‘ಗ್ರಂಥಸಂಪಾದನಶಾಸ್ತ್ರ’ದ ನೆಲೆಯಿಂದ ಮುಕ್ತವಾಗಿ, ಸ್ವತಂತ್ರ ಶಾಸ್ತ್ರಮರ್ಯಾದೆ ಪಡೆಯುತ್ತಲಿರುವ ‘ಹಸ್ತಪ್ರತಿಶಾಸ್ತ್ರ’ದ ಹಲವು ಅಂಗಗಳಲ್ಲಿ ಕ್ಷೇತ್ರಕಾರ್ಯ (Field Work)ವೂ ಒಂದು. ಈ ಕ್ಷೇತ್ರಕಾರ್ಯ ಇಂದು ಕಲೆ, ವಿಜ್ಞಾನ, ಸಮಾಜವಿಜ್ಞಾನ ವಲಯಗಳಲ್ಲಿ ಒಂದು “ಶೈಕ್ಷಣಿಕ ಶಿಸ್ತು” (Academic discipline) ಆಗಿ ಬೆಳೆದಿದೆ. ಕ್ಷೇತ್ರಕಾರ್ಯಗಳೇ ಆಗಿದ್ದರೂ ಪ್ರಾಣಿಶಾಸ್ತ್ರಜ್ಞ ಜೀವಪ್ರಕಾರಗಳನ್ನು ಸಂಗ್ರಹಿಸುವುದಕ್ಕೂ, ಭಾಷಾವಿಜ್ಞಾನಿ ಮಾತಿನ ಘಟಕಗಳನ್ನು ಸಂಗ್ರಹಿಸುವುದಕ್ಕೂ, ಮನೋವಿಜ್ಞಾನಿ ಮಾನವನ ಆಲೋಚನೆಗಳನ್ನು ಸಂಗ್ರಹಿಸುವುದಕ್ಕೂ ಅಂತರವಿದ್ದು, ಈ ಕವಲುಗಳ ಕ್ಷೇತ್ರಕಾರ್ಯ ವಿಧಾನ ಕ್ರಮವಾಗಿ Collection (ಸಂಗ್ರಹ),Interview (ಸಂದರ್ಶನ), Observation (ನಿರೀಕ್ಷಣೆ) ರೂಪದ್ದಾಗಿರುತ್ತದೆ. ಇವುಗಳಲ್ಲಿ ಹಸ್ತಪ್ರತಿ ಕ್ಷೇತ್ರಕಾರ್ಯ ಪ್ರಧಾನವಾಗಿ Collection ವರ್ಗಕ್ಕೆ ಸೇರುತ್ತಿದ್ದು, ಗೌಣವಾಗಿ Observation, Interviewಗಳನ್ನೂ ಒಳಗೊಳ್ಳುತ್ತದೆ.

ಸಂಶೋಧನ ಪ್ರಸಂಗದಲ್ಲಿ ಇಂಗ್ಲಿಷ್‌ಭಾಷೆ Research, Invension, Discvoery ಎಂಬ ಪದಗಳನ್ನು ಬಳಸುತ್ತದೆ. ಮರೆಯಲ್ಲಿ ಉಳಿದುಕೊಂಡಿರುವ ಒಂದು ವಸ್ತುವಿನ ಪ್ರಜ್ಞಾಪೂರ್ವಕ ಅಥವಾ ಆಕಸ್ಮಿಕ ಅನ್ವೇಷಣೆಯೇ (Discovery) ಹಸ್ತಪ್ರತಿ ವಿಷಯವಾಗಿ ನಡೆಸುವ ಕ್ಷೇತ್ರಕಾರ್ಯ ಈ Discovery ವರ್ಗಕ್ಕೆ ಸೇರುತ್ತದೆ. ಇದಕ್ಕೆ ಸಮಾನಪದ ಶೋಧ. ಆದರೆ ಈ ಮೊದಲು ಸಿಗದಿದ್ದ ಕೃತಿ ಬಹಸ್ತಪ್ರತಿ ಹುಡುಕುವಿಕೆಗೆ ‘ಶೋಧ’ (Discovery) ಪದವನ್ನು, ಈ ಮೊದಲು ಸಿಕ್ಕ ಕೃತಿಯ ಹಸ್ತಪ್ರತಿಗಳ ಹುಡುಕುವಿಕೆಗೆ ‘ಸಂಗ್ರಹ’ (Collection) ಪದವನ್ನು ಬಳಸುವುದು ಲೇಸು. ಆದುದರಿಂದ ಹಸ್ತಪ್ರತಿ ಕ್ಷೇತ್ರಕಾರ್ಯವು ಶೋಧ ಮತ್ತು ಸಂಗ್ರಹಗಳ ಸಂಯುಕ್ತ ಕ್ರಿಯೆಯಾಗಿದೆ.

‘ವಸ್ತು’ವಿನ ಶೋಧ ಮತ್ತು ಸಂಗ್ರಹರೂಪದ ಕಾರ್ಯಕ್ಕೆ ಸರ್ವಸಾಮಾನ್ಯ ಸೂತ್ರಗಳಿರುವುದಾದರೂ ಇವು ಆಯಾ ಜ್ಞಾನಶಾಖೆಗಳಿಗೆ ಅನುಗುಣವಾಗಿ ಕೆಲವೊಮ್ಮೆ ಬೇರೆಬೇರೆಯಾಗುವುದರಿಂದ ‘ಹಸ್ತಪ್ರತಿ ಕ್ಷೇತ್ರ ಕಾರ್ಯ’ಕ್ಕೆ ಸಂಬಂಧಿಸಿದ ವಿಶಿಷ್ಟ ವಿಧಾನ ವಿಚಾರಗಳನ್ನು ಇಲ್ಲಿ ಮಂಡಿಬಹುದು.

ಕ್ಷೇತ್ರಕಾರ್ಯಕರ್ತ, ಹಸ್ತಪ್ರತಿ, ಹಸ್ತಪ್ರತಿಗಳ ಒಡೆಯ ಈ ಮೂರು ಘಟಕಗಳನ್ನೊಳಗೊಂಡಿದೆ, ಹಸ್ತಪ್ರತಿ ಕ್ಷೇತ್ರಕಾರ್ಯ. ಅದು ಒಡೆಯನಿಂದ ಹಸ್ತಪ್ರತಿಯನ್ನು ಕ್ಷೇತ್ರಕಾರ್ಯಕರ್ತ ದೊರಕಿಸಿಕೊಳ್ಳುವ ಕ್ರಿಯೆ. ಈ ತ್ರಿಕೋನದಲ್ಲಿ ಹಸ್ತಪ್ರತಿಯು ಶಿರೋಕೇಂದ್ರವಾಗಿದ್ದು, ಅದನ್ನು ಒಂದು ಕೇಂದ್ರದಿಂದ ಒಡೆಯ ಉಳಿಸಿಕೊಳ್ಳುವ, ಇನ್ನೊಂದು ಕ್ಷೇತ್ರದಿಂದ ಕ್ಷೇತ್ರಕಾರ್ಯಕರ್ತ ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಾರೆ.

[ಚಿತ್ರ ೦೮]

ಒಡೆಯನನ್ನು ಕ್ಷೇತ್ರಕಾರ್ಯಕರ್ತ ಜಯಿಸುವುದೇ ಈ ಸಂದರ್ಭದ ಕ್ರಿಯೆಯಾಗಿರುವುದರಿಂದ ಇಲ್ಲಿಯ ಪ್ರಧಾನಘಟಕ ಕಾರ್ಯಕರ್ತನಾಗಿದ್ದಾನೆ. ಈತನಿಗೆ ಹಸ್ತಪ್ರತಿ ಸಂಗ್ರಹದ ೧. ಸೈದ್ಧಾಂತಿಕ ಜ್ಞಾನ, ೨. ಪ್ರಾಯೋಗಿಕ ಜ್ಞಾನ, ೩. ತಾಂತ್ರಿಕ ಜ್ಞಾನಗಳ ಅರ್ಹತೆ ಅವಶ್ಯಬೇಕು.

ಹಸ್ತಪ್ರತಿ ಕ್ಷೇತ್ರಕಾರ್ಯದ ‘ಸೈದ್ಧಾಂತಿಕ ಜ್ಞಾನ’ ಎಂಬ ಮಾತು ತುಂಬ ವ್ಯಾಪಕವಾದುದು. ಹಸ್ತಪ್ರತಿಶಾಸ್ತ್ರ, ಗ್ರಂಥಸಂಪಾದನಶಾಸ್ತ್ರಗಳ ಸಂಲಗ್ನಪರಿಜ್ಞಾನವಿದು. ಈ ಉಭಯಶಾಸ್ತ್ರಗಳಿಗೆ ಸಂಬಂಧಿಸಿದ ಹಸ್ತಪ್ರತಿಯ ಸ್ವರೂಪ, ಪ್ರಕಾರ, ಭಾಷೆ, ಅಕ್ಷರ, ಬರವಣಿಗೆಯ ರೀತಿ, ವಿಷಯಸಂಪತ್ತು, ಮಹತ್ವ ಇತ್ಯಾದಿಗಳ ತಿಳಿವಳಿಕೆಯಾದ ಇದು, ಕ್ಷೇತ್ರಕಾರ್ಯಕರ್ತನ ಮೂಲಧನ. ಆದುದರಿಂದ ಕ್ಷೇತ್ರಕಾರ್ಯಕರ್ತ ಗ್ರಂಥಸಂಪಾದನಶಾಸ್ತ್ರ, ಹಸ್ತಪ್ರತಿಶಾಸ್ತ್ರ ಪರಿಜ್ಞಾನಗಳೆಂಬ ಉಭಯ ಅರ್ಹತೆಗಳನ್ನು ಮೈಗೂಡಿಸಿಕೊಂಡಿರಬೇಕಾಗುತ್ತದೆ.

ಈ ಸೈದ್ಧಾಂತಿಕ ಜ್ಞಾನದಷ್ಟೇ ಪ್ರಾಯೋಗಿಕ ಪರಿಜ್ಞಾನವೂ ಕ್ಷೇತ್ರಕಾರ್ಯಕರ್ತನಿಗೆ ಬೇಕು. ದೈಹಿಕ ಶ್ರಮ, ಆರ್ಥಿಕ ತೊಂದರೆಗಳನ್ನೂ ಮೀರಿದ ಅನ್ವಯಿಕ ಪರಿಣತಿಯಿದು. ಇಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕಗಳದು ಜ್ಞಾನಕ್ರಿಯೆಗಳ ಸಂಬಂಧದಂತಿದೆ. ಸೈದ್ಧಾಂತಿಕವಲ್ಲದ ಪ್ರಾಯೋಗಿಕ ಕುರುಡ, ಪ್ರಾಯೋಗಿಕವಲ್ಲದ ಸೈದ್ಧಾಂತಿಕ ಹೆಳವ. ಆದುದರಿಂದ ಕುರುಡನೂ ಅಲ್ಲದ ಹೆಳವನೂ ಅಲ್ಲದ ವ್ಯಕ್ತಿತ್ವ ಕ್ಷೇತ್ರಕಾರ್ಯಕರ್ತನದಾಗಿದೆ.

ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ಷೇತ್ರಕಾರ್ಯಕ್ಕೆ ಯಂತ್ರೋಪಕರಣದ ಬಳಕೆ ಅನಿವಾರ್ಯವೆನಿಸಿದೆ. ಹಸ್ತಪ್ರತಿ ಕ್ಷೇತ್ರಕಾರ್ಯಕರ್ತನಿಗೆ ಕ್ಯಾಮರಾ, ಟೇಪ್‌ರೆಕಾರ್ಡರ್‌ಇವುಗಳಿಗಿಂತ ಮೈಕೊಫಿಲ್ಮ್‌, ಫೋಟೊಸ್ಟ್ಯಾಟ್‌, ಝರಾಕ್ಸ್‌ಯಂತ್ರ, ಚಲನಚಿತ್ರ ಯಂತ್ರಗಳನ್ನು ನಿಯಂತ್ರಿಸುವ ಪ್ರಸಂಗ ಬಂದರೆ ಸಣ್ಣಪುಟ್ಟ ರಿಪೇರಿ ಮಾಡುವ ತಾಂತ್ರಿಕಜ್ಞಾನ ಇಂದು ಅವಶ್ಯವೆಂದು ಹೇಳಬೇಕು.

ಈ ತ್ರಿವಿಧ ಅರ್ಹತೆಗಳ ಬಲದಿಂದ ಈತನು ನಡೆಸುವ ಕ್ಷೇತ್ರಕಾರ್ಯವು ಪರೋಕ್ಷ ಕ್ಷೇತ್ರಕಾರ್ಯ (Non directive field work) ಮತ್ತು ಪ್ರತ್ಯಕ್ಷ ಕ್ಷೇತ್ರಕಾರ್ಯ (Directive field work) ಎಂದು ಎರಡು ತೆರನಾಗಿದೆ. ಸ್ಥಳವನ್ನು ಪ್ರತ್ಯಕ್ಷ ಸಂದರ್ಶಿಸಿ ಹಸ್ತಪ್ರತಿಗಳನ್ನು ಸಂಗ್ರಹಿಸುವುದು ಪ್ರತ್ಯಕ್ಷಕ್ಷೇತ್ರಕಾರ್ಯವಾದರೆ, ಹೀಗೆ ಮಾಡುವ ಬದಲು ಅಂಚೆ ಮೂಲಕ, ಅನ್ಯವ್ಯಕ್ತಿ ಮೂಲಕ ಈ ಕಾರ್ಯವನ್ನು ಕೈಗೂಡಿಸಿಕೊಳ್ಳುವುದು ಪರೋಕ್ಷ ಕ್ಷೇತ್ರಕಾರ್ಯ ಹಸ್ತಪ್ರತಿ ಒಡೆಯರು ತಿಳಿವಳಿಕೆಯವರಿದ್ದರೆ, ಹಸ್ತಪ್ರತಿಗಳು ಸಾರ್ವಜನಿಕ ಸಂಪತ್ತು ಎಂಬ ಪ್ರಜ್ಞೆಯವರಾಗಿದ್ದರೆ ಅವುಗಳ “ಪರೋಕ್ಷ ಕ್ಷೇತ್ರಕಾರ್ಯ” ಸಾಧ್ಯವಾಗುತ್ತದೆ. ಆದರೆ ಮೇಲೆ ಹೇಳಿದ ಪ್ರಜ್ಞೆಗಳ ಅಭಾವದ ಭಾರತೀಯ ಪರಿಸರದಲ್ಲಿ ಇದು ಅಸಾಧ್ಯವೇ ಸರಿ. ಅಲ್ಲದೆ ‘ಪ್ರತ್ಯಕ್ಷ ಕ್ಷೇತ್ರಕಾರ್ಯ’ದಿಂದ ‘ಪಠ್ಯಶೋಧ’ದೊಂದಿಗೆ ‘ಪರಿಸರಶೋಧ’ವೂ ಸಾಧ್ಯವಾಗುವುದರಿಂದ ಪರೋಕ್ಷ ಕ್ಷೇತ್ರಕಾರ್ಯಕ್ರಿಂತ ಪ್ರತ್ಯಕ್ಷ ಕ್ಷೇತ್ರಕಾರ್ಯವೇ ಲೇಸು. ಹೀಗಾಗಿ ಹಸ್ತಪ್ರತಿಶಾಸ್ತ್ರ ಕೇವಲ ‘ಪ್ರಯೋಗಶಾಲೆ’ ಅಥವಾ “ಗ್ರಂಥಾಲಯ” ಜ್ಞಾನಶಾಖೆಯಾಗಿರದೆ ಅದು ಪ್ರದೇಶ ಪರ್ಯಟನವನ್ನೂ ಬಯಸುವ ಶಾಖೆಯಾಗಿದೆಯೆಂದು ಸ್ಪಷ್ಟವಾಗುತ್ತದೆ.

ಪ್ರತ್ಯಕ್ಷ ಕ್ಷೇತ್ರಕಾರ್ಯವು ೧. ಪೂರ್ವಸಿದ್ಧತೆ, ೨. ಕ್ಷೇತ್ರಕಾರ್ಯ ಎಂಬ ಎರಡು ಹಂತಗಳನ್ನೊಳಗೊಂಡಿದೆ.

ಪೂರ್ವಸಿದ್ಧತೆಗೆ ಮಾನಸಿಕ ಪೂರ್ವಸಿದ್ಧತೆಯೇ ಮುಖ್ಯ. ಇಲ್ಲದಿದ್ದರೆ ಒಲ್ಲದ ಕುದುರೆಗೆ ನೀರು ಕುಡಿಸುವ ವ್ಯರ್ಥಪ್ರಯತ್ನವಾಗಿಬಿಡುತ್ತದೆ. ಮಾನಸಿಕ ಸಿದ್ಧತೆಯ ತರುವಾಯ ತನ್ನ ಕ್ಷೇತ್ರಕಾರ್ಯದ ವಿಷಯ, ಪ್ರದೇಶ ಇವುಗಳಿಗೆ ಸಂಬಂಧಪಟ್ಟ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ತಾನು ಕೈಗೆತ್ತಿಕೊಂಡ ಭಾಷೆ, ವಿಷಯಗಳಲ್ಲಿ ಹುಟ್ಟಿದ ಕೃತಿಗಳ ವಸ್ತು, ಅವುಗಳ ಪ್ರಕಟಿತ ಅಪ್ರಕಟಿತ ಸ್ಥಿತಿ, ಹಸ್ತಪ್ರತಿ ಕ್ಯಾಟಲಾಗಗಳ ಸವಿವರ ಅಭ್ಯಾಸ, ಕ್ಷೇತ್ರಕಾರ್ಯಕ್ಕೆ ಆಯ್ದುಕೊಂಡ ಪ್ರದೇಶದ ಭೌಗೋಲಿಕ ತಿಳಿವಳಿಕೆ, ಮಾರ್ಗವ್ಯವಸ್ಥೆ, ವಾಹನ ಸೌಕರ್ಯ, ಅಲ್ಲಿಯ ಸ್ನೇಹಿತರ, ಅಧಿಕಾರಿಗಳ, ಪ್ರತಿಷ್ಠಿತರ, ಹಸ್ತಪ್ರತಿ ಒಡೆಯರ ವಿವರ ಇತ್ಯಾದಿಗಳ ತಿಳಿವಳಿಕೆಯೊಂದಿಗೆ ಪ್ರಯಾಣ ಪ್ರವೃತ್ತನಾಗಬೇಕು. ಇದಲ್ಲದೆ ಹಸ್ತಪ್ರತಿಗಳು ಪ್ರತಿಷ್ಠಿತ ಮತ್ತು ಪಂಡಿತರ ವಂಶಜರಲ್ಲಿ, ದೇವಾಲಯ ಮಠಗಳಲ್ಲಿ ಸಿಗುವುದೆಂಬುದನ್ನೂ ಆಯಾ ಮತೀಯರಲ್ಲಿ ಸ್ವಮತೀಯ ಗ್ರಂಥಗಳೇ ಸಾಮಾನ್ಯವಾಗಿ ಲಭಿಸುವವೆಂಬುದನ್ನೂ ಅರಿತಿರಬೇಕು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಜೈನ ವೀರಶೈವ ವ್ಯಕ್ತಿಗಳಲ್ಲಿ ಕನ್ನಡ ಹಸ್ತಪ್ರತಿ, ಬ್ರಾಹ್ಮಣವ್ಯಕ್ತಿಗಳಲ್ಲಿ ಸಂಸ್ಕೃತ ಹಸ್ತಪ್ರತಿ ಸಿಗುತ್ತವೆ. ಉತ್ತರ ಕರ್ನಾಟಕದಲ್ಲಿ ವೀರಶೈವ ಸಾಹಿತ್ಯ, ರಾಯಚೂರು ಜಿಲ್ಲೆಯಲ್ಲಿ ದಾಸಸಾಹಿತ್ಯ, ಕರಾವಳಿ ಪ್ರದೇಶದಲ್ಲಿ ಭಾಗವತ, ಯಕ್ಷಗಾನ ಹಸ್ತಪ್ರತಿಗಳೇ ವಿಪುಲವಾಗಿ ಸಿಗುತ್ತವೆ. ಇಂಥ ವೈಷಯಿಕ ಮತ್ತು ವ್ಯಾವಹಾರಿಕ ತಿಳಿವಳಿಕೆ ಕ್ಷೇತ್ರ ಕಾರ್ಯಕರ್ತನಿಗೆ ಇರಬೇಕು. ಒಟ್ಟಿನಲ್ಲಿ ಹಸ್ತಪ್ರತಿಗಳ ‘ಅಭ್ಯಾಸಿ’, ಕ್ಷೇತ್ರಕಾರ್ಯದ “ಹವ್ಯಾಸಿ”ಯಾಗಿರಬೇಕು. ಇದು ಪೂರ್ವಸಿದ್ಧತೆ.

ಗೊತ್ತಾದ ಸ್ಥಳವನ್ನು ತಲುಪಿ ಕಾರ್ಯನಿರತನಾಗುವುದೇ ‘ಕ್ಷೇತ್ರಕಾರ್ಯ’. ಇಲ್ಲಿ ಈತನ ಅಗ್ನಿಪರೀಕ್ಷೆ ಆರಂಭವಾಗುತ್ತದೆ. ಕ್ಷೇತ್ರಕಾರ್ಯವೆಂದರೆ ಒಡೆಯನ ವಶದಲ್ಲಿರುವ ಹಸ್ತಪ್ರತಿಯನ್ನು ಪಡೆಯುವುದೇ ಆಗಿದೆ. ಸಾಮಾನ್ಯವಾಗಿ ಒಡೆಯ ಮತ್ತು ಕ್ಷೇತ್ರ ಕಾರ್ಯಕರ್ತರು ಪರಸ್ಪರ ಅಪರಿಚಿತರು. ಆದುದರಿಂದ ಕಾರ್ಯಕರ್ತ ತನ್ನ ಸಮಯೋಚಿತ ಮಾತು ರೀತಿಗಳಿಂದ ಅವರ ಮನಸ್ಸನ್ನು ಗೆದೆಯಬೇಕು. ಅವರಿಗೆ ತನ್ನ ಬಗೆಗೆ, ತನ್ನ ಕಾರ್ಯದ ಬಗೆಗೆ, ಹಸ್ತಪ್ರತಿಗಳನ್ನು ಭಂಡಾರದಲ್ಲಿ ರಕ್ಷಿಸುವ ಬಗೆಗೆ ವಿಶ್ವಾಸ ಹುಟ್ಟುವಂತೆ ವರ್ತಿಸಬೇಕು. ವೈಯಕ್ತಿಕ ಪ್ರಭಾವ, ಸಾರ್ವಜನಿಕ ಪ್ರಚಾರದಿಂದ ತಕ್ಕ ವಾತಾವರಣವನ್ನು ನಿರ್ಮಿಸಬೇಕು. ಈ ವಾತಾವರಣ ನಿರ್ಮಾಣಕ್ಕಾಗಿ ಹಸ್ತಪ್ರತಿಯ ಮಹತ್ವವನ್ನು ಪ್ರತಿಪಾದಿಸುವ ಉಪನ್ಯಾಸಗಳನ್ನು, ಹಸ್ತಪ್ರತಿಯ ಮಹತ್ವ, ಅವುಗಳ ಸಂರಕ್ಷಣೆಯ ಮಹತ್ವಗಳನ್ನು ಬಿಂಬಿಸುವ ಚಲನಚಿತ್ರ ಪ್ರದರ್ಶನ ಇತ್ಯಾದಿಗಳನ್ನು ಏರ್ಪಾಡು ಮಾಡಬಹುದು.

ಯಾವುದೇ ವಸ್ತುವಿಗೂ ಅದರ ಒಡೆಯನಿಗೂ ಇರುವ ಭೌತಿಕ ಸಂಬಂಧವು ನಿತ್ಯ ಸಂಪರ್ಕ ಕಾರಣವಾಗಿ ಭಾವನಾತ್ಮಕ ಸಂಬಂಧವಾಗಿ ಬೆಳೆದಿರುತ್ತದೆ. ದೇವರ ಜೊತೆ ಜಗುಲಿಯ ಮೇಲೆ ಪೂಜಿಸುವ ಹಸ್ತಪ್ರತಿಗಳ ವಿಷಯವಾಗಿ ದೈವೀಸಂಬಂಧ ಬೆಸೆದುಕೊಂಡಿರುತ್ತದೆ. ಈಗ ಕ್ಷೇತ್ರಕಾರ್ಯಕರ್ತ ಕ್ರಮೇಣ ಒಡೆಯನ ದೈವಿಕ, ಭಾವನಾತ್ಮಕ, ಭೌತಿಕ ಸಂಬಂಧ ಸಂಕೋಲೆಗಳಿಂದ ಹಸ್ತಪ್ರತಿಯನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಕೆಲವು ಸಲ ಅವರು ತಮ್ಮ ವಶದಲ್ಲಿರುವುದು ಅಸಾಮಾನ್ಯ ಕೃತಿಯೆಂಬ, ಹಸ್ತಪ್ರತಿಯನ್ನು ಹಸ್ತಾಂತರಿಸುವುದರಿಂದ ತಮಗೆ ಕೇಡೆಂಬ ಭ್ರಮೆಯಲ್ಲಿರುತ್ತಾರೆ. ಕೆಲವರಂತೂ ಹಸ್ತಪ್ರತಿ ಇಟ್ಟುಕೊಳ್ಳುವುದು ಪ್ರತಿಷ್ಠೆಯೆಂದು ಭಾವಿಸಿರುತ್ತಾರೆ. ಕ್ಷೇತ್ರ ಕಾರ್ಯಕರ್ತ ಮೊದಲು ಒಡೆಯನನ್ನು ಈ ಭ್ರಮೆಗಳಿಂದ ಮುಕ್ತಮಾಡಿ ದಾನವಾಗಿಯೋ ಹಣಕೊಟ್ಟೋ ಪಡೆಯಬಹುದು. ಹಣಕ್ಕೆ ದೇವರನ್ನೂ ಮಾರುವ ದ್ರವ್ಯಭಕ್ತರ ಇಂದಿನ ಸಮಾಜದಲ್ಲಿ ಹಸ್ತಪ್ರತಿಗಳ ಖರೀದಿಯು ೨೦ನೆಯ ಶತಮಾನದ ಪೂರ್ವಾಧಕ್ಕಿಂತ ಉತ್ತರಾರ್ಧದಲ್ಲಿ ಸರಳಕಾರ್ಯವಾಗಿದೆ. ಆದುದರಿಂದ ಹಣದ ಆಸೆ ಆಮಿಷಗಳನ್ನು ಒಡ್ಡಿ ಹಸ್ತಪ್ರತಿಗಳನ್ನು ಖರೀದಿ ಮಾಡುವುದೇ ಇಂದು ಯೋಗ್ಯವಾಗಿ ತೋರುತ್ತದೆ. ಆದರೆ ಈ ವಿಧಾನದಿಂದಾಗಿ ಹಸ್ತಪ್ರತಿ ಒಡೆಯರು ಬಾಯಿಗೆ ಬಂದಷ್ಟು ಹಣ ಕೇಳುವ ಚಟಕ್ಕೆ ಬೀಳದಂತೆ ಎಚ್ಚರವಹಿಸಬೇಕು.

ಯಾವುದೇ ಕೃತಿ ಅಚ್ಚಾಗಿದ್ದರೆ ಅದರ ಹಸ್ತಪ್ರತಿಗೆ ಬದಲು ಅಚ್ಚಿನ ಪ್ರತಿ ಕಳಿಸಿಕೊಡುವ, ಹಸ್ತಾಂತರಿಸಲು ಒಪ್ಪದ ಬೆಲೆಯುಳ್ಳ ಹಸ್ತಪ್ರತಿಯಿದ್ದರೆ ಪ್ರತಿಮಾಡಿಕೊಂಡು ಹಿಂದಿರುಗಿಸುವ ಭರವಸೆ ನೀಡಬೇಕು. ಇಷ್ಟಾಗಿಯೂ ಒಪ್ಪದಿದ್ದರೆ ಸ್ನೇಹಿತರಿಂದ, ಪ್ರತಿಷ್ಠಿತರಿಂದ, ಅಧಿಕಾರಿಗಳಿಂದ ಅವನ ಮೇಲೆ ಒತ್ತಾಯ ತರಬೇಕು. ಒಂದು ರೀತಿ ಸಾಮ, ದಾನ, ಭೇದ, ದಂಡ ಕ್ರಮ ಇಲ್ಲಿ ನಡೆಯಬೇಕು. ಮೂಡಬಿದರೆ ಜೈನಮಠದ ಶ್ರುತಭಾಂಡಾರದಿಂದ ಧವಲಾ, ಜಯಧವಲಾ, ಮಹಾಧವಲಾ ಹಸ್ತಪ್ರತಿಗಳನ್ನು ಪಡೆಯಲು ಜೈನವಿದ್ವಾಂಸರು ವಹಿಸಿದ ಶ್ರಮ, ವ್ಯಹಿಸಿದ ಹಣ-ಸಮಯಗಳು ಕ್ಷೇತ್ರಕಾರ್ಯಕರ್ತನಿಗೆ ಆದರ್ಶವಾಗಬೇಕು. ಒಂದು ವೇಳೆ ಹಸ್ತಪ್ರತಿ ಕೈವಶವಾಗುವುದೇ ಅಸಾಧ್ಯವೆನಿಸಿದಾಗ ಅದರ ಟಿಪ್ಪಣಿ ಬರೆದುಕೊಳ್ಳುವ, ಇದಕ್ಕಿಂತ ಮೈಕ್ರೋಫಿಲ್ಮ ಪ್ರತಿ ಮಾಡಿಕೊಳ್ಳುವುದರೊಂದಿಗೆ ಅದರ ಆದ್ಯಂತ್ಯ ಗರಿಗಳ ಫೋಟೋ ತೆಗೆದುಕೊಳ್ಳುವ ಕೆಲಸ ಮಾಡಬೇಕು.

ಹಸ್ತಪ್ರತಿ ಕ್ಷೇತ್ರಕಾರ್ಯವೆಂದರೆ ಪಠ್ಯವನ್ನು ಸಂಗ್ರಹಿಸುವುದಾಗಿರುವಂತೆ ಅದರ ಪರಿಸರವನ್ನು ಸಂಗ್ರಹಿಸುವುದೂ ಆಗಿದೆ. ಇವುಗಳನ್ನು ‘ಪಠ್ಯಶೋಧ’, ‘ಪರಿಸರಶೋಧ’ ಎಂದು ಕರೆಯಬಹುದು. ಈವರೆಗೆ ಕೇವಲ ಪಠ್ಯಶೋಧ ಮತ್ತು ಒಡೆಯನ ವಿಳಾಸ ದಾಖಲೆಗಳಿಗೆ ಮಾತ್ರ ಮೀಸಲಾಗಿರುವ ಕ್ಷೇತ್ರಕಾರ್ಯ ಇನ್ನು ಮೇಲೆ ‘ಪರಿಸರಶೋಧ’ವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ. ಏಕೆಂದರೆ ಯಾವುದೇ ಹಸ್ತಪ್ರತಿ ತನ್ನ ಪರಿಸರದ ಉಪೇಕ್ಷೆಗೆ ಗುರಿಯಾಗಿರಬಹುದು; ಇಲ್ಲವೆ ತನ್ನ ಪರಿಸರದಲ್ಲಿ ತುಂಬ ಪ್ರಭಾವಶಾಲಿಯಾಗಿ ವ್ಯವಹರಿಸುತ್ತಿರಬಹುದು. ಈ ಆವರಣವನ್ನು ಅಂದರೆ ಅದರ ಉಗಮ-ಆಗಮ, ಅದು ಆ ಮನೆತನ ಆ ಪರಿಸರದೊಂದಿಗೆ ಹೊಂದಿದ ಸಂಬಂಧ, ಗಳಿಸಿದ ಪ್ರತಿಷ್ಠೆ ಇತ್ಯಾದಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಜೈನ ಹಸ್ತಪ್ರತಿಗಳು ಬೆಳ್ಗೊಳದಿಂದ ಬಿಹಾರದ ಆರಾಪಟ್ಟಣಕ್ಕೆ ಮತ್ತು ಜರ್ಮನಿಯ ಸ್ಟ್ರಾಟ್ಸಬರ್ಗಕ್ಕೆ ವಲಸೆಹೋದ ಸಂಗತಿಗಳು ನಿಜಕ್ಕೂ ದಾಖಲಾರ್ಹವಾಗಿವೆ. ಹಸ್ತಪ್ರತಿಯನ್ನು ಸ್ನಾನ ಮಾಡಿಯೇ ಮುಟ್ಟುವ, ವರ್ಷಕ್ಕೊಮ್ಮೆ ಜಾತ್ರೆಯಂಥ ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಿಚ್ಚಿ ಓದುವ, ಗ್ರಂಥದಿಂದ ರೋಗನಿವಾರಣೆ ಮಾಡುವ, ಜ್ಞಾನಸಿಂಧುವನ್ನು ವೃದ್ಧರಿಗೆ ಮಾತ್ರ ಓದಲು ಹೇಳುವ, ಹಸ್ತಪ್ರತಿಯನ್ನು ಶಕುನಗ್ರಂಥದಂತೆ ಬಳಸುವ ರೋಮಾಂಚಕ, ಭಾವನಾತ್ಮಕ ಸಂಬಂಧಗಳು ಕೆಲವು ಹಸ್ತಪ್ರತಿಗಳ ಸುತ್ತ ಬೆಳೆದಿರುತ್ತವೆ. ಹಳ್ಳಿಯಿಂದ ದಿಲ್ಲಯವರೆಗೆ ಪ್ರಚಾರಪಡೆದ ಹಾರನಹಳ್ಳಿ ಕೋಡಿಮಠದ ಗ್ರಂಥ, ಬೀಗ ಬಂಧನದಲ್ಲಿರುವ ಹೊಕ್ಕರಾಣಿಯ ವಚನಗ್ರಂಥ “ಪರಿಸರಶೋಧ”ಕ್ಕೆ ಒಳ್ಳೆಯ ಉದಾಹರಣೆಯಾಗಿವೆ. ಹೀಗೆ ಕೆಲವು ಹಸ್ತಪ್ರತಿ ಇಲ್ಲವೆ ಹಸ್ತಪ್ರತಿ ಸಂಗ್ರಹಗಳ ಸುತ್ತ ಇಂಥ ಭಾವಪರಿವೇಷ ಬೆಳೆದಿರುತ್ತದೆ. ಕಾರಣ ಯಾವುದೇ ಹಸ್ತಪ್ರತಿಯನ್ನು ಅದರ ಸುತ್ತ ಹೆಣೆದಿರುವ ಪ್ರಭಾವಕೋಶದೊಂದಿಗೇ ಸಂಗ್ರಹಿಸಬೇಕು.

ಕವಿಯ ಮತ್ತು ಕೃತಿನಾಯಕರ ವಂಶಸ್ಥರಲ್ಲಿ ಸಿಗುವ ಹಸ್ತಪ್ರತಿಗೆ ಮಿಕ್ಕೆಡೆಗಳ್ಲಲಿ ಸಿಗುವ ಹಸ್ತಪ್ರತಿಗಿಂತ ವಿಶೇಷ ಮಹತ್ವವಿರುತ್ತದೆ. ಕವಿಯ ಸ್ವಹಸ್ತಾಕ್ಷರ ಪ್ರತಿ ಇದಕ್ಕಿಂತ ಬೆಲೆಯುಳ್ಳದ್ದು. ಮುದ್ದಣ್ಣ, ಪಂಚಬಾಣರು ಕೈಮುಟ್ಟಿ ಬರೆದ ರಾಮಾಶ್ವಮೇಧ, ಭುಜಬಲಿ ಚರಿತೆಯ ಪ್ರತಿಗಳು ಈ ಸಾಲಿನಲ್ಲಿ ನಿಲ್ಲುತ್ತವೆ. “ಎಲ್ಲಾ ಗ್ರಂಥ ಬಗಲಾಗ, ಪ್ರಭುಲಿಂಗ ಲೀಲೆ ತಲಿಮ್ಯಾಗ” ಎನ್ನುತ್ತಿದ್ದ ಮುಸಲ್ಮಾನ ಶಿಶುನಾಳ ಶರೀಫ ಸಾಹೇಬರು ಸ್ವಹಸ್ತದಿಂದ ಬರೆದ ಪ್ರಭುಲಿಂಗಲೀಲೆ ಹಸ್ತಪ್ರತಿಗೆ ಇರುವ ಸಾಂಸ್ಕೃತಿಕ ಮಹತ್ವವನ್ನು ಬೇರೆ ಹೇಳಬೇಕಿಲ್ಲ. ಆದುದರಿಂದ ಹಸ್ತಪ್ರತಿಯ ಆತ್ಮಚರಿತ್ರೆ ರೂಪದ ಇಂಥ ಸಂಗತಿಗಳ ಸಂಗ್ರಹದ ಕಡೆಗೂ ಕಾರ್ಯಕರ್ತ ಅವಶ್ಯ ಗಮನ ಕೊಡಬೇಕು. ಕೆಲವೊಮ್ಮೆ ಈ ಹಸ್ತಪ್ರತಿಗಳನ್ನು ಇಟ್ಟಸ್ಥಳ, ಕಟ್ಟಲು ಉಪಯೋಗಿಸಿದ ವಸ್ತ್ರ, ಬಳಸಲಾದ ಕ್ರಿಮಿನಿರೋಧಕ ದ್ರವ್ಯ ಇತ್ಯಾದಿಗಳೂ ವಿಶೇಷ ಮಾಹಿತಿ ಒದಗಿಸುವ ಸಂಭವವಿರುತ್ತದೆ. ಸಾಮಾನ್ಯವಾಗಿ ಹಸ್ತಪ್ರತಿಗಳನ್ನು ಕಟ್ಟಲು ಕೆಂಪು ವಸ್ತ್ರವನ್ನು, ಒಳಗೆ ಹಾವಿನ ಪೊರೆಯನ್ನು ಬಳಸುವುದರ ಔಚಿತ್ಯ ಇತ್ಯಾದಿಗಳನ್ನೂ ಲಕ್ಷಿಸಬೇಕು.

ಕೃತಿಯೊಂದನ್ನು ‘ಹಸ್ತಪ್ರತಿ ರೂಪ’ದ ಜೊತೆ, ಪರಾಂಪಾರಿಕವಾಗಿ ‘ವಾಚಿಕರೂಪ’ದಲ್ಲಿಯೂ ಕೆಲವೆಡೆ ಉಳಿಸಿಕೊಂಡು ಬಂದಿರುತ್ತಾರೆ. ಸಾಲೊಟಗಿಯಲ್ಲಿ ಡಂಗುರ ಪದಗಳನ್ನು, ಕೊಡೇಕಲ್ಲದಲ್ಲಿ ಕಾಲಜ್ಞಾನ ವಚನಗಳನ್ನು ವಿಶಿಷ್ಟ ಬಗೆಯಲ್ಲಿ ವಿಶಿಷ್ಟವಾದ್ಯಗಳೊಂದಿಗೆ ಹಾಡುತ್ತಿದ್ದು; ಇಂಥದಲ್ಲಿ ಹಸ್ತಪ್ರತಿ ಸಂಗ್ರಹದೊಂದಿಗೆ ಧ್ವನಿಮುದ್ರಣ ಕಾರ್ಯವನ್ನೂ ಪೂರೈಸಿಕೊಳ್ಳಬೇಕು. ಕೆಲವೆಡೆ ಹಸ್ತಪ್ರತಿ ಎಂದೋ ಹಾಳಾಗಿ ಕೇವಲ ಅದರ ಪದ್ಯಗಳನ್ನು ಪರಂಪರಾಗತವಾಗಿ ಹಾಡುತ್ತಿರಬಹುದು. ರಾಘವಾಂಕನ ಅನುಪಲಬ್ಧ ಶರಭಚಾರಿತ್ರದ ಬಿಡಿಪದ್ಯಗಳನ್ನು ಬಳ್ಳಾರಿ ಜಿಲ್ಲೆಯಲ್ಲಿ ಹಾಡುವುದಾಗಿ ತಿಳಿದುಬಂದಿದೆ. ಉಳಿದುನಿಂತ ಈ ಮತ್ತು ಇಂಥ ಸಂಪತ್ತನ್ನು ಕಷ್ಟಪಟ್ಟು ರಕ್ಷಿಸಿಕೊಳ್ಳಬೇಕು.

ಅನುಪಲಬ್ಧ ಕೃತಿಗಳ ಹಸ್ತಪ್ರತಿ ಇಲ್ಲವೆ ಅಪರೂಪ ಹಸ್ತಪ್ರತಿಗಳ ಶೋಧಕ್ಕೆ ಕ್ಷೇತ್ರಕಾರ್ಯದಲ್ಲಿ ಬಹುದೊಡ್ಡ ಮಹತ್ವವಿದೆ. ಆದುದರಿಂದ ಕ್ಷೇತ್ರಕಾರ್ಯಕರ್ತ ಅಂಥವುಗಳನ್ನು ನಿರಂತರ ಬೆನ್ನಟ್ಟಿ ನಡೆಯಬೇಕು. ಕವಿರಾಜಮಾರ್ಗ ಹಸ್ತಪ್ರತಿಯ ಸುಳುಹು ಹಿಡಿದು ಬೀದರ ಜಿಲ್ಲೆಯಲ್ಲಿ ಅದನ್ನು ಪತ್ತೆಹಚ್ಚಲು ನಾನು ೧೦ ವರ್ಷ ನಿರಂತರ ಪ್ರಯತ್ನ ಮಾಡಬೇಕಾಯಿತು. ಧಾರವಾಡ ಪ್ರದೇಶದಲ್ಲಿ “ಗಂಧಹಸ್ತಿ ಮಹಾಭಾಷ್ಯ” ಹಸ್ತಪ್ರತಿಯಿದೆಯೆಂಬ ವದಂತಿಯನ್ನು ಹಿಂಬಾಲಿಸುವ ಪ್ರಯತ್ನ ಇಂದು ನಡೆಯಬೇಕಾಗಿದೆ.

ಹಸ್ತಪ್ರತಿ ಸಣ್ಣದಿರಲಿ ದೊಡ್ಡದಿರಲಿ, ಉಪಯುಕ್ತವಿರಲಿ ನಿರುಪಯುಕ್ತವಿರಲಿ ಅಲಕ್ಷಿಸದೆ ಅದೆಲ್ಲವನ್ನೂ ಸಂಗ್ರಹಿಸಬೇಕು. ಏಕೆಂದರೆ ಒಂದು ದೃಷ್ಟಿಯಿಂದ ನಿರುಪಯುಕ್ತವೆನಿಸಿದರೂ ಇನ್ನೊಂದು ದೃಷ್ಟಿಯಿಂದ ಅದು ತುಂಬ ಉಪಯುಕ್ತವಾಗಿರುತ್ತದೆ. ಆರಾ ಹಸ್ತಪ್ರತಿ ಭಂಡಾರದಲ್ಲಿಯ ಅಚಣ್ಣನ ವರ್ಧಮಾನ ಪುರಾಣದ ಮಾರ್ಜಿನ್‌ನಲ್ಲಿಯ ಉಲ್ಲೇಖ ನಾಗವರ್ಮನ ವರ್ಧಮಾನ ಪುರಾಣ ಶೋಧನೆಗೆ ಬೆಲೆಯುಳ್ಳ ಸೂಚನೆ ನೀಡಿತೆಂಬುದನ್ನು ಇಲ್ಲಿ ನೆನೆಯಬಹುದು.

ಹಸ್ತಪ್ರತಿಯನ್ನು ಅವಲೋಕಿಸುವಲ್ಲಿ ಅವಸರ ಎಷ್ಟೊ ಸಲ್ಲದು. ಇದರಿಂದಾಗಿ ಕೆಲವು ಕೃತಿಗಳು ಕಣ್ತಪ್ಪಿ ಮರೆಯಲ್ಲುಳಿಯಬಹುದು. ಶ್ರೀಭುಜಬಲಿಶಾಸ್ತ್ರಿಗಳ ಕಣ್ತಪ್ಪಿಸಿ ಉಳಿದಿದ್ದ ನಾಗವರ್ಮನ ವರ್ಧಮಾನಪುರಾಣ ಶ್ರೀ ಸಣ್ಣಯ್ಯನವರಿಂದ ಬೆಳಕಿಗೆ ಬಂದುದನ್ನು ಇಲ್ಲಿ ನೆನೆಯಬೇಕು. ಹಳಕಟ್ಟಿಯವರು “ವಿಜಾಪುರ ಜಿಲ್ಲೆಯಲ್ಲಿದ್ದಾಗ ನಾನು ಹೋದ ಗ್ರಾಮಗಳಲ್ಲಿ ಅವುಗಳ (ವಚನಗಳ) ವಿಷಯವಾಗಿ ನಾನು ಶೋಧ ಮಾಡುತ್ತಿದ್ದು, ನನಗೆ ದೊರೆತ ವಚನಗಳಲ್ಲಿ ನನಗೆ ಮಹತ್ವವೆಂದು ಕಂಡ ವಚನಗಳನ್ನಷ್ಟೇ ನಾನು ಬರೆದುಕೊಳ್ಳುತ್ತ ಬಂದೆನು” ಎಂದೂ, ಆರ್‌. ನರಸಿಂಹಾಚಾರ್‌ಅವರು “ಹಿಂದೆ ಮದ್ರಾಸ್‌ಪ್ರಾಚ್ಯಕೋಶಾಲಯ ಮುಂತಾದ ಸ್ಥಳಗಳಲ್ಲಿ ಪುಸ್ತಕಗಳನ್ನು ಪರಿಶೀಲಿಸಿದಾಗ ಪ್ರಥಮ ಸಂಪುಟಕ್ಕೆ ಬೇಕಾದ ವಿಷಯಗಳನ್ನು ಮಾತ್ರ ವಿಸ್ತಾರವಾಗಿ ಗುರುತ ಹಾಕಿಕೊಂಡು ಅವಶ್ಯಕತೆ ಬಿದ್ದಾಗ ಪುನಃ ಹೋಗಿ ನೋಡಬಹುದೆಂಬ ಭಾವನೆಯಿಂದ ಮಿಕ್ಕ ವಿಷಯಗಳನ್ನು ಬಹಳ ಸಂಗ್ರಹವಾಗಿ ಗುರುತು ಹಾಕಿದ್ದೆನು. ಮತ್ತೊಂದಾವೃತ್ತಿ ಹೋಗಿ ನೋಡಿದಾಗ ಹಿಂದೆ ನೋಡಿದ್ದ ಪುಸ್ತಕಗಳಲ್ಲಿ ಹಲವು ನನ್ನ ದುರಾದೃಷ್ಟದಿಂದ ಹುಳಗಳ ಬಾಯಿಗೆ ತುತ್ತಾಗಿ ನಾಶವಾಗಿ ಹೋಗಿದ್ದವು. ಹೀಗೆ ನಷ್ಟವಾದ ಪುಸ್ತಕಗಳ ಪ್ರತ್ಯಂತರಗಳು ಬೇರೆಕಡೆ ಎಷ್ಟು ಹುಡುಕಿದರೂ ದೊರೆಯದೆ ಹೋದುವೆಂದೂ ಹೇಳಿದ ಮಾತುಗಳಿಂದ ಕ್ಷೇತ್ರಕಾರ್ಯದಲ್ಲಿ ಇವರು ತೋರಿದ ಉದಾಸೀನತೆ ಕಾರಣವಾಗಿ ನಮಗಾದ ನಷ್ಟವನ್ನು ಊಹಿಸಿಕೊಳ್ಳಬಹುದು.

ಸಂಗ್ರಹಿತ ಅಥವಾ ಸಂದರ್ಶಿತ ಹಸ್ತಪ್ರತಿಗಳ ಸರಿಯಾದ ಸವಿವರ ಮಾಹಿತಿ ಬರೆದುಕೊಳ್ಳಲು ಕಾರ್ಯಕರ್ತ ತಪ್ಪಬಾರದು. ಇಲ್ಲದಿದ್ದರೆ ಮುಂದಿನ ಕಾಲದಲ್ಲಿ ಸಂಶೋಧಕ ತುಂಬ ತೊಂದರೆ ಪಡಬೇಕಾಗುತ್ತದೆ. ಶ್ರೀ ಕೆ. ಬಿ. ಪಾಠಕ ಅವರು ನೋಡಿದ್ದ, ಫ್ಲೀಟರೂ ಬಳಸಿದ್ದ “ಉಪಸರ್ಗ ಕೇವಲಿಗಳ ಕಥೆ” ಶೀರ್ಷಿಕೆಯ ವಡ್ಡಾರಾಧನೆಯ ಹಸ್ತಪ್ರತಿ ಕೊಲ್ಲಾಪುರ ಲಕ್ಷ್ಮೀಸೇನ ಭಟ್ಟಾರಕ ಭಂಡಾರಕ್ಕೆ ಸೇರಿದುದೆಂಬುದನ್ನು ಪತ್ತೆಹಚ್ಚಲು ಡಾ. ಎ. ಎನ್‌. ಉಪಾಧ್ಯೆ ಅವರಿಗೆ ಹಲವು ದಶಕಗಳೇ ಬೇಕಾದವು. ಹುಲ್ಲೂರೂ ಶ್ರೀನಿವಾಸ ಜೋಯಿಸರು ನೋಡಿದ್ದ ಹಂಪೆಯ ಮಹಾಲಿಂಗನ ಬಾಲರಾಮನ ಸಾಂಗತ್ಯ, ಕೆಂಚಶೆಟ್ಟಿಸುತ ರಾಮಕೃತ ಸಿರುಮನ ಸಾಂಗತ್ಯಗಳ ಏಕೈಕ ಹಸ್ತಪ್ರತಿಗಳು ಸಂಶೋಧಕರು ಜಾಲವೊಡ್ಡಿ ಹುಡುಕಿದರೂ ಇಂದು ಸಿಗಲೊಲ್ಲವು. “ವಚನಶಾಸ್ತ್ರ ಸಾರ”ದಲ್ಲಿಯ ಎಷ್ಟೋ ವಚನಗಳಿಗೆ ಇದ್ದ ಮೂಲ ಆಕರ ಗ್ರಂಥಗಳು ಇಂದು ನಮಗೆ ಸಿಗುತ್ತಿಲ್ಲ. “ಮೂವರ್ರಾಯನರನೆ ಮಾರುವಂತೆಸೆದಿರ್ಕ್ಕುಂ” ಎಂಬ ಪದ್ಯವನ್ನೊಳಗೊಂಡ ಗಿರಿಜಾಕಲ್ಯಾಣ ಹಸ್ತಪ್ರತಿಯನ್ನು ಕವಿಚರಿತೆಕಾರರು ಎಲ್ಲಿ ನೋಡಿದ್ದರೆಂಬುದು, ಇದಲ್ಲದೆ ಕವಿಚರಿತೆಯನ್ನು ಬರೆಯುವಲ್ಲಿ ಅವರು ಬಳಸಿದ್ದ ಕೆಲವು ಹಸ್ತಪ್ರತಿಗಳು ಎಲ್ಲಿಯವು? ಎಂಬುದು ಇನ್ನೂ ಸಮಸ್ಯೆಯಾಗಿ ಉಳಿದಿದೆ. ಈ ಎಲ್ಲ ತಿಳಿವಳಿಕೆಗಳ ಹಿನ್ನೆಲೆಯೊಂದಿಗೆ ಸಂಗ್ರಹಿಸಿದ ಹಸ್ತಪ್ರತಿಗಳ ಗಂಟುಕಟ್ಟುವ, ಗ್ರಂಥಾಲಯಕ್ಕೆ ರವಾನಿಸುವ ಇತ್ಯಾದಿ. ಸಾಮಾನ್ಯವೆನಿಸಬಹುದಾದ ಕೆಲಸಗಳನ್ನೂ ತುಂಬ ಜಾಗರೂಕತೆಯಿಂದ ಮಾಡಬೇಕು. ಒಡೆಯನ ವಶದಿಂದ ಕ್ಷೇತ್ರಕಾರ್ಯಕರ್ತನಿಗೆ ಹಸ್ತಾಂತರವಾಗಿಯೂ “ಮೂರ್ಖಹಸ್ತೇನ ದಾತವ್ಯಂ” ಎಂದು ಹಸ್ತಪ್ರತಿ ಹಲುಬುವಂತಾಗಬೇಕು.

ಕರ್ನಾಟಕದಲ್ಲಿ ಹಸ್ತಪ್ರತಿಗಳು ಹಾಳಾಗಿ ಹೋದುದೂ ಹೇರಳ, ಉಳಿದು ಬಂದುದೂ ಹೇರಳ. ನಮ್ಮ ನಾಡಿನಲ್ಲಿ ಇವುಗಳ ಪರಿವೀಕ್ಷಣೆ ನೂರುವರ್ಷಗಳಿಂದ ನಡೆದರೂ ಸರ್ಕಾರವಾಗಲೀ, ವಿಶ್ವವಿದ್ಯಾಲಯದಂಥ ಸಂಸ್ಥೆಗಳಾಗಲೀ ವ್ಯವಸ್ಥಿತವಾಗಿ, ಕ್ರಮವತ್ತಾಗಿ ಈ ಕಾರ್ಯ ಮಾಡುವ ಗೋಜಿಗೆ ಹೋಗದೆ ಮನಸ್ಸು ಬಂದಾಗ ಆಗಿಷ್ಟು ಈಗಿಷ್ಟು ಮಾಡಿಮುಗಿಸುತ್ತಲಿವೆ. ಹೀಗಾಗಿ ಹಸ್ತಪ್ರತಿಗಳನ್ನು  ಮನೆಯಲ್ಲಿ ಮಡಗಿಕೊಳ್ಳುವ ಸಾಮಾನ್ಯರು, ಭಾಂಡಾರದಲ್ಲಿ ರಕ್ಷಿಸಬೇಕಾದ ಅಧಿಕಾರಿಗಳು ಈ ಇಬ್ಬರಿಂದಲೂ ಹಸ್ತಪ್ರತಿಗಳಿಗೆ ಅನ್ಯಾಯವಾಗುತ್ತಲಿದೆಯೆನ್ನಬೇಕು.

ಕರ್ನಾಟಕದಲ್ಲಿ ಕನ್ನಡ ಹಸ್ತಪ್ರತಿಗಳು, ಇವುಗಳಿಗೆ ಎರಡನೆಯದಾಗಿ ಸಂಸ್ಕೃತ ಹಸ್ತಪ್ರತಿಗಳು ಹೇರಳ. ಪ್ರಾಕೃತ, ಮರಾಠಿ, ತೆಲುಗು, ತಮಿಳು, ಮಲಯಾಳಿ ಹಸ್ತಪ್ರತಿಗಳು ವಿರಳ. ಧಾರ್ಮಿಕ ಕೇಂದ್ರಗಳಲ್ಲಿ, ಪ್ರತಿಷ್ಠಿತ-ಸಾಹಿತ್ಯಾಭ್ಯಾಸಿಗಳ ಮನೆತನಗಳಲ್ಲಿ ಚದರಿಹೋದ ಇವುಗಳ ಕ್ಷೇತ್ರಕಾರ್ಯ ಕೈಗೊಂಡ ಪ್ರಥಮವ್ಯಕ್ತಿ ಕರ್ನಲ್‌ಮಕೆಂಝಿ ಭಾರತೀಯ ಗಣಿತಶಾಸ್ತ್ರದ ಮಾಹಿತಿ ಸಂಗ್ರಹಕ್ಕೆ ಬಂದು, ಈಸ್ಟ್‌ಇಂಡಿಯಾ ಕಂಪನಿಯಲ್ಲಿ ನೌಕರಿ ಹಿಡಿದು, ದಕಷಿಣ ಭಾರತದ ಭೌಗೋಲಿಕ ಮೋಜಣಿಕಾರ್ಯ ಕೈಕೊಂಡ ಈತ ಈ ದೇಶದ ಸಾಂಸ್ಕೃತಿಕ ಮೋಜಣಿದಾರಣು ಆಗಿ ಬೆಲೆಯುಳ್ಳ ಕೆಲಸ ಮಾಡಿದನು. ಇದರ ಫಲವಾಗಿ ಕೆಲವು ಹಸ್ತಪ್ರತಿಗಳನ್ನೂ ಸಂಗ್ರಹಿಸಿ “ಕನ್ನಡ ಹಸ್ತಪ್ರತಿ ಕ್ಷೇತ್ರಕಾರ್ಯಕ್ಕೆ” ಶ್ರೀಕಾರ ಬರೆದನು. ಸಿ. ಪಿ. ಬ್ರೌನ್‌ನಿಂದ ಈ ಸಂಖ್ಯೆ ೧೫೫೦ಕ್ಕೆ ವರ್ಧಿಸಿತು. ಮದ್ರಾಸ ಪ್ರಾಚ್ಯಕೋಶಾಲಯದಲ್ಲಿದ್ದ ಈ ಸಂಪತ್ತಿನ ಕೆಲಭಾಗವನ್ನು ೧೯೬೭ರಲ್ಲಿ ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆ, ಧಾರವಾಡದ ಕನ್ನಡ ಸಂಶೋಧನ ಸಂಸ್ಥೆ, ಮೈಸೂರಿನ ರಾಜ್ಯಪುರಾತತ್ವ ಇಲಾಖೆಗಳಿಗೆ ಹಂಚಿಕೊಡಲಾಯಿತು.

೧೮೮೦ರಲ್ಲಿ ಸ್ಥಾಪಿತವಾದ ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯದ ಮುಖ್ಯಸ್ಥರಾದ ಬಿ. ಎಲ್‌. ರೈಸ್‌, ತರುವಾಯ ಈ ಸ್ಥಾನಕ್ಕೆ ಬಂದ ಆರ್‌. ನರಸಿಂಹಾಚಾರ್‌ಹಸ್ತಪ್ರತಿ ಸಂಗ್ರಹಕಾರ್ಯವನ್ನು ತೃಪ್ತಿಕರವಾಗಿ ಪೂರೈಸಿದರು.೧೮೯೧ರಲ್ಲಿ ಇದರಿಂದ ಹಸ್ತಪ್ರತಿ ಭಂಡಾರವೇ ಬೇರೆಯಾಗಿ ಗೌರ್ನಮೆಂಟ್‌ಓರಿಯಂಟಲ್‌ಲೈಬ್ರರಿ ಹೆಸರು ಹೊತ್ತು ಮುನ್ನಡೆದು, ೧೯೧೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಭಾಗವಾಗಿ ನಿಂತಿತು. ೧೯೬೬ರಲ್ಲಿ ಇಲ್ಲಿಯ ಎಲ್ಲ ಕನ್ನಡ ಹಸ್ತಪ್ರತಿಗಳನ್ನು ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾಯಿಸಲಾಯಿತು. ಈಗ ಗೌರ್ನಮೆಂಟ್‌ಲೈಬ್ರರಿಯಲ್ಲಿ ೧೨೦೦೦ ಸಂಸ್ಕೃತ ಹಸ್ತಪ್ರತಿಗಳು, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ೬೦೦೦ ಕನ್ನಡ ಹಸ್ತಪ್ರತಿಗಳಿವೆ. ಈ ಅಂಕಿ-ಸಂಖ್ಯೆಗೆ ಧಾರವಾಡ ಪ್ರದೇಶಕ್ಕಿಂತ ಮೈಸೂರು ಪ್ರದೇಶದಲ್ಲಿ ಸಂಸ್ಕೃತ ಹಸ್ತಪ್ರತಿ ಅಧಿಕವಾಗಿರುವುದೇ ಕಾರಣವಾಗಿದೆ. ಮೇಲೆ ಹೇಳಿದಂತೆ ನಾಮಾಂತರಗೊಳ್ಳುತ್ತ ಬಂದ ಈ ಸಂಸ್ಥೆಯ ಇತರ ಮುಖ್ಯಸ್ಥರಾದ ಶ್ರೀ ಆರ್‌. ಶಾಮಾಶಾಸ್ತ್ರಿ, ಶ್ರೀ ಎಂ. ಬಸವಲಿಂಗಯ್ಯ, ಶ್ರೀ ಎಚ್‌. ಆರ್‌. ರಂಗಸ್ವಾಮಿ, ಶ್ರೀ ಎಚ್‌. ದೇವೀರಪ್ಪ, ಶ್ರೀ ಎನ್‌. ಬಸವಾರಾಧ್ಯರ ಕಾಲದಲ್ಲಿ ಸಹಜವಾಗಿಯೇ ದಕ್ಷಿಣ ಕರ್ನಾಟಕದ ಹಸ್ತಪ್ರತಿ ಸಂಗ್ರಹ ಕಾರ್ಯ ನಡೆಯಿತು. ಇತ್ತೀಚೆಗೆ ತಲೆಯೆತ್ತಿದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ, ಶ್ರೀ ಎಸ್‌. ಶಿವಣ್ಣ ಅವರ ಅಗಾಧನಿಷ್ಠೆ ಕಾರಣವಾಗಿ ಅಲ್ಪಾವಧಿಯಲ್ಲಿಯೇ ೧೫೦೦ ಕನ್ನಡ ಹಸ್ತಪ್ರತಿಗಳನ್ನು ಕಲೆಹಾಕಿದೆ. ಇವಲ್ಲದೆ ಬಸವಸಮಿತಿ, ಕನ್ನಡ ಸಾಹಿತ್ಯಪರಿಷತ್ತು, ರಜ್ಯಪುರಾತತ್ವ ಇಲಾಖೆಗಳಂಥ ಸರ್ಕಾರಿ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ, ಸಿ. ಮಹಾದೇವಪ್ಪ, ಎಲ್‌. ಬಸವರಾಜು, ಕೆಳದಿ ಗುಂಡಾಜೋಯಿಸ್‌, ಎಂ. ಎಸ್‌. ಬಸವರಾಜಯ್ಯನವರಂಥ ವಿದ್ವಾಂಸರ ವಶದಲ್ಲಿ ಹಲವು ಹಸ್ತಪ್ರತಿಗಳಿವೆ. ಇದೆಲ್ಲವನ್ನು ಲೆಕ್ಕ ಹಾಕಿದರೂ ದಕ್ಷಿಣ ಕರ್ನಾಟಕದಲ್ಲಿ ಈವರೆಗೆ ಸಂಗ್ರಹಿಸಲ್ಪಟ್ಟ ಹಸ್ತಪ್ರತಿಗಳ ಸಂಖ್ಯೆ ೧೦ ಸಾವಿರವನ್ನು ಮೀರದು. ಉತ್ತರ ಕರ್ನಾಟಕದಲ್ಲಿ ಈ ಕಾರ್ಯವನ್ನು ನೇರವಾಗಿ ಕೈಗೆತ್ತಿಕೊಂಡ ಪ್ರಥಮ ಶ್ರೇಯಸ್ಸು ೧೯೩೯ರಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಸಂಶೋಧನ ಸಂಸ್ಥೆಗೆ ಸಲ್ಲುತ್ತದೆ. ೧೯೫೬ರಂದು ಕರ್ನಾಟಕ ವಿಶ್ವವಿದ್ಯಾಲಯದ ವಶಕ್ಕೆ ಬಂದ ಈ ಸಂಸ್ಥೆಯಲ್ಲಿ ಈಗ ಸುಮಾರು ೪೦೦೦ ಕನ್ನಡ ಹಸ್ತಪ್ರತಿಗಳಿವೆ. ೧೯೬೨ರಲ್ಲಿ ಡಾ. ಆರ್‌. ಸಿ. ಹಿರೇಮಠ ಅವರ ನೇತೃತ್ವದಲ್ಲಿ ಕನ್ನಡ ಅಧ್ಯಯನ ಪೀಠ ಕೈಗೆತ್ತಿಕೊಂಡ “ಸಮಗ್ರ ವಚನವಾಙ್ಮಯ ಸಂಗ್ರಹ, ಸಂಸ್ಕರಣ ಮತ್ತು ಪ್ರಕಟನಾ ಯೋಜನೆ”ಯ ಅಂಗವಾಗಿ ಪ್ರಾರಂಭಿಸಿದ ಹಸ್ತಪ್ರತಿ ಸಂಗ್ರಹಕಾರ್ಯದಿಂದಾಗಿ ಈವರೆಗೆ ಸುಮಾರು ೪೦೦೦ ಕನ್ನಡ ಹಸ್ತಪ್ರತಿಗಳು ಶೇಖರಿಸಲ್ಪಟ್ಟಿವೆ. ಇದರಲ್ಲಿ ಡಾ. ಹಳಕಟ್ಟಿಯವರು ಸಂಗ್ರಹಿಸಿದ್ದ ೧೦೦೦ ಹಸ್ತಪ್ರತಿಗಳೂ ಸೇರಿವೆಯೆಂಬುದನ್ನು ಗಮನಿಸಬೇಕು. ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಇತ್ತೀಚೆಗೆ ೨೦೦೦ ಕಟ್ಟುಗಳನ್ನು ಸಂಗ್ರಹಿಸಿದೆ. ಹೀಗಾಗಿ ಉತ್ತರ ಕರ್ನಾಟಕದಲ್ಲಿಯೂ ಈವರೆಗೆ ಸಂಗ್ರಹಿಸಲ್ಪಟ್ಟ ಹಸ್ತಪ್ರತಿಗಳ ಸಂಖ್ಯೆ ೧೦ ಸಾವಿರವನ್ನು ಮೀರದು.

ಒಳನಾಡಿನ ಕೆಲವು ಧಾರ್ಮಿಕ ಕೇಂದ್ರಗಳಾದ ಶ್ರವಣಬೆಳಗೊಳ, ಮೂಡಬಿದರೆ, ಹುಮ್ಮಚ, ವರಾಂಗ, ಕಾರ್ಕಳ, ಬಳ್ಳಾರಿಯ ಕೊಟ್ಟೂರಸ್ವಾಮಿಮಠ, ಗದುಗಿನ ತೋಂಟದಾರ್ಯಮಠ, ಹುಬ್ಬಳ್ಳಿಯ ಮೂರುಸಾವಿರಮಠ, ಶಿವಯೋಗಮಂದಿರ, ಚಿತ್ರದುರ್ಗದ ಮುರುಘಾಮಠ, ಧರ್ಮಸ್ಥಳದ ಮಂಜುನಾಥೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಇತ್ಯಾದಿ ಸಂಸ್ಥೆಗಳಲ್ಲಿಯೂ ಕೆಲವು ಹಸ್ತಪ್ರತಿಗಳಿವೆ. ಇವೆಲ್ಲ ಸೇರಿ ೫ ಸಾವಿರ ಮಿಕ್ಕವು. ಹೊರನಾಡಿನ ಕೊಲ್ಲಾಪುರ ಲಕ್ಷ್ಮೀಸೇನ ಭಟ್ಟಾರಕ ಜೈನ ಮಠ, ಬಾಹುಬಲಿ ಕ್ಷೇತ್ರ, ಹೈದ್ರಾಬಾದಿನ ಉಷ್ಮಾನಿಯಾ ವಿಶ್ವವಿದ್ಯಾಲಯ, ಬಿಹಾರದ ಆರಾ ಪಟ್ಟಣ, ಮದ್ರಾಸ ಪ್ರಾಚ್ಯಕೋಶಾಲಯಗಳಲ್ಲಿ ಸೇರಿ ಒಟ್ಟು ೨೦೦೦ ಹಸ್ತಪ್ರತಿಗಳು ಸಿಗುತ್ತವೆ.

ಒಟ್ಟಿನಲ್ಲಿ ಈಗ ಸರ್ಕಾರಿ ಸಂಸ್ಥೆಗಳಲ್ಲಿ, ಧಾರ್ಮಿಕ ಕೇಂದ್ರಗಳಲ್ಲಿ, ವ್ಯಕ್ತಿಗಳ ವಶದಲ್ಲಿ ರಕ್ಷಿತ, ಅರೆಕ್ಷಿತ ಸ್ಥಿತಿಯಲ್ಲಿ ಸಂಗ್ರಹಿತವಾಗಿರುವ ಒಟ್ಟು ಕಟ್ಟುಗಳು ೨೭ ಸಾವಿರ ಬಹುಶಃ ನಾಡಿನ ಒಳಹೊರಗೆ ಅರಕ್ಷಿತ ಸ್ಥಿತಿಯಲ್ಲಿ ಬಿಡಿಯಾಗಿ, ಸಂಗ್ರಹ ರೂಪವಾಗಿ ಬಿದ್ದುಕೊಂಡಿರುವ ಹಸ್ತಪ್ರತಿಗಳು ೧೩ ಸಾವಿರ ಎಂದು ಲೆಕ್ಕ ಹಾಕಿದರೂ ಈ ಸಂಖ್ಯೆ ೪೦ ಸಾವಿರವನ್ನು ಮೀರದು. ಇದು ಕನ್ನಡ ಹಸ್ತಪ್ರತಿಗಳ ಒಟ್ಟು ಸಂಪತ್ತು.

ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ ಪ್ರಾರಂಭದಿಂದಲೂ ಸಂಗ್ರಹಿಸುತ್ತ ಬಂದ ಹಸ್ತಪ್ರತಿಗಳು ಒಂದೂ ಉಳಿಯದಂತೆ ಯಾರ ಯಾರ ವಶಕ್ಕೋ ಹೋಗಿಬಿಟ್ಟವು. ವಿದ್ಯಾವರ್ಧಕ ಸಂಘ, ಇತಿಹಾಸ ಸಂಶೋಧನ ಮಂಡಲ ಈ ಕಡೆಗೆ ಕಣ್ಣೆತ್ತಿ ಸಹ ನೋಡಲಿಲ್ಲ. ಅಸ್ತಿತ್ವಕ್ಕೆ ಬಂದು ೭೫ ವರ್ಷಗಳಾದರೂ, ಆಗಾಗ ಯಾವುವುದೋ ಕೆಲಸಗಳನ್ನು ಮಾಡುತ್ತಲಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ವಿಷಯವಾಗಿ ಮೊದಲಿನಿಂದಲೂ ಉಪೇಕ್ಷೆ ತಾಳುತ್ತಬಂದು, ಇತ್ತೀಚೆಗೆ ಒಂದಿಷ್ಟು ಕಟ್ಟುಗಳನ್ನು ಸಂಗ್ರಹಿಸಿದೆ. ಬೆಂಗಳೂರಿನ ಮಿಥಿಕ್‌ಸೊಸೈಟಿಗೆ ಕನ್ನಡ ಹಸ್ತಪ್ರತಿ ಬಗೆಗೆ ಬಹುಶಃ ಉಪೇಕ್ಷೆ ತಾಳಿದೆ. ರಾಜ್ಯಪುರಾತತ್ವ ಇಲಾಖೆಯ ೧೦ ಮ್ಯೂಜಿಯಂಗಳು ರಾಜ್ಯದಲ್ಲಿದ್ದರೂ ಅವುಗಳಿಗೆ ಹಸ್ತಪ್ರತಿಗಳು ಮಲಮಗ.  ಆದುದರಿಂದ ಈ ಕ್ಷೇತ್ರದಲ್ಲಿ ಏನಾದರೂ ಕೆಲಸವಾಗಿದ್ದರೆ ಅದು ವಿಶ್ವವಿದ್ಯಾಲಯಗಳಿಂದ ಮಾತ್ರ. ಅದೂ ಕೆಲಮಟ್ಟಿಗೆ. ಈಗ ರಾಜ್ಯದಲ್ಲಿ ೬ ವಿಶ್ವವಿದ್ಯಾಲಯಗಳಿವೆ. ಹಳ್ಳಿಯಿಂದ ಹಳ್ಳಿಗೆ ಸಂಚರಿಸಿ ಯೋಜನಾಬದ್ಧವಾಗಿ ಸಮಗ್ರ ಕ್ಷೇತ್ರಕಾರ್ಯವನ್ನು ಇವು ಕೈಗೆತ್ತಿಕೊಳ್ಳಬೇಕು; ತಮತಮಗೆ ಹೊಂದಿಕೊಂಡಿರುವ ಹೊರನಾಡುಗಳಿಗೂ ಕೈಚಾಚಬೇಕು. ಹೊಸದಾಗಿ ತಲೆಯೆತ್ತಿರುವ ಮಂಗಳೂರು, ಗುಲ್ಬರ್ಗಾ ವಿಶ್ವವಿದ್ಯಾಲಯಗಳು ಈ ದಿಸೆಯಲ್ಲಿ ಹೆಚ್ಚು ದುಡಿಯಬೇಕು. ಆಮೆಗತಿಯ ಕೆಲಸಕ್ಕೆ ಹೆಸರಾಗಿರುವ ಸರ್ಕಾರಿ ಸಂಸ್ಥೆಗಳಿಂದ ಈ ಕೆಲಸ ಖಂಡಿತ ಆಗದು. ವಿಶ್ವವಿದ್ಯಾಲಯಗಳೇ ಒಂದು ನಿರ್ದಿಷ್ಟ ಅವಧಿಯ ಯೋಜನೆ ಹಾಕಿಕೊಂಡು ಈ ಕೆಲಸವನ್ನು ಮಾಡಿಮುಗಿಸಬೇಕು.

ಸಂಗ್ರಹಿತ  ಹಸ್ತಪ್ರತಿಗಳನ್ನು ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆ ಶಾಸ್ತ್ರೀಯವಾಗಿ ಕಾಪಾಡುತ್ತಲಿದೆ. ಜೀರ್ಣ, ಅಲಭ್ಯ ಹಸ್ತಪ್ರತಿಗಳನ್ನು ಮೈಕ್ರೋಫಿಲ್ಮ್‌ಮಾಡಿ ರಕ್ಷಿಸುತ್ತಲಿದೆ, ಸೂಚಿಗಳನ್ನು ಪ್ರಕಟಿಸುತ್ತಲಿದೆ. (ಈ ಸೂಚಿಗಳು ಕೆಲಮಟ್ಟಿಗೆ ಅಸಮರ್ಪಕವಾಗಿವೆಯೆಂಬುದು ಬೇರೆ ಮಾತು.) ಆದರೆ ಕರ್ನಾಟಕ, ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಹಸ್ತಪ್ರತಿಗಳು ಅರಕ್ಷತ ಸ್ಥಿತಿಯಲ್ಲಿವೆ. ಸೂಚಿಕಾರ್ಯ ಅಲಕ್ಷಿತವಾಗಿದೆ. ಇಂದಿನ ಅನಾಸಕ್ತ ಪರಿಸರವನ್ನು ನೋಡಿದರೆ “ಕ್ಯಾಟಲಾಗಸ್‌ಕ್ಯಾಟಲಾಗರಮ್‌ಆಫ್‌ಕನ್ನಡ ಮ್ಯಾನ್ಯುಸ್ಕ್ರಿಪ್ಟ್ಸ್‌” ಸಿದ್ಧಪಡಿಸುವುದು ಕನ್ನಡಿಗರಿಗೆ ಕನಸಿನ ಮಾತೇ ಸರಿ. ಕನ್ನಡ ಅಧ್ಯಯನ ಪೀಠ ೧೦ ವರುಷದ ಹಿಂದೆ ಕೈಗೆತ್ತಿಕೊಂಡ ಇಂಥ ಒಂದು ಯೋಜನೆ ಒಳ್ಳೆಯ ಭವಿಷ್ಯವಿಲ್ಲದೆ ಕೊನೆಯುಸಿರೆಳೆಯಿತು. ಈ ಎಲ್ಲ ಕೊರತೆಗಳನ್ನು ತುಂಬಿಕೊಳ್ಳುವುದರತ್ತ ನಮ್ಮ ನಾಡಿನಲ್ಲಿ ಹಸ್ತಪ್ರತಿ ಕ್ಷೇತ್ರಕಾರ್ಯ ಇಂದು ಮುನ್ನಡೆಯಬೇಕಾಗಿದೆ.