೨೯೯

ಕೃತಯುಗದಲ್ಲಿ ಕುಂಜರನೆಂಬ ಆನೆಯ ತಿಂದರು ವಿಪ್ರರು,
ತ್ರೇತಾಯುಗದಲ್ಲಿ ಅಶ್ವನೆಂಬ ಕುದುರೆಯ ತಿಂದರು ವಿಪ್ರರು,
ದ್ವಾಪಾರದಲ್ಲಿ ಮಹಿಷನೆಂಬ ಕೋಣನಂ ತಿಂದರು ವಿಪ್ರರು,
ಕಲಿಯುಗದಲ್ಲಿ ಅಜನೆಂಬ ಹೋತ ತಿಂದರು ವಿಪ್ರರು,
ಇಂತು ಅನಂತ ಯುಗಂಗಳಲ್ಲಿ ಅನಂತ ಪ್ರಾಣವಧೆಯಂ ಮಾಡಿದರು
ಇದಕ್ಕೆ ಕೊಟ್ಟು ಸೆರಗು ಹಾಕಿದ ಮುಂಡಿಗೆಯು
ಇದು ಯತಾರ್ಥ ನಿಃಕಳಂಕ ಮಲ್ಲಿಕಾರ್ಜುನಾ.            ||೧೦||

೩೦೦

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ, ಆಳು, ಕಂಡಾ!
ವೇದವನೋದಿದವರ ಮುಂದೆ ಅಳು ಕಂಡಾ!
ಶಾಸ್ತ್ರವ ಕೇಳಿದವರ ಮುಂದೆ ಅಳು ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗದೇವ.   ||೧೧||

೩೦೧

ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಬ್ರಹ್ಮ,
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ವಿಷ್ಣು,
ಕಂಠದಲ್ಲಿ ಲಿಂಗವ ಧರಿಸಿಕೊಂಡಾತ ರುದ್ರ,
ಉರಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಈಶ್ವರ,
ಉತ್ತುಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ಸದಾಶಿವ,
ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಪರಮೇಶ್ವರ,
ಬ್ರಹ್ಮಂಗೆ ಪೀತವರ್ಣದ ಲಿಂಗ,
ವಿಷ್ಣುವಿಂಗೆ ನೀಳವರ್ಣದ ಲಿಂಗ,
ರುದ್ರಂಗೆ ಕಪಿಲ ವರ್ಷದ ಲಿಂಗ,
ಈಶ್ವರಂಗೆ ಮಾಜಿಷ್ಟ ವರ್ಣದಲಿಂಗ
ಸದಾಶಿವಂಗೆ ಮಾಣಿಕ್ಯ ವರ್ಣದ ಲಿಂಗ,
ಪರಮೇಶ್ವರಂಗೆ

[1] ಸ್ಟಟಿಕ[2] ವರ್ಣದ ಲಿಂಗ,
ಬ್ರಹ್ಮ ಪಾ[3]ಶುಪತಿ[4]ಯಾಗಿ ಸುಳಿದ.
ವಿಷ್ಣು ಜೋಗಿಯಾಗಿ ಸುಳಿದ.
ರುದ್ರ ಶ್ರವಣನಾಗಿ ಸುಳಿದ.
ಈಶ್ವರ ಸನ್ಯಾಸಿಯಾಗಿ ಸುಳಿದ,
ಸದಾಶಿವಯೋಗಿ ಯಾಗಿ ಸುಳಿದ.
ಪರಮೇಶ್ವರ ಕಾಳಾಮುಖಿಯಾಗಿ ಸುಳಿದ.
ಬ್ರಹ್ಮಂಗೆ ಕಾವಿ ಬಿಳಿದು,
ವಿಷ್ಣುವಿಗೆ ಪೀತಸಕಲಾತಿ.
ರುದ್ರಗೆ ಕಾಗು ಕಂಬಳಿ
ಈಶ್ವರಗೆ ಮೈಗಾಜಿನ ಕಾವಿ, ಕಪ್ಪಟ.
ಸದಾಶಿವಗೆ ಪುಲಿಚರ್ಮರತ್ನ ಗಂಬಳಿ.
ಪರಮೇಶ್ವರಂಗೆ ಮೇಕೆಚರ್ಮ ಸಿತಕಪ್ಪಡ,
ಬ್ರಹ್ಮ ಸ್ಥೂಲನೆಂದು, ವಿಷ್ಣು ಸೂಕ್ಷ್ಮನೆಂದು
ರುದ್ರ ಕಾರಣನೆಂದು, ಈಶ್ವರ ಸಕಲನೆಂದು
ಸದಾಶಿವ ನಿಃಕಲನೆಂದು
ಪರಮೇಶ್ವರ ಶೂನ್ಯನೆಂದು.
ಬ್ರಹ್ಮಗೆ ನಕಾರ, ವಿಷ್ಣುವಿಗೆ ಮಕಾರ.
ರುದ್ರಗೆ ಶಿಕಾರ, ಈಶ್ವರಂಗೆ ವಕಾರ.
ಸದಾಶಿವಗೆ ಯಕಾರ, ಪರಮೇಶ್ವರಗೆ ಓಂಕಾರ,
ಬ್ರಹ್ಮಗೆ ಭಕ್ತಿಸ್ಥೂಲ, ವಿಷ್ಣುವಿಗೆ ಮಹೇಶ್ವರ ಸ್ಥಲ,
ರುದ್ರಗೆ ಪ್ರಸಾದಿಸ್ಥಲ, ಈಶ್ವರಂಗೆ ಪ್ರಾಣಲಿಂಗಿಸ್ಥಲ,
ಸದಾಶಿವಗೆ ಶರಣಸ್ಥಲ, ಪರಮೇಶ್ವರಗೆ ಐಕ್ಯಸ್ಥಲ.
ಇಂತಪ್ಪ ಶೈವಲಿಂಗದ ಭಕ್ತಿಯು
ಷಡುಸ್ಥಲದ ಸುಳುಹಿನೊಳಗಲ್ಲ,
ರೇವಣಸಿದ್ದಯ್ಯದೇವರು ಸಾಕ್ಷಿಯಾಗಿ
ಪ್ರಭುದೇವರ ವೀರಶೈವಲಿಂಗ ಜಂಗಮದ ಷಡುಸ್ಥಲ ಸುಳುಹು.
ಆ ಭೇದವ ಕೂಡಲ ಚನ್ನಸಂಗಯ್ಯನಲ್ಲಿ ಕಾಣಾ,
ಸಿದ್ಧರಾಮಯ್ಯ.                ||೧೨||

೩೦೨

ಕಾಯಕದ ಕಳವಳದಲ್ಲಿ ಹುಟ್ಟಿ ಲಿಂಗವನರಿಯದಂತಿರಲಿ.
ಷಡು ಮಹಾವೇದ ಶಾಸ್ತ್ರಾಗಮ ಪುರಾಣದರ್ಥವ [5]ನೋದಿ[6],
ಲಿಂಗ ಉಂಟು ಇಲ್ಲೆಂಬ ಅಜ್ಞಾನಿಗಳಂತಿರಲಿ,
ಷಡುಶೈವರು ಹಂಚಾಗಿ ಹೋದರು,
ಎಂತು ನಿಜಲಿಂಗವಂತಂಗೆ ಸರಿಯೆಂಬೆ?
ಅದ್ವೈತಿಗಳೆಲ್ಲಾ ಲಿಂಗಾರಾಧನೆ ಹುಸಿಯೆಂದು
ಬುದ್ಧಿ ತಪ್ಪಿ ಕ್ರಮಗೆಟ್ಟು ಹೋದರು.
ಬ್ರಹ್ಮ ನಾನೆಂದು ಶಿರವ ಹೋಗಾಡಿಕೊಂಡನು.
ಬ್ರಹ್ಮಾದಿ ದೇವತೆಗಳು ಮಹಾಲಿಂಗಕ್ಕೆ ದೂರವಾಗಿ ಹೋದರು.
ಹಮ್ಮಿಲ್ಲದ ಕಾರಣ ಕೂಡಲಸಂಗನ ಶರಣರು ಜಗವಂದ್ಯರಾದರು. ||೧೩||

ಅಷ್ಟರಿಂದಂ ಮೇಲೆ ಭಿನ್ನಾಯುಕ್ತನೆಂಬ ಯುಗ ಹುಟ್ಟಿ ಇನ್ನೂರೈವತ್ತು ಕೋಟಿಯು ಐವತ್ತು ಲಕ್ಷವು ಆಯ್ದು ಸಾವಿರ ವರುಷ ವರ್ತಿಸುತ್ತಿದ್ದಿತ್ತು. ಈ ಒಂದು ಯುಗದ ಅರಸಿನ ಹೆಸರು ಕಟಕರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದಲ್ಲಿಹ ಗರ್ದುಗೆಯ ಮೇಲೆ ಕುಳಿತು, ಶಂಕರನೆಂಬ ದೇವರ ಪೂಜಿಸುತ್ತ ಸುಖಸಂಕಥಾವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಗುರುಲಿಂಗಜಂಗಮವ ಭಜಿಸಿ, ತ್ರಿವಿಧ [7]ಪ್ರಸಾದ ಸೇವಕರಾಗಿರ್ದು[8] ಶ್ರೀಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು, ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದ ರಸವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ತಾಮಸ ರುದ್ರನು ತಾರಕನ ಕಥನದಿಂ ತನ್ನ ಕ್ರಿಯಾಶಕ್ತಿಯಲ್ಲಿ ರತಿಯೋಗವಾಗಲೊಡನೆ ಇಬ್ಬರ ಶುಕ್ಲಶ್ರೋಣಿತಾತ್ಮಸಂಗದಿಂದ ಷಣ್ಮುಖ ಹುಟ್ಟಿ, ಹಕ್ಕಿಯ ವಾಹನವ ಪಡೆದನು. ಮತ್ತೆ ಜಡರುದ್ರನು ವೇದವಿಕ್ತವಾಗಿ, ದಕ್ಷಬ್ರಹ್ಮನ ಒತ್ತಿಗೆ ಬಂದು ವಿದ್ಯವನೋದಿ ಒಪ್ಪಿಸಿದಡೆ, ದಕ್ಷ ಮೆಚ್ಚಿ ತನ್ನ ಗಂಗೆ ಗೌರಿ ಪರ್ವತಿಯೆಂಬ ಮೂವರು ಮಕ್ಕಳ ಮದುವೆಯ ಮಾಡಿದನು. ಮಾಡಲಾಕ್ಷಣಂ ಬೀಗ ಬ್ರಹ್ಮನೆಂಬವ ತನ್ನ ಮಗಳೊಬ್ಬಳ ಅಂಬಿಕೆಯೆಂಬವಳ ಕೊಟ್ಟನು. ಕೊಡಲೊಡನೆ ರುದ್ರ ತನ್ನ ನಾಲ್ವರು ಮಕ್ಕಳ ಮದುವೆಯ ಮಾಡಿದನು. ರುದ್ರನು ತನ್ನ ನಾಲ್ವರು ಸತಿಯರ ಬಹುಮಾನದಿಂ ಹೇಮಾಚಲಕ್ಕೆ ಕರೆದೊಯ್ದು ವಿರ್ಶರಮಿಸುವಲ್ಲಿ ಗಜಂಗಳು ಮೈಥುನವ ಮಾಡುತ್ತಿಪ್ಪುದಂ ಕಂಡು ಜಡರುದ್ರನು ಕಾಮಿಸಿ ತಾ ಗಜವಾಗಿ ಗೌರಾದೇವಿ ಗಜೆಯಾಗಿ ಮೈಥುನವ ಮಾಡಿದೊಡೆ ಇಬ್ಬರ ಶುಕ್ಲ ಶ್ರೋಣಿತಾತ್ಮಸಂಗದಿಂದ ಬೆನಕ ಹುಟ್ಟಿ ಇಲಿಯ ವಾಹನವ ಪಡೆದನು. ಮತ್ತೆ ಭಸ್ಮಾಸುರನ ಕಥನದಿಂದ ಸತಿಯಾದ ವಿಷ್ಣುವಿನ ಲಾವಣ್ಯಮಂ ನೋಡಿ ತರಹರಿಸಲಾರದೆ ಜಡರುದ್ರನು ತರ್ಕ್ಕೈಸಿದಲ್ಲಿ ಇಬ್ಬರ ಬೆಮರು ಬೀಳಲದರಲ್ಲಿ ಭೈರವ ಹುಟ್ಟಿದನು, ಚೇಳಿನ ವಾಹನವ ಪಡೆದನು. ಮತ್ತೆ ವಿಷ್ಣು ಲಕ್ಷ್ಮಿಯಲ್ಲಿ ರತಿಯೋಗವಾಗಲ್ಕೆ ಶಾಮ ಹುಟ್ಟಿದನು. ಮತ್ತೆ ಬ್ರಹ್ಮ ಸರಸ್ವತಿಯಲ್ಲಿ ರತಿಯೋಗವಾಗಲ್ಕೆ ಸನತ್ಕುಮಾರ ಹುಟ್ಟಿದನು. ಈ ಷಣ್ಮುಖ ಬೆನಕ ಭೈರವನೆಂಬ ಮೂವರು ತಾಮಸರುದ್ರನಲ್ಲಿ ಹುಟ್ಟಿ ಅವನಿಗೆ ಮಕ್ಕಳಾಗಿಪ್ಪುದನರಿಯದೆ ಪರಶಿವನ ಮಕ್ಕಳೆಂಬರು ಪಾತಕರು. ರುದ್ರನ ಶಕ್ತಿಗಳ ಪರಶಿವನ ಶಕ್ತಿಗಳೆಂಬರು ಶಿವದ್ರೋಹಿಗಳು. ಇಂತೆಂಬ ಪುರಾತನ ರಗಣಿತ ವಚನಂಗಳಿಗೆ ಸಾಕ್ಷಿ.

೩೦೩

ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬವ ವ್ರತಗೇಡಿ,
ವಿಷ್ಣುವೆಂಬವ ಸತ್ತು ಬಿದ್ದ,
ರುದ್ರನೆಂಬವನು ಅಬದ್ಧ ಅ[9]ಚಾರಿ,
ಇವರೆಲ್ಲರ ಕೊಂದ ಕೊಲೆ ನಿಮ್ಮ ತಾಗೂದೆ[10] ಗುಹೇಶ್ವರಾ?        ||೧೪||

೩೦೪

ಆದಿತ್ರೈಯುಗದಲ್ಲಿ ಅ[11]ಧಿದೇವತೆಗಳು ಮೊದಲಾದ
ದೇವ ದಾನವ ಮಾನವರೆಲ್ಲ
ಮಾಯಾ ಲೊಹದಲ್ಲಿ ಹುಟ್ಟಿ ತೊಳಲಿ ಬಳಲುತ್ತಿದ್ದಾರೆ,
ಅವ ವೇಷವಾದಡೇನು ತಾಮಸಧಾರಿಗಳಿಗೆ?
ಕಾಮ, ಕ್ರೋದ, ಲೋಭ ಬಿಡದ ನಾನಾವಿಧ ಡಂಭಕರು,
ಹುಳದ ಹುಣ್ಣಿಗಾರಯ್ಯ ಮದ್ದ ನಿಕ್ಕುವರು?
ಏನು ಗುಹೇಶ್ವರ ಸೋ[12]ರೆಯ ಬಣ್ಣದ ಹಿರಿಯರು.                    ||೧೫||

೩೦೫

ಹರ ಶಕ್ತಿಗಳಲ್ಲಿ ಹುಟ್ಟಿದ ಬೆನಕ
ಭೈರವ ಷಣ್ಮುಖರ ಮಹಾ ಹರನ
ಮಕ್ಕಳೆಂಬ ಪಾತಕ ನೀ ಕೇಳೊ.
ಹರಿ ಹರನು ಒಂದೆಂಬ ಶಿವದ್ರೋಹಿ ನೀ ಕೇಳೊ.
ಹರಿ ಸಹಿತಾರರಿಂದತ್ತ
ಅಜಾತನ ಚರಿತ್ರ ಅಪ್ರತಿಮ ಮಹಿಮ
ಕೂಡಲ ಸಂಗಮದೇವನೊಬ್ಬನೆ ಕಾಣಿಭೋ.              ||೧೬||

ಮತ್ತೆ ಯುಗದಲ್ಲಿ ಮನ ಮಾಯೆಗಳು ವೇದಂಗಳೆಲ್ಲವನು ತಂದು, ಬ್ರಹ್ಮರ ಬಾಯೊಳು ಭೂತಾಪಗೊಳಿಸಿ ಹುಟ್ಟಿಸಿದವು. ಶಾಸ್ತ್ರಂಗಳೆಲ್ಲವನು ತಂದು ಸರಸ್ವತಿಯರ ಬಾಯೊಳು ಗೊಡ್ಡಾಟಗೊಳಿಸಿ ಹುಟ್ಟಿಸಿದವು. ಆಗಮಂಗಳೆಲ್ಲವನು ತಂದು ಋಷಿಗಳ ಬಾಯೊಳು ಮರುಳಾಟಗೊಳಿಸಿ ಹುಟ್ಟಿಸಿದವು. ಪುರಾಣಂಗಳೆಲ್ಲವನು ತಂದು ಪೂರ್ವದವರ ಬಾಯೊಳು [13]ಕೊರೆಚಾಟಣಂ[14]ಗೊಳಿಸಿ ಹುಟ್ಟಿಸಿದವು. ಅದೇನು ಕಾರಣ ವಿಧಿ ಮಾಯೆಗಳು ಶೃತಿಗಾಳೆಲ್ಲವನು ಷಡು ದೇವತೆಗಳೊಳಗಿನಿಂದ ತೆಗತಂದು ಚತುರ್ವಿಧ ತಂಡದವರುಗಳು ಬಾಯೊಳಗಿಂದ ಹುಟ್ಟಿಸಿದವೆಂಬಡೆ, ಇವು ಮಹಾಲಿಂಗ ಶರಣರ ಪ್ರಮಾಣುವಲ್ಲವಾಗಿ ತಮ್ಮಿಚ್ಛೆಗೆ ನಡೆಸುತ್ತಿಹವು. ಈ ಶ್ರುತಿಗಳು ಅರುವತ್ತೆಂಟು ಪ್ರಕಾರವಾಗಿಹವು. ಇವನು ಕಾಮ ಮಾಯೆಗಳು ನಿಃಕಲರ ಸಕಲರ ಪ್ರಳಯಕಾಲದ ವಿಜ್ಞಾನಕಲರ ಸಕಲರ ಇಂತಿವರೆಲ್ಲರ ಹೃದಯದ ಕಾಮಾದಿ ಸ್ಥಾನವೆಂಬ ಅರೆಗಲ್ಲ ಮೇಲೆ ನಿಂದು ಕೂಗಿ ನುಡಿಸುತ್ತ ಈ ಪಂಚಗ ಪಂಚ ತಂಡದವರುಗಳಿಗೆ ತಮ್ಮನೂ ಶೈವ ಪ್ರಣಮಂಗಳೂ ಶೈವ ಪಂಚಾಕ್ಷರಿಗಳನೂ ಪರಶಿವತ್ವವೆಂದರುಹಿ ತಮ್ಮೊಳಗೆ ಕೆಡಹಿಕೊಂಡು ಇರುತ್ತ ದ್ವೈತಾದ್ವೈತಕೆ ಕೊಂಡು ಕೊನರಿಸುತ್ತ ತಮ್ಮಿಂದತ್ತಣ ಮಹಾ ಪರಶಿವತತ್ವಂಗಳ ಕಂಡೆಹೆನೆಂದಡೆ ಕಾಣಲೀಸದೆ ಜವನಿಕೆಯಾಗಿನಿಂದು ಪುಣ್ಯಪಾಪಂಗಳಲ್ಲಿಯೂ ಅರಿವು ಮರವೆಗಳಲ್ಲಿಯೂ ಹೋದಕುಳಿಗೊಳುತ್ತಿಹವು. ಇವೆಲ್ಲವನರಿದು ದಾಂಟಿ ಪರಶಿವ ಬಸವಾದಿ ಪ್ರಮಥರನೂ ಅರಿದು ಮುಕ್ತರಾದರೆ ಭಕ್ತ ಮಹೇಶ್ವರರು. ಇಂತೆಂಬ ಪುರಾತನರಗಣಿತ ವಚನ ರಸಂಗಳಿಗೆ ಸಾಕ್ಷಿ.

೩೦೬.

ವೇದಂಗಳೆಂಬವು ಬ್ರಹ್ಮರ ಭೂತಾಟ.
ಶಾಸ್ತ್ರಂಗಳೆಂಬವು ಸರಸ್ವತಿಯ ಗೊಡ್ಡಾಟ.
ಆಗಮಂಗಳೆಂಬವು ಋಷಿಯರ ಉರುಳಾಟ.
ಪುರಾಣಂಗಳೆಂಬವು ಪೂರ್ವದವರ ಗೊಚ್ಚಾಟ.
ಇಂತಿವನರಿದವರ ನೇತಿಗಳೆದು
ನಿಜದಲ್ಲಿ ನಿಂದಿಪ್ಪಾತನೆ ಗುಹೇಶ್ವರನಲ್ಲಿ ಅಚ್ಚ ಲಿಂಗೈಕ್ಯನು        ||೧೭||

೩೦೭

ವೇದ ವೇದಿಸಲರಿಯದೆ ಕೆಟ್ಟವು.
ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು.
ಆಗಮ ಆಗು ಹೋಗನರಿಯದೆ ಕೆಟ್ಟವು.
ಪುರಾಣ ಪೂರೈಸಲರಿಯದೆ ಕೆಟ್ಟವು.
ಹಿರಿಯರೆಂಬವರು ತಮ್ಮ ತಾವರಿಯದೆ ಕೆಟ್ಟರು.
ತಮ್ಮ ಬುದ್ಧಿ ತಮ್ಮನೆ ತಿಂದಿತ್ತು;
ನಿಮ್ಮನೆತ್ತ ಬಲ್ಲರು ಗುಹೇಶ್ವರಾ       ||೧೮||

೩೦೮

ವೇದ ಪ್ರಮಾಣನಲ್ಲ[15] ಕಾಣಿಭೋ,
ಆಗಮ ಪ್ರಮಾಣನಲ್ಲ,
ಪುರಾಣ ಪ್ರಮಾಣನಲ್ಲ ಕಾಣಿಭೋ,[16]ಲಿಂಗ[17] ಲಿಂಗ ಸಂಗ[18]ದ ಮಧ್ಯದಲ್ಲಿ ಬೈಚಿಟ್ಟು,[19]ಬಳಲಿಸಿದನು[20] ಗುಹೇಶ್ವರಾ ನಿಮ್ಮ ಶರಣನು.          ||೧೯||

೩೦೯

ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು;
ತಪವ ಮಾಡುವ ಸಪ್ತ ಋಷಿಯರ [21]ಹೆಂಡಿರ[22] ನುಂಗಿತ್ತು.

ನವನಾಥ ಸಿದ್ಧರ ತೊತ್ತಳದುಳಿಯಿತ್ತು,
ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು.
ಕಪಿಜನ ವೈರಿ ಸರ್ಪನ [23]ಹೇಳಿ[24] ಗೆಯೊಳಗೆ ನಿದ್ರೆಗೈಯಿತ್ತು.
ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು.
ಕಾಮನೆಱೆಯ ಮೆಟ್ಟಿ ಕೂಗಿತ್ತು ಕೋಳಿಯ ಹಂಜರವನು
ನಾಶಿಕ ಬೆಕ್ಕು ನುಂಗಿತ್ತು. ಕೋಳಿಯಕ್ಕಜಧರಿನ,
ಅರುಹಿರಿಯರು ಅನುಭವಿಗಳು ಮಿಕ್ಕ
ಭಾವ ಸೋಂಕನುಂಡು ಕೊಕ್ಕರವಾಯಿತ್ತು,
ಹಿಂದಿರ್ದ ಕೋಳಿಯ ಕೊಕ್ಕರನ
ಕಪಿಯ ಭಾವವನರಿಯದಿರ್ದಕಾರಣ
ಕೆದರಿದ ಚರಣ ಉಡಗಿ
ಮರಣವನರಿಯದೆ, ಕರಣದೇಹೈಕ್ಯ[25]ವಿಲ್ಲದೆ
ಲಿಂಗೈಕ್ಯ ತಾನೆ ಪ್ರಾಣ ಪುರುಷರು,
ಇದನರಿದು ನುಂಗಿದಾತನೆ ಪರಮ ಶಿವಯೋಗಿ.
ಭಂಗವರಿದ ಜನನದ, ಹೊಲಬರಿಯದ ಭಾವದ
ಜೀವಭೇದವರಿಯು.
ಇದು ಕಾರಣ ಗುಹೇಶ್ವರಾ ನಿಮ್ಮ ಶರಣನು
ಲಿಂಗಸ್ವಯಶಕ್ತಿ, ಶರಣ, ತಾನೆ.       ||೨೦||

೩೧೦

ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ,
ಹೆಸರಿಟ್ಟು ಕರದವರಾರೊ?
ಅಕಟ, ಅಕಟ ಶಬ್ದಲಜ್ಜೆಯ  ನೋಡಾ,
ಗುಹೇಶ್ವರನನರಿಯದ ಅನುಭಾವಿಗಳ ಕರಕಟ ಕಾಡಿತ್ತು.           ||೨೧||

ಈ ಯುಗದಲ್ಲಿ ತಾಮಸ ರುದ್ರನು ತನ್ನ ಮಗನ ಷಣ್ಮುಖನ ಬ್ರಹ್ಮನ ವಾಸಕ್ಕೆ ಶೈವಪ್ರಣಮ ಪಂಚಾಕ್ಷರಿಗಳನು ಇಪ್ಪತ್ತುನಾಲ್ಕು ಪ್ತಂಙೆಯಕ್ಷರಗಳನು ಕಲಿಯಬೇಕೆಂದು ಕಳುಹಿದನು. ಕಳುಹಿದಡೆ ಬ್ರಹ್ಮನು ಓಂ ಎಂಬ ಅಕ್ವರವ ಬರದು ತೋರಿದಡೆ ಷಣ್ಮುಖನು ಈ ಒಂದು ಅಕ್ಷರಕ್ಕೆ ಅನುಭಾವವ ಬಲ್ಲೆಯಾ ಎಂದು ಕೇಳಿದಡಾತ ಬಲ್ಲೆನೆಂದ. ಬಲ್ಲಡೆ ಹೇಳೆಂದು ಒತ್ತಿ [26]ನುಡಿದ[27]ಜನನುಭಾವವ ಹೇಳಿದಡೆ ಅಗ್ನಿಜನು ಒಡಂಬಡದೆ ತಾ ಹೇಳಿದ. ತಾ ಹೇಳಿದಡಾ ಅಜನೊಡಂಬಡದೆ ತಮಗೆ ಶಿವನಾದ ತಾಮಸ ರುದ್ರನ ಬಳಿಗೈದಿ ಕೇಳಿದಡಾತ ಒಂದಕ್ಷರಕ್ಕೆ ಅರ್ಥವ ಹೇಳಿದಡಾ ಅಗ್ನಿಜನು ಅಲ್ಲೆಂದನು. ಈ ಮೂವರು ಅಲ್ಲ ಅಹುದೆನುತ್ತಿಪ್ಪ ವಾದವ ವಿಷ್ಣು ಕೇಳಿ ತಾನು ಕಂಡರ್ಥವ ಹೇಳಿದಡಾ ಅರ್ಥಂಗಳಲ್ಲವೆಂದು ಷಣ್ಮುಖನು ನೂಂಕಿ ಕಳದನು. ಕಳದ ಕಾರಣ ಜಡರುದ್ರ ತನ್ನ ಮಗನ ನೀನೆ ಹೇಳೆಂದಡಾ ಅಗ್ನಿಜ ನೀನು ಗದ್ದುಗೆಯಿಂದ ಇಳಿದು ಕೇಳೆಂದ. ಹಂಗೆಯಾಗಲಿಯೆನುತ ಇಳಿದು ಕೇಳಿದಡಾತನು ಅನುಭಾವಂಗಳ ಮಾಡಿದಡೆ ಅಹುದೆಂದು ಪರಿಣಾಮಿಸಿ[28] ಬ್ರಹ್ಮಿಯಾಗಿರು ನೀನು ಷಡಕ್ಷರರವನರಿದೆ ಎಂದೊ[29]ಲಿಸಿದವ[30] ತಂದೆ. ಇಂತಿವೆಲ್ಲವನು ಪರಶಿವನ ಬಸವಾದಿ ಪ್ರಮಥರು ಶೈವ ಪ್ರಮಾಣ ಪಂಚಾಕ್ಷರಿ ಶೈವ ಷಡುಸ್ಥಲವೆಂದು ವೇದ ಆಗಮಂ ಗಳರ್ಥಂಗಳೆಂದು ನಿರಾಕರಿಸಿ ಕಳದರು. ಅವನೆಲ್ಲವ ಏನು ಕಾರಣ ಕಳದರೆಂದರೆ ಅವು ಮನ ಪ್ರಕೃತಿಗಳಿಂದ ಹುಟ್ಟಿದ ಷಡುಸಾದಾಖ್ಯರಲ್ಲಿ ನಿಂದು ಚತುರ್ವಿಧ ಮೋಕ್ಷವ ಹೇಳುತ್ತ ಇದರ ನೆಂಬಿಸಿ ಉಂಬ ಶ್ರುತಿಗಳಾದ ಕಾರಣ ಕಳದರು. ಈ ಪ್ರಣಮ ಪಂಚಾಕ್ಷರಿಗಳನು ಇವರಿಂದ ಹುಟ್ಟಿದ ಸಕಲ ಶ್ರುತಿಗಳನು ಇಂತಿವೆಲ್ಲವನು ಕಳದವರು ತಾವಾವ ಮತಂಗಳನೆಮ್ಮಿ ನಡೆದು ನುಡಿದು[31] ಮಾಡುತಿಹರೆಂದಡೆ ಕಾಲ ಕಾಮ ಮಾಯೆಗಳ ಷಡುದೇವತೆಗಳ ಈ ಎಂಟು ನಿಃಕಲಾತ್ಮಕರುಗಳಿಂದತ್ತಣ, ತಾವೆ ತಾವಾದ ಮೂಲ ಪ್ರಣಮಂಗಳ ಒಡೆಲೊಳಗುದೈಸಿದ ಷಡುಸ್ಥಲಂಗಳೊಳಗಿರ್ದ ಮಹಾಭಕ್ತಿ [32]ಕ್ರಿಯೆಗಳ[33]ನೆಮ್ಮಿಹರು. ಈ ಯುಗದಲ್ಲಿ ರುದ್ರನ ಕೆಳಗಣವರ ಕೂಡೆ ವಿಷ್ಣುವಿನ ಕೆಳಗಣವರು [34]ನಾಲ್ವರ ಎಂಜಲ ಮಾತುಗಳ ಕಲಿತು ನಮ್ಮ ದೇವರಿಗೆಯೂ, ನಿಮ್ಮ ದೇವರಿಗೆಯೂ ಭಿನ್ನ ಭೇದವಿಲ್ಲವೆಂದು ವಾದಿಸಿದರು. ವಾದಿಸಿದಡ[35]ವರು ನಿಮ್ಮ ವಿಷ್ಣು ಮೂಲಾ ನಕ್ಷತ್ರದಲ್ಲಿ ಹುಟ್ಟಿ ಅಡವಿಯೊಳಗೆ ಭೂದೇವತೆಯ ಕೈಯೊಳು ಸಲಹಿಸಿಕೊಂಡಿರ್ದ ಕಾರಣ ಅವಂಗೆ ನಮ್ಮ ದೇವರ ಪುರಾಣಂಗಳಿಂದ ಉಪದೇಶವ ಕೊಡಿಸಿ ಬೇಕಾದರೆ ವ್ರತವ ಹಿಡಿಸಿದ ಬಳಿಕ ನಿಮ್ಮ ದೇವರು ನಮ್ಮ ದೇವರ ಪಾದರಕ್ಷೆಯ ಹೊತ್ತು ಸಗ್ಗಳೇಕ [36]ಸಕೀಲ[37] ಹಿಡಿದು ಎಪ್ಪತ್ತೇಳು ಲಕ್ಷ ವರುಷ ನಮ್ಮ ದೇವರ ಭಕ್ತರಂಗಳದ ರಜವ ಓಸರಿಸಿ ಮತ್ತೆ ಪಡದ ಗರುಡ ಲಕ್ಷ್ಮಿಕ್ಷೀರಾಬ್ಧಿಯ ಮತ್ತೆ ಪಾಪ ಭೂತ ರಾಕ್ಷಸಂಗಂಜಿ ಶಂಖ ಚಕ್ರ ನಾಮ ಪಡದು ನಮ್ಮ ದೇವರ ಎಡದ ಗಗದ್ದಿಗೆಯಲ್ಲಿ ಓಲೈಪಿಸಪ್ಪನ ನಮ್ಮ ದೇವರ ಸಮವೆನ್ನಬಹುದೆ ಎಂದು ವಾದ ಖಂಡಿಸಿದರು. ಅಂದವರು ವಾದಿಸಿದ ವಾದಂಗಳನ್ನು ನಮ್ಮ ಚನ್ನಬಸವಣ್ಣ[38]ನರಿದು ಇ[39]ತ್ತಾವಾದಿಗಳಿಗೆ ನಿರೂಪವ ಕೊಟ್ಟರು. ಮತ್ತೆ ರುದ್ರನು ಸರ್ವಂ ಖಲ್ವಿದಂ ಬ್ರಹ್ಮವೆಂಬ ಅದ್ವೈತ ಮತಂಗಳನು ಷಣ್ಮುಖನು ಸನತ್ಕುಮಾರ ಮೊದಲಾದ ಕೆಲ ಋಷಿಯರುಗಳಿಗೆ ಬೋಧಿಸಿದ. ಬ್ರಹ್ಮ ವಿಷ್ಣುಗಳು ಮೊದಲಾದ ಕೆಲ ಋಷಿಯರುಗಳಿಗೆ ಅದ್ವೈತ ಮತಂಗಳನು ಸರ್ವ[40]ಪಶುವೆಂಬ ಮತಂಗಳನ್ನು ಬೋಧಿಸಿದ ಕಾರಣ ಅವರೆಲ್ಲರು ಜಲ ನಿಧಿ ಕೈಲಾಸಂಗಳು ಮುಖ್ಯವಾದ ಚತುರ್ದಶ ಭುವನಂಗಳ ಭವನಂಗಳೊಳಗೆ ಆ ಬೋಧೆಗಳನೆ ಪ್ರತಿಷ್ಠೆಯಂ ಮಾಡಿ ಬೀಗಿ ಬೆರವುತ್ತಲಿಹರು. ಇಂತು ಬೀಗಿ ಬೆರವುತ್ತ ಹಮ್ಮಿಂದಿಹ ಕಾರಣ ನಿಃಕಳರು ಸಕಲರು ಪ್ರಳಯಕಲರು, ವಿಜ್ಞಾನಕಲರು, ಸಕಲಕಲರೆಂಬ ಪಂಚ ತಂಡದವರುಗಳೆಲ್ಲರೂ, ಆನೆ, ಒಂಟಿಗಳು ಮೊದಲಾದ ನಾನಾ ಮೃಗಪಶುಗಳಾಗಿ ಹುಟ್ಟಿಪುಣ್ಯ ಪಾಪಂಗಳನುಂಡು ತಾವು ಮೊದಲಲ್ಲಿದ್ದಂತಾಗುತ್ತಿಹರು. ಇಂತೆಂಬ ಪುರಾತನರಗಣಿತ ವಚನ ಸಾರಯಂಗಳಿಗೆ ಸಾಕ್ಷಿ.

೩೧೧

ಪಂಚಬ್ರಹ್ಮಂಗಳಗೆ ಕೆಡಿಸಿತ್ತು.
ಪ್ರಣಮ ಮಂತ್ರಂಗಳನೆ ಈಡಾಡಿತ್ತಲ್ಲಾ.
ಕರ್ಮಂಗಳನೆ ಕಳೆಯಿತ್ತಲ್ಲಾ.
ಕ್ರಿಯೆಗಳನೆ ಮೀರಿತ್ತಲ್ಲಾ.
ಆಗಮಂಗಳ ಹಲ್ಲುಗಳನೆ ಕಳೆಯಿತ್ತಲ್ಲಾ.
ಕೂಡಲ ಸಂಗಮದೇವರ
ಮೂಲ ಪ್ರಣಮ ಮಂತ್ರಂಗಳ ಭಕ್ತಿಗಜವೊ?[41]  ||೨೨||

೩೧೨

ವಚನದ ರಚನೆಯನುಭಾವವ ಬಲ್ಲೆವೆಂದೆಂಬರು,
ವಚನ ಯಾವುದು ರಚನೆಯಾವುದು ಅನುಭಾವವಾವುದು ಹೇಳಿರಣ್ಣಾ.
ವಚನ ಆತ್ಮತೃಪ್ತಿಯನರಿವುದು.
ರಚನೆ ಸ್ಥಾವರ ಜಂಗಮದಲ್ಲಿ ದಯವಾಗಿರಬಲ್ಲಡೆ ರಚನೆ.
ಗುರು ಲಿಂಗ ಜಂಗಮದಲ್ಲಿ ಕಾಣಬಲ್ಲಡೆಯನುಭಾವಿ.
ಅನುಭಾವಿಯಾದಡೆ ಷಡುವರ್ಗದಿಚ್ಛೆ[42]ಗೆ ಹರಿ[43]ಯದ[44] ಷಡುವರ್ಗಿಯಾಗದಿರಬೇಕು.
ಆಸೆಯಾಮಿಷ ಹರುಷದಿಚ್ಛೆಗೆ ಹರಿದು
ಆಸೆಯಾಮಿಷಯಾಗದಿರಬೇಕು.
ಪುಣ್ಯಪಾಪಗಳಿಚ್ಛೆಗೆ ಹರಿದು
ಪುಣ್ಯಪಾಪದ ಇಚ್ಛೆಗೆ ಹರಿಯದಿರಬೇಕು.
ಷಡುವರ್ಗ, ಆಸೆಯಾಮಿಷ, ಪುಣ್ಯಪಾಪ
ಇಂತಿವೆಲ್ಲವನೂ ಹರಿಯಲೊದದು
ಏಕೋಗ್ರಾಹಿಯಾಗಿ ನಿಂದಲ್ಲಿ ಅನುಭಾವಿ
ನಾಲ್ಕು ವೇದ, ಹದಿನಾರು ಶಾಸ್ತ್ರ
ಇಪ್ಪತ್ತೆಂಟಾಗಮ, ಹದಿನೆಂಟು ಪುರಾಣ
ಇಂತಿವೆಲ್ಲವನು ಬಲ್ಲೆವೆಂದು ನುಡಿವಾತನನುಭಾವಿಯೇ? ಅಲ್ಲ.
ಅದೇಕೆಂದಡೆ:
ಅವು ಬ್ರಹ್ಮಸರಸ್ವತಿಯ, ಋಷಿಯರ ವಿಷ್ಣುವಿನ
ಇಂತಿವರ ಯಂಜಲುಗಳಾಗಿಪ್ಪ ಕಾರಣ.
ಇವ ಬಲ್ಲೆವೆಂದು ನುಡಿವಾತನನುಭಾವಿಯಲ್ಲ.
ಆತನು ಇದಿರ ನಂಬಿಸಿ ಉಂಬ ಭುಂಜಕನಯ್ಯಾ
ಕೂಡಲ ಚೆನ್ನಸಂಗಮದೇವಾ          ||೨೩||


[1] ಪರಿತ (ಬ)

[2] ಪರಿತ (ಬ)

[3] ಪತ್ತಿ (ಬ)

[4] ಪತ್ತಿ (ಬ)

[5] ಮೀರಿದ (ಬ)

[6] ಮೀರಿದ (ಬ)

[7] ವಾಸೋಹಂ ಕೆಲವರು ಮಾಡಿದವರು (ಬ)

[8] ವಾಸೋಹಂ ಕೆಲವರು ಮಾಡಿದವರು (ಬ)

[9] ವಿ (ಬ)

[10] ದು (ಬ)

[11] ಅ (ಬ)

[12] ನ (ಬ)

[13] ರೊಚ್ಚಟ (ಬ)

[14] ರೊಚ್ಚಟ (ಬ)

[15] + ಶಾಸ್ತ್ರ ಪ್ರಮಾಣವಲ್ಲ (ಬ)

[16] x ದ (ಬ)

[17] ಅಂಗಸಂಗದ (ಅವಚಂ)

[18] ಅಂಗಸಂಗದ (ಅವಚಂ)

[19] ಬ:ಸೊದಮಿ (ಅವಚಂ) ೭ – ೮

[20] ಬ:ಸೊದಮಿ (ಅವಚಂ) ೭ – ೮

[21] x (ಬ)

[22] x (ಬ)

[23] ಪಗೆ (ಬ)

[24] ಪಗೆ (ಬ)

[25] ಪಗೆ (ಬ)

[26] ದಡ (ಬ)

[27] ದಡ (ಬ)

[28] + ಷಡುಸ್ಥಲ (ಬ)

[29] ಪ್ಪಿರಿಸಿದನವನ (ಬ)

[30] ಪ್ಪಿರಿಸಿದನವನ (ಬ)

[31] ಭಕ್ತಿ (ಬ)

[32] x (ಬ)

[33] x (ಬ)

[34] + ಈ(ಬ)

[35] x (ಬ)

[36] ಕಲ್ಲ (ಬ)

[37] ಕಲ್ಲ (ಬ)

[38] ಪರಿದು(ಬ)

[39]  ಮ(ಬ)

[40] +ವೂ(ಬ)

[41] ಹೊ(ಬ)

[42] ಗಳಿ (ಬ)

[43] ದು (ಬ)

[44] ದು (ಬ)