ಸಮೂಹದಿಂದ ಒಬ್ಬ ವ್ಯಕ್ತಿಯನ್ನು ಸರಿಯಾಗಿ ಪ್ರತ್ಯೇಕಿಸಿ ಕೊಡಲು ಹೆಸರು ಅಸಮರ್ಥವಾದಲ್ಲಿ ತಂದೆಯ ಹೆಸರನ್ನು, ಅದೂ ಅಸಮರ್ಥವಾದಲ್ಲಿ ಹೆಚ್ಚಿನದಾಗಿ ಇನ್ನೊಂದು ಹೆಸರನ್ನು ಸೇರಿಸುವುದು ಚಲಾವಣೆಯಲ್ಲಿ ಬಂದಿರಬೇಕು. ಆದುದರಿಂದ ಒಬ್ಬನನ್ನು ಗುರುತಿಸುವಲ್ಲಿ ಬಳಸುವ ವ್ಯಕ್ತಿನಾಮ, ಪಿತೃನಾಮಗಳಲ್ಲದ ಆ ಮೂರನೆಯ ಹೆಸರೇ ‘ಅಡ್ಡಹಸರು’ ಎಂದು ವ್ಯಾಖ್ಯಾನಿಸಬಹುದು. ಪ್ರತ್ಯೇಕಿಸಿ ಕೊಡುವುದೇ ಆ ಮೂರನೆಯ ಹೆಸರಿನ ಮುಖ್ಯ ಉದ್ದೇಶವಾಗಿದ್ದರೂ ಅದು ಆ ವ್ಯಕ್ತಿಯ, ಆತನ ಪೂರ್ವಜರ ನೆಲೆ, ಜೀವನವಿಧಾನ, ಸಂಸ್ಕೃತಿ ಪರಂಪರೆಗಳನ್ನು ಪ್ರತಿನಿಧಿಸುತ್ತದೆ.

‘ಅಡ್ಡಹೆಸರು’ ಎಂಬ ಪದ ‘ನೇರವಲ್ಲದ ಹೆಸರು’ ಎಂಬ ಅರ್ಥದಲ್ಲಿ ಬಂದಿರಬಹುದು. ಇಲ್ಲವೆ ಅರ್ಥ ಹೆಸರು>ಅಡ್ಡಹೆಸರು ಆಗಿರಬಹುದು. ತಮಿಳುನಾಡಿನಲ್ಲಿ ಈ ಮೂರನೆಯ ಹೆಸರಿನ ಬಳಕೆ ಇಲ್ಲವೆನ್ನುವಷ್ಟು ಕಡಿಮೆ. ಅಡ್ಡಹೆಸರು ಎಂಬುದರ ಸಮಾನ ಅರ್ಥದ ಪದವು ಆ ಕೋಶದಲ್ಲಿಲ್ಲ. ಮರಾಠಿಯ ಅಡನಾವ್‌, ಕನ್ನಡದ “ಅಡ್ಡಹೆಸರು”ಗಳಲ್ಲಿಯ ಧ್ವನಿಸಾಮ್ಯ, ರೂಢಿಸಾಮ್ಯಗಳು ನಮ್ಮ ಗಮನ ಸೆಳೆದರೂ, ಯಾವುದರಿಂದ ಯಾವುದು ಪ್ರಭಾವಿತವಾಯಿತು, ಹೇಳುವುದು ಕಷ್ಟ.

ಅಡ್ಡಹೆಸರುಗಳು ಗ್ರಾಮ, ಕುಟುಂಬ, ವಂಶ, ವೃತ್ತಿ, ಜಾತಿಗಳನ್ನು ಪ್ರತಿನಿಧಿಸುತ್ತಿದ್ದು ಸಾಮಾನ್ಯವಾಗಿ ಇವು ಆಯಾ ಕುಟುಂಬ, ವಂಶ, ವೃತ್ತಿ, ಜಾತಿಗಳ ಎಲ್ಲ ಸದಸ್ಯರನ್ನು ಮಾನಸಿಕವಾಗಿ ಬೆಸೆಯುತ್ತವೆ. ಸಾಂಘಿಕ ನಿಷ್ಠೆಯನ್ನು ಪ್ರೇರೇಪಿಸುತ್ತವೆ. ವ್ಯಕ್ತಿ ಸಂಬಂಧವನ್ನು ದೃಢಪಡಿಸುತ್ತವೆ. ಪ್ರಾಚೀನ ಕರ್ನಾಟಕದಲ್ಲಿ ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಇತ್ಯಾದಿ ಅರಸುಮನೆತನಗಳ ಹೆಸರುಗಳೆಲ್ಲ ಈ ಬಗೆಯವು. ಜೊತೆಗೆ ನಾವಿದ ಧೋರ (೧೦೮೭), ತೆಲ್ಲಿಗರ ಜಕ್ಕಿಯವ್ವೆ (೧೦೯೧),ಧನಗರ ಕಂಚಿಕವ್ವೆ (೯೮೦), ಹುರ್ವಿನ ಗೋವರ್ಧನ (೧೧೬೧), ಆನೆಯ ಕೇಶಿರಾಜ (೧೧೪೭), ಸೀರೆಯ ಕಾಳಿಸೆಟ್ಟಿ (೧೧೧೫) ಇತ್ಯಾದಿ ಅಡ್ಡಹೆಸರುಗಳು ಶಾಸನಗಳಲ್ಲಿ ಸಾಮಾನ್ಯರ ವಿಷಯದಲ್ಲಿಯೂ ಕ್ವಚಿತ್ತಾಗಿ ತೋರಿ ಬರುವುದು, ಈ ರೂಢಿಯ ಪ್ರಾಚೀನತೆಯನ್ನು ಸೂಚಿಸುತ್ತದೆ.

ಇಂದು ಕರ್ನಾಟಕದ ತುಂಬ, ಹೆಸರಿನೊಂದಿಗೆ ಅಡ್ಡಹೆಸರನ್ನು  ಬಳಸಲಾಗುತ್ತಿದ್ದು, ಅವುಗಳನ್ನು ೧. ಬಳಕೆಯ ವಿಧಾನ, ೨. ಸ್ವರೂಪ, ೩. ಇತರ ಸಂಗತಿ ಎಂಬ ಮೂರು ವರ್ಗಗಳಲ್ಲಿ ವಿವೇಚಿಸಬಹುದು.

. ಬಳಕೆಯ ವಿಧಾನ

ಅಡ್ಡಹೆಸರುಗಳು ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಭಿನ್ನವಿನ್ಯಾಸದಲ್ಲಿ ಬಳಕೆಯಾಗುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಉತ್ತರದ ಆರ್‌. ಸಿ. ಹಿರೇಮಠ ದಕ್ಷಿಣದಲ್ಲಿದ್ದರೆ ಹೆಚ್‌. ಸಿ. ರುದ್ರಯ್ಯ ಇಲ್ಲವೆ ಎಚ್‌. ರುದ್ರಯ್ಯ ಆಗುತ್ತಿದ್ದರು. ದಕ್ಷಿಣದ ಜಿ. ಎಸ್‌. ಶಿವರುದ್ರಪ್ಪ ಉತ್ತರದಲ್ಲಿದ್ದರೆ ಎಸ್‌. ಎಸ್‌. ಗುಗ್ಗರಿ ಇಲ್ಲವೆ ಶಿವರುದ್ರಪ್ಪ ಗುಗ್ಗರಿ ಆಗುತ್ತಿದ್ದರು. ಇದನ್ನು ಅನುಲಕ್ಷಿಸಿ ಅಡ್ಡಹೆಸರಿನ ಬಳಕೆಯ ವಿಧಾನವನ್ನು

೧. ಅಡ್ಡಹೆಸರು –ಹೆಸರು ಅಪ್ರಧಾನ ಪದ್ಧತಿ.

೨. ಅಡ್ಡಹೆಸರು ಅಪ್ರಧಾನ-ಹೆಸರು  ಪ್ರಧಾನ ಪದ್ಧತಿ

೩. ಅಡ್ಡಹೆಸರು ಪ್ರಧಾನ-ಹೆಸರು ಪ್ರಧಾನ ಪದ್ಧತಿ

ಎಂದು ೩ ರೀತಿಯಲ್ಲಿ ವಿಂಗಡಿಸಿ ಹೇಳಬಹುದು. ಉತ್ತರ ಕರ್ನಾಟಕದಲ್ಲಿ ಅಡ್ಡಹೆಸರು ಪ್ರಧಾನ, ಹೆಸರು ಅಪ್ರಧಾನ. ಉದಾ. ಫ. ಗು. ಹಳಕಟ್ಟಿ. ದಕ್ಷಿಣ ಕರ್ನಾಟಕದಲ್ಲಿ ಅಡ್ಡಹೆಸರು ಅಪ್ರಧಾನ, ಹೆಸರು ಪ್ರಧಾನ. ಉದಾ. ತೀ. ನಂ. ಶ್ರೀಕಂಠಯ್ಯ. ಇಂಗ್ಲಿಷ್‌ಪ್ರಭಾವದಿಂದ ಇವು ಪಿ. ಜಿ. ಹಳಕಟ್ಟಿ, ಟಿ. ಎನ್‌. ‌ಶ್ರೀಕಂಠಯ್ಯ ಎಂದೂ ಬಳಕೆಯಾಗುತ್ತವೆ. ಇಲ್ಲಿ ಒಂದುಕಡೆ ಅಡ್ಡಹೆಸರು ಪ್ರಧಾನವಾಗಿ ವ್ಯಕ್ತಿನಾಮದ ಕೊನೆಗೆ ಬಂದರೆ ಇನ್ನೊಂದು ಕಡೆ ಅಪ್ರಧಾನವಾಗಿ ವ್ಯಕ್ತಿನಾಮಕ್ಕೆ ಮೊದಲು ಬರುತ್ತದೆ. ಹೀಗಿದ್ದೂ ಈ ನಾಡಿನಲ್ಲಿ ಮೊದಮೊದಲು ವ್ಯಕ್ತಿನಾಮ ಹಿಡಿದು ಕರೆಯುವುದೇ ಪ್ರಧಾನವಾಗಿದ್ದಿತೆಂದು ತೋರುತ್ತದೆ. ಉದಾ. ಶಿವಲಿಂಗಪ್ಪ ಬಸವನಾಳ, ನಿಜಲಿಂಗಪ್ಪ ಸಿದ್ಧವನಹಳ್ಳಿ. ಈಗಲೂ ಹಳ್ಳಿಯಲ್ಲಿ ವ್ಯಕ್ತಿಯನ್ನು ಹೆಸರು ಹಿಡಿದೇ ಕರೆಯುವುದು, ಮಾತನಾಡುವುದು ಈ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ವ್ಯವಹರಿಸುವಾಗ ಮಾತ್ರ ಇಂದು ಉತ್ತರ ಕರ್ನಾಟಕದಲ್ಲಿ ‘ನಿಜಲಿಂಗಪ್ಪ’ ಎಂಬಂತೆ ಹೆಸರನ್ನು ಬಳಸುವುದು ಇಂದಿನ ರೂಢಿ.

ಹೆಸರು, ಅಡ್ಡಹೆಸರುಗಳನ್ನೂ ‘ಪ್ರಧಾನವಾಗಿ ಬಳಸುವುದು ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಹೆಚ್ಚು. ಉದಾ. ಲೀಲಾವತಿ ಮಾಗಡಿ, ಸರೋಜಿನಿ ಮಹಿಷಿ. ಇದಕ್ಕೆ ಕಾರಣ ತಾನು ಸ್ತ್ರೀಯೆಂಬುದನ್ನು ಹೆಸರಿನ ಮೂಲಕ ಸ್ಪಷ್ಟಪಡಿಸುವುದು ಮತ್ತು ಸ್ತ್ರೀನಾಮಗಳು ಸುಂದರವಾಗಿರುವುದು. ಇತ್ತೀಚೆಗೆ ಪುರುಷರಲ್ಲಿಯೂ ಈ ಪ್ರವೃತ್ತಿ ತೋರಿಬರುತ್ತದೆ. ಉದಾ. ಪಾಟೀಲ ಪುಟ್ಟಪ್ಪ, ಕಡಿದಾಳ ಮಂಜಪ್ಪ.

. ಸ್ವರೂಪ

ಈಗ ಪ್ರಚಲಿತವಿರುವ ಅಡ್ಡಹೆಸರುಗಳನ್ನು ಸ್ವರೂಪ ದೃಷ್ಟಿಯಿಂದ

೧. ಗ್ರಾಮನಾಮಸೂಚಿ:- ಮಾಳವಾಡ (ಎಸ್‌.ಎಸ್‌.) (ಕುಪ್ಪಳ್ಳಿ ಪುಟ್ಟಪ್ಪ)

೨. ವೃತ್ತಿನಾಮಸೂಚಿ, – ಕುಂದಣಗಾರ (ಕೆ. ಜಿ.), ಪುರೋಹಿತ (ತಿ. ನ.)

೩. ವಸ್ತುನಾಮಸೂಚಿ, – ಕಂಬಳಿ (ಸಿದ್ದಪ್ಪ), ಎಲಿ (ಮಲ್ಲಪ್ಪಶೆಟ್ಟರು)

೪. ಇತರ ನಾಮಸೂಚಿ, -ರಡ್ಡಿ, ಬಂದಮ್ಮನವರ, ಪಂಡಿತ

ಎಂದು ವರ್ಗೀಕರಿಸಿ ಕೆಳಗಿನಂತೆ ವಿವೇಚಿಸಬಹುದು.

ಗ್ರಾಮನಾಸೂಚಿ: ಅಡ್ಡಹೆಸರುಗಳಲ್ಲಿ ಇದು ಪ್ರಧಾನವರ್ಗ. ಮಂಡಗೆಯ ಮಾದಿರಾಜ, ಮಾರುಡಿಗೆ ನಾಚಯ್ಯ, ಹಾವಿನಹಾಳ ಕಲ್ಲಯ್ಯ ಇತ್ಯಾದಿ ಉದಾಹರಣೆಗಳಲ್ಲಿಯೂ ಗ್ರಾಮಸೂಚನೆ ಕಂಡುಬರುವುದರಿಂದ ಗ್ರಾಮನಾಮಗಳನ್ನು ಅಡ್ಡಹೆಸರುಗಳಾಗಿ ಬಳಸುವ ಪದ್ಧತಿ ತಕ್ಕಮಟ್ಟಿಗೆ ಪ್ರಾಚೀನವೆಂದೇ ಹೇಳಬೇಕು. ಇಂದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಲ್ಲಿ ವ್ಯಕ್ತಿನಾಮದೊಂದಿಗೆ ಗ್ರಾಮನಾಮಗಳು ಅಡ್ಡಹೆಸರಿನಂತೆ ಬಳಕೆಯಾಗುತ್ತಿದ್ದರೂ ಅವುಗಳ ಸ್ವರೂಪ ಮತ್ತು ಬಳಕೆಯಾಗುವ ರೀತಿ ಬೇರೆ ಬೇರೆಯಾಗಿವೆ.

ಉತ್ತರ ಕರ್ನಾಟಕದ ಎಸ್‌. ಎಸ್‌. ಮಾಳವಾಡ ಹೆಸರಿನ ಮೂಲರೂಪ ಸಂಗಪ್ಪ, ಸಂಗನಬಸಪ್ಪ, ಮಾಳವಾಡ ದಕ್ಷಿಣ ಕರ್ನಾಟಕದ ಕೆ. ವಿ. ಪುಟ್ಟಪ್ಪ ಹೆಸರಿನ ಮೂಲರೂಪ ಕುಪ್ಪಳ್ಳಿ ವೆಂಕಟಪ್ಪ(ನವರ ಮಗ) ಪುಟ್ಟಪ್ಪ. ೧. ‘ಮಾಳವಾಡ’ ಪೂರ್ವಜರು ವಾಸವಾಗಿದ್ದ ಊರನ್ನು ಸೂಚಿಸಿದರೆ, ಕುಪ್ಪಳ್ಳಿ ಸಧ್ಯ ವಾಸವಾಗಿರುವ ಊರನ್ನು ಸೂಚಿಸುತ್ತದೆ. ಇದು ಉತ್ತರದವರು ಪ್ರಾಚೀನತೆಪ್ರಿಯರು, ದಕ್ಷಿಣದವರು ವರ್ತಮಾನ ನಿಷ್ಠರು ಎಂಬುದರ ಸೂಚನೆಯಾಗಿದೆ. ೨. ಉತ್ತರದಲ್ಲಿ ಗ್ರಾಮನಾಮ ಪ್ರಧಾನವಾಗಿ ನಿಂತು, ವ್ಯಕ್ತಿನಾಮ-ಪಿತೃನಾಮ ಸಂಕ್ಷೇಪಗೊಂಡರೆ, ದಕ್ಷಿಣದಲ್ಲಿ ವ್ಯಕ್ತಿನಾಮ ಪ್ರಧಾನವಾಗಿ ನಿಂತು, ಗ್ರಾಮನಾಮ-ಪಿತೃನಾಮಗಳು ಸಂಕ್ಷೇಪಗೊಳ್ಳುತ್ತವೆ. ಇದು ಉತ್ತರದವರ ದೃಷ್ಟಿಯಲ್ಲಿ ಕುಟುಂಬ ಪ್ರಧಾನ, ವ್ಯಕ್ತಿ ಅಪ್ರಧಾನವಾಗಿದ್ದರೆ, ದಕ್ಷಿಣದವರ ದೃಷ್ಟಿಯಲ್ಲಿ ವ್ಯಕ್ತಿಪ್ರಧಾನ, ‘ಕುಟುಂಬ ಅಪ್ರಧಾನ’ವೆಂಬುದನ್ನು ಸೂಚಿಸುತ್ತದೆ. ಈ ಎರಡೂ ಗುಣಗಳು (೧. ಪ್ರಾಚೀನಪ್ರಿಯತೆ, ಕುಟುಂಬ ಪ್ರಧಾನತೆ, ೨. ವರ್ತಮಾನ ನಿಷ್ಠತೆ, ವ್ಯಕ್ತಿ  ಪ್ರಧಾನತೆ) ಉತ್ತರದವರು ಹೆಚ್ಚು ಜಾನಪದೀಯರು, ದಕ್ಷಿಣನದರು ಹೆಚ್ಚು ಶಿಷ್ಟಪದೀಯರೆಂಬುದನ್ನು ತಿಳಿಸುವ ಅಂಶಗಳಾಗಿವೆ. ಪ್ರಾಚೀನ ಅರಸರಲ್ಲಿ ಗಂಗರು ‘ಕುವಳಾಲ ಪುರವರಾಧೀಶ್ವರ’, ರಾಷ್ಟ್ರಕೂಟರು ‘ಲತ್ತಲೂರ ಪುರವರಾಧೀಶ್ವರ’, ಶಿಲಾಹಾರರು ‘ತಗರಪುರವರಾಧೀಶ್ವರ’ ಎಂದು ತಮ್ಮ ಪೂರ್ವಜರ ಊರ ಹೆಸರನ್ನು ಬಳಸುವ ವಿಧಾನವು, ತಮ್ಮ ಪೂರ್ವಜರ ಊರನ್ನು ಅಡ್ಡಹೆಸರಿನಂತೆ ಬಳಸುವ ಉತ್ತರ ಕರ್ನಾಟಕದವರಲ್ಲಿ ಇನ್ನೂ ಉಳಿದುಕೊಂಡುಬಂದಿವೆ.

ವೃತ್ತಿನಾಮಸೂಚಿ: ಅಡ್ಡಹೆಸರಿನಲ್ಲಿ ಇದೂ ಒಂದು ಪ್ರಧಾನವರ್ಗ. ನಮ್ಮ ವೃತ್ತಿ ಬೆಳೆದು ಜಾತಿಯಾಗಿರುವುದರಿಂದ ವೃತ್ತಿನಾಮವಾಚಿ ಅಡ್ಡಹೆಸರುಗಳು ಜಾತಿನಾಮವಾಚಿಯೂ ಆಗಿದ್ದು, ಇಂಥ ಅಡ್ಡಹೆಸರುಗಳಿಂದ ಅವರ ವೃತ್ತಿ ಮತ್ತು ಜಾತಿ ಎರಡನ್ನೂ ತಟ್ಟನೇ ಗುರುತಿಸಬಹುದು. ಆದರೆ ವೃತ್ತಿನಾಮವನ್ನು ಅಡ್ಡಹೆಸರಿನಂತೆ ವ್ಯಕ್ತಿನಾಮಕ್ಕೆ ಅಂಟಿಸಿಕೊಳ್ಳುವ ರೂಢಿ ಶರಣರ ಕಾಲದಿಂದ ಇನ್ನೂ ದಟ್ಟವಾಗಿ ಬಳಕೆಗೆ ಬಂದಿತೆಂದು ತೋರುತ್ತದೆ. ಸಮಾಜದಲ್ಲಿ ಕಾಯಕಮೌಲ್ಯ ಸ್ಥಾಪನೆಯಾಗುತ್ತಲೇ ನಮ್ಮನ್ನು ವೃತ್ತಿಯಿಂದ ಗುರುತಿಸಿಕೊಳ್ಳುವುದು ಅವರಿಗೆ ಬಲು ದೊಡ್ಡ ಹೆಮ್ಮೆ ಎನಿಸಿರಬೇಕು. ಧನಗರ ಕಂಚಿಯಬ್ಬೆ (೯೮೦), ನಾವಿದ ಧೋರ (೧೦೮೭) ಇತ್ಯಾದಿ ಅಡ್ಡಹೆಸರುಯುಕ್ತ ವ್ಯಕ್ತಿನಾಮಗಳು ಬಸವಪೂರ್ವಯುಗದ ಶಾಸನಗಳಲ್ಲಿ ಕಂಡುಬರುತ್ತಿದ್ದರೂ ಮಾದರ ಚೆನ್ನಯ್ಯ, ಜೇಡರ ದಾಸಿಮಯ್ಯ, ಮೇದರ ಕೇತಯ್ಯ, ಮಡಿವಾಳ ಮಾಚಿದೇವ, ಆಯ್ದಕ್ಕಿ ಲಕ್ಕಮ್ಮ, ಎಲೆಗಾರ ಕಾಮಣ್ಣ, ಗಾಣದ ಕನ್ನಪ್ಪ, ತಳವಾರ ಕಾಮಿದೇವ ಎಂಬಂತಹ ಹೆಸರುಗಳು ಶರಣರಲ್ಲಿ ಒಮ್ಮೆಲೇ ಹಿಂಡಿಹಿಂಡಾಗಿ ಬರುವುದು ಇದಕ್ಕೆ ಉದಾಹರಣೆಯಾಗಿದೆ. ಶರಣರಿಗೆ ವೃತ್ತಿಯೊಂದು ಕಸಬುಸ್ತರದಲ್ಲಿ ನಿಂತು ಕಾಡದೆ, ಕಾಯಕಸ್ತರದಲ್ಲಿ ನಿಂತು ಪೂಜ್ಯವೆನಿಸಲು, ಅದನ್ನು ಅಡ್ಡಹೆಸರಿನಿಂತೆ ಅಂಟಿಸಿಕೊಳ್ಳುವುದು ವ್ಯಾಪಕವಾಗಿ ಬೆಳೆದುಬಂದಿತು. ಉತ್ತರ ಕರ್ನಾಟಕದಲ್ಲಿ ಈ ಪದ್ಧತಿ ಹೇರಳ, ದಕ್ಷಿಣ ಕರ್ನಾಟಕದಲ್ಲಿ ಇಲ್ಲವೆನ್ನುವಷ್ಟು ವಿರಳ. ಉತ್ತರ ಕರ್ನಾಟಕ ಶರಣರ ಆಂದೋಲನದ ಕೇಂದ್ರಭೂಮಿಯಾಗಿದ್ದುದೇ ಇದಕ್ಕೆ ಕಾರಣವಾಗಿರಬೇಕು. ಮುಂದೆ ಇದು ಜಮಾದಾರ, ಮುಲ್ಲಾ, ಪೊಲೀಸ ಇತ್ಯಾದಿ ಹೊಸ ಹೊಸ ವೃತ್ತಿಗಳನ್ನೂ ಅಡ್ಡಹೆಸರಾಗಿ ಸ್ವೀಕರಿಸುವುದಕ್ಕೆ ದಾರಿಮಾಡಿಕೊಟ್ಟಿತು. ಈ ವರ್ಗದ ಬಣಕಾರ, ಹಡಪದ ಇತ್ಯಾದಿಗಳು ಸಮೂಹವಾಚಿ ಅಡ್ಡಹೆಸರುಗಳಾಗಿದ್ದರೆ ಬಳ್ಳೊಳ್ಳಿ, ಉಳ್ಳಾಗಡ್ಡಿ, ಕುದರಿ ಇತ್ಯಾದಿ ಆಯಾ ಕೃಷಿ ವ್ಯಾಪಾರ ವೃತ್ತಿಗಳ ಹಿನ್ನೆಲೆಯಲ್ಲಿ ಹುಟ್ಟಿಬಂದ ಸಮೂಹವಾಚಿಯಲ್ಲದ ಅಡ್ಡಹೆಸರುಗಳಾಗಿವೆ.

ವಸ್ತುನಾಮಸೂಚಿ: ಕೆಲವು ವಸ್ತುಗಳ ಸಂಬಂಧ, ಬಳಕೆ ಇತ್ಯಾದಿಗಳಿಂದಾಗಿಯೂ ಅಡ್ಡಹೆಸರುಗಳು ಬಳಕೆಗೊಂಡಿರುತ್ತವೆ. ಅಂದರೆ ವ್ಯಕ್ತಿಗಳಿಗೆ ಸಂಬಂಧಿಸಿದ ವಸ್ತುಗಳಲ್ಲಿ ಯಾವುದು ಪ್ರಧಾನವಾಗಿ ಜನರ ಗಮನ ಸೆಳೆಯುವುದೋ ಅದು ಅವರ ಅಡ್ಡ ಹೆಸರಾಗಿರುತ್ತದೆ. ದೊಡ್ಡಮನಿ, ಹುಣಸೇಮರದ, ಬೇವಿನಮರದ ಇತ್ಯಾದಿಗಳು ವಸ್ತುಸಂಬಂಧ ಸೂಚಿಯಾಗಿ ಬಂದುವು. ಮಯೂರವರ್ಮನ ಮನೆತನಕ್ಕೆ ‘ಕದಂಬ’ ಹೆಸರು ಬರಲು ಮನೆಯ ಮುಂದಿನ ಕದಂಬವೃಕ್ಷವೇ ಕಾರಣವೆಂದು ಶಾಸನ ತಿಳಿಸುವುದನ್ನು ಇಲ್ಲಿ ನೆನೆಯಬಹುದು. ಮೇಲೆ ಹೇಳಿದ ಬಳ್ಳೊಳ್ಳಿ, ಉಳ್ಳಾಗಡ್ಡಿ, ಕುದರಿ ಇತ್ಯಾದಿಗಳು ಈ ವಸ್ತುವನ್ನು ಅವರು ಪ್ರಧಾನವಾಗಿ ಬಳಸುವುದರಿಂದ, ಉತ್ಪಾದಿಸುವುದರಿಂದ ಇಲ್ಲವೇ ಮಾರಾಟ ಮಾಡುವುದರಿಂದ ಬಂದುವಾಗಿರಬಹುದು. ಸೆಟ್ಟರೊಬ್ಬರು ಕತ್ತೆಗಳ ಮೇಲೆ ವ್ಯಾಪಾರ ಸಾರಿಗೆ ಮಾಡುತ್ತಿದ್ದುದರಿಂದ ಅವರಿಗೆ ಕತ್ತಿಸೆಟ್ಟರು ಹೆಸರು ಬಂದಿತು. ಊರಿಗೆ ಮೊದಲಿಗರಾಗಿ ಗೋಡೆಗಡಿಯಾರ ಖರೀದಿಸಿ ತಮ್ಮ ಮರದಲ್ಲಿ ತೂಗುಹಾಕಿದುದರಿಂದ ಒಂದು ಜಂಗಮ ಮನೆತನಕ್ಕೆ ‘ಗಡಿಯಾರಮಠ’ ಎಂಬುದು ಅಡ್ಡಹೆಸರಾಗಿ ಬಳಕೆಗೊಂಡಿತು. ಅಂದರೆ ಮಿಕ್ಕ ಸೆಟ್ಟರಿಂದ, ಮಿಕ್ಕ ಮಠದವರಿಂದ ಅವರನ್ನು ಬೇರೆ ಮಾಡಿ ತೋರಿಸಲು ಆ ವಸ್ತುಗಳು ಅಲ್ಲಿಯ ಜನರಿಗೆ ಅನುಕೂಲವಾಗಿ ಕಂಡು, ಅಡ್ಡಹೆಸರಿನಲ್ಲಿ ಸೇರಿಕೊಂಡವು. ಹೀಗೆ ‘ವಸ್ತುಪ್ರಾಧಾನ್ಯತೆ’ಯೂ ಅಡ್ಡಹೆಸರಿನ ಸೃಷ್ಟಿಗೆ ಕಾರಣವಾಗುತ್ತದೆ.

ಇತರ ನಾಮಸೂಚಿ: ಚಾಲುಕ್ಯ ಮೊದಲಾದವುಗಳಂತೆ ಕೆಲವು ವಂಶನಾಮ, ಜನಾಂಗನಾಮಗಳು ಅಡ್ಡ ಹೆಸರಾಗಿ ನಿಲ್ಲುತ್ತವೆ. ಉದಾಹರಣೆಗೆ ರಜಪೂತ, ಮರಾಠಾ, ಆರೇರು, ರಡ್ಡಿ, ರಾಠೋಡ ಇತ್ಯಾದಿ.

ಕೆಲವು ಮನೆತನಗಳಲ್ಲಿ ಆಗಿಹೋದ ಪ್ರಸಿದ್ಧ ಪುರುಷ ಇಲ್ಲವೇ ಸ್ತ್ರೀ ಆ ಮನೆತನದ ಅಡ್ಡ ಹೆಸರಾಗಿ ಪರಿಣಮಿಸುತ್ತಾರೆ. ಉದಾಹರಣೆಗೆ ಬಾಲಪ್ಪಗೋಳ, ಬಂದಮ್ಮನವರ, ಕೆಂಚರಡ್ಡೇರ, ಸಣ್ಣಕ್ಕನವರ ಇತ್ಯಾದಿ.

ವ್ಯಕ್ತಿಗಳ ರೂಪ, ವ್ಯಕ್ತಿತ್ವ ಇತ್ಯಾದಿಗಳೂ ಅಡ್ಡಹೆಸರಾಗಿ ರೂಢಿಗೊಳ್ಳುತ್ತವೆ. ಕ್ರಿಸ್ತಶಕ ೧೧೬೧ ಮನಗೂಳಿ ಶಾಸನ ‘ಹುರ್ವ್ವಿನವರು’ ಹೆಸರಿನ ಮನೆತನವನ್ನು ಸೂಚಿಸುತ್ತಿದ್ದು, ದಟ್ಟವಾದ ಹುಬ್ಬು ಇವರಿಗಿದ್ದುದೇ ಈ ಹೆಸರಿನ ಉಗಮಕ್ಕೆ ಕಾರಣವೆಂದು ಶ್ರೀ ಮೇವುಂಡಿ ಊಹಿಸುತ್ತಾರೆ. ಇಂದಿನ ದಾಡಿ, ಗಡತರಣ್ಣನವರ, ಅವಧಾನಿ, ಪಂಡಿತ ಇತ್ಯಾದಿ ಅಡ್ಡಹೆಸರುಗಳು ಇದೇ ಬಗೆಯವು.

. ಇತರ ಸಂಗತಿಗಳು

ಒಬ್ಬ ವ್ಯಕ್ತಿ ಒಂದು ಮನೆತನಕ್ಕೆ ದತ್ತು ಹೋದರೆ, ಒಬ್ಬ ಹೆಣ್ಣುಮಗಳು ಗಂಡನ ಮನೆಗೆ ಬಂದರೆ ಮೊದಲಿನ ಅಡ್ಡಹೆಸರನ್ನು ಕಡ್ಡಾಯವಾಗಿ ಬದಲಿಸಬೇಕಾಗುತ್ತದೆ. ಸಮಾಜಕ್ಕೆ ಇದು ಸಮ್ಮತವಾಗಿರುವುದರಿಂದ ಇಂಥ ಪ್ರಸಂಗಗಳಲ್ಲಿ ಅಡ್ಡಹೆಸರು ತೀವ್ರ ಬದಲಾಗುತ್ತದೆ. ಆದರೆ ಅಕಾರಣವಾಗಿ ಪ್ರಯತ್ನಿಸಿದರೆ ತುಂಬ ನಿಧಾನವಾಗಿ ಬದಲಾಗುತ್ತದೆ. ಇಲ್ಲವೆ ಕತ್ತಿಯವರು ಸಕ್ಕರಿ ಹಂಚಿದಂತಾಗುತ್ತದೆ.* ಹೀಗೆ ಅಂದವಾಗಿರದ ಅಡ್ಡಹೆಸರನ್ನು ಬದಲಿಸಿಕೊಳ್ಳುವುದರ ಜೊತೆ ಕತ್ತಿ>ಕಟ್ಟಿ, ಗುದ್ದೀನ>ಗುಡ್ಡೀನ ಎಂಬಂತೆ ಅಲ್ಪ ವ್ಯತ್ಯಾಸಗೊಳಿಸಿಕೊಳ್ಳುವುದೂ ಉಂಟು. ಉತ್ತರ ಕರ್ನಾಟಕದಲ್ಲಿ ಅಡ್ಡಹೆಸರು ಪ್ರಧಾನವಾಗಿದ್ದರೂ

ಅದನ್ನು ಕೆಲವರು ಸಂಕ್ಷೇಪಿಸುವುದಕ್ಕೆ ಸೌಲಭ್ಯಾಕಾಂಕ್ಷೆಗಿಂತ ಸುಂದರವಾಗಿರದಿದ್ದುದೇ ಕಾರಣವಾಗಿರುತ್ತದೆ. ಉದಾಹರಣೆಗೆ ಕರಿಗೌಡರ ಈಶ್ವರನ್‌>ಕೆ. ಈಶ್ವರನ್‌, ಕೋಣದ ಚೆನ್ನಬಸಪ್ಪ>ಕೋ. ಚೆನ್ನಬಸಪ್ಪ. ಹೀಗಾಗಿ ಸುಂದರವಾದ ಅಡ್ಡಹೆಸರು ವ್ಯಕ್ತಿಗೆ ಸಂತೋಷವನ್ನುಂಟುಮಾಡುತ್ತಿದ್ದರೆ ಸುಂದರವಲ್ಲದ ಅಡ್ಡಹೆಸರು ಆ ವ್ಯಕ್ತಿಯನ್ನು ಜೀವನದುದ್ದಕ್ಕೂ ಕೊರೆಯುತ್ತಿದ್ದು, ಈ ಕೊರಗನ್ನು ತಪ್ಪಿಸಿಕೊಳ್ಳಬೇಕೆನ್ನುವರಿಗೆ ಸಂಕ್ಷೇಪೀಕರಣವೊಂದು ವರದಾನವೆಂದೇ ಹೇಳಬೇಕು. ಕಾನೂನುಬದ್ಧವಾಗಿಯೂ ಇಂಥ ವ್ಯತ್ಯಾಸಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಸರ್ಕಾರಿ ದಫ್ತರದಲ್ಲಿ ಅವರು ಏನೇ ವ್ಯತ್ಯಾಸ ಮಾಡಿಕೊಂಡರೂ ಸಮಾಜದಲ್ಲಿ ತೀವ್ರ ಬದಲಾವಣೆಯಾಗದಿರುವುದನ್ನು ಗಮನಿಸಿದಲ್ಲಿ, ಅಡ್ಡಹೆಸರು ವ್ಯಕ್ತಿಯೊಂದಿಗೆ  ಎಂಥ ಅವಿನಾಭಾವ ಸಂಬಂಧ ಹೊಂದಿರುವುದೆಂಬುದು ಸ್ಪಷ್ಟವಾಗುತ್ತದೆ.

ಏಕಕಾಲಕ್ಕೆ ಒಬ್ಬರಿಗೆ ಅನೇಕ ಅಡ್ಡಹೆಸರು ರೂಢಿಯಲ್ಲಿರಬಹುದು. ಉದಾಹರಣೆಗೆ ನ್ನನ ಅಡ್ಡಹೆಸರು ಕಲಬುರ್ಗಿ, ಹಳ್ಳಿಯಲ್ಲಿ ನಮ್ಮದು ಅಂಗಡಿ ಇರುವುದರಿಂದ ಅಂಗಡಿಯವರೆಂದೂ ಕರೆಯುತ್ತಾರೆ. ನಮ್ಮ ತಂದೆ ಪವಾಡಶೆಟ್ಟರ ಮನೆಗೆ ಅಳಿಯತನಕ್ಕೆ ಬಂದ ಕಾರಣ ‘ಪವಾಡಿ’ ಎಂಬುದೂ ರೂಢಿಯಲ್ಲಿದೆ. ನಮ್ಮ ಹಳ್ಳಿಯಲ್ಲಿ ನಮ್ಮದೊಂದೇ ವೀರಶೈವ ಬಣಜಿಗ ಮನೆತನವಿರುವುದರಿಂದ ಕ್ವಚಿತ್ತಾಗಿ ‘ಬಣಜಿಗರು’ ಎಂದೂ ಕರೆಯುತ್ತಾರೆ.

ಸಮೂಹವಾಚಿಯಾಗಿರುವ ಮೇಲುವರ್ಗದ ಗೌಡ, ಶೆಟ್ಟಿ, ಮಠ ಇತ್ಯಾದಿ ಅಡ್ಡಹೆಸರುಗಳಲ್ಲಿ ಪ್ರತಿಷ್ಠಾಮೂಲ ಇಲ್ಲವೆ ವೃತ್ತಿಮೂಲ ತಾರತಮ್ಯಗಳು ಏರ್ಪಟ್ಟಿರುತ್ತವೆ. ಉದಾಹರಣೆಗೆ: ಗೌಡರ, ದೊಡ್ಡಗೌಡರ, ಹಿರೇಗೌಡರ, ಹೊಸಗೌಡರ, ಪೊಲೀಸಗೌಡರ; ಶೆಟ್ಟರ್‌, ಪಟ್ಟಣಶೆಟ್ಟರ್‌, ಮಹಾಶೆಟ್ಟರ್‌, ಮಾಜನಶೆಟ್ಟರ್‌, ಕೋರಿಶೆಟ್ಟರ್‌, ಬಂಗಾರಶೆಟ್ಟರ್‌; ಮಠ, ಹಿರೇಮಠ, ಚಿಕ್ಕಮಠ, ಮಠಪತಿ, ಗಣಾಚಾರಿ. ವಸ್ತ್ರದ, ವಿರಕ್ತಮಠ ಇತ್ಯಾದಿ. ಆದರೆ ಸಮೂಹವಾಚಿಯಾಗಿದ್ದರೂ ಕೆಳವರ್ಗದ ಹೊಲೆಯ, ಮಾದಿಗ, ಕುಂಬಾರ ಜನಾಂಗಗಳ ಅಡ್ಡಹೆಸರಿನಲ್ಲಿ ಇಂಥ ತಾರತಮ್ಯ ತೋರಿಬರುವುದಿಲ್ಲ. ಈ ಸಂಗತಿ ಈ ಎರಡೂ ವರ್ಗಗಳ “ಸಾಮಾಜಿಕ ಶ್ರೇಣಿ, ಪ್ರತಿಷ್ಠೆ”ಗಳ ಮೇಲೆ ಬೆಳಕು ಚೆಲ್ಲುತ್ತದೆ.

ಭಾಷೆಯ ರೂಪವ್ಯತ್ಯಾಸಕ್ರಿಯೆ ಅದರ ಒಂದು ಅಂಗವಾದ ಅಡ್ಡಹೆಸರುಗಳಿಗೂ ಅನ್ವಯಿಸುತ್ತದೆ. ಹೀಗಾಗಿ ಇವುಗಳ ಉಚ್ಛಾರಣದಲ್ಲಿಯೂ ಸಂಕ್ಷೇಪೀಕರಣ, ಸುಲಭೀಕರಣ, ಅಕ್ಷರಪಲ್ಲಟ, ಸಮರೂಪಧಾರಣೆ ಮೊದಲಾದ ಕ್ರಮಬದ್ಧ ವ್ಯತ್ಯಾಸ ತಲೆದೋರುವುದರಿಂದ, ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿಯೇ ಇವುಗಳನ್ನು ಹಿಂಜಿ ನೋಡಬೇಕೇ ಹೊರತು ಪಾಮರ ನಿಷ್ಪತ್ತಿ, ಪಂಡಿತ ನಿಷ್ಪತ್ತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಬಾರದು.

ಕರ್ನಾಟಕದಲ್ಲಿ ‘ಅಡ್ಡಹೆಸರು’ ಅಧ್ಯಯನದ ವಸ್ತುವಾಗಿ ವಿದ್ವಾಂಸರ ಲಕ್ಷ್ಯವನ್ನು ಅಷ್ಟಾಗಿ ಸೆಳೆದಿಲ್ಲವೆಂದೇ ಹೇಳಬೇಕು. ಈಗ ನಮ್ಮ ನಾಡಿನಲ್ಲಿ ಪ್ರಚಲಿತವಿರುವ ಎಲ್ಲ ಲಕ್ಷೋಪಲಕ್ಷ ಅಡ್ಡಹೆಸರುಗಳನ್ನು ಪಟ್ಟಿಮಾಡಿ ಬಳಸುವ ವಿಧಾನ, ಸ್ವರೂಪ ಇತ್ಯಾದಿ ದೃಷ್ಟಿಗಳಿಂದ ವರ್ಗೀಕರಿಸಿ ವಿವೇಚಿಸಿದಲ್ಲಿ ಅದು ನಮ್ಮ ಪೂರ್ವಜರ ನಲೆ, ವೃತ್ತಿ, ವಂಶ, ಜನಾಂಗ, ಭಾಷೆ, ಮನೋಧರ್ಮ ಇತ್ಯಾದಿಗಳ ಅಧ್ಯಯನವಾಗುತ್ತದೆ; ನಮ್ಮ ಸಂಸ್ಕೃತಿಯ ಅಧ್ಯಯನವೇ ಆಗುತ್ತದೆ.

* ಉತ್ತರ ಕರ್ನಾಟಕದಲ್ಲಿ ಜರುಗಿದ ಘಟನೆಯದು ತಮ್ಮನ್ನು ಇನ್ನು ಮೇಲೆ ಸಕ್ಕರಿ ಹೆಸರಿನಿಂದ ಕರೆಯಬೇಕೆಂದು ‘ಕತ್ತಿ’ ಅಡ್ಡಹೆಸರಿನವರು ಸಕ್ಕರಿ ಹಂಚಿದರಂತೆ. ಅವರ ಮನೆಯಿಂದ ಸಕ್ಕರಿ ತಿನ್ನುತ್ತ ಬರುವವರು ಕತ್ತಿಯವರ ಮನೆಯಲ್ಲಿ ಸಕ್ಕರಿ ಹಂಚಿದರು ಎಂದು ಮಾತನಾಡುತ್ತಿದ್ದರು.