ಪುಸ್ತಕಗಳು ನಡೆದು ಬಂದ ಇತಿಹಾಸದಲ್ಲಿ ಮುದ್ರಣಯಂತ್ರದ ಪ್ರವೇಶ ತುಂಬ ಮಹತ್ವದ ಘಟನೆ ಮತ್ತು ಘಟ್ಟ ಎನಿಸಿದೆ. ಇದರಿಂದಾಗಿ ಈ ಮೊದಲಿನಂತೆ ಹಸ್ತಪ್ರತಿಗಳ ಬದಲು ಯಂತ್ರಪ್ರತಿಗಳು ಹುಟ್ಟುತೊಡಗಿ, ಪ್ರತಿಗಳ ಸಂಖ್ಯಾಪ್ರಮಾಣ ಮತ್ತು ಉತ್ಪಾದನೆಯ ವೇಗದೃಷ್ಟಿಯಿಂದ ಪುಸ್ತಕಲೋಕದ ಇತಿಹಾಸದಲ್ಲಿ ಬಹಳ ದೊಡ್ಡ ಬದಲಾವಣೆ ಸಂಭವಿಸಿತು.

ಮುದ್ರಣಯಂತ್ರದ ಆರಂಭಕಾಲದಲ್ಲಿ ಪ್ರಾಚೀನಕೃತಿಗಳನ್ನು ಸಾಮಾನ್ಯವಾಗಿ ಒಂದು ಹಸ್ತಪ್ರತಿಯನ್ನಾಧರಿಸಿ ಪರಿಶೋಧಿಸಿ ಪ್ರಕಟಿಸುವ ಕೆಲಸ ಅಸ್ತಿತ್ವಕ್ಕೆ ಬಂದಿತು. ಇದನ್ನು “ಪ್ರಕಟನ ಯುಗ”ವೆನ್ನಬಹುದು. ಬಳಿಕ ಅನೇಕ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಅವುಗಳಿಂದ ಒಂದು ಉತ್ತಮಪಾಠವನ್ನು ಸ್ವೀಕರಿಸಿ, ಮಿಕ್ಕ ಭಿನ್ನಪಾಠಗಳನ್ನು ಅಡಿಯಲ್ಲಿ ಕೊಡುವ ಪದ್ಧತಿ ರೂಢಿಗೆ ಬಂದಿತು. ಈ ಹೊತ್ತಿಗಾಗಲೇ ಕರ್ನಾಟಕದ ಬೇರೆ ಬೇರೆ ಕೇಂದ್ರಗಳಲ್ಲಿ ಒಂದು ಕೃತಿಯ ಎಲ್ಲಾ ಹಸ್ತಪ್ರತಿಗಳು ಸಂಗ್ರಹಿಸಲ್ಪಟ್ಟಿದ್ದ ಕಾರಣ, ಇವರೆಲ್ಲ ಈ ಅನುಕೂಲತೆಗಳನ್ನು ಬಳಸಿಕೊಂಡರು. ಇದನ್ನು “ಪರಿಷ್ಕರಣ ಯುಗ”ವೆನ್ನಬಹುದು.

ದುರ್ದೈವದ ಸಂಗತಿಯೆಂದರೆ, ಮಾರ್ಗಸಾಹಿತ್ಯ ಸಂಪಾದನೆಯ ವಿಧಿ ವಿಧಾನಗಳನ್ನು ದೇಶೀಸಾಹಿತ್ಯಕ್ಕೂ ಅನ್ವಯಿಸಿದ ಕಾರಣ, ಈ ಎರಡನೆಯ ಯುಗದವರು ಪೂರೈಸಿದ ದೇಶೀಕಾವ್ಯಗಳ ಸಂಪಾದನೆಯಲ್ಲಿ ದೊಡ್ಡ ದೋಷ ಸಂಭವಿಸಿತು. ಕರ್ನಾಟಕ ವಿಶ್ವವಿದ್ಯಾಲಯದ ವಚನಸಾಹಿತ್ಯ ಪ್ರಕಟನೆ, ಮೈಸೂರು ವಿಶ್ವವಿದ್ಯಾಲಯದ ದಾಸಸಾಹಿತ್ಯ ಪರಿಷ್ಕರಣ ಇದಕ್ಕೆ ದೊಡ್ಡ ನಿದರ್ಶನವೆನಿಸಿವೆ. ಮಾರ್ಗಸಾಹಿತ್ಯ ಸಂಪಾದನೆಗೆ ಹೆಚ್ಚು ಹಸ್ತಪ್ರತಿ ಬಳಸಿದಷ್ಟೂ ಸಂಪಾದನೆ ಹೆಚ್ಚು ಶುದ್ಧವಾಗುತ್ತದೆ. ದೇಸೀಸಾಹಿತ್ಯ ಸಂಪಾದನೆಗೆ ಹೆಚ್ಚು ಹಸ್ತಪ್ರತಿ ಬಳಸಿದಷ್ಟು ಸಂಪಾದನೆ ಹೆಚ್ಚು ಅಶುದ್ಧವಾಗುತ್ತದೆ. ಇದಕ್ಕೆ ಕಾರಣ, ದೇಶೀ ಕಾವ್ಯಗಳಲ್ಲಿ ಪಾಠಾಂತರಗಳು ವಿಪರೀತ. ಈಗ ಒಂದೊಂದು ಹಸ್ತಪ್ರತಿಯಿಂದ ತಮತಮಗೆ ಸರಿ ಕಂಡ ಒಂದೊಂದು ಪಾಠವನ್ನು ಆಯ್ದುಕೊಂಡು, ಅಂತಿಮ ಪಠ್ಯನಿರ್ಣಯಿಸಿದರೆ ೧೦ ಪ್ರತಿಗಳನ್ನು ಬಳಸಿ, ತಮಗೆ ಸರಿಕಂಡ ೧೧ನೆಯ ಪ್ರತಿಯನ್ನು ಸಿದ್ಧಪಡಿಸಿದಂತಾಗುತ್ತದೆಯೇ ಹೊರತು, ನಿಜಕೃತಿಯನ್ನು ಪುನರ್ರಚಿಸಿದಂತಾಗುವುದಿಲ್ಲ. ಆದುದರಿಂದ ಇಲ್ಲಿ ಕಾಲದೃಷ್ಟಿಯಿಂದ ಪ್ರಾಚೀನ, ಪ್ರತಿದೃಷ್ಟಿಯಿಂದ ಪರಿಪೂರ್ಣ, ಭಾಷಾದೃಷ್ಟಿಯಿಂದ ಶುದ್ಧವಾಗಿರುವ ಒಂದೇ ಒಂದು ಹಸ್ತಪ್ರತಿಯನ್ನು ಆಧಾರವಾಗಿಟ್ಟುಕೊಂಡು, ಅಲ್ಲಿ ಕಂಡುಬರುವ ಲಿಪಿಕಾರನ ದೋಷಗಳನ್ನು ನಿವಾರಿಸಿ, ಅಗತ್ಯವೆನಿಸಿದಲ್ಲಿ ಮಾತ್ರ ಒಂದೆರಡು ಬೇರೆ ಹಸ್ತಪ್ರತಿಗಳಿಂದ ಸೂಕ್ತ ಭಿನ್ನಪಾಠ ಸ್ವೀಕರಿಸಬೇಕು. ಇದರಿಂದ ಮಿಶ್ರಪಾಠವಾಗುವುದು ತಪ್ಪಿ, ಒಂದು ಪ್ರಾಚೀನ ಪ್ರತಿಯನ್ನಾದರೂ ಶುದ್ಧರೂಪದಲ್ಲಿ ಉಳಿಸಿಕೊಟ್ಟಂತಾಗುತ್ತದೆ. ಅಂದರೆ ಎಲ್ಲಾ ಪ್ರತಿಗಳಿಗೆ ಅಷ್ಟೇ ಮಹತ್ವಕೊಟ್ಟು “ಪಾಠ ಬೆರೆಸುವುದು” ಬೇರೆ, ಒಂದು ಉತ್ತಮ ಪ್ರತಿಗೆ ಮಹತ್ವಕೊಟ್ಟು ಅವಶ್ಯವೆನಿಸಿದಲ್ಲಿ ಮಾತ್ರ ಅವುಗಳಿಂದ “ನೆರವು ಪಡೆಯುವುದು” ಬೇರೆ. ಇನ್ನು ಮುಂದೆ ದೇಶೀ ಕೃತಿಗಳ ಸಂಪಾದನೆಗೆ ನಾವು ಈವರೆಗೆ ಹೇಳಿದ ಹೊಸ ವಿಧಾನವನ್ನು ಅನ್ವಯಿಸಬೇಕಾಗಿದೆ.

ಎರಡನೆಯದಾಗಿ ಇತ್ತೀಚೆ ಕನ್ನಡಭಾಷೆ, ಸಾಹಿತ್ಯ, ಸಂಸ್ಕೃತಿಗಳ ಅಭ್ಯಾಸ ವ್ಯಾಪಕವಾಗಿ ಜರುಗಿ, ಸಾಹಿತ್ಯಿಕ ಆಕರದೊಂದಿಗೆ ಪುರಾತತ್ವ ಆಕರ, ಜಾನಪದ ಆಕರಗಳು ಬೆಳಕಿಗೆ ಬಂದು, ಸಂಸ್ಕೃತಿಯ ಇನ್ನೊಂದು ಮಗ್ಗಲು ತೆರೆದುಕೊಂಡಿದೆ. ಇವೆಲ್ಲವುಗಳನ್ನಾಧರಿಸಿ ಬಹುಶಿಸ್ತೀಯ ಅಧ್ಯಯನ ಮುನ್ನಡೆದಿದೆ. ಇದರ ಬೆಳಕಿನಲ್ಲಿ ನೋಡುವವರಿಗೆ ಈವರೆಗಿನ ಸಂಪಾದನೆಗಳಲ್ಲಿ ಉಳಿದುಕೊಂಡಿರುವ ದೋಷಗಳು ಎದ್ದು ಕಾಣುತ್ತಲಿವೆ. ಇವುಗಳನ್ನು ನಿವಾರಿಸಬೇಕಾದರೆ ಸಂಪಾದಕ “ಶಾಬ್ದಿಕ ಸಂಪಾದನೆ””ಯ ನೆಲೆಯಿಂದ “ಸಾಂಸ್ಕೃತಿಕ ಸಂಪಾದನೆ”ಯ ನೆಲೆಗೆ ಸಾಗಬೇಕಾಗುತ್ತದೆ. ಶಾಬ್ದಿಕವಾಗಿ ಒಂದು ಪಾಠ, ಸಾಂಸ್ಕೃತಿಕವಾಗಿ ಒಂದು ಪಾಠ, ಎರಡೂ ಸರಿಯಿದ್ದರೆ ಶಾಬ್ದಿಕ ಪಾಠದಿಂದ ತೃಪ್ತನಾಗದೆ, ಸಾಂಸ್ಕೃತಿಕ ಪಾಠವನ್ನು ಒಪ್ಪಿಕೊಳ್ಳಬೇಕಾದ ಕ್ರಮವಿದು. ಸಾಂಸ್ಕೃತಿಕ ಅಭ್ಯಾಸಿ ಮಾತ್ರ ಈ ಕಾರ್ಯ ಮಾಡಬಲ್ಲ.

* * *

ಪ್ರಾಚೀನ ಸಾಹಿತ್ಯದಲ್ಲಿ ಅಖಂಡಕೃತಿಗಳಂತೆ ರಗಳೆಯಂಥ ಖಂಡಕೃತಿಗಳೂ, ವಚನ ಕೀರ್ತನೆಗಳಂಥ ಬಿಡಿರಚನೆಗಳೂ ಹುಟ್ಟಿಕೊಂಡಿವೆ. ಪರಿಷ್ಕರಿಸಲ್ಪಟ್ಟ ಇವು ಸಣ್ಣ ಪುಟ್ಟ ಗಾತ್ರದ ಸಂಪುಟಗಳಾಗಿ ಬೆಳಕು ಕಂಡಿವೆ. ಇಂದು “ಸಮಗ್ರ ಸಂಪುಟ” ಪ್ರಕಟನೆಯ ಬಗೆಗೆ ವಿದ್ವಾಂಸರು ಹೆಚ್ಚು ಆಸಕ್ತಿ ತೋರುತ್ತಲಿದ್ದಾರೆ. ಇದರಿಂದ ಒಬ್ಬ ಕವಿಯ ಅಥವಾ ಒಂದು ವಿಷಯದ ಎಲ್ಲಾ ರಚನೆಗಳು ಒಂದೇ ಕಡೆಗೆ ಓದುಗರಿಗೆ ಲಭ್ಯವಾಗುತ್ತವೆ. ಆದುದರಿಂದ ಸಂಪಾದಕನಾದವನು ಮೇಲೆ ಹೇಳಿದ ಪರಿಷ್ಕರಣದ ಹೊಸವಿಧಾನ, ಜ್ಞಾನದ ಹೊಸ ಹೊಸ ಕ್ಷೇತ್ರಗಳ ತಿಳಿವಳಿಕೆ ಮತ್ತು ಸಮಗ್ರ ಕೃತಿಗಳ ಸಂಕಲನ ಎಂಬ ಮೂರು ಹೊಣೆಗಳನ್ನು ಹೊರುವುದು ಇಂದಿನ ಅಗತ್ಯವಾಗಿದೆ. ಈ ಮೊದಲಿನ ಆವೃತ್ತಿಗಳು ಪೇಟೆಯಲ್ಲಿ ಲಭ್ಯವಿಲ್ಲದಿದ್ದರೆ ಈ ಕಾರ್ಯ ಇನ್ನೂ ಅಗತ್ಯವೆನಿಸುತ್ತದೆ.

ಇಂಥ ಸಂದರ್ಭದಲ್ಲಿ ಈ ಮೊದಲಿನ ಆವೃತ್ತಿಗಳನ್ನು ಕಣ್ಣುಮುಚ್ಚಿ ಮರುಮುದ್ರಣ ಮಾಡಿದರೆ ತಿಳಿದೂ ತಿಳಿದು ದೋಷಪೂರ್ಣಪಾಠಗಳನ್ನು ಓದುಗರಿಗೆ ಪೂರೈಸಿದಂತಾಗುತ್ತದೆ. ಈಗ ಸಂಪಾದಕ ಎರಡು ದಾರಿಗಳನ್ನವಲಂಬಿಸಬೇಕಾಗುತ್ತದೆ. ಒಂದು: ಈ ಮೊದಲಿನವರು ಬಳಸಿದ ಹಸ್ತಪ್ರತಿಗಳನ್ನು ಬಿಟ್ಟು ಹೊಸಹಸ್ತಪ್ರತಿಗಳನ್ನು ದೊರಕಿಸಿಕೊಂಡು, ಹೊಸ ಯೋಗ್ಯಪಾಠಗಳನ್ನು ಯೋಜಿಸುವುದು. ಎರಡು: ಹೊಸ ಹೊಸ ಹಸ್ತಪ್ರತಿಗಳು-ಸಿಗದ ಪಕ್ಷದಲ್ಲಿ ಈ ಮೊದಲಿನವರು ಬಳಸಿದ ಹಸ್ತಪ್ರತಿಗಳನ್ನೇ ಮತ್ತೆ ಬಳಸಿದರೆ, ಅದು ತೋರಿಕೆಯ ಪಾಂಡಿತ್ಯ, ವ್ಯರ್ಥ ಪರಿಶ್ರಮವೆನಿಸುತ್ತದೆ. ಆದುದರಿಂದ ಇಂಥ ಸಂದರ್ಭದಲ್ಲಿ ಯಂತ್ರಪ್ರತಿಯನ್ನೇ ಒಂದು ಹಸ್ತಪ್ರತಿಯೆಂದು ಪರಿಗಣಿಸಿ, ಅದರ ಅಡಿಯಲ್ಲಿ ಸಂಗ್ರಹಗೊಂಡಿರುವ ಭಿನ್ನಪಾಠಗಳನ್ನೇ ಭಿನ್ನಹಸ್ತಪ್ರತಿಗಳೆಂದು ಭಾವಿಸಿ, ಸೂಕ್ತಪಾಠ ನಿರ್ಣಯ ಮಾಡುವುದನ್ನೇ “ಪರಿಷ್ಕರಣದ ಪರಿಷ್ಕರಣ”ವೆಂದು ಕರೆಯಬಹುದು. ಇದು ಹಸ್ತಾಕ್ಷರ ಪಠ್ಯದ ಪರಿಷ್ಕರಣವಲ್ಲ, ಮುದ್ರಾಕ್ಷರಪಠ್ಯದ ಪರಿಷ್ಕರಣ. ಈ ಪ್ರಸಂಗದಲ್ಲಿ ಅಡಿಯಲ್ಲಿಯ ಯೋಗ್ಯಪಾಠವನ್ನು ಮೇಲೆ ಸ್ವೀಕರಿಸಿ, ಮೇಲಿನ ಆಯೋಗ್ಯಪಾಠಗಳನ್ನು ಅಡಿಗೆ ತಳ್ಳುತ್ತ ಹೋಗಬೇಕಾಗುತ್ತದೆ. ಸಂಸ್ಥೆಗಳಲ್ಲಿ ಸಂಶೋಧನ ಸಹಾಯಕರು ಭಿನ್ನಪಾಠಗಳನ್ನು ಸಂಗ್ರಹಿಸುತ್ತಾರೆ. ಹೀಗೆ ಯಾರೊ ಸಂಗ್ರಹಿಸಿದ ಭಿನ್ನಪಾಠಗಳನ್ನವಲಂಬಿಸಿ ಸಂಪಾದಕರು ಪರಿಷ್ಕರಣಕಾರ್ಯವನ್ನು ಪೂರೈಸುತ್ತಾರೆ. ಇದೇ ರೀತಿ ಪರಿಷ್ಕರಣದ ಪರಿಷ್ಕರಣದಲ್ಲಿ ಇನ್ನೊಬ್ಬರು ಮುದ್ರಿಸಿದ ಭಿನ್ನಪಾಠಗಳನ್ನು ಅವಲಂಬಿಸಬೇಕಾಗುತ್ತದೆ.

ಮುಂದಿನ ದಿನಗಳಲ್ಲಿ ಸಂದರ್ಭವೊಂದು ಸೃಷ್ಟಿಯಾಗುತ್ತದೆ. ಅದು: ಒಂದು ಕೃತಿಗೆ ಸಂಬಂಧಿಸಿದ ಲಭ್ಯಹಸ್ತಪ್ರತಿಗಳು ಕಳೆದು ಹೋಗಬಹುದು. ಇವೆಲ್ಲ ಸಂಪೂರ್ಣ ನಾಶವಾಗಬಹುದು. ಉದಾ: ಪುಣೆಯ ಭಂಡಾರಕರ ಓರಿಯಂಟಲ್‌ರೀಸರ್ಚ್ ಇನ್‌ಸ್ಟಿಟ್ಯೂಟ್‌ಕ್ಕೆ ಸಂಬಂಧಿಸಿದ ಪಂಪಭಾರತದ ಒಂದು ಅಪೂರ್ಣ ಹಸ್ತಪ್ರತಿ ಈಗ ಆ ಸಂಸ್ಥೆಯಲ್ಲಿ ಇಲ್ಲ. “ರೂಪಕ್ಕೆ ನಾಶವುಂಟು” ಎಂಬ ತತ್ವದಂತೆ ಈ ಕಾವ್ಯದ ಮಿಕ್ಕ ಎರಡು ಹಸ್ತಪ್ರತಿಗಳೂ ಮುಂದೆ ಒಂದು ಕಾಲಕ್ಕೆ ಖಂಡಿತ ನಾಶವಾಗುತ್ತದೆ. ಆಗ ಪಂಪಭಾರತದ ಈಗಿನ ಆವೃತ್ತಿಯನ್ನು ಗಣನೀಯ ರೀತಿಯಲ್ಲಿ ಪರಿಷ್ಕರಿಸುವುದು ಅಗತ್ಯವಿದೆಯೆಂದು ವಿದ್ವಾಂಸರಿಗೆ ಅನ್ನಿಸಿದ ಪಕ್ಷದಲ್ಲಿ, ಈಗಾಗಲೇ ಅಡಿಯಲ್ಲಿ ಸಂಗ್ರಹವಾಗಿರುವ ಪಾಠಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಇದೆಲ್ಲವನ್ನು ಗಮನಿಸಿದರೆ, ಈಗಾಗಲೇ ಮುದ್ರಿತ ಪ್ರತಿಯ ಅಡಿಯಲ್ಲಿ ಸಂಗ್ರಹಿಸಿದ ಪಾಠಗಳನ್ನು ಆಧರಿಸಿ, ಕೃತಜ್ಞತಾಭಾವದಿಂದ ಪರಿಷ್ಕರಣ ಮಾಡುವುದು ಸಾಹಿತ್ಯಕನ್ಯಾಯವಾಗಿ ಪರಿಣಮಿಸುತ್ತದೆ. ಇಲ್ಲಿ ಹೊಸಪಾಠ ನಿರ್ಣಯದ ಪ್ರಮಾಣ ವರ್ಧಿಸಿದಷ್ಟೂ ಅವನ “ಪರಿಷ್ಕರಣದ ಪರಿಷ್ಕರಣ”ಕ್ಕೆ ಸ್ವಂತಿಕೆ ಸಂವರ್ಧಿಸುತ್ತ ಹೋಗುತ್ತದೆ.