೩೪೩

ಅಮೃತ ಮಥನದಲ್ಲಿ ಅಜ ಹರಿ,
ಸುರಪ, ವಾಲಿ, ಸುಗ್ರೀವರಳಿದರು.
ಕಾಶಿಯಲ್ಲಿ ಬ್ರಹ್ಮ ವಿಷ್ಣುಗಳಳಿದರು.
ಕೇತಾರದಲ್ಲಿ ಪಾಂಡವರಳಿದರು.
ಕಲ್ಯಾಣದಲ್ಲಿ ಪ್ಯಾಳನಳಿದನು.
ಶ್ರೀಶೈಲದಲ್ಲಿ ಹಿರಣ್ಯ ಧನುಜ ನಾಗಾರ್ಜುನರಳಿದರು.
ಪಾತಾಳ ಲಂಕೆಯಲ್ಲಿ ಮಹಿರಾವಣನಳಿದನು.
ಲವಣ ಲಂಕೆಯಲ್ಲಿ ಲಕ್ಷ್ಮಿಗಳುಪಿದವನಳಿದನು.
ದಶರಥನ ತೋಹಿನಲ್ಲಿ ಪುಂಡು ಬಲಚೌಡನಳಿದನು.
ಭೀಮನ ಕೈಯಲ್ಲಿ ಕೀಚಕನಳಿದನು.
ಮುನಿ ಕರ್ಣಿಕೆಯ ಶಿರವ ಹರಿದು,
ಸುರಪನಜಹರಿಗಳು ಶಾಪಹತರಾದರು.
ಋಷಿಯ ಸತಿಗಳುಪಿ ಸುರಪ ಮೈಯನಳಿದ.
ಭೀಷ್ಮರು, ಕುಂಭಕರ್ಣ, ದ್ರೋಣ, ಜಾಂಬರು ನಿದ್ರೆಯಲ್ಲಿ ಅಳಿದರು.
ವ್ಯಾಧರ ಬಾಣದಲ್ಲಿ ಬಿದ್ದರು ವಿಷ್ಣು ಪಾಂಡ್ಯರಾಯರು.
ವಿಷದ ಪಣ್ಣಿಂದಳಿದ ಪರೀಕ್ಷಿತರಾಯನು.
ಪರಶುರಾಮನ ಕೈಯಲಿ
ಜಮದಗ್ನಿ ಮುನಿಯ ವಧೆಯಿಂದ ಕಾರ್ತಿಕರಳಿದರು.
ವೃಷಭನ ವಧೆಯಿಂದ ವೀತರಾಜನಳಿದ.
ಕುರುಕ್ಷೇತ್ರದಲ್ಲಿ ಕೌರವರಳಿದರು.
ಮಾಸನೂರಲ್ಲಿ ಸಿದ್ಧರಳಿದರು.
ಕೊಲ್ಲಾಪುರದಲ್ಲಿ ಹರಿ, ಅಜ, ಇಂದ್ರ,
ದಿಕ್ಪಾಲಕರು ತೃಣಕೆ ಲಘುವಾದರು.
ಹೋಮ, ಕಾಮ,

[1] ತ್ರಿಣೇತ್ರ ಪಂಚಮುಖರೆಲ್ಲಾ
ಮಹಾ ಪ್ರಳಯದಲ್ಲಿ ಅಳಿದರು.
ಇನ್ನು ಬಿಜ್ಜಳರಾಯನಳಿವಿನುಳುವಿನ
ಹವಣೇನು ಕಲಿದೇವರ ದೇವ.         ||೫೪||

೩೪೪

ಶಿವ ಶಿವ ಬೇಡಿಕೊಳ್ಳಿರೆ!
ಅಮೃತ ಮಥನದಲ್ಲಿ ಧೈ‌ನ್ಯವ ಮಾಡಿದವರ
ಉಳುಹಿದಡೆ ದೇವನ ಬೇಡಿಕೊಳ್ಳಿರೆ!
ದಕ್ಷಾಧ್ವರದಲ್ಲಿ ದೈನ್ಯವ ಮಾಡಿದವರನುಳುಹಿದ ದೇವನ
ಶಿವ ಶಿವ ಎನುತ ಬೇಡಿಕೊಳ್ಳಿರೆ!
ಅಜ ಹರಿಗಳ ಅವತಾರಂಗಳ ಸಂಹಾರವ ಮಾಡದ ದೇವನ
ಶಿವ ಶಿವೆನುತ ಬೇಡಿಕೊಳ್ಳಿರೆ!
ಅಖಿಳ ಬ್ರಹ್ಮಾಂಡಂಗಳ [2]ಹೆತ್ತ ತಂದೆ[3] ನಮ್ಮ ಮಹಾದಾನಿ ಸೊಡ್ಡಳದೇವನು.           ||೫೫||

೩೪೫

ಕಲ್ಯಾಣವರಿಯೆ, ಕಟಕವರಿಯೆ
ಬೇಂಟೆಯಾಡುತ್ತಿರ್ದೆ, ಎನ್ನ ಕೈಯಲ್ಲಿ[4] ನೋಡಿಭೋ,
ಕಲಿವೀರ ಸುಭಟರು ಎನ್ನ ಕೈಯಲ್ಲಿ[5] ನೋಡಿಭೋ ನೋಡಿಭೋ,
ಅರು ಹಿರಿಯರು ಕಾದಿ ಗೆಲಿದು ಗುಹೇಶ್ವರ ಲಿಂಗದಲ್ಲಿಗೆ
ತಲೆಯವರಿಯ ಬಂದೆ ಎನ್ನ ಕೈಯ್ಯ ನೋಡಿಭೋ
ಕಲಿವೀರಸುಭಟರು.          ||೫೬||

ಅಷ್ಟರಿಂದಂ ಮೇಲೆ ವಿಶ್ವವಸು ಎಂಬ ಯುಗ ಹುಟ್ಟಿ ಐವತ್ತೈದು ಕೋಟಿಯು, ಐದು ಲಕ್ಷವು, ಐದು ಸಾವಿರ ವರುಷವು ವರ್ತಿಸುತ್ತಿದ್ದಿತ್ತು. ಈ ಒಂದು ಯುಗದ ಅರಸಿನ ಹೆಸರು ಪಶುಪತಿರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದ ಗದ್ದುಗೆಯ ಮೇಲೆ ಕುಳಿತು ಪಶುಪತಿಯೆಂಬ ದೇವರ ಪೂಜಿಸುತ್ತ ಸುಖ ಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು, ಆರೋಗಿಸಿ ತ್ರಿವಿಧ ದಾಸೋಹವಂ ಕೆಲ ವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣ ನಿಚ್ಚಣಿಗೆಯ ಮೇಲೆ ಪ್ರಸಾದ ಮಂಟಪವೆಂಬ ವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಅಗ್ನಿ ಬದ್ಧಕನೆಂಬ ವಾದಿ ಪುಟ್ಟಿ ಅಗ್ನಿ ಮದವೆತ್ತಿದಲ್ಲಿ ಅಗ್ನಿಯೆ ದೈವವೆಂದು ಪ್ರತಿಷ್ಠೆಯಂ ಮಾಡಿ ವಾದಿಸಿ

ಕುಲಂಗಳ ಹಿಡಿವುತ್ತ ಬಿಡುತ್ತ ತಿರುಗುತ್ತಿಹಲ್ಲಿ ಗೋಳಕ, ಮಹೀತಳ, ಮರೀಚ ರುದ್ರ ಹಾವುಗೆಗಳೆಂಬ ಮಹಾ ಪುರುಷರು ಮೊದಲಾದ ಮನು ಮುನಿ ದೇವ ದಾನ ಮಾನವರೆಲ್ಲರು ತಮ್ಮ ತಮ್ಮ ಶ್ರುತಿಗಳಿಂದ ನಾ ಬಲ್ಲೆ ತಾ ಬಲ್ಲೆನೆನುತ್ತ ಜಡರಾಗಿ ತಮ್ಮ ತಮ್ಮ ಸುಖ ದುಃಖಗಳ ತಾವರಿಯದ ಕಾಲದೊಳು ರಾವಣನೆಂಬ ಸುರನೊಬ್ಬನು ರಕ್ಕಸರ ಪಡೆಗಳ ನೆರಹಿ ಬ್ರಹ್ಮ ವಿಷ್ಣು ದೇವರ್ಕಳು ರವಿ ಕಾಮ ಕಾಲ ದಕ್ಷ ಋಷಿಯರು ಇಂತಿವರೆಲ್ಲರ ಹಿಡಿದೆಳತಂದು ಲೆಂಕೆಯ ಕೂಡಿ ತನ್ನ ಮಂಚದ ಕಾಲುಗಳೊಳಗೆ ತಮ್ಮೆಲ್ಲರ ಡಾವಣಿಯ ಪಶುಗಳ ಗೊತ್ತುಗಳಲ್ಲಿ ಕಟ್ಟುವಂತೆ ಕಟ್ಟಿ ತಮ್ಮೆಲ್ಲರಿಂದ ಶಿವನೆನಿಸಿಕೊಂಬ ಜಡರುದ್ರನ ಭಸಿತವಿಟ್ಟು ಹೋಗುತ್ತ ಬರುತ್ತಿಪ್ಪಂತೆ ಮಾಡಿಕೊಂಡು ಮತ್ತೆಯೂ ಸುಮ್ಮನಿರದೆ ಬಿಳಿಯ ಬೆಟ್ಟ ಸಹಿತ ತಂದೆಹೆನೆಂದು ಹೋಗಿ ಅದರಡಿಯಲ್ಲಿ ಹೊಕ್ಕು ಎತ್ತಲಾಕ್ಷಣವದು ಕಂಪನವಾಗಲು ಅದರ ಮೇಲಿರ್ದ ಈಶ್ವರನೆಂಬ ಅಧಿದೇವತೆ ಕಂಡು ಪ್ರಳಯ ಬಂದಿತೆಂದು ಅಂಜಿ ತನ್ನ ಪಡೆ ಸಮೇತವಾಗಿಳಿದು ದ್ರವ್ಯದ ಕಳ್ಳಸಾರಿರ್ದಲ್ಲಿ ಅತ್ತ ಬೆಟ್ಟವ ಘಾಟಿಸುತ್ತಿರಲು ಆ ಸಮಯದೊಳು ಮರುಳು ಕಂಕಣ ಮೇಲಿರ್ದ ಡಿಂಡಿಲಾಂಗುಲನೆಂಬ ವೃಷಭ ಗಣೇಶ್ವರನೊಬ್ಬ ಲಂಘಿಸಿ ರಜತಾದ್ರಿಯಲ್ಲಿ ಮೇಲೆ ನಿಂದು ಒತ್ತಿದಡಸುರ ಹಿಪ್ಪಿಯಾಗಿ ತೊಲಗಿ ಅವ ತ್ರಾಹಿಯೆಂದು ವೀಣೆಯಂ ನುಡಿಸಲಾಕ್ಷಣ ಶರಣ ಅಂಜಬೇಡ ಹೋಗು ನಿನ್ನ ಮಂಚದಡಿಯೊಳಗಿರ್ದವರ ಹೊರವಡಿಸಿ ಕಳುಹು ಎಂದಡೆ ಅಟ್ಟಿ ಡಿಂಡಿಲಾಂಗುಲ ತಾನಿಳಿದು ಬಂದು ಮೊದಲಿದ್ದಾತನ ಬೆಳ್ಳಿಯ ಬೆಟ್ಟ[6]ದಲ್ಲಿಂಗೆ[7] ಕಳುಹಿ ತಾ ಮಹಾ ಮೇರು ಮಂದಿರಕ್ಕೆ ಬಿಜಯ ಮಾಡಿರುತ್ತಿದ್ದನು. ಇಂತೆಂಬ ಪುರಾತನರಗಣಿತ ವಚನರಸಂಗಳಿಗೆ ಸಾಕ್ಷಿ.

೩೪೬

ಕಾಶಿಯಲ್ಲಿಪ್ಪ ಈಶನನರಿಯದ ಮೂವರ
ಕೊರಳು ಕೈಗಳು ಮುರಿದು ಬಿದ್ದವು.
ಕೈಲಾಸದಲ್ಲಿಪ್ಪ ಈಶನನರಿಯದ ಮೂವರ
ದೇಹ ಕಾಲು ಕೈಗಳು ಮುರಿದು ಬಿದ್ದವು.
ಶ್ರೀಶೈಲದಲ್ಲಿಪ್ಪ ಈಶನನರಿಯದ ಮೂವರ
ದೇಹ, ಕರುಳು, ತೊಗಲುಗಳು ಉದುರಿ ಬಿದ್ದವು.
ಸಮುದ್ರದಲ್ಲಿಪ್ಪ ಈಶನನರಿಯದಿಬ್ಬರು
ಒಬ್ಬರ ಹೊಟ್ಟೆಯ ಒಬ್ಬರು ಹೊಕ್ಕು ಬಿದ್ದರು.
ಇಂತೀ ದೇವ ದಾನವ ಮಾನವರು ಮೊದಲಾದ ಸಕಲರೂ
ಮಹಾದಾನಿ ಸೊಡ್ಡಳನನರಿಯದೆ ತರ್ಕಿಸಿ ಕೆಟ್ಟು ಹೋದರು.      ||೫೭||

೩೪೭

ನಾದಪ್ರಿಯ ಶಿವನೆಂಬರು,
ನಾದಪ್ರಿಯಿ ಶಿವನಲ್ಲವಯ್ಯ,
ವೇದಪ್ರಿಯ ಶಿವನೆಂಬರು,
ವೇದಪ್ರಿಯ ಶಿವನಲ್ಲವಯ್ಯ,
ಅಭಿಷೇಕಪ್ರಿಯ ಶಿವನೆಂಬರು,
ಅಭಿಷೇಕಪ್ರಿಯ ಶಿವನಲ್ಲವಯ್ಯ.
ಅದೇನು ಕಾರಣವೆಂದಡೆ,
ನಾದವ ಮಾಡಿದ ರಾವಣಂಗೆ[8] ಅರೆ ಆಯುಷ್ಯವಾಯಿತ್ತು.
ವೇದವನೋದಿದ ಬ್ರಹ್ಮಂಗೆ[9] ಶಿರಸ್ಸು ಹೋಯಿತ್ತು.
ಅಭಿಷೇಕ ಮಾಡಿದ ಋಷಿಯರಿಗೆ[10] ಪ್ರಳಯವಾಯಿತ್ತು.
ಇದು ಕಾರಣ ನಾದಪ್ರಿಯ ಶಿವನಲ್ಲ, ವೇದಪ್ರಿಯ ಶಿವನಲ್ಲ,
ಅಭಿಷೇಕಪ್ರಿಯ ಶಿವನಲ್ಲ, ಭಕ್ತಿಪ್ರಿಯ ನಮ್ಮ
ಕೂಡಲ ಸಂಗಮದೇವ.     ||೫೮||

೩೪೮

ಎಲ್ಲಾ ಎಲ್ಲವನರಿಯಬಹುದು,
ಸಾವನರಿಯಬಾರದು.
ಸಕಲ ವಿದ್ಯಕಳಾಪ್ರೌಢಿಯನರಿಯಬಹುದು,
ಸಾವನರಿಯಬಾರದು.
ಶಿವ ಶಿವಾ ಮಹಾಪುರುಷರಿಗೆಯೂ ಸಾವುಂಟು.
ಬ್ರಹ್ಮ, ವಿಷ್ಣು, ರುದ್ರರಿಗೆಯೂ ಸಾವುಂಟು.
ಮನು ಮುನಿ ದೇವ ದಾನವ ಮಾನವರು[11]ದಿಕ್ಪಾಲಕರು ವಿಕಾಲ ಕಾಮಧಗ್ಧಾದಿಗಳಿಗೆಯೂ[12] ಸಾವುಂಟು.
ಈ ಸಾವನರಿದು ಲೋಕದ ಪ್ರಪಂಚ ಮರದು
ಲಿಂಗದಲ್ಲಿ ನೆನಹು ನೆಲೆಗೊಂಡ ಮಹಾಮಹಿಮಂಗೆ ಮರಣವಿಲ್ಲ.
ಈ ಸಾವನು ಅರಿಯದೆ ಲೋಕ ಪ್ರಪಂಚ ಮರೆಯದೆ
ಅರಿದೆವೆಂಬ ಅರೆ ಮರುಳುಗಳ ಅರಿವು
ಎಮ್ಮ ಗುಹೇಶ್ವರ ಲಿಂಗದಲ್ಲಿ
ಮಾನ ಹಾನಿ ಕಾಣಾ ಸಂಗನಬಸವಣ್ಣಾ.        ||೫೯||

ಅಷ್ಟರಿಂದಂ ಮೇಲೆ ಅಲಂಕೃತನೆಂಬ ಯುಗ ಹುಟ್ಟಿ ನಾಲ್ವತ್ತೈದು ಕೋಟಿಯೂ ಐದು ಲಕ್ಷವು ಐದು ಸಾವಿರ ವರುಷ ವರ್ತಿಸುತ್ತಿದ್ದಿತ್ತು. ಈ ಒಂದು ಯುಗದರಸಿನ ಹೆಸರು ಶ್ರೀ ವೀರವಲ್ಲಭರಾಯನೆಂದು. ಈ ರಾಯನು ಶ್ರೀ ಕಲ್ಯಾಣದ ಗದ್ದುಗೆಯ ಮೇಲೆ ಕುಳಿತು ರುದ್ರೇಶ್ವರನೆಂಬ ದೇವರ ಪೂಜಿಸುತ್ತ ಸುಖ ಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯು ಮರ್ತ್ಯ ಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಾರೋಗಿಸಿ ತ್ರಿವಿಧ ದಾಸೋಹವ ಕೆಲವರುಷ ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣ ನಿಚ್ಚಣಿಗೆಯ ಮೇಲೆ ಪ್ರಸಾದ ಮಂಟಪವೆಂಬ ವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಅಪ್ಪು ಬದ್ಧಕನೆಂಬ ವಾದಿ ಅಪ್ಪು ಮದವೆತ್ತಿದಲ್ಲಿ ಅಪ್ಪುವೆ ದೈವವೆಂದು ಪ್ರತಿಷ್ಠೆಯಂ ಮಾಡಿ ಕುಲಂಗಳ ಹಿಡಿವುತ್ತ ಬಿಡುತ್ತ ತಿರುಗುತ್ತಿಹಲ್ಲಿ ಮತ್ತೆ ಆ ಯುಗದಲ್ಲಿ ಹಿಮಾಚಲದಲ್ಲಿರ್ದ ಗಿರಿರಾಜನೆಂಬ ಋಷಿಯ ಬಸುರೊಳಗೆ ದಕ್ಷಾಧ್ವರದ ಕೊಂಡದಲ್ಲಿ ಬಿದ್ದು ಸತ್ತ ಜಡರುದ್ರನ ಶಕ್ತಿ ಪಾರ್ವತಿ ಹುಟ್ಟಿ ಗಿರಿಜೆಯೆಂಬ ನಾಮವ ಪಡೆದ ಅವಳ ಜಡರುದ್ರಂಗೆ ನಿಷ್ಕಲರು ಸಕಲರು ಪ್ರಳಯಕಲರು ವಿಜ್ಞಾನಕಲರು ಈ ಚತುರ್ವಿಧ ತಂಡದವರು ಸಹಿತ ಪಶುನಂದಿಯನೇರಿಕೊಂಡು ಬಂದವಳ ಮದುವೆಯಾಗಿ ತಮ್ಮ ಯೋನಿಜ ಕೈಲಾಸಂಗಳಿಗೆ ಹೋಗಿ ಇರುತ್ತಿರ್ದರು. ಮತ್ತೆ ಮರ್ತ್ಯಲೋಕದೊಳಗಣ ಅರ್ಜುನರಾಯನೆಂಬ ಶಿವಭಕ್ತನ ಶಿಶುಗಳ ಚೆನ್ನಕ್ಕ, ಮಲ್ಲಕ್ಕ, ಅರ್ಜುನಿಯೆಂಬವರಿಗೆ ಜ್ಞಾನ ವೈರಾಗ್ಯಂಗಳು ತೋರಿ ಶ್ರೀಶೈಲನೇರಿ ನಿರ್ಜನವಾಗಿರ್ದ ಕಾಡುಗಲ್ಲ ಮೇಲೆ ಪರ ಶಿವನೆಮಬ ಪುರುಷನಾಗಬೇಕೆಂದು, ಉಗ್ರ ತಪವನೊಡರ್ಚಿ ಕೆಲ ಸಂವತ್ಸರವ ಕಳಿದ ಬಳಿಕ ಕಲ್ಯಾಣದಿಂ ಬಸವೇಶ್ವರನು ಬಿಜಯಂಗೈದು ಗುರುರೂಪನಾಗಿ ಕೋಡುಗಲ್ಲ ಮೇಲೆ ಮೂರ್ತಿಮಾಡಿದಡೆ ಆ ಕರ್ಣಿಕೆಯರು ಪರಶಿವನ ನಿಲವ ಕಂಡು ಸುಮ್ಮನೆ ಕುಳ್ಳಿರಬಾರದೆಂದು ಎದ್ದು ವಂದಿಸಲವರ ಹರಸಿ ಇಲ್ಲಿ ಯಾಕೆ ಅಂಗ ಲಿಂಗಗಳ ಬಳಲಿಸಿಕೊಂಡಿದ್ದಿಹಿರಿ ಎಂದು ಗುರು ಕೇಳಿದಡಾ ಶಿಶುಗಳು ಪರ ಶಿವನೆಂಬ ಗಂಡನಂ ಬಯಸಿದ್ದೆಹೆವೆಂದು ಬಿನ್ನಹಂ ಮಾಡಲಾಗುರು ಈ ತನುದಂಡನೆಯ ತಪಕ್ಕೆ ಆ ಮಹಾಘನಲಿಂಗವು ಸಿಕ್ಕೂದೆ? ಎನಲಿವರು ಮತ್ತೆ ಹೇಂಗೆ ಸಿಕ್ಕೂದು? ನಿರೂಪವ ಕೊಡು ಎಂದು ಕೇಳಿದಡಾ ಗುರು ನೀವು ಮೂವರು ಮರ್ತ್ಯಲೋಕಕ್ಕೆ ಇಳಿದು ಹೋಗಿ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟುಕೊಂಬ ಭಕ್ತ ಮಾಹೇಶ್ವರರ ನೆರಮನೆಯೊಳಗೆ ನಿಂದು ಅವರಂತೆ ಸತ್ಯ ಶುದ್ಧ ಕಾಯವಿಡಿದು ತ್ರಿವಿಧ ದಾಸೋಹವಂ ಮಾಡಿ ಜಂಗಮ ಪ್ರಸಾದವ ನಿಮ್ಮ ಲಿಂಗಂಗಳಿಗೆ ಕೊಟ್ಟಾರೋಗಿಸಿ ವಿಶ್ವಾಸ ಘಟಿಸಿದಡೆ ಆ ಮಹಾ ಪರಾಶಿವತತ್ವವು ಸಿಕ್ಕೂದೆಂದು ಗುರುಬೋಧಿಸಿದಡಂತಾಗಲಿ ಎನುತ  ನಮಸ್ಕರಿಸಿ ಹೊರ ಹೊಂಡುವ ಸಮಯದಲ್ಲಿ, ಆ ಗುರು ಇನ್ನೊಂದ ಹೇಳಿಹೆನು ಕೇಳಿರೆ.  ವೇದ ಶಾಸ್ತ್ರಾಗಮ ಪುರಾಣಂಗಳ ಹಿಂದೆ ಹತ್ತ ಬೇಡ. ಅದೇಕೆಂದಡೆ; ಅವು ಮಹಾಲಿಂಗದ ಪ್ರಮಾಣುವಲ್ಲ. ಆ ಮಹಾಲಿಂಗವೆ ಇವರ ಪ್ರಮಾಣುವಲ್ಲ. ಅದು ಕಾರಣವು ಎಂದಂತೆ ಸತ್ಯವನು, ಅಸತ್ಯವನು, ಶುದ್ಧವನು, ಅಶುದ್ಧವನು ನಡೆಸುವ ಶೈವ ಷಡುಸ್ಥಲದ ವೀರಮಾಹೇಶ್ವರರಿಗೆ ಬೇಕು. ಸತ್ಯವು ಅಸತ್ಯವು ಇಲ್ಲದ ಬಸವಾದಿ ಪ್ರಮಥರ ಷಡುಸ್ಥಲದ ವೀರ ಮಾಹೇಶ್ವರರಿಗೆ ಶರಣೆನ್ನಬೇಕು. ಅವರ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳ[13]ಬೇಕೆ[14]ಂದು ಗುರು ನಿರೂಪವ ಕೊಡಲಾ ಕರ್ಣಿಕೆಯರು ನಿಮ್ಮ ಸಡುಸ್ಥಲದ ವೀರ ಮಾಹೇಶ್ವರರ ಪ್ರಸಾದವ ಲಿಂಗಕ್ಕೆ ಕೊಟ್ಟಾರೋಗಿಸಬಹುದೆ ಸ್ವಾಮಿ ಎನುತ ಕೇಳಿದಡಾ ಗುರು ಮುನ್ನ ಯೋನಿಜ, ಕೈಲಾಸಂಗಳನಾಳುವ ಅಧಿದೇವತೆಗಳ ಕೆಳಗಣ ಸೂತ್ರಿಕನೆಂಬ ಗಣೇಶ್ವರನು ಸ್ವಯಂಜ್ಯೋತಿ ರುದ್ರನ ಓಲಗಕ್ಕೆ ತನ್ನ ಒಡೆಯರು ಹೋಗುವಾಗ, ಹೋಗಿದ್ದಲ್ಲಿ ಮರುಳು ಕಂಕಣದ ಮೇಲಿರ್ದ ಪ್ರಮಥರು ತಮ್ಮ ಷಡುಸ್ಥಲದನುಭಾವಂಗಳ ಮಾಡುತ್ತಿರುವಾಗ ಸೂತ್ರಿಕ ಕೆಳಗಿದ್ದು ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟುಕೊಳಬಹುದೆ ಎಂದವರ ಕೇಳಿದಡಾ ಸ್ವಯಂಜ್ಯೋತಿ ಶಿವನು ಎಲೆ ಸೂತ್ರಿಕ ನೀನು ಕೇಳಿದ ಸಂಶಯಕ್ಕೆ ನರಲೋಕಕ್ಕಿಳಿದು ಶುನಕ ಶೂಕರನಾಗಿ ಹುಟ್ಟಿ ಅಶುದ್ಧವ ಭುಂಜಿಸಿ ಕೆಲ ಕಾಲದ ಮೇಲೆ ನಮ್ಮ ಭಕ್ತರಿಂದ ಮುಕ್ತನಾಗಿ ಬಾ ಹೋಗೆನುತ ಶಾಪವ ಕೊಡಲವನು ಕೈಯಾಂತು ಹಿಡಿದು ಬಂದು ಶಿವನು ಹೇಳಿದಂತೆ ಹುಟ್ಟಿ ಭುಂಜಿಸಿ ಬಹಳ ಕಾಲವ ಕಳೆದು ನಮ್ಮ ಪುರಾತನರಂಗಳದ ಬಚ್ಚಲುದಕವ ಬಾಯಾರಿ ಬಂದು ನೆಕ್ಕಿಕೊಂಡಾಕ್ಷಣವೆ ಮುನ್ನಿನಾಕೃತಿಯಾಗಿ ನಮ್ಮ ಮಾಹೇಶ್ವರರ ಹಸ್ತದಲ್ಲಿ ನಮ್ಮ ವೀರಶೈವ ದೀಕ್ಷೆಯಂ ಪಡದು ತ್ರಿವಿಧ ದಾಸೋಹಂಗಳಂ ಮಾಡಿ ಮುಕ್ತನಾಗಿ ನಮ್ಮ ನಿಲವಿನ ಕೈಲಾಸಕ್ಕೆ ನಿನ್ನೆ ಹೋದನೀಪ್ರಸಂಗವ ಮುನ್ನನಂತ ಕಾಲಂಗಳದ ಮೇಲೊಬ್ಬ ಮೀಮಾಂಸಕನೆಂಬ ವಾದಿ ಕೇಳಿಹ. ಅವನಿಗೆಯೂ ಹಿಂಗೆಯೆ ಬೋಧಿಸಿ ಮುಕ್ತನ[15] ಮಾಡುವದುಂಟದು ನಿಮಿತ್ಯವಾಗಿ ನಮ್ಮ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಾರೋಗಿಸಬಹುದು. ಸಂಶಯ ಬೇಡ ಹೋಗಿ ಎಂದಡಾ ಹೆಣ್ಣುಗಳು ನಾವು ಕೇಳಿದ್ದು ತಪ್ಪುಂಟೆಂದು ಅಡ್ಡ ಬಿದ್ದು ಕಳುಹಿಸಿಕೊಂಡು ಇಳಿದು ಮತ್ತೆ ಮರ್ತ್ಯ ಲೋಕಕ್ಕೆ ಬಂದು ಆ ಗುರು ಹೇಳಿದಂತೆ ಕೆಲ ಸಂವತ್ಸರವು ಮಾಡಿದ ಬಳಿಕ ಆ ಮಹಾಪರತತ್ವವೆ ಪ್ರಸನ್ನವಾಗಿ ಶ್ರೀಶೈಲದ ಲಿಂಗದೊತ್ತಿಗೆ ಕೊಂಡು ಹೋಗಿ ನಿಂದಾಕ್ಷಣ ಬಸವಗುರು ಪ್ರಮಥರ ಮುಂದಿಟ್ಟು ಅಲ್ಲಿ ಆ ಕರ್ಣಿಕೆಯರು ಮೊದಲು ಬಯಸಿದಂತೆ ಉಪಮಾತೀತ ಲಿಂಗಕ್ಕೆ ಗೌರವ ಲಿಂಗಕ್ಕೆ ಕಳಂಕ ರಹಿತ ಲಿಂಗಕ್ಕೆ ಕಲ್ಯಾಣವಂ ಮಾಡಿ ತಾವೆಲ್ಲರೂ ಪ್ರಸಾದರಸವಜ್ರ ಕೈಲಾಸಕ್ಕೂ ಶ್ರೀಶೈಲಕ್ಕೂ ಭಿನ್ನವಿಲ್ಲದಿರುತ್ತಿರ್ದರು. ಇಂತೆಂಬ ಪುರಾತನರ ಗಣಿತ ವಚನ ರಸಂಗಳಿಗೆ ಸಾಕ್ಷಿ.

೩೪೯

ಅಸುರ ಮಾಲೆಗಳಿಲ್ಲ,
ತ್ರಿಶೂಲ ಡಮುರುಗಳಿಲ್ಲ,
ಸುರಮಾಲೆಗಳಿಲ್ಲ, ಒಡಗೂಡುವಡೆ ಕೈಕಾಲಿಲ್ಲ,
ಕೈಯಿಲ್ಲ ಕಪಾಲವಿಲ್ಲ; ಭಸಿತ ಭೂಷಣವಿಲ್ಲ,
ವೃಷಭವಾಹನನಲ್ಲ, ಋಷಿಯ [16]ಮಗಳ[17] ಕೂಡಿದಾತನಲ್ಲ,
ಎಸಗುವ ಸಂಸಾರಕ್ಕೆ ಹೆಸರಗೆಟ್ಟು ಹೋದಾತಂಗೆ
ಹೆಸರಾವುದು ಇಲ್ಲವೆಂದಾತ ನಮ್ಮಂಬಿಗರ ಚೌಡಯ್ಯ. ||೬೦||

೩೫೦

ಅನಂತಕಾಲ ತರು ಗಿರಿಗಳ ಹೊಕ್ಕು ತಪವಮಾಡುವುದರಿಂದ
ಒಂದು ದಿನ ಲಿಂಗಪೂಜೆ ಸಾಲದೆ?
ಅನಂತಕಾಲ ಲಿಂಗಪೂಜೆಯ ಮಾಡುವದರಿಂದ
ಒಂದು ದಿನ ಗುರು ಚರ[18]ಣದ[19] ಸೇವೆ ಸಾಲದೆ?
ಅನಂತಕಾಲ ಗುರು ಚರ೩ಣದ೪ ಸೇವೆಯ ಮಾಡುವುದರಿಂದ
ಒಂದು ದಿನ[20]ಲಿಂಗ[21] ಜಂಗಮಕ್ಕೆ ತೃಪ್ತಿಯ ಮಾಡುವದು ಸಾಲದೆ?
ಅನಂತಕಾಲ ಜಂಗಮಕ್ಕೆ ತೃಪ್ತಿಯ ಮಾಡುವದರಿಂದ
ಒಂದು ನಿಮಿಷ ಕೂಡಲಸಂಗಯ್ಯ ನಿಮ್ಮ
ಶರಣರನುಭಾವ ಸಾಲದೆ? ||೬೧||

೩೫೧

ಶಿವ ಶಿವ ಮೂರ್ತಿಗೆ ಸತ್ಯ ಶುದ್ಧ ಉಂಟೆಂಬಿರಿ.
ಸತ್ಯ ಶುದ್ಧವುಳ್ಳವಂಗೆ ಗುರುವಿಲ್ಲ.
ಸತ್ಯ ಶುದ್ಧವುಳ್ಳವಂಗೆ ಲಿಂಗವಿಲ್ಲ.
ಸತ್ಯ ಶುದ್ಧವುಳ್ಳವಂಗೆ ಜಂಗಮವಿಲ್ಲ.
ಸತ್ಯ ಶುದ್ಧವುಳ್ಳವಂಗೆ ಪಾದೋದಕವಿಲ್ಲ.
ಸತ್ಯ ಶುದ್ಧವುಳ್ಳವಂಗೆ ಪ್ರಸಾದವಿಲ್ಲ.
ಸತ್ಯ ಶುದ್ಧವುಳ್ಳವಂಗೆ ಗಣತ್ವವಿಲ್ಲ ಕೇಳಿರೆ.
ಸತ್ಯ ಶುದ್ಧವುಳ್ಳವಂಗೆ ದೇವರಿಗೆ ಉಪಚಾರವುಂಟು.
ಸತ್ಯ ಶುದ್ಧವುಳ್ಳವಂಗೆ ದೇವರಿಗೆ ಧ್ಯಾನ ಮೌನ ಅನುಷ್ಠಾನವುಂಟು.
ಸತ್ಯ ಶುದ್ಧವುಳ್ಳವಂಗೆ ದೇವರಿಗೆ ಗಣತ್ವವಿಲ್ಲ ಕೇಳಿರೆ.
ಸತ್ಯ ಶುದ್ಧವುಳ್ಳವಂಗೆ ದೇವರಿಗೆ ಉಪದೇಶ ಜಪ ತಪ
ಸಂಜೆ ಸಮಾಧಿ ಹೋಮ ನೇಮ ನಿತ್ಯ
ಅಷ್ಟವಿಧಾರ್ಚನೆ ಷೋಡಶೋಪಚಾರವುಂಟು.
ಸತ್ಯ ಶುದ್ಧವುಳ್ಳ ದೇವರಿಗೆ ಇವೆಲ್ಲಾ ಉಂಟಾದ ಕಾರಣ,
ಇಂತಪ್ಪ ಸತ್ಯ ಶುದ್ಧವುಳ್ಳ ದೇವರಿಗೆ ಶರಣೆನ್ನೆನು.
ಇಂತಪ್ಪ ಸತ್ಯ ಶುದ್ಧವುಳ್ಳ ಜಂಗಮಕ್ಕೆ ಶರಣೆನ್ನೆನು.
ಇಂತಪ್ಪ ಸತ್ಯ ಶುದ್ಧವುಳ್ಳ ಪಾದೋದಕ ಪ್ರಸಾದಕ್ಕೆ ಕೈಯಾನೆನು.
ಅದೇನು ಕಾರಣವೆಂದಡೆ:
ಇವರೆಲ್ಲರು ಷಡುಬ್ರಹ್ಮರುಗಳ ಮಕ್ಕಳುಗಳಲ್ಲದೆ,
ನಮ್ಮ ಷಡಸ್ಥಲದವರಲ್ಲವಾದ ಕಾರಣ.
ಅವರಿಗೆ ಭಕ್ತಿಯ ಮಾಡಿ ಕೈಯಾನಲಿಲ್ಲ.
ನಮ್ಮವಿರಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ.
ಆವ ಸಹಜವೂ ಇಲ್ಲದ ಲಿಂಗೈಕ್ಯರು ಕಾಣಾ ಕೂಡಲಸಂಗಮದೇವಾ ||೬೨||

೩೫೨

ವೇದ ವೇಧಿಸಲರಿಯದೆ ಅಭೇದ್ಯ ಲಿಂಗವೆಂದು ನಡನಡುಗಿತ್ತು,
ಶಾಸ್ತ್ರ ಸಾಧಿಸಲರಿಯದೆ ಅಸಾಧ್ಯಲಿಂಗವೆಂದು ಸಾರುತ್ತಿದೆ.
ತರ್ಕ ತರ್ಕಿಸಲರಿಯದೆ ಅತರ್ಕ್ಯಲಿಂಗವೆಂದು ಮನಗೊಳ್ಳವು.
ಆಗಮ ಅಗಮ್ಯಲಿಂಗವೆಂದು ಗಮಿಸಲರಿಯದಿರ್ದವು.
ನರರು ಸುರರು ಲಿಂಗದನುವ ಕಾಣದೆ ಬಿದ್ದರು.
ನಮ್ಮ ಕೂಡಲಸಂಗಮದೇವ
ಪ್ರಮಾಣುವ[22]ನ ಪ್ರಮಾಣುವ[23] ಶರಣರು ಬಲ್ಲರು.        ||೬೩||

೩೫೩

ಕಿಚ್ಚಿನ ದೇವರು, ಕೆಂಡದ ದೇವರು,
ಮಾರಿಯ ದೇವನು, ಮಸಣಿಯ ದೇವನು,
ತಿರುಕ ಗೊರವನೆಂದಲ್ಲಿ ಒಂದೊಂದನಾಡುತ್ತಿಪ್ಪರಯ್ಯಾ
ಈ ಮಾತುಗಳೊಂದು ಅಲ್ಲ.
ನಾ ನಿಮ್ಮ ಪೂಜಿಸಿ ನಷ್ಟಸಂತಾನವಾಗಿ
ಬಟ್ಟಬಯಲಲ್ಲಿ ಬಿದ್ದು ಕೆಟ್ಟೆನು ಕಾಣಾ ಗುಹೇಶ್ವರ          ||೬೪||

೩೫೪

ಕಾಳಿಯ ಕಣ್‌ಕಾಣದಿಂದ ಮುನ್ನ,
ಉಮೆಯ ಕಲ್ಯಾಣದಿಂದ ಮುನ್ನ,
ಗೌರಿಯ ಮದುವೆಯಾಗದ ಮುನ್ನ,
ಹರಿವಿರಿಂಚಿಗಳಿಲ್ಲದ ಮುನ್ನ,
ತ್ರಿಪುರ ಸಂಹಾರದ ಮುನ್ನ,
ಅಂದಿಂಗೆಯಳೆಯ ನೀನು ಹಳೆಯ ನಾನು
ಮಹಾದಾನಿ ಕೂಡಲಸಂಗಯ್ಯಾ.     ||೬೫||

೩೫೫

ಆದಿ ಅನಾದಿಯಿಲ್ಲದಂದು, ಸಾಧ್ಯಾಸಾಧ್ಯಂಗಳಿಲ್ಲದಂದು,
ಸ್ಥೂಲ ಸೂಕ್ಷ್ಮ ಕಾರಣ ಮೂರ್ತಿಗಳಿಲ್ಲದಂದು,
ಸಾಕಾರ ನಿರಾಕಾರವೆಂಬ ವಾಕು[24] ಹುಟ್ಟಿದಂದು,
ಉಮೆಯ ಕಲ್ಯಾಣವಿಲ್ಲದಂದು,
ಶಿವರತಿ ಮಹಾರತಿ ಬಸವಣ್ಣನಿಂದಾಯಿತ್ತು.
ಸರ್ವ ವಸ್ತುವ ನೀಕರಿಸಿ ಶಿವಲಿಂಗಾರ್ಚನೆಯ
ತೋರಿದ ಸಂಗನಬಸವಣ್ಣನು,
ಲಿಂಗಾರ್ಚನೆಯಲ್ಲಿ ಪ್ರಸಾದಧ್ಯಾನ
ಜಂಗಮಾರ್ಚನೆಯಲ್ಲಿ ಪ್ರಸಾದವಿಸ್ತಾರ.
ಇಂತೆಂಬುದ ಸಂಗನಬಸಣ್ಣನಲ್ಲದೆ ಮತ್ತಾರೂ ಅರಿಯರು.
ಭಕ್ತಿಯ ಕುಳವನು ಭಕ್ತಿಯ ಸ್ಥಲವನು,
ಮುನ್ನ ಅತಿರಥರು ಮಹಾರಥರು ಅರಿಯರು,
ನಿಮ್ಮ ಬಸವಣ್ಣನು ತೋರಲಿಕೆ ನಾನರಿದೆನು.
ಬಸವಣ್ಣನ ದಯದಿಂದಲಾನು ಬದುಕಿದೆನುಕಾಣಾ ಕಲಿದೇವಯ್ಯಾ. ||೬೬||

ಅಷ್ಟರಿಂದಂ ಮೇಲೆ ಕೃತಯುಗ ಹುಟ್ಟಿ ಮೂವತ್ತೆರಡು ಲಕ್ಷವು ಐದು ಸಾವಿರ ವರುಷವು ವರ್ತಿಸುತ್ತಿದ್ದಿತ್ತು. ಈ ಯುಗದ ಅರಸಿನ ಹೆಸರು ಹರಿಶ್ಚಂದ್ರರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದ ಗದ್ದುಗೆಯ ಮೇಲೆ ಕುಳಿತು ವಿರೂಪಾಕ್ಷನೆಂಬ ದೇವರ ಪೂಜಿಸುತ್ತ ಸುಖಸಂಕಥಾವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಾರೋಗಿಸಿ ತ್ರಿವಿಧ ದಾಸೋಹವಂ ಕೆಲವರುಷ ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದ[25]ರಸ[26]ವಜ್ರಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಪೃಥ್ವಿಬದ್ಧಕನೆಂಬ ವಾದಿ ಪೃಥ್ವಿ ಮದವೆತ್ತಿ[27]ದಲ್ಲಿ[28] ಪೃಥ್ವಿಯೆ ದೈವವೆಂದು ಪ್ರತಿಷ್ಠೆಯಂ ಮಾಡಿ ಕಾಲಂಗಳ ಹಿಡಿವುತ್ತ ಬಿಡುತ್ತ ತಿರುಗುತ್ತಿಹಲ್ಲಿ ದೇವಾದಿ ದೇವರ್ಕಳಿಗೆ ಯುದ್ಧವಾಯಿತ್ತು. ಆಗಲಾಗಿ ದಾನವರು ಸ್ವರ್ಗ ವೈಕುಂಠ ಬ್ರಹ್ಮಲೋಕಂಗಳಿಗೆ ಆತಂಕವ ಮಾಡುತ್ತಿರಲಿಕ್ಕಂಜಿ ಅಜ ಹ[29]ರಿ ರು[30]ದ್ರರು ಒಂದಾಗಿ ತಮಗೆ ಶಿವನಾದ ತಾಮಸರುದ್ರಂಗೆ ಮೊರೆಯನಿಟ್ಟೆಹೆವೆಂದಪ್ಪನಿಪ್ಪಠಾವನೆಲ್ಲಾ ನೋಡಿ ಕಾಣದೆ ತುಂಗಭದ್ರೆಯ ತೀರದ ಘೋರಾರಣ್ಯಕ್ಕೆ ಬಂದು ಹೊಕ್ಕು ತಮ್ಮ ಚತುರಂಗ ಮಾರ್ಬಲವ ನೆರಹುತ್ತಿಹ ಸಮಯದೊಳು ವಿಧಿ ಮಾಯೆಗಳಿಂದತ್ತಣ ಅರ್ಧನಾರೀಶ್ವರನೆಂಬ ಗಣೇಶ್ವರನು ಚಪ್ಪನ್ನ ದೇಶಂಗಳ ಭಕ್ತ [31]ಮಾಹೇಶ್ವರ[32]ರ ರಕ್ಷಿಸುತ್ತ [33]ಚರಿಸುತ್ತ[34] ಬರುವಲ್ಲಿ ತುಂಗಭದ್ರೆಯ ಕಂಧರದ ತಟದಲ್ಲಿ ಒಪ್ಪಚ್ಚಿ ಹೊತ್ತು ಮೂರ್ತಿಮಾಡಿರುವವೆಂದಿರುವಾಗ ಅಜ ಹರೀಂದ್ರರು ಕಂಡು ವಾಙ್ಮನಕ್ಕಗೋಚರವಾದ ವಸ್ತು ಸ್ವರೂಪೆಂದರಿಯದೆ ತಮ್ಮೊಡೆಯ ರುದ್ರನೆಂದು ದೈನ್ಯಂಬಟ್ಟು ಕರದಡೆ ನುಡಿಯುವ ಕಾರಣ ನಮ್ಮೊಡೆಯ ತನ್ನ ಶಕ್ತಿಯಂ ತೊರೆದು ತನ್ನೀಶ್ವರನನೇನಬೇಡಿಹೆನೆಂದು ತಪವಿರ್ದನ ಎಬ್ಬಿಸಬೇಕೆಂದು ಕಾಮನ ಕರದು ನಿನ್ನ ಬಳಗವ ಹಿಂದಿಕ್ಕಿಕೊಂಡು ನಮ್ಮ ಶಿವನಿಗೆ ತನ್ನ ಸತಿಯ ಮೇಲಣಿಚ್ಛೆದೋರುವಂತೆ ಪುಷ್ಪಬಾಣದಲ್ಲೆಸೆಯೆಂದು ಆರೋಪಿಸಿ, ಎಸೆಯಲಾಕ್ಷಣ ಆ ವಸ್ತು[35]ವಿನ[36] ಹಣೆಗಣ್ಣೆಂಬ ಬಾಣದಲೆಸದು ಸುಟ್ಟು ದಹಿಸಿದಾಗವೆ ಪಂಚಾಂಗ ಪಂಚ ತಂಡದವರುಗಳೆಲ್ಲಾ ದಶದಿಕ್ಕುಗಳಿಗೆ ಓಡಿ ಹೋದ ಬಳಿಕ ತಾ ವಿರೂಪಾಕ್ಷನೆಂಬ ಲಿಂಗಜಂಗಮವಾಗಿರುತ್ತಿರ್ದನು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೩೫೬

ಭಕ್ತವತ್ಸಲ ಕಲ್ಲಿದೇವನ ಶರಣರು, ಮಹಾಪುರುಷರು,
ಕಾಮ ಕ್ರೋಧಾದಿಗಳಂ ನಂದಿಸುವರು,
ಮದ ಮತ್ಸರಾದಿಗಳ ಸಿಂಹಾಸನವ ಮಾಡಿಕೊಂಬರು,
ಆಶೆಯ ಹಾರಕ್ಕೆ ಕೈಯಾನರು,
ದೇಶವೆನ್ನರು ದೇಶಾಂತರವ ಮಾಡುವರು,
ಕಲಿದೇವ ನಿಮ್ಮ ಶರಣರು. ||೬೭||

೩೫೭

ಉಪಮೆಗುಪಮಾನ ಮನುದೇವತಾದಿಗಳೆಲ್ಲಾ
ಜಪತಪ ಮಹಾ ದಿವ್ಯ ಧ್ಯಾನ ಮಂತ್ರಗಳಿಂದ
ಪರಿಮಿತ ಸೇವನಾರತರಾಗಿ
ನಿಮ್ಮ ಪದುತಿಯಿಂ ಕೃತಾರ್ಥರಾಗಿ
ತೃಪ್ತಿಪಟ್ಟಿಪ್ಪರಲ್ಲದೆ, ನಿಚ್ಚಯದ ಮಹಿಮೆಯ
ಪರಾಪರಂ ಪರಮಗಯ್ಯ ಭಾವಾತೀತ ವಿಪುಳ
ಜ್ಯೋತಿರ್ಲಿಂಗ ವಿಶ್ವತೋಮುಖ ಮುಸಿಗಿರ್ದ ಘನವಾದುದು?
ನೀರಿಲ್ಲದ ನೆಳಲಿಲ್ಲದ ಬೇರಿಲ್ಲದ ಗಿಡ ಹುಟ್ಟಿದಡೆ,
ತಲೆಯಿಲ್ಲದ ಮೃಗ ಬಂದು ಮೇಯಿತ್ತಾ ಗಿಡವ.
ಕಣ್ಣಿಲ್ಲದ ವ್ಯಾಧನು ಕಂಡನಾ ಮೃಗವ.
ಕೈಯಿಲ್ಲದ ವ್ಯಾಧನು ಯಚ್ಛನಾ ಮೃಗವ.
ಕಾಲಿಲ್ಲದ ವ್ಯಾಧನು ಹೊತ್ತನಾ ಮೃಗವ.
ಅಚ್ಚಿಲ್ಲದ ಬಂಡಿಯ ಹೂಡಿ
ಕಿಚ್ಚಿಲ್ಲದ ನಾಡಿಂಗೆ ಒಯ್ದು ಸುಟ್ಟು
ಬಾಣಸವ ಮಾಡಿ ಲಿಂಗಕ್ಕರ್ಪಿತವಾಯಿತ್ತು ಗುಹೇಶ್ವರಾ.           ||೬೮||

೩೫೮

ಎಸೆಯ[37]ದಿರು, ಎಸೆಯದಿರು ಕಾಮ,
ನಿನ್ನ ಬಾಣ ಹುಸಿಯಲೇಕೋ?
ಕಾಮ, ಕ್ರೋಧ, ಲೋಭ, ಮೋಹ,
ಮದ, ಮತ್ಸರ ಇವು ಸಾಲದೆ ನಿನಗೆ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೆ ಮರುಳು ಕಾಮಾ?        ||೬೯||

೩೫೯

ಆಡಂಬರದೊಳಗಾಡಂಬರವಿದೇನೋ?
ಹಾರಿತ್ತು ಬ್ರಹ್ಮನೋಲಗ, ಕೆದರಿತ್ತು ಇದೇನೋ?
ಸಾರು ಸಾರೆನುತ್ತ ವಿಷ್ಣುಅಜನ ನುಂಗಿ,
ರುದ್ರನ ಯೋನಿಯೊಳಗಡಗಿತ್ತದೇನೋ?
ಬೇರಿಲ್ಲದ ಮರ, [38]ನೀರಿ[39]ಲ್ಲದ ನೆಳಲೊಳಗೆ
ತೋಱೆದ ಪ್ರತಿಬಿಂಬವನೇನೆಂಬೆ ಗುಹೇಶ್ವರ. ||೭೦||

೩೬೦

ಭೂಮಿಯ ಮೇಲಿದ್ದ ಅಚಲಪೀಠವೆಲ್ಲಾ ಲಿಂಗವೆ?
ಅಲ್ಲ; ಲಿಂಗಮೂರ್ತಿ ಇಲ್ಲಾಗಿ.
ಜಾತ ಚರಾಚರಾದಿಗಳೆಲ್ಲಾ ಜಂಗಮವೆ?
ಅಲ್ಲ; ಆಚಾರ ಸಮತೆಸಂಬಂಧವಿಲ್ಲಾಗಿ,
ಇಂತಿವರೆಲ್ಲರು ಉಪಜೀವಿಗಳು,
ಕೂಡಲಚನ್ನಸಂಗಮದೇವ ಸಹಿತವಾಗಿ,
ಉಭಯ ಲಿಂಗ ಜಂಗಮವಾದವರಿಗೆ ನಮೋ ನಮೋಯೆಂಬೆ.  ||೭೧||

ಅಷ್ಟರಿಂದಂ ಮೇಲೆ ತ್ರೋತಾಯುಗ ಹುಟ್ಟಿ ಹದಿನಾರು ಲಕ್ಷವು ಅಯ್ದು ಸಾವಿರ ವರುಷವು ವರ್ತಿಸುತ್ತಿದ್ದಿತ್ತು. ಈ ಒಂದು ಯುಗದ ಅರಸಿನ ಹೆಸರು ಶ್ರೀರಾಮಚಂದ್ರರಾಯನೆಂದು. ಶ್ರೀ ಕಲ್ಯಾಣ ಮಧ್ಯದ ಗದ್ದುಗೆಯ ಮೇಲೆ ಕುಳಿತು ತ್ರಿಪುರಾಂತಕ[40] ದೇವರ ಪೂಜಿಸುತ್ತ ಸುಖಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯು ಮರ್ತ್ಯಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಾರೋಗಿಸಿ ತ್ರಿವಿದ ದಾಸೋಹವಂ ಕೆಲವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದ ಮಂಟಪವೆಂಬ ವಜ್ರಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಸೂರ್ಯಬದ್ಧಕನೆಂಬ ವಾದಿ ಸೂರ್ಯಮದವೆತ್ತಿ ಸೂರ್ಯನೆ ದೈವವೆಂದು ಪ್ರತಿಷ್ಠೆಯಂ ಮಾಡಿ ಕುಲಂಗಳ ಹಿಡಿವುತ್ತ ಬಿಡುತ್ತ ತಿರುಗುತ್ತಿ ಹಲ್ಲಿ ತಾರಕಧನುಜರು ತಾರಗ್ರೀವ ಬ್ರಹ್ಮನ  ಉಗ್ರ ತಪವಂ ಮಾಡಿ ಮೆಚ್ಚಿಸಿ ತ್ರಿಪುರವಂ ಮತ್ತೊಮ್ಮೆ ಪಡೆದು ಅದರ ಮೇಲೆ ವರ್ತಿಸಿರುತ್ತ ನಾಕ ವೈಕುಂಠ ಮರ್ತ್ಯವ ಸೂರೆಯಾಡುವಾಗ ಅಜ ಹರಿ ಸುರಪ ತಮ್ಮ ನಾಲ್ವರು ಕರ್ತೃಗಳಿಗೆ ಮೊರೆಯಿಟ್ಟಡವರು ಚತುರ್ವಿಧ ಫಲಂಗಳಲ್ಲಿ ಮರದೊರಗಿರ್ದರಾಗಿವರಮೊರೆಯ ವಿಚಾರಿಸದಾದರು. ಆ ಸಮಯದೊಳಗೆ ಪರತತ್ವದ ವೃಷಭ ಗಣೇಶ್ವರನು ಜಗತ್ತಿನ ಗೋಳನರಿದು ನೋಡಿ ಗೋಳಕಮಹೀತಳ ಮರೀಚ ರುದ್ರರೆಂಬ ಜಡರುತಿಲಿರಲಿ ಎನುತ ಪ್ರಸಾದರಸವಜ್ರಮಂಟಪದಿಂದಿಳಿ[41]ದು ಬಂದು ಅಜಹರಿಗಳ ಬನ್ನಿರೆ ಎಂದವರ ಚತುರಂಗಬಲ ಸಹಿತ ಕರಕೊಂಡು ತನ್ನ ಲೀಲೆಯಿಂದ ಚಂದ್ರಾದಿತ್ತ್ಯರಂ ಗಾಲಿಗಳಂ ಮಾಡಿಸಿ ಪುರಾಣಂಗಳ ಅಚ್ಚುಘಾರೆಗಳಂ ಮಾಡಿಸಿ ಆಗಮಂಗಳ ಕೀಲುಗಳಂ ಮಾಡಿಸಿ ಶಾಸ್ತ್ರಂಗಳಂ ಹೊರಜೆಗಳಂ ಮಾಡಿಸಿ, ವೇದಂಗಳಂ ಕುದುರೆಗಳಂ ಮಾಡಿಸಿ ಇಂತಿವರೆಲ್ಲರಿಂದ ಒಂದು ರಥವಂ ಮಾಡಿಸಿ ಆ ರಥದ ಮೇಲೆ ಮೂರ್ತಿಗೊಂಡು ತ್ರಿಪುರದೊತ್ತಿಗೆ ಚಿತ್ತೈಸಿ ಶೇಷ ಪರ್ವತ ವಿಷ್ಣು ಇಂತಿವ ಹೆದೆ ಧನು ಬಾಣಂಗಳಂ ಮಾಡಿ ಎಸದು ಕೆಡಹಿ ಹಣೆಗಣ್ಣಿನಲ್ಲಿ ಸುಟ್ಟುರುಹಿ ದೇವಾದಿದೇವತೆಗಳನುಳುಹಿ ಪರಶಿವ ಪರಮ ಬಸವಣ್ಣಸ್ಕಂದನೆಂಬ ನಾಮವಾಗಿರ್ದನು. ಇಂತೆಂಬ ಪುರಾತನರಗಣಿತ ವಚನ ರಸಂಗಳಿಗೆ ಸಾಕ್ಷಿ.

೩೬೧

ಅತ್ತಲಿತ್ತಲು ಕಾಣಲಿಲ್ಲ.
ಬಯಲ ದಾಳಿ[42]ಯ ಮುಟ್ಟಿತ್ತಲ್ಲ[43].
ಸರಳ[44]ಮಂಡಲ ಮಂಜಿನ ಕಾಳಗತ್ತಲೆ ಕವಿಯಿತ್ತಲ್ಲ.
ರವಿಯ ಶೃತಿಗಳ ರಥದಚ್ಚು ಮುರಿಯಿತ್ತಲ್ಲ.
ಶಶಿವಂಶದ ನಿಲುವನು ರಾಹು ಗೆದ್ದುದ ಕಂಡು
ಹಿರಿಯರುಗಳು ಹೊಲಬುಗೆಟ್ಟರು ಕಾಣಾ ಗುಹೇಶ್ವರ     ||೭೨||

೩೬೨

ಅಱೆಯ ಮೇಲಣ ಹುಲ್ಲೆಗೆ ಕೆಂಗರಿಯ ಬಾಣವ,
ತೊಡರ್ಚಿದವನಯಚ್ಚಡದು ತಪ್ಪದೆ ತಾಗಿತ್ತಲ್ಲಾ!
ಅಂದು ಒಂದೇ ಬಾಣದಲ್ಲಿ ಅಳಿಯಿತ್ತಲ್ಲಾ!
ನಾರಿ ಹಱೆಯಿತ್ತು, ಬಿಲ್ಲು ಮುಱೆಯಿತ್ತು,
ಹುಲ್ಲೆ ಎತ್ತಿಹೋಯಿತ್ತು ಗುಹೇಶ್ವರ?  ||೭೩||


[1] + ತ್ರಿಪುರ (ಬ).

[2] ಹೊರವ ನಮ್ಮ (ಬ)

[3] ಹೊರವ ನಮ್ಮ (ಬ)

[4] x (ಬ)

[5] x (ಬ)

[6] ಕ್ಕೆ (ಬ)

[7] ಕ್ಕೆ (ಬ)

[8] ೨ ಹೂಕೆ (ಅ)

[9] ೨ ಹೂಕೆ (ಅ)

[10] ೨ ಹೂಕೆ (ಅ)

[11] ಸಕಲಕಾಮ ದಕ್ಷಾದಿಗಳಿಗೆಯೂ (ಬ)

[12] ಸಕಲಕಾಮ ದಕ್ಷಾದಿಗಳಿಗೆಯೂ (ಬ)

[13] ಬಹು (ಬ)

[14] ಬಹು (ಬ)

[15] ಮಾಡಿ ನಮ್ಮ ನಿಲವಿನ ಕೈಲಾಸಕ್ಕೆ (ಬ)

[16] ರುಗಳ (ಬ)

[17] ರುಗಳ (ಬ)

[18] x (ಬ)

[19] x (ಬ)

[20] x (ಬ)

[21] x (ಬ)

[22] x (ಬ)

[23] x (ಬ)

[24] +ಗಳು (ಬ)

[25] ಮಂಟಪವೆಂಬ (ಬ)

[26] ಮಂಟಪವೆಂಬ (ಬ)

[27] x (ದ)

[28] x (ದ)

[29] ರೀಂ (ಬ)

[30] ರೀಂ (ಬ)

[31] x (ಬ)

[32] x (ಬ)

[33] x (ಬ)

[34] x (ಬ)

[35] x (ಬ)

[36] x (ಬ)

[37] x (೨೭೫)

[38] ನೆಳಲಿ (೨೭೫)

[39] ನೆಳಲಿ (೨೭೫)

[40] + ದೇವನೆಂಬ (ಬ)

[41] ದಿತ್ತ (ಬ)

[42] ಪುಟ್ಟಿತಲ್ಲ (ಬ)

[43] ಪುಟ್ಟಿತಲ್ಲ (ಬ)

[44] x (ಬ)