ವ್ಯಕ್ತಿ ಹಿಗ್ಗಿ ಕುಟುಂಬವಾದಿ, ಕುಟುಂಬ ಹಿಗ್ಗಿ ಜನಾಂಗಗಳಾಗುತ್ತ ಬಂದಂತೆ, ದೇಶ ಕಾಲ ಪರಿಸರಗಳಿಗನುಗುಣವಾಗಿ ಆಯಾ ಜನಾಂಗಗಳು ಸ್ವತಂತ್ರರೂಪ ಪಡೆಯುತ್ತ ಬರುವುದು. ಸ್ವಾಭಾವಿಕ. ಹೀಗೆ ಸ್ವತಂತ್ರ ಮುದ್ರೆಯುಳ್ಳ ಯಾವುದೇ ಜನಾಂಗದ ಪ್ರಜಾಸ್ತೋಮದಲ್ಲಿ ಸಾಮಾನ್ಯವಾಗಿ ಅನಾಗರಿಕ, ಅರೆ ನಾಗರಿಕ ಮತ್ತು ನಾಗರಿಕ ಎಂಬ ಮೂರು ಸ್ತರಗಳು ಯಾವ ಕಾಲಕ್ಕೂ ತೋರಿಬರುತ್ತವೆ.

ಇವರಲ್ಲಿ ಅ-ನಾಗರಿಕ ನಿಸರ್ಗ ವ್ಯವಸ್ಥೆಯಲ್ಲಿ, ನಾಗರಿಕರು ನಗರವ್ಯವಸ್ಥೆಯಲ್ಲಿ ಬದುಕು ನಡೆಸುತ್ತಿದ್ದು, ಒಬ್ಬರಲ್ಲಿ ನಿಸರ್ಗನಿಯಂತ್ರಿತ, ಇನ್ನೊಬ್ಬರಲ್ಲಿ ಮಾನವನಿಯೋಜಿತ ವ್ಯವಸ್ಥೆಗಳು ಬಳಕೆಯಲ್ಲಿರುತ್ತವೆ. ಅರೆ-ನಾಗರಿಕರು ಮಾತ್ರ ಈ ಎರಡರ ಮಧ್ಯ ಸೇತುವೆಯಂತೆ ಬದುಕುತ್ತಾರೆ.

ಅರೆ-ನಾಗರಿಕವರ್ಗ ಸೃಷ್ಟಿಯಾಗುವುದು ಎರಡು ಬಗೆಯಿಂದ. ಒಂದು: ನಾಗರಿಕರು ಅ-ನಾಗರಿಕರ ಮಧ್ಯ ಬದುಕಬೇಕಾಗಿಬಂದಲ್ಲಿ; ಎರಡು: ಅ-ನಾಗರಿಕರು ನಾಗರಿಕರ ಮಧ್ಯ ಬದುಕಬೇಕಾಗಿಬಂದಲ್ಲಿ. ಉದಾ: ಪಟ್ಟಣಗಳಲ್ಲಿ ಬದುಕುವ ಹಳ್ಳಿಗರು, ಹಳ್ಳಿಗಳಲ್ಲಿ ಬದುಕುವ ಪಟ್ಟಣಗರು. ಇವರಲ್ಲಿ ಪಟ್ಟಣದೊಳಗೆ ಬದುಕುವ ಹಳ್ಳಿಗರು ಪ್ರತಿಷ್ಠೆಗೆ ಬಲಿಯಾಗಿ ಪಟ್ಟಣಿಗರ ಜೀವನಪದ್ಧತಿಗಳನ್ನು ವೇಗವಾಗಿ ಸ್ವೀಕರಿಸುತ್ತ ಹೋದರೆ, ಹಳ್ಳಿಯಲ್ಲಿ ಬದುಕುವ ಪಟ್ಟಣಿಗರು ಅನಿವಾರ್ಯತೆಗೆ ಒಳಗಾಗಿ ಹಳ್ಳಿಗರ ಜೀವನಪದ್ಧತಿಗಳನ್ನು ಮಂದವಾಗಿ ಸ್ವೀಕರಿಸುತ್ತ ಹೋಗುತ್ತಾರೆ. ಹೀಗಾಗಿ ಪಟ್ಟಣದಲ್ಲಿರುವ ಹಳ್ಳಿಗರು ಜಾಣಪದ ಸಾಹಿತ್ಯವನ್ನು ವೇಗವಾಗಿ ತ್ಯಜಿಸುತ್ತ ನಡೆಯುತ್ತಾರೆ; ಹಳ್ಳಿಯಲ್ಲಿರುವ ಪಟ್ಟಣಿಗರು ಜನಪದ ಸಾಹಿತ್ಯವನ್ನು ಮಂದವಾಗಿ ಸೃಷ್ಟಿಸುತ್ತಾ ಹೋಗುತ್ತಾರೆ. ಈ ‘ಸೃಷ್ಟಿ’ ಆ ಕಡೆ ಶಿಷ್ಟವೂ ಅಲ್ಲದ, ಈ ಕಡೆ ಜಾನಪದವೂ ಅಲ್ಲದ ಸಾಹಿತ್ಯ ಪ್ರಕಾರವೆನಿಸುತ್ತದೆ.

ಕನ್ನಡ ಜನಾಂಗದಲ್ಲಿ ಇಂಥ ಸಾಹಿತ್ಯವೊಂದು ಜೀವಂತರವಾಗಿರುವ ಅಂಶವನ್ನು ನಮ್ಮ ನಾಡಿನ ಕೆಲವು ಜಾನಪದ ಅಭ್ಯಾಸಿಗಳು ಬಹುದಿನಗಳ ಹಿಂದೆಯೇ ಗುರುತಿಸಿದಂತಿದೆ. ಶ್ರೀ ಎಲ್‌. ಗುಂಡಪ್ಪನವರು ತಮ್ಮ ‘ನಾಡಪದಗಳು’ ಎಂಬ ಜಾನಪದ ಸಂಕಲನದಲ್ಲಿ ಬ್ರಾಹ್ಮಣರ ಹಾಡುಗಳು ಎಂಬ ಸ್ವತಂತ್ರ ವಿಭಾಗವನ್ನು ಕಲ್ಪಿಸಿ “ಈ ಹಾಡುಗಳನ್ನೆಲ್ಲಾ ಕೂಡಿಹಾಕಿ ಪ್ರತ್ಯೇಕ ಪುಸ್ತಕ ಮಾಡಬಹುದು”[1] ಎಂದು ಹೇಳಿದುದು, ಶ್ರೀ ದೇವುಡು ಅವರು ‘ಬ್ರಾಹ್ಮಣೀ ಹಾಡು’ ಎಂದು ಕರೆದುದು, ಡಾ. ಬಿ. ಎಸ್‌. ಗದ್ದಿಗಿಮಠ ಅವರು ‘ಲೋಕಗೀತೆಗಳು’ ಸಂಗ್ರಹದ ಕೆಲವು ಹಾಡುಗಳ ಅಡಿಯಲ್ಲಿ ‘ಬ್ರಾಹ್ಮಣರಿಂದ ಸಂಗ್ರಹಿಸಿದುವು’[2] ಎಂದು ಸೂಚಿಸಿದುದು ಇದಕ್ಕೆ ನಿದರ್ಶನ. ಹೀಗಿದ್ದರೂ ಜನಪದಸಾಹಿತ್ಯದ ಸ್ಪಷ್ಟ ತಿಳಿವಳಿಕೆಯ ಕೊರತೆಯಿಂದಾಗಿ ಬಹಳಷ್ಟು ಜನಪದಗೀತ ಸಂಕಲನಗಳು ಈ ಅಂಶವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಿಲ್ಲ. ಇವುಗಳಲ್ಲಿ ಶ್ರೀ ಆರ್‌. ಎಸ್‌. ಪಂಚಮುಖಿಯವರ ‘ಕರ್ನಾಟಕದ ಜಾನಪದಗೀತೆಗಳು’, ಕೆ. ಶಿವರಾಮ ಐತಾಳರ ‘ದಕ್ಷಿಣ ಕನ್ನಡದ ಜನಪದಸಾಹಿತ್ಯ’, ಟಿ. ಕೇಶವಭಟ್ಟರ ‘ಹಾಡಿನ ಚೂಡಾಮಣಿ’ ಮತ್ತು ಡಾ. ಬಿ. ಎಸ್‌. ಗದ್ದಿಗಿಮಠರ ‘ಲೋಕಗೀತೆಗಳು’ ಮುಂತಾದವು ಮುಖ್ಯವಾದವು. ಹೀಗೆ ನಡೆಯುತ್ತಲಿರುವ ಜನಪದಸಾಹಿತ್ಯ ಸಂಕಲನದ ಕಸಮುಸುರೆ ಕಾರ್ಯವನ್ನು ಇತ್ತೀಚೆ ಕೆಲವರು ಆಕ್ಷೇಪಿಸಿ ಈ ಎರಡನ್ನೂ ಬೇರೆ ಬೇರೆಯಾಗಿ ಸಂಗ್ರಹಿಸಿ, ಬೇರೆ ಬೇರೆ ಹೆಸರುಗಳಿಂದ ಕರೆಯಬೇಕೆಂದು ಹೇಳುತ್ತಲಿದ್ದಾರೆ.

೧. “ಶಿಷ್ಟಸಾಹಿತ್ಯ ಮತ್ತು ಜನಪದಸಾಹಿತ್ಯಗಳ ಮಧ್ಯದಲ್ಲಿ ಜನಪ್ರಿಯಸಾಹಿತ್ಯ ಎಂಬೊಂದು ವಿಭಾಗ ಕಲ್ಪಿಸುವುದು ಅಗತ್ಯ.” – ಚಂದ್ರಶೇಖರ ಕಂಬಾರ

೨. ಈ ಮೂರು ಪ್ರದೇಶಗಳ (ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮತ್ತು ಕರಾವಳಿ ಕರ್ನಾಟಕ) ಬ್ರಾಹ್ಮಣರಲ್ಲಿರಬಹುದಾದ ಸಾಹಿತ್ಯ ‘ಜಾಣಪದ ಸಾಹಿತ್ಯ’ವೇ ಹೊರತು ಜಾನಪದ ಸಾಹಿತ್ಯವಲ್ಲ.” – ಡಾ. ಎಂ.ಎಂ. ಕಲಬುರ್ಗಿ

ಕರ್ನಾಟಕ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಅಖಿಲಕರ್ನಾಟಕ ಪ್ರಥಮ ಜಾನಪದ ಸಮ್ಮೇಳನದ ವೇದಿಕೆಯ ಮೇಲೆ ಓದಿದ ಪ್ರಬಂಧಗಳ ಸಂಕಲನವಾದ ‘ಜಾನಪದ ಸಮ್ಮೇಳನದ ವೇದಿಕೆಯ ಮೇಲೆ ಓದಿದ ಪ್ರಬಂಧಗಳ ಸಂಕಲನವಾದ ‘ಜಾನಪದ ಸಾಹಿತ್ಯ ಸಮ್ಮೇಳನ ದರ್ಶನ -೧’ರಲ್ಲಿ ಪ್ರಕಟವಾದ ಅಭಿಪ್ರಾಯಗಳಿವ.[3] ಶಿಷ್ಟವೂ ಅಲ್ಲದ ಜಾನಪದವೂ ಅಲ್ಲದ ಒಂದು ಸಾಹಿತ್ಯವರ್ಗ ಇದ್ದುದನ್ನು ಈ ಉಭಯ ಹೇಳಿಕೆಗಳು ಒಪ್ಪುವುದಾದರೂ ಅದನ್ನು ‘ಜನಪ್ರಿಯ ಸಾಹಿತ್ಯ’, ‘ಜಾಣಪದ ಸಾಹಿತ್ಯ’ ಈ ಎರಡರಲ್ಲಿ ಯಾವ ಹೆಸರಿನಿಂದ ಕರೆಯಬೇಕೆಂಬ ವಿಷಯವಾಗಿ ಮಾತ್ರ ಮತಭೇದವನ್ನು ತಾಳಿವೆ.

ಜಾನಪದ ವಿಜ್ಞಾನಿಗಳು ಹೇಳುವಂತೆ ‘ಜನಪ್ರಿಯತೆಯೂ’[4] ಜನಪದಸಾಹಿತ್ಯದ ಒಂದು ಪ್ರಧಾನ ಲಕ್ಷಣವಾಗಿರುವ ಕಾರಣ, ಈ ‘ಮಧ್ಯವರ್ಗ’ದ ಸಾಹಿತ್ಯಕ್ಕೆ ಜನಪ್ರಿಯ ಸಾಹಿತ್ಯವೆಂಬ ಹೆಸರು ಸಮಂಜಸವೆನಿಸದು. ಅನಾಗರಿಕರಿಂದ ಅರೆನಾಗರಿಕರನ್ನು ಪ್ರತ್ಯೇಕಿಸುವ ಒಂದು ಪ್ರಮುಖ ಅಂಶವೆಂದರೆ ಜಾಣತನವಾದುದರಿಂದ ಇದನ್ನು ಜಾಣಪದಸಾಹಿತ್ಯವೆಂದು ಕರೆಯುವುದು ತುಂಬ ಉಚಿತವೆನಿಸುತ್ತದೆ. ಅಲ್ಲದೆ ‘ಜಾನಪದ ಸಾಹಿತ್ಯ’,[5] ‘ಜಾಣಪದ ಸಾಹಿತ್ಯ’ ಎಂಬ ಧ್ವನಿಸಾಮ್ಯತೆಯಿಂದ ಎರಡರಲ್ಲಿಯ ವ್ಯತ್ಯಾಸ ತಟ್ಟನೇ ಗಮನಕ್ಕೆ ಬರುತ್ತದೆ. ಈಗ ಇವುಗಳ ಮುಂದಿನ ಹಂತವಾದ ಶಿಷ್ಟಸಾಹಿತ್ಯವನ್ನು ಶಿಷ್ಟಪದ ಸಾಹಿತ್ಯವೆಂದೂ ಕರೆದಲ್ಲಿ “ಜಾನಪದಸಹಿತ್ಯ, ಜಾಣಪದಸಾಹಿತ್ಯ, ಶಿಷ್ಟಪದ ಸಾಹಿತ್ಯ” ಎಂಬ ಅರ್ಥಪೂರ್ಣ ಮೂರು ಪಾರಿಭಾಷಿಕ ಪದಗಳನ್ನು ಬಳಕೆಗೆ ತಂದಂತಾಗುತ್ತದೆ.

‘ಶಿಷ್ಟಪದ ಸಾಹಿತ್ಯ’ದ ಲಕ್ಷಣದ ಬಗೆಗೆ ಸಾವಿರಾರು ವರ್ಷಗಳಿಂದ, ಜಾನಪದ ಸಾಹಿತ್ಯದ ಲಕ್ಷಣದ ಬಗೆಗೆ ನೂರಾರು ವರ್ಷಗಳಿಂದ ವಿದ್ವಾಂಸರು ಆಲೋಚಿಸುತ್ತ ಬಂದಿದ್ದಾರೆ. ಈ ಆಲೋಚನೆಗಳ ಮಧ್ಯ ಉಪೇಕ್ಷಿತವಾಗಿರುವ ‘ಜಾಣಪದ ಸಾಹಿತ್ಯ’ದ ಲಕ್ಷಣಗಳನ್ನು ಹೀಗೆ ಹೇಳಬಹುದು.

೧. ಜಾಣಪದ ಸಾಹಿತ್ಯವು ಜಾನಪದಸಾಹಿತ್ಯ ಮತ್ತು ಶಿಷ್ಟಪದಸಾಹಿತ್ಯಗಳ ಮಧ್ಯ ಲಕ್ಷಣಗಳನ್ನು ಹೊಂದಿದೆ.

೨. ಮಧ್ಯಮವರ್ಗದ ಮನಸ್ಸಿನ ಆಡಂಬರಪೂರ್ಣ ಮಿಡಿತ ಸದಾ ಕೇಳಿಸುತ್ತದೆ.

೩. ಜಾನಪದ ಸಾಹಿತ್ಯದ ಅನುಕರಣೆಯೆಂಬಂತೆ ರೂಪ ಪಡೆಯುತ್ತದೆ.

೪. ರಚನೆ ಮತ್ತು ಭಾಷೆ ಜಾನಪದ ಸಾಹಿತ್ಯದಷ್ಟು ಮುಕ್ತವೂ ಅಲ್ಲ, ಶಿಷ್ಟಪದ ಸಾಹಿತ್ಯದಷ್ಟು ಬದ್ಧವೂ ಅಲ್ಲ.

೫. ಜಾನಪದ ಸಾಹಿತ್ಯದಂತೆ ವಾಕ್‌ಸಂಪ್ರದಾಯವೂ ಹೌದು, ಶಿಷ್ಟಪದಸಾಹಿತ್ಯದಂತೆ ಲಿಖಿತ ಸಂಪ್ರದಾಯವೂ ಹೌದು.

೬. ಪಾಠವು ಜಾನಪದಸಾಹಿತ್ಯದಷ್ಟು ಚಂಚಲವೂ ಅಲ್ಲ; ಶಿಷ್ಟಪದ ಸಾಹಿತ್ಯದಷ್ಟು ಸ್ಥಿರವೂ ಅಲ್ಲ.

೭. ಜಾನಪದ ಸಾಹಿತ್ಯದ ಪ್ರಮುಖಲಕ್ಷಣವಾದ “ಸಾಮೂಹಿಕ ಪುನಃ ಸೃಷ್ಟಿ” ಎಂಬ ಮಾತು ಕ್ವಚಿತ್‌ಅರ್ಥ ಪಡೆಯುತ್ತದೆ.

೮. ಕರ್ತೃತ್ವವು ಜ್ಞಾತವೂ ಆಗಿರಬಹುದು, ಅಜ್ಞಾತವೂ ಆಗಿರಬಹುದು.

ಈ ಲಕ್ಷಣಗಳಿಂದ ಕೂಡಿದ ಸಾಹಿತ್ಯ, ಗ್ರಂಥಸ್ಥಭಾಷೆಯನ್ನು ಹೊಂದಿದ ಯಾವುದೇ ಜನಾಂಗದಲ್ಲಿ ತಕ್ಕಮಟ್ಟಿಗೆ ಸೃಷ್ಟಿಯಾಗುತ್ತಲಿರುತ್ತದೆ. ಸಾಮಾನ್ಯವಾಗಿ ‘ಕೆಲವು ಜನಾಂಗಗಳ ಸಾಹಿತ್ಯ’ ಮತ್ತು ಕೆಲವು ಜನಪದಸಾಹಿತ್ಯ ಪ್ರಕಾರಗಳು ಈ ಜಾಣಪದಸಾಹಿತ್ಯ ವರ್ಗಕ್ಕೆ ಸೇರುತ್ತಿದ್ದು, ಉದಾಹರಣೆಗೆ ಕನ್ನಡವನ್ನೇ ನೋಡಬಹುದು.

ಕನ್ನಡನಾಡಿನಲ್ಲಿ ಬ್ರಾಹ್ಮಣರದು ಪ್ರತಿಷ್ಠಿತವರ್ಗ. ಹಳ್ಳಿಗಳಲ್ಲಿ ಬದುಕಿಯೂ ಇವರು ತಮ್ಮ ನಡೆ-ನುಡಿಗಳಲ್ಲಿ ಮಡಿವಂತಿಕೆಯ ಸೀಮಾರೇಖೆಯನ್ನು ಉಳಿಸಿಕೊಂಡಿರುತ್ತಾರೆ. ಒಂದು ಹಳ್ಳಿಯಲ್ಲಿ ಬ್ರಾಹ್ಮಣ; ಲಿಂಗವಂತ, ಕಬ್ಬಿಲ, ಕುರುಬ, ಮುಸಲ್ಮಾನ, ಹರಿಜನ ಇತ್ಯಾದಿ ಜಾತಿಯವರಿದ್ದರೆ ಭಾವನೆ ಭಾಷೆ ಇತ್ಯಾದಿಗಳಲ್ಲಿ ಬ್ರಾಹ್ಮರದೇ ಒಂದು ರೀತಿ, ಮಿಕ್ಕ ಅಬ್ರಾಹ್ಮಣರದೇ ಒಂದು ರೀತಿ. ಭಾಷಾವಿಜ್ಞಾನಿಗಳೂ ಕನ್ನಡ ಭಾಷೆಯ ಸಾಮಾಜಿಕ ಪ್ರಭೇದವನ್ನು ಬ್ರಾಹ್ಮಣಭಾಷೆ, ಅಬ್ರಾಹ್ಮಣಭಾಷೆಯೆಂದು ಬಿಚ್ಚಿಹೇಳುವುದನ್ನು ಇಲ್ಲಿ ನೆನೆಯಬಹುದು. ಹೀಗೆಯೇ ಅವರ ಸಾಹಿತ್ಯದಲ್ಲಿಯೂ ಒಂದು ಪ್ರತ್ಯೇಕತೆ ಎದ್ದು ಕಾಣುತ್ತದೆ. ಬಯಕೆಯ ಹಾಡುಗಳ ತುಲನೆಯಿಂದ ಈ ಮಾತನ್ನು ಸ್ಪಷ್ಟಪಡಿಸಿಕೊಳ್ಳಬಹುದು.

ಅಬ್ರಾಹ್ಮಣರ ಹಾಡು

ಸುಬದೇವಿ ಮತ್ತೇನ ಬಗಿಸ್ಯಾಳ || ||
ಒಂದಂಬು
ತಿಂಗಳಿಗಿ ಒಂದೇನ ಬಗಸ್ಯಾಳ |
ಅಂಗಳದೊಳಗಿನ
ಎಳಿಬಿಸಲ
ತಿಂದೇನೆಂಬುವಳ
|| ಸು ||

ಎರಡಂಬು ತಿಂಗಳಿಗಿ ಎರಡೇನ ಬಗಸ್ಯಾಳ
ಎರಡೆಲಿ
ವರದ ಎಳಿಹುಣಚಿ
ತಿಂದೇನೆಂಬುವಳ
|| ಸು||

ಮೂರೆಂಬು ತಿಂಗಳಿಗಿ ಮೂರೇನು ಬಗಸ್ಯಾಳ |
ಮೂಡಲ
ದಿಕ್ಕಿನ ಮಾಗಿಮಾವ |
ತಿಂದೇನೆಂಬುವಳ
|| ಸು ||

ನಾಕೆಂಬು ತಿಂಗಳಿಗಿ ಮನಾಕೇನ ಬಗಸ್ಯಾಳ |
ಕಾಕಿಯ
ಹೆಣ್ಣು ಕೈ ತುಂಬ
ತಿಂದೇನೆಂಬುವಳ
|| ಸು ||[6]

ಬ್ರಾಹ್ಮಣರ ಹಾಡು

ಗರ್ಭೀಣಿ ತನುಜನ | ಗರ್ಭಿಣಿಯಾದಳೈ || ||
ತಿಂಗಳೆಂಟು ದಿವಸಕ ಅಂಗನೆ ಮಣಿಯುತಾಳ |
ಸಿಂಗಾರವಾದ ಕೇದಗೆ ಬಗೆಸುವಳ || ||

ಎರಡಂಬು ತಿಂಗಳಿಗಿ ಪರಡಿಯ ಪಾಯಸ
ಮೊಸರ ಮೋದಕ ಚಿತ್ರಾನ್ನ ಬಗೆಸುವಳ || ||

ಮೂರಂಬು ತಿಂಗಳಿಗೆ ನೀರಲ ಅಂಜೂರಿ
ದ್ರಾಕ್ಷಿ ಕಿತ್ತೀಳೆ ಮಗಿಮಾವ ಬಗೆಸುವಳ || ||

ನಾಲ್ಕೆಂಟು ತಿಂಗಳಿಗೆ ಪಾಕದೊಳಗಿನ ದೋಸೆ
ಸಾಕೆಂಬುತನಕ ಪಾಯಸ ಪರಡಿ ಬಯಸುವಳ || ||

ಈ ರಚನೆಗಳಲ್ಲಿ ಎರಡನೆಯದು ಮೊದಲನೆಯದರ ಅನುಕರಣೆಯೆಂಬುದು ಸ್ಪಷ್ಟ. ಸಂವೇದನೆ, ಭಾಷೆ ಇತ್ಯಾದಿ ದೃಷ್ಟಿಗಳಿಂದ ಎರಡೂ ಹಾಡುಗಳು ಬೇರೆ ಬೇರೆ ಕವಲುಗಳಾಗಿ ಬೆಳೆದಿವೆ. ಗರ್ಭಿಣಿ, ತನುಜ, ಅಂಗನೆ ಮೊದಲಾದ ಜಾನಪದವಲ್ಲದ ಶಬ್ದಗಳು ಒಂದರಲ್ಲಿ, ತೀರ ಜಾನಪದವಾದ ಶಬ್ದಗಳು ಇನ್ನೊಂದರಲ್ಲಿ. ಬಯಕೆಯ ವಸ್ತುಗಳಾದ ಪರಡಿ ಪಾಯಸ ಮೋದಕ ಚಿತ್ರಾನ್ನ ಇತ್ಯಾದಿ ಒಂದುಕಡೆ, ಎಳಿಬಿಸಿಲು, ಎಳಿಹುಣಚಿ, ಕಾಕಿಹಣ್ಣು ಇನ್ನೊಂದು ಕಡೆ. ಬಹುಶಃ ಒಂದು ನಾಗರಿಕರ ನಾಲಗೆ ಚಾಪಲ್ಯವಾದರೆ, ಇನ್ನೊಂದು ನಾಗರಿಕರಲ್ಲದವರ ನೈಸರ್ಗಿಕ ಬಯಕೆ. ಈ ಎರಡೂ ವರ್ಗಗಳ ಬೇರೆ ಹಾಡುಗಳಲ್ಲಿಯೂ ಇಂಥ ಬಿನ್ನತೆ ಕಂಡುಬರುವುದರಿಂದ ಒಬ್ಬರದು ಜಾನಪದ, ಇನ್ನೊಬ್ಬರದು ಜಾಣಪದವೆಂದು ತಟ್ಟನೆ ಹೇಳಬಹುದಾಗಿದೆ. ಈ ಪ್ರಸಂಗದಲ್ಲಿ “ಕರಾವಳಿ ಪ್ರದೇಶ ಹವ್ಯಕಬ್ರಾಹ್ಮಣರಲ್ಲಿ ಜನಪದ ಸಾಹಿತ್ಯ ವಿದೆಯೆಂದು ಕೆಲವರು ಹೇಳುವರಾದರೂ ಅದನ್ನು ಜಾನಪದವೆಂದು ಕರೆದರೆ ಜನಾಪವಾದ ಬಂದೀತು”[7] “ಭಾಗವಂತಿಕೆ ಮೇಳ ಎಂಬ ಬ್ರಾಹ್ಮಣರ ಜನಪದಸಾಹಿತ್ಯ ದಕ್ಷಿಣಕರ್ನಾಟಕದಲ್ಲಿದೆಯೆಂದು ವಿದ್ವಾಂಸರು ಹೇಳುವರಾದರೂ ಅದರ ಪರೀಕ್ಷೆ ಅತ್ಯವಶ್ಯ”[8] ಎಂಬ ಮಾತುಗಳನ್ನು ಇಲ್ಲಿ ನೋಡಬೇಕು.

ಮೂಲತಃ ಬ್ರಾಹ್ಮಣರ ಹಾಡುಗಳಲ್ಲಿ ಕಂಡುಬರುವ ಈ ಪ್ರತ್ಯೇಕತೆ ಬ್ರಾಹ್ಮಣರಂಥ ಇತರ ಪ್ರತಿಷ್ಠಿತ ಜಾನಪದರಲ್ಲಿಯೂ ಕೆಲವು ಸಲ ಇಣುಕುತ್ತದೆ. ಉದಾ:

ಅಷ್ಟಾವರಣದ ಸೀರಿಯನುಟ್ಟು |
ನಿಷ್ಠೆ
ಪಂಚಾಕ್ಷರಿ ಕುಪ್ಪಸ ತೊಟ್ಟು |
ಶ್ರೇಷ್ಠ
ಷಟ್ಸ್ಥಲ ವಸ್ತುಗಳನ್ನಿಟ್ಟು | ಹೀಂಗ
ದಿಟ್ಟಿಸಿ
ತೂಗಿರಿ ಚಿತ್ತಸ್ವಸ್ಥದಲೀ || ಜೋ ಜೋ ||

ಎಚ್ಚರವಹಿಸಿ ಕಟ್ಟಿದ ರೀತಿ, ದಿಟ್ಟಿಸಿ ತೂಗಿರಿ ಇತ್ಯಾದಿಗಳಲ್ಲಿಯ ಪ್ರಾಸಹವ್ಯಾಸ, ಆಧ್ಯಾತ್ಮವಿಚಾರದ ಆಡಂಬರ ಮೊದಲಾದವು ಈ ಪದ್ಯದ ಜಾಣಪದತ್ವವನ್ನು ಎತ್ತಿ ತೋರಿಸುತ್ತವೆ.

ಇನ್ನು ಕೆಲವು ಸಲ ಜಾನಪದರ ಸಾಹಿತ್ಯ, ಜಾಣಪದರ ಕೈಗೆ ಸಿಕ್ಕರೆ ಅದು ದೇಶೀ ಶಬ್ದಗಳಿಗೆ ಬದಲು ಮಾರ್ಗಶಬ್ದಗಳನ್ನು ಪಡೆದುಕೊಳ್ಳುತ್ತದೆ: ಮಾರ್ಗ ತಪ್ಪಿದ ಮಾರ್ಗ, ದೆಸೆಗುಂದಿದ ದೇಶಿಗಳ ಮಿಶ್ರಣವಾಗುತ್ತದೆ. ಉದಾ:

ಬಸವಣನ ಹೇಣೂತಿ ಹಸಮಗಳು ನೀಲಮ್ಮ
ಬಸರಿದ್ದರ್ಹ್ಯಾಂಗ
ನಡಿವಳು | ಗೋದಿs
ಸಸಿಯಾಗ
ನವಲ ನಡದ್ಹಂಗ ||

ಬಸವಣ್ಣನ್ಹೆಂಡತಿ ಶಶಿಮುಖಿ ನೀಲಮ್ಮ
ಬಸರಾದರ್ಹ್ಯಾಂಗ
ನಡದಾಳ | ನೀಲಮ್ಮ
ಶಿಶುನಾಳದ
ನವಿಲು ಕುಣಿದ್ಹಾಂಗ

ಇಲ್ಲಿ ತಲೆದೋರಿದ ವ್ಯತ್ಯಾಸಗಳಿಗೆ ವಿವರಣೆ ಅನಗತ್ಯ.

ಒಟ್ಟಿನಲ್ಲಿ ಜನಾಂಗಿಕವಾಗಿ ಹೇಳುವುದಾದರೆ ಜಾನಪದರ ಮಧ್ಯ ಬಾಳುವ ಬ್ರಾಹ್ಮಣರ ಸಾಹಿತ್ಯ ಮತ್ತು ಬ್ರಾಹ್ಮಣರಂತೆ ಪ್ರತಿಷ್ಠೆಯ ಸೆಳವಿಗೆ ಸಿಕ್ಕ ಜಾನಪದರ ಸಾಹಿತ್ಯವೆಲ್ಲ ಸಾಮಾನ್ಯವಾಗಿ ಜಾಣಪದಸಾಹಿತ್ಯವಾಗಿರುತ್ತದೆ.

‘ಜನಾಂಗನಿಷ್ಠ’ವಾಗಿ ಗುರುತಿಸುವಂತೆ ‘ಸಾಹಿತ್ಯಪ್ರಕಾರನಿಷ್ಠ’ವಾಗಿಯೂ ಈ ಸಾಹಿತ್ಯವನ್ನು ಗುರುತಿಸಬಹುದು. ಸಾಹಿತ್ಯನಿರ್ಮಿತಿಯನ್ನು ಒಂದು ಹವ್ಯಾಸ ಇಲ್ಲವೆ ವೃತ್ತಿಯನ್ನಾಗಿಸಿಕೊಂಡವರು ಮಾತ್ರ ಇಂಥ ಕೆಲವು ಸಾಹಿತ್ಯಪ್ರಕಾರಗಳನ್ನು ಜಾಣದ ಭೂಯಿಷ್ಠವಾಗಿ ಸೃಷ್ಟಿಸುತ್ತ ಬಂದಿರುತ್ತಾರೆ.

ಈ ದೃಷ್ಟಿಯಿಂದ ನೋಡಿದರೆ ಕನ್ನಡದಲ್ಲಿ ಜಾಣಪದಸಾಹಿತ್ಯದ ಬಹುದೊಡ್ಡ ನಿಧಿಯೆನಿಸುವವು, ಭಜನೆ ಹಾಡುಗಳು. ತತ್ವ ಮತ್ತು ನೀತಿಬೋಧೆ ಪ್ರಧಾನವಾದ ಇವು ಈ ಕಡೆ ಶುದ್ಧ ಜಾನಪದವೂ ಅಲ್ಲ, ಆ ಕಡೆ ಶುದ್ಧ ಶಿಷ್ಟಪದವೂ ಅಲ್ಲ. ಹಳ್ಳಿ ಹಳ್ಳಿಗಳಲ್ಲಿ ಮುದ್ರಿಕೆ ಬದಲಿಸಿಕೊಳ್ಳುತ್ತ ಕರ್ತೃ ಸಂದೇಹದಿಂದ ಪ್ರಚಾರದಲ್ಲಿರುವ ಈ ಹಾಡುಗಳಲ್ಲಿ ಜನಪದಸಾಹಿತ್ಯದ ಮುಖ್ಯ ಲಕ್ಷಣವಾದ ಪಾಠ್ಯವ್ಯತ್ಯಾಸ ತಕ್ಕ ಪ್ರಮಾಣದಲ್ಲಿ ನಿರಾತಂಕವಾಗಿ ನಡೆದಿರುತ್ತದೆ. ದಾಸರ ಕೀರ್ತನೆ, ಸರ್ಪಭೂಷಣ ಶಿವಯೋಗಿ, ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ, ಕೂಡಲೂರ ಬಸವಲಿಂಗಶರಣರ ಹಾಡುಗಳ ಮಾದರಿಯಲ್ಲಿ, ಕೆಲವು ಸಲ ಸಿನಿಮಾ ಅಥವಾ ನಾಟಕ ಹಾಡುಗಳ ಧಾಟಿಯಲ್ಲಿ ಹುಟ್ಟುವ ಸಾಹಿತ್ಯವಿದು. ನಿದರ್ಶನಕ್ಕಾಗಿ ಒಂದು ಹಾಡನ್ನು ನೋಡಬಹುದು

ಇಷ್ಟಲಿಂಗಯ್ಯ ಶ್ರೇಷ್ಠಲಿಂಗಯ್ಯ
ನಿಷ್ಠೆವಂತರ
ಆತ್ಮ ನೀನೆ ಲಿಂಗಯ್ಯ || ||
ಅಂಗಯ್ಯ
ಪೀಠದಿ ಹೊಳೆಯೋ ಲಿಂಗಯ್ಯ |
ಅಂಗಳ
ಕೊನೆಯಲ್ಲಿ ಕಾಣು ಲಿಂಗಯ್ಯ |
ಗಂಗೆಯ
ಮನೆಯಲ್ಲಿ ಸ್ನಾನವ ಗೈಯ್ಯುವ |
ಸಂಗಯ್ಯಾ
ನನ್ನಾತ್ಮ ನೀನೆ ಲಿಂಗಯ್ಯ || ||

ನವಲಿಂಗಕಾಧಾರ ನಾನೆ ಲಿಂಗಯ್ಯ
ನವಚಕ್ರಗಳಲಿ
ನಲಿಯೋ ಲಿಂಗಯ್ಯ
ನವಭಕ್ತಿ
ನವಶಕ್ತಿ ನವಲಿಂಗದೊಳೆ
ನವಪ್ರಾಣವ
ನನ್ನಾತ್ಮ ನೀನೆ ಲಿಂಗಯ್ಯ || ||

ಜಾಣಪದಸಾಹಿತ್ಯ ವರ್ಗಕ್ಕೆ ಬಹುಮಟ್ಟಿಗೆ ಸೇರುವ ಇನ್ನೊಂದು ಪ್ರಕಾರವೆಂದರೆ ಹವ್ಯಾಸಿ ಮತ್ತು ವೃತ್ತಿಗಾಯಕರಿಂದ ನಿರ್ಮಿತವಾಗುವ ಉತ್ತರಕರ್ನಾಟಕದ ಲಾವಣಿ ಸಾಹಿತ್ಯ. ಅತಿಯಾದ ಪ್ರಾಸಾಂತ್ಯಪ್ರಾಸ ಮೋಹ, ಒಂದು ನಿರ್ದಿಷ್ಟ ಚೌಕಟ್ಟು (Formula)ಇತ್ಯಾದಿಗಳಿಂದ ಕೂಡಿದ ಶೃಂಗಾರ, ವೀರ ಮತ್ತು ತತ್ವಸಾರ ಲಾವಣಿಗಳು ಇದಕ್ಕೆ ಉದಾಹರಣೆ.

ರಂಭಿ ಎದಿಮ್ಯಾಲ ತುಂಬಿಬಂದಂಥ ಕುಂಭಕುಚಗಳ ಕಂಡು
ಕುಂಭಸ್ಥಳಕೆ
ಗಜ ಮಣ್ಣು ಒಗೆಯುವುದು |
ಹೊಳೆಯುವಂಥ
ಕರಗಳ ಸರ್ಪ ನಿಂತು ನೋಡುವುದು
ನಾಚಿಕಿಂದ
ನಲುಗಿ ಭೂಮಿಸೇರಿತು ಬಗಿದು.[9]

ಸ್ತ್ರೀವರ್ಣನೆಯ ಲಾವಣಿ ಭಾಗವಿದು. ಕುಂಭಕುಚ, ಕುಂಭಸ್ಥಳ, ಕರ ಮೊದಲಾದ ಶಬ್ದಗಳು, ರಚನೆಯಲ್ಲಿರುವ ಪಾಂಡಿತ್ಯ ಪ್ರದರ್ಶನ ಇದರ ಕರ್ತೃವಿನ ‘ಜಾಣಪದತ್ವ’ವನ್ನು ಸೂಚಿಸುತ್ತವೆ.

ನಾದ ಬಿಂದು ಕಳೆ ಮೂರಕ ಆಧಾರ
ಪ್ರಕೃತಿ
ಮಾಡಿಟ್ಟ ನಿರಂಜನಾ
ಅಂಥಾ
ಪ್ರಕೃತಿಗೆ ಪ್ರಾಣ ಆಧಾರ
ಒಂದೊಂದು
ಕೇಳ ಇದರ ಸಂಧಾನಾ[10] ||

ವೀರಶೈವ ತತ್ವಪ್ರಧಾನ ಈ ಲಾವಣಿಯಲ್ಲಿ ಅನಕ್ಷರಸ್ಥ ಮನಸ್ಸಿಗಿಂತ ಅಕ್ಷರಸ್ಥ ಮನಸ್ಸಿನ ಮಿಡಿತವಿದೆ. ಇದನ್ನು ಅರ್ಥೈಸಿಕೊಳ್ಳುವುದು ವೀರಶೈವ ವಿದ್ವಾಂಸರಿಗೆ ಸಾಧ್ಯವೇ ಹೊರತು ಸಾಮಾನ್ಯರಿಗಲ್ಲ. ಒಟ್ಟಿನಲ್ಲಿ ಬಹುಪಾಲು ಲಾವಣಿ ಸಾಹಿತ್ಯದ ಹಿಂದೆ ಜಾನಪದದ ಮುಕ್ತ ರಚನೆಗೆ ದೂರವಾದ ಒಂದು ಸಕ್ರಮತೆ ಕಂಡುಬರುತ್ತದೆ.

ಇದೇ ರೀತಿ ಪ್ರಾಚೀನ ಹಸ್ತಪ್ರತಿಗಳಲ್ಲಿ ದೊರೆಯುವ ಕರ್ತೃ ನಿರ್ದೇಶನವುಳ್ಳ ಚೌಪದನ ಮತ್ತು ಚೌಪದನ ಮತ್ತು ದುಂದುಮೆಪದಗಳನ್ನೂ ‘ಜಾಣಪದ’ ವರ್ಗದಲ್ಲಿ ಪರಿಭಾವಿಸಬೇಕಾಗುತ್ತದೆ.

ಚೌಪದನ ಚೌಪದನವಿನಿತು ಕೊಂಡಾಡಿ
ಚೌತಿಗಣನಾಥನಾ
ತಿಥಿಯೆಂದು ಮಾಡಿ
ಚೌಳದಳದಿ
ಪೂಜಿಸುವ ಫಲಗಳನು ಬೇಡಿ
ಚೌಷಷ್ಟಿ
ವಿದ್ಯೆಯನು ಗಣಪತಿಗೆ ಬೇಡಿ[11] ||||

ಎಂಬ ಪ್ರಾರಂಭದ ಪದ್ಯವೇ ಇದರ ಜಾಣಪದತ್ವವನ್ನು ಸಾರುತ್ತದೆ.

ದುಂದುಮೆ ಕೇಳ್ರಿ ದುಂದುಮೆ || ಪಲ್ಲ ||
ಸಬ್ಬ
ದೇಶದಿ ಕಾಣೆ ಇಂಥ ಮರ್ಕಟ
ಅಬ್ಬರಿಸುತ್ತ
ಹಾರ್ಯಾಡುವುವು | ತಮ್ಮ
ಹುಬ್ಬು
ಹಾರಿಸಿ ಹಲ್ಲುಕಿರಿಯುವವು | ಮತ್ತೆ
ತಬ್ಬುಬ್ಬಿ
ಅಲ್ಲಲ್ಲೆ ಕೂಡುವವು | ಮೈಯ
ಉಬ್ಬುತ
ಕೊಬ್ಬುತ ಹಬ್ಬೂತೂರೊಳಗೆಲ್ಲ
ಹುಬ್ಬಳ್ಳಿಯೊಳು
ಮಂಗ ಹುಡದಿಯಾಡಿದವು[12] ||||

ಮೊದಲಾದ ದುಂದುಮೆ ಪದ್ಯಗಳ ಅತಿಯಾದ ಪ್ರಾಸ, ತಾಳಪ್ರಧಾನವಾದ ನಡಿಗೆಗಳನ್ನು ಗಮನಿಸಬೇಕು.

ವೈವಿಧ್ಯಪೂರ್ಣವಾದ ಜಾನಪದ ‘ಬಯಲಾಟ’ ಪ್ರಪಂಚದಲ್ಲಿ ಕಿಳ್ಳಿಕೇತರಾಟ, ದಾಸರಾಟಗಳಂಥವನ್ನು ಬಿಟ್ಟರೆ ಪ್ರಸಂಗ – ಯಕ್ಷಗಾನ, ಸಣ್ಣಾಟ-ದೊಡ್ಡಾಟಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ‘ಜಾಣಪದ’ದ ಸೋಂಕು ಕಂಡುಬರುತ್ತದೆ. ಇವುಗಳಲ್ಲಿ ಯಕ್ಷಗಾನ ‘ಆಟ’ಗಳನ್ನು ಯಕ್ಷಗಾನ ‘ನಾಟಕ’ಗಳೆಂದು ಕರೆದು ಅವುಗಳ ಉಗಮಕ್ಕೆ ಸಂಸ್ಕೃತನಾಟಕಗಳೇ ಕಾರಣವೆಂದು ವಿವರಿಸಲು ಪ್ರಯತ್ನಿಸಿದರು. ಅದೇ ಬಗೆಯಲ್ಲಿ ಯಕ್ಷಗಾನಗೀತ, ನೃತ್ಯಗಳಂತ ವಿಷಯಗಳು ಶಾಸ್ತ್ರಗ್ರಂಥಗಳಲ್ಲಿ ಉಕ್ತವಾಗಿರುವುದರಿಂದ ಶುದ್ಧ ಜಾನಪದವಾಗಲಾರದು” ಎಂಬ ಅಭಿಪ್ರಾಯವನ್ನು ಶ್ರೀಭೀಮರಾವ ಚಿಟಗುಪ್ಪಿ ಅವರು ವ್ಯಕ್ತಮಾಡಿರುವರು. ಶ್ರೀ ಚಂದ್ರಶೇಖರ ಕಂಬಾರರೂ ಯಕ್ಷಗಾನವನ್ನು ಕುರಿತು “ಇದು ಶುದ್ಧವಾಗಿ ಅಭಿಜಾತ ನಾಟಕವೇ ಆಗಿದ್ದು ದೇವಾಲಯಗಳ ಸಂಬಂಧದಿಂದ ಸಾಮಾನ್ಯರ ಸಂಪರ್ಕ ಪಡೆದು ಮುಂದೊಂದು ದಿನ ಅರಮನೆಯ ಆಶ್ರಯ ತಪ್ಪಿ ಬಯಲಿಗೆ ಬಿದ್ದು ಬಯಲಾಟವಾಯ್ತು”[13] ಎಂದು ಕಡ್ಡಿ ಮುರಿದಂತೆ ಸಾರಿದ್ದಾರೆ.

ಈ ಮೂವರ ಅಭಿಪ್ರಾಯಗಳನ್ನು ಡಾ. ಕೆ. ಜಿ. ಶಾಸ್ತ್ರಿ ಅವರು ವಿರೋಧಿಸುತ್ತ “ಯಕ್ಷಗಾನ ಪ್ರದರ್ಶನದ ಅತ್ಯುತ್ತಮ ಭಾಗವೆನಿಸುವ ವೇಷಭೂಷಣಗಳ ವರ್ಣಮಯತೆ, ಪಾತ್ರಗಳ ಬಣ್ಣಗಾರಿಕೆಯ ವಿವರಪೂರ್ಣವಾದ ಯೋಜನೆ, ನೃತ್ಯಕ್ರಮದ ಚೈತನ್ಯಮಯತೆ, ಸಂಭಾಷಣೆಯ ಔಚಿತ್ಯಪೂರ್ಣತೆಗಳು ಜನಪದಕ್ಕೆ ಮೀರಿದ್ದೆಂದು ತೋರುವುದು ನಿಜ. ಆದರೆ ಅದೇ ಕಾಲಕ್ಕೆ ಅದು ಉಳಿಸಿಕೊಂಡಿರುವ ಮೂಲಲಕ್ಷಣಗಳನ್ನು ಅಲಕ್ಷಿಸುವುದು ತಪ್ಪಾಗುತ್ತದೆ.”[14] ಎಂದು ಎರಡು ವಾಕ್ಯಗಳಿಂದ ಸಮರ್ಥಸಿಕೊಳ್ಳುವಲ್ಲಿ ಮೊದಲನೆಯ ವಾಕ್ಯದ ಮೂಲಕ ಇದು “ಜನಪದಕ್ಕೆ ಮೀರಿದ್ದು” ಎಂದು ಒಪ್ಪಿಕೊಂಡಿದ್ದಾರೆ. ಎರಡನೆಯ ವಾಕ್ಯಕ್ಕೆ ಈ ಲೇಖನದಲ್ಲಿಯೇ ಒಡ್ಡಿದ ಎಂಟೂ ಸಮರ್ಥನೆಗಳು ಸಮರ್ಪಕವಾಗಿಲ್ಲ. ಶ್ರೀ ಹಾಸಣಗಿ ಮೊದಲಾದವರು ಶಿಷ್ಟಮೂಲದಿಂದ ಇಳಿದು ಜನಪದಕ್ಕೆ ವಾಲಿತೆಂದರೆ ಡಾ. ಶಾಸ್ತ್ರಿಗಳು ಜಾನಪದಮೂಲದಿಂದ ಏರಿ ಶಿಷ್ಟಕ್ಕೆ ವಾಲಿತೆಂದು ಹೇಳುತ್ತಾರೆ. ಅಲ್ಲಿಂದ ಇಲ್ಲಿಗೆ ಬಂದಿತು. ಇಲ್ಲಿಂದ ಅಲ್ಲಿಗೆ ಹೋಯಿತು ಎನ್ನುವುದು ನಮಗೆ ಮುಖ್ಯವಲ್ಲ. ಸದ್ಯ ಜಾನಪದದಿಂದ ಅಭಿನಯಿಸಲ್ಪಡುವ ಅದರ ‘ಸ್ವರೂಪ’ ಎಂತಹದು? ಎಂಬುದು ಮುಖ್ಯ. ಈ ವಿಷಯವಾಗಿ ಡಾ. ಶಾಸ್ತ್ರಿಗಳು ಹೇಳುವ “ಜಾನಪದಕ್ಕೆ ಮೀರಿದ್ದು” ಎಂಬ ಮಾತು ಅದರ ಜಾಣಪದತ್ವವನ್ನು ಸ್ವೀಕರಿಸುತ್ತದೆ. ಕಾರಣ ಯಕ್ಷಗಾನವು ಜಾನಪದ ಸಾಹಿತ್ಯಕ್ಕೆ ಇಳಿಯದ, ಶಿಷ್ಟಪದ ಸಾಹಿತ್ಯಕ್ಕೆ ಏರದ

“ಜಾಣಪದ ಸಾಹಿತ್ಯ” ಸೀಮೆಯಲ್ಲಿ ನಿಲ್ಲುವ ದೃಶ್ಯ ಪ್ರಕಾರವೆನಿಸಿಕೊಳ್ಳುತ್ತದೆ. ಮೇಲೆ ಹೇಳಿದ ‘ಜಾಣಪದ ಸಾಹಿತ್ಯ’ದ ಸರ್ವಸೂತ್ರಗಳೂ ಈ ಪ್ರಕಾರಕ್ಕೆ ಅನ್ವಯಿಸುವವೆಂಬುದನ್ನು ಇಲ್ಲಿ ಗಮನಿಸಬೇಕು.

ಉತ್ತರ ಕರ್ನಾಟಕಕ್ಕೆ ಬಂದರೆ ಸಣ್ಣಾಟವರ್ಗಕ್ಕೆ ಸೇರುವ ಕುಲಗೋಡ ತಮ್ಮಣ್ಣನ ಶ್ರೀಕೃಷ್ಣ ಪಾರಿಜಾತ, ಶರಣರರಾಟ ಮೊದಲಾದವು ವಿದ್ವಾಂಸರುಗಳ ರಚನೆಗಳೇ ಆದುದರಿಂದ ಅವು ಜಾನಪದದ ಬಣ್ಣ ಹಚ್ಚಿಕೊಂಡ ಜಾಣಪದಗಳೇ ಆಗಿವೆ. ಸಣ್ಣಾಟಗಳು ಸಾಮಾಜಿಕವಾಗಿದ್ದಲ್ಲಿ ಮಾತ್ರ ‘ಜಾನಪದ’ವಾಗಿ ತೋರುತ್ತವೆ. ಉದಾ: ಸಂಗ್ಯಾಬಾಳ್ಯಾ.

ದೊಡ್ಡಾಟಗಳ ವಸ್ತು ಸಾಮಾನ್ಯವಾಗಿ ಆರ್ಯಮೂಲ ಪೌರಾಣಿಕ ಮತ್ತು ಐತಿಹಾಸಿಕವಾದುದರಿಂದ ಅಲ್ಲಿಯ ಪ್ರತಿಷ್ಠಿತ ಪಾತ್ರಗಳ ನಡೆ-ನುಡಿಯ ಸಂದರ್ಭಗಳಲ್ಲಿ ರಂಗಭೂಮಿ ಜಾನಪದವನ್ನು ಬಿಟ್ಟು ಜಾಣಪದದತ್ತ ಮೇಲೇಳುತ್ತಿದ್ದರೂ, ಅದು ಪ್ರತಿಷ್ಠಿತವಲ್ಲದ ಸಂದರ್ಭ ಮತ್ತು ಹಾಡುಗಾರಿಕೆಗಳಲ್ಲಿ ಶುದ್ಧ ಜಾನಪದವನ್ನೇ ವ್ಯಕ್ತಪಡಿಸುತ್ತದೆ. ಉದಾ:

ಕಟಗಿ ಚುಚ್ಚಿ ಹ್ವಾದರು ಬಾಯಾಗ |
ಕಬ್ಬಂತ
ತಿಳದೆ ನಾ ಮನದಾಗ ||

ಇಂಥ ಹಾಡುಗಳಲ್ಲಿ ಹಸಿರುಮುರಿಯುವ ದೇಶಿಯ ಕಲ್ಪನೆ, ಗ್ರಾಮ್ಯಭಾಷೆ, ಅಂಶ ಲಯಗಳು ಗಮನಾರ್ಹವೆನಿಸಿವೆ. ಹೀಗೆ ದೃಶ್ಯಪ್ರಕಾರಗಳಲ್ಲಿಯೂ ಅಲ್ಲಲ್ಲಿ ಜಾಣಪದ ಪಾತ್ರವಹಿಸಿ ಪ್ರವೇಶಿಸಿದೆ.

ಜನಪದಸಾಹಿತ್ಯ ಲೆಕ್ಕಣಿಯ ತುದಿಯಲ್ಲಿ ಅರಳುವದಲ್ಲ ನಾಲಿಗೆಯ ತುದಿಯಲ್ಲಿ ಚಿಗಿಯುವುದು. ಅದರ ನಿಜರೂಪದರ್ಶನವಾಗುವುದು, ಲೇಖನ ರೂಪದಲ್ಲಲ್ಲ, ಮಾತುಗಾರಿಕೆಯಲ್ಲಿ ಮತ್ತು ಹಾಡುಗಾರಿಕೆಯಲ್ಲಿ. ಈ ದೃಷ್ಟಿಯಿಂದಲೂ ಜಾನಪದರು ಮತ್ತು ಜಾನಪದರು ತಮ್ಮ ಸಾಹಿತ್ಯವನ್ನು ಭಿನ್ನರೂಪದಲ್ಲಿ ವ್ಯಕ್ತಪಡಿಸುತ್ತಾರೆ. ಜಾನಪದರ ಅಭಿವ್ಯಕ್ತಿ ಅಂಶಗಣ, ಎತ್ತರ ದನಿ, ಉಚ್ಚಾರ ಗ್ರಾಮ್ಯತೆ ಪ್ರಧಾನವಾದುದು. ಜಾಣಪದರ ಅಭಿವ್ಯಕ್ತಿ ಮಾತ್ರಾಗಣ, ಮೃದುಧ್ವನಿ, ಉಚ್ಚಾರಶುದ್ಧಿ ಪ್ರಧಾನವಾದುದು. ಒಬ್ಬರದು ಮುಕ್ತ, ಮುಗ್ಧ; ಇನ್ನೊಬ್ಬರದು ಬದ್ಧ, ಆಡಂಬರ.

ಒಟ್ಟಿನಲ್ಲಿ ಶಿಷ್ಟಪದಸಾಹಿತ್ಯ ಮತ್ತು ಜಾನಪದಸಾಹಿತ್ಯಗಳ ಮಧ್ಯದ ಈ ಜಾಣಪದಸಾಹಿತ್ಯ ರಾಶಿರಾಶಿಯಾಗಿ ಹುಟ್ಟುತ್ತಿದ್ದು, ಜಾನಪದವನ್ನು ಶಾಸ್ತ್ರವ್ಯವಸ್ಥೆಗೆ ಒಳಪಡಿಸಬೇಕಾಗಿರುವ ಇಂದಿನ ಕಾಲದಲ್ಲಿ ಜಾಣಪದವನ್ನು ಪ್ರತ್ಯೇಕವಾಗಿಯೇ ಪರಿಗಣಿಸುವುದು ಸೂಕ್ತ ಪ್ರತ್ಯೇಕ ಹೆಸರಿನಿಂದ ಕರೆಯುವುದು ಸಮಂಜಸ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ನಾಡಪದಗಳು (೧೯೪೭), ಪು. ೧೮೬

[2] ಲೋಕಗೀತಗಳು, ಪು. ೯೬೧೦೦, ಅ. ಟಿ.

[3] ಜಾನಪದ ಸಾಹಿತ್ಯ ದರ್ಶನ-೧, ಪು. ೧೧ ಮತ್ತು ೬೩

[4] “ಅಜ್ಞಾತ ಕರ್ತೃಜ್ಞ, ಸಾಮೂಹಿಕ ಬೆಳವಣಿಗೆಯ ಮುದ್ರೆ, ವಾಕ್‌ಪರಂಪರೆಯ ಶುದ್ಧ ಹಾಗೂ ಚಂಚಲಸ್ಥಿತಿ, ಜನಪ್ರಿಯತೆ, ಸಾಮಾನ್ಯತಾಶ್ರೀ ಹಲವು ಮನಸ್ಸುಗಳಲ್ಲಿ ಹಾಡು ಸಂಪಾದಿಸಿದ ರಾಷ್ಟ್ರೀಯ ಸ್ವರೂಪ”, ಸಿ.ಪಿ.ಕೆ. ಜಾನಪದ ಗೀತವು ಪು. ೧೧ (Qoted from chambers Encyclopaedia).

[5] ಆಧುನಿಕ ಕನ್ನಡ ಜಾನಪದ ವಿದ್ವಾಂಸರು ‘ಜನಪದಸಾಹಿತ್ಯ’ ಎಂಬುದು ಯೋಗ್ಯ ಪ್ರಯೋಗ ಎನ್ನುತ್ತಾರೆ. ನನ್ನ ದೃಷ್ಟಿಯಲ್ಲಿ ಜನಪದಸಾಹಿತ್ಯ, ಜಾನಪದ ಸಾಹಿತ್ಯಗಳೆರಡೂ ಯೋಗ್ಯ ಪ್ರಯೋಗಗಳು (ನೋಡಿ. ಬೆಟಗೇರಿ ಕೃಷ್ಣಶರ್ಮ, ಕನ್ನಡ ಜಾನಪದಸಾಹಿತ್ಯ, ಪು.೪)

[6] ಬಿ. ಎಸ್‌. ಗದ್ದಿಗಿಮಠ, ಲೋಕಗೀತೆಗಳು, ಪು. ೯೩. ೯೦

[7] ಹೊನ್ನ ಬಿತ್ತೇವು ಹೊಲಕೆಲ್ಲ, ಪು. ೧೪೫

[8] ಜಾನಪದ ಸಾಹಿತ್ಯದರ್ಶನ-ಭಾಗ ೧, ಪು. ೬೩ (ಅ. ಟಿ.)

[9] ಕವಿ ಬಾಳಗೋಪಾಳನ ಲಾವಣಿಗಳು, ಪು. ೮೭

[10] ಕವಿ ಬಾಳಗೋಪಾಳನ ಲಾವಣಿಗಳು, ಪು. ೧೦

[11] ಜೀವನಜೋಕಾಲಿ ೧, ಚೌಪದನಗಳು, ಪು. ೪೭

[12] ಜೀವನಜೋಕಾಲಿ ೧, ಚೌಪದನಗಳು, ಪು. ೧೪೧

[13] ಜೀವನಜೋಕಾಲಿ, ಚೌಪದನಗಳು, ಪು. ೧೯೬

[14] ಜಾನಪದ ಸಾಹಿತ್ಯದರ್ಶನ ಭಾಗ ೨, ಪು. ೧೬೯