ಚಂಪೂ’’ ಕಾವ್ಯಗಳಲ್ಲಿ ಗದ್ಯಭಾಗಕ್ಕೆ ವಚನವೆಂದು ಕರೆಯಲಾಗಿದೆ. ಇದಕ್ಕೆ ವಿರುದ್ಧವೆನ್ನುವಂತೆ ಪದ್ಯರೂಪದಲ್ಲಿರುವ ಸರ್ವಜ್ಞನ ತ್ರಿಪದಿಗಳಿಗೂ ‘ವಚನ’ವೆಂದೂ ಕರೆಯುವುದು ರೂಢಿಯಾಗಿದೆ.[1] ಹೀಗಾಗಿ ಶರಣರು ತಮ್ಮ ರಚನೆಗಳನ್ನು ಯಾವ ಅರ್ಥದಲ್ಲಿ “ವಚನ”ವೆಂದು ಕರೆದರೆಂಬ ಪ್ರಶ್ನೆ ಎದುರಾಗುತ್ತದೆ.

ಸಾಮಾನ್ಯವಾಗಿ ಯಾವುದೇ ಸಾಹಿತ್ಯಪ್ರಕಾರವನ್ನು ಅದರ “ರೂಪ”ವನ್ನು ಗಮನಿಸಿ (ಉದಾ ಷಟ್ಪದಿ), ಇಲ್ಲವೆ ವಸ್ತು”ವನ್ನು ಗಮನಿಸಿ (ಉದಾ. ಭಾವಗೀತೆ) ಹೆಸರಿಸಲಾಗುತ್ತದೆ. ಶರಣರ ‘ವಚನ’ವೆನ್ನುವುದು ಕೇವಲ ಗದ್ಯವಲ್ಹವಾಗಿ ರೂಪವನ್ನೂ ಸೂಚಿಸುವುದಿಲ್ಲ; ಒಂದೇ ರೀತಿಯ ವಸ್ತುವನ್ನು ಬಳಸಿಲ್ಲವಾಗಿ ವಸ್ತುವನ್ನೂ ಸೂಚಿಸುವುದಿಲ್ಲ. ಹಾಗಾದರೆ ಅದು ಸೂಚಿಸುವುದಾದರೂ ಏನನ್ನು? ಎಂದು ಕೇಳಬೇಕಾಗುತ್ತದೆ.

ಬಹುಶಃ ವಚನದಲ್ಲಿ ಏನು ಹೇಳಿದ್ದಾರೆ? ಹೇಗೆ ಹೇಳಿದ್ದಾರೆ? ಮುಖ್ಯವಲ್ಲ. ಯಾರು ಹೇಳಿದ್ದಾರೆ? ಮುಖ್ಯ. ಕವಿಯ ನುಡಿಯಾಗಿರುವ ಅದು ಅವನ ನಡೆಯನ್ನು ಅಪೇಕ್ಷಿಸುತ್ತದೆ. ಅಂದರೆ ಶುದ್ಧ ನಡೆಯುಳ್ಳವನ ನುಡಿ ಮಾತ್ರ ‘ವಚನ’ (Oath) ಎನಿಸಿಕೊಳ್ಳುತ್ತದೆ. ಶರಣರ ದೃಷ್ಟಿಯಲ್ಲಿ “ವಚನ” ಶಬ್ದಕ್ಕೆ ಇದ್ದ ಅರ್ಥವಿದು. ಆದುದರಿಂದ ನಡೆ-ನುಡಿಗಳ ಪ್ರಾಮಾಣಿಕ ಅಭಿವ್ಯಕ್ತಿಯೇ (Commitment) ‘ವಚನ’ ಪದದ ಮೂಲ ಮತ್ತು ಮುಖ್ಯ ಲಕ್ಷಣವಾಗಿದೆ. ಶರಣರಲ್ಲಿ ಈ ಬರವಣಿಗೆ ವಚನಸಾಹಿತ್ಯ, ಸ್ವರವಚನ ಸಾಹಿತ್ಯವೆಂದು ಎರಡು ತೆರನಾಗಿದೆ.

ಪ್ರಾರಂಭದಲ್ಲಿ ಪಲ್ಲವಿ ಇಲ್ಲವೆ ಪಲ್ಲವಿ-ಅನುಪಲ್ಲವಿ, ಆಮೇಲೆ ಕೆಲವು ಪದ್ಯಗಳು, ಕೊನೆಗೆ ಕಡ್ಡಾಯವಾಗಿ ಮುದ್ರಿಕೆ-ಇದು ಸ್ವರವಚನದ ರೂಪಮುದ್ರೆ. ಸಾಮಾನ್ಯವಾಗಿ ಪ್ರತಿಯೊಂದು ಸ್ವರವಚನದ ತಲೆಯ ಮೇಲೆ ರಾಗಗಳ, ಕೆಲವೊಮ್ಮೆ ತಾಳಗಳ ನಿರ್ದೇಶನವಿರುತ್ತದೆ. ವೀರಶೈವತತ್ವ, ಲೋಕನೀತಿ, ಸಮಾಜವಿಮರ್ಶೆ, ಆತ್ಮವಿಮರ್ಶೆ ಇದರ ವಸ್ತುಸಂಪತ್ತು.

‘ಸ್ವರವಚನ’ವೆಂಬುದು ವೀರಶೈವರು ಬಳಸಿದ ಒಂದು ಹೊಸ ಸಾಹಿತ್ಯಿಕ ಪರಿಭಾಷೆ. ವಚನಗಳಿಗಿಂತ ಬೇರೆಯಾಗಿ ನಿರ್ದಿಷ್ಟ ತಾಳ-ರಾಗ ಸಮನ್ವಿತವಾಗಿರುವ ಇದನ್ನು ‘ಸ್ವರವಚನ’ವೆಂದು, ಕೆಲವೊಮ್ಮೆ ‘ಸ್ವರಪದ’ವೆಂದು ಕರೆಯಲಾಗಿದೆ. ಸ್ಥೂಲ ಅರ್ಥದಲ್ಲಿ ಇದನ್ನು ‘ಹಾಡುಗಬ್ಬ’ಎಂದು ಕರೆಯಬಹುದು. ಕಾವ್ಯಾವಲೋಕನದಲ್ಲಿ ‘ಹಾಡುಗಬ್ಬ’ ಹೆಸರಿನ ಉಲ್ಲೇಖ ಸಿಗುತ್ತದೆ. ಆದರೆ ಲಿಖಿತ ದಾಖಲೆಗನ್ನು ಆಧರಿಸಿ ಹೇಳುವುದಾದರೆ ೧೨ನೆಯ ಶತಮಾನದಲ್ಲಿ ಹುಟ್ಟಿದ ಸ್ವರವಚನಗಳೇ ನಮ್ಮ ನಾಡಿನ ಪ್ರಾಚೀನತಮ ಉಪಲಬ್ಧ ಹಾಡುಗಬ್ಬಗಳು. ಅಂದಿನಿಂದ ಇಂದಿನವರೆಗೂ ವೀರಶೈವ ಸ್ವರವಚನಸಾಹಿತ್ಯ ಹುಟ್ಟುತ್ತಲಿದ್ದು, ಈ ಇತಿಹಾಸದಲ್ಲಿ ಕೆಲವು ಘಟ್ಟಗಳನ್ನು ಗುರುತಿಸಬಹುದಾಗಿದೆ. ಇವುಗಳಲ್ಲಿ ಮೊದಲಿನ ಘಟ್ಟ ಬಸವಾದಿ ಶಿವಶರಣರ ಸ್ವರವಚನಗಳು.

೧೨ನೆಯ ಶತಮಾನದ ಶಿವಶರಣರ ಹೆಸರಿನಲ್ಲಿ ಕಂಡುಬರುವ ಸ್ವರವಚನಗಳ ಪ್ರಾಮಾಣಿಕತೆಯ ಬಗ್ಗೆ ಕೆಲವು ವಿದ್ವಾಂಸರು ಸಂದೇಹ ವ್ಯಕ್ತಪಡಿಸುತ್ತಲಿದ್ದಾರೆ. ವಚನಗಳ ಸಾಹಿತ್ಯಗುಣ ಸ್ವರವಚನಗಳಲ್ಲಿ ಇಲ್ಲ; ವಚನಗಳ ಭಾವ-ಭಾಷೆಗಳ ಛಾಯೆ ಒಮ್ಮೊಮ್ಮೆ ಇವುಗಳಲ್ಲಿ ಕಂಡುಬರುವುದರಿಂದ ಮೂಲ ವಚನಗಳನ್ನು ತರುವಾಯದವರು ಸ್ವರವಚನಗೊಳಿಸಿರಬಹುದು ಎಂಬುದು ಇವರ ವಾದ. ಮೇಲು ನೋಟಕ್ಕೆ ಇವರ ವಾದ ಸರಿಯೆನಿಸಬಹುದಾದರೂ ಇಲ್ಲಿ ಕೆಲವು ಅಂಶಗಳನ್ನು ಅವಶ್ಯ ಗಮನಿಸಬೇಕು. ಅವು;

೧. ಮೂಲತಃ ಸ್ವರವಚನವು ಗೀತಮಾಧ್ಯಮದ ಸಾಹಿತ್ಯ. ಗೀತಮಾಧ್ಯಮವನ್ನು ಬಿಟ್ಟು ಲೇಖನಮಾಧ್ಯಮದ ಮೂಲಕ ನೋಡಿದರೆ ಇವುಗಳ ಸತ್ವ-ಪರಿಣಾಮಗಳಲ್ಲಿ ಕೊರೆತ ಕಾಣುವುದು ಸಹಜ. ಈ ಮಾತು ದಾಸರ ಕೀರ್ತನೆಗಳಿಗೂ, ಜನಪದ ಹಾಡುಗಳಿಗೂ ಅನ್ವಯಿಸುತ್ತದೆ. ಹೀಗಾಗಿ ಇದರ ನಿಜವಾದ ಸ್ವರೂಪ ಕಾಣಬೇಕಾದರೆ ಓದಬಾರದು, ಹಾಡಬೇಕು. “ನೋಡು ನೋಡು ನೋಡು ಲಿಂಗವೇ” ಎಂಬ ನೀಲಲೋಚನೆಯ ಸ್ವರವಚನವನ್ನು ಒಮ್ಮೆ ಓದಿಸಿ, ಓಮ್ಮೆ ಹಾಡಿಸಿ ಕೇಳಿದಾಗ ಈ ಮಾತಿನ ಸತ್ಯ ಹೊಳೆಯುತ್ತದೆ. ಅಂದರೆ ಒಂದು ಮಾಧ್ಯಮದ ಸಾಹಿತ್ಯವನ್ನು ಇನ್ನೊಂದು ಮಾಧ್ಯಮದಲ್ಲಿಟ್ಟು ನೋಡುವುದು ಸರಿಯಾದ ತೀರ್ಪು ಎನಿಸುವುದಿಲ್ಲ.

೨. ವಚನ, ಸ್ವರವಚನಗಳ ವಸ್ತು ವೀರಶೈವತತ್ವ, ಕರ್ತೃ ವೀರಶೈವ ಶರಣರು ಹೀಗಾಗಿ ಇವುಗಳ ಭಾವ ಭಾಷೆಗಳಲ್ಲಿ ಸಮಾನ ಅಂಶಗಳು ಕಂಡುಬರುವುದು ಸಹಜ.

೩. ಹರಿಹರನ ರಗಳೆಗಳಲ್ಲಿ ಬರುವ “ಅಗಳಾಗಳಿನ ಸಂಗತಿಗೆ ಗೀತಂಗಳಂ ಪಾಡುತ್ತೆ” ಮೊದಲಾದ ಮಾತುಗಳು, ವಚನಗಳಂತೆ ಸ್ವರವಚನಗಳಿಗೂ ಅನ್ವಯಿಸುತ್ತವೆ. ಇಲ್ಲಿಯ ‘ಗೀತ’ ಶಬ್ದ ವಚನಕ್ಕಿಂತ ಸ್ವರ ವಚನಕ್ಕೆ ಹೆಚ್ಚು ಒಪ್ಪುತ್ತದೆ. ಸಿದ್ಧರಾಮನು ಗೀತಗಳನ್ನು ಶುದ್ಧ ಭೈರವಿಯಲ್ಲಿ ಹಾಡಿದ ಉಲ್ಲೇಖಗಳು ಸಿದ್ಧರಾಮಪುರಾಣದಲ್ಲಿ ಸಿಗುತ್ತವೆ.

೪. ಒಂದು ವೇಳೆ ಉತ್ತರಕಾಲೀನರು ಕೆಲವು ವಚನಗಳನ್ನು ಸ್ವರವಚನಗಳನ್ನಾಗಿ ಮಾರ್ಪಡಿಸಿದ್ದರೆ ಪ್ರಮುಖ ಶರಣರ ವಚನಗಳನ್ನು ಮಾತ್ರ ಸ್ವರವಚನಗಳನ್ನಾಗಿಸುವುದು ಸಹಜ. ಆದರೆ ‘ಅಪ್ರಮುಖ’ ಶರಣರ ಸ್ವರವಚನಗಳೂ ಸಿಗುತ್ತವೆ.

೫. ಕೆಲವರ ಹೆಸರಿನಲ್ಲಿ ವಚನಗಳು ಸಿಗುತ್ತಿಲ್ಲ; ಸ್ವರವಚನಗಳು ಮಾತ್ರ ಸಿಗುತ್ತವೆ. ಈ ಐದು ಅಂಶಗಳ ಹಿನ್ನೆಲೆಯಲ್ಲಿ ವಿದ್ವಾಂಸರು ಇವುಗಳ ಕರ್ತೃತ್ವ ಪ್ರಶ್ನೆಯನ್ನು ಇನ್ನೊಮ್ಮೆ ಪರಿಶೀಲಿಸುವುದು ಅವಶ್ಯ. ೧೨ನೆಯ ಶತಮಾನದಲ್ಲಿ ಸೊಡ್ಡಳ ಬಾಚರಸ, ಸಕಲೇಶ ಮಾದರಸ, ಅಲ್ಲಮಪ್ರಭು, ಬಸವಣ್ಣ,ಚೆನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಿದೇವ, ನಿಜಗುಣ, ನಿಜಲಿಂಗ ಚಿಕ್ಕಯ್ಯ, ಅಮುಗಿದೇವ, ಆದಯ್ಯ, ಬಹುರೂಪಿ ಚೌಡಯ್ಯ, ಅಕ್ಕಮಹಾದೇವಿ, ನೀಲಮ್ಮ-ಇವರು ಬರೆದ ಸ್ವರವಚನಗಳು ಸಿಗುತ್ತವೆ. ಸಕಲೇಶ ಮಾದರಸ ಸುಪ್ರಸಿದ್ಧ ಗಾಯಕನೆಂಬುದು, ಶುದ್ಧ ಭೈರವಿಯಲ್ಲಿ ಸಿದ್ಧರಾಮ ಗೀತಗಳನ್ನು ಹಾಡಿದನೆಂಬುದು, “ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಎಂದು ಬಸವಣ್ಣ ನುಡಿದುದು, ವಚನಗಳನ್ನೋ(ನ್ನೂ) ಸ್ವರವಚನಗಳನ್ನೋ(ನ್ನೂ) ಅಂದು ಹಾಡುವುದು ರೂಢಿಯಲ್ಲಿದ್ದಿತೆಂದು ಸ್ಪಷ್ಟಪಡಿಸುತ್ತವೆ.

ಮುಂದೆ ೧೩, ೧೪ನೇ ಶತಮಾನಗಳಲ್ಲಿ  ವಚನಸಾಹಿತ್ಯದಂತೆ ಸ್ವರಸಾಹಿತ್ಯವೂ ಲಭ್ಯವಾಗಿಲ್ಲ. ಆದರೆ ೧೨ನೆಯ ಶತಮಾನದ ವಚನಗಳನ್ನೋ ಸ್ವರವಚನಗಳನ್ನೋ ಸ್ತುತಿ, ಪೂಜೆ, ಗೋಷ್ಠಿ ಸಂದರ್ಭಗಳಲ್ಲಿ ಹಾಡುತ್ತಲಿದ್ದ ಉಲ್ಲೇಖಗಳು ಅಲ್ಲಲ್ಲಿ ದೊರೆಯುತ್ತವೆ.

.        ಗಾಯಂತೋ ಬಸವೇಶಸ್ಯ ಗೀತಾನ್ಯಪಿ
.        ಪ್ರಭು ಸತ್ಯೇಶ ಚಾಮಯ್ಯ ಮಡಿವಾಳಮಾಚಯ್ಯ ಜಗಮೈಸ್ತಥಾ
          ವರದ ಶಂಕರದಾಸಯ್ಯ ದಾಸ ಕೇತೋದ್ಭಟೈರಪಿ |
          ಕಕ್ಕಯ್ಯ ಚೆನ್ನಬಸವ ಕಲ್ಲಿದೇವ ಹಲಾಯುಧೈಃ
            ಶ್ರೀ ಕೇಶಿರಾಜ ಚಿಕ್ಕಾರ್ಯಾ ಮಸಣಾರ್ಯರ್ಮಹಾತ್ಮಭಿಃ |
          ಸಿದ್ಧರಾಮಾಭಿಧಾನೇನ ಮಹಾದೇವ್ಯಾ ಪ್ರಸಿದ್ಧಯಾ ||
          ಭವ್ಯ ಸೋಡ್ಡಲಬಾಚಾರ್ಯ ಬಸವೇಶ್ವರಪುರಸ್ಸರೈ
          ಕೃತೇಷು ಗೀತೇಷ್ಟಭಿತೋ ಗೇಯಮಾನೇಷು ಗಾಯಕ್ಕೆಃ ||”

.        ಬಸವೇಶೋಪಚಿರತಾ ಗೀತಾಂಗಾಯಂತಃ ||”

ಗುರುರಾಜನ ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತ್ರೆಯ ಈ ಹೇಳಿಕೆಗಳಿಂದ ಬಸವ, ಪ್ರಭುದೇವ, ಸತ್ಯೇಶ, ಚಾಮಯ್ಯ, ಮಡಿವಾಳ ಮಾಚಿದೇವ, ಅಜಗಣ್ಣ, ಶಂಕರ ದಾಸಿಮಯ್ಯ, (ಜೇಡರ)ದಾಸ, ಕೇತಯ್ಯ, ಉದ್ಭಟ, ಕಕ್ಕಯ್ಯ, ಚೆನ್ನಬಸವ, ಕಲ್ಲಿದೇವ, ಹಲಾಯುಧ, ಕೇಶಿರಾಜ, ಚಿಕ್ಕಾರ್ಯ, ಮಸಣಾರ್ಯ, ಸಿದ್ಧರಾಮ, ಅಕ್ಕಮಹಾದೇವಿ, ಸೊಡ್ಡಳಬಾಚಾರ್ಯರ ಸಾಹಿತ್ಯವನ್ನು ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕಾಲದಲ್ಲಿ ಜನತೆ ಮೈದುಂಬಿ ಹಾಡುತ್ತಿದ್ದರೆಂದು ತಿಳಿದುಬರುತ್ತದೆ. ತ್ರಿಭುವನತಾತನೊಂದಿಗೆವಾದಕ್ಕೆ ನಡೆದ ಶರಣರ ಸಮೂಹವು ಹಾದಿಯಲ್ಲಿ ‘ಬಸವೇಶ್ವರರಾದಿಗಳ ಗೀತಂಗಳಂ’ ಹಾಡುತ್ತ ನಡೆದವರೆಂದು ಪದ್ಮರಾಜಪುರಾಣ ಹೇಳುತ್ತದೆ.

ವೀರಶೈವದ ಮರುಸುಗ್ಗಿಯಾದ ೧೫ನೆಯ ಶತಮಾನದಿಂದ ಮುಂದೆ ಸ್ವರವಚನಪ್ರಕಾರ ಮೊದಲಿಗಿಂತ ಅಧಿಕ ಸಂಖ್ಯೆಯಲ್ಲಿ ಸೃಷ್ಟಿಯಾಗಿದೆ. ಕರಸ್ಥಲದ ನಾಗಿದೇವ, ನಿರ್ವಾಣಿ ಬೋಳೇಶ, ಗುರುಪುರದ ಮಲ್ಲಯ್ಯ, ಶಂಕರದೇವ, ಬತ್ತಲೇಶ್ವರ, ನಿಜಗುಣಶಿವಯೋಗಿ, ವೀರಣ್ಣದೇವ, ಕೆಸ್ತೂರದೇವ, ಗುರುಬಸವೇಶ್ವರ, ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಬಾಲಲೀಲಾ ಮಹಾಂತ ಶಿವಯೋಗಿಗಳು ಈ ಅವಧಿಯಲ್ಲಿ ಕಂಡುಬರುತ್ತಾರೆ. ಈ ಘಟ್ಟವನ್ನು ಸ್ವರವಚನ ಸಾಹಿತ್ಯದ ಸುವರ್ಣಯುಗ ಎನ್ನಬಹುದು.

ಇಲ್ಲಿಂದ ಮುಂದೆ ಸ್ಥಳೀಯ ಖ್ಯಾತಿಯ ಕೂಡಲೂರ ಬಸವಲಿಂಗಶರಣ, ಹಾಗಲವಾಡಿ ಮುದ್ದುವೀರಸ್ವಾಮಿ, ಕಡಕೋಳ ಮಡಿವಾಳಪ್ಪನವರಂಥ ಅನುಭಾವಿಗಳ ಸಂಖ್ಯೆ ಅನಂತವಾಗಿದೆ. ಅಲ್ಲಲ್ಲಿ ಹುಟ್ಟಿಬೆಳೆದ ಇಂಥ ನೂರಾರು ಜನ ಶರಣರು ಸಾವಿರಾರು ಸ್ವರವಚನಗಳನ್ನು ಬರೆದಿದ್ದು, ಇವುಗಳ ಸಂಗ್ರಹ, ಸಂಪಾದನೆ ಒಂದು ದೊಡ್ಡ ಯೋಜನೆಯ ವಸ್ತುವಾಗಿದೆ.

ಹೀಗೆ ಸ್ವರವಚನಸಾಹಿತ್ಯದಲ್ಲಿ ೩ ಘಟ್ಟಗಳನ್ನು ನಾವು ಗುರುತಿಸಬಹುದಾಗಿದೆ. ಇವರನ್ನು ಬಿಟ್ಟರೂ ಹಸ್ತಪ್ರತಿಗಳಲ್ಲಿ ನಂಜುಂಡಶಿವಾ, ಆನಂದ ಸಿದ್ಧೇಶ್ವರಾ, ಗುರು ಚೆನ್ನಬಸವ, ನಾಗಲಿಂಗಯ್ಯ, ಝೇಂಕಾರಾತ್ಮ ಶಿವಲಿಂಗ, ಗಂಗೇಶ, ಪ್ರಭು ಕಲ್ಯಾಣದಯ್ಯ ಮುದ್ರಿಕೆಯ ಅನೇಕ ಹಾಡುಗಳು ಸಿಗುತ್ತವೆ. ಇವುಗಳ ಸಂಗ್ರಹಕಾರ್ಯವೂ ವ್ಯವಸ್ಥಿತವಾಗಿ ನಡೆಯಬೇಕಾಗಿದೆ.

ಕಳೆದ ೮೦೦ ವರ್ಷಗಳ ಅವಧಿಯಲ್ಲಿ ಹುಟ್ಟಿದ ಈ ಸ್ವರವಚನಸಾಹಿತ್ಯವನ್ನು ೧. ಸಂಪಾದನೆಗಳು, ೨. ಸ್ವತಂತ್ರ ಕೃತಿಗಳು, ೩. ಬಿಡಿಸ್ವರ ವಚನಗಳು ಎಂದು ವರ್ಗೀಕರಿಸಬಹುದು.

. ಸಂಪಾದನೆಗಳು: ಬೇರೆ ಬೇರೆ ಶರಣರ ಸ್ವರವಚನಗಳನ್ನು ಒಂದು ತಾತ್ವಿಕ ಹಿನ್ನೆಲೆಯಲ್ಲಿ ಜೋಡಿಸಿದ ಕೃತಿಗಳಿವು. ಇಲ್ಲಿ ಸ್ವರವಚನಗಳ ಸಂಗ್ರಹ, ಆಯ್ಕೆ, ಜೋಡಣೆ ಇತ್ಯಾದಿಗಳ ಕೀರ್ತಿ ಮಾತ್ರ ಆಯಾ ಸಂಪಾದಕರಿಗೆ ಸಲ್ಲುತ್ತದೆ. ಇವು ಸ್ವರವಚನ ಪ್ರಧಾನ, ಸ್ವರವಚನ ಅಪ್ರಧಾನ ಎಂದು ಎರಡು ತೆರನಾಗಿದ್ದು, ಇಲ್ಲಿಯ ಸಂಯೋಜನಾಕಾರ್ಯ ಬೆಲೆಯುಳ್ಳುದಾಗಿದೆ. ಅವು

ಅ. ಸ್ವರವಚನ ಪ್ರಧಾನ ಸಂಪಾದನೆಗಳು:

. ಏಕೋತ್ತರ ಶತಸ್ಥಲಮಹಾಲಿಂಗದೇವ.
. ಏಕೋತ್ತರ ಶತಸ್ಥಲಜಕ್ಕಣಾರ್ಯ
. ಏಕೋತ್ತರ ಶತಸ್ಥಲಸಿದ್ಧಲಿಂಗ (?)
. ಶಿವಯೋಗ ಪ್ರದೀಪಿಕೆಚೆನ್ನವೀರಾರ್ಯ
. ಗಣವಚನ ರತ್ನಾವಳಿಕಂಬಾಳ ಶಾಂತಮಲ್ಲೇಶ

ಆ. ಸ್ವರವಚನ ಅಪ್ರಧಾನ ಸಂಪಾದನೆಗಳು

. ಶೂನ್ಯಸಂಪಾದನೆಪ್ರಸಾದಿ ಮಹಾದೇವಯ್ಯ.
. ಶೂನ್ಯಸಂಪಾದನೆಗುಮ್ಮಳಾಪುರ ಸಿದ್ಧಲಿಂಗ.
. ಶೂನ್ಯಸಂಪಾದನೆಕೆಂಚವೀರಣ್ಣೊಡೆಯರು.
. ಶೂನ್ಯಸಂಪಾದನೆಗೂಳೂರು ಸಿದ್ಧವೀರಣ್ಣೊಡೆಯರು.
. ಪರಮಮೂಲಜ್ಞಾನಷಟ್ಸ್ಥಲಚಿಕ್ಕವೀರಣ್ಣೊಡೆಯ.
. ವೀರಶೈವ ಚಿಂತಾಮಣಿಮಹಾದ್ದೇವಯೋಗಿ.
. ಸಿಂಗಿರಾಜ ಚಿಂತಾಮಣಿಮಹಾದ್ದೇವಯೋಗಿ.
.ಶೀಲಸಂಪಾದನ (ವಚನ ಸಂಕಲನ) ಕರ್ತೃ?

ಮೇಲಿನ ಎರಡೂ ಬಗೆಯ ಕೃತಿಗಳಲ್ಲಿ ಕೆಲವು ಸ್ವರವಚನಗಳು ಪುನರುಕ್ತವಾಗಿವೆ. ಈ ಪುನರುಕ್ತಗಳನ್ನು ಕಳೆದರೆ ಈ ಕೃತಿಗಳಲ್ಲಿ ಸುಮಾರು ೫೦೦ ಸ್ವರವಚನಗಳು ಸಿಗುತ್ತವೆ. ಗಣವಚನ ರತ್ನಾವಳಿ ಒಂದರಲ್ಲಿಯೇ ೬೨ ಜನ ಶರಣರ ಒಟ್ಟು ೨೧೬ ಸ್ವರ ವಚನಗಳು ಕಂಡುಬರುತ್ತವೆ.

. ಸ್ವತಂತ್ರ ಕೃತಿಗಳು: ಕೆಲವು ಅನುಭಾವಿಗಳು ತಾವು ರಚಿಸಿದ ಸ್ವರವಚನಗಳನ್ನು ಬಳಸಿ, ಸ್ವತಂತ್ರ ಕೃತಿಗಳನ್ನು ರೂಪಿಸಿದ್ದಾರೆ. ಅವು

. ಪದಮಂತ್ರಗೋಪ್ಯಚೆನ್ನಬಸವಣ್ಣ
. ಜಿಗುನಿಮರುಳದೇವರ ಸ್ವರವಚನಜಿಗುನಿ ಮರಳದೇವ.
. ಕೈವಲ್ಯಪದ್ಧತಿನಿಜಗುಣಶಿವಯೋಗಿ.
. ಕೆಸ್ತೂರದೇವರ ಸ್ವರವಚನಕೆಸ್ತಕೂರದೇವ.
. ಸುಬೋಧಸಾರಮುಪ್ಪಿನ ಷಡಕ್ಷರಿ.
. ಕೈವಲ್ಯ ಕಲ್ಪವಲ್ಲರಿಸರ್ಪಭೂಷಣ ಶಿವಯೋಗಿ.
. ಗುರುಬಸವಾರ್ಯನ ಸ್ವರವಚನಗುರುಬಸವಾರ್ಯ
. ಶಂಕರದೇವರ ಸ್ವರವಚನಶಂಕರದೇವ
. ಕೈವಲ್ಯದರ್ಪಣಬಾಲಲೀಲಾಮಹಾಂತ ಶಿವಯೋಗಿ.
೧೦
. ಅವಧೂತಗೀತೆಗುರುಬಸವ.
೧೧
.ಮುದ್ದುವೀರಾಸ್ವಾಮಿಗಳ ಸ್ವರವಚನಹಾಗಲವಾಡಿ ಮುದ್ದುವೀರಾಸ್ವಾಮಿ.
೧೨
. ಕಡಕೋಳ ಮಡಿವಾಳಪ್ಪನವರ ಸ್ವರವಚನಕಡಕೋಳ ಮಡಿವಾಳಪ್ಪ.
೧೩
. ಕೂಡಲೂರ ಬಸವಲಿಂಗ ಶರಣರ ಸ್ವರವಚನ ಕಡಲೂರ ಬಸವಲಿಂಗಶರಣ.
೧೪
. ಶಿವಾನುಭವದರ್ಪಣಮೈಲಾರ ಬಸವಲಿಂಗಶರಣರು.
೧೫
.ಕೈವಲ್ಯ ಪದ್ಧತಿಗುರುಬಸವಾರ್ಯ.
೧೬
. ಗಂಗೇಶಾಂಕಿತದ ಸ್ವರವಚನ-?
೧೭
. ಗುರುಗುಂಡ ಬಸವಯ್ಯನ ಸ್ವರವಚನಗುರುಗುಂಡ ಬಸವ.

. ಬಿಡಿಸ್ವರವಚನಗಳು: ಮೇಲೆ ಸೂಚಿಸಿದ ಎರಡು ಬಗೆಯ ಸಂಕಲನಗಳಲ್ಲಿ ಸೇರದೆ ಹಸ್ತಪ್ರತಿಗಳಲ್ಲಿ ಅಲ್ಲೊಂದು ಇಲ್ಲೊಂದು ಸಿಗುವ ಬಿಡಿಸ್ವರ ವಚನಗಳನ್ನು ಈ ವರ್ಗದಲ್ಲಿ ಪರಿಗಣಿಸಬಹುದು. ಅವು; ಪ್ರಭು, ಬಸವಣ್ಣ, ಚೆನ್ನಬಸಣ್ಣ, ಅಕ್ಕಮಹಾದೇವಿ, ವೀರಣ್ಣದೇವರು, ನಿರ್ವಾಣಿಬೋಳೇಶ, ಕಲಸ್ಥಲದ ನಾಗಿದೇವ, ನಿಜಗುಣ, ಶಂಕರದೇವ, ಮಗ್ಗೆಯ ಮಾಯಿದೇವ ಇವರ ಸ್ವರವಚನಗಳು.

ಇನ್ನು ಕೆಲವು ಸ್ವರವಚನಗಳ ಕರ್ತೃ ಗೊತ್ತಾಗುವುದಿಲ್ಲ. ಆದರೆ ಅವರ ಅಂಕಿತಗಳು ಹೀಗಿವೆ: ನಂಜುಗೊರಳ ಶಿವಾ, ಗುರುಪ್ರಿಯ ಪುರದ ಮಲ್ಲಯ್ಯ, ಗುರುಚನ್ನಬಸವ, ನಾಗಲಿಂಗಯ್ಯ, ಝೇಂಕಾರಾತ್ಮ, ಶಿವಲಿಂಗ, ಪ್ರಭುಕಲ್ಯಾಣದಯ್ಯ, ಗುರುಸಿದ್ಧರಾಜ, ಚೆನ್ನಬಸವರಾಜ ಇತ್ಯಾದಿ.

ಇದು ವೀರಶೈವ ಸ್ವರವಚನಸಾಹಿತ್ಯ ಸಂಪತ್ತು. ಈ ಹಾಡುಗಳ ತಲೆಯ ಮೇಲೆ ಕಾಂಬೋಧಿ, ಭೈರವಿ, ಪಹಾಡಿ ಇತ್ಯಾದಿ ರಾಗ, ಉಪರಾಗಗಳ ನಿರ್ದೇಶನಾಲಯವಿರುವುದು ವಿಶೇಷ. ಈ ಎಲ್ಲ ರಾಗಗಳ ಸಂಗ್ರಹ, ವರ್ಗೀಕರಣ, ವಿಶ್ಲೇಷಣೆ ಕೆಲಸ ನಡೆದರೆ, ವೀರಶೈವ ಸ್ವರವಚನಕಾರರ ಸಂಗೀತಜ್ಞಾನ, ಸಂಗೀತ ಪ್ರಸಾರ ಇತ್ಯಾದಿಗಳನ್ನು ಗುರುತಿಸಿ, ಹರಿದಾಸರಿಗೆ ಪೂರ್ವದಲ್ಲಿ ಮತ್ತು ತರುವಾಯ ಇವರಿಂದ ಕರ್ನಾಟಕಕ್ಕೆ ಸಂದ ಸಂಗೀತದ ಕಾಣಿಕೆಯನ್ನು ಎತ್ತಿ ತೋರಿಸಬಹುದಾಗಿದೆ. ನಾವು ವಚನಸಾಹಿತ್ಯದ ಪರಿವೀಕ್ಷಣೆ, ಪರಿಷ್ಕರಣ ಮತ್ತು ಪ್ರಕಟನೆಗೆ ಕೊಟ್ಟಂತೆ ಸ್ವರವಚನ ಸಾಹಿತ್ಯಕ್ಕೆ ಗಮನಕೊಟ್ಟಿಲ್ಲ. ಈ ಕೆಲಸ ವ್ಯವಸ್ಥಿತವಾಗಿ ನಡೆದರೆ ಕನ್ನಡದ ಕೀರ್ತನ ಸಾಹಿತ್ಯದ ಮಗ್ಗುಲಲ್ಲಿ ಅಂಥದೇ ಇನ್ನೊಂದು ಪ್ರಕಾರ ಎದ್ದು ಕಾಣಬಹುದಾಗಿದೆ.

ಛಂದೋದೃಷ್ಟಿಯಿಂದಲೂ ಈ ಪ್ರಕಾರ ವೈವಿಧ್ಯಪೂರ್ಣವಾಗಿದೆ. ಮಾತ್ರಾ ಛಂದಸ್ಸು, ಅಂಶ ಛಂದಸ್ಸು, ಇವೆರಡರ ಮಿಶ್ರ ಛಂದಸ್ಸುಗಳ ಪದ್ಯಗಳು ಇಲ್ಲಿವೆ. ಆಧುನಿಕ ಭಾವಗೀತೆಯ ಲಯ-ಮಟ್ಟುಗಳನ್ನು ಹೋಲುವ ಇಲ್ಲಿಯ ನೂರಾರು ಉದಾಹರಣೆಗಳು ಅಚ್ಚರಿಹುಟ್ಟಿಸುತ್ತಿವೆ.

ಶರಣರದು ಸಾಮಾಜಿಕ ಆಂದೋಲನ. ಸಮಾಜದ ಎಲ್ಲ ವರ್ಗದ ಜನತೆ ಈ ಆಂದೋಲನದ ಭಾಗಿಗಳು. ಹೀಗಾಗಿ ಅವರವರ ಕಾಯಕ ಪರಿಭಾಷೆ, ಕಾಯಕಗಳಿಗೆ ಸಂಬಂಧಿಸಿದ ಹಾಡಿನ ಮಟ್ಟುಗಳು ಸ್ವರವಚನಗಳಲ್ಲಿ ಬಳಕೆಗೊಂಡುದು ವಿಶೇಷ ಸಂಗತಿ. ಚೌಪದಿ, ತ್ರಿಪದಿ, ಷಟ್ಪದಿ ಪ್ರಕಾರಗಳಂತೆ ತೀರ ಜಾನಪದೀಯವಾದ ಗೊಂದಲ, ಕಣಿ, ಚಂದಮಾಮಪದ, ಕೋಲುಪದ ಮಟ್ಟುಗಳು ಬಳಕೆಯಾಗುವುದರ ಮೂಲಕ ಜಾನಪದದ ಅನೇಕ ಪ್ರಕಾರಗಳು ಸಾಹಿತ್ಯವೇದಿಕೆಯನ್ನೇರಿದವು. ಇದರಿಂದ ಜಾನಪದ ಶಿಷ್ಟಪದಗಳ ಅಂತರ ಕಡಿಮೆಯಾಗಿ ಸಾಮಾನ್ಯರು ಸಾಹಿತ್ಯವನ್ನು ಪ್ರವೇಶಿಸಿದರು, ಸಾಹಿತ್ಯ ಸಾಮಾನ್ಯರನ್ನು ಸ್ಪರ್ಶಿಸಿತು.

ಬಸವಾದಿ ಶಿವಶರಣರ ಪ್ರಾಚೀನ ಸ್ವರವಚನಗಳ ಅಧ್ಯಯನ ಪ್ರಸಾರಗಳ ಕಡೆಗೆ ವಿದ್ವಾಂಸರು ವಿಶೇಷ ಗಮನ ಕೊಟ್ಟಿಲ್ಲ. ಆದರೆ ನಿಜಗುಣ ಶಿವಯೋಗಿ ಮೊದಲಾದ ಅನುಭಾವಿಗಳ ಸ್ವರವಚನಗಳ ಕಡೆಗೆ ವಿದ್ವಾಂಸರೂ ಸಾಮಾನ್ಯರೂ, ಕೂಡಲೂರ ಬಸವಲಿಂಗ ಶರಣರು ಮೊದಲಾದವರ ಕಡೆಗೆ ಸಾಮಾನ್ಯರೂ ವಿಶೇಷ ಗಮನಕೊಟ್ಟಿದ್ದಾರೆ. ಭಜನೆಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಈ ಹಾಡುಗಳದೇ ಪ್ರಧಾನ ಪಾತ್ರ. ಹಾಗೆ ನೋಡಿದರೆ ಜನಸಾಮಾನ್ಯರನ್ನು ವಚನಗಳಿಗಿಂತ ಸ್ವರವಚನಗಳೇ ಹೆಚ್ಚು ಆಕರ್ಷಿಸಿವೆ: ಜನಸಮೂಹದಲ್ಲಿ ಹೆಚ್ಚು ಪ್ರಚುರ್ಯ ಪಡೆದಿವೆ.

ಸಾಹಿತ್ಯಿಕ ಗುಣದೃಷ್ಟಿಯಿಂದ ಈ ಸ್ವರವಚನಗಳು ವಾಚ್ಯ ಇಲ್ಲವೆ ಬೆಡಗುಗಳಿಂದ ಕೂಡಿದ್ದು, ಹಾಡುಗಾಡಿಕೆಯಲ್ಲಿ ತಮ್ಮ ಸಾಹಿತ್ಯಿಕ ಕೊರತೆಯನ್ನು ತುಂಬಿಕೊಳ್ಳುತ್ತವೆ. ವೀರಶೈವ ಸಮಾಜದ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳಲ್ಲಿ ಇವು ನೂರಕ್ಕೆ ನೂರು ಪ್ರಯೋಗವಾಗುತ್ತಿದ್ದು, ರಾಗವೈವಿಧ್ಯ, ವಾದ್ಯಮೇಳಗಳಿಂದಾಗಿ ಪರಿಸರವನ್ನು ಕಟ್ಟಿ ನಿಲ್ಲಿಸುವ ಶಕ್ತಿಯನ್ನು ಪಡೆದಿವೆ.

ಈ ಸಾಹಿತ್ಯ ಒಂದು ಕಡೆ ಶಿಷ್ಟಪದವೂ ಅಲ್ಲದ ಇನ್ನೊಂದು ಕಡೆ ಜನಪದವೂ ಅಲ್ಲದ ಸ್ವರೂಪವನ್ನು ಹೊಂದಿದೆ. ನಿಜಗುಣಾದಿಗಳ ರಚನೆ ಶಿಷ್ಟಪದವೆನಿಸುತ್ತಿದ್ದರೂ ಸಾಮಾನ್ಯರ ಸಂಪರ್ಕದಿಂದ ಚರಪಾಠಸ್ಥಿತಿಗೆ ಗುರಿಯಾಗಿವೆ. ಕೂಡಲೂರು ಬಸವಲಿಂಗ ಶರಣರು ಇತ್ಯಾದಿ ಅನುಭಾವಿಗಳ ಹಾಡುಗಳಂತೂ ಜಾನಪದ ಹಂತದಲ್ಲಿ ಹುಟ್ಟಿ, ಜಾನಪದ ಹಂತದಲ್ಲಿ ವ್ಯವಹರಿಸುವ ಕಾರಣ ಇಂಥವುಗಳಿಗೆ ಪಾಠಾಂತರ ಇನ್ನೂ ಅಧಿಕ.

ವೀರಶೈವ ತತ್ವ ವಸ್ತುಗಳನ್ನೊಳಗೊಂಡ ಈ ಸ್ವರವಚನಗಳನ್ನು ರಚಿಸುವ ಮತ್ತು ಹಾಡುವ ಪರಂಪರೆಯನ್ನು ಹಳ್ಳಿಗಳಲ್ಲಿ ಈಗಲೂ ವೀರಶೈವರೂ, ವೀರಶೈವೇತರೂ ಮುಂದುವರೆಸಿಕೊಂಡು ಬಂದಿದ್ದಾರೆ. ಹೀಗಾಗಿ ಜಾತಿಭೇದವಿಲ್ಲದೆ ಜನಸಾಮಾನ್ಯರನ್ನು ವ್ಯಾಪಿಸಿದ ವೀರಶೈವ ಪ್ರಮುಖ ಸಾಹಿತ್ಯ ಪ್ರಕಾರವಾಗಿ ಇದು ಕಂಗೊಳಿಸುತ್ತದೆ.

ಈ ಸಾಹಿತ್ಯದ ವಿಷಯವಾಗಿ ಇಂದು ಆಗಬೇಕಾದ ಕೆಲಸ ಎರಡು ತೆರನಾಗಿದೆ. ೧. ಹಸ್ತಪ್ರತಿಗಳಲ್ಲಿ, ಜನರ ಬಾಯಿಗಳಲ್ಲಿ ಸಿಗುವ ಈ ಹಾಡುಗಳನ್ನು ಒಂದೂ ಬಿಡದಂತೆ ಸಂಗ್ರಹಿಸಿ, ಸಂಸ್ಕರಿಸಿ ಪ್ರತಿಭಟಿಸುವುದು. ೨. ಪ್ರಕಟಿಸಿದ ಹಾಡುಗಳನ್ನು ಭಜನೆ, ಸಭೆ ಸಮಾರಂಭಗಳ ಮೂಲಕ, ಧ್ವನಿಮುದ್ರಿಕೆ ಆಕಾಶವಾಣಿಗಳ ಮೂಲಕ ಪ್ರಸಾರ ಪಡಿಸುವುದು. ಈ ದಿಸೆಯಲ್ಲಿ ದುಡಿದರೆ ವೀರಶೈವ ಸ್ವರವಚನ ಸಾಹಿತ್ಯದ ಹೊಸಲೋಕವೊಂದು ತೆರೆದುಕೊಳ್ಳುತ್ತದೆ.

[1] ಮುಪ್ಪಿನ ಷಡಕ್ಷರಿ ಮೊದಲಾದವರ ಹಾಡುಗಳಿಗೂ ಹಸ್ತಪ್ರತಿಗಳಲ್ಲಿ ‘ವಚನ’ ಎಂದೇ ಕರೆದಿದ್ದಾರೆ.