೨೪೯

ಜಗತ್ಸೃಷ್ಟನವಹ ಅಜನ ಕೊಂಬು ಮುರಿಯಿತ್ತು.
ಧರಯಮೇಲಣ ಚಂದ್ರ ಸೂರ್ಯರಿಬ್ಬರು ನೆಲಕ್ಕೆ ಬಿದ್ದರಲ್ಲಾ !
ಉದಯನಿಂದಡಸ್ತಮಾನ ನಿಲುವುದು, ಊರು ಬೆಂದು ಉಲುಹಳಿದುದು.
ಇದೇನು ಸೋಜಿಗವಯ್ಯ.
ದೇವ ಸತ್ತ, ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರ.         ||೨೭||

೨೫೦

ಸಾಸಿರದೆಂಟನೆಯ ದಳವಲ್ಲಿ ಖೇಚರಿ ಚಲ್ಲಣಗಟ್ಟಿ
ವಾಸುಗಿಯ ಫಣಾಮಣಿಯು ಪ್ರಜ್ವಲಿಸೂದ ಕಂಡೆ.
ಆ ಸುರರೆಲ್ಲ ತಮತಮಗಂಜಿ ಓಸರಿಸಿ ಮುಂದೆ ನಡೆವಲ್ಲಿ
ನಾಸಿಕ ಮನವ ಮುಸುಕುವುದ ಕಂಡೆ.
ತಾ ಸುಖಸ್ವರೂಪನಾದ, ಸುಖಮುಖ ಪ್ರವೇಶದಿಂದ ಗೋಸಾಸಿರ
ನಡೆಗೆಟ್ಟವು, ಗುಹೇಶ್ವರ ನಿಮ್ಮುವ ನೆರೆದನಾಗಿ            ||೨೮||

ಈ ಪ್ರಕಾರದಲ್ಲಿ ಕರಣಗ್ರಾಮಂಗಳ ಕೆಡಿಸೂದನರಿಯದವನು ಬಹಿರಂಗದ ಗ್ರಾಮಂಗಳ ಕೆಡಿಸೂದರನಿಯದವನು ಬಹಿರಂಗದ ಗ್ರಾಮಂಗಳ ಮಾಡುತ್ತ ಆ ಬಹಿರಂಗದ ಗ್ರಾಮಂಗಳನೆ ಅಂತರಂಗದ ಗ್ರಾಮಂಗಳಂ ಮಾಡುತ್ತ ಇಂತಪ್ಪ ಭೂತಗ್ರಾಮಂಗಳ ಷಡುದೇವತೆಗಳು ತಾವು ಮುನ್ನವೆ ತೊಟ್ಟುಕೊಂಡು ನಾಲ್ಕು ತಂಡಂಗಳಮಾಡುತ್ತಾಡುತ್ತಿರುವಲ್ಲಿ ಆ ಗೋಮಿತ ಪರ್ವತವೆಂಬ ಕೈಲಾಸದ ಮೇಲೆ ಗಣಸ್ತೋಮಸಹಿತ ಮೂರ್ತಿಗೊಂಡಿರ್ದ ಪಂಚ ವಿಕೃತನೆಂಬ ಗಣೇಶ್ವರನು ಆ ಅಸುರರುಗಳು ಅಲ್ಲಿಂದಂ ತೊಲ

[1]ಗದಿ[2]ರ್ದುದಂ ಕಂಡಿವರುಗಳು ಮತ್ತಾ ಮುಪ್ಪುರಕ್ಕೆ ಏರಿಹರೆಂದರಿಸು ಭಾವವೆಂಬ ಬಿಲ್ಲಮಾಡಿ ಮನವೆಂಜ ನಾರಿಯತೊಡರಿಸಿ, ಜ್ಞಾನವೆಂಬ ಬಾಣವ ಮಾಡಿ ಸಂಧಾನಿಸಿ ನೊಸಲ ಕಣ್ದೆರದು ಕೂಡಲೆ ಚಮತ್ಕಾರದಲ್ಲಿ ಎಸೆಯಲಾಗಿ ತ್ರಿಪುರದ ಮರೆಯ ಕೀಲತಾಗಿ ಕೊರಳು ಹರಿದು ತುದಿಮೊದಲು ನಡುವೆಲ್ಲಾ ಠಾವುಗಳು ತುಂಡುತುಂಡಾಗಿ ಸಿಡಿಲುವಕ್ಕಿಗಳು ಪ್ರಳಯ ಕಾಲದಲ್ಲಿ ತಿರ್ರ‍ನೆ ತಿರುಗಿ ಗಿಱನೆ ತಲೆ ಕೆಳಗಾಗಿ ಭೋರ್ ಭೋರ್
ಎನುತ ಧರೆಗೆ ಬೀಳುವಂತೆ ಘೋಳೆಂದು ಭೂತಳಕ್ಕೆ ಬೀಳಲಾಕ್ಷಣಕ್ಕೆ ಭಸ್ಮವಾದುದಂ ಕಂಡಂಜಿ ಧನುಜರುಗಳು ಭೀತಿಯಿಂ ಪಾತಾಳ ಲೋಕಕ್ಕೆ ಇಳಿದು ಓಡಿದುದಂ ಅಷ್ಟ ಕುಲಗಿರಿಗಳೆಂಬ  ಕೈಲಾಸಂಗಳ ಮೇಲಿರ್ದ ನಿಷ್ಕಳರು ಸಕಲರು ಮುಖ್ಯವಾದ ಚತುರ್ದಶ ಭುವನಂಗಳೊಳಗಿರ್ದವರುಗಳೆಲ್ಲಾ ಕಂಡಂಜಿ ಭೀತಿಯಿಂದಿರುತಿಪ್ಪರು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೨೫೧

ಮುಗಿಲ ಬಣ್ಣದ ಪಕ್ಷಿ,  ಮಗನಕೈಯ ಅರಗಿಳಿ.
ಗಗನದ ಕೋಲಂಬಿನಲ್ಲಿ ಸ್ವಪ್ನದ ನಿಲವನು ತೆಗೆದಚ್ಚವರಾರೊ?
ಉಪಮಿಸಬಾರದು. ಜಾಗ್ರತ್‌ಸ್ವಪ್ನ ಸುಷುಪ್ತಿಯ
ನಡುವೆ ತ್ರಿಜಗವಾಯಿತ್ತು.
ಜಗಜ್ಯೋತಿ ನಿನ್ನ ಮಾಯೆಯನೇನೆಂಬೆನು ಗುಹೇಶ್ವರ.            ||೨೯||

೨೫೨

ಊರೊಳಗಣ ಕಿಚ್ಚು ಕಾನನದಲ್ಲಿ ಬಂದು ಉರಿಯಿತ್ತು,
ಕಾನನದಲ್ಲಿಯ ಕಿಚ್ಚು ಬಂದು ಊರೊಳಗುರಿಯಿತ್ತು;
ಆಲಿಸಿರೋ! ಆಲಿಸಿರೋ ನಾಲ್ಕು ದಿಕ್ಕಿನ ಬೇಗೆಯ !
ಆ ಭೂ ಭೂಕಾರವ ದೃಷ್ಟಿಮುಟ್ಟಿದಡೆ, ಅಟ್ಟೆ ಸಹಸ್ರವಾಡಿತ್ತು.
ಲೆಕ್ಕವಿಲ್ಲದ ಮರಣ ಮಡಿಯಿತ್ತು ಗುಹೇಶ್ವರ.   ||೩೦||

೨೫೩

ಲೋಕವಳುತಿದೆ, ಲೋಕವಿದಬೇಕು ಬೇಡೆಂಬವರೊಬ್ಬರ ಕಾಣೆ.
ದೇಹವೆಂಬುದೊಂದು ವಿಮಾನವ ಮಾಡಿ,
ದೇವರೆಂಬುದೊಂದು ಹೆಣನ ಕುಳ್ಳಿರಿಸಿ
ದೇವರು ಸತ್ತರು, ತಮ್ಮಡಿ ಉಳಿದ ದೇಗುಲ ಹಾಳಾ[3]ಯಿತ್ತ ನಾ ಕಂಢೆ.
ಅಂಡಜದವರೆಲ್ಲಾ ಮುಂಡೆಯರಾದರು.
ನಿಮ್ಮ ಕಂಡವರಳಿದರೇ ಗುಹೇಶ್ವರಾ.           ||೩೧||

೨೫೪

ಶ್ರೀಶೈಲದ ಸಿಂಹಾಸನದ ಮೇಲೆ ಕುಳ್ಳಿರ್ದು
ಪುರದ ಬಾಗಿಲೊಳು ಕದಳಿಯ ನೇಮಿಯ
ನರರಿಗೆ ಸುರರಿಗೆ ಮುನಿಗಳಿಗೆ
ಮರಹೆಂಬ ಕದವನಿಕ್ಕಿ ಉಬ್ಬಸಗೊಳಿಸಿದನು
ತ್ರಿವಿಧ ದುರ್ಗಂಗಳಗ್ನಿಯಲ್ಲಿ.
ಸುತ್ತಲೂ ಗಾಳಿ ದೆಸೆದೆಸೆಗೆ ಬೀಸುತ್ತಿರಲು
ಪರಿವಾರ ತಮ್ಮೊಳಗತಿ ಮಥನದಿಂ [4]ಕೆರಳಿ[5] ಆ ಪುರದ ನಾಲ್ಕು ಕೇರಿಯನೆ ಬಲಿದು
ಆ ನರನೆಂಬ ಪೆಸರಳಿದು ಗುರುಮಾರ್ಗದಿಂದಲಾಮರಹೆಂಬ
ಕದವ ಮುರಿದು ಒಳಹೊಕ್ಕು ಪುರದ ವರ್ಮವನರಿದು
ಭರದಿಂದ ತ್ರಿಸ್ಥಾನವನುರುಹಿ ಪರಿವಾರವ ತನ್ನವಾಸಕ್ಕೆ ತಂದು
ಗಿರಿಶಿಖರವನೇರಿ ಪುರವ ಸೂರೆಯ ಕೊಂಡು; ಪುರಕ್ಕೊಡೆಯನಾಗಿ
ಪರಿಣಾಮದಿಂದ ಕೂಡಲ ಚೆನ್ನಸಂಗಯ್ಯನಲ್ಲಿ ಶರಣನಾದಂಗೆ
ನಮೋ ನಮೋ ಎಂಬೆನು.            ||೩೨||

೨೫೫

ರೂಢಿಯ ಧರಿಸಿದಾತ ರುಂಡಾಭರಣನೆಂಬ ಗಣೇಶ್ವರನು.
ಆಕಾಶವ ಧರಿಸಿದಾತ ಗಂಡಾಭರಣನೆಂಬ ಗಣೇಶ್ವರನು.
ಭೂಮಿಯಾಕಾಶವ ತಾಳಮಾಡಿ ಒತ್ತಿದಾತ
ಕ್ಷಿತಿ – ವಿಯತ್ತಳನೆಂಬ ಗಣೇಶ್ವರನು.
ಆ ಬ್ರಹ್ಮಾಂಡವ ಖಂಡಿಸಿದಾತ ಬ್ರಹ್ಮಾಂಡಖಂಡಿತನೆಂಬ ಗಣೇಶ್ವರನು.
ಆ ತ್ರಿಪುರ ದಹನವ ಮಾಡಿದಾತ ಪಂಚವಿಕೃತನೆಂಬ ಗಣೇಶ್ವರನು.
ಕಾಮದಹನವ ಮಾಡಿದಾತ ಅರ್ಧನಾರೀಶ್ವರನೆಂಬ ಗಣೇಶ್ವರನು.
ಬಲ್ಲಾಳನ ವಧುವ ಬೇಡಿದಾತ ಮಹಾರುದ್ರನೆಂಬ ಗಣೇಶ್ವರನು.
ಸಿರಿಯಾಳನ ಮಗನ ಭಿಕ್ಷವ ಬೇಡಿದಾತ ಬಹು ಬಿಕ್ಷಿತನೆಂಬ ಗಣೇಶ್ವರನು.
ಪರ್ವತವ ಧರಿಸಿದಾತ ಪರ್ವತಾಭರಣನೆಂಬ ಗಣೇಶ್ವರನು.
ಇಂತಿವರೆಲ್ಲರು ಕೂಡಲಚೆನ್ನಸಂಗಯ್ಯನಲಿ ವೇಷಧಾರಕರು.      ||೩೩||

ಇಂತಪ್ಪ ಗಣಂಗಳ ಮಧ್ಯದಲ್ಲಿರ್ದ ಬಸವೇಶ್ವರನು ಅಷ್ಟರಿಂದಂ ಮೇಲೆ ಆ ಗೋಸಿದ್ಧಿಗಿರಿಗೆ ತ್ರಿಪುರಾಂತಕ ಗಿರಿಯೆಂಬ ನಾಮಮಂ ಕಲ್ಪಿಸಿ ಇರುತಿಪ್ಪ ಸಮಯದೊಳು ಪಂಚವಿಕೃತನ ಬ್ರಹ್ಮರಂಧ್ರದ ಮೇಲಿರ್ದ ರುದ್ರಾಕ್ಷಿಯ ಮಣಿಯೊಂದು ಪಂಚತಂಡದವರುಗಳೊಳಗೆ ತನ್ನನರಿದವರುಗಳೊಳಗೆ ಜೀವನ್ಮುಕ್ತರಾಗಬೇಕೆಂಬ ಕೃಪೆವೆರಸಿ ತನ್ನ ಲೀಲೆಯಿಂದ ತನ್ನ ಸ್ವಯಂಭು ರೂಪಕಾಣಿಸಿ ಪಲ್ಲವಿಸಿಹೆನೆಂಬ ನೆನೆಯಲಾಕ್ಷಣ ಪೂರ್ವದಿಕ್ಕಿಗೆ ಲಂಘಿಸಿ ಕೆಲಯೋಜನಮಂ ಕಳದೊಂದು ಠಾವಿನಲ್ಲಿ ಮೂರ್ತಗೊಂಡು ಮಹತ್ವಪ್ಪ ಶಶಿಯಾಗಿ ಬೆಳೆದು ಶಾಖೋ ಪಶಾಖೆಗಳು ಸಹಿತಿರುವಾಗ ಪಂಚ ವಿಕೃತನರಿದು ಚೋದ್ಯಂ ಮಾಡಿ ನೋಡಲಾಗಿ ಆ ತೆರದ ನಯನದ ಪರಮ ಶಾಂತಿಯೆಂಬ ಬಿಂದುವಿನಲ್ಲಿಂದಲ್ಲಿಗೆ ಘಮ್ಮನಿಳಿದು ಅದರ ಶಿಖಾಗ್ರದ ಮೇಲೆ ಬಿದ್ದು ಬೇರಿಂಗೆರಗಲೊಡನೆ ಶಾಂತಿಕರವಾಗಿ ಶಿಖಿಯಲೊಂದು ಕಾಯಾಗಿ ಆ ಕಾಯಿಯೆ ಹಣ್ಣಾಗಿ ಬಲಿದು ತನ್ನ ನೋಡುವ ಗಣಂಗಳ ದೃಷ್ಟಿ ಸಂಧಾನದ ಬೆಳಗಿನೊಳಗೆ ಘಮ್ಮನೆ ಗಮಿಸಿ ಪಂಚ ವಿಕೃತನ ಶಿಖೆಯಲ್ಲಿ ಮೂರ್ತಿಗೈವುತ್ತಿದ್ದಿತ್ತು. ಅಷ್ಟರಿಂದಂ ಮೇಲೆ ಪರಮ ವಿವೇಕವೆನಿಸುವ ರುದ್ರಾಕ್ಷಿಯ ವೃಕ್ಷದ ಭರಭಾರಮಂ ತಾಳಲಾರದೆ ಭೂಮಿ ಬಾ[6]ಣದೆರದಡೆ ಆ ಮಹಾವೃಕ್ಷದ ಬೇರು ಭೂಮಿಯನು ತಟ್ಟು ರುಚಿ ಪಾತಾಳ ಪೃಥ್ವಿಯ ತಟವಾಯಿದು ಭಕ್ತಿ ಹಸೆಗೆ ಇಳಿದು ಆ ಹಸೆತಾಳಿ ತಡದಡದರ ಮೇಲೆ ಬೇರೂರಿ ಆ ಭಕ್ತಿ ಭೂಮಿಯಲ್ಲಿಂದಲು ಈ ಜಡಭೂಮಿ ಪರಿಯಂತರವು ನಿರಾಕಾರಪದವಾಗಿ ನಿಂದಿರುತ್ತಿದ್ದಿತ್ತು. ಇಂತೆಂಭ ಪುರಾತನರಗಣಿತ ವಚನರಸಂಗಳಿಗೆ ಸಾಕ್ಷಿ.

೨೫೬

ಪೃಥ್ವಿಯ ಮೇಲೊಂದು ಪರಮ ಶಾಂತಿಯೆಂಬ ಪರ್ವತವ ಕಂಡೆ.
ಆ ಪರ್ವತದ ಮೇಲೆ ಪರಮಗುರು ಪರಿಯಾಯವಾಯಿತ್ತ ಕಂಡೆ.
ಆ [7]ಗುರುವೊಂದು ಕಥನದಿಂ ದೃಷ್ಟಿಯ ತೆರಯಿತ್ತ ಕಂಡೆ
ಆ ದೃಷರಟಿಯ ಬೆಳಗಿನಿಂದ ನೆತ್ತಿಯ ಕಳಸ
ಪುಟದೋರುತ್ತ ನಡದು ಶಶಿಯಾಯಿತ್ತ ಕಂಡೆ.
ಆ ಶಶಿಯ ಕೆಳಗಣ ಮೃತ್ತಿಕೆಯು
ಭಕ್ತರಿಗೆ ಮುತ್ತಾಯಿತ್ತ ಕಂಡೆ ಗುಹೇಶ್ವರಾ.      ||೩೪||

೨೫೭

ತಂಗಾಳಿಗಲಿರು ಮರನೊ, ಎ –
ನ್ನಂಗದೊಳಿರ್ಪ ಶಿವಲಿಂಗದ ಮರನೆ            ||ಪ||

ಸಂಪಗೆಯ ಮರನನೇರಿ ಪರಿಮಳದ
ಕಂಪಕೊಯ್ವನಾರೆಲೋ?
ಇಂಪುಳ್ಳ ಜಾಣನಲ್ಲಮ ಕಾಣೆ ಕೆಳದಿ  ೧

ಎಲೆಯಿಲ್ಲದುಲಿವ ಮರನೆ ನಿಲಲುಂಟೆ?
ನೆಳಲಿಲ್ಲದಿಪ್ಪ ಮರನೆ ! ನಿನ್ನ ಹೊಲಬ
ತಲೆ ಹೊಲದಲ್ಲಿ ಕಂಡೆನಾ ಮರನೆ    ೨

ಹುಟ್ಟಿದೆಡೆಯ ಬಿಟ್ಟಮರನೆ, ಕೈವಲ್ಯಕೆ
ದೃಷ್ಟವಾದ ಹೆಮ್ಮರನೆ ! ಮೆಟ್ಟಿ ತ್ರಿ
ಪುಟಿಯ ಕೀಲ ಬೆಟ್ಟದ ಮರನೆ.        ೩

ಏರಿ ಇಳಿಯಲರಿಯದ ಅಲ್ಲಮಗೆ, ಹೋ
ಮಾರುಹೋದ ಮರನೆ ! ಆರು ದರುಶನ
ಕಾರಡದ ಮರನೆ  ೪

ಸುತ್ತಿ ಮುತ್ತಿದ ಮಾಯೆಗ ಇವಕೆಲ್ಲ
ಕರ್ತೃ ಶಿವನೊಬ್ಬ ಕಾಣೆ ! ಎನ್ನ
ಚಿತ್ತ ಶುದ್ಧವ ಮಾಡು ಸಕಳೇಶ ಕೆಳದಿ.           ೫

೨೫೮

ಕಂಗಳ ಬೆಳಗ ಕಲ್ಪಿಸಬಾರದು,
ಕರ್ಣದ ನಾದವ ವರ್ಣಿಸಬಾರದು.
ಜಿಹ್ವೆಯ ರುಚಿಗೆ ಪ್ರತಿಯಿಲ್ಲವೆಂದುದು.
ಮತಿಗೆ ಮಹಾಘನವಪ್ಪ ಸುಷುಮ್ನಾನಾಳದೆ
ಸುಯಿದಾನವ ಪ್ರಮಾಣಿಸಬಾರದು.
ಅಣುರೇಣು ತೃಣಕಾಷ್ಟದೊಳಗೆ ಭರಿತ ಮನೋಹರ
ನಿಂದನಿರಾಳ ಗುಹೇವರ.   ||೩೬||

ಇಂತು ಉಪಮಾತೀತವಾದ ಶರಣನ ಪ್ರಣಮಜ್ಞಾನದೃಷ್ಟಿಯ ವಿವೇಕದ ನಿರಾಳದ ವೃಕ್ಷವು ಭೂಲೋಕದ ಮೇಲೆ ಭರಿತವಾಗಿ ನಿಂದು ಸಕಲ ಶ್ರುತಿಗಳಿಗೆಯೂ ಸಕಲ ಲೋಕದವರಿಗೆಯೂ ಬೇಕಾದ ಕಾರಣ ಆ ವೃಕ್ಷದ ಮೂಲವ ಸೋಂಕಿದ ಮೃತ್ತಿಕೆಯ ತಂದು ಬಸವಾದಿ ಪ್ರಮಥಗಣಂಗಳಿಗೆ ದಾಸ ಓಹಕ್ಕೆ ಒಂದು ದುರ್ಗವಂ ಮಾಡಿಹೆನೆಂ[8]ದು ಅಂ[9] ಡಾಭರಣ ರುಂಡಾಭರಣ ಕ್ಷಿತಿವಿಯತ್ತಾಳನವರು ಕೆಲರುದ್ರಗಣ, ಕೆಲಮರುಳಗಣ ಸಹಿತ ತಮ್ಮ ಲೀಲೆಯಿಂದ ಇಚ್ಛೈಸಿ ಸ್ವಾದೋದಕದ ಕಡಲಿಗೆ ಲಂಘಿಸಿ ಅಲ್ಲಿಯ ಶೀತಾಳಮಂ ತಮ್ಮ ತಮ್ಮ ಕಂಗಳುಗಳೆಂಬ ಕಡಲುಗಳೊಳಗೆ ತುಂಬಿಕೊಂಡಲ್ಲಿಂದ ರುದ್ರಾಕ್ಷೆಯ ಸಸಿಯಲ್ಲಿಂಗೆ ದಾಂಟಿ ಬಿಜಯಂಗೈದೀ ವಿವೇಕ ವೃಕ್ಷದ ಮೂಲವ ಬಳಸಿರ್ದ ಮೃತ್ತಿಕೆಯಂ ನಾಲ್ವತ್ತೆಂಟು ಯೋಜನ ದಾಳಮಂ ಕೆಲಗಣಂಗಳು ತೆಗೆದು ಮೇಲಕ್ಕೆ ತಂದು ಮಹಾ ರಾಸಿಗಳಂ ಮಾಡಿ ಅದರ ಮೂಲಮಂ ನೋಡುವಾಗ ಆ ಸ್ವಾನುಭಾವವೆಂಬ ವಿವೇಕ ವೃಕ್ಷದ ಮೂಲ ತನ್ನಡಿಯನು ಅಲ್ಲಿಂದ ಕೆಳಗಿಲ್ಲವೆನಿಸಿಕೊಳ್ಳದೆ ತನ್ನ ಪರಿವೇಷ್ಠಿಸಿಕೊಂಡಿರ್ದ ಪೃಥ್ವಿಯ ತನ್ನ ಹೊರಂಗವ ಸೋಂಕಲಸದೆ ನಿರಾಧಾರ ಪದ[10]ದಲ್ಲಿ ನಿಂದು ತನ್ನ ಲೀಲೆಯಿಂದ, ಉಪಮಾತೀತವಾಗಿ ರ್ದುದಂ ಕಂಡು ಚೋದ್ಯಂಬಿಟ್ಟು ನಿತ್ಯ ನಿರಂಜನ ನಿರ್ಮಾಯ ನಿರ್ಭೇದ್ಯ ನಿತ್ಯ ತೃಪ್ತಾಯೆಂದು ಕೀರ್ತಿಸುತ್ತ ಒಳಗಿರ್ದ ಗಣಂಗಳು ಮೇಲಕ್ಕೆ ಚಿತ್ತವಿಸಿ ನಿರೀಕ್ಷಿಸುವಾಗ ಸುವಿವೇಕ ಶಶಿ ತನ್ನ ಶಾಖೋಪ ಶಾಖೆಗಳು [11]ಸಂಬಂಧ[12]ವಾಗಿ ನಾಲ್ವತೆಂಟು ಯೋಜನಕ್ಕಿಳಿದು ರವಿಶಶಿಗಳ ಹಂಗಿಲ್ಲದೆ ಪರಮ ಶಾಂತಿಯ ಸಂತೋಷದಿಂದತ್ತಲಿರುವಲ್ಲಿ ಇತ್ತಲೀ ತ್ರಿಪುರಾಂತಕದ ಮೇಲಿರ್ದಂತದರ ವೃತ್ತಾಂತಮಂ ಅರಿದು ಬಸವಣ್ಣ ತನ್ನ ಮುನ್ನಿನ ವೃಷಭೇಶ್ವರನ ರೂಪನಲ್ಲಿಯೆ ಸ್ಥಾಪಿಸಿ ನಿಮ್ಮ ಬಲ್ಲವರುಗಳ ರಕ್ಷಿಸಿಯೆಂದಿರಿಸಿ ತಾನು ವಿಶ್ವತೋ ರೂಪನಾಗಿ ಕೆಲಗಣಂಗಳು ಸಹಿತ ರುದ್ರಾಕ್ಷೆಯ ವೃಕ್ಷದಲ್ಲಿಂಗೈದಿ ಮೂರ್ತಗೊಂಡಿರುತ್ತಿರ್ದನತ್ತ, ಇತ್ತಲಿ ತ್ರಿಪುರಾಂತಕ ಪರ್ವತಮಂ ಒಬ್ಬ ಪ್ರಮಥ ಗಣೇಶ್ವರನಿದ್ದ ಮರ್ತ್ಯಲೋಕದ ಭೂಮಧ್ಯಗಿರಿಸಿ ಹೋಗಬಾರದೆಂದು ಅದರಡಿಯ ದ್ವಾರದಲ್ಲಿ ಹೊಕ್ಕವರ ಬ್ರಹ್ಮರಂಧ್ರದೊಳಗೆ ಮಸ್ತಕಮಕಂ ಹೊರವಡಸಿ ರುದ್ರಾಕ್ಷಿಯ ಕಂಥೆಯಂ ಕೊರಳಿಗೆ ಧರಿಸಿಕೊಂಬ ಜಂಗಮ ಲಿಂಗದಂತೆ ತಾನದ ಕೊರಳಿಗೆ ಸಿಕ್ಕಿಸಿಕೊಂಡು ಎತ್ತುವಾಗ ತ್ರಿಪುರಾಂತಕ ಮೊದಲಲ [13]ಸ್ಥೂಲಾಯ[14] ಮಾನಮಂ ಬಿಟ್ಟು ತನ್ನ ತಾನೆ ಕರುಣದಿಂ ಕಿರಿದಿಗೆ ನಿಂದು ನಾಲ್ವತ್ತೆಂಟು ಯೋಜನ ಪ್ರಮಾಣಿನ ಅಗಲಮಂ ತಾಳಿ ವಿಶ್ವತೋರೂಪನುಳ್ಳ ಸಿದ್ಧಿಗಳನೊಳಕೊಂಡಿರುವಲ್ಲಿ ಪಂಚವಿಕೃತನೀ ಪರಮಂ ಕಂಡು ಇಂತೆಂದೆನು ಪ್ರಮಥನಿಗೆ, ಯೆಲೆ [15]ಪ್ರಮಥ[16] ಗುರು ಸ್ವಾಮಿ ನನ್ನ ಬಿನ್ನಪವಂ ಕೇಳಿದೀಗ ನಿಮಗೆ ಪರ್ವತಾಭರಣನೆಂಬ ನಾಮ ಪ್ರಥಮ [17]ಪ್ರಾರಂಭದಲ್ಲಿ[18] ಇದು ನಿಮಿತ್ಯವಾಗಿಲ್ಲಿ ಲಿಂಗ ಜಂಗಮ ಸ್ವರೂಪಾಗಿ ಒಪ್ಪಿನಿಂದು ಪಂಚಾಂಗ ಪಂಚತಂಡದವರುಗಳ ಕೈಗಳೊಳು ಪೂಜೆಗೊಂಡು ಬೇಡಿದವರಿಗೆ ಬೇಡಿದುದನೆ ಕೊಟ್ಟು ಪರತತ್ವಲಿಂಗವಾಗಿರಬೇಕೆಂದು ಬೇಡಿಕೊಂಡಿರಸಿ ಶರಣರು ಸಹಿತ ಬಸವಣ್ಣನಿರ್ದಠಾವಿಂಗೆಯದ್ದಿ ವಿಸ್ಮಯವಾಗಿ ಹೇಳಲೆಲ್ಲರು ಕೇಳಿ. ನೂರೊಂದುಸ್ಥಲದನುಭವರಸದೊಳಗೋಲಾಡುತ್ತಂ ಇರುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನಸಾರಾಯವಪ್ಪಮೃತ ವಾಕುಗಳಿಗೆ ಸಾಕ್ಷಿ.

೨೫೯

ಕಡಲುಗಳ ನೀರ ಕಂಗಳೊಳಗೆ ಮೊಗದು
ಬರಿ ಕೈಯ್ವುತಿಪ್ಪುರು ಕೆಲಗಣೇಶ್ವರರು.
ಮೇರುಗಿರಿಗಳವಿಡಿದು ಮೀಂಟುತ್ತಿಪ್ಪರು ಕೆಲಗಣೇಶ್ವರರು.
ಸಕಲ ಬ್ರಹ್ಮಾಂಡಂಗಳ ಹಿಡಿದು ಹಿಸುಕಿ
ಕೆಡಿಸುತ್ತಿಪ್ಪರು ಕೆಲಗಣೇಶ್ವರರು.
ಅಗ್ನಿವಾಯುಗಳ ಹಿಡಿದು ಹೊಸದು ಹಾಕುತ್ತಿಪ್ಪರು ಕೆಲಗಣೇಶ್ವರರು.
ರವಿ ಶಶಿಗಳನು ಧೃವ ಮಂಡಲಂಗಳನು ಪೂರಕದಲ್ಲಿ ತೆಗೆದು ತಂದು
ರೇಚಕದಲ್ಲಿ ನೂಂಕುತ್ತಿಪ್ಪರು ಕೆಲಗಣೇಶ್ವರರು.
ಬಯಲನಾಕಾರವಮಾಡಿ ಆಕಾರಬಯಲ ಮಾಡುತ್ತಿಪ್ಪರು ಕೆಲಗಣೇಶ್ವರರು.
ಇಂತಿವರೆಲ್ಲ ಕಲಿದೇವರದೇವ ನಿಮ್ಮ ಬಸವಣ್ಣನ ನಿರಾಆರ
ಪದದಲ್ಲಿ ನಿಂದಿಪ್ಪರು.        ||೩೭||

೨೬೦

ಕೆಂಡದ ಗಿರಿಯ ಅರಗಿನ ಬಾಣದಲ್ಲೆಚ್ಚಡೆ
ಮರಳಿಯಾಬಾಣವನರಸಲುಂಟೆ?
ಮಂಜಿನ ಶಿವಾಲಯಕ್ಕೆ ಬಿಸಿಲ ಕಳಸವುಂಟೆ?
ಗುಹೇಶ್ವರನೆಂಬ ಲಿಂಗವನರಿದ ಬಳಿಕ
ಮತ್ತೆ ಮರಳಿ ನೆನೆಯಲುಂಟೆ?        ||೩೮||

೨೬೧

ಪಂಚಬ್ರಹ್ಮ ಮೂರುತಿ ಪ್ರಣಮ ಮಂತ್ರ ಸ್ವ[19]ರೂಪು.
ಪಂಚ ಮುಖ ದಶಭುಜದ ಪಣಾಮಣಿಯ ಮೇಲೆ
ನೋಡುತಲೈದಾನೆ ಈರೇಳು ಭುವನವೆಲ್ಲ ತಾನಾಗಿ.
ಸಮತೆ ಸಮಾಧಿಯೆಂಬ ಸಮರಸದೊಳಗೆ
ಚಂದ್ರಕಾಂತದ ಕೊಡನಲ್ಲಿ,
ಅಮೃತವ ತುಂಬಿ ಕೊಡನೊಡೆಯದೆ
ಬೆಳಗುತ್ತಿರ್ದರು ಗುಹೇಶ್ವರ ನಿಮ್ಮ ಶರಣರು.  ||೩೯||

೨೬೨

ಕೆಂಡದೆ ಗಿರಿಯ ಮೇಲೊಂದು
ಅರಗಿನ ಕಂಬವಿದ್ದಿತ್ತು ನೋಡಯ್ಯ.
ಆ ಕಂಬದೊಳಗೊಂದು ಹಂಸೆಯಿದ್ದಿತ್ತು.
ಕಂಬ ಬೆಂದಿತ್ತು, ಹಂಸೆ ಹಾರಿತ್ತು ಗುಹೇಶ್ವರ.  ||೪೦||

ಅಷ್ಟರಿಂದಂ ಮೇಲೆ ಆ ತ್ರಿಪುರಾಂತಕ ಪರ್ವತವು ಮಹಾಸಿದ್ಧಿಗಳಂ ಅನಂತವನೊಳಕೊಂಡು ವರ್ಣದ ಶಿಲೆಗಳ ರೂಪನು ಹಲವು ವರ್ಣದ ಶಿಲೆಗಳ ರೂಪನು ಹಲವು ವರ್ಣದ ಮೃತ್ತಿಕೆಗಳ ರೂಪನು ತಾಳಿಪ್ಪ ಕಾರಣ ಶ್ರೀಶೈಲವೆಂಬ ನಾಮವಾಯಿತ್ತು. ಅಂತಪ್ಪ ಮಹದೈಶ್ಯರ್ಯವನುಳ್ಳ ಶ್ರೀಶೈಲದ ಮೃತ್ತಿಕೆಯ ಸ್ವಾನುಭಾವವಿವೇಕವೆಂಬೀ ರುದ್ರಾಕ್ಷೆಯ ವೃಕ್ಷದ ಮೂಲಬುಡದ ಪರಿಯಂತರದ ನಾಂಟಿಂಗೆಬೇಕೆಂದಿಚ್ಚೈಸಿ ಬಸವಣ್ಣನು ಮಹಾವೃಷಭೇಶ್ವರನಾಗಿ ಶರಣಸತಿ ಲಿಂಗಪತಿಯಲ್ಲದಿಲ್ಲವೆಂಬೆರಡರಹಂಕಾರಕ್ಕೆ ಸಾಕ್ಷಿಯಾಗಿರಬೇಕೆಂಬಂತೆ ಅತ್ಯುನ್ನತವಾಗುತ್ತಂ ಇದ್ದಂಥಾ ಎರಡು ಕೋಡುಗಳು ಶ್ರೀಶೈಲದ ಮೊದಲ ನಾಳದೊಳು ಪೂರ್ವದಿಕ್ಕಿನಿಂದಿರದೊತ್ತಿದಡೆ ಪಶ್ಚಿಮ ದಿಕ್ಕಿಗೆ ಮೂಡಿ ಲಿಂಗವ ನಡುವೆ ಬಿಟ್ಟು ಮೃತ್ತಿಕೆಯ ಮೊಗದೆತ್ತುವಾಗ ಮೃದು ಶಿಲೆಗಳು ಹಿರಿದು ಬಂದು ಪೂರ್ವ – ಪಶ್ಚಿಮಕ್ಕೆ ತಟವಾಯಿದು ಮಹಾ ಘಾತವನುಳ್ಳ ಹಳ್ಳವೆರಡು ಕೂಡಿದ ಕೊಲ್ಲಿಗಳು ಉತ್ತರ – ದಕ್ಷಿಣವಾದಂತೆರಡು ಕೋಡುಗಳಿಂದ ಮೃತ್ತಿಕೆಯಂ ತಬ್ಬಿತಂದು ಸುಜ್ಞಾನ ಸಶಿಯ ನಾಟಿಂಗೆ ನೀಡುತ್ತಿರುವಲ್ಲಿ ಆ ಪರಶಿವ ವೃಕ್ಷ ನಾಲ್ವತ್ತೆಂಟು ಯೋಜನ ಘಾತದಿಂ ಮೇಲಕ್ಕೆ ಮಣಿಮಕುಟಯುಕ್ತವಾಗಿ ಬಿಜಯಂ ಮಾಡೂದು ವೃಷಭಾದಿ ಗಣಂಗಳೆಲ್ಲ ಕಂಡು ಉಘೇಉಘೇ ಜಾಂಗು ಭಲಾಯೆಂದು ಕೀರ್ತನೆಗಳಂ ಮಾಡುವಾಗ ಅದರ ಶಾಖೋಪಶಾಖೆಗಳೆಂದಿನಂತೆ ಕಾಣಿಸಲಾಕ್ಷಣ, ಶಾಖೆಗಳ ಮಧ್ಯದಲೊಂದು ಶಾಖೆ ನಿರಾಕಾರವಾಗಿ ವೇಲಣೇಳು ಲೋಕಂಗಳಾಕಾಶಮಂ ತಟವಾಯಿದು ಅನುಭವದ ಬ್ರಹ್ಮಾಂಡದ ನೂರು ಯೋಜನದ ಮೇಲದೆಯೆಂಬಂತೆ ಏಕಮುಖ, ದ್ವಿಮುಖ, ತ್ರಿಮುಖ, ಚತುರ್ಮುಖ, ಪಂಚಮುಖ, ಷಣ್ಮುಖ ಮೊದಲಾದನಂತಮುಖಂಗಳನುಳ್ಳ ಮಣಿಗಳು ಪಲ್ಲವಿಸಿ ತಾಳಿನಿಂದಿರ್ದುದಂ ಪ್ರಸಾದ ರಸವಜ್ರ ಕೈಲಾಸದ ಹದಿನಾಲ್ಕು ನೆಲೆಯೊಳಗಿರ್ದ ಗಣಂಗಳೆಲ್ಲರಂ ಕಂಡು ಅನಂತ ಪರಿಯಲ್ಲಿ ಸ್ತೋತ್ರಂಗಳಂ ಮಾಡಿ ಮಣಿಗಳೆಲ್ಲವಂ ತೆಗೆದು ಧರಿಸಿಕೊಂಡು ನೋಡಲೊಡನೆ ಮತ್ತೆ ಮಣಿಗಳು ಪಲ್ಲವಿಸಿರ್ದುದಂ ಕಂಡು ವಿಸ್ಮಯರಾಗಿ ಷಡುಸ್ಥಲವನುಭವರಸದೊಳಗೋಲಾಡುತ್ತಿರುತ್ತಿರ್ದರತ್ತ. ಇತ್ತಲಿರ್ದ ಶಾಖೆಗಳೊಳಗೆ ಮಣಿಗಳು ಅಖಂಡಿತವಾಗಿ ಪಲ್ಲವಿಸಿರ್ದುದ ಗಣಂಗಳೆಲ್ಲಾ ಕಂಡು ತೆಗದು ಧರಿಸಿಕೊಂಡು ಬಳಿಕ ಮೂಲ ಪ್ರಣಮಂಗಳ ಗೀತವಾದ್ಯಂಗಳ ಸಹಿತ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳೆಲ್ಲವನು ಅದರನೆಳಲೋಳುಮಾಡುತ್ತಿಪ್ಪ ಸಮಯದಲ್ಲಿ ಒಬ್ಬ ಜಂಗಮ ದೇವರ ಪಾದದಲ್ಲಿರ್ದ ತೀರ್ಥಮಂ ಕಳಕೊಂಡವರ ಪ್ರಸಾದಮುಂತಾಗಿ ಲಿಂಗಕ್ಕೆ ಕೊಟ್ಟು ಕೊಂಡಾರೋಗಿಸಿ ಆ ಪರತತ್ವದ ಮಣಿವೃಕ್ಷದ ಕೆಳಗೆ ಗಣಪರ್ವಮಂ ಮಾಡಿರುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನ ರಸಂಗಳಿಗೆ ಸಾಕ್ಷಿ.

೨೬೩

ಗ್ರಾಮಮಧ್ಯದ ಮೇಲಣ ಮಾಮರ ಸೋಮಸೂರ್ಯರ ನುಂಗಿತ್ತಲ್ಲ !
ಅಮರಗಣಂಗಳ ನೇಮದ [20]ಮಹಾ[21] ಬ್ರಹ್ಮಾಂಡಕೋಟಿಯ ಮೀರಿತಲ್ಲಾ,
ಸುಮನ ಸುಜ್ಞಾನದಲ್ಲಿ ಓಲಾಡುವ ಮಹಾಮಹಿಮ ಶರಣಂಗೆ
ನಿರ್ಮಲವಾಯಿತ್ತು ಗುಹೇಶ್ವರ.       ||೪೧||

೨೬

ಇನ್ನೇವೆ ಇನ್ನೇವೆ ಇದು ಮುನ್ನ ಮಾಯದಲಾದ
ಭೂತದ ಲಿಂಗ ಆಗಲಾಗದ ಮುನ್ನ ಆರೋಗಣೆಯಾಯಿತ್ತು.
ಕೈದೊಳೆಯದ ಮುನ್ನ ಎಂಜಲು ಹೋಯಿತ್ತು.
ನಾನಾಗದ ಮುನ್ನ ತಾನೆಯಾಯಿತ್ತು
ಗುಹೇಶ್ವರನೆಂಬ ಲಿಂಗವೆನ್ನೊಳಗಡಗಿತ್ತು.     ||೪೨||

೨೬೫
ಪರಮಜ್ಞಾನವೆಂಬ ಶಶಿಗೆ ಗುರುಭಕ್ತಿಯೆಂಬ
ಭೂಮಿಯಮಣ್ಣ ತಂದು [22]ಪಂಕ್ತಿ[23]ಗಟ್ಟಿದೆ.
ಲಿಂಗಭಕ್ತಿಯೆಂಬ ಗೊಬ್ಬರವ ತುಂಬಿ[24] ಜಂಗಮಭಕ್ತಿಯೆಂಬ ಪರಮಾನಂದ ಜಲವ ನೀಡಿದೆ.
ಇಂತಿವರಿಂದ ಭಕ್ತಿವೃಕ್ಷದ ಫಲವ ಧರಿಸಿ
ಗುಹೇಶ್ವರ ಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ. ||೪೩||


[1] ಗಿ (ಬ)

[2] ಗಿ (ಬ)

[3] x (257)

[4] ಕೇಳಿ (ಬ)

[5] ಕೇಳಿ (ಬ)

[6] + ರ (ಬ)

[7] + ಪರಿಯಾಯದ (ಬ)

[8] ದ (ಬ)

[9] ದ (ಬ)

[10] ರ (ಬ)

[11] ಸಮ್ಮತ (ಬ)

[12] ಸಮ್ಮತ (ಬ)

[13] ಸ್ಥಲ (ಬ)

[14] ಸ್ಥಲ (ಬ)

[15] ಪ್ರಥಮ (ಬ)

[16] ಪ್ರಥಮ (ಬ)

[17] ಪ್ರಾರಬ್ಧದಲ್ಲಿ ಬಂದಿತ್ತು (ಬ)

[18] ಪ್ರಾರಬ್ಧದಲ್ಲಿ ಬಂದಿತ್ತು (ಬ)

[19] x (ಅ)

[20] ಮಂತ್ರ (ಅ)

[21] ಮಂತ್ರ (ಅ)

[22] ಪಾತೆ (ಅ)

[23] ಪಾತೆ (ಅ)

[24] + ದೆ (ಬ)