“ಹಸ್ತಪ್ರತಿ ಸಂಗ್ರಹ, ಅವುಗಳ ಸೂಚೀರಚನೆ ಮೊದಲಾದವುಗಳನ್ನೊಳಗೊಂಡ Manuscriptology ಎಂಬ ಹೊಸ ಶಾಸ್ತ್ರವೇ ಬೆಳೆದು ಬರಬೇಕಾಗಿದೆ.”[1]

೧೯೭೪ರಂದು ಮಂಡ್ಯದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ “ಸಾಹಿತ್ಯಶಾಸ್ತ್ರ ಗೋಷ್ಠಿ”ಯ ಅಧ್ಯಕ್ಷಸ್ಥಾನದಿಂದ ಮೇಲಿನ ವಾಕ್ಯವನ್ನು ವ್ಯಕ್ತಪಡಿಸುತ್ತ ಡಾ. ಆರ್‌. ಸಿ. ಹಿರೇಮಠ ಅವರು ಈ ಶಾಸ್ತ್ರಸೃಷ್ಟಿಯ ಸೂಚನೆ ನೀಡುದುದಲ್ಲದೆ, “Manuscriptology” ಎಂಬ ಪದವನ್ನೂ ಪ್ರಥಮಬಾರಿಗೆ ಕಮ್ಮಟಿಸಿಕೊಟ್ಟರೆಂದು ತೋರುತ್ತದೆ. ಇದಕ್ಕೆ ಮೊದಲು ಮತ್ತು ತರುವಾಯ ಹಸ್ತಪ್ರತಿಗಳನ್ನು ಕುರಿತು ೪-೬ ಲೇಖನಗಳು ಬಂದಿದ್ದರೂ ಡಾ. ಡಿ. ಎಲ್‌. ಎನ್‌. ಅವರ “ಕನ್ನಡ ಗ್ರಂಥಸಂಪಾದನೆ” (೧೯೬೮) ಮತ್ತು ನನ್ನ “ಕನ್ನಡ ಗ್ರಂಥ ಸಂಪಾದನಶಾಸ್ತ್ರ” (೧೯೭೨)ಗಳು ಈ ಶಾಸ್ತ್ರದ ಆಳ-ವಿಸ್ತಾರಗಳನ್ನು ಗುರುತಿಸಿಕೊಟ್ಟವು. ಶ್ರೀ. ಎಚ್‌. ದೇವಿರಪ್ಪನವರ “ಕನ್ನಡ ಹಸ್ತಪ್ರತಿಗಳ ಇತಿಹಾಸ” (೧೯೭೭), ಶ್ರೀ ಬಿ. ಎಸ್‌. ಸಣ್ಣಯ್ಯನವರ “ಗ್ರಂಥರಕ್ಷಣೆ” (೧೯೭೧)ಗಳು ಈ ಶಾಸ್ತ್ರವನ್ನು ಗ್ರಂಥಸಂಪಾದನ ಶಾಸ್ತ್ರದಿಂದ ಬಿಡಿಸಿ ತೋರಿಸುವ ಪ್ರಯತ್ನ ಮಾಡಿದವು. ಹೆಚ್ಚಿನದಾಗಿ ವ್ಹಿ. ರಾಘುವನ್‌,[2] ಡಾ. ಕೆ. ಟಿ. ಪಾಂಡುರಂಗಿ,[3] ಶ್ರೀ ಸೀತಾರಾಮ ಜಾಗೀರದಾರ್‌,[4] ಶ್ರೀ ಎಚ್‌. ಎಲ್‌. ಎನ್‌. ಭಾರತಿ[5] ಅವರ ಕೃತಿಗಳೂ ಬೆಳಕು ಕಂಡವು. ಹೀಗಾಗಿ ಇಂದು ಹಸ್ತಪ್ರತಿಶಾಸ್ತ್ರವು ಪರೋಕ್ಷವಾಗಿ ರೂಪುಗೊಳ್ಳುತ್ತಲಿವೆ; ಪ್ರತ್ಯಕ್ಷ ಶಾಸ್ತ್ರಸಂಯೋಜನೆ ಮಾತ್ರ ಆಗಬೇಕಾಗಿದೆ. ಈ ಸಂಯೋಜನೆಯ ನೀಲನಕ್ಷೆ (Blue Print)ಯಾಗಬೇಕಾದ ಪ್ರಸ್ತುತ ಲೇಖನ, ಹಸ್ತಪ್ರತಿಶಾಸ್ತ್ರದ ಸಾರಲೇಖನ (Synopsis)ವೂ ಆಗಬೇಕಾಗುತ್ತದೆ.

ಪ್ರಾಚೀನ ಕಾಲದಿಂದಲೂ ಕೈಯಿಂದ ಪೂರೈಸಲಾಗುತ್ತಿದ್ದ ಗ್ರಂಥರಚನೆ, ಇತ್ತೀಚಿನ ದಿನಗಳಲ್ಲಿ ಧ್ವನಿಮುದ್ರಣ, ಛಾಯಾಚಿತ್ರಣಗಳಿಂದ ನೆರವೇರುತ್ತಲಿದ್ದರೂ ಯಂತ್ರಮುದ್ರಣವಾಗಿರುವುದೇ ವಿಶೇಷ. ಹೀಗಾಗಿ ಇಂದು ಪ್ರಾಥಮಿಕ ಹಂತದಲ್ಲಿರುವ ಧ್ವನಿಮುದ್ರಣ, ಛಾಯಾಚಿತ್ರಣ ಗ್ರಂಥಗಳನ್ನು ಬಿಟ್ಟರೆ ಯಾವುದೇ ಭಾಷೆಯ ಗ್ರಂಥರಾಶಿಯನ್ನು ಪ್ರಧಾನವಾಗಿ ‘ಪ್ರಾಚೀನ ಲಿಖಿತಗ್ರಂಥ’ ‘ಆಧುನಿಕ ಮುದ್ರಿತ ಗ್ರಂಥ’ವೆಂದು ವರ್ಗೀಕರಿಸಬೇಕಾಗುತ್ತದೆ. ಈ ಎರಡೂ ಬಗೆಯ ಗ್ರಂಥಗಳ ಉತ್ಪಾದನೆ, ರಕ್ಷಣೆ, ಉಪಯೋಗ ಇತ್ಯಾದಿಗಳನ್ನು ಕುರಿತುದೇ ‘ಗ್ರಂಥಾಲಯ ಶಾಸ್ತ್ರ’ (Library Science). ಆದರೆ ಇಂದು ಆಧುನಿಕ ಮುದ್ರಿತ ಗ್ರಂಥಗಳಿಗೆ ಮಾತ್ರ ಸೀಮಿತವಾಗಿರುವ ‘ಲೈಬ್ರರಿ ಸೈನ್ಸ್‌’ ಎನ್ನುವುದು ಪ್ರಾಚೀನ ಲಿಖಿತ ಗ್ರಂಥಗಳನ್ನು ಒಳಗೊಳ್ಳಬೇಕು ಇಲ್ಲವೆ ತನ್ನ ಹೆಸರನ್ನು ಸೀಮಿತಗೊಳಿಸಿಕೊಳ್ಳಬೇಕು ಎಂಬ ಸೂಚನೆ ನೀಡುವುದು ಅವಶ್ಯವಿದೆ.

ಇಂದು ಸರ್ವತೋಮುಖವಾಗಿ ಬೆಳೆದಿರುವ ಮುದ್ರಿತ ಗ್ರಂಥಾಲಯಶಾಸ್ತ್ರ (Library Science)ದ ಮಾದರಿಯಲ್ಲಿ ಲಿಖಿತ ಗ್ರಂಥಾಲಯಶಾಸ್ತ್ರ (Manuscriptology) ತನ್ನ ರೂಪ ಕಟ್ಟಿಕೊಳ್ಳಬೇಕಾದುದು ಸಹಜ. ಆದರೆ ಮುದ್ರಿತ ಗ್ರಂಥಾಲಯಶಾಸ್ತ್ರ ಬಹಳಷ್ಟು ಸಲ “ಆಲಯ”ದ ಮೇಲೆ ಒತ್ತುಕೊಟ್ಟು “ಗ್ರಂಥ”ವನ್ನು ಮರೆಯುತ್ತ ನಡೆದಿದೆ. ಇದರಿಂದಾಗಿ ಈ ಕ್ಷೇತ್ರ ‘Academic’ ಅಂಶವನ್ನು ಕೈಬಿಡುತ್ತ ಕೇವಲ ಗ್ರಂಥಗಳ ವ್ಯವಸ್ಥೆ, ವಿತರಣೆಗಳೆಂಬ ‘Technical’ ಅಂಶಗಳ ಅಂಚನ್ನು ತಲುಪುತ್ತಲಿದೆ. ಆದುದರಿಂದ ಹಸ್ತಪ್ರತಿಶಾಸ್ತ್ರಕ್ಕೆ ಇಂದಿನ ಲೈಬ್ರರಿ ಸೈನ್ಸ್‌ನ್ನು ಮಾದರಿಯಾಗಿಟ್ಟುಕೊಳ್ಳುವಲ್ಲಿ ನಾವು ತುಂಬ ಎಚ್ಚರ ವಹಿಸಬೇಕಾಗಿದೆ.

ಹಸ್ತಪ್ರತಿಶಾಸ್ತ್ರ (Manuscriptology) ಮತ್ತು ಗ್ರಂಥಸಂಪಾದನಶಾಸ್ತ್ರ (Textual Criticism)ಗಳು ಒಂದೇ ಭೂಮಿಕೆಯಲ್ಲಿ ಕವಲೊಡೆಯುವ ಜ್ಞಾನಶಾಖೆಗಳು. ಕೆಲವು ಅಂಶಗಳಲ್ಲಿ ಈ ಎರಡೂ ಸಮಾನವಾಗಿವೆ. ಹೀಗಾಗಿ ಈಗಾಗಲೇ ಶಾಸ್ತ್ರರೂಪ ಧರಿಸಿನಿಂತಿರುವ ಗ್ರಂಥಸಂಪಾದನಶಾಸ್ತ್ರದಿಂದ, ಇನ್ನು ಮೇಲೆ ರೂಪುಗೊಳ್ಳಬೇಕಾಗಿರುವ ಹಸ್ತಪ್ರತಿಶಾಸ್ತ್ರಕ್ಕೆ ಕೆಲಮಟ್ಟಿಗೆ ಸಹಾಯವಾಗಬಹುದಾದರೂ ಅದರ ನೆರವು ದಾಳಿಯಾಗದಂತೆ ನೋಡಿಕೊಳ್ಳುವುದೂ ಅವಶ್ಯವಾಗಿದೆ.

ಹೀಗೆ ‘ಲೈಬ್ರರಿ ಸೈನ್ಸ್‌ನ’ ‘ಟೆಕ್ಚ್ಯುಅಲ್‌ಕ್ರಿಟಿಸಿಝಮ್‌’ ಎಂಬ ಸಹೋದರಶಾಸ್ತ್ರಗಳ ಆದರ್ಶ ಆಶ್ರಯಗಳಲ್ಲಿ ಮ್ಯಾನ್ಯುಸ್ಕ್ರಿಪ್ಟಾಲಜಿ ಎಚ್ಚರಿಕೆಯಿಂದ ಆಕಾರ ಪಡೆಯಬೇಕಾಗಿದೆ.

* * *

ವಿಜ್ಞಾನದ ಕವಲುಗಳಾದ ಆತ್ಮವಿಜ್ಞಾನ, ಪ್ರಕೃತಿವಿಜ್ಞಾನ, ಸಮಾಜವಿಜ್ಞಾನಗಳಲ್ಲಿ ಹಸ್ತಪ್ರತಿಶಾಸ್ತ್ರ ಸಮಾಜವಿಜ್ಞಾನಕ್ಕೆ ಸೇರುತ್ತಿದ್ದು, ಅದರಲ್ಲಿಯೂ ಬೌದ್ಧಿಕಜ್ಞಾನ ಬೌದ್ಧಿಕಶ್ರಮಗಳಿಗಿಂತ ವ್ಯಾವಹಾರಿಕಜ್ಞಾನ-ದೈಹಿಕಶ್ರಮ ಪ್ರಧಾನವಾದ ಕ್ಷೇತ್ರವಾಗಿರುವುದರಿಂದ, ಒಟ್ಟು ಈ ಶಾಸ್ತ್ರಕ್ಕೆ ಲೈಬ್ರರಿ ಸೈನ್ಸ್‌ದಂತೆ ಆಳಕ್ಕಿಂತ ಅಗಲ ಜಾಸ್ತಿ.

ಪತ್ರಿಕಾಸಂಪಾದನೆ, ಕಥೆ-ಕವನ ಸಂಪಾದನೆಗಳನ್ನು ಹೊರತುಪಡಿಸಿಕೊಂಡ ಗ್ರಂಥಸಂಪಾದನಶಾಸ್ತ್ರದಂತೆ, ಪ್ರಾಚೀನ ಕಾಗದಪತ್ರ, ಅಚ್ಚಿಗಾಗಿ ಸಿದ್ಧಪಡಿಸುವ ಆಧುನಿಕ ಹಸ್ತಪ್ರತಿ (Press Copy) ಇತ್ಯಾದಿಗಳನ್ನು ಹೊರತುಪಡಿಸಿಕೊಂಡು ಪ್ರಾಚೀನ (ಮುದ್ರಣ ಯಂತ್ರಾಗಮನ ಪೂರ್ವಕಾಲೀನ) ಹಸ್ತಪ್ರತಿಗಳಿಗೆ ಮಾತ್ರ ಈ ಶಾಸ್ತ್ರವನ್ನು ನಾವು ಸೀಮಿತಗೊಳಿಸಿಕೊಳ್ಳಬೇಕು.

* * *

ಯಾವುದೇ ವಿಷಯವನ್ನು ಕ್ರಮಬದ್ಧವಾಗಿ ಲಕ್ಷಣಿಸುವುದೇ ಶಾಸ್ತ್ರವೆನಿಸುತ್ತದೆ. ಈ ಕ್ರಮಬದ್ಧತೆಯ ದೃಷ್ಟಿಯಿಂದ ಪ್ರಸ್ತುತ ಶಾಸ್ತ್ರವನ್ನು ೧. ಹಸ್ತಪ್ರತಿ ನಿರ್ಮಾಣ ಪೂರ್ವದ ಹಂತಗಳು. ೧. ಹಸ್ತಪ್ರತಿ ನಿರ್ಮಾಣೋತ್ತರದ ಹಂತಗಳು ಎಂದು ಬಿಚ್ಚಿಕೊಳ್ಳುವುದು ಲೇಸು. ಇಲ್ಲಿಯ ಕ್ರಿಯೆಗಳನ್ನು ಗಮನಿಸಿ ಈ ಎರಡೂ ಹಂತಗಳನ್ನು ಕ್ರಮವಾಗಿ ಹಸ್ತಪ್ರತಿಗಳ ೧. ಸಂಯೋಜನಮುಖ, ೨. ಪ್ರಯೋಜನಮುಖ ಎಂದು ಹೆಸರಿಟ್ಟು ಕರೆಯಬಹುದು.

. ಹಸ್ತಪ್ರತಿ ಸಂಯೋಜನಮುಖ

ಈ ವಿಭಾಗ, ಹಸ್ತಪ್ರತಿಯೆಂದರೇನು? ಎಂಬುದನ್ನು ಮೊದಲುಗೊಂಡು, ಹಸ್ತಪ್ರತಿ ನಿರ್ಮಾಣಾಂತ್ಯದ ಎಲ್ಲ ಕ್ರಿಯಾಕಲಾಪಗಳನ್ನು ಒಳಗೊಳ್ಳುತ್ತದೆ. ಅಂದರೆ ಹಸ್ತಪ್ರತಿಯ ಉಗಮ-ವಿಕಾಸ, ಲೇಖನಸಾಮಗ್ರಿ-ಲಿಪಿಕಾರ, ಭಾಷೆ-ಲಿಪಿ-ಚಿತ್ರ, ಸ್ಖಾಲಿತ್ಯದ ಕಾರಣ ಸ್ವರೂಪ, ಹಸ್ತಪ್ರತಿಯ ಸ್ವರೂಪ, ಪ್ರಕಾರ ಇತ್ಯಾದಿ ವಿಷಯ ವಿವೇಚನೆಯ ಕ್ಷೇತ್ರವಿದು. ಇವು ಗ್ರಂಥಸಂಪಾದನಶಾಸ್ತ್ರದ ಪೂರ್ವಾರ್ಧದಲ್ಲಿ ಬರುವ ವಿಷಯಗಳೇ ಆಗಿರುವುದರಿಂದ, ಈಗ ವಿವೇಚಿಸಲಿರುವ ಹಸ್ತಪ್ರತಿ ಸಂಯೋಜನಮುಖ ಇಡಿಯಾಗಿ ಗ್ರಂಥಸಂಪಾದನಶಾಸ್ತ್ರದ ಒಂದು ಭಾಗವೆಂದೇ ಹೇಳಬೇಕು.

ಹಸ್ತಪ್ರತಿಯ ಉಗಮವಿಕಾಸ: ತಲೆಮಾರಿನಿಂದ ತಲೆಮಾರಿಗೆ ಸಾಗಿಬಂದ, ಭೌತಿಕ ಮತ್ತು ಸಾಂಸ್ಕೃತಿಕ ಜ್ಞಾನಸಂಪತ್ತು ಒಂದು ಕಾಲಕ್ಕೆ ಶ್ರುತಿಪಾತಳಿಯಿಂದ ಲಿಪಿಮಾಧ್ಯಮದ ಮೂಲಕ ಕೃತಿಪಾತಳಿಗೆ ಇಳಿದುಬಂದಿತ್ತು. ಮುಂದೆ ಈ ಕೃತಿಸಾಹಿತ್ಯ ಅಲ್ಪಕಾಲದಲ್ಲಿ ಅಳಿದುಹೋಗುವ, ಬಹುಕಾಲ ಉಳಿದು ನಿಲ್ಲುವ ಕವಲುಗಳಲ್ಲಿ ಬೆಳೆದುಬಂದಿದೆ. ಬಹುಕಾಲ ಉಳಿದು ನಿಲ್ಲುವ ಶಿಲೆ, ಸುಟ್ಟ ಮಣ್ಣು, ಲೋಹಪಟಗಳಂಥ ಭಾರವಾದ ವಸ್ತುವಲ್ಲದ, ಅಲ್ಪಕಾಲದಲ್ಲಿ ಅಳಿದುಹೋಗುವ ವಸ್ತ್ರಪಟ, ವೃಕ್ಷಪತ್ರ, ಕಾಗದಗಳಂಥ ಹಗುರು ವಸ್ತುಗಳ ಮೇಲಿನ ಕೈಬರಹಗಳು ಮಾತ್ರ ಹಸ್ತಪ್ರತಿ ವರ್ಗದಲ್ಲಿ ಸೇರುತ್ತವೆ.

ಜ್ಞಾನದ ಅವಶ್ಯಕತೆ ಹವ್ಯಾಸಾಗಿಯೂ ಬೆಳೆಯುವಲ್ಲಿ ಅದರ ವಾಹಕಗಳಾದ ಹಸ್ತಪ್ರತಿಗಳನ್ನು ಸ್ವ-ಅನ್ಯ ಪ್ರಯೋಜನಾರ್ಥ ಬೆಳೆಸಿಕೊಂಡುಬಂದವರು ಸಮಾಜದ ನೇತಾರರಾದ ರಾಜರು \ ಆಚಾರ್ಯರು \ ವಿದ್ವಾಂಸರು. ರಾಜನ ‘ಸಪ್ತಸಂತಾನ’ಗಳಲ್ಲಿ ಗ್ರಂಥನಿರ್ಮಾಣವೂ ಸೇರಿದ ಅಪೂರ್ವ ಪ್ರಜ್ಞೆಯಿಂದಾಗಿ ಅರಮನೆಯ ಹಸ್ತಪ್ರತಿ ಭಂಡಾರಗಳೂ, ಆಚಾರ್ಯರ ಸ್ವಾಧ್ಯಾಯ ಪ್ರವಚನಗಳಿಗಾಗಿ ಮಠಮಂದಿರಗಳ ಧಾರ್ಮಿಕ ಹಸ್ತಪ್ರತಿ ಭಂಡಾರಗಳೂ, ಅಧ್ಯಯನ ಹವ್ಯಾಸ ಕಾರಣವಾಗಿ ವೈಯಕ್ತಿಕ ಗ್ರಂಥಭಂಡಾರಗಳೂ ನಮ್ಮ ದೇಶದಲ್ಲಿ ಸಂವರ್ಧಿಸಿದವು. ಗ್ರಂಥದಾನದಥ ಪುಣ್ಯಕಾರ್ಯ ನೆವದಿಂದ ಹಸ್ತಪ್ರತಿಗಳು ಪೂಜಾಯೋಗ್ಯವಾದುದು ಅವುಗಳ ಅಲೌಕಿಕ ಮಹತ್ವವನ್ನು, ಕುಮಾರವ್ಯಾಸ ತನ್ನ ಕೈಯಾರೆ ಬರೆದ ಮಹಾಭಾರತ ಪ್ರತಿಯನ್ನು ನೆರೆಹಳ್ಳಿಯ ಶ್ರೀಮಂತರಲ್ಲಿ ಒತ್ತೆಯಿಟ್ಟಿದ್ದನೆಂಬಂತಹ ಹೇಳಿಕೆಗಳು ಅವುಗಳ ಲೌಕಿಕ ಮಹತ್ವವನ್ನು ಸ್ಪಷ್ಟಪಡಿಸುತ್ತವೆ. ಈ ಕಾರಣದಿಂದಾಗಿಯೇ ಅಣ್ಣತಮ್ಮಂದಿರು ಬೇರೆಯಾಗುವ ಪಿತ್ರಾರ್ಜಿತ ಆಸ್ತಿಯೊಂದಿಗೆ ಹಸ್ತಪ್ರತಿಗಳನ್ನು ಹಂಚಿಕೊಳ್ಳುತ್ತಿದ್ದರೆಂದು ತೋರುತ್ತದೆ. ಇಂಥ ಎಲ್ಲ ವಿಷಯ ಈ ಪ್ರಕರಣದಲ್ಲಿ ಅಡಕಗೊಳ್ಳುತ್ತದೆ.

. ಹಸ್ತಪ್ರತಿಯ ಲೇಖನ ಸಾಮಗ್ರಿಲಿಪಿಕಾರ: ಲೇಖನ ಸಾಮಗ್ರಿ ಆಧಾರ, ಅಧೇಯ ಮತ್ತು ಬಣ್ಣ ಎಂದು ಮೂರು ವಿಧವಾಗಿದೆ. ಆಧಾರಸಾಮಗ್ರಿಯು ಲೋಹ, ಲೋಹೇತರವೆಂದು ಎರಡು ವಿಧ. ಲೋಹದ ಫಲಕ ಪತ್ರಗಳ ಮತ್ತು ಲೋಹೇತರ ಕಲ್ಲು, ಮಣ್ಣುಗಳ ಸ್ಥೂಲಪರಿಚಯ ಮಾಡಿಕೊಡುತ್ತ ಇತರ ತಾಳಪತ್ರ, ಭೂರ್ಜಪತ್ರ, ಕಾಗದ, ಕಡತ ಇತ್ಯಾದಿಗಳನ್ನು ಸಿದ್ಧಗೊಳಿಸುವ ವಿಧಾನ, ಅವುಗಳ ಬಳಕೆಯ ಇತಿಹಾಸ ಇತ್ಯಾದಿಗಳ ಚರ್ಚೆ ಇಲ್ಲಿ ಅವಶ್ಯ. ಅಧೇಯವೆನಿಸಿದ ಲೆಕ್ಕಣಿಕೆಗಳ ಪ್ರಕಾರ-ಸ್ವರೂಪ, ಬಣ್ಣಗಳ ಪ್ರಕಾರ, ಸಿದ್ಧಪಡಿಸುವ ರೀತಿಗಳ ವಿವರಣೆಗಳನ್ನಲ್ಲದೆ ಬರೆಯುವ ವಿಧಾನಗಳನ್ನೂ ಇಲ್ಲಿ ಸ್ಪಷ್ಟಪಡಿಸಬೇಕು.

ಹಸ್ತಪ್ರತಿಗಳ ಸಂತಾನವನ್ನು ಬೆಳೆಸಿದವರು ನಮ್ಮ ಲಿಪಿಕಾರರು. ಇವರಲ್ಲಿ ಹವ್ಯಾಸಿ, ನಿಯುಕ್ತ, ವೃತ್ತಿ ಎಂದು ಮೂರು ವಿಧ. ಇವರ ಮನೋಧರ್ಮ, ಅಭಿರುಚಿ, ಲಿಪಿಜ್ಞಾನ, ಭಾಷಾಪ್ರಜ್ಞೆಗಳ ವಿವೇಚನೆ ಈ ಭಾಗದ ವಸ್ತು. ಅನೇಕರು ಕೂಡಿ ಒಂದು ಹಸ್ತಪ್ರತಿಯನ್ನು, ಒಬ್ಬನೇ ಅನೇಕ ಹಸ್ತಪ್ರತಿಗಳನ್ನು ಸಿದ್ಧಗೊಳಿಸಿದ ಸಂಗತಿ, ಈ ಕಾರ್ಯದಲ್ಲಿ ಅವರು ತೆಗೆದುಕೊಂಡ ಕಾಲಾವಧಿ ಮೊದಲಾದ ವಿಷಯಗಳು ತಮಗೆ ಕುತೂಹಲ ಹುಟ್ಟಿಸುತ್ತವೆ. ಇವರನ್ನು ಪ್ರಾಮಾಣಿಕರು, ಹೊಣೆಗೇಡಿಗಳು, ಕಿಡಿಗೇಡಿಗಳು ಎಂದು ಗುರುತಿಸಬಹುದಾಗಿದೆ. ಈ ಸಂದರ್ಭದಲ್ಲಿಯೇ ಹಸ್ತಪ್ರತಿಗಳ ಆದಿ ಮತ್ತು ಅಂತ್ಯಗಳಲ್ಲಿ ಬರುವ ಪ್ರಶಸ್ತಿಗಳ ಮಹತ್ವವನ್ನು ವಿವರಿಸಬೇಕು. ಈ ಲಿಪಿಕಾರರು ಮತ್ತು ಹಸ್ತಪ್ರತಿ ಒಡೆಯರು ಒಂದು ಹಸ್ತಪ್ರತಿಯನ್ನು ಬರೆಯುವಲ್ಲಿ, ಬರೆಯಿಸುವಲ್ಲಿ ಇಟ್ಟುಕೊಂಡ ಅನನ್ಯಭಕ್ತಿ, ವಹಿಸಿದ ಶ್ರಮ, ವ್ಯಯಿಸಿದ ದ್ರವ್ಯ ಇತ್ಯಾದಿಗಳು ಉಲ್ಲೇಖನೀಯವಾಗಿರುತ್ತವೆ. ಇವರು ಕಾರಣವಾಗಿ ಕನ್ನಡದಲ್ಲಿ ೨೫ ಸಾವಿರ ಕಟ್ಟುಗಳು, ಪ್ರತಿಯೊಂದರಲ್ಲಿ ಸರಾಸರಿ ೪ರಂತೆ ಒಂದು ಲಕ್ಷ ಪ್ರತಿಗಳು ನಮಗೆ ಉಳಿದು ಬಂದಿವೆ. ಭಾರತದಲ್ಲಿ ೫ ಲಕ್ಷ, ಭಾರತದ ಹೊರಗೆ ೧ ಲಕ್ಷ, ಹೀಗೆ ೬ ಲಕ್ಷ ಸಂಸ್ಕೃತ ಹಸ್ತಪ್ರತಿಗಳಿವೆಯೆಂದು ಅಂದಾಜು ಮಾಡಿರುವುದನ್ನು ಇಲ್ಲಿ ನೆನೆಯಬೇಕು.[6]

. ಹಸ್ತಪ್ರತಿಯ ಭಾಷೆಲಿಪಿಚಿತ್ರ: ಹಸ್ತಪ್ರತಿಗಳಿಗೆ ಬಳಸುವ ಭಾಷೆ ಲಿಪಿಗಳ ವಿವೇಚನೆಯೂ ಈ ಶಾಸ್ತ್ರದ ಒಂದು ಮುಖ್ಯ ಭಾಗ. ಕೆಲವೊಮ್ಮೆ ಯಾವುದೇ ಭಾಷೆಗೆ ಯಾವುದೇ ಲಿಪಯನ್ನು ಬಳಸಬಹುದಾದರೂ ಕನ್ನಡಭಾಷೆಗೆ ಕನ್ನಡ ಲಿಪಿ, ಸಂಸ್ಕೃತ ಪ್ರಾಕೃತ ಭಾಷೆಗಳಿಗೆ ದೇವನಾಗರಿ ಲಿಪಿಗಳನ್ನು ಬಳಸಿದುದೇ ಹೆಚ್ಚು. ಸಂಸ್ಕೃತ ಭಾಷೆಗೆ ಕನ್ನಡ ಲಿಪಿ ಬಳಸಿದ ಉದಾಹರಣೆಗಳೂ ಇವೆ. ಹೀಗಿದ್ದೂ ಉತ್ತರ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಿಗಳಾರಿ (ತಮಿಳು/ಆರ್ಯಲಿಪಿಗಳ ಸಂಗಮವಾದ) ಲಿಪಿಯು, ಉತ್ತರ ಕರ್ನಾಟಕದಲ್ಲಿ ಮೋಡಿಲಿಪಿಯ ಹಸ್ತಪ್ರತಿಗಳು ಸಿಗುತ್ತವೆ. ಕೊಡೇಕಲ್ಲ ಬಸವಣ್ಣ ಸಂಪ್ರದಾಯದ ಮಠಗಳಲ್ಲಿ ೧೨ ವಿಧದ ವಿಶಿಷ್ಟಲಿಪಿ ಬಳಸಿದ ಹಸ್ತಪ್ರತಿಗಳಿವೆ. ಬಿಜ್ಜಳನ ಆಸ್ಥಾನದಲ್ಲಿ ಬಿದ್ದ ತಾಮ್ರಪಟದ ಲಿಪಿಯಿದೆಯೆಂದು ಅಲ್ಲಿಯ ಮಠಾಧಿಪತಿಗಳು ಹೇಳುತ್ತಾರೆ. ಈ ಮತ್ತು ಇಂಥ ಅನೇಕ ಪ್ರಾಚೀನ ಲಿಪಿಗಳ ಶೋಧ ನಡೆಸಿ ವಿವರಿಸಬೇಕಾಗಿದೆ. ಲಿಪಿಯು ಕಾಲ, ದೇಶಗಳಿಗೆ ತಕ್ಕಂತೆ ವ್ಯತ್ಯಾಸವಾಗುತ್ತಿದ್ದು, ಸಾಲದುದಕ್ಕೆ ಒಂದೇ ಕಾಲದ ಒಂದೇ ಪ್ರದೇಶದ ವ್ಯಕ್ತಿಗಳ ಲಿಪಿಯಲ್ಲಿ ಶೈಲಿವೈಶಿಷ್ಟ್ಯವಿರುತ್ತದೆ. “ಬಿಂದುವಿನೊಂದು ಶೋಭೆ ತಲೆಕಟ್ಟಿನ ಪೊರ್ಕುಳ ಚೆಲ್ವು…” ಎಂದು ಹೇಳಿಕೊಂಡ ನವಿಲ್ಗುಂದದ ಮಾದಿರಾಜನ ಹೇಳಿಕೆ ಸುಪ್ರಸಿದ್ಧ. “ಸಣ್ಣಬರಹದ ಗುರುಪಾದದೆವರು” ಇತ್ಯಾದಿ ಹೇಳಿಕೆಗಳು ವ್ಯಕ್ತಿವಿಶಿಷ್ಟಶೈಲಿಯ ನಿದರ್ಶನೆನಿಸಿವೆ. ಇದಕ್ಕೆ ಮಿಗಿಲಾಗಿ ಬಹುಲಿಪಿಜ್ಞರು, ಶೀಘ್ರ ಲಿಪಿಕಾರರು, ಉಭಯಹಸ್ತಲಿಪಿಕಾರರು, ಚಿತ್ರಲಿಪಿಕಾರರು, ಲಿಪಿಕಾರ್ತಿಯರು ನಮಗೆ ಕಂಡುಬರುತ್ತಾರೆ.

ಲಿಪಿಕಾರರ ಕೈಯಲ್ಲಿ ನೂರು ವಿಧಗಳಲ್ಲಿ ರೂಪ ವಿಕಾಸಮಾಡಿಕೊಂಡು ಬರುತ್ತದೆ, ಯಾವುದೇ ಭಾಷೆಯ ಲಿಪಿ. ಹಸ್ತಪ್ರಿಗಳೆಲ್ಲ ಸಾಮಾನ್ಯವಾಗಿ ಇತ್ತೀಚಿನ ನಕಲುಗಳಾಗಿದ್ದರೂ ಅವುಗಳಲ್ಲಿ ಕಾಣುವ ಲಿಪಿವಿಕಾಸ, ಲಿಪಿವ್ಯತ್ಯಾಸಗಳನ್ನು ‘ಲಿಪಿಶಾಸ್ತ್ರ’ ದೃಷ್ಟಿಯಿಂದ ಅಭ್ಯಸಿಸಿ, ಒಂದು ಕೋಷ್ಟಕವನ್ನು ಸಿದ್ಧಪಡಿಸಬೇಕಾಗಿದೆ.

ಹಸ್ತಪ್ರತಿಗಳ ರಕ್ಷಾಫಲಕದ ಮೇಲ್ಭಾಗದಲ್ಲಿ ಕೃತಿ ಮತ್ತು ಸಂಧಿಗಳ ಆರಂಭ-ಅಂತ್ಯಗಳಲ್ಲಿ ಚಿತ್ರಗಳೂ, ಭೂಮಿತಿಯಾಕೃತಿಗಳೂ ಆಗಾಗ ಕಂಡುಬರುತ್ತವೆ. ಕೆಲವೊಮ್ಮೆ ಗ್ರಂಥೋಕ್ತ ಘಟನೆಗಳನ್ನು ಸೂಚಿಸುವ ಚಿತ್ರಗಳನ್ನೂ ಬಿಡಿಸಲಾಗುತ್ತದೆ. ಇಂಥ ಚಿತ್ರಗಳು ಲಿಪಿಕಾರನ ಚಿತ್ರಕಲಾ ಹವ್ಯಾಸ, ನಮ್ಮ ಚಿತ್ರಕಲೆಯ ಇತಿಹಾಸ, ಗ್ರಂಥೋಕ್ತ

ಘಟನೆಯ ಚಾಕ್ಷುಷ ತಿಳಿವಳಿಕೆ ಇತ್ಯಾದಿ ದೃಷ್ಟಿಗಳಿಂದ ತುಂಬ ಉಪಯುಕ್ತವೆನಿಸುತ್ತವೆ. ಅಲ್ಲಲ್ಲಿ ಹಸ್ತಪ್ರಿಗಳೊಂದಿಗೆ ಚದುರಿಹೋಗಿರುವ ಈ ಕಲಾಸಂಪತ್ತನ್ನು ವ್ಯವಸ್ಥಿತವಾಗಿ ಅಭ್ಯಾಸ ಮಾಡಿದರೆ ಒಂದು ಹೊಸ ಕ್ಷೇತ್ರವೇ ನಮ್ಮ ಕಣ್ಣು ಮುಂದೆ ಬರಬಹುದಾಗಿದೆ. ಆದರೆ ಹಸ್ತಪ್ರತಿಗಳನ್ನು ಮಿಸ್‌ಹ್ಯಾಂಡಲ್‌ಮಾಡುವುದರಿಂದ, ರಕ್ಷಾಫಲಕಗಳ ಮೇಲೆ ಶಿರ್ಷಿಕೆ-ಕ್ರಮಾಂಕಗಳ ಚೀಟಿ ಅಂಟಿಸುವುದರಿಂದ ಹಾಳಾಗದಮತೆ ಈ ಚಿತ್ರಗಳನ್ನು ಉಳಿಸಿಕೊಳ್ಳುವುದು ಅವಶ್ಯವಿದೆ.

. ಹಸ್ತಪ್ರತಿಯ ಅಕ್ಷರ ಸ್ಖಾಲಿತ್ಯದ ಕಾರಣಸ್ವರೂಪ: ಹಸ್ತಪ್ರತಿಯ ಗುರಿ ಅಕ್ಷರಗಳ ಮೂಲಕ ವಿಷಯಜ್ಞಾನವನ್ನು ಮಾಡಿಕೊಡುವುದೇ ಆರುವುದರಿಂದ ‘ಹಸ್ತಪ್ರತಿಶಾಸ್ತ್ರ’ದಲ್ಲಿ ಅಕ್ಷರಸ್ಖಾಲಿತ್ಯದ ಕಾರಣ-ಸ್ವರೂಪಗಳ ವಿವೇಚನೆ ಅವಶ್ಯವೆನಿಸುತ್ತದೆ. ಈ ಸ್ಖಾಲಿತ್ಯಗಳನ್ನು ಉದ್ದೇಶಿತ, ಅನುದ್ದೇಶಿತ, ಅನವಧಾನಿತವೆಂದೂ ಉದ್ದೇಶಿತಗಳನ್ನು ಕವಿ, ಸಹೃದಯ, ಲಿಪಿಕಾರ ಮಾಡಿದವು; ಅನುದ್ದೇಶಿತಗಳನ್ನು ಅಕ್ಷರದ ರೂಪಸಾದೃಶ್ಯ, ಧ್ವನಿಸಾದೃಶ್ಯ, ಭಾಷೆಯ ಅವಸ್ಥಾಭೇದ, ಪ್ರಾಂತಭೇದ, ಬರವಣಿಗೆಯ ರೀತಿದೋಷಗಳಿಂದಾದವು ಎಂದೂ ವರ್ಗೀಕರೀಸಿಕೊಳ್ಳಬೇಕು. ಈ ಕಾರಣಗಳಿಂದಾಗಿ ಲೋಪ, ಆಗಮ, ಆದೇಶ, ಪಲ್ಲಟ ಇತ್ಯಾದಿ ರೂಪಗಳಲ್ಲಿ ಸ್ಖಾಲಿತ್ಯಗಳು ತಲೆದೋರುತ್ತಿರುವುದನ್ನು ಉದಾಹರಣೆ ಸಹಿತ ಇಲ್ಲಿ ಸ್ಪಷ್ಟಪಡಿಸಬೇಕು.

ಹಸ್ತಪ್ರತಿಯ ಪ್ರಕಾರಸ್ವರೂಪ: ‘ಗ್ರಂಥಸಂಪಾದನಶಾಸ್ತ್ರ’ ದೃಷ್ಟಿಯಿಂದ ಹಸ್ತಪ್ರತಿಗಳನ್ನು ಮೂಲಪ್ರತಿ, ಪರಂಪರಾಗತಪ್ರತಿ ಎಂದು ವರ್ಗೀಕರಿಸಬಹುದಾದರೂ ‘ಹಸ್ತಪ್ರತಿಶಾಸ್ತ್ರ’ದೃಷ್ಟಿಯಿಂದ ತಾಳೆಪ್ರತಿ, ಕಾಗದಪ್ರತಿಯೆಂದು ಇಲ್ಲವೆ ಸ್ವಭಾಷಾಪ್ರತಿ, ಅನ್ಯಭಾಷಾಪ್ರತಿ ಎಂದು ವರ್ಗೀಕರಿಸಬೇಕಾಗುತ್ತದೆ. ಇಲ್ಲಿ ಹಸ್ತಪ್ರತಿ ಕಟ್ಟುಗಳ ಗರಿ ಹಾಳೆಗಳ ಸ್ವರೂಪ, ವಿನ್ಯಾಸ, ಪುಟಸಂಖ್ಯೆಯ ರೀತಿ, ಕಟ್ಟುವಿಕೆಯ ವಿಧಾನ, ರಕ್ಷಾಫಲಕ, ಅಧಿಕಪುಟ, ಪರಿವಿಡಿ, ಹಂಸಪಾದ, ಶುದ್ಧಿಪತ್ರ ಮತ್ತು ಗದ್ಯವಿರಲಿ ಬಳಸುವಲ್ಲಿ ಕಾಣವು ಅವ್ಯವಸ್ಥೆ ಇತ್ಯಾದಿಗಳನ್ನು ವಿವೇಚಿಸಬೇಕು.

. ಹಸ್ತಪ್ರತಿ ಪ್ರಯೋಜನಮುಖ

ಸಂಯೋಜನಮುಖದ ಬಹುಭಾಗವೆಲ್ಲ ‘ಗ್ರಂಥಸಂಪಾದನಶಾಸ್ತ್ರ’ದ ವಿಷಯವಾದರೆ ಪ್ರಯೋಜನಮುಖದ ಬಹುಭಾಗ ‘ಗ್ರಂಥಾಲಯಶಾಸ್ತ್ರ’ದ ವಿಷಯವಾಗಿದೆ. ಆದರೆ ಗ್ರಂಥಾಲಯಶಾಸ್ತ್ರದಂತೆ ಹಸ್ತಪ್ರತಿಶಾಸ್ತ್ರ ಇಂದು ತನ್ನ ಹಳೆಯ ಕವಚವನ್ನು ಕಳೆದುಕೊಂಡು ತುಂಬ ವೈಜ್ಞಾನಿಕವಾಗಿ ಬೆಳೆಯುವುದು ಅವಶ್ಯವಿದೆ. ಈ ವಿಭಾಗವನ್ನು ೧. ಸರ್ವೇಕ್ಷಣ (Collection) ೨. ಸಂರಕ್ಷಣ (Preservation) ೩. ಸದುಪಯೋಗ (Utilisation) ಎಂದು ವರ್ಗೀಕರೀಸಬಹುದು.

. ಹಸ್ತಪ್ರತಿ ಸರ್ವೇಕ್ಷಣ: ಇದು ಇಡಿಯಾಗಿ ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದ ವಿಷಯ. ಹಸ್ತಪ್ರತಿ ಲಭಿಸುವ ಕ್ಷೇತ್ರ, ಕ್ಷೇತ್ರಕಾರ್ಯಕತ್, ಕ್ಷೇತ್ರಕಾರ್ಯದ ಉಪಕರಣ, ವಿಧಾನ ಇತ್ಯಾದಿಗಳು ಇಲ್ಲಿ ಸಮಾವೇಶವಾಗುತ್ತವೆ. ಸಾಮಾನ್ಯವಾಗಿ ಹಸ್ತಪ್ರತಿಗಳು ರಾಜವಂಶೀಯರ, ಮಠಾಧಿಪತಿಗಳ, ಪ್ರತಿಷ್ಠಿತ ಮತ್ತು ಪಂಡಿತ ಕುಟುಂಬಗಳ ವಶದಲ್ಲಿ ಸಿಗುತ್ತವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕನ್ನಡ ಹಸ್ತಪ್ರತಿಗಳು ಜೈನ ವೀರಶೈವರಲ್ಲಿ ಹೇರಳ, ಬ್ರಾಹ್ಮಣರಲ್ಲಿ ವಿರಳ. ಆಯಾ ಧರ್ಮೀಯರಲ್ಲಿ ಅವರವರ ಧರ್ಮದ ಸಾಹಿತ್ಯಕೃತಿಗಳೇ ವಿಫುಲ. ಕೆಲವು ವೇಳೆ ಇವು ಪ್ರದೇಶ ವಿಶಿಷ್ಟವಾಗಿಯೂ ಸಿಗುತ್ತವೆ. ಉದಾ. ಕರಾವಳಿ ಪ್ರದೇಶದಲ್ಲಿ ಭಾಗವತ, ಯಕ್ಷಗಾನ ಕೃತಿಗಳು, ಉತ್ತರಕರ್ನಾಟಕದಲ್ಲಿ ವಚನ, ಪುರಾಣಗಳೆಂಬ ವೀರಶೈವ ಕೃತಿಗಳು; ರಾಯಚೂರು ಜಿಲ್ಲೆಯಲ್ಲಿ ದಾಸಸಾಹಿತ್ಯದ ಕೃತಿಗಳು; ದಕ್ಷಿಣಕರ್ನಾಟಕದಲ್ಲಿ ಶ್ರೀವೈಷ್ಣವ, ರಾಜವಂಶಾವಳಿ ಕೃತಿಗಳು-ಪ್ರಧಾನವಾಗಿ ಲಭಿಸುತ್ತವೆ. ಹಸ್ತಪ್ರತಿ ಲಭಿಸುವ ಇಂಥ ಕೇಂದ್ರಗಳ ವಿವರ ಇಲ್ಲಿ ಬೇಕು. ಕ್ಷೇತ್ರಕಾರ್ಯಕರ್ತ ಹಸ್ತಪ್ರತಿಗಳ ಹವ್ಯಾಸಿ ಮತ್ತು ಅಭ್ಯಾಸಿಯಾಗಿರಬೇಕು. ಜೊತೆಗೆ ಮತ-ಭಾಷೆಗಳ ಸೂತಕಾತೀತ, ಶ್ರಮಸಹಿಷ್ಣು, ಪ್ರಯತ್ನಶೀಲನಾಗಿರಬೇಕು. ಪಡೆದ ಹಸ್ತಪ್ರತಿಗಳ ವಿವರವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಹಸ್ತಪ್ರತಿಯನ್ನು ಒಡೆಯರಿಂದ ಪಡೆಯುವುದು ಸಾಧ್ಯವಾಗದಿದ್ದರೆ ಯಂತ್ರಪ್ರತಿ ಇಲ್ಲವೆ ನಕಲುಪ್ರತಿ ಮಾಡಿಕೊಳ್ಳುವ ಕ್ರಿಯಾಶೀಲವ್ಯಕ್ತಿಯಾಗಿರಬೇಕು. ಕನ್ನಡದಲ್ಲಿ ಹಸ್ತಪ್ರತಿ ಪರಿವೀಕ್ಷಣಕಾರ್ಯ ಅಷ್ಟು ತೃಪ್ತಿದಾಯಕವಾಗಿ ಜರುಗಿಲ್ಲವಾದರೂ ಬಿ. ಎಸ್‌. ಸಣ್ಣಯ್ಯನವರ ವರ್ಧಮಾನ ಪುರಾಣ, ನನ್ನ ಕೊಂಡಗುಳಿ ಕೇಶಿರಾಜನ ಕೃತಿಗಳು, ರನ್ನ ನಿಘಂಟು, ಎಸ್‌. ಶಿವಣ್ಣನವರ ಚಿಕ್ಕ ಅಷ್ಟೇ ಮಹತ್ವಪೂರ್ಣ ಕೃತಿಗಳು ಬೆಲೆಯುಳ್ಳ ಶೋಧಗಳಾಗಿವೆ. ಇದೇ ಪ್ರಕರಣದಲ್ಲಿ ಆ ಭಾಷೆಯಲ್ಲಿ ಹಸ್ತಪ್ರತಿ ಸಂಗ್ರಹಕಾರ್ಯ ನಡೆದುಬಂದ ಇತಿಹಾಸ, ಅದರ ಘಟ್ಟಗಳ ಸ್ವರೂಪ ಸಾಧನೆ ಇತ್ಯಾದಿಗಳನ್ನು ಕ್ರಮವತ್ತಾಗಿ ಹೇಳಬೇಕು.

* * *

ಹಸ್ತಪ್ರತಿಗ ಸರ್ವೇಕ್ಷಣೆಗಿಂತ ಸಂರಕ್ಷಣೆ, ಸದುಪಯೋಗ ಮಹತ್ವದ್ದು. ದೇವಾಲಯದ ನಿರ್ಮಾಣಕ್ಕಿಂತ ರಕ್ಷಣೆ, ಪ್ರಯೋಜನ ಮಹತ್ವದ್ದೆಂಬಂತೆ, ಈ ಕಾರ್ಯಗಳಿಗೋಸುಗ ತಲೆಯೆತ್ತುತ್ತದೆ, ಹಸ್ತಪ್ರತಿಭಂಡಾರ. ಹಸ್ತಪ್ರತಿ ಭಂಡಾರವನ್ನು ನೆನೆದಾಗ ಪತ್ರಾಗಾರ (Archives) ನಮ್ಮ ಕಣ್ಣು ಮುಂದೆ ಬರುತ್ತದೆ. ಇವೆರಡರ ವ್ಯತ್ಯಾಸವನ್ನು “The Chief difference is that archives are “received from on’es parent body; were as manuscripts are “collected’’, whether by gift of deposit purchase’’[7] ಎಂದು ರಾಬರ್ಟ್‌ಡಬ್ಲ್ಯೂ. ಲೋವೆಟ್‌ಹೇಳುವವನಾದರೂ ಇತ್ತೀಚಿನ ದಿನಗಳಲ್ಲಿ ಒಂದರಲ್ಲಿ ಇನ್ನೊಂದು ಸೇರಿಕೊಂಡು ಇವು ಬೆಳೆಯುತ್ತಲಿವೆ. ಆದರೆ ಸಾಹಿತ್ಯಕೃತಿಗಳ ಹಸ್ತಪ್ರತಿ ಭಂಡಾರ, ಸಾಹಿತ್ಯೇತರ ದಾಖಲೆಗಳ ಪತ್ರಾಗಾರಗಳನ್ನು ಪ್ರತ್ಯೇಕವಾಗಿಯೇ ಬೆಳೆಸಬೇಕು. ಸರ್ಕಾರಿ, ಸಾರ್ವಜನಿಕ ಮತ್ತು ವೈಯಕ್ತಿಕ ಎಂದು ವರ್ಗೀಕರಣಗೊಳ್ಳುವ ಈ ಹಸ್ತಪ್ರತಿ ಭಂಡಾರಗಳ ಕಟ್ಟಡಗದಲ್ಲಿ ಪ್ರಧಾನವಾಗಿ ಗ್ರಂಥರಕ್ಷಣಾ ವಿಭಾಗ, ತಾಂತ್ರಿಕ ವಿಭಾಗ, ಗ್ರಂಥ ಪರಿಚಲನ ವಿಭಾಗ, ಪೂರಕ ಗ್ರಂಥಭಂಡಾರ ಎಂಬ ೪ ಪ್ರಮುಖ ಘಟಕಗಳಿರಬೇಕು. ಗಾಳಿ ಬೆಳಕಿನ ಅನುಕೂಲತೆ, ಪೀಠೋಪಕರಣ ವ್ಯವಸ್ಥೆ, ಅನ್ಯ ಉಪಕರಣಗಳ ನೆರವು ಇಲ್ಲಿ ಅಗತ್ಯವಾದವು.

* * *

. ಹಸ್ತಪ್ರತಿ ಸಂರಕ್ಷಣ: ಹಸ್ತಪ್ರತಿಗಳ ಸರ್ವೇಕ್ಷಣದ ಮುಂದಿನ ಘಟ್ಟ ಸಂರಕ್ಷಣ. ನಮ್ಮ ಪ್ರಾಚೀನರು ಈ ಬಗ್ಗೆ ವಿಶೇಷ ಕಾಳಜಿ ವಹಿಸುತ್ತ ಬಂದಿದ್ದಾರೆ.

ತೈಲಾದ್ರಕ್ಷೇತ್ಜಲಾದ್ರಕ್ಷೇತ್ರಕ್ಷೇತ್ಶಿಥಿಲಬಂಧನಾತ್‌|
ಮೂರ್ಖಹಸ್ತೇ
ದಾತವ್ಯಮೇವಂ ವದತಿ ಪುಸ್ತಕಂ |

ಎಂದು ಹಸ್ತಪ್ರತಿಗಳು ಮೊದಲಿನಿಂದಲೂ ಕೇಳಿಕೊಳ್ಳುತ್ತಲಿದ್ದು,ಇಂದು ಅವುಗಳನ್ನು ಹವಾನಿಯಂತ್ರಣ ಕೊಠಡಿಯಲ್ಲಿ ರಕ್ಷಿಸಬೇಕಾಗಿದೆ. ಧೂಳು, ಬೂಷ್ಟಗಳನ್ನು ಒರೆಸುವುದು, ಕ್ರಿಮಿನಾಶಕ ತೈಲವನ್ನು ಲೇಪಿಸುವುದು, ಋತುಮಾನಕ್ಕೆ ತಕ್ಕಂತೆ ವಿದ್ಯುತ್‌ಶಾಖ ಕೊಟ್ಟು ಆರೈಕೆ ಮಾಡುವುದು ಇಲ್ಲಿ ನಿರಂತರ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಹಸ್ತಪ್ರತಿಗಳ ಯಾಂತ್ರಿಕ ನಕಲುಕಾರ್ಯ ಈ ಕ್ಷೇತ್ರದ ಅವಶ್ಯಭಾಗವೆನಿಸಿದೆ. ಪ್ರಾಚೀನ ಕಾಲದಲ್ಲಿ ಲಿಪಿಕಾರರು ಮಾಡುತ್ತಲಿದ್ದ ಕಾರ್ಯವನ್ನು ಇಂದು ಮೈಕ್ರೋಫಿಲ್ಮ, ಝರಾಕ್ಸ್‌, ಫೋಟೋಸ್ಟ್ಯಾಟ್‌ಮಾಡಿವುದು ಇಲ್ಲಿ ನಡೆಯಬೇಕಾದ ಕೆಲಸ. ಜೀರ್ಣ ಹಸ್ತಪ್ರತಿಗಳನ್ನು ರಿಪೇರಿ ಮಾಡುವುದೂ ಇಂದು ವಿಶಿಷ್ಟ ಕಲೆಯಾಗಿ ಬೆಳೆಯತೊಡಗಿದೆ. ಟೇಪು ಕತ್ತರಿಯಿಂದ ಹಿಡಿದು ಭಾರಿ ಬೆಲೆಯ ಯಂತ್ರಗಳೆಲ್ಲ ಈ ವಿಭಾಗದ ಉಪಕರಣಗಳೆನಿಸಿ ಹಸ್ತಪ್ರತಿಯ ಸಂರಕ್ಷಣೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಲಿವೆ. ಈ ಎಲ್ಲ ಕಾರ್ಯಗಳಲ್ಲಿ ನಿರತರಾದ ಸಿಬ್ಬಂದಿಗಳು ಕೇವಲ ಹಸ್ತಪ್ರತಿ ರಕ್ಷಣಾ ತರಬೇತುದಾರರಷ್ಟೇ ಅಲ್ಲ ಹಸ್ತಪ್ರತಿಗಳ ಮಹತ್ವವಿದ್ದರೂ ಆಗಿರಬೇಕು. ‘ಮೂರ್ಖಹಸ್ತೇನ ದಾತವ್ಯಂ’ ಎಂದು ಇವರ ಮಧ್ಯದಲ್ಲಿ ಹಸ್ತಪ್ರತಿ ಪದೇ ಪದೇ ಹಲಬುವಂತಾಗಬಾರದು. ಈ ಮಾತು ಸಿಬ್ಬಂದಿಗಳಿಗಷ್ಟೇ ಅಲ್ಲ; ಪ್ರಯೋಜನ ಪಡೆಯುವ ಹೊಣೆಗೇಡಿ ವಿದ್ವಾಂಸರಿಗೂ ಅನ್ವಯಿಸುತ್ತದೆ.

. ಹಸ್ತಪ್ರತಿ ಸದುಪಯೋಗ: ಹಸ್ತಪ್ರತಿಯ ಸಾರ್ಥಕತೆಯಿರುವುದು ಅದರ ಉಪಯೋಗದಲ್ಲಿ, ಇದು ತಾಂತ್ರಿಕ ವಿಭಾಗ ಮತ್ತು  ಪರಿಚಲನ ವಿಭಾಗ ಓದುಗರಿಗೆ ಹಸ್ತಪ್ರತಿ ಸದುಪಯೋಗವಾಗುವುದಕ್ಕೋಸುಗ ವೈಜ್ಞಾನಿಕ ತಂತ್ರಗಳನ್ನು ಅಳವಡಿಸಲು ತೊಡಗಿದರೆ, ಇನ್ನೊಂದು ವಿಭಾಗ ಹಸ್ತಪ್ರತಿಗಳ ಪರಿಚಲನ ವ್ಯವಸ್ಥೆ ನೋಡಿಕೊಳ್ಳುತ್ತದೆ.

ತಾಂತ್ರಿಕ ವಿಭಾಗದ ಮುಖ್ಯ ಕೆಲಸ ಹಸ್ತಪ್ರತಿಗಳ ವರ್ಗೀಕರಣ ಮತ್ತು ಸೂಚೀಕರಣ. ವರ್ಗೀಕರಣವೆಂದರೆ ವಿಷಯವರ್ಗೀಕರಣವೆಂದೇ ಅರ್ಥ. ಇದು ಹಸ್ತಪ್ರತಿಗಳನ್ನು ಭಂಡಾರಕ್ಕೆ ಪಡೆಯುವುದರಿಂದ ಹಿಡಿದು ಅವುಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ ಕಪಾಟಿನಲ್ಲಿ ವ್ಯವಸ್ಥೆಗೊಳಿಸುವವರೆಗಿನ ವ್ಯಾಪ್ತಿಯುಳ್ಳ ಕ್ಷೇತ್ರ. ಮುದ್ರಿತ ಗ್ರಂಥಾಲಯದ ಪುಸ್ತಕಗಳು ವಿಷಯದೃಷ್ಟಿಯಿಂದ ನೂರೂ ನೂರು ತೆರನಾಗಿರುವುದರಿಂದ ಅಲ್ಲಿ ಕೋಲನ್‌, ಡೆಸಿಮಲ್‌ಪದ್ಧತಿಗಳಲ್ಲಿ ವರ್ಗೀಕರಣ ಅವಶ್ಯ, ಅನಿವಾರ್ಯ. ಆದರೆ ಪ್ರಾಚೀನ ಹಸ್ತಪ್ರತಿಗಳು ಕೆಲವೇ ಜ್ಞಾನಶಾಖೆಗಳನ್ನು ಪ್ರತಿನಿಧಿಸುವುದರಿಂದ ಅಲ್ಲಿಯ ಪದ್ಧತಿಗಳು ಇಲ್ಲಿ ತಲೆಭರ. ಹೀಗಾಗಿ ಕರ್ನಾಟಕದ ಹಸ್ತಪ್ರತಿಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಅವುಗಳನ್ನು ವಸ್ತುವನ್ನಾಧರಿಸಿ ತಾಳೆಪ್ರತಿ, ಕಾಗದಪ್ರತಿಯೆಂದು; ಆಮೇಲೆ ಧರ್ಮವನ್ನಾಧರಿಸಿ ಜನ, ವೀರಶೈವ, ಬ್ರಾಹ್ಮಣ, ಇತರರೆಂದು; ಮತ್ತೆ ಭಾಷೆಯನ್ನಾಧರಿಸಿ ಕನ್ನಡ, ಸಂಸ್ಕೃತ, ಇತರವೆಂದು; ತರುವಾಯ ವಿಷಯವನ್ನಾಧರಿಸಿ ಪುರಾಣ, ಇತಿಹಾಸ, ಶಾಸ್ತ್ರ, ಇತರವೆಂದು; ಕೊನೆಗೆ ಪ್ರಕಾರವನ್ನವಲಂಬಿಸಿ ಗದ್ಯ, ಪದ್ಯ, ಮಿಶ್ರವೆಂದು ವರ್ಗೀಕರಿಸಬಹುದು. ಬಹಳೆಂದರೆ ಈ ವರ್ಗಗಳನ್ನು ಸಂಕೇತಾಕ್ಷರಗಳಿಂದ ಸೂಚಿಸುವುದು, ಹಸ್ತಪ್ರತಿಗಳಿಗೆ ಕ್ರಮಾಂಕ ಕೊಡುವುದು ಇಲ್ಲಿ ಮಾಡಬೇಕಾದ ಕಾರ್ಯ. ನಿತ್ಯ ಹುಟ್ಟುವ ಗ್ರಂಥಗಳಲ್ಲವಾದುದರಿಂದ ಇವುಗಳ ಸಂಖ್ಯೆಯೂ ಪರಿಮಿತ. ಹೀಗಾಗಿ ಮುದ್ರಿತ ಗ್ರಂಥಾಲಯಶಾಸ್ತ್ರದೊಂದಿಗೆ ಹೋಲಿಸಿದರೆ, ಹಸ್ತಪ್ರತಿಶಾಸ್ತ್ರದಲ್ಲಿ ‘ವರ್ಗೀಕರಣ” ಪದ್ಧತಿ ತುಂಬ ಸರಳ, ಸುಲಭ. ಇದು ಆಯಾ ಭಂಡಾರಗಳ ಧೋರಣೆ, ಅಲ್ಲಿಯ ಹಸ್ತಪ್ರತಿಗಳ ಸ್ವರೂಪವನ್ನವಲಂಬಿಸಿ ಸ್ವಲ್ಪ ಬೇರೆ ಬೇರೆಯಾಗಬೇಕಾಗುತ್ತದೆ.

ಸೂಚೀಕರಣವೆನ್ನುವುದು ಮುದ್ರಿತ ಗ್ರಂಥಾಲಯಶಾಸ್ತ್ರದಲ್ಲಿ ಲೇಖಕ (Author), ಶೀರ್ಷಿಕೆ (Title), ವಿಷಯ (Subject)ಗಳಿಗೆ ಅನುಗುಣವಾಗಿ ಆಯಾ ಗ್ರಂಥಭಂಡಾರಗಳಲ್ಲಿಯ ಗ್ರಂಥಗಳನ್ನು ಒಂದೊಂದಾಗಿ ಪರಿಚಯಿಸಿ ಅಕಾರಾದಿಯಲ್ಲಿ ಹೊಂದಿಸುವುದಾಗಿದ್ದರೆ, ಹಸ್ತಪ್ರತಿಶಾಸ್ತ್ರದಲ್ಲಿ ಈ ಪರಿಚಯ ತುಂಬ ವಿವರಣಾತ್ಮಕವಾಗಿರಬೇಕಾಗುತ್ತದೆ. ವರ್ಗೀಕರಣವು ಹಸ್ತಪ್ರತಿಗಳು ಭಂಡಾರಕ್ಕೆ ಬಂದ ಹಾಗೆ ಅವುಗಳನ್ನು ವಸ್ತು, ಭಾಷೆ, ವಿಷಯ ಇತ್ಯಾದಿ ದೃಷ್ಟಿಯಿಂದ ವಿಂಗಡಿಸಿ, ಸಂಕೇತಾಕ್ಷರ, ಕ್ರಮಾಂಕ ಸೂಚಿಸಿ ವ್ಯವಸ್ಥೆಗೊಳಿಸುತ್ತಿದ್ದರೆ, ಸೂಚೀಕರಣವು ಇದನ್ನೂ ಒಳಗೊಂಡಂತೆ ಇನ್ನೂ ಬೇರೆ ಅಂಶಗಳನ್ನೂ ಗಮನಿಸಿ, ವ್ಯಾಪಕ ವಿವರಗಳನ್ನು ಕಟ್ಟಿಕೊಂಡು ಮುನ್ನಡೆಯುತ್ತದೆ, ಹಸ್ತಪ್ರತಿಶಾಸ್ತ್ರದಲ್ಲಿ. ಆದುದರಿಂದ ಮುದ್ರಿತ ಗ್ರಂಥಾಲಯಶಾಸ್ತ್ರದಲ್ಲಿ ವರ್ಗೀಕರಣ ಜಟಿಲ, ಸೂಚೀಕರಣ ಸರಳ. ಹಸ್ತಪ್ರತಿಶಾಸ್ತ್ರದಲ್ಲಿ ವರ್ಗೀಕರಣ ಸರಳ, ಸೂಚೀಕರಣ ಜಟಿಲ.

ಹಸ್ತಪ್ರತಿಸೂಚಿಗಳು ಅಂಗೈಯಲ್ಲಿ ಗ್ರಂಥಸಂಪತ್ತನ್ನು ತೋರಿಸಿಕೊಡುವ ಸಂಕ್ಷಿಪ್ತ ಗ್ರಂಥಾಲಯಗಳು. ವ್ಯವಸ್ಥಿತ ನಿರ್ಮಿತಯಿಂದಾಗಿ ಸೂಚಿಸಾಹಿತ್ಯಕ್ಕೆ ಇಂದು ವಿಜ್ಞಾನ ಮರ್ಯಾದೆ ಪ್ರಾಪ್ತವಾಗಿದೆ. ಪ್ರಯೋಜನ, ಮಹತ್ವ ಹೆಚ್ಚುತ್ತ ನಡೆದಂತೆ ತಕ್ಕ ತಂತ್ರಗಳು ಆವಿಷ್ಕಾರಗೊಂಡು ಅದು ವೈವಿಧ್ಯಪೂರ್ಣವಾಗಿ ಬೆಳೆಯತೊಡಗಿದೆ. ೧೯೪೦ರಷ್ಟು ಪೂರ್ವದಲ್ಲಿಯೇ ಥಿಯೋಡೋರ್‌ಬೆಸ್ಟರಮ್‌ಮನ್‌ಅವರು ರಚಿಸಿದ “ಗ್ರಂಥಸೂಚಿಗಳ ಗ್ರಂಥಸೂಚಿ” ಈ ಕ್ಷೇತ್ರದ ವಿಕಾಸ ಮಹತ್ವಗಳನ್ನು ವ್ಯಕ್ತಪಡಿಸುತ್ತದೆ. ಮುದ್ರಿತ ಕೃತಿಗಳಂತೆ ಹಸ್ತಪ್ರತಿಗಳಿಗೆ ಶೀರ್ಷಿಕೆ ಸೂಚಿ, (Title Catalogue), ಕರ್ತೃಸೂಚಿ (Author Catalogue), ವಿಷಯಸೂಚಿ (Subject Catalogue)ಗಳನ್ನು ಅಳವಡಿಸಿಬಹುದಾದರೂ ಒಂದು ಹಸ್ತಪ್ರತಿ ಭಂಡಾರದಲ್ಲಿರುವ ಒಂದು ಕೃತಿ ಮತ್ತು ಅದರ ಪ್ರತಿಗಳ ಸಂಖ್ಯೆಗಳೇ ಮಹತ್ವದ ಅಂಶವಾಗಿರುವುದರಿಂದ ‘ಶೀರ್ಷಿಕೆಸೂಚಿ’ಗೇ ಇಲ್ಲಿ ಪ್ರಥಮ ಮತ್ತು ಪ್ರಧಾನಸ್ಥಾನ ಸಲ್ಲುತ್ತದೆ. ಶೀರ್ಷಿಕೆಸೂಚಿಯು ಮುದ್ರಿತ ಗ್ರಂಥಗಳಿಂದ ಹಸ್ತಪ್ರತಿಗಳ ವಿಷಯದಲ್ಲಿ ತಂತ್ರದೃಷ್ಟಿಯಿಂದ ವ್ಯಾಪಕವೂ, ಶ್ರಮಯುಕ್ತವೂ ಆಮದು. ಹೀಗಾಗಿ ಅಲ್ಲಿ ಸಂಕ್ಷಿಪ್ತ ‘ಸೂಚಿ’ ಸಾಕು; ಇಲ್ಲಿ ವಿವರಣಾತ್ಮಕ ‘ಊಚಿ’ ಬೇಕು. ಸಾಮಾನ್ಯವಾಗಿ ಶೀರ್ಷಿಕೆ, ಕರ್ತೃ, ಕಾಲ, ವಸ್ತು, ಕ್ರಮಾಂಕ, ಸ್ಥಿತಿ, ವಿಷಯ, ಪ್ರಕಾರ, ಆಕಾರ, ಪುಟದ ಸಾಲು, ಸಾಲಿನ ಅಕ್ಷರ, ಕೊಟ್ಟವರು, ತಂದವರು, ಸ್ವೀಕೃತ ದಿನಾಂಕ, ಅಕ್ಷರ ಸ್ವರೂಪ, ಭಾಷೆ, ಭಾಷಾಸ್ವರೂಪ, ಆದಿ, ಅಂತ್ಯ, ಈ ಕಟ್ಟಿನಲ್ಲಿಯ ಇತರ ಕೃತಿಗಳು, ವಿಶೇಷ ಅಂಶಗಳು ಇಷ್ಟು ವಿವರಗಳನ್ನು ಹಸ್ತಪ್ರತಿಗಳ ಒಳಗೊಂಡಿರಬೇಕು. ಇಲ್ಲಿ ಅವಸರ ಎಷ್ಟೂ ಸಾಲದು. ಒಂದು ಸಣ್ಣತಪ್ಪು ಓದುಗನನ್ನು ದೊಡ್ಡ ಶ್ರಮಕ್ಕೆ ಈಡು ಮಾಡುವುದರಿಂದ ತುಂಬ ಎಚ್ಚರಿಕೆಯಿಂದ ಮಾಡಬೇಕಾದ ಕಾರ್ಯವಿದು.

ಹಸ್ತಪ್ರತಿಗಳ “ಸದುಪಯೋಗ”ಕ್ಕೆ ಸಂಬಂಧಪಟ್ಟ ಇನ್ನೊಂದು ಶಾಖೆ, ಪರಿಚಲನ ವಿಭಾಗ. ಓದುಗರಿಗೆ ಹಸ್ತಪ್ರತಿಗಳ ಉಪಯುಕ್ತತೆಯನ್ನು ಹೆಚ್ಚಿಸುವುದು ಈ ವಿಭಾಗದ ಕೆಲಸ. ದೇವ-ಭಕ್ತರ ನಡುವೆ ಕಂದರವಾಗದೆ, ಸೇತುವೆಯಾಗುವ ಅರ್ಚಕನಂತೆ ಈ ವಿಭಾಗದ ಸಿಬ್ಬಂದಿಗಳು ನಡೆದುಕೊಳ್ಳಬೇಕು. ಕೇವಲ ನಿಧಾನವ ಕಾಯ್ದಿರ್ದ ಬೆಂತರನಂತೆವರ್ತಿಸದೆ ಹಸ್ತಪ್ರತಿಗಳ ವಿಷಯಪರಿಜ್ಞಾನ, ಸೇವಾಭಾವಗಳ ಸಾಕಾರಮೂರ್ತಿಯಾಗಿ ಅಭ್ಯಾಸಿಗಳ ಅಗತ್ಯಕ್ಕೆ ತಕ್ಕಂತೆ ನಡೆದುಕೊಳ್ಳುವುದು, ಇವರ ಕರ್ತವ್ಯ. ಇವರು ಸಾಮಾನ್ಯವಾಗಿ ಹಸ್ತಪ್ರತಿಯನ್ನು ಸಂಸ್ಥೆಯಲ್ಲಿಯೇ ಉಪಯೋಗಿಸಿಕೊಳ್ಳಲು ಕೊಡಬೇಕು. ಒಂದು ಕೃತಿಯ ಒಂದಕ್ಕಿಂತ ಹೆಚ್ಚು ಪ್ರತಿಗಳಿದ್ದರೆ ಮಾತ್ರ ಹೊರಗೆ ಕಳಿಸಬಹುದಾದರೂ ಈಗ ನೇರವಾಗಿ ವ್ಯಕ್ತಿಗೆ ಕೊಡದೆ ಸಂಸ್ಥೆಯ ಮುಖಾಂತರ ಕೊಡುವುದು, ಇನ್‌ಶೂರ್‌ಮಾಡಿ ರವಾನಿಸುವುದು ಕ್ಷೇಮ. ಒಂದೇ ಹಸ್ತಪ್ರತಿಯಿದ್ದರೆ ಹಸ್ತಪ್ರತಿ ಭಂಡಾರದಿಂದ ಅದು ಹೊರಗೆ ಹೋಗಲೇಬಾರದು. ಬೇಕಿದ್ದರೆ ನಕಲು ಮಾಡಿಸಿ ತಾಳೆ ನೋಡಿ ಕಳಿಸಬಹುದು. ಹೀಗೆ ಕಳಿಸಿದ ಪ್ರತಿಯನ್ನು ಮರಳಿಸಲು ನಿರ್ದಿಷ್ಟ ಅವಧಿಯನ್ನು ಸೂಚಿಸಬೇಕು. ಅವರಿಂದ ಒಂದು ಜವಾಬ್ದಾರಿ ಪತ್ರ ಪಡೆದಿರಬೇಕು. ಇಲ್ಲಿಯೇ ಹಸ್ತಪ್ರತಿಗಳ ಕ್ಯಾಟಲಾಗ ಕ್ಯಾಬಿನೆಟ್‌ಇಡುವ ವ್ಯವಸ್ಥೆ ಮಾಡಬೇಕು.

ಪ್ರತಿಯೊಂದು ಹಸ್ತಪ್ರತಿ ಭಂಡಾರದಲ್ಲಿ ಅಭ್ಯಾಸಿಗಳ ಅನುಕೂಲಕ್ಕೆ ಒಂದು ಮುದ್ರಿತ ಗ್ರಂಥಭಂಡಾರ ಅವಶ್ಯ. ಇದು ಪ್ರಧಾನವಾಗಿ ಹಸ್ತಪ್ರತಿ ಕ್ಯಾಟಲಾಗ, ಮುದ್ರಿತ ಪ್ರಾಚೀನ ಗ್ರಂಥ ಮೊದಲಾದವುಗಳ “ವಿಶಿಷ್ಟ ಗ್ರಂಥಾಲಯ”ವಾಗಿ ಬೆಳೆಯಬೇಕು. ಇಲ್ಲಿಯೇ ಹಸ್ತಪ್ರತಿಗಳ ಒಂದು ಚಿಕ್ಕಪ್ರದರ್ಶನವನ್ನು ಯೋಜಿಸುವುದೂ ತುಂಬ ಪ್ರಯೋಜನಕಾರಿ.

ಕೊನೆಯ ಮಾತು: “ಶತಮಾನಗಳನ್ನು ಸೇರಿಸುವ ಜ್ಞಾನಸೇತುವೆ”ಯಾದ ಹಸ್ತಪ್ರತಿಗಳ ಸಂಯೋಜನಮುಖ, ಪ್ರಯೋಜನಮುಖಗಳ ಈವರೆಗಿನ ವಿವರಣೆ, ಅವುಗಳ ಮಹತ್ವವನ್ನು ಸ್ಪಷ್ಟಪಡಿಸುತ್ತದೆ. ಹೀಗಿದ್ದೂ ಅವುಗಳ ರಕ್ಷಣೆಗಾಗಿ, ಪ್ರಕಟಣೆಗಾಗಿ ದುಡಿಯುವವರ ಬಗೆಗೆ ಸರ್ಕಾರ ಹೋಗಲಿ, ಸಾಹಿತ್ಯ ಕ್ಷೇತ್ರದಲ್ಲಿಯೂ ತುಂಬ ಉಪೇಕ್ಷೆ, ಅನಾದಾರ ಧೋರಣೆವಿರುವುದು ವ್ಯಸನದ ಸಂಗತಿ ಈಗ ಈ ಕ್ಷೇತ್ರಕ್ಕೆ ಮತ್ತು ಇಲ್ಲಿ ದುಡಿಯುವವರಿಗೆ ಸರಿಯಾದ ಗೌರವ ಅಂತಸ್ತು ಸಿಗುವುದರ ಸಲುವಾಗಿ ಪ್ರಯತ್ನಿಸುವುದು, ಹೋರಾಡುವುದು ಅವಶ್ಯವಾಗಿದೆ. ಈ ದಿಸೆಯಲ್ಲಿ “ಮುದ್ರಿತ ಗ್ರಂಥಾಲಯ ಚಳವಳಿ”ಯನ್ನು ಮಾರ್ಗದರ್ಶಿಯನ್ನಾಗಿ ಇಟ್ಟುಕೊಂಡು ಮಾಡಬೇಕಾದ ಕೆಲಸಗಳು ಹೀಗಿವೆ. ೧. ಶಿಲ್ಪ, ಶಾಸನಗಳಂತೆ ಹಸ್ತಪ್ರತಿಗಳೂ ರಾಜ್ಯದ ಆಸ್ತಿಯೆಂದು ಘೋಷಿಸಿ ಸರ್ಕಾರ ಇವುಗಳ ಸಂರಕ್ಷಣೆ ಸಂಗ್ರಹಗಳಿಗೆ ತೀವ್ರ ಕಾನೂನುಕ್ರಮ ಕೈಕೊಳ್ಳಬೇಕು. ಹಸ್ತಪ್ರತಿಗಳನ್ನು ಪಡೆದಿರುವವರು ಡಿಕ್ಲರೇಷನ್‌ಕೊಡಲು ಕಾನೂನು ರಚಿಸಬೇಕು. ೨. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ, ಅನ್ಯ ಸಂಸ್ಥೆಗಳಲ್ಲಿ ಸುಸಜ್ಜಿತ ಹಸ್ತಪ್ರತಿ ಭಂಡಾರಗಳು ಬೆಳೆಯುವಂತೆ ಸರ್ಕಾರ ಧನಸಹಾಯ ನೀಡಬೇಕು. ೩. ಪ್ರತ್ಯೇಕ ವಿವರಣಾತ್ಮಕ ಹಸ್ತಪ್ರತಿ ಸೂಚಿಗಳನ್ನಲ್ಲದೆ ಸಮಗ್ರ ಕನ್ನಡ ಹಸ್ತಪ್ರತಿಗಳ Catalogus Catalogaramನ್ನು ಸಿದ್ಧಪಡಿಸಿದ ಕಾರ್ಯ ಪ್ರಾರಂಭವಾಗಬೇಕು (ಇಂತಹ ಒಂದು ಯೋಜನೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದ ಮೂಲಕ ೧೦ ವರ್ಷಗಳ ಹಿಂದೆ ಪ್ರಾರಂಭವಾಗಿ, ಉತ್ತಮ ಭವಿಷ್ಯವಿಲ್ಲದೆ ನರಳುತ್ತಲಿರುವುದು ವ್ಯಸನದ ಸಂಗತಿ). ೪. ಒಮ್ಮೆಯೂ ಪ್ರಕಟವಾಗದೆ ಹಸ್ತಪ್ರತಿಗಳ ಸೆರೆಯಲ್ಲಿ ಬಿದ್ದುಕೊಂಡಿರುವ ೩೦೦೦ ಕನ್ನಡ ಕೃತಿಗಳ ಪ್ರಕಟಣೆಗಾಗಿ ಸಮಗ್ರ ಕನ್ನಡ ಪ್ರಾಚೀನ ಅಪ್ರಕಟಿತ ಕೃತಿಗಳ ಪ್ರಕಟನಾ ಯೋಜನೆಯೊಂದು ತೀವ್ರ ಅಸ್ತಿತ್ವಕ್ಕೆ ಬರಬೇಕು. ೫. ಅರ್ಹ ಕಾರ್ಯಕರ್ತರನ್ನು ರೂಪಿಸುವುದಕ್ಕಾಗಿ ವಿಶ್ವವಿದ್ಯಾಲಯಗಳಲ್ಲಿ Manuscriptology ಡಿಪ್ಲೋಮಾ ಕೋರ್ಸು ಪ್ರಾರಂಭಿಸಬೇಕು. ೬. ಸಂಪಾದಿತ ಗ್ರಂಥಗಳಿಗೆ, ಹಸ್ತಪ್ರತಿಸೂಚಿ ಗ್ರಂಥಗಳಿಗೆ ರಾಜ್ಯಸಾಹಿತ್ಯ ಅಕಾಡೆಮಿ ಸಹಾಯ- ಪುರಸ್ಕಾರ ರೂಪದ ಉತ್ತೇಜನ ನೀಡಬೇಕು. ಎಲ್ಲ ದಿಕ್ಕುಗಳಿಂದ ಮನಃಪೂರ್ವಕ ಪ್ರಯತ್ನಿಸಿದರೆ, ಹೋರಾಡಿದರೆ ಮಾತ್ರ ಯಾವುದೇ ಸಂಸ್ಥೆಗಳ ಮೂಲೆಯಲ್ಲಿ ಬಿದ್ದುಕೊಂಡಿರುವ ಹಸ್ತಪ್ರತಿ ಭಂಡಾರಗಳು ಎದ್ದು ಬೆಳಕಿಗೆ ಬರುತ್ತವೆ. ಅವುಗಳ ಮೇಸ್ತ್ರಿ ಸ್ಥಿಗೆ ಇಳಿದಿರುವ ಹಸ್ತಪ್ರತಿ ಭಂಡಾರಿಗರ, ಕಾವಲುಗಾರನ ಸ್ಥಿತಿಗಿಳಿದಿರುವ ಸಿಬ್ಬಂದಿಗಳ ಸ್ಥಾನಮಾನ ಉತ್ತಮಗೊಂಡು ಈ ಕ್ಷೇತ್ರದ ಪ್ರತಿಷ್ಠೆ ಪ್ರಯೋಜನಗಳು ವರ್ಧಿಸುತ್ತವೆ.[8]

[1] ಕನ್ನಡ ನುಡಿ, ೭೭-೧೪

[2] Manuscripts, Catalogues, Editions, 1963

[3] The wealth of Sanskrit Manuscripts in India and aboard, 1978

[4] ಗ್ರಂಥ ಸಂಪಾದನ ಶಾಸ್ತ್ರ ಪರಿಚಯ, ೧೯೭೮

[5] ಪ್ರಾಚೀನ ಹಸ್ತಪ್ರತಿಗಳು, ೧೯೭೧

[6] Dr. K. T. Pandurangi, Wealth of Sanskrit Manuscripts in India and aboard, p.2

[7] Robert, W. Lovett, of Manuscripts and Archieves (Special Laibraries, Vol 64, p. 415)

[8] ಈ ಲೇಖನ ಬರೆಯುವಲ್ಲಿ ಅಮೂಲ್ಯ ಸಲಹೆ ನೀಡಿದ ಶ್ರೀ ಕೆ.ಎಸ್. ದೇಶಪಾಂಡೆ ಅವರಿಗೆ ಕೃತಜ್ಞನಾಗಿದ್ದೇನೆ.