ಸಾಧನೆ ೧೦-೧ರಲ್ಲಿ ಶ್ರೀ ಆರ್ಕೆ. ಮಣಿಪಾಲ ಅವರು “ನಮ್ಮ ಸಾಹಿತ್ಯ ಪರಂಪರೆ, ಒಂದು ಬಂಡಾಯ: ಅನ್ವಯಿಕ ವಿಮರ್ಶೆ” ಹೆಸರಿನ ಲೇಖನ ಬರೆಯುತ್ತ, ಕನ್ನಡ ಸಾಹಿತ್ಯದಲ್ಲಿ “ಕುಮಾರವ್ಯಾಸ ತಾನು ಲಿಪಿಕಾರ, ತನ್ನ ದೇವರು ಕವಿ ಎಂದು ಆತ್ಮನಿರಾಕರಣೆ ಮಾಡಿಕೊಳ್ಳುವುದಾಗಲೀ ಅಥವಾ ಲಕ್ಷ್ಮೀಶನಂತೆ ತಾನು ವಾಣಿಯ ಕೈಯ ವೀಣೆ, ಅವಳು ನುಡಿಸಿದಂತೆ ನುಡಿಯುತ್ತೇನೆ ನೀವು ಕೇಳಿ ಎಂದು ಬೇಜವಾಬುದಾರಿಕೆ ಮೆರೆಯುವುದಾಗಲೀ ಕಂಡುಬರುತ್ತದೆ” ಎಂದು ಹೇಳಿದ್ದಾರೆ. ಇದು ತುಂಬ ಗಂಭೀರವಾಗಿ ಪರಿಗಣಿಸಬೇಕಾದ ಅಂಶವಾದುದರಿಂದ ಇಲ್ಲಿ ವಿವೇಚನೆಗೆ ಎತ್ತಿಕೊಳ್ಳುತ್ತಿದ್ದೇನೆ.

ಪ್ರಾಚೀನ ಕರ್ನಾಟಕದಲ್ಲಿ ಕಾವ್ಯಮೀಮಾಂಸೆಗೆ ಸಂಬಂಧಿಸಿದಂತೆ ಸ್ವತಂತ್ರ ವಿಚಾರದ ಗ್ರಂಥಗಳು ಕಂಡುಬರುವುದಿಲ್ಲ. ಕೇವಲ ಸಂಸ್ಕೃತ ಕಾವ್ಯಮೀಮಾಂಸೆಯ ಅನುವಾದ, ಅನುಕರಣ ಕಾರ್ಯಗಳನ್ನು ಪೂರೈಸಲಾಗಿದೆ. ಹೀಗಿದ್ದೂ ನಮ್ಮ ಕವಿಗಳು ತಮ್ಮ ಕಾವ್ಯಪೀಠಿಕಾ ಭಾಗದಲ್ಲಿ ಕಾವ್ಯಮೀಮಾಂಸೆಗೆ ಸಂಬಂಧಪಟ್ಟ ಕೆಲವು ಸ್ವತಂತ್ರ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಕಾವ್ಯದ ಬಗೆಗಿನ ನಮ್ಮ ನಿಲುವನ್ನು ನಿರೂಪಿಸಿದ್ದಾರೆ. ಕೆಲವರಂತೂ ಆ ನಿಲುವಿನಲ್ಲಿ ಬದುಕಿದ್ದಾರೆ. ಅವರಲ್ಲಿ ಹರಿಹರ, ಕುಮಾರವ್ಯಾಸ, ಚಾಮರಸ ಮತ್ತು ಲಕ್ಷ್ಮೀಶನನ್ನು ಮೊದಲು ಪರಿಗಣಿಸಬೇಕಾಗುತ್ತದೆ.

ಆರ್ಕೆ, ಮಣಿಪಾಲ ಹೇಳುವಂತೆ ಈ ಕವಿಗಳು ಬೇಜವಾಬ್ದಾರರು ಅಲ್ಲ; ತೀರಾ ಜವಾಬುದಾರರು. ಇಲ್ಲಿ ವೀರನಾರಾಯಣನಾಗಲೀ, ಗುಹೇಶ್ವರನಾಗಲೀ ಹೊರಗಿನ ವ್ಯಕ್ತಿಗಳಲ್ಲ, ಅವರವರ ಅಂತಃಸಾಕ್ಷಿಗಳು. “ದೇಗುಲವೇ ಮಾತಾಡುವಂದದೊಳಾಗಿರದೆ ಒಳಗಿರ್ದು ನುಡಿದಡೆ” ಎಂಬ ವಾಕ್ಯವನ್ನು ಇಲ್ಲಿ ಗಮನಿಸಬೇಕು. ಹೀಗೆ ಇವರು ತಮ್ಮ ಅಂತಃಸಾಕ್ಷಿಗೆ ಬದ್ಧರಾಗಿ ಕಾವ್ಯ ಬರೆವ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸಿದ್ದು, ಬಂಡಾಯದವರು ಹೇಳುವಂತೆ ಇದು  commitment ಪ್ರಧಾನವಾದ ಧೋರಣೆಯೇ ಆಗಿದೆ. ವೀರನಾರಾಯಣನ ಮೇಲಾಗಲೀ, ಗುಹೇಶ್ವರನ ಮೇಲಾಗಲೀ ಜವಾಬುದಾರಿಯನ್ನು ಹಾಕುವುದೆಂದರೆ ತಮ್ಮ ಹೊಣೆ ತಪ್ಪಿಸಿಕೊಳ್ಳುವುದಲ್ಲ, ಇಡಿಯಾದ ಜವಾಬುದಾರಿಯನ್ನು ತನ್ನ ಮೇಲೆ, ನೇರವಾಗಿ ತನ್ನ ಅಂತಃಸಾಕ್ಷಿಯ ಮೇಲೆ ಹಾಕಿಕೊಳ್ಳುವುದು. ನಿಜವಾದ ಕವಿಗೆ ಇಂಥ ನಿಲುವು ಅತ್ಯವಶ್ಯ.

ಇದು ಟಿ. ಎಸ್‌. ಇಲಿಯಟ್‌ಹೇಳುವ ವ್ಯಕ್ತಿತ್ವ ನಿರಸನ ತತ್ವವೇ ಆಗಿದೆ. ಎಲಿಯಟ್‌ನ ಪ್ರಕಾರ ಕವಿ ಈ ಸಿದ್ಧಾಂತಕ್ಕೆ ಬದ್ಧನಾದಷ್ಟೂ ಅವನ ಕಾವ್ಯಕ್ಕೆ ಅರ್ಥವಂತಿಕೆ ಪ್ರಾಪ್ತವಾಗುತ್ತದೆ. ಇಲ್ಲಿ ವ್ಯಕ್ತಿತ್ವನಿರಸನವೆಂದರೆ ವ್ಯಕ್ತಿತ್ವದ ನಾಶವಲ್ಲ, ವಿಕಾಸ. ಆತ್ಮನಿರಾಕರಣೆಯಲ್ಲ,[1] ಆತ್ಮಾ ವಧಾರಣೆ. ವೈಯಕ್ತಿಕತೆಯನ್ನು ನಿರಸನ ಮಾಡಿಕೊಂಡು ಸಾರ್ವತ್ರಿಕತೆಯನ್ನು ಆತ್ಮೀಕರಿಸಿಕೊಳ್ಳುವಿಕೆಯಿದು. ಇದರಿಂದ ಕವಿ ಕಾಲಾಮಾಧ್ಯಮವಾಗುವಲ್ಲಿ, ಕಾವ್ಯ ಲೋಕಸಂವೇದನೆಗಳನ್ನು ಸಮಗ್ರವಾಗಿ ಮೈಗೂಡಿಸಿಕೊಳ್ಳುತ್ತದೆ; ಕಾಲ, ದೇಶಗಳನ್ನು ಮೀರಿದ ಸ್ವರೂಪ ಪಡೆಯುತ್ತದೆ. ಇಂದು ಎಲಿಯಟ್‌ಹೇಳಿದ ಈ ಸಿದ್ಧಾಂತವನ್ನು ೫೦೦ ವರ್ಷಗಳ ಹಿಂದೆ ನಮ್ಮ ಈ ಕವಿಗಳು ನುಡಿದು ತೋರಿಸಿದಷ್ಟೇ ಅಲ್ಲ; ನಡೆದು ತೋರಿಸಿದ್ದಾರೆ. – ತಮ್ಮ ಲೋಕೋತ್ತರ ಕಾವ್ಯಗಳಲ್ಲಿ ಎಲ್ಲಿಯೂ ತಮ್ಮ ಹೆಸರನ್ನು ಹೇಳದೆ ಕೇವಲ ಕಲಾಮಾಧ್ಯಮವಾಗುವುದರ ಮೂಲಕ. ಕಾರಣ ಆರ್ಕೆ. ಮಣಿಪಾಲ ಅವರು ಹೇಳುವಂತೆ ಇವರು ಬೇಜವಾಬುದಾರಿ ಕವಿಗಳಲ್ಲ; ಎಲಿಯಟ್‌ನ ದೃಷ್ಟಿಯಲ್ಲಿ ಜವಾಬುದಾರಿಯ ಕವಿಗಳು. ಒಂದು ದೃಷ್ಟಿಯಿಂದ ಹೊರಗಿನ ಹೊಣೆಯನ್ನೂ ಒಳಗೇ ಹೊರಿಸಿಕೊಂಡ ಜೋಡು ಜವಾಬುದಾರಿಯ ಕವಿಗಳು.

[1] ನೋಡಿ: “ವ್ಯಕ್ತಿತ್ವ ನಿರಸನವೆಂದರೆ ವ್ಯಕ್ತಿತ್ವದ ಅಭಾವವಾಗಲೀ, ನಾಶವಾಗಲೀ ಅಲ್ಲ. ಅದು ವ್ಯಕ್ತಿತ್ವದ ನಿರ್ಲಿಪ್ತ ಸ್ಥಿತಿ. ಇನ್ನೊಂದು ಹಂತದಲ್ಲಿ ವ್ಯಕ್ತಿತ್ವದ ವಿಕಾಸಸ್ಥಿತಿ, ಪರಿವರ್ತನ ಸ್ಥಿತಿ.” ಡಾ. ಎಚ್‌. ತಿಪ್ಪೇರುದ್ರಸ್ವಾಮಿ: ವ್ಯಕ್ತಿತ್ವ ನಿರಸನ ತತ್ವ (ಶ್ರೀಕಂಠತೀರ್ಥ, ಪು. ೪೧೩)