ಬಯಲಾಟ, ದೊಡ್ಡಾಟ, ಸಣ್ಣಾಟ – ಈ ಪದಗಳಲ್ಲಿ ‘ಆಟ’ ಎಂಬುದು ತಪ್ಪದೇ ಉಳಿದುಕೊಂಡು ಬಂದಿದೆ. ಹಳ್ಳಿಗಳಲ್ಲೂ ಈಗಲೂ ಎಲ್ಲ ಜಾನಪದ ದೃಶ್ಯಪ್ರಕಾರಗಳಿಗೆ ‘ಆಟ’ವೆಂದೇ ಕರೆಯುತ್ತಾರೆ. ಹೀಗಾಗಿ ಕನ್ನಡಿಗರು ಜಾನಪದ ಎಲ್ಲ ದೃಶ್ಯಕಲೆಯನ್ನು ಮೊದಲ ಘಟ್ಟದಲ್ಲಿ ‘ಆಟ’ವೇಂದೆ ಕರೆಯುತ್ತಿರಬೇಕೆನಿಸುತ್ತದೆ.

ಹಗಲು-ರಾತ್ರಿ, ಹವ್ಯಾಸಿ-ವೃತ್ತಿ, ಬೀದಿ-ವೇದಿಕೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಜಾನಪದರಿಂದ ಪ್ರದರ್ಶಿಸಲ್ಪಡುತ್ತಿದ್ದ ರಂಗಭೂಮಿಗೆ ಸಮಾಂತರವಾಗಿ, ಕಾಲ ಗತಿಸಿದಂತೆ, ಶಿಷ್ಟಸಮಾಜದ ಆಚ್ಛಾದಿತ (ಸಂಸ್ಕೃತ) ರಂಗಭೂಮಿಯೊಂದು ಹೊರಗಿನಿಂದ ಬಂದಿತು. ಅಂದಿನಿಂದ ಈ ಆಚ್ಛಾದಿತ ರಂಗಭೂಮಿಯಿಂದ ಬೇರ್ಪಡಿಸಲು ಜಾನಪದ ಅನಾಚ್ಛಾದಿತ ‘ಆಟ’ವನ್ನು ಬಯಲಾಟ ಎಂಬ ಹೆಸರಿನಿಂದ ಕರೆಯತೊಡಗಿದರೆಂದು ತೋರುತ್ತದೆ. ಆದುದರಿಂದ ಜಾನಪದ ರಂಗಭೂಮಿಯು ತನ್ನ ಮಗ್ಗುಲಿಗೆ ಬಂದುನಿಂತ ಶಿಷ್ಟಪದ ರಂಗಭೂಮಿಯಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುವ ಅನುಕೂಲತೆಗಾಗಿ, ತನ್ನ ಹೆಸರನ್ನು ಮಾತ್ರ ಬದಲಿಸಿಕೊಂಡಿತೇ ಹೊರತು, ರೂಪ ಬದಲಿಸಿಕೊಂಡು ಮುನ್ನಡೆಯಲಿಲ್ಲವೆಂದು ಹೇಳಬೇಕಾಗುತ್ತದೆ. ಹೀಗೆ ಏಕಕಾಲಕ್ಕೆ ಸಂಭವಿಸಿದ ಶಿಷ್ಟರೂಪದ ಆಗಮನ, ಜಾನಪದರೂಪದ ನಾಮಾಂತರ ಘಟನೆ, ನಮ್ಮ ದೃಶ್ಯಕಲೆಯ ಇತಿಹಾಸದಲ್ಲಿ ಎರಡನೆಯ ಘಟ್ಟವೆನಿಸುತ್ತದೆ.

ಹೀಗೆ ‘ಬಯಲಾಟ’ವೆಂಬ ಹೊಸ ಹೆಸರನ್ನು ಹೊತ್ತು ಮುನ್ನಡೆದ ಈ ಜಾನಪದ ದೃಶ್ಯಕಲೆಯ ಮಗ್ಗುಲಲ್ಲಿ, ದಿನಗಳೆದಂತೆ ಹೊಸ ಸಣ್ಣ ಪ್ರಕಾರವೊಂದು ಕವಲೊಡೆದು ನಿಂತಾಗ, ಇವೆರಡನ್ನೂ ವಿಂಗಡಿಸಿ ಕರೆಯುವ ಸೌಕರ್ಯಕ್ಕೋಸುಗ ಹಳೆಯ ಬಯಲಾಟವನ್ನು ‘ದೊಡ್ಡಾಟ’ವೆಂದೂ,ಹೊಸ ಬಯಲಾಟವನ್ನು ‘ಸಣ್ಣಾಟ’ವೆಂದೂ ಹೆಸರಿಸಿದರು. ಇದು ದೃಶ್ಯಕಲೆಯ ಇತಿಹಾಸದಲ್ಲಿ ಮೂರನೆಯ ಘಟ್ಟವಾಗಿದೆ. ಒಟ್ಟಿನಲ್ಲಿ, ಎರಡನೆಯ ಘಟ್ಟಕ್ಕೆ ಮಗ್ಗುಲಿಗೆ ಬಂದುನಿಂತ ಶಿಷ್ಟಪದ ರಂಗಭೂಮಿ ಕಾರಣವಾದರೆ, ಮೂರನೆಯ ಘಟ್ಟಕ್ಕೆ ಹೊಸದಾಗಿ ಹುಟ್ಟಿದ ಸಣ್ಣಾಟವೆಂಬ ಜಾನಪದ ರಂಗಭೂಮಿ ಕಾರಣವೆಂದು ಹೇಳಬಹುದು. ಈ ಸಣ್ಣಾಟದ ಜನನಕಾರಣ ಶೋಧ ಪ್ರಸ್ತುತ ಲೇಖನದ ಉದ್ದೇಶವಾಗಿದೆ.

ಕಾಲವಿಶಿಷ್ಟವಾದ ‘ಅವಸ್ಥಾಭೇದ’ ಶಿಷ್ಟಪದರ ಮೇಲೆ, ದೇಶವಿಶಿಷ್ಟವಾದ ‘ಪ್ರಾಂತಭೇದ’ ಜಾನಪದರ ಮೇಲೆ ಹೆಚ್ಚು ಪ್ರಭಾವಬೀರುತ್ತವೆ. ಹೀಗಾಗಿ ಶಿಷ್ಟಪದಕ್ಕಿಂತ ಜಾನಪದದಲ್ಲಿ ಬಹಳಷ್ಟು ಪ್ರಾಂತಭೇದಗಳು ಮೈದಾಳುತ್ತವೆ. ಈ ಮೇರೆಗೆ ನಮ್ಮ ನಾಡಿನ ಪೂರ್ವಭಾಗದಲ್ಲಿ ‘ಮೂಡಲಪಾಯ’,  ಪಶ್ಚಿಮಭಾಗದಲ್ಲಿ ‘ಪಡವಲುಪಾಯ’ ಎಂಬ ಬಯಲಾಟ ಪ್ರಾಂತಭೇದಗಳನ್ನು ಸ್ಫುಟವಾಗಿ ಗುರುತಿಸಬಹುದಾಗಿದೆ. ಇವುಗಳಲ್ಲಿ ಪಶ್ಚಿಮ ಕರ್ನಾಟಕದ ಪಡುವಲಪಾಯ ಬಯಲಾಟ ಋತುಮಾನ ಕಾರಣವಾಗಿ ಯಕ್ಷಗಾನ, ಪ್ರಸಂಗ ಎಂದು ಎರಡು ಹೋಳಾಗಿ ನಿಂತಿದೆ ಮತ್ತು ಯಕ್ಷಗಾನವು ಬಡಗತಿಟ್ಟು, ತೆಂಕತಿಟಟು ಎಂಬ ಪ್ರಭೇದಗಳನ್ನು ಸೃಷ್ಟಿಸಿಕೊಂಡಿದ್ದು, ಇದಕ್ಕೆ ಭೌಗೋಲಿಕ ವ್ಯತ್ಯಾಸ, ನೆರೆಯ ಪ್ರಾಂತದ ಪ್ರಭಾವಗಳು ಕಾರಣವಾಗಿವೆ. ಇದೇ ರೀತಿ ಮೂಡಲಪಾಯ ಬಯಲಾಟವನ್ನು ಉತ್ತರ ಕರ್ನಾಟಕದ್ದು, ದಕ್ಷಿಣ ಕರ್ನಾಟಕದ್ದು ಎಂದು ವಿಂಗಡಿಸಬಹುದಾಗಿದೆ. ಇವುಗಳಲ್ಲಿ ಉತ್ತರ ಕರ್ನಾಟಕದ ಮೂಡಲಪಾಯ ಬಯಲಾಟ ಯಾವುದೋ ಕಾರಣದಿಂದಾಗಿ ಸಣ್ಣಾಟ, ದೊಡ್ಡಾಟವೆಂದ ಎರಡು ಪ್ರಕಾರಗಳಾಗಿ ನಿಂತಿತೆಂದು ತೋರುತ್ತದೆ. ಆ ಕಾರಣ ಯಾವುದೆಂಬುದು ನಮ್ಮ ಮುಂದಿನ ಪ್ರಶ್ನೆಯಾಗಿದೆ.

ಜೀವನದೃಷ್ಟಿ ಮತ್ತು ಜೀವನವ್ಯಾಪಾರಗಳಲ್ಲಿಯ ವ್ಯತ್ಯಾಸದಿಂದಾಗಿ ಭಾಷೆ ಮತ್ತು ಸಾಹಿತ್ಯಗಳಲ್ಲಿ ಅವಸ್ಥಾಭೇದ, ಪ್ರಾಂತಭೇದಗಳು ತಲೆದೋರುತ್ತವೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಒಳಗೆ ಜನಜೀವನದಲ್ಲಿ ಆಗಾಗ ಸಂಭವಿಸಿದ ತೀವ್ರ ಬದಲಾವಣೆಗಳಿಂದಾಗಿಯೇ ಹೊರಗೆ ಭಾಷೆ ಪೂರ್ವದ ಹಳಗನ್ನಡ-ಹಳಗನ್ನಡ –ನಡುಗನ್ನಡ-ಹೊಸಗನ್ನಡವಾಗುತ್ತ ಬಂದಿತು; ಸಾಹಿತ್ಯರೂಪ ಚಂಪೂ-ವಚನ-ರಗಳೆ-ಷಟ್ಪದಿ-ಭಾವಗೀತೆ ನವ್ಯಕಾವ್ಯವಾಗುತ್ತ ಬೆಳೆಯಿತು. ಅಂದರೆ ಒಳಗಿನ ಆಶಯ ಹೊರಗಿನ ಆಕೃತಿಗಳು ಅವಿನಾಭಾವ ಸಂಬಂಧವುಳ್ಳವುಗಳಾಗಿದ್ದು, ಯಾವ ಕಾಲಕ್ಕೂ ಅಂತರಂಗದ  ಸುಪ್ತಪರಿವರ್ತನೆ ಬಹಿರಂಗದ ಸ್ಪಷ್ಟಬದಲಾವಣೆಗೆ ದಾರಿಮಾಡಿಕೊಡುತ್ತದೆ. ಇದೇ ರೀತಿ ಕನ್ನಡಿಗರ ಜೀವನದಲ್ಲಿ ಸಂಭವಿಸಿದ ಯಾವುದೋ ಒಂದು ಅಂಥ ಬದಲಾವಣೆಯಿಂದಾಗಿ ಜಾನಪದ ದೃಶ್ಯಕಲೆಯಾದ ಬಯಲಾಟದಲ್ಲಿಯೂ ಸಣ್ಣಾಟವೆಂಬ ಕವಲು ಕಾಣಿಸಿಕೊಂಡಿರಬೇಕು. ಆ ಬದಲಾವಣೆ ಯಾವುದು ಈ ಪ್ರಶ್ನೆಗೆ ವಿದ್ವಾಂಸರು ನೀಡಿದ ಉತ್ತರಗಳು ಹೀಗಿವೆ.

೧. “ದೊಡ್ಡಾಟಗಳು ರಂಗಸಜ್ಜಿಕೆ, ವೇಷಭೂಷಣ, ವಾದ್ಯಗಳ ದೃಷ್ಟಿಯಿಂದ ಹೆಚ್ಚು  ವೆಚ್ಚದಾಯಕವಾದವುಗಳು… ಆದರೆ ಸಣ್ಣಾಟಗಳಲ್ಲಿ ಇಂಥ ವೆಚ್ಚದ ಆಡಂಬರ ಇರುವುದಿಲ್ಲ… ಹೀಗೆ ಇದು ಬಡವರು ಸಹಜವಾಗಿ ಪ್ರಯೋಗಿಸಬಹುದಾದ ರೂಪಕವಾಗಿದ್ದುದರಿಂದ ಅವರ ಅನುಕೂಲಕ್ಕಾಗಿ ಹುಟ್ಟಿಕೊಂಡಿರಬೇಕು.”

“ಸಣ್ಣಾಟಗಳು ಸಾಮಾಜಿಕ ಹಾಗೂ ನೈತಿಕ ಉದ್ದೇಶಕ್ಕಾಗಿ ಹುಟ್ಟಿದವುಗಳು. ಜಾನಪದ ಜೀವನಕ್ಕೆ ನಿತ್ಯವೂ ಬೇಕಾಗುವ ದೈವಭಕ್ತಿ, ಭೋಗ ತ್ಯಾಗಗಳನ್ನು ಕುರಿತು ಆಡಂಬರರಹಿತ ಮಾತು, ಹಾಡುಗಳಲ್ಲಿ ನೀತಿಪಾಠವನ್ನೂ ಮರಂಜನೆಯನ್ನೂ ಒದಗಿಸಲು ಇವು ಹುಟ್ಟಿಕೊಂಡವು” –ಡಾ. ಬಿ. ಬಿ. ಹೆಂಡಿ

೨. “ಹಾಡು ಹೇಳುವ ದಾಟಿ ಭಿನ್ನವಾದಂತೆ ಆಟದ ಪ್ರಕಾರಗಳು ತಲೆದೋರುತ್ತವೆ. ಈ ದೃಷ್ಟಿಯಿಂದ ಕನ್ನಡ ಬಯಲಾಟವನ್ನು ಪರಾಮರ್ಶಿಸಿದರೆ ಮುಖ್ಯವಾಗಿ ಎರಡು ಪ್ರಭೇದಗಳು ಒಡೆದು ಕಾಣುತ್ತವೆ. ೧. ದೊಡ್ಡಾಟ ೨. ಸಣ್ಣಾಟ”

“ಬಯಲಾಟ ವೀರ-ರೌದ್ರ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಿದರೆ ಸಾಲದು. ಮಿಕ್ಕ ರಸಗಳೂ ಅಲ್ಲಿ ಓತಪ್ರೋತವಾಗಿ ಹರಿಯಬೇಕು. ಶೃಂಗಾರ, ಭಕ್ತಿ, ಕರುಣ, ಹಾಸ್ಯ ಮುಂತಾದ ರಸಗಳಿಗೂ ಪ್ರಾಧಾನ್ಯ ತರುವ ಮಾಧ್ಯಮವೊಂದನ್ನು ಹುಡುಕಲು ಅವರು ಯತ್ನಿಸಿದರು. ಅವರ ಪ್ರಯತ್ನದ ಫಲವಾಗಿ ಸಣ್ಣಾಟ ಹುಟ್ಟಿಕೊಂಡಿತು.” – ಡಾ. ಎಂ. ಎಸ್‌. ಸುಂಕಾಪುರ.

ಇಲ್ಲಿ ಡಾ. ಹೆಂಡಿ, ಡಾ. ಸುಂಕಾಪುರ ಅವರ ಒಂದನೆಯ ಅಭಿಪ್ರಾಯಗಳು ದೊಡ್ಡಾಟ, ಸಣ್ಣಾಟಗಳಲ್ಲಿ ತೋರುವ ವೆಚ್ಚ ಪ್ರಮಾಣ ಮತ್ತು ಹಾಡಿನ ರೀತಿಗಳನ್ನು ಸೂಚಿಸುತ್ತಿವೆಯೇ ಹೊರತು ಸಣ್ಣಾಟ ಸೃಷ್ಟಿಯ ಮೂಲಭೂತ ಕಾರಣಗಳನ್ನು ಸೂಚಿಸುವುದಿಲ್ಲ. ಇದೇ ರೀತಿ ಎರಡನೆಯ ಹೇಳಿಕೆಗಳೂ ಸಣ್ಣಾಟ ಸೃಷ್ಟಿಯ ಕಾರಣಗಳಾಗಿರದೆ ಅದರ ಸ್ವರೂಪ ನಿರೂಪಣೆಗಳಾಗಿವೆ. ಏಕೆಂದರೆ ದೈವಭಕ್ತಿ, ನೀತಿಪರ, ಮನರಂಜನ, ಕರುಣರಸ, ಹಾಸ್ಯರಸಗಳು ಈ ಹಿಂದಿನ ದೊಡ್ಡಾಟದಲ್ಲಿಯೂ ಎಡೆಪಡೆದಿದ್ದವು. ಹೀಗಾಗಿ ಸಣ್ಣಾಟ ಸೃಷ್ಟಿಯ ಪ್ರಬಲ ಕಾರಣ ಯಾವುದೆಂಬ ಪ್ರಶ್ನೆ ಮತ್ತೂ ಉಳಿದುಕೊಳ್ಳುತ್ತದೆ. ಅದು ಮತ್ತಾವುದೂ ಆಗಿರದೆ ಪ್ರಾಚೀನ ಕನ್ನಡ ಶಿಷ್ಟಸಾಹಿತ್ಯದ ಬದಲಾವಣೆಗೂ ಕಾರಣವಾದ ವೀರಸಂವೇದನೆಗೆ ಪ್ರತಿಯಾಗಿ ತಲೆಯೆತ್ತಿದ ೧೨ನೆಯ ಶತಮಾನದ ಭಕ್ತಿಸಂವೇದನೆಯೇ ಆಗಿದೆ. ಅಂದರೆ ಕನ್ನಡಿಗರು ವೀರಕ್ಕೆ ಬದಲು ಭಕ್ತಿಯನ್ನು ಒಂದು ಮೌಲ್ಯವೆಂದು ಪರಿಗಣಿಸುತ್ತಲೇ ಶಿಷ್ಟ ಸಾಹಿತ್ಯದಲ್ಲಿ ಚಂಪೂ ಹಿಂದೆ ಸರಿದು, ವಚನ-ರಗಳೆ-ಷಟ್ಪದಿ ಪ್ರಕಾರಗಳು ಮುಂದೆ ಬಂದಂತೆ, ಜಾನಪದಸಾಹಿತ್ಯದಲ್ಲಿಯೂ ದೊಡ್ಡಾಟದ ಮಗ್ಗುಲಲ್ಲಿ ಸಣ್ಣಾಟ ಸೃಷ್ಟಿಯ ಸಂಕಲ್ಪ ಅಂದೇ ಅಂಕುರಿಸಿತೆಂದು ಹೇಳಬಹುದು. ಆದರೆ ಜಾನಪದದಲ್ಲಿ ಪರಿವರ್ತನೆ ಯಾವ ಕಾಲಕ್ಕೂ ತೀರ ನಿಧಾನ. ಹೀಗಾಗಿ ತಾವು ಭಾಕ್ತಿಕ ಬದುಕನ್ನು ಬಾಳುತ್ತಲಿದ್ದರೂ ಪರಂಪರಾಪ್ರಿಯರಾದ ಅವರು “ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ” ಎಂಬಂತೆ ಆ ಪೂರ್ವದ ವೀರರಸ ಪ್ರಧಾನವಾದ ಬಯಲಾಟವನ್ನೇ ಮುಂದುವರೆಸಿಕೊಂಡು ಬಂದರು. ಇದರಿಂದಾಗಿ ಜೀವನರಂಗ ಮತ್ತು ನಾಟಕರಂಗಗಳಲ್ಲಿ ಹೊಂದಿಕೆ ತಪ್ಪುತ್ತ ನಡೆದು, ಕೊನೆಗೆ ವೀರರಸಪ್ರಧಾನವಾದ ಬಯಲಾಟಗಳ ಜೊತೆಗೆ ಭಕ್ತಿಸಪ್ರಧಾನವಾದ ಬಯಲಾಟಗಳನ್ನೂ ಸೃಷ್ಟಿಸುವ ಹಂಬಲ ಹಣ್ಣಾಗಿರಬೇಕು. ಕನ್ನಡ ನಾಡಿನಲ್ಲಿ ವೀರಜೀವನವು ಹಾಗೂ ಹೀಗೂ ವಿಜಯನಗರದ ಹಣ್ಣಾಗಿರಬೇಕು. ಕನ್ನಡ ನಾಡಿನಲ್ಲಿ ವೀರಜೀವನವು ಹಾಗೂ ಹೀಗೂ ವಿಜಯನಗರದ ಕೊನೆಯವರೆಗೆ ಮುಂದುವರಿದ ಪ್ರಯುಕ್ತ ಈ ಹಂಬಲ ಸುಪ್ರವಾಗಿಯೇ ಪ್ರವಹಿಸಿತು. ೧೬ನೆಯ ಶತಮಾನದ ಸುಮಾರಿಗೆ ವಿಜಯನಗರ ಸಮ್ರಾಜ್ಯದ ಪತನದೊಂದಿಗೆ ಕನ್ನಡಿಗರ ಅಖಂಡ ವೀರಜೀವನ ತುಂಡುತುಂಡಾಗುವಲ್ಲಿ ಈ ಸುಪ್ತವಾದ ಭಕ್ತಿ ಜಾನಪದ ರಂಗಭೂಮಿಯನ್ನು ಪ್ರವೆಶಿಸಲು ಹವಣಿಸಿತು. ದಿನದಿಂದ ದಿನಕ್ಕೆ ಹವಣಿಕೆ ಒಂದು ಹದಕ್ಕೆ ಬಂದು, ೧೯ನೆಯ ಶತಮಾನದಲ್ಲಿ ಭಕ್ತಿರಸಪ್ರಧಾನವಾದ ಹೊಸಬಗೆಯ ಬಯಲಾಟ ಆವಿರ್ಭವಿಸಿತು. ಇದು ಎಲ್ಲಂದರಲ್ಲಿ ಮೊದಲಿನ ಬಯಲಾಟಕ್ಕಿಂತ ಸಣ್ಣದಾಗಿದ್ದುದರಿಂದ ‘ಸಣ್ಣಾಟ’ವೆಂದು ಕರೆದರು ಈ ಕಾರಣದಿಂದಾಗಿಯೇ ಮೊದಲಿನಿಂದಲೂ ಬಂದ ಬಯಲಾಟವನ್ನು ‘ದೊಡ್ಡಾಟ’ವೆಂದು ಕರೆದರು. ಆದುದರಿಂದ ದೊಡ್ಡಾಟ, ಸಣ್ಣಾಟಗಳೆಂಬ ಕನ್ನಡಿಗರ ವೀರಜೀವನವು ಭಕ್ತಿಜೀವನವಾಗಿ ತಿರುವುದು ಪಡೆದುದೇ ಕಾರಣವಾಗಿದೆ. ಸಣ್ಣಾಟಗಳೆಲ್ಲ ಸಾಮಾನ್ಯವಾಗಿ ಭಕ್ತರಾದ ಶರಣರ, ಸಂತರ ಕಥೆಗಳೇ ಆಗಿರುವುದನ್ನು ನಾವು ಇಲ್ಲಿ ನೆನೆಯಬೇಕು. ಒಟ್ಟಿನಲ್ಲಿ ದೊಡ್ಡಾಟ ವೀರಯುಗದ ಉತ್ಪತ್ತಿ, ಸಣ್ಣಾಟ ಭಕ್ತಿಯುಗದ ಉತ್ಪತ್ತಿ.

ಸಣ್ಣಾಟ ಪ್ರಕಾರದ ತವರುಮನೆ ಉತ್ತರಕರ್ನಾಟಕವೇ ಹೊರತು ಕರ್ನಾಟಕದ ಇತರ ಪ್ರದೇಶಗಳಲ್ಲ. ಇಂದಿಗೂ ಸಣ್ಣಾಟ ಒಂದು ಸಿದ್ಧಿಯನ್ನು ಮುಟ್ಟಿ ಹಲವು ಪ್ರಕಾರಗಳಲ್ಲಿ ಪ್ರಚಾರದಲ್ಲಿರುವುದು ಉತ್ತರ ಕರ್ನಾಟಕದಲ್ಲಿ ಮಾತ್ರ. ಇದಕ್ಕೆ ಕಾರಣಗಳು ಹಲವು ೧. ಶರಣರ ಶಿವಭಕ್ತಿಯ ಆಂದೋಲನ, ದಾಸರ ಹರಿಭಕ್ತಿಯ ಆಂದೋಲನಗಳ ಕಾರ್ಯಕ್ಷೇತ್ರ ಉತ್ತರ ಕರ್ನಾಟಕ. ಇಂಥ ಆಳವಾದ ಆಂದೋಲನಗಳು ಕರ್ನಾಟಕದ ಇತರ ಭಾಗಗಳಲ್ಲಿ ಘಟಿಸಲಿಲ್ಲ. ೨. ವಿಜಯನಗರ ಪತನದ ತರುವಾಯ ದಕ್ಷಿಣ ಪಶ್ಚಿಮ ಕರ್ನಾಟಕಗಳಲ್ಲಿ ಅಸ್ತಿತ್ವಕ್ಕೆ ಬಂದ ಮೈಸೂರು, ಕೆಳದಿ ಮೊದಲಾದ ಅರಸುಮನೆತನಗಳಿಂದಾಗಿ ಅಲ್ಲಿ ವೀರಕ್ಕೆ ಪ್ರಧಾನಸ್ಥಾನ ಲಭಿಸಿ, ಭಕ್ತಿ ಮತ್ತೂ  ಗೌಣಸ್ಥಾನ ಪಡೆಯಿತು. ಮೊದಲೇ ಶರಣರ ದಾಸರ ಭಕ್ತಿಯ ಆಂದೋಲನಗಳಿಂದ ಹದಗೊಂಡಿದ್ದ ಉತ್ತರ ಕರ್ನಾಟಕ ಮಾತ್ರ ವಿಜಯನಗರ ಪತನದ ತರುವಾಯ ಇದ್ದಷ್ಟೂ ವೀರಜೀವನಕ್ಕೆ ಎರವಾಗುವಲ್ಲಿ, ಭಕ್ತಿಗೆ ಇನ್ನೂ ಮುಕ್ತವಾಗಿ ಬೆಳೆಯುವ ಅವಕಾಶ ಅಲ್ಲಿ ಲಭಿಸಿತು. ೩. ಮುಸಲ್ಮಾನರ ಸಾಮಾಜಿಕ ದಬ್ಬಾಳಿಕೆಯಿಂದಾಗಿ ಇನ್ನೂ ಹತಾಶಗೊಂಡ ಪರಿಸ್ಥಿತಿಯಲ್ಲಿ, ನಿಜಗುಣರ ಅದ್ವೈತ ಅದಕ್ಕೆ ನೆಮ್ಮದಿಯ ನೆಲೆಯಾಗಿ ಬಂದಿತು. ಜೊತೆಗೆ ಸಿದ್ಧಾರೂಢ, ಶರೀಫಸಾಹೇಬ, ಗರಗದ ಮಡಿವಾಳಪ್ಪ ಮೊದಲಾಗದ ಅವಧೂತರ ಆಧ್ಯಾತ್ಮದ ಆಫೀಮು ಭಕ್ತಿಗೆ ಇನ್ನೂ ಬಣ್ಣ ತಂದಿತು.

ಈಗ ತಾವು ಬದುಕುವುದು ವೀರಕ್ಕಿಂತ ಮಿಗಿಲಾಗಿ ಭಕ್ತಿಮೌಲ್ಯವನ್ನು, ತಮ್ಮ ಮನಸ್ಸನ್ನು ಆಳುವವರು ರಾಜಮಹಾರಜರಿಗಿಂತ ಮಿಗಿಲಾಗಿ ಶರಣಸಂತರು. ಇದಕ್ಕನುಗುಣವಾಗಿ ಶಿಷ್ಟರು ಸಾಹಿತ್ಯದಲ್ಲಿ ವಚನ-ರಗಳೆ-ಷಟ್ಪದಿಗಳ ಮೂಲಕ ಅಪೂರ್ವ ಪರಿವರ್ತನೆಯನ್ನು ಅಸ್ತಿತ್ವಕ್ಕೆ ತಂದಿದ್ದರು. ಪಂಪನಲ್ಲಿ ವೀರಕಾವ್ಯವಾದ ಭಾರತವು ಕುಮಾರವ್ಯಾಸನಲ್ಲಿ ಭಕ್ತಿಕಾವ್ಯವಾಗಿ ಈ ಮೊದಲೇ ಹೊರಬಂದಿದ್ದಿತು. ಜಾನಪದ ಹಾಡುಗಳಲ್ಲಿ ಭಕ್ತಿಗೆ ಪ್ರವೇಶ ಲಭಿಸಿದ್ದಿತು. ಆದರೆ ಆ ಭಕ್ತಿ ಬಯಲಾಟದಲ್ಲಿ ಪ್ರವೇಶ ಪಡೆದಿರಲಿಲ್ಲ. ಆಗ ಭಕ್ತಿಯನ್ನು ಪ್ರತಿನಿಧಿಸುವ ಕಥಾಶೋಧ, ಪ್ರಕಾರಶೋಧ ನಡೆಸಿ, ‘ಸಣ್ಣಾಟ’ ಹೆಸರಿನಲ್ಲಿ ಜಾನಪದರು ಬಯಲಾಟ ಕೃತಿ ಮತ್ತು ಪ್ರದರ್ಶನ ಎರಡರಲ್ಲಿಯೂ ಹೊಸತನ್ನು ಸೃಷ್ಟಿಸಿದರು.

ಈ ಹಿನ್ನೆಲೆಯಲ್ಲಿ ಭಕ್ತಿಪ್ರಧಾನ, ಆಧ್ಯಾತ್ಮ ಪ್ರಧಾನವಾದ ನಿಜಗುಣ ಶಿವಯೋಗಿ, ತಿರುನೀಲಕಂಠ, ಅಲ್ಲಮಪ್ರಭು, ಹೇಮರಡ್ಡಿ ಮಲ್ಲಮ್ಮ, ಭಕ್ತ ಕಬೀರ, ಕನಕದಾಸ ಮೊದಲಾದ ಸಣ್ಣಾಟಗಳು ಒಂದೊಂದಾಗಿ ಹುಟ್ಟಿಕೊಂಡವು ಜೀವನರಂಗ ಮತ್ತು ನಾಟಕರಂಗಗಳಲ್ಲಿ ಹೊಂದಿಕೆಯನ್ನು ಕಲ್ಪಿಸಿದವು.

ಆಗ ವೀರರಸಕ್ಕೆ ಅನುಗುಣವಾಗಿ ಆಕಾರ ಪಡೆದಿದ್ದ. ಆಂಗಿಕವೆನಿಸುವ ಕುಣಿತಮಣಿತ,  ‘ವಾಚಿಕ’ವೆನಿಸುವ ಮಾತು-ಗೀತು, ‘ಆಹಾರ್ಯ’ವೆನಿಸುವ ವೇಷ-ಭೂಷಣ, ‘ಸಾತ್ವಿಕ’ವೆನಿಸುವ ಹಾವ-ಭಾವಗಳೆಂಬ ಅಭಿನಯದ ನಾಲ್ಕೂ ಘಟಕಗಳು ಈಗ ಭಕ್ತಿ ರಸಕ್ಕನುಗುಣವಾಗಿ ಆಕಾರ ಬದಲಿಸಬೇಕಾಯಿತು. ಅಂದರೆ ವೀರರಸಪ್ರಧಾನವಾದ ಆಟಗಳಲ್ಲಿ ಬಸವಣ್ಣ, ನಿಜಗುಣ ಶಿವಯೋಗಿ, ಕಬೀರ ಮೊದಲಾದವರಿಗೆ ಅಭಾಸವೆನಿಸತೊಡಗಿದವು. ಆದುದರಿಂದ ಈ ನಾಲ್ಕು ಘಟಕಗಳು ಆವೇಶದಿಂದ ಸೌಮ್ಯಕ್ಕೆ, ಆಡಂಬರದಿಂದ ಸಹಜಕ್ಕೆ ಇಳಿದವು. ಈಗ ದೊಡ್ಡದಾಗಿದ್ದ ಬಯಲಾಟದ ಎದುರು ಈ ಪ್ರಕಾರ ಎಲ್ಲಂದದಿಂದ ಸಣ್ಣದಾಗಿ ಕಂಡಿತು. ಇವೆರಡನ್ನು ಪ್ರತ್ಯೇಕಿಸುವ ದೃಷ್ಟಿಯಿಂದ ಹಳೆಯ ಬಯಲಾಟವನ್ನು ದೊಡ್ಡಾಟವೆಂದು, ಹೊಸ ಬಯಲಾಟವನ್ನು ಸಣ್ಣಾಟವೆಂದು ಕರೆದರು. ಹೀಗಾಗಿ ಜಾನಪದದಲ್ಲಿ ಆಟ-ಬಯಲಾಟ-ದೊಡ್ಡಾಟ ಎಂಬಿವು ಹಳೆಯ ದೃಶ್ಯ ಪ್ರಕಾರವೊಂದರ ನಾಮಾಂತರಗಳು, ಸಣ್ಣಾಟ ಮಾತ್ರ ರೂಪಾಂತರವೆಂದೇ ಹೇಳಬೇಕು.

ಹೀಗೆ ಭಕ್ತಿಪ್ರಜ್ಞೆಯು ಏಳುನೂರು ವರ್ಷ ತಡೆದು ‘ಸಣ್ಣಾಟ’ ಹೆಸರಿನಲ್ಲಿ ಜಾನಪದ ರಂಗಭೂಮಿಯನ್ನು ಏರುವಷ್ಟರಲ್ಲಿ ಅದೇ ಆಗ ಕರ್ನಾಟಕದಲ್ಲಿ ಜಾಗೃತವಾಗಿದ್ದ ಸಾಮಾಜಿಕ ಪ್ರಜ್ಞೆಯೂ ಬೆನ್ನು ಹಿಂದೆಯೇ ರಂಗಭೂಮಿಯನ್ನೇರಿತು. ಇದರಿಂದಾಗಿ ದೃಶ್ಯ ಕೃತಿರಚನಾ ಚಟುವಟಿಕೆಯು ಭಾಕ್ತಿಕ ಸಣ್ಣಾಟ, ಸಾಮಾಜಿಕ ನಾಟಕವೆಂದು ಇಬ್ಭಾಗಗೊಂಡು ವೀರರಸಪ್ರಧಾನವಾದ ದೊಡ್ಡಾಟದಷ್ಟು ಸಂಖ್ಯಾಪ್ರಮಾಣದಲ್ಲಿ ಭಕ್ತಿರಸಪ್ರಧಾನವಾದ ಸಣ್ಣಾಟಗಳು ಹುಟ್ಟಲಿಲ್ಲ. ಇಷ್ಟರಲ್ಲಿಯೇ ವೃತ್ತಿ, ನಾಟಕ, ಸಿನೆಮಾಗಳು ಕರ್ನಾಟಕವನ್ನು ಪ್ರವೇಶಿಸಿದ ಕಾರಣ ಸಣ್ಣಾಟದ ಸಂಖ್ಯೆಯ ಬೆಳವಣಿಗೆ ಇನ್ನೂ ಕುಂಠಿತಗೊಂಡಿತು. ಮೇಲಾಗಿ ಮೂಲತಃ ಇದು ಕರ್ನಾಟಕ ವ್ಯಾಪ್ತಿಯ ಕಲೆಯಾಗದೆ, ಉತ್ತರ ಕರ್ನಾಟಕದಲ್ಲಿ,ಅದರಲ್ಲಿಯೂ ಬೆಳಗಾವಿ, ಧಾರವಾಡ, ವಿಜಾಪೂರ ಜಿಲ್ಲೆಗಳ ತ್ರಿವೇಣಿ ಸಂಧಿಯ ಸೀಮಿತಕ್ಷೇತ್ರದಲ್ಲಿ ಹುಟ್ಟಿ ಮಡಗಟ್ಟಿದ್ದಿತು. ಇದೆಲ್ಲವನ್ನು ಲಕ್ಷಿಸಿದರೆ ‘ಸಣ್ಣಾಟ’ವು ಸಂಖ್ಯೆ, ಸಾರ್ವತ್ರಿಕತೆ ದೃಷ್ಟಿಯಿಂದಲೂ ದೊಡ್ಡಾಟದ ಎದುರು ಸಣ್ಣದೆಂದೇ ಸ್ಪಷ್ಟವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಇನ್ನೂ ಕೆಲವು ಅಂಶಗಳಿವೆ. ದೊಡ್ಡಾಟ ಪೌರಾಣಿಕ ವಸ್ತುವನ್ನಾಧರಿಸಿದರೆ ಸಣ್ಣಾಟ ಭಕ್ತಿನಿಷ್ಠ ಐತಿಹಾಸಿಕ ವಸ್ತುವನ್ನು, ಆಮೇಲೆ ಕ್ವಚಿತ್ತಾಗಿ ಶೃಂಗಾರನಿಷ್ಠ ಸಮಾಜಿಕ ವಸ್ತುವನ್ನು ಆಧರಿಸಿದೆ. ಹೀಗೆ ದೊಡ್ಡಾಟದ ಕವಚವನ್ನು ಇಳಿಸಿಕೊಂಡು ಸಾಮಾಜಿಕತೆಯತ್ತ ಹೆಜ್ಜೆ ಹಾಕಿದ ಇದು, ನಾಟಕಕ್ಕೆ ದಾರಿಮಾಡಿಕೊಟ್ಟ ಪ್ರಕಾರವಾಗಿದೆ. ಆದುದರಿಂದ ಸಣ್ಣಾಟವು ಕರ್ನಾಟಕದ ದೃಶ್ಯಕಲೆಯ ಇತಿಹಾಸದಲ್ಲಿ ದೊಡ್ಡಾಟ ಮತ್ತು ನಾಟಕಗಳ ಮಧ್ಯಸೇತುವೆಯೆನಿಸುತ್ತದೆ. ಇದರ ಇಂಥದೇ ಇನ್ನೊಂದು ಸಾಧನೆಯೆಂದರೆ, ದಾಸರು ಮೊದಲಾದ ಜಾನಪದ ವೃತ್ತಿಕಲಾವಿದರು ಪ್ರದರ್ಶಿಸುತ್ತಲಿದ್ದ ಬೀದಿ ರಂಗಭೂಮಿಗಳಿಗೆ ಉದ್ಧಾರಮಾರ್ಗ ತೋರಿದುದು. ಕೇವಲ ಭಿಕ್ಷಾವೃತ್ತಿಯಲ್ಲಿದ್ದ ಈ ವೃತ್ತಿ ರಂಗಭೂಮಿಗಳು ಸಣ್ಣಾಟದ ಮಾದರಿಯಲ್ಲಿ ಹಿಗ್ಗಿನಿಂತು, ಒಂದು ವ್ಯವಸ್ಥಿತ ಚೌಕಟ್ಟು ಪಡೆದು ಪ್ರಸಾರಗೊಂಡವು. ಈಗ ಆ ಕಲಾವಿದರ ಸ್ಥಿತಿಯೂ ಸುಧಾರಿಸಿ ಅವು ರಾಜಾನಾಟ –ರಾಧಾನಾಟ ಇತ್ಯಾದಿಯಾಗಿ ಸಣ್ಣಾಟದ ಮಟ್ಟದಲ್ಲಿ ಶೋಭಿಸಿದುವು.

ಸಣ್ಣಾಟ ಭಕ್ತಿ-ಶೃಂಗಾರರಸ ಪ್ರಧಾನವಾದ ಐತಿಹಾಸಿಕ ವಸ್ತುಗಳಿಗೆ ಒಪ್ಪುವ ಜಾನಪದಶಿಲ್ಪವಾಗಿದ್ದರೂ ಅದಕ್ಕೆ ‘ಐರಾವಣ-ಮೈರಾವಣ’, ‘ಇಂದ್ರಕೀಲ’ದಂತಹ ವೀರರಸಪ್ರಧಾನ ಪೌರಾಣಿಕ ಕಥೆಗಳನ್ನೂ ಕೆಲವೆಡೆ ಬಳಸಿಕೊಳ್ಳಲಾಗಿದೆ. ಹೀಗೆ ಮಾಡಿದರೆ ಆ ಕಥೆಗಳ ವ್ಯಕ್ತಿತ್ವಕ್ಕೆ, ವೈಭವಕ್ಕೆ ಧಕ್ಕೆಯುಂಟಾಗುವ ಕಾರಣ ಸಣ್ಣಾಟಕ್ಕೆ ಪೌರಾಣಿಕ, ಅದರಲ್ಲಿಯೂ ವೀರರಸಪ್ರಧಾನ ವಸ್ತುವನ್ನು ಆರಿಸಿಕೊಳ್ಳುವುದು ತೀರ ಅಭಾಸ, ಅಸಂಗತವೆಂದೇ ಹೇಳಬೇಕು.

ಒಟ್ಟಿನಲ್ಲಿ ಸೀಮಿತಪ್ರದೇಶ, ಅಲ್ಪ ಆಯುಷ್ಯ, ಪರಿಮಿತ ಕೃತಿಸಂಖ್ಯೆ, ಭಕ್ತಿಶೃಂಗಾರದಂಥ ಕೆಲವೇ ರಸ ನಿರೂಪಣೆ ಕಾರಣವಾಗಿ, ತನ್ನ ಎಲ್ಲ ಆಯಾಮಗಳನ್ನು ಬಿಚ್ಚಿಕೊಳ್ಳದೆ, ಹೆಸರಿಗೆ ತಕ್ಕಂತೆ ಇದು ಒಂದು ಸಣ್ಣ ಪ್ರಯೋಗಸ್ಥಿತಿಯಲ್ಲಿ ನಿಂತು ಬಿಟ್ಟಿತೇ ಹೊರತು, ದೊಡ್ಡಾಟದಂತೆ ಪರಿಣಿತ ಸಿದ್ಧಿಗೇರಲಿಲ್ಲ ಸಂಕೀರ್ಣವಾಗಿ ಬೆಳೆಯಲಿಲ್ಲ. ಹೀಗಿದ್ದೂ ಈ ವರ್ಗದ ಶ್ರೀಕೃಷ್ಣ ಪಾರಿಜಾತ ಮಾತ್ರ ‘ಸಣ್ಣಾಟಗಳ ರಾಜ’[1] ಎಂಬ ಬಿರುದು ಹೊತ್ತು, ತನ್ನ ಸಾಮರ್ಥ್ಯದ ಎಲ್ಲ ಸಾಧ್ಯತೆಗಳನ್ನು ಪ್ರಕಟಿಸಿತು.

[1] ಶ್ರೀಕೃಷ್ಣ ಪಾರಿಜಾತ ನಿಜ ಅರ್ಥದಲ್ಲಿ ಸಣ್ಣಾಟವೆನಿಸದಿದ್ದರೂ ಈ ಬಿರುದನ್ನು ಇಲ್ಲಿ ಸ್ಥೂಲವಾಗಿ ಗ್ರಹಿಸಲಾಗಿದೆ.