ಐತಿಹ್ಯ

ಕೆಲಿಂಜದ ಪೂರ್ವದಲ್ಲಿ ಸುಮಾರು ಒಂದೂವರೆ ಮೈಲು ದೂರದಲ್ಲಿ ಇತಿಹಾಸ ಪ್ರಸಿದ್ಧವಾದ ಒಂದು ಬೆಟ್ಟ “ಸುಳ್ಳಮಲೆ”. ಅದರ ತುದಿ ಭಾಗದಲ್ಲಿ ಒಂದು ತೀರ್ಥದ ಹೊಂಡ ಇದೆ. ಅಲ್ಲಿಗೆ ತೀರ್ಥದ ಅಮಾವಾಸ್ಯೆಯ ದಿನದಂದು ಮಾತ್ರ ಜನರು ತೀರ್ಥಸ್ನಾನಕ್ಕಾಗಿ ಹೋಗುತ್ತಾರೆ. ಉಳಿದ ದಿವಸಗಳಲ್ಲಿ ಅಲ್ಲಿಗೆ ಹೋಗಬಾರದು ಎಂಬ ನಿಯಮವಿದೆ. ಆ ಹೊಂಡದಲ್ಲಿ ಕಲ್ಲಿನ ಸುರಂಗದೊಳಗೆ ಇರುವುದರಿಂದಾಗಿ ಏಣಿಯ ಮೂಲಕ ಒಬ್ಬೊಬ್ಬರೇ ಇಳಿಯಬೇಕು. ಹೊಂಡದ ಒಳಭಾಗದಲ್ಲಿ ವಿಶಾಲವಾದ ಜಾಗ ಇದೆ. ಮೇಲಿನ ಭಾಗದಿಂದ ತೀರ್ಥವು ಬೀಳುವುದು. ಮಾನಿಯ ಉಳ್ಳಾಲ್ತಿ ಸ್ನಾನದಲ್ಲಿ ಪಾತ್ರಿಗೆ ಆವೇಶ ಬರಿಸಿ ಅಲ್ಲಿಯ ಒಂದು ಬಿಲ್ಲವರ ಮನೆಯವರು ಅಮಾವಾಸ್ತೆಯ ಮೊದಲ ದಿನದಂದು ಏಣಿಯನ್ನು ಇಡುತ್ತಾರೆ.

ಈ ಕ್ಷೇತ್ರದಲ್ಲಿ ಎರಡು ಶಕ್ತಿಗಳು ಹುಟ್ಟಿದವು. ಅದಕ್ಕೆ ಅಲ್ಲಿಯೇ ಘರ್ಷಣೆ ಉಂಟಾಯಿತು. ಅದರಲ್ಲಿ ಒಂದು ಶಕ್ತಿ ಅನಂತಾಡಿ ಉಳ್ಳಾಲ್ತಿಯಾಗಿ ನೆಲೆಯಾಯಿತು. ಮತ್ತೊಂದು ಶಕ್ತಿ ಅನಂತಕೋಡಿ ಸುಬ್ರಾಯ ದೇವರ ಕ್ಷೇತ್ರದಲ್ಲಿ ಉದ್ಭವವಾಯಿತು. ಅಲ್ಲಿ ಗುವೆಲಣ್ಣ ಸಂತಾನದ ಬಂಟರ ಮನೆತನ ಇತ್ತು. ಇವರಿಗೆ ಈ ಶಕ್ತಿ ಏನೆಂದು ತಿಳಿಯಲಿಲ್ಲ. ಈ ಶಕ್ತಿಯೇ ಒಂದು ಹೆಣ್ಣಿನ ರೂಪದಲ್ಲಿ ಗುವೆಲಣ್ಣ ಸಂತಾನದ ಬಂಟರ ಮನೆಗೆ ಹೋಗಿ ನನಗೆ ಹಸಿವಾಗುತ್ತಿದೆ ಗಂಜಿ ಕೊಡಿ ಎಂದಾಗ, ಗಂಜಿ ಆಗಲಿಲ್ಲ ನಿನ್ನೆಯ ತಂಗಳನ್ನ ಇದೆ ಎಂದು ಮನೆಯ ಯಜಮಾನ್ತಿ ಹೇಳಿದಳು. ನನಗೆ ಆದೀತು ಕೊಡಿ ಎಂದಾಗ ಮನೆಯ ಒಡತಿ ತಂಗಳನ್ನಕ್ಕೆ ಮೊಸರು ಹಾಕಿ ಎಲೆಯಲ್ಲಿ ಬಡಿಸಿದಳು. ಈ ಹೆಣ್ಣು ಊಟ ಮಾಡಿದ ನಂತರ ಸಂತೋಷದಲ್ಲಿ ಈ ಮನೆತನಕ್ಕೆ ಬೆಂಜನಮಾರ್ ಎಂಬ ಹೆಸರಾಗಲಿ, ನಾನು ಅನಂತಕೋಡಿಯ ಸುಬ್ರಾಯ ದೇವರ ಬಲಭಾಗದಲ್ಲಿ ನೆಲೆಯಾಗುತ್ತೇನೆ. ನಿಮ್ಮ ಮನೆತನ ಒಂದನೆಯ ಗುತ್ತಿನ ಮನೆಯಾಗಿ ನನ್ನನ್ನು ನಂಬಿಕೊಂಡು ಬನ್ನಿ ಎಂದು ಹೇಳಿ ಆ ಹೆಣ್ಣು ಮಾಯವಾದಳು.

ಅಲ್ಲಿಂದ ಉತ್ತರ ಭಾಗ ತಿರುಗಿ ಪುನಃ ಬರುವಾಗ ಮಲರಾಯ, ಮೊಯ್ಯೆತ್ತಾಯಿ, ಪಿಲಿಚಾಮುಂಡಿ ಎನ್ನುವ ದೈವಗಳು, ಸಾವಿರದ ಒಂದು ಗಂಡಗಣಗಳು ಕೂಡ ಉಳ್ಳಾಲ್ತಿಯ ಹಿಂದೆ ಬಂದವು. ಕೆಲಿಂಜದ ಕೆಳಗಿನಬೈಲು ದಾಟಿ ಸುಳ್ಯೊ ಎನ್ನುವ ಜಾಗದಲ್ಲಿ ಹೆಣ್ಣು ಕುಳಿತಳು. ಆ ದಾರಿಯಾಗಿ ಒಬ್ಬಳು ಬಿಲ್ಲವ ಹೆಂಗಸು ಕೊಡಪಾನದಲ್ಲಿ ಕಳ್ಳು ಹೊತ್ತುಕೊಂಡು ಹೋಗುವಾಗ ಅವಳಲ್ಲಿ ಕಳ್ಳು ಕೊಡೆಂದು ಕೇಳಿದಳು. ಅದಕ್ಕೆ ಅವಳು ಕೊಡುವುದಿಲ್ಲ ಎಂದು ಹೇಳಿದಳು. ಅಷ್ಟು ಹೇಳಿದಾಗ ಜೊತೆಯಲ್ಲಿದ್ದ ಪೊಯ್ಯೆತ್ತಾಯಿ ದೈವವು ಅವಳನ್ನು ಕೊಂಡು ಅವಳ ಹೆಣವನ್ನು ಹೆಗಲಿನಲ್ಲಿ ಹಾಕಿಕೊಂಡನು. ಅಲ್ಲಿಂದ ಸ್ವಲ್ಪ ಮುಂದೆ ಬಂದು ಒಂದು ಗದ್ದೆಯಲ್ಲಿ ಆ ಹೆಣದ ಮಾಂಸವನ್ನು, ಎಲುಬನ್ನು ಬೇರೆ ಬೇರೆ ಮಾಡಿ ಎಲುಬನ್ನು ಮತ್ತೊಂದು ಗದ್ದೆಗೆ ಎಸೆದರು. ಹೀಗೆ ಪಾಲು ಮಾಡಿದ ಗದ್ದೆ ಪಾಲ್ತಿಮಾರು ಎಂದು ಹೆಸರಾಯಿತು. ಎಲುಬನ್ನು ಎಸೆದ ಗದ್ದೆಗೆ ಚಾಕೊಟ್ಟೆ ಎಂಬ ಹೆಸರಾಯಿತು. ಮಾಂಸವನ್ನು ಇಟ್ಟೆವಿನ ಎಲೆಯಲ್ಲಿ ಕಟ್ಟಿಕೊಂಡು ಅನಂತಕೋಡಿಗೆ ಮುಟ್ಟಿದರು. ದೇವರ ಜಾಗಕ್ಕೆ ಮಾಂಸವನ್ನು ಕೊಂಡೊಯ್ಯಬಾರದೆಂದು ಮುಂಭಾಗದಲ್ಲಿದ್ದ ಬಾಕ್ಯಾರೆಗೆ ಎಸೆದರು. ಆ ಮಾಂಸ ಅಲ್ಲಿಯೇ ಕಲ್ಲಾಗಿ ಗದ್ದೆಯ ನಡುಭಾಗದಲ್ಲಿದೆ. ಕೆಲಿಂಜದ ಪರಿಸರದಲ್ಲಿ ಇಟ್ಟೆವಿನ ಎಲೆಯಲ್ಲಿ ಮಾಂಸವನ್ನು ಕಟ್ಟಿಕೊಂಡು ಹೋಗಬಾರದೆಂಬ ನಿಷೇಧ ಈಗಲೂ ಜಾರಿಯಲ್ಲಿದೆ.

ಅನಂತಕೋಡಿಯ ಬಂಟರ ಮನೆತನಕ್ಕೆ ಕೆಲಿಂಜದ ಮನೆತನವೆಂದು ಹೆಸರಾಯಿತು. ಅವರಿಗೆ ಉಳ್ಳಾಲ್ತಿ ಕಣ್ಣಿಗೆ ಕಾಣದೆ ಜಾನುವಾರುಗಳಿಗೆ, ಜನರಿಗೆ ಬೇರೆ ಬೇರೆ ವಿಧದ ತೊಂದರೆಗಳು ಕಾಣಿಸಿದವು. ಆಗ ಜ್ಯೋತಿಷ್ಯರಲ್ಲಿ ಪ್ರಶ್ನೆಯನ್ನು ಕೇಳಿದರು. ಇಲ್ಲಿ ಉಳ್ಳಾಲ್ತಿ ನೆಲೆಯಾಗಿದ್ದಾರೆ. ಸ್ನಾನವನ್ನು ಕಟ್ಟಿ ಊರಿನವರು ಎಲ್ಲರೂ ನಂಬುವ ವ್ಯವಸ್ಥೆಯನ್ನು ಮಾಡಬೇಕೆಂದು ಕಂಡಾಗ, ಏನು ತಿಳಿಯದ ಬಂಡರ ಮನೆತನದವರು ಮಾಳಿಗೆ ತೋಟದ ಬ್ರಾಹ್ಮಣರ ಮನೆತನದವರಲ್ಲಿ ಕೇಳಿ ಉಳ್ಳಾಲ್ತಿಗೆ ಒಂದು ಸಣ್ಣ ಸ್ಥಾನವನ್ನು ಕಟ್ಟಿಸುವುದೆಂದು ತೀರ್ಮಾನಿಸಿದರು. ನೀಲೇಶ್ವರ ತಂತ್ರಿಗಳಲ್ಲಿ ಪ್ರಶ್ನೆ ಕೇಳಿ ಬಂದಾಗ ಹುಲಿ ಮತ್ತು ದನ ಒಟ್ಟಾಗಿ ಇರುವುದು ಕಾಣಿಸಿತು. ಆ ಜಾಗವನ್ನೇ ದೈವಸ್ಥಾನಕ್ಕೆ ಯೋಗ್ಯವಾದ ಜಾಗವೆಂದು ಅವರು ತೀರ್ಮಾನಿಸಿದರು. ಅಲ್ಲಿಯೇ ಒಂದು ಸಣ್ಣ ಮುಳಿ ಹುಲ್ಲಿನ ಮಾಡವನ್ನು ಕಟ್ಟಿದರು. ಮಾಳಿಗೆ ತೋಟದ ಬ್ರಾಹ್ಮಣರು ಮೊಕ್ತೇಸರರಗಿ, ಬೆಂಜನಮಾರಿನ ಮನೆತನದವರು ಒಂದನೆಯ ಮನೆತನದವರಾಗಿ, ತಿಂಬ್ಲಾಜೆ ನಡುವಳಚ್ಚಿಲ್, ಕಂಪದಬೈಲ್ ಸೀನಾಜೆಯ ಬಂಡರ ಮನೆತನಗಳು ಎರಡನೆಯ, ಮೂರನೆಯ ಗುರಿಕಾರರುಗಳಾಗಿ ಮಾಡಿಕೊಂಡು ಸುಳ್ಯದ ಗೌಡರು, ಪಡೀಲನ ಬಿಲ್ಲವರು ಗುರಿಕಾರ ಸ್ಥಾನದವರಾದರು. ಕೆಲಿಂಜದವರು ಮಾನಿಯ ಸ್ಥಾನಕ್ಕೆ ಎಂದು ತೀರ್ಮಾನಿಸಿದರು. ಊರಿನ ಕೆಲೆಸಿಗ, ಮಡಿವಾಳ, ಸಪಲ್ಯ ಜಾತಿಯವರು ದೈವದ ಕೆಲಸಗಾರರಾಗಿ ನೇಮಕ ಹೊಂದಿದರು. ದೈವದ ಬೆಳ್ಳಿ, ಬಂಗಾರದ ಮೊಗಮೂರ್ತಿಗಳನ್ನು ಕೆಲಿಂಜದಲ್ಲಿ ಇಟ್ಟು ಅಲ್ಲಿಂದ ಭಂಡಾರ ಬರುವುದೆಂದು ನಿಶ್ಚಯಿಸಿದರು.

ಮಾಳಿಗೆ ತೋಟದ ಬ್ರಾಹ್ಮಣರು ಮೊಕ್ತೇಸರಿಕೆಯನ್ನು ಪುಂಡಿಕಾಐ..ಯ ಬ್ರಾಹ್ಮಣರಿಗೆ ಬಿಟ್ಟು ಕೊಟ್ಟರು, ಅವರು ಕುಟುಂಬದವರು ಈಗ ಯಾರು ಇಲ್ಲಿ ಇಲ್ಲ. ಕೆಲಿಂಜದ ಬಂಟರು ಆಸ್ತಿ ಮನೆಗಳೆಲ್ಲ ಕಳಕೊಂಡು ಕೆಲಿಂಜದ ಊರನ್ನು ಬಿಟ್ಟಿದ್ದಾರೆ. ಆದರೆ ದೈವದ ಮಾನಿಯಾಗಿ ಅವರ ಕುಟುಂಬದವರೊಬ್ಬರಿದ್ದಾರೆ. ಈಗ ದೈವದ ಭಂಡಾರ ಬೆಂಜನಮಾರಿನಿಂದ ಬರುವುದು ಆಸ್ತಿ ಈಗ ಬ್ರಾಹ್ಮಣರ ಕೈಯಲ್ಲಿದೆ.

ಪ್ರತಿ ವರುಷ ಮಾಯಿ ಸಂಕ್ರಮಣದಂದು ರಾತ್ರಿ ಭಂಡಾರ ಬಂದು ಬೆಳಗ್ಗಿನ ಜಾವಕ್ಕೆ ಕೊಡಿ ಏರಿ, ಮರುದಿನ ರಾತ್ರಿ ಉಳ್ಳಾಲ್ತಿಯ ಮೆಚ್ಚಿ ಜರುಗುತ್ತದೆ. ಮಲರಾಯ, ಪಿಲಿಚಾಮುಂಡಿ, ಪೊಯ್ಯೆತ್ತಾಯಿ ದೈವಗಳ ನೇಮಗಳು ಜರುಗುತ್ತವೆ. ಸಂಕ್ರಮಣದ ದಿನಗಳಲ್ಲಿ ದೈವಸ್ಥಾನದಲ್ಲಿ ತಂಬಿಲ ನಡೆಯುತ್ತದೆ. ದೈವಕ್ಕೆ ಪ್ರಾರ್ಥನೆಯನ್ನು ಬೆಂಜನಮಾರಿನ ಮನೆತನದವರೇ ಮಾಡಬೇಕು.

ಐಹಿತ್ಯ

ವಿಟ್ಲ ಸೀಮೆಯ ಅರಸ ಡೊಂಬಯ್ಯ ಹೆಗ್ಗಡೆಯ ಕಾಲದಲ್ಲಿ ಅರಮನೆಯ ಒಂದು ಮದುವೆಯಾಗದ ಹೆಣ್ಣು ದಿನನಿತ್ಯ ಪಂಚಲಿಂಗೇಶ್ವರ ದೇವರಿಗೆ ಕಾಡಿನಿಂದ ವಾಪಾತಿಮಾಲೆ (ಮದರ ಬಂದನಿಗೆಯಲ್ಲಿ ಬರುವ ಮಾಲೆಯ ರೂಪದ ಹೂವಿನ ಗೊಂಡಲು) ಯನ್ನು ಕೊಯ್ದುಕೊಂಡು ಬಂದು ಭಕ್ತಿಯಲ್ಲಿ ಅರ್ಪಿಸುತ್ತಿದ್ದಳು.

ಒಂದು ದಿವಸ ಕಾಡಿನ ಹುತ್ತದ ಬದಿಯಲ್ಲಿ ಇದ್ದ ಮರದಲ್ಲಿ ತುಂಬಾ ಅರಳಿದ ಪಾವಾತಿ ಮಾಲೆಯನ್ನು ನೋಡಿ ಹುತ್ತದ ಮೇಲೆ ಕಾಲಿಟ್ಟು ಹೂ ಕೊಯ್ಯಲು ಪ್ರಯತ್ನಿಸುವಾಗ ಆ ಹುತ್ತದೊಳಗಿದ್ದ ನಾಗರ ಹಾವೊಂದು ಅವಳಿಗೆ ಕಚ್ಚುವುದಕ್ಕೆ ಹೆಡೆ ಎತ್ತಿತ್ತು. ಅಲ್ಲೆ ಇದ್ದ ಕಲೆಂಜಿ ಎಂಬ ಹರಿಜನ ಆ ಹಾವನ್ನು ಕಂಡು ಅದನ್ನು ಕೊಂದು ಆಕೆಯನ್ನು ರಕ್ಷಣೆ ಮಾಡುತ್ತಾನೆ.

ಹೀಗೆ ದಿನಾ ಹೂ ಕೊಯ್ಯಲು ಹೋಗುವಾಗ ಆ ಹರಿಜನ ಇವಳ ಹಿಂದೆ ಬರುತ್ತಿದ್ದ. ಅವನೇ ಮರದ ಮೇಲೆ ಹತ್ತಿ ಬೇಕಾದಷ್ಟು ಹೂ ಕೊಯ್ದು ಕೊಡುತ್ತಿದ್ದ. ಅವನ ಉಪಕಾರವನ್ನು ಮೆಚ್ಚಿದ ಹುಡುಗಿಗೆ ಅವನಲ್ಲಿ ಪ್ರೀತಿಯುಂಟಾಯಿತು. ಪ್ರಾಯದ ಗುಣದಲ್ಲಿ ಆ ಪ್ರೀತಿ ಅವರಿಬ್ಬರನ್ನೂ ಒಂದುಗೂಡಿಸಿತು. ಹುಡುಗಿ ಗರ್ಭಿಣಿಯಾದಳು. ಮನೆತನದ ಗೌರವಕ್ಕೆ ಕೊರತೆ ಬಂತೆಂದು ತಾನು ಸಾಯುವುದು ಒಳ್ಳೆಯದೆಂದು ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡಬಿದ್ದು ತಾನು ಸಾಯುವುದಕ್ಕೆ ತೀರ್ಮಾನಿಸಿದ್ದನ್ನು ಅರಿಕೆ ಮಾಡಿದಳು.

ಅಷ್ಟು ಹೊತ್ತಿಗೆ ಗರ್ಭಗುಡಿಯ ಗಂಟೆ ತನ್ನಿಂದ ತಾನಾಗಿಯೇ ಬಾರಿಸಿತು. ಒಳಗಿನಿಂದ “ಓ ಹುಡುಗಿಯೇ ನೀನು ನನ್ನ ಸೇವೆಯನ್ನು ಭಕ್ತಿಯಿಂದ ಸಂದಾಯ ಮಾಡಿದವಳು. ನಿನ್ನ ಮಾನ, ಪ್ರಾಣವನ್ನು ನಾನು ಉಳಿಸುತ್ತೇನೆ. ನಿನ್ನ ಹೊಟ್ಟೆಯೊಳಗಿನ ಗರ್ಭ ಐದು ಶಕ್ತಿಗಳಾಗಿ ಐದು ಊರಿನಲ್ಲಿ ಉಳ್ಳಾಲ್ತಿಗಳಾಗಿ ಹುಟ್ಟುತ್ತಾರೆ. ಹೆದರಬೇಡ, ಹೆದರಬೇಡ.” ಎಂದು ಹೇಳಿದ ದೇವರ ಅಭಯ ಕೇಳಿ ಸಂತೋಷದಿಂದ ಅರಮನೆಗೆ ಬಂದಳು.

ಕೇಪು, ಕೆಲಿಂಜ, ಅನಂತಾಡಿ, ಮಾಣಿ ಹಾಗೂ ಬಲ್ನಾಡಿನಲ್ಲಿ ಉಳ್ಳಾಲ್ತಿಗಳು ಜನನವಾದರು. ಕಲೆಂಜ ಐತ್ತನ ಕಾಡು ಕಲೆಂಜಿಮಲೆ ಆಗಿ ಹೆಸರು ಪಡೆಯಿತು. ಅಷ್ಟಮಂಗಲ ಪ್ರಶ್ನೆಯಲ್ಲೂ ಈ ಐದು ಜನ ಉಳ್ಳಾಲ್ತಿಗಳೂ ಸಹೋದರಿ ಸಂಬಂಧ ಇರುವವರು ಎಂದು ಕಂಡುಬಂದಿದೆ. ಉಳ್ಳಾಲ್ತಿಗಳು ಐದು ಊರಿನಲ್ಲಿ ಜನನ ಹೊಂದಿದ ಕತೆಗಳು ಐದು ರೀತಿಯಲ್ಲಿದೆ.

ಪುತ್ತೂರು ಕ್ಷೇತ್ರದ ಸ್ಥಳ ಪುರಾಣ

ಬಹು ಪ್ರಾಚೀನ ಕಾಲದಲ್ಲಿ ದೇವ ವೇದಾಂತ ಪಾರಂಗತರಾದ ಶೈವ ಸಂಪ್ರದಾಯದ ವಿಪ್ರರೊಬ್ಬರು ಕಾಶೀ ಕ್ಷೇತ್ರದಿಂದ ಶಿವಲಿಂಗವೊಂದನ್ನು ಪಡೆದುಕೊಂಡು ಅದನ್ನು ಅರ್ಚಿಸುತ್ತಾ ದಕ್ಷಿಣಾ ಪಥದಲ್ಲಿ ಸಂಚರಿಸುತ್ತಿದ್ದರು. ಶಿವಾರ್ಚನೆಯಲ್ಲಿ ಜೀವನವನ್ನು ಧನ್ಯವನ್ನಾಗಿ ಮಾಡಿಕೊಂಡಿದ್ದ ಈ ವಿಪ್ರೋತ್ತಮರು ಒಂದು ದಿನ ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿದ್ದ ಈಗಿನ ಉಪ್ಪಿನಂಗಡಿಗೆ ಬಂದಿದ್ದರು. ಆಗ ಆ ವೇದ್ಧ ವಿಪ್ರರನ್ನು ಭೇಟಿಯಾಗಿ ಅವರ ವ್ಯಕ್ತಿತ್ವದಿಂದ ಆಕರ್ಷಿತರಾಗ ಗೋವಿಂದ ಭಟ್ಟರೆಂಬುವರು ಅವರಲ್ಲಿ ಕುಶಲ ಪ್ರಶ್ನೆಗಳನ್ನು ಹಾಕಿದರು. ಕಾಶಿಯಿಂದ ಬಂದಿದ್ದ ವೃದ್ಧ ಬ್ರಾಹ್ಮಣರು ಪುತ್ತೂರಿಗೆ ಬರುವವರೆಂದು ತಿಳಿದು ಬಂದುದರಿಂದ ಇಬ್ಬರಲ್ಲೂ ಆತ್ಮೀಯತೆ ಬೆಳೆಯಿತು.

ತನ್ನ ಮಧ್ಯಾಹ್ನದ ಬೋಜನಕ್ಕಿಂತ ಮೊದಲು ಶಿವಲಿಂಗಾರ್ಚನೆಯನ್ನು ಸಂಪ್ರದಾಯವನ್ನಾಗಿಟ್ಟುಕೊಂಡಿದ್ದ ಆ ವೃದ್ಧ ವಿಪ್ರತು ತನ್ನ ಸಂಪುಟದಿಂದ, ಸೂರ್ಯಪ್ರಭೆಯಿಂದ ಕಂಗೊಳಿಸುವ ಸುಂದರಾಕೃತಿಯ ಶಿವಲಿಂಗವೊಂದನ್ನು ತೆಗೆದು ಗೋವಿಂದ ಭಟ್ಟರ ಕೈಗಿತ್ತು ಇದನ್ನು ಕೈಯಲ್ಲಿಟ್ಟುಕೊಂಡೇ ಪೂಜಿಸಬೇಕೆಂದು ತಿಳಿಸಿ, ತಾವು ಕುಮಾರಧಾರಾ ನದಿಗೆ ಸ್ನಾನಕ್ಕೆಂದು ಹೋದರು. ಎಷ್ಟು ಸಮಯ ಕಳೆದರೂ, ಅವರು ಹಿಂದಿರುಗದಿದ್ದುದನ್ನು ನೋಡಿ, ಬಲವಾಗಿ ಕರೆದರೂ, ಮರುತ್ತರ ಬಾರದಿರುವುದನ್ನು ಕಂಡು ಈ ಶಿವಲಿಂಗವನ್ನು ತೆಗೆದುಕೊಂಡು; ಸೂರ್ಯಾಸ್ತಮಾನಕ್ಕಿಂತ ಮೊದಲು ಪುತ್ತೂರನ್ನು ಸೇರುವುದಕ್ಕಾಗಿ ಗೋವಿಂದ ಭಟ್ಟರು ಬೇಗ ಬೇಗನೆ ನಡೆದು, ರಾತ್ರಿಯ ಹೊತ್ತಿಗೆ ಪುತ್ತೂರನ್ನು ತಲುಪಿದರು. ಇಲ್ಲಿ ವಿಶ್ರಾಂತಿಯನ್ನು ತೆಗೆದುಕೊಂಡರು.

ಮರುದಿನ, ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಪುತ್ತೂರಿನಲ್ಲಿ ಅರುಣೋದಯಕ್ಕೆ ಜಾಗೃತರಾದ ಈ ದ್ವಿಜರು ಶೌಚಾದಿಗಳನ್ನು ಮುಗಿಸಿ, ಶಿವನ ಸೋಮವಾರದ ವಿಶೇಷ ಪೂಜೆಗೆ ಬೇಕಾದ ಸಾಹಿತ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಬಂಗರ ಅರಮನೆಗೆ ಹೋದರು. ಜೈನ ಧರ್ಮದಲ್ಲಿ ಅತಿ ನಿಷ್ಠೆಯನ್ನು ಹೊಂದಿದ್ದ ಬಂಗರಾಯನು ಈ ವಿಪ್ರೋತ್ತಮರ ಬರವನ್ನು ಗಮನಿಸಿಕೊಳ್ಳಲಿಲ್ಲ. ತನ್ನ ಸಹೋದರಿಯು ಪ್ರಸವವೇದನೆಯಿಂದ ನರಳುತ್ತಿದ್ದುದರಿಂದ ಬಂಗರಾಯನು ದುಃಖಾಕ್ರಾಂತನಾಗಿದ್ದನು.

ಬಂಗರಸನ ಪ್ರಧಾನಿಯು ಆ ಬ್ರಾಹ್ಮಣನ ನಡವಳಿಕೆಯನ್ನೂ, ಮುಖತೇಜಸ್ಸನ್ನೂ ಕಂಡು ನಿರಾಸೆಯಲ್ಲಿದ್ದರೂ, ಏನಾದರೂ ಆಧಾರ ಸಿಗಬಹುದೋ, ಎಂಬ ಆಸೆಯಿಂದ ಆತನಲ್ಲಿ ತನ್ನ ಕಷ್ಟವನ್ನು ನಿವೇದಿಸಿಕೊಂಡಾಗ, ದಿವ್ಯಜ್ಞಾನಿಯಂತಿದ್ದ, ಆ ಬ್ರಾಹ್ಮಣನು ತನ್ನಲ್ಲಿದ್ದ ಶಿವಲಿಂಗಕ್ಕೆ ನಮಸ್ಕರಿಸಿ, ನಿನ್ನೆಚ್ಚೆಯಂತೆ ಆಗಲಿ, ಮಹೇಶ್ವರಾ ಎಂದು ಪ್ರಾರ್ಥಿಸಿಕೊಂಡು ಬಂಗರಾಜನ ಸಹೋದರಿಗೆ ಪುತ್ರವತಿಯಾಗೆಂದು ಹರಸಿದನು. ಆವ್ಯಾಜ ಕರುಣಾಮೂರ್ತಿಯಾದ ಶಿವನ ದಯೆಯೋ, ಸತ್ಯ ನಿಷ್ಠ ಬ್ರಾಹ್ಮಣನ ಪ್ರಾರ್ಥನೆಯ ಬಲವೋ ಎಂಬಂತೆ ಬಂಗರಸನ ಸಹೋದರಿಯು ಗಂಡು ಮಗುವನ್ನು ಪ್ರಸವಿಸಿದಳು. ಬಂಗರಸನೂ, ಪ್ರಧಾನಿಯೂ, ಊರಿನ ಜನರೂ ಬ್ರಾಹ್ಮಣನ ತಪಶಕ್ತಿಗೆ ಬೆರಗಾಗಿ ಅವನಿಗೆ ಶಿರಸಾ ವಂದಿಸಿದರು. ಶಿವಾರ್ಚನೆಗೆ ಬೇಕಾದ ಸರ್ವ ವಿಧದ ಸಾಮಗ್ರಿಗಳನ್ನು ಕೊಟ್ಟರು.

ಶಿವಾರ್ಚನೆಯೇ ಉಸಿರಾಗಿರುವ ಆ ಬ್ರಾಹ್ಮಣೋತ್ತಮನು ಮುಖ ಕ್ಷೌರವನ್ನು ಮಾಡಿಕೊಂಡು ಇಲ್ಲಿಯ ಕೆರೆಯಲ್ಲಿ ಮಿಂದು ಮರೆತೋ, ತಿಳಿಯಿದೆಯೋ ಶಿವಲಿಂಗವನ್ನು ಭೂಮಿಯ ಮೇಲಿಟ್ಟು ಪೂಜಿಸಿದನು. ಶಿವನಿಗೆ ಅರ್ಪಿಸಿ ನೈವೇದ್ಯವನ್ನು ತಾನು ಸ್ವೀಕರಿಸಿ, ತನ್ನ ಪ್ರಯಾಣವನ್ನು ಮುಂದುವರಿಸುವ ಮೊದಲು ಶಿವಲಿಂಗವನ್ನು ಭೂಮಿಯಿಂದ ಮೇಲೆತ್ತಿ ತನ್ನ ಸಂಪುಟ (ಪೆಟ್ಟಿಗೆ) ಕ್ಕೆ ಹಾಕಿಕೊಳ್ಳಲು ಪ್ರಯತ್ನಿಸಿದರೂ ಶಿವಲಿಂಗವು ಮೇಲೆ ಬರಲಿಲ್ಲ. ಇನ್ನಷ್ಟು ಶಕ್ತಿಯಿಂದ ಮೇಲೆತ್ತಲು ಪ್ರಯತ್ನಿಸಿದರೂ ಲಿಂಗವನ್ನು ಕದಲಿಸುವುದಕ್ಕಾಗಲಿಲ್ಲ. ಕೋಪದಿಂದ ತನ್ನ ಪೂರ್ಣ ಶಕ್ತಿಯನ್ನು ಉಪಯೋಗಿಸಿದರೂ, ಶಿವಲಿಂಗವು ಗಟ್ಟಿಯಾಗಿಯೇ ನೆಲವನ್ನು ಹಿಡಿದುಕೊಂಡಿತ್ತು. ಶಿವಪರಾಧವಾಯಿತೆಂದು ಬ್ರಾಹ್ಮಣೋತ್ತಮನು ಕಕ್ಕಾಬಿಕ್ಕಿಯಾದನು; ದುಃಖಿತನಾದನು. ಅಶ್ರುಧಾರೆಯೂ ಹರಿಯಿತು. ಗದ್ಗದ ಕಂಠದಿಂದ ಶಿವನನ್ನು ಸ್ತುತಿಸಿದನು. ಆದರೆ, ದೈವ ನಿರ್ಣಯವನ್ನು ಬಲ್ಲವರಾರು? ಲಿಂಗರೂಪಿ ಮಹಾದೇವನು ಪುತ್ತೂರಿನ ಪುಣ್ಯಭೂಮಿಯಲ್ಲೇ ನಡೆಸಲು ಸಂಕಲ್ಪ ಮಾಡಿದ್ದನು.

ಹತ್ತಾರು ಜನ ಸೇರಿ, ಶಿವಲಿಂಗವನ್ನು ಕೀಳಲು ಪ್ರಯತ್ನಿಸಿದರು. ಪುತ್ತೂರಿನ ಜನರ ನಿರ್ಮಲಾಂತಃಕರಣದಲ್ಲಿ ಆಗಲೇ ನೆಲೆಯಾಗಿದ್ದ ಮಹಾದೇವನು, ಬಾಹ್ಯ ಪ್ರಯತ್ನಗಳಿಗೆ ಒಳಗಾಗಿ ನೆಲಬಿಟ್ಟು ಮೇಲೇಳಲಿಲ್ಲ. ಲಿಂಗರೂಪಿಯಾದ ಮಹಾದೇವನು ಪುತ್ತೂರಿನಲ್ಲೇ ಪ್ರಸನ್ನನಾಗಿ ನೆಲೆ ನಿಲ್ಲುವ ಭವ್ಯ ಭವಿಷ್ಯದ ಕಲ್ಪನೆಯೇ ಇಲ್ಲದ ಜನರು ಬಂಗರಸನ ಸಿಪಾಯಿಗಳನ್ನು ಕರೆದು ಲಿಂಗವನ್ನು ಕೀಳಲು ಮತ್ತೊಮ್ಮೆ ಪ್ರಯತ್ನಿಸಿದರು. ಆಳುಕಾಳು, ಪರಿಜನರು, ಪುರಜನರು, ಪಟ್ಟ ಎಲ್ಲಾ ಪ್ರಯತ್ನಗಳೂ ನಿಷ್ಪ್ರಯೋಜಕವಾದುವು.

ಬಂಗರಸನ ಭೀಮಬಲದ ಗಜರಾಜನನ್ನು ಕರೆತಂದು ಸರಪಳಿಯಿಂದ ಶಿವಲಿಂಗವನ್ನು ಬಿಗಿದು, ಆನೆಯಿಂದ ಲಿಂಗವನ್ನು ಎಳೆಸಲಾಯಿತು; ದೂಡಿಸಲಾಯಿತು. ಆಗ ಕಿರಿದಾದ ಶಿವಲಿಂಗವು ಭೂಮ ರೂಪವನ್ನು ತಾಳಿ ಮಹಾಲಿಂಗನಾಗಿ, ಮಹಾಲಿಂಗೇಶ್ವರನಾಗಿ ಕಂಗೊಳಿಸಿದನು. ಭಕ್ತ ಜನರಿಗೆ ಮಂಗಲಕರ ಶಿವನಾಗಿ ಶೋಭಿಸಿದನು; ದುಷ್ಟರಿಗೆ ರುದ್ರರೂಪಿ ಪ್ರಳಯಾಂತಕನಾಗಿ ಪ್ರಜ್ವಲಿಸಿದನು. ಇದಾವುದನ್ನೂ ಗಮನಿಸದ ಅಜ್ಞಾನಿ ಆನೆಯು ಇನ್ನೂ ಶಿವಲಿಂಗವನ್ನು ಎಳೆಯುತ್ತಿದ್ದುದರಿಂದ, ನೋವಿನಿಂದ ಭಯಂಕರವಾಗಿ ಘೀಳಿಡುತ್ತಾ ಮಂದರಗಿರಿಯೇ ಧರೆಗುರುಳುವಂತೆ ಧೊಪ್ಪನೆ ಬಿದ್ದಿತು. ಆಗ ಆನೆಯ ಅಂಗಾಂಗಗಳು ಛಿದ್ರೋಛಿದ್ರಗೊಂಡು ದೂರ ದೂರುಗಳಿಗೆ ಎಸೆಯಲ್ಪಟ್ಟವು. ಆನೆಯ ಕೊಂಬು ಬಿದ್ದ ಸ್ಥಳವು ಮುಂದೆ ಕೊಂಬೆಟ್ಟು ಎಂದು ಕರೆಯಲ್ಪಟ್ಟಿತು. ಅದರಂತೆ, ಕರಿ ಬಿದ್ದಲ್ಲಿ ಕರಿಯಾಲ, ಕಾಳು ಬಿದ್ದಲ್ಲಿ ಕಾರ್ಜಾಲ, ಕೈ ಬಿದ್ದಲ್ಲಿ ಕೈಪಳೆ, ಬಾಲ ಬಿದ್ದಲ್ಲಿ ಬೀದಿ ಮಜಲು, ತಲೆ ಬಿದ್ದಲ್ಲಿ ತಾಲೆಪ್ಪಾಡಿ, ಬೆನ್ನು ಬಿದ್ದಲ್ಲಿ ಬೆರೆಪದವು ಎಂಬ ಹೆಸರುಗಳಾದವು. ಆನೆ ಬಿದ್ದ ಹೊಂಡವೇ ಕೆರೆಯಾಗಿ ಆ ಕೆರೆಯ ನೀರು ಗಜಸಂತತಿಗೆ ವಿಷಪ್ರಾಯವಾಗಿ, ಇಂದಿಗೂ ಆ ನೀರನ್ನು ಆನೆಗಳಿಗೆ ಕುಡಿಸುವಂತಿಲ್ಲ.

ಸರ್ವ ಕಾರ್ಯಗಳಿಗೂ ಕಾರಣನಾದ ಶ್ರೀ ಮಹಾಲಿಂಗೇಶ್ವರನನ್ನು ಆಗ ಭಕ್ತಿಭಾವದಿಂದ ಮಹಾದೇವನೆಂದು ಸ್ತುತಿಸಲಾಯಿತು. ಆಗ ಮೋಕ್ತ ಪದ್ಧತಿಯಲ್ಲಿ ಅರ್ಚಿಸಲಾಯಿತು. ಮಂತ್ರ ಜಲಾಭಿಷೇಕವನ್ನು ಗೈದು, ತುಂಬೆ, ಕರವೀರಾದಿ ಪುಷ್ಪಗಳಿಂದಲೂ, ನಾರಿಕೇಳ ರಂಭಾದಿ ಫಲಗಳಿಂದಲೂ, ಬಿಲ್ವ ಪತ್ರಾದಿ ಪತ್ರಗಳಿಂದಲೂ, ಕರ್ಪೂರ, ಆಗರು, ಚಂದನಾದಿ ಸುಗಂಧ ದ್ರವ್ಯಗಳಿಂದಲೂ ಪೂಜಿಸಲಾಯಿತು. ಸುಪ್ರಸನ್ನವಾದ ಶಿವನು ಮಂಗಳಕರನಾಗಿ, ಮಹಾಲಿಂಗೇಶ್ವರನಾಗಿ ಪುತ್ತೂರಿನ ಪುಣ್ಯ ಭೂಮಿಯಲ್ಲಿ ನೆಲಸಿದನು.

ಬಲ್ನಾಡಿಯಲ್ಲಿ ಉಳ್ಳಾಲ್ತಿ ಗುಡಿ ನಿರ್ಮಾಣವಾಗುವುದಕ್ಕೆ ಕಾರಣವಾದ ಕತೆ ಹಾಗೂ ಉಳ್ಳಾಲ್ತಿ ದೈವ ಮತ್ತು ದಂಡನಾಯಕ ದೈವ, ಬಂಗರಾಯನನ್ನು ಕಾದಾಡಿಕೊಂದು ರಾಜ್ಯವನ್ನು ಸುಭಿಕ್ಷೆಗೊಳಿಸಿದ ಕುರಿತಾಗಿ ಇರುವ ಕತೆ.

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಪಟ್ಟ ಇತರ ದೈವಗಳೆಂದರೆ, ಬಲ್ನಾಡಿ ಉಳ್ಳಾಲ್ತಿ, ದಂಡನಾಯಕ ಮತ್ತು ಮಲರಾಯ. ಈ ದೈವಗಳು ದೇವಾಲಯದ ಆವರಣದ ಒಳಗೆ ಇರದೆ, ಬಲ್ನಾಡಿನಲ್ಲಿ ಪ್ರತ್ಯೇಕವಾದ ಗುಡಿಯನ್ನು ಹೊಂದಿವೆ. ಪ್ರತ್ಯೇಕ ಪಾಡ್ದನಗಳಲ್ಲಿ ಈ ಉಳ್ಳಾಲ್ತಿಯನ್ನು ಮೀನಾಕ್ಷಿ ಎಂದೂ, ಏಣಾಕ್ಷಿ ಎಂದೂ, ಪಾರ್ವತಿಯೊಂದಿಗೆ ಸಮೀಕರಿಸಲಾಗಿದೆ. ಬೆಳ್ಳಿಯ ಪಾಪೆಯನ್ನೂ, ಕೈಲ್ಲಿ ದರ್ಪಣವನ್ನೂ ಧರಿಸಿರುವುದರಿಂದ ಈ ದೈವವನ್ನು ಮಹಾಸತಿ ಎಂದೂ ನಂಬಲಾಗಿದೆ.

ದೇವಾಲಯದ ವಾರ್ಷಿಕ ಜಾತ್ರೆಯ ಸಮಯದಲ್ಲಿ ಕೆರೆಯಾಯನ (ತೆಪ್ಪೋತ್ಸವ) ದಂದು ರಾತ್ರಿ, ಪಾತ್ರಿಗಳು ಧನುರ್ಬಾಣ, ಬಾಳು ಭಂಡಾರ, ತಿರ್ಪಾಳ ದಂಡಿಗೆ, ಛತ್ರ, ಪತಾಕೆ ಬಿರುದುಬಾವಲಿಗಳೊಂದಿಗೆ, ಸೂಟೆ (ತೆಂಗಿನ ಗರಿಯ ಪಂಜು)ಗಳ ಬೆಳಕಿನಲ್ಲಿ ಉಳ್ಳಾಲ್ತಿಯು ತನ್ನ ಪರಿವಾರದ ಮಲರಾಯ ಮತ್ತು ದಂಡನಾಯಕರೊಂದಿಗೆ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಗೆ ಬರುವುದು ರೂಢಿ. ಇದನ್ನು “ಭಂಡಾರ ಬರುವುದು” ಎಂದು ಕರೆಯುತ್ತಾರೆ. ದೇವರ ಜೊತೆಯಲ್ಲಿ ರಥೋತ್ಸವದಂದು ಬಂಗರ ಕಾಯರ್ಕಟ್ಟೆಯವರೆಗೆ ಬಂದು ಅಲ್ಲಿಂದ ಬಲ್ನಾಡಿಗೆ ಹಿಂದಿರುಗುತ್ತದೆ.

ಈ ಉಳ್ಳಾಲ್ತಿಯು ದಂಡನಾಯಕನ ತಂಗಿಯೆಂದೂ ಪಾಡ್ದನಗಳು ತಿಳಿಸುತ್ತವೆ. ಅವುಗಳಲ್ಲಿ ಹೇಳಿರುವಂತೆ, ಪುತ್ತೂರಿನಲ್ಲಿ ಬಂಗರಾಯನ ಕ್ರೌರ್ಯವು ಹೆಚ್ಚಿದಾಗ ಇಲ್ಲಿಯ ಜನರನ್ನು ರಕ್ಷಿಸಿ, ಶಾಂತಿ ಸ್ಥಾಪಿಸುವುದಕ್ಕಾಗಿ ದಂಡನಾಯಕನೂ, ತಂಗಿ ಉಳ್ಳಾಲ್ತಿಯೂ, ಅಹಿ ಕ್ಷೇತ್ರದಿಂದ ಘಟ್ಟವನ್ನು ಇಳಿದು ತುಳುನಾಡಿಗೆ ಬಂದರು. ಬರುವ ದಾರಿಯಲ್ಲಿ ಸಿಕ್ಕಿದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ಕುಮಾರ ಸ್ವಾಮಿಯನ್ನು ಅರ್ಚಿಸಿದರು. ಪುತ್ತೂರಿಗೆ ಬಂದು ಬಂಗರಾಯನೊಡನೆ ಕಾದಾಡುವ ಮೊದಲು ಈ ಅಣ್ಣ ತಂಗಿಯರು ಶ್ರೀ ಮಹಾಲಿಂಗೇಶ್ವರನನ್ನು ನಾನಾ ವಿಧವಾಗಿ ಸ್ತುತಿಸಿದರು. ಮಹಾದೇವನ ಲೀಲೆಯನ್ನು ಕೊಂಡಾಡಿ ವಿಶೇಷ ಶಕ್ತಿಯನ್ನೂ ಪಡೆದರು.

ಇವರ ಆಗಮನದ ವೇಳೆಯಲ್ಲಿ ಬಂಗರಾಯನು ಕಾಯರ್ಕಟ್ಟೆಯಲ್ಲಿ ತನ್ನ ದರ್ಬಾರನ್ನು ಏರ್ಪಡಿಸಿ, ಕಂಬಳವನ್ನು ವೀಕ್ಷಿಸುತ್ತಿದ್ದನು. ಸುಖಲೋಲುಪನಾದ ಬಂಗರಾಯನನ್ನು ದಂಡನಾಯಕನೂ, ಉಳ್ಳಾಲ್ತಿಯೂ ಮುತ್ತಿಗೆ ಹಾಕಿದಾಗ ಬಂಗರಾಯನು ಅವರೊಡನೆ ಕಾದಾಡಿ ಮರಣವನ್ನಪ್ಪಿದನು. ರಾಜನಾಗಿದ್ದ ಬಂಗರಾಯನ ನೆನಪಿಗಾಗಿ ಅಂಕದ ಗದ್ದೆಯ ಬದಿಯಲ್ಲಿ ಇವನ ಸಮಾಧಿಯನ್ನು ಕಟ್ಟಿಸಿ ಅದಕ್ಕೆ ಬಂಗರ ಕಾಯರ್ಕಟ್ಟೆ ಎಂದು ಹೆಸರಿಡಲಾಯಿತು.

ಅವಿವಾಹಿತೆಯಾದ ಉಳ್ಳಾಲ್ತಿಯು ಮಹಾಸತಿಯಾಗಿ ಮುಂದೆ, ಇಹಲೋಕವನ್ನು ತ್ಯಜಿಸಿ, ಶಕ್ತಿದೇವತೆಯಾಗಿ ಮೆರೆದಳು. (ಇಂದಿನ ದೇವಾಲಯದ ಕೆರೆಯ ಆಗ್ನೇಯಮೂಲೆಯಲ್ಲಿ ಮಾರ್ಗದ ಇನ್ನೊಂದು ಮೂಲೆಯಲ್ಲಿರುವ ಮಾಸ್ತಿಕಲ್ಲು ಈಕೆಯ ಜೀವನದ ಕುರುಹು ಆಗಿರಲೂಬಹುದು) ಈಕೆಯೂ ದಂಡನಾಯಕನೂ ಹಿಂದಿನ ಕಾಲದಲ್ಲಿ ದೇವಾಲಯದ ಪ್ರಾಂಗಣದಲ್ಲಿಯೇ ಗುಡಿಯನ್ನು ಹೊಂದಿದ್ದು, ಕಲಾಂತರದಲ್ಲಿ ಇತರ ದೈವಗಳ ಅಭಯದ ಅನುಸಾರ, ಬಲ್ನಾಡಿಯಲ್ಲಿ ಗುಡಿಯನ್ನು ಕಟ್ಟಿ, ಅವರನ್ನು ಅಲ್ಲಿ ಪ್ರತಿಷ್ಠಾಪಿಸಲಾಯಿತು. ಆದರೆ ಇಂದಿಗೂ ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಹೊರಡುವ ಮೊದಲು ಉಳ್ಳಾಲ್ತಿಯನ್ನು ಆಹ್ವಾನಿಸಿ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದೆ.

ಬೆಳ್ತಂಗಡಿ ಕಲ್ಲುಗುಂಡ ಬೀಡು ಕುತ್ರೊಟ್ಟು ಇಲ್ಲಿ ಉಳ್ಳಾಯ ಉಳ್ಳಾಲ್ತಿಗಳು ಬಂದು ನೆಲೆಯಾದ ಕುರಿತಾದ ಕತೆ

ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು ಶೇಷಶಯನನಾಗಿದ್ದಾಗ ತ್ರಿಲೋಕ ಸಂಚಾರಿಯಾದ ನಾರದ ಮುನಿಯು ಬಂದು “ಪಾಲಕನಾದ ದೇವನೇ ಭೂ ಲೋಕ ಬಹಳ ಕೆಟ್ಟು ಹೋಗಿದೆ ಅನ್ಯಾಯ, ಅನಾಚಾರಗಳು ತುಂಬಿ ಧರ್ಮವನ್ನು ಜನರು ಮೀರಿದ್ದಾರೆ, ಸತ್ಯ ಹೇಳುವ ಜನರೇ ಕಡಿಮೆಯಾಗಿದ್ದಾರೆ. ದೇವರು ದೈವ ಎಂಬ ಕುರಿತು ಮಾತನಾಡದೆ ನೇಮ ನಿಷ್ಠೆಯನ್ನು ಮೀರಿ ವ್ಯವಹಾರ ನಡೆಸುತ್ತಿದ್ದಾರೆ. ಕಳ್ಳತನ, ಸುಲಿಗೆ, ಮೋಸ, ವಂಚನೆಗಳೇ ತುಂಬಿ ಧರ್ಮವನ್ನು ಆಚರಿಸುವವರಿಗೆ ಬದುಕುವುದೇ ಸಾಧ್ಯವಿಲ್ಲದಾಗಿದೆ. ಇದನ್ನೆಲ್ಲ ನೋಡಿದ ನನಗೆ ಭೂಲೋಕ ಸರ್ವನಾಶವಾಗುವುದರಲ್ಲಿ ಸಂಶಯವಿಲ್ಲವೆಂದು ತಿಳಿದು ಸ್ವಾಮಿ ನಿನ್ನಲ್ಲಿಗೆ ಬಂದಿದ್ದಾನೆ. ದಯವಿಟ್ಟು ಭೂಲೋಕವನ್ನು ರಕ್ಷಣೆ ಮಾಡು. ಜನರನ್ನು ಒಳ್ಳೆಯವರನ್ನಾಗಿ ಮಾಡು”. ಎಂಬುದಾಗಿ ವಿಷ್ಣುವಿನಲ್ಲಿ ಭಿನ್ನವಿಸುತ್ತಾನೆ.

ಇದನ್ನು ಕೇಳಿದ ವಿಷ್ಣು “ನಾರದ ನಿನ್ನ ಮಾತನ್ನು ಕೇಳುವಾಗ ನನಗೆ ಬಹಳ ಆಶ್ಚರ್ಯವಾಗುತ್ತಿದೆ. ಬ್ರಹ್ಮನ ಮನಸ್ಸಿನಲ್ಲಿ ಜನಿಸಿದ ನೀನು ಲೋಕ ಸಂಚಾರ ಮಾಡಿಕೊಂಡು ಲೋಕದ ಒಳ್ಳೆಯದನ್ನೇ ಬಯಸುವವ ನೀನು, ಲೋಕದ ಕ್ಷೇಮವೇ ನನ್ನ ಕ್ಷೇಮವೆಂದು ತಿಳಿದುಕೊಂಡವನು ನೀನು. ಹಾಗಿರುವಾಗ ಭೂಲೋಕದಲ್ಲಿ ಈಗ ಆಕ್ರಮ ನಡೆಯುತ್ತಿದೆಯೇ, ಧರ್ಮವನ್ನು ಮೀರಿದ್ದಾರೆಯೇ ಹಾಗಾದರೆ ನಾನು ನನ್ನ ಜ್ಞಾನ ದೃಷ್ಟಿಯನ್ನಿಟ್ಟು ಲೋಕದ ರಕ್ಷಣೆಯನ್ನು ಮಾಡುತ್ತೇನೆ. ನೀನು ಆ ಕುರಿತು ಬೇಸರಿಸಬೇಡ. ಇದಕ್ಕೆ ಸರಿಯಾದ ದಾರಿಯನ್ನು ನಾನು ಹುಡುಕುತ್ತೇನೆ”. ಎಂಬುದಾಗಿ ನಾರದನಿಗೆ ಸಮಾಧಾನ ಹೇಳಿ ಆಶೀರ್ವಾದ ಮಾಡಿ ಕಳುಹಿಸಿ ಕೊಡುತ್ತಾನೆ.

ವಿಷ್ಣು ತನ್ನ ಶಕ್ತಿಯಿಂದ ಉಳ್ಳಾಯ ಉಳ್ಳಾಲ್ತಿಗಳೆಂಬ ದೈವಗಳನ್ನು ಸೃಷ್ಟಿ ಮಾಡುತ್ತಾನೆ. ಹೀಗೆ ಸೃಷ್ಟಿಗೊಂಡ ದೈವಿಶಕ್ತಿಗಳು “ದೇವನೇ ನಮ್ಮ ಸೃಷ್ಟಿಗೆ ಕಾರಣವೇನು? ನಾವು ಮಾಡಬೇಕಾದ ಕಾರ್ಯಗಳೇನು? ನೀವು ಆಜ್ಞೆ ಮಾಡಿದರೆ ಅದನ್ನು ತಲೆಯ ಮೇಲೆ ಹೊತ್ತು ಮಾಡುತ್ತೇವೆ” ಎಂಬುದಾಗಿ ಹೇಳುತ್ತವೆ. ಅದಕ್ಕೆ ವಿಷ್ಣು “ನೀವು ಉಳ್ಳಾಯ, ಉಳ್ಳಾಲ್ತಿಗಳೆಂಬ ದೈವಿಶಕ್ತಿಗಳು. ನಿಮ್ಮ ಸೃಷ್ಟಿ ಅನಿವಾರ್ಯವಾಯಿತು. ಅದಕ್ಕೆ ಕಾರಣ ಭೂಲೋಕದಲ್ಲಿ ನಡೆಯುವ ವ್ಯವಹಾರಗಳು. ಅಲ್ಲಿನ ಜನರು ಸತ್ಯ-ಧರ್ಮಕ್ಕೆ ಬೆಲೆ ಕೊಡದೇ ಅನ್ಯಾಯ, ಅವ್ಯವಹಾರಗಳನ್ನು ಮಾಡುತ್ತಿದ್ದಾರೆ, ದೇವರು ದೈವಗಳನ್ನು ಮರೆತು ವ್ಯವಹರಿಸುತ್ತಿದ್ದಾರೆ. ಆದುದರಿಂದಾಗಿ ನೀವಿಬ್ಬರು ಭೂಲೋಕಕ್ಕೆ ತೆರಳಿ ಪ್ರಶಸ್ತಿ ಸ್ಥಳದಲ್ಲಿನೆಲೆಯಾಗಿ, ಸತ್ಯ-ಧರ್ಮವನ್ನು ಉಳಿಸಿ ಬೆಳೆಸಿ, ಕೀರ್ತಿಯನ್ನು ಪಡೆದು ಧರ್ಮದೇವತೆಗಳಾಗಿ ಮೆರೆಯಬೇಕು. ಭೂಲೋಕಕ್ಕೆ ಹೋಗಿ ದುಷ್ಟರನ್ನು ಪಡೆದು ಜನರಲ್ಲಿ ಭಯ ಭಕ್ತಿಯನ್ನು ಹುಟ್ಟಿಸಿ ಸತ್ಯದೇವತೆಗಳಾಗಿ ಹೆಸರು ಪಡೆಯಿರಿ”. ಎಂದು ಹಾರೈಸಿ ಭೂಲೋಕಕ್ಕೆ ಕಳುಹಿಸಿಕೊಡುತ್ತಾನೆ.

ವಿಷ್ಣುವಿನ ಆಶೀರ್ವಾದವನ್ನು ಪಡೆದ ಉಳ್ಳಾಯ ಉಳ್ಳಾಲ್ತಿ ದೈವಗಳು ಭೂಲೋಕವನ್ನು ಸುತ್ತುತ್ತಾರೆ. ಭೂಲೋಕದ ವ್ಯವಹಾರಗಳನ್ನು ಗಮನಿಸುತ್ತಾರೆ. ಕಷ್ಟ ಬಂದಾಗ ದೇವರೇ ಎಂದು ಕೂಗಿ ಇಷ್ಟ ಬಂದಾಗ ದೇವರನ್ನು ಮರೆಯುವ ಜನರನ್ನು, ಕಲ್ಲಿನ ನಾಗನಿಗೆ ಹಾಲು ಹಾಕಿ, ಜೀವಂತ ನಾಗ ಬಂದಾಗ ಅದನ್ನು ಸಾಯಿಸುವ ಜನರನ್ನು, ಹೀಗೆ ಅನೇಕ ವಿಷಯಗಳನ್ನು ನೋಡಿ ದೇವರು ಹೇಳಿದ್ದು ಸರಿ, ನಾವು ಮಾಡಬೇಕಾದ ಕೆಲಸಗಳು ಅನೇಕ ಇವೆ ಎಂದು ಯೋಚಿಸಿ ನೆಲೆಯಾಗಲು ಸರಿಯಾದ ಸ್ಥಳ ಯಾವುದೆಂದು ಹುಡುಕಿಕೊಂಡು ಬಂಗನಾಡಿಗೆ ಬಂದು, ಕೊಲ್ಲಿ ದುರ್ಗಾದೇವಿಯ ಬಳಿಯಲ್ಲಿ ನೆಲೆಯಾಗುವುದಕ್ಕೆ ಬರುತ್ತಾರೆ. ಕೊಲ್ಲಿ ಕ್ಷೇತ್ರದಲ್ಲಿ ಮೊದಲೇ ಬಂದು ನೆಲೆಯಾಗಿದ್ದ ಕಲ್ಲುರ್ಟಿ ದೈವವು ಇವರಿಬ್ಬರನ್ನು ತಡೆಯುತ್ತದೆ. “ಕೊಲ್ಲಿ ಕ್ಷೇತ್ರ ನನ್ನ ರಕ್ಷಣೆಗೆ ಒಳಪಟ್ಟ ಪ್ರದೇಶ. ಇಲ್ಲಿ ನಾನು ಕಾಲಕ್ಕೆ ತಕ್ಕಂತೆ ಬೇಕಾದ ಕಾರ್ಯಗಳನ್ನು ಮಾಡುತ್ತಿದ್ದೇನೆ. ನೀವು ಇಲ್ಲಿ ನೆಲೆಯಾಗುವುದಕ್ಕೆ ಪ್ರಯತ್ನಿಸುವುದು ಸರಿಯಲ್ಲ. ದಯವಿಟ್ಟು ಇಲ್ಲಿಂದ ಹೋಗಿ ಬೇರೆ ಜಾಗದಲ್ಲಿ ನೆಲೆಯಾಗಿ”. ಎಂಬುದಾಗಿ ಹೇಳುತ್ತದೆ. ಅದಕ್ಕೆ ಉಳ್ಳಾಯ ಉಳ್ಳಾಲ್ತಿಗಳು ನಾವು ಇಲ್ಲಿ ನೆಲೆಯಾಗುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ಕಲ್ಲುರ್ಟಿ ನೀವು ಇಲ್ಲಿ ನೆಲೆಯಾಗುವುದಕ್ಕೆ ನಾನು ಬಿಡಲಾರೆ ಎಂದು ಹೇಳುತ್ತಾಳೆ. ಆಗ ಅವರಿಬ್ಬರ ಮಧ್ಯೆ ಯುದ್ಧ ಆರಂಭವಾಗುತ್ತದೆ. ಯುದ್ಧದಲ್ಲಿ ಸೋಲು ಗೆಲುವಿನ ತೀರ್ಮಾನವಾಗುವುದಿಲ್ಲ. ಉಳ್ಳಾಯಿ ಉಳ್ಳಾಲ್ತಿಗಳು ತಮ್ಮ ಕೈಯಲ್ಲಿದ್ದ ದೀವಟಿಗೆಯನ್ನು ಕಲ್ಲುರ್ಟಿಯ ಎದೆಗೆ ಇಡುತ್ತಾರೆ. ದೀವಟಿಗೆಯ ಉರಿಯನ್ನು ತಾಡೆಯಲಾರದೇ ಕಲ್ಲುರ್ಟಿಯು ಬಾವಿಗೆ ಹಾರುತ್ತಾಳೆ. ಆ ಸಮಯಕ್ಕೆ ಸರಿಯಾಗಿ ಕೊಲ್ಲಿ ದೇವಾಲಯದ ಅರ್ಚಕರು ಅಲ್ಲಿಗೆ ಬರುತ್ತಾರೆ. ಅಲ್ಲಿ ನಡೆದ ಯುದ್ಧದ ಕುರಿತಾಗಿ ಅವರಿಗೆ ತಿಳಿಯುತ್ತದೆ. ಅವರು ದೈವಿಶಕ್ತಿಗಳಲ್ಲಿ ವಿನಂತಿಸುತ್ತಾರೆ. “ದಯವಿಟ್ಟು ಯುದ್ಧವನ್ನು ನಿಲ್ಲಿಸಿ, ಇದು ಕಲ್ಲುರ್ಟಿಯಿಂದ ರಕ್ಷಿತವಾದ ಪ್ರದೇಶ. ಇಲ್ಲಿನ ಜನರು ಭಕ್ತಿಯಿಂದ ಅವಳನ್ನು ಪೂಜಿಸುತ್ತ ಪ್ರೀತಿಯಿಂದ ನಂಬಿಕೊಂಡು ಬರುತ್ತಿದ್ದಾರೆ, ಅ ಕಾರಣದಿಂದ ನೀವು ಈ ಜಾಗದಿಂದ ಹೋಗಿ ಬೇರೆ ಅನೇಕ ಜಾಗಗಳಿವೆ ನಿಮ್ಮ ಪೂಜಿಸುವಂತಹ ಜಾಗವನ್ನು ಹುಡುಕಿ ನೀವು ಅಲ್ಲಿ ನೆಲೆಯಾಗಿ” ಎಂದು ಅರ್ಚಕರು ಹೇಳುತ್ತಾರೆ. ಅರ್ಚಕರ ಮಾತಿನಂತೆ ಉಳ್ಳಾಯ, ಉಳ್ಳಾಲ್ತಿಗಳು ಅಲ್ಲಿಂದ ಹೊರಡುತ್ತಾರೆ.

ಕೊಲ್ಲಿಯಿಂದ ಹೊರಟ ಉಳ್ಳಾಯ ಉಳ್ಳಾಲ್ತಿಗಳು ಕಲ್ಲುಬೀಡು ಎಂಬಲ್ಲಿ ನೆಲೆಯಾಗುವುದಕ್ಕೆ ಮನಸ್ಸು ಮಾಡುತ್ತಾರೆ. ಅಲ್ಲಿನ ಅರಸನಿಗೆ ಕನಸಿನಲ್ಲಿ ಬಂದು “ನಾವು ಉಳ್ಳಾಯ ಉಳ್ಳಾಲ್ತಿಗಳೆಂಬ ದೈವಗಳು. ನಿನ್ನ ಆಡಳಿತ ಪ್ರದೇಶದ ಕಲ್ಲಬೀಡಿದ ಕುತ್ರೊಟ್ಟುನಲ್ಲಿ ನೆಲೆಯಾಗುವ ಉದ್ದೇಶದಿಂದ ಬಂದಿದ್ದೇವೆ. ನಮಗೆ ಬೇಕಾದ ವ್ಯವಸ್ಥೆಯನ್ನು ಮಾಡು, ಗುಡಿಯನ್ನು ಕಟ್ಟಿ ನಂಬಿಕೊಂಡು ಬಾ. ನಿನ್ನ ಸಕಲ ರಕ್ಷಣೆಯನ್ನು ನಾವು ಮಾಡುತ್ತೇವೆ”. ಎಂಬುದಾಗಿ ಹೇಳುತ್ತಾರೆ. ಬೆಳಗಿನ ಜಾವದಲ್ಲಿ ಬಿದ್ದ ಕನಸಿನ ಕುರಿತಾಗಿ ಸಂಬಂಧಪಟ್ಟವರಲ್ಲಿ ಚರ್ಚಿಸಿ ನೆಲೆಯಾಗಲು ಬಯಸಿ ಬಂದ ದೈವಗಳಿಗೆ ಗುಡಿಕಟ್ಟಿ ಆರಾಧಿಸುವುದಕ್ಕೆ ಅರಸ ಮನಸ್ಸು ಮಾಡುತ್ತಾನೆ. ಉಳ್ಳಾಯ ಉಳ್ಳಾಲ್ತಿಗಳು ಕೊತ್ರೊಟ್ಟಿನಲ್ಲಿ ನೆಲೆಯಾಗುತ್ತಾರೆ. ಉಳ್ಳಾಯ ಉಳ್ಳಾಲ್ತಿಗಳು ಕುತ್ರೊಟ್ಟಿನಲ್ಲಿ ನೆಲೆಯಾದ ಕುರಿತು ತಿಳಿದುಕೊಂಡ ಕೋಟಿಚೆನ್ನಯ ದೈವಗಳು ಅಲ್ಲಿಗೆ ಬಂದು, ನೆಲೆಯಾಗಲು ನಮಗೂ ಜಾಗ ಕೊಡೆಂದು ಕುತ್ರೊಟ್ಟು ಕ್ಷೇತ್ರ ರಕ್ಷಕನಾದ ಕತ್ತುಲ್ಲಯ ದೈವದಲ್ಲಿ ಕೇಳುತ್ತಾರೆ. “ನಾವು ಅರಸನಿಗೆ ಬುದ್ಧಿ ಕೊಟ್ಟು ನಮಗೆ ಮಾಡ ಕಟ್ಟಿಸಿಕೊಳ್ಳಬೇಕೆಂದು ಯೋಚಿಸುವಷ್ಟರಲ್ಲೇ ಎಲ್ಲಿಂದಲೋ ಬಂದಂತಹ ಉಳ್ಳಾಯ ಉಳ್ಳಾಲ್ತಿಗಳೆಂಬ ದೈವಗಳಿಗೆ ಜಾಗಕೊಟ್ಟು ಮಾಡ ಕಟ್ಟಿಸುವ ಯೋಚನೆ ನೀವು ಮಾಡಿದ್ದೀರೆಂದು ತಿಳಿದು ಇಲ್ಲಿಗೆ ಬಂದಿದ್ದೇವೆ. ಅರಸನಲ್ಲಿ ಕೇಳುವ ಬದಲು ಕ್ಷೇತ್ರಪಾಲಕನಾದ ನಿನ್ನಲ್ಲಿಯೇ ಕೇಳೋಣ ಎಂದು ಬಂದಿದ್ದೇವೆ. ಯಾಕೆ ಅವರಿಗೆ ಜಾಗ ಕೊಟ್ಟಿರೆಂದು ಹೇಳು?” ಅದಕ್ಕೆ ಕ್ಷೇತ್ರ ಪಾಲಕನಾದ ಕುತ್ತುಲ್ಲಯ ಹೇಳುತ್ತಾನೆ, “ನಿಮಗೆ ಹೊಟ್ಟೆಕಿಚ್ಚು ಹೆಚ್ಚಾಯಿತು. ಉಳ್ಳಾಯ ಉಳ್ಳಾಲ್ತಿಗಳ ಶಕ್ತಿ ಏನೆಂದು ತಿಳಿದೇ ಅವರಿಗೆ ಮಾಡ ಕಟ್ಟಿಸುವುದಕ್ಕೆ ಜಾಗ ಕೊಟ್ಟಿದ್ದು” ಅದಕ್ಕೆ ಕೋಟಿ ಚೆನ್ನಯ ಮತ್ತು ಕುತ್ತುಲ್ಲಯ ದೈವಗಳ ನಡುವೆ ಯುದ್ಧ ಆರಂಭವಾಗುತ್ತದೆ. ಯುದ್ಧದಲ್ಲಿ ಸೋಲು ಗೆಲುವಿನ ತೀರ್ಮಾನವಾಗುವ ಮೊದಲೇ ಕುತ್ತುಲ್ಲಯ ಯುದ್ಧವನ್ನು ನಿಲ್ಲಿಸಿ, “ನಾವು ದೈವೀಶಕ್ತಿಗಳು. ನಾವು ನಾವೇ ಯುದ್ಧ ಮಾಡಿದರೆ ಹೇಗೆ? ಆದುದರಿಂದ ಹೊಟ್ಟೆ ಕಿಚ್ಚನ್ನು ಬಿಟ್ಟು ಮೇಲ್ತೊಟ್ಟು ಎಂಬಲ್ಲಿಗೆ ಹೋಗಿ ಅಲ್ಲಿ ಗರಡಿಯನ್ನು ಕಟ್ಟಿಸಿ ಮೆರೆಯಿರಿ” ಎಂದು ಹೇಳುತ್ತಾನೆ. ಅದೇ ರೀತಿ ಕೋಟಿ ಚೆನ್ನಯರು ಮೇಲ್ತೋಟ್ಟಿನಲ್ಲಿ ಗರಡಿ ಕಟ್ಟಿಸಿಕೊಳ್ಳುತ್ತಾರೆ.

ಉಳ್ಳಾಯ ಉಳ್ಳಾಲ್ತಿಗಳು ಮುಂದೆ ಹೋಗುತ್ತಿದ್ದಾಗ ದಾರಿಯಲ್ಲಿ ಕಳ್ಳು ತೆಗೆಯುವವನು ಭೇಟಿಯಾಗುತ್ತದೆ, ಆತ ಬಹಳ ಜಂಭದವನೆಂದು ತಿಳಿದು ಆತನ ಜಂಭವನ್ನು ಇಳಿಸುವುದಕ್ಕೆ ಬಯಸುತ್ತಾರೆ. ಅದಕ್ಕಾಗಿ ಅವನಲ್ಲಿ ಕಳ್ಳು ಕೇಳುತ್ತಾರೆ. ಅದಕ್ಕೆ ಅವನು ಕಳ್ಳು ಬೇಕಾದರೆ ಮನೆಗೆ ಬನ್ನಿ ಎಂದೆಲ್ಲ ಹೇಳಿ ಅವರನ್ನು ಹಂಗಿಸುತ್ತಾನೆ. ಕಳ್ಳು ಕೊಡದೇ ಹೋದಲ್ಲಿ ಅದು ರಕ್ತವಾದೀತೆಂದು ದೈವಗಳು ಹೇಳಿತ್ತದೆ. ಆತ ಮನೆಗೆ ಹೋಗಿ ಕಳ್ಳಿನ ಮಡಕೆಯನ್ನು ನೋಡಿದಾಗ ಅದು ರಕ್ತವಾಗಿತ್ತು. ಇದರಿಂದಾಗಿ ಆತ ಜೋಯಿಸರಲ್ಲಿ ಹೋಗಿ ಕೇಳುತ್ತಾನೆ. ಜೋಯಿಸರು ಪ್ರಶ್ನೆ ಇಟ್ಟು ಉಳ್ಳಾಯ ಉಳ್ಳಾಲ್ತಿಗಳು ನೆಲೆಯಾಗಲು ಬಂದಿರುವುದನ್ನು ಹೇಳುತ್ತಾರೆ. ಈ ವಿಷಯವನ್ನು ಆತ ಅರಸರ ಗಮನಕ್ಕೆ ತರುತ್ತಾನೆ. ಅರಸರು ತನಗೆ ಬಿದ್ದ ಕನಸು ಮತ್ತು ಕಳ್ಳು ತೆಗೆಯುವವ ಹೇಳಿದ ಘಟನೆಯಿಂದ ಉಳ್ಳಾಯ ಉಳ್ಳಾಲ್ತಿಗಳು ಬಂದಿರುವುದರಲ್ಲಿ ಸಂಶಯವಿಲ್ಲವೆಂದು ತಿಳಿದು ದೈವಗಳಿಗೆ ಬೇಕಾದಂತೆ ಮಾಡ ಕಟ್ಟಿಸಿ ಆರಾಧನೆಗೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಾನೆ. ಈ ರೀತಿಯಲ್ಲಿ ಉಳ್ಳಾಯ ಉಳ್ಳಾಲ್ತಿಗಳು ಕುತ್ರೊಟ್ಟು ಎಂಬಲ್ಲಿ ನೆಲೆಯಾಗಿ ಸಮಯಕ್ಕೆ ತಕ್ಕಂತೆ ಆರಾಧನೆಯನ್ನು ಪಡೆದುಕೊಳ್ಳತೊಡಗಿದರು.

ಉಳ್ಳಾಲ್ತಿ ದೈವ ತುಳುನಾಡಿಗೆ ಪ್ರವೇಶಿಸಿದ ಕಥೆ

ಉಳ್ಳಾಲ್ತಿ ಪಾಡ್ದನದ ಪ್ರಕಾರ ತುಳುನಾಡಿಗೆ ಉಳ್ಳಾಲ್ರಿಯ ಆಗಮನವಾದದ್ದು ಪಶ್ಚಿಮ ಘಟ್ಟಗಳ ಕಡತ್ತಿಕಲ್ ಘಾಟಿಯ ಮಾರ್ಗವಾಗಿ ಎಂದು ತಿಳಿದುಬರುತ್ತದೆ. ಗಂಗನಾಡು ಕೊಂಗ ದೇಶದ ಬಂಗಾರದ ಅರಮನೆಯಲ್ಲಿ ಉಳ್ಳಾಯ, ಉಳ್ಳಾಲ್ತಿ ಧರ್ಮದೈವಗಳು ತೂಗು ಮಂಚದಲ್ಲಿ ಉದಿಸಿ ಸತ್ಯ ಬಿತ್ತರಿಸುತ್ತಿದ್ದಾಗ ಏಳು ಜನ ಹೆಂಗಸರು ಈ ಅಣ್ಣ ತಂಗಿಯರಿಗೆ ಅಪವಾದ ಹೇಳಿದರೆಂದು ಅಧರ್ಮದ ನಾಡಿನಿಂದ ಘಟ್ಟ ಇಳಿದು ಉರ್ಕಿನಾಡು, ದಂಬೆಅಂಗಡಿ, ಕಡತಿಕಲ್ಲು, ಜಂಗಮಕೆರೆ ದಾಟಿ ಧರ್ಮದ ನಸುಬೆಳಕು ಕಾಣುವ ಬಂಗಾರ ಸೀಮೆಗೆ ಬಂದು ಕಿಲ್ಲೂರಿನ ಕೊಲ್ಲಿ ದುರ್ಗೆಯನ್ನು ಸಂದರ್ಶಿಸಿದರು. ಅಲ್ಲಿಂದ ಜೈನ ಶ್ರವಣರ ತಪಸ್ಸಿನ ತಾಣ ಶ್ರವಣಗುಂಡ್ಕಕೆ ಬಂದು ಅಲ್ಲಿಂದ ಮಾಸ್ತಿಕಲ್ಲು ದಾಏ, ಮಾರಣಭೂಮಿಯಾಗಿ ಬಂಗವಾಡಿ ಅರಮನೆಯ ಬಳಿ ಬಂದು ಅರಮನೆಯ ಆನೆಗೆ ಹುಚ್ಚು ಹಿಡಿಸಿ ಉಳ್ಳಾಲ್ತಿ ತನ್ನ ಸಾನ್ನಿಧ್ಯವನ್ನು ಪ್ರಕಟಿಸಿದಳಂತೆ. ಆಗ ಅಲ್ಲಿನ ಬಂಗರಾಜನು ಶಾಂತೇಶ್ವರ ಬಸದಿ ಬಳಿ ಉಳ್ಳಾಲ್ತಿಗೆ ಸ್ಥಾನ ಕಟ್ಟಿ ನಂಬಿಕೊಂಡು ಬಂದನೆಂದು ಪ್ರತೀತಿ ಇದೆ. ಉಳ್ಳಾಲ್ತಿಯ ಅಣತಿಯಂತೆ ಇಂದಬೆಟ್ಟಿನ ಕುತ್ರೊಟ್ಟು ಎಂಬಲ್ಲಿ ಅವಳಿಗೆ ಮಾಡ ಕಟ್ಟಿಸಿದನಂತೆ. ಇಂದಬೆಟ್ಟುವಿನಲ್ಲಿ ಉಳ್ಳಾಕರು ಮತ್ತು ಮುಡ್ತಿಲ್ಲಾಯ ಗುಡಿಗಳ ನಡುವೆ ಉಳ್ಳಾಲ್ತಿಯ ಮಾಡವಿರುವುದನ್ನು ಇಂದು ಕೂಡ ಕಾಣಬಹುದಾಗಿದೆ.

ಅನಂತಾಡಿಯಲ್ಲಿ ಉಳ್ಳಾಲ್ತಿ ದೈವವು ನೆಲೆಯಾದ ಕುರಿತ ಕಥೆ

ದೈವದ ಕೈಯಲ್ಲಿ ತೆಂಗಿನಮರದ ತೆಪ್ಪರಿಗೆಯ ಎರಡು ದೀವಟಿಕೆಗಳಿರುತ್ತವೆ. ಕೈಯಲ್ಲಿ ಹಿಡಿಯುವ ಒಣ ಮಡಿಲಿನ ಸೂಡಿಯನ್ನು ತೆಂಗಿನ ಮರದ ಮಡಲಿನ ಜೊತೆ ಇರುವ ತೆಪ್ಪರಿಗೆಯಿಂದಲೇ ಮಾಡಬೇಕೆಂಬುದಕ್ಕೆ ಒಂದು ಐತಿಹ್ಯವಿದೆ.

ಅನಂತಾಡಿಯಲ್ಲಿ ಆಗ ಬಂಗವಂಶಸ್ಥರಾದ ಬಲ್ಲಾಳರಸರು ಇದ್ದ ಕಾಲ. ಅವರ ಬೀಡಿನ ಚಾವಡಿಯ ಮಂಚದಲ್ಲಿ ವಿರಾಜಮಾನರಾದ ಅಮ್ಮನವರನ್ನು ಗೌರವಿಸದೆ ಅನಾದರದಿಂದ ಕಂಡ ಕಾರಣ ಆ ಬಲ್ಲಾಳ ವಂಶವು ಅಮ್ಮನವರ ಪ್ರಕೋಪಕ್ಕೆ ಗುರಿಯಾಯಿತೆಂದೂ, ಅಮ್ಮನವರಿಗೆ ದಾರಿಯಲ್ಲಿ ಬೆಳಕಿಗಾಗಿ ತೆಂಗಿನ ಚಪ್ಪರೆಗೆಯ ಸೂಟೆಗಳನ್ನು ಮಾಡಿಕೊಟ್ಟ ಬಿಲ್ಲವರ ಉಲ್ಲೇಖವಿದೆ. ಕ್ರಮೇಣ ವಂಶ ನಿರ್ನಾಮವಾಗಿ ಅಮ್ಮನವರ ಸ್ಥಾನ ಬಿಲ್ಲವರ ವಶಕ್ಕೆ ಬಂದಿತು. ಬಿಲ್ಲವ ಕಲ್ಲಾಪು ತಿಮ್ಮ ಎಂಬುವನ ಕಾಲದಲ್ಲಿ ಅಮ್ಮನವರಿಗೆ ಚಂದನದ ಹೊಸ ಮೊಗವನ್ನು ಮಾಡಿಸಲಾಯಿತು ಎಂಬ ವಿವರ ಸಿಗುತ್ತದೆ.

ಬಿಲ್ಲವರ ಯಜಮಾನ್ಯದ ನಂತರ ಬಂಟರ “ಕಿಲ್ಲೆ”ಮನೆಯನವೊಂದು ಉಳ್ಳಾಲ್ತಿ ಅಮ್ಮನನ್ನು ಆರಾಧಿಸುತ್ತಿದ್ದರು. ಶಂಕರ ರೈ ಉಮಣ ಕಿಲ್ಲೆ ಎಂಬುವರು ಆಡಖಿತ ನಡೆಸಿ ವರ್ಷಾವಧಿ ಮೆಚ್ಚು ಉತ್ಸವಗಳನ್ನು ನಡೆಸಿಕೊಂಡು ಬಂದರಲ್ಲದೆ ಉಳ್ಳಾಲ್ತಿ ಅಮ್ಮನವರಿಗೆ ಬೆಳ್ಳಿಯ ಮೊಗವನ್ನು ಮಾಡಿಸಿದರೆಂಬುದು ತಿಳಿಯುತ್ತದೆ. ಉಮಣ ಕಿಲ್ಲೆಯವರ ಕಾಲದಲ್ಲಿ ಅಂದರೆ ಸುಮಾರು ಇನ್ನೂರು ವರ್ಷಗಳ ಮೊದಲು ಅವರ ಮನೆತನಕ್ಕೆ ಅಪಾರ ಕಷ್ಟನಷ್ಟಗಳುಂಟಾಗಿ ತಮ್ಮ ಆಸ್ತಿಯನ್ನು ಉಳ್ಳಾಲ್ತಿ ದೈವಕ್ಕೆ ಸಂಬಂದಿಸಿದ ಆಭರಣಗಳ ಜೊತೆಯಲ್ಲಿಯೇ ಮಂಗಳೂರಿನ ಸಾಹುಕಾರ ಬಾಬ ಪೈ ಅವರಿಗೆ ಸಾಲ ತೀರಿಸುವುದಕ್ಕಾಗಿ ನೀಡಿದರು. ಅನಂತರ ಪ್ರಥಮ ಮೊಕ್ರೇಸರರಾಗಿ ದಂಡೆತ್ತಿ ಮಾರಿನ ಸಾಹುಕಾರ ಪೈ ಮನೆತನದವರು ಚಿತ್ತರಿಗೆಯಲ್ಲಿನ ದಿನನಿತ್ಯದ ಪೂಜೆ, ವರ್ಷದಲ್ಲಿ ಒಮ್ಮೆ ನಡೆಯುವ ಮೆಚ್ಚಿ ಜಾತ್ರೆ ಮತ್ತಿತರ ಆಚರಣೆಗಳನ್ನು ನಿಯಮದಂತೆ ನಡೆಯಿಸಿಕೊಂಡು ಬರುವುದಕ್ಕೆ ಆರಂಭಿಸಿದರು. ಅನಂತಾಡಿ ದೊಡ್ಡಮನೆ ಎಮ್. ಮೋಹನ್ ಪೈ, ಡಾ. ಎಮ್. ನರೇಂದ್ರ ಪೈ ಮತ್ತು ಬೆಳ್ಳಿಪ್ಪಾಡಿ ಮನೆತನಕ್ಕೆ ಸೇರಿದ ನೇಲ್ತೊಟ್ಟು ಗುತ್ತು, ತುಂಬೆತೋಡಿ, ಬಾಳಿಕೆ, ಕೊಂಬಿಲ ಮತ್ತು ದೇಲ್ತಿಮಾರ್ ಈ ಐದು ಪ್ರಮುಖ ಗುತ್ತುಗಳು ಸೇರಿ ಗ್ರಾಮ ಪದ್ಧತಿಯಂತೆ ಅನಂತಾಡಿ ಗ್ರಾಮದ ಉಳ್ಳಾಲ್ತಿ ಅಮ್ಮನವರ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಪ್ರಥಮವಾಗಿ ಬಂಗವಾಡಿಯಲ್ಲಿ ಉಳ್ಳಾಲ್ತಿ ದೈವವು ನೆಲೆಯಾಗಿ ನಂತರ ತನ್ನ ಶಕ್ತಿಯ ಮೂಲಕ ಉಳಿದ ಪ್ರದೇಶಗಳ ಯೋಗ್ಯ ಜನರನ್ನು ಕೈ ಹಿಡಿದು ನೆಲೆಯಾಗುತ್ತ ನಂಬಿದವರಿಗೆ ಇಂಬು ನೀಡಿ ನಂಬದವರನ್ನು ತನ್ನ ಶಕ್ತಿಯಿಂದ ನಿರ್ನಾಮಗೊಳಿಸಿ ತನ್ನ ಸ್ಥಾನವನ್ನು ಉಳ್ಲಾಲ್ತಿ ದೈವವು ಗಟ್ಟಿಗೊಳಿಸಿರುವುದು ಪಾಡ್ದನಗಳಿಂದ ಮತ್ತು ಐತಿಹ್ಯಗಳಿಂದ ತಿಳಿದು ಬರುತ್ತದೆ.

ಧರ್ಮಸ್ಥಳದಲ್ಲಿ ಕನ್ಯಾಕುಮಾರಿಯಾಗಿ ಉಳ್ಳಾಲ್ತಿ ಉದಯದ ಐತಿಹ್ಯ

ಕುಡುಮ ಎಂಬುದು ಕಾಡಿನಿಂದ ಆವರಿಸಿದ್ದ ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿ ಧಾರ್ಮಿಕ ಮನೋಭಾವದ ಜೈನ ದಂಪತಿಗಳಿದ್ದರು. ಇವರ ಹೆಸರು ಬಿರ್ಮಣ್ಣ ಹೆಗ್ಗಡೆ ಮತ್ತು ಅಮ್ಮು ಬಳ್ಳಾಲ್ತಿ. ಇವರು ವಾಸಿಸುತ್ತಿದ್ದ ಬೀಡನ್ನು ನೆಲ್ಯಾಡಿ ಬೀಡು ಎಂಬ ಹೆಸರಿನಿಂದ ಕರೆಯುತ್ತಾರೆ. ಇವರ ಬೀಡಿನ ಪಕ್ಕದಲ್ಲಿಯೇ ಚಂದ್ರನಾಥ ಬಸದಿ ಮತ್ತು ಪದ್ಮಾವತಿ ದೇವಿಯ ಮಂದಿರಗಳಿದ್ದವು. ಈ ದಂಪತಿಗಳ ಪರಿಶುದ್ಧ ಭಕ್ತಿಗೆ ಮನೋಧರ್ಮಕ್ಕೆ ನಾಲ್ಕು  ಧರ್ಮದೇವತೆಗಳು ಒಲಿದು ಬಂದರು.

ಧರ್ಮೋದ್ಧಾರಕ್ಕಾಗಿ ತಾವು ದೀಕ್ಷೆ ಕೈಗೊಂಡುದನ್ನು ಹೇಳಿ ತಮ್ಮ ವಾಸಕ್ಕಾಗಿ ನೆಲ್ಯಾಡಿ ಬೀಡನ್ನು ಬಿಟ್ಟು ಕೊಡಬೇಕೆಂದು ದೈವಗಳು ಕೇಳಿದಾಗ ಜೈನ ದಂಪತಿಗಳು ಆನಂದದಿಂದ ನೆಲ್ಯಾಡಿ ಬೀಡನ್ನು ದೈವಗಳಿಗೆ ಬಿಟ್ಟುಕೊಟ್ಟು ತಾವು ಬೇರೆ ಮನೆಯನ್ನು ಮಾಡಿಕೊಂಡು ವಾಸಿಸತೊಡಗಿದರು.

ಒಂದು ದಿನ ಕನಸಿನಲ್ಲಿ ದೈವಗಳು ಕಾಣಿಸಿಕೊಂಡು “ನಾವು ನಾಲ್ಕು ಶಕ್ತಿಶಾಲಿ ದೈವಗಳು, ಕುಮಾರಸ್ವಾಮಿ, ಕನ್ಯಾಕುಮಾರಿ, ಕಾಳರಾಹು ಮತ್ತು ಕಳರ್ಕಾಯಿ ಎಂಬುದಾಗಿ ನಮ್ಮ ಹೆಸರುಗಳು. ನಾವು ಧರ್ಮ ದೈವಗಳು ನಮ್ಮ ವಾಸಕ್ಕೆ ಯೋಗ್ಯ ತಾಣವನ್ನು ಅರಸುತ್ತಾ ಭೂಮಿಯಲ್ಲಿ ಸುತ್ತುತ್ತಿರುವಾಗ ಈ ದಿವ್ಯ ಭೂಮಿಯಲ್ಲಿ ಒಂದು ಅತಿಶಯವನ್ನು ಕಂಡೆವು. ಪರಸ್ಪರ ವೈರಿಗಳಾದ ಹುಲಿ ಮತ್ತು ದನ ಜೊತೆಯಲ್ಲಿ ಆಡುತ್ತಿದ್ದ ಅದ್ಬುತ ದೃಶ್ಯವನ್ನು ಕಂಡು ಪ್ರಭಾವಿತರಾದೆವು. ಈ ಸ್ಥಳ ನಮ್ಮ ವಾಸಕ್ಕೆ ಯೋಗ್ಯ ಸ್ಥಳವೆಂದು ಯೋಚಿಸಿ, ನಿಮ್ಮನ್ನು ವಿಧವಿಧವಾಗಿ ಪರೀಕ್ಷಿಸಿದೆವು. ನಿಮ್ಮ ಪರಿಶುದ್ಧವಾದ ಮನೋಧರ್ಮಕ್ಕೆ ಒಲಿದೆವು, ನಿಮ್ಮ ಭಕ್ತಿಗೆ ಮೆಚ್ಚಿದೆವು. ನಮಗಾಗಿ ಬೇರೆ ಬೇರೆ ಗುಡಿಗೋಪುರಗಳನ್ನು ನಿರ್ಮಾಣ ಮಾಡಿ ಕಾಲಕಾಲಕ್ಕೆ ಆರಾಧಿಸಿ ಪರ್ವ ನಡಾವಳಿಗಳನ್ನು ನಡೆಸಿಕೊಂಡು ಬನ್ನಿ ಇಂದಿನಿಂದ ನಾವು ನಿಮಗೆ ಕಾಣಿಸುವುದಿಲ್ಲ. ದರ್ಶನ ಪಾತ್ರಿಯ ಮೂಲಕ ಸಂದೇಶ ನೀಡುವೆವು. ನಮ್ಮ ದೂತನಾದ ಅಣ್ಣಪ್ಪ ಭೂತ ಕ್ಷೇತ್ರದ ಧರ್ಮ ರಕ್ಷಣೆಗೆ ಸಹಕಾರಿಯಾಗಿ ನಿಮಗೆ ನೆರವು ನೀಡುತ್ತಾನೆ. ಜಗತ್ತಿನ ಧರ್ಮರಕ್ಷಣೆಯೇ ನಮ್ಮ ಉದ್ದೇಶ. ನಿಮ್ಮ ಕುಲವನ್ನು, ಕ್ಷೇತ್ರವನ್ನು ಕಾಪಾಡುತ್ತೇವೆ” ಎಂಬ ಅಭಯವನ್ನು ನೀಡಿದರು.

ದೈವಗಳ ಅಪ್ಪಣೆಯಂತೆ ಈಗಿನ ಅಣ್ಣಪ್ಪ ಬೆಟ್ಟದಲ್ಲಿ ಧರ್ಮದೇವತೆಗಳಿಗೆ ನೆಲೆಯನ್ನು ಸ್ಥಾಪಿಸಿ, ಪೂಜಿಸಿ ಪರ್ವ ನಡಾವಳಿಗಳನ್ನು ನಡೆಸಿದರು.

ಕುಡುಮ ಎಂಬ ಹಳ್ಳಿ ಧರ್ಮಸ್ಥಳ ಎಂಬ ಹೆಸರು ಪಡೆದ ಕಥೆ

ಹೆಗ್ಗಡೆಯವರ ಅಪೇಕ್ಷೆಯಂತೆ ಕಾಶಿಯಿಂದ ಕದಿರೆಯಲ್ಲಿ ತಂದಿಟ್ಟ ಶಿವಲಿಂಗವನ್ನು ಅಣ್ಣಪ್ಪ ಕುಡುಮಕ್ಕೆ ಹೊತ್ತು ತಂದ. ಹೆಗ್ಗಡೆಯವರು ದೇವಾಲಯವನ್ನು ನಿರ್ಮಿಸಿ ದೇವರನ್ನು ಸ್ಥಾಪಿಸಿದರು. ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು, ಇಷ್ಟದೇವತೆಗಳು, ಅಮ್ಮನವರು, ಅಣ್ಣಪ್ಪ ದೈವ, ಮಹಾಗಣಪತಿ, ಸ್ಕಂದಾದಿ ದೇವತೆಗಳ ಪೀಠಗಳನ್ನು ಸ್ಥಾಪಿಸಲಾಯಿತು,

ಬಿರ್ಮಣ್ಣಾ ಹೆಗ್ಗಡೆಯವರು ದೈವಾಧೀನರಾದ ನಂತರ ಕ್ರಿ.ಶ. ೧೫೦೩ ರಲ್ಲಿ ಅಧಿಕಾರಕ್ಕೆ ಬಂದ ನಾಲ್ಕನೆಯವರಾದ ದೇವರಾಜ ಹೆಗ್ಗಡೆಯವರು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಕುಡುಮ ಎಂಬ ಹೆಸರು ಧರ್ಮಸ್ಥಳ ಎಂಬುದಾಗಿ ಬದಲಾಯಿತು. ಆ ಕುರಿತು ಹೀಗೊಂದು ಐತಿಹ್ಯ ದೊರೆಯುತ್ತದೆ.

ಉಡುಪಿಯ ಸೋದೆ ಮಠದ ವಾದಿರಾಜ ಸ್ವಾಮಿಗಳು ದಿಗ್ವಿಜಯಕ್ಕಾಗಿ ಈ ಪ್ರಾಂತ್ಯಕ್ಕೆ ಬಂದಾಗ, ಹೆಗ್ಗಡೆಯವರು ಕ್ಷೇತ್ರಕ್ಕೆ ದರ್ಶನ ನೀಡಿ ಆತಿಥ್ಯವನ್ನು ಸ್ವೀಕರಿಸಿ ಭಿಕ್ಷೆಯನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದರು. ಶ್ರೀ ಸ್ವಾಮಿಗಳು ದಿವ್ಯಜ್ಞಾನ ಸಂಪನ್ನರಾದ ವಿಭೂತಿ ಪುರುಷರು. ದಿವ್ಯಜ್ಞಾನದಿಂದ ಭವಿಷ್ಯವನ್ನು ತಿಳಿದುಕೊಂಡರು. ಈ ಕ್ಷೇತ್ರವು ಕಲಿಯುಗದಲ್ಲಿ ಸತ್ಯಧರ್ಮಗಳ ಉಜ್ವಲ ಕ್ಷೇತ್ರವಾಗುವುದನ್ನು ಮನಗಂಡರು. ಹೆಗ್ಗಡೆಯವರ ವಿನಂತಿಯನ್ನು ಸ್ವೀಕರಿಸಿ ಕ್ಷೇತ್ರಕ್ಕೆ ಸ್ವಾಮಿಗಳು ಆಗಮಿಸಿ ಆಗಮೋಕ್ತ ವೈದಿಕ ವಿಧಿಗಳ ಅನುಗುಣವಾಗಿ ಶ್ರೀ ಸ್ವಾಮಿಯನ್ನು ಪ್ರತಿಷ್ಠೆ ಮಾಡಿ ಪೂಜಾದಿಗಳನ್ನು ನಡೆಸಿ ಪ್ರಾರ್ಥನೆ ಸಲ್ಲಿಸಿದರು.

“ಈ ದಿನದಿಂದ ಈ ಕ್ಷೇತ್ರವು ಧರ್ಮಸ್ಥಳವೆಂದು ಪ್ರಸಿದ್ಧವಾಗಲಿ. ಧರ್ಮವು ಅನವರತ ನಡೆಯಲಿ. ಸತ್ಯ ಆಚಂದ್ರಾರ್ಕ ಮೆರೆಯಲಿ. ವಿಶ್ವಾತ್ಮನಾದ ಪರಶಿವನು ಮಂಜುನಾಥನಾಗಿ ಸತ್ಯಧರ್ಮಗಳನ್ನು ಕಾಪಾಡಿ ಸಕಲರನ್ನು ಅನುಗ್ರಹಿಸಲಿ” ಎಂದು ಅಮರವಾಣಿಯನ್ನು ಸ್ವಾಮಿಗಳು ನುಡಿದರು. ಆ ದಿನದಿಂದ ಅನ್ನದಾನ ಧರ್ಮದಾನಗಳು ಪ್ರಾರಂಭವಾಯಿತು. “ಕುಡುಮ”ವು “ಧರ್ಮಸ್ಥಳ” ಎಂಬ ಹೆಸರಿನಿಂದ ಅಂದಿನಿಂದ ಪ್ರಸಿದ್ಧಿಯಾಯಿತೆಂದು ಕತೆಯಿಂದ ತಿಳಿದು ಬರುತ್ತದೆ.

ಕೇಪು ಹೆಸರಿನ ಐತಿಹ್ಯ

ಹಿಂದಿನ ಕಾಲದಲ್ಲಿ ಗುಡ್ಡ ಕಾಡುಗಳಲ್ಲಿ ವಾಸ ಮಾಡುತ್ತಿದ್ದ ಜನರು ಕಾಡಿನಲ್ಲಿ ದೊರೆಯುವ ಗೆಡ್ಡೆ ಗೆಣಸುಗಳನ್ನು ಅಗೆದು ತಂದು ತಿನ್ನುವುದು ನಡೆದು ಬಂದ ಪದ್ಧತಿಯಾಗಿತ್ತು. ಹೀಗಿರುವಾಗ ಕೇಪು ಎಂಬ ವ್ಯಕ್ತಿ ಗೆಡ್ಡೆಯನ್ನು ಹುಡುಕಿಕೊಂಡು ಈಗ ದೇವಾಲಯ ಇರುವ ಸ್ಥಳಕ್ಕೆ ಬಂದು ಗೆಡ್ಡೆ ಅಗೆಯುವ ಸಂದರ್ಭದಲ್ಲಿ ವನದುರ್ಗೆಯ ಅಸ್ತಿತ್ವ ಇವನಿಗೆ ಕಂಡಿತು. ಆರಂಭದಲ್ಲಿ ವನದುರ್ಗೆಯ ಅಸ್ತಿತ್ವ್ನನು ಕಂಡ ಕೇಪು ಎಂಬುವನ ಹೆಸರೆ ಆ ಸ್ಥಳಕ್ಕೆ ಬಂತು ಎಂಬುದಾಗಿ ಹೇಳಲಾಗುತ್ತಿದೆ. ವನದುರ್ಗೆಯ ಅಸ್ತಿತ್ವವನ್ನು ಕೇಪು ಯಾವ ರೀತಿಯಲ್ಲಿ ನೋಡಿದ, ಅದನ್ನು ಜನರಿಗೆ ಹೇಗೆ ತಿಳಿಸಿದ ಎಂಬ ಕುರಿತು ಯಾವುದೇ ಮಾಹಿತಿಗಳು ದೊರೆಯವುದಿಲ್ಲ.

ಕೇಪು ಕ್ಷೇತ್ರದ ಸ್ಥಳಪುರಾಣ

ಸುಮಾರು ೮೦೦ ವರ್ಷಗಳ ಹಿಂದೆ ವಿಟ್ಲ ಸೀಮೆಯನ್ನು ವಿಟ್ಲ ಅರಸರು ಆಳುತ್ತಿರುವಾಗ ಅರಸು ಮನೆತನಕ್ಕೆ ಸೇರಿದ “ಎಲ್ಯಕ್ಕ ಮಲ್ಲಕ್ಕ” ಎಂಬ ಅಕ್ಕ ತಂಗಿಯರು ನಲುವತ್ತು ಜನ ಭಟರನ್ನು ಕೇಪು ಗ್ರಾಮಕ್ಕೆ (ಈಗ ದೇವಸ್ಥಾನ ಇರುವ ಜಾಗಕ್ಕೆ) ನಿಧಿ ಅಗೆಯಲು ಕಳುಹಿಸಿದರು. ಇವರು ನಿಧಿಯನ್ನು ಅಗೆಯಲು ಪ್ರಾರಂಭಿಸಿದಾಗ ನಿಧಿಯ ರಕ್ಷಣೆ ಮಾಡುತ್ತಿದ್ದ “ವನದುರ್ಗೆ” ಎಂಬ ದೈವದ ದೃಷ್ಟಿಯಿಂದಾಗು ನಲುವತ್ತು ಜನರು ಮರಣ ಹೊಂದಿದರು. ಇದನ್ನು ತಿಳಿದ ಅಮ್ಮುರಸುಗಳು (ಎಲ್ಯಕ್ಕ ಮತ್ತು ಮಲ್ಲಕ್ಕ) ಆ ಸ್ಥಳಕ್ಕೆ ಹೋದರು. ಆ ವನದುರ್ಗೆಯ ಪ್ರಭಾವದಿಂದ ಇವರಿಬ್ಬರು ಕೂಡ ಮಾಯವಾದರು.

ಅನೇಕ ವರ್ಷಗಳ ನಂತರ ಅರಸು ಮನೆತನಕ್ಕೆ ದೋಷ ಕಾಣುವುದಕ್ಕೆ ಪ್ರಾರಂಭವಾಯಿತು. ಪ್ರಶ್ನೆಯ ಮೂಲಕ ವಿಷಯವನ್ನು ತಿಳಿದ ಅರಸು ಮನೆತನದವರು ವನದುರ್ಗೆಯ ಸೇರಿಗೆಯಲ್ಲಿದ್ದ ಅಮ್ಮರಸುಗಳ ಪ್ರೇತವನ್ನು ತಂತ್ರಿಗಳ ಸಹಾಯದಿಂದ ಬೇರ್ಪಡಿಸಿ ಅವುಗಳಿಗೆ ಸದಾ ಅನ್ನ ಆಹಾರ ಸಿಗುವಂತೆ ಬಲಿವಾಡಿನ ವ್ಯವಸ್ಥೆಯನ್ನು ಮಾಡಿ, ಗುಡಿಯನ್ನು ಕಟ್ಟಿಸಿ, ಪೂಜೆ ಪುನಸ್ಕಾರಗಳಿಗಾಗಿ ದೈವಕ್ಕೆ “ಮುಂಡ್ಯೆ” (ದೈವದ ಮಂಚ) ಇರುವ ಸ್ಥಳದಲ್ಲಿ “ಶ್ರೀ ಚಕ್ರ”ವನ್ನು ಸ್ಥಾಪಿಸಿದರು. ಇಲ್ಲಿ ಶ್ರೀ ಚಕ್ರ ಇರುವುದರಿಂದಾಗಿ ನಿತ್ಯ ಪೂಜೆ ನೈವೇದ್ಯಗಳು ನಡೆಯಬೇಕು. ದೈವಕ್ಕೆ ಸಂಕ್ರಮಣ ಹಾಗೂ ಪಂಚಪರ್ವಗಳಿಗೆ ಪನಿವಾರ ಬಡಿಸಿ ತಂಬಿಲ ಮಾಡುವ ಕರಮವನ್ನು ಮಾಡಲಾಯಿತು. ಶ್ರೀ ಚಕ್ರ ರೂಪದಲ್ಲಿ ಶಕ್ತಿ ಭುತವಾದ ವನದುರ್ಗೆ ಹಾಗೂ ಅಮ್ಮರಸುಗಳ (ಉಳ್ಳಾಲ್ತಿ) ಏಕಕಾಲದಲ್ಲಿ ಪೂಜೆಗೊಳ್ಳುತ್ತಾರೆ.

ಅರಮನೆಯ ಮಹಿಳೆಯನ್ನು “ಉಳ್ಳಾಲ್ತಿ”ಗಳೆಂದು ಕರೆಯುವುದು ರೂಢಿಯಲ್ಲಿತ್ತು. ಗಂಡಸರನ್ನು “ಉಳ್ಳಾಯ” ಎಂದು ಕರೆಯುತ್ತಿದ್ದರು. ಅದರಂತೆಯೇ ಇಲ್ಲಿ ಅರಮನೆಯ ಅಮ್ಮರಸುಗಳು ಮಾಯಕವಾಗಿ ದೈವಗಳಾಗಿರುವುದರಿಂದಾಗಿ ಈ ಕ್ಷೇತ್ರದ ದೈವವನ್ನು ಉಳ್ಳಾಲ್ತಿ ಎಂದೇ ಕರೆಯುವುದು ರೂಢಿಯಲ್ಲಿ ಬಂತು. ಈ ಕ್ಷೇತ್ರಕ್ಕೆ ಈಗಲೂ ಕೂಡ ಅರಮನೆಯ ಮಹಿಳೆಯರು ಪ್ರವೇಶ ಮಾಡಲೇಬಾರದೆಂಬ ನಿಯಮ ಇಂದಿಗೂ ಜಾರಿಯಲ್ಲಿದೆ. ಕೇಪು ದುರ್ಗಾಪರಮೇಶ್ವರೀ ಕ್ಷೇತ್ರವು ನಿಧಿಯಿಂದ ಕೂಡಿರುವುದರಿಂದಾಗಿ ಆ ಪ್ರದೇಶದಲ್ಲಿ ಹಾರೆ, ಪಿಕ್ಕಾಸಿಗಳಿಂದ ಅಗೆಯುವುದು ಇಂದಿಗೂ ಕೂಡ ನಿಷಿದ್ಧವಾಗಿದೆ.

ಸಮಾರೋಪ

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪರವ ಜನಾಂಗ ಮೌಖಿಕ ಪರಂಪರೆಯನ್ನು ಉಳಿಸುವ ನೆಲೆಯಲ್ಲಿ ತುಳುನಾಡಿನಲ್ಲಿ ವಿಶಿಷ್ಟರಾಗಿ ಕಂಡುಬರುತ್ತಾರೆ. ದೈವಾರಾಧನೆಯ ಸಂದರ್ಭದಲ್ಲಿ ಗಂಡಸರು ದೈವಗಳನ್ನು ಕಟ್ಟುವ ಮೂಲಕ ಗುರುತಿಸಿಕೊಂಡರೆ ಹೆಂಗಸರು ಹೊರಗೆಲ್ಲೂ ಪ್ರಕಟಗೊಳ್ಳದೆ, ಗಂಡಸರು ಗುರುತಿಸಿಕೊಳ್ಳುವುದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಡುತ್ತಾರೆ. ಮರೆಯಲ್ಲಿದ್ದು ತಮ್ಮನ್ನು ಜಗತ್ತಿಗೆ ಪ್ರಕಟಗೊಳಿಸದೆ ಗಂಡಸರನ್ನು ಪ್ರಕಾಶಿಸುವಂತೆ ಮಾಡುವ ಗುರುತರ ಜವಾಬ್ದಾರಿಯನ್ನು ಹೆಣ್ಣು ಹೊತ್ತಿರುವುದನ್ನು ಇಲ್ಲಿ ಕಾಣುತ್ತೇವೆ. ಪರವರು ಕಟ್ಟುವ ಪ್ರಧಾನ ದೈವ ಉಳ್ಳಾಲ್ತಿ. ಹೆಣ್ಣು ದೈವಕ್ಕೆ ಕಟ್ಟುವ ಇವರು ಹೆಣ್ಣಿನ ಆರಾಧನೆಯನ್ನು ಕಾಯ್ದುಕೊಂಡು ಬಂದಿರುವುದು ಇವರ ವಿಶೇಷತೆ. ಹೆಣ್ಣು ದೈವಕ್ಕೆ ಕಟ್ಟುತ್ತಾರೆ ಎಂದಾಗ ಇವರು ಗಂಡು ದೈವಗಳಿಗೆ ಕಟ್ಟುವುದಿಲ್ಲ ಎಂಬ ಅರ್ಥವಲ್ಲ. ಪ್ರಧಾನವಾಗಿ ಹೆಣ್ಣು ಕೇಂದ್ರವಾಗಿಟ್ಟುಕೊಂಡು ಹೆಣ್ಣಿನ ದುರಂತದ ಕತೆ ಇತಿಹಾಸ, ಪುರಾಣವಾಗಿ ಅದು ಪ್ರದರ್ಶನದಲ್ಲಿ ಹೇಗೆ ಪ್ರಕಟಗೊಳ್ಳುತ್ತದೆ ಅನ್ನುವುದನ್ನು ತಿಳಿಸುವ ಮತ್ತು ಅದನ್ನು ಉಳಿಸಿಕೊಂಡು ಬರುವ ಜವಾಬ್ದಾರಿಯನ್ನು ಪರವ ಜಾತಿಯ ಕಲಾವಿದರು ವಹಿಸಿಕೊಂಡು ಬಹಳ ಜನತದಿಂದ ಆ ಕಾರ್ಯವನ್ನು ನಿರ್ವಹಿಸುವುದರಿಂದ ಅವರು ವಿಶಿಷ್ಟರಾಗುತ್ತಾರೆ.

ದುರಂತದಲ್ಲಿ ಮರಣ ಹೊಂದಿದ ಹೆಣ್ಣು, ಮರಣದ ಬಳಿಕ ಮತ್ತೆ ತಾಯಿಯಾಗಿ, ಜನರನ್ನು ಕಾಪಾಡುವ ಶಕ್ತಿದೇವತೆಯಾಗಿ / ದೈವವಾಗಿ ಪ್ರದರ್ಶನದ ವೇಳೆಯಲ್ಲಿ ಪ್ರಕಟಗೊಳ್ಳುವುದೇ ಉಳ್ಳಾಲ್ತಿ ಆರಾಧನೆಯ ಮಹತ್ವ. ಮೌಖಿಕ ಪರಂಪರೆಯಲ್ಲಿರುವ ಹೆಣ್ಣು ಮಕ್ಕಳ ದುರಂತದ ಕಥಾನಕಗಳಲ್ಲಿ ಬರುವ ಯಾವುದೇ ದುರಂತವನ್ನು ಪ್ರದರ್ಶನದ ವೇಳೆಯಲ್ಲಿ ಉತ್ಪ್ರೇಕ್ಷೆ ಮಾಡದೆ ದೈವಿ ಶಕ್ತಿ ಪ್ರಕಗೊಳ್ಳುವುದನ್ನು ಆರಾಧನೆಯ ಸಂದರ್ಭದಲ್ಲಿ ಕಾಣುವುದಕ್ಕೆ ಸಾಧ್ಯವಿದೆ.

ಮಹಿಳೆ ಆರಾಧನೆ ಸಂದರ್ಭದಲ್ಲಿ, ಮನೆಯಲ್ಲಿ ಎಲ್ಲೂ ಪ್ರಕಟಗೊಳ್ಳದೆ ತಾನು ಮಾಡುವ ಕೆಲಸದ ಅರಿವು ಮತ್ತೊಬ್ಬರಿಗೆ ಬಾರದಂತೆ ಪುರುಷನಷ್ಟೇ ಅಥವಾ ಕೆಲವೊಮ್ಮೆ ಪುರುಷನಿಗಿಂತ ಹೆಚ್ಚು ಕೆಲಸಗಳನ್ನು ಮಾಡುತ್ತಿರುವುದರ ಅರಿವು ಯಾರಿಗೂ ಆಗದಿರುವುದು ಇಲ್ಲಿನಗುಟ್ಟು. ಆರಾಧನೆಯ ಸಂದರ್ಭದಲ್ಲಿ ಆರಾಧನೆಗೆ ಬೇಕಾದ ಎಲ್ಲ ಸಲಕರಣೆಗಳನ್ನು ಸಿದ್ಧಗೊಳಿಸುವಲ್ಲಿಂದ ತೊಡಗಿ ಆರಾಧನೆಯ ಕೆಲಸಗಳೆಲ್ಲ ಮುಗಿದು ಮತ್ತೆ ಮನೆ ತಲುಪುವ ಸಮಯದ ತನಕ ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಮಾಡುವ ಕೆಲಸ ಪುರುಷರು ಮಾಡುವ ಕೆಲಸ ಇವುಗಳ ವ್ಯತ್ಯಾಸದ ತಿಳುವಳಿಕೆ ಬರಲು ಸಾಧ್ಯ. ಪುರುಷ ಆರಾಧನೆಯಸ ಸಂದರ್ಭದಲ್ಲಿ ದೈವಕ್ಕೆ ಕಟ್ಟುವಾಗ ಕಾಣಿಸಿಕೊಂಡರೆ ಅವನ ಹಿಂದಿನಿಂದ ಪಾಡ್ದನ ಹೇಳುವುದು, ತೆಂಬರೆ/ ಡೋಲು ಬಡಿಯುವುದು, ಆತನಿಗೆ ಬೇಕಾದ ಪರಿಕರಗಳನ್ನು ಸಿದ್ಧಗೊಳಿಸಿಕೊಡುವುದು, ಆರಾಧನೆಯ ನಂತರ ಮತ್ತೆ ವಸ್ತುಗಳನ್ನು ಮತ್ತೆ ಜೋಡಿಸುವುದು- ಹೀಗೆ ಪ್ರತಿಯೊಂದರಲ್ಲೂ ಮಹಿಳೆಯ ಕೈ ಹತ್ತದೆ ಹೋಗುವುದಿಲ್ಲ. ಆದರೆ ಇದೆಲ್ಲ ಮರೆಯಲ್ಲಿ ನಡೆಯುವ ಕೆಲಸಗಳಾದುದರಿಂದ ಇದನ್ನು ಯಾರೂ ಗುರುತಿಸುವುದಿಲ್ಲ. ಒಟ್ಟಾಗಿ ನೋಡಿದಾಗ ಅರ್ಧಕ್ಕಿಂತ ಹೆಚ್ಚಿನ ಕೆಲಸಗಳನ್ನು ಮಹಿಳೆ ಮಾಡುತ್ತಾಳೆ ಎಂಬುದು ಗೌಣವಾಗಿಯೇ ಉಳಿದು ಬಿಡುತ್ತದೆ.

ಕುಟುಂಬ ವ್ಯವಸ್ಥೆಯನ್ನು ಗಮನಿಸಿದಾಗ ಅಲ್ಲಿಯೂ ಪ್ರಕಟಗೊಳ್ಳುವುದು ಪುರುಷನೇ. ಎಲ್ಲ ತನಗೆ ತಿಳಿದಿದೆ ಎಂಬಂತೆ ಇಲ್ಲಿ ಪುರುಷನ ವರ್ತನೆಗಳಿರುವುದನ್ನು ಕಾಣಲು ಸಾಧ್ಯ. ಆದರೆ ಮನೆಯ ಪ್ರತಿಯೊಂದು ಕೆಲಸಗಳನ್ನು ಬಹಳ ಜಾಗರೂಕತೆಯಿಂದ ಸೂಕ್ಷ್ಮವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಮಹಿಳೆ ಹೊರುವುದು ಇಲ್ಲಯೂ ಕಾಣಲು ಸಾಧ್ಯ. ಪ್ರತಿಯೊಂದು ಕೆಲಸಗಳಾಗಬೇಕಾದರೆ ಹೆಣ್ಣಿನೊಂದಿಗೆ ಕೇಳಿ ವಸ್ತುಗಳನ್ನು ರೂಢಿಗೊಳಿಸಿದ ಮೇಲೆಯೇ ಕೆಲಸಗಳು ನಡೆಯುವುದನ್ನು ಕಾಣಬಹುದು. ಉದಾಹರಣೆಗೆ ಒಬ್ಬ ಅತಿಥಿ ಮನೆಗೆ ಬಂದಾಗ ಅವನಿಗೆ ಕೈಕಾಲು ತೊಳೆಯಲು ನೀರು ಕೊಡುವಲ್ಲಿಂದ ತೊಡಗಿ, ಬಾಯಾರಿಗೆ, ಊಟ, ತಿಂಡಿ-ಹೀಗೆ ಎಲ್ಲ ಕೆಲಸಗಳು ಮಹಿಳೆಯಿಂದಲೇ ನಡೆಯುತ್ತದೆ. ಇಲ್ಲಿ ಎಲ್ಲೂ ಮಹಿಳೆ ಪ್ರಕಗೊಳ್ಳುವುದಿಲ್ಲ. ಅಂದರೆ ಒಟ್ಟಿನಲ್ಲಿ ಪ್ರತಿಯೊಂದು ಕೆಲಸಗಳಲ್ಲೂ ಮಹಿಳೆಯ ಪಾಲು ಹೆಚ್ಚಿದೆ ಎಂಬುದು ತಿಳಿಯುತ್ತದೆ. ಆದರೆ ಇದು ಎಲ್ಲೂ ಪ್ರಕಟಗೊಳ್ಳದಿರುವ ಆದರೆ ಎಲ್ಲರಿಗೂ ತಿಳಿದಿರುವ ಗುಟ್ಟು ಎಂಬುದು ಮಾತ್ರ ಸತ್ಯ.

ಯಾವುದೇ ಒಂದು ಜನಾಂಗದ ಕುರಿತಂತೆ ಅಧ್ಯಯನ ಮಾಡುವುದು ಸುಲಭದ ಕೆಲಸವಲ್ಲ.  ರೀತಿಯ ಅಧ್ಯಯನಗಳು ವ್ಯಾಪಕವಾದ ಕ್ಷೇತ್ರಕಾರ್ಯ, ಸಂದರ್ಶನ ಮಾತ್ರವಲ್ಲದೆ ಅವರೊಂದಿಗೆ ಇದ್ದು ಅವರ ಪೂರ್ಣ ಜೀವನದ ಪರಿಚಯಸ ಮಾಡಿಕೊಳ್ಳುವ ಅವಶ್ಯಕತೆಯನ್ನು ಬಯಸುತ್ತವೆ. ಆರಾಧನೆ, ಆಚರಣೆ ಬದುಕಿನ ವಿಧಾನಗಳ ಅಧ್ಯಯನ – ಹೀಗೆ ಎಲ್ಲಾ ಮಗ್ಗುಲುಗಳಿಂದ ವಿವರಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವ ಅಗತ್ಯವನ್ನು ನಿರೀಕ್ಷಿಸುತ್ತದೆ.

ಈ ಕಾರಣದಿಂದ ಈ ಲೇಖನವನ್ನು ಪೂರ್ಣ ಪ್ರಮಾಣದ ಮಾಹಿತಿಗಳನ್ನು ಒದಗಿಸುವ ಲೇಖನ ಎಂಬ ನೆಲೆಯಲ್ಲಿ ಗಮನಿಸಬೇಕಾಗಿಲ್ಲ. ನನ್ನ ಮಿತಿಯ ಒಳಗೆ ಜೊತೆಗೆ ಲೇಖನದ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಪರವರ ಬದುಕಿನ ಕುರಿತಂತೆ, ಅವರ ವೃತ್ತಿಯ ಕುರಿತಂತೆ ಹಾಗೂ ಅವರಲ್ಲಿ ಸಂಗ್ರಹಿತವಾದ ಕೆಲವೇ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ಕೊಡುವ ಪ್ರಯತ್ನ ಮಾಡಿದ್ದೇನೆ ಎಂಬುದನ್ನಷ್ಟೇ ಹೇಳಬಲ್ಲೆ.