ಪ್ರಾಚೀನ ಕನ್ನಡ ಸಾಹಿತ್ಯದ ಚಂಪೂ, ಷಟ್ಪದಿ ಇತ್ಯಾದಿ ಪ್ರಕಾರಗಳ ರಚನೆ ನಿಂತುಹೋಗಿದ್ದರೂ ವಚನರಚನೆ ಮಾತ್ರ ಇಂದಿಗೂ ಜೀವಂತ ವಾಹಿನಿಯಾಗಿ ಮುಂದುವರಿಯುತ್ತಲಿದೆ. ಅನೇಕ ದೃಷ್ಟಿಯಿಂದ ಬದ್ಧ ರಚನೆಯಾಗಿರುವ ಕಾರಣ ಚಂಪೂ ಇತ್ಯಾದಿಗಳ ಸೃಷ್ಟಿ ‘ಸ್ಥಾವರಕ್ಕಳಿವುಂಟು’ ಎಂಬಂತೆ ಅಂದೇ ಅಳಿದುಹೋಯಿತು. ಮುಕ್ತರಚನೆಯಾಗಿರುವ ಕಾರಣ ‘ಜಂಗಮಕ್ಕಳಿವಿಲ್ಲ’ವೆಂಬಂತೆ ವಚನಸೃಷ್ಟಿ ಇಂದಿಗೂ ಒಂದು ಪರಂಪರೆಯಾಗಿ ಬೆಳೆದುಬರುತ್ತಲಿದೆ. ಹೀಗೆ ‘ಮುಕ್ತತತ್ವ’ದಲ್ಲಿ ಮೈಪಡೆದ ಈ ವಚನಗಳು ಮೂಲತಃ ಮುಕ್ತಕ ಸಾಹಿತ್ಯವರ್ಗಕ್ಕೆ ಸೇರುತ್ತವೆ.

ಹೀಗೆ ಮುಕ್ತಕವೆನಿಸುವ ವಚನ ಅರ್ಥದೃಷ್ಟಿಯಿಂದ ಸ್ವತಂತ್ರ, ಗಾತ್ರದೃಷ್ಟಿಯಿಂದ ಚಿಕ್ಕ, ರಚನಾದೃಷ್ಟಿಯಿಂದ ಸರಳವಾಗಿರುವ ಕಾರಣ, ಇದಕ್ಕೆ ಬಿಡಿಸಿ ನೋಡಿದರೆ ಮುತ್ತಿನ ಬೆಲೆಯಿದೆ, ಕೂಡಿಸಿ ನೋಡಿದರೆ ಹಾರದ ಬೆಲೆಯಿದೆ.

ಈ ರೀತಿ ಸೃಜನದಲ್ಲಿ ಮುತ್ತಾಗಲಬಲ್ಲ, ಸಂಯೋಜನೆಯಲ್ಲಿ ಮುತ್ತಿನಹಾರವಾಗಬಲ್ಲ ಉಭಯಗುಣ ವಚನದ ಮುಖ್ಯ ಲಕ್ಷಣವಾಗಿದೆ. ಈ ಗುಣವನ್ನು ಗುರುತಿಸಿದ ಪ್ರಾಚೀನ ವೀರಶೈವ ವಿದ್ವಾಂಸರ ಸಂಯೋಜಕ ಪ್ರತಿಭೆಯು ವಚನಕಾರರ ಸೃಜನಪ್ರತಿಭೆಗೆ ತೀರ ಹತ್ತಿರವಾಗಿದೆ. ಇವರಿಂದ ಕಾಲಕ್ರಮದಲ್ಲಿ ವಚನಗಳು ತಾತ್ವಿಕವಾಗಿ, ಅಷ್ಟೇ ಕಲಾತ್ಮಕವಾಗಿ ಸಂಯೋಜನೆಗೊಂಡವು, ತನ್ಮೂಲಕ ಸಂರಕ್ಷಿತಗೊಂಡವು. ಹೀಗಾಗಿ ಅವರ ಸಂಯೋಜಕ ಪ್ರತಿಭೆಗೆ ನಾವು ಆಶ್ಚರ್ಯಪಡಬೇಕಾಗುತ್ತದೆ, ಸಂರಕ್ಷಣ ಪ್ರಯತ್ನಕ್ಕೆ ಕೃತಜ್ಞತೆ ಹೇಳಬೇಕಾಗುತ್ತದೆ.

ಪ್ರಧಾನವಾಗಿ ವಚನಸಾಹಿತ್ಯ ಹುಟ್ಟಿದುದು ಉತ್ತರಕರ್ನಾಟಕದಲ್ಲಿ. ಅದನ್ನಾಶ್ರಯಿಸಿ ‘ಸಂಯೋಜನಸಾಹಿತ್ಯ’ ಹುಟ್ಟಿದುದು ದಕ್ಷಿಣಕರ್ನಾಟಕದಲ್ಲಿ. ಈ ಪ್ರದೇಶದಲ್ಲಿ ಮುರುಘಾ, ಚೀಲಾಳ ಮೊದಲಾದ ಸಮಯಗಳ ಜೊತೆ ಹಸ್ತಪ್ರತಿಗಳ ಸಂರಕ್ಷಣ, ಸಂಯೋಜನ ಕೆಲಸಕ್ಕಾಗಿಯೇ ವೀರಶೈವ ‘ಸಂಪಾದನ ಸಮಯ’ ವೊಂದು ಹುಟ್ಟಿಕೊಂಡು, ದಕ್ಷಿಣೋತ್ತರ ಹಬ್ಬಿತ್ತೆಂಬುದು ಅವಶ್ಯ ಗಮನಿಸಬೇಕಾದ ಸಂಗತಿಯಾಗಿದೆ. ಧರ್ಮಗ್ರಂಥರಕ್ಷಣೆ’ಯೂ ಒಂದು ಮತದ ಮುಖ್ಯ ಕರ್ತವ್ಯವೆಂಬುದನ್ನು ಇದು ಧ್ವನಿಸುತ್ತದೆ.

ಕಲ್ಯಾಣಕ್ರಾಂತಿಯಿಂದಾಗಿ ಹತ್ತೂ ದಿಕ್ಕಿಗೆ ಹರಿದುಹೋಗಿ ಹಾಳಾಗುತ್ತಲಿದ್ದ ವಚನರಾಶಿಯಲ್ಲಿ ಸಿಕ್ಕಷ್ಟನ್ನು ಉಳಿಸಿಕೊಳ್ಳಲು ದೊಡ್ಡ ಪ್ರಯತ್ನ ಉತ್ತರ ಕಾಲೀನ ಅವಧಿಯಲ್ಲಿ ಜರುಗುತ್ತ ಬಂದಿತು. ಈ ವೈವಿಧ್ಯಪೂರ್ಣ ಪ್ರಯತ್ನವನ್ನು ನಾವು ‘ಸಂಪಾದನೆ’ ಹೆಸರಿನಿಂದ ಕರೆಯುತ್ತಿದ್ದರೂ ಅದರಲ್ಲಿ ಸಂಗ್ರಹ, ಸಂಕಲನ, ಸಂಪಾದನ ಎಂಬ ಮೂರು ಪ್ರಭೇದಗಳು ಗೋಚರಿಸುತ್ತಿದ್ದು, ಅಭ್ಯಾಸದ ಅನುಕೂಲತೆ ದೃಷ್ಟಿಯಿಂದ ಈ ಮೂರು ಸಾಹಿತ್ಯಕ್ರಿಯೆಗಳನ್ನು ‘ಸಂಯೋಜನಸಾಹಿತ್ಯ’ ಎಂಬ ಹೊಸ ಹೆಸರಿನಿಂದ ಕರೆಯಬಹುದಾಗಿದೆ. ಈ ಒಟ್ಟು ಕ್ರಿಯೆ ಒಂದು ಪ್ರಯೋಗವೆಂಬಂತೆ ಸಂಗ್ರಹದಿಂದ ಸಂಕಲನದತ್ತ, ಸಂಕಲನದಿಂದ ಸಂಪಾದನೆಯತ್ತ ಮುಂದುವರಿದಿದೆ. ಸಂಗ್ರಹಕ್ಕೆ ಪ್ರಯತ್ನ ಸಾಕು, ಸಂಕಲನಕ್ಕೆ ಪಾಂಡಿತ್ಯವೂ ಬೇಕು, ಸಂಪಾದನೆಗೆ ಹೆಚ್ಚಿನದಾಗಿ ಪ್ರತಿಭೆಯೂ ಬೇಕು. ಈ ಹಿನ್ನೆಲೆಯಲ್ಲಿ ಹುಟ್ಟಿದ ಈ ಪ್ರಕಾರಗಳ ವ್ಯಾಪ್ತಿ, ವೈಶಿಷ್ಟ್ಯಗಳನ್ನು ಇಲ್ಲಿ ನೋಡಬಹುದು.

ಸಂಗ್ರಹ: ವಚನಗಳು ಸಂಗ್ರಹಕಾರ್ಯ ೧೨ನೆಯ ಶತಮಾನದಲ್ಲಿ ವಚನ ಭಂಡಾರಿ ಶಾಂತರಸನ ನೇತೃತ್ವದಲ್ಲಿ ನಡೆಯುತ್ತಿದ್ದಿತೆಂದು ಪ್ರತೀತಿ. ಹೀಗೆ ಹೇಳಲು ಒಂದೆರಡು ಆಧಾರಗಳೂ ಸಿಗುತ್ತವೆ. ಆದರೆ ಇದರ ಒಂದು ಗಂಭಿರ ಪ್ರಯತ್ನ ಪ್ರಾರಂಭವಾದುದು ೧೫ನೆಯ ಶತಮಾನದಲ್ಲಿ. ನೂರೊಂದು ವಿರಕ್ತರ ನೇತೃತ್ವದಲ್ಲಿ ಈ ಕೆಲಸ ನಡೆಯಿತೆಂದು ಕೆಲವು ವಿದ್ವಾಂಸರು ಹೇಳುತ್ತಿದ್ದರೂ ಇವರು ಇಂದಿಗೂ ಒಂದು ಒಗಟಾಗಿ ಉಳಿದಿದ್ದಾರೆ. ಅದೇನೇ ಇದ್ದರೂ ವಚನಗಳ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಬಹುಶಃ ಈ ಕಾಲದ ದೊಡ್ಡ ಪ್ರಯತ್ನವೆಂದರೆ ‘ಸಕಲಪುರಾತನರ ವಚನ’ ಕಟ್ಟುಗಳ ರಚನೆ. ಇವು ಕೋಲಶಾಂತಯ್ಯ, ಬಸವಣ್ಣ, ಗೊಗ್ಗವ್ವೆಯರ ವಚನಗಳಿಂದ ಪ್ರಾರಂಭವಾಗುವ ಮೂರು ತೆರನಾದ ಕಟ್ಟುಗಳು. ಪ್ರತಿಯೊಬ್ಬ ಶರಣನ ಹೆಸರಿನ ಕೆಳಗೆ ದೊರೆತಷ್ಟು (ಅಥವಾ ತಮಗೆ ಅವಶ್ಯವೆನಿಸಿದಷ್ಟು) ವಚನಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ. ೧೦೦೦ ದಿಂದ ೩೦೦೦ ವರೆಗೆ ವಚನಗಳು ಇಲ್ಲಿ ಸಂಗ್ರಹಗೊಂಡಿವೆ. ಈಗಲೂ ಬಳ್ಳಾರಿ ಜಿಲ್ಲೆಯ ಅರಸಿಕೆರೆ ಗ್ರಾಮದಲ್ಲಿ ಕೋಲ ಶಾಂತಯ್ಯನ ಮಠ, ಗದ್ದುಗೆಗಳಿರುವುದು ಈ ವಚನ ಕಟ್ಟುಗಳು ಹಂಪೆಪ್ರದೇಶದಲ್ಲಿ ರೂಪಗೊಂಡಿರಬೇಕೆಂಬ ಅಂಶವನ್ನು ಸಮರ್ಥಿಸುತ್ತದೆ. ಇದು ಕೇವಲ ಸಂಗ್ರಹಪ್ರಯತ್ನವಾಗಿದ್ದರೂ ಕೋಲಶಾಂತಯ್ಯನಿಂದ ಪ್ರಾರಂಭವಾಗುವ ಕಟ್ಟಿನಲ್ಲಿ ಏಳು ಸಂಕ್ಷಿಪ್ತ ಸಂಪಾದನೆಗಳಿವೆ ಮತ್ತು ಕೋಲಶಾಂತಯ್ಯ, ಬಿಬ್ಬಬಾಚಯ್ಯ, ಶಿವಲೆಂಕಮಂಚಣ್ಣ, ಮನುಮುನಿ ಗುಮ್ಮಟದೇವರ ವಚನಗಳು ಸ್ಥಲಗಳಾಗಿ ವಿಂಗಡಿಸಲ್ಪಪಟ್ಟಿವೆ. ಹೀಗೆ ಸಕಲಪುರಾತನರ ವಚನ ಕಟ್ಟುಗಳಲ್ಲಿಯೇ ಸಂಗ್ರಹ, ಸಂಕಲನ, ಸಂಪಾದನೆಗಳ ಪ್ರಯೋಗ ಕಂಡುಬರುವುದು ಲಕ್ಷಿಸತಕ್ಕೆ ಸಂಗತಿಯಾಗಿದೆ.

ಇವುಗಳನ್ನು ಬಿಟ್ಟರೆ ಏಕವ್ಯಕ್ತಿಗೆ ಸಂಬಧಪಟ್ಟಂತೆ ಸಿದ್ಧರಾಮ, ಮಹಾದೇವಿ, ಗಣದಾಸಿ ವೀರಣ್ಣ ಮೊದಲಾದ ಶರಣರ ವಚನಗಳನ್ನು ಸಂಗ್ರಹಿಸಿದ ಬಿಡಿ ಕಟ್ಟುಗಳು ಸಿಗುತ್ತವೆ. ಇವುಗಳನ್ನು ‘ಏಕಪುರಾತನ ವಚನ’ ಕಟ್ಟುಗಳೆಂದು ಕರೆಯಬಹುದು. ಈ ‘ಸಕಲಪುರಾತನ ವಚನ’ ‘ಏಕಪುರಾತನ ವಚನ’ ಕಟ್ಟುಗಳು ಎಷ್ಟೇ ಪ್ರಯೋಜಕವಾಗಿದ್ದರೂ ಇವುಗಳಿಗೆ ಒಂದು ‘ಸಂಗ್ರಹ ಪ್ರಯತ್ನ’ದ ಬೆಲೆ ಕೊಡಬೇಕಾಗುತ್ತದೆ. ಪಾಠದೃಷ್ಟಿಯಿಂದ ಇವು ವಿಶ್ವಾಸಾರ್ಹ ವಚನಗಳನ್ನೊಳಗೊಂಡ ಪ್ರಾಮಾಣಿಕ ಕೃತಿಗಳಾಗಿದ್ದರೂ ಮೇಲೆ ಸೂಚಿಸಿದ ಇಲ್ಲಯ ೬ ಸಂಕ್ಷಿಪ್ತ ಸಂಪಾದನೆಗಳಲ್ಲಿ ಅಡಕಗೊಂಡ ವಚನಗಳ ತುದಿ ಮೊದಲ ಪಾಠವನ್ನು ಸಂಭಾಷಣೆಗೆ ಹೊಂದುವಂತೆ ಮುರಿಯಲಾಗಿದೆ, ಇಲ್ಲವೆ ಬೆಳೆಸಲಾಗಿದೆ.

ಸಂಕಲನ: ಬಹುಶಃ “ವಚನಸಂಗ್ರಹ” ಕಟ್ಟುಗಳು ಸಿದ್ಧವಾದ ತರುವಾಯ, ಈ ವಚನಗಳನ್ನು ಒಂದು ತತ್ವ ಇಲ್ಲವೆ ಒಂದು ದೃಷ್ಟಿಕೋನದ ಹಿನ್ನೆಲೆಯಲ್ಲಿ ವ್ಯವಸ್ಥೆಗೊಳಿಸಲು ಸಾಧ್ಯವಿದೆಯೆಂಬ ಅಂಶ ಈ ಸಂಯೋಜಕರಿಗೆ ಹೊಳೆಯಿತೆಂದು ತೋರುತ್ತದೆ. ಇದರ ಫಲವಾಗಿ ಸಿದ್ಧವಾದ ಕಟ್ಟುಗಳನ್ನು ‘ಸಂಕಲನ’ವೆಂದು ಕರೆಯಬಹುದು. ಸಂಗ್ರಹಕ್ಕಿಂತ ಹೆಚ್ಚು ಜವಾಬ್ದಾರಿಯ ಕೆಲಸ ‘ಸಂಕಲನ’. ಅಲ್ಲಿ ‘ಪರಿಶ್ರಮ’ ಪ್ರಧಾನವಾಗಿದ್ದರೆ, ಇಲ್ಲಿ ಹೆಚ್ಚಿನದಾಗಿ ಪಾಂಡಿತ್ಯಕ್ಕೆ ಅವಕಾಶವಿದೆ. ಈ ಅವಧಿಯಲ್ಲಿ ಪ್ರಯೋಗವೆಂಬಂತೆ ನೂರಾರು ತೆರನಾದ ಸಂಕಲನಗಳು ಬೆಳೆದುಬಂದವು. ಇವುಗಳನ್ನು ಸ್ಥಲಕಟ್ಟಿನ ಕೃತಿಗಳು, ‘ಇದರ ಕೃತಿಗಳು’ ಎಂದು ಇರುವುದನ್ನು ಮರೆಯಬಾರದು.

ಶರಣ ಸಮುದಾಯದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರ ವಚನಗಳಿಂದ ಮಾತ್ರ ರೂಪಿಸಿದ ಷಟ್ಸ್ಥಲ ಕಟ್ಟುಗಳು ಸಿಗುತ್ತವೆ. ಈ ಷಟ್ಸ್ಥಲ ವಿನ್ಯಾಸ ಹಲವು ಬಗೆಯಾಗಿದೆ. ಭಕ್ತ, ಮಹೇಶ, ಪ್ರಸಾದಿ….ಎಂದು ಮುಂತಾಗಿ ಆರು ಸ್ಥಲಗಳುಳ್ಳುದು ಮತ್ತು ಭಕ್ತನ ಭಕ್ತ , ಭಕ್ತನ ಮಹೇಶ ….ಎಂದು ಮುಂತಾಗಿ ೩೬ ಸ್ಥಲಗಳುಳ್ಳುದು ‘ಆಚರಣೆಯ ಸ್ಥಲ ವಿನ್ಯಾಸವಾದರೆ; ಭಕ್ತನ ಆಚಾರಲಿಂಗ, ಭಕ್ತನ ಗುರುಲಿಂಗ….ಎಂದು ಮುಂತಾಗಿ ೩೬ ಸ್ಥಲಗಳುಳ್ಳುದು ‘ಅನುಭಾವ ಸ್ಥಲವಿನ್ಯಾಸವೆನಿಸುತ್ತದೆ. ಇವುಗಳಲ್ಲಿ ಮಹಾಲಿಂಗದೇವ ಸಂಕಲಿಸಿದ ಪ್ರಭುದೇವರ ವಚನಗಳ ಕಟ್ಟು ಭಕ್ತ, ಮಹೇಶ… ರೀತಿಯ ಆರು ಸ್ಥಲಗಳ, ಅನಾಮಧೇಯನು ಸಂಕಲಿಸಿದ ಬಸವಣ್ಣನವರ ಷಡುಸ್ಥಲದ ವಚನಗಳ ಕಟ್ಟು ಭಕ್ತನ ಭಕ್ತ, ಭಕ್ತನ ಮಹೇಶ… ರೀತಿಯ ಮೂವತ್ತಾರು ಸ್ಥಲಗಳ ‘ಆಚರಣೆಯ ಸ್ಥಲವಿನ್ಯಾಸ’ದಲ್ಲಿ ಸಿಗುತ್ತವೆ. ಚೆನ್ನಬಸವಣ್ಣನವರ ಷಟ್ಸ್ಥಲ ವಚನಕಟ್ಟುಗಳು ಮಾತ್ರ ಮೇಲೆ ಹೇಳಿದ ಮೂರೂ ರೀತಿಯಲ್ಲಿ ಸಿಗುತ್ತಿದ್ದು, ಇವುಗಳನ್ನು ರೂಪಿಸಿದ ಸಂಕಲನಕಾರರ ಹೆಸರು ಮಾತ್ರ ಗೊತ್ತಾಗುವುದಿಲ್ಲ.

‘ಏಕೋತ್ತರ ರಶತಸ್ಥಲ’ ವಚನಕಟ್ಟು ಷಟ್ಸ್ಥಲದ ಇನ್ನೊಂದು ಬಗೆಯ ಮಾದರಿಯಾಗಿದೆ. ಏಕೋತ್ತರ ಶತಸ್ಥಲ, ಸಿದ್ಧಾಂತಶಿಖಾಮಣಿಗಳ ಭಾಷೆ ಭಿನ್ನ, ರಚನೆ ಒಂದೇ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಇತ್ತೀಚೆ ಚೆನ್ನಬಸವಣ್ಣನವರು ಸಂಕಲಿಸಿದ ಇಂಥ ವಚನಸಂಕಲನವೊಂದು ಸಿಕ್ಕಿದ್ದರೂ ನೂರೆಂದು ಸ್ಥಲದ ಸುಗ್ಗಿಕಾಲ ೧೫ ನೆಯ ಶತಮಾನ. ವಚನ ಸ್ವರವಚನಗಳನ್ನು ಬಳಸಿಕೊಂಡು ನೂರೊಂದು ಸ್ಥಲದ ಶಿಲ್ಪವನ್ನು ವಿಸ್ತಾರವಾಗಿ ಮೊದಲು ಕಂಡರಿಸಿದವನು, ಹುಲಿಗೆರೆಯ ಮಹಾಲಿಂಗದೇವ. ಈ ಗ್ರಂಥದ ಮಾದರಿಯಲ್ಲಿ ಜಕ್ಕಣಾಚಾರ್ಯನ ಸ್ವರ ಏಕೋತ್ತರ ಶತಸ್ಥಲ, ಸಿದ್ಧಲಿಂಗನ(?) ಏಕೋತ್ತರ ಸ್ಥಳ, ಅನಾಮಧೇಯರ ಏಕೋತ್ತರ ಶತಸ್ಥಲಸಾರ ಮತ್ತು ಏಕೋತ್ತರ ಶತಸ್ಥಲ ಸಾರಾಮೃತಗಳು ಹುಟ್ಟಿಕೊಂಡಿವೆ. ಶೂನ್ಯ ಸಂಪಾದನೆಗಳಂತೆ ನಮ್ಮಲ್ಲಿ ಅನೇಕ ಏಕೋತ್ತರ ಶತಸ್ಥಲಗಳು ರೂಪಗೊಂಡಿದ್ದಗರೂ ಶೂನ್ಯ ಸಂಪಾದನೆ ಕುಟುಂಬವನ್ನು ಕುರಿತು ನಡೆದಷ್ಟು ಅಭ್ಯಾಸ ಈ ‘ಏಕೋತ್ತರ ಶತಸ್ಥಲ’ ಕುಟುಂಬವನ್ನು ಕುರಿತು ನಡೆಯದಿರುವುದು ದುರ್ದೈವದ ಸಂಗತಿ. ಗುಬ್ಬಿಯ ಮಲ್ಲಣಾರ್ಯನ ‘ಗಣಭಾಷಿತ ರತ್ನಮಾಲೆ’ ಬೇರೊಂದು ರೀತಿಯಲ್ಲಿ ನೂರೊಂದು ಸ್ಥಲಗಳನ್ನೊಳಗೊಂಡಿದೆ. ವಿಷಾದದ ಸಂಗತಿಯೆಂದರೆ ಇದರಲ್ಲಿ ಕೆಲವು ಕೂಟವಚನಗಳಿದ್ದು, ಇಂಥ ಸೃಷ್ಟಿಗೆ ಈತನೇ ಮೊದಲಿಗನಾಗಿದ್ದಾನೆ.

ಷಟ್ಸ್ಥಲ ಕಟ್ಟು, ಏಕೋತ್ತರಶತಸ್ಥಲ ಕಟ್ಟುಗಳನ್ನು ಬಿಟ್ಟರೆ ‘ಇತರ ಸ್ಥಲಕಟ್ಟು’ ಸಂಕಲನಗಳು ವೈವಿಧ್ಯಪೂರ್ಣ ಸ್ಥಲವಿನ್ಯಾಸದಿಂದ, ವಿಫುಲ ಸಂಖ್ಯೆಯಲ್ಲಿ ಬೆಳೆದಿವೆ. ಲಿಂಗಲೀಲಾವಿಲಾಸಚಾರಿತ್ರ ೧೬ ಸ್ಥಲ, ವಿಶೇಷಾನುಭವ ಷಟ್ಸ್ಥಲ ೧೫ ಸ್ಥಲ, ಆಚರಣೆಯ ವಚನ ೨೮ ಸ್ಥಲ, ಸಂಬಂಧದ ವಚನ ೨೪ ಸ್ಥಲ, ಲಿಂಗಚಿದಮೃತಬೋಧೆ ೩೧ ಸ್ಥಲ, ಪ್ರಸಾದಿಸ್ಥಲದ ವಚನ ೮ ಸ್ಥಲ, ವೀರಶೈವ ಚಿಂತಾಮಣಿ ೮ ಸ್ಥಲ, ಬ್ರಾಹ್ಮದ್ವೈತ ಸಿದ್ಧಾಂತ ಷಟ್ಸ್ಥಲಾಭರಣ ೬೧ ಸ್ಥಲ, ಚಿದೈಶ್ವರ್ಯ ಚಿದಾಭರಣ ೧೦ ಸ್ಥಲ, ಷಟ್ಸ್ರಕಾರ ಸಂಗ್ರಹ ೬ ಸ್ಥಲ, ಶರಣಚಾರಿತ್ರದ ವಚನ ೫ ಸ್ಥಲ, ಶೀಲಸಂಪಾದನೆ ೪೦ ಸ್ಥಲ[1] ಶಿವಮಹಿಮಾ ಸ್ತೋತ್ರದ ವಚನ ೨೦ ಸ್ಥಲ, ವಚನಾಮೃತಸಾರ ೯ ಸ್ಥಲ, ಶಿವಯೋಗ ಚಿಂತಾಮಣಿ ೬೬ ಸ್ಥಲ, ಷಟ್ಸ್ಥಲಸ್ತೋತ್ರದ ವಚನ ೬ ಸ್ಥಲ, ಅಷ್ಟಾವರಣಸ್ತೋತ್ರದ ವಚನ ೮ ಸ್ಥಲಗಳನ್ನೊಳಗೊಂಡಿವೆ. ಹೀಗೆ ಸ್ಥಲಸಂಖ್ಯೆ ಅನೇಕ ಬಗೆಯಾಗಿದ್ದು, ಈ ವೈವಿಧ್ಯದ ಹಿಂದೆ ಅಡಗಿರುವ ಉದ್ದೇಶ, ತಂತ್ರ ಇತ್ಯಾದಿಗಳ ಸೂಕ್ಷ್ಮ ಮತ್ತು ಸಮಗ್ರ ಅಭ್ಯಾಸ ಇಂದು ಅಗತ್ಯ ನಡೆಯಬೇಕಾಗಿದೆ. ಇವುಗಳಲ್ಲಿ ಕೆಲವು ಕೇವಲ ವಚನಗಳನ್ನು, ಇನ್ನು ಕೆಲವು ಮಧ್ಯದಲ್ಲಿ ಕೊಂಡಿರೂಪದ ವಿವರಣಾತ್ಮಕ ಗದ್ಯವನ್ನು ಹೊಂದಿವೆ. ಮತ್ತೆ ಕೆಲವು ಸಂಸ್ಕೃತ ಶ್ಲೋಕ, ಕಂದ, ವೃತ್ತಗಳಿಂದ ಸಮರ್ಥಿಸಲ್ಪಟ್ಟಿವೆ. ಮತ್ತೆ ಕೆಲವೊಮ್ಮೆ ಟೀಕೆಗಳೂ ಕಂಡುಬರುತ್ತವೆ. ಈ ವರ್ಗದ ಸಂಕಲನಗಳಲ್ಲಿ ‘ಲಿಂಗಲೀಲಾವಿಲಾಸ ಚಾರಿತ್ರ’ ಒಂದು ಧಾರ್ಮಿಕ ಕೈಪಿಡಿಯಾಗುವಷ್ಟು ಉತ್ಕೃಷ್ಟವಾಗಿದೆ.

ಸ್ಥಲ ವಿಭಜನೆಯಿಲ್ಲದೆ ಕೇವಲ ಒಂದು ತತ್ವ ಇಲ್ಲವೆ ಒಂದು ಧೋರಣೆಯ ಹಿನ್ನೆಲೆಯಲ್ಲಿ ವಚನಗಳನ್ನು ಸಂಗ್ರಹಿಸಿದ ಕೆಲವು ಕಟ್ಟುಗಳೂ ಸಿಗುತ್ತವೆ. ಅವು

ಬಸವಸ್ತೋತ್ರದ ವಚನ, ಷಟ್ಸ್ಥಲ ಬ್ರಹ್ಮಾನಂದ ವಿರಕ್ತಚಾರಿತ್ರ ಸಂಪಾದನೆಯ ವಚನಗಳು, ಚೆನ್ನಬಸವೇಶ್ವರ ದೇವರ ಸ್ತೋತ್ರದ ವಚನ, ಮಿಶ್ರಸ್ತೋತ್ರದ ವಚನ, ಶರಣಸ್ತೋತ್ರದ ವಚನ, ಲಿಂಗವಿಕಳಾವಸ್ಥೆಯ ವಚನ, ಲಿಂಗಸ್ತೋತ್ರದ ವಚನ, ಚಿತ್ಕ್ರಿಯಾ ಸಂಗ್ರಹ, ಸಂಬಂಧಾಚರಣೆಯ ವಚನ, ಆಚರಣೆಯ ವಚನಗಳು, ಸಂಬಂಧದ ವಚನಗಳು, ವಚನಸಾರ, ಜಂಗಮಾಚರಣೆಯ ಸ್ಥಲದ ವಚನಗಳು, ಅನುಭವಜ್ಞಾನ ಸಾರಾಮೃತ ಸಂಪಾದನೆಯ ಸ್ತೋತ್ರ, ಲಿಂಗಸಾವಧಾನದ ವಚನಗಳು.

ಈ ಎರಡು ಬಗೆಯ (ಸ್ಥಲಸಹಿತ, ಸ್ಥಲರಹಿತ)  ಗ್ರಂಥಗಳು ವೀರಶೈವ ಸಿದ್ಧಾಂತದ ಪುನರ್ರಚನಾ ಕಾರ್ಯದ ಬಗೆಬಗೆಯ ಪ್ರಯತ್ನಗಳೆನಿಸಿವೆ. ಈಗ ತಾವು ಇಟ್ಟುಕೊಂಡ ಉದ್ದೇಶಕ್ಕೆ ಕೊರತೆಯುಂಟಾದ ಪಕ್ಷದಲ್ಲಿ ಇವರು ಒಂದೆರಡು ಹೊಸ ವಚನಗಳನ್ನು ಕಟ್ಟಿ ಸೇರಿಸಿರಬಹುದು, ಮೂಲವಚನಗಳನ್ನು ಸ್ವಲ್ಪ ವ್ಯತ್ಯಾಸ ಮಾಡಿರಬಹುದು. ಈ ತಂತ್ರದ ಒಡೆದು ಕಾಣುವ ಲಕ್ಷಣವೆಂದರೆ, ಸಂಕಲನಕಾರ ಮಧ್ಯ ಮಧ್ಯ ಬಂದು ತತ್ವಗಳ ಸಂಬಂಧ ಮತ್ತು ಸ್ವರೂಪದ ಬಗ್ಗೆ ವಿವರಣೆ ರೂಪದ ಮಾತುಗಳನ್ನಾಡುವುದು: ಸಮರ್ಥನೆ ರೂಪದ ಕನ್ನಡ, ಸಂಸ್ಕೃತ ಹೇಳಿಕೆಗಳನ್ನು ಒಡ್ಡುವುದು.

ಸಂಪಾದನೆ: ಮೇಲೆ ವಿವರಿಸಿದ ಸಂಕಲನಕ್ರಿಯೆ ಆಮೇಲೆ ಹೊಸ ಪ್ರಯೋಗಕ್ಕೆ ಒಳಗಾಗಿ, ಒಂದು ಸಿದ್ಧಿ ಪಡೆದುದು‘ಸಂಪಾದನೆ’ ಕೃತಿಗಳಲ್ಲಿ. ಅಲ್ಲಿಯ ಪಾಂಡಿತ್ಯ, ಇಲ್ಲಿ ಪ್ರತಿಭೆಯನ್ನೂ ಮೈಗೂಡಿಸಿಕೊಂಡಿರುತ್ತದೆ. ರಚನೆ (Compilation) ಸೃಷ್ಟಿ (Creation)ಯಲ್ಲಿ ಪರ್ಯವಸಾನ ಹೊಂದಿರುತ್ತದೆ. ಸಂಕಲನಗಳಲ್ಲಿ ಮಧ್ಯ ಮಧ್ಯ ಸಂಕಲನಕಾರ ಬರುತ್ತಿದ್ದರೆ ‘ಸಂಪಾದನೆ’ಗಳಲ್ಲಿ ಸಂಕಲನಕಾರನ ಜೊತೆ ಪಾತ್ರಗಳೂ ಪ್ರವೇಶಿಸಿ ವಚನಗಳ ಮೂಲಕ ಮಾತನಾಡುತ್ತವೆ. ಇದು ಭಾಗವತ ಮತ್ತು ಪಾತ್ರಗಳನ್ನು ಸಂಯೋಜಿಸಿದ ಯಕ್ಷಗಾನತಂತ್ರ[2] ಅಥವಾ ಗದ್ಯ ಮತ್ತು ವಚನಗಳನ್ನು ಸಂಯೋಜಿಸಿದ ಚಂಪೂತಂತ್ರವೆನಿಸಿದೆ. ತನ್ನ ನಾಟ್ಯಗುಣದಿಂದಾಗಿ ಮತ್ತು ಘಟನೆ, ಅವುಗಳ ಸಂಘಟನೆಯಿಂದಾಗಿ ಸಂಪಾದನೆ ‘ಕಾವ್ಯೇಷು ನಾಟಕಂ ರಮ್ಯಂ’ ಎಂಬ ಮಾತನ್ನು ಮನಗಾಣಿಸುತ್ತದೆ. ಸಂಪಾದನಸಾಹಿತ್ಯದ ಇನ್ನೊಂದು ಮುಖ್ಯಲಕ್ಷಣವೆಂದರೆ ಪ್ರಭುದೇವನನ್ನು ಕೇಂದ್ರವ್ಯಕ್ತಿಯನ್ನಾಗಿ ನಿಲ್ಲಿಸಿದುದು. ಈ ಆದರ್ಶದಲ್ಲಿ ಹುಟ್ಟಿದುವು ಅಲ್ಲಮಪ್ರಭು ಸಿದ್ಧರಾಮರ ವಾದದ ವಚನ, ಮುಕ್ತಿ ಕಂಠಾಭರಣ ಮತ್ತು ಶೂನ್ಯ ಸಂಪಾದನೆಗಳು. ಈ ಮೂರು ಮಾತ್ರ ಸಂಪಾದನ ಕೃತಿಗಳೆನಿಸಿಕೊಳ್ಳುತ್ತವೆ. ಇವುಗಳಲ್ಲಿ ಮೊದಲಿನ ಎರಡರಲ್ಲಿ ಕೆಲವು ಕೂಟ ವಚನಗಳಿವೆ. ಅಲ್ಲಲ್ಲಿ ಮೂಲವಚನಗಳ ತುದಿ ಮೊದಲುಗಳನ್ನು ವ್ಯತ್ಯಾಸ ಮಾಡಿಕೊಂಡಿದ್ದರೂ ಕೆಲವು ಕೂಟ ವಚನಗಳನ್ನು ಕಟ್ಟಿಕೊಂಡಿದ್ದರೂ ಈ ಎಲ್ಲ ದೋಷಗಳನ್ನು ಮೀರಿ ಸಾಕಾರಗೊಂಡ ಸ್ವಯಂಭೂಕೃತಿ ಶೂನ್ಯ ಸಂಪಾದನೆ.

‘ಸಂಪಾದನೆ’ ಎಂಬುದಕ್ಕೆ ‘ಗಳಿಕೆ’ ಎಂಬ ಅರ್ಥದ ಜೊತೆ, ಕರ್ತೃವಿನ ಮನಸ್ಸಿನಲ್ಲಿ “ಸಂವಾದ” ಎಂಬ ಅರ್ಥವೂ ಇರಬಹುದೆನಿಸುತ್ತದೆ. ಹೀಗಾಗಿ ಇದಕ್ಕೆ ಶೂನ್ಯದ ಗಳಿಕೆ, ಶೂನ್ಯವನ್ನು ಕುರಿತ ಸಂವಾದವೆಂದು ಎರಡು ಅರ್ಥಗಳನ್ನು ಹೇಳಬಹುದಾಗಿದೆ. ತಮಿಳಿನಲ್ಲಿ ‘ಶೂನ್ಯ ಸಂಭಾಷಣ’ ಹೆಸರಿನ ವೀರಶೈವ ಪರಿಭಾಷಾ ಪದವಿರುವುದನ್ನು ಇಲ್ಲಿ ನೆನೆಯಬಹುದು.

ಕೋಲಶಾಂತಯ್ಯನ ವಚನಗಳಿಂದ ಪ್ರಾರಂಭವಾಗುವ ‘ಸಕಲಪುರಾತನರ ವಚನ’ ಕಟ್ಟಿನಲ್ಲಿ ಪ್ರಭುದೇವರ ಬಸವಣ್ಣನವರ ಸಂಪಾದನೆ, ಪ್ರಭುದೇವರ ಚೆನ್ನಬಸವಣ್ಣನವರ ಸಂಪಾದನೆ, ಪ್ರಭುದೇವರ ಸಿದ್ಧರಾಮಯ್ಯದೇವರ ಸಂಪಾದನೆ, ಪ್ರಭುದೇವರ ಮಹಾದೇವಿಯಕ್ಕಗಳ ಸಂಪಾದನೆ, ಘಟ್ಟಿವಾಳಯ್ಯಗಳ ಸಮಯ ಸಮೂಹದ ಸಂಪಾದನೆ, ನುಲಿಯಚಂದಯ್ಯ (ಗಳ ಸಂಪಾದನೆ), ಆಯ್ದಕ್ಕಿ ಮಾರಯ್ಯ (ಗಳ ಸಂಪಾದನೆ)- ಹೀಗೆ ಏಳು ಸಂವಾದಗಳನ್ನೊಳಗೊಂಡ ಒಂದು ಸಂಕ್ಷಿಪ್ತ ಸಂಪಾದನೆಯಿದೆ.[3] ಇಲ್ಲಿಯ ವಚನಗಳು ಪ್ರಸಾದಿ ಮಹಾದೇವಯ್ಯನ ಸಂಪಾದನೆಯಲ್ಲಿಲ್ಲ. ಆದರೆ ಹಲಗದೇವ ಮೊದಲಾದವರ ಸಂಪಾದನೆಗಳಲ್ಲಿ ಇದೇ ವಿನ್ಯಾಸ ಕ್ರಮದೊಂದಿಗೆ ಕಂಡುಬರುತ್ತವೆ. ಹೀಗಾಗಿ, ಮಹಾದೇವಯ್ಯನ ಶೂನ್ಯಸಂಪಾದನೆಯ ಬಳಿಕ ಸಕಲ ಪುರಾತನರ ವಚನಕಟ್ಟು, ಆಮೇಲೆ ಇತರ ಶೂನ್ಯಸಂಪಾದನೆಗಳು ಹುಟ್ಟಿರಬಹುದೆಂಬ ಅಭಿಪ್ರಾಯಕ್ಕೆ ಬರಬಹುದಾಗಿದೆ.ಅದೇನೇ ಇರಲಿ ವಚನಗಳ ಒಡಲಲ್ಲಿ ಸ್ಪಂದಿಸುತ್ತಿದ್ದ ಸಂಬೋಧನೆ (ಆತ್ಮಮುಖಿ, ಲೋಕಮುಖಿ)ಯನ್ನು ಗುರುತಿಸಿ, ಅದನ್ನು ಮಹಾದೇವಯ್ಯ-ಬಿಡಿ ವಚನಗಳಿಂದ ಇಡಿ ಕೃತಿಯನ್ನು ಸಂವಾದಶೈಲಿಯಲ್ಲಿ ರೂಪಿಸುವ ಸೂಚನೆ ಇವನಿಗೆ ಹೊಳೆದುದೇ ಒಂದು ಶುಭಗಳಿಗೆ. ಅದನ್ನು ಪ್ರೌಢರೀತಿಯಲ್ಲಿ ಎರಕಹೊಯ್ದುದೇ ಒಂದು ಅದ್ಭುತ ಪ್ರಯೋಗ. ಈತನ ಸಂಯೋಜಕ ಪ್ರತಿಭೆಯೇ ಒಂದು ಆಶ್ಚರ್ಯ.

ಇವನ ತರುವಾಯ ಹಲಗೆದೇವರು, ಗುಮ್ಮಳಾಪುರದ ಸಿದ್ಧಲಿಂಗ, ಗೂಳೂರು ಸಿದ್ಧವೀರಣ್ಣ-ಹೀಗೆ ಮೂರು ಜನರಿಂದ ಶೂನ್ಯ ಸಂಪಾದನೆಗಳು ಹುಟ್ಟಿವೆ. ನೋಡಲಿಕ್ಕೆ ನಾಲ್ಕು ಸ್ವತಂತ್ರ ಕೃತಿಗಳಾಗಿ ಕಂಡರೂ ಒಂದರ ಪರಿಷ್ಕರಣ ಇನ್ನೊಂದರಂತೆ –ಇವು ಬೆಳೆದು ಬಂದಿವೆ. ಹಲಗೆದೇವರು ಮಾತ್ರ ಈ ಕಾರ್ಯದಲ್ಲಿ ಅಷ್ಟಾಗಿ ಯಶಸ್ಸು ಪಡೆದಿಲ್ಲ. ಮಿಕ್ಕವರಲ್ಲಿ ಪ್ರಸಾದಿ ಮಹಾದೇವಯ್ಯನಿಗಿಂತ ಗುಮ್ಮಳಾಪುರ ಸಿದ್ಧಲಿಂಗ, ಗುಮ್ಮಳಾಪುರ ಸಿದ್ಧಲಿಂಗನಿಗಿಂತ ಗೂಳೂರು ಸಿದ್ಧವೀರಣ್ಣ ನಿಶ್ಚಯವಾಗಿಯೂ ಯಶಸ್ಸು ಸಾಧಿಸಿದ್ದಾರೆ. ಮಹಾದೇವಯ್ಯ, ಹಲದೇವ, ಗುಮ್ಮಳಾಪುರದ ಸಿದ್ಧಲಿಂಗರ

ಸಂಪಾದನೆಗಳಲ್ಲಿ ಪ್ರಕರಣ ವಿಭಜನೆಯಿಲ್ಲ. ಆದರೆ ಗುಮ್ಮಳಾಪುರ ಸಿದ್ಧಲಿಂಗನ ಕೃತಿಯಲ್ಲಿನ ಕೆಲವು ವಚನಗಳನ್ನು ತೆಗೆಯುವ, ಸೇರಿಸುವ ಮತ್ತು ಪ್ರಕರಣ ವಿಭಜನೆ ಮಾಡಿಕೊಳ್ಳುವ ಕ್ರಿಯೆಗಳ ಮೂಲಕ ತನ್ನ ಕೃತಿಯನ್ನು ಅಚ್ಚುಕಟ್ಟಾಗಿ ಪರಿಷ್ಕರಿಸಿದ್ದಾನೆ, ಗೂಳೂರು ಸಿದ್ಧವೀರಣ್ಣ. ಇದರಿಂದಾಗಿ ಈತನ ಶೂನ್ಯಸಂಪಾದನೆ ಪಸರಿಪ ಕನ್ನಡಕ್ಕೆ ಇದೇ ಆದಿ, ಇದೇ ಅಂತ್ಯ ಎಂಬಂತೆ ಅದ್ಭುತವಾಗಿ ಅರಳಿದೆ. ಮುಕ್ತಕ ಸಾಹಿತ್ಯವನ್ನು ಸಂಯೋಜಕ ಸಾಹಿತ್ಯವನ್ನಾಗಿ ಪರಿವರ್ತಿಸಿದ ಪರಮಾವಧಿ ಪರಿಶ್ರಮ-ಪಾಂಡಿತ್ಯ-ಪ್ರತಿಭೆಗಳ ತ್ರಿಕೂಟವಾಗಿದೆ, ಈತನ ಸಂಪಾದನೆ.

ಮೊದಲಿನ ಸಂಪಾದನೆಗಳಿಲ್ಲದ ಕೆಲವು ಹೊಸ ಪ್ರಸಂಗಗಳು ಮುಂದಿನ ಶೂನ್ಯ ಸಂಪಾದನೆಗಳಲ್ಲಿ ಸೇರುತ್ತಹೋಗಿವೆ. ಹಲಗೆದೇವರು ಸಿದ್ಧರಾಮನ ಲಿಂಗದೀಕ್ಷೆ ಮತ್ತು ನುಲಿಯ ಚಂದಯ್ಯನ ಸಂಪಾದನೆಗಳನ್ನೂ, ಗುಮ್ಮಾಪುರದ ಸಿದ್ಧಲಿಂಗನು ಆಯ್ದಕ್ಕಿ ಮಾರಯ್ಯನ ಸಂಪಾದನೆ ಮತ್ತು ಗೋರಕ್ಷನ ಸಂಪಾದನೆಗಳನ್ನೂ ಗೂಳೂರು ಸಿದ್ಧವೀರಣ್ಣನು ಗೊಗ್ಗಯ್ಯನ ಬೋಧೆ, ಮೋಳಿಗೆಯ್ಯನ ಸಂಪಾದನೆ, ಘಟ್ಟಿವಾಳಯ್ಯನ ಸಂಪಾದನೆಗಳನ್ನೂ ಸೇರಿಸಿದ್ದಾರೆ. ಇದರಿಂದಾಗಿ ಮೂಲದಲ್ಲಿದ್ದ ಗುರು, ಲಿಂಗ, ಜಂಗಮ ಮುಂತಾದ ಧಾರ್ಮಿಕ ಸಿದ್ಧಾಂತಗಳ ಪ್ರತಿಪಾದನೆಯ ಜೊತೆಗೆ ಕ್ರಮೇಣ ಕಾಯಕ. ದಾಸೋಹ ಮುಂತಾದ ಸಾಮಾಜಿಕ ಸಿದ್ಧಾಂತಗಳ ಪ್ರತಿಪಾದನೆಯೂ ಸೇರುತ್ತ ಹೋಗಿ, ಒಂದು ಧರ್ಮದ ಗ್ರಂಥವಾದ ಶೂನ್ಯಸಂಪಾದನೆ ಮಾನವಧರ್ಮದ ಗ್ರಂಥವಾಗಿ ಬೆಳೆಯಿತು. ಅಧಿಕ ಜನಾಭಿಮುಖಿಯಾಯಿತು.

ಶೂನ್ಯಸಂಪಾದನೆಗಳ ವಿಕಾಸದ ಇನ್ನೊಂದು ಮುಖ್ಯ ಉದ್ದೇಶವೆಂದರೆ, ಪ್ರಭುದೇವ ಶಾಪಗ್ರಸ್ತನಾಗಿ ಹುಟ್ಟಿದನೆಂಬ ಮಹಾದೇವಯ್ಯಗಳ ವಾದವನ್ನು ಧಿಕ್ಕರಿಸಿ, ಜಗದ್ಧಿತಾರ್ಥ ಅವತರಿಸಿದನೆಂಬುದನ್ನು ಪ್ರತಿಷ್ಠಾಪಿಸುತ್ತ ಅವನ ಪಾತ್ರವನ್ನು ಘೋಷಿಸುವುದೇ ಆಗಿದೆ. ಹಾಗೆ ನೋಡಿದರೆ ೧೫ನೆಯ ಶತಮಾನದ ತರುವಾಯದ ಎಲ್ಲ ಸಂಪಾದನ ಕೃತಿಗಳು ಮತ್ತು ಕೆಲವು ಕಾವ್ಯಕೃತಿಗಳು ಈ ಧೋರಣೆಯನ್ನು ಪ್ರತಿಷ್ಠಾಪಿಸುವುದಕ್ಕಾಗಿಯೇ ಹುಟ್ಟಿವೆ. ಆದುದರಿಂದ ೧೫ನೆಯ ಶತಮಾನದಿಂದೀಚೆಯ ವೀರಶೈವ ಸಾಹಿತ್ಯದ ಬೆಳವಣಿಗೆಯೆಂದರೆ ಪ್ರಭುದೇವರ ಪಾತ್ರ ಬೆಳವಣಿಗೆಯೇ ಆಗಿದೆ ಎನ್ನಬಹುದು.

ಸಕಲಪುರಾತನರ ವಚನಗಳಂಥ ‘ಸಂಗ್ರಹ’ದಲ್ಲಿ ಎಲ್ಲ ಶರಣವ್ಯಕ್ತಿಗಳಿಗೂ ಸಮಾನಸ್ಥಾನ, ಏಕೋತ್ತರ ಶತಸ್ಥಲದಂಥ ‘ಸಂಕಲನ’ದಲ್ಲಿ ಶರಣವ್ಯಕ್ತಿಗಳು ಗೌಣ, ಶರಣತತ್ವಗಳಿಗೆ ಪ್ರಧಾನಸ್ಥಾನ, ‘ಸಂಪಾದನೆ’ಯಲ್ಲಿ ಶರಣ ವ್ಯಕ್ತಿಗಳನ್ನು ಸಂದರ್ಶಿಸುತ್ತ ಅವರಿಗೆ ತತ್ವಗಳನ್ನು ಬೋಧಿಸುವ ಪ್ರಭುದೇವನೆಂಬ ವ್ಯಕ್ತಿಗೆ ಪ್ರಧಾನಸ್ಥಾನ. ಹೀಗಾಗಿ ಶೂನ್ಯ ಸಂಪಾದನೆ ಒಂದರ್ಥದಲ್ಲಿ ಪ್ರಭುದೇವರ ಅನುಭಾವಿಕ ಪ್ರವಾಸ ಕಥನವೆನಿಸಿದೆ.

ಮೇಲೆ ವಿವರಿಸಿದ ಸಂಗ್ರಹ, ಸಂಕಲನ, ಸಂಪಾದನೆ-ಈ ಮೂರು ಪ್ರಕಾರಗಳಿಗೆ ಅವುಗಳ ಮಹತ್ವ ಅವುಗಳಿಗಿದ್ದರೂ ‘ಸಂಗ್ರಹ’ವೆಂಬುದು ಸಾಮಗ್ರಿಮುಖಿ, ‘ಸಂಕಲನ’ವೆಂಬುದು ವಿವರಣಮುಖಿಯಾಗಿದ್ದರೆ, ಕೊನೆಯ ಸಂಪಾದನೆಯೆಂಬುದು ವಿವೇಚನಮುಖಿಯಾಗಿದೆ. ಆದರೆ ಶೂನ್ಯಸಂಪಾದನೆ ಎಷ್ಟೇ ಉತ್ತಮಕೃತಿಯಾಗಿದ್ದರೂ ಘಟನೆಗಳಿಗೆ ಸಂಬಂಧಿಸಿದಂತೆ ಪುನರುಕ್ತಿ, ಅತಿವ್ಯಾಪ್ತಿ ಮತ್ತು ಕ್ರಮವ್ಯತ್ಯಯವೆಂಬ ಸಣ್ಣಪುಟ್ಟ ದೋಷಗಳು ಅಲ್ಲಲ್ಲಿ ಉಳಿದುಕೊಂಡು, ಒಂದು ಒಳ್ಳೆಯ ಕೃತಿಗಿರಬೇಕಾದ ಸಾವಯವ ಸೌಂದರ್ಯಕ್ಕೆ ಅಲ್ಲಿ ಚ್ಯುತಿಬಂದಿದೆ. ಸಂವಾದಕ್ಕೆ ಅಳವಡುವಲ್ಲಿ ಅನೇಕ ವಚನಗಳು ರೂಪವ್ಯತ್ಯಾಸ ಮಾಡಿಕೊಂಡಿರುವುದರಿಂದ ಪಾಠಶುದ್ಧ ದೃಷ್ಟಿಯಿಂದಲೂ ಸಂಗ್ರಹ, ಸಂಕಲನಗಳಿಗಿರುವ ಗೌರವ ಈ ‘ಸಂಪಾದನೆ’ಗೆ ಸಲ್ಲುವುದಿಲ್ಲ. ಅದೇನೇ ಇದ್ದರೂ ‘ಸಂಪಾದನೆ’ಯೆಂದರೆ ಶೂನ್ಯಸಂಪಾದನೆಯೇ ಎಂಬ ಖ್ಯಾತಿ ಅದಕ್ಕೆ ಸಲ್ಲುತ್ತದೆ.

ಪ್ರಾಚೀನ ಸಾಹಿತ್ಯವನ್ನಾಧರಿಸಿ ನಡೆಸಿದ ಸಂಯೋಜನ ಪ್ರಯತ್ನ ಅನ್ಯಭಾಷೆಗಳಲ್ಲಿಯೂ ಕೆಲವಡೆಡೆ ಕಂಡುಬರುತ್ತದೆ. ತಮಿಳಿನ ‘ಸಂಘಂ ಸಾಹಿತ್ಯ’ ಇಂಥ ಒಂದು ಲೋಕವಿಖ್ಯಾತ ಪ್ರಯತ್ನ. ಆದರೆ ಅದು ‘ಸಂಗ್ರಹ’ ಮಟ್ಟಕ್ಕೆ ನಿಂತುಬಿಟ್ಟಿದೆ, ಬಹಳೆಂದರೆ ‘ಸಂಕಲನ’ ಮಟ್ಟಕ್ಕೇರಿದೆ. ‘ಸಂಪಾದನೆ’ಯ ಸೃಜನಶೀಲತೆ ಅಲ್ಲಿ ಕಾಣುವುದೇ ಇಲ್ಲ. ಈ ದೃಷ್ಟಿಯಿಂದ ನಮ್ಮ ‘ಸಂಪಾದನೆ’ ಜಾಗತಿಕ ವಿನೂತನ ಪ್ರಯೋಗವೆನಿಸಿದೆ. ಶೂನ್ಯಸಂಪಾದನೆ ಇದಕ್ಕೆ ಪರಮ ನಿದರ್ಶನವೆನಿಸಿದೆ.

[1] ಹೆಸರು ‘ಶೀಲಸಂಪಾದನೆ’ ಇದ್ದರೂ ಇದು ಸಂವಾದಾತ್ಮಕವಲ್ಲದುದೂ ಪ್ರಭುದೇವ ಕೇಂದ್ರವಸ್ತುವಲ್ಲವಾದುದೂ ಆಗಿರುವುದರಿಂದ ‘ಸಂಕಲನ’ದಲ್ಲಿ ಸಮಾವೇಶಗೊಳ್ಳುತ್ತದೆ.

[2] ಡಾ. ಚಿದಾನಂದಮೂರ್ತಿ, ಲಿಂಗಾಯತ ಅಧ್ಯಯನಗಳು (೧೯೮೬), ಪು. ೨೪೩

[3] ಈ ಏಳು ಸಂಪಾದನೆಗಳ ಸ್ವತಂತ್ರ ಕಟ್ಟು, ‘ಸುಖಸಂಪಾದನೆಯ ವಚನಗಳು’ ಹೆಸರಿನಿಂದ ಅಲ್ಪವತ್ಯಾಸದೊಂದಿಗೆ ಸಿಗುತ್ತದೆ.