ಶಬ್ದಮಣಿದರ್ಪಣದಲ್ಲಿ ೨೦೮ ರಿಂದ ೨೨೬ನೆಯ ಸೂತ್ರದ ವರೆಗೆ ಅಂದರೆ ೧೭ ಸೂತ್ರಗಳಲ್ಲಿ ತದ್ಧಿತಪ್ರಕರಣ ವ್ಯಾಪಿಸಿದೆ. ಇವುಗಳಲ್ಲಿ ೧೧ ಸೂತ್ರಗಳು ಮಾತ್ರ ತದ್ಧಿತಪ್ರತ್ಯಯಗಳನ್ನು ಸೂಚಿಸುತ್ತವೆ. ಮಿಕ್ಕವು ಆಗ ಜರುಗುವ ಪ್ರಕ್ರಿಯೆ ಇತ್ಯಾದಿಗಳನ್ನು ಪ್ರತಿಪಾದಿಸುತ್ತವೆ. ಈ ೧೧ ಸೂತ್ರಗಳಲ್ಲಿ ತದ್ಧಿತನಾಮಗಳನ್ನು ಪ್ರಕೃತಿ, ಪ್ರತ್ಯಯವೆಂದು ಕೇಶಿರಾಜ ಬಿಡಿಸಿ ಹೇಳಿದ್ದಾನೆ. ಆದರೆ ಹೀಗೆ ಬಿಡಿಸಿಕೊಳ್ಳುವಲ್ಲಿ ಮಾಡಿದ ತಪ್ಪಿನಿಂದಾಗಿ ಸಾಮಾನ್ಯವಾಗಿ ಇಡಿ ಪ್ರಕರಣವೇ ಗೊಂದಲಮಯವಾಗಿದೆ. ಕಾರಣ ಅದನ್ನು ಸಮಗ್ರವಾಗಿ ಅಧ್ಯಯನಕ್ಕೆ ಅಳವಡಿಸಿಕೊಂಡು, ಪ್ರತ್ಯಯಗಳ ನಿಜರೂಪವನ್ನು ಸ್ಪಷ್ಟಪಡಿಸಬಹುದಾಗಿದೆ.

ಇಲ್ಲಿ ಪುರುಷರಿಗೆ ಸಂಬಂಧಿಸಿದಂತೆ ೨೬ ಪ್ರತ್ಯಯ, ಸ್ತ್ರೀಗೆ ಸಂಬಂಧಿಸಿದಂತೆ ೩ ಪ್ರತ್ಯಯ (ಇತಿ, ಅಳ್‌, ಎ-ಸೂತ್ರ ೨೧೯) ಹೆಸರಿಸಿದ್ದಾನೆ. ಇವುಗಳಲ್ಲಿ ಮೊದಲು ಪುರುಷರಿಗೆ ಸಂಬಂಧಪಟ್ಟ ೨೬ ಪ್ರತ್ಯಯಗಳನ್ನು ಕೆಳಗಿನಂತೆ ೫ ಭಾಗಗಳಲ್ಲಿ ಚರ್ಚಿಸಬಹುದು.

೧. ಅ. ಕ (ಬಡಕ), ಗ (ಬೊಂತೆಗ)
ಆ. ಇಕ (ಹುಸಿಕ), ಇಗ (ಕಬ್ಬಿಗ)
ಕುಟಿಗ, ಉಳಿಗ, ಅಟಿಗ, ಅಡಿಗ, ವಡಿಗ, ವಣಿಗ
ಇ. ಉಕ (ಅಂಟುಕ), ಉಗ (ಬೇರುಗ)…… =೧೨

ಇಲ್ಲಿಯ ಕುಟಿಗ, ಉಳಿಗ, ಅಟಿಗ, ಅಡಿಗ, ವಡಿಗ, ವಡಿಗ ಎಂಬ ೬ ಪ್ರತ್ಯಯಗಳಲ್ಲಿ ಮೇಲೆ ಹೇಳಿದ ಇಗ ಪ್ರತ್ಯಯವೇ ಇದೆ. ಈ  ಪ್ರತ್ಯಯದ ಹಿಂದಿರುವವರೆಲ್ಲ ಕುಟ್ಟು, ಊಳು, ಅಡು, ಆಡು ಇತ್ಯಾದಿ ಧಾತುಗಳ ಸವೆದ ರೂಪಗಳೇ ಆಗಿವೆ. ಆದುದರಿಂದ ಈ ಆರನ್ನು ಕೈಬಿಟ್ಟರೆ ಉಳಿಯುವ ಕ-ಗ/-ಇಕ, – ಇಗ/, ಉಕ, ಉಗ ಇವು ಆರು ಮಾತ್ರ ಪ್ರತ್ಯಯಗಳೆಂದು ಹೇಳಬಹುದು. ಆದರೆ ಇಲ್ಲಿಯೂ ಸಾಧಿತರೂಪಗಳಾಗಿರುವ ಗ, ಇಗ, ಉಗ ಇವುಗಳನ್ನು ಕೈಬಿಟ್ಟರೆ ಉಳಿಯುವ ಕ, ಇಕ, ಉಕ ಈ ಮೂರು ಮಾತ್ರ ನಿಜವಾದ ತದ್ಧಿತ ಪ್ರತ್ಯಯಗಳೆಂದು ಹೇಳಬಹುದು.

೨. ಕಾರ, -ಗಾರ…………………=೨

ಇವು ಕ, ಗ ಏಕವಚನ ಪ್ರತ್ಯಯಗಳ ಮೇಲೆ ಆರ್‌ಎಂಬ ಬಹುವಚನ ಪ್ರತ್ಯಯ ಹತ್ತುವುದರಿಂದ ಸಿದ್ಧವಾದ ರೂಪಗಳೇ ಹೊರತು, ಸ್ವತಂತ್ರ ತದ್ಧಿತ ಪ್ರತ್ಯಯಗಳಲ್ಲ. ಉದಾ:

ನಡವಳಿ + ಕ + ಆರ್‌= ನಡೆವಳಿಕರ್‌> ನಡೆವಳಿಕಾರ
ಬಣ್ಣ + ಕ + ಆರ್‌= ಬಣ್ಣಕರ್‌> ಬಣಗಾರ
ಆದುದರಿಂದ ಈ ಎರಡನ್ನೂ ತದ್ಧಿತ ಪ್ರಕರಣದಿಂದ ಕೈಬಿಡಬಹುದು.

೩. ವಳ (ಮಡಿವಳ),-ವಳ್ಳ (ಮಡಿವಳ್ಳ)…………….=೨

ಇವು ನೋಡಲಿಕ್ಕೆ ಎರಡಿದ್ದರೂ ಒಂದರ ಸಾಧಿತ ರೂಪ ಇನ್ನೊಂದು ಇರುವ ಸಾಧ್ಯತೆಯಿದೆ. ಆದುದರಿಂದ ಇಲ್ಲಿ ವಳ ಪ್ರತ್ಯಯವನ್ನು ಒಪ್ಪಿಕೊಳ್ಳಬಹುದು.

೪. ಆಯ್ತು, -ಉಣಿ, -ಅಳಿ, -ಇಲ, -ಉಳ್ಳ, -ಒಡೆಯ, -ವಂತ, -ಅಯಿಲ… =೮

ಇಲ್ಲಿಯ ಆಯ್ತು, ವಂತಗಳಲ್ಲಿ –ತ ಮಾತ್ರ ಪ್ರತ್ಯಯ. –ಇಲ ಅಯಿಲಗಳಲ್ಲಿ ಇಲ ಮಾತ್ರ ಪ್ರತ್ಯಯ. –ಉಣಿ, -ಅಳಿಗಳಲ್ಲಿ ಇ ಮಾತ್ರ ಪ್ರತ್ಯಯ. ಹೀಗಾಗಿ ಇಲ್ಲಿ ಉಳಿವುದೆಂದರೆ –ತ ಮಾತ್ರ ಪ್ರತ್ಯಯ. ಇಲ ಅಯಿಲಗಳಲ್ಲಿ –ಇಲ ಮಾತ್ರ ಪ್ರತ್ಯಯ. –ಉಣಿ, -ಅಳಿಗಳಲ್ಲಿ ಇ ಮಾತ್ರ ಪ್ರತ್ಯಯ. ಹೀಗಾಗಿ ಇಲ್ಲಿ ಉಳಿಯುವುವೆಂದರೆ –ತ, -ಇಲ, -ಇ –ಉಳ್ಳ, -ಒಡೆಯಗಳೆಂಬ ಐದು ಪ್ರತ್ಯಯಗಳು ಮಾತ್ರ.

೫. –ಕುಳಿ –ಗುಳಿ……………. =೨

ಇವು ನೋಡಲಿಕ್ಕೆ ಎರಡಿದ್ದರೂ ಒಂದರ ಸಾಧಿತರೂಪ ಇನ್ನೊಂದು ಇರುವಂತಿದೆ. ಇಷ್ಟೇ ಏಕೆ ಕುಳಿ ಎನ್ನುವಲ್ಲಿಯೂ ಮೇಲೆ ಹೇಳಿದ ಕ ಪ್ರತ್ಯಯದ ಮೇಲೆ ಉಳಿ ಅಂಟಿದಂತಿದೆ. ಉದಾ. ಓಡು+ಕ=ಉಳಿ=ಓಡುಕುಳಿ. ಆದುದರಿಂದ ಇಲ್ಲಿ –ಕುಳಿ, ಗುಳಿಗಳಿಗೆ ಬದಲು –ಉಳಿ ಎಂಬುದನ್ನು ಸೃಷ್ಟಿಸಿಕೊಳ್ಳಬಹುದು.

* * *

೬. ಸ್ತ್ರೀವಾಚಿ ತದ್ಧಿತ ಪ್ರತ್ಯಯಗಳು-ಇತಿ, ಅಳ್‌, -ಎ……….=೩

ಇವುಗಳಲ್ಲಿ ಮೊದಲಿನ –ಇತಿ (ಗಾಣಗಿತಿ) ಎಂಬುದು ಪ್ರತ್ಯಯವಲ್ಲವೆಂದು ತೋರುತ್ತದೆ. ಏಕೆಂದರೆ ಇಲ್ಲಿ ಗಾಣ+ಇಗ=ಗಾಣಿಗ ಎಂಬ ಪುರುಷವಾಚಿಯ ಮೇಲೆ ಇತಿ ಎಂಬ ಸ್ತ್ರೀವಾಚಿ ಪ್ರತ್ಯಯ ಹತ್ತಿದಂತೆ ಕಾಣುತ್ತಿದ್ದರೂ, ಗಾಣಗೆಯ್ತ ಅಂದರೆ ಗಾಣದ ಕೆಲಸ ಮಾಡುವವ, ಗಾಣಗೆಯ್ತಿ ಅಂದರೆ ಗಾಣದ ಕೆಲಸ ಮಾಡುವವಳು. ಇವೇ ನಿಜರೂಪವಿರುವಂತೆ ಕಾಣುತ್ತದೆ. ಆಗ ಗಾಣ+ಗೆಯ್‌+ತ ಎಂಬುದು ಪುಲ್ಲಿಂಗ ರೂಪ, ಗಾಣ+ಗೆಯ್‌+ತಿ ಎಂಬುದು ಸ್ತ್ರೀಲಿಂಗ ರೂಪವೆಂದು ಭಾವಿಸಿ –ತ, -ತಿ ಇವು ಮಾತ್ರ ತದ್ಧಿತ ಪ್ರತ್ಯಯವೆಂದು ಹೇಳಬೇಕೆನಿಸುತ್ತದೆ. ಮೇಲೆ-ತ ಪ್ರತ್ಯಯ ಹೇಳಲಾಗಿರುವುದರಿಂದ ಇಲ್ಲಿ ಉಳಿಯುವುದು –ತಿ ಪ್ರತ್ಯಯ ಮಾತ್ರ.

-ಅಳ್‌(ಕರಿಯಳ್‌), -ಎ (ಪಾಣ್ಬ>ಪಾಣ್ಬೆ)ಎಂಬುವುಗಳನ್ನು ತದ್ಧಿತ ಪ್ರತ್ಯಯ ಹೇಳಲಾಗಿರುವುದರಿಂದ ಇಲ್ಲಿ ಉಳಿಯುವುದು –ತಿ ಪ್ರತ್ಯಯ ಮಾತ್ರ.

ಅಳ್‌(ಕರಿಯಳ್‌), -ಎ (ಪಾಣ್ಬ>ಪಾಣ್ಬೆ)ಎಂಬುವುಗಳನ್ನು ತದ್ಧಿತ ಪ್ರತ್ಯಯಗಳೆಂದು ಒಪ್ಪಿಕೊಳ್ಳಬಹುದು.

ಈವರೆಗೆ ಚರ್ಚೆಯಿಂದ ಈ ಆರೂ ಭಾಗಗಳಲ್ಲಿ ಉಳಿಯುವ ತದ್ಧಿತ ಪ್ರತ್ಯಯಗಳನ್ನು ಹೀಗೆ ಒಪ್ಪಿಕೊಳ್ಳಬಹುದು.

೧. –ಕ, -ಇಕ, -ಉಕ
೨. –
೩. –ವಳ
೪. –ತ, -ಇಲ, -ಇ, -ಉಳ್ಳ, -ಒಡೆಯ
೫.-ಉಳಿ
೬. –ತಿ, -ಅಳ್‌, -ಎ

ಈ ೧೩ನ್ನು ಮೂಲಪ್ರತ್ಯಯಗಳೆಂದು ಇಟ್ಟುಕೊಂಡು, ಇವುಗಳ ಹಿಂದೆ ಬೇರೆ ಬೇರೆ ಧಾತು ಇಲ್ಲವೆ ಪ್ರಕೃತಿ ಸೇರಿಸಿ, ಹೊಸ ಹೊಸ ಸಾಧಿತ ರೂಪಗಳನ್ನು ಸೃಷ್ಟಿಸಿಕೊಳ್ಳಬಹುದು. ಇನ್ನಷ್ಟು ಪ್ರತ್ಯಯಗಳನ್ನು ಶೋಧಿಸಿ ಈ ಪಟ್ಟಿಯನ್ನು ಪೂರ್ಣಗೊಳಿಸಬೇಕಾಗಿದೆ.