ಮಹಿಳೆಯರಿಗೇ ವಿಶಿಷ್ಟವಾದ ಹಾಡು, ಕುಣಿತ ಇತ್ಯಾದಿಗಳ ವಿವರ

ಪಾಡ್ದನಗಳನ್ನು ಮುಖ್ಯವಾಗಿ ಮಹಿಳೆಯರೇ ಹಾಡುತ್ತಾರೆ. ದೈವಗಳ ಆರಾಧನೆಯ ಸಂದರ್ಭದಲ್ಲಿ ದೈವಕ್ಕೆ ಗಂಡ ಅಥವಾ ಮಗ ಕಟ್ಟುವಾಗ ದೈವಕ್ಕೆ ಸಂಬಂಧಿಸಿದ ಪಾಡ್ದನಗಳನ್ನು ಹಾಡುವುದು, ದೈವಕ್ಕೆ ಕಟ್ಟಿದ ವ್ಯಕ್ತಿ ಪಾಡ್ದನದ ಸೊಲ್ಲನ್ನು ಹಾಡಿದಾಗ ಅದಕ್ಕೆ ಧ್ವನಿ ಕೂಡಿಸುವುದು. ದೈವದ ಕೆಲಸಕ್ಕೆ ಬೇಕಾದ ವಸ್ತುಗಳ ತಯಾರಿಯಲ್ಲಿ ಸಹಾಯ ಮಾಡುವುದು. ಕರಂಡೆ/ತೆಂಬರೆ/ ಚೆಂಡೆಯನ್ನು ನುಡಿಸುವುದು (ಕರಂಡೆ, ತೆಂಬರೆ, ಚೆಂಡೆ-ಪರವರು ಬಳಸುವ ಚರ್ಮವಾದ್ಯಕ್ಕೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿವೆ) ಕೆಲವು ಪ್ರದೇಶದಲ್ಲಿ ಪರವರು ಬಳಸುವ ವಾದ್ಯ ಸಣ್ಣದಾಗಿದ್ದು ಅದನ್ನು ಕರಂಡೆ ಎಂದು ಕರೆದರೆ ಕೆಲವು ಭಾಗದ ಚರ್ಮವಾದ್ಯ ಹೆಂಗಸರು ಅಲ್ಲಿ ಹೋಗಿ ದೈವದ ಕೆಲಸಗಳನ್ನು ಮಾಡುತ್ತಾರೆ. ಹೆಣ್ಣು, ಗಂಡು ಮಾಡುವ ಪ್ರತಿಯೊಂದು ಕೆಲಸಗಳಲ್ಲಿಯೂ ಸಹಾಯವನ್ನು ಮಾಡುತ್ತಾಳೆ. ಅಂದರೆ ಶೇಕಡ ೫೦ ರಿಂದ ೬೦ ಪಾಲು ಕೆಲಸಗಳು ಹೆಣ್ಣೇ ಮಾಡುತ್ತಾಳೆ. ಬಿಡುವಿನ ವೇಳೆಯಲ್ಲಿ ಅಪ್ಪ, ಅಮ್ಮ, ಮಕ್ಕಳು ಕೆಲವೊಮ್ಮೆ ಇತರ ಸಂಬಂಧಿಗಳೊಂದಿಗೆ ಕುಳಿತು ಪಾಡ್ದನಗಳನ್ನು, ಸಂಧಿಗಳನ್ನು ಹಾಡುತ್ತಾರೆ. ಮಳೆಗಾಲದಲ್ಲಂತೂ ಈ ರೀತಿಯ ಹಾಡುಗಳನ್ನು ಹೆಚ್ಚಾಗಿ ಹಾಡುತ್ತಿರುತ್ತಾರೆ. ಪಾಡ್ದನ, ಸಂಧಿಗಳನ್ನು ಹಾಡುವ ಉದ್ದೇಶವೇನೆಂದರೆ ಮರೆತು ಹೋಗಬಾರದು ಎಂಬುದು ಒಂದಾದರೆ ಇನ್ನೊಂದು ಉದ್ದೇಶ ಉಳಿದವರಿಗೆ ಅವುಗಳನ್ನು ಹಾಡಲು ನೀಡುವ ತರವೇತಿಯೂ ಹೌದು. ದೈವಾರಾಧನೆಯ ಸಂದರ್ಭದಲ್ಲಿ ಪಾಡ್ದನಗಳನ್ನು ಹಾಡಿದರೆ ಆರಾಧನೆಯ ಕೆಲಸಗಳಿಲ್ಲದಾಗ ಗದ್ದೆಯ ಕೆಲಸಕ್ಕೆ ಹೋದಾಗ ಕಬಿತೆಗಳನ್ನು ಹಾಡುತ್ತಾರೆ. ಕೆಲವು ಸಲ ಬಿಡುವಿರುವಾಗ ಮಕ್ಕಳಿಗೆ ಕತೆಗಳನ್ನು ಹೇಳುತ್ತಾರೆ. ಇದರ ಉದ್ದೇಶ ಮಕ್ಕಳಿಗೆ ಮುಂದಕ್ಕೆ ಆರಾಧನೆಯ ಪರಿಚಯ, ದೈವಗಳ ಕುರಿತಾದ ತಿಳುವಳಿಕೆ ನೀಡುವುದೇ ಆಗಿದೆ. ಈ ಕೆಲಸವನ್ನು ಮಹಿಳೆಯರೇ ಮಾಡುತ್ತಾರೆ.

ಆಟಿಕಲೆಂಜ, ಸೋಣದ ಜೋಗಿ, ಸೋಣದ ಮದಿಮಾಲ್, ಕನ್ಯಾಪು, ಮಾದಿರ, ಚೆನ್ನು ಕುಣಿತ, ಸುಗ್ಗಿ ಕುಣಿತ, ಕಂಗಿಲು ಈ ರೀತಿಯ ಅನೇಕ ವಿಧದ ಜಾನಪದ ಕುಣಿತಗಳಿದ್ದರೂ ಪರವರು ಇವುಗಳಲ್ಲಿ ಕೆಲವನ್ನು ಮಾತ್ರ ನಡೆಸುತ್ತಾರೆ. ವಿಟ್ಲ ಸೀಮೆಯಲ್ಲಿ ಪರವರು ಮನೆಮನೆಗೆ ಹೋಗಿ ಜನಪದ ಕುಣಿತಗಳನ್ನು ನಡೆಸುವುದಿಲ್ಲ. ಇಲ್ಲಿ ನಡೆಸಬಾರದು ಎಂಬ ನಿಯಮ ಇದೆಯಂತೆ. ಯಾಕೆ ಈ ನಿಯಮ ಜಾರಿಯಲ್ಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಇಳಿದ ಪ್ರದೇಶಗಳಲ್ಲಿ ಹೆಚ್ಚಿಲ್ಲದಿದ್ದರೂ ಕೆಲವು ಕುಣಿತಗಳನ್ನು ಅಲ್ಲಲ್ಲಿ ಸ್ವಲ್ಪ ಸ್ವಲ್ಪ ನಡೆಸಿಕೊಂಡುಬರುವುದನ್ನು ಕಾಣಬಹುದು. ಪರವ ಜನಾಂಗದಲ್ಲಿರುವ ಮಹಿಳೆಯರು ಪುರುಷನ ಕೆಲಸಗಳಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚಿನದನ್ನು ಮಾಡುವುದು ಕೂಡ ಇಲ್ಲಿ ಗಮನಿಸತಕ್ಕ ವಿಚಾತ. ಮನೆ ಮನೆಗೆ ಹೋಗಿ ಕುಣಿತಗಳನ್ನು ನಡೆಸುವಾಗ ತೆಂಬರೆ ಬಡಿದು ಹಾಡು ಹೇಳುವುದು, ಮನೆಯವರು ಕೊಟ್ಟ ವಸ್ತುಗಳನ್ನು ಸರಿಯಾಗಿ ಜೋಡಿಸಿ ಮನೆಗೆ ತರುವುದು, ಅವುಗಳನ್ನು ಮನೆಯಲ್ಲಿ ಸರಿಪಡಿಸಿ ಬಳಸಿಕೊಳ್ಳುವುದು ಹೀಗೆ ಪ್ರತಿಯೊಂದು ಕೆಲಸವನ್ನು ಪರಮಹಿಳೆ (ಪರತಿ) ಬಹಳ ಜತನದಿಂದ ನಿರ್ವಹಿಸುತ್ತಾಳೆ.

ಉದಾಹರಣೆಗೆ ದೈವಾರಾಧನೆಯ ಸಂದರ್ಭದಲ್ಲಿ ಮನೆಯಿಂದ ಹೊರಡುವಾಗ ಆರಾಧನೆಯಲ್ಲಿ ಬಳಸುವ ಎಲ್ಲಾ ಸಾಮಗ್ರಿಗಳನ್ನು ಸಿದ್ಧಗೊಳಿಸಿಡುವುದು, ಕಟ್ಟಿಡುವುದು, ತೆಗೆದುಕೊಂಡು ಹೋಗುವಾಗ ಕೆಲವು ವಸ್ತುಗಳನ್ನು ತಾನೂ ಹಿಡಿದುಕೊಳ್ಳುವುದು. ಆರಾಧನೆ ನಡೆಯುವ ಸ್ಥಳಕ್ಕೆ ಹೋಗಿ ಅಲ್ಲಿ ದೈವಾರಾಧನೆಯ ಮಾಧ್ಯಮವಾಗಿ ಕೆಲಸ ಮಾಡುವ ಕಲಾವಿದನಿಗೆ ವಸ್ತುಗಳನ್ನು ಸಿದ್ಧಗೊಳಿಸಿಕೊಡುವುದು. ತೆಂಗಿನ ಮರದ ಗರಿಗಳನ್ನು ಧರಿಸಲು ಬೇಕಾದಂತೆ ಕತ್ತರಿಸಿಕೊಡುವುದು, ಬೇಕಾದವುಗಳನ್ನು ಅವನು ಕೇಳಿದಂತೆ ತೆಗೆದುಕೊಡುವುದು, ಬಣ್ಣಗಾರಿಕೆಗೆ ಕುಳಿತಾಗ ಅವನ ಜತೆಯಲ್ಲಿಯೇ ಪರಿಸರ ನಿರ್ಮಾಣಕ್ಕೆ ಬೇಕಾದ ಪಾಡ್ದನಗಳನ್ನು ಹಾಡುವುದು, ತೆಂಬರೆಯನ್ನು ಬಡಿಯುವುದು, ಬೀರ ಕರೆಯುವಾಗ ಕೆಲವು ಸೊಲ್ಲನ್ನು ಹಾಡುವುದು ಹೀಗೆ ಪ್ರತಿಯೊಂದು ಕೆಲಸಗಳಲ್ಲಿಯೂ ಹೆಣ್ಣು ಕೈ ಜೋಡಿಸುವುದನ್ನು ಕಾಣಬಹುದು.

ಕರಕುಶಲ ಕಲೆ

ಬಿಡುವಿನ ವೇಳೆಯಲ್ಲಿ ಪರವ ಹೆಂಗಸರು (ಪರತಿಯರು) ಮತ್ತು ಪರವರು ಕೆಲವು ವಸ್ತುಗಳನ್ನು ತಯಾರಿಸುತ್ತಾರೆ. ಪರವ / ಪರತಿಯರು ಮಾಡುವ ಕರಕುಶಲ ವಸ್ತುಗಳೆಂದರೆ- ಕುಡ್ಪು (ಮುತ್ತಿಲ್‌) = ಗಂಜಿಯನ್ನು ಬಸಿದು ಅನ್ನ ಮಾಡುವಾಗ ಬಳಸುವ ವಸ್ತು. ಇದನ್ನು ಇಲ್ಲ್‌ ಬೂರು (ಪೇರ್ ಬಲ್ಲ್) ಎಂಬ ಹಾಲುಬರುವ ಬಳ್ಳಿಯಿಂದ ತಯಾರಿಸುತ್ತಾರೆ.

ಬಲ (ಹಾಲಿನ, ಮೊಸರಿನ ಪಾತ್ರೆಗಳನ್ನು ಎತ್ತರದಲ್ಲಿ ಪೇರಿಸಿಡಲು ಬಳಸುವ ಹಗ್ಗದಿಂದ ತಯಾರಿಸಿದ ಸಾಧನ) ಇದನ್ನು ತೆಂದಿನ ಮರದ ತಿರಿ (ಸಿರಿ) ಯಿಂದ, ದಡ್ಪಲೆ, ಪುಲ್ಲು (ಹುಲ್ಲು) ಮೊದಲಾದ ಕಾಡು ಬಳ್ಳಿಗಳಿಂದ ತಯಾರಿಸುತ್ತಾರೆ. ಪರತಿಯರು ಮಾಡಿಕೊಟ್ಟ ಕರಕುಶಲ ವಸ್ತುಗಳನ್ನು ಗಂಡಸರು ಮಾರಾಟ ಮಾಡಿ ಹಣ ತರುತ್ತಾರೆ. ಕೆಲವೊಮ್ಮೆ ಹೆಂಗಸರು ಪೇಟೆಗೆ ಅಥವಾ ಕೆಲವರು ಹೇಳಿದಾಗ ಇಂತಹ ವಸ್ತುಗಳನ್ನು ಸಿದ್ಧಪಡಿಸಿ ಕೊಂಡುಹೋಗಿ ಕೊಟ್ಟು ಹಣ ತೆಗೆದುಕೊಳ್ಳುತ್ತಾರೆ.

ನಾಟಿ ವೈದ್ಯ

ಪರವರಲ್ಲಿ ಕೆಲವು ರೋಗಗಳಿಗೆ ಮದ್ದು ಕೊಡುವ ಮಹಿಳೆಯರಿದ್ದರು. ಭಯವನ್ನು ಕಳೆಯುವುದಕ್ಕಾಗಿ, ಕೆಂಪು, ಬಿಸಿರ್ಪು, ಕುರ ಮುಂತಾದ ರೋಗಗಳು ಬಂದಾಗ ಅದಕ್ಕೆ ಕಾಡು ಸೊಪ್ಪುಗಳನ್ನು ಮದ್ದಿನ ರೂಪದಲ್ಲಿ ಕೊಡುತ್ತಿದ್ದರು. ನೀರನ್ನು ಮಂತ್ರಿಸಿ ಕೊಡುವುದು, ಎಳನೀರನ್ನು ಮಂತ್ರಿಸಿ ಕೊಡುವುದು. ಹೀಗೆ ರೋಗ ಯಾವುದು ಎಂಬುದರ ಆಧಾರದಲ್ಲಿ ಮದ್ದು ನೀಡುತ್ತಿದ್ದರು. ಅಷ್ಟೇ ಅಲ್ಲದೆ ಹೆರಿಗೆ ಮಾಡಿಸುವ ಅನುಭವಿ ಮಹಿಳೆಯರಿದ್ದರು. ಇತ್ತೀಚೆಗೆ ಆ ರೀತಿಯಲ್ಲಿ ಮದ್ದು ಕೊಡುವವರು, ಹೆರಿಗೆ ಮಾಡಿಸುವವರು ವಿರಳವಾಗಿದ್ದಾರೆ. ಹಳ್ಳಿ ಮದ್ದು ರೋಗಗಳನ್ನು ನಿಧಾನವಾಗಿ ವಾಸಿ ಮಾಡುತ್ತದೆ. ಆಸ್ಪತ್ರೆಯಲ್ಲಿ ಸಿಗುವ ವ್ಯವಸ್ಥೆಗಳು ಹಳ್ಳಿಗಳಲ್ಲಿಲ್ಲ ಎಂಬ ಭಾವನೆಯಿಂದಾಗಿ ಜನರ ಆಸಕ್ತಿ ಕಡಿಮೆಯಾಗಿದೆ. ಅದೇ ರೀತಿಯಲ್ಲಿ ನಾಟಿ ವೈದ್ಯರು ಕಡಿಮೆಯಾಗಿದ್ದಾರೆ.

ದೈವಾರಾಧನೆಯಲ್ಲಿ ಪರತಿಯರು ಮತ್ತು ಪರವರು ಮಾಡುವ ಕೆಲಸಗಳು

ದೈವಾರಾಧನೆಯ ಸಂದರ್ಭದಲ್ಲಿ ಗಂಡಸರ ಜೊತೆ ಜೊತೆಯಲ್ಲಿಯೇ ಹೆಂಗಸರು ಕೆಲಸಗಳನ್ನು ಮಾಡುತ್ತಿರುತ್ತಾರೆ. ಬಾಬು ಪರವ ಅವರ ಜೊತೆಯಲ್ಲಿದ್ದುಕೊಂಡು ಶ್ರೀಮತಿ ಗುರುವಮ್ಮ ಅವರು ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ಕೆಲಸ ಮಾಡುತ್ತಾರೆ. ಶ್ರೀ ಬಾಬು ಪರವ ಅವರು ವಿಟ್ಲ ಸೀಮೆ ಹಾಗೂ ಮೊಗೇರುಸಾವಿರ ಸೀಮೆಗಳಲ್ಲಿ ವರ್ಷಕ್ಕೆ ಸುಮಾರು ಮೂವತ್ತು ಸ್ಥಳಗಳಲ್ಲಿ ದೈವಗಳಿಗೆ ಕಟ್ಟುತ್ತಾರೆ. ಒಂದು ವರ್ಷದಲ್ಲಿ ಸುಮಾರು ನೂರು-ನೂರೈವತ್ತು ದೈವಗಳಿಗೆ ಕಟ್ಟುತ್ತಾರೆ. ಇದರಲ್ಲಿ ಸಣ್ಣ ದೊಡ್ಡ ದೈವಗಳು ಸೇರಿವೆ. ಕೇಪು, ಮಿತ್ತನಡ್ಕ, ಕನ್ಯಾನ, ವಿಟ್ಲ, ಕುಲ, ಕುಂಡಡ್ಕ, ಒಕ್ಕೆತ್ತೂರು, ಕೂಡೂರು, ಕಡಂಬು, ಕುಂಜಾರು, ಕೊಡಿಪ್ಪಾಡಿ, ಕೆಲಿಂಜ, ಅನಂತಾಡಿ, ಮಾಣಿ, ಕೆದಿಲ, ಪರ್ಣೆ ಈ ಸ್ಥಳಗಳಲ್ಲಿ ದೈವಗಳಿಗೆ ಕಟ್ಟುತ್ತಾರೆ. ಹೀಗೆ ದೈವಗಳಿಗೆ ಕಟ್ಟುವಾಗ ಇವರೊಂದಿಗೆ ಅವರ ಮಡದಿ ಗುರುವಮ್ಮ ಅವರೂ ಹೋಗುತ್ತಾರೆ. ಅವರು ಬಾಬು ಅವರು ಮಾಡುವ ಕೆಲಸಗಳಿಗಿಂತ ಹೆಚ್ಚಿನ ಕೆಲಸಗಳನ್ನು ಮಾಡುವುದನ್ನು ನಾನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಗುರುತಿಸಿದ್ದೇನೆ.

ಉಳ್ಳಾಲ್ತಿ ದೈವವನ್ನು ಮುಖ್ಯವಾಗಿ ಕಟ್ಟುವ ಶ್ರೀಯುತರಿಗೆ ಯಾವುದೇ ವೈಯಕ್ತಿಕ ಸಮಸ್ಯೆಗಳಿದ್ದರೂ ದೈವಕ್ಕೆ ಕಟ್ಟುವ ಸಮಯದಲ್ಲಿ ಅವುಗಳು ಗೌಣವಾದ ಸಂದರ್ಭಗಳಿವೆ. ಐದು-ಆರು ವರ್ಷಗಳ ಹಿಂದೆ ನಡೆದ ಘಟನೆಯೊಂದು ಹೀಗಿದೆ. ಕೇಪು ಉಳ್ಳಾಲ್ತಿ ದೈವದ ಆರಾಧನೆಯ ಸಂದರ್ಭದಲ್ಲಿ ಬಾಬು ಪರವ ಅವರ ಕಾಲು ಮುರಿತಕ್ಕೆ ಒಳಗಾಗಿ ಅವರು ನಡೆದಾಡುವುದೆ ಬಹಳ ಕಷ್ಟವಾಗಿತ್ತು. ಆ ಕಾರಣದಿಂದ ದೈವಕ್ಕೆ ಕಟ್ಟುವ ಕೆಲಸ ಕಷ್ಟವಾದೀತು ಎಂದು ತಿಳಿದು ಕ್ಷೇತ್ರದ ಆಡಳಿತ ನಡೆಸುವ ವಿಟ್ಲ ಅರಸರಲ್ಲಿ ಮತ್ತು ಊರಿನ ಮುಖ್ಯಸ್ಥರಲ್ಲಿ ಆ ಬಗ್ಗೆ ತಿಳಿಸಿದರಂತೆ. ಅದಕ್ಕೆ ಅವರು ಜೋತಿಷ್ಯರಲ್ಲಿ ಆ ಕುರಿತು ಕೇಳಿದಾಗ ಅವರು ಪ್ರಶ್ನೆ ಇಟ್ಟು ಬಾಬು ಪರವ ಅವರು ಜೀವಂತ ಇರುವ ತನಕ ಬೇರೆಯವರು ದೈವಕ್ಕೆ ಕಟ್ಟುವುದು ಸಾಧ್ಯವಿಲ್ಲ ಎಂದರಂತೆ. ಆ ಕಾರಣದಿಂದ ಬಾಬು ಪರವ ಅವರೇ ಕಾಲಿಗೆ ಪ್ಲಾಸ್ಟರ್ ಹಾಕಿದ್ದುಕೊಂಡೆ ದೈವಕ್ಕೆ ಕಟ್ಟಬೇಕಾಯಿತು. ಕಜಂಬು ಉತ್ಸವ ಕಳೆದ ನಂತರ ಉಳ್ಳಾಲ್ತಿ ದೈವದ ನೆರಿಜಪ್ಪುನೆ ಎಂಬ ಜೆಸರಿನಲ್ಲಿ ನಡೆಯುವ ಉಳ್ಳಾಲ್ತಿ ದೈವದ ನೇಮಕ್ಕೆ ಬಾಬು ಪರವ ಕಟ್ಟಿದಾಗ ದೈವವನ್ನು ನಾಲ್ಪೋಲುಗಳು ಎರಡು ಭಾಗದಿಂದಲೂ ಆಧರಿಸಿ ಹಿಡಿದುಕೊಂಡಿದ್ದರು. ಆದರೂ ಆವೇಶದ ಭರದಲ್ಲಿ ಬಾಬು ಪರವ ಅವರು ಶಕ್ತಿ ಹಾಕಿ ಬಲಕಾಲಿನಿಂದ ನೆಲಕ್ಕೆ ತುಳಿದ ಕಾರಣದಿಂದ ಕಾಲಿಗೆ ಹಾಕಿದ್ದ ಪ್ಲಾಸ್ಟರ್ ಒಡೆದುಹೋಗಿ ಇವರು ನೋವನ್ನು ಅನುಭವಿಸಬೇಕಾಯಿತು. ಈ ಕಷ್ಟದ ಎಲ್ಲ ಕೆಲಸಗಳ ಜವಾಬ್ದಾರಿಯನ್ನು ಅವರ ಶ್ರೀಮತಿ ಗುರುವಮ್ಮನವರು ನಿರ್ವಹಿಸಬೇಕಾಯಿತು.

ಇನ್ನೊಂದು ಸಂದರ್ಭದಲ್ಲಿ ಅನಂತಾಡಿ ಉಳ್ಳಾಲ್ತಿ ದೈವದ ಮೆಚ್ಚಿ ದಿನ ನಿಶ್ಚಿತವಾಗಿ, ಮೆಚ್ಚಿ ನಡೆಯುವ ದಿನದಂದು ಬಾಬು ಪರವ ಅವರಿಗೆ ವಿಪರೀತ ಜ್ವರ ಇದ್ದರೂ ಕೂಡ ದೈವವನ್ನು ಇವರೇ ಕಟ್ಟಬೇಕಾಗಿ ಬಂತು. ದೈವ ಕಟ್ಟಿದ ಸಂದರ್ಭದಲ್ಲಿ ಇವರಿಗೆ ದೈವದ ಅಣಿಯನ್ನು ಎತ್ತಿ ನಿಲ್ಲುವುದು ಕೂಡ ಕಷ್ಟವಾಗುತ್ತಿತ್ತು. ದೈವಕ್ಕೆ ಕಟ್ಟಿದ ನಂತರ ಇದು ಅಷ್ಟಾಗಿ ಗಮನಕ್ಕೆ ಬಾರದ ಕಾರಣದಿಂದ ದೈವದ ಕೆಲಸವನ್ನು ಮಾಡುವುದು ಸಾಧ್ಯವಾಗುತ್ತದೆ ಎಂದು ನುಡಿಯುತ್ತಾರೆ.

ತೀವ್ರ ಅನಾರೋಗ್ಯದ ಸಂದರ್ಭದಲ್ಲಿಯೂ ದೈವಕ್ಕೆ ಕಟ್ಟುವುದರಿಂದ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾದವರು ಗಂಡಸರಾದರೂ ಅವರ ಹಿಂದೆ ನಿಂತು ಎಲ್ಲ ಕೆಲಸಗಳನ್ನು ನಿರ್ವಹಿಸುವವರು ಹೆಂಗಸರೇ ಆಗಿದ್ದಾರೆ. ಇವರ ಶ್ರೀಮತಿಯವರು ಈ ಎರಡು ಘಟನೆಯಲ್ಲಿ ಯಾವ ರೀತಿಯ ಕೆಲಸಗಳನ್ನು ನಿರ್ವಹಿಸಬೇಕಾಯಿತು ಎಂಬುದನ್ನು ಆಲೋಚಿಸಿದಾಗ ಹೆಣ್ಣಿನ ಜವಾಬ್ದಾರಿ ಮತ್ತು ಕೆಲಸಗಳ ಅರಿವು ಸ್ಪಷ್ಟವಾಗುತ್ತದೆ. ಇವರಿಗೆ ದೇವಸ್ಥಾನದಿಂದ ಉಂಬಳಿಯಾಗಿ ಎರಡು ಮುಡಿಗಳಷ್ಟು ಗದ್ದೆಯನ್ನು ನೀಡಲಾಗಿದೆ. ಬಾಬು ಅವರು ತಂದೆಯವರ ನಂತರದಲ್ಲಿ ತನ್ನ ದೈವಗಳಿಗೆ ಕಟ್ಟಬೇಕಾಯಿತು. ಇವರ ಮರಣದ ನಂತರವಷ್ಟೆ ಬೇರೆಯವರು ದೈವವನ್ನು ಕಟ್ಟುವುದು ಸಾಧ್ಯವೆಂದು ಆಡಳಿತ ನಡೆಸುವವರು ತಿಳಿಸಿದ ಕಾರಣದಿಂದ ಇವರು ಆ ಕೆಲಸಗಳನ್ನು ಮಾಡಲೇಬೇಕಾಗಿದೆ. ಈ ಎರಡು ಘಟನೆಗಳನ್ನು ಗಮನಿಸಿದಾಗ ಆತ ಪಡುವ ನೋವು ಒಂದು ಕಡೆಯಾದರೆ ಸಲಿಸಾಗಿ ಕೆಲಸಗಳನ್ನು ಮಾಡುವುದು ಸಾಧ್ಯವಾಗದಾಗ ಹೆಣ್ಣು ಎಲ್ಲ ಭಾರವನ್ನು ಹೊರಬೇಕಾಗುತ್ತದೆ. ಇತ್ತೀಚೆಗೆ ನಾನು ಅವರ ಮನೆಗೆ ಹೋದಾಗ ಬಾಬು ಅವರು ಅನಾರೋಗ್ಯದಲ್ಲಿ ಇರುವ ಕಾರಣ ಅವರ ಎಲ್ಲ ಕೆಲಸಗಳನ್ನು ಶ್ರೀಮತಿಯವರೇ ನಡೆಸುತ್ತಿದ್ದಾರೆ. ಮಕ್ಕಳ ಮದುವೆಯ ಜವಾಬ್ದಾರಿ, ಅವರನ್ನು ವೈದ್ಯರಲ್ಲಿ ಕರೆದುಕೊಂಡು ಹೋಗುವ ಕೆಲಸ, ಮನೆಯನ್ನು ನಡೆಸುವ ಕೆಲಸ, ಹೀಗೆ ಒಂದು ಮನೆಯನ್ನು ನಡೆಸುವ ಎಲ್ಲ ಹೊಣೆ ಹೆಣ್ಣಿನ ಮೇಲೆ ಬಿದ್ದಾಗ ಹೆಣ್ಣು ಮತ್ತು ಕ್ರಿಯಾಶೀಲಳಾಗಬೇಕಾಗುತ್ತದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಕುತ್ರೊಟ್ಟಿನಲ್ಲಿ ಉಳ್ಳಾಯ ಉಳ್ಳಾಲ್ತಿ ದೈವಕ್ಕೆ ಕುಂಡ ಪರವ ಕಟ್ಟುತ್ತಾರೆ. ಇವರ ಜೊತೆಯಲ್ಲಿ ಇವರ ಮಡದಿ ಎಲ್ಲಾ ಕೆಲಸಗಳಿಗೆ ಹೆಗಲು ಕೊಡುತ್ತಾರೆ. ಇವರು ಬೆಳ್ತಂಗಡಿ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಬೇರೆ ಬೇರೆ ದೈವಗಳಿಗೆ ಕಟ್ಟುತ್ತಾರೆ. ಇವರಿಗೆ ಇಂದಬೆಟ್ಟು ಉಳ್ಳಾಲ್ತಿ ದೈವ ಮತ್ತು ಇತರ ದೈವಗಳನ್ನು ಕಟ್ಟುವ ಕಾರಣದಿಂದಾಗಿ ನಾಲ್ಕು ಮುಡಿ ಗದ್ದೆಯನ್ನು ಉಂಬಳಿಯಾಗಿ ನೀಡಿದ್ದಾರೆ. ಎರಡು ದಿನ ಇಂದಬೆಟ್ಟುವಿನಲ್ಲಿ ಎರಡು ಜನ ದೈವಕ್ಕೆ ಕಟ್ಟುವ ಕೆಲಸಗಳನ್ನು ಮಾಡಿದರೆ ಸಂಭಾವನೆ ರೂಪದಲ್ಲಿ ಎರಡುವರೆ ಮುಡಿ ಅಕ್ಕಿಯನ್ನು ನೀಡುತ್ತಾರೆ. ಇವರು ಕಟ್ಟುವ ಇತರ ಭೂತಗಳು-ಕೊಡಮಣಿತ್ತಾಯ, ಮುಡಿತ್ತರಾಯ, ಪಿಲಿ ಚಾಮುಂಡಿ, ಉಳ್ಳಾಯ ಉಳ್ಳಾಲ್ತಿ, ಪಂಜುರ್ಲಿ, ದೈವ ಇತ್ಯಾದಿ ಇವರು ಕಟ್ಟುವ ಮುಖ್ಯವಾದ ಸ್ಥಳಗಳು- ಇಂದಬೆಟ್ಟು, ಮದ್ದಡ್ಕ, ಗೇರುಕಟ್ಟೆ, ಬಂಗಾಡಿ, ನಡ, ನಾವೂರು, ಕೆರೆಬೈಲು, ಲ್ಯಾಲ, ಗುರುವಾಯನಕೆರೆ ಇತ್ಯಾದಿ ಈ ಎಲ್ಲಾ ಸ್ಥಳಗಳಿಗೂ ಅವರ ಮಡದಿ ಹೋಗುತ್ತಾರೆ. ಇವರೊಂದಿಗೆ ದುಡಿಯುತ್ತಾರೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು, ಉಜಿರೆ ಈ ಸ್ಥಳಗಳಲ್ಲಿನ ಉಳ್ಳಾಲ್ತಿ ದೈವಕ್ಕೆ ಕಟ್ಟುವ ಕಲಾವಿದ ದುಗ್ಗ ಪರವ ಇವರೊಂದಿಗೆ ಇವರ ಅಕ್ಕ, ತಾಯಿ ಇರುತ್ತಾರೆ. ಇವರು ಮುಖ್ಯವಾಗಿ ಕೊಯ್ಯೂರಿನ ಶ್ರೀ ಪಂಚದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯುವ ಐದು ದಿನಗಳ ಉತ್ಸವದಲ್ಲಿ ಅಕ್ಕೆರ್ಲು ಅಂಬೆರ್ಲು, ಭೈರವ, ಉಳ್ಳಾಲ್ತಿ, ಪಂಚಜುಮಾದಿ, ಪೊಸಳಿದಾರ್, ಕುಮಾರಸ್ವಾಮಿ, ನೆತ್ತರ್ ಮುಗಳಿ, ಪುರುಷರಾಯೆ- ಈ ಮೊದಲಾದ ದೈವಗಳಿಗೆ ಕಟ್ಟುತ್ತಾರೆ. ದುಡಿಮೆಗೆ ತಕ್ಕುದಾದ ಸಂಭಾವನೆಯನ್ನು ಪಡೆಯುತ್ತಾರೆ. ನಿಗದಿತ ಸ್ಥಳಗಳಲ್ಲಿ ದೈವಕ್ಕೆ ಕಟ್ಟುದ ಸಂದರ್ಭದಲ್ಲಿ ಸಂಭಾವನೆ ಮೊದಲೇ ನಿಗದಿಯಾಗಿರುತ್ತದೆ. ಕೆಲವೊಮ್ಮೆ ಬೇರೆ ಸ್ಥಳಗಳಲ್ಲಿ ದೈವಕ್ಕೆ ಕಟ್ಟುವ ಅವಕಾಶಗಳು ಸಿಗುತ್ತವೆ. ಆಗ ಸಂಭಾವನೆ ಹೆಚ್ಚು ದೊರೆಯುವುದೂ ಇದೆ.

ಅಣ್ಣು ಪರವ ಇವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ದೈವಕ್ಕೆ ಕಟ್ಟುವ ಕಲಾವಿದರು. ಧರ್ಮಸ್ಥಳದ ವತಿಯಿಂದ ಇವರಿಗೆ ಮನೆಯನ್ನು ಕಟ್ಟಿಸಿಕೊಡಲಾಗಿದೆ. ಮನೆಗೆ ಬೇಕಾದ ವಸ್ತುಗಳನ್ನು, ವಸ್ತ್ರಗಳನ್ನು ಎಲ್ಲವನ್ನೂ ಧರ್ಮಸ್ಥಳದ ವತಿಯಿಂದಲೇ ನೀಡಲಾಗುತ್ತದೆ. ಧರ್ಮಸ್ಥಳದಲ್ಲಿ ದೈವಗಳನ್ನು ಕಟ್ಟಿದಾಗ ಇವರಿಗೆ ಪ್ರತ್ಯೇಕವಾದ ಸಂಭಾವನೆ ನೀಡುತ್ತಾರೆ. ಧರ್ಮಸ್ಥಳವನ್ನು ಬಿಟ್ಟು ಇತರ ಸ್ಥಳಗಳಾದ ಪಟ್ರಮೆ, ನಿಡ್ಲೆ ಮುಂತಾದ ಸ್ಥಳಗಳಲ್ಲಿ ದೈವಕ್ಕೆ ಕಟ್ಟಿದಾಗ ಅಲ್ಲಿನ ಮೊಕ್ತೇಸರರು ಪ್ರತ್ಯೇಕವಾದ ಸಂಭಾವನೆಯನ್ನು ನೀಡುತ್ತಾರೆ. ಇವರು ಮುಖ್ಯವಾಗಿ ಅಣ್ಣಪ್ಪ, ಪಂಜುರ್ಲಿ, ಧರ್ಮದೇವತೆಗಳಾದ ಕನ್ಯಾಕುಮಾರಿ, ಕುಮಾರಸ್ವಾಮಿ, ಕಾಲರ್ಕಾಯಿ, ಕಾಳರಾಹು, ನಾಡದೈವ, ಪಿಲಿಚಾಮುಂಡಿ – ಮೊದಲಾದ ದೈವಗಳಿಗೆ ಕಟ್ಟುತ್ತಾರೆ. ಇವರೊಂದಿಗೆ ಇವರ ಮಡದಿ ರಾಮಕ್ಕ ಇರುತ್ತಾರೆ. ಆರಾಧನೆಗೆ ಸಂಬಂಧಪಟ್ಟ ಬಹುಪಾಲಿನ ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ.

ಮುಂದಿನ ಭಾಗದಲ್ಲಿ ಪರತಿಯರಿಂದ ಮತ್ತು ಪರವರಿಂದ ಸಂಗ್ರಹಿಸಿದ ಕತೆ, ಐಹಿತ್ಯ, ಪಾಡ್ದನಗಳನ್ನು ನೀಡಲಾಗಿದೆ. ಪಾಡ್ದನಗಳನ್ನು ನೀಡುವಾಗ ಪಾಡ್ದನಗಳ ಕನ್ನಡ ಅನುವಾದಗಳನ್ನು ಕೊಟ್ಟು ಅನುಬಂಧದಲ್ಲಿ ತುಳುಪಠ್ಯಗಳನ್ನು ನೀಡಿದ್ದೇನೆ. ಈ ಪಾಡ್ದನಗಳನ್ನು ಕೊಟ್ಟಿರುವ ಉದ್ದೇಶವೇನೆಂದರೆ ಪರವ ಜನಾಂಗದವರಿಗೆ ತಿಳಿದಿರುವ ಅನೇಕ ವಿವರಗಳಲ್ಲಿ ಕೆಲವು ವಿವರಗಳು ಹೇಗಿವೆ ಎಂಬುದನ್ನು ತಿಳಿಸುವುದಕ್ಕಾಗಿ ಮಾತ್ರ. ಇದರಿಂದ ಎಷ್ಟೋ ಹೆಚ್ಚು ಮಾಹಿತಿಗಳು ಅವರ ಭಂಡಾರದಲ್ಲಿದೆ. ಅದರಲ್ಲಿ ಒಂದೇ ದೈವಕ್ಕೆ ಸಂಬಂಧಪಟ್ಟ ವಿವರಗಳೇ ಸಾಕಷ್ಟಿವೆ. ಹಾಗಾದರೆ ಅವರಿಗೆ ತಿಳಿದ ಎಲ್ಲ ಮಾಹಿತಿಗಳನ್ನು ಒಟ್ಟಾಗಿಸಿದರೆ ಹೇಗಾಗಬಹುದು ಎಂಬುದನ್ನು ತಿಳಿಸುವ ಕಾರಣದಿಂದಾಗಿ ಪಾಡ್ದನ ಹಾಗೂ ಐಹಿತ್ಯಗಳ ಪಠ್ಯವನ್ನು ನೀಡಿದ್ದೇನೆ. ಈ ವಿವರಗಳನ್ನು ಮುಖ್ಯವಾಗಿ ಮಹಿಳೆಯರಿಂದಲೇ ಸಂಗ್ರಹಿಸಲಾಗಿದೆ. ಕೆಲವೊಮ್ಮೆ ಪುರುಷರನ್ನು ಮಾಹಿತಿಗಳಿಗಾಗಿ ಬಳಿಸಿಕೊಳ್ಳಲಾಗಿದೆ.

 

ಪರವ ಜನಾಂಗದ ಹೆಣ್ಣಿನ ಕುರಿತಂತೆ ಇರುವ ದುರಂತದ ಕತೆ

ಪರತಿ ಮಂಗಣೆ

ಪರವರ ಹೆಣ್ಣೊಬ್ಬಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಎಂಬ ಊರಿನ ಬಲ್ಲಾಳ ಮನೆತನಕ್ಕೆ ಸೇರಿದ ಒಬ್ಬ ಬಲ್ಲಾಳನ ಕಾಮುಕತನಕ್ಕೆ ಬಲಿಯಾಗುವ ಬದಲು ತನ್ನ ಗಂಡನನ್ನು ಕೊಂಡ ಬಲ್ಲಾಳ ತನ್ನ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ತಾನು ಸಾಯುವ ರೀತಿ ಹಾಗೂ ತನ್ನ ಗಂಡನ ಚಿತೆಗೆ ಪರತಿಯು ಬಿದ್ದು ಸಾಯುವ ಕುರಿತ ವಿವರಗಳನ್ನು ಈ ಪಾಡ್ದನದಿಂದ ತಿಳಿಯುತ್ತದೆ.

“ಪರತಿ ಮಂಗಣೆ” ಪಾಡ್ದನವನ್ನು “ಬೊಟ್ಟಿಪಾಡಿ ಬಲ್ಲಾಳೆರೆ ಸಂಧಿ” ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪಾಡ್ದನಗಳಲ್ಲಿ ಕೊಲೆಯಾಗಿ ಅಥವಾ ಪ್ರೇಮಕ್ಕಾಗಿ ಹೆಣ್ಣಿನ ಸಾವಿನ ದುರಂತ ಕಾಣಿಸಿಕೊಂಡರೆ ಈ ಪಾಡ್ದನದಲ್ಲಿ ಅಸಹಾಯಕ ಹೆಣ್ಣೊಬ್ಬಳು ಶ್ರೀಮಂತ ಬಲ್ಲಾಳನೊಬ್ಬನನ್ನು ಎದುರು ಹಾಕಿಕೊಳ್ಳಲಾರದೆ, ಉಪಾಯದಿಂದ ಅವರ ಸಂಪತ್ತೆಲ್ಲವನ್ನು ಬೆಂಕಿಗೆ ಹಾಕಿಸಿ ಕೊನೆಗೆ ತಾನು ಬೆಂಕಿಗೆ ಹಾರಿ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ಭೂತಕ್ಕೆ ಕಟ್ಟುವ ಪರವನ ಹೆಂಡತಿಯನ್ನು “ಪರತಿ” ಎಂದು ಕರೆಯುತ್ತಾರೆ. ಪರತಿ ಮಂಗಣೆಯ ರೂಪಕ್ಕೆ ಮರುಳಾಗಿ ಅವಳನ್ನು ಪಡೆಯಲಿಕ್ಕಾಗಿ ಪರವನನ್ನು ಕೊಂದು ಅವಳಿಗಾಗಿಯೇ ತನ್ನ ಸರ್ವಸ್ವವನ್ನು ಬೆಂಕಿಗೆ ಹಾಕಿ ಕೊನೆಗೆ ಅವಳು ಬೆಂಕಿಗೆ ಹಾರಿದಾಗ, ಬೊಟ್ಟಿಪಾಡಿ ಬಲ್ಲಾಲ ಕೂಡ ಬೆಂಕಿಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ ಆದ್ದರಿಂದ ಇದು ಪರತಿ ಮಂಗಣೆಯ ದುರಂತದಷ್ಟೇ ಬೊಟ್ಟಿಪಾಡಿ ಬಲ್ಲಾಳನ ದುರಂತವೂ ಹೌದು. ಅದಕ್ಕಾಗಿಯೇ ಈ ಪಾಡ್ದನವನ್ನು “ಪರತಿ ಮಂಗಣೆ ಸಂಧಿ” ಅಥವಾ “ಬೊಟ್ಟಿಪ್ಪಾಡಿ ಬಲ್ಲಾಳ ಸಂಧಿ” ಎಂದು ಕರೆಯುತ್ತಾರೆ

ಬೊಟ್ಟಿಪ್ಪಾಡಿ ಬಲ್ಲಾಳನು ಗದ್ದೆಗೆ ನೀಡು ಕಟ್ಟಲು ಬಂದವನು ಹಲಸಿನ ಮರದ ಕಟ್ಟೆಯಲ್ಲಿ ಎಳೆ ಬಿಸಿಲು ಕಾಯಿಸುತ್ತಿರುವ ಪರತಿಯನ್ನು ನೋಡುತ್ತಾನೆ. ಅವಳ ಸೌಂದರ್ಯಕ್ಕೆ ಮಾರು ಹೋಗಿ ಬಲ್ಲಾಳನು ಮೂರ್ಛೆ ತಪ್ಪುತ್ತಾನೆ. ಪರತಿಯೇ ಬಂದು ಅವನನ್ನು ನೀರು ಚಿಮುಕಿಸಿ ಎಚ್ಚರಿಸುತ್ತಾಳೆ. ಪರತಿಯ ಮೇಲೆ ಈ ರೀತಿ ಮೋಹಗೊಂಡ ಬಲ್ಲಾಳನು ಅವಳನ್ನು ರಮಿಸಲು ಬೇರೆ ಬೇರೆ ಪ್ರಯತ್ನಗಳನ್ನು ಮಾಡುತ್ತಾನೆ.

ಬಲ್ಲಾಳನು ಹಠವನ್ನು ಮಾಡುತ್ತಾನೆ. “ಪರತಿ ಮಂಗಣೆ, ನೀನು ನಾನು ಕೊಟ್ಟ ಎಲೆ ಅಡಿಕೆ ತಿನ್ನುದಿಲ್ಲವಾದರೆ ನಾನು ಇನ್ನು ಇಲ್ಲಿ ಕುಳಿತುಕೊಳ್ಳುವುದಿಲ್ಲ” ಎಂದು ಬಲ್ಲಾಳನು ಹೇಳುತ್ತಾನೆ. ಆಗ ಪರತಿ ಮಂಗಣೆಯು “ನನ್ನ ಗಂಡ ಎಲೆ ಅಡಿಕೆ ತರಬೇಕು, ನಾನು ತಿನ್ನಬೇಕು” ಎನ್ನುತ್ತಾಳೆ. ಅಷ್ಟು ಮಾತನ್ನು ಕೇಳಿದಾಗ ಬಲ್ಲಾಳ ದಡಕ್ಕನೆ ಎದ್ದನು. ಕೋಪದಲ್ಲಿ ಕಣ್ಣು ಕೆರಳಿಸಿ ಅಂಗಳದಲ್ಲಿ ನಿಂತನು “ಮಂಗಳವಾರ ಸಿಂಗಬಾಳೆಯ ಗೊನೆ ಕಡಿಯಲಿದೆ ಜುಮಾದಿ ಭೂತಕ್ಕೆ ನೇಮ ಇದೆ. ನಿನ್ನ ಗಂಡ ಪರವ ಬಂದರೆ ನೀನು ಹೇಳಬೇಕು” ಎಂದು ಹೇಳಿದನು. ಪರವ ಬಂದಾಗ ಪರತಿ ಈ ವಿಚಾರ ತಿಳಿಸಿದಳು. ಪರವ ಮೈಂದನು ಕೊಟ್ಟಿಗೆಗೆ ಬಂದು ಹಾಳೆಯ ಕಟ್ಟನ್ನು ಹಾಕಿದನು. ನೀರು ತರುವ ಮಂಗಣೆಯು ಕಣ್ಣಿನಲ್ಲಿ ಕಡು ದುಃಖ ತೆಗೆಯುತ್ತಾಳೆ. “ಇದು ಯಾಕೆ ಇವತ್ತು ಈ ರೀತಿ ವಿಶೇಷವಾಗಿ ದುಃಖಿಸುತ್ತಿ” ಎಂದು ಪರವ ಮೈಂದನು ಅವಳಲ್ಲಿ ಕೇಳಿದನು. “ಇವತ್ತು ಯಾಕೆ ಅಳುವುದೆಂದರೆ ಚಿಕ್ಕ ವಯಸ್ಸಿನಲ್ಲಿ ನಾನು ನಿಮ್ಮ ಕೈ ಹಿಡಿದೆ. ಇವತ್ತಿನ ದಿನ ನಮಗೆ ಮರಣ ಬರುತ್ತದೆ. ಬಲ್ಲಾಳರಲ್ಲಿ ನೇಮವಿದೆ ಎಂದು ಕೇಳಿದಿರಲ್ಲಾ, ನಾವು ನಮ್ಮ ತಂದೆ ತಾಯಿಯವರಲ್ಲಿಗೆ ಹೋಗಿ ಬರಬೇಕು” ಎನ್ನುತ್ತಾಳೆ ಪರತಿ ಮಂಗಣೆ. ಹಾಗೆಯೇ ಪರವ ಮೈಂದ ಮತ್ತು ಪರತಿ ಮಂಗಣೆ ಅವಳ ತಂದೆ ತಾಯಿಯ ಊರಿಗೆ ಬರುತ್ತಾರೆ. ಅವಳನ್ನು ತಾಯಿ ಕೇಳುತ್ತಾಳೆ “ಇಷ್ಟರವರೆಗೆ ಬಾರದವರು ಇವತ್ತು ಏನು ಬಂದಿ” ಆಗ ಪರತಿಯು “ಬೊಟ್ಟಿಪ್ಪಾಡಿ ಬಲ್ಲಾಳರ ಬೀಡಿನಲ್ಲಿ ಹೊಸ ಭೂತಕ್ಕೆ ನೇಮಕ್ಕಾಗಿ ಬಾಳೆ ಗೊನೆ ಕಡಿದಿದ್ದಾರೆ. ಅದಕ್ಕೆ ನಾವು ಹೋಗಬೇಕಾಗಿದೆ. ಅದಕ್ಕಿಂದ ಮೊದಲು ನಿಮ್ಮನ್ನು ನೋಡಿ ಬಿಡುತ್ತೇನೆ ಎಂದು ಪೂರ್ವದಿಂದ ಪಶ್ಚಿಮಕ್ಕೆ ಬಂದಿದ್ದೇನೆ” ಮಗಳಿಗೆ ತಾಯಿ ಕಪ್ಪು ಹೆಂಟೆಯನ್ನು ಕೊಂದು, ಅಕ್ಕಿಯ ಅಡ್ಯೆ (ತಿಂಡಿ)ಯನ್ನು ಮಾಡಿ ಸನ್ಮಾನ ಮಾಡುತ್ತಾಳೆ. ತಂದೆ ತಾಯಿಯ ಕಾಲಿಗೆ ನಮಸ್ಕರಿಸಿ ಅವರು ಹಿಂದಕ್ಕೆ ಬರುತ್ತಾರೆ. ಮನೆಗೆ ಬಂದು ಭೂತದ ಆಭರಣಗಳ ಪೆಟ್ಟಿಗೆಯನ್ನು ಹೊತ್ತುಕೊಂಡು ಬೊಟ್ಟಿಪ್ಪಾಡಿ ಬಲ್ಲಾಳರಲ್ಲಿಗೆ ಬರುತ್ತಾರೆ. ಇವರನ್ನು ನೋಡಿ ಬಲ್ಲಾಳನು ಮುಗುಳು ನಗೆ ನಗುತ್ತಾನೆ. ಅವರಿಗೆ ಕುಳಿತುಕೊಳ್ಳಲು ಚಾಪೆ ಕೊಡುತ್ತಾನೆ. “ಏನು ನೋಡುತ್ತೀಯಾ ಪರತಿ ಮಂಗಣೆ, ನಾನು ಭೂತದ ಅಣೆಯನ್ನು ಕಟ್ಟುತ್ತೇನೆ. ನೀನು ಹೂವನ್ನು ಕೊಯ್ದುಕೊಂಡು ಬಾ” ಎನ್ನುತ್ತಾನೆ ಪರವ ಮೈಂದ. ಅವನು ಹಾಳೆಯನ್ನು ಅಣಿ ಕಟ್ಟುತ್ತಾನೆ, ಪರತಿಯು ಕೇಪುಳ ಹೂವನ್ನು ಕೊಯ್ದು ತರುತ್ತಾಳೆ ಪರವನ ಹತ್ತಿರ ಕುಳಿತುಕೊಂಡು ಹೂವಿನ ಮಾಲೆ ಕಟ್ಟುತ್ತಾಳೆ. “ಏನು ನೋಡುತ್ತೀರಿ ಬಲ್ಲಾಳರೆ ವೇಳೆ ಹೋಗುತ್ತಿದೆ. ಹೊತ್ತು ಆಗುತ್ತಿದೆ. ಭೂತನ ವೇಷ ಹಾಕಲು ಎಣ್ಣೆ ಹಿಡಿಯಬೇಕು. ಮೀಯಲು ಹೋಗಬೇಕು” ಎಂದು ಪರವ ಮೈಂದ ಹೇಳುತ್ತಾನೆ. ಅದೇ ರೀತಿ ಬೊಟ್ಟಿಪ್ಪಾಡಿ ಬಲ್ಲಾಳಲು ಕಂಚಿನ ದೀಪವನ್ನು ಇಟ್ಟು ಗಿಂಡಿಯಲ್ಲಿ ಎಣ್ಣೆ ಹಾಕಿಕೊಂಡು ಎಲೆಯ ತುದಿಯಲ್ಲಿ ವೀಳ್ಯವನ್ನು ಇಟ್ಟುಕೊಂಡು ತಂದು ಪರವನಿಗೆ ಭೂತದ ಎಣ್ಣೆಯನ್ನು ಕೊಡುತ್ತಾನೆ. ಅವರು “ಸ್ವಾಮಿ ದೇವರೇ” ಎಂದು ನಾಲ್ಕು ದಿಕ್ಕುಗಳಿಗೂ ಕೈ ಮುಗಿದು ಎಣ್ಣೆಯನ್ನು ತೆಗೆದುಕೊಳ್ಳುತ್ತಾನೆ.

ಪಾದಕ್ಕೆ ಮೂರು ಹನಿ ಎಣ್ಣೆಯನ್ನು ಮುಟ್ಟಿಸುತ್ತಾನೆ. ನೆತ್ತಿಗೆ ಮೂರು ಹನಿ ಎಣ್ಣೆಯನ್ನು ತಾಗಿಸುತ್ತಾನೆ. ಎಣ್ಣೆಯ ಗಿಂಡಿಯನ್ನು ಪರತಿಯಲ್ಲಿ ಕೊಡುತ್ತಾನೆ. ಪರವ ಮೈಂದ ಸ್ನಾನ ಮಾಡಿಕೊಂಡು ಬರುತ್ತಾನೆ. ಆಮೇಲೆ ಮುಖಕ್ಕೆ ಅರದಾಳವನ್ನು ಹಚ್ಚುವುದಕ್ಕೆ ಕುಳಿತುಕೊಳ್ಳುತ್ತಾನೆ. ಅರದಾಳವನ್ನು ಹಚ್ಚಿದ ಮೇಲೆ ಎದ್ದು ನಿಂತು ಕಾಲಿಗೆ ಗಗ್ಗರವನ್ನು ಇಡುತ್ತಾನೆ. ಬೆನ್ನಿಗೆ ಅಣಿಯನ್ನು ಕಟ್ಟಿಕೊಳ್ಳುತ್ತಾನೆ. ಪರತಿ ಮಂಗಣೆ ತೆಂಬರೆಯನ್ನು ಬಾರಿಸುತ್ತಾಳೆ. ಭೂತದ ವೇಷವನ್ನು ಕಟ್ಟಿಕೊಂಡು ಪರವ ಮೈಂದ ಎದ್ದು ನಿಲ್ಲುತ್ತಾನೆ. ಆಗ ಬೊಟ್ಟಿಪ್ಪಾಡಿ ಬಲ್ಲಾಳನಿಗೆ ಮುಗುಳು ನಗೆ ಬರುತ್ತದೆ. ಭೂತದ ವೇಷವನ್ನು ಹಾಕಿಕೊಂಡು ಪರವ ಮೈಂದ ಕುಣಿಯುತ್ತಾ ಕುಣಿಯುತ್ತಾ ಬರುವಾಗ ಬಲ್ಲಾಳನು ಗಿಳಿಸೂವೆ (ಸಣ್ಣದಾದ ಕಿಟಕಿ)ಯಲ್ಲಿ ಜೋಡುನಳಿಗೆಯ ಕೋವಿಯನ್ನು ಇಟ್ಟು, ಗುಂಡು ಹೊಡೆದು ಪರವನನ್ನು ಕೊಲ್ಲುತ್ತಾನೆ. ಆಗ ಪರತಿ ಮಂಗಣೆ ಬೊಬ್ಬೆ ಹಾಕುತ್ತಾಳೆ – “ಅಯ್ಯಯ್ಯೋ ಬಲ್ಲಾಳರೇ, ನನ್ನ ಗಂಡನನ್ನು ಕೊಂಡಿರಲ್ಲ” ಎನ್ನುತ್ತಾಳೆ.

ಆಗ ಬಲ್ಲಾಳನು “ಪರತಿ ಮಂಗಣೆ, ನಿನ್ನ ಗಂಡನು ಸತ್ತರೂ ನನ್ನ ಸಾವಿರ ಮುಡಿ ಅಕ್ಕಿಯ ಆಸ್ತಿಯನ್ನು ನಿನಗೆ ಕೊಡುತ್ತೇನೆ, ಹೆದರಬೇಡ” ಎನ್ನುತ್ತಾನೆ.

ಆಗ ಪರತಿ ಮಂಗಣೆಯು “ಬಲ್ಲಾಳರೇ ನೀವೇನೂ ಹೆದರಬೇಡಿ. ನಾವು ಇವರ ಚಿತೆಯನ್ನು ಬಾಕಿತಿಮಾರು ಗದ್ದೆಯಲ್ಲಿ ಸಿದ್ಧಮಾಡುವ” ಎನ್ನುತ್ತಾಳೆ. “ಮಾವಿನ ಮತ್ತು ಹಲಸಿನ ಮರಗಳನ್ನು ಕಡಿದು ಚಿತೆಯನ್ನು ಬಾಕಿತಿಮಾರು ಗದ್ದೆಯಲ್ಲಿ ಸಿದ್ಧಮಾಡಬೇಕು” ಎನ್ನುತ್ತಾಳೆ. ಅದೇ ರೀತಿ ಬಲ್ಲಾಳರು ಚಿತೆಯನ್ನು ಸಿದ್ದಮಾಡುತ್ತಾನೆ.

ಆಗ ಪರತಿ ಮಂಗಣೆ ಬಲ್ಲಾಳನಲ್ಲಿ “ಬಿಸಿನೀರು ಕಾಯಿಸಿದರಿ, ನನ್ನ ಗಂಡನನ್ನು ಮೀಯಿಸಬೇಕು” ಎನ್ನುತ್ತಾಳೆ. ಬಲ್ಲಾಳನು ಬಿಸಿ ನೀರು ಕಾಯಿಸುತ್ತಾನೆ. ಆಗ ಪರತಿ ಮಂಗಣೆ ಬಲ್ಲಾಳರೆ ನನ್ನ ಗಂಡನ ತಲೆಯ ಬದಿಯಲ್ಲಿ ನಾನು ಹಿಡಿಯುತ್ತೇನೆ, ಕಾಲಿನ ಬದಿಯಲ್ಲಿ ನೀವು ಹಿಡಿಯಿರಿ ಸ್ನಾನ ಮಾಡಿಸುವ ಎನ್ನುತ್ತಾಳೆ. ಹಾಗೆಯೇ ಹಿಡಿದು ಸ್ನಾನ ಮಾಡಿಸುತ್ತಾರೆ.

ಆಗ ಪರತಿ ಮಂಗಣೆ “ಬಲ್ಲಾಳರೆ ನಿಮ್ಮ ಪೆಟ್ಟಿಗೆಯ ಬಾಯಿ ತೆಗೆಯಿರಿ. ನೀವು ಉಡುವ ಪಟ್ಟೆವಸ್ತ್ರವನ್ನು ತನ್ನಿರಿ. ನೀವು ಕಟ್ಟುವ ರುಮಾಲನ್ನು ತನ್ನಿರಿ, ನಿಮ್ಮ ಬೆಳ್ಳಿಕಟ್ಟಿನ ಚೂರಿ, ಬೆಳ್ಳಿಕಟ್ಟಿನ ಬೆತ್ತಗಳನ್ನು ತನ್ನಿರಿ” ಇವುಗಳನ್ನೆಲ್ಲಾ ನನ್ನ ಪರವನ ಕೈಯಲ್ಲಿ ಇಡಿರಿ” ಬಲ್ಲಾಳನು ಓಡುತ್ತಾ ಬೀಳುತ್ತಾ ಹೋಗಿ ಅವುಗಳನ್ನೆಲ್ಲಾ ತಂದನು. ಪರವನ ಹೆಣಕ್ಕೆ ಪಟ್ಟೆಯ ವಸ್ತ್ರವನ್ನು ಉಡಿಸಿ, ಮುಂಡಾಸನ್ನು ಕಟ್ಟಿದನು. “ಇನ್ನು ಏನು ನೋಡುತ್ತೀಯ ಪರತಿ ಮಂಗಣೆ” ಎಂದು ಬಲ್ಲಾಳ ಕೇಳುತ್ತಾನೆ. “ಚಿತೆಗೆ ನಿಮ್ಮ ಅಟ್ಟದಲ್ಲಿರುವ ಒಣ ತೆಂಗಿನಕಾಯಿಯನ್ನು ಹಾಕಬೇಕು” ಎನ್ನುತ್ತಾಳೆ ಪರತಿ ಮಂಗಣೆ.

ಓಡುತ್ತಾ ಬೀಳುತ್ತಾ ಹೋಗ ಬಲ್ಲಾಳನು ಒಣ ತೆಂಗಿನಕಾಯಿಯನ್ನು ತಂದು ಚಿತೆಗೆ ಹಾಕಿದನು. “ಇಷ್ಟೆಲ್ಲಾ ಆಯಿತಲ್ಲ ಪರತಿ ಮಂಗಣೆ, ಇನ್ನು ಹೆಣವನ್ನು ಚಿತೆಯಲ್ಲಿ ಕೊಂಡುಹೋಗಿ ಇಡುವ” ಎನ್ನುತ್ತಾನೆ ಬಲ್ಲಾಳ. ಆಗ ಪರತಿ ಮಂಗಣೆ, “ನಿಮ್ಮ ಹೆಂಡತಿಯ ಪಟ್ಟೆಯ ಸೀರೆ, ರವಿಕೆ, ಕರಿಮಣಿ, ಮೂಗುತಿ ಇವುಗಳನ್ನೆಲ್ಲ ತನ್ನಿರಿ, ಇವುಗಳಿಂದ ನಾನು ಅಲಂಕಾರ ಮಾಡಿಕೊಳ್ಳಬೇಕು. ನನ್ನ ಪರವನಿಗೆ ಅಲಂಕಾರವಾದ ಹಾಗೆ ನನಗೂ ಅಲಂಕಾರವಾಗಬೇಕು” ಎಂದು ಬಲ್ಲಾಳನಿಗೆ ಹೇಳುತ್ತಾಳೆ.

ಬಲ್ಲಾಳನು ಓಡುತ್ತಾ ಬೀಳುತ್ತಾ ಹೋಗಿ ತನ್ನ ಹೆಂಡತಿಯ ಅಲಂಕಾರದ ವಸ್ತುಗಳನ್ನೆಲ್ಲಾ ತಂದು ಪರತಿಗೆ ಕೊಡುತ್ತಾನೆ. ಅವುಗಳಿಂದ ಪರತಿ ಮಂಗಣೆ “ದುಃಖದ ಅಲಂಕಾರ”ವನ್ನು ಮಾಡಿಕೊಳ್ಳುತ್ತಾಳೆ. “ಇನ್ನು ಏನು ನೋಡುವುದು ಪರತಿ ಮಂಗಣೆ, ಹೆಣವನ್ನು ಕೊಂಡು ಹೋಗುವ ಎನ್ನುತ್ತಾನೆ ಬಲ್ಲಾಳ”. ಪರತಿ ಮಡಿಲಿನಲ್ಲಿ ಬೆಂಕಿಪೆಟ್ಟಿಗೆಯನ್ನು ಇಟ್ಟುಕೊಂಡಳು. “ಕಾಲಿನಲ್ಲಿ ನೀವು ಹಿಡಿಯಿರಿ, ತಲೆಯಲ್ಲಿ ನಾನು ಹಿಡಿಯುತ್ತೇನೆ” ಎನ್ನುತ್ತಾಳೆ. ಹಾಗೆಯೇ ಕೊಂಡು ಹೋಗಿ ಚಿತೆಗೆ ಮೂರು ಸುತ್ತು ಬಂದು ಪರವ ಮೈಂದನ ಹೆಣವನ್ನು ಚಿತೆಯ ಮೇಲೆ ಇಡುತ್ತಾರೆ. ಪರತಿ ಮಂಗಣೆ ಚಿತೆಗೆ ಮೂರು ಸುತ್ತು ಬಂದಳು. ಬೆಂಕಿ ಕಡ್ಡಿ ಗೀರಿ ಚಿತೆಗೆ ಬೆಂಕಿ ಕೊಟ್ಟಳು. ಅದು ಪೂರ್ತಿ ಬೆಂಕಿ ಹಿಡಿದು ಉರಿಯಲು ತೊಡಗಿದಾಗ, “ನನ್ನ ಗಂಡ ಹೋದರಲ್ಲ ನಾನೇಕೆ ಇರಬೇಕು?” ಎಂದು ಹೇಳಿ ಚಿತೆಯ ಬೆಂಕಿಗೆ ದಬಕ್ಕನೆ ಹಾರಿದಳು. ಅಷ್ಟರಲ್ಲಿ ಬೊಟ್ಟಿಪ್ಪಾಡಿ ಬಲ್ಲಾಳನು “ಕೊನೆಗೂ ಪರತಿ ಮಂಗಣೆ ತನಗೆ ಸಿಕ್ಕಲಿಲ್ಲವಲ್ಲ” ಎಂದು ಬೆಂಕಿಯಲ್ಲಿ ಅವಳ ಸೌಂದರ್ಯವನ್ನು ನೋಡಿ ತಾನೂ ಚಿತೆಯ ಬೆಂಕಿಗೆ ಹಾರಿದನು.

ಭೂತಕ್ಕೆ ಕಟ್ಟುವ ಪರವನೊಬ್ಬನ ಹೆಂಡತಿಯನ್ನು ಕಂಡು ಮೋಹಿಸಿದ ಬೊಟ್ಟಿಪ್ಪಾಡಿ ಬಲ್ಲಾಳನು ಅವಳನ್ನು ಪಡೆಯುವುದಕ್ಕಾಗಿ ಭೂತ ಕಟ್ಟಿದ ಅವಳ ಗಂಡನನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ಅವನ ವಂಚನೆಗೆ ಪ್ರತಿಯಾಗಿ ಪರತಿ ಮಂಗಣೆಯು ಅವನನ್ನು ಒಲಿಸಿದಂತೆ ನಟಿಸಿ ಅವನ ಎಲ್ಲ ಸಂಪತ್ತನ್ನು ಬೆಂಕಿಗೆ ಹಾಕಿಸಿ, ಕೊನೆಗೆ ತಾನು ಬೆಂಕಿಗೆ ಹಾರಿ ಪ್ರತಿ ವಂಚನೆ ಮಾಡುತ್ತಾಳೆ. ತಾನು ಮೋಹಿಸಿದ ಹೆಣ್ಣು, ಸಂಪತ್ತು ಎಲ್ಲವನ್ನು ಕಳೆದುಕೊಂಡ ಬಲ್ಲಾಳನು ತಾನೂ ಬೆಂಕಿಗೆ ಹಾರುವ ಮೂಲಕ ಪ್ರಾಣ ಕಳೆದುಕೊಳ್ಳುವ ಮೂರು ಜನರ ಸಾವಿನ ದುರಂತದ ವಿವರವನ್ನು ಹೊಂದಿದ ಪಾಡ್ದನವನ್ನು ಕಾಣಬಹುದು.

ದೈವಾರಾಧನೆಯ ಸಂದರ್ಭದಲ್ಲಿ ಹಾಡುವ ಕಲಾವಿದರಾದ ಪರತಿಯರಿಂದ ಸಂಗ್ರಹಿಸಿದ ಕೆಲವು ಪಾಡ್ದನ ಪಠ್ಯಗಳ ಕನ್ನಡ ಅನುವಾದಗಳನ್ನು ಕೆಳಗೆ ನೀಡಿದ್ದು ಮೂಲ ಪಠ್ಯವನ್ನು ತುಳುಭಾಷೆಯಲ್ಲಿರುವುದನ್ನು ಅನುಬಂಧದಲ್ಲಿ ನೀಡಲಾಗಿದೆ.

ಕೊಯ್ಯೂರು ಉಳ್ಳಾಲ್ತಿ ದೈವದ ಪಾಡ್ದನ

ನಾಲ್ಕು ಸ್ನಾನ ಉಂಟು ನಪಪಾದೆಯಿಂದ ಬಲ್ಲಾಳದ ಗುಡಿಯಿಂದ ಮುಳ್ಳುಪಾಡಿ ಗುಡಿಗೆ ಆಯನ ಲತ್ತಲೆ? ದಕ್ಷಿಣದ ಪಿಲಿಯಾಂದ್ರ ಕುಮಾರನಿಗೂ ಅರಸನಂದನ ಅಣ್ಣನಿಗೂ ಮಾತಿನಲ್ಲಿ ಹೆಚ್ಚು ಕಡಿಮೆ ಒಮ್ಮೆ ಬಂದಿತು. ರಾಜ್ಯದ ಕೆಲಸಕ್ಕೆ ಯಾರು ರಾರು ಇದ್ದಾರೆ ಎಂದು ನಂದನು ಕೇಳುವಾಗ ಕೊಯ್ಯೂರು ಗುತ್ತಿನ ಉಣಿಲೆ ಬೀಡಿನ ಪಾಂಡ್ಯಂಬೆರ್, ಮೈಂದೆಂಬೆರ್ ಇದ್ದಾರೆಯೇ. ಜತ್ತನಕ್ಕೆರ್ ಬೀರನಕ್ಕೆರ್ ನಕ್ರುಮಂದೆ ಬುಧಮಂದೆ ನಾಲ್ವರೂ ಉಳ್ಳಾಕ್ಲ್‌ನ ಮಕ್ಕಳು ಇದ್ದಾರೆಂದು ಹೇಳಿದರು. ಕೊಂಡು ಜೀವೊನೇ ತೂವೊಂಡೆರ್? ಕೊಯ್ಯೂರು ಗುತ್ತಿನ ಉಣಿಲೆ ಬೀಡಿನ ಇಡಿಮುಲ್ಲ ಪಾರ?ವನ್ನು ಹಾಕಿದರು. ನಾವು ಹೋದ ರಾಜ್ಯಕಾರ್ಯ ಆಗಿ ಊರಿಗೆ ಬಂದರೆ ಮುಳ್ಳಿಪ್ಪಾರಿ ಗುಂಡದಲ್ಲಿ ಮುಂದೆ ಮತ್ತು ಹಿಂದೆ ಮುಖವಿರುವ ಮೂರ್ತಿಯನ್ನು ಸ್ಥಾಪಿಸುತ್ತೇವೆ ಎಂಬುದಾಗಿ ಹೇಳಿದರು. ಕಣ್ಣಾಚೆಯಿಂದ ಕಡ್ತಲೆಯನ್ನು ತೆಗೆದುಕೊಂಡರು. ಕೆಬಲನದ ಅಡ್ಡಣವನ್ನು ತೆಗೆದುಕೊಂಡರು ಕೊಯ್ಯೂರು ಗುತ್ತಿನ ಉಣಿಲೆ ಬೀಡನ್ನು ದಾಟಿದರು, ಕಲ್ಲೇರಿ ಕಲೆಂಜ ಮಲೆಬೆಟ್ಟು ಕಾಜೋತಿನಾಡನ್ನು ದಾಟಿದರು. ಕಿರಿಯಾಡಿ ದೇವರ ಬೆಟ್ಟವನ್ನು ಬೇಗ ದಾಟಿದರು. ಕಿರಿಯಾಡಿ ದೇವರ ದೇವಸ್ಥಾನವನ್ನು ದಾಡಿದರು. ಪೆರ್ಮನ ಬಸದಿಯನ್ನು ದಾಟಿ, ಕೋಟಿಕಟ್ಟೆ ಪೆರಿಮಲೆ ಕುಕ್ಕು ದಾಟಿದರು, ಸತ್ಯದ ಕುಕ್ಕು, ಶರಣ ಗುಂಡ, ಮಾಸ್ತಿಕಲ್ಲು, ಮರಣ ಭೂಮಿಗಳನ್ನು ಹಿಂದಕ್ಕೆ ಬಿಟ್ಟು, ಕಿಲ್ಲೂರನ್ನು ದಾಟಿದರು. ಕಿಲ್ಲೂರನ್ನು ಅವರು ಹಿಂದಕ್ಕೆ ಬಿಟ್ಟು ಕಾಜೂರ ಕಲ್ಲಮಾಡ ದಾಟಿದರು. ಗುರುಕ್ಕಿನಡೆ ದಾಟಿದರು. ಜಂಕಿಬುಡಾರ, ಜಂಗಮಕೆರೆ, ಮುಂಡಂದಲೆ ಮೂಲ ಹಿಂದಕ್ಕೆ ಬಿಟ್ಟರು. ದಾರಿಯನ್ನು ಕಟ್ಟಿಕೊಂಡು ಅಡ್ಡ ಬಿದ್ದುಕೊಂಡು ಕಾಜೂರ ಕಲ್ಲಮಾಡದಲ್ಲಿ ನೆಲೆಯಾದರು.ಸ ಕಾಜೂರ ಕಲ್ಲಮಾಡವನ್ನು ಹಿಂದಕ್ಕೆ ಬಿಟ್ಟರು. ಕಿಲ್ಲೂರನ್ನು ಅವರು ದಾಟಿದರು. ಬಂಗಾಡಿ ಮೊಗಸಾಲೆಯಲ್ಲಿ ನೆಲೆಯಾದರು, ಸಾದಿ ಕಟ್ಟೊನ ಒಡ್ಡಮಗುರೋನು ಬಂಗಾಡಿ ಮೊಗಸಾಲೆಯನ್ನು ಹಿಂದಕ್ಕೆ ಬಿಟ್ಟರು. ಕೋಟಿಕಟ್ಟೆ ಕೊರಿಂಗರ ಕುಕ್ಕು, ವೀರಭದ್ರ ಮಾಡ ಹಿಂದಕ್ಕೆ ಬಿಟ್ಟರು. ಕೊರಿಂಗರ ಕುಕ್ಕು ಹಿಂದಕ್ಕೆ ಬಿಟ್ಟು ಸತ್ಯದ ಕುಕ್ಕು, ಶರಣಗುಂಡ, ಮಾಸ್ತಿಕಲ್ಲು, ಮರಣಭೂಮಿ ದಾಟಿದರು. ಕಟ್ಟಿಜಿ ಪಿಜ ನಾವುರಂದಡ್ಕಗಳನ್ನು ಹಿಂದಕ್ಕೆ ಬಿಟ್ಟರು. ಸಾದಿಕಟ್ಟೋನು ಒಡ್ಡಮಗುರೋನು ಪೆರುಮಣ ಬಸದಿಯಲ್ಲಿ ಒಂದಾದರು. ಅಂದೆವೂರ ದೇವರ ದೇಲ? ದಾಟಿದರು. ಬೋಳ್ತೆಡೆನ ಕುರುವಿಗೆ ಬರುತ್ತಾರೆ. ಬೊಳ್ತೇರೆ ಕರುವಿಗೆ ಬಂದು ಇನ್ನೂರು ಮಂದೆ ಕನ್ನಡರ ಸೈನ್ಯ ಸುದೆಮುಗೆರನಂತಲ್ಲಿ ದೀಡಂದ? ಬಾಗಿಲು ಹಾಕಿ ಒಳಗೆ ಇದ್ದಾರೆಂದು ಹೇಳಿದರು. ಬೊಳ್ತೇರೆ ಕರ ಹಿಂದಕ್ಕೆ ಬಿಟ್ಟರು ಸುದೆಮುಗೆರಂತಲ್ಲಿಗೆ ಹೋದರು. ಸುದೆಮುಗೆರಂತಲ್ಲಿಗೆ ಹೋದರು. ಇಂದ್ರಲೋಕದ ಸಿಟ್ಟನ್ನು ತಂದುಕೊಂಡರು. ಬಾಗಿಲನ್ನು ನಡೆದು ಮೆಟ್ಟಿದರು. ಇನ್ನೂರು ಮಂದಿ ಕನ್ನಡರ ಸೈನ್ಯದ ತಲೆಯನ್ನು ಕಡಿದರು. ನಾವು ಅವತ್ತು ಹೇಳಿದ ಆಯ? ನ್ಯಾಯ ಇವತ್ತಿಗೆ ಆಗಿ ಬಂದಿದೆ ಎಂದು ಹೇಳಿದರು. ಸುದೆಮುಗೆರಂತಲ್ಲಿಗೆಯನ್ನು ಹಿಂದಕ್ಕೆ ಬಿಟ್ಟರು ಕೊಯ್ಯೂರಿನ ಗುತ್ತಿಗೆ ಉಣಿಲೆ ಬೀಡಿಗೆ ಇಡಿಮುಲ್ಲ ಪಾರ? ಹಾಕಿದರು. ನಾವು ಅವತ್ತು ಹೇಳಿದ ಆಯ ನ್ಯಾಯ ಇವತ್ತಿಗೆ ಆಗಿ ಬಂದಿದೆ ಎಂದು ಹೇಳಿದರು. ಮೂರ್ತಿಯ ಕೆಲಸವನ್ನು ಮಾಡಿಸಿದ್ದಾರೆ. ಮಲೆಯಾಳಿಯ ತಂತ್ರಿಯನ್ನು ಕರೆಸಿದ್ದಾರೆ. ಸಾವಿರಕಳಶದಲ್ಲಿ ಸಾವಿರಮನ ಕಳಶದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಸಾವಿರ ಹೋಮ ಇಟ್ಟು ಒಕ್ಕಲು ಮಾಡಿದರು.

ಇವತ್ತಿಗಾಗಿ ಹೋಮ ನೇಮ ಸಾಕೆಂದು ಹೇಳಿದರು. ಊರು ಇಳಿದು ಹೋಮ ನೇಮಗಳು ಬೇಕೆಂದು ಹೇಳಿದರು. ದಕ್ಷಿಣದ ರಾಜ್ಯದ ಯಜಮಾನದಲ್ಲಿ ಕೇಳಿ ಹೋಮ ನೇಮಕ ಪಡೆದರು, ಕಾವಲಿ ಶಾನುಭಾಗರಲ್ಲಿ ಪಡೆದರು, ಬುದ್ಯಂತರಲ್ಲಿ ಪಡೆದರು, ನಾಲ್ಕು ಬರಿಕೆ (ಭಾಗ)ಯಿಂದ ಪಡೆದರು, ಪಾಂಬೇಲ ಬರಿಕೆಯಿಂದ ಹೋಮ ನೇಮವನ್ನು ಪಡೆದರು.

ಇಂದಬೆಟ್ಟು, ಕೊತ್ರೊಟ್ಟು ಉಳ್ಳಾಲ್ತಿ ದೈವದ ಪಾಡ್ದನ

ಘಟ್ಟದ ಮೇಲಿನ ಒಂದು ರಾಜ್ಯದಲ್ಲಿ ಅಣ್ಣ ಮತ್ತು ತಂಗಿ ಒಡ್ಡೋಲಗವಾಗುತ್ತಾರೆ. ಹೀಗೆ ಒಡ್ಡೋಲಗ ಆಗುವಾಗ ಅವರ ಬಗೆಗೆ ಮತ್ಸರ ಮಾಡಿದರು. ಮಾವ ಮತ್ಸರ ಮಾಡಿದ ಊರಿನಲ್ಲಿ ನಾವು ನಿಲ್ಲುವುದಿಲ್ಲ, ಕುಳಿತುಕೊಳ್ಳುವುದಿಲ್ಲ, ಬಿಸಿ ನೀರು ಮುಟ್ಟುವುದಿಲ್ಲ, ತಣ್ಣೀರು ಕುಡಿಯುವುದಿಲ್ಲ ಘಟ್ಟದ ರಾಜ್ಯವನ್ನು ಬಿಡುತ್ತೇವೆ ಎಂದು ಹೇಳುತ್ತಾರೆ. ಹೂಮಾಲೆನ್ನು ಕಟ್ಟಿ ಜಲ್ಲಿಯನ್ನು ಹಾಕಿ ಹೊರಟರು. ಜಲ್ಲಿಯನ್ನು ಹಾಕಿ ಇಳಿದುಕೊಂಡು ಬರುವಾಗ ದೂರಕ್ಕೆ ದೃಷ್ಟಿ ಹಾಯಿಸಿದರು. ಹೀಗೆ ದೂರಕ್ಕೆ ದೃಷ್ಟಿ ಹಾಯಿಸಿ ನೋಡಿದಾಗ ಬೈರವ ದೇವರ ಬೆಟ್ಟ ಕಾಣಿಸುತ್ತದೆ. ಬೈರವ ದೇವರ ಬೆಟ್ಟಕ್ಕೆ ಬಂದು ಅದನ್ನು ದಾಟಿ ಮುಂದೆ ಎಲ್ಲಿಗೆ ಹೋಗುವುದೆಂದು ಯೋಚಿಸಿದರು. ಕಡ್ತಿ ಕಲ್ಲ ಘಾಟಿ ಇಳಿದರು, ಕಡ್ತಿ ಕಲ್ಲ ಮೆಟ್ಟಿಲುಗಳನ್ನು ಇಳಿದರು. ಹೀಗೆ ಇಳಿದುಕೊಂಡು ಬರುವಾಗ ಜಂಕಿಲ ಬುಡಾರ ಕಾಣುತ್ತದೆ, ಜಂಕಿಲ ಬುಡಾರ ಜಂಗಮ ಕೆರೆ ಮುಂಡಲ ಮೂಲ ಇವುಗಳನ್ನು ದಾಟಿ ಮುಂದೆ ಬರುತ್ತಾರೆ. ಮುಂದೆ ದೂರಕ್ಕೆ ದೃಷ್ಟಿ ಹಾಯಿಸುತ್ತಾರೆ. ಆಗ ಕಾಜೂರ ಕಲ್ಲಮಾಡಕಾಣಿಸುತ್ತದೆ. ಕಾಜೂರ ಕಲ್ಲಮಾಡಕ್ಕೆ ಬರುತ್ತಾರೆ. ಕಾಜೂರ ಕಲ್ಲಮಾಡದಲ್ಲಿ ಒಂದು ದಿನ ನಿಲ್ಲುತ್ತಾರೆ. ಅಲ್ಲಿಂದ ದೂರಕ್ಕೆ ದೃಷ್ಟಿ ಹಾಯಿಸುತ್ತಾರೆ. ಆಗ ಸತ್ಯದ ಚೌಕಿ ಕಾಣುತ್ತದೆ. ಅಲ್ಲಿ ಒಂದು ದಿನ ನಿಲ್ಲುತ್ತಾರೆ. ಅಲ್ಲಿಂದ ಮುಂದೆ ದೃಷ್ಟಿ ಹಾಯಿಸಿದಾಗ ಮಿತ್ತೆವುದ ಚೌಕಿ ಕಾಣುತ್ತದೆ. ಮಿತ್ತೆವುದ ನದಿಯನ್ನು ದಾಟುತ್ತಾರೆ. ಮಿತ್ತೆವು ಕೊಮಿನಾಡಿ ಬರ್ಕೆಯನ್ನು ನೋಡಬೇಕಉ ಎಂಬುದಾಗಿ ಬಯಸುತ್ತಾರೆ. ಮಿತ್ತೆವುದ ನದಿಯನ್ನು ದಾಟಿ ಮಿತ್ತೆವುದ ಚೌಕಿಯಲ್ಲಿ ನಿಂತು ನೋಡುವಾಗ ಕೊಮಿನಾಡಿ ಬರ್ಕೆ ಕಾಣಿಸುತ್ತದೆ. ಮಿತ್ತೆವುದ ಚೌಕಿಯನ್ನು ಹಿಂದಕ್ಕೆ ಬಿಟ್ಟು, ಕೊಮಿನಾಡಿ ಬರ್ಕೆಗೆ ಹೋಗುತ್ತಾರೆ. ಅಲ್ಲಿ ಕೊಮಿನಾಡಿ ಬರ್ಕೆಗೆ ಹೋಗುವ ಎನ್ನುವಾಗ ಕೊಲ್ಲಿಯ ವನ ಕೂಡ ಅವರಿಗೆ ಕಾಣುತ್ತದೆ. ಕೊಲ್ಲಿಯ ವನಕ್ಕೆ ಬರುತ್ತಾರೆ. ಕೊಲ್ಲಿಯ ವನದಲ್ಲಿ ಅಡ್ಡಣವನ್ನು ಅಡಿಗೆ ಹಾಕಿ ಕುಳಿತುಕೊಳ್ಳುತ್ತಾರೆ. ಸಂಚಿಯಲ್ಲಿದ್ದ ಅಡಿಕೆಯನ್ನು ತಿನ್ನುತ್ತಾರೆ. ಯೋಗ್ಯವಾದ, ತಂಪು ಇರುವ ಜಾಗ ಇಲ್ಲಿ ಎಲ್ಲಿದೆ ಎಂದು ನೋಡುವರು. ತಂಪು ಇರುವ ಸ್ಥಳ ಕೊಮಿನಾಡಿ ಬರ್ಕೆ ಎಲ್ಲಿದೆ ಎಂದು ಕೇಳಿ ಕೊಮಿನಾಡಿ ಬರ್ಕೆಗೆ ಹೋಗಿ ಅಲ್ಲಿ ನಿಲ್ಲುವರು. ಅಲ್ಲಿ ಪರೆಂಗಿ ಮಂಚ ಬೇಕೆಂದು ಕೇಳುವರು. ಪರಂಗಿ ಮಂಚವೂ, ತೂಗುವ ಉಯ್ಯಾಲೆಯೂ ಬೇಕೆಂದು ಹೇಳಿ ಅದರಲ್ಲಿ ಓಲಗವಾಗುತ್ತಾರೆ. ವರ್ಷದ ಮೆಚ್ಚಿ ಆಯನ ನಮಗೆ ಅಷ್ಟು ಸಾಕೆಂದು ಹೇಳಿ ಅಲ್ಲಿಂದ ಮುಂದೆ ಹೋಗುತ್ತಾರೆ. ಕೊಲ್ಲಿಯ ವನವನ್ನು ದಾಟಿ ಕಿಲ್ಲೂರನ್ನು ಅವರು ದಾಟಿ ಮೆಟ್ಟೆತಡ್ಕವನ್ನು ದಾಟಿ ಸತ್ಯದ ಕಲ್ಲು, ಸಾನನ ಗುಂಡ, ಮಾಸಿತ್ತಿ ಕಲ್ಲು ದಾಟಿದರು. ಕಲ್ಲು ಈಜುವ ಜಾಗಬೇಕೆಂದು ಕೇಳಿದರು. ಸಾನನ ಗುಂಡ ಎಂಬ ಹೆಸರನ್ನಿಟ್ಟು ಒಂದು ದಿವಸ ಅಲ್ಲಿ ನಿಂತರು. ಸತ್ಯದ ಕಲ್ಲುಸ, ಸಾನನ ಗುಂಡ, ಮಾಸಿತ್ತಿ ಕಲ್ಲು ಹಿಂದಕ್ಕೆ ಬಿಟ್ಟು ಬಂಗಾಡಿ ಮೊಗಸಾಲೆಗೆ ಬರುತ್ತಾರೆ. ಬಂಗಾಡಿ ಮೊಗಸಾಲೆಗೆ ಬಂದು ಅಲ್ಲಿಯ ಪಟ್ಟದ ಆನೆಗೆ, ಕುದುರೆಗೆ ಹುಚ್ಚು ಹಿಡಿಸುತ್ತಾರೆ. ಆಗ ಅಲ್ಲಿನ ಅರಸ ಅಯ್ಯೊಯ್ಯೋ ಪಾಪವೇ ಅಥವಾ ದೋಷವೇ ಎಂದು, ಕಾಲ ಕಲಿಗಾಲ ಆಯಿತು ಎಂದು ಹೇಳುವರು. ಮತ್ತನಾ ಕೊಂಡೆ, ಪಾಂಡ್ಯ ಕೊಂಡೆ, ಸಾಯನ ಅರಿಗೆರನ್ನು ಕರೆಸಿದರಿ. ಬಂಗಾಡಿಗೆ ಅಣ್ಣ ಮತ್ತು ತಂಗಿ ಉಳ್ಳಾಯ ಉಳ್ಳಾಲ್ತಿ ದೈವಗಳು ಬಂದಿದ್ದಾರೆ. ಅವರು ಜಗದೊಡೆಯರು ಎನ್ನುತ್ತಾರೆ. ಆದ ತಪ್ಪನ್ನು ಒಪ್ಪಿ ಅವರಿಗೆ ಏನು ದಂಡ ಕೊಡಬೇಕೆಂದು ಕೇಳುವರು. ನಾಲ್ಕು ಗುತ್ತು, ನಾಲ್ಕು ಬರ್ಕೆ ಸೇರಬೇಕೆಂದು ಹೇಳುವರು. ಬೊಳ್ಳೂರ ಗುತ್ತಿನ ಬಳ್ಳಾಲರು ಅಲ್ಲಿಗೆ ಬರುತ್ತಾರೆ. ಬಂಗಾರದ ನೀರಿನ ಚೆಂಬನ್ನು ಹಿಡಿಯುತ್ತಾರೆ. ಬಲದ ಕೈಯ ಮುತ್ತು ಮುದ್ರೆಯ ಉಂಗುರವನ್ನು ತೆಗೆದು ಹಿಡಿಯುತ್ತಾರೆ. ಬಂಗಾಡಿಯ ರಕ್ಷಕ ದೈವಗಳಾದರೆ, ಉಳ್ಳಾಯ ಉಳ್ಳಾಲ್ತಿಗಳಾಗಿದ್ದರೆ ನನ್ನ ಪಾರಿಗೆ ಮೈಯೊಡ್ಡಬೇಕೆಂದು ಹೇಳಿದರು. ಆಗ ದೈವಗಳು ಇವರ ಪಾರಿಗೆ ಮೈಯೊಡ್ಡಿತು, ತಪ್ಪು ಒಪ್ಪನ್ನು ಸರಿಪಡಿಸಿ ಅಲ್ಲಿಂದ ದೂರಕ್ಕೆ ದೃಷ್ಟಿ ಹಾಯಿಸಿರು. ಬಂಗಾಡಿ ಮೊಗಸಾಲೆಯನ್ನು ಹಿಂದಕ್ಕೆ ಬಿಟ್ಟು ಕಣ್ಣೆತ್ತಿ ದಾಟಿ ವೀರಭದ್ರ ಮಾಡವನ್ನು ದಾಟಿ ಕೋಟಿಕಟ್ಟೆಗೆ ಬರುವರು. ಕೋಟಿಕಟ್ಟೆ, ಕೊರಿಂಗರ ಕುಕ್ಕು ಮೂಜಿ ಕಾಯೇರಿ ದಾಟಿದರು. ಹೂಹಾಕುವ ಕಲ್ಲಿಗೆ ಮುಟ್ಟಿದರು. ಹೂ ಹಾಕುವ ಕಲ್ಲಿನಲ್ಲಿ ನಿಂತು ನೋಡಿದಾಗ ಜನನ ಬಲ್ಲಾಳರ ಬೀಡು ಕಾಣುತ್ತದೆ. ಅಣ್ಣ ತಂಗಿ ದೈವಗಳು ಜನನ ಬಲ್ಲಾಳರ ಬೀಡಿಗೆ ಹೋಗುತ್ತವೆ. ಪರೆಂಗಿ ಮಂಚ ತೂಗುವ ಉಯ್ಯಾಲೆಯಲ್ಲಿ ಕುಳಿತುಕೊಳ್ಳುತ್ತಾರೆ. ತಂಪು ಇರುವ ಜಾಗ ಯೋಗ್ಯವಾದ ಸ್ಥಾನ ಎಲ್ಲಿ ಎಂದು ಹೇಳುತ್ತಾರೆ. ತಂಪಿರುವ ಜಾಗ ಯೋಗ್ಯವಾದ ಸ್ಥಾನ ಎಲ್ಲಿ ಎಂದು ಕೇಳುತ್ತಾರೆ. ತಂಪಿರುವ ಜಾಗ ಯೋಗ್ಯವಾದ ಸ್ಥಾನ  ನಮಗೆ ಬೇಕು ಎಂದು ಹೇಳುತ್ತಾರೆ. ಕರ್ವೊಲ್ಲ ಕಲ್ಲ ಗುಂಡ ಬೇಕು, ಕರ್ವೊಲ್ಲ ಕಲ್ಲ ಗುಂಡಕ್ಕೆ ಭಂಡಾರದ ಮನೆ ಬೇಕೆಂದು ಹೇಳುತ್ತಾರೆ. ವರ್ಷದಲ್ಲಿ ಒಮ್ಮೆ ಆಯನ ಬೇಕು ಭಂಡಾರದ ಮನೆ, ಇಂದೊಟ್ಟು ಗುತ್ತು ನಮಗೆ ಬೇಕೆಂದು ಹೇಳುತ್ತಾರೆ. ವರ್ಷಕಕೆ ಒಮ್ಮೆ ಆಯನ ಬೇಕೆಂದು ಹೇಳುತ್ತಾರೆ. ಒಳಸರಿ ಪಯ್ಯೊಳಿ ಬೇಕು, ಎರಡು ದಿವಸದ ಮೆಚ್ಚಿ ಬೇಕು, ಉಳ್ಳಾಲ್ತಿಗೆ ಹೂವಿನ ಪೂಜೆ ಬೇಕು, ಹೂವಿನ ಪೂಜೆ, ಕಾಲಾವಧಿ ಮೆಚ್ಚಿ ಆಯ ನ್ಯಾಯ ತೀರ್ಮಾನ ಹೇಳಿಕೊಂಡ ಹರಕೆಗಳು ಬೇಕೆಂದು ಹೇಳುತ್ತಾರೆ.