ವಿದ್ವಾಂಸರು ಚರಿತ್ರೆಯಲ್ಲಿ ಕಂಡುಹಿಡಿಯುವ ಹೊಸ ಹೊಸ ಶೋಧ, ವಿಮರ್ಶಕರು ವರ್ತಮಾನದಲ್ಲಿ ಅವಲಂಬಿಸುವ ಹೊಸ ಹೊಸ ಮಾನದಂಡ ಕಾರಣವಾಗಿ ಸಾಹಿತ್ಯ ಚರಿತ್ರೆಯ ತಿಳಿವಳಿಕೆಯಲ್ಲಿ ಏರು-ಪೇರುಗಳುಂಟಾಗುವುದು ಸಹಜ. ಈ ದೃಷ್ಟಿಯಿಂದ ನೋಡಿದರೆ ವಿಶಿಷ್ಟ ಸಾಹಿತ್ಯವನ್ನು ಉತ್ಪಾದಿಸಿದ ಕಲ್ಯಾಣ ಚಾಲುಕ್ಯ ಚಕ್ರವರ್ತಿ ಜಯಸಿಂಹ-II (೧೦೧೫-೪೨)ನ ಆಸ್ಥಾನವು ವಿಮರ್ಶೆಯ ನ್ಯಾಯದಿಂದ ವಂಚಿತವಾಗಿದೆಯೆನಿಸುತ್ತದೆ.

ಇತ್ತೀಚೆಗೆ ವರ್ಧಮಾನಪುರಾನ ಲಭ್ಯವಾಗಿರುವ ಮೂಲಕ, ಮಹತ್ವದ ಲಾಕ್ಷಣಿಕ ನಾಗವರ್ಮ, ಮಹತ್ವದ ಕವಿ ನಾಗಚಂದ್ರರಕಾಲ ೧೨ನೆಯ ಶತಮಾನದಿಂದ ಹಿಂದೆ ಸರಿದು, ೧೧ನೆಯ ಶತಮಾನಕ್ಕೆ ವಿಶೇಷತೆ ಪ್ರಾಪ್ತವಾಗಿದೆ. ಆದರೆ ೧೦ನೆಯ ಶತಮಾನದ ವೀರಯುಗ,  ೧೨ನೆಯ ಶತಮಾನದ ಭಕ್ತಿಯುಗಗಳೆಂಬ ಪ್ರಸಿದ್ಧ ಘಟ್ಟಗಳ ನಡುವೆ ಅಲಕ್ಷಿತವಾಗಿದ್ದ ಈ ೧೧ನೆಯ ಶತಮಾನ, ಇಂದು ನಮ್ಮ ತೀವ್ರ ಗಮನ ಸೆಳೆಯುತ್ತಲಿದೆ.

ಕರ್ನಾಟಕದ ರಾಜಕೀಯ ವೇದಿಕೆಯ ಮೇಲೆ ರಾಷ್ಟ್ರಕೂಟರು ಮರೆಯಾಗಿ, ಕಲ್ಯಾಣ ಚಾಲುಕ್ಯರು ಮೂಡಿಬಂದ ಪರಿಣಾಮವಾಗಿ, ೧೧ನೆಯ ಶತಮಾನದ ಸಮಾಜದಲ್ಲಿ ಜೈನವಾತಾವರಣಕ್ಕೆ ಬದಲು ವೈದಿಕವಾತಾವರಣ ಬಿಚ್ಚಿಕೊಳ್ಳತೊಡಗಿದ್ದಿತು. ಕವಿರಾಜ ಮಾರ್ಗಕಾರ ನಿರ್ಮಿಸಿಕೊಟ್ಟಿದ್ದ ಸಾಹಿತ್ಯಮಾರ್ಗ ಪಂಪ, ರನ್ನರಂಥ ದೊಡ್ಡ ಕವಿಗಳ ಸಂಚಾರದಿಂದ ಸವಕಳಿಹೊಂದಿ, ಹೊಸಮಾರ್ಗ ಅಗತ್ಯವೆನಿಸಿದ್ದಿತು. ಈ ಅಗತ್ಯವನ್ನು ಪೂರೈಸಲು ಅವಕಾಶ ಮಾಡಿಕೊಟ್ಟವ ಕಲ್ಯಾಣ ಚಾಲುಕ್ಯ ಮನೆತನದ ಜಗದೇಕಮಲ್ಲ ಜಯಸಿಂಹ-II (೧೦೧೫-೪೨). ಇವನ ಆಸ್ಥಾನದಲ್ಲಿದ್ದ ನಾಗಚಂದ್ರ (೧೦೨೫), ದುರ್ಗಸಿಂಹ (೧೦೨೫), ನಾಗವರ್ಮ-II (೧೦೪೨), ಚಾವುಂಡರಾಯ (೧೦೨೫), ಚಂದ್ರರಾಜ (೧೦೨೫), ವಜ್ರಭಟ್ಟ (೧೧ನೆಯ ಶತಮಾನದ ಪೂರ್ವಾರ್ಧ) ತಮ್ಮ ವಿಶಿಷ್ಟ ಕಾಣಿಕೆಗಳಿಂದಾಗಿ ಹೊಸ ದಾರಿ ತೆರೆದವರಾಗಿದ್ದಾರೆ. ಈ ದಾರಿಗಳಲ್ಲಿ  ಕೆಲವು ಹೆದ್ದಾರಿಗಳಾಗದಿದ್ದರೂ, ಇವರ ಹೊಸ ಬಗೆಯ ಪ್ರಯತ್ನ ಮಾತ್ರ ಮೆಚ್ಚುವಂತಹವು. ಇದು ಅಪ್ರಜ್ಞಾಪೂರ್ವಕ ಪ್ರಯತ್ನಕ್ಕಿಂತ ರಾಜನಿರ್ದೇಶಿತ ಪ್ರಜ್ಞಾಪೂರ್ವಕ ಪ್ರಯತ್ನವೆನಿಸುತ್ತದೆ. ಈ ಹಿಂದೆ ರಾಷ್ಟ್ರಕೂಟ ನೃಪತುಂಗನ ಆಸ್ಥಾನದಂತೆ ಅಂಥದೇ ಒಂದು ಪ್ರಯತ್ನ ಜಯಸಿಂಹ-II ನ ಆಸ್ಥಾನದಲ್ಲಿ ಜರುಗಿರಬೇಕೆನಿಸುತ್ತದೆ. ಅದು ಈ ಮೊದಲು ಇಲ್ಲದ ಹಾದಿಯನ್ನು ಹೊಸದಾಗಿ ನಿರ್ಮಿಸಿದುದು, ಇದು ಇರುವ ಹಳೆಯ ಹಾದಿಯ ಮಗ್ಗುಲಲ್ಲಿ ಇನ್ನೊಂದು ಹೊಸದಾದಿ ನಿರ್ಮಿಸಿದುದು. ಅದು ಆಸ್ಥಾನ ಕೇಂದ್ರಿತ ಪ್ರಯತ್ನ, ಇದು ಆಸ್ಥಾನ ಕೇಂದ್ರಿತವಾಗಿದ್ದರೂ ವಿಕೇಂದ್ರಿತ ಪ್ರಯತ್ನ. ಬೆಳ್ಗೊಳ ಶಾಸನವು ‘‘ಶ್ರೀಮಚ್ಚಾಳುಕ್ಯಚಕ್ರೇಶ್ವರ ಜಯಕಟಕೇ ವಾಗ್ವಧೂಜನ್ಮಭೂಮಿ” ಯಲ್ಲಿ ವಿದ್ವಾಂಸಕವಿ ವಾದಿರಾಜನು ಶೋಭಿಸಿದನೆನ್ನುತ್ತ, ಈ ಜಯಸಿಂಹನ ಕಟಕ (ರಾಜಧಾನಿಯ)ವನ್ನು “ವಾಗ್ವಧೂಜನ್ಮಭೂಮಿ” ಎಂದು ವರ್ಣಿಸಿದುದು, ಅದರ ಸಾರಸ್ವತ ಚಟುವಟಿಕೆಗಳಿಗೆ ಸಾಕ್ಷಿಯೆನಿಸಿದೆ. ಈ ಚಾಲುಕ್ಯ ಕಟಕಕ್ಕೆ ಉಪಾಧ್ಯಾಯನಾಗಿದ್ದವನು, ಎರಡನೆಯ ನಾಗವರ್ಮ.

ಜನನಾಥಂ ಜಗದೇನಲ್ಲಿ ಕಟಕೋಪಾಧ್ಯಾಯನಾ ನಾಗವ
ರ್ಮನಿದಾನೀಂತನ
ಶರ್ವವರ್ಮನೆ ಗಡಂ, ಜನ್ನಂಗುಪಾಧ್ಯಾಯಯನಿಂ
ದು
ನೃಸಿಂಹಕ್ಷಿತಿಪಾಲನಲ್ಲಿ ಕಟಕೋಪಾಧ್ಯಾಯನಾರೆಂಬ? ಸೂ
ಕ್ತಿನವೀನೋಜ್ವಳ
ಬಾಣನಪ್ಪ ಸುಮನೋಬಾಣಂ ಕವಿಶ್ರೇಷ್ಣರೊಳ್‌||

ಇದು ಜನ್ನನ ಅನಂತನಾಥ ಪುರಾಣದ ಪದ್ಯ. ತನಗೆ ಗುರುವಾಗಿದ್ದವನು ಹೊಯ್ಸಳರ ಕಟಕೋಪಾಧ್ಯಾಯನಾದ ಕವಿ ಸುಮನೋಬಾಣ. ಈತನು ಜಗದೇಕಮಲ್ಲ ಜಯಸಿಂಹನಲ್ಲಿ ಕಟಕೋಪಾಧ್ಯನಾಗಿದ್ದ ಆ (ಪ್ರಸಿದ್ಧ)ನಾಗವರ್ಮನಿಗೆ ಸಮಾನವಾಗಿರುವನೆಂದು ೨೦೦ ವರ್ಷ ದೂರನಿಂತು ಜನ್ನ ಹೇಳಿದುದು, ನಾಗವರ್ಮನ ಮತ್ತು ಅವನಿಂದಾಗಿ ವಿದ್ಯಾವಾತಾವರಣ ಪಡೆದಿದ್ದ ರಾಜಧಾನಿ (ಕಟಕ) ಕಲ್ಯಾಣದ ಘನತೆಗೆ ಸಾಕ್ಷಿ ನುಡಿಯುತ್ತದೆ. ಬಹುಶಃ ಕರ್ನಾಟಕದಲ್ಲಿ ಕಟಕೋಪಾಧ್ಯಾಯ ಹುದ್ದೆ ಇಲ್ಲಿಂದಲೇ ಆರಂಭವಾದಂತಿದೆ. ಇದನ್ನೇ ಹೊಯ್ಸಳರು ಅನುಸರಿಸುವಲ್ಲಿ ಕವಿಸುಮನೋಬಾಣ, ಬಳಿಕ ಕೇಶಿರಾಜರು ಆ ಅಧಿಕಾರ ವಹಿಸಿಕೊಂಡುದನ್ನು ಇಲ್ಲಿ ನೆನೆಯಬೇಕು.

ಈ ಕವಿಗಳಲ್ಲಿ ನಾಗವರ್ಮನು ಕಟಕಾಚಾರ್ಯನಾಗಿ, ದುರ್ಗಸಿಂಹನು ಸಂಧಿ ವಿಗ್ರಹಿಯಾಗಿ ರಾಜಧಾನಿಯಲ್ಲಿಯೇ ನೆಲೆಸಿರಬಹುದು. ಚಾವುಂಡರಾಯ ಸರ್ವಾಧಿಕಾರಿಯಾಗಿ ಮಹಾಬಳಿ ಗ್ರಾಮದಲ್ಲಿದ್ದನು. ಚಂದ್ರರಾಜ ರೇಚನೃಪನಲ್ಲಿದ್ದನು. ನಾಗಚಂದ್ರ ತನ್ನ ಗ್ರಾಮವಾದ ವಿಜಾಪುರದಲ್ಲಿ, ವಜ್ರಭಟ್ಟ ತನ್ನ ಗ್ರಾಮವಾದ ಕಾಂಚನ ಮುದುವೊಳಲಲ್ಲಿರಬಹುದು. ಇವರೆಲ್ಲರನ್ನು ಏಕಸೂತ್ರದಲ್ಲಿ ಹೆಣೆದವನು ಚಕ್ರವರ್ತಿ ಜಯಸಿಂಹ. ಇವನ ಕೃಪೆಯಲ್ಲಿದ್ದ ಈ ಕವಿಗಳು ತುಳಿದ ಹೊಸಹಾದಿಯ ಫಲವಾಗಿ, ಈ ಕೆಳಗಿನ ಆವಿಷ್ಕಾರಗಳು ತೆರೆದುಕೊಂಡವು

. ವಿನೂತನ ಸೃಜನಸಾಹಿತ್ಯ
. ಟೀಕಾಅನುಆದ ಸಾಹಿತ್ಯ
. ಕಾವ್ಯಶಾಸ್ತ್ರ ಸಾಹಿತ್ಯ
. ಕಾವ್ಯೇತರಶಾಸ್ತ್ರ ಸಾಹಿತ್ಯ
. ಗದ್ಯಸಾಹಿತ್ಯ
. ವಚನಸಾಹಿತ್ಯ

ಜಯಸಿಂಹನಿಗಿಂತ ಮೊದಲು ಪಂಪ-ರನ್ನಾದಿಗಳಿಂದ ಸೃಜನಸಾಹಿತ್ಯ ಮಾತ್ರ ವಿಜೃಂಭಿಸಿದ್ದಿತು. ಇಲ್ಲಿ ವಿನೂತನ ಸೃಜನ ಸಾಹಿತ್ಯವಲ್ಲದೆ, ಬೇರೆ ಐದು ಶಾಖೆಗಳು ಅನಾವರಣಗೊಂಡುದು ಒಂದು ಸಾಧನೆಯೆಂದೇ ಹೇಳಬೇಕು.

* * *

“ವರ್ಣಕ+ಕಥೆ”ಗಳ ಸಮನ್ವಯದ ಲೌಕಿಕ ಕಾವ್ಯ, ಕೇವಲ “ಕಥೆ”ಯನ್ನೊಳಗೊಂಡ ಧಾರ್ಮಿಕ ಕಾವ್ಯ-ಹೀಗೆ ಎರಡು ಕಾವ್ಯ ಸಂಪ್ರದಾಯಗಳಿಗೆ ಪಂಪ ನಾದಿ ಹಾಡಿದನು. ಈ ಹಾದಿಯಲ್ಲಿ ಪೊನ್ನ, ರನ್ನ ಮುನ್ನಡೆದರು. ನಾಗಚಂದ್ರ ಮಾತ್ರ ಮೊತ್ತಮೊದಲಿಗನಾಗಿ ಈವರೆಗಿನ ಲೌಕಿಕಕಾವ್ಯ ಪರಂಪರೆಯನ್ನು ಪ್ರತಿಭಟಿಸಿದ. ಇದಕ್ಕೆ ಅವನು ಕೊಡುವ ಕಾರಣಗಳು ಎರಡು. ಅರಿಕೇಸರಿಯಂಥ ಸಾಮಾನ್ಯರನ್ನು ಕಥಾವಸ್ತುಮಾಡಿಕೊಳ್ಳುವುದು ಸಾಹಿತ್ಯದ ದುರ್ಬಳಕೆಯನ್ನುವುದು ಅವನ ಮೊದಲನೆಯ ವಾದ. ಇಂಥ ಲೌಕಿಕ ಕಾವ್ಯಗಳು ಎಂಟು ರಸಗಳನ್ನು ಉದ್ದೀಪನಗೊಳಿಸಿ ಭಾವವನ್ನು ವಿಕಾರಗೊಳಿಸುತ್ತವೆ ಎನ್ನುವುದು ಅವನ ಎರಡನೆಯ ವಾದ. ಆದುದರಿಂದ “ನಾಯಕನನನ್ಯನಾಗೆ ಕೃತಿ ವಿಶ್ರುತಮಾಗದುದಾತ್ತ ರಾಘವಂ ನಾಯಕನಾಗೆ ವಿಶ್ರುತಮೆನಿಪ್ಪುದು” ಎಂದು ಸಾರುವ ಮೂಲಕ, ಸಾಹಿತ್ಯವು ರಾಜಸ್ತುತಿಗೆ ನಿರತವಾಗುವುದನ್ನು ನಿರಾಕರಿಸಿದ. ಮನುಜರ ಮೇಲೆ ಸಾವವರ ಮೇಲೆ ಕಾವ್ಯ ಬರೆಯಬಾರದೆನ್ನುವ ಹರಿಹರನಿಗೆ ಮೇಲ್ಪಂಕ್ತಿಯಾದ. ಎಂಟು ರಸಗಳ ಕಾವ್ಯ ಬರೆದರೂ ಅಂತಿಮದಲ್ಲಿ ಒಂಬತ್ತನೆಯದಾಗಿ ಶಾಂತರಸವನ್ನು ಸೃಷ್ಟಿಸಿ, ವಿಕಾರಗೊಂಡ ಮನಸ್ಸು ನಿರ್ವಿಕಾರಗೊಳ್ಳುವಂತೆ ಮಾಡಬೇಕೆಂದು ವಾದಿಸಿದ. ಮತ್ತು ತನ್ನ ರಾಮಚಂದ್ರಚರಿತ ಪುರಾಣವನ್ನು ಆ ರೀತಿ ರಚಿಸಿದ. ಇದು ಕನ್ನಡ ಸೃಜನ ಸಾಹಿತ್ಯದ ಇತಿಹಾಸದಲ್ಲಿ ತುಂಬ ಮಹತ್ವದ ವಿಚಾರ. ಹೀಗೆ ಪಂಪನ ವಿಚಾರಕ್ಕೆ ಪ್ರತಿ ವಿಚಾರ ನೀಡಿದ ಕಾರಣ, ತನ್ನನ್ನು “ಅಭಿನವಪಂಪ” ಎಂದು ಕರೆದುಕೊಂಡ. ಮನುಷ್ಯರನ್ನು ಸ್ತುತಿಸಬಾರದೆಂಬ ಭಾವ ಕಾರಣವಾಗಿಯೇ ತನ್ನ ಯಾವ ಕಾವ್ಯದಲ್ಲಿಯೂ ಇವನು ಪಂಪ, ರನ್ನಾದಿಗಳ (ಚಾಮರಸನೂ ಹರಿಹರ ರಾಘವಾಂಕರನ್ನು ಸ್ತುತಿಸುವುದಿಲ್ಲವೆಂಬುದನ್ನು ಇಲ್ಲಿ ಸ್ಮರಿಸಬಹುದು) ಪ್ರಸ್ತಾಪವನ್ನೇ ಮಾಡಲಿಲ್ಲ. ಇಷ್ಟೇ ಏಕೆ “ಜನಪತಿ ಸಭೆಯೊಳ್‌ಪೂಜ್ಯ” ಅಂದರೆ ಜಯಸಿಂಹನ ಸಭೆಯಲ್ಲಿ ಪೂಜ್ಯನಾಗಿದ್ದರೂ ತನ್ನ ಕಾವ್ಯದಲ್ಲಿ ಅವನ ಹೆಸರು, ವಂಶಾವಳಿ ಇತ್ಯಾದಿ ಪ್ರಸ್ತಾಪವನ್ನು ಮಾಡಲಿಲ್ಲ. ಈ ಜಯಸಿಂಹನಲ್ಲಿ ಕಟಕಚಾರ್ಯನಾಗಿದ್ದ ನಾಗವರ್ಮನೂ ರಾಜನ ಹೆಸರನ್ನೇ ಎತ್ತರದಿರುವುದಕ್ಕೆ ನಾಗಚಂದ್ರನ ಮಾರ್ಗಾನುಸರಣೆಯೇ ಕಾರಣವೆಂದು ಕಾಣುತ್ತದೆ. (ಇದೇ ಆಸ್ಥಾನದಲ್ಲಿದ್ದ ದುರ್ಗಸಿಂಹ, ಚಾವುಂಡರಾಯ, ಚಂದ್ರರಾಜರೆಂಬ ಬ್ರಾಹ್ಮಣಕವಿಗಳು ರಾಜನಾದ ಜಯಸಿಂಹನನ್ನು ಹೊಗಳುತ್ತಿರುವುದು ಗಮನಿಸಬೇಕಾದ ಅಂಶವಾಗಿದೆ.) ಹೀಗೆ ವಸ್ತು, ರಸದೃಷ್ಟಿಯಿಂದ ಸೃಜನಸಾಹಿತ್ಯದಲ್ಲಿ ಹೊಸದಾರಿ ತೆರೆದವನಾಗಿದ್ದಾನೆ, ನಾಗಚಂದ್ರ. ನಾಗವರ್ಮ, ಜನ್ನ ಮೊದಲಾದವರು ರಾಜನ ಆಶ್ರಯದಲ್ಲಿದ್ದರೂ ಪಂಪನ ತಗುಳ್ಚಿ ಹೇಳುವ ಹಾದಿಯನ್ನು ಬಿಟ್ಟು, ಈ ಹೊಸದಾರಿಯಲ್ಲಿ ಮುನ್ನಡೆದುದನ್ನು ಇಲ್ಲಿ ಗಮನಿಸಬೇಕು.

* * *

ಈ ಆಸ್ಥಾನದ ಇನ್ನೊಂದು ಕಾಣಿಕೆಯೆಂದರೆ ಟೀಕಾ-ಅನುವಾದ ಸಾಹಿತ್ಯ. ಪ್ರಾಚೀನಕಾಲದ ಕನ್ನಡ ಸಾಹಿತ್ಯವು ಸಂಸ್ಕೃತ-ಪ್ರಾಕೃತ ಮತ್ತು ಕನ್ನಡವೆಂಬ ದ್ವಿಭಾಷಾ ಸಂದರ್ಭದಲ್ಲಿ ಬದುಕುಮಾಡಿದೆ. ಈ ಮೊದಲು ಸಂಸ್ಕೃತ-ಪ್ರಾಕೃತ ಕೃತಿಗಳಿಗೆ ಟೀಕೆ ಬರೆದ ಸೂಚನೆಗಳಿದ್ದರೂ ಅವು ಲಭ್ಯವಿಲ್ಲ. ಅದರ ಮುಂದುವರಿಕೆಯೆಂಬಂತೆ ನಾಗವರ್ಮನು ಹಲಾಯುಧ ನಿಘಂಟುವಿಗೆ ಟೀಕೆ ಬರೆದಿದ್ದಾನೆ. ಬಹುಶಃ ತನ್ನ ಲೋಕಾಪಕಾರಕ್ಕೆ ಚಾವುಂಡರಾಯನೇ ಟೀಕೆ ಬರೆದಿರುವ ಸಂಭವವಿದೆ.

ಕನ್ನಡ ಸಾಹಿತ್ಯ ಸಂಸ್ಕೃತ ಕೃತಿಗಳಿಗೆ ಒಂದಿಲ್ಲ ಒಂದು ರೀತಿಯಲ್ಲಿ ಋಣಿಯಾಗುತ್ತಲೇ ಬಂದಿದ್ದಿತು. ಸ್ವಲ್ಪ ಹಿಂದೆ ನಾಗವರ್ಮನು ಬಾಣನ ಕಾದಂಬರಿಯ ಛಾಯಾನುವಾದ ಮಾಡಿದ್ದರೂ, ನಿಜವಾದ ಭಾವಾನುವಾದದ ಕೃತಿಯು ಜಯಸಿಂಹನ ಆಸ್ಥಾನದ ದುರ್ಗಸಿಂಹನ ಕನ್ನಡ ಪಂಚತಂತ್ರ. ಈ ಕಾಲದ ಜೈನರದು ಸೃಜನ ಪ್ರತಿಭೆಯಾದರೆ ಬ್ರಾಹ್ಮಣರದು ಭಾಷಾಂತರ ಪ್ರತಿಭೆಯೆಂದೇ ಹೇಳಬೇಕು. ಏಕೆಂದರೆ ಶಾಸ್ತ್ರ, ಧರ್ಮ ಇತ್ಯಾದಿಗಳ ನೆಲೆಯಾಗಿದ್ದ ಅಗ್ರಹಾರದ ಪ್ರಭಾವಕ್ಕೆ ಒಳಗಾಗಿದ್ದ ಅಂದಿನ ಬ್ರಾಹ್ಮಣಸಮಾಜದಲ್ಲಿ ಕವಿಗಳಿಗೆ ಬದಲು ವಿದ್ವಾಂಸರು ಹುಟ್ಟುವುದು ಸಾಧ್ಯವಿತ್ತು. ಈ ವಿದ್ವತ್ತು ಕಾರಣವಾಗಿ ದುರ್ಗಸಿಂಹನಂಥವರು ಭಾಷಾಂತರ ಕಾರ್ಯದಲ್ಲಿ ನಿರತರಾದರು.

ಇದಕ್ಕೆ ಪೂರಕವೆನ್ನುವಂತೆ ಈ ಆಸ್ಥಾನದಲ್ಲಿ ಸಂಸ್ಕೃತ ಕೃತಿಗಳೂ ತಲೆದೋರಿದುದು ಇನ್ನೊಂದು ಬೆಳವಣಿಗೆಯೆನಿಸಿದೆ. ಕನ್ನಡೇತರರ ಅನುಕೂಲಕ್ಕಾಗಿ ಕನ್ನಡ ಭಾಷೆಯನ್ನು ಕುರಿತ ಕರ್ಣಾಟಭಾಷಾಭೂಷಣ ಹೆಸರಿನ ಕೃತಿಯನ್ನು ನಾಗವರ್ಮ II ಸಂಸ್ಕೃತದಲ್ಲಿ ಬರೆದನು. ಈ ಜಗದೇಕಮಲ್ಲ ಜಯಸಿಂಹನ ಆಸ್ಥಾನದಲ್ಲಿದ್ದ ಜೈನಮುನಿ ಸಂಸ್ಕೃತ ಕವಿ ವಾದಿರಾಜನು “ಜಗದೇಕಮಲ್ಲವಾದಿ” ಎಂದೇ ಖ್ಯಾತಿ ಹೊಂದಿದ್ದನು.

ಅದ್ವೈತವಾದಿ ನಿವಹ | ದದ್ವಿರದ ಘಟಾವಿಪಾಟನೈಕಪ್ರಟಿಷ್ಠಂ |
ಸ್ಯಾದ್ವಾದಾಚಲಸಿಂಹಂ
| ವಿದ್ವಾಂಸರ್ಪೊಗಳೆ ವಾದಿರಾಜಂ ನೆಗಳ್ದಂ ||

ಎಂದು ನಾಗವರ್ಮನ ಕಾವ್ಯಾವಲೋಕನದಲ್ಲಿ (ಪದ್ಯ ೧೮೮) ಕೀರ್ತಿತನಾದ ಇವನು, ಪಾರ್ಶ್ವನಾಥಚರಿತೆ, ಯಶೋಧರ ಚರಿತೆ ಮೊದಲಾದ ಐದು ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾನೆ. ಈ ವಾದಿರಾಜನು ಸಹವರ್ತಿಗಳಾದ ದುರ್ಗಸಿಂಹನ ಪಂಚತಂತ್ರ, ನಾಗವರ್ಮನ ವರ್ಧಮಾನಪುರಾಣಗಳನ್ನು ತಿದ್ದಿರುವ ವಿಷಯ ಆಯಾ ಕಾವ್ಯಗಳಲ್ಲಿಯೇ ಸೂಚಿತವಾಗಿದೆ. ಹೀಗೆ ಸಂಸ್ಕೃತಕವಿಗಳಿಗೆ ಆಶ್ರಯ ನೀಡುವುದು, ಈತನ ಮೊಮ್ಮಗ ಆರನೆಯ ವಿಕ್ರಮಾದಿತ್ಯನು ವಿಕರಮಾಂಕದೇವಚರಿತೆಯ ಬಿಲ್ಹಣನನ್ನು ಪೋಷಿಸುವಲ್ಲಿಯೂ ಮುಂದುವರಿಯಿತು.

* * *

ಕನ್ನಡ ಸಾಹಿತ್ಯಕ್ಕೆ ಶಾಸ್ತ್ರಮಾರ್ಗವನ್ನು ನಿರ್ಮಿಸುವ ದೃಷ್ಟಿಯಿಂದ, ಇನ್ನೂರು ವರ್ಷಗಳ ಹಿಂದೆ ರಾಷ್ಟ್ರಕೂಟ ನೃಪತುಂಗನ ಆಸ್ಥಾನದಲ್ಲಿ ಕವಿರಾಜಮಾರ್ಗ ಹೆಸರಿನ ಅಲಂಕಾರಕೃತಿ ಸೃಷ್ಟಿಯಾಗಿದ್ದರೆ, ಈಗ ಚಾಲುಕ್ಯ ಜಯಸಿಂಹನ ಆಸ್ಥಾನದಲ್ಲಿ ಕಾವ್ಯಾವಲೋಕನ ಹೆಸರಿನ ಅಲಂಕಾರಕೃತಿ ಸೃಷ್ಟಿಯಾಯಿತು. ಕವಿರಾಜಮಾರ್ಗ ಸೂಚಿಸಿದ ವಿವರಗಳು, ಆಮೇಲೆ ಇನ್ನೂರು ವರ್ಷಗಳಲ್ಲಿ ಬೆಳೆದು ನಿಂತ ಕನ್ನಡ ಭಾಷೆ-ಸಾಹಿತ್ಯಗಳಿಗೆ ಸಾಲದೇ ಹೋಗುವಲ್ಲಿ, ಇನ್ನಷ್ಟು ವಿಸ್ತೃತ ರೂಪದ ಲಾಕ್ಷಣಿಕ ಗ್ರಂಥವನ್ನು ಕನ್ನಡಕ್ಕೆ ನಾಗವರ್ಮ ಪೂರೈಸಿದ ಈ ಪ್ರಯತ್ನ ಕವಿರಾಜಮಾರ್ಗ ನಿರ್ಮಾಣವನ್ನು ನೆನೆಪಿಸುತ್ತಿದ್ದರೂ ಅದು ಹೊಸಹಾದಿ ನಿರ್ಮಾಣ ರೀತಿಯದು, ಇದು ಇರುವ ಹಾದಿಯನ್ನು ವಿಸ್ತರಿಸಿದ ರೀತಿಯದು. ಹೀಗಿದ್ದೂ ಇಲ್ಲಿ ಕವಿಸಮಯ ಮೊದಲಾದ ಸ್ವತಂತ್ರ ಪ್ರಕರಣಗಳನ್ನು ಕಾಣಬಹುದಾಗಿದೆ. ೨೫೦ ಸೂತ್ರ, ೭೦೦ ರಷ್ಟು  ಪ್ರಯೋಗಗಳಿಂದಾಗಿ ಇದು ಒಂದು ಪರಿಪೂರ್ಣ ಅಲಂಕಾರ ಕೃತಿಯೆನಿಸಿದೆ.

ಮೇಲೆ ಸೂಚಿಸಿರುವ ಸಂಸ್ಕೃತ ಕರ್ಣಾಟಭಾಷಾಭೂಷಣದೊಂದಿಗೆ ಇಲ್ಲಿಯ ಶಬ್ದಸ್ಮೃತಿಯೆಂಬ ವ್ಯಾಕರಣ ಪ್ರಕರಣವನ್ನೂ ಗಮನಿಸಿದರೆ, ಇವನು ಕನ್ನಡ ವ್ಯಾಕರಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬೆರಗು ಹುಟ್ಟಿಸುತ್ತದೆ.

ಕಾವ್ಯಾಭ್ಯಾಸಕ್ಕೆ ಅವಶ್ಯವೆನಿಸಿರುವ ನಿಘಂಟನ್ನು ನೀಡುವ ದೃಷ್ಟಿಯಿಂದ ಸಂಸ್ಕೃತ ಪದಗಳಿಗೆ ಕನ್ನಡದಲ್ಲಿ ಅರ್ಥ ಹೇಳುವ “ವಸ್ತುಕೋಶ” ಹೆಸರಿನ ನಿಘಂಟನ್ನೂ ರಚಿಸಿದ್ದಾನೆ. “ಹಲಾಯುಧ ನಿಘಂಟು” ಹೆಸರಿನ ಕೃತಿಯೂ ಇವನದೆಂದೇ ಭಾವಿಸಲಾಗಿದೆ.

ಇವುಗಳಿಗೆ ಹೆಚ್ಚಿನದಾಗಿ ಇವನು ‘ಛಂದೋವಿಚಿತಿ’ ಹೆಸರಿನ ಛಂದೋಗ್ರಂಥ ಬರೆದುದಾಗಿ ಹೇಳಿಕೊಂಡಿದ್ದಾನೆ. ಬಹುಶಃ ಮೊದಲನೆಯ ನಾಗವರ್ಮನ ಛಂದೋಂಬುಧಿಯಲ್ಲಿ ಇದು ಸೇರಿಕೊಂಡಂತಿದೆ.

ಹೀಗೆ ಅಲಂಕಾರ, ವ್ಯಾಕರಣ, ನಿಘಂಟು, ಛಂದಸ್ಸುಗಳೆಂಬ ಎಲ್ಲ ಸಾಹಿತ್ಯ ಶಾಸ್ತ್ರಗಳನ್ನು ಒಬ್ಬನೇ ಪೂರೈಸಿಕೊಟ್ಟ ಏಕೈಕ ಉದಾಹರಣೆಯಾಗಿದ್ದಾನೆ, ನಾಗವರ್ಮ ಈ ದೃಷ್ಟಿಯಿಂದ ಅವನ ಸಾಹಿತ್ಯಶಾಸ್ತ್ರ ಸೇವೆ ತುಂಬ ಗಮನಾರ್ಹವೆನಿಸುತ್ತದೆ. ಇದಕ್ಕೆ ಪೂರಕವೆಂಬಂತೆ ಇವನು ವರ್ಧಮಾನಪುರಾಣವೆಂಬ ಸಾಹಿತ್ಯ ಕೃತಿಯನ್ನೂ ರಚಿಸಿದ್ದಾನೆ.

* * *

ಇವುಗಳಿಂದ ತುಂಬ ಭಿನ್ನವೆಂಬಂತೆ ಜರುಗಿದ ಹೊಸ ಕೃಷಿಯಾಗಿದೆ, ಸಾಹಿತ್ಯೇತರ ಶಾಸ್ತ್ರಗಳ ರಚನೆ. ಜಯಸಿಂಹನ ಆಸ್ಥಾನದ್ದು ದೊಡ್ಡ ಕನಸೆಂದು ಇಂಥ ರಚನೆಗಳು ತಿಳಿಸುತ್ತವೆ. ಇದರಿಂದ ನಿತ್ಯಜೀವನಕ್ಕೆ ಅವಶ್ಯವಿರುವ ಹೊಸ ಶಾಸ್ತ್ರಗಳು ಕನ್ನಡಿಗರಿಗೆ ಲಭ್ಯವಾದುದಲ್ಲದೆ, ಕನ್ನಡಭಾಷೆ ಸಾಹಿತ್ಯೇತರಕ್ಷೇತ್ರಗಳಲ್ಲಿಯೂ ದುಡಿಯಲರಂಭಿಸುವಲ್ಲಿ, ಅದರ ಸಾಮರ್ಥ್ಯ ವಿಸ್ತಾರಗೊಳ್ಳತೊಡಗಿತು. ಇದರ ಫಲವೆಂಬಂತೆ ಹುಟ್ಟಿದ ಚಂದ್ರರಾಜನ ಮದನತಿಲಕವು ಕಾಮನಶಾಸ್ತ್ರವಾಗಿದೆ. ಇಂತಹದೇ ಇನ್ನೊಂದು ಸಾಹಿತ್ಯೇತರ ಶಾಸ್ತ್ರವಾಗಿದೆ, ವಜ್ರಭಟ್ಟನ ವೀರಾವಳಿ. ಇದರಲ್ಲಿ ಮಳೆ, ಬೆಳೆ, ವಿವಾಹ, ಪುತ್ರ, ಯುದ್ಧ, ರಾಜ, ನೃತ್ಯ, ವಾಣಿಜ್ಯ ಇತ್ಯಾದಿ ವಿಷಯಗಳ ಪ್ರತಿಪಾದನೆ ಇದೆ.

ಈ ಎಲ್ಲ ವಿಷಯಗಳೂ ಒಳಗೊಂಡಂತೆ ಚಾವುಂಡರಾಯನಿಂದ “ಲೋಕೋಪಕಾರ” ಹುಟ್ಟಿಕೊಳ್ಳುವ ಮೂಲಕ ಕನ್ನಡಕ್ಕೆ ವಿಶ್ವಕೋಶರಚನೆಯ ಸಾಮರ್ಥ್ಯವನ್ನು ತಂದುಕೊಡಲಾಯಿತು. ಪಂಚಾಂಗ, ವಾಸ್ತು, ಉತ್ಪಾತ, ಉದಕ, ವೃಕ್ಷಾಯುರ್ವೇದ, ಸೂಪ, ನರವೈದ್ಯ, ವಿಷವೈದ್ಯ, ಶಕುನ ಇತ್ಯಾದಿ ವಿಷಯಗಳನ್ನೊಳಗೊಂಡ ಪುಟ್ಟ ವಿಶ್ವಕೋಶವಿದು. ಇದರ ಬಿಡಿರೂಪಗಳೆಂಬಂತೆ ಮುಂದೆ ಒಂದೆರಡು ದಶಕಗಳಲ್ಲಿಯೇ ಶ್ರೀಧರಾಚಾರ್ಯನ ಜಾತಕತಿಲಕ, ಕೀರ್ತಿವರ್ಮನ ಗೋವೈದ್ಯ, ಜಗದ್ದಳ ಸೋಮನಾಥನ ಕಲ್ಯಾಣಕಾರಕ ಹುಟ್ಟಿದುದನ್ನು ಇಲ್ಲಿ ನೆನೆಯಬಹುದು. ಬಹುಶಃ ಈ ಚಟುವಟಿಕೆಗಳಿಂದ ಸ್ಫೂರ್ತಿಗೊಂಡು, ಈ ಜಯಸಿಂಹನ ಮೊಮ್ಮಗ ಸೋಮೇಶ್ವರನು ಸಂಸ್ಕೃತದಲ್ಲಿ “ಮಾನಸೊಲ್ಲಾಸ” ಹೆಸರಿನ ಸಂಸ್ಕೃತ ವಿಶ್ವಕೋಶ ರಚಿಸಿದನು. ಹೀಗೆ ಕೇವಲ ಸಾಹಿತ್ಯಕ್ಕೆ, ಬಹಳೆಂದರೆ ಸಾಹಿತ್ಯಶಾಸ್ತ್ರ ರಚನೆಗೆ ಸೀಮಿತವಾಗಿದ್ದ ಬರಹಕ್ರಿಯೆ, ವಿಸ್ತಾರ ಪಡೆದುದು ಈ ಯುಗದ ವಿಶೇಷತೆಯಾಗಿದೆ.

ಕನ್ನಡ ಮಾರ್ಗಸಾಹಿತ್ಯದ ಸತ್ವ ಜೀರ್ಣವಾಗಿ, ಹೊಸದಾರಿಯನ್ನು ಹುಡುಕುತ್ತಲಿದ್ದ ಸಂದರ್ಭದಲ್ಲಿ, ದೇಶೀ ಅಭಿವ್ಯಕ್ತಿಯನ್ನು ಸಾಹಿತ್ಯಿಕ ಹಂತಕ್ಕೆ ಎತ್ತಿನಿಲ್ಲಿಸಿದ ಕೀರ್ತಿ ವಚನಗಳಿಗೆ ಸಲ್ಲುತ್ತದೆ. ೧೨ನೆಯ ಶತಮಾನದ “ವಚನ” ಪ್ರಕಾರಕ್ಕೆ ಮೊದಲು, ಜನತೆ ಜನತೆಗಾಗಿ ನಿರ್ಮಿಸುತ್ತಲಿದ್ದ “ಸೂಳ್ನುಡಿ” ಪ್ರಕಾರವೊಂದು ತಕ್ಕ ಪ್ರಮಾಣದಲ್ಲಿ ಬೆಳೆದಿದ್ದಿತೆಂದು ತೋರುತ್ತದೆ. ಈ ಸೂಳ್ನುಡಿ ಪ್ರಕಾರದ ಆದ್ಯ ವಚನಕಾರ ಜೇಡರ ದಾಸಿಮಯ್ಯನೆಂಬುದು ಗೊತ್ತಿರುವ ವಿಷಯ. ಈ ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ ಅಭಿನ್ನರೆಂದು ಕೆಲವರ ಅಭಿಮತ. ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರವು ದೇವರದಾಸಿಮಯ್ಯ-ರಾಮೇಶ್ವರ-ಮುದನೂರುಗಳಲ್ಲಿ ಸಂಬಂಧ ಕಲ್ಪಿಸಿದುದು ಇದಕ್ಕೆ ಆಧಾರವಾಗಿದೆ. ಇದು ನಿಜವಿದ್ದರೆ ದೇವರ ದಾಸಿಮಯ್ಯನ “ವಾದ”ಕ್ಕೆ ಆಸ್ಥಾನದಲ್ಲಿ ಅವಕಾಶ ಮಾಡಿಕೊಟ್ಟ ಜಯಸಿಂಹನ ಕಾಲದಲ್ಲಿಯೇ ವಚನಸಾಹಿತ್ಯ ಕಣ್ಣು ತೆರೆಯಿತೆಂದು ಹೇಳಬೇಕಾಗುತ್ತದೆ.

* * *

ಹೀಗೆ ಸಾಹಿತ್ಯದಲ್ಲಿ ವಿವಿಧ ವಿಷಯಗಳು ವಸ್ತುವಾಗುವುದರ ಜೊತೆಗೆ, ಈ ವರೆಗೆ ಪ್ರಧಾನವಾಗಿದ್ದ ಪದ್ಯದ ಜೊತೆ ಗದ್ಯವನ್ನೂ ಮಾಧ್ಯಮವಾಗಿ ದುಡಿಸಿಕೊಳ್ಳುವ ಸಾಧ್ಯತೆಯನ್ನು ಈ ಆಸ್ಥಾನ ಕಂಡುಕೊಂಡಿತು. ಇದರ ಫಲವಾಗಿ ದುರ್ಗಸಿಂಹನ ಪಂಚತಂತ್ರ ಗದ್ಯದಲ್ಲಿ ಆವಿರ್ಭಟಿಸಿತು. ಇದಲ್ಲದೆ ಹಲಾಯುಧ ಟೀಕೆ, ಲೋಕೋಪಕಾರ ಟೀಕೆಗಳಿಗೆ ಬಳಸಿದ ಗದ್ಯವನ್ನೂ ಇಲ್ಲಿ ನೆನೆಯಬಹುದು.

ಇದೇ ಕಾಲದ ಇನ್ನೊಂದು ಯತ್ನವೆಂದರೆ ಛಂದಸ್ಸಿನ ಪ್ರಯೋಗಶೀಲತೆ. ಈ ದೃಷ್ಟಿಯಿಂದ ಚಂದ್ರರಾಜನ ಮದನತಿಲಕ ಇಡಿ ಕನ್ನಡ ಸಾಹಿತ್ಯದಲ್ಲಿಯೇ ವಿಶಿಷ್ಟವೆನಿಸಿದೆ. ಹೊಸ ಹೊಸ ಛಂದೋವೃತ್ತಗಳನ್ನದೆ, ಶಬ್ದಾಲಂಕಾರನಿಷ್ಠ ವಿಶಿಷ್ಟ ವೃತ್ತಗಳನ್ನೂ ಈತ ಬರೆದಿದ್ದಾನೆ.

* * *

ಕನ್ನಡ ನೆಲದಲ್ಲಿ ತಲೆಯೆತ್ತಿದ ಈ ಹೊಸ ಹೊಸ ಪೈರು ಕಾರಣವಾಗಿ ಜಯಸಿಂಹನ ಆಸ್ಥಾನವನ್ನು ಹೊಸ ಆವಿಷ್ಕಾರಗಳ ಜನ್ಮಭೂಮಿಯೆಂದೇ ಹೇಳಬಹುದು.