ಜಗತ್ತಿನಲ್ಲಿ ಈವರೆಗೆ ಒಂದೊಂದಾಗಿ ದೇಶಗಳು ಸ್ವತಂತ್ರವಾಗುತ್ತ ಬಂದವು. ಈಗ ಭಾಷೆಗಳು ಸ್ವತಂತ್ರವಾಗುವ ಕಾಲ ಸನ್ನಹಿತವಾಗಿದೆ. ಯಾವುದೇ ದೇಶವನ್ನು ಸ್ವತಂತ್ರಗೊಳಿಸಿ, ಅದರ ಭಾಷೆಯನ್ನು ಪರತಂತ್ರದಲ್ಲಿಟ್ಟರೆ ಈ ಜನಾಂಗವನ್ನು ಭೌತಿಕವಾಗಿ ಬದುಕಿಸಿ, ಸಾಂಸ್ಕೃತಿಕವಾಗಿ ಸಂಹರಿಸಿದಂತಾಗುತ್ತದೆ.* ಈ ಭಯ ಇಂದು ಎಲ್ಲ ಜನಾಂಗಗಳಲ್ಲಿ ಜಾಗೃತವಾಗುತ್ತಲಿರುವ ಕಾರಣ “ಭೌತಿಕಾಗಿ ಉಪಜೀವಿಸಲು” ಅಂತಾರಾಷ್ಟ್ರೀಯ ಭಾಷೆಯನ್ನು ಆಧರಿಸಿದರೂ “ಸಾಂಸ್ಕೃತಿಕವಾಗಿ ಜೀವಿಸಲು” ರಾಜ್ಯಭಾಷೆ ಅವಶ್ಯವೆಂದು ಅವರಿಗೆ ಮನವರಿಕೆಯಾಗಿದೆ. ಆದುದರಿಂದ ಇಂದು ಜಗತ್ತಿನ ಬೇರೆ ಬೇರೆ ಭಾಗಗಳಂತೆ ಕರ್ನಾಟಕದಲ್ಲಿಯೂ ರಾಜ್ಯಭಾಷಾಪ್ರಜ್ಞೆ ಒಂದು ಆಂದೋಲನ ಸ್ವರೂಪವದಲ್ಲಿ ಬಿಚ್ಚಿಕೊಳ್ಳುತ್ತಲಿದೆ.

ನಮ್ಮ ‘ಭಾಷಾನೀತಿ’ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತಿಲ್ಲ, ರಾಜಕೀಯ ಲಾಭ ವ್ಯವಸ್ಥೆಯ ಮೇಲೆ ತಲೆಯೆತ್ತಿದೆ. ಹೀಗಾಗಿ ಮಾತೃಭಾಷೆ, ರಾಷ್ಟ್ರಭಾಷೆ, ಪ್ರಾಚೀನ ಭಾಷೆಗಳೆಂಬ ಭಾವನಾತ್ಮಕ ನೆವಗಳನ್ನು ದಟ್ಟವಾಗಿ ಒಡ್ಡಿ, ರಾಜ್ಯಭಾಷೆಯ ವಾಸ್ತವವನ್ನು ಹತ್ತಿಕ್ಕಲಾಗುತ್ತಿದೆ.

ಪ್ರಾಚೀನ ಕಾಲದಲ್ಲಿ ಕೃಷಿಪ್ರಧಾನ ಜೀವನ ಕಾರಣವಾಗಿ ಕುಟುಂಬಗಳು ಒಂದು ಪ್ರದೇಶದಲ್ಲಿ ಶಾಶ್ವತ ನೆಲೆಯೂರುತ್ತಿದ್ದುದರಿಂದ ಅಲ್ಲಿ ಏಕರೂಪದ ‘ವಿಶಿಷ್ಟಸಮಾಜ’ ರೂಪುಗೊಳ್ಳುತ್ತಿದ್ದಿತು. ಆಗ ಎಲ್ಲರ ಮನೆಯ ‘ಮಾತೃಭಾಷೆ’ಯೇ ಸಮಾಜಭಾಷೆಯಾಗಿರುತ್ತಿತ್ತು. ಇಂದು ನೌಕರಿ, ವಾಣಿಜ್ಯ ಇತ್ಯಾದಿ ಸಂಚಾರಿ ಬದುಕಿನ ಅನಿವಾರ್ಯತೆಯಿಂದಾಗಿ ಅನೇಕ ರೂಪಗಳ ‘ಮಿಶ್ರ ಸಮಾಜ’ ಅಸ್ತಿತ್ವಕ್ಕೆ ಬಂದಿದೆ. ಇದರಿಂದಾಗಿ ಮನೆಯಲ್ಲಿಯ ಮಾತೃಭಾಷೆ ಮತ್ತು ಮನೆಯ ಹೊರಗಿನ ಸಮಾಜಭಾಷೆಗಳಲ್ಲಿ ಈಗ ಪ್ರತ್ಯೇಕತೆ ತಲೆದೋರುತ್ತಲಿದೆ. ಅಂದರೆ ಮಾತೃಭಾಷೆಯನ್ನು ಮನೆಗೆ ಸೀಮಿತಗೊಳಿಸಿ, ಸಮಾಜದಲ್ಲಿ ರಾಜ್ಯಭಾಷೆಯನ್ನು ಬಳಸುವುದು ಅನಿವಾರ್ಯವಾಗಿದೆ. ಆದುದರಿಂದ ಮನೆಗೆ ಮಾತ್ರ ಸೀಮಿತವಾಗುತ್ತಲಿರುವ ಮಾತೃಭಾಷೆಯನ್ನು ಐಚ್ಛಿಕಗೊಳಿಸಿ, ರಾಜ್ಯದ ತುಂಬ ಬಳಕೆಯಾಗುವ ರಾಜ್ಯಭಾಷೆಯನ್ನು ‘ಕಡ್ಡಾಯ ಭಾಷೆ-೧’ ಎಂಬ, ರಾಜ್ಯವೂ ಒಳಕೊಂಡಂತೆ ಲೋಕದ ಅಂಚಿನವರೆಗೆ ಬಳಕೆಯಾಗುವ ಅಂತರಾಷ್ಟ್ರೀಯ ಭಾಷೆಯನ್ನು ‘ಕಡ್ಡಾಯಭಾಷೆ-೨’ ಎಂಬ ‘ಭಾಷಾನೀತಿ’ ಭಾರತದ ಯಾವುದೇ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಬೇಕಾಗಿದೆ. ಈ ಸತ್ಯದ ಒಂದು ಭಾಗವೆಂಬಂತೆ ನಮ್ಮಲ್ಲಿ ಕನ್ನಡವು ಕಡ್ಡಾಯ ಆಡಳಿತ ಭಾಷೆಯಾಗುವುದು ಅವಶ್ಯವಿದೆ.

ಸೂರ್ಯನನ್ನು ಕೆಲವು ನಿಮಿಷ ತುಂಡುಮೋಡ ಮುಸುಕುವಂತೆ ಸತ್ಯವನ್ನು ಕೆಲವು ದಿನ ಅಸತ್ಯ ಹತ್ತಿಕ್ಕಬಹುದೇ ಹೊರತು ಶಾಶ್ವತ ಹತ್ತಿಕ್ಕಲು ಸಾಧ್ಯವಿಲ್ಲ. ಭಾರತ ಸ್ವಾತಂತ್ರ್ಯವನ್ನು ವಿರೋಧಿಸಿದವರು; ಅವರನ್ನು ತುಳಿದು ನಮ್ಮ ದೇಶ ಸ್ವಾತಂತ್ರ್ಯವಾಯಿತು. ಕರ್ನಾಟಕ ಏಕೀಕರಣವನ್ನು ವಿರೋಧಿಸಿದರು; ಅವರನ್ನು ಬದಿಗೊತ್ತಿ ನಮ್ಮ ನಾಡು ಒಂದುಗೂಡಿತು. ಇಂದು ಕನ್ನಡ ಆಡಳಿತಭಾಷೆಯಾಗಬಾರದೆಂದು ಕೆಲವರು ಅಡ್ಡಗಾಲು ನೀಡುತ್ತಿದ್ದಾರೆ ಆದರೆ ಅವರನ್ನು ಹಿಂದೆ ಸರಿಸಿ ಕನ್ನಡ ಆಡಳಿತ ಭಾಷೆ ಆಗಿಯೇ ತೀರುತ್ತದೆ.

ಆಡಳಿತವೆನ್ನುವುದು ಸಾಮಾಜಿಕ ಬದುಕಿನ ಅನಿವಾರ್ಯ ಕ್ರಿಯೆ. ಈ ಆಡಳಿತ ನಮ್ಮೊಳಗಿನಿಂದಲೇ ರೂಪಗೊಂಡರೆ, ಅದರೊಂದಿಗೆ ನಮ್ಮದೇ ಆದ ಆಡಳಿತ ಭಾಷೆಯೂ ರೂಪಗೊಳ್ಳುತ್ತದೆ. ಅಲ್ಲಿ ಆಡಳಿತಭಾಷಾ ಸಮಸ್ಯೆಯೇ ಉದ್ಭವಿಸುವುದಿಲ್ಲ. ಆಡಳಿತಪದ್ಧತಿ ಹೊರಗಿನಿಂದ ಬಂದರೆ ಮಾತ್ರ ಹೊರಗಿನ ಆ ಪದ್ಧತಿ, ಒಳಗಿನ ಈ ಭಾಷೆಗಳಲ್ಲಿ ಹೊಂದಿಕೆ ತಪ್ಪಿಹೋಗಿ ತಟ್ಟನೆ ಸಮಸ್ಯೆ ಉದ್ಭವಿಸುತ್ತದೆ. ನಮ್ಮ ಪ್ರಾಚೀನ ಆಡಳಿತಭಾಷೆಯಲ್ಲಿ ಬಹಳಷ್ಟು ಕನ್ನಡಪದಗಳು ಎಂದೋ ನಷ್ಟವಾಗಿ ಸಂಸ್ಕೃತ, ಉರ್ದು, ಮರಾಠಿ ಪದಗಳು ದಟ್ಟವಾಗಿ ಸೇರಿಕೊಂಡರೂ ೧೮ನೆಯ ಶತಮಾನದವರೆಗೆ ನಮ್ಮ ಆಡಳಿತದಲ್ಲಿ ನಮ್ಮ ಭಾಷೆ ನಮ್ಮ ಆಡಳಿತ ಪದ್ಧತಿಗಳು ಅಸ್ತಿತ್ವದಲ್ಲಿದ್ದವು. ಆದರೆ ೧೯ನೆಯ ಶತಮಾನದಲ್ಲಿ ಈ ಆಡಳಿತಪದ್ಧತಿ ಮತ್ತು ಆಡಳಿತಭಾಷೆಗಳನ್ನು ಬದಿಗೊತ್ತಿ ಇಂಗ್ಲಿಷ್‌ಆಡಳಿತಪದ್ಧತಿ, ಇಂಗ್ಲಿಷ್‌ಆಡಳಿತಭಾಷೆಗಳು ಅಸ್ತಿತ್ವಕ್ಕೆ ಬಂದವು. ಈಗ ಕಳೆದುಕೊಂಡ ನಮ್ಮ ಆಡಳಿತ ಪದ್ಧತಿಯನ್ನಾಗಲೀ ನಮ್ಮ ಆಡಳಿತ ಭಾಷೆಯನ್ನಾಗಲೀ ಮರಳಿ ರೂಢಿಸುವುದು ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಇಂದು ನಮ್ಮದೇ ಆಗಿಬಿಟ್ಟಿರುವ ಇಂಗ್ಲಿಷರ ಆಡಳಿತ ಪದ್ಧತಿಗೆ ನಮ್ಮ ಭಾಷೆಯನ್ನು ಅಳವಡಿಸಬೇಕಾಗಿದೆ. ಇದರಿಂದ ಉದ್ಭವಿಸುವ ಸಮಸ್ಯೆಗಳ ಶೋಧ ಮತ್ತು ಪರಿಹಾರಗಳ ಅಧ್ಯಯನ ತುಂಬ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ.

ಭಾಷೆಯೆನ್ನುವುದು ಒಂದು ಜನಾಂಗದ ಭೌತಿಕ ಮತ್ತು ಸಾಂಸ್ಕೃತಿಕ ಬದುಕಿನ ಸೃಷ್ಟಿ. ಇದರಿಂದಾಗಿ ಯಾವುದೇ ಭಾಷೆಯಲ್ಲಿ Intimate Vocabularly (ಸಂಪರ್ಕ ಪದಸಂಪತ್ತು) ಮತ್ತು Cultural Vocabularly (ಸಾಂಸ್ಕೃತಿಕ ಪದಸಂಪತ್ತು) ಬೆಳೆದುಬಂದಿರುತ್ತದೆ. ಇವುಗಳಲ್ಲಿ Intimate Vocabularlyಯನ್ನು ಬಳಸುವುದು ಮತ್ತು ಭಾಷಾಂತರಿಸುವುದು ಕಠಿಣ ಕೆಲಸವೇನಲ್ಲ. ಆದುದರಿಂದ Intimate Vocabulary ವರ್ಗಕ್ಕೆ ಸೇರುವ ಆಡಳಿತಭಾಷಾ ಬಳಕೆ ಮತ್ತು ಆಡಳಿತಭಾಷಾ ಅನುವಾದ ಕ್ರಿಯೆಗಳು ಕಠಿಣ ಸಮಸ್ಯೆಗಳಲ್ಲವೆಂದೇ ಹೇಳಬೇಕು.

ಭಾಷೆಯ ಸಾರ್ಥಕತೆ ಒಂದು ಅಭಿಪ್ರಾಯವನ್ನು ಪೂರ್ಣಪ್ರಮಾಣದಲ್ಲಿ ಇನ್ನೊಬ್ಬರಿಗೆ ಮುಟ್ಟಿಸುವುದೇ ಆಗಿದೆ. ಈ ಪ್ರಮಾಣ ಎಷ್ಟು ಕಡಿಮೆಯಾಗುತ್ತ ಹೋಗುವುದೋ ಆ ಭಾಷೆ ಅಷ್ಟು ಅನ್ಯವಾಗುತ್ತ ಹೋಗುತ್ತದೆ. ಕೊನೆಗೆ ಅನ್ಯಭಾಷೆಯಂತೆ ಶೋಷಣೆಯ ಮಾಧ್ಯಮವೂ ಆಗುತ್ತದೆ. ಹೀಗಾಗಿ ಆಡಳಿತದಲ್ಲಿ ತಿಳಿಯದ ಅನ್ಯಭಾಷೆ ಬಳಸುವಷ್ಟೇ ತಿಳಿಯದ ಸ್ವಭಾಷೆ ಬಳಸುವುದೂ ಅಪ್ರಯೋಜಕ ಮತ್ತು ಅಪಾಯಕಾರಿ. ಈ ಸ್ಪಷ್ಟ ತಿಳಿವಳಿಕೆಯಿಂದ ಆಡಳಿತದಲ್ಲಿ ಅನುವದಿತ ಮತ್ತು ಪ್ರಾದೇಶಿಕ ಕನ್ನಡವನ್ನು ರೂಢಿಸಬೇಕಾಗಿದೆ.

ಅನುಲಿದಿತ ಭಾಷೆ

ಅನ್ಯಭಾಷೆಯ ಕಾವ್ಯಸಾಹಿತ್ಯ ಅಥವಾ ಶಾಸ್ತ್ರಸಾಹಿತ್ಯವನ್ನು ಇನ್ನೊಂದು ಜನಾಂಗ ಸ್ವೀಕರಿಸುವಲ್ಲಿ ನೇರ ಸ್ವೀಕರಣ, ಅನುವಾದಕ್ರಿಯೆಯೆಂಬ ಎರಡು ಘಟ್ಟಗಳು ಮುಗಿದ ಬಳಿಕ ಅಲ್ಲಿ ಸ್ವತಂತ್ರ ಸೃಷ್ಟಿ ಪ್ರಾರಂಭವಾಗುತ್ತದೆ. ಈ ಮಾತು ಕನ್ನಡದಲ್ಲಿ ಆಡಳಿತಭಾಷೆ ನಡೆದುಬಂದ ಇತಿಹಾಸಕ್ಕೂ ಅನ್ವಯಿಸುತ್ತದೆ. ಏಕೀಕರಣ ಪೂರ್ವದ ಆಡಳಿತದಲ್ಲಿ ನೇರವಾಗಿ ಇಂಗ್ಲಿಷ್‌ಭಾಷೆಯನ್ನು ಬಳಸುತ್ತಿದ್ದೆವು, ಇದು ಒಂದು ಘಟ್ಟ, ಆಮೇಲೆ ಕನ್ನಡ ಜಾಗೃತಿಯ ಪರಿಣಾಮದಿಂದಾಗಿ ಭಾಷಾಂತರ ಕ್ರಿಯೆ ನಮ್ಮಲ್ಲಿ ಪ್ರಾರಂಭವಾಯಿತು. ಆಗ ಪದ ವಾಕ್ಯಗಳ ಮಕ್ಕಿ ಕ ಮಕ್ಕಿ ಅನುವಾದವೇ ಪ್ರಧಾನಪಾತ್ರ ವಹಿಸಿತು. ಇದರಿಂದ ಕೃತಕಪದಗಳೂ ಕೃತಕವಾಕ್ಯಗಳೂ ಆಡಳಿತ ಮತ್ತು ಆಡಳಿತೇತರ ಕ್ಷೇತ್ರಗಳಲ್ಲಿ ನುಗ್ಗಿಬಂದವು. ಇದಕ್ಕೆ ಕಾರಣ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಬೇಕೆಂದು ಸಾರುತ್ತಿರುವ ರಾಜಕಾರಣಿಗಳಿಗಾಗಲೀ, ಇದರ ಉಸ್ತುವಾರಿ ನೋಡಿಕೊಳ್ಳುತ್ತಲಿರುವ ಅಧಿಕಾರಿಗಳಿಗಾಗಲೀ, ಅನುವಾದಿಸುತ್ತಿರುವ ವಿಷಯ ಪರಿಣತರಿಗಾಗಲೀ ಭಾಷೆಯೆಂದರೆ ಏನು? ಎಂಬ ವೈಜ್ಞಾನಿಕ ದೃಷ್ಟಿಯಿಲ್ಲದುದು. ಇವರಿಗೆ ತಮ್ಮ ಬರವಣಿಗೆಯನ್ನು ಓದುವ ಜನತೆ ಅಮುಖ್ಯ; ತಾವು ಅನುವಾದ ಮಾಡುವ ಪದ, ವಾಕ್ಯಗಳೇ ಮುಖ್ಯ. ಹೀಗಾಗಿ ಇವರು ಒಂದು ಇಂಗ್ಲಿಷ್‌ಪದಕ್ಕೆ ರೂಢಿಯಲ್ಲಿರುವ ಒಂದು ಉರ್ದು, ಮರಾಠಿ ಪದ ಇಲ್ಲವೆ ಪರಿಚಿತ ಅಪರಿಚಿತ ಸಂಸ್ಕೃತಪದ ಬಳಸಿದರೆ ತಮ್ಮ ಕೆಲಸ ಮುಗಿಯಿತೆಂದು ಭ್ರಮಿಸಿದರು. ಇದರಿಂದಾಗಿ ಬೆಂಗಳೂರು ಪ್ರದೇಶದ ಆಡಳಿತದಲ್ಲಿ ಪ್ರಚಲಿತವಿರುವ ಉರ್ದು, ಮರಾಠಿ ಪದಗಳೂ, ಅನುವಾದಜನ್ಯ ಆರಕ್ಷಕ, ಅಭಿಯಂತ, ಅಧೀಕ್ಷಕ ಎಂಬಂಥ ಭಯಂಕರ ಸಂಸ್ಕೃತಪದಗಳೂ ನಮ್ಮ ಆಡಳಿತದಲ್ಲಿ ತಲೆಹಾಕಿದವು. ಇಂಥ ಪದಗಳನ್ನೊಳಗೊಂಡ “ಆಡಳಿತ ಪದಕೋಶ”, “ಕಾನೂನು ಪದಕೋಶ” ಇತ್ಯಾದಿ ಕೃತಿಗಳು ಭಯ ಹುಟ್ಟಿಸುವ ವಿಕೃತಶಿಶುಗಳಂತೆ ರಚನೆಗೊಂಡವು. ‘ತಿಲಕಾಷ್ಠ ಮಹಿಷಬಂಧ’ಗಳಾಗಿ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಧೂಳು ತಿನ್ನುತ್ತ ಮಲಗಿದವು.

ಈ ಬಗೆಯ ಅನುವಾದಿತ ಪದಬಳಕೆಯಿಂದಾಗಿ ಆಡಳಿತದಲ್ಲಿ ಇತ್ತೀಚೆ ಕೃತಕ ಕನ್ನಡವೇ ಆವರಿಸಿತು. ಧಾರವಾಡ ಸಮೀಪದ ಮನ್ಸೂರ ಗ್ರಾಮದ ಹೆಣ್ಣುಮಗಳಿಗೆ ಸರ್ಕಾರದಿಂದ ಬಂದ ಒಂದು ಪತ್ರ ಇದಕ್ಕೆ ಉದಾಹರಣೆಯಾಗಿದೆ.

“ಶ್ರೀಮತಿ ಮಲ್ಲವ್ವಾ ಕೋಂ. ನಿಂಗಪ್ಪ ಯರಿಹಕ್ಕಲ, ಸಾ|| ಮನಸೂರ ಇವರು, ಕೆಳಗೆ ನಿರ್ದಿಷ್ಟಪಡಿಸಿದ ಭೂಮಿಗಳಿಗೆ ಸಂಬಂಧಿಸಿ ಈ ಅಧಿನಿಯಮದ ೪೫ನೇ ಪ್ರಕರಣದ ಮೇರೆಗೆ ಸದರಿ ಭೂಮಿಯ ಅಧಿಭೋಗದಾರಳಾಗಿ ತನ್ನನ್ನು ನೋಂದಣಿ ಮಾಡುವಂತೆ ೪೮ಆ ಪ್ರಕರಣ ಮೇರೆಗೆ ಆವೇದನ ಮಾಡಿಕೊಂಡಿರುವುದರಿಂದ ಈಗ ೧. ಶ್ರೀ ಗಿರೀಶ ರಂಗರಾವ ದೇಶಪಾಂಡೆ ೨. ಭೀಮಾಭಾಯಿ ದೇಶಪಾಂಡೆ ವಗೈರೆ ನಾಲ್ಕು ಜನರು ಸಾ ಧಾರವಾಡ ಇವರಿಗೆ ಲಿಖಿತ ಸಾಕ್ಷ್ಯ ಅಥವಾ ಇತರ ಸಾಕ್ಷ್ಯ ಏನಾದರೂ ಇದ್ದರೆ ಅವುಗಳನ್ನು ತೆಗೆದುಕೊಂಡು ೨೯.೧೧.೯೧, ೧೦-೩೦ಕ್ಕೆ ಬಂದು ನ್ಯಾಯಾಧೀಕರಣದ ಮುಂದೆ ಹಾಜರಾಗಬೇಕೆಂದು ಈ ಮೂಲಕ ನೋಟೀಸು ಕೊಡಲಾಗಿದೆ.” ಅಧಿಕಾರಿಗಳು ಬಳಸುವ ಇದು ಯಾರ ಕನ್ನಡ? ಕನ್ನಡಿಗರ ಕನ್ನಡವಂತೂ ಅಲ್ಲ. ಹಳ್ಳಿಗರಿಗೆ ಇಂಥ ಕನ್ನಡ ಪತ್ರ ಕಳಿಸುವುದೂ ಒಂದೇ, ಇಂಗ್ಲಿಷ್‌ಪತ್ರ ಕಳಿಸುವುದೂ ಒಂದೇ. ಇಂಗ್ಲಿಷ್‌ಪತ್ರ ಇಂಗ್ಲಿಷ್‌ಬಲ್ಲವರಿಗಾದರೂ ತಿಳಿಯುತ್ತದೆ. ಈ ಕನ್ನಡ ಪತ್ರ ಇಂಗ್ಲಿಷ್‌ಬಲ್ಲವರಿಗೂ ತಿಳಿಯುವುದಿಲ್ಲ, ಕನ್ನಡ ಬಲ್ಲವರಿಗೂ ತಿಳಿಯುವುದಿಲ್ಲ. ಆದುದರಿಂದ ಇಂಥ ಕೃತಕ ಕನ್ನಡವನ್ನು ಬಳಸಬಾರದೆಂದು ಅಧಿಕಾರಿಗಳಿಗೆ ಎಚ್ಚರ ನೀಡಬೇಕು; ಇವರಿಗೆ ಸರಳ ಕನ್ನಡ ಬಳಕೆಯ ತರಬೇತಿ ನೀಡಬೇಕು.

ಇಂಥ ಅನುವಾದ ಒಂದು ಘಟ್ಟದಲ್ಲಿ ಅನಿವಾರ್ಯವೆಂದೇ ಹೇಳಬೇಕು. ನಾವು ಈಗ ಈ ಘಟ್ಟದಲ್ಲಿದ್ದೇವೆ. ಇನ್ನು ಮೇಲೆ ಈ ಘಟ್ಟವನ್ನು ದಾಟಿ ಸ್ವತಂತ್ರ ಸೃಷ್ಟಿಕ್ರಿಯೆಯ ಘಟ್ಟವನ್ನು ಏರಬೇಕಾಗಿದೆ. ಪದಕೋಶ ನೋಡದೆ, ಪ್ರಯೋಜಕತೆಯನ್ನು ನೋಡಿ, ನಾವು ಯಾರಿಗಾಗಿ ಈ ಕಾರ್ಯ ಮಾಡುತ್ತಲಿದ್ದೇವೆ ಎಂಬ ಎಚ್ಚರದಿಂದ ಭಾಷೆಯನ್ನು ರೂಢಿಸಬೇಕಾಗಿದೆ. ಆಗ ಆ ಬರವಣಿಗೆ ನಮ್ಮದಾಗುತ್ತದೆ, ನಮ್ಮ ನಾಡಿನದಾಗುತ್ತದೆ.

ಪ್ರಾದೇಶಿಕಭಾಷೆ

ಆಡಳಿತ ಸಂದರ್ಭದಲ್ಲಿ ಎದುರಾಗುವ ಭಾಷೇ ಸಮಸ್ಯೆಗಳನ್ನು ಕೃತಕ ಮತ್ತು ನೈಸರ್ಗಿಕವೆಂದು ವರ್ಗೀಕರಿಸಿದಲ್ಲಿ, ‘ಪ್ರಾದೇಶಿಕಭಾಷೆ’ಯೆನ್ನುವುದು ನೈಸರ್ಗಿಕ ಸಮಸ್ಯೆಯ ವರ್ಗಕ್ಕೆ ಸೇರುತ್ತದೆ. ಭಾಷೆಯಲ್ಲಿ ಪ್ರಾದೇಶಿಕತೆಯು ಒಂದು ಶಕ್ತಿಯೂ ಹೌದು, ಒಂದು ಮಿತಿಯೂ ಹೌದು. ಯಾವುದೇ ದೇಶದ ಭಾಷೆ ತನ್ನ ಪ್ರದೇಶದ ಭೌತಿಕ ಮತ್ತು ಸಾಂಸ್ಕೃತಿಕ ಬದುಕಿಗನುಗುಣವಾಗಿ ಪ್ರದೇಶದಿಂದ ಭಿನ್ನರೂಪ ತಾಳುತ್ತದೆ. ಆಗ ಆ ನಾಡಿನಲ್ಲಿ ಏಕರೂಪದ ಆಡಳಿತ ನಡೆಸಬೇಕೆಂದಾಗ ಈ ಭಿನ್ನ ರೂಪಗಳು ಕಿರಿಕಿರಿಕೊಡುತ್ತವೆ.

ಕರ್ನಾಟಕದಲ್ಲಿ ತುಂಗಭದ್ರಾನದಿ ಮತ್ತು ಪಶ್ಚಿಮಘಟ್ಟಗಳಿಂದಾಗಿ ಉತ್ತರ ಕರ್ನಾಟಕ, ದಕ್ಷಿಣಕರ್ನಾಟಕ ಮತ್ತು ಕರಾವಳಿಕರ್ನಾಟಕಗಳೆಂಬ ಮೂರು ನೈಸರ್ಗಿಕ ವಲಯಗಳು ರೂಪಗೊಂಡಿವೆ. ಮರಾಠಾ ಆಡಳಿತ, ನಿಜಾಂ ಆಡಳಿತಗಳಿಂದಾಗಿ ಉತ್ತರ ಕರ್ನಾಟಕವು ಮುಂಬೈ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕಗಳೆಂಬ ಎರಡು ಉಪವಲಯಗಳನ್ನು ಹೊಂದಿದೆ. ಇದರಿಂದಾಗಿ ದಕ್ಷಿಣಕರ್ನಾಟಕ, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ, ಹೈದ್ರಾಬಾದ ಕರ್ನಾಟಕಗಳೆಂಬ ನಾಲ್ಕು ರಾಜಕೀಯ ವಲಯಗಳು ಕಳೆದ ಶತಮಾನದಲ್ಲಿ ನಿರ್ಮಾಗೊಂಡವು. ಈ ನೈಸರ್ಗಿಕ ಮತ್ತು ರಾಜಕೀಯ ವಲಯಗಳಿಂದಾಗಿ ಇಲ್ಲಿಯ ಸಾಮಾಜಿಕ ಭಾಷೆಯಂತೆ ಆಡಳಿತಭಾಷೆಯಲ್ಲಿಯೂ ಭಿನ್ನತೆ ಬೆಳೆದುಬಂದಿತು. ಆಡಳಿತವೆನ್ನುವುದು ರಾಜಕೀಯದ ಒಂದು ಭಾಗವಾಗಿರುವುದರಿಂದ ಮುಸಲ್ಮಾನ ಮತ್ತು ಮರಾಠಾ ರಾಜರ ಭಾಷೆಯ ಪ್ರಭಾವವೇ ಆಯಾ ಪ್ರದೇಶಗಳ ಆಡಳಿತದಲ್ಲಿ ಇಳಿದುಬಂದಿತು; ಆಡಳಿತದ ಮೂಲಕ ಜನಜೀವನವನ್ನೂ ಪ್ರವೇಶಿಸಿತು. ಇಂಥ ಭಿನ್ನಭಾಷಾವಲಯಗಳುಳ್ಳ ಕರ್ನಾಟಕ ರಾಜ್ಯದಲ್ಲಿ ಏಕರೂಪದ ಭಾಷಾ ಆಡಳಿತ ತರುವುದು ಸಾಧ್ಯವೇ? ಆಗ ಉದ್ಭವಿಸುವ ತೊಂದರೆಗಳೇನು? ಅವುಗಳಿಗೆ ಪರಿಹಾರವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.

ದೇಶ ದೊಡ್ಡದಾದಷ್ಟು, ಭೌಗೋಳಿಕ ಆತಂಕಗಳು ಅಧಿಕವಾದಷ್ಟೂ, ಆಡಳಿತ ವ್ಯವಸ್ಥೆ ಅನೇಕವಿದ್ದಷ್ಟೂ, ಸಂಪರ್ಕಸಾಧನ (ಸಾರಿಗೆ, ಸಮೂಹಮಾಧ್ಯಮ) ವಿರಳವಿದ್ದಷ್ಟೂ ಭಾಷಾಪ್ರಭೇದಗಳ ಸಂಖ್ಯೆ ವರ್ಧಿಸುತ್ತದೆ. ಕರ್ನಾಟಕ ಅಂಥ ದೊಡ್ಡ ಪ್ರಾಂತವಲ್ಲ. ಭೌಗೋಳಿಕ ಆತಂಕಗಳೂ ಅಧಿಕವಾಗಿಲ್ಲ. ಆದರೆ ಅನೇಕ ಅರಸರ ಆಡಳಿತ, ಸಂಪರ್ಕ ಸಾಧನಗಳ ಕೊರತೆಗಳಿಂದಾಗಿ ಈ ಹಿಂದೆ ಆಡಳಿತ ಭಾಷೆಯಲ್ಲಿ ಕೆಲವು ಪ್ರಭೇದಗಳು ಬೆಳೆದುಬಂದಿದ್ದವು. ಆದರೆ ಈ ೩೦ ವರ್ಷಗಳಲ್ಲಿ ಆಡಳಿತದ ಏಕತೆ, ಸಂಪರ್ಕಸಾಧನ ಸಮೂಹಮಾಧ್ಯಮಗಳ ಬಾಹುಳ್ಯಗಳಿಂದಾಗಿ ಭಾಷಾಪ್ರಾಂತಭೇದಗಳು ಕಡಿಮೆಯಾಗುತ್ತಲಿವೆ; ವೈವಿಧ್ಯತೆ ಏಕತೆಯತ್ತ ತಿರುಗುತ್ತಲಿದೆ. ಈ ಪ್ರಮಾಣಕ್ಕೆ ಅನುಗುಣವಾಗಿ ಈಗ ಪ್ರದೇಶವಿಶಿಷ್ಟ ಆಡಳಿತಪದಗಳು ಹಿಂದೆ ಸರಿದು, ಸಾರ್ವತ್ರಿಕ ಮನ್ನಣೆಯ ಪದಗಳು ಅಸ್ತಿತ್ವಕ್ಕೆ ಬಂದಿವೆ; ಬರುತ್ತಲಿವೆ. ಆದುದರಿಂದ ಈಗ ಅಲ್ಲಲ್ಲಿ ಅಳಿದುಳಿದಿರುವ ಪ್ರದೇಶನಿಷ್ಠ ಪಾರಿಭಾಷಿಕ ಪದಗಳು ಆಡಳಿತದಲ್ಲಿ ಅಷ್ಟಾಗಿ ತೊಂದರೆ ಕೊಡುವುದಿಲ್ಲ; ಇನ್ನು ಕೆಲವೇ ವರ್ಷಗಳಲ್ಲಿ ಇವು ವೇಗವಾಗಿ ಮಾಯವಾಗುತ್ತವೆ. ಹೀಗೆ ಮಾಯವಾಗುವಲ್ಲಿ ಯಾವ ಒಂದು ಪ್ರದೇಶದ ಪದಗಳು ಈ ತೆರನಾದ ಸ್ಥಾನವನ್ನು ಆಕ್ರಮಿಸುತ್ತವೆ ಎಂಬುದು ಇಲ್ಲಿಯ ಪ್ರಶ್ನೆ. ಯಾವ ಪ್ರದೇಶದಲ್ಲಿ ಆಡಳಿತ ಕೇಂದ್ರವಿರುತ್ತದೆಯೋ ಅಲ್ಲಿಯ ಆಡಳಿತ ಪದಗಳು ಎಲ್ಲಾ ಪ್ರದೇಶಗಳನ್ನು ಆಕ್ರಮಿಸುತ್ತವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ರಾಜಧಾನಿ ಬೆಂಗಳೂರು ಪ್ರದೇಶದ ಅಂದರೆ ಹಳೆಯ ಮೈಸೂರು ಪ್ರದೇಶದ ಆಡಳಿತ ಪದಗಳು ಮಿಕ್ಕ ಪ್ರದೇಶದ ಪದಗಳನ್ನು ಮೂಲೆಗುಂಪಾಗಿಸಿ, ತಮ್ಮ ಅಧಿಕಾರ ನಡೆಸುತ್ತವೆ. ಈಗಾಗಲೇ ಮೈಸೂರು ಪ್ರದೇಶದ ಖಜಾನೆ, ಗೇಣಿದಾರ್‌, ಹೋಬಳಿ, ಬಡಾವಣೆ, ಪಿಂಚಣಿ, ದಾಸ್ತಾನು ಇತ್ಯಾದಿ ಪದಗಳು ೧೫-೨೦ ವರ್ಷಗಳಲ್ಲಿ ಉತ್ತರ ಕರ್ನಾಟಕದಲ್ಲಿಯೂ ಬೇರೂರಿದುದು ಇದಕ್ಕೆ ನಿದರ್ಶನ. ಇದಕ್ಕೆ ಪ್ರತಿಯಾಗಿ ಉತ್ತರ ಕರ್ನಾಟಕ ವಿಶಿಷ್ಟವಾದ ಒಂದೂ ಪದ ಬಹುಶಃ ಇಂದು ಆಡಳಿತದ ಕಡತವೇರಿರಲಾರದು. ಇದು ಅನಿವಾರ್ಯ, ಸಹಜ.

ಈ ಬಗೆಯ ಸ್ಥಿತ್ಯಂತರ ಬೆಂಗಳೂರೇತರ ಪ್ರದೇಶಗಳ ಒಂದು ತಲೆಮಾರಿನ ಜನತೆಗೆ ತೊಂದರೆಯನ್ನುಂಟುಮಾಡಬಹುದು. ಮುಂದಿನ ತಲೆಮಾರಿನವರು ಹೀಗೆ ಬದಲಾದ ಪಾರಿಭಾಷಿಕ ಪದಗಳನ್ನು ಸಲೀಸಾಗಿ ಬಳಸುತ್ತಾರೆ. ಇಂದು ನಾವು ಮಾಡುವ ಯಾವುದೇ ಕೆಲಸ ಫಲ ನಮಗಾಗಿ ಅಲ್ಲ; ಮುಂದಿ ತಲೆಮಾರಿನವರಿಗಾಗಿ ಎಂಬ ತತ್ವದಂತೆ ಈ ಕ್ರಿಯೆ ಜರುಗುತ್ತದೆ. ಆದರೆ ಆಡಳಿತದ ಏಕತೆಯ ರಭಸದಲ್ಲಿ ಪ್ರಾಂತಭೇದಗಳಲ್ಲಿ ಸಿಗುವ ಅಪರೂಪದ ಪದಗಳು ಹಾಳಾಗಿಹೋಗದಂತೆ ಎಚ್ಚರವಹಿಸಬೇಕಾಗಿದೆ; ಅವುಗಳನ್ನು ಸಾರ್ವತ್ರಿಕ ಪ್ರಯೋಜನೆಗಾಗಿ ಬಳಸಿಕೊಳ್ಳಬೇಕಾಗಿದೆ.

ಆಡಳಿತ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಕೆಗೆ ತರುವುದೆಂದರೆ ಹೀಗೆ ಹೊಸದಾಗಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವುದು, ಬಳಸುವುದು ಎಂದು ಮಾತ್ರ ಕೆಲವರು ತಿಳಿದಿದ್ದಾರೆ. ಆದರೆ ಇಂಥ ಪರಿಭಾಷಿಕ ಪದಗಳಷ್ಟೇ ಆ ಭಾಷೆಯ ಸಾಮಾನ್ಯಪದಗಳೂ, ಸ್ಥಳೀಯ ಪರಿಭಾಷಿಕ ಪದಗಳೂ ಮುಖ್ಯವೆನಿಸುತ್ತವೆ. ಇವೆಲ್ಲ ಸೇರಿ ಒಂದು ಭಾಷೆಯಲ್ಲಿ ಸರಿಯಾಗಿ ವಾಕ್ಯವಾಗುವುದರ ಮೂಲಕ ಅರ್ಥ ಪ್ರತೀತಿಯನ್ನುಂಟು ಮಾಡುತ್ತವೆ. ಅಂದರೆ ಪದ ಯಾವುದೇ ಭಾಷೆಗೆ ಸಂಬಂಧಿಸಿದ್ದರೂ ವಾಕ್ಯಸಂಯೋಜನೆಯಲ್ಲಿ ಅವು ಕನ್ನಡವಾಗುತ್ತವೆ. ಉದಾ: ಪೂರ್ವ, ಸೂರ್ಯ, ಉದಯ ಇವು ಸಂಸ್ಕೃತಪದಗಳು. ಇದ್ದ ಸ್ಥಿತಿಯಲ್ಲಿ ಇವು ಒಂದು ವಿಷಯವನ್ನು ವ್ಯಕ್ತಪಡಿಸುವುದಿಲ್ಲ. ‘ಪೂರ್ವದಲ್ಲಿ ಸೂರ್ಯನ ಉದಯ’ವೆಂಬಂತೆ ಕನ್ನಡ ವಾಕ್ಯ ಸಂಯೋಜನೆಯಲ್ಲಿ ಹೊಂದಿಕೊಂಡಾಗ ಮಾತ್ರ ಅವು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತವೆ. ಆದುದರಿಂದ ಪರಿಭಾಷೆಗಳಷ್ಟೇ ವಾಕ್ಯಸಂಯೋಜನೆಯೂ ಆಡಳಿತದಲ್ಲಿ ಅವಶ್ಯ ಲಕ್ಷಿಸತಕ್ಕ ಸಂಗತಿಯಾಗಿದೆ. ಆಗ ಮಾತ್ರ ಒಂದು ಅಭಿಪ್ರಾಯ ಸರಿಯಾಗಿ ಸಂವಹನಗೊಳ್ಳುತ್ತದೆ. ಈ ತಿಳಿವಳಿಕೆಯ ಕೊರತೆಯಿಂದಾಗಿ ಎಷ್ಟೋ ಸಲ ವಾಕ್ಯದಲ್ಲಿ ಪ್ರಾದೇಶಿಕ ಪದಗಳು ಕಿಕ್ಕಿರಿದು ತುಂಬಿ, ಅರ್ಥ ಸಂವಹನೆಯನ್ನು ಹಾಳು ಮಾಡುತ್ತೇವೆ. ಉದಾ: ಬೆಳಗಾವಿಯಿಂದ ಹೊರಡುವ ‘ಕನ್ನಡಮ್ಮ’ ದಿನಪತ್ರಿಕೆಯ (೪, ಫೆಬ್ರುವರಿ ೧೯೮೫) ಒಂದು ನೋಟೀಸಿನ ಭಾಗವನ್ನು ಇಲ್ಲಿ ನೋಡಬಹುದು.

“ಶಹರ ಬೆಳಗಾಂವ ಶಹಾಪೂರ ಹದ್ದಿನಲ್ಲಿ ಇರುವ ದಾನೆಗಲ್ಲಿಯಲ್ಲಿ ಇದ್ದ ಮನೆ ನಂ.೭೯ಅ (ಹಳೇಮನೆ ನಂ.೭೯-೮೦) ಇದು ನಮ್ಮ ಪಕ್ಷಗಾರನಾದ ಮೇಲೆ ತಿಳಿಸಿದವರ ಮಾಲಕಿನಾತೆ ಇಂದೆ ಕಬಜಾ ವಹಿವಾಟಿನಲ್ಲಿ ಇರುತ್ತದೆ. ಹೀಗಿದ್ದಾಗಿಯೂ ಶ್ರೀ ಭರ್ಮಣ್ಣ ಅನಂತಪ್ಪಾ ಸಾಬನ್ನವರ ಇವರು ತಮ್ಮ ಹೆಸರು ಸಿ.ಟಿ.ಎಸ್‌. ರಿಕಾರ್ಡದಲ್ಲಿ ಇದ್ದ ಬಗ್ಗೆ ಗೈರಫಾಯದೆ ತೆಗೆದುಕೊಂಡು ಬೇರೆ ಜನರಿಗೆ ಮಾರುವ ವ ವಿಲೆವಾಟ್‌ಮಾಡುವ ಕಟಪಟಿಯಲ್ಲಿ ಇರುತ್ತಾರೆ.

ಇದು ವಕೀಲರ, ಸ್ಟಾಂಪ್‌ವೆಂಡರರ ಭಾಷೆ.[1] ಮೇಲೆ ಸೂಚಿಸಿದಂತೆ ಅಧಿಕಾರಿಗಳು ಸಂಸ್ಕೃತಪದಗಳನ್ನು ಅಗತ್ಯಮೀರಿ ಬಳಸಿ, ಕನ್ನಡ ವಾಕ್ಯಶಯ್ಯೆಯನ್ನು ಹಾಳುಮಾಡುತ್ತಿದ್ದರೆ, ಈ ವಕೀಲರೂ ಸ್ಟಾಂಪ್‌ವೆಂಡರರೂ ಪ್ರಾದೇಶಿಕ ಪದಗಳನ್ನು ಅಗತ್ಯಮೀರಿ ಬಳಸಿ ಕನ್ನಡದ ವಾಕ್ಯಶಯ್ಯೆಯನ್ನು ಹಾಳುಮಾಡುತ್ತ ನಡೆದಿದ್ದಾರೆ. ತಾವು ನಿವೃತ್ತರಾಗುವ ಮೊದಲು ಇವರು ತಮ್ಮ ಅಸಿಸ್ಟಂಟರಿಗೆ ಈ ಪ್ರಾದೇಶಿಕ ಬರವಣಿಗೆ ಶೈಲಿಯಲ್ಲಿ ತರಬೇತುಗೊಳಿಸುವುದರಿಂದ, ಸಾರ್ವತ್ರಿಕ ಆಡಳಿತಭಾಷಾ ಅನುಷ್ಠಾನ ಕಾರ್ಯದಲ್ಲಿ ಇವರು ಉದ್ದಕ್ಕೂ ಅಡಿಯಾಗುತ್ತಾರೆ. ಆದುದರಿಂದ ಇಂದು ಅಧಿಕಾರಿಗಳಿಗಾಗಿ ನಡೆಸುವಂತೆ ಈ ವಕೀಲರಿಗೂ, ಸ್ಟಾಂಪ್‌ವೆಂಡರರಿಗೂ ತರಬೇತಿ ಶಿಬಿರ ನಡೆಸುವುದು ಅವಶ್ಯವಿದೆ. ಒಟ್ಟಿನಲ್ಲಿ ಮೇಲಿನ ಸ್ತರದಲ್ಲಿ ಅನುವಾದಮೂಲದ ಕೃತಕಭಾಷೆ, ಕೆಳಗಿನ ಸ್ತರದಲ್ಲಿ ಪ್ರಾದೇಶಿಕತೆ ಮೂಲದ ಕೃತಕಭಾಷೆಗಳು ಸಮಾಂತರವಾಗಿ ನಮ್ಮ ಆಡಳಿತದಲ್ಲಿ ಪ್ರಸಾರಗೊಳ್ಳುತ್ತಲಿವೆ. ಈಗ ಇಬ್ಬರಲ್ಲಿಯೂ ಕಂಡುಬರುವ ಈ ವಿಶಿಷ್ಟ ಕೃತಕತೆಯನ್ನು ನಿವಾರಿಸುವುದಲ್ಲದೆ, ಇಬ್ಬರ ಮಧ್ಯದ ಕಂದಠವನ್ನು ಕಡಿಮೆ ಮಾಡಬೇಕು.

ಶಿಕ್ಷಣ, ಕೃಷಿ ಇತ್ಯಾದಿ ಕ್ಷೇತ್ರಗಳು ಆಯಾ ಕ್ಷೇತ್ರದ ವ್ಯಕ್ತಿಗಳಿಗೆ ಸಂಬಂಧಿಸಿದ್ದರೆ, ಆಡಳಿತ ಕ್ಷೇತ್ರವು ಇವರೂ ಒಳಗೊಂಡಂತೆ ಸಮಸ್ತ ಪ್ರಜೆಗಳಿಗೆ ಸಂಬಂಧಿಸಿದೆ. ಆದುದರಿಂದ ಆಡಳಿತಭಾಷೆ ಎಲ್ಲಾ ಸ್ತರದವರಿಗೂ ಅರ್ಥವಾಗುವಂತೆ ಹೀಗೆ ಹದಗೊಳ್ಳಬೇಕು.

೧. ಕನ್ನಡಪದಗಳೆಂದರೆ ಕೇವಲ ಕನ್ನಡ ಪದಗಳಲ್ಲ. ಕೇವಲ ಸಂಸ್ಕೃತಪದಗಳೂ ಅಲ್ಲ. ಕನ್ನಡಿಗರಿಗೆ ದಟ್ಟ ಪರಿಚಿತವಿರುವ ಯಾವುದೇ ಭಾಷೆಯ ಪದಗಳು. ಇಂಥ ಸಾರ್ವತ್ರಿಕ ಪರಿಚಯದ ಪದಗಳನ್ನು ಆಡಳಿತದಲ್ಲಿ ಬಳಸಬೇಕು.

೨. ಆಡಳಿತ ಭಾಷೆಯಲ್ಲಿ ಈ ವರೆಗೆ ಬಳಕೆಯಾಗುತ್ತ ಬಂದ ವಾಕ್ಯಶೈಲಿ ಬದಲಾಗಬೇಕು. ಅಂದರೆ ಕನ್ನಡೇತರ ಪದಗಳನ್ನು ಪರಿಮಿತ ಸಂಖ್ಯೆಯಲ್ಲಿ ಬಳಸುವುದು, ಕಾರಕಸಂಬಂಧ ಸ್ಪಷ್ಟವಾಗಿರುವಂತೆ ನೋಡಿಕೊಳ್ಳುವುದು, ಇತ್ಯಾದಿ ಕ್ರಿಯೆಗಳಿಂದ ಕನ್ನಡಭಾಷೆಯ ವಾಕ್ಯಶಯ್ಯೆ ಕೆಡದಂತೆ ಎಚ್ಚರವಹಿಸಬೇಕು.

ಈ ಎರಡು ದೃಷ್ಟಿಯಿಂದ ಅಧಿಕಾರಿಗಳಿಗೆ, ಸ್ಟಾಪ್‌ವೆಂಡರ್‌, ವಕೀಲರಿಗೆ ತರಬೇತಿ ನೀಡಬೇಕು, ಮತ್ತು ಆಡಳಿತ ಸುಗಮತೆಗಾಗಿ ಈಗ ಬಳಕೆಯಲ್ಲಿರುವ ನಮೂನೆ ಫಾರ್ಮುಗಳನ್ನು ಸಾರ್ವತ್ರಿಕ ಸಂವಹನ ದೃಷ್ಟಿಯಿಂದ ತಿದ್ದುಪಡಿ ಮಾಡಬೇಕು, ಸರಳಗೊಳಿಸಬೇಕು.

ಈ ಎಲ್ಲಾ ಕೆಲಸಗಳಾಗಬೇಕಾದರೆ ನಮ್ಮ ನಾಡಿನ ಆಡಳಿತದ ಶಿರೋಸಂಸ್ಥೆಯಾದ ವಿಧಾನಸೌಧ ಮೊದಲು ಸುಧಾರಿಸಬೇಕು. ಇಲ್ಲದಿದ್ದರೆ ‘ಯಥಾ ರಾಜಾ ತಥಾ ಪ್ರಜಾ’ ಎಂಬಂತೆ ವಿಧಾನಸೌಧ ಮಾಡುವ ತಪ್ಪನ್ನು ಎಲ್ಲರೂ ಮಾಡುತ್ತಾರೆ.

* “If you want to kill the Culture, your kil their language” ಎಂಬ ಜಾನ್‌ಮೆಕಾಲೆ ಇಲ್ಲಿ ಗಮನಿಸಬಹುದು.

[1] ಇವರು ಇಂದಿನ ಜನರಿಗಾಗ ನೂರು ವರ್ಷಗಳಷ್ಟು ಹಿಂದಿನ ವಾಕ್ಯಶೈಲಿಯನ್ನು, ಸಿದ್ಧವಾಕ್ಯಗಳನ್ನು ಬಳಸಿ ಜನತೆ ಮತ್ತು ಬರವಣಿಗೆಗಳ ಮಧ್ಯೆ ಕಂದರವನ್ನು ಕಾಪಾಡುತ್ತ ನಡೆದಿದ್ದಾರೆ.