ಧರ್ಮಸ್ಥಳ ಉಳ್ಳಾಲ್ತಿ ದೈವ ಪಾಡ್ದನ

ಹದಿನಾರು ವರ್ಷ ತುಂಬಿತು ಕನ್ಯೆಗೆ. ಆ ಕನ್ಯೆಗೆ ಮತ್ತು ಜಾರಾಳ್ವನಿಗೆ ಮದುವೆ ಮಾಡಬೇಕೆಂದು ಯೋಚಿಸುತ್ತಾರೆ. ಮದುವೆ ಬೇಕಾದ ಬಂಗಾರ ಎಲ್ಲಿಂದ ತರುವುದು ಎಂಬುದಾಗಿ ಕೇಳುತ್ತಾರೆ. “ಜಾರ್ ಪುರೈಯಿ” ನಾಡಿನ ಜನನದಲ್ಲಿ ಬಂಗಾರ ಇದೆ, ಆದರೆ ಅಲ್ಲಿಂದ ಆ ಬಂಗಾರವನ್ನು ತರುವುದಕ್ಕೆ ಯಾರು ಹೋಗಿ ಬರುತ್ತಾರೆ? ಎಂದು ಕೇಳುತ್ತಾರೆ. ಕನ್ಯೆಯ ತಂಗಿ ದಾರಕ್ಕ ಎಂಬುವಳಿದ್ದಾಳೆ, ಅವಳಾದರೆ ಹೋಗಿ ಬಂಗಾರ ತರಬಹುದುದೆಂದು ಹೇಳುತ್ತಾರೆ. ಯಾರೂ ಹೋಗದಿದ್ದರೆ ಕನ್ಯೆಯ ಅಕ್ಕ ಅಬ್ಬಯ ಹೋಗಿ ಬಂಗಾರ ತರಬಹುದು ಎಂದು ಹೇಳುತ್ತಾರೆ. ಅದಕ್ಕೆ ಅವಳು ಒಪ್ಪಿದಳು. ಹೋಗಿ ಬರಬಹುದು ಆದರೆ ಎಷ್ಟು ದೂರ ಇದೆ? ಅಲ್ಲಿಗೆ ಹೋಗಿ ಬರಲು ದಾರಿಯ ಗುರುತು ಏನೆಂದು ಕೇಳುತ್ತಾಳೆ. ಅಲ್ಲಿಗೆ ಹೋಗುವಾಗ ಮಾದಿರ ಬಳ್ಳಿಯ ಬೇಲಿ ಇದೆ. ಅಲ್ಲಿ ಗಟ್ಟಿಯಾಗಿ ಅಡ್ಡವಾಗಿ ಕಟ್ಟಿದ ತಡಮೆ (ಬೇಲಿಯ ಒಂದು ಭಾಗದಲ್ಲಿ ಮನುಷ್ಯರು ದಾಟಲು ಅನುಕೂಲವಾಗಿರುವ ರೀತಿಯಲ್ಲಿ ರಚಿಸಿದ ಮರದ ಗೇಟು) ಇದೆ ಎನ್ನುತ್ತಾರೆ. ತಡಮೆಯನ್ನು ದಾಟಿ, ಆ ಬೀಡಿನ ಹೊರಗೆ ನಿಂತು “ಜಾರಾಳ್ವ ಜಾರಾಳ್ವ” ಎಂದು ಮೂರು ಬಾರಿ ಕರೆಯುತ್ತಾಳೆ. ಯಾರು ಕರೆದದ್ದು ಎಂದು ಕೇಳಿ ಹೊರಗೆ ಬರುವರು. ಏಳು ಅಲ್ಲ, ಎಂಟು ಅಲ್ಲ ನಾನು ಜಾರ್ ಪುರೈಯಿಗೆ ಬಂದ ಹೆಣ್ಣು ಎಂದು ಹೇಳುತ್ತಾಳೆ. ಯಾವ ಕೆಲಸದಲ್ಲಿ ಬಂದದ್ದು ಎಂದು ಕೇಳುತ್ತಾರೆ. “ಬೇರೇನು ಕೆಲಸವಿಲ್ಲ ನನಗೆ ಜನನದ ಬಂಗಾರ ಬೇಕಾಗಿತ್ತು” ಎಂದು ಹೇಳುತ್ತಾಳೆ. ನಿಮ್ಮಲ್ಲಿರುವ ಬಂಗಾರವನ್ನು ಕೊಡಬೇಕಂತೆ, ನೀವು ಒಮ್ಮೆ ಬರಬೇಕೆಂತೆ ಎನ್ನುತ್ತಾಳೆ. ನಾನು ನಿನಗೆ ನಿನಗೆ ಬಂಗಾರ ಬೇಕೆಂದು ಕೇಳಿ ಕೊಡುತ್ತಾರೆ. ಬಂಗಾರವನ್ನು ಹಿಡಿದುಕಂಡು ಮೂಜುಲ್ಲ ಬೀಡಿಗೆ ಬರುವರು. ಕನ್ಯೆಗೆ ಸೀರೆ ಉಡಿಸಿದರು ರಚಕೆ ತೊಡಿಸಿದರು, ಕೈಗೆ ಬಳೆ, ಬೆರಳಿಗೆ ಬೆಳ್ಳಿ ಉಂಗುರ, ಕಾಲಿಗೆ ಕಾಲುಂಗುರ, ಸೊಂಟಕ್ಕೆ ಒಡಪು, ಪಟ್ಟಿ, ತಲೆಗೆ ಹಿಂಗಾರ, ಹಣೆಗೆ ಮುತ್ತಿನ ಬೊಟ್ಟು, ಮೂಗಿಗೆ ಮೂಗುತ್ತಿ, ತಲೆಗೆ ಮಲ್ಲಿಗೆ ಹೂ, ಸಂಪಿಗೆ ಹೂಗಳನ್ನು ಮುಡಿಸಿ ಕನ್ಯೆಯನ್ನು ಸಿಂಗಾರ ಮಾಡಿದರು. ಆ ಸಮಯದಲ್ಲಿ ಜಾರಾಳ್ವ ಅಲ್ಲಿಗೆ ಹೊರಟು ಬರುತ್ತಾರೆ. ಸಿಂಗಾರವಾದ ಕನ್ಯೆಯನ್ನು ಯೋಗ್ಯೋಲ್ಲ ಬೀಡಿನ ಬಾಗ್ಯೊಲ್ಲ. ಸಿರಿ ಚಾವಡಿಯಿಂದ ಕರೆದಂತಾಗಿ ಅಲ್ಲಿಗೆ ಹೋಗಿ ಮಾಯಕ ಹೊಂದುತ್ತಾಳೆ. ಉಳ್ಳಾಲ್ತಿ ರೈವವಾಗಿ ನೆಲೆ ನಿಲ್ಲುತ್ತಾಳೆ. ಹೀಗೆ ನೆಲೆಯಾದ ಅವಳು ಬಲ್ಲಾಳರಿಗೆ ವರ್ಷ ನೇಮ ಪರ್ವ ಕೊಡಬೇಕೆಂದು ಹೇಳುತ್ತಾಳೆ. ನನಗೆ ಪ್ರತಿ ವರ್ಷದ ಸುಗ್ಗಿಯ ಸಂಕ್ರಮಣ (ಮಾರ್ಚ್‌ಏಪ್ರಿಲ್‌)ಕ್ಕೆ ನೇಮ ಮಾಡಬೇಕೆಂದು ಹೇಳುತ್ತಾಳೆ. ಅಲ್ಲಿಂದ ಮುಂದೆ ಬೇರೆ ಬೇರೆ ದಿಕ್ಕಿನಲ್ಲಿ, ದೇಶದಲ್ಲಿ, ರಾಜ್ಯದಲ್ಲಿ ನಾನು ಹೋಗಿ ನೆಲೆಯಾಗುತ್ತೇನೆ ಎಂದು ದೈವ ಹೇಳಿತು.

ಕೊಟತ್ತಜೆ, ಕಣಂತೂರು ಉಳ್ಳಾಲ್ತಿ ಪಾಡ್ದನ

ಒಂದು ಬೀಡಾಯಿಯು ಬಲ್ಲಾಳರಿಗೆ, ಕೂಟಾಜೆ ಜನಾನದ ಬೀಡಾಯಿತು. ಒಂದು ಬೀಡಾಯಿತು ಬಲ್ಲಾಳರಿಗೆ, ಕಲ್ಲೂರ ಜನನದ ಬೀಡಾಯಿತು. ಒಂದು ಬೀಡಾಯಿತು ಬಲ್ಲಾಳರಿಗೆ, ಕುರ್ಮಾನ್ ಬಾವದ ಬೀಡಾಯಿತು. ಒಂದು ಬೀಡಾಯಿತು ಬಲ್ಲಾಳರಿಗೆ, ಬೀರೂರ ಮಿರಿ ಮಿಂಟಿಯ ಬೀಡಾಯಿತು. ಒಂದು ಬೀಡಾಯಿತು ಬಲ್ಲಾಳರಿಗೆ, ಪಟ್ಟೋರಿ ಕೊಣಾಜೆಯ ಬೀಡಾಯಿತು. ಒಂದು ಬೀಡಾಯಿತು ಬಲ್ಲಾಳರಿಗೆ, ಮಂಚಿ ಬೋಳಂತೂರುಗಳು ಬೀಡಾಯಿತು. ಒಂದು ಬೀಡಾಯಿತು ಬಲ್ಲಾಳರಿಗೆ, ಎರ್ಯಾಕುರಿಯಾಡಿಯ ಬೀಡಾಯಿತು. ಒಂದು ಬೀಡಾಯಿತು ಬಲ್ಲಾಳರಿಗೆ, ಇರಾದ ಚಿತ್ತರಿಗೆಯ ಬೀಡಾಯಿತು. ಒಂದು ಬೀಡಾಯಿತು. ಒಂದು ಬೀಡಾಯಿತು ಬಲ್ಲಾಳರಿಗೆ, ಮೀಂಜ ಬಜ್ಜಂಗಳ ಬೀಡಾಯಿತು, ಒಂದು ಬೀಡಾಯಿತು ಬಲ್ಲಾಳರಿಗೆ, ತೆಂಕು ರಾಜ್ಯದ ಮಂಗಳ್ಪಾಡಿ ಬೀಡಾಯಿತು. ಹತ್ತು ಹದಿನೈದು ಬೀಡಾಯಿತು ಬಲ್ಲಾಳರಿಗೆ, ಇಪ್ಪತ್ತನಾಲ್ಕು ಬಾವವಾಯಿತು. ಹತ್ತು ಹದಿನಾರು ಬೀಡಿನಲ್ಲಿ ಬಲ್ಲಾಳರನ್ನು ಕೂಡಿಸಿದ್ದಾರೆ, ಕೂಟಜೆ ಜನನದ ಬೀಡಿನಲ್ಲಿ ಕೂಟಜೆ ಜನನದ ಬೀಡಿನಲ್ಲಿ ಅಪ್ಪ ಸಂದ ಬಲ್ಲಾಳರು, ಅಜ್ಜಿ ಕೊಲ್ಯಂದ ಅವರು ಇದ್ದಾರೆ. ಮಗಳು ಪಟ್ಟಮ್ಮಾದೆಯ್ಯಾ ಅವರು ಕೂಟಜೆ ಜನನದ ಬೀಡಿನಲ್ಲಿ ಹೇಳುತ್ತಾರೆ. ನಮಗೆ ಮುಂದೆ ಹೋಗುವ ಗಂಡು ಮಗ ಹಿಂದೆ ಬರುವ ಹೆಣ್ಣು ಮಗಳು ಇಲ್ಲ ಎಂದು ಹೇಳುತ್ತಾರೆ. ಹರಿಕೆ ಹೇಳುತ್ತಾರೆ. ಕೋಳ್ಯೂರು ಶಂಕರನಾರಾಯಣ ದೇವರಿಗೆ ಅಡ್ಡ ಮರ ಹಾಕಿ ತುಲಾಭಾರ ತೂಗಿಸುತ್ತೇವೆ. “ಪಟ್ಟತನ” ದೇವರಿಗೆ ಪಟ್ಟ ಕಟ್ಟಿಸುವೆವು. “ನೇತ್ರದಲ್ಲಿ” ನೆರಿಗೆ ಇರಿಸುತ್ತೇವೆ. ನಮ್ಮ ಮೂಲಧರ್ಮ ದೈವಕ್ಕೆ ಹಾಳೆಯ “ಮೊಗ” ತೆಗೆಸಿ ಕಂಚಿನ ಮೊಗ ಎರಕ ಹೊಯ್ಯಿಸುತ್ತೇವೆ. ಮುಖವಾಡ ಇರಿಸುತ್ತೇವೆ ನಮ್ಮ ಹಿರಿಯರಿಗೆಲ್ಲಾ ಕೂಟಜೆ ಜನನದ ಬೀಡಿನಲ್ಲಿ ಹದಿನಾರು ಎಲೆ ಹಾಕಿ “ಅಗೆಲು” ಬಡಿಸುತ್ತೇವೆ. ಹರಿಕೆ ಹೇಳಿದರು. ಕೈ ಮುಗಿದರು. ಹೇಳಿದ ಹರಿಕೆಯಲ್ಲಿ ದೆಯ್ಯಾರ್ ಮುಟ್ಟಾದಳು. ಬೀಡಿಗೆ ದೂರ ಆದರು, ಸ್ನಾನದ ದಂಡೆಗೆ ಹತ್ತಿರವಾಗಿ ಕುಳಿತರು.ಮೂರು ಹೋಗಿ ನಾಲ್ಕನೆಯ ದಿನ ಶುದ್ಧದ ನೀರು ಮೀಯಬೇಕೆಂದು ಮಡಿವಾಳತಿ ಹೆಣ್ಣನ್ನು ಕರೆದರು. ಒಂದು ಹಿಡಿ ತುಂಬೆ ಹೂ ಕೊಯ್ಯಿಸಿ ಸೆರಗಲ್ಲಿ ಕಟ್ಟಿಸಿದರು. ಒಂದು ಹಿಡಿ ಬೆಳ್ತಿಗೆ ಅಕ್ಕಿ ತೆಗೆದು ಹಿಡಿದುಕೊಂಡರು. ಮೈಲಿಗೆಯ ಬಟ್ಟೆಯ ಕಟ್ಟು ಕಟ್ಟಿಸಿದರು. ದೆಯ್ಯಾರೆ ಅವರ ಮೈಗೆ ಅರಸಿನ ಹಚ್ಚಿದರು. “ಸೀಗೆ” “ಬಾಗೆ” “ತರೋಳಿ” ದೆಯ್ಯಾರೆ ಅವರು ಜೋಡಿಸಿಕೊಂಡರು.ಮೈಲಿಗೆ ಬಿಟ್ಟು ಮಡಿಯನ್ನು ದೆಯ್ಯಾರೆ ಉಟ್ಟರು. ತಲೆಗೆ ವಸ್ತ್ರದ ಹೊದಿಕೆ ಹಾಕಿಕೊಂಡರು. ಬಲದ ಮುಷ್ಠಿಯಲ್ಲಿ ತಾಂಬಲ, ಎಡದ ಕೈಯಲ್ಲಿ ದೆಯ್ಯಾರೆ ಪನ್ನೆಪತ್ರೆ (ಒಲೆಕೊಡೆ) ಹಿಡಿದರು. ಊಳಿಗದ ಹೆಣ್ಣಿನೊಡನೆ ದೆಯ್ಯಾರೆ ಕೂಟಜೆ ಜನನದ ಬೀಡಿನಿಂದ ದೆಯ್ಯಾರೆ ಇಳಿದರು. ಕುರ್ಮಾನ್ ಬೀಡನ್ನು ದಾಟಿದರು; ಕಲ್ಲೂರ ಬೀಡನ್ನು ಹೊಸಮಠ ಗೋಳಿಯನ್ನು ದಾಟಿದರು. ದೆಯ್ಯಾರ್, “ಮಣ ಮಾಟಿ” ಗದ್ದೆಯನ್ನು ದಾಟಿದರು. ತಾಯಿ ದೇವರ ಸ್ಥಳ ದಾಟಿದರು. ಪೊಯ್ಯೊದ ಬೈಲ್‌ದಾಟಿದರು; ಮಡಿವಾಲ ಕೆರೆಗೆ ಬರುತ್ತಾರೆ. ದೆಯ್ಯಾರ್ ಕೆಳಗೆ ಮೈಲಿಗೆ ಬಟ್ಟೆಯನ್ನು ಹಾಕಿದರು. ಮೇಲಿನ ಕಟ್ಟಕ್ಕೆ ಸ್ನಾನಕ್ಕೆ ಬರುತ್ತಾರೆ. ದೆಯ್ಯಾರ್ ಅಡಿಗೆ ಮುಳುಗಿದರು. ಮೇಲಕ್ಕೆ ಎದ್ದರು. ಶುದ್ಧದ ನಾಲ್ಕನೆಯ ದಿನದ ನೀರು ಮಿಂದರು. ಮೈಲಿಗೆ ಬಗ್ಗೆ ಕಳಚಿದರು. ಮಡಿ ಬಟ್ಟೆ ಉಟ್ಟರು, ದೆಯ್ಯಾರ್ ಉದ್ದವಾದ ಕಲ್ಲಿನಲ್ಲಿ ನಿಂತರು, ಒಂದು ಹಿಡಿ ತುಂಬೆಯ ಹೂ ತೆಗೆದರು, ಮೇಲೆ ನೋಡಿ ಸೂರ್ಯನಾರಾಯಣ ದೇವರಲ್ಲಿ ವರಫಲವನ್ನು ಬೇಡಿದರು, ಒಂದು ಹಿಡಿ ಬೆಳ್ತಿಗೆ ಅಕ್ಕಿ ತೆಗೆದು ಕೆಳಗಿನ ನೀಡಿನ ಮೀನುಗಳಿಗೆ ಎರಚಿದರು. ನಿಮ್ಮ ಹೊಟ್ಟೆಯಲ್ಲಿ ಅಕ್ಕಿ ನೀಡು ತುಂಬಿದಂತೆ ನನ್ನ ಹೊಟ್ಟೆಯಲ್ಲಿ ಪುತ್ರ ಫಲ ಉಂಟಾಗಿ ಬರಬೇಕೆಂದು ಹೇಳುತ್ತಾರೆ. ಎದುರಿನಲ್ಲಿ ದೆಯ್ಯಾರೆ ಹಿಂದೆ ಮಡಿವಾಳತಿ ಊಳಿಗದ ಹೆಣ್ಣು ಸ್ನಾನದ ದಂಡೆಯನ್ನು ದಾಟಿದರು. ನಡಿಯಾಲ ಬೀಡಿಗೆ ಬರುತ್ತಾರೆ. ದೆಯ್ಯಾರ್ ಎಳನೀರ ಸಮ್ಮಾನವನ್ನು ನಡೆಸಿದರು. ನಡಿಯಾಲ ಬೀಡನ್ನು ಇಳಿದರು. ಕೊಟಜೆ ಜನನದ ಬೀಡಿಗೆ ಬರುತ್ತಾರೆ. ದೆಯ್ಯಾರ್ ಎಳನೀರ ಸಮ್ಮಾನವನ್ನು ನಡೆಸಿದರು. ನಡಿಯಾಲ ಬೀಡನ್ನು ಇಳಿದರು. ಕೊಟಜೆ ಜನನದ ಬೀಡಿಗೆ ಬರುತ್ತಾರೆ. ನಡೆದು ಹೋದಲ್ಲಿಗೆ ಸುಣ್ಣ, ಬಣ್ಣದ ಸೆಗಣಿಯನ್ನು ಸಿಂಪಡಿಸಿದರು. ಕುಳಿತು ಹೋದಲ್ಲಿಗೆ ಶುದ್ಧದ ಸೆಗಣಿ ಚಿಮುಕಿಸಿದರು. ತೆಂಕಿನ ಕೋಣೆಗೆ ಬರುವರು ದೆಯ್ಯಾರ್, ಹಿರಿಯರಿಗೆ ಹದಿನಾರು ಎಲೆಗಳಲ್ಲಿ “ಅಗೆಲು” ಬಡಿಸಿದರು, ತನಗೆ ಒಂದು ಅಗ್ರರ ಬಾಳೆ ಎಲೆ ಇಕ್ಕಿಸಿಕೊಂಡರು. ಮಾಡಿದ ಅನ್ನವನ್ನು ಬಡಿಸಿಕೊಂಡು. ಒಂದು ಹಿಡಿ ಅನ್ನ ತೆಗೆದು ಎಡಬದಿಗೆ ಎರಚಿದರು. ಮತ್ತೊಂದು ಹಿಡಿ ಅನ್ನವನ್ನು ತೆಗೆದು ತನ್ನ “ಕದಿರಿನಲ್ಲಿ” ಇಟ್ಟರು. ಉಂಟ ಊಟದಲ್ಲಿ ಉಟ್ಟ ಬಟ್ಟೆಯಲ್ಲೆ ಮಿಂದ ನೀರಿನಲ್ಲಿ ನನ್ನ ಹೊಟ್ಟೆಯಲ್ಲಿ ಸತ್ಯದ ಪುತ್ರಫಲ ಸಂತಾನ ಆಗಲಿ ಎಂದು ಹೇಳಿ ದೆಯ್ಯಾರ್ ಬಡಿಸಿದ ಅನ್ನವನ್ನು ಉಂಡರು. ಉಂಡ ಊಟದಲ್ಲಿ ಉಟ್ಟ ಬಟ್ಟೆಯಲ್ಲಿ ದೆಯ್ಯಾರ್ ಹೊಟ್ಟೆಯಲ್ಲಿ ಸತ್ಯದ ಪುತ್ರಫಲ ಸಂತಾನ ಆಗುತ್ತದೆ.

ಹೊಟ್ಟೆಗೆ ಒಂದು ತಿಂಗಳು ತುಂಬಿ ಎರಡನೆಯ ತಿಂಗಳು ತುಂಬಿತು. ಎರಡು ತಿಂಗಳು ಕಳೆದು ದೆಯ್ಯಾರ್ಗೆ ಮೂರನೆಯ ತಿಂಗಳು ಹಿಡಿಯಿತು. ಮೂರು ತಿಂಗಳು ಹೋಗಿ ನಾಲ್ಕು, ಐದು, ಆರು, ಏಳು ತಿಂಗಳು ಹೊಟ್ಟೆಗೆ ಆದಾಗ ಕೊಟಜೆ ಜನನದ ಬೀಡಿನಲ್ಲಿ ಬೊಳ್ಳುಟ್ಟಿ ಬಲ್ಲಾಳರು ಹೇಳುತ್ತಾರೆ, ನಮ್ಮ ದೆಯ್ಯಾರ್ಗೆ ಸೀಮಂತ ಮಾಡಬೇಕೆಂದು ಹೂ ತರಿಸಿದರು, ಬಲ್ಲಾಳರು ಹೂವಿನ ಸಮ್ಮಾನ ಮಾಡಿಸಿದರು. “ಏಳು ತಿಂಗಳು ಕಳೆದು ದೆಯ್ಯಾರ್ಗೆ  ಎಂಟು ತಿಂಗಳು ತುಂಬಿತು. ಎಂಟು ತಿಂಗಳು ಹೊಟ್ಟೆಗೆ ಕಳೆಯಿತು, ಒಂಬತ್ತು ತಿಂಗಳು ಕಳೆದು ದೆಯ್ಯಾರ್ಗೆ ಹೆರುವ ತಿಂಗಳು ಪೂರ್ತಿಗೊಂಡಿತು. ಸಂತೋಷ ಇದ್ದ ಮುಖದಲ್ಲಿ ಹುಳಿ ಇರುವ ನೋವು ಕಾಣಿಸಿತು. ಬೆನ್ನಲ್ಲಿ ಹಿರಿದಾದ ನೋವು ಕಾಣಿಸಿತು, ತುಂಬಿದ ಬಸುರಿಯಾದ ದೆಯ್ಯಾರೆಗೆ ಬ್ರಾಹ್ಮಣ ಹೆಂಗಸು ಹೇಳಿದರು ಹೊಟ್ಟೆಯ ನೋವೆಂದು ಬೊಲ್ಲುಟ್ಟಿ ಬಾರಿ ಬಲ್ಲಾಳರ ಒಂದು ಕೆಲಸದ ಆಳನ್ನು ಕರೆಸಿದರು ನಾಟ ಚೆನಿಲಕ್ಕೆ ಕಳಿಸುವರು, ನಾಟ ಚೆನಿಲಕ್ಕೆ ಹೋದ ಆಳು ತುಂಬೆ ಬಲ್ಯಾಯಿತಿ ಹೆಂಗಸನ್ನು ಕರೆಯುತ್ತಾನೆ. ಕೊಟಚೆ ಜನನದ ಬೀಡಿಗೆ ಬರಬೇಕೆಂದು ಬಲ್ಯಾಯಿತಿಗೆ ಹೇಳುತ್ತಾನೆ. ನಮ್ಮ ದೆಯ್ಯಾರ್‌ಗೆ ಸತ್ಯದಲ್ಲಿ ಬಂದ ಬಸಿರು ಎಂದು ಆಳು ಹೇಳುತ್ತಾನೆ. ಅಷ್ಟು ಮಾತನ್ನು ಕೇಳಿ ತೆಂಕು ಕೋಣೆಗೆ ಹೋಗುವಳು. ಬೆಳ್ಳಿಯ ಗೆಜ್ಜೆ ಕತ್ತಿ ಹಿಡಿದುಕೊಳ್ಳುವಳು, ತುಂಬೆ ಜಿಂಕೆಯ ಎಣ್ಣೆ ಹಿಡಿದುಕೊಳ್ಳುವಳು, ಮುಂದಿನಿಂದ ತುಂಬೆ ಬಲ್ಯಾಯಿತಿ ಹಿಂದಿನಿಂದ ಹೋದ ಆಳು ನಾಡ ಚೆನಿಲದಿಂದ ಇಳಿದರು, ಕೊಟಜೆ ಜನನದ ಬೀಡಿಗೆ ಬರುವರು. ಗರ್ಭಿಣಿಯ ಮುಖವನ್ನು ತುಂಬೆ ಬಲ್ಯಾಯಿತಿ ನೋಡಿದಳು. ದೆಯ್ಯಾರೆ ಹೇಳುತ್ತಾರೆ, ಓ ತುಂಬೆ ಬಲ್ಯಾಯಿತಿ ಕೇಳಿದ್ದೀಯಾ ನಾನು ಬಾಳುವುದಿಲ್ಲ, ಬದುಕುವುದಿಲ್ಲ. ತುಂಬೆ ಬಲ್ಯಾಯಿತಿ ಹೇಳುವಳು, ಹೆದರಬೇಡ ಮಗಳೆ ಬಾಡಿ ಹೋಗಬೇಡ. ಅತ್ತರು ತಟ್ಟೆ ತರಿಸಿದಳು, ತಡಿಕೆ ಕಟ್ಟಿಸಿದಳು, ಪನಕೆ ತರಿಸಿದಳು, ನುಣುಪಿಗೆ ಎಣ್ಣೆ ಹಚ್ಚಿದಳು, “ಶೀಲ ಜದ್ರೂಗೆ?” ದೆಯ್ಯಾರೆಗೆ ಎಣ್ಣೆ ಬಿಟ್ಟಳು. ತುಂಬೆ ಬಲ್ಯಾಲ್ದಿ ಕೆಳಗಡೆ ಹೋಗ ಮಗುವನ್ನು ಮೇಲಕ್ಕೆ ತರುವಳು. ಕೆಂದಾಳಿ ತೆಂಗಿನ ನೀರನ್ನು ಕೆತ್ತಿ ಮಗು ಕುಮಾರನನ್ನು ಆಡಿಸುವಳು. ಬಹಳವಾಗಿ ಶುದ್ಧ ಮಾಡುವಳು. ಹೊಕ್ಕುಳ ಬಳ್ಳಿಯನ್ನು ಕಡಿದು ಹಾಳೆಯಲ್ಲಿ ತರುವಳು. ಹೆರಿಗೆಯ ಉಡುಗೊರೆಯನ್ನು ಬೊಳ್ಳೊಟ್ಟಿ ಬಾರಿ ಬಲ್ಲಾಳರು ಕೊಡುವರು.

ಎಣ್ಣೆ ನೀರಿನಲ್ಲಿ ಮೀಯಿಸಿ, ಹಾಲು ಅನ್ನದಲ್ಲಿ ಸಾಕಿದರು ಕುಮಾರನನ್ನು. ಒಂದು ತಿಂಗಳು ಮಗು ಕುಮಾರ ಎರಡು ತಿಂಗಳಷ್ಟು ಪುಷ್ಟಿಯಾದರು ಎರಡು ತಿಂಗಳ ಮಗು ನಾಲ್ಕು ತಿಂಗಳಷ್ಟು ಪುಷ್ಟಿಯಾದರು. ಮಗುವಿಗೆ ಹತ್ತು ತಿಂಗಳು ತುಂಬುತ್ತಾ ಬರುವಾಗ ನಾಲ್ಕು ಕಡೆಗಳಿಗೆ ನಡೆದುಕೊಂಡು ಬರುವಾಗ ಅಜ್ಜಿ ಕೊಲ್ಯಂದಾರೆ ಬಲ್ಲಾಳರು ಸತ್ಯದಲ್ಲಿ ಹುಟ್ಟಿದ ಮಗ ಕುಮಾರನ ಕಾಲಿಗೆ ಕಡಗ ಮಾಡಿಸಿದರು. ಸೊಂಟಕ್ಕೆ ಬಂಗಾರದ ನೇವಳ ಮಾಡಿಸಿದರು. ಕುತ್ತಿಗೆಗೆ ಕುರ್ಜತ್ ಮಾಲೆ ಮಾಡಿಸಿದರು.

ನಾಲ್ಕು ಕಡೆಗಳಿಗೆ ನಡೆದುಕೊಂಡು ಬರುವಾಗ ಕುಮಾರ ಧರ್ಮ ಪಡ್ಪಿನಲ್ಲಿ ನಲ್ವತ್ತು ಮಕ್ಕಳು ಪಲ್ಲೆ ಆಟ ಆಡುವುದನ್ನು ನೋಡಿದರು. ಪಲ್ಲೆ ಆಟ ಆಡುವುದನ್ನು ಕಂಡು ಕುಮಾರ ಹೇಳುತ್ತಾರೆ. ” ಓ ನನ್ನ ತಾಯಿಯೇ ಧರ್ಮ ಪಡ್ಪಿಗೆ ನಾನು ಹೋಗುತ್ತೇನೆ. ಪಲ್ಲೆದ ಪೈ ಮುಡಿ ಕಡೆಂಬಿದ ಕುರುಂಟು ನನಗೆ ಕೊಡಿ. ಒಂದು ಕಡಿಮೆ ನಲವತ್ತು ಮಕ್ಕಳಲ್ಲಿ ಆಟಕ್ಕೆ ನಾನು ಹೋಗುತ್ತೇನೆ” ಎಂದರು. “ಓ ಮಗು ಕುಮಾರ ನಿನ್ನ ಕಂಕುಳಿನ ಹುಟ್ಟು ಕೆಂಪು ಹೋಗಲಿಲ್ಲ, ತಲೆಯ ಪಸೆ ಆರಲಿಲ್ಲ ನೀನು ಆಟಕ್ಕೆ ಹೋಗಬೇಡ” ಹೇಳಿದ್ದನ್ನು ಕೇಳಲಿಲ್ಲ ಮಗು, ತನ್ನ ಹಟ ಬಿಡಲಿಲ್ಲ. ಕೊಟ್ಟ ಹಾಲು ಅನ್ನ ತಿನ್ನಲಿಲ್ಲ. ಪಲ್ಲೆಯ ಪೈ ಮಾಡಿ ಕಡೆಂಜಿ ಕಾಯಿಯ ಕುರುಂಟು ಮಗು ಕುಮಾರನಿಗೆ ಕೊಟ್ಟರು.

ಜೊತೆಗೆ ಮಕ್ಕಳನ್ನು ಸೇರಿಸಿಕೊಂಡು ಕುಮಾರ ಹುಟ್ಟಿದ ಬೀಡನ್ನು ಇಳಿದರು. ಧರ್ಮದ ಪಡ್ಪಿಗೆ ಬರುತ್ತಾರೆ ಕುಮಾರ. ಒಂದು ಕಡಿಮೆ ನಲವತ್ತು ಮಕ್ಕಳಲ್ಲಿ ಹೇಳುತ್ತಾರೆ. “ಓ ಮಕ್ಕಳೇ ನನಗೆ ಒಂದು ಆ ಸಾಲ ಕೊಡಿ, ನಾನು ಪಲ್ಲೆ ಆಡುತ್ತೇನೆ.” ಮಕ್ಕಳು ಹೇಳುತ್ತಾರೆ “ಅಪ್ಪ ಇಲ್ಲದ ಮಗ ನೀನು, ಹೆಸರು ಇಲ್ಲದ ಕುಮಾರ, ಕಲದಲ್ಲಿ ಸಾಲ ಆಟ ನಾವು ಕೊಡುವುದಿಲ್ಲ. ಮುಂದಿನ ಆಟ ನಾವು ಬಿಡುವುದಿಲ್ಲ. “ಅದನ್ನು ಕೇಳಿ ಕುಮಾರ ಸಿಟ್ಟಿನಿಂದ ಬೇಸರ ಪಟ್ಟುಕೊಂಡು ಬರುತ್ತಾರೆ. ಕೊಟಜೆ ಜನನ ಬೀಡಿಗೆ ಬರುವರು. ನೆಯ್ಯೆಣ್ಣೆ ಸ್ನಾನ ಮಾಡಲಿಲ್ಲ; ಕೊಟ್ಟ ಹಾಲು ಗಂಜಿ ಊಟ ಮಾಡಲಿಲ್ಲ. ದೆಯ್ಯಾರ ಹೇಳಿದರು “ಎದ್ದೇಳು ಕುಮಾರ, ಹಚ್ಚಿದ ನೆಯ್ಯೆಣ್ಣೆ ಸ್ನಾನ ಮಾಡು, ಇಕ್ಕಿದ ಹಾಲು ಗಂಜಿ ತಿನ್ನು. ನಾನು ನಿನ್ನಲ್ಲಿ ಹೇಳಿದೆ, ಮಕ್ಕಳ ಆಟಕ್ಕೆ ಹೋಗಬೇಡ.” ಕುಮಾರ ಹೇಳುತ್ತಾನೆ “ಓ ನನ್ನ ಅಮ್ಮ, ಓ ನನ್ನ ಅಮ್ಮ ನನ್ನ ಅಪ್ಪ ಯಾರು, ನನ್ನ ಹೆಸರು ಹೇಗೆ?”. “ಅಯ್ಯೋ ಮಗ ಕುಮಾರ ಕೊಟಜೆ ಜನನದ ಬೀಡಿದಲ್ಲಿ ಸತ್ಯದಲ್ಲಿ, ಸುಖದಲ್ಲಿ ಬೆಳೆದ ಮಗ ನಿನಗೆ ಹಾಲು ಕೊಡಲಿಲ್ಲ ಹೆಸರು ಕರೆಯಲಿಲ್ಲ.”

“ಓ ನನ್ನ ಅಮ್ಮ ಅರಸರಲ್ಲಿ ದೊಡ್ಡವರು ಯಾರು?” ಎಂದು ಕುಮಾರ ಕೇಳಿದರು ದೆಯ್ಯಾರ್ ಹೇಳುತ್ತಾರೆ. ಅರಸರಲ್ಲಿ ದೊಡ್ಡವರು ಮಂಗಳೂರು ಅರಸರು. ಮಂಗಳೂರು ಅರಸರ ಹತ್ತಿರ ನನಗೆ ಹೋಗಬೇಕು ಹೆಸರು ಕುಲ ಕರೆಸಿಕೊಂಡು ಬರಬೇಕೆಂದು ಕುಮಾರ ಹೇಳುತ್ತಾರೆ. ನನ್ನ ಪಲ್ಲಕಿ ಬೇಗೆ ಸಿಂಗಾರ ಮಾಡಿಸಿ ಎಂದು ಕುಮಾರ ಹೇಳುವರು. “ನರಿಂಗಾಣದ ನಾವುಡ ಬನ್ನಾಯ ಸೇರಲಿ ಕೈರಂಗಳ ಉಪ್ಪಿ ಬನ್ನಾಯ ಸೇರಲಿ. ಅಮ್ಮೆಂಬಳದ ಪೂಂಜನವರು ಸೇರಲಿ, ಬೋಳ್ಮದ ಅಡ್ಯಂತಾಯರು ಸೇರಲಿ. ಮಡ್ವದ ಬಾಲಿಕಾರಿ ಸೇರಲಿ” ಎಂದು ಕುಮಾರ ಹೇಳುವರು. ಪರಾಡಿ ಕಾಂತು, ಪರಾಡಿ ಮುಂಗಳ ಸೇರಲಿ. ಐದು ನೂರು ಮಂದಿ ದೇಸಿಂಗ ಅರಸುಗಳು ಕುಮಾರನ ದಂಡಿಗೆಯನ್ನು ಸಿಂಗಾರ ಮಾಡಿದರು. ಕೊಟಜೆ ಜನದಲ್ಲಿ ಬೀಡಿನಲ್ಲಿ ಕುಮಾರನದಂಡಿಗೆ ಸಿಂಗಾರ ಆಯಿತು. ಕುಮಾರ ಮಂಗಳೂರಿನ ಕರ್ತುಗಳಿಗೆ ಪಾದ ಕಾಣಿಕೆ ಮಾಡಲು ಅರವತ್ತು ತೂಕದ ಬಂಗಾರದ ಗಿಳಿಯ ಕೆಲಸ ಮಾಡಿಸಿದ್ದಾರೆ. ಪೂರ್ತಿ ಸಿಂಗಾರ ಆದರು ಕುಮಾರ. ದಂಡಿಗೆಯಲ್ಲಿ ಬಂಗಾರದ ಗಿಳಿಯನ್ನು ಇಟ್ಟರು. ದಂಡಿಗೆಯಲ್ಲಿ ಬಂಗಾರದ ಗಿಳಿಯನ್ನು ಇಟ್ಟರು. ದಂಡಿಗೆಯಲ್ಲಿ ಕುಳಿತರು. ಕೂಟಜೆ ಜನನದ ಬೀಡು ಬಿಟ್ಟರು ಪಡಿಕಲ್ಲಿನ ಅಣಿ ಹಿಡಿದರು. ಎದುರಿನಲ್ಲಿ ಪರಿಕಲ್ಲಾಯೆ ಎಂಬ ಭೂತ ದಂಡಿಗೆಯ ಕೊಂಬನ್ನು ಹಿಡಿದ. “ಓ ಪಡಿಕಲ್ಲಾಯ ಹೆಸರು, ಹುಟ್ಟು ಕಟ್ಟು ಕರೆಸಲು ಮಂಗಳೂರು ಕರ್ತುಲ ಹತ್ತಿರಕ್ಕೆ ಹೋಗುತ್ತೇನೆ. ಹೆಸರು ಕರೆಸಿಕೊಂಡು ಬಂದ ಮೇಲೆ ನಿನಗೆ ಸ್ಥಾನ ಕಟ್ಟಿ ನಂಬಿಸುವೆ”. ಅಷ್ಟು ಮಾತು ಕೇಳಿದ ಪಡಿಕಲ್ಲಾಯ ದಂಡಿಗೆಯ ಕೊಂಬನ್ನು ಬಿಟ್ಟನು.

ನೀರು ನೀಡುವ ಕಟ್ಟೆ ದಾಟಿದರು. ಪೊಟ್ಟು ಪೊಳಿಂಕೆ, ಧರ್ಮಪಡ್ಪು ಕುಮಾರ ದಂಡಿಗೆ ದಾಟಿತು. ದುಗ್ಗಜ್ಜರ ಕಟ್ಟೆ ದಾಟಿತು. ನಾಗರಹಾವು ಹರಿವ ಪಾದೆ ದಾಟಿತು, ಮಲ್ಯಾಲ್ದಿ ಕಾಡು ದಾಟಿತು, ತುಂಬೆಯ ಕಟ್ಟೆ ದಾಟಿತು. ಲಾಡದ ಅಣಿ ರೆಂಜಾಡಿ ಕಾಲು ಸೇತುವೆ ದಾಟಿತು, ಕೆಳಗಿನ ಕಲಾಯಿ ಮೇಲಿನ ಕಲಾಯಿಯನ್ನು ದಾಟಿದರು, ಕಿಲ್ಲಂಬಳೆ ಜನನ ದಾಟಿದರು, ಪಟ್ಟೋರಿ ಕೋಡಿ ಬೊಟ್ಟುಗು ಕುಮಾರ ದಂಡಿಗೆ ಬಂದಿತು. ಪಟ್ಟೋರಿ ಕೊಣಾಜೆಯ ಬೀಡು ದಾಟಿದರು, ಕಳಿಮಾರ ಗೋಳಿ ದಾಟಿತು, ಬೊಳ್ಮ ಇಂದ್ರಾಲ ದಾಟಿದರು. ಕುಮಾರ ದಂಡಿಗೆ ಕೋರಿಕಟ್ಟೆ ಪಿಲದಲ್ಲಿಗೆ ಬರುತ್ತದೆ. ಕೋರಿಕಟ್ಟೆ, ಪಿಲದಲ್ಲಿ ದಂಡಿಗೆ ನಿಲ್ಲಲಿ ಎಂದು ಕುಮಾರ ಹೇಳುತ್ತಾರೆ. ದಂಡಿಗೆಯಿಂದ ಕುಮಾರ ಇಳಿದರು. ಕೋರಿಕಟ್ಟೆ ಪಿಲದಲ್ಲಿ ಕುಳಿತು ವೀಳ್ಯದ ಪೆಟ್ಟಿಗೆ ತೆರೆದರು. ಬಾಯಿಸೊಗಸಿಗೆ ಕಾಯಿ ತಿಂದರು. ಬಿಸಿಲು ಬಂದಿತು ಹೋಗುವಾಗ ಹೋಗುತ್ತೇವೆ ಬರುವಾಗ ಬರುತ್ತೇವೆ. ನನ್ನ ವೀಳ್ಯದ ಪೆಟ್ಟಿಗೆ ಇರಲಿ ಎಂದು ಕೋಳಿಕಟ್ಟೆ ಪಿಲದಲ್ಲಿ ಇಡುತ್ತಾರೆ. ದಂಡಿಗೆಯಲ್ಲಿ ಕುಳಿತರು. ಕೋರಿಕಟ್ಟೆ ಪಿಲವನ್ನು ದಾಟಿದರು. ಏರಿಯಾಳ ಒಂದು ಕೈ ಎರಡು ಪಟ್ಟದ ಎಂಬ ಜಾಗವನ್ನು ದಾಟಿದರು. ಬಂಗದ ಕರಿಯಕ್ಕೆ ಬರುವರು ಬಾಯಿ ಸೊಗಸಿನ ಕಾಯಿ ತಿಂದರು. ಏರಿಯ ಕಡಪ್ಪಿನ ಕುಂಞ ಎಂದು ಕರೆಯುತ್ತಾರೆ. ದೋಣಿ ತಾ ಎಂದು ಕುಂಞನಲ್ಲಿ ಹೇಳುತ್ತಾರೆ. ತೊಳೆದು ಕಟ್ಟಿದ ದೋಣಿಯನ್ನು ಬಿಡುವುದಿಲ್ಲ ಎಂದು ಕುಂಞ ಹೇಳಿದ. ದೋಣಿಗೆ ಬಾಡಿಗೆ, ದಾಟುವ ಸ್ಥಳಕ್ಕೆ ಹಣ ನಾನು ಕೊಡುತ್ತೇನೆಂದು ಕುಮಾರ ಹೇಳಿದರು. ಅದನ್ನು ಕೇಳಿದ ಕಡಪಿನ ಕುಂಞ ಹೇಳಿದ, ತೊಳೆದು ಕಟ್ಟಿದ ದೋಣಿಯನ್ನು ಬಿಡುವುದಿಲ್ಲ. ನೀವು ಹಿಂದೆ ಹೋಗಿ. ಅದನ್ನು ಕೇಳಿದ ಕುಮಾರ ಬಂಗಬಾಳೆಯ ತುದಿಯ ತುಂಡು ಎಲೆಯನ್ನು ತರಿಸಿ, ನಾನು ಸತ್ಯದಲ್ಲಿ ಹುಟ್ಟಿ ಬೆಳೆದ ಮಗ ಹೌದಾದರೆ ನನ್ನ ದಂಡಿಗೆ, ಮುಂದೆ ಎಲೆಯಲ್ಲಿ ಆ ಬದಿಗೆ ಹೋಗಬೇಕು ಎನ್ನುತ್ತಾರೆ ಕುಮಾರ. ದಂಡಿಗೆ ಆ ಬದಿಗೆ ಹೋಗುತ್ತದೆ.

ಮಂಗಳೂರು ಅರಸರ ಅರಮನೆಗೆ ಕುಮಾರನ ದಂಡಿಗೆ ಹೋಗಿದೆ. ಎಲ್ಲಿಂದ ಬಂದೆ ಎಲ್ಲಿಗೆ ಹೋಗಬೇಕೆಂದು ಅರಸರು ಕೇಳಿದರು. ನಾನು ಕೊಟಜೆ ಬೀಡಿನಲ್ಲಿ ಸತ್ಯದಲ್ಲಿ ಹುಟ್ಟಿ ಸೌದದಲ್ಲಿ ಬೆಳೆದವನು. ಹೆಸರು ಇಲ್ಲದ ಕುಮಾರನಿಗೆ ನೀವು ಹೆಸರು ಇಡಬೇಕೆಂದು ಕುಮಾರ ಭಿನ್ನವಿಸುತ್ತಾರೆ. ಕೊಂಡೊಯ್ದ ಅರವತ್ತು ತೂಕದ ಗಿಳಿಯನ್ನು ಅರಸರ ಪಾದಕ್ಕೆ ಕಾಣಿಕೆಯಾಗಿ ಒಪ್ಪಿಸಿದರು. ಮಂಗಳೂರು ಕರ್ತುಗಳು ಮಂಗಳೂರು ಸಂಸ್ಥಾನದ ಪ್ರಮುಖರಲ್ಲಿ ಕರೆಸಿದರು. ಕುಮಾರನಿಗೆ ಹಾಲು ಕೊಟ್ಟು ಅರಸರು ಹೆಸರು ಇಟ್ಟರು. ಸತ್ಯದಲ್ಲಿ ಹುಟ್ಟಿ ಸೌದದಲ್ಲಿ ಬೆಳೆದ ಮಗ ನೀನು, “ಬಾಲೆ ಬಂಟಾಳ್ವೆ” ಎಂಬ ಹೆಸರನ್ನು ಮಂಗಳೂರು ಕರ್ತುಗಳು ಕರೆದರು. ಹೆಸರು ಇಲ್ಲದ ಮಗ ಕುಮಾರ ಹೆಸರು ಕರೆಸಿಕೊಂಡು ಕದ್ರಿ ಮಂಜುನಾಥ ದೇವರ ಅಂಗಣಕ್ಕೆ ಬರುತ್ತಾರೆ. ಜೋಗಿ ಪೂಜಾರಿಯನ್ನು ಹೊರಗೆ ಕರೆಯಿಸಿ. ಬಾಲ ಬ್ರಾಹ್ಮಣನಿಂದ ಪಾದ ಪೂಜೆ ಮಾಡಿಸಿದರು. ಕದ್ರಿಯ ಕಂಬಳಕ್ಕೆ ಬಾಲೆ ಹಾಕಿಸಿದರು. ಬಂಟಾಳ್ವರು ಪೂಕರೆ ಹಾಕಿಸಿದರು. ಅಲ್ಲಿಂದ ಹಿಂತಿರುಗಿ ಕುಮಾರು ಬರುತ್ತಾರೆ. ಮಂಗಳೂರು ಕುದುರಿಗೆ ದೆಯ್ಯಾರೆ ಮತ್ತು ಕುಮಾರ ಬಂದರು. ಮಂಗಳೂರು ಕಡವು ದಾಟಿಕೊಂಡು ಬಂದ ತಾಯಿ ಮಗ ಮಾಯಕ ಆದರು. ಭೂತ ಕಟ್ಟುವ ವ್ಯಕ್ತಿಗಳು (ಇಸಮಕ್ಕಳೆ) ಮತ್ತು ಮೂಲ್ಯ ಮಾನಿಗಳು ಈ ಕಡವಿನಲ್ಲಿ ದಾಟಬಾರದು ಎಂದು ಶಾಪಕೊಟ್ಟರು. ಮಂಗಳೂರು ಕಡವು ದಾಟಿಕೊಂಡು ಕೊಟಜೆ ಜನನದ ಬೀಡಿಗೆ ಬಂದರು. ನೂರಾಳು ಮತ್ತು ಮೂರು ಪಕ್ಕದ ಗ್ರಾಮದ ಮಕ್ಕಳಿಗೆ ಹೆಸರು ಇರಿಸಲು ಹೋದ ಕುಮಾರ “ಬಾಲೆ ಬಂಟಾಳ್ವ” ಎಂದು ಹೆಸರು ಕರೆಯಿಸಿಕೊಂಡು ಬಂದಿದ್ದೇನೆ. ನನಗೆ ಅರಮನೆ ಮಾಡಬೇಕೆಂದು ಹೇಳಿದರು. ನೂರಾಳು ಮತ್ತು ಮೂವರು ಪಕ್ಕಂದ ಮೂಲೊಳಿಗೆಯಲ್ಲಿ ನಮಗೆ ಮಾಡ ಆಗಿದೆ ಎಂದು ಹೇಳಿದರು. ಆ ಕಾಲದಲ್ಲಿ ಮುಲೊಳಿಗೆಯ ದೈವ ಎಂದು ಕರೆಸಿಕೊಂಡರು. ನೂರಾಳು ಮೂರು ಊರಿನ “ಪಕ್ಕಂದಾಜೇವು” ಪೊಯ್ಯೆತ್ತಾಯ ಮನೆತನದವರು ಸೇರಿ ಕೊಟ್ಟ ಮಾಡ ವಲಕುಂಜದಲ್ಲಿನ ಮಾಡ ಎಂದಾಯಿತು. ತೋಡಕ್ಕಿನಾರ ಮಾಡಕ್ಕೆ ನಮ್ಮನ್ನು ಕರೆಯಬೇಕೆಂದು ಹೇಳಿದರು. ತಾಯಿ ಮತ್ತು ಮಗನನ್ನು ಮೂಲೊಳಿಗೆಯ ಮಾಡದಿಂದ ವಲಕುಂಜ ಮಾಡಕ್ಕೆ ಕರೆಯಿಸಿದರು. ತೋಡಕ್ಕಿನಾರ್ ಕಟ್ಟಿದ ಸಿರಿಮುಡಿಯಲ್ಲಿ ಓಲಗವಾಗಿದ್ದಾರೆ. ನಾಲ್ಕು ಜನ ಪೊಯ್ಯೊತ್ತಾಯ ಮನೆತನದವರನ್ನು ಮಾಯಕದಲ್ಲಿ ದೈವ ಕರೆಸಿತು. ನಾವು ಅಣ್ಣ ತಮ್ಮ ಎಂದು ಮಾಯಕದಲ್ಲಿ ಅಪ್ಪಣೆ ಆಯಿತು. ಮಾಡಕ್ಕೆ ಗುತ್ತು ಬೀಡು ಬೇಕೆಂದು ಅಪ್ಪಣೆ ಆಯಿತು. ಪೊಯ್ಯತ್ತಾಯ ಮನೆತನದವರ ಬೀಡು ತನಗೆ ಎಂದು ತೋಡಕ್ಕಿನಾರನು  ಅಪ್ಪಣೆ ಕೊಡಿಸಿದರು. ನಾರ್ಯದ ಗುತ್ತು ಮಾಯಕದಲ್ಲಿಸ ನನಗೆ ಒಂದು ಅವರ ಅಪ್ಪಣೆ ಆಯಿತು. ಪೊಯ್ಯತ್ತಾಯದ ಬೀಡು ನಾರ್ಯಗುತ್ತು ನಿಮಗಾದರೆ ನನಗೆ ಯಾವುದು ಎಂದು ಬಂಟ ಜಾವದೆಯ ಅಪ್ಪಣೆಯಾಗುತ್ತದೆ. ತಂಗಿ ನಿನಗೆ ನಡಿಯಾಲಗುತ್ತು ಎಂದು ತೋಡಕ್ಕಿನಾರ್ ಹೇಳಿದರು. ಮೂಲೊಳಿಗೆಯಲ್ಲಿ ಮೊದಲ ನೇಮ ನನಗೆ ಆಗಬೇಕು ಎಂದರು. ಅಮ್ಮನ ಮತ್ತು ಮಗನ ಸತ್ಯ ದಂಡಿಗೆ ಮೂರು ಪಕ್ಕ ಸ್ಥಳಗಳಿಗೆ ಬಂದರೆ (ಕೋಟದ) ಮೊದಲ ನೇಮ ನನಗಾದರೆ ನಡು ನೇಮ ನಿಮಗೆಂದು ಹೇಳಿದರು. ನಿನಗೆ ಅಕ್ಕನಿಗೆ ಮೂರು ಪಕ್ಕದ ಮಾಯಗಾರರು ಎಂದು ಹೇಳುವರು. ಮೂವರು ದೈವಗಳು ಒಂದೇ ಮಾಡದಲ್ಲಿ ಇದ್ದಾರೆ.

 

ದೈವಾರಾಧನೆಯುವ ಪ್ರದೇಶಗಳ ಕುರಿತ ಕೆಲವು ಐತಿಹ್ಯಗಳು

ಐಹಿತ್ಯ

ವಿಟ್ಲದ ರಾಜನ ಮಗಳು ಪುಣ್ಯವತಿ ಎಂಬಾಕೆಯು ಶಿವನ ಪೂಜೆಗೆ ದಿನಾಲೂ ಹೂ ಕೊಯ್ಯಲು ಕೆಲಿಂಜದ ಕಾಡಿಗೆ ಹೋಗುತ್ತಿದ್ದಳು. ಅವಳ ಭಕ್ತಿಗೆ ಮೆಚ್ಚಿದ ಶಿವನು ಅವಳನ್ನು ಪರೀಕ್ಷೆ ಮಾಡಬೇಕೆಂದು ಆಲೋಚಿಸುತ್ತಾನೆ. ಒಂದು ದಿವಸ ಪುಣ್ಯವತಿಯು ಹೂ ಕೊಯ್ಯಲು ಹೋದಾಗ ಕಾಡಿನಲ್ಲಿ ಒಂದು ಹಾವು ಅವಳನ್ನು ಬೆನ್ನಟ್ಟುತ್ತದೆ. ಅವಳು ಹೆದರಿ ಶಿವನನ್ನು ನೆನೆಯುತ್ತಾಳೆ. ಇದುವೇ ಸರಿಯಾದ ಸಮಯವೆಂದು ಶಿವನು ಬೇಡನ ವೇಷದಲ್ಲಿ ಬಂದು ಹಾವನ್ನು ಬೆನ್ನಟ್ಟುತ್ತಾನೆ. ಕಾಡಿನಲ್ಲಿ ಬೇಡ ಮತ್ತು ಪುಣ್ಯವತಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಅವರ ಪ್ರೀತಿಯ ಫಲವಾಗಿ ರಾಜಕುಮಾರಿಯು ಗರ್ಭಿಣಿಯಾಗುತ್ತಾಳೆ. ಅವಳಿಗೆ ತಾನು ಮಾಡಿದ ತಪ್ಪಿನ ಅತಿವಾಗಿ ಭಯವಾಗುತ್ತದೆ. ಇನ್ನು ತನ್ನ ತಂದೆಗೆ ವಿಷಯ ತಿಳಿದರೆ ತನಗೆ ಉಳಿವಿಲ್ಲ. ತನಗೆ ಆತ್ಮಹತ್ಯೆ ಒಂದೇ ಉಳಿದಿರುವ ದಾರಿಯೆಂದು ಆಕೆ ದುಃಖಿಸುತ್ತಿರುವಾಗ ಅಶರೀರವಾಣಿಯೊಂದು ಆಕೆಗೆ ಧೈರ್ಯವನ್ನು ನೀಡುತ್ತದೆ. “ಮಗಳೇ, ನೀನು ಭಯ ಪಡಬೇಡ. ನಿನ್ನ ಹೊಟ್ಟೆಯಲ್ಲಿ ಐದು ಹೆಣ್ಣು ಮಕ್ಕಳು ಹುಟ್ಟುವರು, ಅವರು ಒಳ್ಳೆಯ ಹೆಸರನ್ನು ಗಳಿಸುತ್ತಾರೆ” ಈ ಮಾತನ್ನು ಕೇಳಿ ರಾಜಕುಮಾರಿಗೆ ಧೈರ್ಯ ಬರುತ್ತದೆ. ಅದೇ ರೀತಿ ರಾಣಿ ಐದು ಹೆಣ್ಣು ಮಕ್ಕಳನ್ನು ಹೆರುತ್ತಾಳೆ. ಈ ಐದು ಜನ ಹೆಣ್ಣೆ ಮಕ್ಕಳು ಕೆಲಿಂಜಕ್ಕೆ ಬಂದು ಐದು ಜನ ಎಲ್ಲೆಲ್ಲಿ ನಿಲ್ಲುವುದೆಂದು ಚರ್ಚಿಸುವರು. ಆಗ ಕೆಲಿಂಜದ ಉಳ್ಳಾಲ್ತಿ ಮತ್ತು ಅನಂತಾಡಿಯ ಉಳ್ಳಾಲ್ತಿಗೆ ಜಗಳ ಉಂಟಾಗುವುದು. ಆಗ ಆನಂತಾಡಿ ಬಹಳ ಒಳ್ಳೆಯ ಸ್ಥಳವಾಗಿತ್ತು. ಆದ್ದರಿಂದ ಕೆಲಿಂಜದ ಉಳ್ಳಾಲ್ತಿ ತಾನು ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದಾಗ ಅನಂತಾಡಯ ಉಳ್ಳಾಲ್ತಿ ಸಿಟ್ಟಿನಿಂದ ಅಕ್ಕನನ್ನು ಬೆನ್ನಟ್ಟಿ ಕಾಲಿನಲ್ಲಿ ಒದೆಯುತ್ತಾಳೆ. ಬಲ್ನಾಡಿನ ಉಳ್ಳಾಲ್ತಿ ಇವರಿಬ್ಬರ ಜಗಳವನ್ನು ನಿಲ್ಲಿಸಿ ಕೆಲಿಂಜದ ಉಳ್ಳಾಲ್ತಿಯನ್ನು ಸಮಾಧಾನ ಮಾಡುವಳು. ಅದೇ ರೀತಿ ಅನಂತಾಡಿಯ ಉಳ್ಳಾಲ್ತಿಗೆ ಶಾಪವನ್ನು ಕೊಡುವಳು. “ನಿನ್ನ ನೇಮ, ಪೂಜೆ ಆಗುವುದಾದರೆ ಸುಡು ಬಿಸಿಲಿನಲ್ಲಿ ಆಗಲಿ. “ಆಗ ಕೆಲಿಂಜದ ಉಳ್ಳಾಲ್ತಿ ಅಕ್ಕನಲ್ಲಿ ನೀನು ಹೇಳುವ ಮಾತು ಸರಿ ಆದರೆ ನನ್ನ ಭಕ್ತರು ನನ್ನಲ್ಲಿಗೆ ಬಂದಾಗ ನಾನು ನನ್ನ ಕಾಲು ನೋವಿನಲ್ಲಿ ಅವರಿಗೆ ಹೇಗೆ ಅಭಯ ಕೊಡಲಿ ಎಂದು ಹೇಳಿದಾಗ ಬಲ್ನಾಡಿನ ಉಳ್ಳಾಲ್ತಿ ತಂದಿಯನ್ನು ಸಮಾಧಾನ ಮಾಡಿ, ನಿನ್ನ ಭಕ್ತರು ನಿನ್ನ ಬಳಿಗೆ ಬಂದರೆ ನೀನು ಅವರಿಗೆ (ಪಾಸು ಹಾಕಿ) ಮಲಗಿ ಅಭಯವನ್ನು ಕೊಡು. ನಿಂತು ಕೊಡುವ ಅಭಯಕ್ಕಿಂತ ಮಗಲಿ ಕೊಡುವ ಅಭಯ ಪ್ರಸಿದ್ಧಿಯನ್ನು ಪಡೆಯಲಿ ಎಂದು ತಂಗಿಯನ್ನು ಸಮಾಧಾನ ಮಾಡುವಳು. ಅಂತೆಯೇ ಉಳಿದ ನಾಲ್ಕು ಜನ ಅಕ್ಕ ತಂಗಿಯಂದಿರು ಅಲ್ಲಿಂದ ಬಲ್ನಾಡು, ಕೇಪು, ಅನಂತಾಡಿ, ಮಾಣಿ ಈ ಸ್ಥಳಗಳಿಗೆ ಹೋಗಿ ನೆಲೆ ನಿಲ್ಲುತ್ತಾರೆ. ಕೆಲಿಂಜದ ಉಳ್ಳಾಲ್ತಿ ಅಲ್ಲಿಂದ ಮೇಲೆ ಹೋಗುತ್ತಾಳೆ.

ಒಂದು ಕಾಸರಕ್ಕನ ಮರದ ಅಡಿಯಲ್ಲಿ ದನ ಮತ್ತು ಕರು, ಒಂದು ಹುಲಿ ಜೊತೆಯಾಗಿ ಆಡಿಕೊಂಡಿದ್ದೀತು. ಈ ವಿಚಿತ್ರವನ್ನು ನೋಡಿದ ಉಳ್ಳಾಪ್ತಿ ನನಗೆ ನಿಲ್ಲುವುದಕ್ಕೆ ಇದವೇ ಯೋಗ್ಯವಾದ ಸ್ಥಳ ಎಂದು ಯೋಚಿಸಿ ಅಲ್ಲಿಯೇ ಇದ್ದ ಒಂದು ಆಲದ ಮರದಲ್ಲಿ ಬಿಳಲಿಲ್ಲ ಉಯ್ಯಾಲೆ ಹಾಕಿ ಅದರಲ್ಲಿ ಕುಳಿತು ತನ್ನ ಆಯಾಸವನ್ನು ಪರಿಹರಿಸಿಕೊಳ್ಳುವಳು. ತನ್ನ ಭಕ್ತರನ್ನು ಹೇಗೆ ತನ್ನೆಡೆಗೆ ಸೆಳೆದುಕೊಳ್ಳುವುದು ಎಂದು ಆಲೋಚಿಸುವಳು.ಕೆಲಿಂಜನದಲ್ಲಿನ ಒಬ್ಬ ಬಿಲ್ಲವ ಕಳ್ಳು ಇಳಿಸುವ ಕೆಲಸ ಮಾಡುತ್ತಿದ್ದ ಅವನಿಗೆ ಏಳು ಜನ ಮಕ್ಕಳು. ಒಂದು ಹೆಣ್ಣು ಮಗಳು ಅಣ್ಣಂದಿರು ತೆಗೆದು ಕೊಟ್ಟ ಕಳ್ಳನ್ನು ತಂಗಿ ಸಾಗಿಸುವ ಕೆಲಸ ಮಾಡುತ್ತಿದ್ದಳು. ಅವಳು ಕಳ್ಳನ್ನು ಮಣ್ಣಿನ ಕೊಡದಲ್ಲಿ ಹೊತ್ತುಕೊಂಡು ಆ ದಾರಿಯಾಗಿ ಬರುವಾಗ ಉಯ್ಯಾಲೆಯಲ್ಲಿ ಕುಳಿತಿದ್ದ ಉಳ್ಳಾಲ್ತಿ ಅವಳನ್ನು ಕರೆದು ನನಗೆ ಸ್ವಲ್ಪ ಬಾಯಾರಿಕೆ ಕೊಡುವಿರಾ ಎಂದು ಕೇಳಿದಾಗ, ಬಿಲ್ಲವ ಹೆಣ್ಣು ತಲೆಯೆತ್ತಿ ಉಯ್ಯಾಲೆಯಲ್ಲಿ ಕುಳಿತಿದ್ದ ಉಳ್ಳಾಲ್ತಿಯನ್ನು ನೋಡುವಳು. ಅವರ ರೂಪವನ್ನು ನೋಡಿ ಮತ್ಸರ ತಡೆಯಲು ಸಾಧ್ಯವಾಗದೆ “ಅಬ್ಬಾ ಇವಳೇ ! ಸೊಕ್ಕಿದ ಹೆಣ್ಣೇ, ನಿನಗೆ ಶುಂಠಿ ಹಾಕಿದ ಕಷಾಯ. ನಿನಗೆ ಕೊಡುವ ಬಾಯಾರಿಕೆ ನನ್ನಲ್ಲಿ ಇಲ್ಲ, ಇದು ನನ್ನ ಗುತ್ತಿಗೆಯ ಅವರಿಗೆ ಕೊಡುವ ಬಾಯಾರಿಕೆ ಎಂದು ನೇರವಾಗಿ ಹೋಗುತ್ತಾಳೆ. ಉಳ್ಳಾಲ್ತಿಯು ಪೊಯ್ಯೆತ್ತಾಯಿ ಎನ್ನುವ ಗಣವನ್ನು ಕರೆದು ಅವಳ ಕೊಡದಲ್ಲಿ ನೊರೆ ನೊರೆ ಮಾತ್ರ ಉಳಿಸಿ ಕಳ್ಳನ್ನೆಲ್ಲಾ ಕುಡಿದು ಬಾ ಎಂದು ಹೇಳುತ್ತಾಳೆ. ಹಾಗೆಯೇ ಪೊಯ್ಯೆತ್ತಾಯಿಯು ಮಾಯಕದಲ್ಲಿ ಅವಳ ಕೊಡದ ಕಳ್ಳನ್ನು ಕುಡಿಯುತ್ತದೆ. ಅವಳು ಕೊಡವನ್ನು ಕೊಂಡೊಯ್ದು ಕೆಳಗಿಳಿಸಿ ನೋಡಿದಾಗ ಕಳ್ಳಿನ ಬದಲು ನೊರೆ ಮಾತ್ರ ತುಂಬಿತ್ತು. ಇದನ್ನು ನೋಡಿದ ಅವಳಿಗೆ ಆಶ್ಚರ್ಯ ಆಗುತ್ತದೆ. ಸಿಟ್ಟಿನ ಭರದಲ್ಲಿ ಒಳಗೆ ಹೋಗುವಾಗ ಹೊಸ್ತಿಲು ಹೊಡೆದು ಸಾಯುತ್ತಾಳೆ. ಈ ವಿಷಯ ಮನೆಗೆ ಅಣ್ಣಂದಿರಿಗೆ ತಿಳಿದು ಅಣ್ಣಂದಿರು ಬಹಳ ದುಃಖಿತರಾಗಿ, ತಂಗಿಯ ಹೆಣವನ್ನು ತೆಗೆದು ಚಿತೆಯಲ್ಲಿ ಇಟ್ಟು, ಅವರು ಮನೆಗೆ ಬರುತ್ತಾರೆ. ಅವರು ಮನೆಗೆ ಹೋಗ ಕೂಡಲೇ ಗಂಡಗಣಗಳು ಅವಳ ಹೆಣವನ್ನು ಚಿತೆಯಿಂದ ಎಳೆದು ಹಾಕಿ ಅದನ್ನು ಮಾಂಸ ಮಾಡಿ ಅದಕ್ಕೆ ಕೂದಲು ಉಗುರು ಹಾಕಿ ಅದನ್ನು ಇಟ್ಟೇವು (ಅಗಲವಾದ ಎಲೆಗಳಿರುವ ಒಂದು ಜಾತಿಯ ಗಿಡ) ಗಿಡದ ಎಲೆಯಲ್ಲಿ ಕಟ್ಟಿ ಅದನ್ನು ಆ ಊರಿನ ಮುಖ್ಯಸ್ಥರುಗಳ ಮನೆಯ ತೂಗುಬದಿಯಲ್ಲಿ ಇಟ್ಟು ಹೋಗುತ್ತಾರೆ. ಮರುದಿನ ಮನೆಯ ಹೆಂಗಸರು ಗುಡಿಸಿಕೊಂಡು ಹೋಗುವಾಗ ತೂಗುಬಲ ತನ್ನಷ್ಟಕ್ಕೆ ಅಲ್ಲಾಡುತ್ತಿತ್ತು. ಇದು ಏನು ಕತೆ ಎಂದು ಬಲದಲ್ಲಿರುವ ಕಟ್ಟನ್ನು ನೋಡಿ ಆಶ್ಚರ್ಯಗೊಳ್ಳುತ್ತಾರೆ. ಬಾವಿಯ ನೀರು ರಕ್ತದಂತೆ ಕೆಂಪಾಗಿತ್ತು. ಹಾಕಿದ ಗಂಜಿಯಲ್ಲಿ ತಲೆ ಕೂದಲು ಉಗುರು ಇತ್ತು. ಊರಿನ ಜನರಿಂದಲೂ ಇದೇ ರೀತಿಯ ಸುದ್ದಿ ಬರುತ್ತದೆ. ಈ ಹೆಣವನ್ನು ಮಾಂಸ ಮಾಡಿದ ಸ್ಥಳಕ್ಕೆ “ಪಾಲ್ತಿಮಾರ್” ಎಂದೂ, ಅವಳ ತಲೆಯ ಚೌರಿ (ಕೂದಲು)ಯನ್ನು ಎಸೆದ ಸ್ಥಳಕ್ಕೆ “ಉಜಿರಿಸ್ತಿಮಾರ್” ಎಂದೂ, ಅವಳ ಕರುಳನ್ನು ಎಸೆದ ಸ್ಥಳಕ್ಕೆ “ಪೆರಿಮಾರ್” ಎಂದೂ ಹೆಸರು ಬಂದಿತು. ಈ ರೀತಿಯ ಘಟನೆಯಿಂದ ಕಂಗಾಲಾದ ಊರಿನ ಮುಖ್ಯಸ್ಥರು ಒಟ್ಟು ಸೇರಿ ನೀಲೇಶ್ವರದ ತಂತ್ರಿಗಳ ಬಳಿಗೆ ಹೋಗಿ ಕವಡೆ ಹಾಕಿಸಿ ಪ್ರಶ್ನೆ ಕೇಳುವರು. ಉಳ್ಳಾಲ್ತಿ ಎನ್ನುವ ದೈವ ನಿಮ್ಮ ಊರಿನಲ್ಲಿ ನೆಲೆ ಆಗುವುದಕ್ಕೆ ಬಯಸಿದೆ, ಅದಕ್ಕೆ ಬೇಕಾದ ಸ್ಥಾನಮಾನವನ್ನು ಒದಗಿಸಿ ಕೊಡಬೇಕೆಂಬ ಉದ್ದೇಶದಿಂದ ಜನಪಿಗೆ ನಂಬಿಕೆ ಹುಟ್ಟಿಸುವ ಸಲುವಾಗಿ ಈ ಘಟನೆಗಳು ನಡೆದಿವೆ

ಉಳ್ಳಾಲ್ತಿ ತನಗೊಂದು ಯೋಗ್ಯವಾದ ಗುರಿಕಾರ ಬೇಕೆಂದು ಹುಡುಕಿಕೊಂಡು ಬೆಂಞತ್ತಿಮಾರ್ ಎಂಬಲ್ಲಿಗೆ ಬರುತ್ತಾಳೆ. ಅಲ್ಲಿಯ ಭೂಮಿ ಬಹಳ ಸಮೃದ್ಧವಾಗಿತ್ತು. ಅಲ್ಲಿ ಗುವೆಲಣ್ಣ ಎಂಬ ಕುಟುಂಬದವರು ಆಳ್ವಿಕೆ ಮಾಡಿಕೊಂಡಿದ್ದರು. ಉಳ್ಳಾಲ್ತಿಯು ಗುವೆಲಣ್ಣ ಕುಟುಂಬದವರನ್ನು ತನ್ನ ಬಂಟರನ್ನಾಗಿ ಆಯ್ಕೆ ಮಾಡಿದಳು. ಮನಾಳ್ವ, ಮದನಾಳ್ವ ಅವರಲ್ಲಿ ಮುಖ್ಯರು. ಅವರು ಅಣ್ಣ ತಮ್ಮಂದಿರು. ಉಳ್ಳಾಲ್ತಿ ಸಿಮ್ಲಾಜೆಗೆ ಬಂದು ಅಲ್ಲಿಂದ ಕಲ್ಲಮರೆಯೆಗೆ ಬರುವಾಗ ಉಳ್ಳಾಲ್ತಿಯನ್ನು ಹಿಡಿಯಲು ಏಳು ಜನ ತಂತ್ರಿಗಳು ಕಾದು ಕೂಡುವರು. ಅಲ್ಲಿಗೆ ಬಂದ ಉಳ್ಳಾಲ್ತಿ ಆ ಏಳು ಜನ ತಂತ್ರಿಗಳನ್ನು ನೀರಿನಲ್ಲಿ ಮುಗುಗಿಸಿ ಕೊಲ್ಲುತ್ತಾಳೆ.

ಕಾಲಕ್ರಮೇಣ ಗುವೆಲಣ್ಣ ಕುಟುಂಬವು ನಾಶವಾಗಿ ಉಳಿದ ಕೆಲವರು ದಕ್ಷಿಣ ದೇಶಕ್ಕೆ ಪಲಾಯನ ಮಾಡಿದರು. ಅವರು ದುಶ್ಚಟಗಳಿಗೆ ಬಲಿಯಾಗಿ ಸಂಪತ್ತನ್ನು ಕಳಕೊಳ್ಳುವರು. ತ್ಯಾಂಪಣ್ಣ ರೈ ಎಂಬುವರಲ್ಲಿ ಅವರು ಸಾಲವನ್ನು ಮಾಡಿದ್ದ ಕಾರಣ ಅವರು ಬಂದು ಅಲ್ಲಿನ ಅಧಿಕಾರವನ್ನು ವಹಿಸಿಕೊಳ್ಳುವರು. ಅವರ ಕನಸಿನಲ್ಲಿ ಉಳ್ಳಾಲ್ತಿಗೆ “ಮೆಚ್ಚಿ” (ಉಳ್ಳಾಲ್ತಿ ನೇಮ) ಕೊಡಬೇಕೆಂದು ಮನಸ್ಸಾಗುತ್ತದೆ. ಹಾಗೆಯೇ ಅವರು ಬಹಳ ವಿಜೃಂಭಣೆಯಿಂದ ಮೆಚ್ಚಿಯನ್ನು ಮಾಡಿಸುತ್ತಾರೆ. ದಕ್ಷಿಣ ದೇಶದಲ್ಲಿದ್ದ ವೇದಾಳ್ವ, ಕಂಞಳ್ವರಿಗೆ ಮೆಚ್ಚಿಯ ದಿನ ರಾತ್ರಿ ಕನಸು ಬೀಳುತ್ತದೆ. “ನಿಮ್ಮ ಮೂಲಸ್ಥಾನವಾದ ಬೆಂಞಮಾರಿನಲ್ಲಿ ಧರ್ಮನೇಮ ಆಗುತ್ತಿದೆ. ನೀವು ಈಗಲೇ ಅಲ್ಲಿಗೆ ಹೋಗಿ. ” ಆ ರಾತ್ರಿಯೇ ಅವರು ಹುಚ್ಚರಂತೆ ಬಂದು ವಿಟ್ಲರ ಅರಮನೆಯ ಮುಂಭಾಗದಲ್ಲಿದ್ದ ಹಲಸಿನಮರದಿಂದ ಕಾಯಿಗಳನ್ನು ಕಡಿದು ಹಾಕುವರು. ರಾಜನಿಗೆ ರಾತ್ರಿ ಕನಸಿನಲ್ಲಿ ದೇವಿ ಕಂಡು, ಅವರು ನನ್ನ ಜನರು ಅವರನ್ನು ಬಿಟ್ಟುಬಿಡು ಎಂದು ಹೇಳುತ್ತಾಳೆ. ಅದೇ ರೀತಿ ರಾಜ ಅವರಿಬ್ಬರನ್ನು ಬಿಡುವುದಕ್ಕೆ ಅಪ್ಪಣೆ ಕೊಡುತ್ತಾನೆ. ಅಲ್ಲಿಂದ ಅವರು ಬೆಂಞನಮಾರ್ಗೆ ಬಂದು ಒಂದು ಮೂಲೆಯಲ್ಲಿ ಮಲಗುವರು. ಆ ಸಮಯಕ್ಕೆ ದೈವ ತ್ಯಾಂಪಣ್ಣ ರೈಗಳನ್ನು ಕರೆದು “ಯಮದೂತರು ಬಂದು ಕೇಳುವಾಗ ಜೀವ ಕೊಡಬೇಕು, ಭೂಮಿಯ ಹಕ್ಕುದಾರರು ಬರುವಾಗ ಭೂಮಿಯ ಬಿಟ್ಟು ಕೊಡಬೇಕು” ಎಂಬ ಮಾತೊಂದಿದೆ. ಅದೇ ರೀತಿ ಈ ಭೂಮಿಯ ನಿಜವಾದ ಹಕ್ಕುದಾರರು ಬಂದಿದ್ದಾರೆ, ಅವರಿಗೆ ಈ ಭೂಮಿಯನ್ನು ನೀನು ಬಿಟ್ಟು ಕೊಡಬೇಕು ಎಂದು ಹೇಳಿದಾಗ ತ್ಯಾಂಪಣ್ಣ ರೈ ದೈವದ ಮಾತನ್ನು ಒಪ್ಪದೆ ಒಳಗಿದ್ದ ಉಯ್ಯಾಲೆಯಲ್ಲಿ ಹೋಗಿ ಮಲಗುತ್ತಾರೆ. ಆಗ ಒಂದು ಹಾವು ಬಂದು ಅವರ ಕಾಲಿಗೆ ಕಚ್ಚುತ್ತದೆ. ಅವರು ಬೊಬ್ಬೆ ಹೊಡೆದಾಗ ಮನೆಯವರು ಓಡಿ ಬಂದು ದೈವದಲ್ಲಿ ವಿಷಯವನ್ನು ತಿಳಿಸುವರು. ಅವನಿಗೆ ನನ್ನ ಹೂಜಿಯ ತೀರ್ಥ ಪ್ರಸಾದ ಕೊಡಿ ಏಳುತ್ತಾನೆ ಎಂದಾಗ, ಅವರು ಹೂಜಿಯ ತೀರ್ಥವನ್ನು ಕುಡಿಸುವರು. ಅವರು ನಿದ್ದೆಯಿಂದ ಎದ್ದು ಕುಳಿತವರಂತೆ ಕುಳಿತು ದೈವದಲ್ಲಿ ನನ್ನದು ತಪ್ಪಾಯಿತು ಎಂದು ಹೇಳಿ ತಾನು ಮಾಡಿದ ಸಂಪತ್ತನ್ನು ತೆಗೆದುಕೊಂಡು ಅನಂತಾಡಿಗೆ ಹೋಗುವರು.

ವೇದಾಳ್ವ ಮತ್ತು ಕುಂಞಳ್ವ ಅಣ್ಣ ತಮ್ಮಂದಿರು ಕೆಲಿಂಜ ಮತ್ತು ಬೆಂಞನಮಾರಿನ ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಕೆಲವು ಸಮಯಗಳ ನಂತರ ಇವರ ಮೊಮ್ಮಕ್ಕಳಾದ ಮದನಾಳ್ವ, ದೈವಾಳ್ವ ಎಂಬುವರು ಅಧಿಕಾರಕ್ಕೆ ಬರುತ್ತಾರೆ. ದೈವಾಳ್ವನ ಅಕ್ಕನ ಮಕ್ಕಳು ಅಪ್ಪಕ್ಕೆ ಮತ್ತು ಗುಡಕ್ಕೆ . ದೊಡ್ಡವಳನ್ನು ತೆಕ್ಯಾಪಿಗೆ ಸಣ್ಣವಳನ್ನು ದೈವಾಳ್ವನ ಮಗ ಐತಾಳ್ವನಿಗೆ ಮದುವೆ ಮಾಡಿ ಕೊಡುತ್ತಾರೆ. ಆದರೆ ಅವರಿಗೆ ಗಂಡು ಸಂತಾನ ಇರಲಿಲ್ಲ. ಅದಕ್ಕಾಗಿ ಅವರು ಗಂಡು ಮಕ್ಕಳಾಗಲಿ ಎಂದು ಪ್ರಾರ್ಥಿಸುವರು. ಗುಡ್ಡಕ್ಕೆಗೆ ಎರಡು ಹೆಣ್ಣು, ಒಂದು ಗಂಡು ಮಗು ಹುಟ್ಟುತ್ತದೆ. ಈ ಗಂಡು ಮಗುವೇ ಗುಡ್ಡಾಳ್ವ. ಗುಡ್ಡಾಳ್ವ ಸಣ್ಣವನಿರುವಾಗ ಇಲ್ಲಿ ಗಂಡಸರು ಯಾರೂ ಇಲ್ಲವೆಂದು ತಿಳಿದು ಒಕ್ಕೆತ್ತೂರಿನ ಅಳ್ಳ ಸಾಹೇಬ ಎಂಬುವನು ಇವರನ್ನು ಸುಲಭವಾಗಿ ಮೋಸ ಮಾಡಬಹುದೆಂದು ಯೋಚಿಸಿ ಇವರಲ್ಲಿ ಬಂದು ಇವರ ಭುಮಿಯನ್ನು ಸ್ವಾಧೀನ ಮಾಡಲು ಪ್ರಯತ್ನಿಸುತ್ತಾನೆ. ಐತಾಳ್ವ ದುಡ್ಡಿನ ಸಮಸ್ಯೆಯಿಂದ ಗದ್ದೆಯನ್ನು ವಾಯಿದೆ ಗೇಣಿಗೆ ಅಳ್ಳ ಸಾಹೇಬನಿಗೆ ಕೊಡುತ್ತಾರೆ. ಅವನು ಮೋಸದಿಂದ ಇವರ ಸಹಿಯನ್ನು ಪಡೆದು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಬಡತನದಲ್ಲಿ ಗಂಜಿಗೂ ಕೂಡ ಗತಿ ಇಲ್ಲದೇ ಅವನು ಸಾಯುತ್ತಾನೆ. ಸಾಯುವಾಗ “ನಾನು ಮಾಡಿದ ಪಾಪದ ಫಲಕ್ಕೆ ನನ್ನನ್ನು ನೋಡಿ ಮರೆಯಿರಿ” ಎನ್ನುತ್ತಾನೆ. ಅದರ ನಂತರ ಗುಡ್ಡಾಳ್ವ ಅಧಿಕಾರಕ್ಕೆ ಬರುತ್ತಾರೆ. ಅವರು ಮಾಡಿದ ಸಂಪತ್ತಿನಿಂದಾಗಿ ಅವರು “ಅರಿ ಗುಡ್ಡಾಳ್ವ ಅಧಿಕಾರಕ್ಕೆ ಬರುತ್ತಾರೆ.

ಅವರ ಕಾಲದಲ್ಲಿ ಕಂಬ್ಲ ಗದ್ದೆಯ ಸಾಗುವಳಿ ಮಾಡುವಾಗ ಸಂಕಪಾಲ ಹಾವು ಗದ್ದೆಗೆ ಕುರುಂಟು (ಗದ್ದೆಯ ನೀರು ಸರಿಯಾಗಿ ಇಡೀ ಗದ್ದೆಗೆ ಹರಿದು ಹೋಗುವುದಕ್ಕೆ ಮಾಡುವ ಹೊಂಡ) ಎಳೆದು ಪಕ್ಕದ ವನಕ್ಕೆ ಹೋಗುತ್ತಿದ್ದ ಗುರುತು ಇರುತ್ತಿತ್ತಂತೆ. ಇವರಿಗೆ ದೇವಿ ಒಲಿದಿದ್ದಳಂತೆ. ಗುಡ್ಡಾಳ್ವರು ಹರಕೆಯಿಂದ ಹುಟ್ಟಿದ ಮಗುವಾಗಿದ್ದರು. ಒಂದು ದಿವಸ ಅವರು ಮಂಚದ ಮೇಲೆ ಮಲಗಿದ್ದಾಗ ಕಾಲಿನ ಗೆಜ್ಜೆಯ ಸ್ವರ ಕೇಳಿತಂತೆ, ಆ ಸ್ವರ ಅವರ ಬಳಿಗೆ ಬಂದು ಒಂದು ಹೆಂಗಸು ಅವರ ಹೆಗಲನ್ನು ಹಿಡಿದು ಅಲುಗಾಡಿಸಿ ಈ ಮಂಚದ್ಲಲಿ ನೀನು ಮಲಗಬಾರದು, ನಾನು ಯಾವಾಗಲೂ ಈ ಮಂಚದಲ್ಲಿ ಇರುತ್ತೇನೆ, ನೀನು ಬಯಸಿದ ಕೆಲಸ ಕೈಸೇರುತ್ತದೆ, ನಿನ್ನ ನಾಲಿಗೆಯಲ್ಲಿ ನಾನಿರುತ್ತೇನೆ, ಇನ್ನು ಯಾವಾಗಲೂ ಈ ಮಂಚದಲ್ಲಿ ನೀನು ಮಲಗಬೇಡವೆಂದು ಹೇಳಿ ಹೆಂಗಸು ಮಾಯಕ ಆಯಿತಂತೆ. ಮರು ದಿವಸ ಗುಡ್ಡಾಳ್ವರ ತಂಗಿ ಪೂವಕ್ಕೆ ಎಂಬುವರು ಊಟವಾದ ಮೇಲೆ ಆ ಮಂಚದ ಮೇಲೆ ಮಲಗಿದ ಸ್ವಲ್ಪ ಹೊತ್ತಿನಲ್ಲಿ ಒಂದು ದೊಡ್ಡ ಹಾವು ಮೇಲಿನಿಂದ ಇವರ ಮೇಲೆ ಬಿತ್ತಂತೆ, ಹಾವು ಮತ್ತು ಪೂವಕ್ಕ ಹೊರಳಿಕೊಂಡು ಅಂಗಳಕ್ಕೆ ಬಿದ್ದ ಮೇಲೆ ಹಾವು ಅವರ ಮೇಲಿಂದ ಹರಿದುಕೊಂಡು ಹೋಯಿತಂತೆ. ನಡೆದ ವಿಷಯವನ್ನು ಅವರು ಅಣ್ಣನಲ್ಲಿ ಹೇಳಿದಾಗ ಅಣ್ಣ ನಿನ್ನೆ ನನಗೆ ಕೂಡ ಅದೇ ರೀತಿಯ ಅನುಭವ ಆಗಿದೆ. ನೀನು ಇನ್ನು ಮುಂದೆ ಆ ಮಂಚದ ಮೇಲೆ ಮಲಗಬೇಡ ಎಂದು ಹೇಳಿದರು. ಅದರ ನಂತರ ಗುಡ್ಡಾಳ್ವರು ದೈವದ ಮಂಚ (ಮುಂಡ್ಯ) ಮತ್ತು ಉಯ್ಯಾಲೆ ಮಾಡಿಸಿ ದೈವಕ್ಕೆ ನೇಮ ಕೊಡಬೇಕೆಂಬ ಉದ್ದೇಶದಿಂದ ದಕ್ಷಿಣದಿಂದ ಬಡಗಿಯನ್ನು ಕರೆಯಿಸಿ ಇವುಗಳನ್ನು ಮಾಡಿಸುತ್ತಾರೆ. ಅವರು ೯೯ ವರ್ಷ ಬದುಕಿದ್ದು ಅವರ ಕಾಲದಲ್ಲಿ ಉಳ್ಳಾಲ್ತಿಗೆ ಬೆಳ್ಳಿ, ಬಂಗಾರ, ಮೊದವನ್ನು ಮಾಡಿಸಿದರು. ಅದರ ಮೊದಲು ಅಡಿಕೆ ಮರದ ಹಾಳೆಯ ಮೊಗ ಇತ್ತು. ಅವರ ಕಾಲದಲ್ಲಿ ಗುಡಿ ಕಟ್ಟಿಸಿದರು. ಕೆಲಿಂಜದಲ್ಲಿ ಚಿತ್ತರಿಗೆ ಎಂಬ ಕಟ್ಟಡವನ್ನು ಕಟ್ಟಿಸಿದರು ಆರಂಭದಲ್ಲಿ ಅಲ್ಲಿಂದ ಭಂಡಾರ ಬರುತ್ತಿತ್ತು.

ಕಾಲಕ್ರಮೇಣ ಆ ಸ್ಥಳ ಜಗಳದಲ್ಲಿ ಬ್ರಾಹ್ಮಣರಿಗೆ ಮಾರಾಟವಾಯಿತು. ಆ ಸಂದರ್ಭದಲ್ಲಿ ದೈವದ ಮೊಗ, ಬಂಗಾರವನ್ನು ಪುಂಡಿಕ್ಯಾ ನಾರಾಯಣ ಭಟ್ ಅವರು ಮನೆಯಲ್ಲಿ ತಂದು ಇಟ್ಟುಕೊಂಡರು. ನಾರಾಯಣ ಭಟ್ರು ಬಹಳ ಜೋರಿನ ಸ್ವಭಾವದವರು. ಒಂದು ವ, ಊರಿನವರ ಮೇಲಿನ ಸಿಟ್ಟಿನಿಂದ ದೈವದ ಮೊಗವನ್ನು ಕೊಡದೆ ಹಾಳೆಯ ಮೊಗದಲ್ಲಿ ಮೆಚ್ಚಿ ನಡೆಸಿದರು. ಆದರೆ ಆ ವರುಷ ಅವರಿಗೆ ಬಹಳ ತೊಂದರೆ ಸಂಭವಿಸಿತು. ಅವರಿಗೆ ಮತ್ತು ಅವರ ಹಗೆಗಳಿಗೆ ಜಗಳವಾಗಿ ಅವರನ್ನು ಕೊಲ್ಲುವ ಸಂದರ್ಭದಲ್ಲಿ ಅವರನ್ನು ಬೆಂಞನಮಾರಿನ ಗುಡ್ಡಾಳ್ವರು ಬಿಡಿಸಿದರಂತೆ, “ಏನು ನಾರಾಯಣ ಭಟ್ರೆ ನಿಮಗೆ ಶಕ್ತಿ ಉಂಟೆಂದು ತಾನು ಮಾಡಿದ್ದು ಎಲ್ಲ ಸರಿ ಎಂದು ಮಾತನಾಡುತ್ತೀರಿ ಅಲ್ಲವೇ, ಇಷ್ಟಾದರೂ ನಿಮಗೆ ಬುದ್ದಿ ಬರುವುದಿಲ್ಲ. ಊರಿನ ದೈವದ ಮೊಗ ಬಂಗಾರವನ್ನು ಅಡಗಿಸಿಟ್ಟು ಮೆಚ್ಚಿಯ ಕಾಲಕ್ಕೆ ಕೊಡದೆ ಹಾಳೆಯ ಮೊಗದಲ್ಲಿ ಮೆಚ್ಚಿ ನಡೆಯುವಂತೆ ಮಾಡಿದಿರಿ, ಅದು ನನ್ನ ನಿಮ್ಮ ವಸ್ತು ಅಲ್ಲ, ಊರಿನ ಹತ್ತು ಜನರ ತಾಯಿಯ ವಸ್ತು. ಅವಳ ಕೆಲಸಕ್ಕೆ ಇರದ ವಸ್ತು ಯಾಕೆ” ಎಂದು ಹೇಳಿದಾಗ, ನೀನು ಹೇಳಿದ ಹಾಗೆ ಕೇಳುತ್ತೇನೆ ಎಂದು ಹೇಳಿ, ಇನ್ನು ಮುಂದೆ ದೈವದ ಅರ್ಧಭಾಗ ಭಂಡಾರ ನಿನ್ನಲ್ಲಿ ಇರಲಿ, ಸ್ವಲ್ಪ ನನ್ನ ಬಳಿ ಇರಲಿ ಎಂದು ಹೇಳಿದರು. ಅದೇ ರೀತಿ ಮೊಗ ಮುಂತಾದ ಅರ್ಧಭಾಗ ಭಂಡಾರ ಗುಡ್ಡಾಳ್ವರ ಮನೆಗೆ ತಂದರು. ಪ್ರತಿವರ್ಷ ಮೆಚ್ಚಿ ನಡೆಯುವಾಗ ಬೆಂಞನಮಾರಿನಿಂದ ಭಂಡಾರ ಬರುವುದು.

ಐತಿಹ್ಯ

ಗಂಗೆಯಿಂದ ಎರಡು ಜನ ಬ್ರಾಹ್ಮಣರು ಕೆಲಿಂಜಕ್ಕೆ ಬರುತ್ತಾರೆ. ಬಂದ ಅವರಿಗೆ ಬಾಯಾರಿಕೆಯಾಗುತ್ತದೆ. ಕೆಲಿಂಜದಿಂದ ಬಲ್ಕಾಡಿಗೆ ಒಬ್ಬಳು ಬಿಲ್ಲವ ಹೆಣ್ಣು ಕಳ್ಳು ಹೊತ್ತುಕೊಂಡು ಹೋಗುತ್ತಿರುವಾಗ ಅವಳನ್ನು ನೋಡಿದ ಬ್ರಾಹ್ಮಣರು ಅವಳಲ್ಲಿ ಬಾಯಾರಿಕೆ  ಕೇಳುವರು. ಆಗ ಆ ಹೆಣ್ಣು ಅದು ನಿಮಗೆ ಕೊಡುವ ಅಮೃತ ಅಲ್ಲ, ಅದು ಉಳಿದ ದೇವರಿಗೆ ಕೊಂಡುಹೋಗುವ ಅಮೃತ ಎಂದು ಹೇಳಿದಳು. ಆಗ ಬ್ರಾಹ್ಮಣರು ಪೊಯ್ಯೆ ಜುಮಾದಿ ಎನ್ನುವ ದೈವವನ್ನು ಕರೆದು ನೀನು ಅವಳ ಕೊಡದ ಭಾರವನ್ನು ತಗ್ಗಿಸದೇ ಅದರಲ್ಲಿದ್ದ ಅಮೃತವನ್ನು ಕುಡಿದು ಬಿಡು ಎಂದು ಹೇಳಿದರು. ಅದರಂತೆ ಅವನು ಕೊಡದ ಅಮೃತವನ್ನು ಕುಡಿದ, ಅವಳು ಕೊಡವನ್ನು ಕೆಳಗಿಳಿಸಿ ನೋಡಿದಾಗ ಕಳ್ಳಿನ ಬದಲು ನೊರೆ ತುಂಬಿತ್ತು. ಅದನ್ನು ಕಂಡು ಅವಳು ಸಿಟ್ಟಿನಿಂದ ಬ್ರಾಹ್ಮಣರನ್ನು ಬಾಯಿಗೆ ಬಂದಂತೆ ಬೈಯ್ದು, ಒಳಗೆ ಹೋಗುವಾಗ ಹೊಸ್ತಿಲು ತಾಗಿ ಬೀಳುವಳು. ಅಲ್ಲಿಯೇ ಅವಳಿಗೆ ಕೆಂಡದಂತಹ ಜ್ವರ ಬರುತ್ತದೆ. ಈ ವಿಷಯ ಅವಳ ಅಣ್ಣಂದಿರಿಗೆ ತಿಳಿಸುವರು. ಅವಳನ್ನು ಹೊತ್ತುಕೊಂಡು ಹೋಗಲು ಬೆಂಞತ್ತಿಮಾರಿನಿಂದ ಹಸಿ ಬಿದಿರು ಮತ್ತು ಕಪ್ಪು ಕಂಬಳಿ ಕೊಟ್ಟು ಕಳುಹಿಸುವರು. ಅವಳನ್ನು ಹೊತ್ತುಕೊಂಡು ಹೋಗುವಾಗ ದಾರಿಯಲ್ಲಿ ಅವಳು ಸಾಯುತ್ತಾಳೆ. ಅವಳ ಜೊತೆಗೆ ಬಲ್ನಾಡಿನಿಂದ ಉಳ್ಳಾಲ್ತಿ ಕೆಲಿಂಜಕ್ಕೆ ಬಂದಳು.

ಸತ್ತ ಹೆಣ್ಣನ್ನು ಸುಡುವುದಕ್ಕೆ ಬೆಂಞನಮಾರಿನಿಂದ ಕಟ್ಟಿಗೆ, ಮಡಲು ಕೊಡುತ್ತಾರೆ. ಅವಳ ಹೆಣವನ್ನು ಸುಟ್ಟು ಮನೆಗೆ ಬಂದ ಕೂಡಲೇ ಗಂಡಗಣಗಳು ಅವಳ ಹೆಣವನ್ನು ಎಳೆದು ಹಾಕಿ ಮಾಂಸ ಮಾಡಿ ಇಟ್ಟವು ಗಿಡದ ಎಲೆಯಲ್ಲಿ ಕಟ್ಟಿ ಅದನ್ನು ಮಾರ್ತರ ಮನೆಯ ಬಲದಲ್ಲಿ ಇಟ್ಟು ಹೋಗುತ್ತವೆ. ಮರುದಿನ ಬೆಳಗ್ಗೆ ಮಾರ್ತರ ಮಡದಿ ಗುಡಿಸಿಕೊಂಡು ಒಳಗೆ ಹೋಗುವಾಗ ತನ್ನಷ್ಟಕ್ಕೆ ಬಲ ಅಲ್ಲಾಡುತ್ತಿತ್ತು. ಬಲದಲ್ಲಿದ್ದ ಕಟ್ಟನ್ನು ತೆಗೆದು ನೋಡಿದಾಗ ವಿಸ್ಮಯ ಆಗುತ್ತದೆ. ಅವಳನ್ನು ಮಾಂಸ ಮಾಡಿ ಪಾಲು ಮಾಡಿದ ಸ್ಥಳ “ಪಾಲ್ತಿಮಾರ್” ಎಂದೂ, ಅವಳ ತಲೆಯ ಚೌರಿ (ಕೂದಲು)ಯನ್ನು ಎಸೆದ ಸ್ಥಳಕ್ಕೆ “ಉಜಿರಿಸ್ತಿಮಾರ್” ಎಂದೂ, ಅವಳ ಕರುಳನ್ನು ಎಸೆದ ಸ್ಥಳಕ್ಕೆ “ಪೆರಿಮಾರ್” ಎಂದೂ ಹೆಸರು ಬಂದಿತು. ಕೆಲಿಂಜದಲ್ಲಿ ಈಗಲೂ ಇಟ್ಟೆವು ಗಿಡದ ಎಲೆಯಲ್ಲಿ ಯಾವ ವಸ್ತುವನ್ನೂ ಕಟ್ಟಿಸಿಕೊಂಡು ಹೋಗಬಾರದು ಎಂಬ ನಿಯಮವಿದೆ. ಕೆಲಿಂಜಕ್ಕೆ ಬಂದ ಉಳ್ಳಾಲ್ತಿಯು ಮೊದಲು ಬೆಂಞತ್ತಿಮಾರಿನವರನ್ನು ಕೊಂದು, ಅಲ್ಲಿಂದ ಸಿಮ್ಲಾಜೆಗೆ ಬಂದು, ಅಲ್ಲಿನ ಗುರಿಕಾರರನ್ನು ಕೊಂದು, ಅದೇ ರೀತಿ ಏಳು ಎಂಟು ಜನರನ್ನು ಕೊಂದು ಅಲ್ಲಿಂದ ಕಾಯೆರ್ ಕಲ್ಲಮಾಡ ಎನ್ನುವಲ್ಲಿಗೆ ಬಂದು ಅಲ್ಲಿ ನೆಲೆ ನಿಲ್ಲುತ್ತಾಳೆ. ಉಳ್ಳಾಲ್ತಿಯು ಗುವೆಲ್ಲಣ್ಣ ಕುಟುಂಬದವರನ್ನು ತನ್ನ ಬಂಟರನ್ನಾಗಿ ಆಯ್ಕೆ ಮಾಡುತ್ತಾಳೆ.