‘ಜನಪದ’ ಎಂಬ ಶಬ್ದಕ್ಕೆ ಹಳ್ಳಿಗಾಡು, ಪ್ರಾಂತ ಎಂದು ವಾಚ್ಯಾರ್ಥ್ಯ. ಅನೇಕ ಸಲ ಹಳ್ಳಿಗಾಡಿನ ಜನತೆ, ಪ್ರಾಂತದ ಜನಾಂಗ ಎಂಬ ಲಕ್ಷಾರ್ಥ ಪಡೆದೂ ಇದು ಪ್ರಾಚೀನ ಸಾಹಿತ್ಯದಲ್ಲಿ ಬಳಕೆಯಾಗಿದೆ. ಈ ‘ಜನಪದ’ದ ತದ್ಧಿತವಿಶೇಷಣರೂಪ “ಜಾನಪದ”.

ಹೀಗೆ ಪ್ರಾಚೀನಕಾಲದಿಂದಲೂ ದೇಶವಾಚಿ, ಪ್ರಜಾವಾಚಿ ಅರ್ಥಗಳನ್ನು ಪ್ರತಿನಿಧಿಸುತ್ತ ಬಂದಿದ್ದ ಈ ಪದ, ೧೯೩೦ರಲ್ಲಿ ‘ಗರತಿಯ ಹಾಡು’ ಪ್ರಕಟವಾದಂದಿನಿಂದ ಸಾಮಾನ್ಯರ ಸಾಹಿತ್ಯಕ್ಕೆ ವಿಶೇಷಪದವೆಂಬಂತೆ ಬಳಕೆಯಾಗತೊಡಗಿತು. ಈ ಸಾಮಾನ್ಯರ (ಗೀತ)ಸಾಹಿತ್ಯವನ್ನು ಕನ್ನಡಿಗರು ಮೊದಮೊದಲು ‘ಹಳ್ಳಿಯ ಹಾಡು’ ಎಂದು, ಆಮೇಲೆ ನಾಡಪದ, ಜನತಾಗೀತೆ, ಲೋಕಗೀತೆ ಎಂದು ಕರೆದರೂ ಭಾರತದ ಬೇರೆ ಬೇರೆ ಪ್ರಾಂತದಲ್ಲಿ ಇನ್ನೂ ಗ್ರಾಮಸಾಹಿತ್ಯ, ಪಲ್ಲಿಗೀತ್‌, ಲೋಕಗೀತೆ, ಲೋಕಸಾಹಿತ್ಯ, ಜನಸಾಹಿತ್ಯ ಎಂದು ಕರೆಯುತ್ತಲಿದ್ದರೂ ಕರ್ನಾಟಕದಲ್ಲಿ ಮಾತ್ರ ಯಾರೋ ಒಬ್ಬರೂ ಪ್ರಯೋಗಿಸಿದ ಜನಪದಸಹಿತ್ಯ ಎಂಬುದು ತಟ್ಟನೇ ಪ್ರಚಾರ ಪಡೆದು, ಚಲಾವಣೆಯಲ್ಲಿ ಬಂದುಬಿಟ್ಟಿದೆ. ಬಹುಶಃ ಇದು ಧಾರವಾಡದ ಗೆಳೆಯರ ಗುಂಪಿನ ಸೃಷ್ಟಿಯೆಂದೂ ಜನಕರ್ನಾಟಕ ಪತ್ರಿಕೆಯ ಮುಖಾಂತರ ಪ್ರಚಾರಪಡೆದುದೆಂದೂ ತೋರುತ್ತದೆ. ಒಟ್ಟಿನಲ್ಲಿ ಜನಪದ ಸಾಹಿತ್ಯದಂತೆ ಜಾನಪದ ಸಾಹಿತ್ಯ ಎಂಬ ಪದವೂ ಅನಾಮಧೇಯ ಸೃಷ್ಟಿಯಾಗಿರುವುದು, ಒಂದು ಕುತೂಹಲಕಾರಿ ಯೋಗಯೋಗವಾಗಿದೆ. ಅಂದಿನಿಂದ ‘ಜನಪದಸಾಹಿತ್ಯ’ ಎಂಬ ಸಮಸ್ತಪದ ‘ಜಾನಪದ ಸಾಹಿತ್ಯ’ ಎಂಬ ವಿಗ್ರಹಪದಗಳು ನಮ್ಮಲ್ಲಿ ಬಳಕೆಯಾಗುತ್ತ ಬಂದವು.

‘Folklore’ ಪರಿಕಲ್ಪನೆಯ ಇಂದಿನ ಸಂದರ್ಭದಲ್ಲಿ ಈ ಪದ ಇನ್ನೂ ವಿಶಿಷ್ಟ ಅರ್ಥ ಪಡೆದು ಬಳಕೆಯಾಗುತ್ತಲಿದೆ. Folk ಎಂದರೆ ಸಾಮಾನ್ಯರ ಸಮೂಹ. ಈ ಸಾಮಾನ್ಯರ ಜೀವನದಲ್ಲಿ ಕಾಣುವ “ಸಾಂಪ್ರದಾಯಿಕ ಅಂಶಗಳ ಮೊತ್ತ”ಕ್ಕೆ ವಿಲಿಯಂ ಥಾಮ್ಸ್‌೧೮೪೬ರಲ್ಲಿ Folklore ಎಂಬ ಪದವನ್ನು ಬಳಸಿದನು.[1]

ಈ Folklore ಎಂಬುದು ಸಾಮಾನ್ಯರ ಜೀವನದ ಸರ್ವಸ್ತರಗಳನ್ನು ಆವರಿಸಿಕೊಂಡು ಕಾಲದಿಂದ ಕಾಲಕ್ಕೆ ಕೈಚಾಚುತ್ತಲೇ ಹೋಗುತ್ತದೆ. ಇದನ್ನು ಅನುಮೋದಿಸುವ ‘Folklore a Lively fossil which refuses to die’’ ಎಂಬ, “Folklore is an echo of the past at the same time it is also the vigorous voice of the present” ಎಂಬ ಮಾತುಗಳನ್ನು ಇಲ್ಲಿ ಲಕ್ಷಿಸಬೇಕು. ಅಂದರೆ Folklore ಎಂಬುದು ಸಾಯುವುದೇ ಇಲ್ಲ, ಅದಕ್ಕೆ ಸಾವೆಂಬುದೇ ಇಲ್ಲ. ಬಹಳೆಂದರೆ ರೂಪಾಂತರ ಹೊಂದುತ್ತದೆ ಇಲ್ಲವೆ ಜನ್ಮಾಂತರ ಹೊಂದುತ್ತದೆ.

Folkloreಕ್ಕೆ ಸಂವಾದಿಪದವನ್ನು ಹುಡುಕಿಕೊಳ್ಳುವುದು ಭಾರತೀಯ ವಿದ್ವಾಂಸರಿಗೆ ಬಹುಮಟ್ಟಿಗೆ ಕಾಡಿದೆ; ಕಾಡುತ್ತಲಿದೆ. ಬೇರೆಬೇರೆ ಪ್ರಾಂತದವರು ಬೇರೆಬೇರೆ ಪದಗಳನ್ನು ಶೋಧಿಸಲು ನಿರತರಾದ ಸಮಯದಲ್ಲಿ ಡಾ. ಹಾ. ಮಾ. ನಾಯಕ ಅವರು ತಮ್ಮದೇ ಆದ ವಿವರಣೆ ಕೊಟ್ಟು Folk=ಜನಪದ, Folklore=ಜಾನಪದ ಎಂಬ ಸಂವಾದಿಗಳನ್ನು ನಮ್ಮ ಮುಂದಿಟ್ಟರಲ್ಲದೆ, ಜನಪದಸಾಹಿತ್ಯ, ಜನಪದನೃತ್ಯ ಎಂಬಂತೆ ಜನಪದ ಎಂಬುದನ್ನು ಒಂದು ಶಾಖೆಗಾಗಿ, ‘ಜಾನಪದ’ ಎಂಬುದನ್ನು ಸಮಾನ್ಯರ ಇಂಥ ಸರ್ವಶಾಖೆಗಳ ಸಮೂಹಕ್ಕಾಗಿ ಬಳಸಬೇಕೆಂದು ೧೯೬೬ರಲ್ಲಿ ಸೂಚಿಸಿದರು. ಇದನ್ನು ಒಪ್ಪುವಲ್ಲಿ ಒಂದೆರಡು ತೊಂದರೆಗಳಂಟು ೧. Loreನ್ನು ಸೂಚಿಸುವ ಅಂಶ ‘ಜಾನಪದ’ ಶಬ್ದದಲ್ಲಿಲ್ಲ. ೨. ಜನಪದ ನಾಮವೆಂದರೆ ಜಾನಪದ ಅದರಿಂದ ನಿಷ್ಪನ್ನವಾದ ತದ್ದಿತವಿಶೇಷಣ. ಇಂಥ ಸಂದರ್ಭದಲ್ಲಿ ವಿಶೇಷ್ಯಕ್ಕಿಂತ ವಿಶೇಷಣದ ವ್ಯಾಪ್ತಿ ಸಣ್ಣದು. ಆದುದರಿಂದ ಜನಪದ ಒಂದು ಶಾಖೆಯನ್ನು ಸೂಚಿಸಿದರೆ ಜಾನಪದ ಇಂಥ ಹಲವು ಶಾಖೆಗಳ ಸಮೂಹವನ್ನು ಸೂಚಿಸುತ್ತದೆಯೆಂಬ ಡಾ. ಹಾ. ಮಾ. ನಾಯಕ ಅವರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಜಾನಪದವೇ ಒಂದು ಶಾಖೆಯನ್ನು ಸೂಚಿಸಿದರೆ ಜನಪದವೇ ಇಂಥ ಹಲವು ಶಾಖೆಗಳ ಸಮೂಹವನ್ನು ಸೂಚಿಸುತ್ತದೆಯೆಂದು ಹೇಳಬೇಕಾಗುತ್ತದೆ. ಹೀಗಾಗಿ ಜನಪದ, ಜಾನಪದಗಳಿಗೆ ಅವರು ಆರೋಪಿಸಿದ ಅರ್ಥವನ್ನು ನಿಷ್ಪತ್ತಿದೃಷ್ಟಿಯಿಂದ ಒಪ್ಪುವುದು ಕಷ್ಟವಾಗುತ್ತದೆ. ೩. ಡಾ. ಹಾ. ಮಾ. ನಾಯಕ ಅವರ ಅಭಿಪ್ರಾಯದಲ್ಲಿ ‘ಜನಪದಸಾಹಿತ್ಯ’ ರೂಪ ಸರಿ; ‘ಜಾನಪದಸಾಹಿತ್ಯ’ ರೂಪ ತಪ್ಪು. ಆದರೆ ಸಂಸ್ಕೃತ ಭಾಷಾಮರ್ಯಾದೆಯಲ್ಲಿ ‘ಜನಪದಸಾಹಿತ್ಯ’ ಎಂಬುದು ಸಮಾಸಪದ. ‘ಜಾನಪದ ಸಾಹಿತ್ಯ’ವೆಂಬುದು ಅಸಮಾಸ ಪದವಾಗಿರುವುದರಿಂದ ಎರಡೂ ರೂಪಗಳು ಸರಿಯೆನಿಸುತ್ತವೆ. ಆದುದರಿಂದ Folk, Folkloreಗಳಿಗೆ ಸಂವಾದಿಗಳನ್ನು ನಿರ್ಧರಿಸುವ ಪ್ರಶ್ನೆಯನ್ನು ಇನ್ನೊಮ್ಮೆ ಇಲ್ಲಿ ಕೈಗೆತ್ತಿಕೊಳ್ಳಲಾಗಿದೆ.

‘ಜನ’ ಎಂಬ ಶಬ್ದ ವ್ಯಾಕರಣದ ದೃಷ್ಟಿಯಿಂದ ಜಾತಿವಾಚಿಯೆನಿಸಿ (ಸಾಮಾನ್ಯರ) ಸಮೂಹವನ್ನು ಸೂಚಿಸುವುದರಿಂದ Folkಕ್ಕೆ ಸಂವಾದಿಯಾಗಿ ‘ಜನ’ ಶಬ್ದವನ್ನು ಬಳಸಬಹುದು. ಈ ಶಬ್ದದಿಂದ ನಿಷ್ಪನ್ನವಾದ ‘ಜನಪದ’ ಎಂಬುದನ್ನು ಕುರಿತ “An important geographical team used by Panini is `Janapada’, which was both a state and Cultural unit, its Culture containing more than its geography. Its Cultural Intergrity was reflected and preserved in the manners, customs and above all the dialect of its people.[2] ಎಂಬ ವಿವರಣೆಯನ್ನು ನೋಡಿದರೆ ‘ಜನಪದ’ ಎಂಬುದು ಜನತೆಯ ಸಂಪ್ರದಾಯ, ಸಂಸ್ಕೃತಿ ಇತ್ಯಾದಿಗಳನ್ನೂ ಧ್ವನಿಸುವುದರಿಂದ ‘Folklore’ ಮತ್ತು‘ಜನಪದ’ಗಳು ಸಂವಾದಿ ಶಬ್ದಗಳೆಂದು ಭಾವಿಸುವುದು ಸೂಕ್ತವೆನಿಸುತ್ತದೆ.

ಮೇಲೆ ವಿವೇಚಿಸಿದ ಮೇರೆಗೆ ‘ಜಾನಪದ’ ಎಂಬುದು ಒಂದು ಶಾಖೆಯನ್ನು ಸೂಚಿಸುವುದರಿಂದ Folk Literature, Folk dress  ಇತ್ಯಾದಿ ಶಾಖೆಗಳಿಗೆ ‘ಜಾನಪದ ಸಾಹಿತ್ಯ’ ‘ಜಾನಪದ ವೇಷ’ ಇತ್ಯಾದಿ ಪದಗಳನ್ನು ಬಳಸಬಹುದು.

ಹಾಮಾನಾ ಹೇಳುವ ‘ಜಾನಪದ’ದಲ್ಲಿಯಂತೆ loreನ್ನು ಸೂಚಿಸುವ ಪ್ರತ್ಯೇಕಪದ ನಾವು ಹೇಳುವ ‘ಜನಪದ’ದಲ್ಲಿಯೂ ಇಲ್ಲ. ಆದರೆ ಪಾಣಿನಿಯ ಪ್ರಕಾರ ‘ಜನಪದ’ ವಶ್ದಲ್ಲಿಯೇ loreದ ಅರ್ಥ ತುಂಬಿದೆ. ಇದಲ್ಲದೆ ಜನಪದಕ್ಕಿಂತ ಜಾನಪದ ಸಣ್ಣ ವ್ಯಾಪ್ತಿಯನ್ನು ಸೂಚಿಸುವುದೆಂಬ ಸಂಗತಿಯನ್ನೂ ಇಲ್ಲಿ ಮರೆಯಬಾರದು. ಆದುದರಿಂದ ಇನ್ನು ಮೇಲೆ ಜನಪದ ವಿದ್ವಾಂಸರು Folk=(ಸಾಮಾನ್ಯ) ಜನ, Folklore=ಜನಪದ, Folk Literature = ಜಾನಪದ ಸಾಹಿತ್ಯ ಎಂದು ಬಳಸುವುದೇ ಶಾಸ್ತ್ರಶುದ್ಧವೆಂದು ಸೂಚಿಸುತ್ತ ಪ್ರಸ್ತುತಲೇಖನದುದ್ದಕ್ಕೂ ಈ ರೀತಿಯನ್ನೇ ಅನುಸರಿಸಬಯಸುತ್ತೇನೆ.

Folklore ಎಂಬುದಕ್ಕೆ ಬದಲು ಸಾಮಾನ್ಯರ ಇತರ ಸಂಪ್ರದಾಯಗಳನ್ನೂ ಒಳಗೊಳ್ಳುವ Folk life  ಎಂಬ ವಿಶಾಲಾರ್ಥದ ಇನ್ನೊಂದು ಪದವನ್ನು ಜಾನಪದವಿಜ್ಞನಿಗಳು ಇತ್ತೀಚೆಗೆ ಬಳಸುತ್ತಲಿರುವರು. ಆದರೆ ಸಾಂಪ್ರದಾಯಿಕ ಅಂಶಗಳು ಕೇವಲ ಸಾಮಾನ್ಯ (Folk)ರ ಬದುಕಿನಷ್ಟೇ ಅಲ್ಲ; ಅನಾಗರಿಕ (ಆದಿವಾಸಿ), ಅರೆನಾಗರಿಕ (ಗ್ರಾಮವಾಸಿ), ನಾಗರಿಕ (ನಗರವಾಸಿ) ಹೀಗೆ ಯಾವುದೇ ಅಂತಸ್ತಿನ ಜನರ ಜೀವನವ್ಯಾಪಾರಗಳಲ್ಲಿಯೂ ತೋರಿಬರುತ್ತದೆ. ಕಾರಣ ಕೇವಲ Folk  ಜೀವನವನ್ನು ಮಾತ್ರ ಪ್ರತಿನಿಧಿಸುವ Folk life  ಎಂಬ ಪದವೂ ಅಸಮರ್ಪಕವೆನಿಸುತ್ತದೆ. ಈ ಅಭ್ಯಾಸ ಯಾವುದೇ ಅಂತಸ್ತಿನ ಜನರ ಜೀವನವ್ಯಾಪಾರಗಳಲ್ಲಿಯೂ ತೋರಿಬರುತ್ತದೆ. ಕಾರಣ ಕೇವಲ Folk ಜೀವನವನ್ನು ಮಾತ್ರ ಪ್ರತಿನಿಧಿಸುವ Folk life  ಎಂಬ ಪದವೂ ಅಸಮರ್ಪಕವೆನಿಸುತ್ತದೆ. ಈ ಅಭ್ಯಾಸ ಯಾವುದೇ ಅಂತಸ್ತಿನ ಜನರ ಜೀವನವ್ಯಾಪಾರದಲ್ಲಿ ಉಳಿದುಬಂದು ಸಾಂಪ್ರದಾಯಿಕ ಎಳೆಗಳನ್ನು ಗುರುತಿಸುವುದಾದುದರಿಂದ ಅಂಥ ಜೀವನವ್ಯಾಪಾರವನ್ನು ಸೂಚಿಸುವ ತ್ರಿವಿಕ್ರಮಪದವೊಂದು Folklore, Folk lifeಗಳಿಗೆ ಬದಲು ಇಂಗ್ಲಿಷನಲ್ಲಿ ಅಂತೆಯೇ ಕನ್ನಡದಲ್ಲಿ ಅಸ್ತಿತ್ವಕ್ಕೆ ಬರಬೇಕಾಗಿದೆ.[3]

ಜಾನಪದ ಸಾಹಿತ್ಯ

ಜಾನಪದ (Folklore)ವನ್ನು ರಿಚರ್ಡ್‌ಎಂ. ಡಾಸನ್‌; ಆರ್‌. ಎಸ್‌. ಬಾಗ್ಸ್‌; ಡಾ. ಹಾ. ಮಾ. ನಾಯಕ ಮೊದಲಾದವರು ಹಲವು ರೀತಿಗಳಲ್ಲಿ ವರ್ಗೀಕರಿಸುತ್ತಾರೆ. ಇವುಗಳಿಗಿಂತ

೧. ಕಾಯಿಕ ಬಗೆ – ಪ್ರಯೋಜಕಕಲೆ ಕೈಗಾರಿಕೆ, ಕರಕುಶಲ, ಅಡಿಗೆ, ವೈದ್ಯ ಇತ್ಯಾದಿ
ಲಲಿತಕಲೆ-ಚಿತ್ರ ಶಿಲ್ಪ, ನೃತ್ಯ ಇತ್ಯಾದಿ

೨. ವಾಚಿಕ ಬಗೆ – ಭಾಷಿಕ ಬಗೆ
ಸಾಹಿತ್ಯಿಕ ಬಗೆ

೩. ಮಾನಸಿಕ ಬಗೆ-ಜನನ, ಮರಣ, ವಿವಾಹ, ಆರಾಧನೆ, ಮಾಟ, ಮಂತ್ರ, ಭವಿಷ್ಯ ಇತ್ಯಾದಿಗಳಿಗೆ ಸಂಬಂಧಪಟ್ಟ ನಂಬಿಕೆಗಳು.

ಹೀಗೆ ವರ್ಗೀಕರಿಸುವುದು ಸೂಕ್ತವೆನಿಸುತ್ತದೆ. ಇವುಗಳಲ್ಲಿ ‘ಜಾನಪದ ವಾಙ್ಮಯ’ವೆಂಬುದು oral folklore ಆಗಿದೆ. ಇದರ ಶಾಖೆಯಾದ ‘ಜಾನಪದ’ ಸಾಹಿತ್ಯವನ್ನು oral folklore ಆಗಿದೆ. ಇದರ ಶಾಖೆಯಾದ ‘ಜಾನಪದ’ ಸಾಹಿತ್ಯವನ್ನು oral art of folklore ಎಂದು ಸರಳವಾಗಿ ಸೂತ್ರಗೊಳಿಸಬಹುದು. ಈ ಸೂತ್ರದ ಹಿನ್ನೆಲೆಯಲ್ಲಿ “ಜಾನಪದ ಸಾಹಿತ್ಯ”ದ ಲಕ್ಷಣಗಳನ್ನು ಹೀಗೆ ವಿವರಿಸಬಹುದು.

೧. ಮಾನವ ಜನಾಂಗ ಯಾವ ಕಾಲಕ್ಕೂ ಪ್ರಾಕೃತಿಕ ಸ್ತರ ಮತ್ತು ನಾಗರಿಕ ಸ್ತರಗಳಲ್ಲಿ ಬದುಕು ನಡೆಸುತ್ತದೆ. ಇವುಗಳಲ್ಲಿ ಒಂದು ನಿಸರ್ಗನಿಯಂತ್ರಿತ, ಇನ್ನೊಂದು ನಗರ ನಿಯಂತ್ರಿತ. ನಗರನಿಯಂತ್ರಿತ ಜನಾಂಗಕ್ಕಿಂತ ನಿಸರ್ಗನಿಯಂತ್ರಿತ ಜನಾಂಗದಲ್ಲಿ “ಮಾನವನ ಪ್ರಾಕೃತಿಕ ಪ್ರವೃತ್ತಿ”ಗಳು ದಟ್ಟವಾಗಿ ನೆಲೆನಿಂತಿರುತ್ತವೆ.

೨. ಸಾಮಾನ್ಯವಾಗಿ ಗುಂಪುಗೂಡಿ ಬಾಳುವುದು ಪ್ರಾಣಿಗಳ ಮೂಲಪ್ರವೃತ್ತಿ. ಮನುಷ್ಯಪ್ರಾಣಿಗಳಲ್ಲಿ ಅದರಲ್ಲಿಯೂ ಹಳ್ಳಿಗರಲ್ಲಿ ಈ ಪ್ರವೃತ್ತಿ ಇನ್ನೂಹಸಿಹಸಿಯಾಗಿರುವುದರಿಂದ ಅವರು ಭೌತಿಕವಾಗಿ, ಮಾನಸಿಕವಾಗಿ ಪರಸ್ಪರವನ್ನು ಅವಲಂಬಿಸಿ ಬದುಕುತ್ತಾರೆ. ಹೀಗಾಗಿ ಅವರ ಅನುಭವಕ್ಕೆ ‘ಸಾಮುದಾಯಿಕತೆ’ ಸಂಪ್ರಾಪ್ತವಾಗಿರುತ್ತದೆ.

೩. ಏನು ಹೇಳಬೇಕೆಂಬುದೇ ಮುಖ್ಯವಾಗಿ, ಹೇಗೆ ಹೇಳಬೇಕೆಂಬುದು ಅಮುಖ್ಯವಾಗಿರುವ ಕಾರಣ ಜಾನಪದ ಕೃತಿಯ ಬಂಧದಲ್ಲಿ ಸ್ವಲ್ಪ ಸಡಿಲುತನ ತೋರಿಬರುವುದರಿಂದ “ಸಂವಹನತೆ ಪ್ರಧಾನ, ಕಲಾತ್ಮಕತೆ ಗೌಣ”ವಾಗಿರುವ ಸಾಹಿತ್ಯವಿದು.

೪. ಶಿಷ್ಟಪದಸಾಹಿತ್ಯದಂತೆ ಶಾಸ್ತ್ರದ ಮಾರ್ಗದರ್ಶನದಲ್ಲಿ ಹುಟ್ಟದೆ “ನೆಲಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ” ಎಂಬಂತೆ ಇದು ಈ ಮೊದಲು ಸೃಷ್ಟಿಯಾಗಿರುವ ಜಾನಪದ ರಚನೆಗಳನ್ನು ಅನುಸರಿಸಿ, ಅಲ್ಲಲ್ಲಿ ಸ್ವೀಕರಿಸಿ ತನ್ನ ಪ್ರಥಮ ಆಕಾರ ಪಡೆಯತ್ತದೆ. ಆದುದರಿಂದ ಇದು ‘ಅನುಸೃಷ್ಟಿ’ ವರ್ಗಕ್ಕೆ ಸೇರುವ ಸಾಹಿತ್ಯವಾಗಿದೆ. ಹೀಗೆ ಹುಟ್ಟುವ ಈ ಸಾಹಿತ್ಯದ ಯಾವುದೇ ರಚನೆಯ ಪಾಲನ ಪರಿಷ್ಕರಣದ ಹಕ್ಕನ್ನು ಕವಿ ಸಮಾಜಕ್ಕೆ ಒಪ್ಪಿಸಿ ಬಿಡುತ್ತಾನೆ.[4] ಇಲ್ಲಿ ಅದು ಎತ್ತಿಕೊಂಡವರ ಮಗುವಾಗಿ ಅವರಿಂದ ಕಾಲ, ದೇಶ, ಪರಿಸರಗಳಿಗೆ ತಕ್ಕಂತೆ ಹೊಸಹೊಸ ರೂಪಗಳನ್ನು ಹೊಂದುತ್ತ ಬರುತ್ತದೆ. ಈ ಅರ್ಥದಲ್ಲಿ ಮೂಲತಃ ‘ಅನುಸೃಷ್ಟಿ’ಯಾಗಿದ್ದರೂ ಮುಂದೆ ‘ಪುನಃಸೃಷ್ಟಿ’ಯಾಗುತ್ತ ಸಾಗಿಬರುವ ಇದು, ಕಟ್ಟಿ ಮುಗಿಸಿದ ಸಾಹಿತ್ಯವಲ್ಲ; ಕಟ್ಟುತ್ತಲಿರುವ ಸಾಹಿತ್ಯವೆಂದೇ ಹೇಳಬೇಕು. ಹೀಗಾಗಿ ‘ಅನುಸೃಷ್ಟಿ’ಯಾಗಿ ಹುಟ್ಟಿ ‘ಪುನಃಸೃಷ್ಟಿ’ಯಾಗಿ ಬೆಳೆಯುವುದು ಇದರ ಇನ್ನೊಂದು ಲಕ್ಷಣವಾಗಿದೆ.

೫. ಶಿಷ್ಟಸಾಹಿತ್ಯದಂತೆ ಲಿಪಿಶರೀರಿಯಾಗಿ ಹುಟ್ಟಿ ಲಿಪಿಶರೀರಿಯಾಗಿ ವ್ಯವಹರಿಸದೆ, ಸಾಮಾನ್ಯವಾಗಿ ಧ್ವನಿಶರೀರಿಯಾಗಿ ಹುಟ್ಟಿ ಧ್ವನಿಶರೀರಿಯಾಗಿ ಪ್ರವಹಿಸುತ್ತದೆ.

ಮೇಲೆ ಹೇಳಿದ ‘ಜಾನಪದಸಾಹಿತ್ಯದ ಪಂಚಲಕ್ಷಣ’ಗಳಲ್ಲಿ ಅದರ ಅಂತರಂಗ, ಬಹಿರಂಗಗಳ, ಹುಟ್ಟು ಬದುಕು ಬೆಳವಣಿಗೆಗಳ ಸಮಗ್ರತೆಯನ್ನು ಕಾಣಬಹುದಾಗಿದೆ.

ಕಳೆದ ಒಂದುನೂರು ವರ್ಷಗಳಿಂದ ಈ ಜಾನಪದಸಾಹಿತ್ಯದ ಸಂಪಾದನಕಾರ್ಯ ಕರ್ನಾಟಕದಲ್ಲಿ ಘಟ್ಟಗಳನ್ನು ಕಲ್ಪಿಸಿಕೊಂಡು ಹೀಗೆ ಬೆಳೆದುಬಂದಿದೆ;

೧. ಹಲಸಂಗಿ ಗೆಳೆಯರ ಪೂರ್ವ ಘಟ್ಟ -೧೯೩೦ಕ್ಕೆ ಮೊದಲು

೨. ಹಲಸಂಗಿ ಗೆಳೆಯರ ಘಟ್ಟ ೧೯೩೦-೧೯೫೦

೩. ಗದ್ದಗಿಮಠ ಮತ್ತು ಕರಾಕೃಘಟ್ಟ ೧೯೫೦-೧೯೬೬

೪. ಆಧುನಿಕ ಘಟ್ಟ ೧೯೬೬ ರಿಂದ ಮುಂದೆ

ಇವುಗಳಲ್ಲಿ ಮೊದಲಿನ ಮೂರು, ಸಾಮಾನ್ಯವಾಗಿ Folk song ಸಂಪಾದನೆಯ ಘಟ್ಟವಾದರೆ ಕೊನೆಯದು Folk literature ಸಂಪಾದನೆಯ ಘಟ್ಟವೆನಿಸಿ, ಗಾದೆ, ಒಗಟು, ಒಡಪು, ಶಿಶುಪ್ರಾಸ, ನಂಬಿಕೆ, ಕಥೆ, ನಾಟಕ ಮೊದಲಾದ ಪ್ರಕಾರಗಳು ಬಿಚ್ಚಿಕೊಂಡುದು, ಜಾನಪದಸಾಹಿತ್ಯ ಸಂಪಾದನೆಯ ದೃಷ್ಟಿಯಿಂದ ಒಂದು ಸಾಧನೆಯೆಂದೇ ಹೇಳಬಹುದು. ಹೀಗೆ ಜಾನಪದ ಸಾಹಿತ್ಯ ಸಂಪಾದನೆ ಹೊಸ ಪ್ರಕಾರಗಳನ್ನು ತನ್ನ ತೆಕ್ಕೆಯಲ್ಲಿ ಅಳವಡಿಸಿಕೊಂಡು ಬೆಳೆಯುತ್ತಲಿದ್ದರೂ ‘ಸಂಪಾದನಕ್ರಮ’ದಲ್ಲಿ ಅಂಥ ಹೊಸತನವಾಗಲಿ ಪ್ರಗತಿಯಾಗಲೀ ಪ್ರಗತಿಯಾಗಲೀ ಈವರೆಗೂ ಕಂಡುಬರಲಿಲ್ಲ. ಬಹಳವೆಂದರೆ ಪುಟ ಬಾಹುಳ್ಯದ ವೈಜ್ಞಾನಿಕ ಸೋಗಿನ ಮುನ್ನುಡಿಗಳು, ಕ್ಷೇತ್ರಕಾರ್ಯದ ಪರಿದಾಟ ಪರಿಶ್ರಮಗಳ ಸೂಚನೆಗಳು ಮಾತ್ರ ಗೋಚರಿಸುತ್ತವೆ. ಅದಕ್ಕಾಗಿಯೇ ಸಂಪಾದನೆಯ ದೃಷ್ಟಿಯಿಂದ ‘ಜನಪದವಿದ್ಯಾವ್ಯಾಸಂಗಿ’ಗಳ ಮತ್ತು ‘ಜನಪದ ಹವ್ಯಾಸಿ’ಗಳ ಸಂಕಲನಗಳಲ್ಲಿ ಅಂಥ ವಿಶೇಷ ಅಂತರ ತೋರಿಬರುತ್ತಿಲ್ಲವೆಂಬ ಪ್ರತಿಕ್ರಿಯೆಗಳು ಆಗಾಗ ಕಿವಿಗೆ ಬೀಳುತ್ತಲಿವೆ. ಇಷ್ಟೇ ಏಕೆ ಜನಪದ ಕ್ಷೇತ್ರಕ್ಕೆ ಸಂಬಂಧಪಟ್ಟ ಗ್ರಂಥಗಳು, ಲೇಖನಗಳು ಪ್ರತಿವರ್ಷ ನೂರಾರು ಪ್ರಕಟವಾಗುತ್ತಲಿದ್ದರೂ ‘ಜಾನಪದ ಸಾಹಿತ್ಯ ಸಂಪಾದನೆ’ಯ ಬಗ್ಗೆ ಒಂದು ಸ್ವತಂತ್ರ ಗ್ರಂಥವಾಗಲೀ ಒಂದು ಸ್ವತಂತ್ರ ಲೇಖನವಾಗಲೀ ಪ್ರಕಟವಾಗದಿರುವುದು, ಸಂಪಾದಿತ ಕೃತಿಗಳ ಮುನ್ನುಡಿಯಲ್ಲಾದರೂ ಈ ಸಾಹಿತ್ಯಸಂಪಾದನೆಯ ಬಗ್ಗೆ ನಿರ್ದಿಷ್ಟ ನೀತಿ ನಿಯಮಗಳನ್ನು ಸೂಚಿಸದಿರುವುದು ತುಂಬ ಆಶ್ಚರ್ಯದ ಸಂಗತಿಯಾಗಿದೆ. ‘ಮಲೆಯ ಮಾದೇಶ್ವರ’, -‘ಮದ್ದುಂಟೆ ಜನನ ಮರಣಕ್ಕೆ’, ‘ದಕ್ಷಿಣ ಕನ್ನಡ ಜನಪದ ಸಾಹಿತ್ಯ’,ಗ್ರಂಥಗಳ ಮುನ್ನುಡಿಯಲ್ಲಿ ಕೆಲಮಟ್ಟಿನ ಚರ್ಚೆ ಬಂದಿದ್ದರೂ ಮೂವರಲ್ಲಿಯೂ ಒಮ್ಮತವಿಲ್ಲ. ಆದುದರಿಂದ ‘ಜಾನಪದ ಸಾಹಿತ್ಯಸಂಪಾದನೆ’ಯ ಬಗ್ಗೆ ಹೊಸದಾಗಿಯೇ ಕೆಲವು ಮೂಲಭೂತ ಸೂತ್ರಗಳನ್ನು ಇಂದು ರೂಪಿಸಬೇಕಾಗಿದೆ. ಇದಕ್ಕೆ ಹಿನ್ನೆಲೆಯಾಗಿ ಪ್ರದೇಶ, ಸಮಾಜ, ಕಾಲ, ಸಂದರ್ಭ, ನಿವೇದಕ ವ್ಯಕ್ತಿ ಎಂಬ ಐದು ಅಂಶಗಳ ತಿಳಿವಳಿಕೆ ಸಂಪಾದಕರಿಗೆ ಅವಶ್ಯವಾಗಿದೆ.

ಪ್ರದೇಶ: ಜಾನಪದಸಾಹಿತ್ಯ ಯಾವುದೇ ಒಂದು ಜನಾಂಗದ ಆಸ್ತಿಯಾಗಿ ಉಳಿಯದಿದ್ದರೂ ಅದು ಕೆಲಮಟ್ಟಿಗೆ ಪ್ರದೇಶಭೇದನಿಷ್ಠವಾಗಿಯೂ ವರ್ತಿಸುತ್ತದೆ. ನದಿಬೆಟ್ಟಗಳೂ ಜಾತಿಜಾಲಗಳೂ ಧಾರ್ಮಿಕಕೇಂದ್ರಗಳೂ ಕಾರಣವಾಗಿ ಭಾಷೆಯಂತೆ ಈ ಸಾಹಿತ್ಯವೂ ಪ್ರದೇಶದಿಂದ ಪ್ರದೇಶಕ್ಕೆ ಕೆಲಮಟ್ಟಿಗೆ ಭಿನ್ನವಾಗಿರುವುದಲ್ಲದೆ ಒಂದು ಪ್ರದೇಶದಲ್ಲಿಯೇ ಮತ್ತೆ ಸೀಮಾರೇಖೆಗಳನ್ನು ರೂಪಿಸಿಕೊಳ್ಳುತ್ತದೆ. ಕರ್ನಾಟಕಕ್ಕೆ ಬಂದರೆ ಭೌಗೋಳಿಕವಾಗಿ, ಉತ್ತರಕರ್ನಾಟಕ, ದಕ್ಷಿಣಕರ್ನಾಟಕ  ಮತ್ತು ಕರಾವಳಿಕರ್ನಾಟಕ ಎಂದು ಮೂರು ಪ್ರಧಾನ ಜಾನಪದ ಪ್ರಾಂತಭೇಧಗಳಿವೆ. ಇವುಗಳಲ್ಲಿಯೇ ಉಪಪ್ರಾಂತ ಭೇಧಗಳನ್ನು ಕಲ್ಪಿಸಬಹುದಾಗಿದೆ.

ಈ ಪ್ರಧಾನ ಮತ್ತು ಉಪಪ್ರಧಾನ ಪ್ರಾಂತಭೇಧಗಳ ಸೀಮಾರೇಖೆಗಳು ಪರಸ್ಪರ ಛೇದಿಸದೆ ಇಲ್ಲವೆ ಛೇದಿಸಿಕೊಂಡು ಜುಂಜಪ್ಪನವರ ತೆಲಗುಬಣಜಿಗರ ಭಾಗವಂತಿಕೆಯವರ ಹಾಡುಗಳು, ಉತ್ತರಕನ್ನಡ ಜಿಲ್ಲೆಯ ತಾರಲೆಹಾಡು ಪುಗಡಿಹಾಡು ಗುಮ್ಮಟೆಪದ ದೋಣಿ ಸಾಗಿಸುವಾಗಿನ ಅಂಬಿಗರ ಹಾಡುಗಳು ಸೀಮಾರೇಖೆಗಳು ಪರಸ್ಪರ ಛೇದಿಸುವುದಿಲ್ಲ. ಆದರೆ ಉತ್ತರ ಕರ್ನಾಟಕ, ದಕ್ಷಿಣಕರ್ನಾಟಕ ನಿಷ್ಠ ಕಿಂದರಜೋಗಿಗಳ ಗೊರವರ ಗೊಂದಲಿಗರ ಹಾಡುಗಳ ಸೀಮಾರೇಖೆಗಳು ಪರಸ್ಪರ ಛೇದಿಸಿಕೊಂಡು ಹೋಗುತ್ತವೆ. ಹೀಗೆ ಛೇದಿಸಿಕೊಂಡು ಹೋದರೂ ಅವುಗಳಿಗೆ ಪ್ರಾಂತಭೇದದ ಮುದ್ರೆ ಇದ್ದೇ ಇರುತ್ತದೆಯೆಂಬುದನ್ನು ಮರೆಯಬಾರದು.

ಸಮಾಜ: ಸಮಾಜವನ್ನು ಗಮನಿಸಿ ಭಾಷೆಯನ್ನು ಪ್ರಾಕೃತರ ಭಾಷೆ, ಪ್ರತಿಷ್ಠಿತರ ಭಾಷೆ (ಕನ್ನಡ ಮಟ್ಟಿಗೆ ಹೇಳುವುದಾದರೆ ಅಬ್ರಾಹ್ಮಣರ ಭಾಷೆ ಮತ್ತು ಬ್ರಾಹ್ಮಣರ ಭಾಷೆ) ಯೆಂದು ವರ್ಗೀಕರಿಸುವಂತೆ ಈ ಮೌಖಿಕಸಾಹಿತ್ಯದಲ್ಲಿಯೂ ಜಾನಪದಸಾಹಿತ್ಯ ಮತ್ತು ಜಾಣಪದಸಾಹಿತ್ಯವೆಂಬ ಸ್ತರಗಳನ್ನು ಗುರುತಿಸಬಹುದು.[5] ಇವುಗಳಲ್ಲಿಯೇ ಮತ್ತೆ ಆಂತರಿಕ ಸ್ತರಗಳಿದ್ದು ಅವು ಅಡಕಿಲರೂಪದಲ್ಲಿರುತ್ತವೆ. ಕೆಳವರ್ಗದಿಂದ ಮೇಲುವರ್ಗಕ್ಕೆ ಹೋದಂತೆ ಅವುಗಳ ಜಾನಪದತ್ವ ತಿಳಿಯಾಗುತ್ತ ಇಲ್ಲವೆ ಶಿಷ್ಟಮುಖಿಯಾಗುತ್ತ ನಡೆಯುತ್ತದೆ. ಉದಾ:

. ಒಂಬತ್ತ ತಿಂಗಳ ನಿನ್ನ ತುಂಬಿಕೊಂಡು ತಿರಗೇನ
ಹಂಬಲಿಸಿ
ನಿನ್ನ ಹಡದೇನ | ಸೋ
ಹಂಬಲಿಸಿ
ನಿನ್ನ ಹಡದೇನ ಚಿತ್ರದ
ಗೊಂಬಿ
ನಿನಗೊಪ್ಪಿಸಿಕೊಡಲ್ಹ್ಯಾಂಗ ||

. ಧಾರೆಯರೆದ ಕನಕಾಂಗಿಗೆ ಬಲರಾಮ
ಧೀರ
ಪಾರ್ಥಗೆ ಸುಕುಮಾರಗಿವಳನು ||ಪಲ್ಲ ||
ತೋರ
ಹರಳ ವಂಕಿ ಬಾಜುಬಂದಿಗಳು
ಹೆರಳಿಗಾಭರಣವನಿಡಿದ
ಮಗಳನು
ಬಂಗಾರದಂತೆ
ಬಳಕುವಳ
ಶೃಂಗರಿಸುತಲ್ಲಿ
ಭುಜಂಗವೇಣಿಯನು ||

ಇವುಗಳನ್ನು ಓದಿದರೆ ಸಾಕು, ಜಾನಪದತ್ವ ಮತ್ತು ಜಾಣಪದತ್ವಗಳ ಅಂತರ ತಟ್ಟನೇ ಗಮನಕ್ಕೆ ಬರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಮಾರಂಭದ ಒಂದು ಸಂದರ್ಭವನ್ನೇ ಜನಪದರು ಹಾಡನ್ನಾಗಿ ಸೃಷ್ಟಿಸಿದರೆ, ಜಾಣಪದರು ಸಂದರ್ಭಕ್ಕೆ ತಕ್ಕ ಪೌರಾಣಿಕ ಘಟನೆಗಳನ್ನೇ ಹಾಡುತ್ತಾರೆ. ಹೀಗಾಗಿ ಜಾನಪದ ಹಾಡುಗಳಲ್ಲಿ ಕಾಣುವ ವಾತಾವರಣ ಪ್ರತಿಬಿಂಬ ಜಾನಪದ ಹಾಡುಗಳಲ್ಲಿ ತೋರಿಬರುವುದಿಲ್ಲ. ಅಂದರೆ ಒಂದೇ ಭಾಷೆಯನ್ನಾಡುವವರ ಜಾನಪದಸಾಹಿತ್ಯದಲ್ಲಿಯೂ ಜನಪದತ್ವ ಸಮಾಜದಿಂದ ಸಮಾಜಕ್ಕೆ ಭಿನ್ನವಾಗಿರುತ್ತದೆ.

ಕಾಲ: ಸಮಾಜದಂತೆ ಸಾಹಿತ್ಯವೂ ಕಾಲಕ್ಕೆ ತಕ್ಕ ಸಂವೇದನೆಗಳನ್ನು ಮೈಗೂಡಿಸಿಕೊಳ್ಳುತ್ತ, ಸ್ವರೂಪವನ್ನು ಬದಲಿಸಿಕೊಳ್ಳುತ್ತಾ ಬರುತ್ತದೆ. ಇದೇ ರೀತಿ ಜನಪದರಲ್ಲಿಯೂ ಕಾಲಕ್ಕೆ ತಕ್ಕಂತೆ ಹೊಸ ಹೊಸ ಸಾಹಿತ್ಯ ಹುಟ್ಟುವುದರ ಜೊತೆ ಹಳೆಯ ಸಾಹಿತ್ಯವೂ ಹೊಸತಾಗುತ್ತ ನಡೆಯುವುದೊಂದು ವಿಶೇಷ. ಹೀಗಾಗಿ ಜಾನಪದ ಸಾಹಿತ್ಯದಲ್ಲಿ ಕಾಲವೂ ಪ್ರಧಾನಪಾತ್ರವಹಿಸುವುದೆಂದು ಹೇಳಬೇಕು. ಒಟ್ಟಿನಲ್ಲಿ ಪ್ರದೇಶಬದ್ದ ಸಮಾಜಬದ್ಧ-ಕಾಲಬದ್ಧವಾಗಿರುವುದು ಯಾವುದೇ ಜಾನಪದ ಸಾಹಿತ್ಯದ ಪ್ರಧಾನ ಲಕ್ಷಣವಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೂ ಎರಡೂ ಸಂಗತಿಗಳಿವೆ. ಅವು: ಸಂದರ್ಭ ಮತ್ತು ವ್ಯಕ್ತಿ.

ಸಂದರ್ಭ: ಜಾನಪದ ಸಾಹಿತ್ಯವು ಸಂದರ್ಭ (Context)ದ ಮಟ್ಟದಲ್ಲಿ ಸರಿಯಾದ ರೂಪದಿಂದ ಪ್ರಕಟವಾಗುತ್ತದೆ. ಅಂದರೆ ಉತ್ಸವ, ಉತ್ಸಾಹ ಇತ್ಯಾದಿ ಸಂದರ್ಭಗಳಿಗೆ ತಕ್ಕಂತೆ ಅವುಗಳ ಪರಿಣಾಮದಲ್ಲಿ ವ್ಯತ್ಯಾಸವಾಗುತ್ತದೆ. ಉದಾ.

ಎಣ್ಣಿಯ ನೀ ಕೊಡಕ ಸಣ್ಣರಿವಿ ಕವದಂಗ
ತುಂಬೇತಿ
ಹೆಣ್ಣಿನ ಬಳಗವು | ಸೋ
ತುಂಬೇತಿ
ಹೆಣ್ಣಿನ ಬಳಗವು ಕಣ್ಣೀರ
ಸಣ್ಣ
ಮುತ್ತಾಗಿ ಸುರದಾವ |

ಮದುವೆಯ ಹಂದರದಲ್ಲಿ ಮಗಳನ್ನು ಧಾರೆ ಎರೆದುಕೊಡುವ ಸಂದರ್ಭದಲ್ಲಿ ಕರುಳನ್ನು ಕಿತ್ತುತರುವ ಈ ಹಾಡು, ಸಂದರ್ಭಬಾಹಿರವಾದಲ್ಲಿ ತನ್ನ ಶಕ್ತಿಯನ್ನು, ಅಭಿವ್ಯಕ್ತಿಯ ಪರಿಣಾಮವನ್ನು ಕಳೆದುಕೊಳ್ಳುವುದು ತೀರ ಸಹಜವೇ ಸರಿ.

ಕೆಲವು ಸಲ ಗೆಜ್ಜೆ, ವಾದ್ಯ, ಕೋಲು, ಕುಣಿತಗಳ ಪರಿಕರದೊಂದಿಗೆ ಮಾತ್ರ ಹಲವು ಹಾಡುಗಳು ಸಮಗ್ರ ಪರಿಣಾಮ ಬೀರುತ್ತವೆ. ಇಂಥವುಗಳನ್ನು ಪರಿಕರದಿಂದ ಹೊರಗಿಟ್ಟು ಸಂಗ್ರಹಿಸಿದರೆ ದಂಡಿ, ಬಾಸಿಂಗ, ಅರಿಷಿಣ, ಕುಂಕುಮವಿಲ್ಲದೆ ಮಾಡಿದ ಮದುವೆಯಂತೆ ಸೊಗಸು ಕಳೆದುಕೊಳ್ಳುತ್ತದೆ. ಕಾರಣ ಪರಿಸರ, ಪರಿಕರಗಳ ಆವರಣದಲ್ಲಿಯೇ ಈ ಸಾಹಿತ್ಯದ ಸಂಪಾದನಕಾರ್ಯ ಪೂರೈಸಬೇಕು.

ವ್ಯಕ್ತಿ: ಜಾನಪದಸಾಹಿತ್ಯ ಸಂಪಾದನೆಯ ಸಂದರ್ಭದಲ್ಲಿ ವ್ಯಕ್ತಿ ಅಂದರೆ ನಿವೇದಕ (Informant) ತುಂಬ ಮುಖ್ಯನಾದವನು. ಭಾರತೀಯ ಪರಂಪರೆಯಲ್ಲಿ ಸ್ತ್ರೀ, ಪುರುಷ, ಬಾಲಕ ಈ ಮೂರು ಘಟಕಗಳು ತೀರ ಪ್ರತ್ಯೇಕವಾಗಿ ನಿಂತು, ಸ್ವತಂತ್ರವಾಗಿ ಬೆಳೆಯುವುದರಿಂದ ಇವರ ಜೀವನದಂತೆ ಇವರ ಸಾಹಿತ್ಯವೂ ತೀರ ಪ್ರತ್ಯೇಕ ಗುಣನಿಷ್ಠವಾಗಿರುತ್ತದೆ. ಅಂದರೆ ಸ್ತ್ರೀನಿಷ್ಠ, ಪುರುಷನಿಷ್ಠ, ಬಾಲಕನಿಷ್ಠವಾಗಿ ಹುಟ್ಟುತ್ತದೆ; ಹಬ್ಬುತ್ತದೆ. ಈ ವರ್ಗಗಳಿಗೆ ಸಂಬಂಧಪಟ್ಟ ವ್ಯಕ್ತಿಗಳ ಮೂಲಕವೇ ಅವರ ಸಾಹಿತ್ಯದ ನಿಜಸ್ವರೂಪ ದರ್ಶನವಾಗುತ್ತದೆ. ಆದುದರಿಂದ ಇಲ್ಲಿ ಒಬ್ಬರ ಹಾಡನ್ನು ಇನ್ನೊಬ್ಬರಿಂದ ಸಂಗ್ರಹಿಸುವುದು ಅಸಮಂಜಸವೆನಿಸುತ್ತದೆ. ಉದಾ. ಸ್ತ್ರೀಯರಿಂದ ಹಂತಿಹಾಡು, ಪುರುಷರಿಂದ ಬೀಸುವ ಹಾಡು. ಇದಲ್ಲದೆ ಸ್ತ್ರೀ ಪುರುಷರಲ್ಲಿಯೇ ಕೆಲವರು ವಿಶಿಷ್ಟ ಹಾಡುಗಳನ್ನು ಮಾತ್ರ (ಪುರುಷರಲ್ಲಿ ಕುರುಬರು ಡೊಳ್ಳಿನ ಹಾಡು, ಸ್ತ್ರೀಯರಲ್ಲಿ ಕಬ್ಬಿಲರು ಜೋಕುಮಾರನ ಹಾಡು) ಹೇಳುತ್ತಿರುತ್ತಾರೆ. ಇಲ್ಲಿಯೂ ಒಂದು ವರ್ಗದ ಹಾಡನ್ನು ಹೇಳುವವರಿಂದ ಬೇರೊಂದು ವರ್ಗದ ಹಾಡನ್ನು ಪಡೆಯುವುದು ಸರಿಯೆನಿಸದು.

ಹೀಗೆ ವ್ಯಕ್ತಿಯು ಸಂದರ್ಭ ನಿಷ್ಠವಾಗಿ ನಿಂತು, ಕಾಲ-ದೇಶ-ಸಮಾಜ ಬದ್ಧನಾಗಿ ವ್ಯಕ್ತಪಡಿಸುವಲ್ಲಿ ಅಂದರೆ ಕಾಲ, ದೇಶ, ಸಮಾಜ, ಸಂದರ್ಭ, ವ್ಯಕ್ತಿ ಈ ‘ಐದು ಸೂತ್ರ’ಗಳು ಪರಸ್ಪರ ಛೇದಿಸುವಲ್ಲಿ ಒಂದು ಜಾನಪದ ರಚನೆಯ ಸತ್ಯರೂಪ ಸಾಕ್ಷಾತ್ಕಾರವಾಗುತ್ತದೆ. ಹೀಗಾಗಿ ಯಾವುದೇ ಜಾನಪದಸಾಹಿತ್ಯದ ಪ್ರಕಾರನ್ನು ಈ ಐದು ಅಂಶಗಳಿಂದ ಹೊರಗಿಟ್ಟು ಸಂಪಾದಿಸಕೂಡದು. ಹಾಗೆ ಹೊರಗಿಟ್ಟು ಸಂಪಾದಿಸುವುದೆಂದರೆ ಲವಣಾಂಶವನ್ನು ತೆಗೆದುಹಾಕು ಉಪ್ಪು ಸಂಗ್ರಹಿಸಿದಂತಾಗುತ್ತದೆ.

ಹೀಗೆ ಪಂಚಸೂತ್ರಗಳಿಗೆ ಬದ್ಧನಾಗಿ ಜನಪದ ಸಾಹಿತ್ಯವನ್ನು ಸಂಪಾದಿಸುವಲ್ಲಿ ಸಂಪಾದಕನಿಗೆ ಕಾಡುವುದೆಂದರೆ ಪಾಠಾಂತರ (Variants) ಮತ್ತು ರೂಪಾಂತರಗಳು (Varsions).ಇವುಗಳ ಪರಿಜ್ಞಾನವಿಲ್ಲದಿದ್ದರೆ ಅವನು ಸಂಪಾದನಕಾರ್ಯವನ್ನೇ ಕೆಡಿಸಿಬಿಡುತ್ತಾನೆ.

ಸಾಹಿತ್ಯ ಲಿಖಿತವೇ ಇರಲಿ, ಅಲಿಖಿತವೇ ಇರಲಿ ರೂಪಾಂತರ ಮತ್ತು ಪಾಠಾಂತರಗಳು ಅನಿವಾರ್ಯ. ಯಾವುದೇ ಭಾಷೆಯಲ್ಲಿ ಒಂದು ‘ವಸ್ತು’ವನ್ನಾಶ್ರಯಿಸಿ ಹುಟ್ಟಿದ ಬೇರೆ ಬೇರೆ ಸಾಹಿತ್ಯರಚನೆಗಳು ರೂಪಾಂತರ, ಒಂದು ‘ಸಾಹಿತ್ಯರಚನೆ’ಗೆ ಹುಟ್ಟಿದ ಬೇರೆ ಬೇರೆ ಭಾಷಿಕ ವ್ಯತ್ಯಾಸಗಳು ಪಾಠಾಂತರ. ಜಾನಪದ ಸಾಹಿತ್ಯ ಸಂಪಾದಕನಿಗೆ ಇವುಗಳ ಸ್ಪಷ್ಟ ತಿಳುವಳಿಕೆ ಮೊದಲ ಅಗತ್ಯವಾಗಿದೆ. ಇಲ್ಲವಾದರೆ ವಸ್ತುವನ್ನಾಶ್ರಯಿಸಿ, ಹುಟ್ಟಿದ ಬೇರೆ ಬೇರೆ ರೂಪಾಂತರಗಳನ್ನೂ ಸಾದೃಶ್ಯಭ್ರಾಂತಿಯಿಂದ ಪಾಠಾಂತರಗಳೆಂದು ಗ್ರಹಿಸಿ, ಅವುಗಳನ್ನು ಮಿಶ್ರಗೊಳಿಸುವ ಅಪಾಯವಿದೆ. ಫಿನ್‌ಲ್ಯಾಂಡಿನ ಜಾನಪದ ಮಹಾಕಾವ್ಯವಾದ ‘ಕಲೇವಾಲ’ವನ್ನು ಎಲಿಯಾಸ್‌ಲೋನಾರ್ಟ್‌ಹೇಗೆ ಸಂಪಾದಿಸಿರುವನೋ ನನಗೆ ಸ್ಪಷ್ಟವಿಲ್ಲ. ಕನ್ನಡದಲ್ಲಿ ಹಲವು ಮೂಲಗಳಿಂದ ಮಲೆಯ ಮಾದೇಶ್ವರ ಮೊದಲಾದ ಜಾನಪದ ನೀಳ್ಗವನಗಳನ್ನು ಪುನರ್ರಚಿಸಿದ್ದು, ಅವು ಹತ್ತಾರು ತುಂಡುಗಳ ತೇಪೆವಸ್ತ್ರವಾಗಿರಲು ಸಾಧ್ಯವಿದೆ. ಮಲೆಯ ಮಾದೇಶ್ವರ ಕಾವ್ಯದ ಸಂಪಾದನೆಯನ್ನು ಕುರಿತು ‘ಮಲೆಯ ಮಾದೇಶ್ವರ ಕಾವ್ಯದ ಹತ್ತು ಪಾಠಗಳ ಒಟ್ಟು ಸಾಲುಗಳ ಮೊತ್ತ ೭೫,೬೦೦ ಸಾಲುಗಳಷ್ಟಾಯಿತು”[6] ಎಂಬ ಮಾತು ತುಂಬ ವಿಚಿತ್ರವಾಗಿ ತೋರುತ್ತದೆ. ಹೀಗಾಗಿ “ಒಂದುಕಥೆ ದೇಶದಿಂದ ದೇಶಕ್ಕೆ ಕಾಲದಿಂದ ಕಾಲಕ್ಕೆ ಪ್ರಸಾರಗೊಳ್ಳುವಾಗ ಕಥೆಗಾರರ ವೈಯಕ್ತಿಕ ಅಭಿರುಚಿ ಹಾಗೂ ಸಾಮರ್ಥ್ಯಕ್ಕನುಗುಣವಾಗಿ ನಿರಂತರವಾಗಿ ಬದಲಾವಣೆ ಹೊಂದುತ್ತದೆ. ಈ ಕಾರಣದಿಂದ ಒಂದೇ ಕಥೆಯ ಹಲವಾರು ಭಿನ್ನರೂಪವನ್ನು (Variants) ಗುರುತಿಸಲು ಸಾಧ್ಯ. ಈ ಭಿನ್ನ ರೂಪಗಳನ್ನು ಸಂಗ್ರಹಿಸಿ, ಚಾರಿತ್ರಿಕ ಭೌಗೋಳಿಕ ವಿಧಾನದಿಂದ (Historic-Geographical method)ಜಾನಪದ ವಿದ್ವಾಂಸರು ಒಂದು ಕಥೆಯ ಮೂಲರೂಪ ಏನಿತ್ತು ಎಂಬುದನ್ನು ಗುರುತಿಸುತ್ತಾರೆ… ಈ ವಿಧಾನದ ಮೂಲಕ ಕಂಡುಹಿಡಿದ ಒಂದು ಕಥೆಯ ಮೂಲರೂಪವನ್ನೇ (Archetype)ಕಥಾವರ್ಗ (taletype) ಎಂದು ಕರೆಯಲಾಗುತ್ತದೆ. ಕಥಾವರ್ಗವನ್ನು ಕಂಡುಹಿಡಿಯುವ ಕಾರ್ಯ, ಗ್ರಂಥಸಂಪಾದನಶಾಸ್ತ್ರದಲ್ಲಿ ಪರಂಪರಾನುಗತ ಹಸ್ತಪ್ರತಿಗಳ ಸಹಾಯದಿಂದ ಮಾತೃಕೆ (exempler)ಯನ್ನು ಪುನರ್ರಚಿಸಿದಷ್ಟೇ ಕಷ್ಟದ ಕೆಲಸ… ಒಂದು ಕಥಾವರ್ಗವನ್ನು ನಿರ್ಧರಿಸಬೇಕಾದರೆ ಆ ಕಥೆಯ ಎಷ್ಟೆಷ್ಟು ಭಿನ್ನಪಾಠಗಳು ದೊರೆತರೆ ಅಷ್ಟಷ್ಟು ಅನುಕೂಲ”[7] ಎಂದು ಹೇಳುವ ಮಾತುಗಳು ನಮಗೆ ನಿರ್ದಿಷ್ಟ ನೆಲೆಯನ್ನು ಮುಟ್ಟಿಸುವುದು ಸಂದೇಹ.

ತ್ರಿಪದಿಯಂತಹ ಬಿಡಿಮುಕ್ತಕಗಳಿಗಿಂತ ನೀಳ್ಗವನಗಳಲ್ಲಿ ರೂಪಾಂತರ ರಚನೆಗಳು ಹೆಚ್ಚು. ಅಲ್ಲಿ ಒಂದು ಕಥೆ ಅಥವಾ ವಸ್ತುವಿಗೆ ಬೇರೆಬೇರೆಯವರಿಂದ ಅಖಂಡ ಹಾಡುಗಳು, ಖಂಡಹಾಡುಗಳು ಹುಟ್ಟಿರುತ್ತವೆ. ಇವು ಒಂದೇ ಛಂದೋಮಟ್ಟದಲ್ಲಿದ್ದರೆ ಅಖಂಡ+ಅಖಂಡ, ಖಂಡ+ಖಂಡ ಹಾಡುಗಳು ಪರಸ್ಪರ ಸೇರಿಕೊಳ್ಳಬಹುದು. ಇಲ್ಲವೇ ಒಂದೇ ಅಖಂಡ ಹಾಡು ಎರಡು ಇಲ್ಲವೆ ಹಲವು ಖಂಡಗಳಾಗಿ ವ್ಯವಹರಿಸಬಹುದು. ಕರ್ನಾಟಕದಲ್ಲಿ ಒಂದೇ ವಸ್ತುವಿನ ಸುತ್ತ ಹುಟ್ಟಿದ ಅನೇಕ ಖಂಡ ಇಲ್ಲವೇ ಅಖಂಡ ಹಾಡುಗಳು ಬಹಳಷ್ಟು ಸಿಗುತ್ತವೆ. ಉದಾ: ಡಾ. ಬೆಟಗೇರಿ ಕೃಷ್ಣಶರ್ಮ ಶೋಧಿಸಿದ ‘ಕೆರೆಗೆ ಹಾರ’ವು ಬಾವಿಗಾಗಿ ಸೊಸೆಯ ಬಲಿ, ಅಣಜಿ ಹೊನ್ನಮ್ಮ, ಒಡ್ಡರ ಬೋಯಿ, ಕುಣಿಗಲು ಕೆರೆ, ಹುಳಿಯಾರು ಕೆಂಚಮ್ಮ – ಹೀಗೆ

ಈಗಿನ ಮಟ್ಟಿಗೆ ೬ ರೂಪಾಂತರಗಳಲ್ಲಿ ಸಿಗುತ್ತದೆ. ಡಾ. ಡಿ. ಎಲ್‌. ಎನ್‌. ಸಂಪಾದಿತ ಗೋವಿನ ಕಥೆಯು ಗೋವಿನ ಹಾಡು, ಕೌಲೆಹಾಡು, ಆಕಳಹಾಡು, ಕವಲೆ ಹಾಡು, ಆಕಳಪದ, ಕವಲಿ ಹಾಡು, ಗೋಪ್ಯಮ್ಮ, ಕವಲಿಹಾಡು, ಗೋಪ್ಯಮ್ಮ ಹೀಗೆ ಈಗಿನ ಮಟ್ಟಿಗೆ ೧೦ ರೂಪಾಂತರಗಳಲ್ಲಿ ಸಿಗುತ್ತದೆ.[8]

ಇಂಥ ಹಾಡುಗಳನ್ನು ಸಂಪಾದಿಸುವಾಗ ಬೇರೆಬೇರೆ ರೂಪಾಂತರಗಳನ್ನು ಕಲೆಹಾಕಿ ಪಾಠಾಂತರದಂತೆ ಬಳಸಿಕೊಳ್ಳಬಾರದು. ಹಾಗಾದರೆ ಶಿಷ್ಟಪದ ಸಾಹಿತ್ಯ ಸಂಪಾದನೆಯಂತೆ ಒಂದು ರಚನೆಗೆ ಸಂಬಂಧಪಟ್ಟ ಬೇರೆ ಬೇರೆ ಪಾಠಾಂತರಗಳನ್ನು ಸಂಗ್ರಹಿಸಿ, ಅವುಗಳ ಬಲದಿಂದ ಯೋಗ್ಯವಾದ ಒಂದು ಪಾಠವನ್ನು ನಿರ್ಣಯಿಸಿ, ಮಿಕ್ಕವುಗಳನ್ನು ಅಡಿಯಲ್ಲಿ ಕೊಡಬೇಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ ಹೀಗೆ ಹೇಳಬಹುದು ಮೇಲೆ ವಿವರಿಸಿದ ಐದು ಘಟಕಗಳ ಛೇದನದಲ್ಲಿ ಲಭ್ಯವಾದ ಪಾಠವೊಂದು ಅರ್ಥವತ್ತಾಗಿದ್ದರೆ ಇನ್ನೊಂದು ಪಾಠವನ್ನು ಸಂಗ್ರಹಿಸುವ ಗೋಜಿಗಿ ಹೋಗಬಾರದು. ಅದು ನಿವೇದಕಜನ್ಯವೋ ಪ್ರದೇಶಮಾನ್ಯವೋ ಆದ ನಿರರ್ಥಕ ಪಾಠವಿದ್ದರೆ ಮಾತ್ರ ಬೇರೊಂದು ಯೋಗ್ಯಪಾಠಕ್ಕಾಗಿ ಪ್ರಯತ್ನಿಸಬೇಕು. ಈ ಕ್ರಿಯಾಸ್ವರೂಪವನ್ನು ಕೆಳಗೆ ವಿವರಿಸಲಾಗಿದೆ.

ಶಿಷ್ಟಸಾಹಿತ್ಯಕ್ಕಿಂತ ಜಾನಪದಸಾಹಿತ್ಯಕ್ಕೆ ಪಾಠಾಂತರ ಹೆಚ್ಚು. ಆ ಲಿಖಿತ ಸಾಹಿತ್ಯದಲ್ಲಿ ಪಾಠಾಂತರ ದೋಷವೆನಿಸುತ್ತಿದ್ದರೆ ಆ ಅಲಿಖಿತ ಸಾಹಿತ್ಯದಲ್ಲಿ ಪಾಠಾಂತರಗಳಾಗುವುದೇ ಗುಣವೆನಿಸುತ್ತದೆ. ನೆಲದ ರುಚಿ ಜಲಕ್ಕೆ ಬರುವಂತೆ ಕಾಲದೇಶಾದಿಗಳ ಬಣ್ಣ ಮತ್ತು ನಿವೇದಕ ಜನಿತ ಶುದ್ಧ ಅಶುದ್ಧ ಪಾಠಗಳು ಜಾನಪದ ಸಾಹಿತ್ಯಕ್ಕೆ ಉಂಟಾಗುತ್ತವೆ. ಅದರಲ್ಲಿಯೂ ಪದ್ಯ ಅಲ್ಪಪ್ರಮಾಣದಲ್ಲಿ ಪಾಠಾಂತರಗಳನ್ನು ತಾಳುತ್ತಿದ್ದರೆ, ಗದ್ಯ “ನಿದ್ದೆಗೊಮ್ಮೆ ನಿತ್ಯಮರಣ ಎದ್ದಸಲ ನವೀನ ಜನನ” ಎಂಬಂತೆ ಹುಟ್ಟುವಾಗಲೆಲ್ಲ ಹೊಸಸೃಷ್ಟಿ ಪಡೆಯುತ್ತದೆ.

ಜಾನಪದಸಾಹಿತ್ಯದಲ್ಲಿ ಕಾಣುವ ಎಲ್ಲ ಪಾಠಾಂತರಗಳು ಶುದ್ಧಪಾಠಾಂತರಗಳು, ಅಶುದ್ಧ ಪಾಠಾಂತರಗಳು ಎಂದು ಎರಡು ಬಗೆಯಾಗಿದ್ದು, ಶುದ್ಧಪಾಠಾಂತರಗಳು ಮತ್ತೆ ಉದ್ದೇಶಿತ ಮತ್ತು ಅನುದ್ದೇಶಿತವೆಂದು, ಅಶುದ್ಧಪಾಠಾಂತರಗಳು ಅಮಾನ್ಯ ಮತ್ತು ಮಾನ್ಯವೆಂದು ಎರಡು ತೆರನಾಗಿವೆ.

ಉದ್ದೇಶಿತ ಶುದ್ಧ ಪಾಠಾಂತರ: ಶಿಷ್ಟಪದ ಸಾಹಿತ್ಯದಲ್ಲಿ ಉದ್ದೇಶಪೂರ್ವಕ ಮಾಡುವ ಪಾಠಾಂತರ ಪ್ರಮಾದವಾದರೆ ಇಲ್ಲಿ ಅದು ಅಪ್ರಮಾದ, ಅನಿವಾರ್ಯ, ಅತ್ಯವಶ್ಯ.

ಅದಕ್ಕಾಗಿಯೇ ಜಾನಪದ ಸಾಹಿತ್ಯದಲ್ಲಿ ಐತಿಹಾಸಿಕ ಭೌಗೋಳಿಕ ಸಂಗತಿ, ದೇವತಾನಾಮ, ಪ್ರಾದೇಶಿಕ ವ್ಯಕ್ತಿನಾಮ ಮೊದಲಾದವುಗಳನ್ನು ಉದ್ದೇಶಪೂರ್ವಕವಾಗಿ ಬದಲಾವಣೆ ಮಾಡಿಕೊಳ್ಳುವುದು ದೋಷವೆನಿಸುವುದಿಲ್ಲ,  ಚೌರ್ಯವೆನಿಸುವುದಿಲ್ಲ. ಹೀಗಾಗಿ ಒಂದು ನಾಡಿನ ಒಂದು ಮೂಲೆಯಲ್ಲಿಯ ಹಾಡು ಇನ್ನೊಂದು ಮೂಲೆಯಲ್ಲಿ ಇಂಥ ವ್ಯತ್ಯಾಸಗಳಿಂದ ಬಳಕೆಯಾಗುತ್ತಿದರೆ ಅದಕ್ಕೆ ಯಾರದೂ ಅಭ್ಯಂತರವಿಲ್ಲ ಇರಬಾರದು

ಉದಾ:

ಬ್ಯಾಸಗಿ ದಿವಸಕ ಬೇವಿನ ಮರ ತಂಪ
ಭೀಮರತಿಯೆಂಬ
ಹೊಳಿ ತಂಪ | ಹಡದವ್ವ
ನೀ
ತಂಪ ನನ್ನ ತವರೀಗಿ ||

ಉತ್ತರ ಕರ್ನಾಟಕದಲ್ಲಿಯ ಈ ಹಾಡು

ಬೇಸಗೆ ದಿವಸಕಬೇವಿನ ಮರ ತಂಪ
ವೇದವತಿಯೆಂಬ
ಹೊಳೆತಂಪ | ಹಡದವ್ವ
ನೀ
ತಂಪ ನನ್ನ ತವರೀಗಿ ||

ಎಂದು ದಕ್ಷಿಣಕರ್ನಾಟಕದಲ್ಲಿ ಪಾಠಾಂತರದೊಂದಿಗೆ ಕೇಳಿಸುತ್ತಿರುವುದು ಅದೋಷವೆಂದೇ ಹೇಳಬೇಕು. ಇಂಥ ಮುಕ್ತಕಗಳು, ನೀಳ್ಗವನಗಳು ಪ್ರದೇಶದಿಂದ ಪ್ರದೇಶಕ್ಕೆ, ಮನೆಯಿಂದ ಮನೆಗೆ ಉದೇಶಿತ ಪಾಠವ್ಯತ್ಯಾಸದಿಂದ ಚಲಿಸುತ್ತಿರುವುದು ಸರ್ವಮಾನ್ಯವೇ ಸರಿ. ಇಲ್ಲಿ ಭೀಮರತಿ, ವೇದವತಿ ಹೀಗೆ ಪಾಠವ್ಯತ್ಯಾಸಗಳಿದ್ದ ಪದ್ಯಗಳು ಸಿಕ್ಕ ಮಾತ್ರಕ್ಕೆ ಅವುಗಳನ್ನು ಸ್ವತಂತ್ರ ರಚನೆಗಳೆಂದು ಪರಿಗಣಿಸುವುದು ಪ್ರಮಾದವಾಗುತ್ತದೆ. ಅನೇಕರ ಸಂಕಲನಗಳಿಂದ ಇಂಥ ಉದ್ದೇಶಿತ ಪಾಠಾಂತರಗಳನ್ನೊಳಗೊಂಡ ಪದ್ಯಗಳು ಗಣನೀಯ ಪ್ರಮಾಣದಲ್ಲಿ ಪುನರುಕ್ತಗೊಂಡಿರುವುದು ವಿಷಾದದ ಸಂಗತಿ. ಉದಾ:

ಊದಿಗಿ ದ್ಯಾವಮ್ಮ ನಾಡಿಗಿ ದೊಡ್ಡಕಿ |
ನಾಗಳ
ಗೋದಿ ಉಡಿಯಕ್ಕಿ | ಹಾಯ್ಕೊಂಡು
ನಾಗಯ್ಯಗ
ಹಾಲ ಎರದಾಳೋ ||

ನಾಗಾಯಿ ಯಲ್ಲಮ್ಮ ನಡುವಿರಲಿ ದೊಡ್ಡಾಕಿ |
ನಾಗಳ
ಗೋದಿ ಉಡಿಯಾಗ | ಹಾಕ್ಕೊಂಡು
ನಾಗರಿಗಿ
ಹಾಲ ಎರಿದಾಳೋ[9] ||

ಇವುಗಳನ್ನು ಸ್ವತಂತ್ರ ರಚನೆಗಳೆಂದು ಭಾವಿಸಿ ಬೇರೆಬೇರೆ ಪದ್ಯಗಳಂತೆ ಒಂದು ಕೃತಿಯಲ್ಲಿ ಅಚ್ಚು ಹಾಕಿಸುವುದಕ್ಕಿಂತ ಮೇಲೆ ಹೇಳಿದ ಪ್ರದೇಶ ಇತ್ಯಾದಿ ೫ ಸೂತ್ರಗಳಿಗೆ ಬದ್ಧವಾದ ಪಾಠವೊಂದನ್ನು ಇಲ್ಲಿ ಶಾಸ್ತ್ರೀಯವೆನಿಸುತ್ತದೆ. ಇಂಥ ಪ್ರಸಂಗಗಳಲ್ಲಿ ಭಿನ್ನ ಪಾಠಾಂತರದ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಅನುದ್ದೇಶಿತ ಶುದ್ಧಪಾಠಾಂತರ: ಜಾನಪದಸಾಹಿತ್ಯ ಪ್ರದೇಶದಿಂದ ಪ್ರದೇಶಕ್ಕೆ ಹೊರಳುವಾಗ ಅನುದ್ದೇಶಿತವಾಗಿ ಆಯಾ ಪ್ರಾದೇಶಿಕ ಭಾಷೆಯ ರೂಪ ಮತ್ತು ಧ್ವನಿಗಳನ್ನು ಮೈಗೂಡಿಸಿಕೊಳ್ಳುತ್ತದೆ. ಉದಾ :

ಅಡಿಗಿ ಮಾಡಂದರ ಅರವತ್ತು | ಗಂಗಾಳ
ಬೆಳಗತೀನತ್ತೀ
ಬೈಬ್ಯಾಡ | ತವರವರು
ಸರಮುತ್ತು
ಮಾಡಿ ಸಲವ್ಯಾರು ||

ಅಡಗಿ ಮಾಡಂದರ ಅರವತ್ತು | ಪರಿಯಾನ
ಅರಿಯೆ
ಕಾಣತ್ತೆ ಅಡಗೀಯ | ನಮ್ಮಪ್ಪೀ
ಸರಮುತ್ತ
ಮಾಡೀಯ ಕಳಗೀದಾ ||

ಈ ಎರಡೂ ಹಾಡುಗಳಿಗೆ “ಒಡಲೆರಡು, ಒಂದೇ ಜೀವ” ಹೀಗೆಯೇ ತಾಯಿಬೇರನ್ನು ಕತ್ತರಿಸಿಕೊಳ್ಳದೆ ತಂತುಬೇರನ್ನಾಶ್ರಯಿಸಿ ಬೇರೆ ಬೇರೆ ಪದ್ಯಗಳು ಅನುದ್ದೇಶಿತ ಪಾಠಾಂತರ ಹೊಂದಿ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಸಾರದಲ್ಲಿರುತ್ತದೆ.[10]

ಪ್ರದೇಶನಿಷ್ಠ ಪಾಠಾಂತರದಂತೆ ಪ್ರದೇಶನಿಷ್ಠ ಧ್ವನಿಮಾಂತರವೂ ಅನುದ್ದೇಶಿತವಾಗಿ ಇಣುಕುತ್ತದೆಯೆಂಬುದು ಗಮನಿಸಬೇಕಾದ ಸಂಗತಿ. ಉದಾ: ಹಾದಿಹಿಡಿದು ಓಗತಾನ ಹಾಡ್ಯಾಡಿ ಅಳತಾನ / ಆದಿ ಇಡದು ಓಗತಾನ ಆಡ್ಯಾಡಿ ಅಳತಾನ. ಸಣ್ಣೆಳಿ ಸರಪಳಿ ಬಂಗಾರದ ಕೋಡಣಸು /ಸನ್ನೆಳಿ ಸರಪಳಿ ಬಂಗಾರದ ಕೋಡನಸು.

ಮೂರನೆಯದಾಗಿ ಜಾನಪದ ಸಾಹಿತ್ಯದ ಹಾಡುಗಾರಿಕೆ ಅಥವಾ ಹೇಳುಗಾರಿಕೆಗಳೂ ಅನುದ್ದೇಶಿತ ಪಾಠಾಂತರವನ್ನುಂಟು ಮಾಡುತ್ತವೆ. ಉದಾ:

. ಪುಂಡಾನ ಎತಗೋಳು | ಹಿಂಡೀನ ಮೆಯ್ದಾವ |
.ಬೆಳ್ಳಾನ ಬಸವಣ್ಣ | ಎಲ್ಲೀಗಿ ಹೋಗಿದ್ದಿ | ಎಲ್ಲಾರ ನೆದರ ನಿನ ಮ್ಯಾಲ |
. ಹಾಡ ಇಲ್ಲಿಗಿ ಸರುವ ನೀಡೊ ನಮ್ಮಗ ವರವ |
. ಲಿಂಗಪೂಜಾ ನಾಗತಾದಣ್ಣ |
. ನಿಂಬಿಯ ವನದನ್ನ ಅರಗಿಳಿಯೆ |

ಇಂಥ ಅನುದ್ದೇಶಿತ ಪಾಠಾಂತರಗಳು ಆಯಾ ಪ್ರದೇಶಗಳಲ್ಲಿ ಮಾನ್ಯತೆ ಪಡೆದಿರುವುದರಿಂದ ಶುದ್ಧರೂಪಗಳೇ ಆಗಿದ್ದು, ಪ್ರದೇಶ ಇತ್ಯಾದಿ ೫ ಸೂತ್ರಗಳ ಒರೆಗಲ್ಲಿಗೆ ಹಚ್ಚಿ ಸ್ವೀಕರಿಸುವುದೇ ಇಲ್ಲಿ ಶಾಸ್ತ್ರೀಯವೆನಿಸುತ್ತದೆ. ಇಲ್ಲಿಯೂ ಭಿನ್ನ ಪಾಠಾಂತರದ ಪ್ರಶ್ನೆ ಉದ್ಭವಿಸುವುದಿಲ್ಲ.

ಒಟ್ಟಿನಲ್ಲಿ ಉದ್ದೇಶಿತ ಶುದ್ಧಪಾಠಾಂತರ, ಅನುದ್ದೇಶಿತ ಶುದ್ಧಪಾಠಾಂತರ ಪ್ರಸಂಗಗಳಲ್ಲಿ ಸಂಪಾದಕನಿಗೆ ವರ್ಜನ, ಸ್ವೀಕರಣ, ಸ್ವೀಕರಣ, ಪರಿಷ್ಕರಣ, ಸಂದೇಹದ ಚರ್ಚೆಗೆ ಅವಕಾಶವೇ ಇಲ್ಲ. ೫ ಸೂತ್ರಗಳಿಗೆ ಬದ್ಧವಾಗಿ ಬಂದ ಯಾವುದೂ ಒಂದು ಪಾಠ ಸ್ವೀಕಾರಾರ್ಹವೇ ಸರಿ. ಆದರೆ ವರ್ಜನ, ಪರಿಷ್ಕರಣ, ಸಂದೇಹದ ಚಿಂತನೆ ನಡೆಯುವುದು ಅಮಾನ್ಯ ಮತ್ತು ಮಾನ್ಯ ಅಶುದ್ಧಪಾಠ ಲಭ್ಯವಾದ ಪ್ರಸಂಗದಲ್ಲಿ.

ಅಮಾನ್ಯ ಅಶುದ್ಧ ಪಾಠಾಂತರಗಳು: ನಿವೇದಕನಿಂದ ಮಾತ್ರ ಕೆಡಿಸಿಕೊಂಡಿರುವ, ಪ್ರದೇಶದಿಂದ ಅಮಾನ್ಯವಾಗಿರುವ ಅನುದ್ದೇಶಿತಪಾಠಗಳಿವು. ಈಗ ಅರ್ಥವತ್ತಾದ ಪಾಠಕ್ಕೋಸುಗ ಇನ್ನೊಬ್ಬ ನಿವೇದಕನನ್ನು (ಇನ್ನೊಂದು ಹಸ್ತಪ್ರತಿಯನ್ನು ಬಳಸಿಕೊಳ್ಳುವಂತೆ) ಮೊರೆ ಹೋಗಬೇಕಾಗುತ್ತದೆ. ಉದಾ.

. ಗಜಮುಖ ಗಣಪತಿ ಮಾಡುವೆ ನಿಮ ಸ್ತುತಿ |
ಪಾವನ
ಮಾಡೊ ಪರಮೇಶ | ನಿನ ಮಗ
ಪಾರೋತಿಪುತ್ರ
ಗಣಪತ್ಯೋ[11]||

ಈ ಪದ್ಯದ ಅರ್ಥ ಸಂದೇಹದಿಂದ ಕೂಡಿದೆ. ಇಲ್ಲಿ ‘ನಿನ ಮಗ’ದ ಸ್ಥಾನದಲ್ಲಿ ‘ನೀ ನಮಗ’ ಎಂಬ ಸ್ವೀಕಾಯಯೋಗ್ಯ ಪಾಠಾಂತರ ಇನ್ನೊಬ್ಬನಿಂದ ಸಿಗುತ್ತದೆ. ಇವುಗಳಲ್ಲಿ ಒಂದು ಸ್ವೀಕರಣವೆನಿಸಿ ಮೇಲೆ, ಇನ್ನೊಂದು ವರ್ಜನವೆನಿಸಿ ಕೆಳಗೆ ಎಡೆಪಡೆಯುತ್ತದೆ. ಇಂಥ ಇನ್ನೊಂದು ಉದಾಹರಣೆ:

ಹಾದಿಗಿ ಕಲ್ಹಾಕಿ ಹಾಡಿ | ಬೀಸಾಕಿನ್ಯಾರ
ಲಾಲಕುಂಕುಮದ
ಹೆಣಗಳೊ | ಮರಿಯಮ್ಮ
ಹಾಡಿ
ಬೀಸ್ಯಾಳೊ ಅರಿಷಿಣ[12]||

ಮರಿಯಮ್ಮ ಇಲ್ಲಿ ಹೆಣಗಳನ್ನು ಬೀಸಿದಳೋ? ಅರಿಷಿಣವನ್ನು ಬೀಸಿದಳೋ? ಎಂಬ ಸಂದೇಹ ಹುಟ್ಟುತ್ತದೆ. ಆಗ ಬೇರೆ ನಿವೇದಕನನ್ನು ಅವಲಂಬಿಸಿ ಹೆಣಗಳೊ

ಎಂಬುದಕ್ಕೆ ಬದಲು ‘ಹೆಣಮಗಳೊ’ ಎಂಬ ಯೋಗ್ಯಪಾಠವನ್ನು ದೊರಕಿಸಿಕೊಂಡು ಇವುಗಳಲ್ಲಿ ಒಂದು ವರ್ಜನ, ಇನ್ನೊಂದು ಸ್ವೀಕರಣವೆಂದು ಭಾವಿಸಬೇಕು.

ಮಾನ್ಯ ಅಶುದ್ಧ ಪಾಠಾಂತರಗಳು: ಅರ್ಥ ಕೆಟ್ಟಿರುವ ಆದರೂ ಪ್ರದೇಶದಿಂದ ಮಾನ್ಯವಾಗಿರುವ ಅನುದ್ದೇಶಿತ ಪಾಠಗಳಿವು. ಇಲ್ಲಿ ಯಾವುದೇ ನಿವೇದಕನಿಂದ ಬೇರೆ ಯೋಗ್ಯಪಾಠಗಳು ಸಿಗುವುದಿಲ್ಲ. ಆಗ ಊಹೆಯಿಂದ ಇಂಥವನ್ನು ತಿದ್ದಿಕೊಳ್ಳಬೇಕಾಗುತ್ತದೆ. ಇದು ಪರಿಷ್ಕರಣ. ಈಗ ಪರಿಷ್ಕೃತ ಪಾಠವನ್ನು ಚೌಕಕಂಸಿನಲ್ಲಿ ಮೇಲೆ, ತಿರಸ್ಕೃತ ಪಾಠವನ್ನು ಕೆಳಗೆ ಇಡಬೇಕು. ಉದಾ:

ಪೊಡವಿಯೊಳ್ಕುಡು ತನಯ
ಒಡೆಯ
ಭೀಮೇಶನ |

ಎಂಬುದು ಎಲ್ಲ ದೊಡ್ಡಾಟಗಳ ಸ್ತುತಿಪದ್ಯ. ಸಾರ್ವತ್ರಿಕವಾಗಿ ಹಾಡಲ್ಪಡುತ್ತಿರುವ, ಅರ್ಥವೇ ಹೊರಡದ ಈ ಪದದ ಪಾಠ ಎಲ್ಲಿಯೋ ಕೆಟ್ಟಿರಲು ಸಾಕು. ಬಳ್ಳಾರಿ ಜಿಲ್ಲೆಯ ‘ಕುಡುತಿನಿ’ ಎಂಬುದು ಬಯಲಾಟಗಳಿಗೆ ಪ್ರಸಿದ್ಧ. ಅಲ್ಲಿಯ “ಭೀಮೇಶನ ಸ್ತುತಿ”ಯಿದು ಎಂಬಿವೇ ಮೊದಲಾದ ಇತಿಹಾಸ ಗೊತ್ತಿದ್ದರೆ ಮಾತ್ರ ಈ ಪಾಠವನ್ನು ‘ಕುಡುತನಯ’ಕ್ಕೆ ಬದಲು ‘ಕುಡು[ತಿನಿ]ಯ’ ಎಂದು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಇಂಥ ಇನ್ನೊಂದು ಉದಾಹರಣೆ:

ಶ್ರೀ ಆರ್‌. ಜಿ. ಕುಲಕರ್ಣಿ ಅವರು ಸಂಪಾದಿಸಿದ ‘ಶ್ರೀಕೃಷ್ಣ ಪಾರಿಜಾತ”[13] ಕೃತಿಯ ಮೊದಲ ಪಾದವಾದ “ಜಯಸಾಗರಾತ್ಮ ಜಯಕುಂಕುಮಾಂಕಿತ ವಕ್ಷ” ಇದನ್ನು “ಜಯ ಸಾಗರಾತ್ಮ[ಜೆ]ಯ ಕುಂಕುಮಾಂಕಿತ ವಕ್ಷ” ಎಂದೂ, ಎರಡನೆಯ ಪಾದವಾದ “ಜಯ ಇಂದಿರಾಧಾರ ಅಮೃತಭಕ್ಷ” ಇದನ್ನು “ಜಯ ಇಂದಿರಾ[ಧ]ರ ಅಮೃತಭಕ್ಷ” ಎಂದೂ ಪರಿಷ್ಕರಿಸಿಕೊಳ್ಳುವುದು ಯೋಗ್ಯವಾದುದು. ಆದರೆ ಇಂಥ ಗೋಜಿಗೆ ಹೋಗದೆ,

. ಮುಂಗೋಡಿನ ಬಸವಣ್ಣ ಮೂರೇಣಿನ ಸರಪಳಿ |
ಜಂಗ
ಜಡಿಸ್ಯಾರೋ ಕೊರಳಿಗಿ | ಬಸವಣ್ಣ
ಮಾರಿಗಾಕ್ಯಾರೋ
ಮುಖಮ್ಯಾಲೋ ||

. ಮುಂಗೋಡಿನೆತ್ತಿಗಿ ಮುರಗಿಯ ಸರಪಳಿ |
ಜಂಗ
ಜಡಿಸ್ಯಾರೋ ಕೊರಳಿಗೊ | ಬಸಪ್ಪನ
ಮಾರಿಗಾಕ್ಯಾರೋ
ಮಕುಬಾರ ||

. ಮುಂಗೋಡಿನೆತ್ತಿಗಿ ಮುರಗಿಯ ಸರಪಳಿ |
ಜಂಗ
ಜಡಿಸ್ಯಾರೊ ಕೊರಳಿಗೆ | ಬಸವಣ್ಣ
ಮಾರಿಗಚ್ಯಾರೊ
ಮುಖಮಲೋ[14]||

ಈ ರೀತಿ ಒಂದೇ ಸಂಕಲನದಲ್ಲಿ ಕೈಗೈ ಒಂದೇ ಮೂಲದ ಮೂರು ಪದ್ಯಗಳನ್ನು ಒಟ್ಟುವುದು ಪುಟಗಳ ಅಪವ್ಯಯ. ಹೀಗೆ ಸಂಪಾದಕನಿಗೆ ಪಾಠವನ್ನು ತಿದ್ದುವ ಸ್ವಾತಂತ್ರ್ಯವಿದ್ದರೂ ಆತನು

ನಿದ್ದಿಗಣ್ಣಲಿ ಕಂಡೆ | ಸದ್ದಗುರುವಿನ ಪಾದ
ಎದ್ದು
ನೋಡಿದರ ನಿಬಯಲಿ | ಗುರುರಾಯ
ರುದ್ದರನ
ಮೈಮೆ ತಿಳಿಯಾವ ||

ಎಂಬಂತಹ ಪದ್ಯಗಳಲ್ಲಿಯ ತದ್ಭವವನ್ನಾಗಲೀ, ಪ್ರಾಂತಭೇದವನ್ನಾಗಲೀ ತಿದ್ದುಪಡಿ ಮಾಡುವುದು ತನ್ನ ಕರ್ತವ್ಯವೆಂದು ಭಾವಿಸಿ ಹಾಗೆ ಮಾಡಬಾರದು. ಹಾಗೆ ಮಾಡಿದರೆ ಜಾನಪದ ನವಿಲಿನ ಗರಿಗಳನ್ನು ಸರಿಪಡಿಸಲು ಬಯಸಿ ಕತ್ತರಿಸಿದಂತಾಗುತ್ತದೆ. ಆದುದರಿಂದ ಕೆಲವೊಮ್ಮೆ ಸಮಾಜಮಾನಿತ “ದೋಸೆಮನೆ ಗುಣದವೊಲುದ್ಭಾಸಿಸಿ”ಯೂ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇನ್ನು ಕೆಲವರು “ಸಕಲ ಲಕ್ಷಣಕ್ಕಾಗಿ ಬಿರುಸು ಮಾಡುವ” ಪ್ರಯತ್ನಕ್ಕೂ ತೊಡಗಿದುದುಂಟು. ಉದಾ:

ತೊಟ್ಟಿಲ ಹೊತ್ಕೊಂಡು ತವರ್ಬಣ್ಣ ಉಟಗೊಂಡು
ಅಪ್ಪ
ಕೊಟ್ಟೆಮ್ಮಿ ಹೊಡಕೊಂಡು | ತವರೂರ
ತಿಟ್ಹತ್ತಿ
ತಿರಗಿ ನೋಡ್ಯಾಳ ||

ಎಂಬ ತ್ರಿಪದಿಯನ್ನು ಪ್ರಾಸಪಾಲನೆಗಾಗಿ,

ಉಟ್ಕಂಡ್ತೌರ್ಬಣ್ಣ ಹೊತ್ಕಂಡ್ತೊಟ್ಟಿಲ
ಹೊಡ್ಕಂಡ್
ಅಪ್ಪ ಕೊಟ್ಟೆಮ್ಮಿ | ತವರೂರ
ತಿಟ್ಟತ್ತಿ
ನಿತ್ತು ನೋಡ್ಯಾಳು[15]||

ಎಂದು ತಿದ್ದುಪಡಿ ಮಾಡಿದುದು ದೋಷಯುಕ್ತ ಸಂಪಾದನೆಯೆಂದೇ ಹೇಳಬೇಕು. ಏಕೆಂದರೆ ಎಷ್ಟೋ ಸುಂದರ ತ್ರಿಪದಿಗಳಲ್ಲಿ ಪ್ರಾಸವಿರುವುದಿಲ್ಲ. ವಡಿಯೂ ಇರುವುದಿಲ್ಲ. ಕಾರಣ ಇಂಥ ಪ್ರಯತ್ನಗಳು ಕುಂಬಳಕಾಯಿಗೆ ಕಬ್ಬಿಣದ ಕಟ್ಟು ಕೊಟ್ಟಂತಾಗಬಹುದು.

ಕೆಲವು ಸಲ ಎಷ್ಟು ಪ್ರಯತ್ನಿಸಿದರೂ ಸಮಾಜಮಾನ್ಯ ಒಂದು ಅಶುದ್ಧ ಪಾಠದ ಪರಿಷ್ಕರಣ ಸಾಧ್ಯವಾಗದಿದ್ದರೆ ಅದು ‘ಸಂದೇಹ’ವೆನಿಸಿಕೊಳ್ಳುತ್ತದೆ. ಇಂಥ ಪಾಠದ ಮುಂದೆ ವರ್ತುಲ ಕಂಸಿನಲ್ಲಿ ಪ್ರಶ್ನೆಚಿಹ್ನೆ ಇಡಬೇಕು. ಉದಾ:

ಮುಂದೇನು ಕೊಟ್ಟೀತ | ಮನವೇನು ತಣಿದೀತ
ಮಂಜಾನದಾನ
(?)ಗಿರಿಮಲ್ಲ | ಕೊಟ್ಟರ
ಮನಿ
ತುಂಬಿ ನಮ್ಮ ಮನ ತುಂಬಿ

ಸಂದೇಹಗಳನ್ನು ತೆಗೆದುಹಾಕಿ ಅರ್ಥವಾಗುವ ಹೊಸ ಪದಗಳನ್ನು ಸೇರಿಸಲು ಜನಪದರಿಗೆ ಸ್ವಾತಂತ್ರ್ಯವಿರುವುದರಿಂದ, ಅವರು ಹಾಗೆ ಮಾಡುವುದರಿಂದ ಜಾನಪದ ಸಾಹಿತ್ಯದಲ್ಲಿ ಸಂದೇಹಗಳು ಕಡಿಮೆಯೆಂದೇ ಹೇಳಬೇಕು.

ಹೀಗೆ ಸ್ವೀಕರಣ, ವರ್ಜನ, ಪರಿಷ್ಕರಣ, ಸಂದೇಹ ಈ ನಾಲ್ಕು ವಿಧಾನಗಳಲ್ಲಿ ಈ ಸಂಪಾದನಕಾರ್ಯ ಮುನ್ನಡೆಯಬೇಕಾಗುತ್ತದೆ. ಒಟ್ಟಿನಲ್ಲಿ ಜಾನಪದ ಸಾಹಿತ್ಯವನ್ನು ಸಂಪಾದಿಸುವುದೆಂದರೆ ಪಂಚಸೂತ್ರ-ಬದ್ಧವಾದ, ಅರ್ಥಶುದ್ಧವಾದ ಪಾಠವನ್ನು ನಿರ್ಣಯಿಸುವುದೇ ಹೊರತು ಶಿಷ್ಟಪದ ಸಾಹಿತ್ಯ ಸಂಪಾದನೆಯಂತೆ ಮೂಲಪಾಠವನ್ನು ನಿರ್ಣಯಿಸುವುದಲ್ಲ. ಹಾಗೆ ನೋಡಿದರೆ ಜಾನಪದ ಸಾಹಿತ್ಯಕ್ಕೆ ‘ಅಧಿಕೃತಪಾಠ’ವೇ ಇರಲಾರದು; ಇರಬಾರದು.

ಸಂಪಾದನಕಾರ್ಯದಲ್ಲಿ ಪಾಠವನ್ನು ಹೇಗೆ ಸೋಸಿಕೊಳ್ಳಬೇಕೆಂದು ತಿಳಿದುಕೊಂಡ ತರುವಾಯ ಅದರ ಪ್ರಕಟನ ವಿಧಾನದ ಬಗ್ಗೆ ವಿಚಾರಿಸಬಹುದು. ಇಂದು ಜಾನಪದ ಸಾಹಿತ್ಯವನ್ನು ಬರವಣಿಗೆಯ ಮೂಲಕ ಪ್ರಕಟಿಸುತ್ತಲಿದ್ದೇವೆ. ಆದರೆ ಆಡುಮಾತಿನ ಮಾಧ್ಯಮವಾಗಿರುವ ಅದನ್ನು ಬರವಣಿಗೆ ಮಾಧ್ಯಮಕ್ಕೆ ಇಳಿಸಿಕೊಳ್ಳುವ ಕಾರ್ಯವನ್ನು ಹೇಗೆ ನಿರ್ವಹಿಸುವುದು? ಇದು ಜಾನಪದ ಸಾಹಿತ್ಯ ಸಂಪಾದಕರನ್ನು ಕಾಡಿದ, ಕಾಡುತ್ತಲಿರುವ ಪ್ರಶ್ನೆಯಾಗಿದೆ. ಆಡುವ ಭಾಷೆ ಬರವಣಿಗೆಯಲ್ಲಿ ತನ್ನ ಕೆಲವು ಅಂಶಗಳನ್ನು ಕಳೆದುಕೊಳ್ಳುವಂತೆ, ಹಾಡುವ ಅಥವಾ ಹೇಳುವ ಜಾನಪದ ಸಾಹಿತ್ಯವೂ ಬರವಣಿಗೆಯಲ್ಲಿ ಕೆಲವು ಅಂಶಗಳನ್ನು ಕಳೆದುಕೊಳ್ಳುತ್ತದೆ. ಒಂದು ಜಾನಪದ ರಚನೆಯನ್ನು ಹೇಳುವಾಗ ಅಥವಾ ಹಾಡುವಾಗ ವ್ಯಕ್ತಗೊಳ್ಳುವ ಧ್ವನಿಯ ಏರಿಳಿತ, ಆಂಗಿಕ ಹಾವಭಾವಗಳು ಅದಕ್ಕೆ ಪ್ರಭಾವಶಾಲಿ ವ್ಯಕ್ತಿತ್ವವನ್ನು ತುಂಬುತ್ತವೆ. ಅದೇ ರಚನೆಯನ್ನು ಬರವಣಿಗೆಗೆ ಇಳಿಸಿಕೊಂಡರೆ ಅವೆಲ್ಲ ಹೋಗಿ ಬಿಡುತ್ತವೆ. ಅದಕ್ಕಾಗಿಯೇ  “ಜಾನಪದ ಸಾಹಿತ್ಯವನ್ನು ಕೇಳುವಾಗ ಸಿಗುವ ಸುಖ ಓದಿದಾಗ ಸಿಗುವುದಿಲ್ಲ”ವೆನ್ನುವುದು. ಈ ಆರೋಪದಿಂದ ಮುಕ್ತವಾಗಬೇಕಾದರೆ ಅದನ್ನು ಸಾಧ್ಯವಾದಷ್ಟು ಮೂಲರೂಪದಲ್ಲಿ ಸಮರ್ಪಕವಾಗಿ ಹಿಡಿದುಕೊಳ್ಳಬೇಕು.

ಇಲ್ಲಿಯ “ಹಿಡಿದುಕೊಳ್ಳಬೇಕು” ಎಂಬ ಮಾತು ಚಿಂತನೀಯವಾಗಿದೆ. ಸಾಹಿತ್ಯವೆನ್ನುವುದು ಭಾಷೆಯಲ್ಲಿ ಪ್ರಕಟವಾಗುವ ಕಲೆಯಾದರೂ, ಶಿಷ್ಟಪದ ಸಾಹಿತ್ಯ ಲಿಪಿವ್ಯವಸ್ಥೆಗೆ ಒಳಪಟ್ಟು ಹುಟ್ಟುತ್ತದೆ; ಜಾನಪದಸಾಹಿತ್ಯ ಧ್ವನಿವ್ಯವಸ್ಥೆಗೆ ಒಳಪಟ್ಟು ಹುಟ್ಟುತ್ತದೆ. ಆದುದರಿಂದ ವಾಕ್‌ಸಂಪ್ರದಾಯತೆ ಮತ್ತು ನಿತ್ಯಪರಿವರ್ತನಶೀಲತೆಗಳು ಆಡುಭಾಷೆಯಂತೆ ಜಾನಪದ ಸಾಹಿತ್ಯಕ್ಕೂ ಲಕ್ಷಣಗಳಾಗಿರುವ ಕಾರಣ, ಆಡು ಮಾತನ್ನು ಹಿಡಿದಿಡುವ ಎರಡು ವಿಧಾನಗಳಾದ ಧ್ವನಿಲಿಪಿಬದ್ಧಗೊಳಿಸುವಿಕೆ ಮತ್ತು ಧ್ವನಿಮುದ್ರಣಗೊಳಿಸುವಿಕೆಗಳನ್ನು ಜಾನಪದ ಸಾಹಿತ್ಯಕ್ಕೂ ಅನ್ವಯಿಸಬಹುದು. ಅಂದರೆ ಆಡುಭಾಷೆಯನ್ನು ಹಿಡಿದಿಡುವಂತೆ ಜಾನಪದ ಸಾಹಿತ್ಯವನ್ನು ಹಿಡಿದಿಡುವುದೇ ಸೂಕ್ತ ಕ್ರಮವಾಗಿದೆ.

ಭಾಷಾವಿಜ್ಞಾನಿಗಳು ಭಾಷೆಯನ್ನು ಹಿಡಿದಿಡಲು ಧ್ವನಿಲಿಪಿಯನ್ನು (Phonetic script) ಬಳಸುತ್ತಾರೆ. ಧ್ವನಿಲಿಪಿಯ ಸ್ಥೂಲಧ್ವನಿಲಿಪಿ (Narrow Phonetic script), ಎಂದು ಎರಡು ತೆರನಾಗಿದೆ. ಇವುಗಳಲ್ಲಿ ಒಂದು, ಭಾಷೆಯ ಸ್ಥೂಲರೂಪವನ್ನು ಹಿಡಿದರೆ, ಇನ್ನೊಂದು ಸ್ಥೂಲದೊಂದಿಗೆ ಸೂಕ್ಷ್ಮರೂಪವನ್ನೂ ಹಿಡಿಯುತ್ತದೆ. ಇವುಗಳಲ್ಲಿ ಸೂಕ್ಷ್ಮಧ್ವನಿಲಿಪಿಯಿಂದ ಜಾನಪದಗದ್ಯವನ್ನು ಹಿಡಿಯಬಹುದು. ಆದರೆ ಪದ್ಯಕ್ಕೆ ಇನ್ನೂ ಹೆಚ್ಚಿನದಾಗಿ ಸ್ವರಪ್ರಸ್ತಾರದ ನೆರವು ಬೇಕಾಗುತ್ತದೆ. ಆದುದರಿಂದ ಇಲ್ಲಿ ಸ್ವರಪ್ರಸ್ತಾರವೆಂಬ ಹೆಚ್ಚಿನ ಸಂಕೇತಗಳನ್ನೂ ಬಳಸಬೇಕಾಗುತ್ತದೆ. ಕನ್ನಡ ಸೂಕ್ಷ್ಮಧ್ವನಿಲಿಪಿಯನ್ನು ನಾವು ರೂಪಿಸಿಕೊಳ್ಳಬೇಕಾಗಿದೆ ಎಂಬುದೇನೋ ನಿಜ. ಆದರೆ ಈ ಸೂಕ್ಷ್ಮ ಧ್ವನಿಲಿಪಿ ಮತ್ತು ಸ್ವರಪ್ರಸ್ತಾರಗಳ ಬಳಕೆ. ಜನಪದ ಸಾಹಿತ್ಯ ಸಂಪಾದನೆಯಲ್ಲಿ ತುಂಬ ಯಾಂತ್ರಿಕವಾಗಬಹುದೇನೋ, ವಿಚಾರಿಸಬೇಕು.

ಹೀಗೆ ಸೂಕ್ಷ್ಮವನ್ನು ಹಿಡಿಯಬೇಕೆಂದು ಎಷ್ಟು ಪ್ರಯತ್ನಿಸಿದರೂ ಅತಿಸೂಕ್ಷ್ಮಗಳು ಉಳಿದುಕೊಂಡು ಬಿಡುತ್ತವೆ. ಕಾರಣ, ಜಾನಪದಸಾಹಿತ್ಯದ ನಿಜವಾದ ಸಂಪಾದನ ಕಾರ್ಯವೆಂದರೆ (ಕೆಲಮಟ್ಟಿಗೆ ಇದ ಅಸಮರ್ಪಕ) ಧ್ವನಿಮುದ್ರಣಕಾರ್ಯವೇ ಆಗಿದೆ. ಇದರಿಂದ ಗದ್ಯಪಾಠವನ್ನು Supra segmental feature ಸಹಿತ, ಪದ್ಯಪಾಠವನ್ನು Supra segmental feature ಮತ್ತು ಹಾಡಿನ ಧಾಟಿಸಹಿತ ರಕ್ಷಿಸಿಕೊಂಡಂತಾಗುತ್ತದೆ. ಒಟ್ಟಿನಲ್ಲಿ

೧. ಕಾಲ, ದೇಶ, ಸಮಾಜ, ಸಂದರ್ಭ, ವ್ಯಕ್ತಿ ಎಂಬ ಪಂಚಸೂತ್ರಬದ್ಧ ಮತ್ತು ಅರ್ಥವತ್ತಾದ ಪಾಠವನ್ನು ಸ್ವೀಕರಿಸಬೇಕು.

೨. ಈ ಸ್ವೀಕರಣವನ್ನು ಸರ್ವಸಮರ್ಪಕವಾದ ಮಾಧ್ಯಮದ (ಈಗಿನ ಮಟ್ಟಿಗೆ ಧ್ವನಿಮುದ್ರಿಕೆಯ) ಮೂಲಕ ಪ್ರಕಟಿಸಬೇಕು.

ಹೀಗೊಮ್ಮೆ ಸಂಪಾದಿಸಿದರೆ ಜಾನಪದಸಾಹಿತ್ಯ ಸಂಪಾದನೆಯ ಕಾರ್ಯ ಮುಗಿದೇ ಬಿಟ್ಟಿತೆನ್ನುವಂತಿಲ್ಲ. ಶಿಷ್ಟಸಾಹಿತ್ಯ ಅರ್ಥದೃಷ್ಟಿಯಿಂದ ‘‘ಇದು ನಿಚ್ಚಂ ಪೊಸತು” ಆಗಿದ್ದರೆ ಜಾನಪದ ಸಾಹಿತ್ಯ ಅರ್ಥ ಮತ್ತು ರೂಪವೆಂಬ ಉಭಯದೃಷ್ಟಿಯಿಂದಲೂ “ಇದು ನಿಚ್ಚಂ ಪೊಸತು” ಅಗುತ್ತಲಿರುತ್ತದೆ. ಕಾರಣ ಕೆಲವು ಮೈಲುಗಳ ಅಂತರದಲ್ಲಿಯೇ, ಕೆಲವು ವರ್ಷಗಳ ಅಂತರದಲ್ಲಿಯೇ ಈ ಸಂಪಾದನಕಾರ್ಯ ಮತ್ತೆ ಮತ್ತೆ ನಡೆಯಬೇಕಾಗುತ್ತದೆ. ಇದಲ್ಲದೆ ಜಾನಪದ ಸಾಹಿತ್ಯ ಸಂಪಾದನಕಾರ್ಯವನ್ನು ಆಯಾ ಪ್ರದೇಶದ ಜನಪದವ್ಯಾಸಂಗಿಗಳಿಗೆ ಬಿಟ್ಟುಕೊಡದೆ, ಒಂದೇ ಪ್ರದೇಶದವರು ಎಲ್ಲ ಪ್ರದೇಶಗಳ ಗುತ್ತಿಗೆ ಹಿಡಿದರೆ, ಸ್ಥಳೀಯ ಎಷ್ಟೋ ಸೂಕ್ಷ್ಮ ಪಲಕುಗಳು ಅವರ ಕಿವಿಗೆ ಕೇಳದೇ, ಮನಸ್ಸಿಗೆ ಮುಟ್ಟದೇ ಹೋಗಬಹುದು. ಆದುದರಿಂದ ಜನಪದಸಾಹಿತ್ಯ ಸಂಪಾದನೆಯಲ್ಲಿ ಪಾಳೆಯಗಾರಿಕೆ ಅಪಾಯಕಾರಿಯೆಂದೇ ಹೇಳಬೇಕು.

ಕೊನೆಯದಾಗಿ ಪ್ರಕಟನ ವ್ಯವಸ್ಥೆಯ ಬಗೆಗೆ ಕೆಲವು ಮಾತುಗಳು. ಒಬ್ಬ ನಿವೇದಕನಿಂದಲೋ ಅನೇಕ ನಿವೇದಕರಿಂದಲೋ ಪಡೆದು ಪರಿಷ್ಕರಿಸಿದ ಜಾನಪದ ಸಾಹಿತ್ಯವನ್ನು ವರ್ಗೀಕರಣಗೊಳಿಸಿ ಬೇರೆ ಬೇರೆ ಪುಸ್ತಕಗಳಲ್ಲಿ ಇಲ್ಲವೆ ಒಂದೇ ಪುಸ್ತಕದಲ್ಲಿ ಉಪಶೀರ್ಷಿಕೆ ಕೊಟ್ಟು ಪ್ರಕಟಿಸಬೇಕು. ಇದನ್ನು ಬಿಟ್ಟು ಕೈಗೆ ಸಿಕ್ಕ ಸಾಹಿತ್ಯವನ್ನು ಕಲಸು ಮೇಲೋಗರದಂತೆ ಪ್ರಕಟಿಸಿದರೆ ಅಲ್ಲಿ ಒಂದು ಬಗೆಯ ಅವ್ಯವಸ್ಥೆ ಕಂಡುಬಂದು, ಅಭ್ಯಾಸಿಗೆ ತೊಂದರೆಯುಂಟಾಗುತ್ತದೆ. ಆದುದರಿಂದ ಸ್ಥೂಲ ಮಾರ್ಗದರ್ಶನಕ್ಕಾಗಿ ವಾಗ್ರೂಪದ ಜನಪದವನ್ನು ಹೀಗೆ ವರ್ಗೀಕರಿಸಬಹುದು.

ಜಾನಪದಸಾಹಿತ್ಯ ಸಂಪಾದನೆಗೂ ಆದಿಯಲ್ಲಿ ಪ್ರಸ್ತಾವನೆ, ಅಂತ್ಯದಲ್ಲಿ ಅನುಬಂಧಗಳು ಅತ್ಯವಶ್ಯ. ಆದರೆ ನಮ್ಮ ಬಹಳಷ್ಟು ಪ್ರಸ್ತಾವನೆಗಳು ಆತ್ಮಪ್ರಶಂಸೆಯ ಅತಿರೇಕಗಳೋ ಇಲ್ಲವೆ ಅನ್ಯರ ವಿಚಾರಗಳ ಅನುಕರಣಗಳೋ ಎನಿಸಿಬಿಟ್ಟಿವೆ. “ಇವರಿಗೆ ಸ್ವಂತ ಆಲೋಚನೆಗಿಂತ ಇಂಗ್ಲಿಷ್‌ವ್ಯಾಮೋಹ ಹೆಚ್ಚು. ಇಂಗ್ಲಿಷ Balladಗೆ ಮೊದಲು “ಲಾವಣಿ” ಎಂದು ತಪ್ಪಾಗಿ ಅನುವಾದಿಸಿಕೊಂಡು, ಅದನ್ನು ಉಳಿಸಿಕೊಳ್ಳುವುದಕ್ಕೆ ವ್ಯರ್ಥ ಸಾಹಸ ಮಾಡುತ್ತಿದ್ದಾರೆ.”[16] ಇವೇ ಮೊದಲಾದ ಆರೋಪಗಳನ್ನು  ಇಲ್ಲಿ ಉದಾಹರಿಸಬಹುದು. ಹೀಗೆಯೇ ಆತ್ಮಸ್ತುತಿ ಪರನಿಂದೆ, ಅನ್ಯಪ್ರಭಾವಗಳು ಪ್ರಸ್ತಾವನೆಯ ಪುಟಗಳನ್ನು ತುಂಬಿದ್ದು ವಿಷಾದದ ಸಂಗತಿಯಾಗಿದೆ. ಕಾರಣ ಕನ್ನಡ ಜಾನಪದ ಸಾಹಿತ್ಯದ ಬಗ್ಗೆ ಸೋಪಜ್ಞ ಸಂಶೋಧನೆ (Original Research)ಯನ್ನೋಳಗೊಂಡ ತಾತ್ವಿಕ ಗ್ರಂಥಗಳು ಹುಟ್ಟಿದಷ್ಟೂ ಈ ಭಾಗ ಬೆಲೆ ಪಡೆಯುತ್ತದೆ.

“ಅನುಬಂಧ” ನಿರೂಪಕರ ಪರಿಚಯ ವೈಶಿಷ್ಟ್ಯಗಳನ್ನು, ಸಾಹಿತ್ಯದ ಸಂದರ್ಭ- ಸಂಪ್ರದಾಯಗಳನ್ನು, ಟಿಪ್ಪಣಿ-ಪದಕೋಶ ಇತ್ಯಾದಿಗಳನ್ನು ಒಳಗೊಳ್ಳಬೇಕು ಇಂಥ ಅನುಬಂಧಗಳು ಅಭ್ಯಾಸಿಗೆ ತುಂಬ ಸಹಾಯಕಾರಿಯೆಂದು ಬೇರೆ ಹೇಳಬೇಕಿಲ್ಲ.

ಜಾನಪದ ಸಾಹಿತ್ಯವು ಸಾಹಿತ್ಯ, ಭಾಷಾಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ ಮೊದಲಾದವುಗಳ ವಸ್ತುವಾಗಿರುವುದರಿಂದ ಸಂಪಾದಕನಿಗೆ ಇವುಗಳ ಆಳವಾದ ಜ್ಞಾನ ಅವಶ್ಯವಿದೆ. ಅಂದರೆ ಶ್ರೇಷ್ಠಭಾಷಾವಿಜ್ಞಾನಿಗಳಾದ ಗ್ರಿಮ್‌ಸಹೋದರರೂ ಶ್ರೇಷ್ಠ ಮಾನವಶಾಸ್ತ್ರಜ್ಞ ಜೇಮ್ಸ್‌ಜಾರ್ಜ್‌ಫ್ರೇಜರ್‌ಮೊದಲಾದವರೂ ಜಾನಪದಕ್ಷೇತ್ರಕ್ಕೆ ಮೂಲಭೂತ ಕಾಣಿಕೆ ನೀಡಿರುವುದನ್ನು ನೆನೆದರೆ, ಜಾನಪದಸಾಹಿತ್ಯ ಸಂಪಾದನಕ್ಷೇತ್ರವನ್ನು ಸಾಹಿತಿಗಳ ಜೊತೆ ಇಂದು ಭಾಷಾವಿಜ್ಞಾನಿ, ಸಮಾಜಶಾಸ್ತ್ರಜ್ಞ ಮೊದಲಾದವರು ಪ್ರವೇಶಿಸುವುದು ಅವಶ್ಯವೆನಿಸುತ್ತದೆ. ಈ ಜಿಜ್ಞಾಸುಗಳ ಸಂಯುಕ್ತ ದುಡಿಮೆಯಿಂದ ಸಂಪಾದನೆಗಳು ಶಾಸ್ತ್ರಶುದ್ಧವಾಗುವುದರಲ್ಲಿ ಸಂದೇಹವಿಲ್ಲ.*

[ಚಿತ್ರ ೦೯]

[1] ಜನಜೀವನದ ಮೊತ್ತಕ್ಕೂ Folklore ಎಂದು, ಇದನ್ನು ಅಭ್ಯಸಿಸುವ ಶಾಸ್ತ್ರಕ್ಕು Folklore ಎಂದು ಬಳಸುತ್ತಿದ್ದಲಿದ್ದಾರೆ. ಆದರೆ ಒಂದು Folklore ಎಂದು, ಇನ್ನೊಂದನ್ನು Science of Folklore ಎಂದು ಕಟ್ಟುನಿಟ್ಟಾಗಿ ಕರೆಯುವುದು ಯೋಗ್ಯ.

[2] V. S. Agarawala, India as known to Panini, 1953,p.48  ಮತ್ತು ಡಾ. ಹಾಮಾನಾ ಜಾನಪದ ಸ್ವರೂಪ ೧೯೭೧, ಪು. ೧೭ ಅ.ಟಿ.

[3] ಅನಾಗರಿಕ, ಅರೆನಾಗರಿಕ, ನಾಗರಿಕರಲ್ಲಿ ಕಾಣುವ ಸಾಂಪ್ರದಾಯಿಕ ಜೀವನ ವ್ಯಾಪಾರಕ್ಕೆ “Tradition” ಎಂದೂ ಇದನ್ನು ಕುರಿತ ವೈಜ್ಞಾನಿಕ ವಿವೇಚನೆಗೆ ‘Science of Tradition’ ಅಥವಾ ‘ವೈಜ್ಞಾನಿಕ ಸಂಪ್ರದಾಯ’ ಎಂದೂ ಕರೆಯಬಹುದು. ಕನ್ನಡದಲ್ಲಿ ಇವುಗಳಿಗೆ ಸಂಪ್ರದಾಯ, ಸಂಪ್ರದಾಯವಿಜ್ಞಾನ ಇಲ್ಲವೆ ರೂಢಿ, ರೂಢಿವಿಜ್ಞಾನ ಎಂದು ಕರೆಯಬಹುದು.

[4] ಅ. ಶಿಷ್ಟಪದ, ಕವಿಗಳು ತಮ್ಮ ರಚನೆಯ ಪಾಲಿನ ಹಕ್ಕನ್ನು ಬಿಟ್ಟುಕೊಟ್ಟಿರುತ್ತಾರೆ; ಪರಿಷ್ಕರಣ ಹಕ್ಕನ್ನು ಬಿಟ್ಟುಕೊಟ್ಟಿರುವುದಿಲ್ಲ. ಅನಿವಾರ್ಯವೆನಿಸಿದಲ್ಲಿ ಮಾಡಿದ ಪರಿಷ್ಕರಣಕ್ಕೆ ನಾವು ಚೌಕ ಕಂಸನ್ನು ಬಳಸುವುದು ಈ ಕಾರಣಕ್ಕಾಗಿಯೇ.

ಬ. ಜಾನಪದ ಕವಿ ತನ್ನ ಹೆಸರನ್ನು ಕೃತಿಗೆ ನಮೂದಿಸಿರುವುದು, ನಮೂದಿಸದಿರುವುದು ಅಮುಖ್ಯ. ಪರಿಷ್ಕರಣದ ಹಕ್ಕು ಬಿಟ್ಟು ಕೊಟ್ಟಿರುವುದೇ ಮುಖ್ಯ. ಹೆಸರು ನಮೂದಿಸದಿರುವುದೇ ಜಾನಪದ ಸಾಹಿತ್ಯದ ಲಕ್ಷಣವೆಂದರೆ ಕವಿನಾಮನಿರ್ದೇಶವಿಲ್ಲದ ಪ್ರಭುಲಿಂಗಲೀಲೆ ಮೊದಲಾದವು ಜಾನಪದ ಸಾಹಿತ್ಯಕ್ಕೆ ಸಂಬಂಧಪಟ್ಟ ಕೃತಿಗಳನ್ನಬೇಕಾದೀತು.

[5] ಜಾಣಪದಸಾಹಿತ್ಯ, ಕರ್ನಾಟಕ ಭಾರತಿ ೧೦-೧ ನೋಡಿರಿ.

[6] ಮಲೆಯ ಮಾದೇಶ್ವರ, ಪ್ರಸ್ತಾವನೆ, ಪು. ೭೩

[7] ಸಂಕೀರ್ಣ ಜನಪದ ಕಥೆಗಳು, ಮುನ್ನುಡಿ, xviii

[8] ಜನಪದ ಗೀತೆಗಳಲ್ಲಿ ಗೋವಿನ ಕಥೆ (ಶಾಲಿನಿ ಭಟ್‌), ಕರ್ನಾಟಕ ಭಾರತಿ, ೧೦-೨

[9] ಉತ್ತರ ಕರ್ನಾಟಕದ ಹಂತಿಯ ಹಾಡುಗಳು, ಪು. ೧೩-೧೫

[10] ಕೆಲವು ಸಲ ಒಂದುಪ್ರಾಂತಭೇದಲ್ಲಿಯೇ ಒಂದು ರಚನೆಗೆ ಅನೇಕ ಅನುದ್ದೇಶಿತ ಪಾಠಾಂತರಗಳು ಸಿಗಬಹುದು. ಉದಾ. ಕೊಡಲಿ ಕಾವು ಕುಲಕ್ಕೆ  ಸಾವು. ಕೊಡಲಿ ಕಾವು ಕುಲಕ್ಕೆ ಮೃತ್ಯು. ಕೊಡಲಿಯ ಕಾವು ಕುಲಕ್ಕೆ ಮೂಲ ಈ ಗಾದೆ ಮಾತುಗಳನ್ನು ನೋಡಬಹುದು.

[11] ಉತ್ತರ ಕರ್ನಾಟಕದ ಹಂತಿಯ ಹಾಡುಗಳು, ಪು. ೩

[12] ಉತ್ತರ ಕರ್ನಾಟಕದ ಹಂತಿಯ ಹಾಡುಗಳು, ಪು. ೧೭

[13] ಶ್ರೀಕೃಷ್ಣಪಾರಿಜಾತ, ಪ್ರ. ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ಪು. ೧೧೭

[14] ಉತ್ತರ ಕರ್ನಾಟಕದ ಹಂತಿಯ ಹಾಡುಗಳು, ಪು. ೩೮, ೫೨, ೧೭

[15] ಮದ್ದುಂಟೆ ಜನನ ಮರಣಕ್ಕೆ ಪು. ೩

[16] ಕರ್ನಾಟಕದ ಜನಪದ ಕಾವ್ಯಗಳು, ಡಿ. ಲಿಂಗಯ್ಯ, ಪು. ೩೭

* ೧೯೭೭-೭೮ನೆಯ ವರ್ಷದ “ರಾಷ್ಟ್ರೀಯ ಉಪನ್ಯಾಸ”ಗಳ ಅಂಗವಾಗಿ ಮದ್ರಾಸ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನೀಡಿದ ಸಾಹಿತ್ಯ ಸಂಪಾದನೆ ಎಂಬ ಮೂರು ಉಪನ್ಯಾಸಗಳ ಒಂದು ಭಾಗ ಈ ಲೇಖನ.