ವಚನ ಸಾಹಿತ್ಯಕ್ಕೆ ಕನ್ನಡದಲ್ಲಿ ಕನಿಷ್ಠ ೮೫೦ ವರ್ಷಗಳ ಇತಿಹಾಸವಿದೆ. ಈ ಸುದೀರ್ಘ ಕಾಲಾವಧಿಯಲ್ಲಿ ಕೆಲವರು ಬದಲಾದ ಧೋರಣೆಗೆ ತಕ್ಕ ಹೊಸ ಹೊಸ  ವಚನಗಳನ್ನು ರಚಿಸುತ್ತ, ಇದು ಸಾಧ್ಯವಾಗದಿದ್ದರೆ ಹಳೆಯ ವಚನಗಳ ಪಾಠವ್ಯತ್ಯಾಸ ಮಾಡುತ್ತ ಬಂದಿದ್ದಾರೆ. ಇದರಿಂದಾಗಿ ವಚನಸಾಹಿತ್ಯದಲ್ಲಿ ಮೂರು ಹಂತಗಳು ಕಂಡುಬರುತ್ತವೆ. ಅವು: ಬಸವಪೂರ್ವದ ‘ಸೂಳ್ನುಡಿ’ ಹಂತ, ಬಸವಯುಗದ ‘ವಚನ’ ಹಂತ, ಬಸವೋತ್ತರಯುಗದ ‘ವಚನಾಗಮ’ ಹಂತ. ಈ ಮೂರು ಶಬ್ದಗಳ (ಸೂಳ್ನುಡಿ, ವಚನ, ವಚನಾಗಮ) ಅರ್ಥ, ಈ ಶಬ್ದಗಳ ಹಿಂದಿರುವ ಧೋರಣೆ, ರಚನೆಯ ಸ್ವರೂಪ ಇತ್ಯಾದಿಗಳನ್ನು ಕುರಿತು ಇಲ್ಲಿ ಚರ್ಚಿಸಬಹುದು.

ಸೂಳ್ನುಡಿ ಹಂತ

ಬಸವಣ್ಣನ “ಆದ್ಯರ ವಚನವಿರಲು ಬೇರೆ ಬಾವಿಯ ತೋಡಿ ಉಪ್ಪನೀರ ಸವಿದಂತಾಯಿತೆನ್ನ ಭಕ್ತಿ” ಎಂಬ ವಾಕ್ಯವನ್ನು ಗಮನಿಸಿ, ಅವನಿಗೆ ಮೊದಲು ವಚನಸಾಹಿತ್ಯ ಸೃಷ್ಟಿಯಾಗಿದ್ದಿತೆಂದು ಹೇಳಲಾಗುತ್ತದೆ. “ನಿಮ್ಮ ಶರಣರ ಶೂಲ್ನುಡಿಯ ಒಂದರಗಳಿಗೆ ಇತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥಾ” ಎಂಬ ಜೇಡರ ದಾಸಿಮಯ್ಯನ ವಚನವನ್ನು ಗಮನಿಸಿ, ಅವನ ಕಾಲದಲ್ಲಿ ಅಥವಾ ಆ ಪೂರ್ವದಲ್ಲಿ ವಚನ ರಚನೆ ನಡೆದಿದ್ದಿತೆಂದೂ, ಅದನ್ನು ಸೂಳ್ನುಡಿ ಎಂದು ಕರೆಯುತ್ತಿರಬಹುದೆಂದೂ ಭಾವಿಸಲಾಗುತ್ತದೆ. ಹೀಗಾಗಿ, ಇಲ್ಲಿ ಮೊದಲು ಸೂಳ್ನುಡಿ ಶಬ್ದದ ಅರ್ಥ, ಸಾಹಿತ್ಯದ ಸ್ವರೂಪಗಳ ಬಗ್ಗೆ ವಿವೇಚಿಸಬಹುದು.

ಈ ಮೊದಲು ನಾನು ‘ಸೂಳ್ನುಡಿ’ ಶಬ್ದದ ನಿಷ್ಪತ್ತಿ ಹೇಳಲುಪ್ರಯತ್ನಿಸಿದ್ದೇನು (ಮಾರ್ಗ III-೨೦೪). ವಚನವೆಂಬ ಸಂಸ್ಕೃತ ಶಬ್ದಕ್ಕೆ ಪ್ರತಿಜ್ಞೆಯೆಂಬ ಅರ್ಥವಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು, ಇದೇ ಅರ್ಥದ ದ್ರಾವಿಡ ಶಬ್ದ ಸೂಳ್ನುಡಿಯಾಗಿರಬಹುದೆಂದು ಭಾವಿಸಿ, ಸೂರುಳ್ (=ಪ್ರತಿಜ್ಞೆ)+ ನುಡಿ = ಸೂರುಳ್ನುಡಿ> ಸೂಳ್ನುಡಿಯೆಂದು ನಿಷ್ಪತ್ತಿಯನ್ನು ಊಹಿಸಿದ್ದೆನು. ಈಗ ಬೇರೆ ಕೆಲವು ಸಾಧ್ಯತೆಗಳನ್ನು ಹೇಳಬಹುದಾಗಿದೆ.

೧. ಸೂಳ್ನುಡಿ ಎಂಬ ಶಬ್ದವನ್ನು ಸೂಡ +ನುಡಿ ಎಂದೂ ಬಿಡಿಸಬಹುದಾಗಿದೆ. ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ “ಸೂಡ (ನಾ) [ಸಂಗೀತ] ಹಾಡು ಗೀತ : ಸೂಡ ಎಂಬ ದೇಶೀ ಶಬ್ದವು ಹಾಡನ್ನು ನಿರ್ದೇಶಿಸುತ್ತದೆ. (ಚತುಪ್ರ ೭೦) (ದೇ. ತೆಲು. ಸೂಳ)” ಎಂದು ಸೂಡ ಶಬ್ದಕ್ಕೆ ಅರ್ಥ ಹೇಳಲಾಗಿದೆ. ವಚನಗಳು ಒಂದರ್ಥದಲ್ಲಿ ಹಾಡುಗಳೇ ಆಗಿರುವುದನ್ನು ಆಶಾದಾಯಕವೆನಿಸುತ್ತದೆ.

೨. ಸೂಳ್ನುಡಿ ಎಂಬುದನ್ನು ಸೂಡು+ನುಡಿ ಎಂದೂ ಬಿಡಿಬಹುದು. ಸೂಡು ಎಂದರೆ ಕಟ್ಟು. ಬೌದ್ಧಸಾಹಿತ್ಯವನ್ನು ಪಿಟಕ (=ಪೆಟ್ಟಿಗೆ, ಬುಟ್ಟಿ)ಎಂದು ಕರೆದಂತೆ ಅನುಭಾವಿಗಳ ಈ ಸಾಹಿತ್ಯವನ್ನು ಕನ್ನಡಿಗರು ‘ಸೂಡು’ ಎಂದು ಕರೆದಿರುವ ಸಾಧ್ಯತೆಯಿದೆ. ಹೀಗಾಗಿ ಶರಣರ ನುಡಿಗಳ ಸೂಡು ಅರ್ಥದಲ್ಲಿ ಸೂಡುನುಡಿ>ಸೂೞ್ನುಡಿ>ಸೂಳ್ನುಡಿ ಪದ ಆಕಾರ ಪಡೆದಿರಬಹುದಾಗಿದೆ. ಈ ಎರಡಕ್ಕಿಂತ ಕೆಳಗಿನ ಮೂರನೆಯ ಸಾಧ್ಯತೆ ಹೆಚ್ಚು ಸಮಂಜಸವೆನಿಸುತ್ತದೆ.

೩. ಸೂೞ್ ಎಂಬ ರಳಘಟಿತ ಶಬ್ದವು ಸೂಳ್‌ಎಂದೂ ಕುಳಘಟಿತವಾಗಿ ಪ್ರಾಚೀನಕೋಶಗಳಲ್ಲಿ ಸಿಗುತ್ತದೆ. ಉದಾ. “ಸೂೞೆಂದೆ ಬಾರಿ” (ಕರ್ಣಾಟ ಶಬ್ದಸಾರ, ೭೧-೬೧೧), “ಸೂಳೆಂದು ಬಾರಿ” (ಕರ್ನಾಟಕ ಕವಿಕಂಠಾಭರಣ, ೨೪೧). ಇಲ್ಲಿ ‘ಬಾರಿ’ ಎಂಬುದಕ್ಕೆ ‘ಸಲ’ ಎಂದು ಅರ್ಥ. ಒಂದು ಕ್ರಿಯೆ ಮತ್ತೆ ಮತ್ತೆ ಘಟಿಸುವುದನ್ನು ಸೂಚಿಸುವುದಕ್ಕಾಗಿ ಇದು ಬಳಕೆಯಾಗುತ್ತದೆ. ಉದಾ: ಎರಡು ಸಲ, ಮೂರು ಸಲ ಇತ್ಯಾದಿ. ಮಾತಿಗೆ (ನುಡಿಗೆ) ಸಂಬಂಧಪಟ್ಟಂತೆ ಹಲವರ ಅನುಭವದಲ್ಲಿ ಮತ್ತೆ ಮತ್ತೆ ಪರಿಷ್ಕರಣಗೊಂಡ ನುಡಿ ಅಂದರೆ “ಗಾದೆಮಾತು” ಎಂದೂ, ಹಲವರ ಪ್ರಶ್ನೋತ್ತರದಲ್ಲಿ ಮಥನಗೊಂಡ “ಸುಭಾಷಿತ ನುಡಿ”ಯೆಂದೂ ಇದು ಎರಡು ಅರ್ಥಛಾಯೆ ಪಡೆದು ಪ್ರಾಚೀನಕಾಲದಲ್ಲಿ ಬಳಕೆಯಾಗುತ್ತ ಬಂದಿದೆ. ಸಾಹಿತ್ಯದಲ್ಲಿ ಸಿಗುವ ಪ್ರಯೋಗಗಳಿಂದ ಇದನ್ನು ಸ್ಪಷ್ಟಪಡಿಸಿಕೊಳ್ಳಬಹುದು.[1]

ಅ. “ಬಡವರ ನಡೆ ಬಲ್ಲಿದರ್ಗೊಪ್ಪದೆಂದು ಸೂಳ್ನುಡಿದರವರು ಇವನೊಡನೆ” (ಭರಚ ೫೮-೬೨), ಇಲ್ಲಿ ಗಾದೆಮಾತು ಅರ್ಥದಲ್ಲಿ ಈ ಶಬ್ದ ಪ್ರಯೋಗಗೊಂಡಿದೆ. ವಚನಗಳು ಗಾದೆ ಮಾತುಗಳಲ್ಲವಾಗಿ ಈ ಅರ್ಥವನ್ನು ಕೈಬಿಟ್ಟು, ಬೇರೆ ಪ್ರಯೋಗಗಳನ್ನು ನೋಡಬಹುದು.

ಆ. “ದಾನಿಗಳ ಬಲ್ಲಹನು ಮುನಿಯೊಡನೆ ಸೂಳ್ನುಡಿಗೊಟ್ಟನು” (ಹಕಾ ೮-೬೬) “ನೀನೀ ಗಿಳಿಯೊಡನೆ ಸೂಳು ನುಡಿವುತಿರೆ ಬಂದೆ ನಾ ನುಡಿಗಳ ಕೇಳಲು” (ಚರಕ ೭-೫೪) “ಗೋಪಿಯನಿಕ್ಷುವಾಟಿಯೊಳ್‌ಕಂಡೆರಳ್ಮೂಱು ಸೂೞ್ನುಡಿಗಳಿಂದೊಲಿಸಿಕೊಂಡು” (ಪದ್ಮರಾ ೮-೧೯). ಇಲ್ಲೆಲ್ಲ “ಸಂಭಾಷಣೆ” ಎಂದೇ ಅರ್ಥವಿದೆ. ಇದನ್ನು “ಸೂೞುನುಡಿ ಸಲ್ಲಾಪವೆಂಬುದು” (ಹಲಾಯು ೨೪-೧೪೯), “ವ್ಯಾಪಿಸುವ ಸೂಳುನುಡಿ ಸಲ್ಲಾಪಮಕ್ಕುಂ” (ಮಂಗರಾಜ, ೨೭-೫) ಎಂದು ನಿಘಂಟುಗಳು ಸಮರ್ಥಿಸುತ್ತವೆ. ಈ ಸೂಳ್ನುಡಿಯೆಂಬುದು ಸುೞ್ಮಾತು, ಸುಳುವಾತು ರೂಪಗಳಲ್ಲಿಯೂ ಸಿಗುತ್ತದೆ:

೧. “ಇರ್ವರ್ ಪದಿರಿನಿಂ ನುಡಿವ ಸೂೞ್ಮಾತುಗಳಂ ಕಾಪಿನವರುಂ ಪೊಳಲ ಮನುಜರುಂ ಕೇಳ್ದು” (ವಡ್ಡಾ ೧೨೫-೧೦).

೨. “ಸೂೞ್ಮಾತನಾಡಿ ಸೋಲ್ತು ಕಂದರ್ಪದೇವ ಕಟಾಕ್ಷ ಪ್ರೇಷಿತ ಪೀಠಮರ್ದಕನಿಂದರ್ಧಚಂದ್ರನಂ ಪಡೆವುದುಂ” (ಲೀಲಾ ೨-೧೨೪ ವ).

೩. “ಸೂಳುವಾತಿನ ಹೆಂಬಳಿಯ ಹೀಹಾಳಿಕೆಯ ಹೇವಗಳ ಮನದುಬ್ಬಾಳಿನಿಂದೆಚ್ಚಾಡಿದವರು ಮೆಚ್ಚಲು ಸುರವ್ರಾತ” (ಕು.ಭಾ. ೬-೫೦-೧೨)

ಇಲ್ಲಿಯೂ ಸ್ಪರ್ಧೆ, ವ್ಯಂಗ್ಯ (=ಪದಿರು_ ಇತ್ಯಾದಿಗಳಿಂದ ಕೂಡಿದ ಸಂಭಾಷಣೆ, ಸಂವಾದನೆಂಬ ಅರ್ಥವೇ ಇದೆ. ಒಟ್ಟಾರೆ, ಸೂಳ್ನುಡಿಯೆಂದರೆ ಅನುಭಾವಿಗಳ ಸಂವಾದದಲ್ಲಿ ಸೃಷ್ಟಿಯಾದ ಸೂಕ್ತಿಸಾಹಿತ್ಯವೆಂದು ಹೇಳಬಹುದು.

ಇನ್ನು ಪ್ರಾಚೀನ “ಸೂಳ್ನುಡಿ” ಸಾಹಿತ್ಯ ಪ್ರಕಾರದ ಸ್ವರೂಪವನ್ನು ಕುರಿತು ಹೇಳುವುದಾದರೆ, ಇದು ಆಮೇಲೆ ಹುಟ್ಟಿದ ವಚನಕ್ಕಿಂತ ಹೆಚ್ಚು ಲಯಾತ್ಮಕವಾಗಿರಬಹುದಾಗಿದೆ. “ನಾನೊಂದು ಸುರಗಿಯನು ಏನೆಂದು ಹಿಡಿಯುವೆನು” ಇತ್ಯಾದಿ ಜೇಡರ ದಾಸಿಮಯ್ಯನ ವಚನಗಳಲ್ಲಿ ಈ ಲಕ್ಷಣವನ್ನು ಕಾಣಬಹುದು. ಈತನ “ಇಳೆ ನಿಮ್ಮದಾನ ಬೆಳೆ ನಿಮ್ಮ ದಾನ” ಮೊದಲಾದ ವಚನಗಳು ಸರ್ವಜ್ಞನ ತ್ರಿಪದಿ ಮತ್ತು ಲಿಂಗಾಯತನಾಗುವ ಮೊದಲು ನಾಥಸಿದ್ಧನಾಗಿದ್ದ ಸಿದ್ಧರಾಮನ ರಚನೆಗಳಲ್ಲಿಯೂ ಇಂಥ ಲಯ ಎದ್ದು ಕಾಣುತ್ತದೆ. “ಯೋಗಿನಾಥ” ಮುದ್ರಿಕೆಯ ಈತನ ಕೆಲವು ರಚನೆಗಳು ಗದ್ಯ, ಪದ್ಯ ಎರಡೂ ರೂಪಗಳಲ್ಲಿ ಸಿಗುವುದು ಇದಕ್ಕೆ ನಿದರ್ಶನವೆನಿಸಿದೆ. ಸಿದ್ಧರಾಮನ “ಕಪಿಲಸಿದ್ಧ ಮಲ್ಲಿನಾಥ”ದಂತೆ ದಾಸಿಮಯ್ಯನ ಮುದ್ರಿಕೆಯಾದ “ರಾಮನಾಥ”ವೆಂಬಲ್ಲಿಯೂ “ನಾಥ” ಪದ ಸೇರಿಸಿಕೊಂಡಿರುವುದನ್ನು ನೋಡಿದರೆ, ಇವನೂ ಲಿಂಗಾಯತನಾಗುವ ಮೊದಲು ಸಿದ್ಧರಾಮನಂತೆ “ನಾಥ” ಪಂಥೀಯನಿರಬಹುದೇ? ಎನಿಸುತ್ತದೆ. ಇವನ ರಚನೆಗಳಲ್ಲಿ ಷಟ್ಸ್ಥಲ ಮೊದಲಾದ ಲಿಂಗಾಯತ ಪರಿಭಾಷೆಗಳಿಲ್ಲದುದನ್ನು, ಕೇವಲ ಸಾಮಾನ್ಯ ಆಧ್ಯಾತ್ಮ, ನೀತಿಬೋಧೆ ಇರುವುದರಿಂದ “ಸೂಳ್ನುಡಿ” ಎಂಬುದು ಮೂಲತಃ ಕರ್ನಾಟಕದ ನಾಥಸಂಪ್ರದಾಯದವರ ಸಾಹಿತ್ಯ ಪ್ರಕಾರವಾಗಿರಬಹುದೇ? ವಿಚಾರಿಸಬೇಕು.

ನಾಥ ಸಂಪ್ರದಾಯದ ಮುಖ್ಯ ಲಕ್ಷಣಗಳು ೧. ಗುರುಪಂಥದ ಅನುಸರಣೆ, ೨. ಶಾಸ್ತ್ರ ಪ್ರಮಾಣಕ್ಕಿಂತ ಅನುಭಾವ ಪ್ರಮಾಣದ ನಂಬಿಕೆ ೩. ಸತ್ಸಂಗದ ಒಲುಮೆ, ೪. ಪ್ರಾದೇಶಿಕ ಭಾಷೆಯಲ್ಲಿ ಸಾಹಿತ್ಯ ರಚನೆ, ೫. ಸಂಧಾ ಭಾಷೆ (ಬೆಡಗಿನ ಭಾಷೆ)ಯ ಬಳಕೆ, ೬. ವರ್ಣಭೇದ-ಲಿಂಗಭೇದ ನಿರಾಕರಣೆ. ಇವೆಲ್ಲ ಲಕ್ಷಣಗಳೂ ಶರಣ ಸಂಸ್ಕೃತಿಯಲ್ಲಿಯೂ ಕಂಡುಬರುತ್ತವೆ. ಶರಣರು “ಶಿವಪಥವನರಿವೊಡೆ ಗುರುಪಥ ಮೊದಲು” ಎಂದು ಗುರುಪಂಥವನ್ನು ಎತ್ತಿ ಹಿಡಿಯುತ್ತಾರೆ. “ಶಾಸ್ತ್ರವೆಂಬುದು ಸಂತೆಯ ಸುದ್ದಿ” ಎಂದು ಉಪೇಕ್ಷಿಸಿ, ಅನುಭಾವ ಪ್ರಮಾಣವನ್ನು ಬೆಂಬಲಿಸುತ್ತಾರೆ. ಶರಣರ ಅನುಭಾವ ಮಂಟಪವು ನಾಥಪಂಥದ “ಸತ್ಸಂಗ”ವನ್ನು ನೆನಪಿಗೆ ತರುತ್ತದೆ. ನಾಥಪಂಥೀಯರು ಸಂಸ್ಕೃತಿ ಇತ್ಯಾದಿ ಶಿಷ್ಟಭಾಷೆಗಳನ್ನು ಬಿಟ್ಟು ತಮ್ಮ ತಮ್ಮ ಪ್ರಾದೇಶಿಕ ಆಡುನುಡಿ ಬಳಸಿದಂತೆ ಶರಣರೂ ಕನ್ನಡಿಗರ ಆಡುನುತಿಯನ್ನೇ ಬಳಸಿದ್ದಾರೆ. ಅಲ್ಲಮಪ್ರಭು ಮೊದಲಾದವರು ಆಗಾಗ ಸಧಾಭಾಷೆ (ಬೆಡಗಿನ ವಚನ)ಯಲ್ಲಿ ವಚನ ಬರೆದಿದ್ದಾರೆ. ನಾಥಪಂಥದಲ್ಲಿ ಜಲಂಧರನಾಥ ಶೂದ್ರನಾಗಿದ್ದನಲ್ಲದೆ, ಸನ್ಯಾಸಿಯ ಮಕ್ಕಳೆಂದು ತಿರಸ್ಕೃತರಾದ ಜ್ಞಾನೆಶ್ರರಾದಿ ಸೋದರರನ್ನು ಈ ಪಂಥ ಗೌರವಿಸದ್ದಿತು. ಈ ಪಂಥದ ಯೋಗಿಣಿಯರನ್ನು ಕುರಿತು ಹೇಳುವುದಾದರೆ ಗೋರಖನಾಥನ ಶಿಷ್ಯರಲ್ಲಿ ವಿಮಲಾದೇವಿ, ಮಯನಾವತಿ ಮುಖ್ಯರೆನಿಸಿದ್ದರು. ಗೋರಖರು ವಿಮಲಾದೇವಿಗಾಗಿ ಗೋರಕ್ಷೋಪನಿಷತ್ತು ಬರೆದಿದ್ದು, ಇವಳಿಂದ ಆಯೀಪಂಥ ಉಗಮಗೊಂಡಿತು. ಭರ್ತೃಹರಿಯ ಶಿಷ್ಯೆ ಮುಕ್ತಾಯಿಯೆಬಂ ಯೋಗಿಣಿಯಿದ್ದಳು. ಆವುಸಾ ಎಂಬವಳ ಉಲ್ಲೇಖ ಮರಾಠಿ ಲೀಳಾ ಚರಿತ್ರೆಯಲ್ಲಿದೆ. ಜ್ಞಾನೇಶ್ರರನ ಸೋದರಿ ಮುಕ್ತಾಬಾಯಿ ಚಾಂಗದೇವನಿಗೆ ಉಪದೇಶ ನೀಡಿದವಳಾಗಿದ್ದಾಳೆ. ಜನಾಬಾಯಿ, ಬಹಿಣಾಬಾಯಿ, ವಿಠಾಬಾಯಿ ಎಂಬವರು ಸ್ವಲ್ಪ ಹೆಚ್ಚು ಕಡಿಮೆ ಇದೇ ಮಾಡಿದ್ದಾರೆ. ವಿಠಾಬಾಯಿ ಮರಾಠಿಯಲ್ಲಿ ೪ ಸಾವಿರ ಅಭಂಗ, ಕೆಲವು ಪದ್ಯ ಬರೆದಿರುವುದು ತಿಳಿದುಬರುತ್ತದೆ. ಇವುಗಳಲ್ಲಿ ೬೦೦ ಅಭಂಗ, ಕೆಲವು ಪದ್ಯಗಳು ಲಭಿಸಿವೆ. ಇವರೆಲ್ಲ ಕನ್ನಡ ವಚನಕಾರ್ತಿಯರಂತೆ ಆಧ್ಯಾತ್ಮಿಕ-ಸಾಹಿತ್ಯಕ ಪರಂಪರೆಯನ್ನೇ ನಿರ್ಮಿಸಿದ್ದಾರೆ. ಅಕ್ಕಮಹಾದೇವಿಯಂತೆ ಕೆಲವೊಮ್ಮೆ ’ಕದಳಿ’ ಭಾಗವಾಗಿ ಕಾಣಿಸಿಕೊಂಡಿದ್ರದಾರೆ. ಒಟ್ಟಾರೆ, ಕನ್ನಡದ ಸೂಳ್ನುಡಿ ಪ್ರಕಾರವು ಕರ್ನಾಟಕದಲ್ಲಿ ನಾಥ ಸಂಪ್ರದಾಯದವರ ಕೊಡುಗೆಯಾಗಿರುವ ಸಾಧ್ಯತೆಯಿದೆ.

ವಚನ ಹಂತ

ಸಿದ್ಧರಾಮನಂತವರ ವಚನಬಂಧದ ಶಿಥಿಲತೆಯನ್ನು ಬಿಗಿಗೊಳಿಸಿ, ದಾಸಿಮಯ್ಯನಂಥವರ ವಚನಗಳ ಅತಿಲಯನವನ್ನು ಕಡಿಮೆಮಾಡಿ, ಬಂಧುರಶೈಲಿಯ ’ವಚನ’ ಶಿಲ್ಪ ೧೨ನೆಯ ಶತಮಾನದಲ್ಲಿ ರೂಪಗೊಂಡಂತಿದೆ. ಬಸವಣ್ಣ ಆಗಮಿಕ ಶೈವ ಬ್ರಾಹ್ಮಣ (ಶುದ್ಧಶೈವ ಬ್ರಾಹ್ಮಣ) ಧರ್ಮವನ್ನು ತ್ಯಜಿಸಿ, ’ಸಮಯಾಚಾರ’ವನ್ನು ಸೇರಿದನೆಂದು ಅವನ ವಚನ (೪೪೮) ತಿಳಿಸುತ್ತದೆ. ಈ ಸಮಯಾಚಾರವೆಂಬುದು ಬಹುಶಃ ನಾಥಪಂಥವೇ ಆಗಿರಬೇಕು. ಕೂಡಲಸಂಗಮವು ಮೂಲತಃ ನಾಥಪಂಥೀಯ ಕೇಂದ್ರವಾಗಿದ್ದುದೇ ಅವನು ಅಲ್ಲಿಗೆ ಹೋಗಲು ಕಾರಣವಾಗಿರಬಹುದು. ಮುಂದೆ ಈ ಪಂಥವನ್ನು ತ್ಯಜಿಸಿ ಅಥವಾ ಒಳಗು ಮಾಡಿಕೊಂಡು ಇವನು ತನ್ನದೇ ಆದ “ಲಿಂಗಾಯತ”ವೆಂಬ ಹೊಸ ಧರ್ಮವನ್ನು ಸ್ಥಾಪಿಸಿದ. ಹೀಗಾಗಿ, ಇವನ ಮತ್ತು ಇತರ ಶರಣರ ವಚನಗಳಿಗೆ ಮೂಲ ಸಂಸ್ಕೃತದ ‘ಸ್ತೋತ್ರಗದ್ಯ’ವೆಂದೂ, ತಮಿಳಿನ ‘ತೇವಾರಂ’ ಎಂದೂ, ಕನ್ನಡದ ‘ತ್ರಿಪದಿ’ ಎಂದೂ ಹೇಳುವುದಕ್ಕಿಂತ,[2] ನಾಥ ಸಂಪ್ರದಾಯದ ಲಯಬದ್ಧ ಕನ್ನಡ ‘ಸೂಳ್ನುಡಿ’ಯೇ ಮೂಲವೆಂದು ಹೇಳುವುದು ಸರಿಯೆನಿಸುತ್ತದೆ. ಈ ಘಟ್ಟದಲ್ಲಿ ‘ವಚನ’ ಹೆಸರಿನಿಂದ ಈ ಪ್ರಕಾರ ಸಮೃದ್ಧವಾಗಿ ಬೆಳೆಯಿತು. ವಚನ ಸಾಹಿತ್ಯೇತಿಹಾಸದಲ್ಲಿ ಸುವರ್ಣಯುಗವೆನಿಸುವ ರೀತಿಯಲ್ಲಿ ಪುರುಷ-ಸ್ತ್ರೀ ವಚನಕಾರರು ಈಗ ಕೃಷಿಗೆಯ್ದರು. ಶರಣರು ತಮ್ಮ ಹೊಸ ಸಿದ್ಧಾಂತ (Philosophy)ಕ್ಕೆ ಈ ಸಾಹಿತ್ಯ ಪ್ರಕಾರವನ್ನು ಮಾಧ್ಯಮ ಮಾಡಿಕೊಂಡ ಕಾರಣ, ಇದನ್ನು ‘ಸಿದ್ದಾಂತ ಸಾಹಿತ್ಯ’ (Literature of Philosophy) ಎಂದು ಕರೆಯುವುದು ಲೇಸು. ಈ ಕಾರಣಕ್ಕಾಗಿಯೇ ಪ್ರಾಚೀನ ಕಾಲದಲ್ಲಿ ಇದನ್ನು ‘ವಚನ ಸಾಹಿತ್ಯ’ವೆಂದು ಕರೆಯದೆ ‘ವಚನಶಾಸ್ತ್ರ’ವೆಂದು ಕರೆದರೆಂದು ತೋರುತ್ತದೆ.

ಈ ವಚನರಾಶಿಯಲ್ಲಿ ಸಾಮಾಜಿಕ, ತಾತ್ವಿಕ ಮತ್ತು ಆಧ್ಯಾತ್ಮಿಕವೆಂಬ ಮೂರು ಮಾದರಿಗಳು ಗೋಚರಿಸುತ್ತವೆ. ಈ ಮೂರಕ್ಕೂ ಕ್ರಮವಾಗಿ ಬಸವಣ್ಣ ಚೆನ್ನಬಸವಣ್ಣ ಪ್ರಭುದೇವ ಉದಾಹರಣೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಸಂಗ್ರಹ, ಸಂಕಲನ, ಸಂಪಾದನೆಯೆಂಬ ಮೂರು ಬಗೆಯ ಮರುರಚನೆಗಳಿಗೆ ಮೂಲಧನವಾಗಿ ಪರಿಣಮಿಸಿದೆ. ಇಂದಿಗೂ ದಕ್ಷಿಣಭಾರತದ ದೊಡ್ಡ ಸಮಾಜವಾಗಿರುವ ಲಿಂಗಾಯತ ಧರ್ಮೀಯರ ಮನಸ್ಸನ್ನಾಳುವ ದೊಡ್ಡಶಕ್ತಿಯೆನಿಸಿದೆ. ಪ್ರಾಚೀನ ಚಂಪೂ, ಷಟ್ಪದಿ ಇತ್ಯಾದಿ ಎಲ್ಲ ಸಾಹಿತ್ಯ ಪ್ರಕಾರಗಳ ಸೃಷ್ಟಿ ನಿಂತಿದ್ದು, ತನ್ನ ಜಂಗಮ ಸ್ವಭಾವ-ಸ್ವರೂಪ ಕಾರಣವಾಗಿ ವಚನಸೃಷ್ಟಿ ಮಾತ್ರ ಈಗಲೂ ಮುಂದುವರಿದಿದೆ. ಆಧುನಿಕ ಕಾವ್ಯಪ್ರಕಾರಗಳಾದ ಭಾವಗೀತೆ, ನವ್ಯ, ಬಂಡಾಯ ಈ ಎಲ್ಲ ಲಕ್ಷಣಗಳೂ ಅದರಲ್ಲಿ  ಮೇಳವೆನಿಸಿವೆ. ಹೀಗಾಗಿ ಅಂದಿನ ಶರಣರ ರಚನೆಗಳು ಇಂದಿಗೂ ಕವಿಗಳ, ವಿಮರ್ಶಕರ, ಸಂಶೋಧಕರ ಮನಸ್ಸನ್ನು ಕಾಡುತ್ತಿವೆ. ಮತ್ತು ಇವುಗಳ ಬಗ್ಗೆ ವಿಶ್ವಕ್ಕೆ ಕರ್ನಾಟಕ ನೀಡಿದ ಕೊಡುಗೆಯೆಂಬ ಪ್ರಶಂಸೆ ವ್ಯಕ್ತವಾಗುತ್ತಲಿದೆ.

ವಚನಾಗಮ ಹಂತ

ಕಲ್ಯಾಣದಲ್ಲಿ ಜರುಗಿದ ವಚನ ಚಳುವಳಿ ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡುಗಳನ್ನು ವಿಶೇಷವಾಗಿ ಆಕರ್ಷಿಸಿತು. ಆಗ ಈ ರಾಜ್ಯವನ್ನು ಪಾಶುಪತ, ನಕುಲೀಶ (ಕಾಳಾಮುಖ), ಮಹಾವೃತ (ಕಪಾಲಿಕ), ಶುದ್ಧಶೈವ (ಸಿದ್ಧಾಂತ, ಶ್ರೋತ್ರೀಯ, ಆರಾಧ್ಯ) ವೆಂಬ ನಾಲ್ಕು ಶಾಖೆಗಳು ವ್ಯಾಪಿಸಿದ್ದವು. ಪ್ರಧಾನವಾಗಿ ಆಗಮಮಾರ್ಗಿಯಾಗಿದ್ದ ಇವುಗಳಲ್ಲಿ ತುಂಬಾ ಪ್ರಸಿದ್ಧವಾದುದು ಶುದ್ಧಶೈವ. ಕಾಶ್ಮೀರ ಮೂಲದ ಇದು ತಮಿಳುನಾಡಿಗೆ ಬಂದು, ಅಲ್ಲಿಯ ಚೋಳಚಕ್ರವರ್ತಿಗಳ (೯೫೬-೧೧೭೩) ಬೆಂಬಲದಿಂದ ಸ್ಥಳೀಯ ೬೩ ಪುರಾತನರ ಶೈವಪಂಥವನ್ನು ಶುದ್ಧ ಶೈವೀಕರಣಗೊಳಿಸಿ, ನಿರಂಕುಶ ಪ್ರಭುತ್ವದಿಂದ ಮೆರೆಯಿತು. ಚೋಳರ ಪತನದ ಬಳಿಕ ಆಂಧ್ರಪ್ರದೇಶಕ್ಕೆ ಬಂದು, ಕಾಕತೀಯ ಅರಸರ (೧೧೫೦-೧೩೨೩) ಬೆಂಬಲದಿಂದ ಅಲ್ಲಿಯ ಸ್ಥಳೀಯ ಧಾರ್ಮಿಕ ಪಂಥಗಳನ್ನು ಶುದ್ಧಶೈವೀಕರಣಗೊಳಿಸಿ ಬೆಳೆಯಿತು. ಈ ಹೊತ್ತಿಗೆ ನೆರೆಯ ಕರ್ನಾಟಕದಲ್ಲಿ ತಲೆಯೆತ್ತಿದ್ದ ಸ್ಥಳೀಯ ಶರಣಧರ್ಮದಲ್ಲಿ ಮಿಕ್ಕ ಮೂರು ಶೈವಗಳಂತೆ ಇದೂ ಲೀನವಾಗುತ್ತ ನಡೆಯಿತು. ಭೀಮಕವಿಯ ಬಸವಪುರಾಣದಲ್ಲಿ (ಸಂಧಿ ೫೭) ಈ (ಶುದ್ಧ) ಶೈವ ದೀಕ್ಷಾಚಾರ್ಯರ ಮತಾಂತರದ ಒಂದು ಚಿತ್ರವನ್ನೇ ಬಿಡಿಸಲಾಗಿದೆ. ಹೀಗೆ ಒಳಗೆ ಬಂದ ಇವರು, ಶರಣರ ಆಂದೋಲನದ ಕಾವು ಇಳಿಯುತ್ತ ಹೋದಂತೆ, ಕ್ರಮೇಣ ಅದಕ್ಕೆ ತಮ್ಮ ಸಿದ್ಧಾಂತದ ಕಸಿ ಕಟ್ಟಲಾರಂಭಿಸಿದರು. ಅಂದರೆ ತಮಿಳುನಾಡು, ಆಂಧ್ರಪ್ರದೇಶಗಳ ಸ್ಥಳೀಯ ಧರ್ಮಗಳ ಬಗ್ಗೆ ಅನುಸರಿಸಿದ ಅತಿಕ್ರಮಣ ನೀತಿಯನ್ನು ಇಲ್ಲಿಯೂ ಅನುಸರಿಸಿದರು. ಹೊಯ್ಸಳರ ಮಂತ್ರಿ ಕೆರೆಯ ಪದ್ಮರಸ ಮೊದಲಾದವರಿಂದ ಆರಂಭವಾಗಿ, ವಿಜಯನಗರದ ಪ್ರೌಢದೇವರಾಯನ ಕಾಲದ ಮಗ್ಗೆಯ ಮಾಯಿದೇವ, ಮಹಾಲಿಂಗದೇವ, ಜಕ್ಕಣಾಚಾರ್ಯ ಮೊದಲಾದವರಿಂದ ಈ ಕ್ರಿಯೆ ವ್ಯಾಪಕವಾಗಿ ಬೆಳೆಯಿತು. ಇವರೆಲ್ಲ ತಮ್ಮ ಆಗಮಸಿದ್ಧಾಂತವನ್ನು ಈ ಶರಣ ಸಿದ್ಧಾಂತದೊಂದಿಗೆ ಮಿಶ್ರಗೊಳಿಸಲಾರಂಭಿಸಿದವು. ಇದರಿಂದಾಗಿ ವಚನಸಾಹಿತ್ಯಕ್ಕೆ ಆಗಮಸಾಹಿತ್ಯದ ಬರ್ಣಣ ಬರತೊಡಗಿತು. ಈ ಕಾಲದಲ್ಲಿ ವಚನಸಾಹಿತ್ಯವನ್ನು ‘ವಚನಾಗಮ’ (ವಚನ+ಆಗಮ)ವೆಂದು ಕರೆದುದು ಈ ಕಾರಣಕ್ಕಾಗಿ.

ಈ ಶಬ್ದವನ್ನು ಮೊದಲು ಬಳಸಿದವನು ಕಲ್ಲುಮಠದ ಪ್ರಭುದೇವ. (೧) ಈಗ ವಚನ ಸಂಕಲನಗಳ ಪ್ರತಿಯೊಂದು ಪ್ರಕರಣದ ಆರಂಭದಲ್ಲಿ ಆಗಮ ಶ್ಲೋಕಗಳನ್ನು ಜೋಡಿಸುವ, (೨) ಆಗಮ ಶ್ಲೋಕಗಳನ್ನು ವಚನಗಳ ಒಡಲಲ್ಲಿ ಸೇರಿಸುವ, (೩) ಆಗಮ ಸಿದ್ಧಾಂತಕ್ಕೆ ಅನುಗುಣವಾದ ಕೃತಕ ವಚನಗಳನ್ನು ಶರಣರ ಹೆಸರಿನಲ್ಲಿ ಸೃಷ್ಟಿಸುವ ಕೆಲಸ ವಿಶೇಷವಾಗಿ ಜರುಗಿತು. ಕಲ್ಲುಮಠದ ಪ್ರಭುದೇವರ ಲಿಂಗಲೀಲಾ ವಿಲಾಸ ಚಾರಿತ್ರ, ಇದಕ್ಕಿಂತ ಗುಬ್ಬಿಯ ಮಲ್ಲಣ್ಣನ ಗಣಭಾಷಿತ ರತ್ನಮಾಲೆ ಮೊದಲಾದ ವಚನಸಂಕಲನ ಗ್ರಂಥಗಳಲ್ಲಿ ಈ ಕ್ರಿಯೆ ವಿಶೇಷವಾಗಿ ಜರುಗಿದುದ್ದಕ್ಕೆ ಉದಾಹರಣೆಗಳಿವೆ. ಹೀಗೆ ಆಗಮಗಳಲ್ಲಿರುವುದೆಲ್ಲವೂ ವಚನಗಳಲ್ಲಿದೆ ಎಂದು ನಂಬಿಸುವ ಪ್ರಯತ್ನ ಈ ಕಾಲದಲ್ಲಿ ನಡೆಯಿತು.

ವಿಜಯನಗರದ ಸಂಗಮ ವಂಶ ಪತನ ಹೊಂದುತ್ತಲೇ ನಿರಾಶ್ರಿತರಾದ ಇವರು ಕ್ರಮೇಣ ಕೆಳದಿ ಅರಸರ ಆಶ್ರಯಕ್ಕೆ ವಲಸೆ ಹೋದರು. ಈ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ಕೈಬಿಟ್ಟು, ಕೇವಲ ಆಗಮ ಮತ್ತು ವೇದ ಸಿದ್ಧಾಂತವನ್ನೇ ಸಂಸ್ಕೃತ ಕೃತಿರಚನೆಗಳ ಮೂಲಕ ಪ್ರಚುರಗೊಳಿಸಿದರು. ಅಂದರೆ ವಚನಾಗಮವನ್ನೂ ಉಪೇಕ್ಷಿಸಿ ಆಗಮ ಸಾಹಿತ್ಯವನ್ನೇ ಶರಣ ಸಮಾಜದವರು ನಂಬುವಂತೆ ಮಾಡಿದರು. ಇವರ ಪ್ರಭಾವಕ್ಕೆ ಒಳಗಾದ ಆ ಕಾಲದ ಕೆಲವು ವಚನಕಾರರು ಅನುಭಾವನಿಷ್ಠ ವಚನಗಳಿಗೆ ಬದಲು ಶಾಸ್ತ್ರನಿಷ್ಠ ವಚನಗಳನ್ನು ಬರೆದರು.

ಒಟ್ಟಾರೆ, ನಾಥಪಂಥೀಯರಲ್ಲಿ ‘ಸೂಳ್ನುಡಿ’ಯಾಗಿ ಹುಟ್ಟಿ, ಲಿಂಗಾಯತ ಧರ್ಮೀಯರಲ್ಲಿ ‘ವಚನ’ವಾಗಿ ಬೆಳೆದು, ಬಳಿಕ (ವೀರ)ಶೈವ ಮತೀಯರ ಕೈಯಲ್ಲಿ ‘ವಚನಾಗಮ’ವಾಗಿ ಈ ಸಾಹಿತ್ಯ ಪ್ರಕಾರ ತಿರುವು ಪಡೆಯುತ್ತ ಬಂದಿತು. ಅಂದರೆ ಅವಧೂತರಲ್ಲಿ ಹುಟ್ಟಿದ ಈ ಸಾಹಿತ್ಯ, ಅನುಭಾವಿಗಳ ಕೈಯಲ್ಲಿ ಬೆಳೆದು, ಆಚಾರ್ಯರ ಮುಷ್ಠಿಯಲ್ಲಿ ನರಳಿತೆನಿಸುತ್ತದೆ.

[1] ಈ ಪ್ರಯೋಗಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಿಂದ ಪಡೆಯಲಾಗಿದೆ.

[2] ವಚನಗಳಿಗೆ ಮೂಲ ಸಂಸ್ಕೃತದ ಸ್ತೋತ್ರಗದ್ಯವೆಂದು ಎಲ್‌. ಬಸವರಾಜು, ತ್ರಿಪದಿಯೆಂದು ಎಂ. ಚಿದಾನಂದಮೂರ್ತಿ ಹೇಳುತ್ತಾರೆ. ತೇವಾರಂ ಮೂಲವನ್ನು ಅನೇಕರು ಹೇಳುತ್ತ ಬಂದಿದ್ದಾರೆ.