೩೬೩

ಅಂಧಕಾಸುರನ ಕೊಲುವಲ್ಲಿ,
ಕಾಲಲೋಹಿತನೆಂಬ ಗಣೇಶ್ವರನು.
ತ್ರಿಪುರ ದಹನವ ಮಾಡುವಲ್ಲಿ
ಸ್ಕಂದನೆಂಬ ಗಣೇಶ್ವರನು.
ಗಜಾಸುರನ ಕೊಂದು ಚರ್ಮವ ಹೊದೆವಲ್ಲಿ
ಉಗ್ರವೆಂಬ ಗಣೇಶ್ವರನು.
ಬ್ರಹ್ಮಕಪಾಲವಹಿಡಿದು ವಿಷ್ಣು ಕಂಕಾಳವನಿಕ್ಕುವಲ್ಲಿ
ನೀಲಕಂಠನೆಂಬ ಗಣೇಶ್ವರನು.
ಪ್ರಾಣಲಿಂಗ

[1]ಸಂಗ[2]ದಲ್ಲಿ  ವೃಷಭನೆಂಬ ಗಣೇಶ್ವರನು.
ಜಂಗಮದ ಪೂರ್ವಾಶ್ರಯ ಕಳೆದು[3] ಪುನರ್ಜಾತನೆನಿಸಿ ಪ್ರಾಣಲಿಂಗಿಯ ಮಾಡಿದ ಕಾರಣ
ಕೂಡಲ ಚೆನ್ನಸಂಗಯ್ಯನಲ್ಲಿ ಬಸವಣ್ಣನೆಂಬ ಗಣೇಶ್ವರನು.          ||೭೪||

ಮತ್ತೆ ಆ ಯುಗದೊಳಗೆ ವಿಷ್ಣು ಹೆದ್ದೊರೆಯ ಸಮೀಪದವನಂಗದೊಳಗಿರ್ದ ಸೀತೆಯ ಕೊಂಡುಹೋದ ರಾವಣನ ಕೊಂದು ದೋಷವ ತಂದುಕೊಂಡು ಭೂಮಿಯ ಮೇಲೆ ಲಿಂಗವ ಪ್ರತಿಷ್ಠೆಯಂ ಮಾಡಿ ಗುರುಬೋಧಾಜ್ಞಾನವಿಲ್ಲದೆ ಪೂಜಿಸಿದ ಕಾರಣ ಆ ಪಾಪ ಹೋಗದಿಹು[4]ದ ತಾ[5]ಕಂಡು ಹಿಮಾಚಲಕ್ಕೆ ಹೋಗಿ ರೋಮಜನಿಗೆ ಅಡ್ಡಬಿದ್ದು ಕೇಳಿದಡಾತ ಕೃತಯುಗದಲ್ಲಿ ಪರಶುರಾಮನ ಮುಂದಣ ಯುಗಂಗಳ ಮುಡುಬಲ ಚೌಡಲ ಪಾಂಡುವರಿಂತಿವರು ಮೊದಲದ ಸರ್ವಾತ್ಮರುಧಿರದುರಿತಂಗಳನೊದವಂತಾದಾಕ್ಷಣ ಕೈಲಾಸವೆಂಬ ಶ್ರೀಶೈಲವದೆ ಹೋಗೆಂದು ಹರಿಯ ಹೊರವಡಿಸಿದಡಾತ ಬಂದು ಶ್ರೀಶೈಲವನೇರಿಹೆನೆನುತ ಬುಡದಲ್ಲಿ ನಿಂದು ನೋಡಿದಡದು ಲಿಂಗದ ಕಂಥೆಯಂತಿದ್ದುದಂ ಕಂಡಂಜಿಯೇರಲಾರದೆ ಹನುಮನ ಬಾಲದ ಮೇಲೆ ಕುಳಿತು ಬಂದು ಚೆನ್ನಮಲ್ಲಿಕಾರ್ಜುನ ದೇವರ ಬಲಗೊಂಡು ಸಮೀಪದಲ್ಲಿ ನಿಂದು ಪೂಜಿಸಿ ನಿಃಪಾಪಿಯಾಗಿ ಶ್ರೀರಾಮ ಮರ್ತ್ಯಕ್ಕೆ ಇಳಿದು ಇರುತ್ತಿರ್ದ್ದನೆಂಬುದು ಸಕಲರಿಗೆಯೂ ಕಾಣಬಂದರ್ಥ. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೩೬೪

ವಿಷ್ಣು ಪರಿಪೂರ್ಣನಾದಡೆ,
ಸೀತೆ ಕೆಟ್ಟಳೆಂದು ಅರಸಲೇಕೋ?
ವಿಷ್ಣು ಪರಿಪೂರ್ಣನಾದಡೆ
ವಟಪತ್ರದ ಮೇಲೆ ಕುಳಿತು
ಜಲ ಪ್ರಳಯದಲ್ಲಿ ಅಡಗಿದನೆಂಬ ಮಾತೇಕೋ?
ವಿಷ್ಣುವಿನ ಬಾಣ ಸಮುದ್ರಕಡ್ಡ ಕಟ್ಟೆಯಾದಡೆ,
ಕಪಿ ಕೋಡಗವ ಹಿಡಿ ತಂದು
ಬೆಟ್ಟಗಟ್ಟಂಗಳ ಹಿಡಿತಂದು ಸೇತುವೆಯ ಕಟ್ಟಲೇಕೋ?
ವಿಷ್ಣು ಪರಿಪೂರ್ಣನಾದಡೆ ರಾವಣನ ವಧೆಗಂಜಿ
ಧರೆಯಮೇಲೆ ಲಿಂಗಪ್ರತಿಷ್ಠೆಗಳ ಮಾಡಿ ಪೂಜಿಸಲೇಕೋ?
ಇಂತು ಬ್ರಹ್ಮಾಂಡದೊಳಗೆ ಸಿಕ್ಕಿ
ಸತ್ತು ಹುಟ್ಟುತ್ತಿಹ ದೇವತೆಗಳು ಒಬ್ಬರೂ ಪರಿಪೂರ್ಣರಲ್ಲ.
ಮಹಾದಾನಿ ಸೊಡ್ಡಳನೊಬ್ಬನೆ ಪರಿಪೂರ್ಣನು.           ||೭೫||

೩೬೫

ಈರೇಳು ರತ್ನ, ಹದಿನೆಂಟು ಲಕ್ಷ ಗಜ,
ನಾರಿಯರು ನಾಲ್ಕು ಲಕ್ಷವು, ಮೂವತ್ತೆರಡು ಸಾವಿರ ಮಕ್ಕಳು,
ಹದಿನಾರು ಲಕ್ಷ ಅವರುಗಳೇರುವ ರಥಂಗಳು.
ಸೂರ್ಯನ ರಥಕ್ಕೆ ಸರಿಮಿಗಿಲೆನಿಸುವ ರಥಂಗಳು,
ಸಾಲದೆ ಸಿರಿಗೆ ನೆಲೆಯೆನಿಸುವ ಅಸಂಖ್ಯಾತ ಪುರ.
ಮೂರುವರೆ ಕೋಟಿ ಬಂಧುಗಳು,
ಮೂವತ್ತೆಂಟು ಕೋಟಿ ಜಾತ್ಯಶ್ವ,
ಇಪ್ಪತ್ತೆಂಟು ಕೋಟಿ ಮೈಗಾವಲ ವೀರಭಟರು,
ಛಪ್ಪನ್ನದೇಶದ ರಾಯರುಗಳೆಲ್ಲರು
ಕಪ್ಪಕಾಣಿಕೆಯಂ ತೆತ್ತುಬಹರು.
ಕೂಡಲಸಂಗಮದೇವಾ, ನಿಮ್ಮ ಕೃಪೆ ತಪ್ಪಿದಲ್ಲಿ
ಆ ಸಗರ ಕಾರ್ತವೀರ್ಯರೊಂದು ಕ್ಷಣದಲ್ಲಿ ಮಡಿದರು.  ||೭೬||

ಅಷ್ಟರಿಂದಂ ಮೇಲೆ ದ್ವಾಪಾರಯುಗ ಹುಟ್ಟಿ ಎಂಟು ಲಕ್ಷವು ಐದು ಸಾವಿರ ವರುಷವು ವರ್ತಿಸುತ್ತಿದ್ದಿತ್ತು. ಈ ಯುಗದ ಅರಸಿನ ಹೆಸರು ಕೌರವ ರಾಯನೆಂದು, ಈ ರಾಯ ಶ್ರೀ ಕಲ್ಯಾಣ ಮಧ್ಯದ ಗುದ್ದುಗೆಯ ಮೇಲೆ ಕುಳಿತು ಮಲ್ಲಿಕಾರ್ಜುನನೆಂಬ ದೇವರ ಪೂಜಿಸುತ್ತ ಸುಖಸಂಕಥಾವಿನೋದದಿಂ ರಾಜ್ಯಂ ಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಚರಶೇಷವ ಲಿಂಗಕ್ಕೆ ಕೊಟ್ಟಾರೋಗಿಸಿ ತ್ರಿವಿಧ ದಾಸೋಹವಂ ಕೆಲವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದ ಮಂಟಪವೆಂಬ ವಜ್ರಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಚಂದ್ರಬದ್ಧಕನೆಂಬ ವಾದಿ ಪುಟ್ಟಿ ಚಂದ್ರಮದವೆತ್ತಿದಲ್ಲಿ ಚಂದ್ರನೆ ದೈವವೆಂದು ಪ್ರತಿಷ್ಠೆಯಂ ಮಾಡಿ ಕುಲಂಗಳ ಹಿಡಿವುತ್ತ ಬಿಡುತ್ತ ತಿರುಗುತ್ತಿಹಲ್ಲಿ ಮೊರೆದು ಕದಂಬರು ಹೊನ್ನು, ಹೆಣ್ಣು, ಮಣ್ಣೆಂಬವ ತಾಗಿ ವೇದಶಾಸ್ತ್ರವಾಗಮ ಪುರಾಣ ತರ್ಕ್ಕ ತಂತ್ರ ಮಂತ್ರಂಗಳು ಸಾಧಿಸಿ ಭೇದಿಸಿ ತಾ ಘನ ನಾ ಘನನೆಂದು ತರ್ಕಿಸಿ ವಾಕು ಶಸ್ತ್ರಂಗಳೊಳಗೆ ಹೊಯಿದಾಡುತ್ತಲೆ ಸತ್ತು ಕೆಟ್ಟವರಂತೆ ತಾವು ಹೊಡದಾಡುತ್ತ ಕೆಟ್ಟರು. ಇಂತೆಂಬ ಪುರಾತನರಗಣಿತ ವಚನ ಸಾರಾಯಂಗಳಿಗೆ ಸಾಕ್ಷಿ.

೩೬೬

ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮ
ಇಂತೀ ಅಷ್ಟಮದಂಗಳ ವಿವರ:
ಪೃಥ್ವಿ ಮದವೆತ್ತಿದಲ್ಲಿ ತನುಗುಣ ಭರಿತನಾಗಿಹನು.
ಸಲಿಲ ಮದವೆತ್ತಿದಡೆ ಸಂಸಾರ ಭರಿತನಾಗಿಹನು.
ಪಾವನ ಮದವೆತ್ತಿದಲ್ಲಿ ಕಾಮ್ಯರಸಭರಿತನಾಗಿಹನು.
ಪವನ ಮದವೆತ್ತಿದಲ್ಲಿ ಇದ್ದ ಠಾವಿನಲ್ಲಿರ್ದು
ಜಂಬೂದ್ವೀಪ ಭರತಿನಾಗಿಹನು.
ಅಂಬರ ಮದವೆತ್ತಿದಲ್ಲಿ ವಾಹನ ಭರಿತನಾಗಿಹನು.
ರವಿ ಮದವೆತ್ತಿದಡೆ ಕೋಪಾಗ್ನಿಭರಿತನಾಗಿಹನು.
ಶಶಿ ಮದವೆತ್ತಿದಡೆ ಚಿಂತಾಭರಿತನಾಗಿಹನು.
ಆತ್ಮ ಮದವೆತ್ತಿದಡೆ ಅಹಂಕಾರ ಭರಿತನಾಗಿಹನು.
ಇಂತೀ ಅಷ್ಟಮದಂಗಳನಳಿದು ನಿಜವನರಿಯಬಲ್ಲಡೆ
ಕೂಡಲ ಚೆನ್ನಸಂಗಯ್ಯನಲ್ಲಿ ಶಿವಯೋಗಿಗಳೆಂಬೆ        ||೭೭||

೩೬೭

ಪೃಥ್ವಿ ಲಿಂಗವೆಂದು ಗತವಾದರು ಹಲಬರು.
ಅಪ್ಪು ಲಿಂಗವೆಂದು ಶಿವಪಥವ ತಪ್ಪಿದರು ಹಲಬರು.
ತೇಜ ಲಿಂಗವೆಂದು ಘಾಸಿಯಾದರು ಹಲಬರು.
ವಾಯು ಲಿಂಗವೆಂದು ವಾದಿಗಳಾಗಿ ಹಾರಿಹೋದರು ಹಲಬರು.
ಆಕಾಶ ಲಿಂಗವೆಂದು ಶೂನ್ಯ[6]ವನಾರಾಧಿಸಿ[7] ಸುಖ ದುಃಖಕ್ಕೆ ಗುರಿಯಾಗಿ ಹೋದರು ಕೆ[8]ಲಬರು.
ಸರ್ವಾತ್ಮರು ಶಿವನೆಂದು ವಾದಿಸಿ
ಸ[9]ರ್ವ ಆ[10]ಹಾರ ವ್ಯವಹಾರಂಗ[11]ಳಿಗೊಳಗಾಗಿ
ಹೋದರು ಹಲಕೆಲಬರು[12].
ಇಂತೀ ಹುಸಿ ಶಬ್ದವನತಿಗಳದು
ನಿಜಲಿಂಗ, ನಿಜಜಂಗಮ, ನಿಜನಿತ್ಯ ಪ್ರಸಾದದ
ನಿಲವ ತೋರಿಸಿ ಎನ್ನ ಬದುಕಿಸಿದಾತ
ಬಸವಣ್ಣನು ಕಾಣಾ ಕಲಿದೇವನಯ್ಯ. ||೭೮||

೩೬೮

ಅಷ್ಟಮೂರ್ತಿ ಲಿಂಗವೆಂಬ
ಭ್ರಷ್ಟರ ನುಡಿಯ ಕೇಳಲಾಗದು,
ಅದೇಕೆಂದಡೆ:

ಪೃಥ್ವಿಯಂತೆ ಕಠಿಣವುಳ್ಳಾತನೆ,
ಅಪ್ಪುವಿನಂತೆ ಓಟ ಭರತಿವುಳ್ಳಾತನೆ,
ತೇಜದಂತೆ ತೃಣಕಾಷ್ಠಾದಿಗಳಿಲ್ಲದಿರ್ದಡೆ ನಂದುವಾತನೆ,
ವಾಯುವಿನಂತೆ ಚಲನೆವುಳ್ಳಾತನೆ,
ಆಕಾಶದಂತೆ ಬಚ್ಚಬರಿಯ ಬಯಲಾದಾತನೆ,
ಸೋಮ ಸೂರ್ಯರಂತೆ ದಿವರಾತ್ರಿಗಳೊಳಗೆ ಕಳೆಗುಂದುವಾತನೆ,
ಜೀವಾತ್ಮನಂತೆ ಜನನ ಮರಣವುಳ್ಳಾತನೆ,
ಇದು ಕಾರಣ ಕೂಡಲಚೆನ್ನಸಂಗಯ್ಯನೀ ನಿನ್ನಂತೆ,
ಇವೆಲ್ಲವು ನೀನಿರಿಸಿದಂತೆ.  ||೭೯||

೩೬೯

ಜಲದೈವವೆಂದಡೆ ಶೌಚವ ಮಾಡಲಿಲ್ಲ?
ನೆಲದೈವವೆಂದಡೆ ಕಾಲುರಿನಡೆಯಲಿಲ್ಲ?
ಫಲದೈವವೆಂದಡೆ ತರಿದು ಮೆಲಲಿಲ್ಲ?
ಅಗ್ನಿ ದೈವವೆಂದಡೆ ಮನೆಗಳು ತೃಣಾದಿಗಳು ಬೆಂದು ಕೆಟ್ಟೆವೆನಲಿಲ್ಲ?
ವಾಯು ದೈವವೆಂದಡೆ ಕೆಟ್ಟ ಗಾಳಿ
ಮನೆಗೆ ಬಂದಿ[13]ತ್ತು ಬಾಗಲಿಕ್ಕಿ ಎನಲಿಲ್ಲ[14]?
ಆಕಾಶ ದೈವವೆಂದಡೆ ಆಕಾಶವ ಹೊರಗುಮಾಡಿ
ಒಳಗೆ ಮನೆಯ ಕಟ್ಟಲಿಲ್ಲ?
ಚಂದ್ರ ದೈವವೆಂದಡೆ ಶೀತಗೊಂಡು ಕೆಟ್ಟೆವೆನಲಿಲ್ಲ?
ಸೂರ್ಯ ದೈವವೆಂದಡೆ ಉಷ್ಣಗೊಂಡು ಕೆಟ್ಟೆವೆನಲಿಲ್ಲ?
ಆತ್ಮ ದೈವವೆಂದಡೆ ಸಾವು ಕೇಡು ಇಲ್ಲದಿರಬೇಕು.
ಇದು ಕಾರಣ ನೆಲದೈವವಲ್ಲ, ಜಲದೈವವಲ್ಲ,
ಅಗ್ನಿ ದೈವವಲ್ಲ, ವಾಯು ದೈವವಲ್ಲ,
ಆಕಾಶ ದೈವವಲ್ಲ, ಚಂದ್ರ, ಸೂರ್ಯ, ಆತ್ಮರು ದೈವವಲ್ಲ,
ಕಲಿದೇವ, ನಿಮ್ಮ ಶರಣ ಬಸವಣ್ಣನೊಬ್ಬನೆ ದೈವವೆಂದ
ಮಡಿವಾಳನು.     ||೮೦||

೩೭೦

ವೇದಂಗಳು ದೈವವಾದಡೆ ಅಚ್ಚು ಪಾರೆಗಳಾಗಲೇಕೋ?
ವೇದಂಗಳು ದೈವವೆಂದಡೆ ಕುಕ್ಕುರ ಕುದುರೆಯಂತಾಗಲೇಕೋ?
ಶಾಸ್ತ್ರಂಗಳು ದೈವವಾದಡೆ ಹೊರಜು[15] ಕಣ್ಣಿಗಳಾಗಲೇಕೋ?
ಆಗಮಂಗಳು ದೈವವಾದಡೆ ಕೀಲು ಕುಣಿಕೆಗಳಾಗಿರಲೇಕೋ?
ಪುರಾಣಂಗಳು ದೈವವಾದಡೆ ಅಚ್ಚು ಹೊರಜೆಯಾಗಲೇಕೋ?
ಚಂದ್ರ ಸೂರ್ಯರು ದೈವವಾದಡೆ ಗಾಲಿಗಳಾಗಲೇಕೋ?
ಇವ ಹಿಡಿ[16]ದು ಇವ[17] ಪೂಜೆಮಾಡಿದವರು ದೈವವಾದಡೆ
ಪುಣ್ಯ ಪಾಪಕ್ಕೀಡಾಗಲೇಕೋ?
ಇದು ಕಾರಣ ವೇದ ವ್ಯಫೆಗೊಂಡಿತ್ತು,
ಆಗಮ ಅತ್ತಳ ಮತ್ತಳಗೊಂಡಿತ್ತು,
ಪುರಾಣ ಪುಂಡರ ಮಾರ್ಗ.
ಇಂತೀ ವೇದಂಗಳು ದೈವವಲ್ಲ, ಶಾಸ್ತ್ರಂಗಳು ದೈವವತ,
ಆಗಮಂಗಳು ದೈವವಲ್ಲ, ಪುರಾಣಂಗಳು ದೈವವಲ್ಲ,
ಚಂದ್ರಾದಿತ್ಯರು ದೈವವಲ್ಲ, ಆತ್ಮನು ದೈವವಲ್ಲ,
ಕಪಿಲಸಿದ್ಧ ಮಲ್ಲಿಕಾರ್ಜುನನಲ್ಲಿ
ಬಸವಣ್ಣ[18]ನೊಬ್ಬನೆ[19] ದೈವ ಕಾಣಾ ಪ್ರಭುವೆ.  ||೮೧||

ಅಷ್ಟರಿಂದಂ ಮೇಲೆ ಕಲಿಯುಗ ಹುಟ್ಟಿ ನಾಲ್ಕು ಲಕ್ಷವು ಐದು ಸಾವಿರ ವರುಷವು ವರ್ತಿಸುತ್ತಿದ್ದಿತ್ತು. ಈ[20] ಯುಗದ ಅರಿಸಿದ ಹೆಸರು ಜನಮೇಜಯ ರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದಲ್ಲಿ ಗದ್ದುಗೆಯ ಮೇಲೆ ಕುಳಿತು ತ್ರಿಯಂಬಕನೆಂಬ ದೇವರ ಪೂಜಿಸುತ್ತ ಸುಖಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಾರೋಗಿಸಿ ತ್ರಿವಿದ ದಾಸೋಹವಂ ಕೆಲ ವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣ ನಿಚ್ಚಣಿಗೆಯ ಮೇಲೆ ಪ್ರಸಾದ ಮಂಟಪವೆಂಬ ವಜ್ರಕೈಲಾಸಕ್ಕೆ ಹೋಗುತ್ತಿಹರು. ಇಂತೀ ಹದಿನೆಂಟು ಯುಗಂಗಳು ಶತಕೋಟಿ ಸಂಖ್ಯೆಯ ಮೇಲೆ ಏಳುನೂರು ಎಪ್ಪತ್ತು ವೇಳೆ ತಿರಿಗಿದವು. ತಿರಿಗಿದ ಕಾರಣ ಅವರ ಭೇದಾದಿ ಭೇದಂಗಳನು ವರ್ಮಾದಿ ವರ್ಮಂಗಳನು ಸಕೀಲು ಸಂಜ್ಞೆ ಸಂಬಂಧಗಳನು[21] ಸಕಲ ಲೋಕಂಗಳನು[22] ಸಕಲ ಜೀವಾತ್ಮಂಗಳನು ಇಂತಿವೆಲ್ಲವನು ಬಸವ ಪ್ರಭು  ಸಿದ್ಧರಾಮ ಮಡಿವಳ ಚೆನ್ನಬಸವಣ್ಣ ಈ ಐವರು ಮುಖ್ಯವಾದ ಸಕಲ ಪುರಾತನರೆಲ್ಲರು ಸಕಲ ಅನುಭಾವಂಗಳನೊಳಕೊಂಡು ಹದಿನಾಲ್ಕು ಷಡುಸ್ಥಲಂಗಳೆಲ್ಲವನೊಳಕೊಂಡು ಶ್ರೀ ಕಲ್ಯಾಣಪುರದ ತ್ರಿಪುರಾಂತಕ ದೇವರ ಮುಂದಣ ಅನುಭವ ಮಂಟಪದೊಳಗೆ ನಿರೂಪವ ಮಾಡುತ್ತಿಹರು. ಈ ಯುಗದಲ್ಲಿಯೂ ಏಕಾತ್ಮ ಬದ್ಧಕನೆಂಬ ವಾದಿ ಹಲವಾತ್ಮರುಗಳನು ಏಕಾತ್ಮವೆಂದು ಪ್ರತಿಷ್ಠೆಯಂ ಮಾಡಿ ಕುಲಂಗಳ ಹಿಡಿವುತ್ತ ಬಿಡುತ್ತ ತಿರುಗುತ್ತಿಹಲ್ಲಿ, ಕೌರವರು, ಪಾಂಡವರು ಇತ್ತಂಡವು ಏಕಾತ್ಮವಾದವ ಕೇಳಿ ಸಕಳಸ್ತುತಿಗಳ ಕೇಳಿ ಪ್ರಮಾಣಿಸಿ ಧರ್ಮ ಯುಕ್ತವಾಗಿ ನಡೆಯಬೇಕೆಂದು ಕೆಲಕಾಲ ನೆಡವುತ್ತಿರುವಾಗ ಎರಡು ತಂಡಕ್ಕೂ ನಾವು ನೀವು ಏಕಾತ್ಮರೆಂಬ ಸ್ನೇಹ ಕೆಟ್ಟು ಯುದ್ಧ ಹುಟ್ಟಿ ಬಡಿದಾಡಿ ಪಾಪಕ್ಕೆ ಹೋದರು. ಇಂತೀ ಹಿಂದೆ ಹೇಳಿದ ನಾಲ್ಕು ಯುಗಂಗಳ ಕೆಲವು ಪ್ರಸಂಗಕ್ಕೆ ಸಾಕ್ಷಿ.

೩೭೧

ಕೃತಯುಗ ಮೂವತ್ತೆರಡು ಲಕ್ಷ ವರುಷದಲ್ಲಿ,
ಹಿಮಾಚಲದ ಕೇತಾದೇವರು ಮೂಲಸ್ಥಾನ,
ತ್ರೇತಾಯುಗ ಹದಿನಾರು ಲಕ್ಷ ವರುಷದಲ್ಲಿ,
ಸೇತುವಿನ ರಾಮೇಶ್ವರ ದೇವರು ಮೂಲಸ್ಥಾನ.
ದ್ವಾಪಾರಯುಗ ಎಂಟು ಲಕ್ಷ ವರುಹದಲ್ಲಿ,
ಸೌರಾಷ್ಟ ಸೋಮೇಶ್ವರ ದೇವರು ಮೂಲಸ್ಥಾನ.
ಕಲಿಯುಗ ನಾಲ್ಕು ಲಕ್ಷ ವರುಷದಲ್ಲಿ,
ಶ್ರೀಶೈಲಚೆನ್ನ ಮಲ್ಲಿಕಾರ್ಜುನ ದೇವರು ಮೂಲಸ್ಥಾನ.
ಇಂತೀ[23] ಅನಂತ ಯುಗಂಗಳಲ್ಲಿ ಅನಂತರಿಗೆಯೂ
ಅನಂತ ಕ್ಷೇತ್ರಂಗಳ ಲಿಂಗಂಗಳಲ್ಲಿ ಮೂಲಸ್ಥಾನ.
ಇದು ಕಾರಣ ಕೂಡಲಚೆನ್ನಸಂಗಯ್ಯ.
ನೀ ಸಾಕ್ಷಿಯಾಗಿ ಭಕ್ತರಿಗೆ ಜಂಗಮ ಲಿಂಗವೆ ಮೂಲಸ್ಥಾನ. ||೮೨||

೩೭೨

ಎಂಟು ಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ
ಒಬ್ಬ ಜಂಗಮದೇವರು ಆರೋಗಣೆಯ ಮಾಡುವರಲ್ಲದೆ,
ಹದಿನಾರು ಲಕ್ಷದ ಮೇಲೆ ಐನೂರು ದೇವರುಗಳು ಕೂಡಿಕೊಂಡು
ಒಬ್ಬ ಜಂಗಮದೇವರಿಗೆ ಮಾಡಿದ ಬೋನವ
ಆರೋಗಣೆಯ ಮಾಡಲಿರಿಯರು.
ಇಂತಪ್ಪ ದೇವರುಗಳಿಂದಲು ಜಂಗಮದೇವ[24]ರೇ[25] ಘನವು,
ಕೂಡಲ ಚೆನ್ನಸಂಗಯ್ಯ ನೀ ಸಾಕ್ಷಿಯಾಗಿ.      ||೮೩||

೩೭೩

ಕೃತಯುಗದೊಳು ಸುವರ್ಣದ ಲಿಂಗವಾದಲ್ಲಿ
ನಿನ್ನ ಹೆಸರೇನು?
ತ್ರೇತಾಯುಗದಲ್ಲಿ ಬೆಳ್ಳಿಯ ಲಿಮಗವಾದಲ್ಲಿ
ನಿನ್ನ ತಂದೆ ತಾಯಿ ಯಾರು?
ದ್ವಾಪರದೊಳು ತಾಮ್ರದ ಲಿಂಗವಾದಲ್ಲಿ
ಹದಿನೆಂಟು ಜಾತಿಯ ಕೈಲಿ ಕಿಲುಬುಹೊಯಿತ್ತು.
ಕಲಿಯುಗದೊಳು ಕಲ್ಲ[26]ಲಿಂಗವಾ[27]ದಡೆ
ಇಕ್ಕಿದ ಓಗರವನುಣ್ಣದೇಕೋ?
ಹಿಂದೊಮ್ಮೆ ನಾಲ್ಕು ಯುಗದೊಳು ಅಳಿದುಹೋದುದನರಿಯಾ?
ಇನ್ನೇಕೆ ದೇವತನಕ್ಕೆ ಬೆರೆವುತ್ತಿಹೆ?

ಸಾಕ್ಷಿ:

ಸ್ಥಾವರಂ ಜಂಗಮಠ್ಚೈವ ದ್ವಿವಿಧಂ ಲಿಂಗಮುಚ್ಯತೇ!
ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್||

ಇದು ಕಾರಣ ಕೂಲಡ ಚೆನ್ನಸಂಗಯ್ಯ ತಪ್ಪದೆ
ಅನಂತ ಯುಗಂಗಳೊಳಗೆ ಜಂಗಮದೇವರ ಪ್ರಾಣವಾದರಾಗಿ,
ಸ್ಥಾವರ ದೇವರೆ ಜಂಗಮ ದೇವರ ಪ್ರಸಾದಕ್ಕೆ ಯೋಗ್ಯವಾಯಿತ್ತು.          ||೮೪||

೩೭೪

ವೇದವನೋದಿ ಹೊನಲಲ್ಲಿ ಹೋದ ದ್ವಿಜರೆಲ್ಲರೂ
ನೀವು ಕೆಟ್ಟ ಕೇಡಿಂಗೆ ಕಡೆಯಿಲ್ಲ.
ಅದು ಹೇಗೆಂದಡೆ;
ಹೇಮದಾಸೆಗೆ ಒಕ್ಕಲಿಗಂಗೆ ದತ್ತ ಪುತ್ರನಾಗೆಂದು ಹೇಳಿತ್ತೆ ವೇದವು?
ಕೊರಡಿನ ಮೇಲೆ ಕುಳಿತು ತುತ್ತುಗದ್ಯಾಣವನುಂಡು
ಸೀಮೆಯ ಹೊರವಡಿಸಿಕೊಳ್ಳೆಂದು ಹೇಳಿತ್ತೆ ವೇದವು?
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಹೊನ್ನ ಕಪಿಲೆಯ ಕೊಂದು ನರಕಕ್ಕೆ ಇಳಿಯ ಹೇಳಿತ್ತೇ ವೇದವು?
ಅಹಿಂಸಾಪರಮೋಧರ್ಮ: ಎಂದೋದಿ ಅಸುರ ಭೋಜನಕ್ಕಂಗವಿಸಿ,
ಕರ್ಮವಮಾಡಿ ಹೋತನ ಕೊಂದು ತಿಂಬುದು ಪಾತಕವಲ್ಲದೆ ಧರ್ಮವೆ?
ಪರಮೋಧರ್ಮ ಹಿರಣ್ಯಗರ್ಭವೆಂದು ಹೊನ್ನ ಕಪಿಲೆಯಂ ಮಾಡಿ ಕಡಿದು
ಹಂಚಿಕೊಂಬುದು ಚಂಡಾಲವಲ್ಲವೆ ಸಹಜವೆ?
ಹೊಲೆಯನಂತೆ ಹುಲುವೆಣನಸುಟ್ಟು ಹೊರಸಿನಮೇಲೆ ಹತವಾದರು.
ಕಾಳಗ ಹತ್ತಿದ ಪಶುವಿನ ಕಂಥೆಯ ಕಾನನದಲ್ಲಿ ಖೂಳ ಭೋಜನವನುಂಡು
ಲೋಕೋಪಚಾರಕ್ಕೆ ಒಳಗಾಗಿ ಪಾಪ ಪುಣ್ಯವ ಮಾಡಿ ಸಲ್ಲದೆ
ಹೋದರು ಶಿವನಲ್ಲಿಗೆ.
ಇದು ಕಾರಣ ಕೂಡಲಸಂಗಮದೇವರು ಶಿದಭಕ್ತಿಗೊಲಿದ
ಕಾರಣ ಕಂಚಿಯ ಈರೇಳು ಕೇರಿಯ ಕೈಲಾಸಕ್ಕೊಯ್ದನು.          ||೮೫||

೩೭೫

ಕೃತಯುಗದಲ್ಲಿ ದೇವಾದಿ ದೇವರ್ಕಳಿಗೆ ಯುದ್ಧವಾಯಿತ್ತು.
ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು.
ದ್ವಾಪರದಲ್ಲಿ ಮೌರ್ಯ ಕದಂಬರಿಗೆ ಯುದ್ಧವಾಯಿತ್ತು.
ಕಲಿಯುಗದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು.
ಇಂತು ಅನಂತ ಯುಗಂಗಳಲ್ಲಿ ಅನಂತರಿಗೆ ಯುದ್ಧವಾಗುತ್ತಿಹ ಕಾರಣ
ಕೂಡಲ ಚೆನ್ನಸಂಗಯ್ಯಾ, ನಿಮ್ಮ ಶರಣರಿಗೆಯೂ ನಮಗೆಯೂ
ಅಂದು ಇಂದು, ಮುಂದು ಯುದ್ಧವಿಲ್ಲಾ.          ||೮೬||

೩೭೬

ಸರ್ವವು ಶಿವನಿಂದ ಉದ್ಭವಿಸಿದವೆಂದಡೆ,
ಉದ್ಭವಿಸುವಂತಾವೆಲ್ಲವು ಶಿವನೆ?
ಸಕಲ ಬೀಜವ ಬಿತ್ತುವ ಒಕ್ಕಲಿಗನೆಂದಡೆ,
ಆ ಬೆಳೆ ತಾನೊಕ್ಕಲಿಗನೆ?
ಮಡಕೆಯ ಕುಂಬಾರ ಮಾಡುವನೆಂದಡೆ,
ಆ ಮಡಕೆ ತಾ ಕುಂಬಾರನೆ?
ಕಬ್ಬುನವ ಕಮ್ಮಾರ ಮಾಡುವನೆಂದಡೆ,
ಆ ಕಬ್ಬುನ ತಾ ಕಮ್ಮಾರನೆ?
ಈ ಪರಿಯಲ್ಲಿ ಸಚರಾಚರವ ಮಾಡುವವ ಶಿವನೆಂದಡೆ,
ಆ ಸಚರಾಚರವು ಶಿವನೆ?
ಹಾಗಾದಡೆ ಅಷ್ಟಾದಶವರ್ಣಂಗಳೇಕಾದವು?
ಚೌರಾಸಿ ಲಕ್ಷ ಜೀವಂಗಳೇಕಾದವು?
ಉತ್ತಮ ಮಧ್ಯಮ ಕನಿಷ್ಠಗಳೇಕಾದವು?
ಪುಣ್ಯ ಪಾಪ ಸ್ವರ್ಗ ನರಕಂಗಳೇಕಾದವು?
ಭವಿಭಕ್ತರೆಂದೇಕಾದವು?
ಇದು ಕಾರಣ ಸದಾಚಾರ ಸದ್ಭಕ್ತಿಯಲ್ಲಿಪ್ಪನಲ್ಲದೆ ಸರ್ವವು ಶಿವನೆಂದರೆ
ಅಘೋರ ನರಕ ತಪ್ಪದು ಕೂಡಲಚೆನ್ನಸಂಗಯ್ಯಾ.       ||೮೭||

ಇಂತೆಂಬ ಶರಣಸತಿ ಲಿಂಗಪತಿಗಳಿಬ್ಬರನರಿಯದೆ, ಷಡುಸಮಯ ಮೊದಲಾದ ಹದಿನೆಂಟು ಸಮಯದವರುಗಳು ಷಡುದೇವತೆಗಳನು ವೇದಶಾಸ್ತ್ರಾಗ ಮಂಗಳೆಂಬೀ ಮತವಿಡಿದು ಅಷ್ಟಾಂಗಯೋಗಂಗಳು ಮುಖ್ಯವಾದ ಮಂತ್ರಜ್ಞಾನ ಲಯ ಹಟಯೋಗಂಗಳಿಂದಲು ಅಲ್ಪಜ್ಞಾನ, ಮಧ್ಯಮಜ್ಞಾನ, ಅತೀತ ಜ್ಞಾನ, ಅಜ್ಞಾನ ನಷ್ಟಜ್ಞಾನಂಗಳಿಂದಲು ಇಂತಿವೆಲ್ಲರಿಂದರಿಸಿ ಕಂಡಡೆಯು ಮುಕ್ತರಲ್ಲದವರು. ಅದೇಕೆಂದಡೆ: ಈ ಷಡುಸಾದಾಖ್ಯರು ಆ ಸ್ವಯಂಜ್ಯೋತಿ ಶರಣನ ಲೀಲೆಯಹಂಕಾರವೆಂಬಾನೆಯ ಉದರದಲ್ಲಿ ಹುಟ್ಟಿದ ಕಾರಣ ಕಾಮಮಾಯೆಗಳ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಜನಿಸಿ ಸಕಳಲೋಕಂಗಳೆಂಬ ಬೀದಿಗಳಲ್ಲಿ ಬರುತ್ತ ನಾನು ನೀನೆಂಬ ಮದ ಮತ್ಸರಂಗಳಿಗೆ ಸಿಕ್ಕಿ ಪ್ರಳಯಕ್ಕೊಳಗಾದರಾಗಿ ಇವರ ಕಂಡವರಿಗೆ ನಿರ್ಮಳವಿಲ್ಲ. ಮತ್ತಾವ ವಸ್ತುವನಾವ ಯೋಗಂಗಳಿಂದ ಕಂಡಡೆ, ಮುಕ್ತರೂಪಾಗಿ ನಿರ್ಮಲರಹರು ಎಂದಡೆ, ಆರಾದಿಂದತ್ತಮಾ ಸ್ವಯಂಜ್ಯೋತಿಯನು ವೀರಶೈವಾಚಾರ ಭಕ್ತಿ ಮುಂತಾಗಿ ಶಿವಯೋಗಸಗುಣ ನಿರ್ಗುಣಯೋಗಂಗಳಿಂದಲು ಮೂಲಪ್ರಣಮ ಮಂತ್ರಂಗಳ ಷಡುಸ್ಥಲಂಗಳಿಂದಲು ಕಂಡಡೆ ಮುಕ್ತರೂಪಾಗಿ ನಿರ್ಮಲರಹರು. ಇಂತೆಂಬ ಪುರಾತನರಗಣಿತವಚನಂಗಳಿಗೆ ಸಾಕ್ಷಿ.

೩೭೭

ಅಷ್ಟಾಂಗಯೋಗದಲ್ಲಿ ಯಮ ನಿಯಮ ಆಸನ ಪ್ರಾಣಾಯಾಮ
ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂದು ಎರಡು ಯೋಗವುಂಟು.
ಅಲ್ಲಿ ಅಳಿದು ಕೂಡುವದೊಂದು ಯೋಗ,
ಅಳಿಯದೆ ಕೂಡುವದೊಂದು ಯೋಗ,
ಈ ಎರಡು ಯೋಗದಿಂದ ಅಧಿಕಯೋಗವಱೆದು ಕಾಣಾ, ಗುಹೇಶ್ವರ. ||೮೮||

೩೭೮

ಮಂತ್ರ ಯೋಗ ಲಯಯೋಗ ಹಠಯೋಗ ಜ್ಞಾನಯೋಗ,
ಎಂಬ ನಾಲ್ಕು ಯೋಗವನರಿದು ಮರದು, ಭಕ್ತಿಯೋಗದ ಮೇಲೆ ನಿಂದು
ರಾಜಯೋಗದ ಮೇಲೆ ನಡವ ನುಡಿವ ಕಾಣಿರೋ;
ಅಷ್ಟಾಂಗಯೋಗವನು ಮೀರಿದ ಮಹಾಲಿಂಗೈಕ್ಯದ ನಿಲವನು
ಅನುಮಾನಿಗಳೆತ್ತಬಲ್ಲರು ಕೂಡಲಚೆನ್ನಸಂಗಯ್ಯಾ.      ||೮೯||

೩೭೯

*ಆಸನ ಬಂಧನರು ಸುಮ್ಮನೆ ಬೂದಿಯ ಧರಿಸಿ
ಸ್ವರವ ಹಿಡಿದು ನೋಡಿ ಹುಡಿಕಿದರೆ
ಉಸುರು ಉಸಿಕನೆ ಹೋಗಿ ಸತ್ತವರು ಅನೇಕರೊಳರು.
ಕಾಲ ಕಾಮರು ಮಾಯಾ ಜಾಲದ ಪದಾರ್ಥಂಗಳು
ತನ್ನ ಮುಟ್ಟಿರಲು
ಅವೆಲ್ಲವನು ಜಂಗಮ ಮುಖದಿಂದ
ತನ್ನ ಎಚ್ಚ ರೋಪಣಂಗೊಂಡು
ಮನವ ಲಿಂಗಕ್ಕೆ ಸಲಿಸಿ ಮುಕ್ತರಾಗಿ
ಮನನಿವಾಸದೊಳು ನೆಲೆಗೊಳಿಸಿರೆ ಗುಹೇಶ್ವರ ಲಿಂಗವನು       ||೯೦||


[1] ಸಂಬಂಧ (ಬ)

[2] ಸಂಬಂಧ (ಬ)

[3] ವಲ್ಲಿ (ಬ)

[4] ದಾತಕೇಳಿ (ಬ)

[5] ದಾತಕೇಳಿ (ಬ)

[6] ವಾದಿಗಳಾಗಿ (ಬ)

[7] ವಾದಿಗಳಾಗಿ (ಬ)

[8] ಹ (ಬ)

[9] ರ್ವಾ (ಬ)

[10] ರ್ವಾ (ಬ)

[11] ಳೊಳಗೆ ಬಿದ್ದರು ಹಲಬರು (ಬ)

[12] ಳೊಳಗೆ ಬಿದ್ದರು ಹಲಬರು (ಬ)

[13] ತ್ತೆಂದು ಬಾಗಿಲನಿಕ್ಕಲಿಲ್ಲ (ಬ)

[14] ತ್ತೆಂದು ಬಾಗಿಲನಿಕ್ಕಲಿಲ್ಲ (ಬ)

[15] ಕಂಬಿ (ಅ)

[16] ದಾಡಿ (ಅ)

[17] ದಾಡಿ (ಅ)

[18] ನೆ (ಅ)

[19] ನೆ (ಅ)

[20] + ಒಂದು (ಬ)

[21] x (ಬ)

[22] x (ಬ)

[23] ತು (ಬ)

[24] ರಿಗೆ (ಅ)

[25] ರಿಗೆ (ಅ)

[26] ದೇವರಾ (೨೫೭)

[27] ದೇವರಾ (೨೫೭)

* ಆಸನ ಬಂಧನರು ಸುಮ್ಮನೆ ಇರರು,
ಭಸ್ಮವ ಪೂಸಿಸ್ವರಹಿಡಿದವರು ಸಾಯದಿಪ್ಪರೆ?
ಕಾಲಕರ್ಮ ಪ್ರಳಯಂಗಳಾಗಿ ಸಾಯದಿಪ್ಪರೆ?
ಸತ್ಯವನೇ ಮರದು, ಅಸತ್ಯವನೆಹಿಡಿದು
ಸತ್ತುಹೋದರು ಗುಹೇಶ್ವರ (ಬ)