೨೬೬

ಒಳಗೆ ತೊಳೆಯಲರಿಯದೆ
ಹೊರಗನೇ ತೊಳದು ಕುಡಿವುತ್ತಿರ್ದರೆಲ್ಲರು.
ಪಾದೋದಕ ಪ್ರಸಾದವ ಲಿಂಗಕ್ಕೆ ಕೊಟ್ಟು
ಕೊಳಲರಿಯದೆ, ಬಂದ ಬಟ್ಟೆಯಲ್ಲಿ ಮುಳುಗುತ್ತಿರ್ದರು ಎಲ್ಲರು
ಗುಹೇಶ್ವರನನರಿಯದೆ ಮರುಳಾದರಲ್ಲಾ ಸಂಗನಬಸವಣ್ಣಾ !     ||೪೪||

ಅಷ್ಟರಿಂದಂ ಮೇಲೆ ಅಸಮಗಣಂಗಳು ಶಿವಮರುಳುಗಳು ತಮ್ಮ ತಮ್ಮ ನಯನಂಗಳೊಳಗೆ ತುಂಬಿರ್ದ ಉದಕಮಂ ಮೃತ್ತಿಕೆಯ ರಾಶಿಗೆರದೆರದು ಒಂದಿಸಿ ನಾಲ್ವತೆಂಟು ಮುದ್ದಿಗಳಂ ಮಹಾಪರ್ವತದಷ್ಟು ಗಾತ್ರಮಂ ಮಾಡಿ ಆ ಮುದ್ದೆಗಳ ನಾಲ್ವತ್ತೆಂಟು ಶಿವಮರುಳುಗಳು ಕರತಲದೊಳಗೆ ಸಿದ್ಧ

[1]ರಸ[2]ದ ಘಟಿಕೆಗಳನಿರಿಸಿಕೊಂಬಂತೆ ಇರಿಸಿಕೊಂಡು ಪಶ್ಚಿಮ ಮುಖವಾಗಿ ನಡದು ಶ್ರೀಪರ್ವತಕ್ಕೆ ಉತ್ತರ – ವಾಯವ್ಯದಿಕ್ಕೆಂಬಂತೆ ತಂದಿಳಿಹಿ ತಾವು ನಿಂದಡಿಯ ಭೂಮಿಯಂ ನಾಲ್ವತ್ತೆಂಟು ಯೋಜನ ಪ್ರಮಾಣವಾದದಾಳಮಂ ತೆಗೆದು ಆ ಮಣ್ಣ ಮೇಲಕ್ಕೆ ತಂದು ತಡೆಯಿಂದಾಚೆಯಲ್ಲಿ ಬಳಸಿ ರಾಶಿಯಾಗಿ ಸುರಿದು ಬಿಟ್ಟ ಬಳಿಕ ಅದರ ಚೌಕದಗಲವನಳದು ನೋಡುವಲ್ಲಿ ನಲವತ್ತೆಂಟು ಯೋಜನ ಪ್ರಮಾಣವಾಗಿದ್ದಿತ್ತು. ಇಂತಪ್ಪ ತೆರಪಿನ ಕೋಣಕ್ಕೆ ಶಿವಮರಳುಗಳು ತಾವು ತಂದ ಪವಿತ್ರ ಪರ್ವತಂಗಳಂ ತುಂಬಿ ಗುಂಡಾಂತರವಗೊಂಡೀಕ್ಷಿಸುವಾಗ ಆ ಬಸವಣ್ಣನ ಭಾವಪರುಷದಿಂ ತುಂಬಿ ಧರೆಯಿದಂ ಮೇಲೆ ಹದಿನಾಲ್ಕು ಮಾರಿಂಗೆಯು ಘನವೆಂಬಂತೆ ಜಗಲಿ[3]ಯಾಲಿ ಭಕ್ತಿಭೂಮಿ ಬೆಳವಂತೆ ಬೆಳದು ಕೋಟೆ ಕೊತ್ತಳಗಳಂತೆ ಚೌಕವಪ್ಪಿ ಜಲದುರ್ಗಮಾಗಿ ಜಂಬಿಟ್ಟಿಗೆಯಂತಿರ್ದುದಂ ಸುಜ್ಞಾನ ಮರುಳುಗಳು ಕಂಡು ಚೋದ್ಯಮನೂಡ್ಡಿರುವಲ್ಲಿ ನಲವತ್ತೆಂಟು ಯೋಜನದ ಭಕ್ತಿ [4]ಜಗಲಿಯ ಮೇಲಲ್ಲಿಗೆ[5] ಜಲಸಮೇತವಪ್ಪ ಜಂಬಿಟ್ಟಿಗೆಯ ಮೊರಡಿಗಳು ಕಿರಿಕಿರಿದಾಗಿ ಮಾಡಿ ಬಹಳವೆನಿಸುತ್ತಿರ್ದವು. ಅವನೆಲ್ಲವ ಧರಿಸಿ ಕೊಂಡಂಥಾ ಭಕ್ತಿ ಜಲದುರ್ಗದ ಮಧ್ಯದೊಳಗೆ ಪರತತ್ವದ ಮರುಳುಗಳು[6] ಶಿವಾಲಯವದೆಯೆಂಬಂತೆ ಸಿಲೆಗಳಿಂದ ವಿಶ್ವತೋ ಮುಖದ ಕೆಲಸಗತಿಗಳನು ಒಳಕೊಂಡಲು ಒಂದು ಚಪ್ಪರಹಳಿಗೆಯಂ ಘನ ಸಮ್ಮೋಹನದೊಳು ರಚಿಸಿ ಅದರ ಮೇಲೆ ನವಶಿಖರಂಗಳಂ [7]ನೋಡಿ[8] ಘನಪರಿಣಾಮದೊಳಗಿರುತ್ತಿದ್ದವು. ಅಷ್ಟರಿಂದಂ ಮೇಲೆ ಘನರುದ್ರಾಕ್ಷಿಯ ವೃಕ್ಷದ ಕೆಳಗಿರ್ದ ವೃಷಭರೂಪನಲ್ಲಿಯೆ ಕುರುಹಗೊಳಿಸಿ ಬಸವಣ್ಣನು ಗುರುಲಿಂಗಜಂಗಲಮ ಭಕ್ತನಾಗಿ ಗಣಸಮ್ಮೇಳನದಿಂ ಹೊರವಂಟು ಬರುತ ಆ ಸ್ವಾನುಭಾವ ವಿವೇಕ ವಕ್ಷವ ಮುಖದಿರುಹಿ ನೋಡುವಾಗ ಆ ಶಶಿಯ ಪ್ರವೇಶದಲ್ಲಿ ಕೆಲರುದ್ರಾಕ್ಷಿಯ ವೃಕ್ಷಂಗಳೆಸದಿರ್ದುದಂ[9] ವಿಸ್ಮಯಂಬಟ್ಟು ಬೆರಗಾಗಿ ನೂರೊಂದುಸ್ಥಲದನುಭವರಸಾಮೃತದೊಳಗೋಲಾಡುತ್ತಂ ಬಂದು ಪರತತ್ವದ ಮರುಳುಗಳು ಮಾಡಿದ ಭಕ್ತಿ ಪರ್ವತವನೇರಿ ಮೇಲೆ ನೋಡುವಾಗ ವಿಚಿತ್ರಮಾಗಿರ್ದಿತ್ತು. ಮತ್ತೆ ಅಷ್ಟಾಸಷ್ಠಿ ತೀರ್ಥಂಗಳೆಲ್ಲವ ಮೀರಿದ ಮಹಾ ತೀರ್ಥಂಗಳು ನೆಲಸಿಪ್ಪುದಂ ಬಸವಾದಿ ಪ್ರಮಥರುಗಳು ಎಲ್ಲಾ ಕಂಡು ಮಹಾಶಿವಾನುಭವವಾಯಿತ್ತೆನುತದರ ವಿಸ್ತೀರ್ಣವನಾಲೋಕಿಸಿ ಮೆಚ್ಚಿಕೊಂಡು ಬರುವಲ್ಲಿ ಬಸವಣ್ಣನು ಶ್ರೀ ಶ್ರೀ ಶ್ರೀ ಮಹಾಬಲಿಕೆಯಾಗಿದೆಯೆಂದು ನಿರೂಪ ಮಾಡಲಾಕ್ಷಣ ಗಣಂಗಳೆಲ್ಲರು ಕೇಳಿ ಶಿವ ಶಿವ ನೀವು ಮೆಟ್ಟಿ ನೋಡಿದಡೆ ಜರಿದು ಕುಸಿವ ಬಳಿಕ ಇನ್ನಾವ ಪ್ರಳಯಂಗಳಿಗೆಯೂ ಕರಗದೆನುತ್ತ ಅದಕ್ಕೆ ಬಲಿತೇ ದುರ್ಗವೆಂಬ ನಾಮವಂ ಕಲ್ಪಿಸುತ್ತ ಉಘೇ ಉಘೇ ಚಾಂಗು ಭಲಾ ಎನುತ್ತ ಒಂಬತ್ತು ಕಳಸವನುಳ್ಳ ನವರಂಗ ಮಾಳಿಗೆಗೆ ಬಿಜಯಂಗೈದು ಮೂರ್ತಿಗೊಂಡು ತಮ್ಮ ಷಡುಸ್ಥಲ ಮಾರ್ಗಕ್ಕೆ ಸಲುವಳಿಯ ಅನುಭಾವಂಗಳನಂತ ಪ್ರಕಾರಂಗಳಾಗಿ ವಿಸ್ತರಿಸುತ್ತ ನಿತ್ಯತೃಪ್ತರಾಗಿರುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೨೬೭

ಅಂಗುಲ ಹನ್ನೆರಡು ಕೂಡಲು ಒಂದುಗೇಣು.
ಗೇಣು ಎರಡು ಕೂಡಲು ಒಂದು ಮೋಳ.
ಮೊಳವೆರಡು ಕೂಡಲು ವೊಂದು ಹಸ್ತ.
ಹಸ್ತವೆರಡು ಕೂಡಲು ಒಂದು ಮಾರು.
ಮಾರೆರಡು ಕೂಡಲು ಒಂದು ಜಂಘೆ.
ಜಂಘೆ ಏಳುನೂರೆಪ್ಪತ್ತು ಕೂಡಲು ಒಂದು ಪಾದಚ್ಛಯ.
ಪಾದಚ್ಛಯವೆರಡು ಸಾವಿರದೆಂಟುನೂರು ಕೂಡಲು ಒಂದು ಕೂಗಳತೆ.
ಕೂಗಳತೆ ನಾಲ್ಕು ಕೂಡಲು ಒಂದು ಹರದಾರಿ.
ಹರದಾರಿ ನಾಲ್ಕು ಕೂಡಲು ಒಂದು ಯೋಜನ.
ಅಂಥಾ ಯೋಜನ ನಾಲ್ಕು ಚೌಕಕ್ಕು ಹನ್ನೆರಡು ಹನ್ನೆರಡು ಕೂಡಲು
ಬಳಸಿ ನಾಲ್ವತ್ತೆಂಟು ಯೋಜನ ಪ್ರಯಾಣಿನ ಕಟ್ಟಳೆಯಾಯಿತ್ತು.
ಇಂತಪ್ಪ ಕಟ್ಟಳೆಯಾಗಿರ್ದ ಕಲ್ಯಾಣದೊಳಗಿರುವ ಗಣಂಗಳೆಲ್ಲರನೂ
ಕೂಡಲಸಂಗಯ್ಯ ನಿಮ್ಮೊಳು ಕಂಡು ಸುಖಿಯಾಗಿರ್ದೆನು.         ||೪೫||

ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಭಿನ್ನಜ, ಭಿನ್ನಾಯುಕ್ತ, ಐಯುಕ್ತ, ಮೈಯುಕ್ತ, ಮನ್ಯರಣ, ವನ್ಯರಣ, ವಿಶ್ವಾರಣ, ವಿಶ್ವಾವಸು, ಅಲಂಕೃತ, ಕೃತಯುಗ, ತ್ರೈತಾಯುಗ, ದ್ವಾಪರಯುಗ, ಕಲಿಯುಗ, ಇಂತೀ ಹದಿನೆಂಟು ಯುಗಂಗಳಿಗೆಯೂ, ಅತಳ, ವಿತಳ, ಸುತಳ, ಮಹೀತಳ, ತಳಾತಳ, ರಸಾತಳ, ಪಾತಾಳ, ಭೂಲೋಕ, ಭುವರ್ಲೋಕ, ಸುರ್ವಲೋಕ, ಜನರ್ಲೋಕ.ತಪರ್ಲೋಕ, ಮಹರ್ಲೋಕ, ಸತ್ಯಲೋಕ, ಇಂತೀ ಹದಿನಾಲ್ಕು ಲೋಕಂಗಳಿಗೆಯು, ಅವೆಲ್ಲವಕ್ಕೂ ಅತಿಶಯವೆನಿಪ ಕಲ್ಯಾಣಪುರವೆಂಬ ಕೈಲಾಸಮಂ ಮಾಡಿ, ಮಹಾ ಘನವಪ್ಪ ಭಕ್ತಿಯಂ ಘಟಿಸಿದ, ಬಸವರಾಜದೇವರು ಮೊದಲಾದ ಮಹಾ ಪ್ರಮಥಗಣಂಗಳ ದಿವ್ಯ ಶ್ರೀಪಾದಪದ್ಮಾರಾಧಕರಾಗಿ ಆನು ಬಲ್ಲೆನೆಂಬ ಗರ್ವವಿಲ್ಲವಾಗಿ ನೀವು ಕೊಟ್ಟನುಗ್ರಹದ ನಿರೂಪವ ಬಿನ್ನಹವಮಾಡಿಹೆನು ಅವಧಿರಸೂದು. ಭಕ್ತಿಸೂಕ್ಷ್ಮ, ಭಕ್ತಿಕಟ್ಟಣೆ, ಭಕ್ತಿಕ್ರಮ, ಶರಣಸತಿ ಲಿಂಗಪತಿಯಾದ ಸಂಬಂಧ, ಪಾದೋದಕ ಪ್ರಸಾದ ನಿರ್ಣಯವು. ಇಂತೀ ಕ್ರಿಯಾದ್ವೈತಮಂ ಆನುಬಲ್ಲಂತೆ ಬಾಲ ತೊದಲ್ನುಡಿಯಿಂದ ವಿಸ್ತರಿಸಿ ಪೇಳ್ದೆ ಮಹಾಮಹಿಮರು ಕೇಳಿರಯ್ಯ. ಶಯವ ಸೈವೆರಗಾದನು, ಪಾಶುಪತಿ ಪಥವನರಿಯ, ಕಾಳಾಮುಖಿ ಕಂಗೆಟ್ಟ, ಮಹಾ ವ್ರತ ಮದವೇರಿದ, ಸನ್ಯಾಶಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ, ಆರುಭಕ್ತಿ ಪಥಕ್ಕೆ ಸಲ್ಲವು ಕೇಳಿರಣ್ಣಾ. ಏಳು ಏಳು ಭವದಲ್ಲಿ ಭವಿಯಾಗಿ ಬಂದು ಶ್ರೀಗುರು ಕಟಾಕ್ಷ ನಿರೀಕ್ಷಣೆಯಿಂದ ಪ್ರಾಣನ ಮೇಲೆ ಲಿಂಗಪ್ರತಿಷ್ಠೆಯಂ ಮಾಡಿಕೊಂಡು ಆರರಿಂದ ಮೀರಿ ಸಲ್ಲವಿಟ್ಟು ವೀರಮಾಹೇಶ್ವರತ್ವಮಂ ಪಡದು ಮರಳಿ ತನ್ನ ಕಮಲಮಂ ಅರಸಿದಡೆ ಒಡದ ಮಡಕೆಯ ಓಡಿನಂತಹನು ಕೇಳಿರಣ್ಣಾ. ತನ್ನ ಕುಲವೆಂದು ಪ್ರಾಣಸ್ನೇಹಮಾಡಿ ಆ ಮೋಹ ಕಿಂಚಿತ್ತು ಮಾತ್ರ ಬೆರಸಿದಡೆ ಅವ ಪಂಚಮಮಹಾಪಾತಕ ರೌರವನರಕಿ. ಅವನ ಭಕ್ತನೆಂದು ನೋಡಿದಡೆ, ನುಡಿಸಿದಡೆ ಸಹಪಙ್ತೆಯಲ್ಲಿ ಕುಳ್ಳಿರ್ದಡೆ, ಸಂಭಾಷಣೆಯಂ ಮಾಡಿದಡೆ, ಕೈಯ್ಯೊಡ್ಡಿ ಬೇಡಿದಡವರಿಗೆ ಕುಂಭೀಪಾತಕ ನಾಯಕ ನರಕ ಕೇಳಿರಣ್ಣಾ. ಶುದ್ಧ ಸಿದ್ಧ ಪ್ರಸಾದವ ಭೇದಾಭೇದಮಂ ಸೂಕ್ಷ್ಮಮಂ ಪೇಳ್ವೆಂ. ಭಕ್ತ ಲಿಂಗಾರ್ಚನೆಯಂ ಮಾಡುತ್ತಿರಲು ಮಠದಲ್ಲಿ ಪದಾರ್ಥ ಹೆಚ್ಚಿರಲು, ಆ ಸಮಯದಲ್ಲಿ ಒಡೆಯರು ಬಿಜಯಂಗೆಯ್ಯಲು ತಾನು ಕೊಂಡುದೆ ಪ್ರಸಾದ, ನಿಂದುದೆ ಪದಾರ್ಥವಾಗಿ ನೀಡಬಹುದಯ್ಯಾ. ನೀಡಬಹುದು ಬಾರದು ಎಂಬ ಸಂದೇಹಮಂ ತಾಳ್ದರೆ ಲಿಂಗಕ್ಕೆ ದೂರ ಜಂಗಮಕ್ಕೆ ಸಲ್ಲನಯ್ಯಾ. ಅದೇಕೆಂದಡೆ ಅದು ಶುದ್ಧಮುಖದಿಂದ ಬಂದುದಾಗಿ ಪ್ರಸಿದ್ಧ ಮುಖಕೆ ನೀಡಬಹುದು. ಸಂದೇಹಮಂ ತಾಳಲಾಗದು. ಭಕ್ತಂಗೆ ಭವಿನೇಮಸ್ತರು ಸಲಹಲಾಗದು. ಅದೇನು ಕಾರಣವೆಂದರೆ: ಭವಿಸ್ವಪಚ, ನೇಮಸ್ತ ಸಮಗಾರ, ಇವರಿಬ್ಬರು ಸತಿಸುತರೆಂದು ಮಿತ್ರರೆಂದು ಮಠವ ಹೊಗಿಸಿದಡೆ, ಅನ್ನವನಿಕ್ಕಿದಡೆ ಸುರೆಯ ಮಡಕಿಯಂ ತೊಳದು ಘೃತವಂ ತುಂಬಿ ಸ್ವಾನನಂ ತಿನಿಸಿ ಮಿಕ್ಕುದ ತಾ ಭುಂಜಿಸುವಂತೆ ಕೇಳಿರಣ್ಣಾ. ಭಕ್ತ ಲಿಂಗಾರ್ಚನೆಯ ಮಾಡಿದ ಪಿತೃಭಾಜನಮಂ ಶುನಕಶೂಕರ ಕುಕ್ಕುಟ ಮಾರ್ಜಾಲಂಗಳು ಮುಟ್ಟಿದರೆ, ಅವರ ಕೂಡೆ ಸಹಭೋಜನಮಂ ಮಾಡಿದಂತೆ. ಗುರುಲಿಂಗ ಜಂಗಮಕ್ಕೆ ಅರ್ಪಿತಮಂ ಮಾಡಿ ಒಕ್ಕು ಮಿಕ್ಕು ಪ್ರಸಾದಮಂ ಭೋಗಿಸುವಲ್ಲಿ ಪದಾರ್ಥವೆಂದು ಭಾವಿಸಿದಡೆ ಪ್ರಸಾದದ್ರೋಹ. ಜಂಗಮದಲ್ಲಿ ಅನೃತ ಅಸ್ಥಿರವಾಕ್ಯ ಪಙ್ತೆಭೇದವು ಉದಾಸೀನ ನಿರ್ದಯ ಇಷ್ಟು ಜಂಗಮದ್ರೋಹ. ಲಿಂಗದಲ್ಲಿ ತ್ರಿಕಾಲಪೂಜೆ ಪ್ರೀತಿ ಪ್ರೇಮ ಸ್ನೇಹ ಮೋಹವಿಲ್ಲದಿರುವುದೆ ಲಿಂಗದ್ರೋಹ. ಗುರುವಿನಲ್ಲಿ ಅಹಂಕರದೊಳಿರುವ, ಸಹ ಪಙ್ತೆಯಲ್ಲಿ ಕುಳ್ಳಿರುವ, ಸಂಭಾಷಣೆಯಂ ಮಾಡುವ ಕೈಯೊಡ್ಡಿ ಬೇಡುವ ಇಷ್ಟು ಗುರುದ್ರೋಹ. ಇದು ಕಾರಣ ಗುರುಲಿಂಗ ಜಂಗಮಕ್ಕೆ ತನುಮನ ಧನವರ್ಪಿಸಿ ಏಕಲಿಂಗ ನಿಷ್ಠಾಪರನಾಗಿ ಭಕ್ತಕಾಯವೆಂಬ ಶಬ್ದಕ್ಕೆ ಸಂದು ಪ್ರಸಾದವೆಂದುಕೊಂಡು ಎಂಜಲೆಂದು ಕೈಯ ತೊಳೆದರೆ ಅಘೋರ ನರಕ ತಪ್ಪದು ಕೂಡಲ ಚೆನ್ನಸಂಗಮದೇವಯ್ಯ.

ಇಂತೆಂಬ ಪ್ರಮಥಗಣಂಗಳು ಪರತತ್ವದ ಮಹಾನುಭಾವಗಳೊಳಗೋಲಾಡುತ್ತ ಇರಲ್ಕೆ ಶೈವಭಕ್ತಿ ಸಾಮ್ರಾಜ್ಯ ಸಂಪತ್ತನಾಳುತ್ತಿಪ್ಪ ಸಮಯದೊಳು ನೂರೊಂದು ಸ್ಥಲದನುಭಾವದಮೃತ ರಸ ವಜ್ರದ ಮಹಾ ಮೇರುಮಂದಿರಾದಿವಿಡಿದು ಪರಶಿವನು ಪರಶಕ್ತಿಯೂ ತಾವಿಬ್ಬರು ಅಖಂಡಿತರಾಗಿ ತಮ್ಮ ಲೀಲೆಯಿಂದ ಕಲ್ಯಾಣಪುರಮಂ ನೋಡಬೇಕೆಂಬ ಕಾರಣದೊಳು ಬರುತ್ತಿದ್ದಲ್ಲಿ ಎರಡು ಗೊಡ್ಡಾವುಗಳು ತಮ್ಮ ಸಲಹಿದವರು ಉದಾಸಿಸಿದರೆಂದು ಬಲಿಕೆದುರ್ಗದ ಕೆಳಗಡಗಿರುವಲ್ಲಿ ಮೇಲಿರ್ದ ಶರಣರುಗಳು ಷಡುಸ್ಥಲದ ರಸವಾಕುಗಳೊಳು ಬಸವ ಬಸವ ಎಂದು ವಚಿಸುವ ಸುನಾದಂಗಳ ಲಾಲಿಸಿ ಕೇಳಿ ಏಳು ದಿನ ಹುಲ್ಲು ನೀರಂಬಿಟ್ಟು ಬೆರಗು ಗೊಂಡಿಪ್ಪವಂ ಕಂಡು ವಿಸ್ಮಿತರಾಗಿ ಉತ್ತರಭಾಗದಿಂ ಮೇಲಕ್ಕೇರುವಾಗ ಕೂಡೆ ಬರುವ ಪಶುಗಳಂ ನೋಡಿ ಶಿವ ಶಕ್ತಿಗಳು ತಾವಿಬ್ಬರು ಪ್ರಭುಸಿದ್ಧರಾಮರೆಂಬ ಜಂಗಮಾಕೃತಿಯಂ ತಾಳಿ ಚಿತ್ತವಿಸುವಾಗ ಸರ್ವಜ್ಞ ಬಸವಣ್ಣ ತನ್ನ ಜ್ಯೋತಿರ್ಲಿಂಗದಲ್ಲಿ ಕಂಡು ಇದಿರೆದ್ದು ಬಂದು ನಮಿಸಿ ಮಹಾ ಭಕ್ತಿವಾಸಕ್ಕೆ ಬಿಜಯಂಗೈಸಿದಡಾತಪ್ರಭುಸ್ವಾಮಿ ಬಸವಣ್ಣನಿರ್ದ ಕ್ಷೇತ್ರವ ಕಂಡಲ್ಲಿ ವರ್ತಿಸಿ ಮುಕ್ತರಾದ ಭಕ್ತ ಮಾಹೇಶ್ವರರಿಗೆ ಆವ ಚಿಂತೆಯೂ ಇಲ್ಲವೆಂದು ಶರಣರುಗಳಿಗೆ ನಿರೂಪಿಸುತ್ತಿರ್ದನು. ಇರಲಿಕೆಯಾಗಿ ಬಲಿಕೆ ದುರ್ಗದ ಮೂಡಣ ಕಡೆಯೊರಕ್ಕೆ ಮಯೂರ ಬಿಳಿಯ ಹಂಸನೆಂಬೆರಡು ಪಕ್ಷಿಗಳು ತಾವಿರ್ದ ಠಾವಿಂಗೆ ಕಿಚ್ಚುಬರೆ ಕಂಡೆದ್ದು ಬಂದಿರುತ್ತಿರ್ದವು. ದಕ್ಷಿಣದ ಕಡೆಯೊರಕ್ಕೆ ಶುಕಪಿಕಗಳೆರಡು ತಾವಿರ್ದ ಠಾವಿಂಗೆ ವ್ಯಾಧರಂ ಬರೆ ಕಂಡೆದ್ದು ಬಂದಿರ್ದವು. ಮತ್ತೆ ಪಶ್ಚಿಮದ ಕಡೆಯೊರಕ್ಕೆ ಇಲಿ ಬೆಕ್ಕುಗಳೆರಡು ತಾವಿರ್ದ ಠಾವಿಂಗೆ ಘಟಸರ್ಪ ಬರೆ ಕಂಡೆದ್ದು ಒಂದನೊಂದನರಿಯದೆ ಬಂದಿಪ್ಪ ಸಮಯದಲ್ಲಿ ಆ ಶಕ್ತಿ ದುರ್ಗದ ಮಧ್ಯದಲ್ಲಿರ್ದ ಚಪ್ಪರ ಮಾಳಿಗೆಯೊಳಗಳ ಗಣಂಗಳೆಲ್ಲ ಬಸವ ಬಸವಾಯೆಂಬ ಪ್ರಣಮ ಮಂತ್ರವನು ಜಪಿಸುವಲ್ಲಿ, ಆ ಜೀವಿಗಳು ಕೇಳದ್ದು ಪಾಪಂಗಳು ತೆರಳ್ದು ಗಣಂಗಳ ಸಮೀಪಕ್ಕೆ ಬಂದು ಏಕಭಾವದಿಂದವರ ಪಾದಂಗಳಿಗೆ ತಲೆಯರಗಿಪ್ಪಾಗ, ಆ ಬರಡು ಪಶುಗಳ ಮೊಲೆಗಳ ನಾಳಂಗಳಿಂದ ಶರಣ ಗಣಂಗಳಿದ್ದಲ್ಲಿಗೆ ಅಮೃತ ಸೋನೆ ಸುರಿದು ಪಾಲ್ಗೊಣವಾಗಲೊಡನೆ ಪ್ರಮಥರುಗಳ ಹಸ್ತ ಪರುಷದ ಭಸಿತಮಂ ಬಸವ ಮಿಶ್ರವ ಮಾಡಿದಬಳಿಕ ಅಮೃತದ ಜಂಗಮ ದೇವರ ಪಾದತೀರ್ಥ ಪ್ರಸಾದ ಮುಂತಾಗಿ ಗಣಂಗಳಿಗೆಡೆ ಮಾಡಿದವರು ವೀರಶೈವಕ್ಕುಂಟಾದ ಕ್ರಿಯೆಗಳು ಮುಂತಾಗಿ ತಮ್ಮ ಲಿಂಗಂಗಳಿಗೆ ಕೊಟ್ಟು ಕೊಂಡುಳಿದ ಶೇಷಪ್ರಸಾದವ ಬಸವಾದಿ ಪ್ರಮಥ ಭಕ್ತರು ತಂದು ತಮ್ಮ ಲಿಂಗಂಗಳಿಗೆ ಇತ್ತಾರೋಗಿಸಿಪ್ಪ ಸಮಯದೊಳು ತಮ್ಮ ಮುಂದೆರಗಿ ನಮಸ್ಕರಿಸಿಪ್ಪ ಪಶು ಜೀವಿಗಳೆಂಟು ಎದ್ದು ಬಂದು ಗಣಂಗಳಂಘ್ರಿಗೆ ಬಿದ್ದು ಪ್ರಸಾದಮಂ ಬೇಡಿ ಬಿಡದೇಳದಿಪ್ಪುದಂ ಕಂಡು ವಿಸ್ಮಯಂಬಟ್ಟು ಭಕ್ತಿ ದಯಾಸಮುದ್ರ ಬಸವಣ್ಣನ ಹಿಡಿದೆತ್ತಿ ಬೆನ್ನತಡಹಲಾಕ್ಷಣವು ಪುರುಷಾಕೃತಿಗಳಾಗಿ ಮುಖಂಗಳಲು ಮೊದಲಂತಿರ್ದುದಂ ನೋಡಿ ಭಸಿತ ರುದ್ರಾಕ್ಷೆ ಪಾದೋದಕ ಪ್ರಸಾದಲಿಂಗ ಮೂಲ ಮಂತ್ರಂಗಳು ಮುಂತಾಗಿ ವೀರಶೈವ ದೀಕ್ಷೆಯ ಮಾಡಿ ಒಳಕೊಂಡು ಸ್ಥಲಕುಳದನು ಭವರಸದ ಕೊಣದೊಳಗೋಕುಳಿಯನಾಡುತ್ತ ನಿತ್ಯ ತೃಪ್ತರಾಗುತ್ತಿರ್ದರು, ಇಂತೆಂಬ ಪುರಾತನರಗಣಿತ ವಚನ ರಸಾಮೃತಕ್ಕೆ ಸಾಕ್ಷಿ.

೨೬೮

ಶಿವಾಶಿವಾ ಉಪಪಾತಕ ಮಹಾ ಪಾತಕಂಗಳ ಮಾಡಿದ
ಕರ್ಮ ಕೋಟಾನು ಕೋಟಿ, ಒಬ್ಬ ಶಿವಶರಣನಂಗಳವಂ
ಕಂಡಲ್ಲಿ ಅಳಿದು ಹೋಹವು ನೋಡಾ.
ಅದೇನು ಕಾರಣವೆಂದಡಾ ಶಿವಶರಣನಂತರಂಗದಲ್ಲಿ ಶಿವನಿಪ್ಪನು.
ಆ ಶಿವನಿಪ್ಪಲ್ಲಿ ಕೈಲಾಸವಿಪ್ಪುದು.
ಆ ಕೈಲಾಸವಿಪ್ಪಲ್ಲಿ ಸಮಸ್ತ ರುದ್ರಗಣಂಗಳಿಹರು.
ಆ ರುದ್ರಗಣಂಗಳಿಪ್ಪಲ್ಲಿ ಅಷ್ಟಾಷಷ್ಟಿ ತೀರ್ಥಂಗಳಿಂದತ್ತಣ
ಮಹಾ ತೀರ್ಥಂಗಳಿಪ್ಪವು.
ಶಿವನೊಲಿದಲ್ಲಿ ಇನಿತುವೆರಸಿ ನೆಲಸಿರ್ಪವಯ್ಯಾ.
ಇಂಥ ಶರಣ ಸಂಗನಬಸವಣ್ಣನ ಅಂಗಳ ಕಂಡನಾಗಿ
ಎನ್ನ ಗುಹೇಶ್ವರ ಲಿಂಗದ ಕಂಗಳಿಗೆ ತೃಪ್ತಿಯಾಯಿತ್ತು
ಕಾಣಾ ಸಿದ್ಧರಾಮಯ್ಯ.      ||೪೬||

೨೬೯

ಅಮೃತ ಸಾಗದೊಳಗಿರ್ದು ಆಕಳ ಚಿಂತೆಯೇಕಯ್ಯ?
ಮೇರುಮಂದಿರದೊಳಗಿರ್ದು ಜಲವ ತೊಳೆವ ಚಿಂತೆಯೇಕಯ್ಯ?
ಶ್ರೀಗುರುವಿನೊಳಗಿರ್ದು ತತ್ವವಿದ್ಯದ ಚಿಂತೆಯೇಕಯ್ಯ?
ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆಯೇಕಯ್ಯ?
ಕರಸ್ತಲದೊಳಗೆ ಲಿಂಗವಿರ್ದಬಳಿಕ ಇನ್ನಾವ ಚಿಂತೆಯೇಕಯ್ಯ
ಹೇಳಾ ಗುಹೇರ್ಶವರ?      ||೪೭||

೨೭೦

ಗಿರಿಯ ಶಿಖರದ ಮೇಲೆ ಕುಳಿತು
ಜಡೆಯನೇರಿಸಿಕೊಂಡು ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ?
ಕೃತಯುಗ ತ್ರೇತಾಯುಗ ದ್ವಾಪಾರ ಕಲಿಯುಗದೊಡನೊಡನೆ
ಸವದ ಪಾಷಾಣ ನಮ್ಮ ಕೂಡಲಸಂಗನ ಶರಣರ ಪ್ರಸಾದ
ಜೀವಿಗಳಲ್ಲದವರು ಮರ್ತ್ಯಲೋಕದೊಳಗೆ
ಏಸುಕಾಲವಿರ್ದಡೇನು ಅವರಂಥು ಕಾಣೆರಣ್ಣಾ.            ||೪೮||

ಇಂತೆಂಬ ಪರಶಿವ ಪರಮ ಮೂಲಜ್ಞಾನಿ ಬಸವಣ್ಣಾದಿ ಪ್ರಮಥಗಣಂಗಳೆಲ್ಲರು ಮರ್ತ್ಯಲೋಕದೊಳಗೆ ವೀರಶೈವ ಭಕ್ತ ಸಂಭ್ರಮದೊಳಗಿಪ್ಪುದಂ ಆ ಶರಣಾಗತ ವಜ್ರ ಪಂಜರವೆಂಬ ಪರಶಿವಲೋಕದ ಹದಿನಾಲ್ಕು ನೆಲೆಯೊಳಗೊಪ್ಪುವಂಥ ಅಸಮಗಣಂಗಳೆಲ್ಲಾ ಭಾವದಲ್ಲಿ ಅರಿದು ಪರಮಾನಂದ ಲೀಲೆಯೊಳು ಅಖಂಡಿತವಾಗಿ ಕೆಲಮಹಾಗಣಂಗಳು ಮಹಾಮೇರುವಿನೊಳಗಿನಿಂದಿಳಿದು ದಕ್ಷಿಣ ದ್ವಾರದೊಳು ಹೊರವಂಟು ಭಕ್ತಿ ಹಸೆಯ ಪಾತಾಳ ಭೂಮಿಯ ಆ ಎರಡರ ಮಧ್ಯದಲ್ಲಿಗೆ ಬಿಜಯಂ ಮಾಡಿ ದಕ್ಷಿಣ ಮುಖವಾಗಿ ಚಪ್ಪರದೊಳಗೆ ಬರುವಂತೆ ಬರುತ ಅನಂತ ಯೋಜನಮಂ ಮೀರಿದ ಬಳಿಕ ಆ ಬಲಿಕೆ ಪರ್ವತದ ಮೇಲಿರ್ದ ಬಸವನ ವೀರಶೈವ ಭಕ್ತಿವಾಸನೆಯೆಂಬ ಬೇರು ಸೋಪಾನವಾಗೆರಗಿರ್ದುದಂ ಕಂಡು ಚೋದ್ಯಂಬಟ್ಟು ಅಲ್ಲಿ ಕೆಲಗಣಂಗಳು ಬಸವಾ ಬಸವಾ ಎನುತ ನೂರೊಂದುಸ್ಥಲದ ಸೋಪಾನದಮೇಲೇರುವಂತೆ ತೆರೆಯೊಳಗೆ ಶಿಖಾಗ್ರದಲ್ಲಿಗೆ ಬರಲಾಕ್ಷಣ ಬಸವ ಕಂಡು ಬೆರಸಿದ ನಿತ್ಯ. ಅತ್ತಲಿರ್ದ ಪ್ರಮಥ ಗಣಂಗಳು ಮತ್ತೆ ದಕ್ಷಿಣ ಮುಖವಾಗಿ ತೆರಳ್ದು ಸುಯಿದಾನದಿಂ ಗಮಿಸಿ ಕೆಲ ಯೋಜನಮಂ ಕಳೆದು ಬರುವಾಗ ಆ ಸ್ವಾನುಭಾವ ವಿವೇಕವೆಂಬ ರುದ್ರಾಕ್ಷಿಯ ವೃಕ್ಷದ ಬೇರು ವೀರಶೈವದ ಸ್ಥಲ ಕುಳದಂತೆ ಸೋಪಾನವಾಗೆರಗಿಪ್ಪುದಂ ಕಂಡು ವಿಸ್ಮಿತರಾಗಿ ಅಲ್ಲಿ ಕೆಲ ಶರಣರುಗಳು ಉಘೇ ಉಘೇ ಎನುತ, ತೆರೆಯೊಳಗೆಯೇ ಶಿಖಾಗ್ರದಲ್ಲಿಗೆ ಚಿತ್ತೈಸಿ ಮಣಿಮಾಲೆಗಳಂ ಧರಿಸಿಕೊಂಡವರವರ [10]ಶಾಖೆ[11]ಗಳ ಮೇಲಣಿಂದ ಬಲಿಕೆ ಪರ್ವತಕೆ ಲಂಘಿಸಿಬರೆ, ಪರಮಮೂಲಜ್ಞಾನಿ ಬಸವಣ್ಣನರಿದು ಒಳಕೊಂಡಿರುತ್ತಿರ್ದ ನಿತ್ಯ. ಅತ್ತಲುಳಿದ ಮಹಾ ಶರಣರುಗಳು ಮತ್ತೆಯು ದಕ್ಷಿಣ ಮುಖವಾಗಿ ಕೆಲಯೋಜನಮಂ ದಾಂಡಿ ಬಿಜಯಂ ಮಾಡಿ ನೋಡುವಗ ಆ ಶ್ರೀಶೈಲದ ಬಿಲದ್ವಾರ ಸೋಪಾನ ಜಾಳಂದ್ರಂಗಳಂ ಕಂಡು ಒಳಹೊಕ್ಕು ಒಳಗೆಯ ಚಿತ್ತವಿಸಿ ಬ್ರಹ್ಮ ರಂಧ್ರದಲ್ಲಿಲ ಹೊರವಂಟು ಮೇಲೆ ನಿಂದು ನಾಲ್ವತ್ತೆಂಟು ಯೋಜನವ ನಿಲಿಕೆ ನೋಡುವಾಗಲಲ್ಲಿಗಲ್ಲಿಗೆ ಅನಂತತೀರ್ಥಂಗಳು ಮೀರಿದ ಮಹಾತೀರ್ಥಂಗಳಿರ್ದವುಇ. ಅನಂತ [12]ರಸಂಗಳ[13] ಮೀರಿದ ಮಹಾ [14]ರಸಂಗಳ[15]ಳಿರ್ದವು ಅನಂತ ರತ್ನಂಗಳ ಮೀರಿದ ಮಹಾ ರತ್ನಂಗಳಿರ್ದವು, ಅನಂತ ಕಲ್ಪವೃಕ್ಷಂಗಳ ಮೀರಿದ ಮಹಾ ವೃಕ್ಷಂಗಳಿರ್ದವು, ಅನಂತ ಫಲಂಗಳ ಮೀರಿದ ಮಹಾ ಫಲಂಗಳಿರ್ದವು. ಅನಂತ ಜ್ಯೋತಿಗಳ ಮೀರಿದ ಮಹಾ ಜ್ಯೋತಿಗಳಿರ್ದವು, ಅನಂತ ವಾಸನೆಗಳ ಮೀರಿದ ಮಹಾ ವಾಸನೆಗಳಿರ್ದವು . ಅನಂತ ವಾದ್ಯವ ಮೀರಿದ ಮಹಾ ವಾದ್ಯಂಗಳಿರ್ದವು, ಅನಂತ ಸಿದ್ಧಿಗಳ ಮೀರಿದ ಮಹಾ ಸಿದ್ಧಿಗಳಿರ್ದವು. ಮತ್ತೆ ವಿಭೂತಿ ರುದ್ರಾಕ್ಷಿಯನು ಪ್ರಣಮ ಪಂಚಾಕ್ಷರಿಮಯ ಗುರು ಲಿಂಗ ಜಂಗಮ ಪಾದೋದಕ ಪ್ರಸಾದಮಯವಾಗಿರ್ದವು. ಇಂತು ಅನಂತಕೋಟಿ ಪರಶಿವ ತತ್ವಂಗಳಂ ಕೊಂಡಾಡಿ ಸಂತೋಷಂ ಮಾಡಿ ಪರ್ವತಾಭರಣನ ಬಳಿಯಿಂದ [16]ಗಣಂಗಳೆಲ್ಲಾ ಹೊರವಂಟು ಬರಲಿಕೆ ಪರ್ವತ ಬರೆ ಬಸವಾದಿ ಪ್ರಮಥರೆಲ್ಲರೂ ಕಂಡಿದಿರೆದ್ದು ಬಂದು ಬಿಜಯಂಗಯಸಿಕೊಂಡೊಯ್ದು ನೂರೊಂದು ಸ್ಥಲನುಭವ ಸುಖರಸದೊಳಗೋಲಾಡುತ್ತಿರ್ದರು. ಇಂತಪ್ಪ ಮಹಾ ಭಕ್ತಿ ಜ್ಞಾನ ವೈರಾಗ್ಯಂಗಳಂ ಕೂಟ ಸಮರಸವನರಿಯದ ಕಾರಣ ಪಂಚಾಂಗ ಪಂಚತಂಡದವರುಗಳೆಲ್ಲರು ಸತ್ತು ಹುಟ್ಟುತ್ತಿಹರು. ಇಂತೆಂಬ ಪುರಾತನರಗಣಿತ ವಚನ ಸಾರಾಯಂಗಳಿಗೆ ಸಾಕ್ಷಿ.

೨೭೧

ಅಯ್ಯಾ ನಿಮ್ಮಾದ್ಯರ ವಚನ ಕೇಳಿ ಎನ್ನಂಗದ
ಭಂಗ ಹೀಗಿತ್ತು ನೋಡಾ.
ಅಯ್ಯಾ ನಿಮ್ಮ ಶರಣರ ಸಂಗದಿಂದ ಮಹಾಲಿಂಗದ
[17]ಸಂಯೋಗವಾಯಿತ್ತು ನೋಡಾ.
ಅಯ್ಯಾ ನಿಮ್ಮ ಶರಣರ ಸಂಗದಿಂದ ಮಹಾಪ್ರಸಾದದ ಪರುಷವ ಕಂಡೆ[18]
ಆ ವರುಷದ ಮೇಲೆ ಮೂರು ಜ್ಯೋತಿಯ ಕಂಡೆ,
ಆ ಜ್ಯೋತಿಯ ಬೆಳಗಿನಲ್ಲಿ ಒಂಭತ್ತು ರತ್ನವ ಕಂಡೆ.
ಆ ರತ್ನಂಗಳ ಮೇಲೆ ಒಂದು ವಜ್ರವ ಕಂಡೆ.
ಆ ವಜ್ರದ ಮೇಲೆ ಒಂದು ಅಮೃತದ ಕೊಡನ ಕಂಡೆ.
ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರದ,
ಕರದವನೆ ನೆರದ, ನೆರದವನೆ [19]ಕುರುಹನರಿದ.
ಅರಿದವನೆ ನಿಮ್ಮನರಿದವ ಕಾಣಾ ಎನ್ನಯ್ಯಪ್ರಿಯ
ಇಮ್ಮಡಿ ನಿಷ್ಕಳಂಕ ಮಲ್ಲಿಕಾರ್ಜುನ. ||೪೯||

೨೭೨

ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು.
ಆ ಬಾವಿಯೊಳಗೆ ಕಬ್ಬುನದದಿರು ಹುಟ್ಟಿ ಸಿದ್ಧರಸವ ನಲುಂಗಿತ್ತು.
ಇದ್ದವನ ಸುದ್ದಿ ಸತ್ತವ[20] ಹೇಳಿದ ಕಾಣದವ ಕಂಡು ಕೇಳದೆ ಹೋದ.
ಸದಾಶಿವಮೂರ್ತಿಲಿಂಗವು ಬಚ್ಚ ಬರಿಯ ಬಯಲು.       ||೫೦||

೨೭೩

ಪೃಥ್ವಿಯನತಿಗಳದ ಸ್ಥಾವರಂಗಳಿಲ್ಲ.
ಅಪ್ಪುವನತಿಗಳದ ತೀರ್ಥಯಾತ್ರೆಗಳಿಲ್ಲ.
ಅಗ್ನಿಯನತಿಗಳದ ಹೋಮಸಮಾಧಿಗಳಿಲ್ಲ.
ವಾಯುವನತಿಗಳದ ನೇಮ ನಿತ್ಯಂಗಳಿಲ್ಲ.
ಆಕಾಶವನತಿಗಳದ ಧ್ಯಾನ ಮೌನಂಗಳಿಲ್ಲ.
ಗುಹೇಶ್ವರಲಿಂಗವ ತಾನೆಂದರಿದ[21]ಂಗೆ ಆವಂಗವೂ ಇಲ್ಲ.       ||೫೧||

೨೭೪

ಪಿಂಡ ಬ್ರಹ್ಮಾಂಡದೊಳಗೆ ತಂಡತಂಡದ ಲೋಕ,
ಗಂಡಗಂಡರ [22]ಅರ[23]ಸಿ ಬಡವರೊಡೆಯರ ನುಂಗಿ[24]

ನಾಡೊಳಗೆ ಗಿಡುನಡದು ಮಡುವನೆಲ್ಲವ ತೊಡದು
ನಡುರಂಗದಲ್ಲಿ ಕೊಡನೊಡೆಯಲೀಸದ[25] ಮಡದಿಯನೊಡಗೂಡಿ
ಗಗನವನಡಿಗೆಯ ಮಾಡ್ಯುಂಡು
ಸುಖಿಯಾದೇನು[26] ಗುಹೇಶ್ವರಾ.      ||೫೨||

೨೭೫

ಉದಕದೊಳು ಕಿಚ್ಚು ಹುಟ್ಟು ಸುಡುತ್ತಿರ್ದುದ ಕಂಡೆ ನೋಡಾ !
ಗಗನದ ಮೇಲೆ ಮಾಮರನ ಕಂಡೆ ನೋಡಾ.
ಪಕ್ಕವಿಲ್ಲದ[27] ಬಯಲನುಂಗಿತ್ತು ನೋಡಾ ಗುಹೇಶ್ವರಾ. ||೫೩||

೨೭೬

ಬೇರಿಲ್ಲದ ಗಿಡುವಿಂಗೆ ಪರಿಮಳವಿಲ್ಲದ ಪುಷ್ಪ ಹುಟ್ಟಿತ್ತು ನೋಡಾ.
ರೂಹಿಲ್ಲದ ನಲ್ಲನನವಗ್ರಹಿಸಿತ್ತು ನೋಡಾ.
ವೃಕ್ಷವಿಲ್ಲದ ದಳದಲ್ಲಿ ಒಂದು ಪಕ್ಷಿ ಹುಟ್ಟಿತ್ತು ನೋಡಾ.
ಅತ್ತಲಿತ್ತಲು ಕಾಣದೆ ನೆತ್ತಿಯ ನಯನದಲ್ಲಿ ನೋಡಿತ್ತಲ್ಲಾ.
ನಿತ್ಯಾನಂದ ಪರಿಪೂರ್ಣ ನಿಲವಿನಮೃತ ಬಿಂದುವ
ದಣಿಯಲುಂಡು ಪಶ್ಚಿಮದಲ್ಲಿ ಗುಹೇಶ್ವರಲಿಂಗವ ಸ್ವೀಕರಿಸಿತಲ್ಲಾ?            ||೫೪||

೨೭೭

ಅಂಗೈ ತಿಂದೂದೆನ್ನ ಕಂಗಳು ಕೆತ್ತಿಹವಯ್ಯ.
ಬಂದಹರಯ್ಯ ಪುರಾತನರು ಎಮ್ಮ ಮನೆಗೆ.
ಬಂದಹರಯ್ಯ ಶರಣರುಗಳು ಎಮ್ಮ ಮನೆಗೆ
ಕಂಡ ಕನಸು ದಿಟವಾಗಿ, ಜಂಗಮ ಮನೆಗೆ ಬಂದರೆ
ಶಿವಾರ್ಚನೆಯ ಮಾಡಿಸುವೆ ಕೂಡಲಸಂಗಯ್ಯ ನಿಮ್ಮ ಮುಂದೆ.  ||೫೫||

೨೭೮

ಭುವನ ಹದಿನಾಲ್ಕರ ಕೀಲನೆ ಕಳದು,
ಉರವಣಿಸುವ ಪವನಗಳ ತರಹರಿಸಿ ತಡದು,
ಯೋಗ ಚತುರಸದೊಳಗಣ ನಿಲವ ಕಾಣಬೇಕು.
ವಜ್ರ ನೀಲದ ಹೊರೆಯಲ್ಲಿರ್ದ ಭುವನಂಗಳ ಹೊದ್ದಿ
ಮಾಣಿಕ್ಯವ ನುಂಗಿ ಉಗುಳದು ಗುಹೇಶ್ವರಾ.  ||೫೬||

೨೭೯

ಲಿಂಗದ ಪೂರ್ವಾಶ್ರಯವ ಕಳದು,
ಇದು ಪ್ರಾಣಲಿಂಗವೆಂದು ತೋರಬಂದನಯ್ಯಾ ಬಸವಣ್ಣನು.
ಲಾಂಛನದ ಪೂರ್ವಾಶ್ರಯವ ಕಳದು,
ಇದು ಲಿಂಗ ಜಂಗಮವೆಂದು ತೊರಬಂದನಯ್ಯಾ ಬಸವಣ್ಣು.
ಪ್ರಸಾದದ ಪೂವಾಶ್ರಯ ಕಳದು ಇದು ಮಹಾ ಪ್ರಸಾದವೆಂದು
[28]ನಿಶ್ಚ[29]ಯವ ಮಾಡಿ ತೋರಬಂದನಯ್ಯಾ ಬಸವಣ್ಣನು.

ಲಿಂಗ ಜಂಗಮದ ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು
ಮರ್ತ್ಯಲೋಕಕ್ಕೆ ಮೈಗಾಣಿಸಿದನಯ್ಯ ಕೂಡಲಚೆನ್ನಸಂಗಯ್ಯ
[30]ಮ್ಮ ಬಸವಣ್ಣು.           ||೫೭||

೨೮೦

ಇದ್ದುದ ಹೇಳಲಿಲ್ಲ, ಇದ್ದುದ ತೋರಲಿಲ್ಲ,
ಹೊದ್ದಿದಾಶ್ರಮವ[31] ನಾನೇನೆಂಬೆನು ಶಿವನೆ.
ಭದ್ರಕಾಳಿಯ ಬಸುರೊಳಗಿರ್ದ ಭಾವಿಯ ಸರ್ಪನು
ಸಿದ್ಧರಸದ ಘುಟಿಕೆಯ ನುಂಗಿ ಎದ್ದಾಡಿತ್ತು ನೋಡಾ.
ಹದ್ದಿನ ಹೆಡೆಯಲ್ಲಿ ಮಾಣಿಕ್ಯವಿದ್ದುದು ಇಲ್ಲವೆಂದು
ಎದ್ದುಹೇಳುವ ಕನಸು ತಾನಲ್ಲ ಗುಹೇಶ್ವರಾ.   ||೫೮||

೨೮೧

ಹನ್ನೆರಡು ಯುಗ ಪ್ರಳಯವಾದಲ್ಲಿ ಆದಿಬ್ರಹ್ಮಂಗೆ ಪ್ರಳಯ.
ಆದಿಬ್ರಹ್ಮನ ಪ್ರಳಯವಾದಲ್ಲಿ ಮೀನಜರಿಗೆ ಒಂದು ಸಿಂಪಿನ ಪ್ರಳಯ.
ಆ ಮೀನಜರಿಗೆ[32] ಪ್ರಳಯವಾದಲ್ಲಿ ಶೂಲಿಗೆ ಒಂದು ನಿಮಿಷ.
[33]ಶೂಲಿ ಪ್ರಳಯದೊಳು ಅಳಿದುಳಿದಲ್ಲಿ[34] ಸಹಸ್ರನೆಂಬ
ಗಣೇಶ್ವರಂಗೆ ಒಂದು ಪ್ರಳಯ.
ಆ ಸಹಸ್ರನೆಂಬ ಗಣೇಶ್ವರನು ಪ್ರಳಯದೊಳು ಅಳಿದುಳಿದಲ್ಲಿ
ಅಸಾಸುರನೆಂಬ ಗಣೇಶ್ವರಂಗೆ ಒಂದು ಪ್ರಳಯ.
ಆ ಅಸಾಸುರನೆಂಬ ಗಣೇಶ್ವರನು ಪ್ರಳಯದೊಳು ಅಳಿದುಳಿದಲ್ಲಿ
ಅಕ್ಷಯನೆಂಬ ಗಣೇಶ್ವರಂಗೆ ಒಂದು [35]ತಲೆಯ[36] ಪ್ರಳಯ.
ಆ ಅಕ್ಷಯವೆಂಬ ಗಣೇಶ್ವರಂಗೆ ಅರುವತ್ತು ಕೋಟಿ ತಲೆ.
ಅಂಥಾ ರುದ್ರಾವತಾರ ಹಲವು ಲಯವಾದಲ್ಲಿ
ಗುಹೇಶ್ವರ ನಿಮ್ಮ ಶರಣನೇನೆಂದೂ ಅರಿಯ.  ||೫೯||

೨೮೨

ಖೇಚರರಾಗಲಿ ಭೂಚರರಾಗಲಿ ಲಾಂಛನಧಾರಿಯಾಗಲಿ
ಮರಣವಾರಿಗೆಯೂ ಮನ್ನಣೆಯಿಲ್ಲ.
ಸನಕ ಸನಂದಾದಿಗಳಿಗೆಯೂ ಮರಣ ಮನ್ನಣೆಯಿಲ್ಲ.
ಇದು ಕಾರಣ ಗುಹೇಶ್ವರ, ನಿಮ್ಮ ಶರಣರು
ಕಾಲನ ಬಾಧೆಗೆ ಕಲ್ಪಿತವಾಗರು.      ||೬೦||


[1] ಸರ (ಅ)

[2] ಸರ (ಅ)

[3] ತ್ತಿ (ಬ)

[4] ಜಗತ್ತಿಯ ಮೇಲಲ್ಲಿಗಲ್ಲಿಗೆ (ಬ)

[5] ಜಗತ್ತಿಯ ಮೇಲಲ್ಲಿಗಲ್ಲಿಗೆ (ಬ)

[6] + ಒಂದು (ಬ)

[7] ನೊಡ್ಡಿ (ಅ)

[8] ನೊಡ್ಡಿ (ಅ)

[9] + ಕಂಡ (ಬ)

[10] ಶಿಖೆ (ಅ)

[11] ಶಿಖೆ (ಅ)

[12] ಸಾರಂಗಳ (ಬ)

[13] ಸಾರಂಗಳ (ಬ)

[14] ಸಾರಂಗಳ (ಬ)

[15] ಸಾರಂಗಳ (ಬ)

[16] + ಮುಂದಣ (ಬ)

[17] + ಸಂಗ (ಬ)

[18] + ನೋಡಾ (ಬ)

[19] ನ (ಬ)

[20] ಕೆ (ಬ)

[21] + ವ (ಬ)

[22] ನಿರಿ (ಬ)

[23] ನಿರಿ (ಬ)

[24] + ತ್ತು (ಬ)

[25] ದೆ (ಬ)

[26] ಗೊ (ಬ)

[27] ಪಕ್ಷಿ (ಬ)

[28] ಸಯ (ಬ)

[29] ಸಯ (ಬ)

[30] ನಿ (ಬ)

[31] x (ಅ)

[32] + ಮೀನ (ಬ)

[33] x (ಅ)

[34] + ಆ (ಬ)

[35]  (ಬ)

[36] x (ಬ)