ಸೋಜಿಗ ಹೇಳಾ ಗುಹೇಶ್ವರ?         ||೪೩||

೧೮೨

ಭೂಮಿಯಾಕಾಶ ಕೊಂದು ಜೀವನ ಉದರದಲ್ಲಿಪ್ಪವು;
ಅಲ್ಲಿ ಘನವೇನು ಘನವೆನ್ನದವಂಗೆ?
ಅಲ್ಲಿ ಕಿಱೆದೇನು ಕಿರಿದೆನ್ನದವಂತೆ?
ಆ ಘನವು ಮನಕ್ಕೆ ಸಾಧ್ಯವಾದಡಿನ್ನು ಸರಿಯುಂಟೆ ಗುಹೇಶ್ವರ?  ||೪೪||

೧೮೩

ಕಲ್ಲ [19]ಹೋರಿನೊ[20]ಳಗೊಂದು ಕಿಚ್ಚು ಹುಟ್ಟಿತ್ತ ಕಂಡೆ.
ಹುಲ್ಲ ಮೇವ ಎರಳೆಯ ಹುಲಿಯ ಸರಸವನಾಡಿತ್ತ ಕಂಡೆ.
ಎಲ್ಲರೂ ಸತ್ತು ಆಡುತ್ತಿಪ್ಪುದ ಕಂಡೆ,
ಇನ್ನೆಲ್ಲಿಯ ಭಕ್ತಿ ಹೇಳಾ ಗುಹೇಶ್ವರ.  ||೪೫||

೧೮೪

ಓದಿ ಓದಿ ವೇದ ವಾದಕ್ಕಿಕ್ಕಿತ್ತು.
ಕೇಳಿ ಲಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
ಅರಿದೆಹೆ ಅರಿದೆಹೆನೆಂದು ಆಗಮ ಅಗಲ್ಕೆಯಾಗಿಹೋಯಿತ್ತು.
ಪೂರೈಸಿಹೆ ಪೂರೈಸಿಹೆನೆಂದು ಪುರಾಣ ಪೂರ್ವದ ಬಟ್ಟೆಗೆ [21]ಹೋ[22]ಯಿತ್ತು.
ನಾನೆತ್ತ ತಾನೆತ್ತ ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನ.    ||೪೬||

೧೮೫

ಕಡಲನುಂಗಿದ ಕಪ್ಪಿನ ಪರಿಭವ ನವಸಾಸಿರ.
ಸಿಡಿಲು ಹೊಯ್ದ ಬಯಲಿಂಗೆ ಬಣ್ಣವುಂಟೆ?
ಕಂಗಳ ಮುಂದಣ ಕನಸು, ಹಿಂಗಿದ ತುಂಬಿಯ ಪರಿಮಳ,
ಅಂಗವಿಲ್ಲದ ರೂಹಿಂಗೆ ಸಂಗವುಂಟೆ?
ಗಗನದ ಹಣ್ಣನೆ ಕೊಯ್ತು. [23]ಮುಗುದೆ ರುಚಿಯನರಿಯಳು[24] ಹಗರಣದ ಅಮ್ಮಾವಿನ ಹಯನು ಸಯವಪ್ಪುದೆ[25] ಗುಹೇಶ್ವರ.     ||೪೭||

ಆ ಗುಹೇಶ್ವರನೆಂಬ ಪರಬ್ರಹ್ಮವನು ಪುರಾತನರ ಷಡುಸ್ಥಲದಿಂದರಿಯಲರಿಯದೆ ಮೂಲಜೀವರೆಂಬ ಪರಮೇಶ್ವರನನೇ ಪರಬ್ರಹ್ಮವೆಂದು ಮಾಡಿಕೊಂಡು ವೇದಮಂ ಓದಿ ಅರಿದು ಬೆರಸಿ ಚತುರ್ವಿಧ ಪದವ ಪಡದು ನಿತ್ಯರಾದೆಹೆವೆಂಬ ಅರಿಮರುಳುಗಳ ಅರಿವು ಇದರ ಸುಖವನು ಕೆಡಿಸಿ ತಮ್ಮ ಸುಖವನು ಕೆಡಿಸಿ ಉಭಯ ಭ್ರಷ್ಟವಾದ ಪ್ರಮಾದ ಗುಡ್ಡಗಳಂತೆ. ಅವರ ಪರಿಹೇಂಗೆಂದಡೆ: – ಅವರೇಳು ಹೊಳೆಯ ಹಾಯಿದು ಹೊರವಂಟ [26]ಲ್ಲೆಲ್ಲರೂ[27] ಇದ್ದು ಒಬ್ಬ ಒಕ್ಕು ಹೋದನೆಂದು ದುಃಖಿತರಾಗಿಪ್ಪಲ್ಲಿ ಒಬ್ಬ ತನ್ನ ಮರೆದು ಲೆಕ್ಕಿಸದಡೇಳಕ್ಕೊಬ್ಬನಿಲ್ಲವೆಂದು ತಬ್ಬಿಬ್ಬಗೊಂಬ ಸಮಯದಲ್ಲಿ ಆವೊಬ್ಬ ಅವರ ನಂಟ ಕಂಡು ಏಳು ಇದ್ದಿರಿ ಬನ್ನಿರಿ ಎಂದು ತನ್ನ ಗೃಹಕ್ಕೆ ಕರೆಕೊಂಡೊಯ್ದು ಅನ್ನೋದಕವನಿಕ್ಕಿಸಿದ ಬಳಿಕ ತಾನವರ ಹೆಗ್ಗರೆಂದರಿದು ನಗುತ್ತ ತಾ ಮತ್ತವರ ಹೊಲಕ್ಕೆ ಹರಗ ಕಳುಹಿದಡವರು ಕುಂಟೆಯಂ ಹಿಡಿದು ಹಳು ಹುಲ್ಲುಗಳಂ ಬಿಟ್ಟು ಸಸಿಗಲಂ ಬೇರುಸಹಿತ ಹರಿಸಿದಡೆ ಹೊಲದ ಸಿರಿ ಹೋಗಿ ಕುಪ್ಪಟಿಯಾದ ತದನಂತರದಲ್ಲಿ ಹೊಲದೊಡೆಯ ಹೋಗಿ ಕಿಂಡವರ ಕೃಪೆಗೆ ಕಳುಹುವಾತನನೆ ಭಾಗ್ಯಹೀನನಹುದೆಂದು ಹೊರವಡಿಸಿದವರೇಳು ಮತ್ತೊಂದು ಗ್ರಾಮಕ್ಕದಿದಲ್ಲಿ ಅವರನೆಂಟನೊಬ್ಬ ಕಂಡು ತನ್ನ ವಾಸಕ್ಕೆ ಕೊಂಡೊಯ್ದು ಅಸನವಕ್ಕಿದ ಬಳಿಕ ತಾನವರನು ಸಂಜೆಗೆ ಹಟ್ಟಿಗೆ ಬಂದತ್ತ ಕೊಟ್ಟಿಗೆಯೊಳಗೆ ಕಟ್ಟಿ ತಮ್ಮಾ ಎಂದು ಬೆಸಸಿದಡವರು ಗೊತ್ತಕಿತ್ತು ಕುಳಿತಿಪ್ಪುದಂ ತಾನೋಡಿ ಇಂಥಾ ಹೆಗ್ಗರುಂಟೆ ಎನ್ನುತ್ತ ಹಾಸ್ಯವ ಮಾಡಿ ಮತ್ತವರ ಗದ್ದೆಗೆ ಕರಕೊಂಡು ಹೋಗಿ ಈ ನೆಲ್ಲ ಸಸಿಗಳ ನುಳುಹಿ ಈ ಬಿಳಿಹುಲ್ಲಬಿಟ್ಟು ನೆಲ್ಲ ಹುಲ್ಲ ತೆಗದು ಬೀಸಾಟಿದ ಬಳಿಕ ಗದ್ದೆಗಳು ಬಣಗು ಸುರಿವುತ್ತಿಪ್‌ಉದಂ ಗದ್ದೆಯ ಒಡೆಯ ಮರಳಿ ಬಂದು ನೋಡಿ ಕಂಡು ಇವರು ಯುಕ್ತಿಗರೆಂದು ಮೊದಲೆಯರಿದು ಮತ್ತೆ ವ್ಯವಸಾಯಕ್ಕೆ ಕಳುಹಿದಾತ ನಾನೆ ಯುಕ್ತಿಹೀನನಹದಲ್ಲಾ ಎನುತ ನೊಂದು ಹೊರಮಡಿಸಿದಡವರೇಳೂ ಮತ್ತೊಂದು ಸೀಮೆಗೆ ಸರಿದು ಬರುವ ಪಥದೊಳು ನಡದಡೆ ಬಳಲಿ ಮೈಮರದು ಅಸನದ ಕಳವಳ ಹಿಡಿದು ತತ್ತಳಮತ್ತಳಗೊಂಬಲ್ಲಿ ಒತ್ತಿನೂರಿಂದವರ ಬಳಗವೊಬ್ಬ ಎತ್ತಿನೊತ್ತಿಗೆ ಬರುವಲ್ಲವರ ಕಂಡು, ಸಮ್ಮುಖವಾಗಿ ಬಳಲಿದಿರಿ, ಈ ಒಂದೆತ್ತ ನಮ್ಮ ಕೊಟ್ಟಿಗೆಗೆ ಹೊಡಕೊಂಡು ಬೇಗಬನ್ನಿರೆ ಎನುತ ಮನೆಗೆಯ್ದಿ ಅನ್ನವನೊದಗಿಸುತ್ತಿರುವಾಗ ಇವರಿತ್ತ ಅಸವನ ಭ್ರಮೆಯೊಳು ಸಿಲ್ಕಿ ತಲೆಯುಳ್ಳ ಪಶುವನೊಂದಹೊಡಕೊಂಡು ಹೋಗಿ ಕೊಟ್ಟಿಗೆಯ ಕೂಡಿದ ಸಮಯದಲ್ಲಿ ಆ ಪಶು ಬೆಸನಾದುದಂ ಕಂಡಿವರೇಳು ಎತ್ತು ಈ ಎತ್ತುಯೆನುತ್ತ ಮಠವ ಹೊಕ್ಕು ಹೇಳಿದವ  ಕೊಟ್ಟಿಗೆಯೊಳಗೆ ಕಟ್ಟಿಯೆಂಬ ನುಡಿಯ ನೆರೆಮನೆಯವನೊಬ್ಬ ಕೇಳಿ ಹರಿತಂದು ಎತ್ತೀದುದುಂಟೆ ಎನುತಘಲ್ಲನೆ ನಗಲು ಪಶುವಿನೊಡೆಯನಿವರಿಂದೆನಗೆ ಅವಿಚಾರ ಹೊದ್ದಿತ್ತಲ್ಲಾ ಎಂದು ಕುಗ್ಗಿದನು. ಇಂತಪ್ಪ ಮತಿಭ್ರಷ್ಟರಮತ್ತೆಯೂ ಬಿಡದೆ ಸದನದೊಳಗಣ ವಿದಳ ಧಾನ್ಯಂಗಳ ಮೂಸಕಂಗಳು ಮುಟ್ಟದಂತೆ ಕಾಯ್ದುಕೊಂಡಿರಿ , ಎನುತತ್ವ ಹೇಳಿ ಗ್ರಾಸವನಿಕ್ಕಿಸಿ ಸಂತೆಗೆ ಹೋಗಿ ಬಂದೆಹೆವೆಂದು ಹೊರವಂಟು ಹೋಗಿ ಸಂತೆಯ ಹೊಕ್ಕು [28]ವಿವರಿಸುತ್ತ[29] ಅಲ್ಲಿವರಿತ್ತ ಸೂಹಿ ಬೇಸತ್ತು ಮನೆಯಳುಹಿ ಇಲಿಯಕೊಂದೆಹೆವೆನ್ನುತ್ತ ಮಾಡಿಗಳಿಗೆ ಕಿಚ್ಚಹೊತ್ತಿಸಲು ಬಿತ್ತುಗಳು ಬೇವಾಗ ಇಲಿ ಓಡಿ ಮನೆಬೆಂದು ಕರಿಮುರಿದು ಧೂಮ್ರವಾದ ಸಮಯದಲ್ಲಿ ಸಂತೆಗೆ ಹೋದಾತ ತಿರುಗಿ ಬಂದು ಈ ಮರಳುಗಳ ಮನೆಯಳಗಿರಿಸಿಹೋದಾತ ನಾನೆ ಮರುಳಲಾ, ಎಂದು ಅವರ ಮತ್ತೆಯೂ ಬಿಡದೆ ಕರಕೊಂಡು ಬೆಟ್ಟಕ್ಕೆ ಹೋಗಿ ಗಳು ಮರನ ತರಿದು ಹೊಳೆಯ ತಡಿಯಲ್ಲಿ ಒಟ್ಟಾಗಿರಿಸಿಯೆಂದಾತ ಹೇಳಿದಡವರು ಅವ ತಮದು ಕೆಳಗೆ ನಮ್ಮನಂಟನೂರತಡಿಯಲ್ಲಿಂಗೆ ಒಂದೊಂದಾಗಿ ಹೋಗಿ ಸಾರಿದ್ದ ಹವೆನುತ ಬಿಡಲೊಡನೆ ಹೋದವು. ಹೊಗಲ್ಕೆ ಕರ್ತು ಬಂಧುಗಳು ಮರಂಗಳೆಲ್ಲಿದ್ದಾವೆನುತ ಕೇಳಿದಡವರು ಊರೊತ್ತಿಗೆ ಸಾರಿರಬೇಕೆಂದು ಹೊಳೆಗಿಳಿಯಹಿ ಬಿಟ್ಟಿಹೆವೆಂದಡವನಾ ಕೆಟ್ಟೆನೆಂದು ಚಿಂತಿಸುತ ಇಂತಪ್ಪ ಹೆಗ್ಗರುಂಟೆ ಎನುತ ಮತ್ತೆಯೂ ಗಳು ಮರನ ಕಡಿದು ಬಂಡಿಯ ಮೇಲೆ ಒಟ್ಟಿ [30]ಮಿಣಿ[31]ಯಲ್ಲಿ ಬಿಗಿಬಿಗಿದು ಆರುಗಳ ಹೂಡಿ ಮುಂದೆ ಹೊಡೆವುತ್ತಿರಿ ನಾ ಹಿಂದೆ ಪಶುಗಳ ಹೊಡಕೊಂಡು ಬರುತ್ತಿರುವೆನು – ಯೆಂದಡವರು, ಹಾಂಗಾಗಲಿ ಎನುತ ಕೆಲ ಹಾದಿಯಂ ಕಳೆದ ಬಳಿಕ ಬಂಡಿಯಾಳು ಬಾಯಾರಿಕೆಯೆನುತ್ತಿವೆಯೆಂದು ಆರುಗಳು ಸಹಿತ ನದಿಯ ಹಾಯಿಸಿದಡವು ಮುಳುಗಿ ಸತ್ತು ತೇಂಕಾಡುತ್ತ ಹೋದವು. ಮತ್ತಾತ ಬಂದಾರುಗಳ ಕೇಳಿದಡವರು ನೀರ ಕುಡಿಯಬೇಕೆಂದು ಹೊಳೆಯ ಕೂಡಿದಡೆ ಅವು ಮುಂದೂರಿಗೆ ಹೋದವೆನಲವರ ಬಟ್ಟೆಯಂ ಬಡಿದು ಕೊಂಡಿರಿ ಎನುತ ತಗುಳಿ ಬಿಟ್ಟು ತಾನು ಕೆಟ್ಟ, ಇನಿತು ಕರ್ತೃಗಳು ಭೃತ್ಯರುಗಳು ಬಿತ್ತು ಸಸಿಗಳು ಈ ಮೂರುಪ್ರಕಾರದವರುಗಳೆಲ್ಲಾ ಹೇಂಗೆ ಕೆಟ್ಟರು, ಹಾಂಗೆ ಷಡುದೇವತೆಯರು ಸಪ್ತ ಋಷಿಯರೆಂಬ ಕರ್ತೃಗಳು ಶೃತಿಗಳೆಂಬ ಭೃತ್ಯರುಗಳು ಬಿತ್ತು ಸಸಿಗಳೆಂಬ ಷಡುದರ್ಶನದವರು ಈ ಮೂರು ತಂಡಗಳು ಆರರಿಂದತ್ತತ್ತಣ ಮಹಾಲಿಂಗವನು ಆರಕ್ಕರದಿಂದತ್ತತ್ತಣ ಮಹಾ ಮೂಲ ಪ್ರಣಮಂಗಳನು ಹೇಮಗಿರಿ ರಜತಗಿರಿ ಮೊದಲಾದ ಎಂಟೂಗಿರಿಗಳಿಂದತ್ತತ್ತಣ ಮಹಾ ವಜ್ರದ ಮೇರುಮಂದಿರವನು, ನಾಲ್ಕು ಆದಿದೇವತೆಗಳ ಕೆಳಗಣ ಎರಡೆಂಭತ್ತೇಳು ಕೋಟಿ ಜಡರುದ್ರಿರಿಂದತ್ತತ್ತಣ ಮಹಾ ಪರಮ ಮೂಲಜ್ಞಾನ ಪ್ರಮಥರೂಗಳನು ಅಂತು ಅವರುಗಳೆಲ್ಲರನು ಅರಿಯದೆ ಹಿಂದಣ ಅನಂತಕೋಟಿ ಕಲ್ಪಾಂತರದಲ್ಲಿಯೂ ಕೆಟ್ಟರು. ಮುಂದಣ ಅನಂತ ಕೋಟಿ ಕಲ್ಪಾಂತರಕ್ಕೂ ಕೆಡುವರು. ಇಂತಪ್ಪ ದೃಷ್ಟಂಗಳಿಗೆ ಪುರಾತನರ ವಚನ ಸ್ತೋತ್ರಂಗಳೇ ಸಾಕ್ಷಿ.

೧೮೬

ಮರುಳ ಕಂಡ ಕನಸಿನ ಪರಿಯಂತಲ್ಲ ಶಿವಾಚಾರ,
ಕರಿಯು ಕನ್ನಡಿಯೊಳಗಡಗಿದಂತಿರಬೇಕು.
ಗುಣಿಯವಗುಣಿಯೊಡನಾಡಿದಡೆ
ಅವನ ಕರ್ಮದ ಫಲವೈಸೆ ಕೂಡಲಸಂಗಯ್ಯ,
ನಿಮ್ಮ ಶರಣರನುಭಾವ ಭವ ದುಃಖಿಗಳಿಗಭೇದ್ಯ ಕಂಡಯ್ಯ.       ||೪೮||

೧೮೭

ಓಡಿನಲ್ಲಿ ಉಂಟೆ ಕನ್ನಡಿಯ ನೋಟ?
ಮರುಳಿನ ಕೂಟ, ವಿಪಿರೀತ ಚರಿತ್ರ!
ನೋಟದ ಸುಖ ತಾಗಿ ಕೋಟಲೆಗೊಂಡೆನು.
ಗುಹೇಶ್ವರಲಿಂಗನೊಬ್ಬನೆ ಅಚಲನು, ಉಳಿದವರೆಲ್ಲಾ ಸೂತಕಿಗಳು.         ||೪೯||

೧೮೮

ಆದಿ ಅನಾದಿಯೆಂಬ ಅಂತರಾತ್ಮನಲ್ಲಿ ತಿಳಿಯಲರಿಯದೆ
ಆದಿ ದೈವವಂದು ಬರಿಯ[32] ಬಹಿರಂಗದ ಬಳಕೆಯನೆ ಬಳಸಿ,
ಅನ್ಯದೈವಂಣಗಳನಾರಾಧಿಸಿ ಕೆಡುತಿಪ್ಪರು ನೋಡಾ.
ಅದಕೆ ತಪ್ಪೆನು, ಮಕ್ಕಳಿಗೆ ತಮ್ಮ ಮಾತೆಯೇ ದೈವ.
ಮಾತೆಗೆ ತನ್ನ ಪುರುಷನೆ ದೈವ, ಪುರುಷಂಗೆ ತನ್ನ ಪ್ರಭುವೆ ದೈವ.
ಪ್ರಭುವಿಂಗೆ ತನ್ನ ಪ್ರಧಾನವೆ ದೈವ,
ಪ್ರಧಾನಂಗೆ ತನ್ನ ರಾಯನೆ ದೈವ,
ರಾಯಂಗೆ ತನ್ನ ಲಕ್ಷ್ಮೀಯೆ ದೈವ,
ಲಕ್ಷ್ಮೀಗೆ ತನ್ನ ವಿಷ್ಣುವೆ ದೈವ,
ವಿಷ್ಣುವಿಗೆ ತನ್ನ ರುದ್ರನ ದೈವ,
ಆ ರುದ್ರಂಗೆ ತನ್ನ ಈಶ್ವರನೆ ದೈವ,
ಈಶ್ವರಂಗೆ ತನ್ನ ಸದಾಶಿವನೆ ದೈವ,
ಸದಾಶಿವಂಗೆ ತನ್ನ ಸರ್ವಗತ ಶಿವನೆ ದೈವ.
ಸರ್ವಗತ ಶಿವನಿಗೆ ಆಕಾಶ ಮಹಿಪತಿಯೆಂಬ ಮಹಾಲಿಂಗಕ್ಕೆ
ಆದಿದೇವರುಳ್ಳಡೆ ಹೇಳಿರೆ, ಇಲ್ಲದಿರ್ದಡೆ ಸುಮ್ಮನೆ ಇರಿರೆ.
ಇದು ಕಾರಣ ಷಡುದರುಶನದ ಚರಾಚರಾದಿಗಳೆಲ್ಲರೂ
ತಮ ತಮಗಿಷ್ಟ ಕಾಮ್ಯವ ಕೊಡುವುದಕ್ಕೆ
ವರವುಳ್ಳ ದೇವರೆಂದು ಬೆರವುತ್ತಿಹರು.
ಅದಕ್ಕೆ ತಪ್ಪೆನು ಅವರಿಗಪ್ಪಂಥ, ವರವೀವುದಕ್ಕೆ ಸತ್ಯವುಳ್ಳವನ[33]ಹುದು.
ಆದಡೇನು, ಪ್ರಾಣಕ್ಕೆ ಪರಿಣಾಮವ ಕೊಡಲರಿಯವು
ಅವರಕೈಯಲ್ಲಿ ಆರಾಧಿಸಿಕೊಂಬ ದೈವಂಗಳೆಲ್ಲವು
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮನವೆಂಬಾರರ ಹಂಗಿನಲ್ಲಿ ಸಿಕ್ಕಿ
ವಿಭೂತಿಯನ್ನಿಟ್ಟು, ರುದ್ರಾಕ್ಷೆಯಂತೊಟ್ಟು
ಜಪತಪ ಹೋಮ ನೇಮಂಗಳ ಮಾಡಿ
ಮಾ[34]ರಣ ಮೋಹನ ಸ್ತಂಭನ ಉಚ್ಚಾಟನ
ಅಂಜನ ಸಿದ್ಧಿ, ಘುಟಿಕಾ ಸಿದ್ಧಿ, ಮಂತ್ರ ಸಿದ್ಧಿ, ದೂರದೃಷ್ಟಿ
ದೂರ ಶ್ರವಣ, ಕಮಲ ದರ್ಶನ, ತ್ರಿಕಾಲಜ್ಞಾನ, ಪರಕಾಯ ಪ್ರವೇಶವೆಂಬ
ಅಷ್ಟಮಹಾಸಿದ್ಧಿಗಳಂ ಲಿಂಗದಲ್ಲಿ ವರಂಬಡದು
ತಮ್ಮ ಬೇಡಿದವರಿಗೆ ಕೊಟ್ಟು ತಮ್ಮಿಂದ ಹಿರಿಯರಿಗೆ ನಮಸ್ಕರಿಸಿ[35] ತಮ್ಮಿಂದ ಕಿರಿಯರಿಗೆ ದೇವರೆಂದು ಬೆರವುತ್ತಿಹವು.
ಕಿರಿದುದಿನ [36]ಅವರ[37] ದೇವರೆನ್ನಬಹುದೆ?
ದೇಹಕೇಡಿಗಳ ಸತ್ಯರೆಂದೆನಬಹುದೆ?
ಅಸತ್ಯದಲ್ಲಿ ಅಳಿವವರ ಭಕ್ತರೆಂದೆನಬಹುದೆ?
ಬಹುರೂಪಿನ ಕಪಟಿಗಳ ನಿತ್ಯರೆನಬಹುದೆ?
ದಿನದಿನಕ್ಕೆ ಸತ್ತು ಸತ್ತು ಹುಟ್ಟುವವರ ಅದೆಂತೆಂದಡೆ
ಬ್ರಹ್ಮನ ಜಾವವೊಂದಕ್ಕೆ ಒಬ್ಬ ಇಂದ್ರನಳಿವ
ವಿಷ್ಣುವಿನ ಜಾವವೊಂದಕ್ಕೆ ಒಬ್ಬ ಬ್ರಹ್ಮನಳಿವ
ರುದ್ರನ ಜಾವವೊಂದಕ್ಕೆ ಒಬ್ಬ ವಿಷ್ಣುವಳಿವ
ಈಶ್ವರನ ಜಾವವೊಂದಕ್ಕೆ ಒಬ್ಬ ರುದ್ರನಳಿವ
ಸದಾಶಿವನ ಜಾವವೊಂದಕ್ಕೆ ಒಬ್ಬ ಈಶ್ವರನಳಿವ
ಸರ್ವಗತನ ಜಾವವೊಂದಕ್ಕೆ ಒಬ್ಬ ಸದಾಶಿವನಳಿವ
ಲಿಂಗ ಶರಣವೊಂದು ನಿಮಿಷಕ್ಕೆ ಸರ್ವಗತನಳಿವ
ಲಿಂಗಶರಣರುಗಳಿವು ಉಳ್ಳಡೆ ಹೇಳಿರೆ.
ಇಲ್ಲದಿರ್ದಡೆ ಸುಮ್ಮನಿರಿ.
ಅಂತಪ್ಪ ಮಹಾಲಿಂಗವನು ಶರಣರನು ಅರಿಯದೆ
ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ
ಮಾನವರೆಲ್ಲರೂ ಅರಸಿ ತೊಳಲಿ ಬಳಲುತ್ತಿಪ್ಪರು.
ಅದು ಹೇಂಗೆಂದೊಡೆ: ಬ್ರಹ್ಮವೇದದಲ್ಲರಸುವನು.
ವಿಷ್ಣು ಪೂಜೆಯಲ್ಲಿ ಅರಸುವನು.
ರುದ್ರ ಜಪದಲ್ಲರಸುವನು.
ಈಶ್ವರ ನಿತ್ಯನೇಮದಲ್ಲರಸುವನು.
ಸರ್ವಗತ ಶೂನ್ಯದಲ್ಲರಸುವನು.
ಗೌರಿ ತಪದಲ್ಲರಸುವಳು. ಗಂಗೆ ಉಗ್ರದಲ್ಲರಸುವಳು.
ಚಂದ್ರ ಸೂರ್ಯರು ಹರಿದರಸುವರು.
ಇಂದ್ರ ಮೊದಲಾದಷ್ಟದಿಕ್ಪಾಲಕರು ಅಗಮ್ಯದಲ್ಲರಸುವರು.
ಸಪ್ತ ಮಾತೃಕೆಯರು `ಓಂ ಪಟುಸ್ವಹಾ’ ಯೆಂಬ ಮಂತ್ರದಲ್ಲರಸುವರು.
ಸತ್ಯ ಖುಷಿ ದಧೀಚಿ ಗೌತಮ ವಶಿಷ್ಠ ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ
ಇವರು ಮೊದಲಾದ ಸಪ್ತಖುಷಿಯಗಳೆಲ್ಲಾ
ತಪ, ಯೋಗ, ಆಗಮಂಗಳಿಂದ ಅರಸುವರು.
ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು
ಶುಕ್ಲ ಶ್ರೋಣಿತವಿಲ್ಲದ ಕಾಮಿ, ಒಡಲಿಲ್ಲನ ರೂಪು.
ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ, ನಿದ್ರೆಯಿಲ್ಲದ ನಿರಾಳ.
ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ ಕಣ್ಣಮೇಲೆ ಕಣ್ಣುಂಟು.
ಮತ್ತಾ ಕಣ್ಣರೆ[38]ದೆರದು ಅಮೃತ
ಕಾಯದೃಷ್ಟಿಯಲ್ಲಿ ನೋಡಿದದೊಂದುಯಿಲ್ಲ.
ನಮ್ಮ ಗುಹೇಶ್ವರ ಲಿಂಗವು ಬಚ್ಚ ಬರಿಯ
ಬಯಲು ನಿಶ್ಚಿಂತ ನಿರಾಳನು.         ||೫೦||


[1] x (ಬ)

[2] ಮಾಕ್ಷಸ್ವಾದವ (ಬ)

[3] ಮಾಕ್ಷಸ್ವಾದವ (ಬ)

[4] ಕಂಡಾ (ಬ)

[5] ಕಂಡಾ (ಬ)

[6] x (ಅ)

[7] x (ಬ)

[8] x (ಬ)

[9] ರಾ (ಬ)

[10] ಭಾ (ಬ)

[11] ಷೋಡಶ (ಬ)

[12] ಷೋಡಶ (ಬ)

[13] x (ಬ)

[14] x (ಬ)

[15] ರಸಾಮೃತಕ್ಕೆ (ಬ)

[16] ರಸಾಮೃತಕ್ಕೆ (ಬ)

[17] ತುದಿಯಲ್ಲಿ (ಬ)

[18] ತುದಿಯಲ್ಲಿ (ಬ)

[19] ಹೊರೆಯೊ (ಬ)

[20] ಹೊರೆಯೊ (ಬ)

[21] ಗೊಳಗಾ (ಬ)

[22] ಗೊಳಗಾ (ಬ)

[23] ಮಧುರ ರುಚಿಯನರಿಯನು (ಅ)

[24] ಮಧುರ ರುಚಿಯನರಿಯನು (ಅ)

[25] ದು (ಬ)

[26] ಕ್ಕೇಳೂ (ಬ)

[27] ಕ್ಕೇಳೂ (ಬ)

[28] x (ಬ)

[29] x (ಬ)

[30] ಮಳೆ (ಬ)

[31] ಮಳೆ (ಬ)

[32] + ಭಯ (ಬ)

[33] ರ (ಬ)

[34] ಸ್ಥಾ (ಬ)

[35] ಸುತ್ತ (ಬ)

[36] x (ಬ)

[37] x (ಬ)

[38] x (ಬ)