ಜನಪದ ಗೀತಸಾಹಿತ್ಯವು ಕಥನಾತ್ಮಕ ಹಾಗೂ ಭಾವಗೀತಾತ್ಮಕವಾದುದು. “ಕಥನಾತ್ಮಕ ಗೀತೆಗಳನ್ನೆಲ್ಲ ಲಾವಣಿಗಳೆಂದು ಕರೆಯಬಹುದು” ಎಂದು ಡಾ. ಜೀ. ಶಂ. ಪ. ಅವರು ತಮ್ಮ “ಜನಪದ ಕಾವ್ಯಕಥೆಗಳು” ಕೃತಿಯ ಪ್ರಸ್ತಾವಣೆಯಲ್ಲಿ ಹೇಳಿ

೧. ಕರಪಾಲದವರ ಕಥೆಗಳು

೨. ಕಂಸಾಳೆ ಕಥೆಗಳು-ಗುಡ್ಡರ ಕಥೆಗಳು

೩. ಮಂಟೇಸ್ವಾಮಿ ಕಥೆಗಳು-ನೀಲಗಾರರ ಕಥೆಗಳು

೪. ಜುಂಜಪ್ಪನ ಕಥೆಗಳು

೫. ಹೆಂಗಸರ ಹಾಡ್ಗತೆಗಳು

ಎಂಬ ಶೀರ್ಷಿಕೆಯಲ್ಲಿ ಅನೇಕ ಕಥನಗೀತಗಳಿಂದ ಗದ್ಯಕಥೆಗಳನ್ನು ಬಿಡಿಸಿದ್ದಾರೆ.

ಇಲ್ಲಿ ವಿವೇಚಿಸಬೇಕಾದುದು ಈ ಮೇಲ್ಕಂಡ ವರ್ಗದ ಜನರ ಹಾಡುಗಳನ್ನೆಲ್ಲ ‘ಲಾವಣಿ’ ಎಂದು ಕರೆಯಬಹುದೇ? ಎಂಬುದು. ಶ್ರೀಯುತರು “Ballad ಎಂಬ ಮಾತಿಗೆ ಸಂವಾದಿಯಾಗಿ ಈಗಾಗಲೇ ಕನ್ನಡದಲ್ಲಿ ಬಳಕೆಗೆ ಬಂದಿರುವ ‘ಲಾವಣಿ’ ಎಂಬ ಮಾತನ್ನೇ ಕಂಠಸ್ಥ ಸಂಪ್ರದಾಯದ ಎಲ್ಲ ಹಾಡಿನ ರೂಪದ ಕಥೆಗಳಿಗೂ ಅನ್ವಯಿಸಬಹುದಾಗಿದೆ. ಲಾವಣಿಯಲ್ಲಿ ಭಾಔಗೀತಾತ್ಮಕ ರಚನೆಗಳು ಅಲ್ಪಸ್ವಲ್ಪ ಕಂಡುಬಂದರೂ ಕಥಾಸಾಹಿತ್ಯಕ್ಕೇ ಹೆಚ್ಚಾಗಿ ಜಾನಪದ ಪರಂಪರೆಯಲ್ಲಿ ಈ ಮಾತು ಪ್ರಯೋಗವಾಗುತ್ತಾ ಬಂದಿದೆ. ‘ಪಿರಿಯಪಟ್ಟಣದ ಲಾವಣಿ’, ‘ಸರ್ವಪ್ಪ ನಾಯಕನ ಲಾವಣಿ’ ಮುಂತಾದವುಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು” – ಎಂಬ ವಿವರಣೆಯನ್ನೇನೋ ಕೊಟ್ಟು ಕಥಾತ್ಮಕಗೀತೆಗಳನ್ನೆಲ್ಲ ‘ಲಾವಣಿ’ ಎಂದು ಕರೆಯಬಹುದು ಎಂದು ನಂಬಿಸುತ್ತಾರೆ. ಆದರೆ ಉತ್ತರ ಕರ್ನಾಟಕದ ಜನಪದ ಪದ್ಯಸಾಹಿತ್ಯದಲ್ಲಿ ಲಾವಣಿ ಬಹುಕಾಲದಿಂದಲೂ ಒಂದು ಸ್ವತಂತ್ರ ಪ್ರಕಾರವಾಗಿ, ಶ್ರೀಮಂತವಾಗಿ ತನ್ನದೇ ಆದ ಕೆಲವು ಲಕ್ಷಣಗಳನ್ನು ಕಟ್ಟಿಕೊಂಡು ಬೆಳೆದುಬಂದಿದೆ. ಅವು ಹೀಗಿವೆ.

೧. ಲಾವಣಿಗಳಲ್ಲಿ ಎರಡು ಪ್ರಕಾರ: ಒಂದು ಬಯಲು ಲಾವಣಿ, ಇನ್ನೊಂದು ಮೇಳ ಲಾವಣಿ.

೨. ಬಯಲು ಲಾವಣಿಗಳನ್ನು ಕಾಲಲ್ಲಿ ಗೆಜ್ಜೆಕಟ್ಟಿಕೊಂಡು, ಬರಿಗೈಯಿಂದ ಚಿಟಕಿ ನುಡಿಸುತ್ತ ಭಾವಭಂಗಿಯಿಂದ ಒಬ್ಬನೇ ಹಾಡುತ್ತಾನೆ. ಮೇಳ ಲಾವಣಿಯಲ್ಲಿ ಮುಮ್ಮೇಳದಲ್ಲಿ ಒಬ್ಬ, ಹಿಮ್ಮೇಳದಲ್ಲಿ ಕನಿಷ್ಠ ಪಕ್ಷ ಇಬ್ಬರು ಇದ್ದು ದಪ್ಪ, ತುಂತುಣಿ, ತಾಳ ಮೊದಲಾದ ವಾದ್ಯಗಳನ್ನು ಬಳಸುತ್ತಾರೆ.

೩. ಮೇಳಲಾವಣಿಗಳಲ್ಲಿ ಕೆಲವೊಮ್ಮೆ ಎರಡು ಪಕ್ಷಗಳು ಸ್ಪರ್ಧೆಗೆ ನಿಲ್ಲುತ್ತವೆ. ಸ್ತ್ರೀಪರವಾದ ಪಕ್ಷ ನಾಗೇಶಿ (ಕಲ್ಗಿ), ಪುರುಷಪರವಾದ ಪಕ್ಷ ಹರದೇಶಿ (ತುರಾಯಿ).

೪. ನಾಗೇಶಿ ಪಕ್ಷದವರು ಸರಸ್ವತಿ ಸ್ತುತಿಯಿಂದ, ಹರದೇಶಿ ಪಕ್ಷದವರು ಗಣಪತಿ ಸ್ತುತಿಯಿಂದ ಲಾವಣಿ ಪ್ರಾರಂಭಿಸುವರು.

೫. ಆರಂಭದ ಹಾಡು ‘ಸಖಿ’, ಕೊನೆಯ ಹಾಡು ‘ಖ್ಯಾಲಿ’ ಎನಿಸಿಕೊಳ್ಳುತ್ತದೆ. ಮಧ್ಯದ ಹಾಡುಗಳೇ ಲಾವಣಿಗಳು. “ಒಂದು ಲಾವಣಿಯಲ್ಲಿ ಮೂರೋ ನಾಲ್ಕೋ ಅಥವಾ ಹೆಚ್ಚೋ ಚೌಕಗಳಿರುತ್ತವೆ. ಚೌಕದಲ್ಲಿ ಕೆಲವು ಏರು ನುಡಿಗಳು, ಆಮೇಲೆ ಕೆಲವು ಇಳಿವು ನುಡಿಗಳು. ಮುಗಿದ ಬಳಿಕ ಬರುವ ಏರು ನುಡಿಗಳಿಗೆ ಹೊಂದಿ ಪಲ್ಲವಿ ಬರುವುದು… ಲಾವಣಿಯ ಕೊನೆಯಲ್ಲಿ ಕವಿಯ ಹೆಸರು, ಊರು, ಉಪಾಸ್ಯದೇವತೆಯ ಹೆಸರು ಕಾಣಸಿಗುವುದು.”

ಹೀಗೆ ವಿಶಿಷ್ಟ ಲಕ್ಷಣ ಕಟ್ಟಿಕೊಂಡು ಪ್ರಾಚೀನ ಕಾಲದಿಂದಲೂ ಬೆಳೆದುಬಂದ ಪ್ರಕಾರವೊಂದರ ಹೆಸರನ್ನು ಜೀಶಂಪ ಅವರು ಬೇರೆ ಬೇರೆ ಲಕ್ಷಣಗಳುಳ್ಳ ಎಲ್ಲ ಪ್ರಕಾರದ ಕಥನಾತ್ಮಕಗೀತಗಳಿಗೆ ಆರೋಪಿಸುವುದರಿಂದ ಹೊಸ ಗೊಂದಲವನ್ನು ಹುಟ್ಟಿಸಿದಂತಾಗುತ್ತದೆ. ಇದರಿಂದ ಉತ್ತರ ಕರ್ನಾಟಕದ ಲಾವಣಿ ಪ್ರಕಾರದ ‘ವ್ಯಾಖ್ಯ’ಯನ್ನು ಸಡಿಲಾಗಿ ಪ್ರಯೋಗಿಸಿದ ದೋಷ ಬರುತ್ತದೆ.

ಎರಡನೆಯದಾಗಿ ಉತ್ತರ ಕರ್ನಾಟಕದಲ್ಲಿ ಕಂಬಿಯ ಹಾಡಿನ ಪೂಜ್ಯರಾದ ಜಂಗಮರು, ಡೊಳ್ಳಿನ ಹಾಡಿ ಕುರುಬರು, ಗೊಂದಲ ಹಾಡಿನ ಗೊಂದಲಿಗರು, ಎಲ್ಲಮ್ಮನ ಹಾಡಿನ ಚೌಡಕಿಯವರು, ಕರ್ಬಲ ಹಾಡಿನ ಮುಸಲ್ಮಾನರು, ಗೌರಿ-ಸೀಗಿ ಹಾಡಿನ ಗೌರವಸ್ಥ ಹೆಣ್ಣುಮಕ್ಕಳು ಹೇಳುವ ಕಥಾತ್ಮಕ ಹಾಡುಗಳನ್ನು ಲಾವಣಿಗಳೆಂದೂ, ಹೇಳುವವರನ್ನು ಲಾವಣಿಕಾರರೆಂದೂ ಕರೆದರೆ ತಮಗೆ ಅಪಮಾನವೆಂದು ಅವರು ಭಾವಿಸುತ್ತಾರೆ.

ಜನಪದ ಸಾಹಿತ್ಯವನ್ನು ವೈಜ್ಞಾನಿಕವಾಗಿ  ವರ್ಗೀಕರಿಸಬೇಕಾದ, ಹೆಸರಿಸಬೇಕಾದ ಈ ಕಾಲದಲ್ಲಿ ಶ್ರೀ ಜೀ. ಶಂ. ಪ. ಅವರು ಹೊಸ ಪ್ರಯೋಗದಿಂದ ಮುಂದಿನ ಸಂಶೋಧಕರಿಗೆ ತಿಳಿದೂ ತಿಳಿದೂ ಹೊಸದೊಂದು ತೊಡಕನ್ನು ಸೃಷ್ಟಿಸಿದಂತಾಗಿದೆ. ಏನೆಲ್ಲದಕ್ಕೂ ಇಂಗ್ಲಿಷಿನ ಬೆನ್ನು ಹತ್ತಿ ಅಲ್ಲಿರುವ ಪ್ರಕಾರಗಳಿಗೆ, ಹೆಸರುಗಳಿಗೆ ನಮ್ಮಲ್ಲಿಯ ಪ್ರಕಾರಗಳನ್ನು, ಹೆಸರುಗಳನ್ನು ಹೊಂದಿಸಿ ನೋಡುವ ಜುಲುಮೆಯ ಪ್ರಯತ್ನವನ್ನು ಬಿಟ್ಟುಕೊಟ್ಟು, ನಮ್ಮ ಜನಪದಸಾಹಿತ್ಯವನ್ನು ನಮ್ಮ ಪರಂಪರೆಯಲ್ಲಿ ನೋಡುವುದು ಲೇಸು. ಒಂದುವೇಳೆ ಇಂಗ್ಲಿಷ್‌Balladಗಳಿಗೆ ಸಮಾನವಾಗಿ ನಮ್ಮಲ್ಲಿರುವ ಹಾಡುಗಳಿಗೆ ಕನ್ನಡ ಹೆಸರು ಕೊಡುವುದಿದ್ದರೆ, ಜಾನಪದ ವಿಶಿಷ್ಟಪ್ರಕಾರಕ್ಕೆ ಸೀಮಿತವಾಗಿರುವ ‘ಲಾವಣಿ’ ಎಂಬ ಪದವನ್ನು ಬಿಟ್ಟು ಅವರು ಬೇರೊಂದು ಪದವನ್ನು ಸೃಷ್ಟಿಸಲಿ.