ಕರ್ನಾಟಕದಲ್ಲಿ ಜೈನ, ಬ್ರಾಹ್ಮಣ ಸಾಹಿತ್ಯಗಳನ್ನು ಹೊರತುಪಡಿಸಿ ಕೇವಲ ವೀರಶೈವ ಸಾಹಿತ್ಯ, ಅದರಲ್ಲಿಯೂ ವಚನಸಾಹಿತ್ಯ ಪರಿಷ್ಕರಣದ ವಿಷಯವಾಗಿ ಆಗಾಗ ವಿವಾದ ಕೇಳಿಬರುತ್ತಲಿದೆ. ಸಾಮಾನ್ಯವಾಗಿ ಇಂದು ಈ ಸಾಹಿತ್ಯವನ್ನು ಸಂಪಾದಿಸುವವರು ವೀರಶೈವರಾಗಿರುವಂತೆ, ಈ ಸಂಪಾದನೆಗಳನ್ನು ಪ್ರಶ್ನಿಸುವವರೂ ವೀರಶೈವರೇ ಆಗಿದ್ದಾರೆ. ಪ್ರಕಟನೆಯ ಸವಲತ್ತುವೊಂದೇ ಸಂಪಾದಿಸುವವರಿಗೆ ಅರ್ಹತೆಯಾಗಬಾರದು; ವೀರಶೈವನಾಗಿ ಹುಟ್ಟಿರುವುದೊಂದೇ ಪ್ರಶ್ನಿಸುವವರಿಗೆ ಅರ್ಹತೆಯಾಗಬಾರದು ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಹೇಳುವುದಾದರೆ, ವಚನಸಾಹಿತ್ಯ ಪರಿಷ್ಕರಣಕಾರ್ಯದಲ್ಲಿ ಸಂಪಾದಕನಿಗೆ ಎದುರಾಗುವ ತೊಡಕುಗಳು ಮೂರು: ವಚನಸಾಹಿತ್ಯದ ಪಾಠ ತೊಡಕು, ವೀರಶೈವ ತತ್ವದ ತೊಡಕು, ಒಮ್ಮೊಮ್ಮೆ ವೀರಶೈವ ಸಮಾಜದ ತೊಡಕು. ಈ ತ್ರಿಶೂಲದಿಂದ ತಲೆ ತಪ್ಪಿಸಿಕೊಳ್ಳುವ ರೀತಿಯಲ್ಲಿ ವ್ಯವಹರಿಸದೆ, ಅದನ್ನು ಪ್ರಮಾಣಿಕವಾಗಿ, ಧೈರ್ಯದಿಂದ ಎದುರಿಸುವುದು ವಚನಸಂಪಾದಕನ ಧರ್ಮವಾಗಿದೆ.

ಯಾವುದೇ ಸಾಹಿತ್ಯಕೃತಿಗೆ ಸಹೃದಯ ಮತ್ತು ಲಿಪಿಕಾರರಿಂದ ಅಕ್ಷರದ ರೂಪ ಸಾದೃಶ್ಯ-ಧ್ವನಿಸಾಧೃಶ್ಯ. ಬರವಣಿಗೆಯ ರೀತಿದೋಷ, ಅವಸ್ಥಾಭೇದ-ಪ್ರಾಂತಭೇದ, ಸಾಲದುದಕ್ಕೆ ಅನವಧಾವ, ಅಜ್ಞಾನ, ಅನ್ಯಥಾಜ್ಞಾನ ಕಾರಣವಾಗಿ ಅನುದ್ದೇಶಿತ ಮತ್ತು ಉದ್ದೇಶಿತ ಪಾಠಾಂತರಗಳು ಹುಟ್ಟಿಕೊಳ್ಳುತ್ತವೆ. ಮಿಕ್ಕ ಸಾಹಿತ್ಯ ಪ್ರಕಾರಗಳಿಗಿಂತ ವಚನಗಳಲ್ಲಿ ಈ ಪಾಠಾಂತರಕ್ರಿಯೆ ಅತಿಶಯವಾಗಿರುವುದಕ್ಕೆ ಕಾರಣ ಇದು:

ಶರಣರು ಕಟ್ಟಬಯಸಿದುದು ಸ್ಥಾವರಸಮಾಜಕ್ಕೆ ಬದಲು ಜಂಗಮಸಮಾಜವನ್ನು; ಕಟ್ಟಿಕೊಂಡದ್ದು ಸ್ಥಾವರವ್ಯಕ್ತಿತ್ವಕ್ಕೆ ಬದಲು ಜಂಗಮವ್ಯಕ್ತಿತ್ವವನ್ನು. ಹೀಗಾಗಿ ಇಂಥ ಸಮಾಜದ, ಇಂಥ ವ್ಯಕ್ತಿತ್ವದ ಭಾಷಿಕ ಅಭಿವ್ಯಕ್ತಿಯಾದ ವಚನಸಾಹಿತ್ಯ, ವಸ್ತು (Content),  ರೂಪ (Form)ಗಳಲ್ಲಿಯೂ “ಜಂಗಮತ್ವ”ವನ್ನು ಆಹ್ವಾನಿಸಿಕೊಳ್ಳುತ್ತ ಮುಕ್ತಛಂದ, ಸರಳರಚನೆ, ಜನಪದಭಾಷೆ ಈ ಲಕ್ಷಣಗಳನ್ನು ಕಟ್ಟಿಕೊಂಡೇ ಕಣ್ಣುತೆರೆಯಿತು. ಇದರಿಂದಾಗಿ ವಿದ್ವಜ್ಜನತೆ ಮತ್ತು ಜನತೆಯ ಮಧ್ಯ ನಿಂತ ಇದರ ಪಾಠ (Text), ಶಿಷ್ಟಪದ ಸಾಹಿತ್ಯದಷ್ಟು ಸ್ಥಿರವೂ ಅಲ್ಲ, ಜನಪದ ಸಾಹಿತ್ಯದಷ್ಟು ಅಸ್ಥಿರವೂ ಅಲ್ಲವೆಂಬಂತಹ ರೂಪಧಾರಣ ಮಾಡಿತು. ಶಿಷ್ಟಪದಸಾಹಿತ್ಯ ಪಾಠದ ಮೇಲೆ ಕವಿಯ ಅಧಿಕಾರವಿದ್ದರೆ, ಜನಪದಸಾಹಿತ್ಯ ಪಾಠದ ಮೇಲೆ ಜನತೆಯ ಅಧಿಕಾರವಿರುತ್ತದೆ. ಇವುಗಳ ಮಧ್ಯದ ವಚನಸಾಹಿತ್ಯದಲ್ಲಿ ಇಬ್ಬರ ಅಧಿಕಾರವಿರುವುದರಿಂದ “ನಿನಗೆ ಕೇಡಿಲ್ಲವಾಗಿ ಅನು ಒಲಿದಂತೆ ಹಾಡುವೆ” ಎಂಬಂತೆ ಸಾಮಾನ್ಯವಾಗಿ ಸ್ಥಿರಪಾಠಕ್ಕೆ ಕೇಡಿಲ್ಲದಂತೆ, ಚರಪಾಠಗಳ ಪರಿಚಲನೆ ಇಲ್ಲಿ ನಡೆದೇ ಇರುತ್ತದೆ. ಜನಪದ ಹಾಡುಗಳಲ್ಲಿ ಶಬ್ದಗಳು, ವ್ಯಕ್ತಿನಾಮ-ಸ್ಥಳನಾಮ-ದೇವನಾಮಗಳು ಚರಪಾಠಗಳಾಗಿರುವಂತೆ ಕೆಲವೊಮ್ಮೆ ವಚನಗಳಲ್ಲಿಯೂ ಶಬ್ದ ಮತ್ತು ಅಂಕಿತಗಳು ಚರಪಾಠಗಳಾಗಿ ವ್ಯವಹರಿಸುತ್ತವೆ.

ಲಿಪಿಕಾರ ಮತ್ತು ಸಹೃದಯರಿಗೆ, ಛಂದೋನಿಬದ್ಧ-ಹಳಗನ್ನಡ ಭಾಷಾನಿಬದ್ಧ-ನಡುಗನ್ನಡ ಭಾಷಾನಿಬದ್ಧ ವಚನಗಳನ್ನು ಲಿಪಿಸುವಾಗ ವಾಚಿಸುವಾಗ ಇರುವುದಿಲ್ಲವೆಂದೇ ಹೇಳಬೇಕು. ಆದುದರಿಂದಲೇ ಲೇಖನಪ್ರಮಾದಗಳು ವಚನಹಸ್ತಪ್ರತಿಯಲ್ಲಿ ಅಧಿಕ. “ಕೊಳದ ತಡಿಯಲೊಂದು ಹೊಱಸು (>ಹೊಲಸು) ಕುಳ್ಳಿರ್ದಡೇನು” ಎಂಬಂಥ ಅಕ್ಷರದ ರೂಪಸಾದೃಶ್ಯದ, “ಸಸಿ (>ಶಶಿ)ಯೊಳಗಣ ರಸದ ರುಚಿಯಂತೆ” ಎಂಬಂಥ ಅಕ್ಷರದ ಧ್ವನಿಸಾದೃಶ್ಯದ, ಸಾವಿರವರುಷ-ಸಾಧನೆಯ ಮಾಡಿ ಹಾದರ (>ಆದರ)ದಲ್ಲಿ ಅಳಿದಂತಾಯಿತ್ತು” ಎಂಬಂಥ ಪ್ರಾಂತಭೇದದ, “ಸುಮತಿಯೆಂಬ ಹತ್ತಿ (>ಹಂತಿ)ಯ ಕೊಂಡು” ಎಂಬಂಥ ಬರವಣಿಗೆಯ ರೀತಿದೋಷದ, “ಬಡಪಶು ಪಂಕ (>ಪಂಕಜ)ದಲ್ಲಿ ಬಿದ್ದರೆ” ಎಂಬಂಥ ಅಜ್ಞಾನದ, “ಶರಣರ ಅನುಭಾವ ಗಜವೈದ್ಯ (>ಜಗವೈದ್ಯ)ವಯ್ಯಾ” ಎಂಬಂಥ ಅನವಧಾನದ, “ಓದಿತ್ತು ಕಾಣಿರೋ ಶುಕ (>ಶುನಕ)ನು” ಎಂಬಂಥ ಅನ್ಯಥಾಜ್ಞಾನದ ಪಾಠಾಂತರಗಳು ಲಿಪಿಕಾರರಿಂದ ಹೇರಳವಾಗಿಯೇ ಹುಟ್ಟಿಕೊಂಡವು. ಸುಮಾರು ೧೫೫ ವಚನಗಳು ಕೂಡಲಸಂಗಮದೇವಾ ಮತ್ತು ಕೂಡಲಚೆನ್ನಸಂಗಮದೇವಾ ಎಂಬ ಮುದ್ರಿಕೆಗಳಲ್ಲಿ, ‘ಊರ ಸೀರೆಗೆ…’ ವಚನ ಬಸವಣ್ಣ ಮತ್ತು ಜೇಡರ ದಾಸಿಮಯ್ಯಗಳ ಮುದ್ರಿಕೆಗಳಲ್ಲಿ, ‘ದೇವನೊಳ್ಳಿದನೆಂದು ಮುಯ್ಯಾನಲು ಬೇಡ…’ ವಚನ ಬಸವಣ್ಣ ಮತ್ತು ಸತ್ಯಕ್ಕಗಳ ಮುದ್ರಿಕೆಗಳಲ್ಲಿ ಲಭಿಸುವುದನ್ನು ಇಲ್ಲಿ ಉದಾಹರಿಸಬಹುದು.

ಗದ್ಯಮಾಧ್ಯಮದಲ್ಲಿ ಹುಟ್ಟಿದ ವಚನಸಾಹಿತ್ಯವನ್ನು ಪದ್ಯಮಾಧ್ಯಮದಲ್ಲಿ ಹಾಡುತ್ತಲೂ ಬರಲಾಗಿದೆ. ಹೀಗೆ ಮಾಧ್ಯಮವು ಪಾತ್ರ ಬದಲಿಸಿಕೊಳ್ಳುವಲ್ಲಿ ಪಠಗಳು ಉದುರುವುದು, ಚಿಗಿಯುವುದು, ವಿರೂಪಗೊಳ್ಳುವುದು ಸಹಜ. ಉದಾ. ಮೊಲೆ ಮುಡಿ ಬಂದರೆ ಹೆಣ್ಣೆಂಬರು (ಮೂಡಿ), ಉಳ್ಳವರು ಶಿವಾಲಯ ಮಾಡುವರು (ಶಿವಾ+ಲಯ), ಮೇರು, ಗುಣವನಱಸುವುದೆ ಕಾಗೆಯಲ್ಲಿ (ಮೇರುಗುಣ), “…ಕೂಡಲಸಂಗಮದೇವಾ+ದೇವಾ” ಇತ್ಯಾದಿ. ಹೀಗಾಗಿ ಓದುವ ವಚನದ ಪಾಠಗಳೇ ಬೇರೆ, ಹಾಡುವ ವಚನದ ಪಾಠಗಳೇ ಬೇರೆಯಾಗಿ ಬೆಳೆದುಬಂದಿವೆ. ಇವುಗಳನ್ನು ಲಿಪಿಕಾರಪಾಠ, ಗೇಯಕಾರಪಾಠವೆಂದು ಕರೆಯಬಹುದು. ಒಟ್ಟಿನಲ್ಲಿ ಲಿಪಿಕಾರರಿಗೆ, ಅವರಿಗಿಂತ ಪ್ರವಚನಕಾರರಿಗೆ, ಗಾಯಕರಿಗೆ “ಕೂಡಲಸಂಗಮದೇವಾ”ವೂ ಅಷ್ಟೇ, “ಗುಹೇಶ್ವರಾ”ವೂ ಅಷ್ಟೇ. “ಕಳಬೇಡ ಕೊಲಬೇಡ…” ಎಂಬ ವಚನವಾಕ್ಯಗಳು ಹಿಂದುಮುಂದಾದರೂ ಅಷ್ಟೇ. ಅವರಿಗೆ ವಚನದ ತತ್ವವನ್ನೊಳಗೊಂಡ ಪಾಠ ಮುಖ್ಯ. ಈ ವರೆಗೆ ವಿವೇಚಿಸಿದುವು ವಚನವಿಶಿಷ್ಟವಾಗಿ ಹುಟ್ಟುವ ಅನುದ್ದೇಶಿತ ಪಾಠಾಂತರಗಳು.

ವಚನಗಳಲ್ಲಿ ಮಾಡಲಾಗುವ ಉದ್ದೇಶಿತ ಪಾಠಾಂತರಗಳಿಗೆ ಕಾರಣಗಳು ಅನೇಕ. ಅವುಗಳಲ್ಲಿ ಮುಖ್ಯವಾದುದು ಏಕೋತ್ತರ ಶತಸ್ಥಲದಂಥ ಸಂಕಲನಕೃತಿ, ಶೂನ್ಯ ಸಂಪಾದನೆಯಂಥ ಸಂಪಾದನ ಕೃತಿಗಳ ರಚನೆ. ವಚನಗಳನ್ನು ಬಳಸಿ ಹೊಸದೊಂದು ಕೃತಿಯನ್ನು ರೂಪಿಸುವಾಗ ಶರಣರ ಮಾತುಗಳಿಗೆ ಪ್ರಾಮಾಣ್ಯ ಒದಗಿಸುವ ಸದುದ್ದೇಶದಿಂದ ಸಂಸ್ಕೃತ ಅವತರಣಿಕೆಗಳನ್ನು ಸೇರಿಸಿದರು. ಗಣಭಾಷಿರತ್ನಮಾಲೆಯಲ್ಲಿ ಈ ಕ್ರಿಯೆ ಎದ್ದು ಕಾಣುತ್ತದೆ. ಇದಲ್ಲದೆ ಇವರು ವಚನಗಳ ತುದಿ-ಮೊದಲುಗಳನ್ನು ಅನಿವಾರ್ಯವಾಗಿ ಮುರಿಯುವ, ಬೆಳೆಸುವ ಕಾರ್ಯವನ್ನು ಮಾಡಿದರೆಂದು ತೋರುತ್ತದೆ. ಸಂಭಾಷಣೆಗೆ ಹೊಂದುವಂತೆ ವಚನ ಪ್ರಾರಂಭದಲ್ಲಿ ಅಯ್ಯಾ, ಎಲೆ, ಹೋ ಎಂಬ ಸಂಬೋಧನ ವಾಚಕಗಳನ್ನೂ, ವಿಷಯ ಮುಂದುವರಿಸಲು ಇನ್ನು, ಮತ್ತಂ ಎಂಬ ಪದಗಳನ್ನೂ, ಮುಕ್ತಾಯದಲ್ಲಿ ನೋಡಾ ಬಸವಣ್ಣ, ಹೇಳಾ ಬಸವಣ್ಣ, ಕೇಳಾ ಬಸವಣ್ಣ ಎಂಬಂಥ ನಿರ್ದೇಶಕಪಾಠಗಳನ್ನೂ ವಚನಗಳಿಗೆ ಹೇರಳವಾಗಿ ಜೋಡಿಸಿರುವರು. ಕೆಲವು ಸಲ ವಚನವನ್ನು ಸಂದರ್ಭಕ್ಕೆ ತಕ್ಕಂತೆ ಅನುಕೂಲಿಸಿಕೊಂಡಿರುವರು. ಉದಾ.

ಆಚಾರ, ತನುಸಂಬಂಧವಾದಲ್ಲಿ ಶ್ರೀಗುರು ಸನ್ನಹಿತನು.
ಅಱುವು
,ಮನಸಂಬಂಧವಾದಲ್ಲಿ ಶಿವಲಿಂಗ ಸನ್ನಹಿತನು.
ಉಭಯವು ಸಂಬಂಧವಾದಲ್ಲಿ ಜಂಗಮಲಿಂಗ ಸನ್ನಹಿತನು.
ಇದು
ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ತ್ರಿವಿಧಸಂಪನ್ನ ಶರಣನು.

ಮೂಲತಃ ಈ ವಚನ ‘ಶರಣ’ನಿಗೆ ಸಂಬಂಧಿಸಿದೆ. ಇದು ಬಸವಣ್ಣನಿಗೆ ಹೊಂದುವಂತೆ

ಆಚಾರ, ತನುಸಂಬಂಧವಾದಲ್ಲಿ ಗುರು ಸನ್ನಹಿತ ಬಸವಣ್ಣನು.
ಅಱವು
, ಮನಸಂಬಂಧವಾದಲ್ಲಿ ಶಿವಲಿಂಗ ಸನ್ನಹಿತ ಬಸವಣ್ಣನು.
ಉಭಯವು ಸಂಬಂಧವಾದಲ್ಲಿ ಜಂಗಮಲಿಂಗ ಸನ್ನಹಿತ ಬಸವಣ್ಣನು.
ಇದು
ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ತ್ರಿವಿಧ ಸಂಪನ್ನ ಶರಣ ಬಸವಣ್ಣನು.

ಎಂದು ತಿರುಗಿಕೊಂಡುದು ಗಮನಾರ್ಹವಾಗಿದೆ.

ಇದಕ್ಕೂ ಮುಂದು ಹೋಗಿ ತಾವು ಯೋಜಿಸಿಕೊಂಡಿರುವ ಕೃತಿಶಿಲ್ಪಕ್ಕೆ ಕೊರತೆ ಬಿದ್ದಲ್ಲಿ, ಕೆಲವು ಹೊಸ ವಚನಗಳನ್ನು ಸೃಷ್ಟಿಸಿರುವ ಸಾಧ್ಯತೆಯೂ ಇದೆ.

ಇದಕ್ಕಿಂತ ಹೆಚ್ಚು ಅಪಾಯದ, ಪಾಪದ ಕಾರ್ಯವೆಂದರೆ ಸ್ವಾರ್ಥಮೂಲವಾದ, ತತ್ವವಿರುದ್ಧವಾದ ಪಾಠಗಳನ್ನು ಬುದ್ಧಿಪೂರ್ವಕ ಸೃಷ್ಟಿಸುವುದು. ಇದಕ್ಕೆ ಉದಾಹರಣೆ ಹೇಳುವುದು ಕಷ್ಟ. ಪ್ರಭುದೇವನನ್ನು ವೈಭವೀಕರಿಸುವಲ್ಲಿ, ಸಿದ್ಧರಾಮನನ್ನು ಶೈವನೆಂದೇ ಸಾಧಿಸುವಲ್ಲಿ ಈ ಕ್ರಿಯೆ ಜರುಗಿರುವ ಸಾಧ್ಯತೆಯಿದೆ. “ಪ್ರಭುದೇವ-ಸಿದ್ಧರಾಮರ ವಾದದ ವಚನಗಳು” ಎಂಬ ಸಂಕಲನವನ್ನು ಇಲ್ಲಿ ನೆನೆಯಬಹುದು. (ಶರಣರ ವಚನಗಳಿಗಿಂತ ಸಿದ್ಧರಾಮನ ವಚನಗಳ ಶೈಲಿ ಭಿನ್ನವಾಗಿರುವುದು ಚಿಂತನೀಯ.)

ಈವರೆಗಿನ ವಿವೇಚನೆಯ ಬಲದಿಂದ ಒಟ್ಟು ವಚನಪಾಠಾಂತರಗಳನ್ನು

೧. ಲಿಪಿಕಾರರ ಪಾಠಾಂತರಗಳು

೨. ಸಹೃದಯರ ಪಾಠಾಂತರಗಳು

೩. ಗೇಯಕಾರರ ಪಾಠಾಂತರಗಳು

೪. ಸಂಪಾದನಕಾರರ ಪಾಠಾಂತರಗಳು

೫. ಅವೀರಶೈವಪರ ಪಾಠಾಂತರಗಳು

ಎಂದು ವರ್ಗೀಕರಿಸಬಹುದು. ಸಂಪಾದನಶಾಸ್ತ್ರ ದೃಷ್ಟಿಯಿಂದ ಇವೆಲ್ಲ ದೋಷಗಳೇ ಆಗಿದ್ದರೂ ಮೊದಲಿನ ನಾಲ್ಕು ಕ್ಷಮ್ಯ, ಐದನೆಯದು ಅಕ್ಷಮ್ಯವಾಗಿದ್ದು, ಈ ಪಾಠಾಂತರಗಳು ಒಂದು ಅಕ್ಷರದಿಂದ ಹಿಡಿದು ಇಡೀ ವಚನದ ವರೆಗೆ ತೋರಿಬರುವ ಸಾಧ್ಯತೆಯಿದೆ.

* * *

ಯಾವುದೇ ‘ರಚನೆ’ಯ ಮೈ-ಮನಗಳೆಂದರೆ ಆಶಯ (Content) ಮತ್ತು ಆಕೃತಿ (Form), ಸಂಪಾದನೆ ಎನ್ನುವುದು ದುಷ್ಟಪಾಠಗಳನ್ನು ದೂರ ಸರಿಸಿ, ಮೂಲ ಆಕೃತಿಯನ್ನು ಸರಿಮಾಡಿಕೊಡುವ ಮೂಲಕ, ಆಶಯವನ್ನು ಸರಿಮಾಡಿಕೊಡುವುದೇ ಆಗಿದೆ. ಅಂದರೆ ಆಕೃತಿಸಂಪಾದನೆಯೆಂಬುದು ಆಶಯಸಂಪಾದನೆಯೇ ಸರಿ. ಒಂದೊಂದು ವಚನ ವೀರಶೈವದ ಒಂದೊಂದು ಆಶಯಕೋಶ. ಆದುದರಿಂದ ವೀರಶೈವ ಆಶಯಕ್ಕೆ, ತತ್ವಕ್ಕೆ ಧಕ್ಕೆ ಬರದಂತೆ ವರ್ತಿಸುವುದೇ ವಚನಪರಿಷ್ಕರಣದ ಪ್ರಥಮ ಮತ್ತು ಪರಮ ಒರಗಲ್ಲಾಗಿದೆ.ಅಂದರೆ ಸಂಪಾದಕ, ತತ್ವಶುದ್ಧಿಯತ್ತ ತೆರೆದ ಕಣ್ಣಿನಿಂದ ನೋಡುತ್ತ ಪರಿಷ್ಕರಣಕ್ಕೆ ತೊಡಗಬೇಕಾಗುತ್ತದೆ. ಉದಾ.

ಎಂತಕ್ಕೆ ಎಂತಕ್ಕೆ
ಹಡೆದ
ಕಾಯ ಬೀಯವಾಗದ ಮುನ್ನ ಅಟ್ಟುಣ್ಣು,, !
ಬೆರಣಿಯುಳ್ಳಲ್ಲಿ
ಹೊತ್ತು ಹೋಗದ ಮುನ್ನ ಅಟ್ಟುಣ್ಣು !
ಮರಳಿ
ಭವಕ್ಕೆ[1] ಬಹೆ[2] [3]ಬಾರದಿಹೆ[4]
ಕರ್ತೃ
ಕೂಡಲಸಂಗಮದೇವಂಗೆ ಶರಣೆನ್ನು, !

“ಮರಳಿ ನೀನು ಭವಕ್ಕೆ ಬರಬಹುದು, ಬರಲಿಕ್ಕಿಲ್ಲ. ಕಾರಣ ಈಗಲೇ ಕೂಡಲ ಸಂಗಮನನ್ನು ಪೂಜಿಸು” ಎಂಬುದು ಈ ಪಾಠದ ಆಶಯ. ಆದರೆ “ಮರಳಿ ನೀನು ಭವಕ್ಕೆ ಬಾರದಿದ್ದರೆ ಈಗಲೇ ಕೂಡಲಸಂಗಮನನ್ನು ಪೂಜಿಸು” ಎಂಬುದು ವೀರಶೈವತತ್ವಕ್ಕೆ ಸಮ್ಮತವಾಗಿರುವುದರಿಂದ, ಈ ವಚನಪಾಠವನ್ನು “ಮರಳಿ ಭವಕ್ಕೆ ಬಾಹೆ-ಬರದಿಹೆ” ಎಂದು ಪರಿಷ್ಕರಿಸಿಕೊಳ್ಳಬೇಕು. ಆಗ “ಕೂಡಲಸಂಗನನ್ನು ಈಗಲೇ ಪೂಜಿಸಿದರೆ ನೀನು ಮರಳಿ ಭವಕ್ಕೆ ಬರಲಾರೆ (=ಬಾಹೆ), ಬರುವುದಿಲ್ಲ (=ಬರದಿಹೆ)” ಎಂಬ ಯೋಗ್ಯ ಅರ್ಥ ಹೊರಡುತ್ತದೆ. ಹೀಗೆ ವೀರಶೈವ ತತ್ವಗಳನ್ನು ಒರೆಗಲ್ಲಾಗಿಟ್ಟುಕೊಳ್ಳುವುದೇ ವಚನಗಳ ನಿಜವಾದ ಪರಿಷ್ಕರಣವೆನಿಸುತ್ತದೆ. ಆದರೆ ವೀರಶೈವತತ್ವ ನಮ್ಮ ಕೈಗೆ ಶುದ್ಧರೂಪದಲ್ಲಿ ಇಳಿದುಬಂದಿರುವುದು ಸಂದೇಹ. ವಚನಗಳಲ್ಲಿ ಎಷ್ಟೋ ಅಭಾಸಗಳು, ವಿರೋಧಾಭಾಸಗಳು ಸಿಗುತ್ತವೆ. ಎಷ್ಟೋ ವಿಷಯಗಳು ಸತ್ಯದ ಒರೆಗಲ್ಲಿಗೆ ನಿಲ್ಲುವುದಿಲ್ಲ. ವಿದ್ವಾಂಸರಾದವರು ತತ್ವವನ್ನು ತಮತಮೆ ಸರಿಕಂಡಂತೆ ಪ್ರತಿಪಾದಿಸುತ್ತಲಿದ್ದಾರೆ. ಇದಕ್ಕೆ ಕಾರಣ, ವೀರಶೈವದಲ್ಲಿ ಶೈವ ಬೆರೆತು ಹೋಗದ ಪರಿಣಾಮವಾಗಿ ಮೂಲವಚನಗಳನ್ನು ವ್ಯತ್ಯಸ್ತಗೊಳಿಸಿದ, ಹೊಸವಚನಗಳನ್ನು ಕಟ್ಟಿ ಸೇರಿಸಿದ ಉಪಕ್ರಮ. ಈ ರಾಶಿಯಿಂದ ಕೂಟವಚನಗಳನ್ನು ಬೇರ್ಪಡಿಸಲು, ನಿಜವಚನಗಳನ್ನು ಸೇರ್ಪಡಿಸಲು ಆಕೃತಿಗಿಂತ ಆಶಯವೇ ಒರೆಗಲ್ಲಾಗಬೇಕು. ಆದರೆ ಯಾವುದು ನಿಜವಾದ ವೀರಶೈವತತ್ವ? ಅಂದರೆ ಬಸವಪ್ರಣೀತ ವೀರಶೈವತತ್ವ? ಎಂದು ಹೇಳುವುದು ಕಷ್ಟದ ಕೆಲಸ. ಇಂಥ ಸಂದರ್ಭದಲ್ಲಿ ಕಸವನ್ನು ಕಿತ್ತುವ ಆವೇಶದಲ್ಲಿ ಸಸಿಯನ್ನೂ ಕಿತ್ತಿದ ಪ್ರಮಾದ ಘಟಿಸಬಾರದು.

ಸಂಪಾದನೆಯ ಶುದ್ಧಿಯನ್ನು ಸಹೃದಯರು ವಿಮರ್ಶಿಸಬೇಕಾದುದು ನ್ಯಾಯಸಮ್ಮತ. ಇದು ಒಮ್ಮೊಮ್ಮೆ ವಿಮರ್ಶೆಯ ಮಟ್ಟವನ್ನು ಮೀರಿ ವಿವಾದಕ್ಕೆ ಇಳಿಯುತ್ತಲಿದೆ. ವೀರಶೈವದಲ್ಲಿ ಗುರುವರ್ಗದವರು-ಅವರ ಅನುಯಾಯಿಗಳು, ವಿರಕ್ತವರ್ಗದವರು-ಅವರ ಅನುಯಾಯಿಗಳು, ಈ ಎರಡೂ ರೂಪಗಳನ್ನು ಒಪ್ಪದವರು ಎಂಬ ಮೂರು ವರ್ಗಗಳಿವೆ. ಇವರಿಗೆ ತಮ್ಮದೇ ಆದ ಗಟ್ಟಿಯಾದ ನಂಬಿಕೆಗಳಿವೆ. ಈ ಮೂರು ವರ್ಗಗಳಲ್ಲಿ ಇದ್ದೂ ಇಲ್ಲದಂತಿರುವ ಅವಕಾಶವಾದಿಗಳ ಇನ್ನೊಂದು ಮಾರ್ಗವೂ ಇದೆ. ಈ ನಾಲ್ಕು ಮನಸ್ಸುಗಳಿಗೊಪ್ಪುವಂತೆ ಸಂಪಾದನೆ ಮಾಡುವುದು ಕಷ್ಟದ ಕೆಲಸ.

೧. ಯಾವುದೇ ಪ್ರಾಚೀನ ಕೃತಿಯನ್ನು ಪ್ರಕಟಿಸುವ ಅಧಿಕಾರ ಸಂಪಾದಕನಿಗೆ ಇರುತ್ತದೆ. ಆ ಕೃತಿಯ ವಿಶ್ವಾಸಾರ್ಹತೆ, ಪರಿಷ್ಕರಣದ ಗುಣಮಟ್ಟಗಳನ್ನು ಸಹೃದಯನಾದವನು ವಿಮರ್ಶಿಸಬಹುದೇ ಹೊರತು; ಪ್ರಕಟಿಸಲೇಬಾರದೆಂದು ಹೇಳುವುದು ತಪ್ಪಾಗುತ್ತದೆ.

೨. ವಚನಗಳಲ್ಲಿ ತತ್ವಪೂರಕ ಪ್ರಕ್ಷಿಪ್ತಗಳು, ತತ್ವಮಾರಕ ಪ್ರಕ್ಷಿಪ್ತಗಳು ಸೇರಿಕೊಂಡಿವೆ. ತತ್ವಪೂರಕ ಪ್ರಕ್ಷಿಪ್ತಗಳನ್ನು ಗುರುತಿಸುವುದು ಕಷ್ಟಸಾಧ್ಯ. ತತ್ವಮಾರಕ ಪ್ರಕ್ಷಿಪ್ತಗಳನ್ನು ಗುರುತಿಸಬಹುದಾದರೂ ತತ್ವವನ್ನು ತಪ್ಪಾಗಿ ಅರ್ಥಮಾಡಿಕೊಂಡು ಕೆಲವರು ವಚನವೊಂದರ ಒಂದೆರಡು ಪದಗಳಿಗೆ ಬೆಚ್ಚಿ, ಅದು ಪ್ರಕ್ಷಿಪ್ತ ವಚನವೆಂದು ವಾದಿಸುತ್ತಾರೆ. ಬಸವಣ್ಣನವರ ಹೆಚ್ಚಿನ ವಚನ ಹೋಗಲಿ, ಷಟ್ಸ್ಥಲ ವಚನ ಕಟ್ಟಿನಲ್ಲಿಯ “ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು ಹೊಲಕ್ಕೆ ಬೆರಣಿಗೆ ಹೋಗಿ ಸಂಗವ ಮಾಡಿದರು…” ಎಂಬಂಥಹ ವಚನಗಳು ಪ್ರಕ್ಷಿಪ್ತಗಳೆಂದು ಕೆಲವರು ವಾದಿಸುತ್ತಿರುವುದು ವ್ಯಸನದ ಸಂಗತಿ. ಇವರಿಗೆ ಎಕಾಡೆಮಿಸಿಯನ್‌ಎನಿಸಿಕೊಳ್ಳುವವರು ಬೆಂಬಲಿಸುತ್ತಿರುವುದು ಇನ್ನೂ ವ್ಯಸನದ ಸಂಗತಿ. ಇಂಥ ವಚನಗಳು ಒಬ್ಬನ ಆವೃತ್ತಿಯಲ್ಲಿ ಪ್ರಕಟವಾಗಿದ್ದರೆ ಮೌನವಾಗಿರುವ, ಇನ್ನೊಬ್ಬನ ಆವೃತ್ತಿಯಲ್ಲಿ ಪ್ರಕಟವಾದರೆ ಟೀಕಿಸುವ ಪಕ್ಷಪಾತ ಪ್ರತಿಕ್ರಿಯೆಗಳೂ ಕೆಲವೊಮ್ಮೆ ತೋರಿಬರುತ್ತಲಿವೆ.

* * *

ಹೀಗಾಗಿ ಮುಂದೆ ಎದುರಾಗಬಹುದಾದ ತೊಂದರೆಯನ್ನು ನೆನೆದು ಇಂದು ವೀರಶೈವ ಸಂಪಾದಕರೇ ವಚನ ಸಂಪಾದನ ಕಾರ್ಯವನ್ನು ಉಪೇಕ್ಷಿಸುತ್ತಲಿದ್ದಾರೆ. ಹೀಗಿರುವಾಗ ಟಿ. ಎಸ್‌. ವೆಂಕಣ್ಣಯ್ಯ, ಡಿ. ಎಲ್‌. ನರಸಿಂಹಾಚಾರ್‌, ತೀ.ನಂ.ಶ್ರೀಕಂಠಯ್ಯ, ಎಂ. ಆರ್‌. ಶ್ರೀನಿವಾಸಮೂರ್ತಿ, ಆರ್‌. ಆರ್‌. ದಿವಾಕರ ಮೊದಲಾದವರಂತೆ ಅನ್ಯಮತೀಯ ವಿದ್ವಾಂಸರು ವೀರಶೈವಸಾಹಿತ್ಯದ ಸಂಪಾದನ, ಸಮಾಲೋಚನ ಕಾರ್ಯಗಳನ್ನು ಕೈಬಿಟ್ಟಿರುವುದು ಸಹಜವೇ ಆಗಿದೆ. ಇಂಥ ವಾತಾವರಣ ನಿರ್ಮಾಣವಾಗಿರುವುದಕ್ಕೆ ವೀರಶೈವ ಸಮಾಜ ಈಗ ಗಂಭೀರವಾಗಿ ವಿಚಾರಿಸಬೇಕಾಗಿದೆ.

* * *

ಸಂಪಾದಕನಿಗೆ ೧. ಸಂಗ್ರಹ, ೨. ಸಂಕಲನ, ೩. ಸಂಪಾದನ ಎಂಬ ಮೂರು ವರ್ಗಗಳಿಂದ ವಚನಗಳು ಲಭಿಸುತ್ತವೆ. ಸರ್ವಪುರಾತನರ ವಚನಕಟ್ಟುಗಳು ಸಂಗ್ರಹ, ತಾತ್ವಿಕಶ್ರೇಣಿಯ ಷಟ್ಸ್ಥಲ-ಏಕೋತ್ತರ ಶತಸ್ಥಲ ಇತ್ಯಾದಿಗಳು ಸಂಪಾದನೆ. ಇವುಗಳಲ್ಲಿ ಪಾಠದೃಷ್ಟಿಯಿಂದ ಮೊದಲಿನದು ಶುದ್ಧವಾಗಿದೆ. ಎರಡನೆಯದರಲ್ಲಿ, ಒಂದು ತತ್ವಕ್ಕೆ ಬದ್ಧವಾಗಿ ವಚನಗಳನ್ನು ಶ್ರೇಣೀಗೊಳಿಸಬೇಕಾಗಿರುವುದರಿಂದ, ‘ಅನ್ಯತೆ’ ಸೇರಿರುವ ಸಂಭವವಿದೆ. ಮೂರನೆಯದರಲ್ಲಿ ತತ್ವ ನಿರೂಪಣೆಯೊಂದಿಗೆ ಸಂಪಾದನಕಾರನೂ ತೊಡಗಿಕೊಳ್ಳುವುದರಿಂದ ಈ ‘ಅನ್ಯತೆ’ ಇನ್ನೂ ವರ್ಧಿಸಿರುವ ಸಾಧ್ಯತೆಯಿದೆ. ಆದುದರಿಂದ ಪಾಠಶುದ್ಧಿ ದೃಷ್ಟಿಯಿಂದ ಸರ್ವಪುರಾತನರ ವಚನಕಟ್ಟುಗಳಿಗೆ ಪ್ರಥಮಸ್ಥಾನ, ಷಟ್ಸ್ಥಲ ಏಕೋತ್ತರ ಶತಸ್ಥಲಾದಿಗಳಿಗೆ ದ್ವಿತೀಯ ಸ್ಥಾನ, ಶೂನ್ಯಸಂಪಾದನೆ ಇತ್ಯಾದಿಗಳಿಗೆ ತೃತೀಯ ಸ್ಥಾನ ಸಲ್ಲುತ್ತದೆ.

ಇಂದು ಯಾವುದೇ ವಚನಕ್ಕೆ ಈ ಮೂರು ವರ್ಗಗಳಿಂದ ಪಾಠಾಂತರಗಳನ್ನು ಸಂಪಾದಕರು ಗುರುತಿಸಿಕೊಳ್ಳುವುದು ರೂಢಿಯಲ್ಲಿದೆ. ಇದರಿಂದ ಪರಿಷ್ಕರಣ ಊರ್ಜಿತವಾಗದೆ ಕಲಸುಮೇಲೋಗರವಾಗುವ ಸಂಭವವೇ ಹೆಚ್ಚು. ಆದುದರಿಂದ ತಾನು ಪರಿಷ್ಕರಣಕ್ಕೆ ಬಳಸಿಕೊಳ್ಳುವ ವಚನವು ಇವುಗಳಲ್ಲಿ ಯಾವ ವರ್ಗಕ್ಕೆ ಸಂಬಂಧಿಸಿದೆಯೆಂಬುದನ್ನು ಸಂಪಾದಕ ತಪ್ಪದೇ ಗಮನಿಸಬೇಕು; ಆಯಾ ವಚನಕ್ಕೆ ಆಯಾ ವರ್ಗದ ಪಾಠಾಂತರಗಳನ್ನೇ ಗುರುತಿಸಿಕೊಳ್ಳಬೇಕು.

ಈ ಮೂರರಲ್ಲಿ ಒಂದೊಂದೂ ವರ್ಗ ಅನೇಕ ಕುಟುಂಬಗಳನ್ನು ಬೆಳೆಸಿಕೊಂಡು ಬಂದಿವೆ. ಇಂಥ ಪ್ರಸಂಗದಲ್ಲಿ ಒಂದು ಕುಟುಂಬಕ್ಕೆ ಸಂಬಂಧಪಟ್ಟ ಹಸ್ತಪ್ರತಿಗಳನ್ನು ಮಾತ್ರ ಬಳಸಿ, ಆ ಕುಟುಂಬದ ಮೂಲಸ್ವರೂಪವನ್ನು ಪುನರ್ರಚನೆ ಮಾಡುವುದೇ ವಚನಸಾಹಿತ್ಯದ ಮಟ್ಟಿಗೆ ಶುದ್ಧಪರಿಷ್ಕರಣವೆಂದು ನನ್ನ ನಂಬುಗೆ. ಅಸ್ತವ್ಯಸ್ತ, ಹೇರಳ ಪಾಠಾಂತರಗಳ ಮಧ್ಯ ಒಂದು ಕುಟುಂಬವನ್ನು ರೂಪಿಸಿಕೊಡುವುದೇ ಕಷ್ಟಸಾಧ್ಯವಾಗಿರುವಾಗ, ಇಂಥ ಕುಟುಂಬಗಳ ಬಲದಿಂದ ಒಂದು ವರ್ಗವನ್ನೂ, ಇಂಥ ವರ್ಗಗಳ ಬಲದಿಂದ ಶರಣರ ಸ್ವಹಸ್ತಪಾಠವನ್ನೂ ಪುನರ್ರಚಿಸಿಕೊಡಲು ಪ್ರಯತ್ನಿಸುವುದು ವ್ಯರ್ಥಶ್ರಮವೆಂದೇ ಹೇಳಬೇಕು. ಒಂದುವೇಳೆ ಹಾಗೆ ಮಾಡಲು ತೊಡಗಿದರೆ ಅನೇಕ ಜನ ನಿವೇದಕರಿಂದ ಪಾಠಾಂತರಗಳನ್ನು ಸಂಗ್ರಹಿಸಿ. ಜನಪದಕೃತಿಯ ಮೂಲಪಾಠವನ್ನು ರಚಿಸಲು ಮಾಡಿದ ಪ್ರಮಾದದಂತಾಗುವ ಸಂಭವವಿದೆ.

ಸ್ಥಳಾಭಾವ ಕಾರಣವಾಗಿ ವಚನಗಳನ್ನು ಹಸ್ತಪ್ರತಿಗಳಲ್ಲಿ ಗದ್ಯದಂತೆ ಬರೆಯುವುದುಂಟು. ೧೮೮೩ರಲ್ಲಿ ಪ್ರಕಟವಾದ ಪ್ರಥಮ ವಚನಗ್ರಂಥ “ಶಿಖಾರತ್ನ ಪ್ರಕಾಶವು” ಎಂಬುದು ಮೊದಲು ಮಾಡಿ, ಹಳಕಟ್ಟಿಯವರ ಪ್ರಕಟಣೆಗಳನ್ನೊಳಗೊಂಡು ಎಲ್ಲ ಆವೃತ್ತಿಗಳಲ್ಲಿ ವಚನಗಳನ್ನು ಹಸ್ತಪ್ರತಿಗಳಲ್ಲಿರುವಂತೆ ಸಾಲುಗಟ್ಟಿ ಮುದ್ರಿಸಲಾಗುತ್ತಿದ್ದಿತು. ಆದರೆ ಪ್ರಥಮ ಬಾರಿಗೆ ಚರಣಗಳನ್ನು ಲಯಾತ್ಮಕವಾಗಿ, ಅರ್ಥವತ್ತಾಗಿ ಮುರಿದು, ವಿರಾಮ ಚಿಹ್ನೆಗಳನ್ನು ಬಳಸಿ ಶ್ರೀ ಎಸ್‌. ಎಸ್‌. ಬಸವನಾಳರು ಅವುಗಳಿಗೆ ಅರ್ಥಪೂರ್ಣ ಮುದ್ರಣವಿನ್ಯಾಸವನ್ನು ಒದಗಿಸಿದರು. ಒಬ್ಬಿಬ್ಬರು ವಿರೋಧಿಸುವರಾದರೂ ಬಹುಜನ ಮಾನ್ಯವಾದ ಈ ಧೋರಣೆ ಮುಂದುವರಿಯುತ್ತಿರುವುದು ಸೂಕ್ತ ಉಪಕ್ರಮವಾಗಿದೆ.

[1] ಪಾಠಾಂತರ : ೧-೧ ಬಾಹೆ

[2] ಪಾಠಾಂತರ : ೧-೧ ಬಾಹೆ

[3] ೨-೨ ಬರದಿಹೆ.

[4] ೨-೨ ಬರದಿಹೆ.