ಪಳೆಯುಳಿಕೆ ಇಂಧನಗಳಿಗೆ ಬದಲಿ ಆಯ್ಕೆಗಳನ್ನು ಹುಡುಕುವಾಗ ನಮ್ಮೆದುರು ನಿಲ್ಲುವ ಹೆಸರುಗಳಲ್ಲಿ ಪರಮಾಣು ಶಕ್ತಿ ಕೂಡ ಒಂದು. ಅದನ್ನು ಸ್ವಚ್ಛ ಇಂಧನಗಳ ಸಾಲಿನಲ್ಲಿ ನಿಲ್ಲಿಸುವವರೂ ಇದ್ದಾರೆ.

ಪರಮಾಣು ಶಕ್ತಿ ಒಂದು ಪರ್ಯಾಯ ಇಂಧನಮೂಲ ನಿಜ; ಸಾವಿರಾರು ಟನ್ ಕಲ್ಲಿದ್ದಲಿನಿಂದ ಉತ್ಪಾದನೆಯಾಗುವ ಶಕ್ತಿಯನ್ನು ಅಲ್ಪಪ್ರಮಾಣದ ಯುರೇನಿಯಂನಿಂದಲೋ, ಥೋರಿಯಂನಿಂದಲೋ ಪಡೆಯಬಹುದು ಎನ್ನುವುದೂ ನಿಜ.

ಆದರೆ ಪರಮಾಣು ಶಕ್ತಿಯ ಉತ್ಪಾದನೆ ಹಾಗೂ ಬಳಕೆಯ ಸುತ್ತ ಸುರಕ್ಷತೆಗೆ ಸಂಬಂಧಪಟ್ಟ ನೂರಾರು ಸಮಸ್ಯೆಗಳಿವೆ. ದಶಕಗಳ ಹಿಂದಿನ ಚೆರ್ನೋಬಿಲ್ ದುರಂತದಿಂದ ಪ್ರಾರಂಭಿಸಿ ಕಳೆದ ವರ್ಷ ಜಪಾನ್‌ನ ಫುಕುಶಿಮಾದಲ್ಲಿ ಸಂಭವಿಸಿದ ಘಟನೆಗಳವರೆಗೆ ಹತ್ತಾರು ಅವಘಡಗಳು ಈ ಸಮಸ್ಯೆಗಳನ್ನು ನಮಗೆ ಪದೇಪದೇ ಪರಿಚಯಿಸಿವೆ. ಹೀಗಾಗಿಯೇ ಪರಮಾಣು ಶಕ್ತಿಯ ಬಳಕೆ ಸಂಪೂರ್ಣ ಸುರಕ್ಷಿತವಾಗಿರಬೇಕಾಗುತ್ತದೆ.

ಪರಮಾಣು ಶಕ್ತಿಯ ಉತ್ಪಾದನೆಗಾಗಿ ಬೇಕಾಗುವ ಯುರೇನಿಯಂನಂತಹ ಧಾತುಗಳು ನೈಸರ್ಗಿಕವಾಗಿ ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ, ಹೀಗಾಗಿಯೇ ಅವುಗಳ ಗಣಿಗಾರಿಕೆಯ ಸಂದರ್ಭದಲ್ಲಿ ಅತ್ಯಲ್ಪ ಪ್ರಮಾಣದ ಉಪಯುಕ್ತ ಧಾತುವನ್ನು ಪಡೆಯಲು ಅಪಾರ ಪ್ರಮಾಣದ ಅದಿರನ್ನು ಹೊರತೆಗೆಯಬೇಕಾಗುತ್ತದೆ. ಹೀಗೆ ಹೊರತೆಗೆದ ಅದಿರಿನ ನಿರುಪಯುಕ್ತ ಭಾಗವೂ ಗಣಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಕಿರಣ ಪಸರಿಸಬಲ್ಲದು!

ಪರಮಾಣು ಶಕ್ತಿ ಪಡೆಯಲು ಆ ಧಾತುವನ್ನು ಸಂಸ್ಕರಿಸುವಾಗಲೂ ಸಾಕಷ್ಟು ಪ್ರಮಾಣದ ವಿಕಿರಣಶೀಲ ಪದಾರ್ಥಗಳು ಉಳಿದುಕೊಳ್ಳುತ್ತವೆ. ಅದರಿಂದ ವಿದ್ಯುತ್ ಉತ್ಪಾದಿಸುವಾಗ, ನಂತರ ಉಳಿಯುವ ತ್ಯಾಜ್ಯವನ್ನು ಹಾಗೂ ವಿಕಿರಣಪೂರಿತ ಯಂತ್ರೋಪಕರಣಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲೂ ಬಹಳ ಎಚ್ಚರಿಕೆ ವಹಿಸಬೇಕಾದದ್ದು ಅಗತ್ಯ. ಪರಮಾಣು ಸ್ಥಾವರಗಳ ಕಾರ್ಯಾಚರಣೆಯಲ್ಲಿ ಆಗಬಹುದಾದ ಸಣ್ಣ ತಪ್ಪಾದರೂ ವಿಕಿರಣ ಸುತ್ತಮುತ್ತಲೆಲ್ಲ ಪಸರಿಸಿ ಸುತ್ತಲಿನ ಪರಿಸರದ ಮೇಲೆ ದೀರ್ಘಕಾಲೀನ ದುಷ್ಪರಿಣಾಮ ಆಗುವ ಸಾಧ್ಯತೆ ಇರುತ್ತದೆ. ಪರಮಾಣು ಸ್ಥಾವರಗಳು ಭಯೋತ್ಪಾತ, ಯುದ್ಧ ಅಥವಾ ನೈಸರ್ಗಿಕ ವಿಕೋಪದಂತಹ ಯಾವುದೇ ಘಟನೆಯಿಂದ ಹಾನಿಗೀಡಾದರೂ ಇದೇ ಗತಿ.

ಇವುಗಳನ್ನೆಲ್ಲ ತಡೆಯಲು ಪ್ರಯತ್ನಿಸುವುದೇ ಪರಮಾಣು ಸುರಕ್ಷತೆಯ ಮೂಲಮಂತ್ರ. ಪರಮಾಣು ಶಕ್ತಿಯ ಸಾಮರ್ಥ್ಯ ಏನೇ ಇದ್ದರೂ ಅದರ ಉತ್ಪಾದನೆ ಹಾಗೂ ಬಳಕೆಯ ಸಂದರ್ಭದಲ್ಲಿ ಅತ್ಯುನ್ನತ ಮಟ್ಟದ ಸುರಕ್ಷತೆಯ ಖಾತರಿ ಸಿಕ್ಕಿದಾಗ ಮಾತ್ರ ಅದು ಜನೋಪಯೋಗಿಯಾಗಬಲ್ಲದು. ಸ್ಥಾವರಗಳ ನಿರ್ಮಾಣ, ಸುರಕ್ಷತೆ, ಕಾರ್ಯಾಚರಣೆ, ವಿಕಿರಣಶೀಲ ವಸ್ತುಗಳ ನಿರ್ವಹಣೆ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಭದ್ರತೆಯ ವ್ಯವಸ್ಥೆ ಮಾಡಿದಾಗಲಷ್ಟೆ ಪರಮಾಣುಶಕ್ತಿಯನ್ನು ಭವಿಷ್ಯದ ಇಂಧನವೆಂದು ಕರೆಯುವುದು ಸಾಧ್ಯ.