ಉಚ್ಚಾರ-ಬರಹಗಳೆಂಬ ಎರಡು ಮಾಧ್ಯಮಗಳಲ್ಲಿ ಭಾಷೆ  ವ್ಯವಹರಿಸುತ್ತದೆ. ಇದನ್ನೇ ಕೇಶಿರಾಜ “ವ್ಯವಹರಿಪುವೆರಡು ರೂಪಿಂದವಕ್ಕರಂ” ಎಂದು ಹೇಳುತ್ತಾನೆ. ಇವುಗಳಲ್ಲಿ ಬರಹಸೌಲಭ್ಯದ ಮೂಲಕ ಪ್ರಾಚೀನಭಾಷೆಯ “ಲಿಖಿತರೂಪ”ವನ್ನು ಹಿಡಿದಿಟ್ಟ ನಮ್ಮ ಪ್ರಾಚೀನರು, ಧ್ವನಿಮುದ್ರಿಕೆಯ ಅಭಾವದಿಂದಾಗಿ ಅದರ ಧ್ವನಿರೂಪವನ್ನು ಹಿಡಿದಿಡಲಿಲ್ಲ. ಆದರೂ ಪ್ರಾಚೀನ ಸಾಹಿತ್ಯದಲ್ಲಿ ಕಂಡುಬರುವ ಒಂದು ಪದದ ಎರಡು ರೂಪ, ಕೆಲವು ಪದಗಳ ಇಂದಿನ ಉಚ್ಛಾರ ಮತ್ತು ಅಂಶಲಯದ ಲಕ್ಷಣ ಇವುಗಳ ಆಧಾರದಿಂದ ಪ್ರಾಚೀನ ಕನ್ನಡಭಾಷೆಯ ಒಂದು ಮಹತ್ವದ ಉಚ್ಚಾರಸ್ವರೂಪವನ್ನು ಗುರುತಿಸಬಹುದಾಗಿದೆ. ಹೀಗೆ ಗುರುತಿಸುವುದಕ್ಕೆ ಪ್ರಮಾಣಭಾಷೆಯಲ್ಲಿ ಬರೆದ ಮಾರ್ಗಸಾಹಿತ್ಯಕ್ಕಿಂತ ಜನಭಾಷೆಯಲ್ಲಿ ಬರೆದ ದೇಶಿಸಾಹಿತ್ಯ ಹೆಚ್ಚು ನೆರವಾಗುತ್ತದೆ.

ಭಾಷೆಯಲ್ಲಿ ಪೂರಕದೀರ್ಘಕರಣತತ್ವಕ್ಕನುಗುಣವಾಗಿ ಅಕ್ಷರಲೋಪವನ್ನು ದೀರ್ಘಗಳು ತುಂಬಿಕೊಳ್ಳುತ್ತವೆ. ಉದಾ. ಹಿರಯಮಠ>ಹಿರಿಯಮಠ, ಜವರಯ್ಯಗೌಡ>ಜವರೇಗೌಡ. ಆದರೆ ಈ ತತ್ವಕ್ಕೆ ಹೊರತಾಗಿ ವಚನಸಾಹಿತ್ಯದಲ್ಲಿ ಮಾದರ ಚೆನ್ನಯ್ಯ>ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ> ಡೋಹರ ಕಕ್ಕಯ್ಯ, ಮೇದರ ಕೇತಯ್ಯ>ಮೇದಾರ ಕೇತಯ್ಯ, ಮಡಿವಳ ಮಾಚಯ್ಯ>ಮಡಿವಾಳ ಮಾಚಯ್ಯ ಎಂಬಂಥ ಹ್ರಸ್ವ ದೀರ್ಘರೂಪದ ಜೋಡು ಉಚ್ಚಾರಗಳು ಸಿಗುತ್ತವೆ. ಇವು ಪೂರಕದೀರ್ಘೀಕರಣಗಳಲ್ಲ. ಹಾಗಾದರೆ ಇದಕ್ಕೆ ಅನ್ವಯಿಸಬೇಕಾದ ತತ್ವ ಯಾವುದು? ಡಾ. ಎಂ. ಚಿದಾನಂದ ಮೂರ್ತಿಯವರು”… ಪದದ ಎರಡನೆಯ ಹ್ರಸ್ವವನ್ನು ದೀರ್ಘ ಮಾಡುತ್ತಾರೆ. ಉದಾ. ಅಣ್ಣಾರಾವ್‌, ಅಪ್ಪಾರಾವ್‌, ಅಯ್ಯಾಶಾಸ್ತ್ರಿ. ಈ ಪ್ರವೃತ್ತಿ ತೆಲುಗಿನಿಂದ ದತ್ತವಾಗಿ ಬಂದಂತೆ ತೋರುತ್ತದೆ.”[1] ಎಂದು ಹೇಳುವ ಮಾತನ್ನು ಮಾದರ>ಮಾದಾರ ರೂಪಗಳಿಗೂ ಅನ್ವಯಿಸಬೇಕೆನಿಸುತ್ತದೆ. ಆದರೆ ಈ ಪ್ರಕ್ರಿಯೆ ತೆಲುಗಿನ ಪ್ರಭಾವವಾಗಿರಲಿಕ್ಕಿಲ್ಲ. ಅಂಶಗಣದ ದ್ವಿತೀಯ ಅಂಶವು ಹ್ರಸ್ವವಿದ್ದರೂ ದೀರ್ಘವಾಗುವುದೆಂಬ ತತ್ವ ಇಲ್ಲಿ

ಪ್ರಭಾವ ಬೀರಿದೆ. ಇದಕ್ಕನುಗುಣವಾಗಿ ಮೇಲೆ ಹೇಳಿದ ಪದಗಳು ಮಾದsರ, ಡೋಹsರ, ಮಡಿವsಳ, ಮೇದsರ ಎಂದು ಆ ಕಾಲದಲ್ಲಿ ತರಂಗಯುಕ್ತವಾಗಿ ಉಚ್ಚರಿಸಲ್ಪಡುತ್ತಿರಬಹುದು. ಇಂದಿನ ಬರವಣಿಗೆಯಲ್ಲಿ ಇಂಥ ತರಂಗ ಸೂಚಿಸಲು ಇರುವ ಅವಗ್ರಹ ಚಿಹ್ನೆ(s)ಯ ಸೌಕರ್ಯ ಅಂದು ಇರದ ಕಾರಣ ಹ್ರಸ್ವಾಕ್ಷರಗಳನ್ನೇ ದೀರ್ಘಮಾಡಿಕೊಳ್ಳುತ್ತಿದ್ದಿರಬಹುದು. ಉದಾ. ಹಲ್ಮಿಡಿ ಶಾಸನದ ‘ವೀರಾರಪುರುಷ’ (ವೀರsಪುರುಷ), ಬಾದಾಮಿ ಶಾಸನದ ‘ಸಾಧೂಗೆ ಸಾಧು ಮಾಧೂರ್ಯಂಗೆ ಮಾಧುರ್ಯ’ (ಸಾಧುsಗೆ ಸಾಧು ಮಧುsರ್ಯಂಗೆ ಮಾಧುರ್ಯ <ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯ) ‘ಇತ್ತೋದು’ (ಇತ್ತೋsದು< ಇತ್ತೊದು). ಆಡುಮಾತಿಗೆ ಸಂಬಂಧಿಸಿದ ಗ್ರಾಮನಾಮಗಳಲ್ಲಿ ಈ ಪ್ರಕ್ರಿಯೆ ಈಗಲೂ ಕಂಡುಬರುತ್ತದೆ. ಉದಾ. ರಾಜಾಪುರ (ರಾಜsಪುರ<ರಾಜsಪುರ), ಮಲ್ಲಾsಪುರ ಮಲ್ಲsಪುರ<ಮಲ್ಲಪುರ) ಇತ್ಯಾದಿ.

ಇಂಥ ಜೋಡುರೂಪಗಳನ್ನು ಗಮನಿಸಿಯೇ ಕೇಶಿರಾಜ ತನ್ನ ಶಬ್ದಮಣಿ ದರ್ಪಣದಲ್ಲಿ ಹೀಗೆ ಹೇಳುತ್ತಾನೆ.

ಅವಿಶೇಷದಿನಾ ದೀರ್ಘ
ವ್ಯವಹೃತಿ
ಶಬ್ದಾಂತರದೊಳ್ಪಕ್ಷದಿನು |
ದ್ಭವಿಕುಂ
ದ್ವಿತೀಯೆಗಂ ಮುಂ
ದವತರಿಸಲೊಡಂ
ಸ್ವರಪ್ರಪೂರ್ವಪದಂಗಳ್‌|| ೧೨೮ ||

ಪ್ರಯೋಗಂ –ಶಬ್ದಾಂತರಾಳ ದೀರ್ಘಕ್ಕೆ ಇಂದೊಳಂ – ಇಂದೋಳಂ, ಆರೊಗಿಸಿದಂ ಆರೋಗಿಸಿದಂ, ಎಣಗೊಣಂ-ಎಣಗೋಣಂ, ಗೊಯ್ಯೊಗಂ-ಗೆಯ್ಯೋಗಂ, ಮೆಯ್ವೊಗೆಕೆ –ಮೆಯ್ಗೋಗಕೆ.

ದ್ವಿತೀಯಾ ದೀರ್ಘಕ್ಕೆ: ಕಲ್ಲನೇಱೆದಂ, ಬಿಲ್ಲನದಂ-ಬಿಲ್ಲಾನದಂ. ಇಲ್ಲಿ ದೀರ್ಘವಾದುವು ೨ನೆಯ ಅಂಶಗಳೆಂಬುದನ್ನು ಗಮನಿಸಬೇಕು. ಮೂಲತಃ ಹ್ರಸ್ವವಾಗಿದ್ದ ಇವು ಇಂದೊsಳಂ, ಕಲ್ಲsನೇಱೆದಂ ಎಂದೇ ಉಚ್ಚರಿಸಲ್ಪಡುತ್ತಿರಬೇಕು. ಇದೇ ರೀತಿ ಕಾಲುರಿಚ>ಕಾಲೂರಿಚ, ಕುಂಬರ>ಕುಂಬಾರ, ಪಚ್ಚಯಿಲ>ಪಚ್ಚಾಯಿಲ ಇತ್ಯಾದಿ ಜೋಡುರೂಪಗಳು ದೊರೆಯುವುದಕ್ಕೆ “ದ್ವಿತೀಯ ಅಂಶ ದೀರ್ಘ” ತತ್ವವೇ ಕಾರಣವೆಂದು ಹೇಳಬೇಕಾಗುತ್ತದೆ.

ಹ್ರಸ್ವಗಳಲ್ಲಿ ಇ, ಉ, ಎ, ಒ ಗಳನ್ನು ಸ್ವಲ್ಪ ಎಳೆದು ಉಚ್ಚರಿಸಿದರೆ ಕ್ರಮವಾಗಿ ಇs (ಈ), ಉs (ಊ), ಎs (ಏ), ಒs (ಒ) ಎಂದು ದೀರ್ಘವಾಗುತ್ತವೆ. ಆದರೆ ಆಕಾರದೀರ್ಘ ಮಾತ್ರ ಅಂದು ಸಣ್ಣ ಮಾಡಿದಾಗ ಉಚ್ಚಾರದಲ್ಲಿ ಅs ಎಂದೂ ಬರವಣಿಗೆಯಲ್ಲಿ ಆ ಎಂದೂ ವ್ಯವಹರಿಸುತ್ತಿತ್ತು. ಅಂದರೆ ಮೊದಲ ಘಟ್ಟದಲ್ಲಿ ಮಾದsರ ಎಂದು ಉಚ್ಚರಿಸುತ್ತಿದ್ದರು, ಮಾದಾರ ಎಂದು ಬರೆಯುತ್ತಿದ್ದರು. ಮುಂದೆ ಎರಡನೆಯ ಘಟ್ಟದಲ್ಲಿ ಮಾದಾರ ಬರೆದುದನ್ನು ಮಾದಾರ ಎಂದೇ ಉಚ್ಚರಿಸುವುದು ರೂಢವಾಯಿತು.

ಈವರೆಗಿನ ಚರ್ಚೆಯನ್ನು ಒಂದು ಕಾಲ್ಪನಿಕ ಉದಾಹರಣೆಯಿಂದ ಹೀಗೆ ಸ್ಪಷ್ಟಪಡಿಸಬಹುದು. ಒಂದು ಕಾಲದಲ್ಲಿ ಕನ್ನಡಿಗರು ಮಾಸ್ತರ ಎಂಬುದನ್ನು ಮಾಸ್ತsರ ಎಂದು, ಕಾಗದ ಎಂಬುದನ್ನು ಕಾಗsದ ಎಂದು ಇಂದಿನ ಮರಾಠಿ ಭಾಷಿಕರಂತೆ ಎಳೆದು ಉಚ್ಚರಿಸುತ್ತಿದ್ದರು. ಈ ದೀರ್ಘಕ್ರಿಯೆ ಮಾತಿಗಿಂತ ಗೀತಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಉದಾ.

ಹೆಸರಿsಗಿ ರಬಕsವಿ
ಮೊಸರಿ
sಗಿ ನೀರಿಲ್ಲ

ಹೀಗೆ ಗೀತಗಳಲ್ಲಿದ್ದ ತರಂಗಮಯ ಉಚ್ಚಾದ ರೀತಿ, ಹೊರಗಿನಿಂದ ಬಂದ ಪ್ರಾಕೃತದ ಮಾತ್ರಾಛಂದಸ್ಸಿನ ಪ್ರಭಾವದಿಂದ ನಿಸ್ತರಂಗವಾಯಿತು. ಮಾತ್ರಾಮೌಲ್ಯ ಅಂಶಛಂದಸ್ಸಿನಲ್ಲಿ ವ್ಯತ್ಯಾಸವಾಗುವಂತೆ ಮಾತ್ರಾ ಛಂದಸ್ಸಿನಲ್ಲಿ ವ್ಯತ್ಯಾಸವಾಗುವುದಿಲ್ಲ: ಸ್ಥಿರವಾಗಿರುತ್ತದೆ. ಹೀಗಾಗಿ ಬೇರೆ ಬೇರೆ ಅಕ್ಷರಗಳನ್ನು ತುಂಬುವುದರ ಮೂಲಕ ಮಾತ್ರಾ ಛಂದಸ್ಸು ನಮ್ಮ ಗೀತಗಳಲ್ಲಿದ್ದ ತರಂಗಗಳನ್ನು ಅಳಿಸಿಹಾಕಿತು. ಉದಾ:

ಅನ್ನs ನೀಡುವುದು | ನನ್ನಿs | ನುಡಿವುsದು
ಅನ್ನವನು
| ನೀಡುವುದು | ನಿನ್ನಯನು | ನುಡಿಯುವುದು

ತರಂಗ ಅಳಿಸಿಹಾಕುವ ಉಪಕ್ರಮ ಗೀತಗಳಲ್ಲಿಯಂತೆ ನಮ್ಮ ಮಾತಿನ ಉಚ್ಚಾರದಲ್ಲಿಯೂ ಇಳಿದುಬಂದಿತು. ಆಗ ‘ಸಂಗsಮ’ ಎಂಬುದು ‘ಸಂಗಮ’ ಎಂದೂ “ಕಾಗsದ” ಎಂಬುದು ಕಾಗದ ಎಂದೂ ಉಚ್ಚಾರಗೊಳ್ಳತೊಡಗಿದವು (ಕೆಲವೊಮ್ಮೆ ತರಂಗಸ್ಥಾನದಲ್ಲಿ ಹೊಸವರ್ಣ ಸೇರತೊಡಗಿತು.) ಆದುದರಿಂದ ಮಧ್ಯದೀರ್ಘದ ಕನ್ನಡಪದಗಳನ್ನು ಅಭ್ಯಸಿಸುವ ವಿದ್ವಾಂಸರು ಅವು ಮೂಲತಃ ಹ್ರಸ್ವವಾಗಿರಬಹುದೇ? ಎಂದು ಒಂದು ಕ್ಷಣ ಆಲೋಚಿಸಬೇಕಾಗುತ್ತದೆ. ಉದಾ. ಮೈಲಾರ ಇದರ ಪ್ರಾಚೀನರೂಪ ಮೈಲರ. ಬಾಣಾವರ ಇದರ ಪ್ರಾಚೀನರೂಪ ಬಾಣವರ. ಹೀಗೆ ಗ್ರಹಿಸಿಕೊಂಡರೆ ಮಾತ್ರ ಅವರ ಅಭ್ಯಾಸ ನಿರ್ದಿಷ್ಟ ನೆಲೆ ತಲುಪುತ್ತದೆ.

[1] ವಾಗರ್ಥ ಪು. ೫೩