ರಾಮು, ವಸಂತ, ವೆಂಕಟೇಶ, ಮೋಹನ ಎಲ್ಲ ಹುಡುಗ ಹುಡುಗಿಯರ ದಂಡು ಆಟವಾಡಿಕೊಂಡು ಮನೆಗೆ ಬರುವ ಹೊತ್ತಿಗೆ ಕತ್ತಲಾಗಿತ್ತು. ದೀಪ ಹಚ್ಚಿತ್ತು. ರಾಮು, ವಸಂತ, ಶ್ರೀನಿವಾಸನ್ ಅವರ ಮಕ್ಕಳು. ರಾಜ ಎಂದು ಅವರ ತಮ್ಮನ ಮಕ್ಕಳು, ಅಕ್ಕತಂಗಿಯರ ಮಕ್ಕಳು ಎಲ್ಲ ಬಂದಿದ್ದರು. ಮನೆಯಲ್ಲಿ ಅವರ ಓಡಾಟ, ಗಲಭೆ, ದಾಂಧಲೆ ತುಂಬಿ ಹೋಗಿರುತ್ತಿದ್ದವು.

ಮನೆಗೆ ಬಂದವನೇ ರಾಮು ಅಪ್ಪನ ಕೊಠಡಿಗೆ ಓಡಿದ, ಆದರೆ ಹೊಸ್ತಿಲ ಬಳಿಯೆ ನಿಂತ. ತಂದೆಯ ಜೊತೆಗೆ ಯಾರೋ ಮಾತನಾಡುತ್ತಿದ್ದರು. ನೋಡಲು ತುಂಬ ಗಂಭೀರವಾಗಿ ಕಾಣುತ್ತಿದ್ದ ವಯಸ್ಸಾದವರೊಬ್ಬರು ಕುರ್ಚಿಯ ಮೇಲೆ ಕುಳಿತಿದ್ದರು. ಅಗಲ ಅಂಚಿನ ಪಂಚೆ, ಅಗಲ ಅಂಚಿನ ಶಲ್ಯ ಹೊದ್ದಿದ್ದರು. ಮುಖ ತುಂಬ ಕಳೆಯಾಗಿದೆ ಎನ್ನಿಸಿತು ಹುಡುಗನಿಗೆ.

“ಅವರು ಯಾರಮ್ಮ?” ಎಂದು ಕೇಳಿದ.

“ಅವರ ಹೆಸರು ಶ್ರೀನಿವಾಸ ರಾಮಾನುಜದಾಸರು ಅಂತಪ್ಪ. ನಿಮ್ಮ ತಂದೆಗೆ ದೂರದ ನೆಂಟರು. ದೊಡ್ಡ ವಿದ್ವಾಂಸರು. ನಿಮ್ಮ ತಂದೆಗೆ ಅವರನ್ನು ಕಂಡರೆ ತುಂಬ ಗೌರವ.

ವಸಂತ ಕೇಳಿದಳು : “ಅವರು ಕಥೆ ಹೇಳ್ತಾರೇನಮ್ಮ?”

ಅಮ್ಮನಿಗೆ ನಗು ಬಂದಿತು. ಯಾವಾಗಲೂ ವಸಂತಾಗೆ ಕಥೆಗಳದೇ ಧ್ಯಾನ. “ಹೇಳ್ತಾರಂತಮ್ಮ. ನಿಮ್ಮ ತಂದೆ ಚಿಕ್ಕ ಹುಡುಗರಾಗಿದ್ದಾಗ ಅವರು ಬೇಕಾದಷ್ಟು ಕಥೆ ಹೇಳ್ತಾ ಇದ್ದರಂತೆ.”

ಹುಡುಗರಿಗೆಲ್ಲ ಆಸೆ, ಅವರಿಂದ ಕಥೆ ಕೇಳಬೇಕು ಅಂತ. ಆದರೆ ಕಥೆ ಹೇಳಿ ಅಂತ ಕೇಳುವ ಧೈರ್ಯ ಇಲ್ಲ.

ಕಥೆ ಹೇಳ್ತೀನಿ, ಬನ್ನಿ

ಮರುದಿನ ಬೆಳಿಗ್ಗೆ ಶ್ರೀನಿವಾಸ ರಾಮಾನುಜದಾಸರು ಬಿಸಿಲು ಮಾಳಿಗೆಯ ಮೇಲೆ ಕುಳಿತು ಹೇಳಿಕೊಳ್ಳುತ್ತಿದ್ದರು?

ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾಂಬರೀಷ ಶುಕ ಶೌನಕ ಭೀಷ್ಮದಾಲ್ಭ್ಯಾನ್ ||
ರುಕ್ಮಾಂಗದಾರ್ಜುನ ವಷಿಷ್ಠ ವಿಭೀಷಣಾದೀನ್
ಪುಣ್ಯಾನಿಮಾನ್ ಪರಮ ಭಾಗವತಾನ್ ಸ್ಮರಾಮಿ ||

ಏನೋ ಸದ್ದಾದ ಹಾಗಾಯಿತು. ತಿರುಗಿ ನೋಡಿದರು. ಹುಡುಗಿಯೊಬ್ಬಳು, ಅವರು ತಿರುಗಿದ್ದನ್ನು ಕಂಡು ಓಡಿ ಹೋಗುತ್ತಿದ್ದಳು.

“ಬಾಮ್ಮ ಮಗೂ ಇಲ್ಲಿ.”

ವಸಂತ ಹತ್ತಿರ ಬಂದಳು. ರಾಮಾನುಜದಾಸರು ಅವಳನ್ನು ಕರೆದು ಹತ್ತಿರ ಕೂಡಿಸಿಕೊಂಡರು. “ನಿನ್ನ ಹೆಸರೇನಮ್ಮ?” ಎಂದು ಕೇಳಿದರು. ಪ್ರೀತಿಯಿಂದ ಮಾತನಾಡಿಸಿದರು.

ಇದೇ ಅವಕಾಶ ಎಂದು ವಸಂತ. “ಒಂದು ಕಥೆ ಹೇಳಿ ತಾತ” ಎಂದು ಕೇಳಿಬಿಟ್ಟಳು.

“ನಿನಗೆ ಹೇಗೆ ಗೊತ್ತಮ್ಮ ನಾನು ಕಥೆ ಹೇಳ್ತೀನಿ ಅಂತ?”

“ಅಮ್ಮ ಹೇಳಿದರು ತಾತ, ನೀವು ಬೇಕಾದಷ್ಟು ಕಥೆ ಹೇಳ್ತೀರಂತೆ. ನಮ್ಮ ತಂದೆ ಚಿಕ್ಕವರಾಗಿದ್ದಾಗ ಹೇಳ್ತಾ ಇದ್ರಂತೆ..”

ಮುದುಕರು ನಕ್ಕರು. “ಆಗಲಮ್ಮ, ಯಾವ ಕಥೆ ಬೇಕು?” ಎಂದರು.

“ಕಥೆ ಹೇಳ್ತೀರಾ ತಾತ?” ಎಂದು ಕೇಳಿದಳು.

“ಹೇಳ್ತೀನಮ್ಮ. ಕುತುಕೊ ಬಾ.”

“ಸರಳ, ರಾಮು, ಎಲ್ಲರ್ನೂ ಕರೀತೀನಿ, ತಾತ.”

“ಹೂಂನಮ್ಮ! ಬನ್ನಿ.”

ವಸಂತ ಓಡಿ ಹೋಗಿ ಇತರರನ್ನು ಕರೆದುಕೊಂಡು ಓಡಿ ಬಂದಳು. ಹುಡುಗರೆಲ್ಲ ರಾಮಾನುಜದಾಸರ ಸುತ್ತ ಕುಳಿತರು.

ರಾಮಾನುಜದಾಸರು ಪ್ರಾರಂಭಿಸಿದರು.

ಪರಮ ಭಾಗವತರು

“ಪ್ರಹ್ಲಾದ, ನಾರದ, ಪರಾಶರ, ಪುಂಡರೀಕ, ವ್ಯಾಸ, ಅಂಬರೀಷ, ಶುಕ, ಶೌನಕ, ಭೀಷ್ಮ, ದಾಲ್ಭ್ಯ, ರುಕ್ಮಾಂಗದ, ಅರ್ಜುನ, ವಸಿಷ್ಠ, ವಿಭೀಷಣ – ಇವರು ಹದಿನಾಲ್ಕು ಜನ ಪರಮ ಭಾಗವತರು. ಇವರನ್ನು ಸ್ಮರಿಸುವುದೇ ಪುಣ್ಯ ಎನ್ನುತ್ತಾರೆ. ಇವರಲ್ಲಿ ಯಾರ ಕಥೆ ಹೇಳಲಿ?

ವಸಂತಳೇ ಉತ್ತರ ಕೊಟ್ಟಳು : “ಪ್ರಹ್ಲಾದನ ಕಥೆ ಕೇಳಿದ್ದೀವಿ, ತಾತ. ನಾರದರ ವಿಷಯ ಸ್ವಲ್ಪ ಗೊತ್ತು. ಇನ್ನೊಬ್ಬರ ಹೆಸರು ಹೇಳಿದಿರಲ್ಲ-?”

“ಯಾರು, ಪರಾಶರ ಅಂತಲೆ?”

“ಹೌದು ತಾತ. ಅವರ ವಿಷಯ ಹೇಳಿ.”

“ಆಗಲಮ್ಮ ಮಗು” ಎಂದು ಹಿರಿಯರು ಕಥೆ ಆರಂಭಿಸಿದರು.

ತಾಯಿಯ ಒಡಲಿನಲ್ಲೆ

ಮಾತೃ ದೇವೋಭವ…… ಪಿತೃ ದೇವೋಭವ…… ಆಚಾರ್ಯ ದೇವೋಭವ…. ಅತಿಥಿ ದೇವೋಭವ – ಹೀಗೆ ಕೇಳಿಬರುತ್ತಿತ್ತು ಉಪನಿಷತ್ತಿನ ವಾಣಿ.”

“ಉಪನಿಷತ್ತು ಎಂದರೇನು ತಾತ?” ಮೋಹನ ಕೇಳಿದ.

“ಸಾವಿರಾರು ವರ್ಷಗಳ ಹಿಂದೆ ಯಾರೋ ಮಹಾ ಋಷಿಗಳು ರಚಿಸಿದ ಗ್ರಂಥಗಳು. ಮಗು, ಇವನ್ನು ಯಾರು ಬರೆದರು ಅಂತಲೂ ನಮಗೆ ಸರಿಯಾಗಿ ಗೊತ್ತಿಲ್ಲ. ಉಪನಿಷತ್ ಎಂದರೆ ಹತ್ತಿರ ಕುಳಿತುಕೋ ಅಂತ ಅರ್ಥ. ಶಿಷ್ಯನನ್ನು ಗುರು ಹತ್ತಿರ ಕೂಡಿಸಿಕೊಂಡು, ಅವನು ಕೇಳಿದ ಪ್ರಶ್ನೆಗಳಿಗೆ ಪ್ರೀತಿಯಿಂದ ಉತ್ತರ ಹೇಳ್ತಾ ಇದ್ದರು. ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಉಪನಿಷತ್ತುಗಳು ಹೇಳುತ್ತವೆ. ಚೆನ್ನಾಗಿ ಬದುಕಬೇಕು, ಬಾಳಿನಲ್ಲಿ ಸಂತೋಷ ಇರಬೇಕು ಅನ್ನೋ ಉತ್ಸಾಹ ಉಪನಿಷತ್ತುಗಳಲ್ಲಿ ತುಂಬಿತುಳುಕುತ್ತದೆ.

ವಸಿಷ್ಠರಿಗೆ ಉಪನಿಷತ್ತಿನ ಮಾತುಗಳು ಕೇಳಿಸಿದವು, ಅಲ್ಲವೆ? ಮಲಗಿದ್ದ ವಸಿಷ್ಠರು ಎದ್ದು ನೋಡಿದರೆ ಎಲ್ಲೆಲ್ಲೂ ಕತ್ತಲೋ ಕತ್ತಲು. ಸೊಸೆ ಒಬ್ಬಳೇ ದೂರದಲ್ಲಿ ನಿದ್ರಿಸುತ್ತಿದ್ದಾಳೆ. ಅಲ್ಲಿ ಬೇರಾರೂ ಇಲ್ಲ. ಇದೇನು ವಿಚಿತ್ರವೊ? ನಾನು ಕೇಳಿದ್ದು ಸತ್ಯವಷ್ಟೆ? ಎಂದು ಚಿಂತಿಸುತ್ತಾ ಹಾಗೆಯೇ ಮತ್ತೆ ಕಣ್ಣುಮುಚ್ಚಿ ಕೊಂಡರು. ಕೊಂಚ ಹೊತ್ತಿನಲ್ಲೇ….

ಸಹ ನಾ ವವತು
ಸಹ ನೌ ಭುನಕ್ತು
ಸಹ ವೀರ್ಯಂ ಕರವಾವಹೈ
ತೇಜಸ್ವಿನಾವಧೀತಮಸ್ತು
ಮಾವಿದ್ವಿಷಾವಹೈ
ಓಂ ಶಾಂತಿಃ ಶಾಂತಿಃ ಶಾಂತಿಃ

ಮತ್ತಷ್ಟು ಸ್ಪಷ್ಟವಾಗಿ ಕೇಳಿಬಂದವು ಈ ಮಂತ್ರಗಳು!

ವಷಿಷ್ಠರು ಕೊಂಚಕಾಲ ಕಣ್ಣು ಮುಚ್ಚಿ ಆ ಮಂತ್ರವನ್ನು ಆಲಿಸಿದರು. ಅದು ತನ್ನ ಸೊಸೆಯ ಕಡೆಯಿಂದ ಬಂದ ಧ್ವನಿ. “ಓಹೋ! ಈಗ ಅರ್ಥವಾಯಿತು. ನನ್ನ ಸೊಸೆ ಗರ್ಭಿಣಿ, ಆಕೆಯ ಹೊಟ್ಟೆಯಲ್ಲಿ ಗಂಡು ಶಿಶುವಿದೆ. ಆ ಮಗನೇ ಹೀಗೆ ಹೇಳಿರಬೇಕು. ಈಗಲೇ ಇಂತಹ ಮಂತ್ರಗಳನ್ನು ಹೇಳುವ ಮಗು ದೊಡ್ಡ ವಿದ್ವಾಂಸನಾಗುತ್ತಾನೋ! ಈ ಮಗುವನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವೆ. ನನ್ನಲ್ಲಿರುವ ಸಕಲ ವಿದ್ಯೆಗಳನ್ನು ಇದಕ್ಕೆ ಧಾರೆ ಎರೆಯುವೆ. ಇನ್ನು ಚಿಂತಿಸಬೇಕಿಲ್ಲ. ಮಕ್ಕಳು ಸತ್ತರೂ ಮೊಮ್ಮಗನಿದ್ದಾನೆ. ನನ್ನ ವಂಶ ಉಳಿಯಿತು. ನಾನಿನ್ನು ಸಾಯಲಾರೆ” ಎಂದುಕೊಂಡರು. ಮೊಮ್ಮಗ ಯಾವಾಗ ಹುಟ್ಟುವನೋ ಎಂದು ಕಾತುರತೆಯಿಂದ ಕಾಯುತ್ತಿದ್ದರು.

ವಸಿಷ್ಠರು ಯಾರು?

“ವಸಿಷ್ಠರು ಯಾರು, ತಾತ?” ವೆಂಕಟೇಶ ಕೇಳಿದ.

“ಹೇಳುತ್ತೇನಪ್ಪ, ಬ್ರಹ್ಮದೇವ ಮೊದಲು ಪ್ರಕೃತಿಯನ್ನು ಸೃಷ್ಟಿಸಿದ. ಆನಂತರ ಅದನ್ನು ನೋಡಿ ಸಂತೋಷಪಡಲಿ ಅಂತ ಒಂಬತ್ತು ಜನರನ್ನು ಸೃಷ್ಟಿಸಿದ. ಇವರು ಭೃಗು, ಪುಲಸ್ತ್ಯ ಪುಲಹ, ಕೃತು, ಆಂಗೀರಸ, ಪುರೀಚ, ದಕ್ಷ, ಅತ್ರಿ ಮತ್ತು ವಸಿಷ್ಠ. ಇವರಿಗೆ ನವಬ್ರಹ್ಮರು ಅಂತ ಹೆಸರು. ಇವರು ಸಂಸಾರ ಮಾಡಲು ಮತ್ತೆ ಒಂಬತ್ತು ಜನ ಕನ್ಯೆಯರು ಬೇಡವೆ? ಸರಿ! ಖ್ಯಾತಿ, ಭೂತಿ, ಸಂಭೂತಿ, ಕ್ಷಮೆ, ಪ್ರೀತಿ, ಸನ್ನತಿ, ಊರ್ಜೆ, ಅನಸೂಯೆ ಮತ್ತು ಪ್ರಸೂತಿ – ಹೀಗೆ ನವಕನ್ಯೆಯರ ಸೃಷ್ಟಿ ನಡೆಯಿತು. ಈ ನವಬ್ರಹ್ಮರು ಈ ಒಂಬತ್ತು ಕನ್ಯೆಯರನ್ನು ಮದುವೆಯಾದರು. ವಸಿಷ್ಠರು ಪ್ರಸೂತಿಯ ಕೈ ಹಿಡಿದರು. ಈ ದಂಪತಿಗಳಿಗೆ ಕಾಲಕ್ರಮದಲ್ಲಿ ಶಕ್ತಿ ಎಂಬ ಮಗ ಹುಟ್ಟಿದ.

ಬುದ್ಧಿವಂತ, ಆದರೆ?

ಶಕ್ತಿ ಮಹಾಬುದ್ಧಿವಂತ. ಎಲ್ಲ ಶಾಸ್ತ್ರಗಳನ್ನು ಓದಬೇಕು ಎಂದು ಅವನ ಆಸಕ್ತಿ. ಎಲ್ಲವನ್ನೂ ಒಮ್ಮೆಯೇ ಕಲಿಯಬೇಕು ಎಂಬ ಹಟ. ಕಲಿತಿದ್ದನ್ನು ಅರೆಕ್ಷಣದಲ್ಲೇ ಸಾಧಿಸಬೇಕೆಂಬ ಛಲ. ಇಷ್ಟೆಲ್ಲ ಒಳ್ಳೆಯ ಗುಣಗಳಿದ್ದರೂ, ಶಕ್ತಿಯಲ್ಲಿ ಒಂದು ದೊಡ್ಡ ದೌರ್ಬಲ್ಯವಿತ್ತು. ಸಣ್ಣಪುಟ್ಟ ವಿಚಾರಗಳಿಗೆಲ್ಲ ಬೇಗನೆ ಸಿಟ್ಟಾಗುತ್ತಿದ್ದ. ಸಿಟ್ಟೆಂಬುದು ಸದಾ ಅವನ ಮೂಗಿನ ಮೇಲೆ ಕುಣಿಯುತ್ತಿತ್ತು.

ವಸಿಷ್ಠರು ಇದನ್ನು ಗಮನಿಸಿ ಅನೇಕ ಬಾರಿ ಹೇಳಿದ್ದರು. “ಋಷಿಗಳಿಗೆ ಕೋಪವೆಂಬುದು ಒಂದು ದೊಡ್ಡಶತ್ರು. ಅವರು ಕಷ್ಟಪಟ್ಟು ಗಳಿಸಿದ್ದ ತಪಸ್ಸಿನ ಶಕ್ತಿಯನ್ನು ಕೋಪ ಅರೆಕ್ಷಣದಲ್ಲಿ ಹಾಳು ಮಾಡಿಬಿಡುತ್ತದೆ. ‘ಕೋಪವೆಂಬುದು ಅನರ್ಥ ಸಾಧನೆ’ ಎಂದು ಬಲ್ಲವರು ಹೇಳುತ್ತಾರೆ. ಆದ್ದರಿಂದ ನೀನು ಯಾವಾಗಲೂ ಎಚ್ಚರವಾಗಿರು. ತಾಳ್ಮೆಯೇ ತಪಸ್ಸು ಕೋಪವೇ ಮೃತ್ಯು! ತಾಳಿದವನು ಬಾಳಿಯಾನು. ಈ ನುಡಿ ನಿನಗೆ ನೆನಪಿರಲಿ” ಅಂದರು.

ಒಂದು ದಿನ ಪಾಠ ಹೇಳಿಕೊಡುವಾಗ ಶಕ್ತಿ ತಪ್ಪಿದ. ತಂದೆ, “ನಿನಗೆ ಎಷ್ಟು ಬಾರಿ ಹೇಳಿಕೊಡಬೇಕು ಪಾಠ ಹೇಳುವಾಗ ಎಚ್ಚರದಿಂದ ಇರಬೇಕು” ಎಂದರು. ಕೂಡಲೆ ಶಕ್ತಿ ‘ಥಟ್’ ಎಂದು ಎದ್ದವನೆ ಸಿಟ್ಟಿನಿಂದ ಚಡಪಡಿಸುತ್ತ ಪಾಠ ಮಾಡುತ್ತಿದ್ದ ಗ್ರಂಥವನ್ನೇ ಸುಟ್ಟುಬಿಟ್ಟ! ತಾಯಿ ಹಾಲನ್ನು ಕಾಯಿಸಿ ಕೊಡುವಾಗ ಹಾಲು ಕೆನೆ ಕಟ್ಟಲಿಲ್ಲವೆಂದು ಬಟ್ಟಲನ್ನೇ ಎಸೆದ.

ಇಂತಹ ಸಣ್ಣಪುಟ್ಟ ಘಟನೆಗಳು ಅದೆಷ್ಟೋ ನಡೆದವು. ವಸಿಷ್ಠರಿಗೆ ತುಂಬ ಬೇಸರ, ಯೋಚನೆ. ಈ ಕೋಪದಿಂದ ಮಗನಿಗೂ ಇತರರಿಗೂ ಏನೇನು ಕಷ್ಟಗಳು ಸಂಭವಿಸುತ್ತವೆಯೋ, ಕೋಪ ಬಂದಾಗ ಮನುಷ್ಯನ ಬುದ್ಧಿ ಅವನ ಕೈಯಲ್ಲಿ ಇರುವುದಿಲ್ಲವಲ್ಲ ಎಂದು ಚಿಂತೆ. ಇವನ ಕೋಪಕ್ಕೆ ಮದ್ದೇನು ಎಂದು ಬಹುವಾಗಿ ಯೋಚಿಸಿದರು. ತಾಯಿ ಒಂದು ಸಲಹೆ ನೀಡಿದಳು, “ಇವನಿಗೊಂದು ಮದುವೆ ಮಾಡಿಬಿಡಿ, ಈ ಕೋಪತಾಪ ಎಲ್ಲಾ ಇಳಿದುಹೋಗುತ್ತೆ.”

“ಸರಿ, ಹಾಗೇ ಮಾಡೋಣ. ಅದರಿಂದಲಾದರೂ ಕೋಪ ಇಳಿದೀತು” ಅಂದರು ವಸಿಷ್ಠರು. ಅದೃಶ್ಯಂತಿ ಎಂಬ ಕನ್ಯೆಯನ್ನು ಕಂಡರು. ಆಕೆ ರೂಪ-ಗುಣ ಸಂಪನ್ನೆ ಆಗಿದ್ದಳು. ಶಕ್ತಿಯೊಂದಿಗೆ ಆಕೆಯ ವಿವಾಹವಾಯಿತು.

ಸಂಸಾರಿಯಾದರೂ….

ಶಕ್ತಿ ಸಂಸಾರಿಯಾದ. ಏನಾದರೇನು? ಅವನ ಕೋಪ ಮಾತ್ರ ಕಡಿಮೆಯಾಗಲಿಲ್ಲ.

ಒಂದು ದಿನ ಸಂಜೆಯ ವೇಳೆ ಸಂಧ್ಯಾವಂದನೆಗೆಂದು ಹೊರ ಬಂದ. ಕೆರೆಯ ದಂಡೆಯ ಮೇಲೆ ಬರುತ್ತಿದ್ದ. ದಂಡೆ ಚಿಕ್ಕದಾಗಿತ್ತು. ಎದುರಿನಲ್ಲಿ ಅದೇ ವೇಳೆಗೆ ಕಲ್ಮಷಪಾದ ಎಂಬಾತ ಬಂದ. ಈತ ಸೂರ್ಯವಂಶದ ದೊರೆ.

ಶಕ್ತಿ ದೊರೆಯನ್ನು ಕಂಡು ಸಿಟ್ಟೆದ್ದ. ಯಾರು ನೀನು? ನಾನು ಬರುತ್ತಿರುವುದು ನಿನಗೆ ಕಾಣಲಿಲ್ಲವೊ? ಎಂದು ಗುಡುಗಿದ.

ರಾಜ ಉತ್ತರಿಸಿದ – “ನಾನು ಸೂರ್ಯವಂಶದ ದೊರೆ. ನನ್ನನ್ನು ಕಲ್ಮಷಪಾದ ಅನ್ನುವರು. ತಮಗೇಕೆ ಇಷ್ಟೊಂದು ಸಿಟ್ಟು?

ಶಕ್ತಿ, “ಮೂರ್ಖ! ಸುಮ್ಮನೆ ಹರಟಬೇಡ. ನನಗೆ ಸಂಧ್ಯಾವಂದನೆಗೆ ವೇಳೆ ಆಗಿದೆ. ಎಲ್ಲಿ, ಅತ್ತ ಸರಿ” ಎಂದವನೆ ರಾಜನನ್ನು ಪಕ್ಕಕ್ಕೆ ನೂಕಲು ಹೋದ.

ಕಲ್ಮಷಪಾದ ರಾಜನಲ್ಲವೆ? ಯಾವನೋ ಒಬ್ಬ ತನ್ನನ್ನು ಮೂರ್ಖ ಎಂದರೆ ತಡೆಯುತ್ತಾನೆಯೆ? ಅವನಿಗೂ ಆತ್ಮಾಭಿಮಾನ ಕೆರಳಿಬಂತು! ಸರಿ, ಇಬ್ಬರಿಗೂ ಮಾತಿಗೆ ಮಾತು ಹತ್ತಿತು. ಶಕ್ತಿಯ ಸಹನೆ ತಪ್ಪಿಹೋಯಿತು. “ಅಯೋಗ್ಯ! ರಾಕ್ಷಸನಂತೆ ನನ್ನ ಮೇಲೆ ಏರಿ ಬರುವೆಯಾ? ಇದೋ! ನಮ್ಮ ತಂದೆಗಾಗಿ ಇಷ್ಟು ಹೊತ್ತು ನನ್ನ ಕೋಪವನ್ನೆಲ್ಲ ತಡೆದಿದ್ದೆ. ಇನ್ನು ನಾನು ನಿನ್ನನ್ನು ಸುಮ್ಮನೆ ಬಿಡಲಾರೆ. ಹಿಡಿ ಶಾಪವನ್ನು ನೀನು ರಾಕ್ಷಸನಂತೆ ವರ್ತಿಸಿದ್ದರಿಂದ ರಾಕ್ಷಸನಾಗು!” ಎಂದುಬಿಟ್ಟ.

ರಾಜ ರಕ್ಕಸನಾದ

ಅರೆಕ್ಷಣದಲ್ಲೇ ರಾಜನ ಕೈಯಿಂದ ಕತ್ತಿ ಜಾರಿ ಬಿತ್ತು! ಅವನು ತೊಟ್ಟಿದ್ದ ಕವಚಕುಂಡಲಗಳು ಕಳಚಿಬಿದ್ದವು. ಕಿರೀಟಕ್ಕೆ ಹದ್ದು ಬಡಿಯಿತು. ಏರಿ ಬಂದ ಕುದುರೆ ಓಡಿಹೋಯಿತು. ಅರಸನ ಶರೀರ ಗಾಳಿ ತುಂಬಿದ ಬೆಲೂನಿನಂತೆ ಊದಿಕೊಂಡಿತು! ಅರಸ ಭಯದಿಂದ ಕಿಟಾರನೆ ಕಿರುಚಿದ.

ಆ ನೋಟಕ್ಕೆ ಶಕ್ತಿಯ ಮೈ ಬೆವರಿತು. ರಾಕ್ಷಸ ಕಣ್ಣು ಅರಳಿಸಿ ನೋಡಿದ. ಹದ್ದಿನ ಕಣ್ಣು ಕೋಳಿಯ ಮೇಲೆ ಬಿದ್ದಂತಾಯಿತು. ಆ….! ಎಂದು ಬಾಯಿ ತೆರೆದು ಆತನನ್ನು ನುಂಗಲು ಧಾವಿಸಿದ! ಶಕ್ತಿ ಓಡಿದ. ಅವನು ಮುಂದೆ, ಇವನು ಹಿಂದೆ. ತನ್ನ ತಪ್ಪು ಅರಿವಾಯಿತು. ಆದರೇನು? ಕಾಲ ಮಿಂಚಿ ಹೋಗಿತ್ತು. ರಾಕ್ಷಸನು ಶಕ್ತಿಯನ್ನು ಬಕಾಸುರನಂತೆ ನುಂಗಿಯೇ ಬಿಟ್ಟ!

ಈ ಸುದ್ದಿ ಕಾಡುಕಿಚ್ಚಿನಂತೆ ಹಬ್ಬಿತು. ಶಕ್ತಿಯ ತಮ್ಮಂದಿರು ಬಂದರು. ಅಣ್ಣನನ್ನು ಸಂಹರಿಸಿದ ಆ ರಾಕ್ಷಸನನ್ನು ಕೊಲ್ಲುವೆವು! ಎಲ್ಲಿ ಆ ರಾಕ್ಷಸ? ಎಂದು ಹಾರಾಡಿದರು. ಹುಲಿ ಹಸುವನ್ನು ಸೀಳುವಂತೆ ರಾಕ್ಷಸ ಅವರನ್ನೂ ಮುಗಿಸಿದ!

ಮುಂದೇನು ಗತಿ?

ಪಾಪ! ಮಕ್ಕಳನ್ನು ಕಳೆದುಕೊಂಡ ವಸಿಷ್ಠ ಋಷಿಯ ದುಃಖ ಅಷ್ಟಿಷ್ಟಲ್ಲ! ರಾಕ್ಷಸನನ್ನು ತಾನು ಮತ್ತೆ ಶಪಿಸಬಹುದಿತ್ತು. ಆದರೇನು ಸುಖ? ಮಕ್ಕಳು ಇದರಿಂದ ಬದುಕಲಾರರು. ರಾಕ್ಷಸನ ಮೇಲೆ ಅವರಿಗೆ ವಿಪರೀತವಾದ ಕೋಪ ಬಂತು. ಆದರೆ ತಾಳ್ಮೆಯನ್ನು ತಂದುಕೊಂಡರು. ಅವರೇ ಮಗನಿಗೆ ‘ಕೋಪವನ್ನು ತಡೆದುಕೊ’ ಎಂದು ಬುದ್ಧಿಹೇಳಿದ್ದರು, ಅಲ್ಲವೆ? ಆದುದರಿಂದ ತಮ್ಮ ಕೋಪವನ್ನು ತಡೆದರು. ಮನಸ್ಸಿಗೆ ಮಾತ್ರ ಶಾಂತಿ ಇಲ್ಲ. ತಮ್ಮ ಸೊಸೆ ವಿಧವೆಯಾಗಿದ್ದು ಕಂಡಾಗ ಗಾಯಕ್ಕೆ ಬರೆ ಎಳೆದಂತಾಗುತ್ತಿತ್ತು. “ಅಯ್ಯೋ, ಮಗನೇ! ಎಂತಹ ಅನರ್ಥ ಮಾಡಿಬಿಟ್ಟೆ!” ಎಂದು ಹಲುಬಿದರು.

ಬಾಲವಿಧವೆಯಾದ ಅದೃಶ್ಯಂತಿ ಮಾವನವರನ್ನು ಹಿಂಬಾಲಿಸಿದಳು. ಸೊಸೆಯ ಸಂಕಟ ವಸಿಷ್ಠರನ್ನು ಬಹಳವಾಗಿ ಕಾಡಿಸಿತು! ಕೊನೆಕೊನೆಗೆ ಅವರಿಗೆ ಜೀವನದಲ್ಲೆ ಬೇಸರವಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಾದರು. ಅದಕ್ಕಾಗಿ ಮರದಿಂದ ಬಿದ್ದರು. ನೀರಿನಲ್ಲಿ ಮುಳುಗಿದರು. ಅನ್ನ ನೀರುಗಳನ್ನು ತೊರೆದರು. ಏನಾದರೇನು, ಅವರು ಸಾಯಲಾಗಲೇ ಇಲ್ಲ. “ಅಯ್ಯೋ, ಆತ್ಮಹತ್ಯೆ ಮಾಡಿಕೊಳ್ಳಲೂ ನನ್ನಿಂದ ಆಗಲಿಲ್ಲವಲ್ಲ! ನಾನು ಅಷ್ಟೊಂದು ದುರ್ಬಲನಾದೆನೆ? ಮುಂದೇನು ಗತಿ…. ಮುಂದೇನು ಗತಿ?” ಎಂದು ಚಿಂತಿಸುತ್ತಾ ಮಲಗಿಬಿಟ್ಟರು.

ಇದೇ ವೇಳೆಯಲ್ಲೇ ವಸಿಷ್ಠರಿಗೆ ಕೂಸಿನ ಧ್ವನಿ ಕೇಳಿ ಬಂದದ್ದು! ‘ಸಹ ನಾ ವವತು ಸಹನೌ ಭುನಕ್ತು’ ಎಂಬ ಶ್ಲೋಕ ಕೇಳಿಸಿದ್ದು. ಇದರಿಂದ ಅವರಿಗೆ ಎಷ್ಟೋ ಸಮಾಧಾನವಾಯಿತು. ಶಕ್ತಿಯ ಮಗ ಹುಟ್ಟುತ್ತಾನೆ, ವಂಶಕ್ಕೆ ಕೀರ್ತಿ ತರುತ್ತಾನೆ ಎಂದುಕೊಂಡರು.”

ಮಗುವಿಗೆ ಹೆಸರಿಟ್ಟರು

ಶ್ರೀನಿವಾಸ ರಾಮಾನುಜದಾಸರು ಕಥೆಯನ್ನು ಮುಂದುವರಿಸಿದರು : “ಶಕ್ತಿಯ ಮಗನೇ ಪರಾಶರ. ಈ ಪರಾಶರ ದೊಡ್ಡವನಾದ ಮೇಲೆ ತುಂಬ ಪ್ರಸಿದ್ಧನಾದ. ಅಷ್ಟೇ ಅಲ್ಲ, ಇವನ ಮಗ, ಮೊಮ್ಮಗ ಎಲ್ಲ ತುಂಬ ಪ್ರಸಿದ್ಧರಾದರು.”

“ಯಾರು ತಾತ ಅವರು?” ರಾಮು ಕೇಳಿದ.

“ಅವರ ಮಗ ವ್ಯಾಸ ಅಂತ. ಮಹಾಜ್ಞಾನಿ, ಬಹು ದೊಡ್ಡ ಋಷಿ. ಅವನ ವಿಷಯ ಆಮೇಲೆ ಹೇಳ್ತೀನಿ. ವ್ಯಾಸನ ಮಗ ಶುಕಮಹಾದೇವ ಅಂತ. ಅವನೂ ಬಹುದೊಡ್ಡ ಋಷಿ. ಹೀಗೆ ಪರಾಶರರ ವಂಶವೇ ಬಹು ದೊಡ್ಡವರ ವಂಶ. ನೋಡಿ, ಅವರ ತಾತ ವಸಿಷ್ಠರು, ತಂದೆ ಶಕ್ತಿ, ಮಗ ವ್ಯಾಸ, ಮೊಮ್ಮಗ ಶುಕ. ಶಕ್ತಿಗೆ ಅತಿ ಕೋಪ ಒಂದೇ ದುರ್ಗುಣ. ಆದರೆ ಅವನೂ ಮಹಾ ವಿದ್ವಾಂಸ.”

“ಪರಾಶರ ಅಂತ ಹೆಸರು ಯಾಕಿಟ್ಟರು, ತಾತ?” ವಸಂತಳ ಪ್ರಶ್ನೆ.

“ಒಳ್ಳೆಯ ಪ್ರಶ್ನೆ ಕೇಳಿದೆ, ಮಗು. ಅದನ್ನೂ ಹೇಳ್ತೇನೆ, ತಾಳು.

ಶುಭ ಮುಹೂರ್ತದಲ್ಲಿ ಅದೃಶ್ಯಂತಿ ಗಂಡು ಕೂಸನ್ನು ಹಡೆದಳು. ವಸಿಷ್ಠರ ಅನಂದ ಹೇಳತೀರದು! ಆಶ್ರಮದ ನಿವಾಸಿಗಳಿಗೆಲ್ಲ ಸಿಹಿಯನ್ನು ಹಂಚಿದರು. ಬಂದು ಹೋದವರೆಲ್ಲಾ ಮಗುವಿನ ತೇಜಸ್ಸಿಗೆ ಬೆರಗಾದರು.

ಮಗುವಿಗೆ ಹೆಸರೇನು ಇಡಬೇಕು? ಒಬ್ಬೊಬ್ಬರು ಒಂದೊಂದು ಸೂಚಿಸಿದರೂ ಅದಾವುದೂ ವಸಿಷ್ಠರಿಗೆ ಹಿಡಿಸಲಿಲ್ಲ. ಕೊನೆಗೆ ಅವರೇ ಮಗುವಿಗೆ ಹೆಸರಿಟ್ಟರು. ‘ಪರಾಶರ’ ಎಂದು. ವಸಿಷ್ಠರು ಇಟ್ಟ ಹೆಸರು ಅನ್ವರ್ಥವಾದುದು, ಸಾರ್ಥಕವಾದದ್ದು. ಮಗು ಹುಟ್ಟುವ ಮೊದಲು ವಸಿಷ್ಠರಿಗೆ ತುಂಬ ಬೇಸರವಾಗಿತ್ತು. ಬದುಕುವುದೇ ಬೇಕಿರಲಿಲ್ಲ. ಅಲ್ಲವೆ? ಅವರಿಗೆ ಕವಿದಿದ್ದ ನಿರಾಶೆಯನ್ನು ಹೋಗಲಾಡಿಸಿ ಆಸೆಯನ್ನು ಉಂಟು ಮಾಡಿತು ಈ ಮಗು. ಆದ್ದರಿಂದ ಪರಾಶರ ಎಂದು ಕರೆದರು. ಸಂಸ್ಕೃತದಲ್ಲಿ ಪರಾಶಃ = ಇತರರಿಗೆ ಆಶೆಯನ್ನು ಉಂಟು ಮಾಡಿದವನು, ಹೀಗೆ ಅರ್ಥಮಾಡುತ್ತಾರೆ. ಪರಾನ್ ತರ್ಕ ಶರೈಃ ಆ ಶೃಣಾತಿ ಅಂದರೆ ತನ್ನ ವಿಚಾರಗಳಿಂದ ಎದುರಾಳಿಗಳನ್ನು ಸೋಲಿಸಿದ ಎಂದೂ ಅರ್ಥವಾಗುತ್ತದೆ. ಮುಂದೆ ಇವನು ದೊಡ್ಡ ವಿದ್ವಾಂಸನಾಗಿ, ನೂರಾರು ಜನರಿಗೆ ಪಾಠ ಹೇಳಿ, ಬಹು ದೊಡ್ಡ ಗುರು ಎನ್ನಿಸಿಕೊಂಡ. ಇದರಿಂದಲೂ ಹೆಸರು ಸಾರ್ಥಕವಾಯಿತು.

ಪರಾಶರ ಬೆಳೆಯುತ್ತ ಬಂದ, ವಸಿಷ್ಠರೇ ಅವನಿಗೆ ವಿದ್ಯಾಭ್ಯಾಸ ಮಾಡಿದರು. ವೇದಗಳನ್ನು ಹೇಳಿಕೊಟ್ಟರು. ಒಳ್ಳೆಯ ಗುಣಗಳನ್ನು ಕಲಿಸಿದರು.

ನನ್ನ ತಂದೆಗೆ ಈ ಗತಿಯಾಯಿತೆ?

ಹೀಗೆ ವಸಿಷ್ಠರು ಮೊಮ್ಮಗನಿಗೆ ಪಾಠ ಹೇಳಿಕೊಡುವಾಗ ತಾಯಿ ಅದೃಶ್ಯಂತಿ ಮರೆಯಲ್ಲಿ ನೋಡುತ್ತಿದ್ದಳು. ಮಗನ ಪ್ರಗತಿಯನ್ನು ಕಂಡು ಆಕೆಗೆ ಹಿಡಿಸಲಾರದ ಆನಂದ. ಜೊತೆಗೆ ಸಹಜವಾಗಿಯೇ ಪತಿಯ ನೆನಪು. “ಅವರು ಈಗ ಇದ್ದಿದ್ದರೆ ಮಗನನ್ನು ನೋಡಿ ಅದೆಷ್ಟು ಹಿಗ್ಗುತ್ತಿದ್ದರೋ” ಎಂಬ ವೇದನೆ.

ಒಂದು ದಿನ ತನ್ನ ತಾತ ವಸಿಷ್ಠರನ್ನು ಕುರಿತು ಪರಾಶರ, “ಅಪ್ಪಾಜಿ! ನಿನ್ನೆಯ ದಿನ ತತ್ವಮಸಿ ಎಂಬುದರ ಅರ್ಥ ನಾಳೆ ಹೇಳುವೆ ಎಂದು ಹೇಳಿದ್ದಿರಿ. ದಯಮಾಡಿ ಹೇಳಿ ಅಪ್ಪಾಜಿ!” ಎಂದು ಕೇಳಿದ.

ಈ ಮಾತುಗಳನ್ನು ಅದೃಶ್ಯಂತಿ ಕೇಳಿದಳು. ಮಗನನ್ನು ಕರೆದು, “ಮಗೂ, ಮಾವನವರನ್ನು ತಾತ ಎಂದು ಕರೆಯಪ್ಪ” ಎಂದು ಹೇಳಿದಳು.

“ಅವರು ತಾತ ಏನಮ್ಮ? ಹಾಗಾದರೆ ನನ್ನ ತಂದೆ ಎಲ್ಲಿ?” ಎಂದು ಕೇಳಿದ ಹುಡುಗ.

ತಾಯಿಗೆ ತುಂಬ ಸಂಕಟವಾಯಿತು. ತಂದೆಯ ಕಥೆ ಕೇಳಿದರೆ ಮಗನಿಗೆ ಬಹು ದುಃಖವಾಗುತ್ತದೆ, ಕೋಪ ಬರುತ್ತದೆ, ನಿಜ. ಆದರೆ ಎಷ್ಟು ದಿನ ಇದನ್ನು ಹೇಳದೆ ಬಿಡುವುದು?

ತಾಯಿ ವಿಧಿಯಿಲ್ಲದೆ ಎಲ್ಲವನ್ನೂ ಹೇಳಿಬಿಟ್ಟಳು. ಇದನ್ನು ಕೇಳಿ ಮಗುವಿಗೆ ಈ ಲೋಕದ ಮೇಲೆ ಸಿಟ್ಟು ಬಂತು. ನನ್ನ ತಂದೆಗೆ ಈ ಗತಿಯಾಯಿತೆ ಎಂದು ಮನಸ್ಸು ಕುದಿಯಿತು. ಪರಾಶರ ದೊಡ್ಡವನಾದಂತೆ ಸಿಟ್ಟೆಂಬುದು ಮನಸ್ಸಿನಲ್ಲಿ ಭೂತಾಕಾರವಾಗಿ ಬೆಳೆದುಬಿಟ್ಟಿತು!

ಪರಾಶರರು ಶಿಷ್ಯನ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟರು.

ಈಗ ಪರಾಶರ ಬೆಳೆದು ನಿಂತಿದ್ದಾನೆ. ಅವನ ತೇಜಸ್ಸು ಕಂಡು ಆಶ್ಚರ್ಯಪಡದ ಋಷಿಗಳೇ ವಿರಳ. ಬಾಲ ಸೂರ್ಯನೇ ನಡೆದು ಬರುವಂತೆ ಕಾಣುತ್ತಿದ್ದ ಆತ. ಇದನ್ನು ಗಮನಿಸಿದ ತಾತ, “ಮಗೂ, ಇನ್ನು ನನಗೆ ಯಾತರ ಚಿಂತೆಯೂ ಇಲ್ಲ. ನನ್ನಲ್ಲಿದ್ದ ಸಕಲ ಶಾಸ್ತ್ರಗಳನ್ನೂ ನಿನಗೆ ಧಾರೆ ಎರೆದಿದ್ದೇನೆ. ಈಗ ನೀನು ವೇದಗಳನ್ನು ಅಭ್ಯಾಸ ಮಾಡಿದ್ದಿ. ವೇದಪುರುಷನ ಅನುಗ್ರಹದಿಂದ ನಿನಗೆ ಈ ಅಪೂರ್ವ ತೇಜಸ್ಸು ದೊರೆತಿದೆ. ನೀನಿನ್ನು ಸ್ವತಂತ್ರನಾಗಿರುವೆ. ಯಜ್ಞಯಾಗಾದಿಗಳನ್ನು ನಡೆಸುವ ಶಕ್ತಿ ನಿನಗೆ ಉಂಟಾಗಲಿ” ಎಂದು ಹರಸಿದರು.

ತಂದೆಯ ಮರಣ ಪರಾಶರರ ಮನಸ್ಸನ್ನು ಕೊರೆಯುತ್ತಿತ್ತು.

ಕೋಪ ಬೇಡ, ಮಗೂ

ಲೋಕವನ್ನೇ ದಹಿಸಿಬಿಡುವ ಛಲ ಅವರಿಗೆ. ಅದಕ್ಕಾಗಿ ವಿಶಾಲವಾದ ಯಜ್ಞಕುಂಡವನ್ನೇ ನಿರ್ಮಿಸಿ ಮಹಾಯಜ್ಞ ಆರಂಭಿಸಿದರು. ಇದರಿಂದ ದೊಡ್ಡ ಅನಾಹುತವೇ ಆಗ ತೊಡಗಿತು. ನದಿಯ ನೀರು ಬತ್ತಿತು. ಸಸ್ಯಶ್ಯಾಮಲೆಯಾದ ನೆಲ ಒಣಗಿಹೋಯಿತು. ಅನ್ನ ಸತ್ವಗಳೆಲ್ಲ ನಿಸ್ಸಾರವಾದವು. ಅಷ್ಟೇಕೆ, ಸೂರ್ಯ ಚಂದ್ರರೇ ನಡುಗಿಹೋದರು. ಇದರಿಂದ ಜೀವರಾಶಿಗಳೆಲ್ಲಾ ‘ಗೊಳೋ’ ಎಂದು ಗೋಳಾಡಿದವು. ಒಟ್ಟಿನಲ್ಲಿ ಲೋಕವೇ ತಳಮಳಗೊಂಡಿತು. 

ವಸಿಷ್ಠರು ಪರಾಶರನಿಗೆ, 'ಕೋಪ, ಮಾತ್ಸರ್ಯಗಳು ಮುನಿಗಳಿಗಲ್ಲ' ಎಂದರು.

 ಇದನ್ನು ತಿಳಿದು ಅನೇಕ ಮುನಿಗಳು ಬಂದು ಯಾಗ ನಿಲ್ಲಿಸಲು ಹೇಳಿದರು. ಪರಾಶರರು ಯಾರ ಮಾತನ್ನೂ ಕೇಳಲಿಲ್ಲ. ದಿನ ದಿನಕ್ಕೆ ಸಾವಿರಾರು ಜೀವರಾಶಿಗಳು ಯಜ್ಞ ಕುಂಡದಲ್ಲಿ ಬಿದ್ದುಹೋದವು. ಇದೆಲ್ಲವನ್ನು ಕಂಡ ವಸಿಷ್ಠರ ಹೃದಯ ದಯೆಯಿಂದ ಮಿಡಿಯಿತು. ಮಗ ಶಕ್ತಿ ತನ್ನ ಕೋಪವನ್ನು ತಡೆದುಕೊಳ್ಳದೆ ರಾಜ ಕಲ್ಮಷಪಾದನಿಗೂ ಕೇಡು ಮಾಡಿದ, ತಾನೂ ನಾಶವಾದ, ತಮ್ಮಂದಿರ ಸಾವಿಗೂ ಕಾರಣನಾದ. ಮೊಮ್ಮಗ ಪರಾಶರನೂ ಕೋಪಕ್ಕೆ ಕಡಿವಾಣ ಹಾಕುತ್ತಿಲ್ಲವಲ್ಲ! ಅವರೇ ಪರಾಶರರ ಹತ್ತಿರ ಬಂದರು. “ಪರಾಶರ! ಏನಿದು ಅನರ್ಥ? ವೇದ ತಿಳಿದ ನೀನು ಹೀಗೆ ಮಾಡಬಹುದೆ? ಗರ್ಭದಲ್ಲಿ ಇರುವಾಗಲೇ ನೀನು ಶಾಂತಿ ಮಂತ್ರಗಳನ್ನು ಹೇಳಿದೆಯಲ್ಲ. ಇದೇ ನಿನ್ನ ಲೋಕಕಲ್ಯಾಣ ನೀತಿಯೆ? ಸಕಲ ಶಾಸ್ತ್ರಗಳನ್ನು ನೀನು ಇದಕ್ಕಾಗಿ ಕಲಿತೆಯ? ಕೋಪ, ಮಾತ್ಸರ್ಯಗಳು ಮೂಢರಿಗಲ್ಲದೆ ಮುನಿಗಳಿಗಲ್ಲ. ನಿನಗೆ ನೆನಪಿರಬೇಕು, ನಿಮ್ಮ ತಂದೆ ಸತ್ತಿದ್ದು ಈ ಕೋಪದಿಂದಲೇ! ಮಗೂ, ನೋಡು, ಏನೂ ಅರಿಯದ ಜೀವರಾಶಿಗಳು ಪ್ರಾಣ ಬಿಡುತ್ತಿರುವುದನ್ನು. ಇನ್ನಾದರೂ ಸಾಕುಮಾಡು ಈ ಅನ್ಯಾಯ” ಎಂದರು.

ತಾತನ ಒಂದೊಂದು ನುಡಿಯೂ ಪರಾಶರರ ಹೃದಯವನ್ನು ಹೊಕ್ಕಿತು. ತಂದೆಯನ್ನು ಕೊಂದವನು ಒಬ್ಬ ರಾಕ್ಷಸ, ಆದರೆ ನಾನು ಕೊಲ್ಲುತ್ತಿರುವುದು ಸಕಲ ಜೀವರಾಶಿಗಳನ್ನು, ಇದು ಸರಿಯಲ್ಲ ಎಂದು ಅರಿವಾಯಿತು. ಆ ಕೂಡಲೇ ಯಜ್ಞವನ್ನು ಪರಿಸಮಾಪ್ತಿಗೊಳಿಸಿದರು. ಇದರಿಂದ ಲೋಕವೇ ನೆಮ್ಮದಿಯ ಉಸಿರು ಬಿಟ್ಟಿತು!

ಗುರುವರ್ಯ

ಭಾರತದ ಉತ್ತರದಲ್ಲಿ ಸಾಲುಸಾಲಾಗಿ ಹಬ್ಬಿದೆ ಹಿಮಾಲಯ ಪರ್ವತ. ಬದರಿ, ಕೇದಾರ ಮೊದಲಾದ ಪವಿತ್ರ ಯಾತ್ರಾಸ್ಥಳಗಳಿರುವುದು ಈ ಪರ್ವತ ಪ್ರದೇಶದಲ್ಲಿ. ಇದು ಋಷಿಗಳ ತಪೋಭೂಮಿ. ಹಿಮವನ್ನೆ ಹೊದ್ದು ಆಕಾಶವೇ ತಗಲುವಂತೆ ತಲೆ ಎತ್ತಿ ನಿಂತ ಈ ಪರ್ವತ ಎಷ್ಟು ಭವ್ಯ, ಎಷ್ಟು ಪವಿತ್ರ!

ಇದನ್ನು ಅರಿತ ಪರಾಶರರು ಅಲ್ಲೊಂದು ಆಶ್ರಮ ಕಟ್ಟಿದರು. ಆ ಆಶ್ರಮ ಸದಾಕಾಲವೂ ಜನನಿಬಿಡವಾಗಿಯೇ ಇರುತ್ತಿತ್ತು. ಕೆಲವರು ಸ್ತೋತ್ರಪಾಠ, ಮತ್ತೆ ಕೆಲವರು ವೇದಘೋಷ, ಇನ್ನೊಂದು ಗುಂಪು ಶಾಸ್ತ್ರಗಳ ವಿಚಾರ, ಮತ್ತೊಂದು ಗುಂಪು ತತ್ವ ವಿಚಾರ, ಮಗದೊಂದು ಗುಂಪು ಯಜ್ಞ ಯಾಗಾದಿಗಳನ್ನು ನಡೆಸುತ್ತಿದ್ದರು.

‘ಪರಾಶರಾಶ್ರಮ’ದ ಕೀರ್ತಿ ಎಲ್ಲ ಕಡೆಗೆ ಹಬ್ಬಿತು. ವಿದ್ಯೆ ಕಲಿಯಬೇಕೆನ್ನುವವರಿಗೆ ಅದೇ ಮೊದಲು ನೆನಪಾಗುತ್ತಿದ್ದ ಸ್ಥಳ. ಅಷ್ಟು ದೊಡ್ಡ ವಿದ್ವಾಂಸರು ಪರಾಶರರು. ನೂರಾರು ಮಂದಿ ಬರುವರು ಪರಾಶರರ ಹತ್ತಿರ ವಿದ್ಯೆ ಕಲಿಯುವುದಕ್ಕೆ. ಎಲ್ಲ ಕಡೆಗಳಿಂದ ಅಲ್ಲಿಗೆ ಬಂದ ವಿದ್ಯಾರ್ಥಿಗಳೆಲ್ಲರಿಗೂ ಊಟ ವಸತಿಗಳ ವ್ಯವಸ್ಥೆ. ಪರಾಶರರಿಗೆ ಎಲ್ಲವನ್ನೂ ಖುದ್ದಾಗಿ ನೋಡಿಕೊಳ್ಳುವ ಆಸೆ. ಆದ್ದರಿಂದ ವಿದ್ಯಾರ್ಥಿಗಳು ದಂದುದಂಡಾಗಿ ಸುತ್ತುಗಟ್ಟಿ ನಿಲ್ಲುತ್ತಿದ್ದರು. ಎಲ್ಲರ ಅಭಿರುಚಿಗೆ ತಕ್ಕಂತೆ ಅವರ ಪಾಠ. ವಿಧವಿಧವಾದ ಕಥೆಗಳು, ನೀತಿಗಳು ಎಲ್ಲವೂ ಆಕರ್ಷಕ. ಆ ಬೋಧಕರ ಗುಂಪು, ಅಲ್ಲಿಯ ಶಿಷ್ಯವರ್ಗ ಎಲ್ಲ ಕಂಡಾಗ ಅದೇ ಒಂದು ವಿಶ್ವವಿದ್ಯಾನಿಲಯದಂತೆ ಕಾಣುತ್ತಿತ್ತು.

ಶಿಷ್ಯಕೋಟಿಯಲ್ಲಿ ಮೈತ್ರೇಯ ಎನ್ನುವವನು ಪರಾಶರರಿಗೆ ಪ್ರಿಯ ಶಿಷ್ಯ. ಅವನ ಶ್ರದ್ಧೆ, ವಿನಯಗಳು ಅವರನ್ನು ಬಹಳವಾಗಿ ಅಕರ್ಷಿಸಿದ್ದುವು. ತಮ್ಮ ಎಲ್ಲ ವಿಚಾರಗಳನ್ನು ತಂದೆ ಮಗನಲ್ಲಿ ತೋಡಿಕೊಳ್ಳುವಂತೆ ಶಿಷ್ಯನಲ್ಲಿ ಹೇಳುತ್ತಿದ್ದರು. ಒಂದು ದಿನ, ಮೈತ್ರೇಯ! ನಾನು ಜಪದಲ್ಲಿರಲಿ, ತಪದಲ್ಲಿರಲಿ ಮನಸ್ಸಿಗೆ ಮಾತ್ರ ನೆಮ್ಮದಿ ಇಲ್ಲವಾಗಿದೆ. ಅನ್ಯಾಯವಾಗಿ ನಮ್ಮ ತಂದೆಯನ್ನು ಓರ್ವ ರಕ್ಕಸ ಕೊಂದು ಹಾಕಿದ ನೋವು ನನ್ನನ್ನು ಸುಡುತ್ತಿದೆ. ಆದ್ದರಿಂದ ಯಾರಿಗೂ ತಿಳಿಯದಂತೆ ಕೆಲವು ದಿನ ಕಣ್ಮರೆಯಾಗಿರುವೆ. ಹಿಮಾಲಯದಲ್ಲಿ ಉತ್ತರಕ್ಕೆ ಹೋಗುತ್ತೇನೆ. ರಾಕ್ಷಸರು ನಾಶವಾಗಲಿ ಎಂದು ‘ರಾಕ್ಷಸ ಸತ್ರ’ ಎಂಬ ಯಾಗ ಆರಂಭಿಸುತ್ತೇನೆ. ನಾನು ಬರುವವರೆಗೂ ನೀನು ಆಶ್ರಮವನ್ನು ನೋಡಿಕೋ ಎಂದು ಹೇಳಿ ಹೊರಟುಹೋದರು.

ರಾಕ್ಷಸ ಸತ್ರ

ಪರಾಶರರು ‘ರಾಕ್ಷಸ ಸತ್ರ’ ಎಂಬ ಯಾಗವನ್ನು ಪ್ರಾರಂಭಿಸಿಯೇ ಬಿಟ್ಟರು. ಅದರ ಫಲವಾಗಿ ಅನೇಕ ರಾಕ್ಷಸರು ಕೈ ಕಾಲುಗಳ ಬಲ ಕಳೆದುಕೊಂಡರು. ಕೆಲವರ ಸೊಂಟ ಮುರಿಯಿತು. ಮತ್ತೆ ಕೆಲವರು ಕ್ಷಯಕ್ಕೆ ತುತ್ತಾದರು. ಯಜ್ಞಕುಂಡದ ಜ್ವಾಲೆ ಧಗಧಗನೆ ಆಕಾಶಕ್ಕೆ ಮುಟ್ಟುತ್ತಿತ್ತು. ಅದರ ‘ಧೂಮ’ದಿಂದ ಅನೇಕ ರಾಕ್ಷಸರು ಉಸಿರು ಕಟ್ಟಿ ಅಸು ನೀಗಿದರು. ಯಜ್ಞಕುಂಡಕ್ಕೆ ಬಿದ್ದು ಭಸ್ಮ ಆದವರ ಸಂಖ್ಯೆ ಹೇಳುವಂತೆಯೇ ಇಲ್ಲ. ಹೀಗೆ ನೊಂದು ಬೆಂದ ಜನರ ಲೆಕ್ಕ ಎಲ್ಲಿ ಸಿಗಬೇಕು?

ವಿಧವೆಯರಾದ ರಾಕ್ಷಸ ಸ್ತ್ರೀಯರ ರೋದನ, ತಬ್ಬಲಿಗಳಾದ ಮಕ್ಕಳ ಚೀರಾಟ ಕರುಳು ಕೀಳುವಂತಿತ್ತು. ಅವರಿಗೆ ಏನು ಮಾಡಬೇಕೆಂದೇ ತೋರಲಿಲ್ಲ. ತಮ್ಮನ್ನು ಕಾಪಾಡುವವರು ಯಾರು? ಪರಾಶರರನ್ನು ಎದುರಿಸುವವರು ಯಾರು? ಕಡೆಗೆ, ಮಹಾಋಷಿ ಪರಾಶರರ ಕೋಪದಿಂದ ತಮ್ಮನ್ನು ಇತರ ಋಷಿಗಳು ಮಾತ್ರವೇ ಕಾಪಾಡಲು ಸಾಧ್ಯ. ರಾಕ್ಷಸರ ಶಕ್ತಿಯು ಏನನ್ನೂ ಮಾಡಲಾರದು ಎಂದು ಅವರಿಗೆ ಸ್ಪಷ್ಟವಾಯಿತು. ಅವರೆಲ್ಲರೂ ಋಷಿಗಳ ಕಾಲ ಮೇಲೆ ಬಿದ್ದರು. ಋಷಿ ಪತ್ನಿಯರ ಹೃದಯ ಮಿಡಿಯಿತು. ಆಗ ಪುಲಸ್ತ್ಯ, ಪುಲಹ, ಕ್ರತು ಮೊದಲಾದ ಋಷಿಗಳು ಬಂದು ಪರಾಶರರನ್ನು ನೋಡುತ್ತಾರೆ, ಆತ ಪ್ರಳಯ ಕಾಲದ ರುದ್ರನಂತೆ ಕಂಡ!

ಪರಾಶರ, ನಿನ್ನ ಕರ್ಮಗಳು ಸಾಂಗವಾಗಿ ನಡೆಯುತ್ತಿರುವುವೆ? ನೀನು ಬ್ರಹ್ಮಜ್ಞಾನಿ. ಸಕಲ ಶಾಸ್ತ್ರಗಳು ನಿನ್ನಲ್ಲಿ ನೆಲೆಯಾಗಿ ನಿಂತಿವೆ. ಮಹಾಜ್ಞಾನಿಯಾದ ನೀನು ಯಾರೋ ಒಬ್ಬನು ಮಾಡಿದ ತಪ್ಪಿಗೆ ಎಲ್ಲರನ್ನೂ ಕೊಲ್ಲಬಹುದೆ? ತಪ್ಪು ಮಾಡಿದವರನ್ನು ಶಿಕ್ಷಿಸುವುದು ಧರ್ಮವೇನೋ ಹೌದು. ಆದರೆ ಆತನನ್ನು ಕ್ಷಮಿಸುವುದರಿಂದ ಯಾವ ಪಾಪವೂ ಬರುವುದಿಲ್ಲ. ಅದೇ ನಿರ್ದೋಷಿಯಾದ ಒಬ್ಬನನ್ನು ಕೊಂದರೂ ಸಾಕು! ಅದು ಸಾವಿರ ಗೋವಿನ ಹತ್ಯೆ ನಡೆಸಿದಂತೆ! ಮುಗ್ಧರಾದ ಈ ಮಕ್ಕಳನ್ನು ನೋಡು. ಇವರು ಮಾಡಿರುವ ತಪ್ಪಾದರೂ ಏನು? ಈ ಅನ್ಯಾಯವನ್ನು ಸಾಕುಮಾಡು. ಅಯ್ಯಾ ಪರಾಶರ, ನೀನು ಧರ್ಮಿಯಾಗು ಎಂದು ಅವರು ಹೇಳಿದರು.

ಹಿರಿಯರಿಗೆ ಮಣಿದರು

ಪರಾಶರರು ಹಿರಿಯರ ಮಾತಿಗೆ ಮಣಿದರು. ತಮ್ಮ ಸೇಡಿನ ಕಿಡಿಯನ್ನೇನೋ ಅಡಗಿಸಿಕೊಂಡರು. ಆದರೆ ಈ ಯಾಗಕುಂಡದ ಅಗ್ನಿಯ ಗತಿ? ಅದನ್ನು ನೀರು ಹಾಕಿ ಆರಿಸುವಂತಿಲ್ಲ. ಅದಕ್ಕೊಂದು ವ್ಯವಸ್ಥೆ ಮಾಡಬೇಕಾಯಿತು. ಆಗ ಆ ಅಗ್ನಿಯನ್ನು ಶೇಖರಿಸಿ ಹಿಮಾಲಯದ ಉತ್ತರದಲ್ಲಿ ಬಿಟ್ಟರು.

ಪರಾಶರರ ಧರ್ಮಬುದ್ಧಿಗೆ ಎಲ್ಲರೂ ತಲೆ ತೂಗಿದರು. ಅವರ ಔದಾರ್ಯವನ್ನು ಕೊಂಡಾಡಿ, “ಪರಾಶರ! ನಿನ್ನ ನಡೆಯಿಂದ ನಮಗೆ ಸಂತಸವಾಗಿದೆ. ಇದೋ, ನಮ್ಮಲ್ಲಿರುವ ಶಾಸ್ತ್ರಗಳನ್ನು ನಿನಗೆ ಧಾರೆ ಎರೆದುಕೊಟ್ಟಿದ್ದೇವೆ. ಇನ್ನು ಮುಂದೆ  ಸಕಲ ಶಾಸ್ತ್ರಗಳೂ ನಿನ್ನಲ್ಲಿ ನೆಲೆಸಲಿ. ಅಷ್ಟೇ ಅಲ್ಲ, ಆಕಸ್ಮಿಕವಾಗಿ ತಲೆದೋರುವ ಶಂಕೆಗಳಿಗೆ ಯಾರೂ ಉತ್ತರಿಸದೆಯೇ ನಿನಗೇ ಸತ್ಯದ ಅರಿವು ಆಗಲಿ. ನಿನ್ನಿಂದ ಲೋಕ ಕಲ್ಯಾಣವಾಗುವುದರಲ್ಲಿ ನಮಗಿನ್ನು ಶಂಕೆ ಇಲ್ಲ! ನೀನು ವ್ಯಕ್ತಿ ಆಗದೆ ಶಕ್ತಿ ಆಗು. ನೀನು ಒಬ್ಬ ಗೋತ್ರಪ್ರವರ್ತಕನಾಗಿ ಖ್ಯಾತಿ ಗಳಿಸುವೆ. ನಿನಗೆ ಮಂಗಳವಾಗಲಿ!” ಎಂದು ಹರಸಿದರು.

ಮುನಿಗಳು ಹರಸಿ ತೆರಳಿದರು. ಅವರ ಆಶೀರ್ವಾದ ಫಲಿಸಿತು. ಭಾರತದ ಎಲ್ಲ ಕಡೆಯಲ್ಲೂ ಪರಾಶರರ ಗೋತ್ರದವರು ಇದ್ದಾರೆ.

“ಹಾಗಂದರೆ ಏನು ತಾತ?” ಶ್ರೀನಿವಾಸ ಕೇಳಿದ.

“ಹೇಳ್ತೇನೆ ಮಗೂ. ಮುಂದೆ ಅದನ್ನು ವಿವರಿಸಿ ಹೇಳ್ತೇನೆ” ಎಂದು ಶ್ರೀನಿವಾಸ ರಾಮಾನುಜದಾಸರು ಕಥೆಯನ್ನು ಮುಂದುವರಿಸಿದರು.

ಕರ್ನಾಟಕದಲ್ಲಿ ಕೀರ್ತಿಯ ಕಳಸ ಹೊತ್ತರು!

“ಪರಾಶರರು ಸಂಚಾರ ಹೊರಟರು. ಇಲ್ಲಿ ಬಂದರು, ಅಲ್ಲಿಗೆ ಬಂದಿಲ್ಲ ಎಂದು ಹೇಳುವಂತಿಲ್ಲ. ಆಸೇತು ಹಿಮಾಚಲ ಪರ್ಯಂತಪಾದಯಾತ್ರೆ ಅವರದು. ನಮ್ಮ ಕರ್ನಾಟಕದಲ್ಲೋ ಎಂದು ಕೇಳಬಹುದು. ಈ ಪ್ರಶ್ನೆಗೆ ಉತ್ತರಿಸಲು ನನಗೆ ಬಹಳ ಹೆಮ್ಮೆ! ಅವರು ಕೀರ್ತಿಯ ಕಳಸತೊಟ್ಟಿದ್ದು ಇಲ್ಲೇ! ಅಂದರೆ? ಸ್ಪಷ್ಟವಾಗಿ ಹೇಳಿಬಿಡುತ್ತೇನೆ ಕೇಳಿ – ಶ್ರೀ ತಿರುನಾರಾಯಣನ ಹೆಸರು ನೀವು ಕೇಳಿರಬೇಕು. ಈ ಸ್ವಾಮಿಯ ಕೀರ್ತಿ ವಿಂಧ್ಯ ಪರ್ವತವನ್ನು ದಾಟಿಹೋಗಿತ್ತು. ಪರಾಶರರು ದಕ್ಷಿಣ ದೇಶದ ಸಂಚಾರವನ್ನು ಕೈಗೊಂಡರು. ಪ್ರಿಯ ಶಿಷ್ಯನಾದ ಮೈತ್ರೇಯ ಅವರ ಸಂಗಡ ಇದ್ದ. ದಾರಿಯ ಉದ್ದಕ್ಕೂ ಸ್ಥಳದ ಹಿರಿಮೆಯನ್ನು ಸಾರುತ್ತಾ ಮೇಲುಕೋಟೆ ಮುಟ್ಟಿದರು. ಇದನ್ನು ತಿರುನಾರಾಯಣಪುರ ಅನ್ನುತ್ತಾರೆ! ಭವ್ಯವಾದ ಬೆಟ್ಟದಡಿಯಲ್ಲಿ ಅನೇಕ ಕೊಳಗಳು, ಪರಮ ಸುಂದರವಾದ ಆ ಸಿರಿ ಸಂಪತ್ತು, ಎಲ್ಲ ಕಂಡು ಕೊಂಚ ಕಾಲ ಅಲ್ಲೇ ತಂಗಲು ನಿರ್ಧರಿಸಿದರು.

ಮೈತ್ರೇಯ ಯೋಚಿಸಿದ – “ಗುರುಗಳಿಗೆ ಈ ಕ್ಷೇತ್ರ ನೆಮ್ಮದಿಯನ್ನು ತಂದಂತಿದೆ. ಇಲ್ಲಿಂದ ಬೇಗ ಹೊರಡುವಂತೆಯೂ ತೋರುವುದಿಲ್ಲ. ಈ ವಿರಾಮದ ಕಾಲವನ್ನು ನಾನು ಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು”.

ಗುರುಗಳು ಶಿಷ್ಯನ ಆಲೋಚನೆಗೆ ಒಪ್ಪಿದರು. ಶುಭದಿನದಂದು ಕಲ್ಯಾಣಿಯಲ್ಲಿ ಮಿಂದರು. ತಿರು ನಾರಾಯಣನ ದಿವ್ಯ ದರ್ಶನವಾಯಿತು. ನರಸಿಂಹಸ್ವಾಮಿ ಬೆಟ್ಟದಡಿಯಲ್ಲಿ ತಂಗಿದರು. ಮೈತ್ರೇಯ ಗುರುಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದ.

“ಸ್ವಾಮಿ! ವೇದ ವೇದಾಂಗಗಳ ವಿಚಾರ ಈ ಹಿಂದೆ ತಿಳಿಸಿದ್ದೀರಿ. ಅಷ್ಟಿಷ್ಟು ಧರ್ಮಶಾಸ್ತ್ರಗಳ ಪರಿಚಯವೂ ಗುರುಗಳಿಂದ ನಡೆದಿದೆ. ಆದರೂ ನನ್ನಲ್ಲಿ ಕೆಲವು ಸಂದೇಹಗಳು ಉಳಿದಿವೆ. ದಯಮಾಡಿ ಅವಕ್ಕೆ ಪರಿಹಾರ ನೀಡಬೇಕು” ಎಂದು ಪ್ರಾರ್ಥಿಸಿದ.

ನಮಸ್ಕರಿಸಿ ನಿಂತುಕೊಂಡ ಶಿಷ್ಯನ ಮುಖವನ್ನು ಮುಗುಳುನಗೆಯಿಂದ ನೋಡಿದರು. ಗುರುಗಳು ಸಮ್ಮತಿಸಿದರೆಂದು ತಿಳಿದ ಮೈತ್ರೇಯ. ಅದ್ಭುತವಾದ ಪ್ರಶ್ನೆಗಳನ್ನೇ ಹಾಕಿದ. “ಈ ಜಗತ್ತು ಹೇಗೆ ಹುಟ್ಟಿತು? ಇದನ್ನು ಸೃಷ್ಟಿ ಮಾಡಿದ್ದು ಯಾರು? ಈ ಸೃಷ್ಟಿಗಿಂತ ಮುಂಚೆ ಏನಿತ್ತು? ಹೇಗಿತ್ತು? ಜಗತ್ತಿಗೆ ಅಳಿವು ಇದೆಯೇ? ಇದು ಯಾರಲ್ಲಿ ನಿಂತಿದೆ? ಸಮುದ್ರ, ಪರ್ವತ, ಭೂಮಿ ಹೇಗೆ ಜನಿಸಿದವು? ಇವಕ್ಕೆ ಆಶ್ರಯ ಯಾರು? ದೇವ – ದಾನವರ ಕಥೆ ಏನು? ರಾಜ ಮಹಾರಾಜರುಗಳ ಇತಿಹಾಸ ಉಂಟೆ? ಮನುಷ್ಯನಿಗೆ ನಾಲ್ಕು ಆಶ್ರಮಗಳು, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎನ್ನುತ್ತಾರಲ್ಲ ಇವುಗಳ ವಿವರವೇನು? ಇವೆಲ್ಲವನ್ನೂ ವಿವರವಾಗಿ ತಿಳಿಸಬೇಕು” ಎಂದು ವಿನಯದಿಂದ ಕೇಳಿಕೊಂಡ.

ಪರಾಶರರು ತುಂಬ ದಯಾಳು. ಶಿಷ್ಯನ ಪ್ರಶ್ನೆಗಳಿಗೆ ತಲೆದೂಗಿ ಎಲ್ಲಕ್ಕೂ ವಿವರವಾಗಿ ಉತ್ತರಗಳನ್ನು ನೀಡಿದರು. ಈ ರೀತಿ ಇಬ್ಬರಿಗೂ ನಡೆದ ಪ್ರಶ್ನೋತ್ತರಗಳೇ ಅಮೂಲ್ಯವಾದ ಕೃತಿ ಆಯಿತು! ಆ ಕೃತಿಯೇ ಪುರಾಣ ರತ್ನ ಎಂದು ಖ್ಯಾತಿ ಪಡೆದ ‘ವಿಷ್ಣುಪುರಾಣ’.

‘ವಿಷ್ಣುಪುರಾಣ’ಕ್ಕೆ ವೈದಿಕ ಸಾಹಿತ್ಯದಲ್ಲಿ ಬಹಳವಾದ ಗೌರವವಿದೆ. ಪುರಾಣಗಳ ರಾಜ ಎಂದೂ ಇದನ್ನು ಕೊಂಡಾಡುತ್ತಾರೆ. ಆದ್ದರಿಂದಲೇ ನಾನು ಹೇಳಿದ್ದು, ಪರಾಶರ ಕರ್ನಾಟಕದಲ್ಲೇ ಕೀರ್ತಿಯ ಕಳಸ ಹೊತ್ತರು ಎಂದು.

ಮೇಲುಕೋಟೆ ನೋಡುವವರಿಗೆ ಈ ನೆನಪು ಬರಬೇಕು. ಇದಕ್ಕೆ ಸಾಕ್ಷಿ ಹೇಳಲು ಅಲ್ಲಿಯೇ ಪರಾಶರ ಕೊಳ ಇದೆ. ಅದನ್ನೇ ಮೈತ್ರೇಯ ಕೊಳ ಎಂದೂ ಕರೆಯುವರು.

ಎಲ್ಲವೂ ಇಲ್ಲೇ ಅಡಗಿದೆ

ಇನ್ನೊಂದು ವಿಚಾರ ಇದೇ ವೇಳೆಯಲ್ಲಿ ತಿಳಿಸಬೇಕು ಅನ್ನಿಸುತ್ತದೆ. ಬಿಳಿಗಿರಿರಂಗನ ಬೆಟ್ಟ ಹತ್ತಿರುವಿರಾ? ಕನ್ನಡ ನಾಡಿನಲ್ಲೇ ಅದೊಂದು ಸುಪ್ರಸಿದ್ಧ ಕ್ಷೇತ್ರ. ಅಲ್ಲಿ ದಿವ್ಯವಾದ ರಂಗನಾಥಸ್ವಾಮಿ ನಿಂತಿದ್ದಾನೆ. ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದವರು ಪರಾಶರರ ತಾತ ವಸಿಷ್ಠರು. ಪುಟ್ಟ ಹುಡುಗ ಪರಾಶರನೂ ಆಗ ಅವರ ಜೊತೆಗೆ ಬಂದಿದ್ದ.

ಮತ್ತೆ ಪರಾಶರರ ಉಡುಗೊರೆ ಲೋಕಕ್ಕೇ ದೊಡ್ಡದು. ಮೊಟ್ಟಮೊದಲು ಮಾನವಧರ್ಮದ ಬಗ್ಗೆ ಅನುಕಂಪ ತೋರಿದ್ದೇ ಅವರು! ಪರಾಶರರ ನಂತರವೇ ವ್ಯಾಸರು ಬಂದದ್ದು. ಈಗ ನಮಗೆ ದೊರಕಿರುವ ಎಲ್ಲ ವೇದಶಾಸ್ತ್ರಗಳು ವ್ಯಾಸರ ಕೃಪೆಯಿಂದಲೇ ಬಂದದ್ದು. ಆದರೂ ಅದರ ಕೀರ್ತಿ ಪರಾಶರರಿಗೇ ಸಲ್ಲಬೇಕು. ಒಬ್ಬರು ಹಣ ಕೊಡುತ್ತಾರೆ, ಇನ್ನೊಬ್ಬರು ಅದನ್ನು ಉಪಯೋಗಿಸಿ ಲಾಭ ಪಡೆಯುತ್ತಾರೆ. ಮೊದಲು ಹಣ ಕೊಟ್ಟವರ ಉಪಕಾರವೂ ದೊಡ್ಡದು, ಅಲ್ಲವೆ? ಹಾಗೆಯೇ ಪರಾಶರರು ಆಗಲೇ ಹೇಳಿದುದನ್ನು ಉಪಯೋಗಿಸಿ ವ್ಯಾಸರು ಜನರು ಜ್ಞಾನವನ್ನು ಬೆಳೆಸಿದರು.

‘ಪರಾಶರ ಗೀತೆ’ ಅದಕ್ಕೊಂದು ಸಾಕ್ಷಿ. ಅದು ಬಹು ದೊಡ್ಡ ಗ್ರಂಥ. ಅದರಲ್ಲಿ ಮಾನವನಿಗೆ ಜೀವಿಸಲು ಬೇಕಾದ ಉಪಯುಕ್ತ ವಿಚಾರಗಳಿವೆ. ಪಾಪ ಎಂದರೇನು, ಪುಣ್ಯ ಎಂದರೇನು, ಮನುಷ್ಯ ಹೇಗೆ ಬಾಳಬೇಕು ಎಂಬುದನ್ನು ಅದರಲ್ಲಿ ವಿವರಿಸಿದ್ದಾರೆ.

ಪರಾಶರರು ಜನಕರಾಜನೊಡನೆ ಮಾಡಿದ ಸಂವಾದ, ಶಿವ ಸಹಸ್ರನಾಮ, ತಪಸ್ಸು, ಧರ್ಮಗಳ ವಿಚಾರವನ್ನು ‘ಪರಾಶರ ಗೀತೆ’ಯಲ್ಲಿ ಚರ್ಚಿಸಿದೆ.

ಗೋತ್ರ ಪ್ರವರ್ತಕ

ಮಗೂ, ಗೋತ್ರ ಪ್ರವರ್ತಕ ಎಂದರೇನು ಎಂದು ಕೇಳಿದೆಯಲ್ಲ? ಹೇಳುತ್ತೇನೆ.

ನೀವು ಯಾರು? ನಿಮ್ಮ ತಂದೆಯ ಹೆಸರೇನು? ನಿಮ್ಮ ವಂಶ ಯಾವುದು? ನಿಮ್ಮ ಧರ್ಮಸೂತ್ರಗಳು ಯಾವುವು? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಉಂಟು. ಈ ಎಲ್ಲ ಉತ್ತರಗಳನ್ನು ಸೇರಿಸಿ ‘ಗೋತ್ರ ಪ್ರವರಗಳು’ ಎಂದು ಹೇಳುತ್ತಾರೆ.

ಭಾರತದಲ್ಲಿ ಹುಟ್ಟಿದ ಎಲ್ಲರಿಗೂ ‘ಗೋತ್ರ ಪ್ರವರ’ ಇದೆ. ನನ್ನದು ಕೌಶಿಕ ಗೋತ್ರ. ಒಬ್ಬರದು ವಸಿಷ್ಠ ಇರಬಹುದು, ಮತ್ತೊಬ್ಬರದು ಜಾಮದಗ್ನಿ ಆಗಿರಬಹುದು. ಹಾಗೆಯೇ ನೂರೆಂಟು ಗೋತ್ರಗಳು ಸುಖ್ಯಾತಿ ಪಡೆದಿವೆ. (ಗೋತ್ರ ಪ್ರವರ್ತಕ ಅಂದರೆ ವಂಶದ ಮೂಲಪುರುಷ ಎಂದು ಭಾವನೆ.) ಈ ಪರಾಶರ ಗೋತ್ರದವರು ಅಖಂಡ ಹಿಂದು ಸ್ಥಾನದಲ್ಲೆಲ್ಲ ಹರಡಿರುವುದನ್ನು ಇಂದೂ ಕಾಣಬಹುದು.

ಅಂದ ಮೇಲೆ ಋಷಿಗಳೆಲ್ಲಾ ಗೋತ್ರ ಪ್ರವರ್ತಕರೇ ಎಂದು ಕೇಳಬಹುದು. ಸಾಧ್ಯವಿಲ್ಲ. ಗೋತ್ರ ಪ್ರವರ್ತಕ ಆಗಲು ಅತ್ಯಂತ ಹಿರಿಮೆ ಇರಬೇಕು. ಜ್ಞಾನ, ತಪಸ್ಸು ಸಾಧನೆಗಳು, ಆಚಾರ ವಿಚಾರಗಳಿಂದ ಅವರು ಗೋತ್ರ ಪ್ರವರ್ತಕರಾಗುವರು. ಇದಕ್ಕೆ ನಿದರ್ಶನ ಪರಾಶರರು. ಇವರ ಹಿರಿಮೆ ಮೆಚ್ಚಿ ಪುಲಸ್ತ್ಯರು ಹರಸಿದರು. ಅದಕ್ಕೆ ಮಿಕ್ಕ ಋಷಿಗಳು ಸಮ್ಮತಿಸಿದರು. ಆದ್ದರಿಂದಲೇ ಇವರು ಗೋತ್ರ ಪ್ರವರ್ತಕರಾದದ್ದು.

ಶಿವನಲ್ಲಿ ಪ್ರಾರ್ಥನೆ

ಇನ್ನೊಂದು ವಿಚಾರ ಉಳಿದಿದೆ! ಪರಾಶರರು ಗೋತ್ರ ಪ್ರವರ್ತಕರು ಅಂದೆ. ಹಾಗೆಂದ ಮೇಲೆ ಅವರ ವಂಶ ಬೆಳೆದಿದೆ ಎಂದಂತಾಯಿತು. ಹಾಗಾದರೆ ಅವರು ವಿವಾಹವಾದರೆ? ಅವರ ಮಕ್ಕಳ ವಿಚಾರವೆಂತು? ಈ ಬಗ್ಗೆ ತಿಳಿಯೋಣ.

ಪರಾಶರರು ‘ರಾಕ್ಷಸ ಸತ್ರ’ವನ್ನು ನಿಲ್ಲಿಸಿದಾಗ ಇತರ ಋಷಿಗಳಿಗೆ ಸಂತೋಷವಾಯಿತಲ್ಲವೆ? ಅವರು, “ಎಲ್ಲ ಶಾಸ್ತ್ರಗಳೂ ನಿನ್ನಲ್ಲಿ ನೆಲೆಸಲಿ. ಯಾವ ಅನುಮಾನಗಳು ಮನಸ್ಸಿನಲ್ಲಿ ತೋರಿದರೂ ನಿನಗೆ ಸರಿಯಾದ ಉತ್ತರಗಳು ಹೊಳೆಯಲಿ” ಎಂದು ಆಶೀರ್ವಾದ ಮಾಡಿದ್ದರಲ್ಲವೆ? ಅವರ ಆಶೀರ್ವಾದ ಫಲಿಸಿತ್ತು. ಪರಾಶರರು ಅಸಮಾನ ಜ್ಞಾನಿಗಳಾದರು. ತಮಗೆ ತಿಳಿದದ್ದು, ತಮಗೆ ಹೊಳೆದದ್ದು ತಮ್ಮ ನಂತರ ಹೋಗಿಬಿಡಬಾರದು, ಇತರರಿಗೆ ಸಹಾಯವಾಗಲು ಉಳಿಯಬೇಕು ಎನ್ನಿಸಿತು ಅವರಿಗೆ.

ಮಹಾದೇವನು ಪರಾಶರನಿಗೆ, 'ಯುಗಪ್ರವರ್ತಕ ಮಗ ಹುಟ್ಟುತ್ತಾನೆ' ಎಂದು ವರ ಕೊಟ್ಟ

ಮಹಾತ್ಮರ ರೀತಿಯೇ ಹೀಗೆ – ತಾವು ಕಷ್ಟಪಟ್ಟು ಕಲಿತದ್ದನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಾರೆ.

ತಮಗೆ ತಿಳಿದಿದ್ದ ಶಾಸ್ತ್ರಗಳನ್ನೆಲ್ಲ ಸರಿಯಾಗಿ ಅರ್ಥ ಮಾಡಿಕೊಂಡು ಬೇರೆ ಬೇರೆ ಭಾಗವಾಗಿ ವಿಂಗಡಿಸುವ ಮಗನೊಬ್ಬ ಬೇಕು ಎಂದು ಅವರಿಗೆ ಅನ್ನಿಸಿತು.

ಪರಾಶರರಿಗೆ ಪರಶಿವನಲ್ಲಿ ಅಪಾರ ಭಕ್ತಿ. ಒಮ್ಮೆ ಶಿವನು ಒಲಿಯುವಂತೆ ಶಿವನ ಸಹಸ್ರನಾಮಗಳಿಂದ ಅರ್ಚಿಸಿದರು. ಪರಶಿವ ಪರಾಶರರ ಭಕ್ತಿಗೆ ಒಲಿದು, “ನಿನಗೆ ಏನಾಗಬೇಕು? ನನ್ನನ್ನು ಏತಕ್ಕಾಗಿ ಸ್ತುತಿಸಿದೆ?” ಎಂದ

“ಹೇ ಮಹಾದೇವ! ನನ್ನಲ್ಲಿ ನೆಲೆಸುವಂತೆ ಎಲ್ಲ ಋಷಿಗಳೂ ವೇದ, ವೇದಾಂಗ, ನಿಗಮ, ಆಗಮ ಮತ್ತು ಸಕಲ ಶಾಸ್ತ್ರಗಳನ್ನೂ ಕರುಣಿಸಿದ್ದಾರೆ. ಹತ್ತಾರು ಜನರಲ್ಲಿ ಇದ್ದ ಶಾಸ್ತ್ರಗಳೆಲ್ಲಾ ಒಟ್ಟಾರೆ ನನ್ನಲ್ಲಿ ನೆಲೆಯಾಗಿ ನಿಂತಿವೆ. ಓ ಪರಮಾತ್ಮ! ಇವೆಲ್ಲವನ್ನೂ ಲೋಕಕಲ್ಯಾಣಕ್ಕಾಗಿ ನೀಡಬೇಕು, ಇದು ನನ್ನ ಆಸೆ. ನನ್ನ ಮನಸ್ಸಿನಲ್ಲಿರುವ ಕೆಲಸವನ್ನು ಮಾಡಬಲ್ಲ ಮಗನು ನನಗೆ ಬೇಕು. ಆದ್ದರಿಂದ ನೀನು ಒಲಿಯಬೇಕು. ಅಜನಂತೆ ಜ್ಞಾನಿ, ಮಹೇಶ್ವರನಂತೆ ತಪಸ್ವಿ, ವಿಷ್ಣುವಿನಂತೆ ಕೀರ್ತಿಶಾಲಿ, ಸೂರ್ಯನಂತೆ ಕಾಂತಿಮಯಿ, ಚಂದ್ರನಂತೆ ಶಾಂತನು, ಇಂದ್ರನ ಸಖನೂ ಆಗಿ ಈ ನನ್ನಲ್ಲಿರುವ ಎಲ್ಲ ಶಾಸ್ತ್ರಗಳನ್ನು ವಿಂಗಡಿಸಬಲ್ಲ ಪುತ್ರನನ್ನು ಅನುಗ್ರಹಿಸು” ಎಂದು ಪರಾಶರರು ಪ್ರಾರ್ಥಿಸಿದರು.

ಮಹಾದೇವನು, “ಹಾಗೆಯೇ ಆಗಲಿ, ನೀನು ಇಷ್ಟಪಟ್ಟಂತೆ ಯುಗ ಪ್ರವರ್ತಕ ಆದ ಒಬ್ಬ ಮಗ ಹುಟ್ಟುತ್ತಾನೆ. ನಿನ್ನ ಎಲ್ಲ ಆಸೆಗಳೂ ಅವನಿಂದ ಕೈಗೂಡುವುವು. ಅಷ್ಟೇ ಅಲ್ಲ, ಅವನು ಲೋಕಪೂಜ್ಯನಾಗುತ್ತಾನೆ” ಎಂದು ಅನುಗ್ರಹಿಸಿದ.

ಮಹಾಭಾರತ ಬರೆದ ವ್ಯಾಸ

ಶಿವನ ಅನುಗ್ರಹದಿಂದ ಪರಾಶರರು ಸಂತಸಪಟ್ಟರು. ಕೂಡಲೇ ತೀರ್ಥಯಾತ್ರೆಗೆ ಹೊರಟರು. ಗಂಗೆ, ಯಮುನೆ, ಸಿಂಧು, ಸರಸ್ವತಿ ನದಿಗಳಲ್ಲಿ ಮಿಂದರು. ಪವಿತ್ರ ಸ್ಥಳಗಳನ್ನು ಸಂದರ್ಶಿಸಿದ್ದು ಆಯಿತು. ಎಲ್ಲವನ್ನು ಮುಗಿಸಿ ಬರುವಾಗ ಯಮುನೆಯ ದಡದಲ್ಲಿ ಸತ್ಯವತಿ ಎಂಬ ಕನ್ಯೆಯನ್ನು ಕಂಡರು. ಅವಳ ಜೊತೆಗೆ ಸ್ವಲ್ಪ ಕಾಲ ಇದ್ದರು.

ಆನಂತರ ಈ ಸತ್ಯವತಿ ಗಂಡು ಕೂಸಿಗೆ ತಾಯಿಯಾದಳು! ಪರಾಶರ ವಂಶದ ಕುಡಿ ಅದು. ಆ ಮಗುವಿಗೆ ‘ವ್ಯಾಸ’ ಎಂದು ಹೆಸರಿಟ್ಟರು.

ಅವರು ಯಾವ ವ್ಯಾಸ ಗೊತ್ತೆ?

ಮಹಾಭಾರತದ ಹೆಸರನ್ನು ಕೇಳಿದ್ದೀರ? ಅದನ್ನು ಬರೆದ ಮಹಾಋಷಿ ಅವರೇ.

ಓ, ಮಹಾಭಾರತದ ಕಥೆ ಅಮ್ಮ ಹೇಳಿದ್ದಾಳೆ. ಎಷ್ಟು ದಿನ ಬೇಕಾಯಿತು ಗೊತ್ತಾ ತಾತ, ಕಥೆ ಹೇಳೋದಕ್ಕೆ? ತುಂಬ ಚೆನ್ನಾಗಿತ್ತು. ಪುಟ್ಟ ಮಂಜುಳ ಎಂದಳು.

ಶ್ರೀನಿವಾಸ ರಾಮಾನುಜದಾಸರು ಹೇಳಿದರು : “ಹೌದು ಮಗೂ, ಮಹಾಭಾರತದ ಕಥೆ ಚಿಕ್ಕವರಿಗೂ ಕೇಳೋದಕ್ಕೆ ಚೆನ್ನಾಗಿರುತ್ತೆ. ಅದನ್ನು ಕೇಳಿ ಯೋಚನೆ ಮಾಡಿದಷ್ಟೂ ಹೊಸ ಹೊಸ ಅರ್ಥ ಹೊಳೆಯುತ್ತೆ, ತಿಳಿವಳಿಕೆ ಬರತ್ತೆ. ನೋಡು, ನನಗೆ ಇಷ್ಟು ವಯಸ್ಸಾಯ್ತು, ಇನ್ನೂ ಅದರಲ್ಲಿ ನೂರರಲ್ಲಿ ಒಂದರಷ್ಟು ತಿಳಿದುಕೊಂಡಿದ್ದೇನೋ ಇಲ್ಲವೊ!

ಎರಡೇ ಹೆಸರುಗಳನ್ನು ಇಡಿ

ರಾಮಾನುಜಾಚಾರ್ಯರ ಹೆಸರು ಕೇಳಿದ್ದೀರಲ್ಲ, ಬಹಳ ದೊಡ್ಡವರು ಅವರು. ಅವರು ಒಂದು ಸಲ ಹೇಳಿದರು – ಭಾರತದಲ್ಲಿ ಹುಟ್ಟುವ ಗಂಡುಮಕ್ಕಳಿಗೆಲ್ಲ ಎರಡರಲ್ಲಿ ಒಂದು ಹೆಸರು ಇಡಿ – ಪರಾಶರ ಅಂತ ಅಥವಾ ವ್ಯಾಸ ಅಂತ. ಅಷ್ಟು ದೊಡ್ಡವರು ಪರಾಶರ. ಅವರ ಮಗ ವ್ಯಾಸರು ಮಹಾಭಾರತವನ್ನು ಬರೆದಿಟ್ಟಿದ್ದು ಮಾತ್ರ ಅಲ್ಲ, ವೇದಗಳನ್ನೆಲ್ಲ ಅರ್ಥಮಾಡಿಕೊಂಡು ಸರಿಯಾಗಿ ಭಾಗಗಳನ್ನಾಗಿ ಮಾಡಿ, ಮುಂದೆ ಓದುವವರಿಗೆ ದೊಡ್ಡ ಸಹಾಯ ಮಾಡಿದರು.”

ಶ್ರೀನಿವಾಸ ರಾಮಾನುಜದಾಸರು ಸುಮ್ಮನಾದರು. ವಸಂತ ಕೇಳಿದಳು : “ಕಥೆ ಮುಗಿದುಹೋಯಿತೆ, ತಾತ?”

“ಆಯಿತಮ್ಮ.”

“ಎಷ್ಟು ಚೆನ್ನಾಗಿತ್ತು ತಾತ? ಮತ್ತೆ ಎಲ್ಲ ಜ್ಞಾಪಿಸಿಕೊಳ್ಳಬೇಕು ಅನ್ಸತ್ತೆ.”

“ಜ್ಞಾಪಿಸಿಕೊಳ್ಳಬೇಕಮ್ಮ. ಜ್ಞಾಪಿಸಿಕೊಂಡು ಯೋಚಿಸಬೇಕು. ಸಾವಿರಾರು ವರ್ಷಗಳ ಕೆಳಗೆ, ಮನುಷ್ಯ ಹೇಗೆ ಬದುಕಬೇಕು, ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಅಂತ ಯೋಚಿಸೋದಕ್ಕೆ ದಾರಿ ತೋರಿಸಿದರಲ್ಲ, ಅವರನ್ನು ಸ್ಮರಿಸಬೇಕು.”