ಸಾಹಿತ್ಯವೆನ್ನುವುದು ಭಾಷಾಮಾಧ್ಯಯನದ ಕಲೆಯಾಗಿದೆ. ಇದು ಮೌಖಿಕ ಭಾಷೆಯಲ್ಲಿ ಜನಪದ ಸಾಹಿತ್ಯವೆಂದು, ಲಿಖಿತ ಭಾಷೆಯಲ್ಲಿ ಶಿಷ್ಟಪದ ಸಾಹಿತ್ಯವೆಂದು ಎರಡು ವಾಹಿನಿಗಳಾಗಿ ಪ್ರವಹಿಸುತ್ತದೆ. ಇವುಗಳಲ್ಲಿ ಬಾಯ ಬದುಕಾಗಿರುವ ಜನಪದಸಾಹಿತ್ಯವು ಪರಿವರ್ತನೆಗೊಳ್ಳುತ್ತ ಸಾಗುತ್ತದೆ. ಶಿಷ್ಟಪದಸಾಹಿತ್ಯ ಮಾತ್ರ ಸ್ಥಿರರೂಪದಲ್ಲಿಯೇ ಮುಂದುವರಿಯುತ್ತದೆ.

ಇಂದು ಜನಪದಸಾಹಿತ್ಯದ ಅಧ್ಯಯನ ಅನೇಕ ಆಯಾಮಗಳಲ್ಲಿ, ವೈಯಕ್ತಿಕ ಮತ್ತು ಸಾಂಸ್ಥಿಕ ಸ್ತರಗಳಲ್ಲಿ ಮುನ್ನಡೆಯುತ್ತಲಿದೆ. ವಿಶ್ವವಿದ್ಯಾಲಯಗಳೂ ಜನಪದ ಅಕಾಡೆಮಿಯೂ ಕಳೆದ ಕೆಲವು ವರ್ಷಗಳಿಂದ ಬಹುಮುಖಿಕಾರ್ಯವನ್ನು ಪೂರೈಸುವಲ್ಲಿ ಒಂದು ಬಗೆಯ ಜಾಗೃತಿಮೂಡಿ, ಚಳುವಳಿ ರೂಪದ ಅಧ್ಯಯನ ಆಕಾರ ಪಡೆದಿದೆ. ಇಂಥ ಜಾಗೃತಿ ಸಂದರ್ಭದಲ್ಲಿ ಈ ಸಾಹಿತ್ಯದ ಸೃಷ್ಟಿ ಮತ್ತು ಅದರ ಭವಿಷ್ಯಗಳ ಬಗ್ಗೆ ಚಿಂತನೆ ನಡೆಸುವುದು ತೀರ ಅಗತ್ಯವೆನಿಸುತ್ತದೆ.

ಮನುಷ್ಯನಿಗೆ ಹಸಿವು ತೀರ ಮುಖ್ಯವಾದುದು. ಇದರ ತೃಪ್ತಿಗಾಗಿ ಅವನು ದುಡಿಮೆ ಮಾಡಬೇಕಾಗುತ್ತದೆ. ಈ ದುಡಿಮೆಯ ಶ್ರಮವನ್ನು ನಿವಾರಿಸಿಕೊಳ್ಳಲೋಸುಗೆ ಅವನು ಜೊತೆಜೊತೆಗೇ ಜನಪದ ಸಾಹಿತ್ಯವನ್ನು ಸೃಷ್ಟಿಸಿಕೊಂಡನು. ಬಹುಶಃ ಇದು ಈ ಸಾಹಿತ್ಯಸೃಷ್ಟಿಯ ಮೊದಲ ಹಂತವಾಗಿದೆ. ಆದುದರಿಂದ ಜನಪದಸಾಹಿತ್ಯದ ಮೊದಲ ನೆಲೆ “ಶ್ರಮ”ವೆಂದು ಹೇಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಶ್ರಮದ ರೀತಿಗಳನ್ನು ಅನುಸರಿಸಿ ಈ ಸಾಹಿತ್ಯ ಆಕಾರ ಪಡೆಯುವುದು ಸಹಜ. ಅಂದರೆ “ಕ್ರಿಯಾನುಸರಣವಮೇ ಕಾವ್ಯಂ” ಎಂಬ ತತ್ವದ ನೆಲೆಯಲ್ಲಿ ಈ ಸಾಹಿತ್ಯ ಹುಟ್ಟಿತು.

ಸಾಮಾನ್ಯವಾಗಿ ಈ ಕ್ರಿಯೆಗಳೆಲ್ಲ ಕೃಷಿಗೆ ಸಂಬಂಧಿಸಿವೆ. ಕೃಷಿಯೆನ್ನುವುದು ಹೊಲದ ಕೆಲಸ ಮತ್ತು ಮನೆಯ ಕೆಲಸವೆಂದು ಎರಡು ತೆರನಾಗಿದ್ದು, ಒಂದನ್ನು ಪ್ರಧಾನವಾಗಿ ಪುರುಷ, ಇನ್ನೊಂದನ್ನು ಪ್ರಧಾನವಾಗಿ ಸ್ತ್ರೀ ಮಾಡುತ್ತ ಬಂದಿದ್ದಾರೆ. ಪುರುಷರು ಹೊಲದಲ್ಲಿ ಮಾಡುವ ಹಂತಿ ತುಳಿಸುವುದು, ಬಾವಿಯಿಂದ ನೀರು ಎತ್ತುವುದು ಇವೇ ಮೊದಲಾದ ಶ್ರಮಗಳಿಗೆ ಅನುಗುಣವಾಗಿ ಪುರುಷರ ಜನಪದ ಸಾಹಿತ್ಯ ಹುಟ್ಟಿತು. ಇದೇ ರೀತಿ ಸ್ತ್ರೀಯರು ಮನೆಯಲ್ಲಿ ಮಾಡುವ ಬೀಸುವುದು, ಕಟ್ಟುವುದು ಇವೇ ಮೊದಲಾದ ಶ್ರಮಗಳಿಗೆ ಅನುಗುಣವಾಗಿ ಸ್ತ್ರೀಯರ ಜನಪದ ಸಾಹಿತ್ಯ ಹುಟ್ಟಿತು. ಅಂದರೆ ಕ್ರಿಯೆಯ ಲಯಕ್ಕೆ ಅನುಗುಣವಾಗಿ ಈ ಹಾಡುಗಳು ಆಕಾರ ತಳೆದಿದ್ದು, ಅವುಗಳ ಸಂದರ್ಭ (Context) ಮತ್ತು ಪಠ್ಯ (Text)ಗಳಲ್ಲಿ ಬಿಂಬ ಪ್ರತಿಬಿಂಬ ಭಾವವಿರುವುದು ಗಮನಿಸಬೇಕಾದ ಅಂಶವಾಗಿದೆ. ಕ್ರಿಯೆ ಕಳೆದುಹೋದರೂ ಹಾಡಿನ ಲಯವನ್ನು ಗಮನಿಸಿ, ಆ ಕ್ರಿಯೆಯ ಸ್ವರೂಪವನ್ನು ಗುರುತಿಸಬಹುದು. ಉದಾ: ಬೀಸುವ ಹಾಡು (ಲಯಪ್ರಧಾನ), ಕಟ್ಟುವ ಹಾಡು (ತಾಳ ಪ್ರಧಾನ).

ಶಿಷ್ಟಸಾಹಿತ್ಯದಲ್ಲಿ ವಿಭಿನ್ನ ಪಠ್ಯಗಳು ಕಾರಣವಾಗಿ ಸಾಹಿತ್ಯಪ್ರಕಾರಗಳು ಆಕಾರ ಪಡೆಯುತ್ತಿದ್ದರೆ, ಜನಪದ ಸಾಹಿತ್ಯದಲ್ಲಿ ಒಂದೇ ಪಠ್ಯವೇ ವಿಭಿನ್ನ ಕ್ರಿಯೆಗಳಿಗೆ ಅನುಗುಣವಾಗಿ ವಿಭಿನ್ನ ಲಯಗಳಲ್ಲಿ ಪ್ರವಹಿಸಿ, ವಿಭಿನ್ನ ಸಾಹಿತ್ಯಪ್ರಕಾರವೆಂಬಂತೆ ಆಕಾರ ಪಡೆಯುತ್ತದೆ. ಉದಾ: ಒಂದೇ ತ್ರಿಪದಿಯ ಹಾಡುಗಾರಿಕೆ ವಿಭಿನ್ನ ಕ್ರಿಯೆಗಳಲ್ಲಿ ಬಳಕೆಯಾಗುವುದು; ಇದರಿಂದಾಗಿ ವಿಭಿನ್ನ ಸಾಹಿತ್ಯಪ್ರಕಾರವಾಗಿ ನಿಲ್ಲುವುದು ಬೀಸುವಹಾಡು, ಕಟ್ಟುವಹಾಡು ಇತ್ಯಾದಿ.

ಹೀಗೆ ಶ್ರಮಸಂದರ್ಭದಲ್ಲಿ ಹುಟ್ಟುವಂತೆ ಈ ಸಾಹಿತ್ಯ ವಿರಾಮ ಸಂದರ್ಭದಲ್ಲಿಯೂ ಹುಟ್ಟುತ್ತದೆ. ಇಲ್ಲಿ ತಾನು ಪೂರೈಸುತ್ತಿರುವ ಕಾರ್ಯಗಳ ಅನುಕರಣೆ ಮತ್ತು ವರ್ಣನೆ ಮಾಡುವ ಮೂಲಕ ವ್ಯಕ್ತಿಯು ಈ ಸಾಹಿತ್ಯವನ್ನು ಸೃಷ್ಟಿಸುತ್ತಾನೆ. ಆದುದರಿಂದ ಶ್ರಮ ಸಂದರ್ಭದ್ದು “ಕ್ರಿಯಾನುಸರಣಮೇ ಕಾವ್ಯಂ” ಆಗಿದ್ದರೆ, ಈ ವಿರಾಮ ಸಂದರ್ಭದ್ದು “ಕ್ರಿಯಾನುಕರಣಮೇ ಕಾವ್ಯಂ” ಎನಿಸಿಕೊಳ್ಳುತ್ತದೆ. ಈ ಅನುಕರಣೆಯೆನ್ನುವುದು ಮುಖ್ಯವಾಗಿ ಕುಣಿತಕ್ಕೂ ಸಂಬಂಧಿಸಿದೆ. ಇಲ್ಲಿ ಅವನು ಹತ್ತಿಬಿಡಿಸುವ ಕ್ರಿಯೆಯ ಅನುಕರಣೆಯೆಂಬಂತೆ ಹತ್ತಿ ಬಿಡಿಸುವ ಕುಣಿತ, ಹೂವು ಎತ್ತಿಕೊಳ್ಳುವ ಕ್ರಿಯೆಯ ಅನುಕರಣೆಯೆಂಬಂತೆ ಹೂವು ಎತ್ತಿಕೊಳ್ಳುವ ಕುಣಿತ, ಬಾವಿಯಿಂದ ನೀರು ಎಳೆಯುವ ಕ್ರಿಯೆಯ ಅನುಕರಣೆಯೆಂಬಂತೆ ನೀರು ಎಳೆಯುವ ಕುಣಿತ, ಬಂದೂಕು ಪ್ರಯೋಗಿಸುವ ಕ್ರಿಯೆಯ ಅನುಕರಣೆಯೆಂಬಂತೆ ಬಂದೂಕು ಹೆಜ್ಜೆಯ ಕುಣಿತ ಇತ್ಯಾದಿ ಕುಣಿತಗಳನ್ನು ಅಸ್ತಿತ್ವಕ್ಕೆ ತಂದುದನ್ನು ನೆನೆಯಬಹುದು. ಇದೇ ವಿರಾಮದ ಸಂದರ್ಭದಲ್ಲಿ ಅವನು ತನ್ನ ಕ್ರಿಯೆಗಳನ್ನು ವರ್ಣಿಸಿಯೂ ಕಾವ್ಯ ರಚಿಸುತ್ತಾನೆ. ಇಂಥವು “ಕ್ರಿಯಾನುವರ್ಣಮೇ ಕಾವ್ಯಂ” ಎನಿಸಿಕೊಳ್ಳುತ್ತವೆ. ಹೀಗೆ “ವಿರಾಮ” ಕಾಲದಲ್ಲಿ ಈ ಬಗೆಯ ಮನರಂಜನ ಸಾಹಿತ್ಯವು ಹವ್ಯಾಸಿಗಳಿಂದ ಹುಟ್ಟಿಕೊಳ್ಳುತ್ತದೆ. ದೃಶೃಸಾಹಿತ್ಯ (ಯಕ್ಷಗಾನ ಪ್ರದರ್ಶನ), ದೃಶ್ಯದ ಶ್ರವ್ಯೀಕರಣ ಸಾಹಿತ್ಯ (ತಾಳಮದ್ದಳೆ ಪ್ರಸಂಗ), ಜನಪದ ಕಥೆ, ಜನಪದ ಒಗಟು (Riddle)ಗಳೆಲ್ಲ ಈ ಸಂದರ್ಭದ ಸೃಷ್ಟಿಯಾಗಿರುತ್ತವೆ.

ಈ “ಶ್ರಮ” “ವಿರಾಮ”ಗಳಲ್ಲದೆ ಜನಪದ ಸಾಹಿತ್ಯಸೃಷ್ಟಿಗೆ ಕಾರಣವಾದ ಮೂರನೆಯ ನೆಲೆಯೆಂದರೆ “ಆಚರಣೆ”. ಜನಪದರು ತಮ್ಮ ಕೌಟುಂಬಿಕ, ದೈವಿಕ ಆಚರಣೆಗಳಿಗೆ ಅನುಗುಣವಾಗಿ ಜನಪದಸಾಹಿತ್ಯವನ್ನು ಸೃಷ್ಟಿಮಾಡುತ್ತಾ ಬಂದರು. ಇಲ್ಲಿಯೂ ಮದುವೆಯಂಥ ಕೌಟುಂಬಿಕ ಆಚರಣೆ ಸಂದರ್ಭದಲ್ಲಿ ಅದರ ಎಲ್ಲ ಹಂತಗಳನ್ನು ವರ್ಣಿಸುವ ಸಾಹಿತ್ಯ ಹುಟ್ಟಿಬಂದಿವೆ. ಸುರಗಿ ಸುತ್ತುವುದು, ನೆಯ್‌ಏರಿಸುವುದು, ಹಾಲಗಂಬ ತರುವುದು, ಐರಣಿ ತರುವುದು ಮೊದಲಾದ ಕ್ರಿಯೆಗಳನ್ನು ವರ್ಣಿಸುವ ಸಾಹಿತ್ಯ ಹುಟ್ಟಿಬಂದಿರುವುದರಿಂದ “ಕ್ರಿಯಾನುವರ್ಣಮೇ ಕಾವ್ಯಂ” ತತ್ವ ಇಲ್ಲಿಯೂ ಅರ್ಥಡೆಯುತ್ತದೆ. ಈಗ ಕೆಲವು ಸಂದರ್ಭಗಳಲ್ಲಿ ಈ ಹಾಡುಗಳು ಮಂತ್ರದಷ್ಟೇ ಅನಿವಾರ್ಯವೆನಿಸುತ್ತವೆ. ಉದಾ: ಮದುವೆ ಸಂದರ್ಭದ ಅಕ್ಕಿಕಾಳು ಹಾಡು. ಇದಲ್ಲದೆ ದೈವಿಕ ಆಚರಣೆಯ ಪ್ರಸಂಗಗಳಲ್ಲಿಯೂ ಹಾಡುಗಳು ಹುಟ್ಟುತ್ತವೆ. ಆರಾಧನೆಯ ಹಾಡುಗಳನ್ನೂ ಇಲ್ಲಿಯೇ ಪರಿಗಣಿಸಬಹುದು. ಜನಪದಸಾಹಿತ್ಯ ದೈವಿಕ ಆಚರಣೆ ನೆಲೆಯಲ್ಲಿಯೇ ಮೊದಲು ಹುಟ್ಟಿತೆಂದು ಜಾನಪದ ವಿದ್ವಾಂಸರು ಭ್ರಮಿಸುವಷ್ಟು ಇದು ಬದುಕಿನಲ್ಲಿ ಪ್ರಭಾವಶಾಲಿಯಾಗಿದೆ. ಆದರೆ ಶ್ರಮಸಂದರ್ಭದಲ್ಲಿಯೇ ಮೊದಲು ಹುಟ್ಟಿತೆಂದು ಹೇಳುವುದೇ ನ್ಯಾಯಸಮ್ಮತವೆನಿಸುತ್ತದೆ.

ಹೀಗೆ ಜನಪದ ಸಾಹಿತ್ಯವು ಮೂಲತಃ ಶ್ರಮ, ವಿರಾಮ, ಆಚರಣೆಗಳೆಂಬ ಮೂರು ನೆಲೆಗಳಲ್ಲಿ ಹುಟ್ಟುವುದಾಗಿದೆ. ಈ ಮೂರು ಬಗೆಯ ಸಾಹಿತ್ಯವನ್ನು ಕೆಲವರು ಉಪಜೀವನದ “ವೃತ್ತಿ”ಯನ್ನಾಗಿ ಮಾಡಿಕೊಂಡಿದ್ದು, ಇದನ್ನು ಸಾಹಿತ್ಯಸೃಷ್ಟಿಯ ನಾಲ್ಕನೆಯ ನೆಲೆಯೆಂದು ಹೇಳಬಹುದಾಗಿದೆ. ಈ ಗೀತೋಪಜೀವಿಗಳು ಕಾರಣವಾಗಿ ಜನಪದಸಾಹಿತ್ಯ ಹೆಚ್ಚು ಹುಟ್ಟುತ್ತ, ಹೆಚ್ಚು ಪ್ರಚಾರ ಪಡೆಯುತ್ತ ಹೋಯಿತು. ಇವರಿಂದಾಗಿ ಬಹಳಷ್ಟು ಸಲ ಈ ಸಾಹಿತ್ಯ ಸಂದರ್ಭಸಿದ್ಧಾಂತಕ್ಕೆ ಬಾಹ್ಯವಾಗತೊಡಗಿತು. ಅಂದರೆ ಸಂದರ್ಭಕ್ಕೂ ಸಾಹಿತ್ಯಕ್ಕೂ ಸಂಬಂಧ ತಪ್ಪುತ್ತ ನಡೆಯಿತು. ಯಾವುದೇ ಸಂದರ್ಭದಲ್ಲಿ ಯಾವುದೇ ಸಾಹಿತ್ಯ ಹೇಳುವುದು ಆರಂಭವಾಯಿತು. ಒಂದರ್ಥದಲ್ಲಿ ಇದು ವಿರಾಮಕಾಲದ ಸಾಹಿತ್ಯವೇ ಆಗಿದ್ದರೂ ಉಪಜೀವನವು ಇಲ್ಲಿ ಪ್ರಧಾನವಾಗಿರುತ್ತದೆ.

* * *

ಹೀಗೆ ಜನಪದಸಾಹಿತ್ಯವು ಶ್ರಮ, ವಿರಾಮ, ಆಚರಣೆ, ವೃತ್ತಿಯೆಂಬ ನಾಲ್ಕು ನೆಲೆಗಳಲ್ಲಿ ಹುಟ್ಟುವ ಲಕ್ಷಣವುಳ್ಳುದಾಗಿದೆ. ಇಂದು ಹಳೆಯ ಶ್ರಮದ ರೀತಿಗಳು ಕಾಣೆಯಾಗಿವೆ. ಹಳೆಯ ಆಚರಣೆಯ ರೀತಿಗಳೂ ಕಾಣೆಯಾಗಿವೆ. ಹೀಗಾಗಿ ಶ್ರಮವೇ ಕಾಣೆಯಾದಾಗ, ಆಚರಣೆಗಳೇ ಮರೆಯಾದಾಗ, ಅವುಗಳನ್ನು ಅನುಸರಿಸಿ, ಅನುವರ್ಣಿಸಿ ಹುಟ್ಟುವ ಸಾಹಿತ್ಯವೂ ಸೃಷ್ಟಿಯಾಗದು. ಆದುದರಿಂದ ಈ ಎರಡು ನೆಲೆಗಳ (ಶ್ರಮ, ಆಚರಣೆ) ಸಾಹಿತ್ಯ ಇನ್ನು ಮೇಲೆ ಹುಟ್ಟಲಾರದೆಂದೇ ಹೇಳಬೇಕು. ಬಹಳೆಂದರೆ ಎಂದೋ ಹುಟ್ಟಿದ ಇಂಥ ಸಾಹಿತ್ಯವನ್ನು ಗ್ರಂಥ, ಧ್ವನಿಮುದ್ರಿಕೆಗಳಲ್ಲಿ ಹಿಡಿದಿಡುವ ಕೆಲಸ ಮಾತ್ರ ನಾವು ಮಾಡಬೇಕಾಗುತ್ತದೆ. ಇವುಗಳನ್ನು ಬಿಟ್ಟರೆ ಬಹಳವೆಂದರೆ ಇನ್ನೊಂದು ನೆಲೆಯಾದ ವಿರಾಮ ಸಂದರ್ಭದ ಹವ್ಯಾಸಿಗಳ ಹಾಡು, ಮತ್ತೊಂದು ನೆಲೆಯಾದ ವೃತ್ತಿಗಾಯಕರ ಹಾಡುಗಳು ಮಾತ್ರ ಹುಟ್ಟಬಹುದು. ಆದರೆ ಇವರು ಈ ಸಾಹಿತ್ಯ ಪ್ರಕಾರಗಳಿಗೆ ವಿಷಯವನ್ನು ಆಯ್ದುಕೊಳ್ಳುವಲ್ಲಿ ಎಚ್ಚರವಹಿಸಬೇಕಾಗುತ್ತದೆ. ಉದಾ: ಇತ್ತೀಚೆ ಏಡ್ಸ್‌ನಿರ್ಮೂಲನ ಪ್ರಚಾರ ಇತ್ಯಾದಿಗಳ ಸಾಧನವಾಗಿ ಯಕ್ಷಗಾನವನ್ನು ಅಳವಡಿಸಿಕೊಳ್ಳುವುದು ಆಭಾಸವೇ ಸರಿ. ಇದೇ ರೀತಿ ವೃತ್ತಿಗಾಯಕರು ಆಧುನಿಕ ಸರಕಾರಿ ಸಾಲಮೇಳ ಇತ್ಯಾದಿ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಲಾವಣಿ ಮೊದಲಾದವುಗಳನ್ನು ಹಾಡುವುದು, ಒಂದಿಷ್ಟು ಅಭಾಸದಂತೆ ಕೇಳಿಸುತ್ತದೆ.

ಹೀಗೆ ಈ ವಿರಾಮ ಮತ್ತು ವೃತ್ತಿಗಳಿಗೆ ಸಂಬಂಧಿಸಿದ ಹಾಡುಗಳನ್ನು ಬದುಕಿಸಲು, ಬೆಳೆಸಲು ಇಂದು ಮಾಡುವ ಯಾವುದೇ ರೀತಿಯ ಪ್ರಯತ್ನ ವ್ಯರ್ಥವೆನಿಸುವ ಸಾಧ್ಯತೆಯಿದೆ. ಏಕೆಂದರೆ ಆಧುನಿಕ ಹೊಸರೀತಿಯ ಮ್ಯುಜಿಕಲ್‌ನೈಟ್ಸ್‌ಮೊದಲಾದ ವಿರಾಮ ಹವ್ಯಾಸಗಳು ಅವುಗಳ ಸ್ಥಾನವನ್ನು ಆಕ್ರಮಿಸಿವೆ. ಸಿನಿಮಾ ರೇಡಿಯೋ ಮೊದಲಾದ ವಿರಾಮಕಾಲೀನ ಹೊಸಸಾಧನಗಳು ಬಳಕೆಗೆ ಬಂದಿವೆ. ವ್ಯಕ್ತಿಗೆ ಬದಲಾಗಿ ಧ್ವನಿಮುದ್ರಣದಂಥ ಯಂತ್ರಗಳೇ ಹಾಡುತ್ತಲಿವೆ. ಹೀಗಾಗಿ ಮೂಲ ಜನಪದ ಹಾಡುಗಾರರಿಗೂ ಹೆಚ್ಚು ಅವಕಾಶ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

೨೦ನೆಯ ಶತಮಾನದ ಒಂದು ದೊಡ್ಡ ಕ್ರಾಂತಿಯೆಂದರೆ ಸಾಕ್ಷರತೆ. ಇದು ದಿನೇದಿನೇ ಬೆಳೆಯುತ್ತಲಿದೆ. ಈ ಲಿಖಿತ ಸಂಪ್ರದಾಯದಿಂದಾಗಿ ಮೌಖಿಕ ಸಂಪ್ರದಾಯ ಸಹಜವಾಗಿಯೇ ಇಳಿಮುಖವಾಗುತ್ತ ನಡೆದಿದೆ. ಒಂದು ಅರ್ಥದಲ್ಲಿ ಸಾಕ್ಷರತೆ ಜನಪದ ಸಾಹಿತ್ಯಸೃಷ್ಟಿಯ ಶತ್ರುವೆಂದೇ ಹೇಳಬೇಕು. ಇದರಿಂದಾಗಿ ಜನಪದಸಾಹಿತ್ಯವು “ಪ್ರದರ್ಶನ ಸಂದರ್ಭ”ದಲ್ಲಿ ಕೇಳುವ ಸಾಧನವಾಗುವುದು ತಪ್ಪಿಹೋಗಿ, ಗ್ರಂಥಾಲಯದಲ್ಲಿ ಕೇಳುವ ಮತ್ತು ಓದುವ ಸಾಧನವಾಗಿ ಮಾರ್ಪಾಡಾಗತೊಡಗಿದೆ. ಅಷ್ಟರ ಮಟ್ಟಿಗೆ ಸಾಕ್ಷರತೆ ಜನಪದಸಾಹಿತ್ಯದ ಮೌಖಿಕ ಸಂಪ್ರದಾಯಕ್ಕೆ ಆತಂಕವಾಗಿದೆಯೆಂದೇ ಹೇಳಬೇಕು.

ಇಂಥ ಇನ್ನೊಂದು ಆತಂಕ ಧ್ವನಿಮುದ್ರಿಕೆ-ರೇಡಿಯೋ-ವಿಡಿಯೋ. ಜನಪದ ಸಾಹಿತ್ಯವನ್ನು ಸರಿಯಾಗಿ ದಾಖಲಿಸುವುದೆಂದರೆ, ಇವುಗಳ ಮೂಲಕ ಮುದ್ರಿಸಿಕೊಳ್ಳುವುದೇ ಆಗಿದೆ. ಆದರೆ ಹೀಗೆ ಮಾಡುವುದರಿಂದ ಆ ಸಾಹಿತ್ಯದ ಪುನಃಸೃಷ್ಟಿಕ್ರಿಯೆ ನಿಂತು ಬಿಡುತ್ತದೆ. ಆದುದರಿಂದ ಈ ಉಪಕರಣಗಳೂ-ಉಪಕ್ರಮಗಳೂ ಜನಪದಸಾಹಿತ್ಯ ರಕ್ಷಣೆಯ ಉಪಯುಕ್ತ ಸಾಧನವೂ ಹೌದು, ಮಿತಿಯೂ ಹೌದು.

ಕೊನೆಯದಾಗಿ ನಮ್ಮ ಜೀವನವಿಧಾನ ಬದಲಾಗಿದ್ದು, ಇದಕ್ಕನುಗುಣವಾಗಿ ಹಾಡಿನ ಲಯಗಳೂ ಬದಲಾಗಿವೆ. ಒಟ್ಟು ಬದುಕಿನ ಗತಿಯಲ್ಲಿ ನಿಧಾನಲಯ ಕಡಿಮೆಯಾಗಿ ವೇಗಲಯ ಪ್ರಾಪ್ತವಾಗಿದೆ. ನಿಧಾನಲಯದ ಸೃಷ್ಟಿಯಾಗಿರುವ ಜನಪದಸಾಹಿತ್ಯದ ಅಭಿವ್ಯಕ್ತಿಯಲ್ಲಿಯೂ ಮೊದಲಿನ ನಿಧಾನಲಯಗಳು ನಾಶವಾಗಿ ಆಧುನಿಕ ವೇಗದ ಲಯಗಳು ಸ್ಥಾನ ಪಡೆದಿದೆ. ಇಂದು ಬಹಳವೆಂದರೆ ಹಳೆಯ ಲಯಗಳನ್ನು ಹೊಸ ಸಾಹಿತ್ಯ, ನಾಟಕಗಳಿಗೆ ಬಳಸಿಕೊಳ್ಳುವುದೊಂದೇ ದಾರಿಯೆಂದು ಕಾಣುತ್ತದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಕಾವ್ಯದಲ್ಲಿ ಇಂಥ ಪ್ರಯೋಗವನ್ನು ಪೂರ್ಣಪ್ರಮಾಣದಲ್ಲಿ ಮಾಡಿದವರು, ಬೇಂದ್ರೆಯವರು. ಜನಪದ ಲಯಗಳು ಅವರಲ್ಲಿ ಅದ್ಬುತವೆಂಬಂತೆ ಬಳಕೆಗೊಂಡವು. ಈ ಪರಂಪರೆಯನ್ನು ಅಂದರೆ ಬೇಂದ್ರೆ ಪರಂಪರೆಯನ್ನು ನಾವು ಮುಂದುವರಿಸಬೇಕಾಗಿದೆ. ಇದೇ ನಾವು ಜನಪದ ಪರಂಪರೆಗೆ ತೋರುವ ಗೌರವವಾಗಿದೆ. ಇಂತಹ ಇನ್ನೊಂದು ರೀತಿಯೆಂದರೆ ನಾಟಕ, ಸಿನಿಮಾಗಳಲ್ಲಿ ಜಾನಪದ ಲಯಗಳನ್ನು ಬಳಸುವುದು. ಕನ್ನಡ ಸಿನೆಮಾಗಳಲ್ಲಿ “ಕಾಡಕುದುರೆ ಓಡಿಬಂದಿತ್ತ” ಎಂಬಂಥ ಜಾನಪದಲಯದ ಹಾಡುಗಳನ್ನು ಸೇರ್ಪಡೆಮಾಡುವುದು, ಅವುಗಳನ್ನು ಹೆಚ್ಚು ಜನಪ್ರಿಯಗೊಳಿಸುವುದು ನಮಗೆ ಉಳಿದಿರುವ ದಾರಿಯಾಗಿದೆ.

ಒಟ್ಟಿನಲ್ಲಿ, ನಮ್ಮ ಜನಪದಸಾಹಿತ್ಯವೆನ್ನುವುದು ಕೃಷಿಸಂಸ್ಕೃತಿಯ ಸೃಷ್ಟಿಯಾಗಿದ್ದು, ಇದರ ಸ್ಥಾನದಲ್ಲಿ ಯಂತ್ರಸಂಸ್ಕೃತಿ ಬಂದಿರುವ ಕಾರಣ, ಕಳೆದು ಹೋದ ಆ ಸಂಸ್ಕೃತಿಯ ಪ್ರತಿಬಿಂಬವೆಂಬಂತೆ ಈಗ ಹೊಸ ರಚನೆಗಳು ಬಹುಮಟ್ಟಿಗೆ ಹುಟ್ಟಲಾರವು. ಬಹಳವೆಂದರೆ ಆ ಹಳೆಯ ರಚನೆಗಳನ್ನು ಅಕ್ಷರಮುದ್ರಣ, ಧ್ವನಿಮುದ್ರಣ ಮಾಧ್ಯಮಗಳಲ್ಲಿ ರಕ್ಷಣೆಯ ದೃಷ್ಟಿಯಿಂದ ದಾಖಲಿಸಿಕೊಳ್ಳುವುದು ಮತ್ತು ಆಧುನಿಕ ಕಾವ್ಯ, ನಾಟಕಗಳಲ್ಲಿ ಬಳಸಿಕೊಳ್ಳುವುದು, ಬೆಳೆಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಕೆಲಸ ತುಂಬಾ ವೇಗವಾಗಿ ನಡೆಯಬೇಕಾಗಿದೆ.

ಈಗ “ಯಂತ್ರಸಂಸ್ಕೃತಿ”ಗೆ ಅನುಗುಣವಾಗಿ ಜನಪದ ಸಾಹಿತ್ಯನಿರ್ಮಾಣ ಮಾಡಬಾರದೇಕೆ? ಎಂದು ಕೇಳಬಹುದಾದರೂ ಯಂತ್ರಗಳೇ ದುಡಿಯುವ, ಯಂತ್ರಗಳೇ ಹಾಡುವ ಹೊಸ ಪದ್ಧತಿಗಳು ಹುಟ್ಟಿಕೊಂಡಿರುವ ಕಾರಣ ಅದು, ಅಸಾಧ್ಯವೇ ಸರಿ. ಒಂದಿಷ್ಟು ಹುಟ್ಟಿದರೂ ಅಕ್ಷರಮುದ್ರಣ ಸಂಸ್ಕೃತಿ, ಧ್ವನಿಮುದ್ರಣ ಸಂಸ್ಕೃತಿಗಳು ಅಂಥ ಜನಪದ ಸಾಹಿತ್ಯದ ಪುನಃಸೃಷ್ಟಿ ತತ್ವಕ್ಕೆ ಮಾರಕವಾಗಿರುವುದು ಅವಶ್ಯ ಗಮನಿಸಬೇಕಾದ ಅಂಶವಾಗಿದೆ.