ವಚನಕಾರರದು ಸಮಗ್ರ ಚಳುವಳಿ. ಈ ಚಳುವಳಿಯಿಂದ ಸಂಭವಿಸಿದುದು ಸಮಗ್ರ ಪರಿವರ್ತನೆ. ಈ ಪರಿವರ್ತನಕ್ರಿಯೆಗೆ ಸಮಾಜದಂತೆ, ಸಮಾಜದಲ್ಲಿ ಹುಟ್ಟುವ ಭಾಷೆಯೂ ಗುರಿಯಾದುದು ಸಹಜ. ಹೀಗಾಗಿ “ಭಾಷೆ” ಮತ್ತು “ವಚನಭಾಷೆ”ಗಳ ಬಗ್ಗೆ ಶರಣರು ತಳೆದ ನಿಲುವು, ಮಾಡಿದ ಪ್ರಯೋಗ ೧ ಇವುಗಳ ಅಭ್ಯಾಸ ತುಂಬ ಮಹತ್ವದ್ದಾಗಿದೆ.

ಭಾಷೆ

“ಭಾಷೆ”ಯಲ್ಲಿ ಸತ್ಯವೂ ಹುಟ್ಟುತ್ತದೆ. ಸುಳ್ಳೂ ಹುಟ್ಟುತ್ತದೆ. ಮನೋಗತವನ್ನು “ಸತ್ಯ” ತೆರೆಯುತ್ತಿದ್ದರೆ, “ಸುಳ್ಳು” ಮುಚ್ಚುತ್ತದೆ. ಇಂಥ ಸುಳ್ಳನ್ನು ಸೃಷ್ಟಿಸಬಾರದೆಂದು ಸಾಮಾನ್ಯವಾಗಿ ಎಲ್ಲ ಮಹಾತ್ಮರಂತೆ ವಚನಕಾರರೂ ಹೇಳಿದುದು ತೀರ ಸ್ವಾಭಾವಿಕ. ಇವರು ಹೀಗೆ ಹೇಳಿದುದಕ್ಕೆ ಬಸವಣ್ಣನ “ಹುಸಿಯ ನುಡಿಯಲು ಬೇಡ” ಎಂಬುದನ್ನು ಪ್ರಾತಿನಿಧಿಕವಾಗಿ ಇಟ್ಟುಕೊಳ್ಳಬಹುದು.

ಸರಳ ರೇಖೆ ಒಂದು, ಅದರ ಎಡಬಲ ಚಲಿಸುವ ವಕ್ರರೇಖೆಗಳು ಅನೇಕವೆಂಬಂತೆ, ಸತ್ಯ ಒಂದು, ಅದರ ಸುತ್ತಲಿನ ಸುಳ್ಳುಗಳು ಅನೇಕ. ಸಾಮಾಜಿಕರಲ್ಲಿ ಬಳಕೆಯಾಗುವ ಈ ಸುಳ್ಳಿನ ಪ್ರಮಾಣದ ಬಗ್ಗೆ ಚೆನ್ನಬಸವಣ್ಣ (೧೭೭೫) ಹೇಳುವುದು ಹೀಗೆ :

ಹುಸಿ ಅಂಕುರಿಸಿತ್ತು ಹೊಲೆಯನಲ್ಲಿ,
ಹುಸಿ
ಎರಡೆಲೆಯಾಯಿತ್ತು ಮಾದಿಗನಲ್ಲಿ,
ಹುಸಿ
ನಾಲ್ಕೆಲೆಯಾಯಿತ್ತು ಸುಮ್ಮಗಾರನಲ್ಲಿ,
ಹುಸಿ
ಆರೆಲೆಯಾಯಿತ್ತು ಅಗಸನಲ್ಲಿ,
ಹುಸಿ
ಎಂಟೆಲೆಯಾಯಿತ್ತು ವ್ಯವಹಾರಿಯಲ್ಲಿ,
ಹುಸಿ
ಸಸಿಯಾಯಿತ್ತು ಹಾದರಿಗನಲ್ಲಿ,
ಹುಸಿ
ಹೂವಾಯಿತ್ತು ಡಂಬನಲ್ಲಿ,
ಹುಸಿ
ಕಾಯಾಯಿತ್ತು ಅಕ್ಕಸಾಲಿಯಲ್ಲಿ,
ಹುಸಿ
ಹಣ್ಣಾಯಿತ್ತು ಸೂಳೆಯಲ್ಲಿ.
ಹುಸಿ
ಹಣ್ಣಾಗಿ ತೊಟ್ಟುಬಿಟ್ಟಿತ್ತು ಅರಸನಲ್ಲಿ.

೧೧ ವಾಕ್ಯಗಳ ಈ ವಚನದಲ್ಲಿ “ಹುಸಿ”ಯ ಆರಂಭ ಮತ್ತು ಅಂತ್ಯ ಬಿಂದುಗಳನ್ನು ಬೆರಳು ಮಾಡಿ ತೋರಿಸಲಾಗಿದೆ. ಇಲ್ಲಿ ಹುಸಿಯ ಪ್ರಮಾಣವು “ಹುಸಿ ಅಂಕುರಿಸಿತ್ತು ಹೊಲೆಯನಲ್ಲಿ” ಎಂಬ ೧ನೆಯ ವಾಕ್ಯದಿಂದ ಆರಂಭವಾಗಿ, “ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ” ಎಂಬ ೧೦ನೆಯ ವಾಕ್ಯಕ್ಕೆ ಪೂರ್ಣಗೊಳ್ಳುತ್ತಿದೆ. ಅಂದರೆ ಹೊಲೆಯನಲ್ಲಿ ಹುಟ್ಟುವ ಹುಸಿ ೧೦ರಲ್ಲಿ  ೧ರಷ್ಟು. ಸೂಳೆಯಲ್ಲಿ ಹುಟ್ಟುವ ಹುಸಿ ೧೦ಕ್ಕೆ ೧೦ರಷ್ಟು. ಆದರೆ  ೧೧ನೆಯ ವಾಕ್ಯದಲ್ಲಿ ಅರಸನ ಹೆಸರನ್ನು ಅಡಕಗೊಳಿಸುವ ಮೂಲಕ ಅವನ ಹುಸಿ ೧೦ಕ್ಕೆ ೧೧ರಷ್ಟು ಎಂದು ಸೂಚಿಸಿದುದು ತುಂಬ ಮಹತ್ವದ್ದು. ಸಮಾಜದಲ್ಲಿ ತೀರ ನಿಕೃಷ್ಟವ್ಯಕ್ತಿ ಹೊಲೆಯ, ಉತ್ಕೃಷ್ಟ ವ್ಯಕ್ತಿ ಅರಸ. ಈ ಎರಡೂ ತುದಿಗಳನ್ನು ಗಮನಿಸಿ, ಹುಸಿಯೆಂಬ ಬೀಜ ನಿಕೃಷ್ಟವೆನಿಸುವ ಸಾಮಾಜಿಕದಲ್ಲಿ ಆಂಕುರಿಸಿ, ಹಣ್ಣಾಗಿ ಕೊನೆಗೆ ಉತ್ಕೃಷ್ಟವೆನಿಸುವ ರಾಜಕೀಯದಲ್ಲಿ ತೊಟ್ಟುಬಿಚ್ಚುತ್ತದೆ, ಎನ್ನುವ ಮೂಲಕ ಉತ್ಕೃಷ್ಟದ ಮುಖವಾಡವನ್ನು ಬಿಚ್ಚಿತೋರಿಸಿದ್ದಾನೆ.

ಭಾಷೆಗೆ ಅಂಟಿಕೊಂಡಿರುವ ಈ ಹುಸಿಯೆಂಬ ಸೂತಕಕ್ಕೆ ಶರಣರ ಪ್ರಕಾರ ಎರಡು ಮಗ್ಗಲುಗಳಿವೆ. ಅವು “ತನ್ನ ಬಣ್ಣಿಸಬೇಡ, ಇದರ ಹಳಿಯಲು ಬೇಡ.” ಭಾಷೆಯನ್ನು ಪವಿತ್ರವಾಗಿ ಬಳಸಬೇಕೇ ಹೊರತು “ಬಣ್ಣಿಸುವ” ಸೂತಕವನ್ನಾಗಲೀ, “ಹಳಿಯುವ” ಸೂತಕವನ್ನಾಗಲೀ ಅದಕ್ಕೆ ಅಂಟಿಸಬಾರದು. ಇವೆರಡನ್ನೂ ದೂರವಿಟ್ಟು ಭಾಷೆಯ ಶುದ್ಧಿಯನ್ನು ಉಳಿಸಬೇಕೆಂದು ಶರಣರು ವಾದಿಸುತ್ತಾರೆ.

“ತನ್ನ ಬಣ್ಣಿಸಬೇಡ” ಎಂದರೆ ತನ್ನನ್ನು ಬಣ್ಣಿಸಿಕೊಳ್ಳಬಾರದು, ತನ್ನವರನ್ನು ಬಣ್ಣಿಸಬಾರದು ಎಂದು ಅರ್ಥ. ೧೨ನೆಯ ಶತಮಾನದ ವೇಳೆಗೆ ಕವಿಗಳು ಆತ್ಮಸ್ತುತಿ ರೂಪದಲ್ಲಿ “ಪರೀಕ್ಷಿಪಂಗೆಂಟೆರ್ದೆಯೇ?” ಎಂದು ಮುಂತಾಗಿ ತಮ್ಮನ್ನು ಬಣ್ಣಿಸಿಕೊಳ್ಳುವುದು ಹೋಗಲಿ, ಪೂಜೆ, ನೆಗಳ್ತೆ, ಲಾಭಗಳಿಗಾಗಿ ತನ್ನವರನ್ನು ಅಂದರೆ ತನಗೆ ಆಶ್ರಯ ನೀಡಿದ ರಾಜರನ್ನು ಕಥಾನಾಯಕರನ್ನಾಗಿ ಬಣ್ಣಿಸುವ ಪರಂಪರೆಯನ್ನು ಬೆಳೆಸಿದ್ದರು.

ಖ್ಯಾತಿಗೆ ಜೋತು, ಲಾಭಕ್ಕೆ ಲೋಭಿಸಿ….
ರಾಜದ್ವಾರದಲ್ಲಿ
ಸುಳಿದು ಬಳಲುವ
ಹಿರಿಯರೆಲ್ಲರೂ
ಇತ್ತಿತ್ತಲಲ್ಲದೆ ಅತ್ತಲೆಲ್ಲಿಯದೊ?

ರಾಜರನ್ನು ಸ್ತುತಿಸಲು ಭಾಷೆಯನ್ನು ಉಪಕರಣ ಮಾಡಿಕೊಂಡಿದ್ದ ಹಿರಿಯರನ್ನು ಶರಣ ಆದಯ್ಯ ಛೇಡಿಸಿದ ವಚನವಿದು. ಕರ್ನಾಟಕದಲ್ಲಿ ಆಸ್ಥಾನಕವಿಗಳು ರಾಜನ ಆಶ್ರಯದ ಕೃತಜ್ಞತೆಯನ್ನು ಕಾವ್ಯದಲ್ಲಿ ಸ್ಮರಿಸುವುದು ಹೋಗಲಿ, ಅವನನ್ನು ಕಥಾನಾಯಕನನ್ನಾಗಿ ಮಾಡಿಕೊಳ್ಳುವುದು ಹೋಗಲಿ, ರಾಮ, ಭೀಮ, ಅರ್ಜುನರೊಂದಿಗೆ ಹೋಲಿಸಿ ಬರೆಯುವ, ಇನ್ನೂ ಮುಂದು ಹೋಗಿ ಉದಾತ್ತರಾನಾಯಣ, ಉದಾರಮಹೇಶ್ವರ ಇತ್ಯಾದಿಯಾಗಿ ವರ್ಣಿಸುವ ಮೂಲಕ, ಅವನು ನಾರಾಯಣನಿಗಿಂತ ಉದಾತ್ತ, ಮಹೇಶ್ವರನಿಗಿಂತ ಉದಾರವೆಂದು ಹೊಗಳುವ ಸಾಹಿತ್ಯ ಸಂಪ್ರದಾಯವನ್ನು ಹುಟ್ಟುಹಾಕಿದ್ದರು. ಹೀಗೆ ಬರೆಯುವುದೇ ನಿಜವಾದ ಸಾಹಿತ್ಯವೆಂಬ ವಾತಾವರಣ ಸೃಷ್ಟಿಮಾಡಿದ್ದರು. “ಇದಾವ ದೋಷವೋ” ಎಂದು ಸಮರ್ಥಿಸಿಕೊಳ್ಳುತ್ತಿದ್ದರು. ಈ ರೀತಿ ವ್ಯಕ್ತಿಪ್ರಶಂಸೆಯಲ್ಲಿ ಮಾತು ಮಲಿನವಾಗಿದ್ದ ಸಂದರ್ಭದಲ್ಲಿ ತಲೆಯೆತ್ತಿದ ಶರಣರು, ಮೇಲೆ ಹೇಳಿದ ಆದಯ್ಯನ ವಚನಗಳಂಥ ಹೇಳಿಕೆಯ ಮೂಲಕ ಅಂಥದನ್ನು ಪ್ರಶ್ನಿಸಿದರು.

“ಇದಿರ ಹಳಿಯಲು ಬೇಡ”ಯೆಂದರೆ ನಿಂದಿಸಿದವರಿಗೆ ಪ್ರತಿಯಾಗಿ ನಿಂದಿಸಬೇಡ ಎಂದು ಅರ್ಥ. ಇಷ್ಟೇ ಏಕೆ “ಕಣದ ಠಾವಿನಲ್ಲಿ ಜರೆದರೆಂದೆಡೆ ಕೇಳಿ ಪರಿಣಾಮಿಸಬೇಕು” ಎಂದು ಹೇಳಿ, ಬೆನ್ನು ಹಿಂದೆ ಆಡಿಕೊಳ್ಳುವವರಿಗಾಗಿ ತಲೆಕೆಡಿಸಿಕೊಳ್ಳಕೂಡದೆಂದು ಸೂಚಿಸುತ್ತಾರೆ. ಇನ್ನೂ ಮುಂದುವರಿದು ವಿತಂಡವಾದಕ್ಕೆ ಪ್ರತಿವಾದ ಮಾಡಬಾರದೆನ್ನುತ್ತ,

ಒಂದಕ್ಕೊಂಬತ್ತ ನುಡಿದು, ಕಣ್ಣ ಕೆಂಚನೆ ಮಾಡಿ,
ಗಂಡುಗೆದರಿ
, ಮುಡುಹಿಕ್ಕಿ ಕೆಲೆವರ ಕಂಡಡಂಜುವೆ, ಓಸರಿಸುವೆ!
ಓಡಿದೆನೆಂಬ
ಭಂಗವಾದಡಾಗಲಿ
ಕೂಡಲ
ಸಂಗನ ಶರಣರ ಅನುಭಾವವಿಲ್ಲದವರ
ಹೊಲಮೇರೆಯ
ಹೊಂದೆ, ಹೊಲನ ಬಿಟ್ಟೋಡುವೆ!

ಎಂದು ಹೇಳಿದುದು ಗಮನಾರ್ಹವೆನಿಸಿದೆ. ಹೊಗಳಿಕೆಯಾಗಲಿ, ತೆಗಳಿಕೆಯಾಗಲೀ, ಒಂದು ಚಟ, ಒಂದು ಭ್ರಮೆ. ಒಮ್ಮೆ ಇದಕ್ಕೆ ವಶವಾದರೆ ಮನುಷ್ಯ ವಿವೇಕ ಕಳೆದುಕೊಳ್ಳುತ್ತಾನೆ.

ಶಬ್ದ ಸಂಭ್ರಮದಲ್ಲಿ ಹಿಂದುಗಾಣರು, ಮುಂದುಗಾಣರು
ತಮ್ಮ
ತಾವರಿಯರು

ಎಂಬ ವಚನದಲ್ಲಿ ಅಲ್ಲಮನು ಶಬ್ದಭ್ರಮೆಯಲ್ಲಿ ಮುಳುಗಿದವರ ಸ್ಥಿತಿಯನ್ನು ಎತ್ತಿ ನುಡಿದಿದ್ದಾನೆ. ಮಾತನ್ನೇ ಮಾಧ್ಯಮ ಮಾಡಿಕೊಂಡು ಬದುಕುವ ಅಕ್ಷರಜೀವಿಗಳ ಬಗ್ಗೆ ಶರಣರಿಗೆ ಎಲ್ಲಿಲ್ಲದ ತಿರಸ್ಕಾರ. “ಮನವೇ ಸೂಳೆಯಾಗಿ, ಮಾತಿನ ಮಾಲೆಯ ಸರವನಿಕ್ಕಿಕೊಂಡು ವಾಚಾಳಿಗತನದಿಂದ ಒಡಲ ಹೊರೆವವರೆಲ್ಲರು ಶರಣಪ್ಪರೆ?” ಎಂದು ಕೇಳುತ್ತಾನೆ, ಭೋಗಣ್ಣ.

ಈ ಎಲ್ಲ ಭ್ರಮೆಗಳಿಂದ ಇವರನ್ನು ಮುಕ್ತಮಾಡಿ, ಭಾಷೆಯ ಪಾವಿತ್ರ್ಯವನ್ನು ಪುನಃ ಸ್ಥಾಪಿಸಬಯಸಿದ ಶರಣರು

ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ
ಮಾಣಿಕ್ಯದ ಜ್ಯೋತಿಯಂತಿರಬೇಕು,
ನುಡಿದರೆ
ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ
ಲಿಂಗಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ
ನಡೆಯದಿದ್ದರೆ
ಕೂಡಲಸಂಗಯ್ಯನೆಂತು
ಒಲಿವನಯ್ಯಾ.

ಎಂದು ಮಾತಿನ ನಿಜಲಕ್ಷಣವನ್ನು ಸ್ಪಷ್ಟಪಡಿಸುತ್ತಾನೆ. ಆದರೆ ಈ ಪವಿತ್ರಲಕ್ಷಣದ ಮಾತು ಸೃಷ್ಟಿಯಾಗಬೇಕಾದರೆ ಇದನ್ನು ಸೃಷ್ಟಿಸುವ ಮನುಷ್ಯ ಮೊದಲು ಪವಿತ್ರನಾಗಬೇಕು.

ಮಾತು ಮನುಷ್ಯನ ಸೃಷ್ಟಿ. ಮನುಷ್ಯನೆಂದರೆ ಮನಸ್ಸು, ಮಲಿನವಾದರೆ ಅದರ ಸೃಷ್ಟಿಯಾಗಿರುವ ಮಾತೂ ಮಲಿನವಾಗುತ್ತದೆ. ಇಂಥ ಮಾತು ಮಾಲಿನ್ಯದಿಂದ ಮುಕ್ತಗೊಳ್ಳಬೇಕಾದರೆ ಅದಕ್ಕೆ ಭೂಮಿಕೆಯಾಗಿರುವ ಮನಸ್ಸು ಮಾಲಿನ್ಯದಿಂದ ಮೊದಲು ಮುಕ್ತವಾಗಬೇಕು. ಆಗ ಅವನ ಮಾತು ತಾನಾಗಿಯೇ ಸೂತಕರಹಿತವಾಗುತ್ತದೆ – ಎಂಬ ಮೂಲಸತ್ಯವನ್ನು ಶರಣರು ಪ್ರತಿವಾದಿಸುತ್ತಾರೆ. ಅಂಗಪಾತಳಿ ಅಂದರೆ ಅಭೌತಿಕಪಾತಳಿಗೆ ಎತ್ತಬೇಕೆಂಬುದು ಶರಣರ ನಿಲವು. ಅಂಗವು ಲಿಂಗವಾದರೆ ಅವನು ಆಡುವ ಮಾತು “ಲಿಂಗವಶದಿಂದ ಬಂದ ನುಡಿ”ಯಾಗುತ್ತದೆ. “ಕೂಡಲ ಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವೇ ಕಾಣಬಹುದು” ಎಂಬ ಬಸವಣ್ಣನ ಹೇಳಿಕೆ ಇದೇ ಅರ್ಥವನ್ನು ಪ್ರತಿಪಾದಿಸುತ್ತದೆ. ಶರಣರ “ಮಾತೆಂಬುದು ಜ್ಯೋತಿರ್ಲಿಂಗ” ಎಂಬ ಅಲ್ಲಮನ ಹೇಳಿಕೆಯೂ ಇದೇ ಆಗಿದೆ. ಹೀಗಿಲ್ಲದಿದ್ದರೆ

ಲಿಂಗವಿಲ್ಲದ ಅಂಗ ಭವಿ, ಮುಟ್ಟಲಾಗದು
ಲಿಂಗವಿಲ್ಲದ
ಶಬ್ದ ಸೂತಕ, ಕೇಳಲಾಗದು

ಎಂದು ಹೇಳುವ ಶರಣರ ದೃಷ್ಟಿಯಲ್ಲಿ ಆ ವ್ಯಕ್ತಿಯೂ ಭವಿ, ಅವನು ಆಡುವ ಮಾತೂ ಭವಿ. ಇದರಿಂದ ಮುಕ್ತನಾದರೆ ಅವನು ಭಕ್ತ, ಅವನು ಆಡುವ ಮಾತೂ ಭಕ್ತ. ಆ ವ್ಯಕ್ತಿಯದು ಚಲನಶೀಲ ಮೌಲ್ಯ, ಅವನು ಆಡುವ ಮಾತಿನದೂ ಚಲನಶೀಲ ಮೌಲ್ಯ. ಇಂಥ ಭಾಷೆಯನ್ನು ಶರಣರು ಬಯಸಿದರು.

ಹೀಗೆ ಮಾತು ಜ್ಯೋತಿರ್ಲಿಂಗವಾದರೆ ಮುಗಿಯಲಿಲ್ಲ. ಅದರ ಕಾರ್ಯಪೂರ್ಣವಾಗುವುದು “ನಡೆಯಲ್ಲಿ ನುಡಿಯ ಪೂರೈಸುವೆ” ಎಂಬ ಪ್ರಜ್ಞೆಯಿಂದ. “ನುಡಿಯೊಳಗಾಗಿ ನಡೆಯದಿದ್ದರೆ ಕೊಡಲಸಂಗಯ್ಯನೆಂತೊಲೆವನಯ್ಯ” ಎಂಬುದು ಅವರ ಧೋರಣೆಯಾಗಿದೆ. ಮನಸಾ ಎಂಬುದು ಸತ್ಯಸ್ವರೂಪದಲ್ಲಿ ವಾಚಾಕ್ಕೆ ಬಂದು, ಅದು ಕಾಯಾದಲ್ಲಿ (ಕ್ರಿಯಾದಲ್ಲಿ)ಅನುಷ್ಠಾನಗೊಳ್ಳಬೇಕು. ಹೀಗೆ ಮನಸ್ಸನ್ನು ಮಾತಿನಲ್ಲಿ, ಮಾತನ್ನು ಕೃತಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಒಂದು ಜವಾಬ್ದಾರಿಯಿದೆ. ಅದನ್ನೂ ಕುರಿತು ಅಂದರೆ ಸಮಾಜದಲ್ಲಿ ಅದು ವಹಿಸುವ ಪಾತ್ರವನ್ನೂ ಕುರಿತು ಶರಣರು ಚಿಂತಿಸಿದರು. ಈ ವಿಷಯವಾಗಿ “ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಎಂದು ಹೇಳುತ್ತ ಬಸವಣ್ಣ ಭಾಷಾನಿರ್ವಹಣೆಯ ಸೂತ್ರವನ್ನು ನಮ್ಮ ಮುಂದಿಡುತ್ತಾನೆ. ಇಲ್ಲಿ “ನಿನಗೆ ಕೇಡಿಲ್ಲ”ವಾಗಿ ಎಂಬುದು ಸಾಮಾಜಿಕ ನ್ಯಾಯಕ್ಕೆ ಚ್ಯುತಿ ಬರದಂತೆ, “ಆನು ಒಲಿದಂತೆ” ಎಂಬುದು ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ-ಹೀಗೆ ಭಾಷಾ ನಿರ್ವಹಣೆಯಿರಬೇಕೆನ್ನುತ್ತಾನೆ. ಇದು ಲಿಂಗನುಡಿ ವ್ಯವಹರಿಸಬೇಕಾದ ರೀತಿ. ಸಾಮಾಜಿಕ ನ್ಯಾಯ ಮಾತಿನ ಅಂತಿಮಗುರಿಯಾಗಿರಬೇಕೆಂದು ಬಸವಣ್ಣ ಇಲ್ಲಿ ಹೇಳುತ್ತಾನೆ. ಒಟ್ಟಾರೆ ಶರಣರ “ಭಾಷಾನೀತಿ”ಯೆಂಬುದು, ಮಾಲಿನ್ಯದಿಂದ ಮಾತನ್ನು ಮುಕ್ತಗೊಳಿಸುವುದು ಮತ್ತು ಅದನ್ನು ಸಾಮಾಜಿಕ ನ್ಯಾಯಕ್ಕಾಗಿ ಬಳಸುವುದಾಗಿದೆ.

ಕನ್ನಡ ಭಾಷೆ:

ಹೀಗೆ “ಭಾಷೆ”ಯನ್ನು ಕುರಿತು ನಿರ್ವಚಿಸಿದ ಶರಣರು, ಕನ್ನಡ ಭಾಷೆಯನ್ನು ಕುರಿತು ಆಡಿದ ಮಾತು, ಮಾಡಿದ ಕಾರ್ಯ, ಅಷ್ಟೇ ಮಹತ್ವದ್ದು. “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ಸಿದ್ಧಾಂತವನ್ನು ನಂಬಿದ ಇವರು, ಬದುಕಿನ ಎಲ್ಲ ಕ್ಷೇತ್ರಗಳಂತೆ ಕನ್ನಡ ಭಾಷಾಕ್ಷೇತ್ರವನ್ನೂ ಸ್ಥಗಿತತೆಯಿಂದ ಮುಕ್ತವಾಗಿಸುವ ಹೋರಾಟವನ್ನು ಕೈಗೆತ್ತಿಕೊಂಡರು. ಈ ಹೊತ್ತಿಗೆ ವೈದಿಕರು ಕನ್ನಡವನ್ನು ಅಸ್ಪೃಶ್ಯ ನೆಲೆಗೆ ತಳ್ಳಿದ್ದರು. ಜೈನರಲ್ಲಿ ಪಂಪನಂಥ “ದೇಸಿಯೊಳ್‌ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವದು” ಎಂಬ ಧೋರಣೆಯವರನ್ನು ಬಿಟ್ಟರೆ, ಕೆಲವರು ಸಂಸ್ಕೃತದ ಸಂಬಂಧವನ್ನು ಜಟಿಲಗೊಳಿಸುವ ಅತಿರೇಕತೆಯತ್ತ, ಇನ್ನು ಕೆಲವರು ಈ ಸಂಬಂಧವನ್ನು ನಿರಾಕರಿಸಿ ಅಚ್ಚಗನ್ನಡದಲ್ಲಿಯೇ ಬರೆಯುವ ಇನ್ನೊಂದು ಅತಿರೇಕತೆಯತ್ತ ಸಾಗಿದ್ದರು. ಜೈನರ ಇವೆರಡೂ ಧೋರಣೆಗಳು ಕನ್ನಡ ಭಾಷೆಗೆ ಅಂಟಿಕೊಂಡಿದ್ದ ಮಾಲಿನ್ಯಗಳು. ಈ ಸಮಸ್ಯೆ ಕವಿರಾಜಮಾರ್ಗಕಾರನಿಂದ ಮುದ್ದಣನ ವರೆಗೆ ಒಂದು ಬಗೆಯ ಗುದ್ದಾಟವಾಗಿಯೇ ಮತ್ತೆ ಮತ್ತೆ ಮುಂದುವರಿಯಿತು. ಪಂಪ, ಮುದ್ದಣನಂಥವರನ್ನು ಬಿಟ್ಟರೆ ಮಿಕ್ಕವರಿಂದಾಗಿ ಒಂದು ಸಮಸ್ಯೆಯಾಗಿಯೇ ಬೆಳೆದಿದ್ದ ಈ ವಿಷಯದ ಬಗ್ಗೆ, ಶರಣರು ಹೊಸ ಧೋರಣೆಯ ಮಾತುಗಳನ್ನಾಡಿದ್ದಾರೆ. ಬಹಳಷ್ಟು ಸಲ ಆಡದೆ ನ್ಯಾಯಯುತವಾದುದನ್ನು ಮಾಡಿದ್ದಾರೆ.

ಭಕ್ತಿ, ಜ್ಞಾನ, ಕ್ರಿಯೆ ಇವು ಶರಣರ ಮೌಲ್ಯಗಳು. ಬದುಕಿನ ಯಾವುದೇ ವಿಷಯದ ಬಗ್ಗೆ ಈ ಮೂರನ್ನು ಅನ್ವಯಿಸುವಲ್ಲಿ ಅವರು, ಮೊದಲು ಭಕ್ತಿಯನ್ನು ಬಯಸುತ್ತಾರೆ. ಭಕ್ತಿಯೆಂದರೆ ಪ್ರೀತಿ, ಶ್ರದ್ಧೆ, ಭಾಷಾಪ್ರಜ್ಞೆಯ ವಿಷಯವಾಗಿಯೂ ಅವರು ಮೊದಲು ಭಕ್ತಿ ಪ್ರೀತಿಗಳನ್ನೇ ಮುಂದುಮಾಡಿದರು.

ನೋಡಿರೆ ಕನ್ನಡವ ನುಡಿಸಿರೆ ಕನ್ನಡವ
ತಲೆಯೊಲೆಯುತ
ಬಂದು ಕುಣಿಯುವ ಕನ್ನಡವ ||

ಎಂಬ ಸ್ವರವಚನದಲ್ಲಿ ಶರಣ ನಿಜಗುಣಯೋಗಿ ಕನ್ನಡದ ಬಗ್ಗೆ ತೋರಿದ ಪ್ರೀತಿ ೧೨ನೆಯ ಶತಮಾನದ ಎಲ್ಲ ಶರಣರ ಪ್ರಾತಿನಿಧಿಕ ಧ್ವನಿಯಾಗಿದೆ. ನವೋದಯ ಕವಿಗಳ ಕನ್ನಡಪರ ಕವನಗಳನ್ನು ನೆನಪಿಗೆ ತರುವ ಇಂಥ ರಚನೆ ಮತ್ತು ಇಲ್ಲಿಯ ಅಚ್ಚ ಪ್ರೀತಿ ಕಾರಣವಾಗಿಯೇ ಇವರು ಕನ್ನಡಪರ ಶೈಲಿಯನ್ನು ವಚನಗಳ ಮೂಲಕ ರೂಪಿಸಿದರು. ಇದಕ್ಕೆ ಸಾಮಾನ್ಯವಾಗಿ ಎಲ್ಲ ವಚನಗಳು ನಿದರ್ಶನವೆನಿಸಿವೆ. ಇದನ್ನು ಬಿಟ್ಟರೆ ಸಂಸ್ಕೃತ ಬಳಕೆಯ ಬಗ್ಗೆಯೂ ಒಂದಿಷ್ಟು ವ್ಯಕ್ತವಾಗಿ ಹೀಗೆ ಮಾತನಾಡಿದ್ದಾರೆ.

ಕಲ್ಲಿಯ ಹಾಕಿ, ನೆಲ್ಲವ ತಳೆದು
ಗುಬ್ಬಿಯ
ಸಿಕ್ಕಿಸುವ ಕಳ್ಳನಂತೆ
ವಾಗದ್ವೈತವ
ಕಲಿತು
ಸಂಸ್ಕೃತದ
ಮಾತಿನ ಪಸರವ ಮುಂದಿಟ್ಟುಕೊಂಡು
ಮತ್ಸ್ಯನ
ವಕ್ತೃದಲ್ಲಿ ಗ್ರಾಸ ಹಾಕುವನಂತೆ
ಅದೇತರ
ನುಡಿ? ಮಾತಿನ ಮರೆ, ಆತುರವೈರಿ ಮಾರೇಶ್ವರಾ.

ನಗೆಯ ಮಾರಿತಂದೆಯ ಈ ವಚನ, ಸಂವಹನದ ತೊಡಕಿನ ನೆಲೆಯಲ್ಲಿ, ಶೋಷಣೆಯ ಮಾಧ್ಯಮ ನೆಲೆಯಲ್ಲಿ ಸಂಸ್ಕೃತವನ್ನು ನಿರಾಕರಿಸುತ್ತದೆ. ತುಂಬ ವ್ಯಕ್ತವಾಗಿ, ವೈಜ್ಞಾನಿಕವಾಗಿ ಸಂಸ್ಕೃತದ ದಾಳಿಯನ್ನು ನಿರಾಕರಿಸುವ ಅಪರೂಪದ ವಚನವಿದು. ಇಲ್ಲಿ ಕಲ್ಲಿ, ನೆಲ್ಲು, ಗುಬ್ಬಿ ಮೂರು ಪದಗಳಿವೆ. “ಕಲ್ಲಿ” (ಬಲೆ) ಶೋಷಣೆಯ ಸಂಕೇತವಾಗಿ, “ನೆಲ್ಲು” ಸಂಸ್ಕೃತವೆಂಬ ಶೋಷಣೆಯ ಮಾಧ್ಯಮದ ಸಂಕೇತವಾಗಿ, “ಗುಬ್ಬಿ” ಶೋಷಿತ ಸಾಮಾಜಿಕನ ಸಂಕೇತವಾಗಿ ಇಲ್ಲಿ ಬಳಕೆಗೊಂಡಿವೆ. ಗುಬ್ಬಿ ಒಂದು ಮುಗ್ಧ ಪಕ್ಷಿ, ಪುಟ್ಟಜೀವ. ಮುಗ್ಧ ಸಾಮಾಜಿಕರನ್ನು ಸಂಸ್ಕೃತದ ಹೆಸರಿನಲ್ಲಿ ವಂಚಿಸುತ್ತಿದ್ದುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ. ಇಂಥ ಸಂಸ್ಕೃತವೆಂಬುದು “ಮಾತಿನ ಪಸರ” ಅಂದರೆ “ಮಾತಿನ ಅಂಗಡಿ” ಎಂದು ಹೇಳುವ ಮೂಲಕ, ಲಾಭಕ್ಕಾಗಿ ಮಾತು “ಮಾರುವ” ಕ್ರಿಯೆಯನ್ನು, ಭಾಷೆಯ ವ್ಯಾಪಾರೀಕರಣವನ್ನು “ಆದೇತರ ನುಡಿ?” ಎಂದು ಉಪೇಕ್ಷಿಸಲಾಗಿದೆ. “ಮಾತಿನ ಮರೆ” ಅಂದರೆ ಸತ್ಯವನ್ನು ಮಾತೆಂಬ ಮರೆಯಿಂದ ಮುಚ್ಚಿ ಹಾಕುವಿಕೆಯೆಂದು ಸೂಚಿಸಲಾಗಿದೆ. ಆಂಡಯ್ಯನ ಅವಾಸ್ತವ ಕನ್ನಡ ಪ್ರೀತಿಯಂತೆ, ಚಂಪುವಿನ ಅವೈಜ್ಞಾನಿಕ ಸಂಸ್ಕೃತ ಪ್ರೀತಿಯೂ ಕನ್ನಡವನ್ನು ಬೆಳೆಸುವುದಿಲ್ಲವೆಂಬುದು ಶರಣರ ವಾದ. ಅವರು ಸಾಮಾಜಿಕರಿಗೆ ಅರ್ಥವಾಗುವಂಥ ಸಂಸ್ಕೃತ ಪದ, ಏಕೆ? ವಾಕ್ಯವೇ ಇರಲಿ, ಬಳಸಬೇಕೆನ್ನುತ್ತಾರೆ. ಸರಳ ಕನ್ನಡದಲ್ಲಿ ಬರೆಯುತ್ತ ಮಧ್ಯದಲ್ಲಿ “ವರ್ಣನಾಂ ಕಿಂ ಪ್ರಯೋಜನಂ?” “ಯದ್ಭಾವಂ ತದ್ಭವತಿ” ಎಂಬಂಥ ಸಂಸ್ಕೃತ ವಾಕ್ಯಗಳನ್ನು ಸಹಜವೆಂಬಂತೆ ಬಳಸುತ್ತಾರೆ. ಇದರಿಂದ ಸಂಸ್ಕೃತವನ್ನೆಲ್ಲ, ಶೋಷಣೆರೂಪದ ಸಂಸ್ಕೃತವನ್ನು ಅವರು ಅಲ್ಲಗಳೆಯುವರೆಂದು ಸ್ಪಷ್ಟವಾಗುತ್ತದೆ.

ಹೀಗೆ ಸಂಸ್ಕೃತದ ಬಳಕೆಯಂತೆ, ಈ ಮೊದಲು ಇಲ್ಲದ ಅನೇಕ ಹೊಸ ತದ್ಭವಗಳನ್ನು ಅವರು ಸೃಷ್ಟಿಸಿಕೊಂಡರು. ಶ್ರಮ>ಶ್ರವ ಇತ್ಯಾದಿ. ಇನ್ನೂ ಮುಂದೆ ಹೋಗಿ ಅವುಟುಕೋಟಿ, ಬಾಷ್ಕಳ, ಬತ್ತೀಸ ಎಂಬಂಥ ಮರಾಠಿ ಪದಗಳನ್ನು ಹಿಂದು ಮುಂದು ನೋಡದೆ ಎತ್ತಿಕೊಂಡರು. ಭಾಷೆಯೆನ್ನುವುದು ಬೆಂಕಿಯಿದ್ದಂತೆ. ಬಾಯಿಗೆ ಸಿಕ್ಕ ಜೀರ್ಣಸಾಧ್ಯ ಹುಲ್ಲು, ಮರ ಇತ್ಯಾದಿಗಳನ್ನು ಅದು ತಿಂದು ಹಾಕುತ್ತದೆ. ಈ ನಿಜವನ್ನು ಅರ್ಥಮಾಡಿಕೊಂಡ ಶರಣರು, ಕನ್ನಡ ಜೀರ್ಣಿಸಿಕೊಳ್ಳುವ ಯಾವುದೇ ಶಬ್ದವನ್ನು ಭೇದರಹಿತವಾಗಿ ಬಳಸಿಕೊಂಡರು.

ಶರಣರ ಅಂತಿಮ ಗುರಿಗಳಲ್ಲಿ ವ್ಯಕ್ತಿಸಿದ್ಧಿ, ಸಮಾಜಶುದ್ಧಿ, ಸಮಾಜಸಮೃದ್ಧಿ ಮುಖ್ಯವಾದವು. ಇವುಗಳ ಪ್ರತಿಪಾದನೆಗೆ, ಪ್ರಸಾರಕ್ಕೆ ಭಾಷೆ ಮಾಧ್ಯಮವಾಗಬೇಕೇ ಹೊರತು ಬಂಧನವಾಗಬಾರದು. ಅನ್ವಯಿಸಕವಾಗದ ವಿದ್ಯೆಯನ್ನು ಅರ್ಥವಾಗದ ಭಾಷೆಯಲ್ಲಿ ಹೇಳುವುದರಿಂದ ಪ್ರಯೋಜನವೇನು? ಎಂದು ಕೇಳುತ್ತ, ವ್ಯಕ್ತಿಸಿದ್ಧಿ, ಸಮಾಜಶುದ್ಧಿ, ಸಮಾಜ ಸಮೃದ್ಧಿಗಳಿಗೆ ಅನ್ವಯವಾಗುವ ವಿದ್ಯೆಗಾಗಿ ಅರ್ಥವಾಗುವ ಕನ್ನಡ ಭಾಷೆಯನ್ನು ಮರುಹುಟ್ಟಿಸಿದರು, ಅರ್ಥವತ್ತಾಗಿ ಬಳಸಿದರು.

ವಚನ ಭಾಷೆ:

ಭಾಷೆ ಸಮಾಜದಲ್ಲಿ ಹುಟ್ಟುತ್ತದೆ, ಸಾಹಿತ್ಯದಲ್ಲಿ ಬೆಳೆಯುತ್ತದೆ. ಕನ್ನಡಿಗರು ಹುಟ್ಟಿಸಿದ ಭಾಷೆಯನ್ನು ಸೃಜನಶೀಲ ಲೇಖಕರಾದ ವಚನಕಾರರು ಸಾಹಿತ್ಯ ಭಾಷೆಯನ್ನಾಗಿ ಹೇಗೆ ಬೆಳೆಸಿದ್ದಾರೆ. ಬಳಸಿದ್ದಾರೆ. ಎನ್ನುವುದು ಇಲ್ಲಿಯ ಉದ್ದೇಶ.

ವಚನಗಳ ಅನ್ವಯಿಕ ವಿಮರ್ಶೆಯ ಪ್ರಸಂಗದಲ್ಲಿ ಕೆಲವರು ಅವುಗಳ ರಾಚನಿಕ ಅಧ್ಯಯನವನ್ನು ಪೂರೈಸಿದ್ದಾರೆ. ಇವರ ವಿಚಾರಗಳೊಂದಿಗೆ ಇನ್ನಷ್ಟನ್ನೂ ಸೇರಿಸಿ ವಚನಗಳ ಭಾಷಿಕ ಲಕ್ಷಣಗಳನ್ನು ಹೀಗೆ ಸಂಗ್ರಹಿಸಬಹುದು.

೧. ವಾಕ್ಯಪ್ರಧಾನವಾಗಿವೆ.

೨. ವಾಕ್ಯದ ಬಹು ಬಗೆಗಳು ಬಳಕೆಯಾಗಿವೆ.

೩. ವಾಕ್ಯದ ಒಂದೊಂದು ಬಗೆಯಲ್ಲಿ ವಿನ್ಯಾಸದ ಅನೇಕ ಸಾಧ್ಯತೆಗಳಿವೆ.

೪. ವಾಕ್ಯದಲ್ಲಿ ಮಾತಿನ ಎಲ್ಲ ಕಾಕುಗಳನ್ನು ಉಳಿಸಿಕೊಳ್ಳಲಾಗಿದೆ

೫. ವಾಕ್ಯಭಾಗಗಳಾಗಲಿ-ವಾಕ್ಯಗಳಾಗಲಿ ಸಮಪ್ರಮಾಣದಲ್ಲಿವೆ.

೬. ವಾಕ್ಯಭಾಗಗಳಾಗಲಿ-ವಾಕ್ಯಗಳಾಗಲಿ ಪುನರುಕ್ತವಾಗಿವೆ.

೭. ವಾಕ್ಯಭಾಗಗಳಾಗಲಿ – ವಾಕ್ಯಗಳಾಗಲಿ ಲಯಾತ್ಮಕವಾಗಿವೆ.

೮. ವಾಕ್ಯಗಳಲ್ಲಿ ಹಿತ ಮಿತ ಪ್ರಾಸವಿದೆ.

ಇವು ವಚನಗಳ ಪ್ರಮುಖ ಎಂಟು ಲಕ್ಷಣಗಳು. ಬೇರೆ ಉಪಲಕ್ಷಣಗಳಿದ್ದರೂ ಅವು ಇವುಗಳಲ್ಲಿಯೇ ಅಂತರ್ಗತವಾಗುತ್ತಿದ್ದು, ಈ ಎಂಟೂ ಲಕ್ಷಣಗಳ ವಿವರ ಹೀಗಿದೆ:

. ವಾಕ್ಯಪ್ರಧಾನವಾಗಿವೆ:

ಭಾಷೆಯಲ್ಲಿ ಅರ್ಥನಿಷ್ಠ ಅತಿಸಣ್ಣ ಘಟಕ ಪದ; ಕ್ರಿಯಾನಿಷ್ಠ ಅತಿಸರ್ಣಣ ಘಟಕ ವಾಕ್ಯ. ಭಾಷೆ ಪೂರ್ಣಸಂವಹನವಾಗುವುದು ವಾಕ್ಯಗಳ ಮೂಲಕ. ನಿಯತ ಸ್ಥಾನಗಳಲ್ಲಿ ಪದಗಳನ್ನೊಳಗೊಂಡ ಸರಳ ವಾಕ್ಯಗಳಂತೆ, ಅನಿಯತ ಸ್ಥಾನಗಳಲ್ಲಿ ಪದಗಳನ್ನೊಳಗೊಂಡರೂ ಅರ್ಥ ಸಂವಹನವಾಗುವ ಸಂಕೀರ್ಣ ವಾಕ್ಯಗಳಿರುತ್ತವೆ. ಪದ್ಯದಲ್ಲಿ ಗಣ ಮತ್ತು ಪ್ರಾಸಗಳು ಪದಗಳನ್ನು ನಿಯಂತ್ರಿಸುವುದರಿಂದ, ಕೆಲವೊಮ್ಮೆ ಇದ್ದ ರೂಪದಲ್ಲಿಯೇ ಅರ್ಥವಾಗುವುದಿಲ್ಲವಾಗಿ ಪದ್ಯದ ಪದಗಳನ್ನು ಅನ್ವಯ ಮಾಡಿಕೊಳ್ಳಬೇಕಾಗುತ್ತದೆ. ಶರಣಪೂರ್ವಯುಗದಲ್ಲಿ ಪದ್ಯಸಾಹಿತ್ಯವೇ ಪ್ರಧಾನವಾಗಿದ್ದು, ಅರ್ಥಸ್ಪಷ್ಟನೆಗಾಗಿ ಅನ್ವಯಮಾಡಿಕೊಳ್ಳಬೇಕಾದ ಅಂಥ ಒಂದು ಪದ್ಯವನ್ನು ಪಂಪನಿಂದ ನೋಡಬಹುದು.

.       ಕಟ್ಟಿದ ಪಟ್ಟಮೆ ಸರವಿಗೆ
ನೆಟ್ಟನೆ
ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ |
ಣ್ಗೆಟ್ಟ
ಮುದುಪಂಗೆ ಪಗೆವರ
ನಿಟ್ಟೆಲ್ವಂ
ಮುರಿವೊಡೆನಗೆ ಪಟ್ಟಂಗಟ್ಟಾ ||

ಪಂಪಭಾರತದ ಭೀಷ್ಮರ ಪಟ್ಟಾಭಿಷೇಕ ಸಂದರ್ಭದಲ್ಲಿ ಕರ್ಣ ಹೇಳುವ ಈ ಪದ್ಯದಲ್ಲಿ ಎರಡು ವಾಕ್ಯಗಳಿವೆ. ಮೊದಲನೆಯ ವಾಕ್ಯದಲ್ಲಿ “ಕಣ್ಗೆಟ್ಟ ಮುದುಪಂಗೆ” ಎಂಬ ಪದ ಅನಿಯತ ಸ್ಥಳದಲ್ಲಿ ಬಳಕೆಯಾಗಿರುವುದರಿಂದ, ಅದನ್ನು ನಿಯತ  ಸ್ಥಳದಲ್ಲಿಟ್ಟು ಅಂದರೆ ಅನ್ವಯಗೊಳಿಸಿ, ವಾಕ್ಯರಚನೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಹೊರಡುವ ಎರಡೂ ವಾಕ್ಯಗಳು ಹೀಗೆ:

೧. ಕಣ್ಗೆಟ್ಟ ಮುದುಪಂಗೆ ಕಟ್ಟಿದ ಪಟ್ಟಮೆ ಸರವಿಗೆ –ದೊರೆ, ಪಿಡಿದ ಬಿಲ್ಲೆ ದಂಟಿಂಗೆಣೆ.

೨. ಪಗೆವರ ನಿಟ್ಟೆಲ್ವಂ ಮುರಿವೊಡೆನಗೆ ಪಟ್ಟಂಗಟ್ಟಾ.

ಪದ್ಯದಲ್ಲಿ ಹಿಂದುಮುಂದಾಗಿದ್ದ ಪದಗಳನ್ನು ಹೀಗೆ ವಾಕ್ಯರೂಪದಲ್ಲಿ ಅನ್ವಯಗೊಳಿಸಿದಾಗ ಮಾತ್ರ ಅರ್ಥ ಸ್ಪಷ್ಟವಾಗುತ್ತದೆ. ವಚನದಲ್ಲಿ ಈ ರೀತಿ ಪದಗಳನ್ನು ಅನ್ವಯಗೊಳಿಸಿಕೊಳ್ಳುವ ಅವಶ್ಯಕತೆ ಇಲ್ಲವೆಂಬಂತೆ ನಿಯತಸ್ಥಳದಲ್ಲಿ ಅವು ನಿಹಿತವಾಗಿರುತ್ತವೆ. ಸರಳ ವಾಕ್ಯಗಳೇಕೆ? ಸಂಕೀರ್ಣ ವಾಕ್ಯಗಳ ಪ್ರಸಂಗದಲ್ಲಿಯೂ ಈ ಅನ್ವಯದ ಆವಶ್ಯಕತೆ ಸಂಭವಿಸುವುದಿಲ್ಲ.

ಆ. ಬಸವಪೂರ್ವದಲ್ಲಿ ಅಕ್ಷರವೃತ್ತಗಳದೇ ಸಾಮ್ರಾಜ್ಯ. ಕೆಲವೊಮ್ಮೆ ಅನ್ವಯಮಾಡುವ ಅವಶ್ಯಕತೆ ಇಲ್ಲದಿದ್ದರೂ ಅಲ್ಲಿ ಪದ್ಯದ ಚರಣ ಮುಗಿಯತ್ತಲೇ ವಾಕ್ಯವೂ ಮುಗಿಯಬೇಕೆಂದೇನಿಲ್ಲ. ಅದು ಚರಣರ ಮಧ್ಯ, ಇಲ್ಲವೆ ಚರಣವನ್ನು ದಾಟಿ ಮುಗಿಯಬಹುದು. ಇಂಥ ಪ್ರಸಂಗದಲ್ಲಿ ಛಂದಸ್ಸಿನ ಯತಿ ಚರಣದ ಅಂತ್ಯಕ್ಕೆ ಬಂದರೆ, ವಾಕ್ಯದ ಯತಿ (ಅರ್ಥಯತಿ) ಮಾತ್ರ ವಾಕ್ಯದ ಅಂತ್ಯದಲ್ಲಿ ಸಂಭವಿಸುತ್ತದೆ. ಉದಾ.

ನೆತ್ತಮನಾಡಿ ಭಾನುಮತಿ ಸೋಲ್ತಡೆ ಸೋಲಮನೀವುದೆಂದು ಕಾ *||
ಡುತ್ತಿರೆ
ಲಂಬಣಂ ಪರಿಯೆ ಮುತ್ತಿನ ಕೇಡನೆ ನೋಡಿ ನೋಡಿ *||
ಳ್ಕುತ್ತಿರೆ
ಏವಮಿಲ್ಲದಿವನಾಯ್ವುದೊ ತಪ್ಪದೆ ಪೇಳಿಮೆಂಬ ಭೂ *||
ಪೋತ್ತಮನಂ
ಬಿಸುಟ್ಟಿರದೆ ನಿಮ್ಮೊಳು ಪೊಕ್ಕಡೆ ಬೇಡನಲ್ಲನೇ *||

ಇಲ್ಲಿ ಪದ್ಯದ ಛಂದೋಯತಿ ನಾಲ್ಕೂ ಚರಣಗಳ ಕೊನೆಯಲ್ಲಿ (ನಕ್ಷತ್ರಸ್ಥಾನ) ಇದೆ. ವಾಕ್ಯಯತಿ ಅಥವಾ ಅರ್ಥಯತಿ ಅನೇಕ ಅಲ್ಪ ನಿಲುಗಡೆಗಳೊಂದಿಗೆ, ಕೊನೆಯ ಚರಣದ ಕೊನೆಯಲ್ಲಿ ಹೀಗೆ ಕಾಣಿಸಿಕೊಂಡಿದೆ.

ನೆತ್ತಮನಾಡಿ ಭಾನುಮತಿ ಸೋಲ್ತಡೆ,
ಸೋಲಮನೀವುದೆಂದು
ಕಾಡುತ್ತಿರೆ,
ಲಂಬಣಂ
ಪರಿಯೆ,
ಮುತ್ತಿನ
ಕೇಡನೆ ನೋಡಿ ನೋಡಿ ಬಳ್ಕುತ್ತಿರೆ,
ಏವಮಿಲ್ಲದಿವನಾಯ್ವುದೊ
ತಪ್ಪದೆ ಪೇಳಿಂ
ಎಂಬ
ಭೂಪೋತ್ತಮನಂ ಬಿಸುಟ್ಟಿರದೆ ನಿಮ್ಮೊಳು ಪೊಕ್ಕಡೆ ಬೇಡನಲ್ಲನೇ.

ಇಲ್ಲಿ ೪ ಚರಣಗಳ ಪದ್ಯ, ೬ ಲಯಬದ್ಧ ವಾಕ್ಯಗಳಾಗಿ ನಿಂತಿದೆ. ಶರಣರು ಈ ಮಾದರಿಯಲ್ಲಿ, ವಚನಗಳನ್ನು ರೂಪಿಸಿದರು. ಅವರಲ್ಲಿ ಇಂಥ ಅನೇಕ ಅಲ್ಪ ನಿಲುಗಡೆಗಳನ್ನೊಳಗೊಂಡ ಏಕವಾಕ್ಯದ ವಚನಗಳು ಹಲವು ಸಂಖ್ಯೆಯಲ್ಲಿವೆ. ಉದಾ.

ಹಾಲತೊರೆಗೆ ಕೆಸರು,
ಸಕ್ಕರೆಯ
ಮಳಲು,
ತವರಾಜದ
ನೊರೆ ತೊರೆಯಂತೆ ಆದ್ಯರ ವಚನವಿರಲು,
ಬೇರೆ
ಬಾವಿಯ ತೋಡಿ,
ಉಪ್ಪ
ನೀರನುಂಬುವನ ವಿಧಿಯಂತಾಯಿತ್ತೆನ್ನ ಮತಿ,
ಕುಡಲ
ಸಂಗಮದೇವಾ.

ರಚನೆಯಲ್ಲಿ ಪಂಪನ ಈ ಪದ್ಯ ಮತ್ತು ಬಸವನ ಈ ವಚನಗಳ ರೀತಿ ಒಂದೇ ಬಗೆಯವೆಂಬುದನ್ನು ಇಲ್ಲಿ ಗಮನಿಸಬೇಕು. ಇದಲ್ಲದೆ ಅನೇಕ ಬಿಡಿ ವಾಕ್ಯಗಳನ್ನೊಳಗೊಂಡ ಅಕ್ಷರವೃತ್ತಗಳಂತೆ, ಅನೇಕ ಬಿಡಿವಾಕ್ಯಗಳನ್ನೊಳಗೊಂಡ ವಚನಗಳೂ ಇವೆ. ಚಂಪೂಪದ್ಯಗಳನ್ನೇ ಮಾದರಿಯಿಟ್ಟುಕೊಂಡು ಇವರು ವಚನ ರಚಿಸಿದರೆಂದು ಇದರ ಅರ್ಥವಲ್ಲ. ಜನರ ಬಾಯಿ ಮಾತಿನ ವಾಕ್ಯಗಳನ್ನೇ ಒಂದಿಷ್ಟು ಲಯಬದ್ಧಗೊಳಿಸಿ ವಚನ ರಚಿಸಿದರು.

. ವಾಕ್ಯದ ಬಹು ಬಗೆಗಳು ಬಳಕೆಯಾಗಿವೆ:

ವಾಕ್ಯಗಳು ಎಷ್ಟು ವಿಧ? ಈ ಬಗ್ಗೆ ಆಧುನಿಕ ಭಾಷಾವಿಜ್ಞಾನಿಗಳಲ್ಲಿ ಅಭಿಪ್ರಾಯ ಭೇದವಿದೆ. ಸಾಂಪ್ರದಾಯಿಕವಾಗಿ ಸಾಮಾನ್ಯ, ಸಂಕೀರ್ಣ, ಸಂಯುಕ್ತ, ಪ್ರಶ್ನಾರ್ಥಕ, ಉದ್ಗಾರಾರ್ಥಕ, ಆಜ್ಞಾರ್ಥಕ ಮೊದಲಾದ ವಾಕ್ಯಪ್ರಬೇಧಗಳನ್ನು ಗುರುತಿಸಲಾಗಿದೆ. ವಚನಕಾರರು ಈ ಎಲ್ಲ ಬಗೆಯ ವಾಕ್ಯಗಳನ್ನು ಬಳಸಿದ್ದಾರೆ. ಸಾಲದುದಕ್ಕೆ ಒಂದೊಂದರಲ್ಲಿಯೇ ಅನೇಕ ಬಗೆಗಳನ್ನು ಯೋಜಿಸಿಕೊಂಡಿದ್ದಾರೆ. ಹೀಗಾಗಿ ವಚನಗಳನ್ನು ಓದಿದಾಗ ನಮ್ಮ ಸುತ್ತಲೂ ಅನುಭಾವಿಗಳ ದೊಡ್ಡ ಸಮಾಜವೇ ಮಾತನಾಡುತ್ತಿರುವ ಅನುಭವವಾಗುತ್ತದೆ. ಉದಾಹರಣೆಗಾಗಿ ಕೇವಲ ವೇದವನ್ನು ಕುರಿತು ಬಸವಣ್ಣನವರ ಕೆಲವು ವಾಕ್ಯಪ್ರಭೇದಗಳನ್ನು ಇಲ್ಲಿ ನೋಡಬಹುದು.

೧. ವೇದಕ್ಕೆ ಒರೆಯ ಕಟ್ಟುವೆ-ಸಾಮಾನ್ಯವಾಕ್ಯ

೨. ವೇದ ಸ್ವಯಂಭುವಲ್ಲ, ನಿಲ್ಲು-ಅಜ್ಞಾರ್ಥವಾಕ್ಯ

೩. ವೇದವನೋದಿದವರ ಮುಂದೆ ಅಳು, ಕಂಡೆಯಾ ಹೋತೇ-ವಿದ್ಯರ್ಥವಾಕ್ಯ

೪. ವೇದ ವೇದಾಂತವನೋದಿದಡೇನು? ಪ್ರಶ್ನಾರ್ಥಕವಾಕ್ಯ

೫. ವೇದ ವೇದಾಂತವನೋದಿದಡೇನು? ಪ್ರಶ್ನಾರ್ಥಕವಾಕ್ಯ

೬. ವೇದಂಗಳು ನಿಮ್ಮ ಭೇದಿಸಲರಿಯವು ನೋಡಾ! –ಉದ್ಗಾರಾರ್ಥಕವಾಕ್ಯ

೭. ವೇದಂಗಳ ಹಿಂದೆ ಹರಿಯದಿರು, ಹರಿಯದಿರು-ಅವಧಾರಣಾರ್ಥಕವಾಕ್ಯ

೮. ವೇದವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ಸೋಹಂ ಎಂದು ಅಹಂಕರಿಸಿ, ಅನಿತ್ಯದೇಹಿಗಳಾಗಿ, ಅನಾಮಿಕರಾಗಿ ಹೋದರು ಸಂಕೀರ್ಣವಾಕ್ಯ.

ಇಲ್ಲಿ ಒಂದು ವಾಕ್ಯದಂತೆ ಇನ್ನೊಂದಿಲ್ಲ. ಈ ಸಂಖ್ಯೆ ಇನ್ನೂ ಬೆಳೆಯಬಹುದಾಗಿದೆ. ಒಟ್ಟಾರೆ ವಚನಸಾಹಿತ್ಯವೆಂದರೆ ವಾಕ್ಯರಾಶಿ.

. ವಾಕ್ಯಗಳ ವಿನ್ಯಾಸದ ಅನೇಕ ಸಾಧ್ಯತೆಗಳಿವೆ:

ಮೇಲೆ ಹೇಳಿದಂತೆ ವಾಕ್ಯ ಅನೇಕ ಬಗೆಯಾಗಿವೆ. ಇವುಗಳ ವಿನ್ಯಾಸದ ಅನೇಕ ಸಾಧ್ಯತೆಗಳಿಂದ ವಚನಗಳು ರೂಪಗೊಂಡವು. ಬಸವನಾಳ, ಪರಮೇಶ್ವರಭಟ್‌, ಪ್ರಭುಸ್ವಾಮಿಮಠ, ಗಿರಡ್ಡಿ ಮೊದಲಾದವರು ಇವುಗಳ ಕೆಲವು ಸಾಧ್ಯತೆಗಳನ್ನು, ಅವುಗಳಿಂದ ವ್ಯಕ್ತವಾಗುವ ಭಿನ್ನ ಅರ್ಥಛಾಯೆಗಳನ್ನು ತೋರಿಸಿಕೊಟ್ಟಿದ್ದಾರೆ. ವಚನಕಾರರಲ್ಲಿ ಅದ್ಭುತಲೋಕವೆಂಬಂತೆ ಈ ಕ್ರಿಯೆ ಬಹುರೂಪಿಯಾಗಿ ಹಬ್ಬಿದೆ. ಉದಾ.

ಕರಿಯಂಜುವುದಂಕುಶಕ್ಕಯ್ಯಾ
ಗಿರಿಯಂಜುವುದು
ಕುಲಿಶಕ್ಕಯ್ಯಾ,
ತಮಂಧವಂಜುವುದು
ಜ್ಯೋತಿಗಯ್ಯಾ,
ಕಾನನವಂಜುವುದು
ಬೇಗೆಗಯ್ಯಾ,
ಪಂಚಮಹಾಪಾತಕವಂಜುವುದು
ಕೂಡಲಸಂಗನ ನಾಮಕ್ಕಯ್ಯಾ.

ಇದು ಸರಳ ವಾಕ್ಯರಚನೆ. ಇಲ್ಲಿಯ ಪದ ವಾಕ್ಯ ವಾಕ್ಯಕ್ರಮ ಸಾಮಗ್ರಿಯನ್ನೇ ಬಸವಣ್ಣ ಇನ್ನೊಂದು ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾನೆ.

ಕರಿ ಘನ, ಅಂಕುಶ ಕಿರಿದೆನ್ನಬಹುದೇ? ಬಾರದಯ್ಯಾ,
ಗಿರಿ
ಘನ, ವಜ್ರ ಕಿರಿದೆನ್ನಬಹುದೇ? ಬಾರದಯ್ಯಾ,
ತಮಂಧ
ಘನ, ಜ್ಯೋತಿ ಕಿರಿದೆನ್ನಬಹುದೇ? ಬಾರದಯ್ಯಾ
(ಕಾನನ ಘನ, ಬೇಗೆ ಕಿರಿದೆನ್ನಬಹುದೇ? ಬಾರದಯ್ಯಾ)
ಮರಹು
ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೇ?
ಬಾರದಯ್ಯಾ
ಕೂಡಲ ಸಂಗಮದೇವಾ.

ಇಲ್ಲಿ ಮೊದಲಿನ ವಚನವನ್ನೇ ಪ್ರಶ್ನೋತ್ತರ ರೂಪದಲ್ಲಿ ಯೋಜಿಸಲಾಗಿದೆ. ಈ ಪ್ರಶ್ನೋತ್ತರವು ಸ್ವಗತರೂಪದಲ್ಲಿರುವುದು ಈ ವಿನ್ಯಾಸದ ಇನ್ನೊಂದು ವಿಶೇಷತೆಯಾಗಿದೆ. ಈ ಪ್ರಶ್ನೋತ್ತರಕ್ಕೆ ಪರಮಾವಧಿ ಮಾದರಿಯೆನಿಸುವ ಹೆಂಡದ ಮಾರಯ್ಯ ಮತ್ತು ಲಿಂಗಗಳ ಸಂವಾದದ ಇನ್ನೊಂದು ವಚನ (೧೧೯೪)ಹೀಗಿದೆ.

ನುಲಿಯೊಡೆಯರೇ ನಿಮ್ಮಾಳ್ದನ ಕೊಳ್ಳಿರೆ.
ಆಳ್ದರೆಂದರಾರು
?
ಅವರು
ನಿಮ್ಮ ಕೈಯ್ಯಲ್ಲಿದ್ದಂಥವರು
ಅವರಾಳ್ದರಲ್ಲ
.
ಅವರೇನು
?ಅವರು ನಿಮ್ಮ ಇಷ್ಟರುದ್ರರಾಗರೆ?
ಜಂಗಮವಾಗಿದ್ದಹರು
.
ಇವರು
ಬೇಡವೇ?
ಇಹರೆ
ಬೇಡೆನ್ನೆ, ಹೋಹರೆ ನಿಲಿಸ ಶಕ್ತನಲ್ಲ.
ನಾವು
ಇರುಲುಬಲ್ಲಲ್ಲಿ ಇರಿ.
ಕೈಯ್ಯಲ್ಲಿ
ಕೊಳ್ಳಿರೆ.
ಮುನ್ನವೆ
ಕೊಂಡಿದ್ದೆನು.
ಎನ್ನನೇಕೆ
ಒಲ್ಲೆಯಯ್ಯಾ
ನೀನು
ಮುನಿದಿದ್ದೆಯಾಗಿ
ಇನ್ನು
ಮುನಿಯುವುದಿಲ್ಲ, ನಾನು.
ನಿಮ್ಮ
ನಂಬುವುದಿಲ್ಲ
ಹೊಣೆಯ
ಕೊಟ್ಟಿಹೆನು
ಅವರಾರು
?
ಮಾಚಿದೇವ
ಪ್ರಸಾದಿ ಹೊಣೆಯಾಗಯ್ಯಾ
ನಂಬೆನು
, ಜೀಯಾ ನಿಮ್ಮಾಣೆ.
ಇರಲಿಕೆ
ಠಾವೆಲ್ಲಿ? ಕರದಲ್ಲಿಯೇ?
ಅಲ್ಲ
.
ಉರದಲ್ಲಿಯೆ
?
ಅಹುದು
.
ನಂಬಿದೆನು
ಸುಖದಲ್ಲಿರು ಧರ್ಮೇಶ್ವರಾ.

ಇವನದೇ ಇಂಥ ಇನ್ನೊಂದು ವಚನ (೧೧೯೫)ವಿದೆ. ಇವೆಲ್ಲ ವಚನಶಿಲ್ಪದಲ್ಲಿ ನಡೆಸಿದ ಹೊಸ ಹೊಸ ಪ್ರಯೋಗಗಳಿಗೆ ನಿದರ್ಶನವೆನಿಸಿವೆ. ಸೊಡ್ಡಳ ಬಾಚರಸನ ಇನ್ನೊಂದು ವಚನ;

ಮುರಿಸಬೇಕು ಹೊಲೆಯರ ಕೈಯಿಂದವರ ಮನೆಯನು,
ಕೆರಿಸಬೇಕು
ಮಂಡೆಯನೇಳು ಪಟ್ಟಿಯ ಮಾಡಿ,
ಹುಟ್ಟಿಗೆಯನುಡಿಸಬೇಕು
, ಕುಳ್ಳಿರಿಸಬೇಕು ಕತ್ತೆಯ ನಡುಬೆನ್ನ ಮೇಲೆ,
ಹಳೆಮೊರನ
ಸತ್ತಿಗೆಯ ಹಿಡಿಯಬೇಕವಗೆ,
ನಿಟ್ಟೊರಸಬೇಕು
ನೊಸಲಕ್ಷರವ,
ನಾಲಗೆಯ
ಸರ್ರಸರ್ರನೆ ಸೀಳಬೇಕು,
ಎನ್ನೊಡೆಯ
ಮಹಾಮಹಿಮ ಸೊಡ್ಡಳಂಗೆ
ಅನ್ಯದೈವ
ಸರಿಯೆಂಬ ಕುನ್ನಿಮಾನವನ.

ಹೀಗೆ ಮುರಿಸಬೇಕು, ಕೆರಿಸಬೇಕು, ಉರಿಸಬೇಕು, ಕುಳ್ಳಿರಿಸಬೇಕು, ಹಿಡಿಯಬೇಕು, ಒರೆಸಬೇಕು, ಸೀಳಬೇಕು, ಅವಧಾರಣಾತ್ಮಕ ಕ್ರಿಯಾಪದಗಳ ಪುನರುಕ್ತಿಯಿಂದಾಗುವ ಪರಿಣಾಮ ಅನನ್ಯವಾದುದು.

. ವಾಕ್ಯದಲ್ಲಿ ಮಾತಿನ ಎಲ್ಲ ಕಾಕುಗಳನ್ನು ಉಳಿಸಿಕೊಳ್ಳಲಾಗಿದೆ:

ಬಾಯಿಮಾತು ಬರಹಕ್ಕೆ ಬರುವಲ್ಲಿ ಅದು ತನ್ನ ಸೂಕ್ಷ್ಮ ಗುಣಗಳನ್ನು ಕಳೆದುಕೊಳ್ಳುವುದೇ ಹೆಚ್ಚು. ವಚನಗಳ ಇನ್ನೊಂದು ಮಹತ್ವಪೂರ್ಣ ಲಕ್ಷಣವೆಂದರೆ, ಬಾಯಿಮಾತಿನ ಎಲ್ಲ ಗುಣಗಳನ್ನು ಅಂದರೆ ಕಾಕುಗಳನ್ನು ಉಳಿಸಿಕೊಂಡುದು. ಸಂದರ್ಭ ನಿಷ್ಠವಾಗಿ, ಸ್ತ್ರೀಪುರುಷಧ್ವನಿನಿಷ್ಠವಾಗಿ, ವಯೋನಿಷ್ಠವಾಗಿ ಈ ಮಾತುಗಳ ಧಾಟಿಗಳು ಭಿನ್ನವಾಗುತ್ತ ಹೋಗುತ್ತವೆ.

ವೇದವನೋದಿದವರ ಮುಂದೆ ಆಳು ಕಂಡೆಯಾ ಹೋತೆ.
ವೇದವನೋದಿದವರ
ಮುಂದೆ ಅಳು, ಉಂಟಾಗುವ ಅರ್ಥ ಪ್ರತೀತಿಯೇ ಬೇರೆ,

“ಅಳು” ಎಂಬುದನ್ನು ಒತ್ತಿ ಉಚ್ಚರಿಸಿ, ಅಲ್ಪವಿರಾಮವಿಟ್ಟು, ಹೋತೇ ಎಂಬುದನ್ನು ಕನಿಕರದಿಂದ ಎಳೆದು ಎರಡನೆಯ ವಾಕ್ಯವನ್ನು ಓದುವುದರಿಂದ ಉಂಟಾಗುವ ಅರ್ಥಪ್ರತೀತಿಯೇ ಬೇರೆ. ಎರಡನೆಯ ರೀತಿಯ ಓದು ಈ ವಚನದ ನಿಜವಾದ ಅರ್ಥವನ್ನು ಪ್ರಕಟಿಸುತ್ತದೆ.

ಪ್ರಾಚೀನಕಾಲದಲ್ಲಿ ವಿರಾಮಚಿಹ್ನೆಗಳ ಬಳಕೆ ಇರಲಿಲ್ಲವಾಗಿ, ಎಷ್ಟೋ ಸಲ ವಚನವಾಕ್ಯದ ನಿಜವಾದ ಉದ್ದೇಶ ಅರ್ಥವಾಗುವುದಿಲ್ಲ. ಉದಾ:

ಲಿಂಗ ಜಂಗಮ ಒಂದೇ ಎಂದು ನಂಬಿದ ಬಳಿಕ
ಅವರಂಗನೆಯರು
ಲಿಂಗದ ರಾಣಿವಾಸ.

ಅಲ್ಲಿಯೂ ಮೇಳ, ಇಲ್ಲಿಯೂ ಮೇಳ, ಚೌಡೇಶ್ವರಿಯಲ್ಲಿಯೂ ಮೇಳ?” ಎಂಬ ಪ್ರಶ್ನೆ ಇಟ್ಟರೆ ಸಾಕು, “ಮೇಳವಿಲ್ಲ” ಎಂಬ ಸರಿಯಾದ ಅರ್ಥ ಹೊರಡುತ್ತದೆ.

ಇನ್ನು ಕೆಲವು ಸಲ ಒಂದೇ ವಚನ ಪ್ರಶ್ನೆ ಇಟ್ಟರೆ ಒಂದು ಅರ್ಥ, ಉದ್ಗಾರವಿಟ್ಟರೆ ಇನ್ನೊಂದು ಅರ್ಥ ಹೊರಡುತ್ತದೆ.

ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತ
ಸಂಬಂಧವಯ್ಯಾ?

ಇದು ಒಂದು ಸಂದರ್ಭದಲ್ಲಿ ಹುಟ್ಟಿದ ವಚನ. ಸಂದರ್ಭ ಬಾಹಿರವಾದಾಗ ಇದು ಮೇಲಿನಂತೆ ಪ್ರಶ್ನೆ ಚಿಹ್ನೆಯನ್ನು ಅಪೇಕ್ಷಿಸುತ್ತದೆ. ಆದರೆ ಅನಿಮಿಷಯ್ಯನ ಕೈಯಿಂದ ಅಲ್ಲಮನು ಇಷ್ಟಲಿಂಗ ಎತ್ತಿಕೊಳ್ಳುತ್ತಲೇ, ಅವನ ಅಸ್ಥಿಪಂಜರ ಪುಡಿಪುಡಿಯಾಗುವುದು, ಇವನಲ್ಲಿ ಅರಿವಿನ ವಿದ್ಯುತ್ತ ಸಂಚಾರವಾಗುವುದು, ಇಂಥ ಸಂದರ್ಭದಲ್ಲಿ ಆಡಿದ ಈ ವಚನ ಹೀಗೆ ಉದ್ಗಾರ ಚಿಹ್ನೆಯನ್ನೇ ಬಯಸುತ್ತದೆ:

ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿಂದೆತ್ತಣ
ಸಂಬಂಧವಯ್ಯಾ!

ಇನ್ನು, ಬೇರೆ ರೀತಿಯ ಆಡುಮಾತಿನ ಧಾಟಿಗಳನ್ನು ವಚನಗಳಲ್ಲಿ ಹೀಗೆ ಕಾಣಬಹುದು.

ನಿಮಿಷದ ನಿಮಿಷಂ ಭೋ!
ಕ್ಷಣದೊಳಗರ್ಧಂ
ಭೋ!
ಕಣ್ಣು
ಮುಚ್ಚಿ ಬಿಚ್ಚುವೈಸಂ ಭೋ!
ಸಂಸಾರದಾಗುಂ
ಭೋ! ಸಂಸಾರದ ಹೋಗುಂ ಭೋ!
ಸಂಸಾರದೊಪ್ಪಂ
ಭೋ!
ಕೂಡಲಸಂಗಮ
ದೇವಾ!
ನೀ
ಮಾಡಿದ ಮಾಯಂ ಭೋ ಅಭ್ರಚ್ಛಾಯಂ ಭೋ!

ಏಳು ವಾಕ್ಯಗಳ ಈ ರಚನೆಯಲ್ಲಿ ಎಂಟು ಸಲ ಎಚ್ಚರ ಸೂಚಿಯಾದ “ಭೋ” ಪ್ರಯೋಗವಾಗಿದೆ. ವೇಳೆಯ ಮಹತ್ವವನ್ನು ಹೇಳುವ ಇಲ್ಲಿ “ಭೋ” ಗಂಟೆ ಬಾರಿಸಿದ ಅನುಭವ ನೀಡುತ್ತದೆ.

ಅಶ್ವಮೇಧಯಾಗವಂತಿರಲಿ [ಹೋ]!
ಅಜಪೆಯುಪದೇಶ
ಸಮಾಧಿಯಂತಿರಲಿ ಹೋ!
ಹೋಮ
ನೇಮ ಗಾಯತ್ರಿ ಜಪವಂತಿರಲಿ ಹೋ!
ಕೂಡಲ
ಸಂಗನ ಶರಮರ ನುಡಿಗಡಣ
ಎಲ್ಲಕ್ಕೂ
ಅಧಿಕ ನೋಡಾ.

ಇಲ್ಲಿ “ಹೋ” ಎಂಬ ಜರೆಯುವಿಕೆಯನ್ನು ಪದೇ ಪದೇ ಬಳಸಿ ವಚನಕ್ಕೆ ಆಡು ಮಾತಿನ ಗುಣವನ್ನು ತುಂಬಲಾಗಿದೆ.

ಅರಸರ ಮನೆಯಲ್ಲಿ ಅರಸಿಯಾಗುವುದರಿಂದ
ಭಕ್ತರ
ಮನೆಯಲ್ಲಿ ತೊತ್ತಾಗಿಪ್ಪುದು ಕರ ಲೇಸಯ್ಯಾ!
ತೌರಾ ಅಗ್ಫವಣಿಯ, ನೀಡೌ ಪತ್ರೆಯ,
ಲಿಂಗಕ್ಕೆ
ಬೋನವ ಹಿಡಿಯೌಎಂಬರು.
ಕೂಡಲ
ಸಂಗನ ಮಹಾಮನೆಯಲ್ಲಿ
ಒಕಕುದನುಣ್ಣೌ ತೊತ್ತೇಎಂಬರು.

ಇಲ್ಲಿ ಸ್ತ್ರೀಧ್ವನಿಯ ಮಾತುಗಳು, ಅದರಲ್ಲಿಯೂ ಮನೆಗೆಲಸ ಮಧ್ಯದ ಮಾತುಗಳು, ಅಲ್ಲಿಯ ಕಾಕುಗಳನ್ನು ಹೊತ್ತುಕೊಂಡೇ ಪ್ರಕಟವಾಗಿವೆ. ಇವು ಮನೆಯ ಒಳಗಿನ ಸಂದರ್ಭದ ಮಾತುಗಳಾದರೆ “ಏನಿ? ಬಂದಿರೇ ಹದುಳವಿದ್ದಿರೇ?” ಎಂಬ ವಚನದಲ್ಲಿಯವು ಪುರುಷಧ್ವನಿಯ ಮಾತುಗಳು, ಮನೆಯ ಹೊಸ್ತಿಲ ಹತ್ತಿರ ಅತಿಥಿಯನನು ಬರಮಾಡಿಕೊಳ್ಳುವ ಸಂದರ್ಭದ ಮಾತುಗಳು. ಆಡುಮಾತಿನ ಧ್ವನಿಗಳನ್ನು ಉದ್ದಕ್ಕೂ ತುಂಬಿಕೊಂಡಿರುವ ವಚನವೊಂದು ಹೀಗಿದೆ.

ಹೊನ್ನ ಹಾವುಗೆ ಮೆಟ್ಟಿದವನ !
ಮಿಡಿ
ಮುಟ್ಟಿದ ಕೆಂಜೆಡೆಯವನ!
ಮೈಯಲ್ಲಿ
ವಿಭೂತಿ ಧರಿಸಿದವನ!
ಕರದಲ್ಲಿ
ಕಪಾಲವ ಹಿಡಿದವನ!
ಅರ್ಧನಾರಿಯಾದವನ
!
ಬಾಣನ
ಬಾಗಿಲ ಕಾಯ್ದವನ!
ನಂಬಿಗೆ
ಕುಂಟಣಿಯಾದವನ!
ಚೋಳಂಗೆ
ಹೊನ್ನಮಳೆಯ ಕರೆದವನ!
ಎನ್ನ
ಮನಕ್ಕೆ ಬಂದವನ!
ಸದ್ಭಕ್ತರ
ಹೃದಯದಲ್ಲಿಪ್ಪವನ!
ಮಾಡಿದ
ಪೂಜೆಯಲೊಪ್ಪುವನ!
ಕೂಡಲ
ಸಂಗಯ್ಯನೆಂಬವನ!

ಇಲ್ಲಿ “ಕ್ರಿಯಾಪದ”ವೇ ಇಲ್ಲವಾಗಿ ಅಪೂರ್ಣ ವಚನವೆಂಬ ಭಾವನೆ ಮೂಡುತ್ತದೆ. ಆದರೆ ಇಲ್ಲಿ ಹೆಣ್ಣೊಬ್ಬಳು ಗೆಳತಿಗೆ ಹೇಳುವ ‘ಕೂಡಲಸಂಗಯ್ಯನೆಂಬವನ!’ ಅಂದರೆ “ಕೂಡಲ ಸಂಗಯ್ಯನೆಂಬವನು ಇದ್ದಾನಲ್ಲಾ, ಅವನs” ಎಂಬ ಅರ್ಥದ ಕಾಕು, ಪಿಸುಮಾತಿನ ಹೆಣ್ಣುದನಿಯಲ್ಲಿ ಮತ್ತೆ ಮತ್ತೆ ಕೇಳಿಸುತ್ತದೆ. ಸತಿಪತಿ ಭಾವದ ವಚನಗಳಲ್ಲಿಯಂತೂ ಹೆಣ್ಣುದನಿಗಳು ವಿರಹ, ಸಲ್ಲಾಪ, ಸಂಭ್ರ, ವಿಪ್ರಲಂಭನಿಷ್ಠವಾಗಿ ಮೇಳೈಸಿವೆ. ಒಟ್ಟಾರೆ ಜನಪದ ಸಾಹಿತ್ಯದ “ಸಂದರ್ಭಸಿದ್ಧಾಂತ” ಇಲ್ಲಿ ನೆನಪಾಗುತ್ತಿದ್ದು, ಆಯಾ ವಚನಗಳನ್ನು ಆಯಾ ಸಂದರ್ಭದ ದನಿಯಲ್ಲಿಯೇ ವೀರ, ಕ್ರೋಧ, ಶೃಂಗಾರ, ಹಾಸ್ಯ, ಕರುಣೆ, ಅನುಕಂಪ, ಪಶ್ಚಾತ್ತಾಪ ಇತ್ಯಾದಿ ಶೈಲಿಯಲ್ಲಿ ಶ್ರವಣೀಯವಾಗುವಂತೆ ಓದಿದರೆ ಮಾತ್ರ ಅವುಗಳಿಗೆ ನ್ಯಾಯಸಿಗುವುದೆನಿಸುತ್ತದೆ. ಒಟ್ಟಾರೆ, ಏಕಕಾಲಕ್ಕೆ ಸಾರ್ವತ್ರಿಕವೂ, ಸ್ಥಾನಿಕವೂ, ಸಾಂದರ್ಭಿಕವೂ ಆಗುವಂತೆ ಸಾಧಿಸಿದ “ಸಮನ್ವಯಶೈಲಿ”ಗೆ ವಚನಸಾಹಿತ್ಯ ಉತ್ತಮ ಉದಾಹರಣೆಯಾಗಿದೆ.

. ವಾಕ್ಯಭಾಗಗಳಾಗಲಿವಾಕ್ಯಗಳಾಗಲಿ ಸಮಪ್ರಮಾಣದಲ್ಲಿವೆ:

ವಚನಗಳ ಈ ಲಕ್ಷಣವನ್ನು ಇ. ಇಪಿ. ರೈಸ್‌೧೯೧೫ರಷ್ಟು ಹಿಂದೆ ತನ್ನ Kanarese Literature  ಕೃತಿಯಲ್ಲಿ “Parallalistic” ಶಬ್ದದ ಮೂಲಕ, ರಂಗರಾವ್‌ದಿವಾಕರ್‌೧೯೩೬ರಷ್ಟು ಪೂರ್ವದಲ್ಲಿ ತಮ್ಮ ವಚನಶಾಸ್ತ್ರರಹಸ್ಯದಲ್ಲಿ “ಸಮ ಪದಗಳು ಅಥವಾ ಸಮ ಅಕ್ಷರಗಳು” ಮಾತಿನ ಮೂಲಕ ಸೂಚಿಸಿದ್ದಾರೆ. ದಿವಾಕರ ಅವರು ಮುಂದುವರಿದು “ನೀನೊಲಿದರೆ ಕೊರಡು ಕೊನರುವುದಯ್ಯ! ನೀನೊಲಿದರೆ ಬರಡು ಹಯನಹುದಯ್ಯ| ನೀನೊಲಿದರೆ ವಿಷವೆಲ್ಲ ಅಮೃತವಹುದಯ್ಯ! ನೀನೊಲಿದರೆ ಸಕಲ ಪದಾರ್ಥ ಇದಿರಲ್ಲಿಪ್ಪುವು ಕೂಡಲ ಸಂಗಮದೇವಾ||” ಎಂದು ಮಧ್ಯ ಮಧ್ಯ ಗೆಳೆಯೆಳೆದು ಈ ವಚನದ ಪ್ರತಿಯೊಂದು ಚರಣದಲ್ಲಿ ಸಮಪದಗಳು (ಸಮವಾಕ್ಯ)ಇರುವುದನ್ನು ಎತ್ತಿ ತೋರಿಸಿದ್ದಾರೆ. ಒಂದು ವಾಕ್ಯದ ಒಂದು ಪದ ಇನ್ನೊಂದು ವಾಕ್ಯದ ಇನ್ನೊಂದು ಪದಕ್ಕೆ ಸಮಾನವಾಗಿ ಕೇಳಿಸುವುದನ್ನೂ ಅವರು ಗಮನಿಸಿದ್ದಾರೆ. ಉದಾ. ಕೊರಡು: ಬರಡು, ಕೊನರುವುದಯ್ಯ: ಹಯನಹುದಯ್ಯ ಇತ್ಯಾದಿ.

ಈ ವಿಚಾರವನ್ನು ಬಸವನಾಳರು ತುಂಬ ಆಳವಾಗಿ ಚರ್ಚಿಸಿದುದನ್ನು ಅವಶ್ಯ ನೆನೆಯಬೇಕು. ಇಷ್ಟೇ ಏಕೆ ಬಸವಣ್ಣನ ವಚನಗಳ ಸಮಗ್ರಪಠ್ಯಕ್ಕೆ ಈ ತತ್ವವನ್ನು ಅನ್ವಯಿಸಿ “ಇದು ಈ ಮೊದಲು ಹಳಕಟ್ಟಿಯವರು ಪ್ರಕಟಿಸಿದ್ದ ಕೃತಿಯೇ?” ಎಂದು ಕೇಳುವಷ್ಟು ಅದ್ಭುತವಾಗಿ ಅದನ್ನು ಪರಿಷ್ಕರಿಸಿ, ವಚನಸಾಹಿತ್ಯ ಪ್ರಕಟನೆಯ ಇತಿಹಾಸದಲ್ಲಿ ಪ್ರಥಮ ಮೈಲಿಗಲ್ಲು – ಎಂಬಂತೆ ಅದನ್ನು ಹೊರತಂದಿದ್ದಾರೆ.

೬. ವಾಕ್ಯಭಾಗಗಳಾಗಲಿ-ವಾಕ್ಯಗಳಾಗಲಿ ಪುನರುಕ್ತವಾಗುತ್ತವೆ:

ವಾಕ್ಯಭಾಗ – ವಾಕ್ಯಗಳು ಪುನರುಕ್ತವಾಗುವ ಲಕ್ಷಣವನ್ನು ದಿವಾಕರ ಅವರು ಎತ್ತಿಹೇಳಿದ್ದು, ಬಸವನಾಳು, ಗಿರಡ್ಡಿ ಮೊದಲಾದವರು ಅವುಗಳ ಪರಿಗಳನ್ನು ಬಿಚ್ಚಿ ತೋರಿಸಿದ್ದಾರೆ. ಈ ಪ್ರಕ್ರಿಯೆ ಒಂದೇ ವಾಕ್ಯದಲ್ಲಿ ಪುನರುಕ್ತಿ, ಹಲವು ವಾಕ್ಯಗಳಲ್ಲಿ ಪುನರುಕ್ತಿಯೆಂದು ಎರಡು ಬಗೆಯಾಗಿದೆ.

೧. ಎಸೆಯದಿರು ಎಸೆಯದಿರು ಕಾಮಾ
ನಿನ್ನ ಬಾಣ ಹುಸಿಯಲೇಕೊ?
…………………………………..

          ೨. ವೇದಂಗಳ ಹಿಂದೆ ಹರಿಯದಿರು ಹರಿಯದುರು
ಶಾಸ್ತಂಗಳ ಹಿಂದೆ ಸುಳಿಯದಿರು ಸುಳಿಯದಿರು
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು
ಆಗಮಂಗಳ ಹಿಂದೆ ತೊಳಲದಿರು ಗೊಳಲದಿರು
ಸೌರಾಷ್ಟ್ರ ಸೋಮೇಶ್ವರನ ಕೈಹಿಡಿದು,
ಶಬ್ದ ಜಾಲಂಗಳಿಗೆ ಬಳಲದಿರು ಬಳಲದಿರು

ಇವು ಒಂದೇ ವಾಕ್ಯದಲ್ಲಿಯ ಪುನರುಕ್ತಿಗೆ ಉದಾಹರಣೆಗಳು. ಇಂಥ ರಚನೆಯಿಂದ ಅಭಿವ್ಯಕ್ತಿಗೆ ಅವಧಾರಣೆ ಪ್ರಾಪ್ತವಾಗಿ ಪರಿಣಾಮ ಆಳವಾಗಿ ನಾಟುತ್ತದೆ. ಹಲವು ವಾಕ್ಯಗಳಲ್ಲಿಯ ಪುನರುಕ್ತಿಗೆ

ಛಲಬೇಕು ಶರಣಂಗೆ, ಪರಧನವನೊಲ್ಲನೆಂಬ
ಛಲಬೇಕು ಶರಣಂಗೆ, ಪರಧನವನೊಲ್ಲನೆಂಬ
ಛಲಬೇಕು ಶರಣಂಗೆ, ಪರದೈವವನೊಲ್ಲನೆಂಬ
ಛಲಬೇಕು ಶರಣಂಗೆ, ಲಿಂಗಜಂಗಮವೊಂದೆಯೆಂಬ
ಛಲಬೇಕು ಶರಣಂಗೆ, ಪ್ರಸಾದ ದಿಡವೆಂಬ
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ

ಎಂಬುದು ಉದಾಹರಣೆಯಾಗಿದೆ. ಇಲ್ಲಿ ಮೊದಲ ಚರಣದ ಮೂರು ಪದಗಳು ಎರಡನೆಯ ಹಾಗೂ ಮುಂದಿನ ಚರಣಗಳಲ್ಲಿ ಪುನರುಕ್ತವಾಗುತ್ತ ಹೋಗಿವೆ. ಇಲ್ಲಿಯೂ ಅವಧಾರಣೆ ತತ್ವ ಅಡಗಿದೆ. ಸಾಲದುದ್ದಕ್ಕೆ ಒಂದೇ ವಾಕ್ಯ ಮತ್ತೆ ಮತ್ತೆ ಮುಮದುವರಿದ ಕ್ವಚಿತ್ ಉದಾಹರಣೆಗಳೂ ಇವೆ.

ಬಸವ ಹರಿಯಿತ್ತು
ಬಸವ ಹರಿಯಿತ್ತು
ಬಸವ ಹರಿಯಿತ್ತು
ತೊತ್ತಳದುಳಿಯಿತ್ತು
ತೊತ್ತಳದುಳಿಯಿತ್ತು
ತೊತ್ತಳದುಳಿಯಿತ್ತು
ಮೀಮಾಂಸಕರ ಮಿತ್ತುವ ಮರಿಯಿತ್ತು
ಬೌದ್ಧ ಜೈನರ ಕೋಡಲ್ಲಿರಿಯಿತ್ತು
ಕೊಳಗಿನಲ್ಲರೆಯಿತ್ತು,
ನೋಡಾ, ಸೊಡ್ದಳಾ ಸಂಗನಬಸವ.

೭. ವಾಕ್ಯಭಾಗಗಳಾಗಲಿ – ವಾಕ್ಯಗಳಾಗಲಿ ಲಯಾತ್ಮಕವಾಗಿವೆ

ಸಾಹಿತ್ಯದಲ್ಲಿ ಬಳಕೆಯಾಗುವ ಭಾಷೆಗೆ ಗದ್ಯಲಯ, ಪದ್ಯಲಯ ಮತ್ತು ಗದ್ಯಪದ್ಯಗಳ ಮಧ್ಯಲಯ – ಹೀಗೆ ಮೂರು ಸಾಧ್ಯತೆಗಳಿರುತ್ತವೆ. ವಚನಕಾರರಿಗಿಂತ ಮುಂಚೆ ಸಾಹಿತ್ಯದಲ್ಲಿ ಗದ್ಯಲಯ, ಪದ್ಯಲಯಗಳನ್ನು ದುಡಿಸಿಕೊಳ್ಳಲಾಗುತ್ತಿದ್ದಿತು. ಸಾಲದುದ್ದಕ್ಕೆ ಚಂಪೂಕಾವ್ಯಗಳಲ್ಲಿ ಗದ್ಯಪದ್ಯಗಳ ಮಧ್ಯಲಯನಿಷ್ಠ “ವಚನ”ವನ್ನೂ ಬಳಸಲಾಗುತ್ತಿತ್ತು. ಈ ಕಡೆ ಪದ್ಯಕ್ಕೆ ಹೊರಳದ ಈ ಕಡೆ ಗದ್ಯಕ್ಕೆ ಉರುಳಿದ ಇದನ್ನು “ವೃತ್ತಗಂಧಿ”ಯೆಂದೂ ನಮ್ಮ ಅಲಂಕಾರಿಕರು ಕರೆದಿದ್ದಾರೆ. ಚಂಪೂಕೃತಿಗಳಲ್ಲಿ ಪದ್ಯವನ್ನು ಓದಿ ಗದ್ಯಕ್ಕೆ ಬಂದಾಗ, ಲಯದ ಅಂತರದ ಅಭಾಸವಾಗಬಾರದೆಂದು, ಆ ಗದ್ಯವನ್ನು ಒಂದಿಷ್ಟು ಪದ್ಯದ ಹತ್ತಿರ ತಂದು ಲಯಾತ್ಮಕಗೊಳಿಸಿದರು. ಉದಾ. “ಕಯ್ಯಂ ಪಿಡಿದು ಒಡಗೊಂಡು ಪೋಗಿ, ಕನಕಪೀಠದ ಮೇಲೆ ಕುಳ್ಳಿರಿಸಿ, ಕನಕ ಕಳಶದೊಳ್ ತೀವಿದ ಅಗಣ್ಯಪುಣ್ಯ ತೀರ್ಥೋದಕಂಗಳಿಂ, ಚತುರ್ವೇದ ಪಾರಗರಿಂದೆ ಅಭಿಷೇಕಂ ಗೆಯ್ಸಿ.” ಪಂಪಭಾರತದ ಇದನ್ನು ಅರ್ಥಲಯಕ್ಕೆ ಒಳಪಡುವಂತೆ

ಕಯ್ಯಂ ಪಿಡಿದು,
ಒಡಗೊಂಡು ಪೋಗಿ,
ಕನಕಪೀಠದ ಮೇಲೆ ಕುಳ್ಳಿರಿಸಿ,
ಕನಕ ಕಳಶದೊಳ್ ತೀವಿದ ಅಗಣ್ಯಪುಣ್ಯ, ತೀರ್ಥೋದಕಂಗಳಿಂ
ಚತುರ್ವೇದ ಪಾರಗರಿಂದೆ ಅಭಿಷೇಕಂಗೆಯ್ಸಿ.

ಹೀಗೆ ಬಿಡಿಸಿ ಇಡಬಹುದು. ಶರಣರು ಇಂಥ ಲಯಾತ್ಮಕ ಗದ್ಯವನ್ನೇ ವಿಶಿಷ್ಟ ರೀತಿಯಲ್ಲಿ ಪರಿಷ್ಟರಿಸಿ, ವಾಕ್ಯರೀತಿಯಲ್ಲಿ ವಿನ್ಯಾಸಗೊಳಿಸಿ, ಮುಕ್ತಕ ಮಿತಿಯಲ್ಲಿ ಸೀಮಿತಗೊಳಿಸಿದವರು. ಆದ್ಯ ವಚನಕಾರನಾದ ಜೇಡರದಾಸಿಮಯ್ಯನಲ್ಲಿ ಪದ್ಯ ಸಮೀಪದ ಗದ್ದಲಯವಿದ್ದರೆ, ಬಸವಾದಿ ವಚನಕಾರರಲ್ಲಿ ಗದ್ಯ ಸಮೀಪದ ಪದ್ಯಲಯವಿದೆ. ಇದರಿಂದಾಗಿ ಗದ್ಯಾತ್ಮಕ ಮಾತಿನ ಗತಿಯಲ್ಲಿಯೇ ಒಂದಿಷ್ಟು ಅಧಿಕಲಯ ಸೇರಿ, ಲಯಪ್ರತೀತಿ ಕಿವಿ ತುಂಬುತ್ತ ಹೋಗುತ್ತದೆ. ಇದಕ್ಕೆ “ನಾನೊಂದು ಸುರಗಿಯನು ಏನೆಂದು ಹಿಡಿಯುವೆನು” ಎಂಬ ಜೇಡರ ದಾಸಿಮಯ್ಯನ, “ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ” ಎಂಬ ಬಸವಣ್ಣನ ವಚನಗಳನ್ನು ನೋಡಬಹುದು. ವಚನ ರಚನೆಯಲ್ಲಿ ತೋರುವ ಒಂದು ವಿಧದ ಲಯಬದ್ಧತೆ (Rhythm) ಇವುಗಳನ್ನು ಹಾಡುಗಳಂತೆ ಸರಾಗವಾಗಿ ಅಭಿವ್ಯಕ್ತಿಸಲು ಅನುಕೂಲ ಕಲ್ಪಿಸಿದೆ, ಎಂಬ ಬಸವನಾಳರ ಅಭಿಪ್ರಾಯವನ್ನು ಇಲ್ಲಿ ನೆನೆಯಬಹುದು.

. ವಾಕ್ಯದಲ್ಲಿ ಹಿತ ಮಿತ ಪ್ರಾಸವಿದೆ:

ಒಂದೇ ಬಗೆಯ ಶಬ್ದ (Sound)ಕಿವಿಗೆ ಮತ್ತೆ ಮತ್ತೆ ತಟ್ಟುತ್ತ ಹೋದರೆ, ಆ “ಶ್ರವಣಸಾಹಿತ್ಯ” ತುಂಬ ಹಿತಕರವೆನಿಸುತ್ತದೆ. ಬಹುಶಃ ಕನ್ನಡ ಭಾಷೆಯಲ್ಲಿಯೇ ಮೂಲತಃ ಈ ವ್ಯವಸ್ಥೆಯಿದೆಯೆಂದು ಕಾಣುತ್ತದೆ. “ಕನ್ನಡಕ್ಕೆ ಸತತಂ ಪ್ರಾಸಂ” ಎಂಬ ಪ್ರಸಿದ್ಧ ಹೇಳಿಕೆ ಇದನ್ನು ಬೆಂಬಲಿಸುವಂತಿದೆ. ಇಂಥ ಪ್ರಾಸನಿಷ್ಠ ಭಾಷೆಯನ್ನು ಕಾವ್ಯರಚನಾ ಪ್ರಜ್ಞೆಯಿಂದ ಬಳಸಿದ ಶರಣರಲ್ಲಿ, ಇದು ಇನ್ನಷ್ಟು ದಟ್ಟಗೊಂಡಿತು.

ನಡೆಯಲ್ಲಿ ಎಚ್ಚತ್ತು,
ನುಡಿಯಲ್ಲಿ
ತಪ್ಪಿದರೆ
ಹಿಡಿದಿರ್ದ
ಲಿಂಗ ಘಟಸರ್ಪವಯ್ಯಾ.

ಒಂದೇ ಅಳತೆಯ ವಾಕ್ಯಗಳ ಆದಿಯಲ್ಲಿ ಬಂದ ಡಕಾರ ಪ್ರಾಸವಿಲ್ಲಿದೆ.

ಕಳಬೇಡ
ಕೊಲಬೇಡ
ಹುಸಿಯ
ನುಡಿಯಲು ಬೇಡ

ಒಂದೇ ಅಳತೆಯ ವಾಕ್ಯಗಳ ಅಂತ್ಯದಲ್ಲಿ ಡಕಾರ ಪ್ರಾಸವಿಲ್ಲಿದೆ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಬುದೆ
ಕಡೆಗೀಲು
ಬಂಡಿಗಾಧಾರ,
ಕಡುದರ್ಪವೇರಿದ
ಒಡಲೆಂಬ ಬಂಡಿಗೆ
ಮೃಡಶರಣರ
ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ.

ಇಲ್ಲಿ ಡಕಾರ ಪ್ರಾಸ ವಾಕ್ಯದ ಆದಿ ಅಂತ್ಯ ಮತ್ತು ಮಧ್ಯ ಹೀಗೆ ವಚನದ ಮೈತುಂಬ ಬಂದಿರುವುದು ಒಂದಿಷ್ಟು ಅಧಿಕವೆನಿಸಿದರೂ, ಕಡೆಗೀಲಿಲ್ಲದ ಬಂಡಿಯ ಚಲನೆಯ ಗಡಗಡ ಸಪ್ಪಳದ ಪ್ರತೀತಯಾಗುವ ಮೂಲಕ, ಸಾರ್ಥಕವೇ ಎನಿಸಿದೆ. ಈ ರೀತಿ ವಚನಗಳಲ್ಲಿ ಅನುಪ್ರಾಸ ಕರ್ಣಮಧುರವೆಂಬಂತೆ ಆವರ್ತನಗೊಳ್ಳುವುದನ್ನು ಗಮನಿಸಬೇಕು.

ಇಲ್ಲಿ ಲಯ ಮತ್ತು ಪ್ರಾಸ ಹೊಂದಿಕೊಳ್ಳುತ್ತ ಹೋಗುವುದರಿಂದ ಲಯಪ್ರತೀತಿ ಪ್ರಾಸದಿಂದ ಇನ್ನೂ ಸ್ಫುಟವಾಗುತ್ತದೆ:

ಉಂಬಾಗಳಿಲ್ಲೆಂಬ ಉಡುವಾಗಳಿಲ್ಲೆಂಬ
ಬಂಧುಗಳು
ಬಂದಾಗ ಇಲ್ಲೆಂಬ
ಲಿಂಗಕ್ಕೆ
ಇಲ್ಲೆಂಬ ಜಂಗಮಕ್ಕೆ ಇಲ್ಲೆಂಬ
ಬಂದ
ಪುರಾತರಿಗೆ ಇಲ್ಲೆಂಬ
ದೇವರಿಗೆ
ಹೆಣಬಿಟ್ಟಿ ಹೇಳಿತ್ತೆ, ಕೂಡಲಸಂಗಮದೇವಾ

ಇಲ್ಲಿ ಒಂದು ಮತ್ತು ಮೂರನೆಯ ಚರಣಗಳಲ್ಲಿ “ಇಲ್ಲೆಂಬ” ಎಂಬುದು ಎರಡುಸಲ ಎರಡನೆಯ ಗಣವಾಗಿ ಬಂದಿದೆ. ಅದೇ ರೀತಿ ಎರಡು ಮತ್ತು ನಾಲ್ಕನೆಯ ಚರಣಗಳ ಅಂತ್ಯಕ್ಕೆ ಒಂದು ಸಲ ಬಂದಿದೆ. ಈ ರೀತಿಯ ಲಯಬದ್ಧವೂ, ಕ್ರಮಬದ್ಧವೂ ಆಗಿರುವ ಆವರ್ತನದಿಂದಾಗಿ ಪ್ರಾಸದ ಕಳೆ ಉಕ್ಕೇರುತ್ತದೆ. ಇದಲ್ಲದೆ “ಎತ್ತನೇರಿ, ಎತ್ತನರಸುವರು, ಎತ್ತ ಹೋದರೈ ಗುಹೇಶ್ವರಾ” ಎಂಬಂಥ ರಚನೆಗಳಂತೂ ಶಬ್ದ ಅರ್ಥ ದೃಷ್ಟಿಯಿಂದಲೂ ಕಲಾತ್ಮಕವೆನಿಸುತ್ತವೆ.

ಈ ಎಂಟು ಲಕ್ಷಣಗಳಲ್ಲಿ ಮೊದಲಿನ ಆರು ಭಾಷೆಗೆ, ಆಮೇಲಿನ ಎರಡು ಛಂದಸ್ಸಿಗೆ ಸಂಬಂಧಪಟ್ಟಿವೆ. ಈ ಪ್ರಮಾಣವು ವಚನಭಾಷೆಯ ಸ್ವರೂಪವನ್ನೂ ಸೂಚಿಸುವ ಅಂಶವಾಗಿದೆ. ಕೊನೆಯ ಎರಡು ಲಕ್ಷಣದ ರಚನೆಗಳು-ಓದಿದಾಗ ಒಂದು ಪರಿಣಾಮ: ಕೇಳಿದಾಗ ಇನ್ನೊಂದು ಪರಿಣಾಮ ಬೀರುತ್ತವೆ. ಒಟ್ಟಾರೆ ವಚನಗಳು ಭಾಷೆ ಸಮಾಜದಲ್ಲಿ ಹುಟ್ಟುತ್ತದೆ, ಸಾಹಿತ್ಯದಲ್ಲಿ ಬೆಳೆಯುತ್ತದೆ-ಎಂಬುದನ್ನು ಸ್ಪಷ್ಟಪಡಿಸುತ್ತವೆ. ಭಾಷೆಯು ಸಾಹಿತ್ಯದ ಮೂಲಕ ಯಾವುದನ್ನೇ ಅಭಿವ್ಯಕ್ತಿಸುವುದನ್ನಲ್ಲ, ಸ್ಥಾಪಿಸುವುದನ್ನು ಮಾಡುತ್ತದೆಯೆಂಬಂತೆ ವಚನಗಳಲ್ಲಿ ಅದು ದುಡಿದಿದೆ.