ಇನ್ನು ಗೋಸಿದ್ಧಿಗಿರಿಯ ಉತ್ಪತ್ಯಮಂ ಮಹಾಚೋದ್ಯವಾಗಿ ಪೇಳ್ದಪೆ:

೨೨೩

ದೇಹದಳಳೊಳು ಚರಿಸುವಂತ –
ರ್ದೇಹಿಯಂತರ್ಯಾಮಿ ಸ್ವಪ್ನದ
ಗ್ರಾಹಕತೆಯಂತಂಬುಜದ ಪರಿ ಮುಟ್ಟಿಮುಟ್ಟದಿಹ        ||ಪ||

ಹಂಸ ಪವನರು ದಳದಳಂಗಳೊ
ಳಂಶಿಕದೊಳೊಡಗೂಡಿ, ಆತ್ಮನೊ –
ಳಂ ಸಮಾಹಿತಮಾಗಿ; ತೋರುವ ಜ್ಯೋತಿ ರೂಪಕವು
ಸಂಶಯದ ಸಂಸಾರ ಕಾಯದೊ
ಳಂ ಸಿಲುಕಿ ಮಹಭೂತ ಗೂಡಿ –
ರ್ದುಂ ಸಹಜಬೇರಾಗಿ,  ಸಚರಾಚರವ ಚರಿಸುತಿಹ       ೧

ನೇತ್ರ ಸೂತ್ರಗಳಂತೆ ದೃಶ್ಯದ
ಭ್ರಾಂತು ತನ್ನೊಳಗಡಗಿ ಶ್ರೋತ್ರದ
ಸೂತ್ರದಂತಿರೆ ಶಬ್ದಗ್ರಾಹಿಸಿ, ಘ್ರಾಣವಾಸನೆಯ
ಸೂತ್ರದಂತಿರೆ ಜಿಹ್ವೆರುಚಿಗಳ
ಸೂತ್ರವಿಒಡಿದಂತಂಗ ಸೋಂಕಿನ
ಸೂತ್ರವೆಂತಂತಂತರಾತ್ಮನು ಬೆರಸಿ ಬೆರಸದಿಹ         ೨

ಪಶು ಪಶುವಿನಂತಿಹುದು ತಾನಾ
ಪಶುವಿನೊಳಗಣ ಅಮೃತದಂತಿಹ
ವಿಷಯ ವಿಷಯಗಳಾಗಿಹವು ತಾನಾ ವಿಷಯದೊಳಗೆ
ವಸಿಸಿಕೊಂಡಿಹ ಜ್ಞಾನದಂತಿಹ
ವಸುಧಾಜಾತದ ಫಲಫಲಾಂತರ –
ದೆಸಕ ರುಚಿಯಂತಂತರಾತ್ಮನು ಬೆರಸಿ ಬೇರಿಹನು      ೩

ಸ್ವಪ್ನ ಸೂತ್ರವು ಹೆಂಗೆ ಗಗನದೊ
ಳಿಪ್ಪ ರವಿ ಶಶಿ ಕಿರಣ ಸೂತ್ರಗ
ಳಪ್ಪುಗೆಗಳೆಂತಂತೆ ವಾರಿಧಿ ಜಠರ ಕುಹರದೊಳು
ಇಪ್ಪ ಶಿಖಿಯಂತಖಿಳವನುಗ್ರಹಿ
ಸಿಪ್ಪ ದೃಷ್ಟಿಯ ಸೂತ್ರವೆಂತಂ
ತಿಪ್ಪ ಜಗದಂತರಿಯಾತ್ಮಿಕವಪ್ಪ ರೂಪುರೂಪಾಗಿ         ೪

ತಾನೆ ಜಗ ತಾನೆ ಮಹಾಗಮ
ತಾನೆ ವಿಧಿ ತಾನೆ ಮಹಾಕ್ರೀ
ತಾನೆಯಾಗಿಯು ತಾನೆಯಲ್ಲದೆ ತಾನವರದೆಸೆಯ
ನೂನಜನನಸ್ಥಿತಿ ಮರಣ ಸಂ
ಧಾನಗಳನನುಕರಿಸ ಮನ್ಮನೋ
ಜ್ಞಾನದಂತರ್ಜ್ಯೋತಿರಾತ್ಮಗೊಹೇಶ್ವರನ ಶರಣ         ೫

೨೨೪

ಮುಂದೆ ಮುನ್ನೂರಱುವತ್ತುಸಾವಿರ ಯುಗಂಗಳು ಬಂದಹವು.
ಹಿಂದೆ ಮುನ್ನೂರಱುವತ್ತು ಸಾವಿರ ಯುಗಂಗಳು ಹೋದವು.
ಇನ್ನು ಕೊಯಿದಾನೆ ಪುಷ್ಪಂಗಳನು,
ಉನ್ನತನೆಂಬ ಗಣೇಶ್ವರನ ಕರಡಿಗೆ ತುಂಬನು ನೋಡಾ.
ಇನ್ನು ಕೊಯಿದಾನೆ ಪುಷ್ಪಂಗಳನು,
ಈ ಕುಲಗಿರಿಗಳಿಗೆ ಮೇರುಗಿರಿ ಘನವೆಂದರಿಯರು
ಗುಹೇರ್ಶವರ, ನಿಮ್ಮ ಶರಣನ ಮಹಿಮೆಯ
ಹರಿಬ್ರಹ್ಮಾದಿ ದೇವತೆಗಳು ಯಾರೂ.            ||೨||

೨೨೫

ಆದಿ ಅನಾದಿಯಿಲ್ಲದಂದತ್ತ ಬಸವಣ್ಣ

[1]ನುದಯ[2]ವಾದ ಕಾರಣ,
ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದವೆ,
ಮರ್ತ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಕಾದವೆ,
ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದವೆ.
ಗುಹೇಶ್ವರ, ನಿಮ್ಮಾಣೆ ಎನಗೂ ನಿನಗೂ ಬಸವಣ್ಣನ ಪ್ರಸಾದವೆ.  ||೩||

೨೨೬

ಮನ ಬಸುರಾದಡೆ ಕೈ [3]ಬೆಸಲಾ[4]ಯಿತ್ತ ಕಂಡೆ.
ಕರ್ಪೂರದ ಕಂಪ ಕಿವಿ ಕುಡಿಯಿತ್ತ ಕಂಡೆ.
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ.
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ.
ಒಂದು ನೀಲದೊಳಗೆ ಮೂರುಲೋಕವಡಗಿತ್ತ ಕಂಡೆ ಗುಹೇಶ್ವರಾ.            ||೪||

ಇಂತಪ್ಪ ಗುಹೇಶ್ವರನೆಂಬ ಪರಶಿವಜ್ಞಾನದ ಕಣ್ಣನುಳ್ಳ ಭಕ್ತ ಮಹೇಶ್ವರರಿಗೆ ಕಾಣಲ್ಪಟ್ಟ ಪ್ರಸಾದರಸವಜ್ರ ಮಹಾ ಮೇರುಮಂದಿರದೊಳಗಿಪ್ಪ ಸ್ವಯಂ ಜ್ಯೋತಿರುದ್ರನ ಮಹಾತೇಜೋಮಯದ ಲೀಲೆಯ ಅಹಂಕಾರದ ತೂರ್ಯಾವಸ್ಥೆಯಲ್ಲಿ ಹುಟ್ಟಿದ ಕಾಲಹುಲಿಯೆಂಬ ಮನ, ಹುಲ್ಲೆವಿಧಿಯೆಂಬ ಮಾಯೆ. ಈ ಎರಡರ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಹುಟ್ಟಿದ ಪರಮೇಶ್ವರ, ಸದಾಶಿವ, ಈಶ್ವರ, ರುದ್ರ, ವಿಷ್ಣು, ಬ್ರಹ್ಮ ಈ [5]ಷಡು[6] ಸಾದಾಖ್ಯ ನಾಯಕರುಗಳು ನಿಃಕಲರೆಂದರಿವುದು. ಈ ಪರಮೇಶ್ವರ ಪರಮೇಶ್ವರಿಯ ಇವರಿಬ್ಬರ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಹುಟ್ಟಿದ ಪರಮೇ[7]ಶ್ವರ[8] ನಂದಿ, ಪರಮೇ[9]ಶ್ವರ[10] ಭೃಂಗಿ, ಪರಮೇ[11]ಶ್ವರ[12] ವೀರಭದ್ರ ಇವರು ಮುಖ್ಯವಾದ ಪರಮೇಶ್ವರರು ನಾಲವತ್ತೆರಡುಕೋಟಿ. ಸದಾಶಿವ ಸದಾಶಿವೆ ಇವರಿಬ್ಬರ ಶುಕ್ಲಶ್ರೋಣಿತ ಸಂಗದಿಂದೆ ಹುಟ್ಟಿದ ಸದಾಶಿವ ನಂದಿ, ಸದಾಶಿವ ಭೃಂಗಿ, ಸದಾಶಿವ ವೀರಭದ್ರ ಇವರು ಮುಖ್ಯವಾದ ಸದಾಶಿವರು ನಾಲ್ವತ್ತೆರಡುಕೋಟಿ. ಈಶ್ವರ ಈಶ್ವರಿಯವರಿಬ್ಬರ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಹುಟ್ಟಿದ ಈಶ್ವರ ನಂದಿ, ಈಶ್ವರ ಭೃಂಗಿ, ಈಶ್ವರ ವೀರಭದ್ರ ಇವರು ಮುಖ್ಯವಾದ ಈಶ್ವರರು ನಾಲ್ವತ್ತೆರಡುಕೋಟಿ. ರುದ್ರ ರುದ್ರಿಯರಿವರಿಬ್ಬರ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಹುಟ್ಟಿದ ರುದ್ರನಂದಿ, ರುದ್ರಭೃಂಗಿ, ರುದ್ರವೀರಭದ್ರ. ಇವರು ಮುಖ್ಯವಾದ ರುದ್ರರು ನಾಲ್ವತ್ತೆರಡುಕೋಟಿ. ಅಂಥು ಎರಡೆಂಬತ್ತೆಂಟುಕೋಟಿ ಜಡ ಶ್ರೀಕಂಠ ಪ್ರಮಥರನು ಸಕಲರೆಂದರಿವುದು. ವಿಷ್ಣು, ವಿಷ್ಣೆಯರಿವರಿಬ್ಬರ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಹುಟ್ಟಿದ ಮಹಾವಿಷ್ಣು, ಮರಿವಿಷ್ಣು, ಮಾಯಾವಿಷ್ಣು ಇವರು ಮುಖ್ಯವಾದ ವಿಷ್ಣುಗಳು ನವಕೋಟಿ. ಬ್ರಹ್ಮ ಬ್ರಹ್ಮಿಯವರಿಬ್ಬರ ಶುಕ್ಲ ಶ್ರೋಣಿತಾತ್ಮ[13]ದಿಂದ ಹುಟ್ಟಿದ ಕೋಕ ಬ್ರಹ್ಮ, ಪಿಂಗಳಬ್ರಹ್ಮ, ತಾರಕಬ್ರಹ್ಮ ಇವರು ಮುಖ್ಯವಾದ ಬ್ರಹ್ಮರುಗಳು ನವಕೋಟಿ. ಇಂತಪ್ಪ ಅಷ್ಟದಶಕೋಟಿ ಬ್ರಹ್ಮ ವಿಷ್ಣುಗಳನು ಸೃಷ್ಟಿಯಿಂ ಪ್ರಳಯಕಾಲರೆಂದರಿವುದು. ಆ ಪ್ರಳಯ ಕಾಲರ ಶುಕ್ಲ ಶ್ರೋಣಿತಾತ್ಮರ ಸಂಗದಿಂದ ಹುಟ್ಟಿದ ದೇವ ದಾನವ ಮಾನವರುಗಳನು ವಿಜ್ಞಾನಕಲರೆಂದರಿವುದು. ಆ ವಿಜ್ಞಾನಕಲರ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಹುಟ್ಟಿದ ಮಾನವರುಗಳನು ಸಕಲ[14]ರೆಂದರಿವುದು. ಆ ಸಕಲರ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಹುಟ್ಟಿದ ನಿಷ್ಕಲರೆಂದು[15]  ಪ್ರಳಯಾಕ[16]ಲ ರೆಂದು ವಿಜ್ಞಾನಕ[17]ಲರೆಂದು ಇದೇನೆಂಬ ಪರಿಯೆಂದಡೆ:

ಈ ಪಂಚ ತಂಡದವರುಗಳಿಗೆಲ್ಲಕ್ಕೂ ಭೂತಾದಿಗಳೈದು, ಶಬ್ದಾದಿಗಳೈದು, ಜ್ಞಾನೇಂದ್ರಿಯಗಳೈದು, ಕರ್ಮೇಂದ್ರಿಯಂಗಳೈದು ಕರಣನಾಲ್ಕು ದೇವರೆಂಬ ಜೀವನೊಂದು. ಅಂತು ಇಪ್ಪತ್ತೈದು ತತ್ವಂಗಳು. ನರ, ಮಾಂಸ, ಅಸ್ತಿ, ಚರ್ಮ, ಮೂರುವರೆಕೋಟಿ. ರೋಮ, ಪಿತ್ತ, ಶ್ಲೇಷ್ಮ, ಶುಕ್ಲ, ರಕ್ತ, ಮೂತ್ರ, ಕ್ಷುತ್ತು[18] ತೃಷ್ಣೆ, ನಿದ್ರೆ, ಆಲಸ್ಯ ಸಂಗಹರಿವ ಹಾರುವ ಸುಳಿವ ಸುತ್ತುವ ಕೂಡುವ ಅಗಲುವ ಆಹ್ವಾನಿಸುವ ವಿಸರ್ಜಿಸುವ ಅಂಜುವ ನಾಚುವ ಮೋಹಿಸುವ ಅಂತು ಇಪ್ಪತ್ತೈದು ಗಣಂಗಳು. ಮನ ಮಾಯೆಗಳೆರಡು ಈ ಐವತ್ತೆರಡು ತತ್ವಂಗಳೆಲ್ಲವು ಪಂಚ ತಂಡದ ಜೀವಂಗಳೆಂಬ ಬಿ[19]ತ್ತುಗಳಿಗೆ[20] ಉಂಟಾದ ಕಾರಣ[21] ಆ ಐದು ತೆರದ್‌ಹೆಸರುಗಳಾದವು. ಮತ್ತೆ ನಿಃಕಲರಿಗೆ ಆಕಾಶವೆ ಲಿಂಗ ಸಕಲರಿಗೆ ವಾಯುವೆ ಅಂಗ. ಪ್ರಳಯಾಕ[22]ಲರಿಗೆ ಅಗ್ನಿಯೆ ಅಂಗ. ವಿಜ್ಞಾನ ಕ[23]ಲರಿಗೆ ಅಪ್ಪುವೆ ಅಂಗ. ಸಕಲಕ[24]ಲರಿಗೆ ಪೃಥ್ವಿಯೆ ಅಂಗ. ಈ ಪಂಚಾಂಗದವರುಗಳೆಲ್ಲರು ಪಂಚಭೌತಿಕದೊಳಗಡಗಿ ಪಂಚಭೌತಿಕಂಗಳೆಲ್ಲವು ಪಂಚಾಗದವರುಗಳೊಳಗಡಗಿಪ್ಪ ಕಾರಣ ಆ ಪಂಚಾಂಗದವರುಗಳೊಳಗಡಗಿಪ್ಪ ಕಾರಣ ಆ ಪಂಚಾಂಗದವರುಗಳೆಲ್ಲರೂ ಮಲ ಮಾಯಾದಿ ಕರ್ಮಂಗಳಿಗೆ ವಶಗತರಾಗಿಹರು. ಇಂತು ವಶಗತರಾಗಿಪ್ಪುದರಿಂದ ನಿಷ್ಕಲರು ಸಕಲರೊಳಗೆ ಜನಿಸುವರು.  ಸಕಲರು ಪ್ರಳಯಕ[25]ಲರೊಳಗೆ ಜನಿಸುವರು. ಪ್ರಳಯಕ[26]ಲರು ವಿಜ್ಞಾನ ಕ[27]ಲರೊಳಗೆ ಜನಿಸುವರು. ವಿಜ್ಞಾನಕ[28]ಲರೊಳಗೆ ಜನಿಸುವರು. ವಿಜ್ಞಾನಕ[29]ಲರು ಸಕಲಕಲರೊಳಗೆ ಜನಿಸುವರು.

ಸಕಲಕಲರು ಪಾಪಂಗಳೊಳಗೆ ಜನಿಸುವರು. ಮತ್ತೆ ಸಕಲಕಲರು ಶೃತಿಗಳು ಹೇಳಿದಂತೆ ಮಾಡಿದಡೆ, ವಿಜ್ಞಾನಕಲರಹರು. ವಿಜ್ಞಾನಕಲರು ಪ್ರಳಯಕಲರಹರು. ಪ್ರಳಯಕಲರು ಸಕಲರಹರು. ಸಕಲರು ನಿಷ್ಕಳರಹರು. ಈ ಪಂಚ ತಂಡವರುಗಳೆಲ್ಲರು ಪರಶಿವನ ಬಸವಾದಿ ಪ್ರಮಥರ ವೀರಶೈವದ ಕ್ರಮವನರಿಯದೆ ಮನ ಮಾಯೆಗಳ ವಿಕಾರದ ಸಂಕಲ್ಪ ವಿಕಲ್ಪಂಗಳೊಳಗೆ ಜನಿಸಿದ ವೇದಾಗಮಂಗಳು ಮುಖ್ಯವಾದ ಸಕಲ ಶೃತಿಗಳ ನೆಮ್ಮಿ ನವ ಕೈಲಾಸಂಗಳೆಂಬ [30]ಡವಿ[31] ಮೊದಲಾದ ಸರ್ವ ಲೋಕಂಗಳೊಳಗೆ ತಮ್ಮ ತಾವೆ ಬ್ರಹ್ಮವೆಂದು ನುಡಿದುಕೊಂಬುತ್ತ ತಮ್ಮ ತಾವೆ ಪಶುವೆಂದು ನುಡಿದುಕೊಂಬುತ್ತ ಗೋವುಗಳ ಗೊಲ್ಲರು ಕಾಯ್ವಂತೆ, ಒಬ್ಬರನೊಬ್ಬರು ಕಾಯ್ದುಕೊಂಡಿರುತ್ತ ಸತ್ತು ಹುಟ್ಟುತ್ತಿಹರು. ಇಂತೆಂಬ ಪುರಾತನರಗಣಿತ ವಚನ ರಸಂಗಳಿಗೆ ಸಾಕ್ಷಿ.

೨೨೭

ಪಂಚೀಕೃತವೆಂಬ ಪಟ್ಟಣದೊಳಗೆ ಈರೈದು ಕೇರಿ,
ನಾಲ್ಕೈದು ವೀಧಿಯೊಳಗೆ ಹಾವ ಕಂಡೆ.
ಹಿಂಡುಗಟ್ಟಿಯೋಡುವ ಮದಗಜವ ಕಂಡೆ.
ಕೇಸರಿಯ ಕಂಡು ಮನ ಬೆದರಿತ್ತು.
ಮೂವರರಸಿಂಗೆ ಇಪ್ಪತ್ತೈದು ಪರಿವಾರ,
ಅಂಜಂಜ ಬೆಳಗಾಯಿತ್ತು ಗುಹೇಶ್ವರ.            ||೫||

೨೨೮

ಅಡವಿಯೊಳಗೆ ಕಳ್ಳರು ಕಡವಸದ ಸ್ವಾಮಿಯನು ಹುಡುಕಿ
ಹುಡುಕಿ ಅರಸುತ್ತೈದಾರೆ.
ಸೊಡರು ನಂದಿ ಕಾಣದೆ, ಅನ್ನಪಾನದ ಹಿರಿಯರೆಲ್ಲರು
ತಮ್ಮ ತಾವರಿಯದೆ ಅಧರಪಾನವನುಂಡು ತೇಗಿ,
ಸುರಾಪಾನವ ಬೇಡುತ್ತೈದಾರೆ.
ಅರಿದ ಹಾರುವನೊಬ್ಬನು ಅರಿದ ತಲೆಯ ಹಿಡಿದುಕೊಂಡು
ಆಧ್ಯಾತ್ಮ ವಿಕಾರದ ನೆತ್ತರವ ಕುಡಿದನು ನೋಡಾ ಗುಹೇಶ್ವರ.    ||೬||

ಒಂದೆತ್ತಿಗೆ ಐವರುಗೊಲ್ಲರು
ಐವರೈವರಿಗೆ ಐದೈದಾಗಿ ಐವರಾಳಯ್ಯ.
ತಮ್ಮ ತಮ್ಮಿಚ್ಛೆಗೆ ಹರಿಹರಿದಾಡಿ ತಾವು ಕೆಟ್ಟು
ಎ[32]ತ್ತನು ಕೆಡಿಸಿದರಯ್ಯಾ.
ಎತ್ತಿನ ಹೊಯಿಲಿನ್ನಾರಿಗೆ ಹೇಳುವೆ ಕರ್ತೃ ಕೂಡಲಸಂಗಮದೇವಾ.         ||೭||

ಆ ಪಂಚ ತಂಡದವರುಗಳೊಳಗೆ ಕೆಲರು ತಮ್ಮಲ್ಲಿರ್ದ ಸರ್ವ ತತ್ವಂಗಳ ಮಹಾಜ್ಞಾನಾಗ್ನಿಯಲ್ಲಿ ದಹಿಸಿ ಬೆಳಗನುಂಟು ಮಾಡಿಕೊಂಡು [33]ಅತ್ತೆ ಮಾವ[34] ನಳಿಯನೆಂಬ ಪರಶಿವ, ಪರಶಕ್ತಿ, ಪರಮಶರಣ ಬಸವಣ್ಣನಾಮೂವ್ವರ ಬೆರಸಿ ಪ್ಪುದನರಿಯದೆ ಈ ಪಂಚಾಂಗದರು ಕಾಮ ಮಾಯೆಗಳ ಷಡ್ಭ್ರಮೆಯೊಳಗೆ ಮೃಗ ಪಶುಗಳಂತೆ ಕೊಂಡಾ[35]ಡುತ್ತ ಪಂಚ ವಾಕುಗಳೊಳಗೆ ನಿಂದು ಸಪ್ತ ವ್ಯಸನ ಸಪ್ತ ಸ್ವರದೊಳಗೆ ಮುಳುಗಿ ನವರಸದಲ್ಲೆದ್ದು ದಶ ವಾಯುಗಳಿಂದ ಓಡಿಯಾಡುತ್ತ ಕೂಗುತ್ತಿಪ್ಪರು. ಈ ಪ್ರಪಂ [36]ಚ ತಂಡಂ[37]ಗಳ ಬೆರಸದೆ ಪುರಾತನರ ಮಾರ್ಗದಲ್ಲಿನಿಂದ ಭಕ್ತ ಮಾಹೇಶ್ವರರುಗಳು[38] ಕಂಡು ತಮ್ಮ ಸುಳುಹಿಗೆ ತಮ್ಮ ನಿಲಿವಿಗೆ ತಾವೇ ಬೆರಗಾಗುತ್ತಿಹರಲ್ಲದೆ ಅನುಭಾವ ಷಡುಸ್ಥಲಂಗಳನರಿದೆವೆಂದು ತಿಳಿವುದ ಮರೆಯರು, ಕಾಲನೆಂಬಾನೆಗಳು ಜೀವನೆಂಬ ಮೀನು. ಕಾಮನೆಂಬ ಜಾಲಗಾರ ಇಂತಿವರ ಹೊದ್ದರು. ಇಂತಪ್ಪನುಭಾವಂಗಳಿಗೆ ಸಾಕ್ಷಿ.

೨೩೦

ಅಱೆದೆನೆಂದಡೆ ತೋಱದನುಭಾವ
ತೆಱನ ತಿಳಿಯಲು ಬಾರದಾರಿಗೆ
ಹಿರಿಯ ಮೊಸಳೆಯ ಮತ್ಸ್ಯ ನುಂಗಿಯು ಬಾಯಿದೋಱದಲಾ    ||ಪ||

ಹುತ್ತದೊಳಗಣ ಹಲವು ಸರ್ಪವ –
ನೊತ್ತಿ ನುಂಗಿದ ಕಪ್ಪೆ ಸಾಯದು,
ಸತ್ತು ಕೂಗಲು ಶಬ್ದವಡಗದಿದೇನು ಸೋಜಿಗವೋ |
ಅತ್ತೆ ಅಳಿಯನು ಮಗಳು ಮೂವರು
ಬತ್ತಲಿರುತಿರೆ ಲಜ್ಜೆ ದೋರದೆ
ಹೊತ್ತುಹೋಗದ ಮಸಣಿಗುಂಟಣಿ ಮನೆಗೆ ಬಾರಳಲಾ  ೧

ಇಲಿಯ ನುಂಗಲು ಆನೆಯಂಟನು
ಹಲವು ಸಿಂಹವ ಬಳ್ಳು ನುಂಗಲು
ಎಲೆಯು ನುಂಗಲು ಮರದ ಫಲಗಳ ಕುರುಹುದೋರದಲಾ
ಬಲುಹಿನಿಂದಲಿ ಮಾರಿ ಮಸಣಿಯ
ಕೈಯಿಲ್ಲದ ಮೋಟ ಪಿಡಿಯಲು
ಉರಿವ ಕಮಲದೊಳಗುದಕ ತುಂಬಲು ಚಲನೆ ಉಲುಹಡಗಿತಲಾ           ೨

ಕಂಡ ಧರೆಯೊಳಗೊಂದು ಸೋಜಿಗ
ಹುಲಿಯ ಗಂಟಲ ಎರಳೆ ಮುರಿಯಲು
ಕಂಡೆ ಸಾಗರದದಕವನು ಹಸುಗೂಸು ಕುಡಿವುತಿರೆ
ಕಂಡೆ ನರಸುರ ದನುಜರೆಲ್ಲರು
ಕುರುಹಗಾಣದೆ ಕೂಗುತಿರಲದು
ಕಂಡೆ ತನ್ನೊಳು ತನ್ನ ನಿಜವಳವಡಲು ಗುಹೇಶ್ವರನಾ   ೩

ಇಂತೆಂಬ ಪುರಾತನರು ಪರಶಿವನಪ್ಪ ಪ್ರಭುಲಿಂಗದ ವಚನ ಶೃತಿಗಳನುಭಾವಂಗಳ ನಿಷ್ಕಲರು ಸಕಲರುಗಳುವರಿಯದೆ ಗರ್ವಮೇರುವೆಂಬ ರುದ್ರಲೋಕದ [39]ಲಾದ ಅಷ್ಟರುದ್ರ ಲೋಕಂಗಳೊಳಗಿಪ್ಪ ಚತುರ್ವಿಧ ಫಲಪದಂಗಳ ಸಂಭ್ರಮದೊಳಗೆ ತಮ್ಮ ತಾವರಿಯದಿರುತ್ತ ದ್ವೈತಾದ್ವೈತಂಗಳನು ಕೊಸರುತ್ತ ಅಷ್ಟ ಮಹದೈಶ್ವರ್ಯಂಗಳನು ಅಷ್ಟಮಹಾಸಿದ್ಧಿಗಳನು ಫಲಪದಂಗಳನು ಇಂತಿವೆಲ್ಲವನು ಬೇಡಿದವರಿಗೆ ಕೊಡುತ್ತಿಪ್ಪ ಸಮಯದಲ್ಲಿ [40]ಏಳು[41] ತ್ರಿತಂಡದವರುಗಳು ಜಡಶ್ರುತಿಗಳೆಂದರಿದು ಆಸೆವಿಡಿದು ಷಡುದೇವತೆಗಳ ಓಲೈಸಲೆಂದು ಹೋಗುತ್ತ ಬರುತ್ತ ಇಪ್ಪವರುಗಳೊಳಗೆ ಕೆಲ ರಕ್ಕಸರು ಮರ್ತ್ಯ ಲೋಕದೊಳಗಣ ಮತ್ಯ್ಸ ಕೂರ್ಮಾದಿ ಕುಂಜರುಗಳ ಮೃಗ ಪಶುಗಳ ಇವನೆಲ್ಲವನು ಕೊಂಡು ತಮ್ಮ ನಖಂಗಳಲ್ಲಿ ಕೊಂದು ಸೀಳಿ ಮಾಂಸದ ಮೊಟ್ಟೆಯ ಕಟ್ಟಿ ಕೈ ಕಾಣಿಕೆಯ ತರುವಂತೆ ತರುವಲ್ಲಿ ರಜತಾದ್ರಿಯ ಮೇಲಿರ್ದ ಜಡರುದ್ರನ ಎಡದ ಗದ್ದುಗೆಯ ಓಲೈಸುವ ಹರಿ ಕೆಳಗೆ ಬರುವ ದಾನವರ ನೋಡಿಕೊಂಡು ಹೆಗ್ಗಣ ಬೆಕ್ಕು ನರಿ ಇವು ಕೈಲಾಸಕ್ಕೆ ಹೋದರೆ ಬಿಲವ ತೋಡುವುದು, ಇಲಿಯ ಹಿಡಿವುದು ನೆಳ್ಳಿ ಗುಳ್ಳಿಯನರಸೂದು ಬಿಡದೆಂಬ ಲೋಕಗಾದೆ ದಿಟವಾಯಿತ್ತೆನುತ್ತ ಅಜಂಗೆ ಸಂಜ್ಞೆಯಂ ಮಾಡಿ ಪಿಸಿತವ ತರುವ ರಾಕ್ಷಸರನಿಲ್ಲಿಗೆ ಬರಲಿಸ[42]ಬೇಡೆನುತ್ತ[43] ರುದ್ರಲೋಕಕ್ಕೆ ಸಲ್ಲರೆನುತ್ತ ಬೆಸಸಲಾಗಿ ಬ್ರಹ್ಮ ತನ್ನೊಳಗಣ ಬ್ರಹ್ಮ ಪಡೆ ಸಹಿತ ಕೆಳಯಿಕ್ಕೆ ಇಳಿದಾಕ್ಷಣ ರಾಕ್ಷಸರು ಕಂಡು ಕಂಡು ಕೈಮುಗಿಯಲಾಗಿ ನೀವೆಲ್ಲರು ತಿರುಗಿರೆ ಎನುತವರ ಕರೆಕೊಂಡು ಹೋಗುತಿರಲೊಡನೆ ಕೆಲ ಯೋಜನಂಗಳು ಕಳಿದು ಒಂದು ಠಾವಿನಲ್ಲಿ ಶ್ರಮವನಾರಿಸಲ್ಕೆಂದು ನಿಂದ ಹಂಸವಾಹನಗೆ ದೈತ್ಯರುಗಳಂಜಿ ನಾವು ಕೆಟ್ಟೆವು, ಒಂದು ಅನ್ಯಾಯಮಂ ಮಾಡಿದೆವು ಈ ತಪ್ಪ ಕ್ಷಮಿಸಿಕೊಳ್ಳಿ ಎಂದು ದೈನ್ಯಂಬಟ್ಟು ನಿಂದಿರಲಾಗಿ,  ಬ್ರಹ್ಮ ಕಸ್ಯಪಬ್ರಹ್ಮನಂ ಕರೆದು ನಿನ್ನ ರಾಕ್ಷಸ ಮಕ್ಕಳ ಪಾತಾಳ ಪೃಥ್ವಿಯಲ್ಲಿರಿಸಿ ಬಾರೈ ಎಂದು ಗೌಣ ಮಾತುಗಳನಾಡಿ ಕಳುಹಿದನವರಿತ್ತ ತಾನತ್ತ ಕೆಲರು ಸಹಿತ ಬೆಳ್ಳಿಯ ಬೆಟ್ಟವನೇರಿ ಇರುತಿರಲು; ಇರಲ್ಕೆ ಕಸ್ಯಪಬ್ರಹ್ಮನು ಅವಗತಬ್ರಹ್ಮನು ತಾವಿಬ್ಬರು ಕೋಕ ಪಿಂಗಳ ತಾರಗ್ರೀವ ದನೂರ್ಧ್ವ ಭಾರದ್ವಜ[44] ಹಿಮಾಚಲವ ಕಳದಿತ್ತ ದಕ್ಷಿಣ ಭಾಗದ ಮೂಡಣ ಲವಣ ಸಮುದ್ರದ ಸಮೀಪದಲೊಂದು ಠಾವಿನೊಳು ಬಳಲಿಕೆಯ ಪರಿಹರಿಸಬೇಕೆಂದು ಕುಳಿತಿರಲೊಡನೆ ಧನುಜರು ಕಸ್ಯಪ ಮಾಯಾಜಾಲನವರು ಗಳಿಗಡ್ಡಬಿದ್ದು ವರವ ಬೇಡುವಲ್ಲಿ ಬ್ರಹ್ಮರುಗಳು ನೋಡಿ [45]ಮಕ್ಕಳೆ[46]ಂಬುದಕ್ಕೆ ಮನ [47]ಮರುಗಿ[48]ದೇಕೆಂದು ಬೆಸಗೊಳಲವರಿಗೆ ದೊಡ್ಡವರಾದ ಜಂಭ ಜಲಂಧರ ಗಜಾಸುರರೆಂಬ [49]ರಾಕ್ಷಸರು ಸಹಿತವರೆಂಬ[50] ಹಾಂಗೆ ನೀವು ನವಕೈಲಾಸಂಗಳ ಮೇಲಿರ್ದಡೆ ನಿಮ್ಮ ನಾವಿಲ್ಲಿರ್ದ ಹಾಂಗೆಯೆ ನೋಡುತ್ತಿರಬೇಕು. ನಮಗೊಂದು ಸ್ಥೂಲಾಯಮಾನವಾಗಿರ್ದ ಬೆಟ್ಟವ ನಿರ್ಮಿಸಿದರೀಬೆಟ್ಟದಮೇಲಕ್ಕೆಯೂ ಪಾತಾಳ ಲೋಕದಲ್ಲಿಂಗೆಯೂ ಹೋಗುತ್ತ ಬರುತ್ತ ನಿಮ್ಮ ನೆನವುತ್ತಲಿದ್ದೆಹೆವೆಂದು ಕೀರ್ತಿಸಲು, ಆ ಬ್ರಹ್ಮರು ದಾನವರ ತನುತ್ರಯದೊಳಗಣ ಅಹಂಕಾರತ್ರಯವನು ಮಲತ್ರಯವನು ಕರ್ಮತ್ರಯವನು ಈ ಬಾಬತ್ತನು ತೆಗೆದು ಅಹಂಕಾರ ಮೂರನು ಮಧ್ಯವ ಮಾಡಿ ನಿಲಿಸಿ, ಕರ್ಮ ಮೂರನು ತುದಿಯ ಮಾಡಿ ನಿಲಿಸಿ, ಇಂತಿಪ್ಪಾಂತರ್ಗತದ ಕರಣಂಗಳು ಮಥನದಿಂ ಬಹಿರ್ಗತವಾಗಿನಿಂದ ಅಹಂಕಾರ ತತ್ತ್ವಶೈಲದ ತುದಿಯ ಮೇಲೆ ಕಸ್ಯಪ ಮಾಯಾಸ್ವಪ್ನ ವಿಶ್ವಕರ್ಮ [51]ಈ ಮೂವರು[52] ಮಲತ್ರಯಂಗಳು ಮೂರು ಕವಲಾಗಿ, ಮೂರು ಪುರವಾಗಿ ಚಿನ್ನ ಬೆಳ್ಳಿ ರನ್ನಗಳಂತೆ ಜಡರ ಕಣ್ಣಿಂಗೆ ಹೊಳವುತ್ತಿರಲು, ಆ ಮೂವರು ಮನಮಾಯೆ ಪರಮೇಶ್ವರನೆಂಬೀ ಮೂವರಾದಿವಿಡಿದು ಉಪ್ಪರಿಗೆಯಂತೆ ಒಂದು ಮಾಯಿಕದ ತ್ರಿಪುರವೆಂಬ ಪ್ರಕೃತಿ ಬೆಟ್ಟದ ಬೆಟ್ಟಣವನೊಡ್ಡಿ ಅದಕ್ಕೆ ತ್ರಿಪುರವೆಂಬ ಹೆಸರಂ ಕೊಟ್ಟು ಅಡ್ಡಬಿದ್ದಿರ್ದ ದೈತ್ಯ[53]ಪ್ರಸಾದರಸವಜ್ರ ಕೈಲಾಸದೊಳಗಿರ್ದ ಗಣಂಗಳು ತಮ್ಮ ತಾವರಿದು ಹಾಸ್ಯವಮಾಡುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೨೩೧

ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ ನೀವು ಕೇಳಿರಣ್ಣಾ !

ಮದ್ಯವಲ್ಲವೇನು ಅಷ್ಟಮದಂಗಳು?
ಮಾಂಸವಲ್ಲವೇನು ಸಂಸಾರಸಂಗ?
ಈ ಉಭಯವನತಿಗಳೆದಾತನೆ ಗುಹೇಶ್ವರ ಲಿಂಗದಲ್ಲಿ ಲಿಂಗೈಕ್ಯನು.        ||೯||

೨೩೨

ರಾಜಸಭೆ ದೇವಸಭೆಯೊಳಗೆ ದೇವರಾಜ ಪೂಜಕರೆಲ್ಲಾ
ಗುರುವಿನ ಕರುಣವನೆಯ್ದೆ ಬಲ್ಲರೆ ಅಯ್ಯಾ?
ಪೂಜಕರೆಲ್ಲರ ಪರಿಗಳ ಕಂಡು ಬೆರಗಾದೆನು
ಗುಹೇಶ್ವರ, ಇವರೆಲ್ಲಾ ಸಂಸಾರ ವ್ಯಾಪಕರು.  ||೧೦||

೨೩೩
ಸರ್ಪ ಸಂಸಾರಿಯೊಡನಾಡಿ ಕಟ್ಟುಪಡೆಯಿತ್ತು ಲೋಕವೆಲ್ಲಾ.
ಮನದ ತಮಂಧ ಬಿಡದು, ಮನದ ಕಪಟ ಬಿಡದು.
ಸಟೆಯೊಳಗೆ ದಿಟವಾಗಿ ಬಯಲು ಬಡಿವಡೆಯಿತ್ತು.
ಕಾಯದ [54]ಸಂಗ[55]ದ ಜೀವವುಳ್ಳನ್ನಕ್ಕರ
ಎಂದಿಗೂ ಹಿಂಗದು ಗುಹೇಶ್ವರ.       ||೧೧||

೨೩೪

ಅಗ್ನಿಯ ಒಡಲೊಳಗೊಬ್ಬ ಆಕಾಶವರ್ಣದ ಸೂಳೆ.
ಆ ಸೂಳೆಗೆ ಮೂವರು ಮಕ್ಕಳು.
ಆ ಮಕ್ಕಳ ಕೈಬಾಯೊಳಗೆ ಮೂರು ಲೋಕವೆಲ್ಲವು ಸಿಕ್ಕಿ,

ಅಚ್ಚುಗಬಡುತಿರ್ದುದೇನು ಚೋದ್ಯ?
ಕರಿಯ ಬಣ್ಣದ ಮುಸುಕನುಗಿದು
ಬೆರಸಬಲ್ಲ ಶರಣಂಗಲ್ಲದೆ ಪರ[56]ತತ್ವವೆಂಬುದು
ಸಾಧ್ಯವಾಗದು ಗುಹೇಶ್ವರ.            ||೧೨||


[1] ಉತ್ಪತ್ಯ (ಬ)

[2] ಉತ್ಪತ್ಯ (ಬ)

[3] ಬಸುರಾ (ಬ)

[4] ಬಸುರಾ (ಬ)

[5] ಆರು (ಅ)

[6] ಆರು (ಅ)

[7] ರ (ಬ)

[8] ರ (ಬ)

[9] ರ (ಬ)

[10] ರ (ಬ)

[11] ರ (ಬ)

[12] ರ (ಬ)

[13] + ಸಂಗ (ಬ)

[14] + ಕಲ (ಬ)

[15] + ಸಕಲ (ಬ)

[16] ಕಾ (ಬ)

[17] ಕಾ (ಬ)

[18] ಧೆ (ಬ)

[19] ಚಿ (ಬ)

[20] ಲ್ಲ (ಬ)

[21] ಐವತ್ತೆರಡು (ಬ)

[22] ಕಾ (ಬ)

[23] ಕಾ (ಬ)

[24] ಕಾ (ಬ)

[25] ಕಾ (ಬ)

[26] ಕಾ (ಬ)

[27] ಕಾ (ಬ)

[28] ಕಾ (ಬ)

[29] ಕಾ (ಬ)

[30] ಡಿವು (ಬ)

[31] ಡಿವು (ಬ)

[32] ಇ (ಅ)

[33] ಮತ್ತೆ ಮದ (ಬ)

[34] ಮತ್ತೆ ಮದ (ಬ)

[35] ದಾ (ಅ)

[36] ಚುಗಳ (ಬ)

[37] ಚುಗಳ (ಬ)

[38] ಳ (ಬ)

[39] + ಮೊದ (ಬ)

[40] x (ಬ)

[41] x (ಬ)

[42] ಬೇಡವರು (ಬ)

[43] ಬೇಡವರು (ಬ)

[44] + ವಿಶ್ವಾಮಿತ್ರ, ವಿಶ್ವಕರ್ಮ ಇಂತವರುಗಳು ಸಹಿತವಾಗಿ (ಬ)

[45] ಮಾಯೆ (ಬ)

[46] ಮಾಯೆ (ಬ)

[47] ಕರಗಿ (ಬ)

[48] ಕರಗಿ (ಬ)

[49] x (ಬ)

[50] x (ಬ)

[51] ಇವರ (ಬ)

[52] ಇವರ (ಬ)

[53] + ರುಗಳನೆಬ್ಬಿಸಿ ತಲೆದಡವಿ ಮುಪ್ಪುರದೊಳಗೆ ತಾವು ಬುದ್ಧಿವಂತರಾಗಿರಿ ಎಂದು ಇರಿಸಿ ತಾವೆದ್ದು ಹೊರವಂಟು ಬೆಳ್ಳಿಯ ಬೆಟ್ಟಕ್ಕೆ ಹೋಗಿ ವಾಗದ್ವೈತಂಗಳ ಕೊಸರುತಿಪ್ಪುದಂ ಬಸವಣ್ಣನ (ಬ).

[54]  (ಅ)

[55] x (ಅ)

[56] + ಮ (ಬ)