ಪ್ರಸ್ತಾವನೆ

ತುಳುನಾಡು ಅನೇಕ ಜಾತಿ, ಭಾಷೆ, ಸಂಸ್ಕೃತಿಗಳಿರುವ ನಾಡು. ಇಲ್ಲಿ ಬೇರೆ ಬೇರೆ ರೀತಿಯ ವೃತ್ತಿಗಳನ್ನು ಮಾಡುವ ಜನರನ್ನು ಕಾಣಲು ಸಾಧ್ಯವಿದೆ. ಬೇರೆ ಬೇರೆ ಭಾಷೆಗಳನ್ನಾಡುವ ಜನರನ್ನು ಕಾಣಬಹುದು. ಅದರಲ್ಲೂ ಕರಾವಳಿಯು ಸುಂದರವಾದ ಕಡಲು ಇರುವ ಪ್ರದೇಶವಾಗಿರುವುದರಿಂದಾಗಿ ಮೀನು ಹಿಡಿಯುವವರನ್ನೂ (ಕಡಲಾಯೆ) ತಾಳೆ ಮತ್ತು ತೆಂಗುಗಳಿರುವುದರಿಂದಾಗಿ ಕಳ್ಳು ತೆಗೆಯುವವರನ್ನೂ (ಮಡಲಾಯೆ) ಕಾಣಲು ಸಾಧ್ಯ. ಅದೇ ರೀತಿಯಲ್ಲಿ ತುಳುನಾಡು ಅನೇಕ ರೀತಿಯ ಕುಣಿತಗಳ, ಆರಾಧನೆಗಳ ತವರೂರು. ಆಟಿಕಲೆಂಜ, ಸೋಣದ ಜೋಗಿ, ಸೋಣದ ಮದಿಮಾನ್‌, ಕನ್ಯಾಪು, ಮಾದಿರ, ಚೆನ್ನು ಕುಣಿತ, ಸುಗ್ಗಿ ಕುಣಿತ, ಕರಂಗೋಲು, ಕಂಗಿಲು – ಹೀಗೆ ತುಳುನಾಡಿಗೆ ವಿಶಿಷ್ಟ ಅನ್ನಿಸುವ ಕುಣಿತಗಳು, ಅದೇ ರೀತಿಯಲ್ಲಿ ಆರಾಧನೆಗಳನ್ನು ಗಮನಿಸಿದರೆ ಭೂತಾರಾಧನೆ, ನಾಗಾರಾಧನೆ, ಢಕ್ಕೆಬಲಿ, ತಂಬಿಲ, ಹಿರಿಯರಿಗೆ ಬಡಿಸುವುದು (ಕುಲೆಕ್ಕ್‌ಬಳಸುನೆ) – ಹೀಗೆ ಬೇರೆ ಬೇರೆ ಆರಾಧನೆಗಳು, ಆಚರಣೆಗಳು ತುಳುನಾಡಿನಲ್ಲಿದೆ. ಆರಾಧನೆಗಳಲ್ಲಿ ಬೇರೆ ಬೇರೆ ಜಾತಿಯ ಜನರು ಶ್ರೇಣೀಕೃತವಾದ ಒಂದು ವ್ಯವಸ್ಥೆಯಲ್ಲಿ ಕೆಲಸಗಳನ್ನು ಮಾಡಿಕೊಂಡು ಬರುತ್ತಾರೆ. ಭೂತಾರಾಧನೆಯೊಂದನ್ನೇ ಗಮನಿಸಿದರೆ ಜಾತಿಗಳಿಗೆ ಅನುಗುಣವಾಗಿ ಕೆಲಸಗಳಿರುವುದನ್ನು ಕಾಣಬಹುದು. ಆಡಳಿತವನ್ನು ನಡೆಸುವ ಮೊಕ್ತೇಸರರು ಜೈನ, ಬಂಟ ಜಾತಿಯವರಾದರೆ ಪೂಜೆ ಮಾಡಲು ಬ್ರಾಹ್ಮಣರು, ದೈವದ ಭಂಡಾರಗಳನ್ನು ತರಲು ಮಡಿವಾಳರು, ಪಲ್ಲಕ್ಕಿ ಹೊರಲು ಕುಂಬಾರರು, ಛತ್ರ ಹಿಡಿಯಲು ಕೆಲಸಗರು, ಪಕ್ಕಿನಿಸಾನಿಗಳನ್ನು ಹಿಡಿಯಲು ಮರಾಠಿಗರು, ದೈವಕ್ಕೆ ಅಮೃತವನ್ನು (ಕಳ್ಳು) ಕೊಡಲು ಮತ್ತು ಮಡಲಿನ ಸೂಟೆ (ತೆಂಗಿನ ಗರಿಗಳನ್ನು ಕಟ್ಟಿ ಮಾಡಿದ ಸೂಟೆ) ಹಿಡಿಯರು ಬಿಲ್ಲವರು, ದೈವಕ್ಕೆ ಕಟ್ಟಲು ಪರವ, ಪಂಬದ, ನಲಿಕೆಯವರೆಂಬುದಾಗಿ ಜಾತಿಯ ನೆಲೆಯಲ್ಲಿ ವಿಭಾಗಿಸಿರುವುದು ತುಳುನಾಡಿನ ದೈವಾರಾಧನೆ ಅಥವಾ ಭೂತಾರಾಧನೆಯಲ್ಲಿ ಕಾಣಸಿಗುತ್ತದೆ.

ಇಂತಹ ಶ್ರೇಣೀಕೃತವಾದ ವ್ಯವಸ್ಥೆಯಲ್ಲಿ ಭೂತಾರಾಧನೆಯಲ್ಲಿ ಕಾಣಸಿಗುತ್ತದೆ. ಕೊಂಡಿರುವ ಪರವರು ಅದರಲ್ಲೂ ಪರವ ಮಹಿಳೆಯರ ಸ್ಥಾನಮಾನಗಳೇನು? ಅವರಿಗೆ ಇರುವ ಕೆಲಸಗಳೇನು? ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಬದಲಾವಣೆಗಳೇನು? ಈ ಮುಂತಾದ ವಿಚಾರಗಳ ಕುರಿತಂತೆ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ದೈವಾರಾಧನೆ ಅಥವಾ ಭೂತಾರಾಧನೆಯ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ ಪರವ ಜಾತಿಯ ಕಲಾವಿದರು ತಮ್ಮನ್ನು ಪೂರ್ತಿಯಾಗಿ ಆರಾಧನೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಎಲ್ಲಾ ಸಂದರ್ಭಗಳಲ್ಲಿ ಆರಾಧನೆಯ ಕೆಲಸಗಳಿರುವುದಿಲ್ಲ. ಆಗ ತಮ್ಮ ಜೀವನವನ್ನು ನಡೆಸಲು ಇವರು ಇತರ ಕೆಲಸಗಳನ್ನು ಮಾಡುತ್ತಾರೆ. ಇಲ್ಲಿ ನಾನು ಮುಖ್ಯವಾಗಿ ಮಹಿಳೆಯರು ಯಾವ ರೀತಿಯಲ್ಲಿ ತಮ್ಮನ್ನು ಆರಾಧನೆ ಹಾಗೂ ಇತರ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂಬುದರ ಕುರಿತಂತೆ ಗಮನಿಸಿದ್ದೇನೆ. ಪರವ ಜನಾಂಗದಲ್ಲಿರುವ ಮಹಿಳೆಯರು ಪುರುಷನ ಕೆಲಸಗಳಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಾಡುತ್ತಾರೆ. ಉದಾಹರಣೆಗೆ ದೈವಾರಾಧನೆಯ ಸಂದರ್ಭದಲ್ಲಿ ಮನೆಯಿಂದ ಹೊರಡುವಾಗ ಆರಾಧನೆಯಲ್ಲಿ ಬಳಸುವ ಎಲ್ಲಾ ಸಾಮಗ್ರಿಗಳನ್ನು ಸಿದ್ಧಗೊಳಿಸಿರುವುದು, ಕಟ್ಟಿಡುವುದು, ತೆಗೆದುಕೊಂಡು ಹೋಗುವಾಗ ತಾನು ಕೆಲವು ವಸ್ತುಗಳನ್ನು ಹಿಡಿದುಕೊಳ್ಳುವುದು. ಆರಾಧನೆ ನಡೆಯುವ ಸ್ಥಳಕ್ಕೆ ಹೋಗಿ ಅಲ್ಲಿ ದೈವಾರಾಧನೆಯ ಮಾಧ್ಯಮವಾಗಿ ಕೆಲಸ ಮಾಡುವ ಕಲಾವಿದನಿಗೆ ವಸ್ತುಗಳನ್ನು ಸಿದ್ಧಗೊಳಿಸಿ ಕೊಡುವುದು, ತೆಂಗಿನ ಮರದ ಗರಿ (ತಿರಿ)ಗಳನ್ನು ಧರಿಸಲು ಬೇಕಾದಂತೆ ಕತ್ತರಿಸಿಕೊಡುವುದು, ಬೇಕಾದವುಗಳನ್ನು ಅವನು ಕೇಳಿದಂತೆ ತೆಗೆದುಕೊಡುವುದು, ಬಣ್ಣಗಾರಿಕೆಗೆ ಕುಳಿತಾಗ ಅವನ ಜೊತೆಯಲ್ಲಿಯೇ ಪರಿಸರ ನಿರ್ಮಾಣಕ್ಕೆ ಬೇಕಾದ ಪಾಡ್ದನಗಳನ್ನು ಹಾಡುವುದು, ತೆಂಬರೆಯನ್ನು ಬಡಿಯುವುದು – ಹೀಗೆ ಪ್ರತಿಯೊಂದು ಕೆಲಸಗಳಲ್ಲಿಯೂ ಹೆಣ್ಣು ಕೈಜೋಡಿಸುವುದನ್ನು ಕಾಣಬಹುದು.

ಪರವರ ಕುರಿತು ಇದುವರೆಗೆ ನಡೆದಿರುವ ಅಧ್ಯಯನಗಳೇನು? ಪರವರ ಹೆಂಗಸರು ಅಂದರೆ ಪರತಿಯರು ಮಾಡುವ ಕೆಲಸಗಳು ಯಾವ ರೀತಿಯಲ್ಲಿವೆ, ಪರವರು ದಟ್ಟವಾಗಿರುವ ಪ್ರದೇಶಗಳು ಯಾವುವು? ಪರವರು ತಮ್ಮ ಮನೆಯಲ್ಲಿ ನಡೆಸುವ ಆಚರಣೆಗಳೇನು? ಕೌಟುಂಬಿಕ ನೆಲೆಗಳು, ಜೀವನಾವರ್ತನ ಆಚರಣೆಗಳು, ಪರವ ಜನಾಂಗದ ಬಗೆಗಿರುವ ಕತೆ, ಪಾಡ್ದನ- ಈ ಎಲ್ಲ ವಿಧಗಳಲ್ಲಿ ಪರವ ಸಮುದಾಯದ ಸುತ್ತ ಒಂದು ನೋಟವನ್ನು ಬೀರುವ ಪ್ರಯತ್ನ ಇಲ್ಲಿದೆ.

ಇದುವರೆಗೆ ನಡೆದಿರುವ ಅಧ್ಯಯನಗಳು

ಒಂದೇ ಜಾತಿಯನ್ನು ಆಧಾರವಾಗಿ ಇಟ್ಟುಕೊಂಡು ನಡೆದ ಅಧ್ಯಯನಗಳು ಅಲ್ಲಲ್ಲಿ ಕೆಲವು ಮಾತ್ರ. ಅದೂ ಪೂರ್ಣ ಪ್ರಮಾಣದ ಅಧ್ಯಯನಗಳೆಂದು ನನಗನ್ನಿಸುವುದಿಲ್ಲ. ನಡೆದಿರುವ ಅಧ್ಯಯನಗಳು ಪುರುಷ ಕೇಂದ್ರಿತವಾಗಿಯೇ ನಡೆದಿವೆ. ಈ ಮಾದರಿಗಳು ಹಳೆಯವು. ಪಾರ್ಶ್ವಿಕವಾದ ಅಧ್ಯಯನಗಳು ಅವು. ಪ್ರಸ್ತುತ ನಡೆಯಬೇಕಾದ ಅಧ್ಯಯನಗಳು ಒಂದೊಂದು ನೆಲೆಯಲ್ಲಿ ಪೂರ್ಣ ಪ್ರಮಾಣದ ಮಾಹಿತಿಗಳನ್ನು ಅವರೊಂದಿಗೆ ಇದ್ದು ಕಲೆ ಹಾಕಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಪೂರ್ಣ ಪ್ರಮಾಣದ ಅಧ್ಯಯನಗಳು ನಡೆದ ಪಕ್ಷದಲ್ಲಿ ಮಹಿಳೆಗೆ ಕೂಡ ಪುರುಷನಷ್ಟೇ ಕೆಲಸಗಳು, ಜವಾಬ್ದಾರಿಗಳು ಇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿದೆ.

ಈ ಲೇಖನದಲ್ಲಿ ದೈವಾರಾಧನೆಯ ಅಧಿಕೃತ ಒಡೆಯರು ಅನ್ನಿಸಿಕೊಂಡಿರುವ ಒಂದು ಜಾತಿಯಾದ ಪರವರ ಕುರಿತಂತೆ ಮಾಹಿತಿಯನ್ನು ಒದಗಿಸಲಾಗಿದೆ. ಇಲ್ಲಿಯ ಬರವಣಿಗೆ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡಿದೆ. ಪರವ ಜಾತಿಯ ಕುರಿತಂತೆಯೇ ಅಧ್ಯಯನಗಳು ನಡೆದಿರುವುದು ಕಂಡುಬರುವುದಲ್ಲಿ. ಆದರೆ ಅವರನ್ನು ಬಳಸಿಕೊಂಡು ನಡೆದಿರುವ ಅಧ್ಯಯನಗಳನ್ನು ಕಾಣಬಹುದು. ಪರವಜಾತಿಯ ಜನರ ಕುರಿತಾಗಿಯೇ ಪೂರ್ಣ ಪ್ರಮಾಣದ ಅಧ್ಯಯನಗಳ ಅಗತ್ಯವಿದೆ. ಈ ತನಕ ನಡೆದಿರುವ ಅಧ್ಯಯನಗಳು ಕೇವಲ ಪರಿಚಯಾತ್ಮಕ ಅಧ್ಯಯನಗಳಾಗಿವೆ. ಪ್ರೊ. ಅಮೃತ ಸೊಮೇಶ್ವರ ಅವರ ಕೆಲವು ಲೇಖನಗಳಲ್ಲಿ, ಪ್ರೊ. ಬಿ.ಎ. ವಿವೇಕ ರೈ ಅವರ ತುಳು ಜನಪದ ಸಾಹಿತ್ಯ, ಡಾ. ಚೆನ್ನಪ್ಪಗೌಡ ಅವರ ಭೂತಾರಾಧನೆ, ಡಾ. ಅಶೋಕ ಆಳ್ವ ಅವರ ಪ್ರಾಣಿ ಜಾನಪದ, ಡಾ. ಕಿಶೋರ್ ಕುಮಾರ್ ರೈಯ ಉಲ್ಳಾಲ್ತಿ ಆರಾಧನೆಇತಿಹಾಸ, ಪುರಾಣ ಮತ್ತು ಪ್ರದರ್ಶನ, ಡಾ. ವಾಮನ ನಂದಾವರ ಅವರ ಕೋಟಿ ಚೆನ್ನಯ ಒಂದು ಅಧ್ಯಯನ – ಹೀಗೆ ಈ ಎಲ್ಲ ಸಂಶೋಧನೆಗಳ ಸಂದರ್ಭಗಳಲ್ಲಿ ಪರವರನ್ನು ಸಂಶೋಧನೆಯ ವಕ್ತ್ಯಗಳನ್ನಾಗಿಯೇ ನೋಡಿರುವುದಲ್ಲದೆ ಪರವರ ಕುರಿತಾಗಿಯೇ ನೇರವಾದ ಅಧ್ಯಯನಗಳಾಗಲಿಲ್ಲ. ಅಲ್ಲಲ್ಲಿ ಅವರ ಕುರಿತಾಗಿ ಲೇಖನಗಳು ಪ್ರಕಟವಾಗಿವೇ ಹೊರತು ಸಂಪೂರ್ಣ ವಿವರಗಳಿರುವ ಅಧ್ಯಯನಗಳು ನಡೆದಿಲ್ಲ. ಈ ಲೇಖನ ಕೂಡ ಪರವರ ಕುರಿತಂತೆ ಸಂಪೂರ್ಣ ಮಾಹಿತಿಗಳನ್ನು ಒದಗಿಸುವ ಲೇಖನವಲ್ಲ. ಇಲ್ಲಿ ಪಾರ್ಶ್ವಿಕವಾಗಿ ಮಹಿಳೆಯರ ಕುರಿತಾಗಿಯೇ ಮಾಹಿತಿಗಳನ್ನು ಒದಗಿಸಲಾಗಿದೆ. ಜಾತಿಯ ಹಿನ್ನಲೆಯಲ್ಲಿಯೇ ವಿಸ್ತಾರವಾದ ಅಧ್ಯಯನದ ಅಗತ್ಯವಿದೆ.

ಪರವ ಸಮುದಾಯದ ದಟ್ಟತೆ ಇರುವ ಸ್ಥಳಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ “ಹಿಂದುಳಿದ ಜನಾಂಗ” ಎಂದು ಕರೆಯಿಸಿಕೊಳ್ಳುವವರು ಪರವರು. ಇವರ ಮುಖ್ಯ ಉದ್ಯೋಗವೇ ದೈವಕ್ಕೆ ಅಥವಾ ಭೂತಕ್ಕೆ ಕಟ್ಟುವುದು. ದೈವಗಳ ಕುರಿತಂತೆ ಅಧಿಕೃತವಾಗಿ ಮಾತನಾಡುವವರಾಗಿರುವುದರಿಂದಾಗಿ ಇವರನ್ನು ದೈವರಾಧಾನೆಯ “ಅಧಿಕೃತ ಒಡೆಯರು” ಎಂಬುದಾಗಿ ಕರೆಯುತ್ತಾರೆ. ಪರವರು ವಾಸ ಮಾಡುವ ಕೇರಿಯನ್ನು “ಪರವರಬೊಟ್ಟ” ಎಂದು ಕರೆಯುತ್ತಾರೆ.

ಪರವ ಜನಸಮುದಾಯಗಳು ಮುಖ್ಯವಾಗಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕೊಯ್ಯೂರು, ಇಂದಬೆಟ್ಟು, ಮಂಜೊಟ್ಟಿ, ಧರ್ಮಸ್ಥಳ, ಬಳಂಜ ಕಾರ್ಕಳ ತಾಲೂಕಿನ ಇರುವೈಲು, ಸಿರಿಲಾಲ್, ಆರುವ, ಅಳದಂಗಡಿ, ಬಳಂಜ, ಕೆರ್ವಾಸೆ (ಬಜಗೋಳಿ), ನಾರಾವಿ, ಕೌಕ್ರಾಡಿ, ವೇಣೂರು (ಗುಂಡುರಿ) ಪುತ್ತೂರಿ ತಾಲೂಕಿನ ಪಡುಮಲೆ, ಕಾಣಿಯೂರು, ನೆರೆಂಕಿ (ಉಪ್ಪಿನಂಗಡಿ) ಇಚ್ಲಂಪಾಡಿ, ಮಾಡಾವು, ನೆರಿಮುಗೆರ್, ನೆರೆಂಕಿ, ಬಂಟ್ವಾಳ ತಾಲೂಕಿನ ಕಾಪುಮಜಲು, ಸುಳ್ಯ ತಾಲೂಕಿನಲ್ಲಿ ಕೆಲವು ಮನೆಗಳನ್ನು ಕಾಣಬಹುದಾಗಿದೆ. ಕೆಲವು ಪ್ರದೇಶದ ಪರವರು ತಮ್ಮ ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸಮಾಡುತ್ತಿದ್ದರೆ ಮತ್ತೆ ಕೆಲವರು ಧಣಿಗಳು ಕೊಟ್ಟಿರುವ ಸ್ಥಳದಲ್ಲಿ ಮನೆ ಕಟ್ಟಿಕೊಂಡಿದ್ದಾರೆ, ಕೆಲವರು ಸರಕಾರ ನೀಡಿದ ಐದು ಸೆಂಟ್ಸ್ ಮನೆಗಳಲ್ಲಿ ವಾಸ ಮಾಡುವುದನ್ನು ಕಾಣಬಹುದು. ಕೆಲವು ಸ್ಥರ್ಳಗಳಲ್ಲಿ ದೈವಸ್ಥಾನಗಳ ಒಡೆಯರು ಪರವರಿಗೆ ಮನೆ ಕಟ್ಟಿಸಿಕೊಟ್ಟು ಅಲ್ಲಿಯೇ ಇದ್ದು ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿರುವುದು ಕೂಡಾ ಇದೆ. ಇಷ್ಟಲ್ಲದೆ ಬೇರೆ ಬೇರೆ ಊರುಗಳಲ್ಲಿ ನೆಲೆಸಿ ಉದ್ಯೋಗದಲ್ಲಿರುವವರು ಇತ್ತೀಚೆಗೆ ಕಾಣಸಿಗುತ್ತಾರೆ. ಇತ್ತೀಚೆಗೆ ಶ್ರೀಮಂತರಾಗಿದ್ದರೂ ತಮ್ಮ ಕುಲ ಕಸುಬನ್ನು ಬಿಡದೆ ನಡೆಸಿಕೊಂಡು ಬರುವವರನ್ನೂ ಕಾಣುವುದು ಸಾಧ್ಯ. ಅವರು ದೂರದ ಊರಿನಲ್ಲಿ ಉದ್ಯೋಗದಲ್ಲಿದ್ದರೂ ತಾವು ಮಾಡುತ್ತಿದ್ದ ಕೆಲಸವನ್ನು ಆ ಸಂದರ್ಭದಲ್ಲಿ ಮಾಡಿ ಹೋಗುತ್ತಾರೆ. ತಂದೆ ಮಾಡುತ್ತಿದ್ದ ಕೆಲಸವನ್ನು ಮಗ, ಮಕ್ಕಳು ದೊಡ್ಡವರಾಗಿಲ್ಲದ ಸಂದರ್ಭದಲ್ಲಿ ಅವರ ಹತ್ತಿರದ ಸಂಬಂಧಿಗಳು ದೈವಕ್ಕೆ ಕಟ್ಟುತ್ತಾರೆ. ಈ ರೀತಿಯಲ್ಲಿ ಅವರ ಚಾಕರಿಗಳು ಮುಂದುವರಿದುಕೊಂಡು ಬಂದಿವೆ.

ಭಾಷೆ, ವೇಷಭೂಷಣ, ವೃತ್ತಿ, ಕುಟುಂಬ (ಸಂಸಾರ) ಜೀವನ ಪದ್ಧತಿ, ಆಚರಣೆಗಳು (ಹಬ್ಬ, ದೇವರ ಪೂಜೆ, ನಂಬಿಕೆ ಇತ್ಯಾದಿ)

ತುಳುನಾಡಿನಲ್ಲಿ ವಾಸಮಾಡುವ ಇವರು ಮುಖ್ಯವಾಗಿ ತುಳು ಭಾಷೆಯನ್ನು ಆಡುತ್ತಾರೆ. ಈ ಜನರು ಭೂತಕ್ಕೆ ಕಟ್ಟುವ ಕೆಲಸವನ್ನು ತಮ್ಮ ಕುಲಕಸುಬನ್ನಾಗಿ ಮಾಡಿಕೊಂಡು ಬಂದವರು. ದೈವದ ಚಾಕರಿ ಮಾಡುವ ಗಂಡಸರು ಸಾಮಾನ್ಯವಾಗಿ ಅಂಗಿಯನ್ನು ಧರಿಸುವುದಿಲ್ಲ. ಬಿಳಿಯ ಮುಂಡು ಅಥವಾ ವೇಸ್ಟಿ ಧರಿಸಿ ಹೆಗಲಿಗೊಂದು ಬಟ್ಟೆ ಅಥವಾ ಶಾಲನ್ನು ಹಾಕಿಕೊಂಡಿರುತ್ತಾರೆ. ಆದರೆ, ಇತ್ತೀಚೆಗೆ ಪರವರು ಅಂಗಿಯನ್ನು ಧರಿಸುವುದನ್ನು ಕಾಣಬಹುದು. ಹೆಂಗಸರು ಸೀರೆಯನ್ನು ಉಡುತ್ತಾರೆ. ದೈವದ ಚಾಕರಿಯನ್ನು ಮಾಡುವ ಗಂಡಸರು ಕೈಯಲ್ಲಿ ಚಿನ್ನದ ಅಥವಾ ಬೆಳ್ಳಿಯ ಬಳೆ ಹಾಕಿಕೊಂಡಿರುತ್ತಾರೆ. ಈ ಬಳೆ ಅವರು ಮಾಡಿಸಿ ಹಾಕಿಕೊಂಡಿರುವುದಲ್ಲ. ಅವರಿಗೆ ಅವರು ಯಾವ ಊರಿನಲ್ಲಿ ದೈವಕ್ಕೆ ಕಟ್ಟುತ್ತಾರೋ ಆ ಊರಿನ ಮುಖ್ಯ ದೈವಸ್ಥಾನದಿಂದ ದೈವಕ್ಕೆ ಕಟ್ಟುವುದಕ್ಕೆ ಅನುಮತಿಯನ್ನು ಕೊಡುವ ಸಂದರ್ಭದಲ್ಲಿ ಊರಿನ ಮುಖ್ಯಸ್ಥರು ಮತ್ತು ಊರಿನ ಹತ್ತು ಸಮಸ್ತರು ಸೇರಿ, ಕಲಶ ನೀರು ಸ್ನಾನ ಮಾಡಿ ಬಂದ ಬಳಿಕ ಬಳೆ ಕೊಡುತ್ತಾರೆ. ಹೀಗೆ ಬಳೆ ಕೊಡುವುದನ್ನು ಅನುಮತಿಯನ್ನು ಕೊಡುವುದು ಎನ್ನುತ್ತಾರೆ. ಈ ರೀತಿಯಲ್ಲಿ ಸಿಕ್ಕಿದ ಅನುಮತಿಯನ್ನು ಅವನು ದುರುಪಯೋಗ ಮಾಡುವಂತಿಲ್ಲ. ಒಂದು ವೇಳೆ ದುರುಪಯೋಗ ಮಾಡಿದಲ್ಲಿ ಅವನಿಗೆ ನೀಡಿರುವ ಅನುಮತಿಯನ್ನು ಅವನ ಕೈಗೆ ಹಾಕಿದ ಬಳೆಯನ್ನು ತೆಗೆಸುವ ಮೂಲಕ ರದ್ದು ಪಡಿಸುವ ಅಧಿಕಾರ ಊರಿನ ಮುಖ್ಯಸ್ಥರಿಗಿದೆ. ಬಳೆಯನ್ನು ಹಾಕಿಕೊಂಡ ನಂತರದಲ್ಲಿ ಅವನು ನಿಷ್ಠೆಯಿಂದ ಇರಬೇಕು ಎಂಬ ನಿಯಮವನ್ನು ಅವನ ಮೇಲೆ ಹಾಕಲಾಗುತ್ತದೆ. ಅದನ್ನು ಅವನು ಸಾಯುವ ತನಕ ಆ ಬಳೆಯನ್ನು ತೆಗೆಯುವಂತಿಲ್ಲ. ಆತನಿಗೆ ದೈವಕ್ಕೆ ಕಟ್ಟುವುದು ಸಾಧ್ಯವಿಲ್ಲ ಎಂಬ ಸಮಯದಲ್ಲಿ ಅಥವಾ ಸತ್ತ ಮೇಲೆ ಅದನ್ನು ತೆಗೆದು ಮತ್ತೊಬ್ಬನಿಗೆ ನೀಡಲಾಗುವುದು.

ದೈವದ ಚಾಕರಿಯನ್ನೇ ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುವ ಜನಾಂಗ ಪರವ ರದ್ದಾಗಿತ್ತು. ಇದರೊಂದಿಗೆ ದೈವಾರಾಧನೆಯ ಕೆಲಸಗಳು ಇಲ್ಲದೇ ಇರುವ ಸಂದರ್ಭದಲ್ಲಿ ಊರಿನ ಮನೆಗಳಿಗೆ ಹೋಗಿ ಜನಪದ ಕುಣಿತಗಳನ್ನು ಆ ತಿಂಗಳಿಗೆ ಅನುಗುಣವಾಗಿ ನಡೆಸುತ್ತಿದ್ದರು. ಇತ್ತೀಚೆಗೆ ಅವರು ಮನೆ ಮನೆಗೆ ಹೋಗಿ ಕುಣಿತಗಳನ್ನು ನಡೆಸುವುದನ್ನು ನಿಲ್ಲಿಸಿದ್ದಾರೆ. ಕಾರಣ ಏನೆಂದು ಕೇಳಿದರೆ ಅವರು ನಡೆಸುತ್ತಿದ್ದ ಕುಣಿತಗಳ ಬಗೆಗೆ ಇತ್ತೀಚಿನ ಯುವಕ, ಯುವತಿಯರಿಗೆ ಒಲವು ಕಡಿಮೆಯಾಗಿದೆ ಮತ್ತು ಇತ್ತೀಚೆಗೆ ಅನೇಕ ಮಂದಿ ಉದ್ಯೋಗಕ್ಕೂ ಸೇರಿಕೊಂಡಿರುವುದರಿಂದಾಗಿ ಸಮಯ ಕೂಡಾ ಸಿಗುವುದಿಲ್ಲ. ಹಿಂದಿನವರು ಮನೆಯ ಖರ್ಚಿಗಾಗಿ ಮನೆ ಮನೆಗೆ ಹೋಗಿ ಕುಣಿತಗಳನ್ನು ನಡೆಸಿ ಹಣ, ತೆಂಗಿನಕಾಯಿ, ತರಕಾರಿ, ಅಕ್ಕಿ ಮತ್ತು ತಮಗೆ ಅಡುಗೆಗೆ ಬೇಕಾದ ವಸ್ತುಗಳನ್ನು ಕುಣಿತದ ಪ್ರತಿಫಲವಾಗಿ ಪಡೆಯುತ್ತಿದ್ದರೆ ಇವತ್ತು ಅದರ ಅಗತ್ಯ ಅವರಿಗಿಲ್ಲ. ಆ ಕಾರಣದಿಂದಾಗಿ ಕುಣಿತಗಳನ್ನು ನಡೆಸುವುದನ್ನು ಕಡಿಮೆಗೊಳಿದ್ದಾರೆ. ಇವರು ಮುಖ್ಯವಾಗಿ ನಡೆಸುವ ಕುಣಿತಗಳೆಂದರೆ-ಸುಗ್ಗಿ ತಿಂಗಳಲ್ಲಿ ಕನ್ಯಾಪು ಕುಣಿತ, ಕನ್ಯಾಪು ಕುಣಿತದಲ್ಲಿ ಮೂರು ಜನ ಮದುವೆ ಆಗದಿರುವ ಮಕ್ಕಳು ಕಲ್ಯಾಪು ವೇಷವನ್ನು ಹಾಕಿಕೊಳ್ಳುತ್ತಾರೆ. ಮದುಮಗನ ಹಾಗೂ ಮದುಮಗಳ ವೇಷವನ್ನು ಹಾಕಿಕೊಂಡು ಗಗ್ಗರ ಕಟ್ಟಿಕೊಂಡು ಕುಣೀಯುತ್ತಾರೆ. ಕುಣಿತದ ಸಂದರ್ಭದಲ್ಲಿ “ಕನ್ಯಪೊಣ್ಣು” ಎಂಬ ಸಂಧಿಯನ್ನು ಹಾಡುತ್ತಾರೆ. ಇತರ ಸಂದರ್ಭದಲ್ಲಿ ದೈವದ ಚಾಕರಿಗಳಿಲ್ಲದಾಗ ಮನೆ ಮನೆಗೆ ಹೋಗಿ ಅಲ್ಲಿ ಕೊಡುವ ಅಕ್ಕಿ, ಧಾನ್ಯ, ತೆಂಗಿನಕಾಯಿ ಮುಂತಾದವುಗಳನ್ನು ದಾನದ ರೂಪದಲ್ಲಿ ತಂದು ದಿನದ ಆಹಾರವನ್ನು ಸಂಪಾದಿಸುತ್ತಿದ್ದರು. ಕೆಲವು ಊರುಗಳಲ್ಲಿ ಅಥವಾ ಸೀಮೆಗಳಲ್ಲಿ ಪರವರು ಕುಣಿತಗಳನ್ನು ನಡೆಸುವುದಿಲ್ಲ. ಪರವರು ನಡೆಸುವ ಕುಣಿತಗಳಲ್ಲಿ ಪರವ ಹೆಮಗಸರ ಪಾಲು ಹೆಚ್ಚಿರುತ್ತದೆ. ಕೆಲವೊಮ್ಮೆ ಗಂಡ ಒಂದು ಭಾಗದಲ್ಲಿ ಹೆಂಡತಿ ಇನ್ನೊಂದು ಭಾಗದಲ್ಲಿ ಹೋಗಿ ಸಂಪಾದನೆ ಮಾಡಿಕೊಂಡು ಬರುವುದು ಇತ್ತು. ಮನೆ ಮನೆಗೆ ಹೋಗುವಾಗ ಸಾಮಾನ್ಯವಾಗಿ ಗಂಡು ಹೆಣ್ಣು ಜೊತೆಗೆ ಹೋಗುವುದು ಕಡಿಮೆ. ವಿಶೇಷವಾದ ಕಾರ್ಯಕ್ರಮಗಳನ್ನು ಮನೆಯಲ್ಲಿ ಮಾಡುವುದಾದರೆ ಮಾತ್ರ ಜೊತೆಯಲ್ಲಿ ಹೋಗಿ ಬೇಕಾದ ವಸ್ತುಗಳನ್ನು ಕೇಳಿ ಪಡೆದುಕೊಂಡು ಬರುತ್ತಾರೆ.

ಪರವರ ಮನೆಯಲ್ಲಿ ವಿಶೇಷವಾಗಿ ನಡೆಸುವ ಆರಾಧನೆಗಳು

ಕೆಲವು ಪರವರ ಮನೆಯಲ್ಲಿ ಶ್ರಾವಣ ಮಾಸರಲ್ಲಿ ಮೂರನೇ, ನಾಲ್ಕನೇ, ಐದನೇ ಶನಿವಾರ ಬಂದರೆ ಬಹಳ ಉತ್ತಮ ಶುದ್ಧಾಚಾರ-ತಿರುಪತಿ ವೆಂಕಟರಮಣ ದೇವರ ಪೂಜೆಯನ್ನು ಮನೆಯಲ್ಲಿ ಮಾಡುತ್ತಾರೆ. ಪಾಡ್ಯದ ಸಂದರ್ಭದಲ್ಲಿ ತುಳಸಿ ಪೂಜೆಯನ್ನು ಮಾಡಿ ಗಗ್ಗರ, ಕರಂಡೆ, ದೈವಾರಾಧನೆಯ ಸಂದರ್ಭದಲ್ಲಿ ಬಳಸುವ ಸಾಧನಗಳನ್ನು ತುಳಸಿ ಕಟ್ಟೆಯ ಮುಂದುಗಡೆ ಇಟ್ಟು ಆಯುಧ ಪೂಜೆಯ ರೂಪದಲ್ಲಿ ಪೂಜೆಯನ್ನು ಮಾಡುತ್ತಾರೆ. ಈ ಪೂಜೆಯ ಸಂದರ್ಭದಲ್ಲಿ ಸಂಬಂಧಿಕರು, ಮಿತ್ರರು ಸೇರಿ ಜೊತೆಯಲ್ಲಿ ಹಬ್ಬದ ಊಟವನ್ನು ಮಾಡುವ ಸಂಪ್ರದಾಯವಿದೆ. ದೀಪಾವಳಿಯ ಸಂದರ್ಭದಲ್ಲಿ ಊರಲ್ಲಿ ತಿರುಗುವ (ಊರುಡೆ ಪೋಪುನ) ಕ್ರಮ ಇದೆ. ಊರಲ್ಲಿ ಮನೆಮನೆ ತಿರುಗಿ ದಾನ ಧರ್ಮಗಳನ್ನು ಪಡೆಯುವುದು ರೂಢಿ. ಹೀಗೆ ಹೋಗುವಾಗ ಗಂಡು ಮತ್ತು ಹೆಣ್ಣು ಜೊತೆಯಲ್ಲಿ ಹೋಗುತ್ತಾರೆ. ಇತ್ತೀಚೆಗೆ ತೀರ ಹಳ್ಳಿಯಲ್ಲಿ ಮಾತ್ರ ಈ ಕ್ರಮ ಇದೆ. ಉದ್ಯೋಗದಲ್ಲಿರುವವರು ಈ ಸಂಪ್ರದಾಯವನ್ನು ಕೈ ಬಿಟ್ಟಿದ್ದಾರೆ.

ದೈವದ ಆರಾಧನೆಯ ಸಂದರ್ಭದಲ್ಲಿ ದೈವಕ್ಕೆ ಕಟ್ಟುವ ಪರವರು ಪಾಲಿಸುವ ನಿಯಮಗಳು:

ಒಂದು ರಾತ್ರಿಯ ನೇಮದ ಕೆಲಸವಾದರೆ ಮೂರು ದಿನ ಶುದ್ಧದಲ್ಲಿರಬೇಕು. ಎರಡು ರಾತ್ರಿಯ ಕೆಲಸವಾದರೆ ಏಳು ದಿನ ಶುದ್ಧದಲ್ಲಿರಬೇಕು. ಶುದ್ಧ ಅಂದರೆ ಮದು, ಮಾಂಸ (ಮಧ್ಯಪಾನ, ಮಾಂಸ) ಸೇವಿಸದೆ ಸ್ನಾನ ಮಾಡಿ ದಿನದಲ್ಲಿ ಬೆಳ್ತಿಗೆ ಅಕ್ಕಿಯ ಅನ್ನ ಮಾಡಿ ಒಂದು ಹೊತ್ತು ಊಟ ಮಾಡಬೇಕು. ರಾತ್ರಿ ಹೊತ್ತಲ್ಲಿ ಫಲಾಹಾರ, ಎಳನೀರು ಮಾತ್ರ ಸೇವಿಸುವುದು ರೂಧಿ. ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ದೇವಸ್ಥಾನದಲ್ಲಿ ನಡೆಯುವ ಉಳ್ಳಾಯ ಉಳ್ಳಾಲ್ತಿ ದೈವದ ಆರಾಧನೆಯ ಕೆಲಸ ಮಾಡುವಾಗ ಅಕ್ಕಿ ಹುರಿದು ಹುಡಿ ಮಾಡಿ ಬೆಲ್ಲದ ಹಾಲಿನಲ್ಲಿ ತಿನ್ನುವುದು. ೩ ದಿನ ಊಟ ಮಾಡುವುದಕ್ಕಿಲ್ಲ. ಉಳಿದ ದಿನ ಎಳೆಯ ಅರಿವೆಯ ಪಲ್ಯ ಹಾಗೂ ಬೆಳ್ತಿಗೆ ಅಕ್ಕಿಯಿಂದ ಮಾಡಿದ ದೋಸೆ ನಾಲ್ಕು ಮಾತ್ರ ತಿನ್ನಬೇಕು ಇದು ಅಲ್ಲಿನ ಸಂಪ್ರದಾಯ. ಬೇರೆ ಪ್ರದೇಶದಲ್ಲಿನ ಆರಾಧನೆಯ ಸಂದರ್ಭದಲ್ಲಿ ಪ್ರಾದೇಶಿಕವಾಗಿರುವ ನಿಯಮಗಳನ್ನು ಪಾಲಿಸಬೇಕು. ಸಾಮಾನ್ಯವಾಗಿ ಶುದ್ಧದಲ್ಲಿರಬೇಕೆಂಬುದು ಪ್ರತಿಯೊಂದು ಸ್ಥಳದಲ್ಲಿನ ನಿಯಮಗಳು. ಅವರು ಕಟ್ಟುವ ದೈವಗಳು ಯಾವುದು ಎಂಬುದರ ಆಧಾರದಲ್ಲಿ ಶುದ್ಧಾಚಾರದ ನಿಯಮಗಳಿರುತ್ತದೆ. ಕೆಲವು ಸ್ಥಳಗಳಲ್ಲಿ ದೈವಕ್ಕೆ ಕಟ್ಟುವ ದಿನ ಬೆಳಿಗೆಗೆ ಹೋದರೆ ಸಾಕಾಗುತ್ತದೆ. ಮತ್ತೆ ಕೆಲವು ಪ್ರದೇಶಗಳಲ್ಲಿ ದೈವಾರಾಧನೆ ನಡೆಯುವ ಮೊದಲದಿನ ಹೋಗಿ ಬೂಳ್ಯ (ಬೂಳ್ಯ ಕೊಡುವುದು ಎಂದರೆ ಊರಿನ ಅಥವಾ ದೈವಾರಾಧನೆ ನಡೆಯುವ ಸ್ಥಳದಲ್ಲಿ ಮುಖ್ಯಸ್ಥರು/ ಯಜಮಾನ ಕೊಡುವ ಅನುಮತಿ/ ಒಪ್ಪಿಗೆ. ಐದು ವೀಳ್ಯ ಮತ್ತು ಅಡಿಕೆಯನ್ನು ಕೊಡುವ ಮೂಲಕ ಈ ಒಪ್ಪಿಗೆಯನ್ನು ಸೂಚಿಸಲಾಗುತ್ತದೆ.) ತೆಗೆದುಕೊಂಡು ರಾತ್ರಿ ಆರಾಧನೆ ನಡೆಯುವ ಸ್ಥಳದಲ್ಲಿ ತಂಗಬೇಕು. ಇದನ್ನು “ತಡೆಬೂಳ್ಯ” ಎಂದು ಕರೆಯುತ್ತಾರೆ. ಹಾಗೆ ತಡೆಯುವ (ನಿಲ್ಲುವ) ಕ್ರಮವನ್ನು ಮಾಡುವಾಗಲು ಅನೇಕ ನಿಯಮಗಳಿರುತ್ತದೆ. ತೆಂಗಿನ ಮಡಲಿನಲ್ಲಿ ದೇವಸ್ಥಾನ ಬಳಿಯಲ್ಲಿಯೇ ಮಲಗಬೇಕು. ಯಜಮಾನನ ಮನೆಯಲ್ಲಿಯೇ ಆಹಾರ ಸ್ವೀಕರಿಸಬೇಕು. ಅವರ ಮನೆಗೆ ಹೋಗಬಾರದು- ಹೀಗೆ ಬೇರೆ ಬೇರೆ ನಿಯಮಗಳನ್ನು ಪಾಲಿಸಬೇಕು. ಆ ನಿಯಮಗಳಿಗೆ ಬದ್ಧರಾಗಿ ಪರವರು, ಪರತಿಯರು ಇರುವುದನ್ನು ಕಾಣಬಹುದು.

 

ಕೌಟುಂಬಿಕ ನೆಲೆಯಲ್ಲಿ ಮಹಿಳೆ

ಆರ್ಥಿಕ ನೆಲೆಯಲ್ಲಿ ಅವಳ ಪ್ರತಿನಿಧೀಕರಣ

ಗಂಡು ಯಾವ ರೀತಿಯಲ್ಲಿ ದುಡಿಯುತ್ತಾನೋ ಅದೇ ರೀತಿಯ ದುಡಿಮೆ ಹೆಣ್ಣಿನಲ್ಲಿಯೂ ಇರುವುದನ್ನು ಕಾಣಲು ಸಾಧ್ಯವಿದೆ. ಪರವರಲ್ಲಿ ಕೇವಲ ಗಂಡು ದುಡಿದು ತಂದು ಹಾಕುವುದು, ಹೆಣ್ಣು ಅಡುಗೆ ಮಾಡಿಕೊಡುವುದು ಎಂಬುದಿಲ್ಲ. ಇಬ್ಬರೂ ಜೊತೆಗೆ ಹೋಗಿ ದುಡಿದು ತರುವುದು ಸಂಪ್ರದಾಯ. ದೈವಾರಾಧನೆಯ ಸಂದರ್ಭ ಇರಲಿ, ಜನಪದ ಕುಣೀತಗಳನ್ನು ಮನೆ ಮನೆಗೆ ಕೊಂಡೊಯ್ಯುವ ಸಂದರ್ಭವಿರಲಿ ಹೆಣ್ಣು ಜೊತೆಗಿದ್ದು ದುಡಿಯುವುದನ್ನು ಕಾಣಬಹುದು. ಆರಾಧನೆಯ ಸಂದರ್ಭದಲ್ಲಿ ಪರಿಕರಗಳನ್ನು ಜೋಡಿಸುವುದು, ತೆಂಗಿನ ತಿರಿಯನ್ನು ಬೇಕಾದ ಮಾದರಿಯಲ್ಲಿ ಕತ್ತರಿಸಿ ಕೊಡುವುದು, ಬಣ್ಣಗಾರಿಕೆಯ ಸಂದರ್ಭದಲ್ಲೂ ಸಂಧಿ/ ಪಾಡ್ದನಗಳನ್ನು ಹೇಳಿ ಆರಾಧನೆಗೆ ಅಗತ್ಯವಾಗಿರುವ ಪರಿಸರವನ್ನು ನಿರ್ಮಾಣ ಮಾಡುವುದು. ಕರಂಡೆ ಎಂಬ ಚರ್ಮವಾದ್ಯವನ್ನು ಬಡಿಯುವುದು- ಹೀಗೆ ಗಂಡಿನ ಜೊತೆಯಲ್ಲಿದ್ದುಕೊಂಡು ದುಡಿಯುವುದನ್ನು ಪರವರಲ್ಲಿ ಕಾಣಬಹುದು. ಗಂಡು ಮಾಡುವ ಕೆಲಸಗಳಲ್ಲಿ ಸಮಪಾಲು ಹೆಣ್ಣು ಕೂಡ ಮಾಡುತ್ತಾಳೆ.

ದೈವಾರಾಧನೆಯ ಕೆಲಸಗಳು ಇಲ್ಲದೆ ಇರುವ ಸಂದರ್ಭದಲ್ಲಿ ಧಣಿಯ ಮನೆಗೆ ಕೆಲಸಕ್ಕೆ ಹೋಗಿ ಅಲ್ಲಿ ಕೊಡುವ ಸಂಬಳವನ್ನು ತಂದು ಮನೆಗೆ ಬೇಕಾದ ವಸ್ತುಗಳನ್ನು  ತರುವುದು ಅವರ ಕ್ರಮವಾಗಿತ್ತು. ಹಿಂದಿನ ಕಾಲದಲ್ಲಿ ಭತ್ತವನ್ನು ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಅಕ್ಕಿಯನ್ನು ದಿನ ಕೂಲಿಯ ರೂಪದಲ್ಲಿ ಕೊಡುತ್ತಿದ್ದರು. ಒಂದು ದಿನ ಕೆಲಸ ಮಾಡಿದರೆ ಒಂದು ಸೇರು ಅಕ್ಕಿ ಕೊಡುತ್ತಿದ್ದರು. ಅದನ್ನು ತಂದು ಗಂಜಿ ಮಾಡಿ ಎಲ್ಲರೂ ಹಂಚಿ ಉಣ್ಣುವುದು ಅಥವಾ ಸಿಕ್ಕಿದ ಅಕ್ಕಿಯನ್ನು ಅಂಗಡಿಗೆ ಮಾರಾಟ ಮಾಡಿ ಅದರಿಂಬ ಬಂದ ಹಣದಲ್ಲಿ ಮನೆಗೆ ಬೇಕಾದ ಇತರ ವಸ್ತುಗಳನ್ನು ತರುವ ಕ್ರಮ ಕೂಡಾ ಅವರಲ್ಲಿತ್ತು. ಧಣಿಗಳ ಮನೆಗೆ ಮೂರು ಕಟ್ಟು ಸೊಪ್ಪು ಕಡಿದು ತಂದು ಹಾಕಿದರೆ ಒಂದು ಸೇರು ಭತ್ತ ಸಿಗುತ್ತಿದೆ. ಧಣಿಯ ಮನೆಯಲ್ಲಿ ದುಡಿದು ತಂದದ್ದು ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಸಾಕಾಗದಿದ್ದಾಗ, ಕಾಡಿಗೆ ಹೋಗಿ ಅಲ್ಲಿ ಸಿಗುವ ಜೆಂಕೆಪ್ಪು (ತಜಂಕ್‌), ನೋಕಟ್ಟೆ ಕಾಯಿ (ಕಾಡುಬಳ್ಳಿ ಕಾಯಿ), ಪುಂಡಿಕೇನೆ, ಎದುರೊಳಿ ಕಾಯಿಯನ್ನು ಮುಂತಾದ ಕಾಡು ಸೊಪ್ಪು, ಕಾಡು ಕಾಯಿ, ಗೆಡ್ಡೆಗಳನ್ನು ತಂದು ಬೇಯಿಸಿ, ಹುರಿದು ಅಥವಾ ಕೆಂಡದ್ಲಲಿ ಸುಟ್ಟು ತಿನ್ನುತ್ತಿದ್ದರು. ಪ್ರತಿಯೊಂದು ಸಂದರ್ಭದಲ್ಲಿಯೂ ಗಂಡಿನ ಜೊತೆಯಲ್ಲಿಯೇ ಹೆಣ್ಣು ಇದ್ದುಕೊಂಡು ಕೆಲಸ ಮಾಡುವುದು ಪರವರ ಜೀವನದ ಕ್ರಮ. ದೈವಾರಾದನೆಯ ಸಂದರ್ಭದಲ್ಲಿ ಗಂಡಿಗೆ ಸಿಗುವ ಪ್ರಧಾನ್ಯ ಹೆಣ್ಣಿಗೆ ಸಿಗದಿದ್ದರೂ ಗಂಡು ಮಾಡುವ ಪ್ರತಿಯೊಂದು ಕೆಲಸಗಳ ಬೆನ್ನೆಲುಬು ಹೆಣ್ಣೇ ಆಗಿರುವುದನ್ನು ಇಲ್ಲಿ ಕಾಣಬಹುದು.

 

ಜೀವನಾವರ್ತನ ಆಚರಣೆಗಳು

ಹೆಣ್ಣು ನೋಡುವುದು

ಪರವರಲ್ಲಿ ನಡೆಯುವ ಮದುವೆಗಳಲ್ಲಿ ಉಳಿದ ಜಾತಿಯ ಜನರಲ್ಲಿರುವಂತೆಯೇ ಸಂಪ್ರದಾಯಗಳಿವೆ. ಅವರ ಜಾತಿಯ ಮುಖ್ಯಸ್ಥ ಅಥವಾ ಕುಟುಂಬದ ಹಿರಿಯರು ಸೇರಿ ಹೆಂಗಸರ ಜೊತೆಯಲ್ಲಿಯೇ ಹೆಣ್ಣು ನೋಡುವುದಕ್ಕೆ ಹೋಗುತ್ತಾರೆ. ಹೆಣ್ಣು ನೋಡುವುದು ಅಂದರೆ ಯಾರಾದರೂ ಮದುವೆಯ ಪ್ರಸ್ತಾಪವನ್ನು ತೆಗೆದರೆ ಯಾವುದಾದರೂ ಊರಿನಲ್ಲಿ ಮದುವೆಯ ವಯಸ್ಸಿಗೆ ಬಂದ ಹೆಣ್ಣು ಅಥವಾ ಗಂಡು ಇದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ಮಧ್ಯವರ್ತಿಯ (ಮಾಹಿತಿದಾರರ) ಜೊತೆಯಲ್ಲಿ ಒಂದು ದಿವಸವನ್ನು ನಿಗದಿ ಮಾಡಿ ಆ ದಿನದಂದು ಹೆಣ್ಣಿನ ಮನೆಗೆ, ಸಂಬಂಧಿಗಳ ಮನೆಗೆ, ಜಾತಿಯ ಗುರಿಕಾರನ ಮನೆಯಲ್ಲಿ ಅಥವಾ ಯಾವುದಾದರೂ ದೇವಾಲಯದಲ್ಲಿ ಹೆಣ್ಣನ್ನು ಸಾಮಾನ್ಯವಾಗಿ ಸಿಂಗರಿಸಿ ನೋಡುವ ಸಂಪ್ರದಾಯ ಇದೆ. ಹೆಣ್ಣು ನೋಡಿದ ನಂತರದಲ್ಲಿ ಹೆಣ್ಣು ಆಗಬಹುದು ಎಂದಾದರೆ ಅವರ ಮನೆಯಲ್ಲಿ ಊಟ ಮಾಡಿದರೆ ಸಂಬಂಧ ಆಗುತ್ತದೆ ಎಂದು ಅರ್ಥ. ಊಟ ಮಾಡದೆ ಬಂದರೆ ಸಂಬಂಧ ಆಗುವುದಿಲ್ಲವೆಂದು ಅರ್ಥ. ಹೆಣ್ಣು ಮತ್ತು ಗಂಡಿನ ಕಡೆಯವರು ಮದುವೆಗೆ ಒಪ್ಪಿಕೊಂಡ ಮೇಲೆ ಮುಂದಿನ ಕೆಲಸಗಳನ್ನು ನಡೆಸುತ್ತಾರೆ. ಇತ್ತೀಚೆಗೆ ಉಳಿದ ಜಾತಿಗಳಲ್ಲಿ ನಡೆಯುವಂತೆ ಮದುವೆಗಳು ನಡೆಯುತ್ತವೆ.

ನಿಶ್ಚಿತಾರ್ಥ

ಹೆಣ್ಣು ಮತ್ತು ಗಂಡು ಆಗಬಹುದೆಂದು ತೀರ್ಮಾನವಾದ ನಂತರ ಹೆಣ್ಣಿನ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತದೆ. ನಿಶ್ಚಿತಾರ್ಥವನ್ನು ಹೆಣ್ಣಿನ ಮನೆಯಲ್ಲಿಯೇ ಮಾಡುವುದು ಸಂಪ್ರದಾಯ. ನಿಶ್ಚಿತಾರ್ಥದ ದಿನ ಹೆಣ್ಣಿಗೆ ಹೂ, ಕುಂಕುಮ, ಸೀರೆಯನ್ನು ಕೊಡುವ ಕ್ರಮ ಇದೆ. ನಿಶ್ಚಿತಾರ್ಥವನ್ನು ಹೆಣ್ಣಿನ ಮಾವ ಅಥವಾ ತಂದೆ ಮತ್ತು ಗಂಡಿನ ಮಾವ ಅಥವಾ ತಂದೆ ವೀಳ್ಯ, ಅಡಿಕೆ, ಹೂ, ಕುಂಕುಮಗಳನ್ನಿಟ್ಟು ನನಗೆ “ಇಂತಹ ಮನೆಯ ಹೆಣ್ಣನ್ನು ನಮ್ಮ ಮನೆಯ ಇಂತಹ ಹುಡುಗನಿಗೆ ಮದುವೆ ಮಾಡಿಸಿಕೊಳ್ಳಲು ನಾನು ಈ ಮೂಲಕ ಒಪ್ಪಿಗೆಯನ್ನು ನೀಡುತ್ತೇನೆ. ನಾನು ಕೊಟ್ಟ ಮಾತಿಗೆ ತಪ್ಪುವುದಿಲ್ಲ” ಎಂಬುದಾಗಿ ಹುಡುಗನ ತಂದೆ ಅಥವಾ ಮಾವ ಹೇಳುತ್ತಾರೆ. ಈ ರೀತಿಯಲ್ಲಿ ಹೇಳಿದ ಮೇಲೆ ಯಾವ ಕಾರಣಕ್ಕೂ ಮದುವೆಯನ್ನು ನಿಲ್ಲಿಸುವಂತಿಲ್ಲ. (ಪ್ರಾದೇಶಿಕವಾಗಿ ಮದುವೆ ಮಾಡಿಕೊಡುವ ಕ್ರಮಗಳಲ್ಲಿ ವ್ಯತ್ಯಾಸವಿರುತ್ತದೆ. ಕೆಲವು ಸ್ಥಳಗಳಲ್ಲಿ ತಂದೆ ಧಾರೆ ಎರೆದರೆ ಮತ್ತೆ ಕೆಲವು ಸ್ಥಳಗಳಲ್ಲಿ ಮಾವ ಆ ಜಾಗದಲ್ಲಿರುತ್ತಾರೆ.) ನಿಶ್ಚಿತಾರ್ಥ ನಡೆದ ಮೇಲೆ ಬಂದವರೆಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ. ಅಲ್ಲಿಗೆ ನಿಶ್ಚಿತಾರ್ಥದ ಕಾರ್ಯಕ್ರಮಗಳು ಮುಗಿಯುತ್ತದೆ. ಆ ನಂತರ ಮದುವೆಯ ದಿನವನ್ನು ತೀರ್ಮಾನಿಸುತ್ತಾರೆ. ಕೆಲವೊಮ್ಮೆ ಅಲ್ಲಿಯೇ ಮದುವೆಯ ದಿನವನ್ನು ಸೂಚಿಸಿದರೆ ಕೆಲವೊಮ್ಮ ನಂತರ ಮದುವೆಯ ದಿನವನ್ನು ತೀರ್ಮಾನಿಸಿ ಆಮಂತ್ರಣ ಪತ್ರಿಕೆಯ ಮೂಲಕ ತಿಳಿಸುವುದು ಇತ್ತೀಚೆಗೆ ಬೆಳೆದು ಬಂದ ಕ್ರಮ. ಆಮಂತ್ರಣ ಪತ್ರಿಕೆಯನ್ನು ಮಾಡುತ್ತಿರಲಿಲ್ಲ. ಪರವರ ಜಾತಿಯ ಜನಸಂಖ್ಯೆಯೇ ಕಡಿಮೆ. ಆ ಕಾರಣದಿಂದಾಗಿ ಪ್ರತಿ ಮನೆಗೆ ಹುಡುಗಿಯ ಸಂಬಂಧಿಗಳ ಮನೆಗಳಿಗೆ ಹುಡುಗಿಯ ತಂದೆ-ತಾಯಿ, ಹುಡುಗನ ಸಂಬಂಧಿಗಳ ಮನೆಗೆ ಹುಡುಗನ ತಂದೆ-ತಾಯಿಯೇ ಹೋಗಿ ನಿಶ್ಚಿತಾರ್ಥದ ಹೇಳಿಕೆಯನ್ನು ಕೊಟ್ಟು ಬರಬೇಕು. ಒಂದು ವೇಳೆ ಹೇಳಿಕೆ ಸಿಗದೆ ಇದ್ದಲ್ಲಿ ಸಂಬಂಧಿಗಳು, ಮಿತ್ರರು ಬರುತ್ತಿರಲಿಲ್ಲ. ನಿಶ್ಚಿತಾರ್ಥ ಸಾಮಾನ್ಯವಾಗಿ ಹುಡುಗಿಯ ಮನೆಯಲ್ಲಿಯೇ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಊರಿನ ಗುರಿಕಾರರ ಮನೆಯಿಂದ ಅಥವಾ ಊರಿನ ಶ್ರೀಮಂತರ ಮನೆಗಳಿಂದ ನಿಶ್ಚಿತಾರ್ಥಕ್ಕೆ ಬೇಕಾದ ವಸ್ತುಗಳನ್ನು ತಂದು ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಬಡತನದಲ್ಲಿದ್ದ ಕಾರಣ ಇವರು ಬೇರೆಯವರನ್ನು ಅವಲಂಭಿಸಿಯೇ ತಮ್ಮ ಮನೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕಾಗಿತ್ತು. ನಿಶ್ಚಿತಾರ್ಥವಾದ ನಂತರ ನಿಗದಿತ ದಿನದಂದು ಮದುವೆ ನಡೆಯುತ್ತದೆ.

ಮದುವೆ

ಮದುವೆಯನ್ನು ಸಾಮಾನ್ಯವಾಗಿ ಗಂಡಿನ ಕಡೆಯವರು ನಡೆಸುವುದು ಸಂಪ್ರದಾಯ. ಮದುವೆ ಗಂಡಿನ ಮನೆಯಲ್ಲಿ ಅಥವಾ ಅವರು ತೀರ್ಮಾನಿಸಿದ ಸ್ಥಳದಲ್ಲಿ ನಡೆಯುತ್ತದೆ. ಮದುವೆಯ ಎಲ್ಲ ಖರ್ಚುಗಳನ್ನು ಗಂಡಿನ ಕಡೆಯವರೇ ನಿರ್ವಹಿಸುತ್ತಾರೆ. ಮದುವೆಯ ದಿನ ಗಂಡಿನ ತಾಯಿ ಹೆಣ್ಣಿಗೆ ಅಂದರೆ ಮದುಮಗಳಿಗೆ ಹೂ ಸೀರೆ (ಪೂ ಸೀರೆ) ಯನ್ನು ಕೊಡುವ ಕ್ರಮ ಇದೆ. ಮದುವೆಯ ದಿನ ಗಂಡಿನ ಮನೆಗೆ ಅಂದರೆ ಗಂಡಿನ ಮನೆಯಲ್ಲಿ ಮದುವೆ ನಡೆಯುವುದಾದರೆ ಅಲ್ಲಿಗೆ ಅಥವಾ ಮದುವೆ ನಡೆಯುವ ಸ್ಥಳಕ್ಕೆ (ದೇವಾಲಯ ಅಥವಾ ಹಾಲ್‌ಗಳಿಗೆ ಹೋಗುವುದನ್ನು “ಡಿಂಬಣ ಹೋಗುವುದು” ಎಂದು ಕರೆಯುತ್ತಾರೆ. ಮದುವೆಯ ಮೊದಲ ದಿನ ಮದುಮಗನಿಗೆ ಮದುಮಗನ ಮನೆಯಲ್ಲಿ ಹಾಗೂ ಮದುಮಗಳಿಗೆ ಮದುಮಗಳ ಮನೆಯಲ್ಲಿ “ಮದರಂಗಿ ಶಾಸ್ತ್ರ” ಎಂಬ ಕಾರ್ಯಕ್ರಮ ನಡೆಯುತ್ತದೆ. ಈ ಸಂದರ್ಭದಲ್ಲಿ ಬಹಳ ಆತ್ಮೀಯರನ್ನು ಕೆಲವು ಸಂಬಂಧಿಕರನ್ನು ಕರೆಯುವುದು ಸಂಪ್ರದಾಯ. ಮದರಂಗಿ ಹಾಕುವ ಮೊದಲು ಎಣ್ಣೆ, ಹಾಲು ಅರಿಸಿನ ಹಚ್ಚಿ ಸ್ನಾನ ಆದ ನಂತರ ಮದರಂಗಿ ಇಡುತ್ತಾರೆ. ಮದರಂಗಿಯನ್ನು ಹುಡುಗನ ಭಾವ ಇಟ್ಟರೆ, ಹುಡುಗಿಯ ಮನೆಯಲ್ಲಿ ಹುಡುಗಿಯ ಅತ್ತಿಗೆ ಇರುವುದು ಸಂಪ್ರದಾಯ. ಇತ್ತೀಚೆಗೆ ಆ ನಿಯಮಗಳ ಪಾಲನೆ ಕಟ್ಟುನಿಟ್ಟಿನಲ್ಲಿ ನಡೆಯುತ್ತಿಲ್ಲ. ಶಾಸ್ತ್ರಕ್ಕೆ ಒಂದು ಬಿಂದು ಅವರಿಟ್ಟ ಮೇಲೆ ಉಳಿದವರೆಲ್ಲ ಇಡುತ್ತಾರೆ. ಮದರಂಗಿ ಇಡುವಾಗಲೂ ತಂದೆ ತಾಯಿ ಸಂಬಂಧಿಗಳೆಲ್ಲರೂ ಶಾಸ್ತ್ರಕ್ಕೆ ಒಂದೊಂದು ತೊಟ್ಟಿನಷ್ಟು ಇಡುವುದಿದೆ. ಮದುವೆಗೆ ಊರಿನಲ್ಲಿ ನಾಲ್ಕು ಮನೆ ಸುತ್ತಿ, ಧಣಿಗಳಿಂದ, ಇಷ್ಟ ಮಿತ್ರರಿಂದ ಹಣ, ವಸ್ತುಗಳನ್ನು ಪಡೆದುಕೊಂಡು ಮದುವೆಗೆ ಸಂಬಂಧಿಸಿದ ಕಾರ್ಯಗಳನ್ನು  ಮಾಡುತ್ತಿದ್ದರು. ಇತ್ತೀಚೆಗೆ ಮದುವೆ ದೇವಾಲಯ ಅಥವಾ ಹಾಲ್‌ಗಳಲ್ಲಿ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಪರವರ ಕೇರಿಯ ಜನ ಸಂಬಂಧಿಗಳು ಮಾತ್ರ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಪರವರ ಮನೆಗೆ ಬರುತ್ತಿದ್ದರು. ಈಗ ಎಲ್ಲರೂ ಭಾಗವಹಿಸುತ್ತಾರೆ. ಮದುವೆಯ ದಿನದಂದು ಮಾವ ಅಥವಾ ತಂದೆ ಹೆಣ್ಣನ್ನು ಧಾರೆ ಎರೆದು ಕೊಡುತ್ತಾರೆ. ಕೆಲವು ಪ್ರದೇಶಗಳಲ್ಲಿ ಪ್ರಾದೇಶಿಕವಾಗಿರುವ ವ್ಯವಸ್ಥೆಗೆ ಅನುಗುಣವಾಗಿ ಮದುವೆಯ ಕ್ರಮಗಳಿರುತ್ತದೆ. ಈಗಂತು ಕೊಡುಕೊಳ್ಳುವಿಕೆಯ ಪ್ರಮಾಣ ಬಹಳ ಹೆಚ್ಚಾಗಿರುವುದರಿಂದಾಗಿ ಯಾವ ಜಾತಿಯಲ್ಲಿ ಹೇಗೆ ಮದುವೆ ನಡೆಯುತ್ತದೆ ಎಂಬ ವ್ಯತ್ಯಾಸವನ್ನು ಗುರುತಿಸುವುದೇ ಕಷ್ಟ ಎನ್ನುವಷ್ಟು ಬದಲಾವಣೆಗಳು ಮದುವೆಗಳಲ್ಲಿ ಆಗಿದೆ. ಪರವರು ತಮ್ಮ ಜಾತಿಯ ಮದುವೆಗಳನ್ನು ಸಾಧ್ಯವಾಷ್ಟು ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವುದನ್ನು ಕಾಣಬಹುದು. ಇತರ ಜಾತಿಯಲ್ಲಿ ನಡೆಯುವ ಮದುವೆಗಳಂತೆ ಅವರ ಜಾತಿಯ ಮದುವೆಗಳು ನಡೆಯುತ್ತವೆ. ಪರವ ಜಾತಯವರು ದೈವಕ್ಕೆ ಕಟ್ಟುವವರಾದರೂ ಉಳಿದ ಹಿಂದುಳಿದ ಜಾತಿಯವರಂತೆ ಮನೆಯ ಒಳಗೆ ಪ್ರವೇಶದಲ್ಲಿ ನಿಷೇಧಗಳಿಲ್ಲ. ಆ ಕಾರಣದಿಂದಾಗಿ ಇವರಲ್ಲಿ ನಡೆಯುವ ಕಾರ್ಯಕ್ರಮಗಳು ಇತರ ಜಾತಿಯಲ್ಲಿ ನಡೆಯುವ ಕಾರ್ಯಕ್ರಮಗಳ ಜೊತೆಗೆ ಸಾಮ್ಯ ಕಂಡುಬರುತ್ತದೆ.

ಸೀಮಂತ ಅಥವಾ ಬಯಕೆ

ಮದುವೆಯಾದ ನಂತರ ನಡೆಯುವ ವಿಶೇಷವಾದ ಇನ್ನೊಂದು ಕಾರ್ಯಕ್ರಮವೇ ಸೀಮಂತ ಅಥವಾ ಬಯಕೆ ಎಂದು ಕರೆಯುತ್ತಾರೆ. ಇದರ ಅರ್ಥವೇ ಹೇಳುವಂತೆ ಗರ್ಭಿಣಿಯಾದ ಹೆಣ್ಣಿನ ಆಸೆ (ಬಯಕೆ)ಯನ್ನು ತೀರಿಸುವುದಕ್ಕಾಗಿ ನಡೆಸುವ ಕಾರ್ಯಕ್ರಮ ಇದು. ಹೆಣ್ಣು ಗರ್ಭಿಣಿಯಾದ ಏಳು ಅಥವಾ ಒಂಬತ್ತನೆಯ ತಿಂಗಳಲ್ಲಿ ಗಂಡಿನ ಮನೆಯಲ್ಲಿ ಅಥವಾ ಮನೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಪಕ್ಷದಲ್ಲಿ ಯಾವುದಾದರೂ ಹಾಲ್‌ನಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಾರೆ. ಸೀಮಂತ ನಡೆದ ನಂತರ ಗಂಡನ ಮನೆಯಿಂದ ಹೆಣ್ಣು ತನ್ನ ತಾಯಿಯ ಮನೆಗೆ ಹೋಗುವುದು ನಡೆದು ಬಂದ ಸಂಪ್ರದಾಯ. ಸೀಮಂತ ಇರುವುದೇ ಗರ್ಭಿಣಿಯ ಬಯಕೆಯನ್ನು ತೀರಿಸುವುದಕ್ಕಾಗಿ. ಅದಕ್ಕಾಗಿ ಗರ್ಭಿಣಿಯನ್ನು ಸೀಮಂತದ ದಿನ ವಿಶೇಷವಾಗಿ ಅಲಂಕರಿಸಿ, ಆಕೆಯನ್ನು ಕೂರಿಸಿ ಆಕೆಯ ಮುಂದೆ ಬೇರೆ ಬೇರೆ ತಿಂಡಿಗಳನ್ನು ಮಾಡಿ ಬಡಿಸುತ್ತಾರೆ. ಬಡಿಸಿದ ನಂತರ ಹೆಂಗಸರು ಒಂದೊಂದು ಚಮಚ ಹಾಲು ಮೂರು ಬಾರಿ ಕುಡಿಸುತ್ತಾರೆ. ಗಂಡಸರು ಅಕ್ಕಿ ಹಾಕಿ ಹಾರೈಸುತ್ತಾರೆ. ಗಂಡ ತನ್ನ ಹೆಂಡತಿಯ ತಲೆಗೆ ಹಿಂಗಾರವನ್ನು ಇಡುವ ಸಂಪ್ರದಾಯವು ಇದೆ. ವಿಶೇಷವಾಗಿ ಸಿದ್ಧಪಡಿಸಿದ ವಸ್ತುಗಳಿಂದ ಸಣ್ಣ ಮಕ್ಕಳಿಗೆ ಆಕೆ ಯಾವ ವಸ್ತುವನ್ನು ತೆಗೆದುಕೊಳ್ಳುತ್ತಾಳೆ ಎಂಬ ಆಧಾರದಲ್ಲಿ ಆಕೆ ತನ್ನ ಮನಸ್ಸಿನಲ್ಲಿ ಯಾವ ಮಗುವನ್ನು ಪಡೆಯಬೇಕೆಂದು ಬಯಸಿದ್ದಾಳೆ ಎಂಬುದು ನಿರ್ಧಾರವಾಗುತ್ತದೆ ಎಂಬುದು ನಂಬಿಕೆ. ಇನ್ನೊಂದು ಅಂದರೆ ಗರ್ಭಿಣಿಯ ಹೊಟ್ಟೆ ದೊಡ್ಡದಾಗಿದ್ದರೆ ಹೆಣ್ಣು ಮಗು ಎಂದೂ ಹೊಟ್ಟೆ ಸಣ್ಣದಾಗಿದ್ದರೆ ಗಂಡು ಮಗುವೆಂದೂ ಕೆಲವರು ಅಭಿಪ್ರಾಯ ಪಡುವುದುಂಟು. ಆಮೇಲೆ ಬಂದವರೆಲ್ಲರೂ ಊಟ ಮಾಡುತ್ತಾರೆ. ಊಟವಾದ ನಂತರ ಗರ್ಭಿಣಿಯನ್ನು ಗಂಡನ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗುತ್ತಾರೆ. ತಾತಾಯಿ ಮುಂಚಿ (ಹೊಸ ಬಟ್ಟೆಯಲ್ಲಿ ಒಳ್ಳೆ ಮೆಸು, ಕೊತ್ತಂಬರಿ, ಜೀರಿಗೆ, ಕಾಲುಜೀರಿಗೆ, ತಾಳೆಬೆಲ್ಲ, ಮೆಣಸು ಮುಂತಾದವುಗಳನ್ನು ಕಟ್ಟಿಕೊಡುವುದು) ಕೊಟ್ಟರೆ ಗಂಡನ ಮನೆಗೆ ಹೆರಿಗೆಯಾಗದೆ ಪುನಃ ಹೋಗುವ ಸಂಪ್ರದಾಯ ಇಲ್ಲ. ಇತ್ತೀಚೆಗೆ ತಾತಾಯಿ ಮುಂಚಿಯನ್ನು ಕೊಡುವುದನ್ನೇ ಕಡಿಮೆ ಮಾಡಿದ್ದಾರೆ. ಒಂದು ವೇಳೆ ತಾತಾಯಿ ಕೊಟ್ಟರೆ ಗಂಡನ ಮನೆಗೆ ಹೋಗಿ ಬರುವುದು ಮಾಡಬಾರದು ಎಂದು ನಿಯಮ ಪಾಲಿಸಬೇಕು. ಈಗ ಹೋಗಿ ಬರುವುದಕ್ಕೆ ತಕ್ಕುದಾದವಾಹನದ ವ್ಯವಸ್ಥೆ, ಆಧುನಿಕ ತಂತ್ರಜ್ಞಾನ, ಆಸ್ಪತ್ರೆ -ಹೀಗೆ ಎಲ್ಲವೂ ಆಧುನಿಕ ಆಗುತ್ತಿರುವಾಗ ಹಿಂದಿನ ಕಾಲವ ಆಚರಣೆಗಳು ಕಡಿಮೆಯಾಗುತ್ತದೆ. ಇನ್ನೂ ಹಳ್ಳಿಯ ವಾತಾವರಣವೇ ತುಂಬಿರುವ ಕಡೆ, ಗಂಡನ ಮನೆ ದೂರವಾಗಿದ್ದಲ್ಲಿ ಹೋಗಿ ಬರುವುದಕ್ಕೆ ತಕ್ಕುದಾದ ವ್ಯವಸ್ಥೆ ಇಲ್ಲದವರು ಈಗಲೂ ಈ “ತಾತಾಯಿ ಮುಂಚಿ” ನೀಡುವ ಕ್ರಮವನ್ನು ಇಟ್ಟುಕೊಂಡಿದ್ದಾರೆ.

ಹೆರಿಗೆ ಮತ್ತು ಮಗುವನ್ನು ನೋಡಿಕೊಳ್ಳುವ ಕ್ರಮಗಳು

ಒಂದು ಮನೆಯಲ್ಲಿ ಗರ್ಭಿಣಿ ಹೆಣ್ಣು ಇದ್ದರೆ ಆಕೆಯನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ತವರು ಮನೆಗೆ ಕಳುಹಿಸುವ ಉದ್ದೇಶವೇ ಅದು. ಗಂಡನೆ ಮನೆಯಿಂದಲೂ ಹೆಚ್ಚಾಗಿ ತವರು ಮನೆಯಲ್ಲಿ ಆಕೆಗೆ ಹೊತ್ತು ಹೊತ್ತಿಗೆ ಬೇಕಾದವುಗಳನ್ನು ಕೊಟ್ಟ, ಚೆನ್ನಾಗಿ ನೋಡಿಕೊಳ್ಳುವ ಕಾರಣದಿಂದ ಮಗು ಮತ್ತು ತಾಯಿ ಚೆನ್ನಾಗಿ ಬೆಳೆಯುತ್ತಾರೆ. ಹಿಂದಿನ ಕಾಲದಲ್ಲಿ ಹೆರಿಗೆ ಮಾಡಿಸುವ ಅನುಭವಿ ಹೆಂಗಸರೇ ಇರುತ್ತಿದ್ದರು. ಅವರು ಮನೆಯಲ್ಲಿಯೇ ಹೆರಿಗೆಯನ್ನು ಮಾಡಿಸುತ್ತಿದ್ದರು. ಈಗ ಬೇಕಾದಷ್ಟು ಡಾಕ್ಟರುಗಳು, ಆಸ್ಪತ್ರೆಗಳಿರುವುದರಿಂದಾಗಿ ಹೆರಿಗೆ ಆಸ್ಪತ್ರೆಯಲ್ಲಿಯೇ ಹೆಚ್ಚಾಗಿ ನಡೆಯುತ್ತದೆ. ಹಳ್ಳಿಗಳಲ್ಲಿ ಹೆರಿಗೆಯ ಸಂದರ್ಭದಲ್ಲಿ ಹಳ್ಳಿಯ ಮದ್ದು ಉಪಯೋಗಿಸುತ್ತಾರೆ. ಮಗು ಮತ್ತು ತಾಯಿಯನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ಮಗುವಿಗೆ ಎಣ್ಣೆ ಹಚ್ಚಿ, ಗಂಧ ಚಂದನ, ತೆಂಡೆಲ್ (ಎಲೆಯದಾಗಿರುವ ಎಳನೀರು) ಮುಂತಾದವುಗಳನ್ನು ಅರೆದು ಹಚ್ಚಿ ಸ್ನಾನ ಮಾಡಿಸಿದ ನಂತರದಲ್ಲಿ ಗಂಧದ ಹುಡಿ, ಲೋಬಾನ ಹಾಕಿ ಹೊಗೆ ಹಿಡಿಯುತ್ತಾರೆ. ಮಗುವಿಗೆ ಕನೆರ್ (ಕೇಪುಳ ಗಿಡದ ಚಿಗುರು, ಪೇರಲೆ ಮರದ ಚಿಗುರು, ಕಂಚಲ (ಹಾಗಲ ಕಾಯಿ) ರಸ ಕೊಡುವುದಿದೆ ಅಂದರೆ ಕೇಪುಳ ಗಿಡದ ಕೊಡಿ, ಪೇರಲೆಯ ಕೊಡಿ, ಕಂಚಲ ರಸ ಮುಂತಾದವುಗಳನ್ನು ಮಗುವಿಗೆ ಬರೇ ಹೊಟ್ಟೆಗೆ ಕುಡಿಸುತ್ತಾರೆ. ಮಗುವನ್ನು ಸ್ನಾನ ಮಾಡಿಸುವುದಕ್ಕೆ ಅನುಭವಸ್ಥ ಮಹಿಳೆಯರೇ ಬೇಕು. ಜನನದ ಸಂದರ್ಭದಲ್ಲಿ ಸೂತಕ ಹದಿನಾರು ದಿನಗಳಿರುತ್ತದೆ. ಹದಿನಾರನೆಯ ದಿವಸ ಯಾರಲ್ಲೂ ದಿವಸ ಕೇಳದೆ ಮಗುವನ್ನು ತೊಟ್ಟಲಿಗೆ ಹಾಕಬಹುದು. ಹದಿನಾರು ದಿನ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸದೆ ತಾಯಿಯ ಜೊತೆಯಲ್ಲಿಯೇ ಮಲಗಿಸುತ್ತಾರೆ. ಹದಿನಾರು ದಿನ ಕಳೆದ ಮೇಲೆ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವುದು ಕ್ರಮ. ಇದನ್ನು “ತೊಟ್ಟಿಲ್ ಪಾಡುನೆ” (ತೊಟ್ಟಿಲು ಹಾಕುವುದು) ಎಂದು ಕರೆಯುತ್ತಾರೆ. ಮಗುವಿಗೆ ಆರೈಕೆಗಳು ನಡೆಸುವಂತೆಯೇ ತಾಯಿಯನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಲಾಗುತ್ತದೆ. ಆಕೆಗೆ ಎಣ್ಣೆ ಹಚ್ಚಿ, ಬಿಸಿನೀರು ಕಾಯಿಸಿ ಸ್ನಾನ ಮಾಡಿಸುವ ಕ್ರಮ ಇದೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುವುದು ಯಾಕೆಂದರೆ ಹೆರಿಗೆಯ ನೋವು ಮಾಯವಾಗಲಿ ಎಂದು. ಸ್ನಾನವಾದ ನಂತರ ಆಕೆಗೆ ಬೇಕಾದ ಹಳ್ಳಿ ಮದ್ದುಗಳನ್ನು ಮಾಡಿಕೊಡುತ್ತಾರೆ. ಊಟದ ಸಂದರ್ಭದಲ್ಲಿ ಆಕೆಗೆ ವಿಶೇಷ ರೀತಿಯ ಸಾಂಬಾರುಗಳಿರುತ್ತದೆ. ಹೆರಿಗೆ ಸಂದರ್ಭದಲ್ಲಿ ಆಕೆಯಲ್ಲಿ “ಪೆದ್ಮೆದಿ” (ಬಾಣಂತಿ) ಎಂದು ಕರೆಯುತ್ತಾರೆ. ಈಗ ಆಸ್ಪತ್ರೆಗಳಲ್ಲಿ ಹೆರಿಗೆಯಾದ ಕೂಡಲೇ ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ ಆದರೂ ಮನೆಗೆ ಬಂದ ಮೇಲೆ ಹದಿನಾರನೇ ದಿನ ಅಥವಾ ಆಮೇಲೆ ಒಳ್ಳೆಯ ದಿವಸ ನೋಡಿ ಮಗುವನ್ನು ತೊಟ್ಟಿಲಿಗೆ ಹಾಕುವ ಸಂಪ್ರದಾಯ ಇವತ್ತೂ ಇದೆ. ತೊಟ್ಟಿಲಿಗೆ ಹಾಕುವ ದಿನ ಸಂಬಂಧಿಗಳು, ಇಷ್ಟ ಮಿತ್ರರು ಬರುತ್ತಾರೆ. ಮಗುವನ್ನು ಆರಂಭದಲ್ಲಿ ನೋಡುವವರು ಮಗುವಿಗೆ ಏನಾದರೂ ಕೊಡಬೇಕೆಂಬ ಕ್ರಮ ಇದೆ. ಕೆಲವರು ಮಗುವಿನ ಕೈಯಲ್ಲಿ ಹಣ, ಮಗುವಿಗೆ ಆಗುವ ಆಟದ ಸಾಮಾನು ಅಥವಾ ಮಗುವಿಗೆ ಬಟ್ಟೆ ಬರೆ ಇತ್ಯಾದಿ ಕೊಡುತ್ತಾರೆ. ಹೆರಿಗೆಯಾಗಿ ನಲವತ್ತು ದಿನ ಕಳೆಯುವಾಗ ಮಾಡುವ ಸ್ನಾನವನ್ನು “ನಲ್ಪ ನೀರ್ ಮಿಪುನೆ” (ನಲುವತ್ತನೈ ದಿನದ ಸ್ನಾನ) ಎನ್ನುತ್ತಾರೆ. ಹೆತ್ತ ಹೆಣ್ಣಿಗೆ ನಲುವತ್ತನೇ ದಿನ ವಿಶೇಷವಾದ ಸ್ನಾನ ಊಟಗಳಿರುತ್ತದೆ. ಆ ದಿವಸಗಳಲ್ಲಿ ಹೆರಿಗೆಯ ನೋವು ಆಯಾಸಗಳಿರುತ್ತದೆ. ಆಮೇಲೆ ಅದಿರುವುದಿಲ್ಲ. ನಾಲ್ಕು ಅಥವಾ ಆರು ತಿಂಗಳಲ್ಲಿ ತವರು ಮನೆಯಿಂದ ಗಂಡನ ಮನೆಗೆ ಮಗುವನ್ನು ಮತ್ತು ತಾಯಿಯನ್ನು ಕರೆದುಕೊಂಡು ಹೋಗುವ ಸಂಪ್ರದಾಯ ಇದೆ. ಇದನ್ನು “ತೊಟ್ಟಿಲು ಬಾಲಿ” (ತೊಟ್ಟಿಲು ಮತ್ತು ಮಗು) ಹೋಗುವುದು ಎಂದು ಕರೆಯುತ್ತಾರೆ. ಕೆಲವು ಸ್ಥಳಗಳಲ್ಲಿ ಗಂಡನ ಮನೆಯವರು ದಿನ ನಿಗದಿಪಡಿಸಿ ಮಗು ಮತ್ತು ತಾಯಿಯನ್ನು ಕರೆದುಕೊಂಡು ಹೋದರೆ ಮತ್ತೆ ಕೆಲವು ಕಡೆಗಳಲ್ಲಿ ತವರು ಮನೆಯವರು ಕರೆದುಕೊಂಡು ಹೋಗಿ ಗಂಡನ ಮನೆಗೆ ಬಿಟ್ಟು ಬರುವ ಸಂಪ್ರದಾಯಗಳಿವೆ.

ಮರಣ

ಒಬ್ಬ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ ಸಂಬಂಧಿಗಳಿಗೆಲ್ಲ ಮಾಹಿತಿಯನ್ನು ತಿಳಿಸಿ ಅವರೆಲ್ಲರೂ ಬಂದ ಬಳಿಕ ಹೆಣವನ್ನು ಸ್ನಾನ ಮಾಡಿಸಿ ವಸ್ತ ಉಡಿಸಿ, ಹೂ, ಹೊಸಬಟ್ಟೆಗನ್ನು ಹೆಣದ ಮೇಲೆ ಹಾಕುತ್ತಾರೆ. ತುಳಸಿ ಎಲೆಯಲ್ಲಿ ಹೆಣದ ಬಾಯಿಗೆ ನೀರನ್ನು ಬಿಟ್ಟು ಆ ನಂತರದಲ್ಲಿ ಹೆಣವನ್ನು ಮನೆಯಿಂದ ಕಾಟ (ಹೆಣ ಸುಡುವುದಕ್ಕಾಗಿ ನಿರ್ಮಿಸಿದ ಸ್ಥಳದಲ್ಲಿ ಕಟ್ಟಿಗೆಯನ್ನು ಪೇರಿಸಿಟ್ಟ ಜಾಗ) ಇರುವಲ್ಲಿಗೆ ಕೊಂಡೊಯ್ದು ಅಲ್ಲಿ ಗಂಡಸರು ಮಾತ್ರ ತುಳಸಿ ಎಲೆಯಲ್ಲಿ ನೀರನ್ನು ಬಿಟ್ಟು ಅಪ್ರದಕ್ಷಿಣೆ ಬಂದು ಕಾಟಕ್ಕೆ ಬೆಂಕಿ ಕೊಡುತ್ತಾರೆ. ಬೆಂಕಿ ಕೊಡುವವರು ಮರಣ ಹೊಂದಿದ ವ್ಯಕ್ತಿಯ ಹತ್ತಿರದ ಸಂಬಂಧಿಯಾಗಿರಬೇಕು. ಮುಖ್ಯವಾಗಿ ತಂದೆ ತಾಯಿಯ ಕಾಟಕ್ಕೆ ಮಗ ಬೆಂಕಿ ಕೊಡುವ ಪದ್ಧತಿ ಜಾರಿಯಲ್ಲಿದೆ. ಕಾಟ ಇರುವ ಸ್ಥಳಕ್ಕೆ ಹೆಂಗಸರು ಹೋಗುವ ಕ್ರಮ ಇಲ್ಲ. ಹೆಂಗಸರು ಸ್ನಾನ ಮಾಡಿಸಿದ ನಂತರ ಮನೆಯಲ್ಲಿಯೇ ಹೆಣದ ಬಾಯಿಗೆ ನೀರು ಬಿಟ್ಟು ನಮಸ್ಕಾರ ಮಾಡಬೇಕು. ಹೆಣವನ್ನು ಕಾಟದಲ್ಲಿ ಇಡುವಾಗ ಸತ್ತವರಿಗೆ ಇಷ್ಟವಾಗಿರುವ ವಸ್ತುಗಳನ್ನು ಕಾಟಕ್ಕೆ ಹಾಕುವ ಸಂಪ್ರದಾಯ ಕೂಡಾ ಇದೆ. ಹೆಣ ಪೂರ್ತಿಯಾಗಿ ಸುಡುವ ತನಕ ಅಲ್ಲಿದ್ದು ಆ ನಂತರ ಎಡದ ಕೈಯಲ್ಲಿ ಕೊಡಲಿಯಲ್ಲಿ ಕಾಟದ ಒಂದು ಬದಿಯಿಂದ ಇನ್ನೊಂದು ಬದಿಗೆ ಎಸೆದ ನಂತರ ಅಲ್ಲಿಂದ ಜನರು ಮನೆಗೆ ಬರಬೇಕು. ಆ ಮೇಲೆ ಸ್ನಾನಾದಿಗಳಾದ ಮೇಲೆಯೇ ಬಾಯಾರಿಕೆ, ಊಟ ಮಾಡಬಹುದು. ಹೆಣವನ್ನು ಮುಟ್ಟಿದವರೆಲ್ಲರೂ ಸ್ನಾನ ಮಾಡಿದ ಮೇಲೆಯೇ ಆಹಾರಾದಿಗಳನ್ನು ಸ್ವೀಕರಿಸುವುದು ಕ್ರಮ. ಹೆಣವನ್ನು ಸುಟ್ಟ ಮೂರನೇ ಅಥವಾ ಐದನೇ ದಿನ “ಬೂದಿ ಒಪ್ಪ ಅಥವಾ ಬೂದಿ ಕೂಟುನೆ” (ಬೂದಿಯನ್ನು ರಾಶಿ ಮಾಡುವುದು) ಎಂಬ ಕಾರ್ಯಕ್ರಮ ನಡೆಯುತ್ತದೆ. ಆ ದಿನ ಕೆಲವ ಕ್ರಮಗಳಿವೆ. ಸಂಬಂಧಿಕರೆಲ್ಲ ಆ ದಿನ ಬಂದು ಸೇರುತ್ತಾರೆ. ಆ ದಿನ ಉತ್ತರಕ್ರಿಯೆಯ ಕಾಗದವನ್ನು ಸೇರಿದವರಿಗೆ ಕೊಡುತ್ತಾರೆ. ಮುಂದೆ ನಡೆಯುವುದೇ ಉತ್ತರ ಕ್ರಿಯೆ. ಅಲ್ಲಿಯ ತನಕ ಹತ್ತಿರದ ಸಂಬಂಧಿಗಳಿಗೆ ಸೂತಕ ಇರುತ್ತದೆ.

ಉತ್ತರ ಕ್ರಿಯೆ

ಮರಣ ಹೊಂದಿದ ಹನ್ನೊಂದು ಅಥವಾ ಹದಿಮೂರನೆಯ ದಿವಸ ಮನೆಯಲ್ಲಿ ಅಥವಾ ದೇವಾಲಯದಲ್ಲಿ ಉತ್ತರಕ್ರಿಯೆಯನ್ನು ನಡೆಸುತ್ತಾರೆ. ಉತ್ತರಕ್ರಿಯೆ ಮನೆಯಲ್ಲಿ ನಡೆಸುವುದಾದರೆ ದೇವಾಲಯಕ್ಕೆ ಹೋಗಿ ಅಲ್ಲಿ “ಪಿಂಡ” ಬಿಟ್ಟು ಹೋಮ ಮಾಡಿಸಿ ಮನೆಗೆ ಬಂದು ಮನೆಯನ್ನು ಪುಣ್ಯ ನೀರಿನಿಂದ ಶುದ್ಧ ಮಾಡಿದ ನಂತರ ಬಂದವರಿಗೆ ಉತ್ತರಕ್ರಿಯೆಯ ಊಟದ ವ್ಯವಸ್ಥೆ ಮಾಡುತ್ತಾರೆ. ಇದನ್ನು “ಸಾವುದ ಓಣಸ್” (ಉತ್ತರಕ್ರಿಯೆಯ ಊಟ) ಎಂದು ಕರೆಯುತ್ತಾರೆ. ಉತ್ತರಕ್ರಿಯೆಯ ದಿನ ಮರಣ ಹೊಂದಿದ ವ್ಯಕ್ತಿಯ ಕುಟುಂಬದವರು ಸೂತಕದಿಂದ ಮುಕ್ತರಾಗುತ್ತಾರೆ. ಸೂತಕದ ಸಂದರ್ಭದಲ್ಲಿ ಯಾವುದೇ ಶುಭ ಕೆಲಸಗಳನ್ನು ಮಾಡಬಾರದು, ದೇವಾಲಯಗಳಿಗೆ ಹೋಗಬಾರದು ಅಷ್ಟೆ ಅಲ್ಲದೆ ಕೆಲವು ಮನೆಗಳ ಒಳಗೂ ಹೋಗಬಾರದು, ದೈವಗಳಿಗೆ ಕಟ್ಟಬಾರದು ಎಂಬ ನಿಯಮಗಳು ಜಾರಿಯಲ್ಲಿವೆ. ಈ ನಿಯಮಗಳನ್ನು ಇಂದಿಗೂ ಬಹಳ ಕಟ್ಟುನಿಟ್ಟಾಗಿ ಪರವರು ಪಾಲಿಸಿಕೊಂಡು ಬರುತ್ತಿದ್ದಾರೆ.