Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಪರಶುರಾಮ ಸಿದ್ಧಿ

ವನವಾಸಿಗಳಾದ ಸಿದ್ಧಿ ಜನಾಂಗದ ಶ್ರೇಯೋಭಿವೃದ್ಧಿಗೆ ಪರಿಶ್ರಮಿಸಿದ ಸಾರ್ಥಕ ಜೀವಿ ಪರಶುರಾಮ ಗಿರಿಗೋಲಿ ಸಿದ್ಧಿ, ಗಾಯನ, ಸಂಘಟನೆ, ನಟನಾ ರಂಗದಲ್ಲಿ ಅನುಪಮ ಸೇವೆಗೈದಿರುವ ಸಾಧಕರು.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಹತ್ತಿರದ ಅಣಲೇಸರ ಪರಶುರಾಂ ಸಿದ್ಧಿ ಅವರ ಜನ್ಮಸ್ಥಳ.ಗಿರಿಗೋಲಿ ಸಿದ್ಧಿ-ಲಕ್ಷ್ಮಿ ದಂಪತಿಯ ಸುಪುತ್ರರು. ವನವಾಸಿಗಳಾದ ಪರಶುರಾಮ ಸಿದ್ಧಿ, ಓದಿದ್ದು ಏಳನೇ ತರಗತಿವರೆಗೆ ಮಾತ್ರ ಆದರೆ, ಬಾಲ್ಯದಿಂದ ಕಾಡಿದ ಕಲಾಸಕ್ತಿಯಿಂದ ಸಿದ್ಧಿಜನಾಂಗದ ಪ್ರಮುಖ ಜನಪದ ಕಲಾಪ್ರಕಾರವಾದ ಡಮಾಮಿ ನೃತ್ಯ ಕಲಿಕೆ. ಎಲ್ಲೆಡೆ ಪ್ರದರ್ಶನ, ನಟನೆಯಲ್ಲೂ ಆಸಕ್ತ ಪರಶುರಾಮ ಸಿದ್ಧಿ ಹೆಗ್ಗೋಡಿನ ನೀನಾಸಂನ ಹಲವಾರು ಶಿಬಿರಗಳ ನಾಟಕಗಳಲ್ಲಿ ನಟಿಸಿದ ಕಲಾವಿದರು. ಡಮಾಮಿ ಪುಗಡಿ ತಂಡ ಸ್ಥಾಪಿಸಿ ಮೂರು ದಶಕಗಳಿಂದಲೂ ಜನಾಂಗದ ಜನಪದ ಕಲೆಯ ಪ್ರಚುರಪಡಿಸುವಿಕೆ. ಚಲನಚಿತ್ರಗಳಲ್ಲೂ ಅಭಿನಯಿಸಿರುವ ನಟ. ಕರ್ನಾಟಕ ವನವಾಸಿ ಕಲ್ಯಾಣದ ಉಪಾಧ್ಯಕ್ಷರಾಗಿ, ಸಿದ್ಧಿ ಟ್ರಸ್ಟ್‌ನ ಅಧ್ಯಕ್ಷರಾಗಿ ಮಕ್ಕಳ ಶಿಬಿರ, ನಾಟಕಗಳ ಆಯೋಜನೆಯ ಮೂಲಕ ಜನಾಂಗದ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಹೆಗ್ಗಳಿಕೆಯ ವಿಚಾರ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿರುವ ಪರಶುರಾಮ ಸಿದ್ಧಿ ಅಪ್ಪಟ ದೇಸೀ ಪ್ರತಿಭೆ, ಸದ್ದಿಲ್ಲದೆ ಸಾಧನೆಗೈದ ಮೌನಸಾಧಕರು.