ನನಗೆ ಇಪ್ಪತ್ತು ವರ್ಷ. ನಾನು ಒಬ್ಬರೊಂದಿಗೆ ಇನ್ವಾಲ್ವ ಆಗಿದ್ದೀನಿ, ಅವರೊಂದಿಗೆ ದಿನಾ ಮಾತನಾಡಲು ಅವರನ್ನು ದಿನಾ ನೋಡಲು, ಅವರ ಜತೆ ದಿನಾ ಓಡಾಡಲು ಇಷ್ಟಪಡುತ್ತೀನಿ. ಆದರೆ ಆಕೆ ನನಗೆ ಆಪೋಸಿಟ್, ಅವಳಿಗೆ ನನ್ನ ಜತೆ ಮಾತನಾಡಲು ಇಷ್ಟವಿದೆಯೋ ಇಲ್ಲವೋ ಗೊತ್ತಿಲ್ಲ. ಕೇಳಿದರೆ ಹಾಗೇನೂ ಇಲ್ಲ, ಕೆಲಸವಿದೆ ಎಂದು ಉತ್ತರ ಬರುತ್ತೆ. ದಿನಾ ಈ ರೀತಿ ಹೇಳಿದಾಗ ನನಗೆ ಬೇಸರವಾಗುತ್ತೆ. ನಾನು ದಿನಾ ಫೋನ್ ಮಾಡ್ತಿನಿ, ಆದರೂ ಸಿಗೋಲ್ಲ, ಸಿಕ್ಕರೆ ಸರಿಯಾಗಿ ಮಾತೂ ಆಡೋಲ್ಲ ಏನಾದರೂ ಕೆಲಸವಿದೆಯೆಂದು ಹೇಳಿ ಫೋನ್ ಕೆಳಗಿಡುತ್ತಾಳೆ. ನಾನು ಏನನ್ನಾದರೂ ಕೊಟ್ಟರೆ ತೆಗೆದುಕೊಳ್ಳುವುದು ಅಪರೂಪ. ನನಗೆ ಏನು ಇಷ್ಟವಾಗುತ್ತೆ ಅದನ್ನೆಲ್ಲ ನಾನು ತೆಗೆದುಕೊಳ್ಳುತ್ತೀನಿ. ಆದರೆ ಅವಳು ತೆಗೆದುಕೊಳ್ಳುವುದಿಲ್ಲ. ಅವಳ ಜೊತೆ ಒಂದು ದಿನ ಮಾತನಾಡದೆ ಇದ್ದರೂ ಊಟ ನಿದ್ದೆ ಬರೋಲ್ಲ. ಬೇರೆಯವರು ಮಾತನಾಡಿದರೆ ಕೋಪದಿಂದ ರೇಗ್ತೀನಿ. ಅವಳು ಊರಿಗೆ ಹೋದಾಗ ಅಳ್ತೀನಿ, ಅವಳ ನೆನಪು ತುಂಬಾ ಆಗುತ್ತದೆ. ನನಗೆ ಅವಳು ಇಲ್ಲದೆ ಒಂದು ದಿನ ಕೂಡ ಕಳೆಯುವುದು ಕಷ್ಟ ನಾನು ಏನು ಮಾಡಬೇಕು?

ನಿಮ್ಮ ಸಮಸ್ಯೆ ನಿಮ್ಮ ಅಪರಿಪೂರ್ಣ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ಇನ್ನೊಬ್ಬರ ಮೇಲೆ ಸಂಪೂರ್ಣ ಅವಲಂಬನೆ ಮನೋದೌರ್ಬಲ್ಯದ ಸೂಚಕ, ಗಮನದಲ್ಲಿಡಿ. ಮನೋದೌರ್ಬಲ್ಯದ ಸೂಚಕ, ಗಮನದಲ್ಲಿಡಿ. ನಿಮಗೆ ಈಗ ಇಪ್ಪತ್ತು ವರ್ಷ ಎಂದು ತಿಳಿಸಿದ್ದೀರಿ. ಈ ವಯಸ್ಸಿಗೆ ಮನೋವೈಜ್ಞಾನಿಕವಾಗಿ ಸಾಕಷ್ಟು ಮಹತ್ವವಿದೆ. ದೇಹ, ಮನಸ್ಸು ಹದಿವಯಸ್ಸು ದಾಟಿ ಪ್ರೌಢಾವಸ್ಥೆ ತಲುಪುತ್ತದೆ. ವಯಸ್ಕರ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಮರ್ಥವಾಗುತ್ತಾರೆ. ಇದೇ ವಯಸ್ಸಿನಲ್ಲಿ ಹೆಚ್ಚಿನ ಜನ ಪದವಿ ಪರೀಕ್ಷೆ ಪಾಸು ಮಾಡಿರುತ್ತಾರೆ. ನೀವು ಚುವಾವಣೆಯಲ್ಲಿ ಮತ ನೀಡಲೂ ಅರ್ಹರಾಗಿರುತ್ತೀರಿ. ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ರೂಪಿಸಿಕೊಳ್ಳಲು ಕೆಲಸದ ಬೇಟೆ, ಸಾಮಾಜಿಕ ಭದ್ರತೆಗಾಗಿ ಮನೆಯಲ್ಲಿನ ಹಿರಿಯರಿಂದ ಮದುವೆ ಪ್ರಸ್ತಾಪ ಆರಂಭವಾಗುವ ವಯಸ್ಸು, ಇವೆಲ್ಲಾ ಪ್ರಬುದ್ಧತೆಗೆ ವಿರುದ್ಧವಾಗಿ ನಿಮ್ಮ ಪತ್ರ – ವ್ಯಕ್ತಿತ್ವದಲ್ಲಿನ ಬಾಲಿಶ ಹಿನ್ನಡೆಯನ್ನು ಪ್ರತಿಬಿಂಬಿಸುತ್ತದೆ. ಸ್ನೇಹ, ಒಡನಾಟ, ಪರಸ್ಪರ ಸ್ಪಂದನ ಯಾವತ್ತಿಗೂ ಆರೋಗ್ಯ ಕರ. ಮನಸ್ಸನ್ನು ವಿಕಾಸಗೊಳಿಸಲು ವ್ಯಕ್ತಿತ್ವವನ್ನು ಪ್ರೌಢವಾಗಿರಿಸಲು ಇದು ಅತ್ಯವಶ್ಯಕ. ಆದರೆ ಅತೀವ ಅವಲಂಬನೆ, ಆದರಿಂದ ವಂಚಿತರಾದಾಗ ನಿಸ್ಸಾಯಕತೆ, ನಿರ್ಜೀವತ ಅಸಮಾಧಾನ, ಅನಾರೋಗ್ಯಕರ. ಎಲ್ಲಿ ನಿರ್ಲಿಪ್ತವಾಗಿ ಇರಬೇಕೋ ಅಲ್ಲಿ ತೀರಾ ಭಾವುಕತೆಯಿಂದ ಮನೋಸ್ತಿತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಮಧ್ಯ ವ್ಯಸನಿಯಾಗಲಿ, ಮಾದಕ ದ್ರವ್ಯಗಳ ವ್ಯಸನಿಯಾಗಲಿ ಇದೇ ರೀತಿಯ ಪರಾವಲಂಬನೆ ವ್ಯಕ್ತಿತ್ವದಿಂದ ಚಿತ್ತಚಾಂಚಲ್ಯಕ್ಕೊಳಗಾಗುತ್ತಾನೆ.

ನೀವು ಇನ್ನೊಬ್ಬರ ಜೊತೆ ಇನ್‌ವಾಲ್ವ್ ಆಗಲು ಇಷ್ಟಪಡುವುದು ಮಾತನಾಡಲು, ನೋಡಲು, ಜೊತೆಯಲ್ಲಿ ಓಡಾಡಲು ಇಷ್ಟಪಡುವುದು ಸಹಜ. ಅದು ಅವಳೂ ಅದರಂತೆಯೇ ಸ್ಪಂದಿಸಬೇಕೆಂದು ಇಷ್ಟಪಡುವುದು ಸುತಾರಾಂ ತಪ್ಪು, ನಿಮ್ಮ ಮನಸ್ಸಿನ ವ್ಯಾಪಾರಗಳನ್ನು ಇತರರು ಗೌರವಿಸಬೇಕಾದರೆ ನೀವು ಇತರರ ಮನೋಭಾವಗಳನ್ನು ಗುರುತಿಸಿ ಗೌರವಿಸುವುದು ಮುಖ್ಯ. ನಿಮಗೆ ಅವರೊಡನೆ ಒಡನಾಡುವುದರಿಂದ ಮನಸ್ಸಿಗೆ ಹಿತವಾದಂತೆ, ಅವಳಿಗೆ ನಿಮ್ಮೊಡನೆ ಒಡನಾಡ ಅಹಿತಕಾರಿ ಎನಿಸಬಹುದು. ಅವರವರ ಸ್ವಾರ್ಥಕ್ಕೆ ಅನುಗುಣವಾಗಿ ಅವರವರು ವರ್ತಿಸುತ್ತಾರೆ. ಈ ಮನೋ ಪ್ರವೃತ್ತಿಗಳ ಹೋಲಿಕೆ ವ್ಯತ್ಯಾಸಗಳನ್ನು ಗಮನಿಸಿ ಗೌರವಿಸುವುದು ಆರೋಗ್ಯಕರ ಪ್ರವೃತಿ. ಆದ್ದರಿಂದ ಈ ಅನಾವಶ್ಯಕ ಚಿಂತನೆಯನ್ನು ಬಿಡಿ. ಬದಲಾಗಿ ಹೆಚ್ಚೆಚ್ಚು ಜನರೊಡನೆ ಸ್ಪಂದಿಸಿ, ಆಗ ಸಮಾನ ಮನಸ್ಕರ ಸಮಾನ ಧರ್ಮಿಗಳ ಪರಿಚಯವಾದೀತು. ನಮ್ಮೆಲ್ಲರ ಪರಿಚಯ ಒಡನಾಟ ಪರಸ್ಪರ ಗೌರವ ಹಾಗೂ ಪುರಸ್ಕಾರದಿಂದ ಕೂಡಿರಲಿ. ಯಾವುದೇ ಪರಿಸ್ಥಿತಿಗೂ ಅತೀ ಭಾವನಾತ್ಮಕವಾಗಲಿ ಅಥವಾ ಯಾವುದೇ ಅತಿರೇಕತೆಯಿಂದ ವರ್ತಿಸುವುದನ್ನು ಬಿಡಿ. ಇದು ನಿಮ್ಮ ಭವಿಷ್ಯದ ಮುಖ್ಯವಾದಿ ದಾಂಪತ್ಯ ಜೀವನದ ಯಶಸ್ಸಿಗೆ ಸಹಕಾರಿ.