ಭೌತಶಾಸ್ತ್ರದಿ೦ದ ವೈದ್ಯಕೀಯ ಚಿಕಿತ್ಸೆಗಳಿಗೆ ಅನೇಕ ಕೊಡುಗೆಗಳು ಹಿ೦ದಿನಿ೦ದಲೂ ಇವೆ ಎ೦ಬುದನ್ನು ನಾವು ಇತಿಹಾಸದಲ್ಲಿ ನೋಡಬಹುದು. ರಾ೦ಟ್ಜೆನ್ ೧೮೯೫ರಲ್ಲಿ ತಮ್ಮ ಉಪಕರಣದಿ೦ದ ಬರುತ್ತಿದ್ದ ಹೊಸ ಕಿರಣಗಳನ್ನು ಅವರ ಪತ್ನಿಯ ಕೈ ಮೂಲಕ ಕಳಿಸಿ ಛಾಯಾಚಿತ್ರವನ್ನು ತೆಗೆದಾಗ ಅದರ ವೈದ್ಯಕೀಯ ಉಪಯೋಗಗಳು ಎಷ್ಟಾಗಬಹುದು ಎ೦ದು ಅವರು ಕನಸಿನಲ್ಲೂ ಯೋಚಿಸಿರಲಾರರು. ಮೇಡ೦ ಮೇರಿ ಕ್ಯೂರಿಯವರಿ೦ದ ಹಿಡಿದು ಅನೇಕರು ಇವುಗಳನ್ನು ಉಪಯೋಗಿಸಿಕೊ೦ಡು ವ್ಶೆದ್ಯಶಾಸ್ತ್ರಕ್ಕೆ ಮಹತ್ವಪೂರ್ಣಕೊಡುಗೆಗಳನ್ನು ಇತ್ತಿದ್ದಾರೆ. ‘ಅಲ್ಟ್ರಾ ಸೌ೦ಡ್’ (ನಾವು ಕೇಳಲಾಗದ ಸಾಧಾರಣ ಶಬ್ದಕ್ಕಿ೦ತ ಹೆಚ್ಚು ಆವರ್ತನ ಸ೦ಖ್ಯೆಯ ಶಬ್ದ) ಉಪಯೋಗಿಸಿಕೊ೦ಡು ಬಾವುಲಿಗಳು ರಾತ್ರಿಯಲ್ಲಿ ಚಲಿಸಬಲ್ಲವು ಎ೦ದು ೧೮೯೦ರಲ್ಲಿ ಇಟಲಿಯ ಸ್ಪಲ್ಲ೦ಜಾ ಕ೦ಡುಹಿಡಿದರು (ಕಣ್ಣುಗಳಿಗೆ ಬಟ್ಟೆಕಟ್ಟಿದರೂ ಅವುಗಳ ಹಾರಾಟ ನಿಲ್ಲಲಿಲ್ಲ ; ಆದರೆ ಕಿವಿಗಳನ್ನು ಮುಚ್ಚಿದಾಗ ಅವುಗಳು ಚಲಿಸಲು ಆಗುತ್ತಿರಲಿಲ್ಲ !) ಅನ೦ತರ ಪಿಯರೆ ಕ್ಯೂರಿ, ಲಾ೦ಜೆವಿನ್ ಇತ್ಯಾದಿ ವಿಜ್ಞಾನಿಗಳ ಸಹಾಯದಿ೦ದ ಈ ‘ಶಬ್ದ’ ವೈದ್ಯಕೀಯ ಚಿಕಿತ್ಸೆಯಲ್ಲಿ ಉಪಯೋಗಕ್ಕೆ ಬ೦ದಿತು. ಭ್ರೂಣದ ಲಿ೦ಗವನ್ನು ತಿಳಿಯಲೂ ಈ ವಿಧಾನ ಬಳಕೆಯಲ್ಲಿರುವುದಲ್ಲದೆ ಇನ್ನೂ ಅನೇಕ ಚಿಕಿತ್ಸೆಗಳಿಗೆ ಇದು ಅನಿವಾರ್ಯ. ಇದೇ ರೀತಿ ಐನ್‌ಸ್ಟೈನ್‌ರ ಸೈದ್ಧಾ೦ತಿಕ ಚಿ೦ತನೆಯಿ೦ದ ಹುಟ್ಟಿಬ೦ದ ಲೇಸರ್ ಕಿರಣಗಳಿಗೂ ಇ೦ದು ಅನೇಕ ಉಪಯೋಗಗಳಿವೆ.

ಅಮೆರಿಕದ ಸ೦ಯುಕ್ತ ಸ೦ಸ್ಥಾನದಲ್ಲಿ ಪ್ರತಿ ವಷ೯ವೂ ೩ ಕೋಟಿ ಜನ ಒ೦ದಲ್ಲ ಒ೦ದು ಕಾರಣಕ್ಕೆ ಆಸ್ಪತ್ರೆಯ ಮೆಟ್ಟಲನ್ನು ಹತ್ತುತ್ತಾರೆ. ಅವರಲ್ಲಿ ಶೇಕಡ ೩೦% ಪರಮಾಣು/ಕಣ ವಿಜ್ಞಾನದಿ೦ದ ಹುಟ್ಟಿದ ಔಷಧಿಗಳನ್ನು ಸೇವಿಸುತ್ತಾರೆ! ಆಧುನಿಕ ಭೌತಶಾಸ್ತ್ರದ ಅತಿ ಹೊಸ ವಿಭಾಗಗಳಾದ ಈ ಅಧ್ಯಯನಗಳನ್ನು ಮೂಲಭೂತ ವಿಜ್ಞಾನಗಳೆ೦ದು ಪರಿಗಣಿಸುತ್ತಾರೆ. ಸಾಧಾರಣವಾಗಿ ಇ೦ತಹ ವಿಜ್ಞಾನ ತ೦ತ್ರಜ್ಞಾನಕ್ಕೆ ತಕ್ಷಣ ಸ್ಪ೦ದಿಸುವುದಿಲ್ಲ. ವಿಜ್ಞಾನದಿ೦ದ ಮಾನವ ಜೀವನಕ್ಕೆ ಉಪಯೋಗಗಳನ್ನು ಅಪೇಕ್ಷಿಸುವುದು ಸಹಜವೇ ಆದರೂ ಇ೦ತಹ ವೈಜ್ಞಾನಿಕ ಚಿ೦ತನೆ ಮತ್ತು ಪ್ರಯೋಗಗಳಿ೦ದ ನೇರವಾಗಿಯ೦ತೂ ಯಾವ ಪ್ರಯೋಜನವೂ ಕಾಣದಿರಬಹುದು. ಆದರೂ ಕೆಲವೇ ದಶಕಗಳಲ್ಲಿ ಈ ವಿಜ್ಞಾನಗಳು ವ್ಶೆದ್ಯಶಾಸ್ತ್ರಕ್ಕೆ ಮಹಾ ಕೊಡುಗೆಗಳನ್ನು ಇತ್ತಿರುವುದನ್ನು ಕೆಳಗೆ ನೋಡೋಣ.

ಚಿತ್ರ ೧ : ರಾ೦ಟ್ಜೆನ್‌ರವರು ೧೮೯೫ರಲ್ಲಿ ಕ್ಷಕಿರಣ (ಎಕ್ಸ್-ರೇ)ಗಳನ್ನು ಅವರ ಪತ್ನಿಯ ಕೈ ಮೂಲಕ ಕಳಿಸಿದಾಗ ತೆಗೆದ ಚಿತ್ರ. ಕೈ ಬೆರಳಿನ ಮೂಳೆಗಳು ಮತ್ತು ಉ೦ಗುರ ಮಾತ್ರ ಕಾಣಿಸುತ್ತವೆ. (ಕೃಪೆ : ವಿಕಿಪೀಡಿಯ)

ಪರಮಾಣು ನಮ್ಮ ಸೌರಮ೦ಡಲದ ತರಹ ; ಕೇ೦ದ್ರದಲ್ಲಿ ಅತಿತೂಕದ ವಸ್ತು ಮತ್ತು ಹೊರಗೆ ಅದನ್ನು ಸುತ್ತುತ್ತಿರುವ ಲಘುತೂಕದ ವಸ್ತುಗಳು. ನಮ್ಮ ಭೂಮಿ ಗುರುರ್ತ್ವಾಕರ್ಷಣೆಯಿ೦ದ ಸೂರ್ಯನನ್ನು ಸುತ್ತುತ್ತಿರುವ೦ತೆ ಎಲೆಕ್ಟ್ರಾನ್ ಕಣಪರಮಾಣು ಬೀಜವನ್ನು (ನ್ಯೂಕ್ಲಿಯಸ್) ಸುತ್ತುತ್ತಿರುತ್ತದೆ. ಪರಮಾಣು ಕೇ೦ದ್ರದ ಬೀಜದಲ್ಲಿ ಎರಡು ತರಹ ಕಣಗಳಿವೆ: ಧನ ಋಣ ವಿದ್ಯುದ೦ಶದ ಪ್ರೋಟಾನ್ ಮತ್ತು ಶೂನ್ಯ ವಿದ್ಯುದ೦ಶದ ನ್ಯೂಟ್ರಾನ್ (ಅತಿ ಲಘುವಾದ ಜಲಜನಕದ ಪರಮಾಣುಬೀಜದಲ್ಲಿ ಪ್ರೋಟಾನ್ ಮಾತ್ರ). ವಿಶ್ವದ ಎಲ್ಲ ಮೂಲ ಧಾತುಗಳನ್ನು ಈ ೩ ಕಣಗಳಿ೦ದ ನಾವು ತಯಾರಿಸಬಹುದು . ಈ ವಿಜ್ಞಾನಕ್ಕೆ ಬ್ಶೆಜಿಕ (ನ್ಯೂಕ್ಲಿಯರ್) ವಿಜ್ಞಾನ ಎ೦ದು ಹೆಸರಿದೆ. ಭೌತಶಾಸ್ತ್ರದಲ್ಲಿ ಸ೦ಶೋಧಕರು ಇನ್ನೂ ಒಳಹೋಗಿ ಅನೇಕ ಕಣ – ಪಾಸಿಟ್ರಾನ್, ಪೈ ಮೇಸಾನ್ (ಪಯಾನ್), ಮ್ಯುಯಾನ್ ಇತ್ಯಾದಿಗಳನ್ನು ಕ೦ಡುಹಿಡಿದಿದಲ್ಲದೆ, ಪ್ರಕೃತಿಗೆ ಪ್ರಪ೦ಚವನ್ನು ಕಟ್ಟಲು ಈ ಕಣಗಳ ಅವಶ್ಯಕತೆಯನ್ನೂ ತೋರಿಸಿ ಕಣವಿಜ್ಞಾನ ಎ೦ಬ ಅಧ್ಯಯನಕ್ಕೆ ಜನ್ಮವಿತ್ತರು.

) ರೇಡಿಯೊ ಐಸೊಟೋಪ್

ವಿಕಿರಣಶೀಲತೆ (ರೇಡಿಯೊ ಆಕ್ಟಿವಿಟಿ)ಯನ್ನು ೧೮೯೬ರಲ್ಲಿ ಬೆಕೆರೆಲ್ ಎ೦ಬ ವಿಜ್ಞಾನಿ ಕ೦ಡುಹಿಡಿದರು. ಈ ಪ್ರಕ್ರಿಯೆಯಲ್ಲಿ ಪರಮಾಣು ಬೀಜ(ನ್ಯೂಕ್ಲಿಯಸ್)ದಿ೦ದ ೩ ಬಗೆಯ ಕಣಗಳು ಹೊರಬರುತ್ತವೆ – ಆಲ್ಫಾ, ಬೀಟ, ಗ್ಯಾಮಾ (ಚಿತ್ರ -೧) – ಆಲ್ಫ= ಹೀಲಿಯ೦ ಪರಮಾಣುಬೀಜ , ಬೀಟ= ಎಲೆಕ್ಟ್ರಾನ್ಗಳು, ಗ್ಯಾಮಾ= ಶಕ್ತಿಯುತ ಬೆಳಕು). ಪರಮಾಣು ಬೀಜ ಅಸ್ಥಿರವಾದಾಗ ಅದು ಕ್ಷಯಿಸಿ ಈ ಕಣಗಳು ಹೊರಬರುತ್ತವೆ. ಸಾಧಾರಣವಾಗಿ ಸ್ಥಿರ ಪರಮಾಣುಬೀಜಗಳಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳ ಸ೦ಖ್ಯೆಗಳು ಸಮವಾಗಿರುತ್ತವೆ. ಆದರೆ ಅಸ್ಥಿರ ಪರಮಾಣುಬೀಜಗಳಲ್ಲಿ ಈ ಸ೦ಖ್ಯೆಗಳು ಸಮವಾಗಿರದೆ ವಿಕಿರಣಗಳು ಹೊರಬರುತ್ತವೆ.

ಚಿತ್ರ ೨- ವಿಕಿರಣಶೀಲತೆಯಲ್ಲಿ ಹೊರಬರುವ ವಿವಿಧ ಕಣಗಳು .(ಕೃಪೆ : ಮೊಲೈರ್೧.ಪರ್ಸ್ರೆ.ಎಸ್ಫ್ರ್ ಅ೦ತರ್ಜಾಲ ತಾಣ)

ಎರಡನೆಯ ಚಿತ್ರದಲ್ಲಿ ಜಲಜನಕದ ವಿವಿಧ ರೂಪಗಳನ್ನು ತೋರಿಸಿದೆ. ಅದರ ಬೀಜದಲ್ಲಿ ನ್ಯೂಟ್ರಾನ್‌ಗಳನ್ನು ತುರುಕಿದಾಗ ಎರಡು ಹೊಸ ಧಾತುಗಳು ಹುಟ್ಟುತ್ತವೆ – ಡ್ಯೂಟೀರಿಯಮ್ ಮತ್ತು ಟ್ರೀಷಿಯಮ್. ಇವುಗಳು ಜಲಜನಕದ ‘ಐಸೊಟೋಪ್’ಗಳು. ಮೊದಲನೆಯದು ಸ್ಥಿರ ಪರಮಾಣು ; ಎರಡನೆಯದು ಅಸ್ಥಿರವಾದ್ದರಿ೦ದ ಅದನ್ನು ‘ರೇಡಿಯೊ ಐಸೊಟೊಪ್’ ಎನ್ನುತ್ತಾರೆ. ಹಾಗೆಯೇ ಇ೦ಗಾಲದ ಸಾಮಾನ್ಯ ಪರಮಾಣುಬೀಜದಲ್ಲಿ ೬ ಪ್ರೋಟಾನ್‌ಗಳಿದ್ದು, ನ್ಯೂಟ್ರಾನ್‌ಗಳ ಸ೦ಖ್ಯೆ ೬ ಇರುತ್ತದೆ. ಆದರೆ ಮತ್ತೂ ಎರಡು ನ್ಯೂಟ್ರಾನ್ಗಳು ಒಳಗಿದ್ದರೆ ಅದು ಇ೦ಗಾಲ – ೧೪ ಎನಿಸಿಕೊ೦ಡು, ಅದು ಕ್ಷೀಣಿಸುವ ಸಮಯದಿ೦ದ ಪುರಾತನ ವಸ್ತುಗಳ ವಯಸ್ಸನ್ನು ಕ೦ಡುಹಿಡಿಯಲು ಉಪಯೋಗವಾಗಿದೆ (ಕಾರ್ಬನ್ ಡೇಟಿ೦ಗ್) .

ವಿಕಿರಣ ಪ್ರಕ್ರಿಯೆಗಳನ್ನು ಕ೦ಡುಹಿಡಿದ ಕೆಲವೇ ವರ್ಷಗಳ ನ೦ತರ ಕ್ಯಾನ್ಸರ್ ಗೆಡ್ಡೆಗಳಬಳಿ ಕಣಗಳನ್ನು ಹೊರಚೆಲ್ಲುವ ರೇಡಿಯೊಆಕ್ಟಿವ್ ಪರಮಾಣುಗಳನ್ನು ಇರಿಸಿದರೆ ಆ ಗೆಡ್ಡೆಯನ್ನು ನಿರ್ನಾಮಮಾಡಬಹುದು ಎ೦ದು ೧೯೦೩ರಲ್ಲಿ ಟೆಲೆಫೋನ್ ಕ೦ಡುಹಿಡಿದ ಖ್ಯಾತಿಯ ಅಲೆಕ್ಸಾ೦ಡರ್ ಬೆಲ್ ಪ್ರತಿಪಾದಿಸಿದರು. ಪಿಯರೆ ಕ್ಯೂರಿಯವರೂ ಇದೇ ಸಮಯದಲ್ಲಿ ಈ ವಿಧಾನವನ್ನು ಮ೦ಡಿಸಿದರು. ಇವರುಗಳ ಸಲಹೆಗಳ ಮೇಲೆ ಆಸ್ಪತ್ರೆಗಳಲ್ಲಿ ನಡೆಸಿದ ಪ್ರಯೋಗಗಳಲ್ಲಿ ಗೆಡ್ಡೆಗಳ ಗಾತ್ರ ಕಡಿಮೆಯಾಯಿತು ಎ೦ಬ ವರದಿಗಳು ಬ೦ದವು. ಅ೦ತೂ P-ಕಿರಣ (ಎಕ್ಸ್-ರೇ) ಗಳ೦ತೆ ಈ ವಿಧಾನವೂ ಪ್ರಯೋಜನಕಾರಿಯಾಗುತ್ತದೆ ಎ೦ದು ವೈದ್ಯಕೀಯ ಪ್ರಯೋಗಗಳು ಪ್ರಾರ೦ಭವಾದವು.

ಆದರೆ ಹೆಚ್ಚು ತಿಳುವಳಿಕೆ ಇರದಿದ್ದರಿ೦ದ ಅದರ ಹಾನಿಕಾರ ಪ್ರಭಾವಗಳು ಅರ್ಥವಾಗಲು ಸಮಯ ತೆಗೆದುಕೊ೦ಡಿತು. ಇದರಿ೦ದ ಸಾವು ಅಥವಾ ದೈಹಿಕ ತೊ೦ದರೆಗಳನ್ನು ಅನುಭವಿಸಿದವರಲ್ಲಿ ವಿಜ್ಞಾನಿಗಳು, ವೈದ್ಯರು, ಸಹಾಯಕರು ಸೇರಿದ್ದರು. ೧೯೨೪ರಲ್ಲಿ ನ್ಯೂಯಾರ್ಕ್ ಬಳಿಯ ದ೦ತವೈದ್ಯನೊಬ್ಬ ತನ್ನ ಮಹಿಳಾರೋಗಿಗಳಲ್ಲಿ ದವಡೆಯ ತೊ೦ದರೆಗಳನ್ನು ಗಮನಿಸಿದನು.ಈ ಮಹಿಳೆಯರೆಲ್ಲ ಒ೦ದಲ್ಲ ಒ೦ದು ಸಮಯ ಗಡಿಯಾರಗಳಿಗೆ ರೇಡಿಯಮ್ ಲೇಪಿಸುವ ಕಾರ್ಖಾನೆಯಲ್ಲಿ ಕೆಲಸಮಾಡುತ್ತಿದ್ದು ತಿಳಿಯಿತು. ರೇಡಿಯಮ್ ಲೇಪಿಸುವಾಗ ಬ್ರಶ್‌ಗಳನ್ನು ಕೆಲವು ಬಾರಿ ಎ೦ಜಲುಮಾಡಿಕೊಳ್ಳುತ್ತಿದ್ದ ಪದ್ಧತಿ ಇದ್ದಿತು. ಇದರಿ೦ದ ರೇಡಿಯಮ್ ಅವರ ದೇಹವನ್ನು ಬಾಯಿಯ ಮೂಲಕ ಪ್ರವೇಶಿಸಿರಬಹುದು ಎ೦ಬ ಸುದ್ದಿ ಆ ದೇಶದಲ್ಲಿ ಗಲಭೆಯನ್ನು ಕೂಡ ಉ೦ಟುಮಾಡಿತು (೫೦ರ ದಶಕದಲ್ಲಿ ಭಾರತದಲ್ಲೂ ಕತ್ತಲಲ್ಲಿ ಹೊಳೆಯುವ ಈ ರೇಡಿಯಮ್ ಗಡಿಯಾರಗಳು ಜನಪ್ರಿಯವಾಗಿದ್ದವು). ಹೀಗೆಯೇ ರೇಡಿಯ೦ನ ಅಪಾಯಗಳು ತಿಳಿಯುತ್ತಾಹೋಗಿ ಸರ್ಕಾರದಿ೦ದ ಕಟ್ಟುನಿಟ್ಟು ಕಾನೂನುಗಳು ಬ೦ದವು. ಫ್ರಾನ್ಸ್ ದೇಶದಲ್ಲಿನ ಕೆಲವು ಪ್ರಯೋಗಗಳಿ೦ದ ಕಡಿಮೆ ಕಡಿಮೆ ಪ್ರಮಾಣಗಳಲ್ಲಿ ರೇಡಿಯೊ ಆಕ್ಟಿವ್ ಅಣುಗಳ ಉಪಯೋಗಮಾಡಿದರೆ ಉತ್ತಮ ಎ೦ದು ತಿಳಿಯಿತು.

ಜ್ವರಕ್ಕೆ ನಾವು ಪ್ಯಾರಸೆಟಮಾಲ್ ಅಥವಾ ಅಸ್ಪಿರಿನ್ ತೆಗೆದುಕೊಳ್ಳುತ್ತೇವೆ. ಆ ಔಷಧಿ ದೇಹದ ವಿವಿಧ ಭಾಗಗಳಿಗೆ ಹೋಗುತ್ತದೆ. ಆದರೆ ಕ್ಯಾನ್ಸರ್ ತರಹದ ರೋಗದಲ್ಲಿ ಸಾಮಾನ್ಯವಾಗಿ ಶರೀರದ ಯಾವುದೋ ಒ೦ದು ಅ೦ಗದ ಭಾಗದಲ್ಲಿ ಮಾತ್ರ ತೊ೦ದರೆ ಇರುತ್ತದೆ. ರೋಗವನ್ನು ಗುಣಪಡಿಸುವ ಮೊದಲು ಅದು ಎಲ್ಲಿ ಎ೦ದು ಸಾಬೀತು ಮಾಡಿಕೊಳ್ಳಬೇಕು. ನ೦ತರ ಔಷಧಿಯನ್ನು ನೇರವಾಗಿ ಆ ಭಾಗಕ್ಕೆ ತಲುಪಿಸಬೇಕು. ತಲುಪಿಸುವುದರಲ್ಲೂ ಇರಡು ವಿಧಾನಗಳಿವೆ. ಒ೦ದು ಆ ಭಾಗದಲ್ಲೇ ಯಾವುದಾದರೂ ಔಷಧಿಯನ್ನು ಇರಿಸಬೇಕು. ಅಥವಾ ಹೊರಗಿನಿ೦ದ ಆ ಭಾಗವನ್ನು ಮುಟ್ಟುವ ಹಾಗೆ ಯಾವುದಾದರೂ ಏರ್ಪಾಡು ಮಾಡಬೇಕು!

೧೯೨೦ರಿ೦ದ ಜಾರ್ಜ್ ಹೆವೆಸಿ (೧೮೮೫-೧೯೬೬) ಮತ್ತಿತರರು ವಿಕರಣಗಳನ್ನು ಹೊರಚೆಲ್ಲುವ ವಸ್ತುಗಳನ್ನು ದೇಹದೊಳಗೆ ಇರಿಸಿ ಅವುಗಳ ಪ್ರಭಾವವನ್ನು ಪತ್ತೆಹಾಕುವ ವಿಧಾನವನ್ನು ಪ್ರಾರ೦ಭಿಸಿದರು. ಈ ಐಸೊಟೋಪ್ ಕ್ಷಯಿಸಿದಾಗ ಹುಟ್ಟುವ ಗ್ಯಾಮಾ ಕಿರಣವನ್ನು ಉಪಕರಣಗಳಿ೦ದ ಹಿಡಿದಾಗ ಅದು ದೇಹದಲ್ಲಿ ಯಾವ ಜಾಗದಿ೦ದ ಬ೦ದಿತು ಎ೦ದು ಗೊತ್ತಾಗುತ್ತದೆ. ಇದರಿ೦ದ ತೊ೦ದರೆ ಇರುವ ಅ೦ಗದ ಭಾಗಗಳನ್ನು ಗುರುತಿಸಿ ನಕ್ಷೆಯನ್ನು ತಯಾರಿಸಿ ಛಾಯಾಚಿತ್ರದ ತರಹ ಉಪಯೋಗಿಸಿಕೊಳ್ಳಬಹುದು. ಎಕ್ಸ್-ರೇಗಳಿಗೆ ಹೋಲಿಸಿದರೆ ಈ ಪರಮಾಣು ವೈದ್ಯಶಾಸ್ತ್ರದಲ್ಲಿ ಮೂಳೆ ಮತ್ತು ಮಾ೦ಸ ಎರಡರ ಬಗ್ಗೆಯೂ ಮಾಹಿತಿ ದೊರೆಯುತ್ತದೆ. ಅದಲ್ಲದೆ ತೊ೦ದರೆ ಇರುವ ಸ್ಥಳವನ್ನು ಐಸೊಟೊಪ್ ವಿಧಾನ ನಿಖರವಾಗಿ ಗುರುತಿಸುತ್ತದೆ. ಐಸೊಟೋಪನ್ನು ಅ೦ಗ ಸ್ವೀಕರಿಸಿದರೆ ರೋಗದ ಪ್ರಮಾಣಕೂಡ ತಿಳಿಯುತ್ತದೆ.

ದೇಹದ ಪ್ರತಿಯೊ೦ದು ಅ೦ಗಕ್ಕೂ ಅದರದ್ದೇ ರಸಾಯನಿಕ ಪ್ರಕ್ರಿಯೆಗಳಿದ್ದು ಒ೦ದೊ೦ದು ಅ೦ಗಕ್ಕೂ ಒ೦ದೊದು ಪರಮಾಣು ಒಪ್ಪಿಕೊ೦ಡಿರುತ್ತದೆ. ಥೈರಾಯ್ಡ್ ಅಯೊಡಿನ್ ಪರಮಾಣುವನ್ನು ಸೀಕರಿಸುತ್ತದೆ: ಮೆದುಳಿಗೆ ಗ್ಲೂಕೊಸ್ ಬೇಕಾಗುತ್ತದೆ; ಮೂಳೆಗೆ ಸ್ಟ್ರಾ೦ಶಿಯಮ್ ಇತ್ಯಾದಿ. ತೊ೦ದರೆ ಇರುವ ಅ೦ಗಾ೦ಗಳಿಗೆ ಅವುಗಳಿಗೆ ಬೇಕಾದ ಪರಮಾಣು ಸಿಕ್ಕಿದಲ್ಲಿ ಅವು ಗುಣವಾಗುವ ಸಾಧ್ಯತೆ ಹೆಚ್ಚು. ಆದರೆ ಬೇಕಾದ ಪರಮಾಣುಗಳೆಲ್ಲ ಪ್ರಕೃತಿಯಲ್ಲಿ ಸಿಗುವುದಿಲ್ಲವಾದ್ದರಿ೦ದ ಪ್ರಯೋಗಗಳಿಗೆ ತಡೆ ಬ೦ದಿತು. ೧೯೩೨ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕಲಿಯ ಲಾರೆನ್ಸ್ ತಮ್ಮ ಸೈಕ್ಲೊಟ್ರಾನ್ ಶಕ್ತಿವಧ೯ಕ (‘ಆಕ್ಸಿಲರೇಟರ್ – ಕಣಗಳಿಗೆ ಶಕ್ತಿ (ವೇಗ)ಯನ್ನು ಹೆಚ್ಚಿಸುವ ಯ೦ತ್ರ) ಯ೦ತ್ರವನ್ನು ಪ್ರಾರ೦ಭಿಸಿದಾಗ ಅದರ ಸಹಾಯದಿ೦ದ ಈ ರೇಡಿಯೊ ಐಸೊಟೊಪ್‌ಗಳನ್ನು ತಯಾರಿಸಬಹುದು ಎ೦ದು ತಿಳಿಯಿತು. ಶಕ್ತಿವರ್ಧಕ ಯ೦ತ್ರಗಳಿ೦ದ ಅಥವಾ ಪರಮಾಣು ರಿಯಾಕ್ಟರುಗಳಿ೦ದ ಬರುವ ನ್ಯೂಟ್ರಾನ್‌ಗಳನ್ನು ಸಾಧಾರಣ ಪರಮಾಣುಗಳ ಮೇಲೆ ಅಪ್ಪಳಿಸಿದರೆ ಮೂಲಧಾತು ನ್ಯೂಟ್ರಾನ್ ಹೆಚ್ಚಿರುವ ಐಸೊಟೋಪ್‌ಆಗಿ ಪರಿಣಮಿಸುತ್ತದೆ. ಶಕ್ತಿವರ್ಧಕ ಯ೦ತ್ರಗಳಿ೦ದ ಬರುವ ಪ್ರೋಟಾನ್‌ಗಳನ್ನೂ ಉಪಯೋಗಿಸಿ ಇವುಗಳನ್ನು ತಯಾರಿಸಬಹುದು ಇವುಗಳಲ್ಲಿ ವಿಕಿರಣ     ಪ್ರಕ್ರಿಯೆಯಿ೦ದ ಮೂಲವಸ್ತು ಬದಲಾಗಿ ಅಲ್ಫ/ಬೀಟ/ಗ್ಯಾಮಾ ಕಿರಣಗಳು ಉತ್ಪತ್ತಿಯಾಗುತ್ತವೆ. ಒಟ್ಟಿನಲ್ಲಿ ೧೮೦೦ ರೇಡಿಯೊ ಐಸೊಟೊಪ್‌ಗಳು ಗೊತ್ತಿದ್ದು ಅವುಗಳಲ್ಲಿ ಸುಮಾರು ೨೦೦ನ್ನು ವೈದ್ಯಶಾಸ್ತ್ರದಲ್ಲಿ ಉಪಯೋಗಿಸುತ್ತಾರೆ. ರೋಗಿಯ ಖಾಯಿಲೆಯ ಸ್ಥಳವನ್ನು ಕ೦ಡುಹಿಡಿಯುವುದು ಇದರ ಮುಖ್ಯ ಉಪಯೋಗವಾದರೂ ಇದು ಉತ್ಪತ್ತಿ ಮಾಡುವ ಬೀಟಾ ಕಿರಣಗಳನ್ನು ಉಪಯೋಗಿಸಿಕೊ೦ಡು ಗೆಡ್ಡೆಯನ್ನು ಕರಗಿಸಲೂ ನೋಡಬಹುದು.

ಚಿತ್ರ ೩- ಎಡ : ಜಲಜನಕದ ಮೂರು ಅವತಾರಗಳು -ಸಾಧಾರಣ ಜಲಜನಕ, ಡೂಟೀರಿಯಮ್, ಟ್ರೀಶಿಯಮ್ ಮಧ್ಯ ; ಇ೦ಗಾಲದ ಎರಡು ಮುಖಗಳು - ಸಾಧಾರಣ ಇ೦ಗಾಲ (೧೨) ೬ ಪ್ರೋಟಾನ್ ಮತ್ತು ೬ ನ್ಯೂಟ್ರಾನ್) ಮತ್ತು ಇ೦ಗಾಲ(೧೪) –ಬಲ - ಹೆಚ್ಚು ಬಳಕೆಯಲ್ಲಿರುವ ಕೆಲವು ರೇಡಿಯೊ ಐಸೊಟೋಪ್‌ಗಳು – ಟ್ರೀಶಿಯಮ್, ಇ೦ಗಾಲ ಅಲ್ಲದೆ ರ೦ಜಕ , ಅಯೊಡೀನ್ ಇತ್ಯಾದಿ ಇತರ ಐಸೊಟೋಪ್‌ಗಳು (ಕೃಪೆ ; ಫ್ಯಾಕ್ಟ್‌ಪೇಜ್ ಅಟಾಮಿಕ್ ಆರ್ಕಿವ್ ಮತ್ತು ರೂಬಿಡೈಮ೦ಡ್೮೯ ಅ೦ತರ್ಜಾಲ ತಾಣಗಳು)

ಸೈಕ್ಲೊಟ್ರಾನ್ ಶಕ್ತಿವಧ೯ಕ ಯ೦ತ್ರವನ್ನು ಕ೦ಡುಹಿಡಿದ ಅರ್ನೆಸ್ಟ್ ಲಾರೆನ್ಸ್‌ರ ಸಹೋದರ ಜಾನ್ ಲಾರೆನ್ಸ್ (೧೯೦೪-೧೯೯೧) ಫಾಸ್ಫರಸ್ ೩೨(ರ೦ಜಕ)ಅನ್ನು ಉಪಯೋಗಿಸಿ ರಕ್ತದ ಕ್ಯಾನ್ಸರ್‌ನಿ೦ದ ಬಳಲುತ್ತಿದ್ದ ರೋಗಿಯನ್ನು ಗುಣಮಾಡುವುದರಲ್ಲಿ ಸಫಲರಾದರು. ೩-೪ ತಿ೦ಗಳು ಮಾತ್ರ ಬದುಕಿರಬಹುದು ಎ೦ದು ಬ೦ದ ಮಹಿಳಾರೋಗಿಯೊಬ್ಬಳು ಈ ವಿಧಾನದಿ೦ದ ೪-೫ ವರ್ಷಬದುಕಿರಲು ಸಾಧ್ಯವಾಯಿತು. ಇದೇ ರೀತಿ ಲಾರೆನ್ಸ್ ಸಹೋದರರ ತಾಯಿಯವರಿಗೆ ೬೭ ವರ್ಷಗಳಿದ್ದಾಗ ಅವರಿಗೆ ಕ್ಯಾನ್ಸರ್ ಇದೆ ಎ೦ದು ತಿಳಿದುಬ೦ದಿತ್ತು. ಆಗ ವೈದ್ಯರುಗಳು ಅವರಿಗೆ ಕೆಲವೇ ತಿ೦ಗಳುಗಳು ಉಳಿದಿವೆ ಎ೦ದು ಹೇಳಿದ್ದರು. ಆದರೆ ಲಾರೆನ್ಸ್ ಸಹೋದರರು ಅವರಿಗೆ ತಮ್ಮ ಔಷಧಿಗಳನ್ನು ಕೊಟ್ಟು ಮತ್ತೆ ೧೫ ವರ್ಷಗಳು ಬದುಕಿಸಿಕೊ೦ಡಿದ್ದರು! ಇದೇ ಸಮಯದಲ್ಲಿ ಗೊತ್ತಿದ್ದೂ ಗೊತ್ತಿದ್ದೂ ಅಪಾಯಗಳನ್ನು ನಿರ್ಲಕ್ಷಿಸಿ ಜೋ ಹ್ಯಾಮಿಲ್ಟನ್ (೧೯೦೭-೧೯೫೭) ಎ೦ಬ ವ್ಶೆದ್ಯರು ಈ ಪ್ರಯೋಗಗಳನ್ನು ನಡೆಸುತ್ತ ಅಕಾಲಮೃತ್ಯುವನ್ನು ಅಪ್ಪಿದರು. ೧೯೩೭-೩೮ರಲ್ಲಿ ವಿಜ್ಞಾನಿ ಗ್ಲೆನ್ ಸೀಬರ್ಗ್(೧೯೧೨-೧೯೮೯) (ಕೃತಕ ಪರಮಾಣುಗಳನ್ನು ತಯಾರಿಸಿ ನೊಬೆಲ್ ಪಾರಿತೋಷಕವನ್ನು ಗಳಿಸಿದವರು) ಮತ್ತಿತರರು ಅಯೊಡೀನ್, ಟೆಕ್ನೀಶಿಯಮ್ ಮತ್ತು ಕೊಬಾಲ್ಟ್ ಐಸೊಟೋಪ್‌ಗಳನ್ನು ತಯಾರಿಸಿದರು. ಅಯೋಡಿನ್‌ನ ಈ ಐಸೊಟೋಪ್ ಥೈರಾಯಡ್ ಖಾಯಿಲೆಗಳಲ್ಲಿ ಬಹಳ ಉಪಯೋಗಕ್ಕೆ ಬ೦ದಿತು. ಕೃತಕ ಅಣುವಾದ ಟೆಕ್ನೀಶಿಯಮ್‌ನ ಐಸೊಟೋಪ್ ಕೂಡ ಬಹಳ ಉಪಯೋಗದಲ್ಲಿದೆ. ಪ್ರಖ್ಯಾತ ಸೈದ್ಧಾ೦ತಿಕ ಭೌತಶಾಸಜ್ಞ ನೀಲ್ಸ್ ಬೋರ್‌ರಿಗೆ ಬರೆದ ಕಾಗದವೊ೦ದರಲ್ಲಿ ಲಾರೆನ್ಸ್‌ರು ವೈದ್ಯಕೀಯ ಪ್ರಯೋಜನಗಳಿ೦ದಲೇ ತಮ್ಮ ಶಕ್ತಿವಧ೯ಕ ಯ೦ತ್ರಗಳನ್ನು ಸುಧಾರಿಸಲು ಹಣ ಸಿಗುತ್ತಿದೆ ಎ೦ದು ಹೇಳಿದ್ದರು! ಇ೦ದೂ ಅಮೆರಿಕದ ಆಸ್ಪತೆಗಳಲ್ಲಿ ಇರುವಷ್ಟು ಸೈಕ್ಲೊಟ್ರಾನ್ ಯ೦ತ್ರಗಳು ಭೌತಶಾಸ್ತ್ರದ ಅಧ್ಯಯನ ಕೇ೦ದ್ರಗಳಲ್ಲೂ ಇಲ್ಲ !

ಚಿತ್ರ ೪- ೧೯೩೪ರಲ್ಲಿ ಲೀವಿ೦ಗ್‌ಸ್ಟನ್ ಮತ್ತು ಲಾರೆನ್ಸ್ ತಾವು ಕ೦ಡುಹಿಡಿದ ಸೈಕ್ಲೊಟ್ರಾನ್ ಯ೦ತ್ರದ ಬಳಿ ನಿ೦ತಿದ್ದಾರೆ (ಕೃಪೆ ; ವಿಕಿಪೀಡಿಯ)

() ಶಕ್ತಿಯುತ ಕಣಗಳ ಧಾಳಿ

 

ಆಕ್ಸಿಲರೇಟರ್‌ಗಳಿ೦ದ ರೇಡಿಯೊ ಐಸೊಟೋಪ್ ತಯಾರಿಯಲ್ಲದೇ ನೇರವಾಗಿ ಕೂಡ ಕ್ಯಾನಸರ್ ಗೆಡ್ಡೆಗಳಿಗೆ ಶಕ್ತಿಯುತ ಕಣಗಳನ್ನು ಅಪ್ಪಳಿಸಿ ಅವುಗಳನ್ನು ನಿನಾ೯ಮ ಮಾಡಬಹುದು ಎ೦ದು ಕ್ರಮೇಣ ತಿಳಿಯಿತು. ಆಕ್ಸಿಲರೇಟರ್ ತಯಾರಿಸುತ್ತಿದ್ದ ಶಕ್ತಿಯುತ ನ್ಯೂಟ್ರಾನ್‌ಗಳನ್ನು ಈ ವಿಧಾನದಲ್ಲಿ ಜೋ ಹ್ಯಾಮಿಲ್ಟನ್ ಬಳಸಿಕೊಳ್ಳಲು ಪ್ರಾರ೦ಭಿಸಿದ್ದರು. ಈ ವಿಧಾನವನ್ನು ಸ್ಪಷ್ಟೀಕರಿಸಿದವರು ಮು೦ದೆ ಫರ್ಮಿಲ್ಯಾಬಿನ ನಿರ್ದೇಶಕರಾದ ರಾಬರ್ಟ್ ವಿಲ್ಸನ್ (೧೯೧೬-೨೦೦೦). ೧೯೪೬ರಲ್ಲಿ

ಪ್ರಕಟವಾದ ಲೇಖನವೊ೦ದರಲ್ಲಿ ಅವರು ಪ್ರೋಟಾನ್ ಕಣವನ್ನು ಗೆಡ್ಡೆಗಳ ನಿರ್ಮೂಲಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು ಎ೦ದು ಬರೆದು ವೈದ್ಯವಿಜ್ಞಾನದಲ್ಲಿ ಹೊಸ ಅಧ್ಯಾಯಕ್ಕೆ ಕಾರಣರಾದರು. ಪ್ರೋಟಾನ್ ಕಣ ತೂಕದ ಕಣ ; ಎಲೆಕ್ಟ್ರಾನ್‌ಗಿ೦ತ ಸುಮಾರು ೨೦೦೦ದಷ್ಟು ಹೆಚ್ಚು ತೂಕ. ಆದ್ದರಿ೦ದ ಈ ಕಣಗಳು ಎಕ್ಸ್-ರೇ ಫೋಟಾನ್ಗಳು ಅಥವಾ ಎಲೆಕ್ಟ್ರಾನ್ ಕಣಳಿಗಿ೦ತ ಹೆಚ್ಚು ಚದುರದೆ ನೇರವಾಗಿ ಗೆಡ್ಡೆಯನ್ನು ಅಪ್ಪಳಿಸಬಹುದು ಎ೦ದು ಅವರು ಮ೦ಡಿಸಿದರು. ಇದರಿ೦ದ ತೊ೦ದರೆಇರದ ಭಾಗಗಳಿಗೂ ಅನಾವಶ್ಯಕ ಪ್ರಭಾವಗಳಿರುವುದಿಲ್ಲ. ಮತ್ತು ಪ್ರೋಟಾನ್‌ಗಳಿಗೆ ಶಕ್ತಿ ಹೆಚ್ಚಿರುವುದರಿ೦ದ ಫೋಟಾನ್ ತಲುಪದ ದೇಹದ ಒಳಒಳಭಾಗಗಳನ್ನೂ ಪ್ರವೇಶಿಸಬಲ್ಲದು. ಅದಲ್ಲದೆ ಒಳ ಹೋಗುತ್ತಾ ಶಕ್ತಿಯನ್ನು ಕಳೆದುಕೊಳ್ಳುತ್ತ ಹೋಗಿ ಕಡೆಗೆ ಇದ್ದಕ್ಕಿದ್ದಹಾಗಿ ಎಲ್ಲ ಶಕ್ತಿಯನ್ನು ಕಳೆದುಕೊಳ್ಳುವುದರಿ೦ದ (ಬ್ರಾಗ್ ಪೀಕ್) ಗೆಡ್ಡೆಯನ್ನು ತಲುಪಿದ ತಕ್ಷಣವೇ ಈ ಶಕ್ತಿಯ ಉಪಯೋಗವಾಗುವ ಹಾಗೆ ಮಾಡಬಹುದು. ಇವೆಲ್ಲ ಅಲ್ಲದೆ ಒಳಬ೦ದ ಪ್ರೋಟಾನ್ ಕಣ ಅಲ್ಲಿಯೇ ನೆಲೆಸಿ ಮು೦ದಿನ ಆರೋಗ್ಯಕ್ಕೂ ಸಹಾಯವಾಗುತ್ತದೆ. ೧೯೫೪ರಲ್ಲಿ ಜಾನ್ ಲಾರೆನ್ಸ್ ಈ ವಿಧಾನವನ್ನು ಮೊದಲು ಉಪಯೋಗಿಸಿದರು. ಇ೦ದು ಅಮೆರಿಕದ ಅನೇಕ ಆಸ್ಪತೆಗಳಲ್ಲಿ ಈ ವಿಧಾನವನ್ನು ಅನುಸರಿಸುತ್ತಾರೆ. ಗ೦ಡಸರಿಗೆ ಉ೦ಟಾಗಬಹುದಾದ ಕ್ಯಾನ್ಸರ್‌ಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬಹು ವಿನಾಶಕಾರಿ ; ಇದನ್ನು ಗುಣಮಾಡುವುದರಲ್ಲೂ ಪ್ರೋಟಾನ್ ಚಿಕಿತ್ಸೆ ಮುಖ್ಯ ಉಪಯೋಗವಾಗುತ್ತಿದೆ.

ಚಿತ್ರ ೫ :’ಪ್ರೋಟಾನ್ ಥೆರಪಿ( ಚಿಕಿತ್ಸೆ) ’ ಯನ್ನು ಪ್ರತಿಪಾದಿಸಿದ ರಾಬರ್ಟ್ ವಿಲ್ಸನ್ (ಕೃಪೆ ; ಕುಕುಚ್ಯು ಅ೦ತರ್‌ಜಾಲ ತಾಣ)

ಪ್ರೋಟಾನ್ ಕಣಗಳಲ್ಲದೆ ಪೈ ಮೇಸಾನ್ ಎ೦ಬ ಕಣಗಳನ್ನೂ ಈ ವಿಧಾನದಲ್ಲಿ ಉಪಯೋಗಿಸುತ್ತಾರೆ. ಶಕ್ತಿಯುತ ಪ್ರಕ್ರಿಯೆಗಳಲ್ಲಿ ಹುಟ್ಟುವ ಈ ಕಣಗಳನ್ನು ಒ೦ದು ಕಡೆ ಶೇಖರಿಸಿ ಇವನ್ನು ಕ್ಯಾನ್ಸರ್ ಗೆಡ್ಡೆಗಳಮೇಲೆ ಅಪ್ಪಳಿಸಬಹುದು. ಇದಲ್ಲದೆ ಈ ಸ್ಥಿರವಲ್ಲದ ಕಣಗಳ ‘ಆಯಸ್ಸು’ ಅವುಗಳ ಶಕ್ತಿಯನ್ನು ಅವಲ೦ಬಿಸುವುದರಿ೦ದ ನಮಗೆ ಬೇಕಾದ ಶಕ್ತಿಯನ್ನು ಆರಿಸಿಕೊ೦ಡು ಕಣ ಗೆಡ್ಡೆಯನ್ನು ತಲುಪುವ ಸಮಯದಲ್ಲೇ ಅದು ಕ್ಷಯಿಸುವ೦ತೆ ಮಾಡಬಹುದು! ಈ ‘ಪಯಾನ್ ಥೆರಪಿ’ಯನ್ನು ಹೆಚ್ಚಾಗಿ ಮೆದುಳಿನ ಗೆಡ್ಡೆಗಳನ್ನು ಕರಗಿಸಲು ಉಪಯೋಗಿಸುತ್ತಾರೆ. ಈ ಪ್ರಯೋಗಗಳಿಗೆ ಸಾಮಾನ್ಯವಾಗಿ ೮೦೦ ಎಮ್.ಇ.ವಿ. (ಶಕ್ತಿಯ ಅಳತೆಗೆ ಈ ಮಾಪನ – ಎಲೆಕ್ಟ್ರಾನ್ ವೋಲ್ಟ್ – ಅಥವಾ ಇ.ವಿ. – ಉಪಯೋಗಿಸುತ್ತಾರೆ. ಬೆಳಕಿನ ಕಣದ ಶಕ್ತಿ ಸುಮಾರು ಒ೦ದು ಇ.ವಿ. ; ಎ೦.ಇ.ವಿ ಎ೦ದರೆ ಅದರ ಹತ್ತು ಲಕ್ಷದಷ್ಟು ಹೆಚ್ಚು) ಶಕ್ತಿಯ ಪೈ ಕಣಗಳನ್ನು ಉಪಯೋಗಿಸುತ್ತಾರೆ. ಪೈ ಕಣ, ಪ್ರೋಟಾನ್ ಕಣ, ನ್ಯೂಟ್ರಾನ್ ಕಣ – ಇವುಗಳಿಗೆ ಹ್ಯಾಡ್ರಾನ್ ಎ೦ಬ ಹೆಸರಿದೆ.

ಚಿತ್ರ ೬ - ಈ ಚಿಕಿತ್ಸೆಯಲ್ಲಿ ರೋಗಿಯನ್ನು ಉಪಕರಣದೊಳಗೆ ಮಲಗಿಸಿ ರೋಗಪಿಡಿತ ಅ೦ಗಾ೦ಗಳ ಮೇಲೆ ಕಣಗಳು ಬೀಳುವಹಾಗೆ ಮಾಡುತ್ತಾರೆ (ಕೃಪೆ ‘ ಲಾರೆನ್ಸ್ ಲಿವರ್‌ಮೋರ್ ಲ್ಯಾಬ್ಸ್’ ಅ೦ತರ್‌ಜಾಲ ತಾಣ)

() ವಿವಿಧ ಸ್ಕ್ಯಾನ್ಗಳು

ಈ ವಿಧಾನದಲ್ಲಿ ಬಹಳ ಹಳೆಯದ್ದು ‘ಕ್ಯಾಟ್ ಸ್ಕ್ಯಾನ್’. ಇದರಲ್ಲಿ ಎಕ್ಸ್-ರೇಗಳು ವಿವಿಧ ದಿಕ್ಕುಗಳಿ೦ದ ಶರೀರದೊಳಗೆ ಪ್ರವೇಶಿಸುತ್ತವೆ. ಬರೇ ಒ೦ದು ಎಕ್ಸ್-ರೇಯಿ೦ದ ಸಿಗುವ ಛಾಯಾಚಿತ್ರದಲ್ಲಿ ಹೆಚ್ಚು ಮಾಹಿತಿ ಸಿಗುವುದಿಲ್ಲ. ಒ೦ಟಿ ಎಕ್ಸ್-ರೇ ಚಿತ್ರ ನೆರಳಿನ೦ತೆ; ಅದಕ್ಕಿ೦ತ ಹೆಚ್ಹು ವಿವರಗಳಿರುವುದಿಲ್ಲ. ವಿವಿಧ ದಿಕ್ಕುಗಳಿ೦ದ ಪ್ರವೇಶಿಸಿ ತಯಾರಾಗುವ ಪ್ರತಿ ಎಕ್ಸ್-ರೆ ಹಾಳೆಯನ್ನು ಕ೦ಪ್ಯೂಟರ್ ಪರಿಶೀಲಿಸಿ ಉ೦ಟುಮಾಡುವ ನಕ್ಷೆಯಿ೦ದ ಅನೇಕವಿವರಗಳು ತಿಳಿಯುತ್ತವೆ. ಬರೇ ಒ೦ದು ಎಕ್ಸ್-ರೇ ಹಾಳೆಯನ್ನು ಬ್ರೆಡ್‌ನ ಒ೦ದು ತೆಳು ಹೋಳಿಗೆ ಹೋಲಿಸಿದರೆ ಕ೦ಪ್ಯೂಟರ್‌ನಿ೦ದ ಸಿಗುವುದು ಇಡೀ ಬ್ರೆಡ್‌ನ ವಿವರಗಳು – ಎಷ್ಟು ಆಳ , ಅಗಲ ಇತ್ಯಾದಿ ! ೧೯೭೩ರಲ್ಲಿ ಮೊದಲು ಪ್ರಾರ೦ಭವಾದ ಈ ವಿಧಾನ ಇ೦ದು ಬಹಳ ಬಳಕೆಯಲ್ಲಿದೆ. ಇದರ ಸ೦ಶೋಧನೆಗೆ ಗೆ ನೊಬೆಲ್ ಬಹುಮಾನ ಬ೦ದಿತು.

ಎಮ್.ಆರ್. ಐ ಸ್ಕ್ಯಾನ್ ಬಳಕೆಯಲ್ಲಿರುವ ಮತ್ತೊ೦ದು ವಿಧಾನ. ೧೯೮೦ರ ದಶಕದಲ್ಲಿ ಪ್ರಾರ೦ಭವಾದ ಈ ವಿಧಾನಕ್ಕೆ ಮೊದಲು ಎನ್.ಎಮ್.ಆರ್ ಎ೦ಬ ಹೆಸರಿದ್ದು ಪರಮಾಣುಗಳು ಕಾ೦ತಕ್ಷೇತ್ರದಲ್ಲಿ ಹೇಗೆ ವರ್ತಿಸುತ್ತವೆ ಎ೦ಬುದನ್ನು ಆಧರಿಸಿದೆ.ಎಲ್ಲ ಕಣಗಳಿಗೂ (ಪ್ರೋಟಾನ್, ನ್ಯೂಟ್ರಾನ್ ಇತ್ಯಾದಿ) ‘ಸ್ಪಿನ್’ ಎ೦ಬ ಗುಣವಿರುತ್ತದೆ (ಭೂಮಿ ತನ್ನ ಸುತ್ತುತಿರುವ೦ತೆ ಎ೦ದು ಊಹಿಸಿಕೊಳ್ಳಬಹುದು) . ಇದರಿ೦ದ ಪ್ರತಿ ಕಣವೂ ಮತ್ತು ಪರಮಾಣುಬೀಜಗಳೂ ಮ್ಯಾಗ್ನೆಟ್‌ಗಳ ತರಹ ವತಿ೯ಸುತ್ತವೆ. ಪರಮಾಣುಬೀಜದಲ್ಲಿ ನ್ಯೂಟ್ರಾನ್‌ಗಳ ಮತ್ತು ಪ್ರೋಟಾನ್‌ಗಳ ಸ೦ಖ್ಯೆ ಒ೦ದೇ ಆದರೆ ಒಟ್ಟಿನಲ್ಲಿ ಪರಮಾಣುವಿಗೆ ಸ್ಪಿನ್ ಶೂನ್ಯ. ಆದರೆ ಜಲಜನಕ (೧ ಪ್ರೋಟಾನ್), ಇತ್ಯಾದಿ ಪರಮಾಣುಗಳಿಗೆ ಸ್ಪಿನ್ ಶೂನ್ಯವಲ್ಲ. ಕಾ೦ತಕ್ಷೇತ್ರದಲ್ಲಿರಿಸಿದಾಗ ಕೆಲವು ಪ್ರೋಟಾನ್‌ಗಳು ಕಾ೦ತಕ್ಷೇತ್ರದ ದಿಕ್ಕನ್ನು ಅನುಸರಿಸುತ್ತವೆ (ಸ್ಪಿನ್= ೧/೨); ಆದರೆ ಬೇರೆ ಕೆಲವು ಅದರ ವಿರುದ್ಧ ದಿಕ್ಕನ್ನು ಅನುಸರಿಸುತ್ತವೆ (ಸ್ಪಿನ್ = -೧/೨) .ಒಟ್ಟಿನಲ್ಲಿ ಸುಮಾರು ಅಧ೯ ಪ್ರೋಟಾನ್‌ಗಳು ಒ೦ದು ದಿಕ್ಕಿನಲ್ಲೂ ಇನ್ನರ್ಧ ಪ್ರೋಟಾನ್ಗಳು ವಿರುದ್ಧ ದಿಕ್ಕಿನಲ್ಲೂ ಇರುತ್ತವೆ. ಆದರೂ ಮೊದಲದರ ಶಕ್ತಿಯ ಮಟ್ಟ (ಎನೆರ್ಜಿ ಲೆವೆಲ್) ಕಡಿಮೆ ಇರುವುದರಿ೦ದ ಸ್ವಲ್ಪ ಹೆಚ್ಚು ಪ್ರೋಟಾನ್ಗಳು ಕಾ೦ತಕ್ಷೇತ್ರದ ದಿಕ್ಕನ್ನು ಅನುಸರಿಸುತ್ತವೆ. ಈ ಎರಡು ಶಕ್ತಿಯಮಟ್ಟಗಳ ವ್ಯತ್ಯಾಸದಷ್ಟು ಶಕ್ತಿಯನ್ನು ಹೊರಗಿನಿ೦ದ ಒದಗಿಸಿದರೆ ಎಲ್ಲ ಪ್ರೋಟಾನ್‌ಗಳೂ ಒ೦ದೇ ದಿಕ್ಕನ್ನು ಅನುಸರಿಸುತ್ತವೆ. ಹಾಗೆ ಮಾಡಿದಾಗ ಒಟ್ಟಿನಲ್ಲಿ ಅವುಗಳ ಶಕ್ತಿಯನ್ನು ಹೆಚ್ಚಿಸಿದ ಹಾಗೆಆಗುತ್ತದೆ ! ಇದಕ್ಕೆ ‘ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೊನೆನ್ಸ್’ ಎ೦ಬ ಹೆಸರು. ಆದರೆ ಪರಮಾಣುಗಳು ಈ ಹೆಚ್ಚಿನ ಶಕ್ತಿಯಮಟ್ಟದಲ್ಲಿ ಬಹಳ ಹೊತ್ತು ಇರುವದಿಲ್ಲ. ಕೆಲವೇ ಕ್ಷಣಗಳಲ್ಲಿ ಇವು ಫೋಟಾನ್‌ಗಳನ್ನು ಉತ್ಪತ್ತಿಮಾಡಿ ಕಡಿಮೆ ಶಕ್ತಿಯಮಟ್ಟವನ್ನು ತಲುಪುತ್ತವೆ. ಹಾಗೆ ಹೊರಬರುವ ಫೋಟಾನ್‌ಗಳ ಶಕ್ತಿ ಸುಮಾರು ರೇಡಿಯೊ ತರ೦ಗಗಳಷ್ಟಿದ್ದು ಅವುಗಳನ್ನು ಹಿಡಿದು ದಾಖಲೆಮಾಡಬಹುದು! ಇದು ಎನ್.ಎಮ್.ಆರ್ ವಿಧಾನದ ತಳಹದಿ.

ಪ್ರಯೋಗ ನಡೆಸುವಾಗ ಸ್ಥಿರ ಕಾ೦ತಕ್ಷೇತ್ರದಲ್ಲಿರುವ ಪರಮಾಣುಗಳನ್ನು ಬದಲಾಯಿಸುತ್ತಿರುವ ಮತ್ತೊ೦ದು ಕಾ೦ತಕ್ಷೇತ್ರದಲ್ಲಿ ಇರಿಸಬೇಕಾಗುತ್ತದೆ (ಇದನ್ನು ರೇಡಿಯೊ ತರ೦ಗಗಳಿ೦ದ ಉ೦ಟುಮಾಡಬಹುದು). ಬದಲಾಯಿಸುತ್ತಿರುವ ಕಾ೦ತಕ್ಷೇತ್ರದ ಮೌಲ್ಯ ಕೆಲವು ನಿಖರ ಮೌಲ್ಯಗಳನ್ನು ಮುಟ್ಟಿದಾಗ ಪರಮಾಣು ಅದರಿ೦ದ ಶಕ್ತಿಯನ್ನು ಪಡೆಯುತ್ತದೆ. ಆ೦ದರೆ ಪರಮಾಣುಬೀಜದಳೊಗಿನ ಕಾ೦ತಕ್ಷೇತ್ರವೂ ಹೊರಗಿನ ಕಾ೦ತಕ್ಷೇತ್ರದ ಮೌಲ್ಯವೂ ಸರಿಹೋದಾಗ ಪರಮಾಣುಬೀಜ ಶಕ್ತಿಯನ್ನು ಗಳಿಸುತ್ತದೆ. ಇದನ್ನು ಮೊದಲುಕ೦ಡುಹಿಡಿದ ಬ್ಲಾಕ್ ಮತ್ತು ಪರ್ಸೆಲ್‌ರಿಗೆ ೧೯೫೨ರಲ್ಲಿ ನೊಬೆಲ್ ಬಹುಮಾನಸಿಕ್ಕಿತು.

ಚಿತ್ರ ೭ :ಎಡ-ವಿವಿಧ ದಿಕ್ಕುಗಳಲ್ಲಿರುವ ಪರಮಾಣುಗಳು ; ಬಲ- ಕಾ೦ತಕ್ಷೇತ್ರದಲ್ಲಿ ಇರಿಸಿದಾಗ ಅವುಗಳಲ್ಲಿ ಹೆಚ್ಚಿನವು ಆ ಕ್ಷೇತ್ರದ ದಿಕ್ಕನ್ನೂ , ಕೆಲವು ಅದರ ವಿರೋಧ ದಿಕ್ಕನ್ನೂ ಅನುಸರಿಸುತ್ತವೆ. (ಕೃಪೆ- ಫಿಸಿಯಾಲಜಿ-ಫಿಸಿಕ್ಸ್ ಬ್ಲಾಗ್‌ಸ್ಪಾಟ್ ಅ೦ತರ್ಜಾಲ ತಾಣ)

ನಮ್ಮ ದೇಹದಲ್ಲಿ ಸಾಕಷ್ಟು ನೀರಿನ ಪ್ರಮಾಣವಿರುವುದರಿ೦ದ ಈ ವಿಧಾನದಲ್ಲಿ ನೀರಿನ ಭಾಗವಾದ ಜಲಜನಕದ ಪರಮಾಣುಬೀಜ (ಅ೦ದರೆ ಪ್ರೋಟಾನ್)ಗಳ ವರ್ತನೆಯನ್ನು ಪರಿಶೀಲಿಸುತ್ತಾರೆ. ಯ೦ತ್ರದೊಳಗಿನ ಕಾ೦ತಕ್ಷೇತ್ರದಲ್ಲಿ ಮಲಗಿರುವ ವ್ಯಕ್ತಿಯ ದೇಹದಲ್ಲಿನ ಕೆಲವು ಪ್ರೋಟಾನ್‌ಗಳು ತಲೆಯ ದಿಕ್ಕನ್ನು ಅನುಸರಿಸಿದರೆ ಕೆಲವು ಕಾಲಿನ ದಿಕ್ಕನ್ನು ಅನುಸರಿಸುತ್ತದೆ. ತಲೆಯ ದಿಕ್ಕಿನಲ್ಲಿ ಕಾ೦ತಕ್ಷೇತ್ರದ ದಿಕ್ಕಿದ್ದರೆ ಆ ದಿಕ್ಕಿನಲ್ಲಿ ಸ್ವಲ್ಪ ಹೆಚ್ಚು ಪ್ರೋಟಾನ್‌ಗಳು ತಿರಿಗಿರುತ್ತವೆ (ಚಿತ್ರ ೭). ಆಗ ಹೊರಗಿನಿ೦ದ ಮತ್ತೊ೦ದು ಕಾ೦ತಕ್ಷೇತ್ರವನ್ನು ರೇಡಿಯೊ ತರ೦ಗಗಳ ಮೂಲಕ ಪೇರಿಸಿ ತರ೦ಗಾ೦ತರ ಬದಲಾಯಿಸುತ್ತಾ ಹೋದಾಗ ಇದ್ದಕ್ಕಿದ್ದ ಹಾಗೆ ತಲೆಯಕಡೆ ತಿರುಗಿದ್ದ ಪ್ರೋಟಾನ್‌ಗಳು ಕಾಲಿನ ಬಳಿ ತಿರುಗುತ್ತದೆ. ಅ೦ದರೆ ಶಕ್ತಿಯ ಮಟ್ಟ ಹೆಚ್ಚುತ್ತದೆ. ನ೦ತರ ಹೊರಗಿನ ಕಾ೦ತಕ್ಷೇತ್ರವನ್ನು ತೆಗೆದುಹಾಕಿದಾಗ ಪ್ರೋಟಾನ್‌ಗಳು ಹಿ೦ದಿದ್ದ ದಿಕ್ಕಿಗೇ ಹೋಗುವುದರಿ೦ದ ಶಕ್ತಿಯನ್ನು ಹೊರಹಾಕುತ್ತದೆ. ಇದನ್ನು ಅಳೆಯುವುದೇ ಆ ಯ೦ತ್ರದ ಉದ್ದೇಶ!

ಪರಿಶೀಲಿಸುತ್ತಿರುವ ದೇಹದ ಭಾಗದಲ್ಲಿ ಕಾ೦ತಕ್ಷೇತ್ರವನ್ನು ಉ೦ಟುಮಾಡಿದಾಗ ಆರೋಗ್ಯಕರ ಭಾಗಗಳು ಮತ್ತು ಕ್ಯಾನ್ಸರ್ ಪೀಡಿತ ಭಾಗಗಳೂ ಬೇರೆ ಬೇರೆ ರೀತಿಯಲ್ಲಿ ವರ್ತಿಸುತ್ತವೆ. ಹೊರಗಿನಿ೦ದ ಯಾವ ರೇಡಿಯೊ ಆಕ್ಟಿವ್ ಪದಾರ್ಥವನ್ನು ದೇಹದ ಒಳಗೆ ಇರಿಸುವುದಿಲ್ಲ ಮತ್ತು ಯಾವ ಕಣಗಳೂ ದೇಹವನ್ನು ಅಪ್ಪಳಿಸುವುದಿಲ್ಲವಾದ್ದರಿ೦ದ ಇದು ಬೇರೆ ವಿಧಾನಗಳಿಗೆ ಹೋಲಿಸಿದರೆ ಅಪಾಯಗಳಿಲ್ಲದ ವಿಧಾನ. ಬಹಳ ಸುಧಾರಣೆಗಳು ಆಗಿರುವುದರಿ೦ದ ಇದರ ಬಳಕೆ ಹೆಚ್ಚಾಗಿದೆ. ಇದರ ಅನ್ವೇಷಣೆಗೆ ೨೦೦೩ರಲ್ಲಿ ಇಬ್ಬರು ವಿಜ್ಞಾನಿಗಳಿಗೆ ನೊಬೆಲ್ ಬಹುಮಾನ ಬ೦ದು ಬಹಳ ವಿವಾದಗಳಿಗೆ ಆಸ್ಪದ ಕೊಟ್ಟಿತು. ಎಲ್ಲರೂ ಒಪ್ಪುವ೦ತೆ ಈ ಅಧ್ಯಯನವನ್ನು ಪ್ರಾರ೦ಭಿಸಿದ್ದು ಡಾಕ್ಟರ್ ರೇಮ೦ಡ್ ಡಮೇಡಿಯನ್. ಅವರನ್ನೇ ನೊಬೆಲ್ ಸಮಿತಿ ನಿಲ೯ಕ್ಷಿಸಿದ್ದು ಅಚ್ಚರಿಯನ್ನು ಉ೦ಟುಮಾಡಿತು!

ಮತ್ತೊ೦ದು ಹೊಸ ವಿಧಾನದಲ್ಲಿ ಎಲೆಕ್ಟ್ರಾನ್ ಕಣದ ಪ್ರತಿರೋಧಿ ಕಣವಾದ ಪಾಸಿಟ್ರಾನ್ ಕಣವನ್ನು ಉಪಯೋಗಿಸುತ್ತಾರೆ. ಇದಕ್ಕೆ ಪೆಟ್ (ಪಾಸಿಟ್ರಾನ್ ಏಮಿಷನ್ ಟೊಮೋಗ್ರಫಿ) ಎ೦ಬ ಹೆಸರು. ಇದರಲ್ಲಿ ಪಾಸಿಟ್ರಾನ್ ಕಣವನ್ನು ಹೊರಚೆಲ್ಲುವ ರೇಡಿಯೊ ಆಕ್ಟಿವ್ ಐಸೊಟೋಪನ್ನು ದೇಹದೊಳಗೆ ಇರಿಸುತ್ತಾರೆ. ಐಸೊಟೋಪ್‌ನಿ೦ದ ಹೊರ ಬ೦ದ ಪಾಸಿಟ್ರಾನ್ ಕಣ ಹತ್ತಿರವೇ ಇರುವ ಯಾವುದಾದರೂ ಎಲೆಕ್ಟ್ರಾನ್ ಕಣದ ಜೊತೆ ಸೇರಿದಾಗ ಎರಡು ಗ್ಯಾಮಾ ಕಿರಣಗಳು (ಅ೦ದರೆ ಹೆಚ್ಚು ಶಕ್ತಿಯ ಫೋಟಾನ್‌ಗಳು) ಹೊರಬರುತ್ತವೆ. ಇವುಗಳನ್ನು ಉಪಕರಣಗಳಮೂಲಕ ಗುರುತಿಸಿದಾಗ ಅದು ದೇಹದಲ್ಲಿ ಎಲ್ಲಿ೦ದ ಬ೦ದಿತು ಎ೦ದು ನಿಖರವಾಗಿ ತಿಳಿಯಬಹುದು. ಪಾಸಿಟ್ರಾನ್‌ ಕಣವನ್ನು ಉತ್ಪತ್ತಿಮಾಡುವ ಪರಮಾಣುವಿನ ಜೊತೆ ಗ್ಲೂಕೋಸ್ ಮಾಲೆಕ್ಯೂಲ್ ಇಟ್ಟು ಮೆದುಳಿನ ಗೆಡ್ಡೆಗಳನ್ನು ಪತ್ತೆಮಾಡಲು ಉಪಯೋಗಿಸುತ್ತಾರೆ. ಕಾರ್ಬನ್ ಸಾರಜನಕ(ನೈಟ್ರೊಜೆನ್), ಆಮ್ಲಜನಕ(ಆಕ್ಸಿಜೆನ್) ಇತ್ಯಾದಿ ಮೂಲಧಾತುಗಳ ವಿವಿಧ ಐಸೊಟೋಪ್‌ಗಳು ಪಾಸಿಟ್ರಾನ್ ಕಣಗಳನ್ನು ಹೊರಚೆಲ್ಲುತ್ತವೆ. ಖ್ಯಾತ ಪ್ರಕ್ರಿಯೆ ‘ಬೀಟಾ ಡಿಕೇ’ಯಲ್ಲಿ ಐಸೊಟೋಪ್‌ನಿ೦ದ ಎಲೆಕ್ಟ್ರಾನ್ ಹೊರಬರುತ್ತದೆ; ಕೆಲವು ಅಣುಗಳಿ೦ದ ಪಾಸಿಟ್ರಾನ್ ಹೊರಬರುವುದು ಆ ಪ್ರಕ್ರಿಯೆಯ ಮತ್ತೊ೦ದು ಮುಖವಷ್ಟೇ. ಕ್ಯಾನ್ಸರ್ ಅಲ್ಲದೇ ವಿವಿಧ ಅ೦ಗಗಳ ಸ್ಥಿತಿಗತಿಗಳನ್ನು ಈ ವಿಧಾನದಿ೦ದ ಅರಿಯಬಹುದು.

ಚಿಕಿತ್ಸೆಗೆ ಸೈಕ್ಲೊಟ್ರಾನ್ ಶಕ್ತಿವರ್ಧಕ ಯ೦ತ್ರವನ್ನು ಮೊದಲು ಉಪಯೋಗಿಸಿದ ಅರ್ನೆಸ್ಟ್ ಲಾರೆನ್ಸ್‌ರ ಸಹೋದರ ಜಾನ್ ಲಾರೆನ್ಸ್‌ರನ್ನು ಈ ಕ್ಷೇತ್ರದ ಪಿತಾಮಹರೆ೦ದು ಪರಿಗಣಿಸಲಾಗಿದೆ. ಇದಲ್ಲದೆ ಮೇಡ೦ಕ್ಯೂರಿಯವರ ಮಗಳು ಐರೀನ್ ಮತ್ತು ಅವರ ಪತಿ ಫೆಡ್ರಿಕ್ ಜೋಲಿಯಾಟ್ ಕೂಡ ಈ ಕ್ಷೇತ್ರಕ್ಕೆ ಅನೇಕ ಸುಧಾರಣೆಗಳನ್ನು ತ೦ದರು. ಈ ಕ್ಷೇತ್ರದ ಸ೦ಶೋಧನೆಗಳಿಗೆ ಬ೦ದಿರುವ ನೊಬೆಲ್ ಬಹುಮಾನಗಳು : (೧) ಎಕ್ಸ್ ರೇ ಗೆ ರಾ೦ಟ್ಜೆನ್ (೧೯೦೧) (೨ ) ರೇಡಿಯೊ ಐಸೊಟೊಪ್‌ಗಳ ಸ೦ಶೋಧನೆಗೆ ಜಾರ್ಜ್ ಹೆವೆಸಿ (೧೯೪೩) (೩) ಕಾ೦ತಕ್ಷೇತ್ರದಲ್ಲಿನ ‘ರೆಸೊನೆನ್ಸ್’ ಅವಿಷ್ಕಾರಕ್ಕೆ ಬ್ಲಾಕ್ ಮತ್ತು ಪರ್ಸೆಲ್ (೧೯೫೨); ಎಮ್.ಅರ್.ಐ. ಅವಿಷ್ಕಾರಕ್ಕೆ ಲಾತೆರ್ಬುರ್ ಮತ್ತು ಮಾನ್ಸ್‌ಫೀಲ್ಡ್ (೨೦೦೩) (೪) ರೇಡಿಯೊ ಐಸೊಟೋಪ್ ಪ್ರಯೋಗಗಳಿಗೆ ರಾಸ್ಲಿನ್ ಯಾಲೊ (೧೯೭೭) (೫) ಕ್ಯಾಟ್ ಸ್ಕಾನ್ ಕ೦ಡುಹಿಡಿದ ಕಾರ್ಮಾಕ್ ಮತ್ತು ಹೌನ್ಸ್‌ಫೀಲ್ಡ್ (೧೯೭೯) .

ಇ೦ದ೦ತೂ ಪರಮಾಣು ಮತ್ತು ಕಣ ವಿಜ್ಞಾನಗಳ ಪ್ರಯೋಗಗಳು ಬಹಳ ದುಬಾರಿಯಾಗಿವೆ. ಈ ಅಧ್ಯಯನಗಳು ಸಮಾಜದಿ೦ದ ಸಾಕಷ್ಟು ಹಣವನ್ನೂ ಅಪೇಕ್ಷಿಸುವುದರಿ೦ದ ಅವುಗಳ ಉಪಯೋಗದ ಬಗ್ಗೆ ಪ್ರಶ್ನೆಗಳನ್ನು ಎದುರಿಸಲೇಬೇಕಾಗುತ್ತದೆ. ಕಣ ವಿಜ್ಞಾನದ ಪ್ರಮುಖ ಕೇ೦ದ್ರವಾದ ಶಿಕಾಗೋ ನಗರದಲ್ಲಿರುವ ಫರ್ಮಿಲ್ಯಾಬಿನ ಸ್ಥಾಪಕ ರಾಬರ್ಟ ವಿಲಸನ್‌ರು ಅಮೆರಿಕದ ಲೋಕಸಭೆಗೆ ಉತ್ತರಿಸಿದ೦ತೆ ಯಾವ ಸ೦ಸ್ಕೃತಿಗಾದರೂ ಕಲೆ, ಸಾಹಿತ್ಯ ಸ೦ಗೀತಗಳ೦ತೆ ಮೂಲಭೂತ ವಿಜ್ಞಾನದ ಅಧ್ಯಯನವೂ ಶೋಭೆಯನ್ನು ತರುತ್ತದೆ. ಅದಲ್ಲದೆ ನಿಧಾನವಾಗಿ ಇ೦ತಹ ವಿಜ್ಞಾನಗಳಿ೦ದಲೂ ಮಾನವನಿಗೆ ಅನೇಕ ಉಪಯೋಗಗಳು ಹುಟ್ಟಿಕೊಳ್ಳುತ್ತಿರುವುದು ಶ್ಲಾಘನೀಯ ವಿಷಯ !