೨೨೭

ಉದಕದ ಕೈಕಾಲ ಮುರಿದು,
ಅಗ್ನಿಯ ಕಿವಿಮೂಗನರಿದು,
ವಾಯುವಿನ ತಲೆಯ ಕೊಯ್ದು,
ಆಕಾಶವ ಶೂಲದಲ್ಲಿಕ್ಕಿದ ಬಲ್ಲಿದ ತಳವಾರನೀತ;
ಅರಸು, ಪ್ರಧಾನಿ, ಮಂತ್ರಿ ಮೂವರ
ಮುಂದುಗೆಡಿಸಿದ ಬಲ್ಲಿದ ತಳವಾರನೀತ;
ಒಂಬತ್ತು ಬಾಗಿಲ ಕದವನಿಕ್ಕಿ ಬಲಿದು, ಬೀಗವ ಹೂಡಿ,
ನವಸಾಸಿರ ಮಂದಿಯ ಕೊಂದುಳಿದನು
ಗುಹೇಶ್ವರ ನಿಮ್ಮ ಶರಣಾ.  ||೩೮||

೩೨೮

ಸಕಲ ಶ್ರುತಿಗಳ ಮುಂದಿರ್ದವರ
ಸವಿ ಮಾತಿನ ವಾಸಕ್ಕೆ ಸಿಕ್ಕದೆ
ಅತೀತವಾದ ವಸ್ತುವ ಬೇಡಿಕೊಳ್ಳಿರೆ.
ಸಕಲಾತ್ಮರ ಮುಂದಿರ್ದವರ ತರ್ಕಕ್ಕೆ
ಉರಿಲಿಂಗವಾಗಿ ಸಿಕ್ಕದೆ ಅತೀತವಾದ ವಸ್ತುವ ಬೇಡಿಕೊಳ್ಳಿರೆ!
ಇಂತೀ ಸಕಲಾತ್ಮರಿಗಿಕ್ಕುವ ಹೋಮವಾಸಕ್ಕೆ
ಉಬ್ಬಸಗೊಂಡು ಸಿಕ್ಕದೆ ಅತೀತವಾದ ವಸ್ತುವ ಬೇಡಿಕೊಳ್ಳಿರೆ!
ಇಂತು ಸಕಲಾತ್ಮರ ಹೊಂದಿಯೂ ಹೊಂದದೆ
ನಿತ್ಯ ಸಿಂಹಾಸನದ ಮೇಲೆ ನಿತ್ಯನಾಗಿರ್ದ
ನಮ್ಮ ಉರಿಲಿಂಗದೇವನ ಬೇಡಿಕೊಳ್ಳಿರೆ.       ||೩೯||

೩೨೯

ಖೇಚರರಾಗಲಿ, ಭೂಚರರಾಗಲಿ,
ಪುರುಹರರಾಗಲಿ, ಮಧ್ಯಸ್ಥರಾಗಲಿ,
ಪವನನುಂಡುಂಡು ದಣಿಯದವರಾಗಲಿ,
ಅಗ್ನಿ ಪರಿಹರರಾಗಲಿ,
ಖೇಚರರೊಳು ಬಸವಾಜ್ಞೆ, ಭೂಚರರೊಳು ಬಸವಾಜ್ಞೆ
ಪುರುಹರರೊಳು ಬಸವನ ಮಹಾರತಿ,
ಮಧ್ಯಸ್ಥರೊಳು ಬಸವನೇಕಾಂತವಾಸಿ
ಪವನದೊಳು ಬಸವ ಹೇಳಿತ್ತ ಕೇಳುವ.
ಅಗ್ನಿಯೊಳು ಬಸವಂಗೆ ದಾಸೋಹವ ಮಾಡುವೆ.
ಎನ್ನನೀ ಪರಿಯಲ್ಲಿ ಸಲಹಿದಾತ ಬಸವಣ್ಣನು ಕಾಣಾ
ಕಲಿದೇವರ ದೇವಯ್ಯಾ      ||೪೦||

೩೩೦

ಬ್ರಹ್ಮನ ಹೆಂಡರ ಮಕ್ಕಳ ಹಿಡಿತಂದು
ಅಡಿಗೆಯ ಮಾಡಿಸಿದಾತ ಬಸವಣ್ಣನು.
ವಿಷ್ಣುವಿನ ಸಾಸಿರದೇಳುನೂರು ಕುಮಾರಿಯರ
ಹಿಡಿತಂದು ದಹಿಸಿದಾತ ಬಸವಣ್ಣನು.
ರುದ್ರರ ರುದ್ರಗಣಂಗಳ ಹಿಡಿ ತಂದು
ಸ್ವಾಮಿ – ಭೃತ್ಯಾಚಾರ ಸಂಬಂಧವ ಮಾಡಿಸಿಕೊಂಬಾತ ಬಸವಣ್ಣನು.
ಆ ಬಸವಣ್ಣಂಗೆ ಪ್ರಸಾದವೆ ನೆಲೆಯಾದುದು ಕಲಿದೇವಯ್ಯಾ.       ||೪೧||

ಅಷ್ಟರಿಂದಂ ಮೇಲೆ ಮನ್ಯಾರಣನೆಂಬ ಯುಗ ಹುಟ್ಟಿ ಎಂಬತ್ತೈದು ಕೋಟಿಯು ಅಯ್ದಿ ಲಕ್ಷವು ಆಯ್ದಿ ಸಾವಿರ ವರುಷ ವರ್ತಿಸುತ್ತಿರ್ದ್ದಿತ್ತು. ಈ ಒಂದು ಯುಗದ ಅರಸಿನ ಹೆಸರು ಶಂಭುರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದ ಗದ್ದುಗೆಯ ಮೇಲೆ ಕುಳಿತು ಸ್ವಯಂಭು ದೇವರ ಪೂಜಿಸುತ್ತ ಸುಖ ಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯ ಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಾರೊಗಿಸಿ ತ್ರಿವಿಧ ದಾಸೋಹವಂ ಕೆಲ ವರುಷವು ಮಾಡಿದವರು, ಕಲ್ಯಾಣಕ್ಕೆ ಗಮಿಸಿ ಬಸವಣನಂ ಕಂಡು ಕರ್ಣ ನಿಚ್ಚಣಿಗೆಯ ಮೇಲೆ ಪ್ರಸಾದ ರಸವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಮಾಯೆ ಬದ್ಧಕನೆಂಬ ವಾದಿ ಮಾಯೆ ದೈವವೆಂದು ಪ್ರತಿಷ್ಠೆಯಂ ಮಾಡಿ ಕುಲಂಗಳ ಹಿಡಿವುತ್ತ ಬಿಡುತ್ತ ತಿರುಗುತ್ತಿಹಲ್ಲಿ ಅಜಹರಿ ಸುರಪನೀ ಮೂವ್ವರೂ ಘಾಳಿಯಿಲ್ಲದುಬ್ಬಸವಾಗಿದೆಯೆಂದು ತಮ್ಮೊಡೆಯ ತಾಮಸ ರುದ್ರನ ಕೇಳಿದಡಾತ ಮಂಧರಶೈಲಕ್ಕೆ ಹೋಗಿ ಮಹಾಪರತತ್ವದ ವೃಷಭೇಶ್ವರನ ಬೇಡಿಕೊಳ್ಳಿರೆ ಎನುತ ಕಳುಹಿದನು. ಕಳುಹಿದಡಂತಾಗಲಿ ಎನುತವರಲ್ಲಿ ಗೈದಿನಿಲಲು ಅಷ್ಟರೊಳಗೆ ಸಹಿ ವಿಷ್ನು ಮುಂಡಿಜಯ ಬಿಜಯಂ ಮಾಡಿ ಪದ್ಮಾಸನಂ ಗೈದಿರಲು ತಾವಾತನಂ ಕಂಡು ಮುಂದೆ ಭಕ್ತಿ ಹೀನರಾಗಿ ನಿಂದಿರಲಾಕ್ಷಣ ಆತನ ರೇಚಕ ಪೂರಕಂಗಳು ಹೊರವಂಟಿವರುಗಳನೆತ್ತಿ ಬ್ರಹ್ಮಾಂಡಕ್ಕೆ ಒತ್ತಿದಡೆ ಕಾಳಾಂಧ್ರಲೋಕ ಮೊದಲಾದ ಚತುರ್ದಶ ಲೋಕಂಗಳೆಲ್ಲಾ ಗಧಗಂಪಿಸುವಾಗ ಅಲ್ಲಿಂದವು ಬಿಡಲವರು ಕೆಡೆಯಲಾ ವೇಳೆಯಲ್ಲಿ ದಿಕ್ತಟಂಗಳೆಲ್ಲವು ಕಂಪನವಾದಂತೆ ಘೋಳೆನುತ್ತ ಧಿಮ್ಮನೆ ಬಿದ್ದಲ್ಲಿ ನಿಃಕಲರು ಸಕಲರು ತತ್ತಳ ಮತ್ತಳ ಗೊಳುತ್ತಿಹರು. ಈ ಪ್ರಕಾರದಲ್ಲಿ ಪಂಚಾಂಗ ಪಂಚತಂಡದವರುಗಳ ಮೂರು ವೇಳೆಯೂ ಮೇಲಕ್ಕೆ ನೆಗಹಿ ಬ್ರಹ್ಮಾಂಡಕ್ಕೆ ಒತ್ತಿ ಕೆಳಯಿಂಕೆ ಬಿಡಲೊಡನೆ ಅಷ್ಟರೊಳಗಂಜಿ ತಪ್ಪುಂಟು ತ್ರಾಹಿಯೆಂದು ವಾಯುವ ಬೇಡಿದಡಿತ್ತು ಅವರು ತಮ್ಮ ತಮ್ಮ ಯೋನಿಜ ಕೈಲಾಸಕ್ಕೆ ಲೋಕಂಗಳಿಗೆ ಕಳುಹಿಸಿ ತಾನು ಕುರುಹಿಲ್ಲದ ಅಯೋನಿ ಸಂಭವ ಕೈಲಾಸಕ್ಕೆ ಚಿತ್ತೈಸಿರುತ್ತರ್ದನೂ ಇಂತೆಂಬ ಪುರಾತನರ ಗಣಿತ ವಚನ ರಸಂಗಳಿಗೆ ಸಾಕ್ಷಿ:

೩೩೧

ಹೋಮವ ಮಾಡುವರ ಕಂಡೆ;
ಹೊಗೆಯ ನಿಲಿಸುವರ ಕಾಣೆ.
ದೂರ ದಾರಿಯ ನಡೆವರ ಕಂಡೆ;
ಕಾಲುಗಳ ನುಂಗುವರ ಕಾಣೆ.

[1]ಆಲುತ್ತ[2] ಬೊಬ್ಬೆಗೊಟ್ಟು ರಣದೊಳಗೆ ಅಳಿದು
ಮುಂದೆ ಮುಂದೆ ನಡದಾಡುವರ ಕಂಡೆ.
ಹರಿದ ಹರಿ ಶಿರವ ಹಿಡಿದುಕೊಂಡು
ಕುಣಿದಾಡುವರ ಕಾಣೆ ಗುಹೇಶ್ವರಾ.  ||೪೨||

೩೩೨

ಅಷ್ಟ ತನುವನು ಮುಟ್ಟಿದ
ಮೂಲವನಿಷ್ಟಾನಿಷ್ಟ ಪರದಲ್ಲಿ ಮುಟ್ಟರು.
ಅಪರದಲ್ಲಿ ವಿಧ್ಯದೊಳಗಣ ಸಹಜವನರಿದಂಗಲ್ಲದೆ,
ಲಿಂಗವೆನಬಾರದು, ಜಂಗಮವೆನಬಾರದು, ಪ್ರಸಾದವೆನಬಾರದು.
ಉದರ ಮಂಟಪದೊಳಗಣ ಸಹಜವನರಿಯದೆ
ನರಕಕೆ ಗುರಿಯಾದರು;[3]ಕರಣ ಲಿಂಗಾರ್ಚಕರಾದರು.
ಜನನ ಮರಣ ತಪ್ಪದೆಂದರಿವರನತಿಗಳದು,
ನಿಜಲಿಂಗಾರ್ಚನೆಯ ಮಾಡಿ ತೊರಿಯೆ
ತನ್ನವರ ನಿತ್ಯದೊಳಗಿರಿಸಿದಾತ ಬಸವಣ್ಣನು
ಕಾಣಾ ಕಲಿದೇವಯ್ಯಾ.      ||೪೩||

೩೩೩

ಶತಕೋಟಿಲೋಕಂಗಳೆಲ್ಲ,
ಬಸವಣ್ಣನ ಕೋಡಿನಲ್ಲಿರ್ದವು ನೋಡಾ!
ಅತೀತವಪ್ಪ ಪರಶಿವನು ಬಸವಣ್ಣನ
ಹಿಣಿಲ ಕೆಳಗೆ ಸೂಕ್ಷ್ಮರೂಪಾಗಿರ್ದನೋಡಾ!
ಸಕಲ ಶೃತಿ ಸ್ಮೃತಿಗಳೆಲ್ಲಾ ಬಸವಣ್ಣನ
ಹೊಗಳಲರಿಯದೆ ಕೆಟ್ಟವು ನೋಡಾ!
ಕರ್ತನಾನ[4]ಲ್ಲದೆ ಭೃತ್ಯನಲ್ಲ[5] ಬಿನ್ನಾಣವ ಹೊಲಲರಿಯದೆ[6] ಒಂದೆತ್ತಿಲ್ಲದಿರ್ದಡೆ ಕತ್ತಲೆಯಾಗದೇ ಈ ಜಗವೆಲ್ಲವು?
ಹರಿವ ನದಿಗಳೆಲ್ಲ ಅಮೃತವಾದವು ಕಾಣಾ,
ಬಸವಣ್ಣ, ನಿನ್ನಿಂ[7]ದ.
ಹರಿಹನ್ನಿ ಕೋಟಿ ಯಗಜುಗಂಗಳು ನಿನ್ನ ಉಸುರಲ್ಲಿ ಒತ್ತಿದಡೆ,
ಬ್ರಹ್ಮಾಂಡಕ್ಕೆ ಹೊದವು;
ಬಿಟ್ಟಡೆ ಬಿದ್ದವು, ಕಾಯ್ದಡೆ[8]ಬದುಕಿದವು[9] ನೀನು ಹೊರೆವ ಯುಗಜುಗಂಗಳು
ಒಂದು ತೃಣ ಮಾತ್ರವಾದ ಕಾರಣ,
ನಿನ್ನ ಹಸುಮಕ್ಕಳವರೆನುತ್ತಿರ್ದೆನಯ್ಯ,
ನಿನ್ನ ಗೋಮಿತದ ಷಡುಸಾಮಾರ್ಜನೆಯ ಮೇಲೆ ಕುಳಿತು
ಗುಹೇಶ್ವರನೆಂಬ ಲಿಂಗವು ಶುದ್ಧನಾ[10]ದ ಕಾಣಾ,
ಬಸವಣ್ಣ ನಿನ್ನಿಂದ.            ||೪೪||

೩೩೪

ಆಗ ಹುಟ್ಟಿ ಬೇಗ ಸಾವ ಕಾಯಗೊಂಡ
ಮಾನವನೀಗ ದೇವರೆನಿಸಿಕೊಂಬುದಾವುದಂತರ ಹೇಳಾ!
ದೇವರು ಸಾವಡೆ, ದೇವರಿಗೆಯೂ
ಸಾವರಿಗೆಯೂ ಆವುದಂತರ ಹೇಳಾ!
ದೇವರಿಗೆ ದೇವಲೋಕ, ಮಾನವರಿಗೆ ಮರ್ತ್ಯಲೋಕ,
ಗುಹೇಶ್ವರಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.           ||೪೫||

ಅಷ್ಟರಿಂದಂ ಮೇಲೆ ಮ೮ನ್ಯಾರಣನೆಂಬ ಯುಗ ಹುಟ್ಟಿ ಎಪ್ಪತ್ತೈದು ಕೋಟಿಯೂ ಆಯ್ದುಲಕ್ಷವು ಆಯ್ದು ಸಾವಿರವರುಷ ವರ್ತಿಸುತ್ತಿರ್ದ್ದಿತ್ತು. ಒಂದು ಯುಗದ ಅರಸಿನ ಹೆಸರು ವಿಶ್ವೇಶ್ವರರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದ ಗದ್ದುಗೆಯ ಮೇಲೆ ಕುಳಿತು ವಿಶ್ವೇಶ್ವರನೆಂಬ ದೇವರ ಪೂಜಿಸುತ್ತ ಸುಖ ಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಇತ್ತಾರೋಗಿಸಿ ತ್ರಿವಿಧ ದಾಸೋಹವಂ ಕೆಲವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದರಸವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಆಕಾಶಬದ್ಧಕನೆಂಬ ವಾದಿಗಾಕಾಶವೆ ದೈವವೆಂದು ಪ್ರತಿಷ್ಟೆಯಂ ಮಾಡಿ ಕುಲಂಗಳ ಹಿಡಿವುತ್ತ ಬಿಡುತ್ತ ವಾಹನಂಗಳಂ ಬಯಸುತ್ತಿಹಲ್ಲಿ, ವಾರಣಾಸಿ ಕ್ಷೇತ್ರದಲ್ಲಿರ್ದ ವೀರಭದ್ರದೇವರು ಜಂಗಮಸ್ಥಲದ ಗಣಾಚಾರ್ಯನಾಗಿ ಚಪ್ಪನ್ನದೇಶದೊಳಗೆ ಜಂಗಮವೇಷ ಪರಾಪರ ಬ್ರಹ್ಮವೆಂದು ಬಿರಿದಿನ ನಿರೂಪಂಗಳ ಮಾಡುತ್ತ ಮತ್ತೆ ವಾರಣಾಸಿಯೊಳೆಗೆ ಬಿಜಯಂ ಮಾಡಿ ಮೂಲೆಗೊಂಡು ಮೂಲ ಪ್ರಣಮ ಮಂತ್ರಗಳನುಚ್ಚರಿಸುತ್ತ ಲಿಂಗಕ್ಕೆ ಮಜ್ಜನವ ಮಾಡುವ ಸಮಯದೊಳು ಗೋಳಕ, ಮಹೀತಳ, ಮರೀಚ, ರುದ್ರ, ಹಾವುಗೆಗಳೆಂಬ ಷಡು ಸಾದಾಖ್ಯ[11]ರುಗಳು ತಾವು ಸ್ನಾನ ಮಾಡಿಹೆವೆಂದು ಬರುವಲ್ಲಿ ವೀರಾಚಾರ್ಯನು ಕಂಡು ನೀವು ಭವಿಗಳು, ಇತ್ತ ನಮ್ಮ ಕಡೆಗೆ ಸುಳಿದಾಡಬೇಡವೆಂದು, ಇತ್ತ ಬರದಿರಿ ಎನಲಾಕ್ಷಣ, ಅವರು ಪಂಚ ಮುಖಂಗಳು ತಮ್ಮ ಶ್ರುತಿಗಳು, ತಮ್ಮ ಪಡೆಗಳು ಇಂತಿವೆಲ್ಲವು ಸಹಿತ ನಿಂದರು. ನಿಂದಡವರನು ಜಡಶೈವರೆಂದರಿವುದು. ನಿಮ್ಮ ಲಿಂಗಗಳಿಗೆ ಜಂಗಮ ಪ್ರಸಾದವ ಕೊಟ್ಟು ಕೊಳ್ಳದೆ ಸುಳಿವ ಪ್ರೇತ ಲಿಂಗ ಸಂಸ್ಕಾರಿಗಳಲ್ಲದೆ ಪರಬ್ರಹ್ಮರಲ್ಲ ತೊಲಗಿರೈ ಎಂದು ನಿರೂಪವ ಕೊಟ್ಟಡೆ, ಅಜಹರಿ[12]ನಾಹಂ ಬ್ರಹ್ಮವೆಂದಹಂಕರಿಸಿ ನುಡಿವಾಗ [13]ವಿಶ್ವೇಶ್ವರನು[14] ಅನಂತಕೋಟಿ ಗಣಂಗಳಾದನು ಆಗ ಗಣಂಗಳೊಳಗೆ ನೀಲಕಂಠನೆಂಬ ಗಣೇಶ್ವರನೊಬ್ಬ ಅಹಂ ಬ್ರಹ್ಮವೆಂದು ನುಡಿದ. ಬ್ರಹ್ಮನ ಪಂಚಮ ಶಿವರ ಚಿವುಟಿ, ವಿಷ್ಣುವಿನ ಬೆನ್ನ ನಿಟ್ಟೆಲುವ ಮುರಿದು, ಎಡದ ಕರದೊಳೊಂದು ಹಿಡಿದು, ಪಶ್ಚಿಮ ಸಮುದ್ರಕ್ಕೆ ಹಾಕಿ, ಸರ್ವ ಲೋಕಂಗಳ ಒಳಹೊರಗೆಯೂ ಅಖಂಡಿತವಾಗಿ ತಮ್ಮ ಗಣಂಗಳು ಸಹಿತ ವೀರಶೈವ ಮಾರ್ಗದಲ್ಲಿರುತ್ತಿರ್ದರು. ಆ ಸಮಯದೊಳು ನಿಃಕಲರು, ಸಕಲರು, ಪ್ರಳಯಕಲರು, ವಿಜ್ಞಾನಕಲರು, ಸಕಾಲಕಲರು ಇಂತಪ್ಪ ಪಂಚಾಂಗ ಪಂಚತಂಡದವರುಗಳೆಲ್ಲಾ ತಮ್ಮ ತಮ್ಮ ಯೋನಿಜ ಕೈಲಾಸಂಗಳಿಗೆ ಸರಿದು ಓಡಿ ಹೋದರು. ಇಂತು ಕಾಶಿ ಕ್ಷೇತ್ರದಲ್ಲಿರ್ದ ಲಿಂಗ ಶರಣರು ಪಂಚಭೂತ, ಪಂಚತಂಡ, ಪಂಚಪಾತಕವೆಂಬ ವಿಶ್ವನು ತಮ್ಮ ನೊಸಲು ಕಣ್ಣೆಂಬ ಕಾಲಾಗ್ನಿಯಲ್ಲಿ ವಿಕಲ್ಪ ಕಾಲಕ್ಕೆ ಕಾಸಿ ಉರುಹಿ ಸುಟ್ಟು ಭಸ್ಮವ ಮಾಡಿ ಬಿಸುಟಿಹ ಕಾರಣ ಕಾಶಿ ವಿಶ್ವನಾಥನೆಂಬ ನಾಮವಾಯಿತ್ತು. ಇಂತೆಂಬ ಪುರಾತನರಗಣಿಸ ವಚನಂಗಳಿಗೆ ಸಾಕ್ಷಿ:

೩೩೫

ಹರಿ ಹೊಲಬನಱೆಯ.
ಬ್ರಹ್ಮ ಮುಂದನರೆಯ.
ರುದ್ರ ಲೆಕ್ಕವ ಮರದ.
ಈಶ್ವರ ಪವನಯೋಗದಲ್ಲಿ ಮಗ್ನನಾದ.
ಸದಾಶಿವ ಭಾವದಲ್ಲಿ ಭ್ರಮಿತನಾದ.
ಸರ್ವಗತನಿವಗುಸುರನಾದ.
ಈ ಒಂದಂಡಜದೊಳಗಣ ಬಾಲಕರಾರು
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ.     ||೪೬||

೩೩೬

ಹಲವು ಕಾಲ ಹಂಸೆಯ ಸಂಗದಲ್ಲಿ
ಬಕನಿರ್ದಡೇನು, ಸುಚಿಯಾಗಬಲ್ಲುದೆ?
ನಿಧಿ ನಿಧಾನದೊಳಗಿರ್ದಡೇನು,
ಪಾಷಾಣ ಹೊನ್ನಾಗಬಲ್ಲುದೆ?
ಕಲ್ಪತರುಗಳ ಸಂಗದಲ್ಲಿ ಕೊರಡಿರ್ದಡೇನು ಫಲವಾಗಬಲ್ಲುದೆ?
ಕಾಶೀ ಕ್ಷೇತ್ರದಲ್ಲಿ ಶುನಕನಿರ್ದಡೇನು,
ಅದರ ಕ್ಷೀರ ಪಂಚಾಮೃತವಾಗಬಲ್ಲುದೆ?
ತೀರ್ಥದೊಳಗೊಂದು ಗಾರ್ದಬನಿದ್ದಡೇನು
ಅದು ಕಾರಣಿಕನಾಗಬಲ್ಲುದೆ?
ಕಂಡುಗ ಹಾಲೊಳಗೆ ಇದ್ದಿಲ ಹಾಕಿದಡೇನು ಬಿಳಿದಾಗಬಲ್ಲುವೆ?
ಇದು ಕಾರಣ ಕೂಡಲ ಚೆನ್ನಸಂಗಯ್ಯನ ಶರಣನ
ಸನ್ನಿಧಿಯಲ್ಲಿ ಅಸಜ್ಜನ ಇರ್ದಡೇನು
ಸಜ್ಜನ [15]ಭಕ್ತ[16]ನಾಗಬಲ್ಲನೆ?           ||೪೭||

೩೩೭

ಅರೆಭಕ್ತರಾದವರ ನೆರಮನೆಯಲ್ಲಿ ಇರಲಾಗದು.
ಲಿಂಗನಿಷ್ಠೆ ಇಲ್ಲದವರ ಅಂಗಳನ ಮೆಟ್ಟಲಾಗದು.
ಜಂಗಮ ಪ್ರೇಮಿಗಳಲ್ಲದವರೊಡನೆ ಮಾತನಾಡಲಾಗದು.

ಪ್ರಸಾದ ಪ್ರೇಮಿಗಳಲ್ಲದವರ ಸಮಸಙ್ತೆಯಲ್ಲಿ ಕುಳ್ಳಿರಲಾಗದು.
ಇದು ಕಾರಣ ಕೂಡಲ ಚೆನ್ನಸಂಗಯ್ಯ ನೀ ಸಾಕ್ಷಿಯಾಗಿ[17]ಈ ಚತುರ್ವಿಧ[18] ಸನ್ನಹಿತರಲ್ಲದವರ ಮೆಚ್ಚರು ನಿಮ್ಮ ಶರಣರು. ||೪೮||

೩೩೮

ನಿಮ ನಿಮಗೆಲ್ಲಾ ಬಲ್ಲೆವೆಂದೆಂಬಿರಿ.
ಹರಿ ಹತ್ತು ಭವಕೆ ಬಂದಲ್ಲಿ,
ಅಜನ ಶಿರವನರಿದ[19]ಲ್ಲಿ,
ಅಂದು ಎಲ್ಲಿಗೆ ಹೋದವು ನಿಮ್ಮ
ವೇದ ಶಾಸ್ತ್ರ ಆಗಮ ಪುರಾಣಂಗಳೆಲ್ಲವು?
ಚೆನ್ನಯ್ಯನ ಕೈಯ[20] ಹಾಗವ[21] ಕೊಟ್ಟು
ಕಂಕಣದ ಕೈ ಕಂಡು ಧನ್ಯರಾಗಿರೆ ನೀವಂದು?
ಮಾತಂಗಿಯ ಮಕ್ಕಳೆಂದು
ಗಂಗೆಯಲ್ಲಿ ಸ್ನಾನವ ಮಾಡಿ
ಆಕಾಶದಲ್ಲಿಗೆ ದೋತ್ರಂಗಳು ಹಾರಿ ಹೋಗಲಾಗಿ,
ನಮ್ಮ ಸ್ವಪಚಯ್ಯಗಳ ಕೈಯಲ್ಲಿ ಉಪದೇಶವಡೆದು
ಒಕ್ಕುದ ಕೊಂಡು [22]ಧನ್ಯ[23]ರಾದರೆ ಸಾಮವೇದಿಗಳಂದು?
ನಿಮ್ಮ ನಾಲ್ಕು ವೇದವ [24]ನೋದದೆ[25] ನಮ್ಮ ಭಕ್ತರ ಮನೆಯ ಕಾಳನುಯ್ದ ಕಾರಣ
ನಮ್ಮ ಕೂಡಲ ಚೆನ್ನಸಂಗನ ಶರಣರ ಮುಂದೆ
ಶ್ರುತಿ ಓಡುಗಳ ಮಾತ ಪ್ರತಿ ಮಾತಬೇಡಾ.   ||೪೯||

೩೩೯

ಎಲ್ಲಾ [26]ವರ್ಣಂಗಳು ಸ್ಥಾಪ್ಯದೊಳಗು.
ಎಲ್ಲಾ ವಚಿಸುಗಳು ತಾಪತ್ರಯದೊಳಗು.
ಎಲ್ಲಾ ಸ್ತೋತ್ರಂಗಳು ಕ್ರೋಧದೊಳಗು.
ಎಲ್ಲಾ ಅರಿವು ಮಥನದೊಳಗು.
ಎಲ್ಲಾ ಮೂರ್ತಿಗಳು ಪ್ರಳಯದೊಳಗು.
ಎಲ್ಲಾ ದರುಶನಂಗಳು ಸಂ[27]ವಾದದೊಳಗು.

ಸ್ಥಲ ಕುಳದ ಲಿಂಗಾನುಭಾವಿ ಮನದಲ್ಲಿ
ಇವನೇನೆಂದುವರಿಯನು.
ಸ್ವತಂತ್ರನಾಗಿರ್ದು ಭಕ್ತಿದಾಸೋಹದಿಂದ
ಬಸವಣ್ಣನನಳವಡಿಸಿಕೊಂಡು
ನಿಮ್ಮ ಬಸವಣ್ಣ ನಿತ್ಯನಯ್ಯ ಕಲಿದೇವಯ್ಯಾ.   ||೫೦||

೩೪೦

ನೀರೊಳಗಣ ಜ್ಯೋತಿ ಮೇರುವಿಯ ನುಂಗಿತ್ತು;
ದೂರ[28]ದ ಧಾತು[29] ಸಾರಾಯದೊಳಗಡಗಿತ್ತು.
ಪುರದೊಳಗೈವರ ಶಿರವರಿದು
ಪರಿಮಳದೋಕುಳಿಯಾಡಿತ್ತ ಕಂಡೆ.
ಸಾರಿದ ಬ್ರಹ್ಮವಿಷ್ಣುಗಳ ಓಲಗ ಹರಯಿತ್ತು.
ಘೋರ ರುದ್ರರ ದಳ ಮುರಯಿತ್ತು ಗುಹೇಶ್ವರಾ.           ||೫೧||

ಅಷ್ಟರಿಂದಂ ಮೇಲೆ ವಿಶ್ವಾರಣನೆಂಬ ಯುಗ ಹುಟ್ಟಿ ಅರುವತ್ತೈದು ಕೋಟಿಯೂ ಐದು ಲಕ್ಷವೂ ಐದು ಸಾವಿರ ವರುಷವು ವರ್ತಿಸುತ್ತಿದ್ದಿತ್ತು. ಈ ಒಂದು ಯುಗದ ಅರಸಿನ ಹೆಸರು ಭೂತೇಶ್ವರರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದಲ್ಲಿಹ ಗದ್ದುಯ ಮೇಲೆ ಕುಳಿತು, ಭೂತೇಶ್ವರರಾಯನೆಂಬ ದೇವರ ಪೂಜಿಸುತ್ತ ಸುಖ ಸಂಕಂಥಾ ವಿನೋದದಿಂ ರಾಜಂಗೈವುತಿಹನು. ಈ ಯುಗದಲ್ಲಿಯು ಮರ್ತ್ಯ  ಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಾ ರೋಗಿಸಿ ತ್ರಿವಿಧ ದಾಸೋಹವಂ ಕೆಲ ವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣ ನಿಚ್ಚಣಿಗೆಯ ಮೇಲೆ ಪ್ರಸಾದ ಮಂಟಪವೆಂಬ ವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ವಾಯು ಬುದ್ಧಕನೆಂಬ ವಾಯುಮದವೆತ್ತಿ ವಾಯುವೆ ದೈವವೆಂದು ಪ್ರತಿಷ್ಠೆಯಂ ಮಾಡಿ ಕುಲಂಗಳ ಹಿಡಿವುತ್ತ ಬಿಡಿವುತ್ತ ತಿರುಗುತ್ತಿಹಲ್ಲಿ ಹಿರಣ್ಯಾಕ್ಷ ವಿಷ್ಣುವಿನ ಪಡೆಗಳೊಳಗೆ ಕೆಲವರ ಕೊಂದು ತಿಂದು ಬಂದು ಶ್ರೀಶೈಲಮಂ ಸಾರಿಪ್ಪ ಸಮಯದೊಳು ತನ್ನ ಮಗ ಪ್ರಹ್ಲಾದ ವಿಷ್ಣು ಪರಿಪೂರ್ಣ ಘನವೆಂದು ತನ್ನ ಕೂಡೆ ವಾದಿಸಿ ವಜ್ರ ಕಂಬವ ಹಾಯಿದಾಕ್ಷಣ ನರಸಿಂಹನಾಗಿ ಹಿರಣ್ಯ ರಾಕ್ಷಸನ ಸೀಳಿ ಕೊಂಡು ರುಧಿರಮಂ ಸುರಿವಲ್ಲಿ ಶ್ರೋಣಿತ ಹರಿದು ಹೋಗುತ್ತಿರಲು ಆ ಸಮಯದಲ್ಲಿ ಶ್ರೀಶೈಲದ ಮೇಲಣ ಶ್ರೀ ವೀರಭದ್ರ ದೇವರು ಅರಿದಲ್ಲಿದ್ದ ೯ ಪರಶಿವ ಪ್ರಮಥರುಗಳ ಅರಿಕೆ

ಯಾಗಿ ಸಿಂಹನಿದದಲ್ಲಿಗೆ ಚಿತ್ತವಿಸಿ ತತ್‌ಕ್ಷಣ ಕೈಲಾಸದ [30]ಕೈಲಾಸವೆ ಗತಿಯೆಂದು[31] ಆ ಮೇಲೆ ರಕ್ತ ಬೀಳುವಂತೆ ಹಿಂಸೆಯ ಮಾಡುವರೆ ಎಂದು ಶ್ರವನ ಕಾಷ್ಟದಿಂ ಕೆಳಗೆ ನೂಂಕಿದಡದು ಬಹಳ ದೂರಕ್ಕೆ ಪುಟ ಹಾಯ್ದು ಸಿಲಿಕೆಯಾಗಿದೆ ಎಂದು ಬಿಟ್ಟಡೆ ಪುಟಹಾರಿ ಬಿದ್ದಿತ್ತು. ಮತ್ತೆಯು ಹರಿಯು ನೆತ್ತರವ ಕುಡಿದು ನಿಲ್ಲಿರಬೇಡ ಹೋಗೈ ಎಂದು ನಿರೂಪವ ಕೊಡಲು ಅವನದಕ್ಕೆ ಅಂಜದಾರ್ಭಟಿಸಿ ಕೂಗಿ ಇದಿರಾಗಲಾಕ್ಷಣ ವೀರೇಶ್ವರನು ಶರಭಾವತಾರಮಂ ತಾಳಿ ಘುಡು ಘುಡಿಸಿ ಮೇಲಕ್ಕೆ ಹೋಗಿ ಹೊಡದಪ್ಪಳಿಸಿ ಪುಟನೆಗೆಯತೊಯ್ದು ನಗುವಾಗ ಆಕಾಶ ಮುಟ್ಟ ಹೋಗಿ ಚೌರಿಗೆಯಂತೆ ಘಱನೆ ತಿರಿಗಿ ಭ್ರಮಣಗೊಂಡು ಕಣ್ಣು ತಲೆಯಾಗಿ ಕುಂಭಿನಿಗೆ ಬೀಳೆ ಮತ್ತೆ ಮುಡಿಯ ಹಿಡಿದೆತ್ತಿ ಅಂಬರಕ್ಕೆಳದೊಯಿದು ಬಿಡಲಾಗಿ ಬಿದ್ದು ಹರಿ ಘೋಳೆಂದು ಸ್ತೋತ್ರದ ಮಾಡಿದಡೆ ಮೊದಲಂತೆ ನಿಂದು ಹೋಗಯ್ಯ ಎಂದು ಹೊರವಡಿಸಿ ತಾನು ದಕ್ಷಿಣ ಕೈಲಾಸದ ಮೇಲೆ ಲಿಂಗ ಜಂಗಮವಾಗಿರುತ್ತಿರ್ದನು. ಇಂತೆಂಬ ಪುರಾತನರಗಣಿತ ವಚನರಸಂಗಳಿಗೆ ಸಾಕ್ಷಿ:

೩೪೧

ನಿರಾಳ ಸ್ಥಾನದಲ್ಲಿ ಅಪ್ಯಾಯನವಿಲ್ಲದೆ
ಹೋಯಿತ್ತದೇನೆಂಬೆನಯ್ಯ; ಹಲವು ನಾಮವಾದೆಯಲ್ಲ?
ಚಂದ ಚಂದದ ಚರಿತ್ರನಲ್ಲ; ನಿಲ್ಲು, ಮಾಣು.
ನಿಮ್ಮಿಚ್ಛೆಯ ಪಡೆದವರೆಮ್ಮವರು.
ಅಂತಹ ದೇವನು, ಇಂತಹ ದೇವನು
ಎಂಬ ನಾಮವ ಉರಿಸದು ಒಲ್ಲೆ ಕಾಣಾ ಗುಹೇಶ್ವರ      ||೫೨||

೩೪೨

ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ತಮಂಧ ಗುರಿಯಾಗಿ, ಲಯವಾಗಿ ಹೋದವರ ಕಂಡೆ.
ಕಾಮಕ್ಕೆ ಗುರಿಯಾಗಿ, ಲಯವಾಗಿ ಹೋದವರ ಕಂಡೆ.
ನೀ[32] ಗುರಿಯಾಗಿ, ಲಯ[33]ವಾಗಿ[34] ಹೋದವರ[35]ನಾರನೂ[36] ಕಾಣೆ ಗುಹೇಶ್ವರಾ.            ||೫೩||


[1] ಅಶುತ್ತ (ಅ)

[2] ಅಶುತ್ತ (ಅ)

[3] ಕಾ (ಬ)

[4] ದೆ(೨೫೭)

[5] ೨ x (೨೫೭)

[6] ೩ x (ಬ)

[7] ೪ x (ಬ)

[8] ಉಳಿದವು (ಬ)

[9] ಉಳಿದವು (ಬ)

[10] ವಾ(ಬ) ೮ ವ(ಬ).

[11] +  ನಾಯಕ (ಬ)

[12] + ಗಳು (ಬ)

[13] ವೀರೇಶ್ವರನು (ಬ)

[14] ವೀರೇಶ್ವರನು (ಬ)

[15] x (ಬ)

[16] x (ಬ)

[17] ಇಂತಿಲ್ಲಿರ್ದ (ಬ)

[18] ಇಂತಿಲ್ಲಿರ್ದ (ಬ)

[19] ವ (೨೫೭)

[20] ಅಂಡವನೆ (ಬ)

[21] ಅಂಡವನೆ (ಬ)

[22] ಶಿಷ್ಯ

[23] ಶಿಷ್ಯ

[24] ನೊದವೆ (೨೫೭)

[25] ನೊದವೆ (೨೫೭)

[26] + ವೇದ (೨೫೭)

[27] x (ಬ)

[28] ೧ – ೨ ದಾ(ಅ)

[29] ೧ – ೨ ದಾ(ಅ).

[30] x (ಬ)

[31] x (ಬ)

[32] +ನೆ (ಅ)

[33] ಕ್ಕೆ (ಅ)

[34] ಕ್ಕೆ (ಅ)

[35] x (ಅ೦)

[36] x (ಅ೦)