Literature ಪದಕ್ಕೆ ಸಂವಾದಿಯಾಗಿ ಭಾರತೀಯರು ವಾಙ್ಮಯ, ಕಾವ್ಯ ಮತ್ತು ಸಾಹಿತ್ಯ ಪದಗಳನ್ನು ಬಳಸುತ್ತ ಬಂದಿದ್ದಾರೆ. ಇವು ಮೂಲತಃ ಸಮಾನ ಅರ್ಥದ ಪದಗಳೇ? ಭಿನ್ನ ಅರ್ಥದ ಪದಗಳೇ? ಇವು ಹುಟ್ಟಿದುದು ಏಕಕಾಲಕ್ಕೆ? ಅಥವಾ ಕಾಲಕಾಲಕ್ಕೆ? ಕಾಲಕಾಲಕ್ಕೆ ಹುಟ್ಟಿದ್ದರೆ, ಈ ಹುಟ್ಟುವಿಕೆಗೆ ಐತಿಹಾಸಿಕ ಅಗತ್ಯವೇನಿದ್ದಿತು? ಇತ್ಯಾದಿ ಪ್ರಶ್ನೆಗಳಿಗೆ ಹುಡುಕ ಹೊರಟ ಉತ್ತರದಲ್ಲಿ ಭಾರತೀಯ ಸಾಹಿತ್ಯ ಸಾಗಿಬಂದ ಹಾದಿಯ ಹೊಳಹುಗಳನ್ನು ಕಾಣಬಹುದಾಗಿದೆ.

ಈ ಮೂರರಲ್ಲಿ “ವಾಙ್ಮಯ”ದ ಲಕ್ಷಣವನ್ನು ಕುರಿತು ಪ್ರಾಚೀನ ಅಲಂಕಾರಿಕರು “ಶಬ್ದಪ್ರಧಾನವಾದುದು ವೇದ, ಅರ್ಥಪ್ರಧಾನವಾದುದು ಶಾಸ್ತ್ರ, ಧ್ವನಿಪ್ರಧಾನವಾದುದು ಕಾವ್ಯ, ಇವೆಲ್ಲವುಗಳ ಮೊತ್ತ”ವೆಂದೂ, ಆಧುನಿಕ ವಿಮರ್ಶಕರು “ಒಂದು ಭಾಷೆಯಲ್ಲಿ ಬೆಳೆದು ಬಂದ ಲಿಖಿತ, ಅಲಿಖಿತ ಅಭಿವ್ಯಕ್ತಿಯ ರಾಶಿ”ಯೆಂದೂ ಹೇಳಿದ್ದಾರೆ.[1] ಮಿಕ್ಕವುಗಳಲ್ಲಿ “ಕಾವ್ಯ”ದ ಬಗ್ಗೆ ಪ್ರಾಚೀನರೂ “ಸಾಹಿತ್ಯ”ದ ಬಗ್ಗೆ ಆಧುನಿಕರೂ ನಡೆಸಿದ ಚರ್ಚೆ ವಿಪುಲವಾಗಿದೆ. ಹೀಗಿದ್ದೂ ಈ ಮೂರು ಪರಿಭಾಷೆಗಳಿಗೆ ಭಿನ್ನ ಅರ್ಥಛಾಯೆಗಳಿರುವ ಸಾಧ್ಯತೆಯಿದೆ. ಅದು; ಭಾಷಾಪ್ರಯೋಗದ ಎರಡು ರೀತಿಗಳನ್ನು “ವಾಙ್ಮಯ” ಮತ್ತು “ಕಾವ್ಯ” ಪದಗಳು ಸೂಚಿಸುತ್ತಿದ್ದರೆ, ಜೀವನಮೌಲ್ಯದ ಮೇಲೆ ಒತ್ತು ಕೊಡವುದನ್ನು “ಸಾಹಿತ್ಯ” ಪದ ಸೂಚಿಸುತ್ತದೆ. ಈ ಪದಗಳ ನಿಷ್ಪತ್ತಿ ಮತ್ತು ನಮ್ಮ Literatureದ ಐತಿಹಾಸಿಕ ಬೆಳವಣಿಗೆಗಳನ್ನು ಗಮನಿಸಿ, ಆ ಭಿನ್ನ ಅರ್ಥಗಳನ್ನು ಕುರಿತು ಹೀಗೆ ಚರ್ಚಿಸಬಹುದಾಗಿದೆ.

ಸಾಹಿತ್ಯವೆನ್ನುವುದು ಭಾಷೆಯಲ್ಲಿ ಸಂಭವಿಸುವ ಕಲಾವಿಶೇಷವಾಗಿದೆ. ಈ ಕಟ್ಟಡಕ್ಕೆ ಬುನಾದಿಯಿಂದ ಶಿಖರದವರೆಗೆ ಏನೆಲ್ಲ ಸಾಧ ಭಾಷೆಯೇ ಆಗಿರುವುದರಿಂದ, ಭಾಷೆಯೆಂಬ ಏಕಸಾಮಗ್ರಿಯಲ್ಲಿ ಇದು ಮೈಪಡೆಯುವುದಾಗಿದೆ. ಈ ಮೈಪಡೆಯುವಿಕೆಗೆ ಸೃಷ್ಟಿ, ಸಂಸೃಷ್ಟಿ ಎಂಬ ಎರಡು ನೆಲೆಗಳಿವೆ. ಇವುಗಳನ್ನೇ ಕ್ರಮವಾಗಿ ವಾಙ್ಮಯ ಕಾವ್ಯವೆಂದು ಕರೆಯಬಹುದು. ಈ ಬಗ್ಗೆ ಇನ್ನಷ್ಟು ಸ್ಪಷ್ಟನೆ ಹೀಗಿದೆ:

ಭಾಷೆಯೆನ್ನುವುದು ಶಾಬ್ದಿಕ ಸಂರಚನೆ. ಅದು ತನ್ನ ಸಮಾಜದ ಭೌತಿಕ ಸಂರಚನೆ, ಅಭೌತಿಕ ಸಂವೇದನೆಗಳ ಪ್ರತಿಬಿಂಬವಾಗಿದೆ. ಹೀಗೆ ಸಮಾಜಬಿಂಬವನ್ನು ಕಾಣಿಸಿಕೊಡುವ ಭಾಷಾಪ್ರತಿಬಿಂಬವು “ದೇಶಭಾಷೆ” ಎನಿಸಿಕೊಳ್ಳುತ್ತದೆ. ಈ ದೇಶಭಾಷೆಯನ್ನೇ ಪ್ರಧಾನವಾಗಿ ಬಳಸಿಕೊಂಡು ಸಾಹಿತ್ಯ ಸೃಷ್ಟಿಸುವ ಸಂದರ್ಭ ಎಲ್ಲ ಭಾಷೆಗಳ ಬದುಕಿನಲ್ಲಿ ಬಂದು ಹೋಗುತ್ತದೆ. ಆಗ ಜನಭಾಷೆ ಕಾವ್ಯಭಾಷೆಗಳಲ್ಲಿ ಅಂಥ ವ್ಯತ್ಯಾಸವಿರುವುದಿಲ್ಲ. ಪದ ವಾಕ್ಯಗಳ ಅಂಗರಚನೆಗೂ, ಉಚ್ಚಾರದ ರೀತಿಗೂ ಅಷ್ಟಾಗಿ ಭಂಗ ತರದೆ, ಕಾವ್ಯಭಾಷೆಯನ್ನು ಅಲ್ಲಿ ಸಹಜವೆಂಬಂತೆ ಬಳಸಲಾಗುತ್ತದೆ. ಸಂಸ್ಕೃತಭಾಷೆಯ ಇಂಥ ಒಂದು ಸಂದರ್ಭದಲ್ಲಿ ರಾಮಾಯಣ, ಮಹಾಭಾರತಗಳು ಸೃಷ್ಟಿಯಾಗಿದ್ದು, ಇವುಗಳ ಭಾಷಾನಿರ್ವಹಣೆ ಸಹಜರೀತಿಯದ್ದಾಗಿದೆ. ಇಲ್ಲಿ ಮಾತ ಕೃತಿಯಾಗುತ್ತದೆ. ಹೀಗೆ ಸಹಜ “ವಾಕ್‌”ನಲ್ಲಿ ಸೃಷ್ಟಿಯಾಗುವ Literatureನ್ನು “ವಾಙ್ಮಯ”ವೆಂದು ಕರೆದಂತೆ ಕಾಣುತ್ತದೆ. ಕವಿಯ ಆಶಯ ಅವನ ಆಡುಮಾತಿನಲ್ಲಿ ಬಹುಮಟ್ಟಿಗೆ ಆಕೃತಿಗೊಳ್ಳುತ್ತಲಿದ್ದ ಕಾಲವಿದು. ಭಾಷೆಯನ್ನು ಆಳವಾಗಿ ಪರಿಷ್ಕರಿಸಬೇಕೆಂಬ, ಶಬ್ದ (Sound) ಮತ್ತು ಅರ್ಥ (Meaning) ನೆಲೆಗಳಲ್ಲಿ ಅದನ್ನು ಅಲಂಕರಿಸಬೇಕೆಂಬ ಭಾವನೆ ಅಂಕುರಿಸದ ಕಾಲೀನ ಈ ಸಾಹಿತ್ಯವು ಸ್ವಭಾವೋಕ್ತಿ ಅಲಂಕಾರದ ನೆಲೆಯಲ್ಲಿ ಜೀವಪಡೆಯುತ್ತಿದ್ದಿತು. ಹೇಗೆ ಹೇಳಬೇಕೆಂಬುದಕ್ಕಿಂತ ಏನು ಹೇಳಬೇಕೆಂಬ ಸರಳ ಅಭಿವ್ಯಕ್ತಿಕ್ರಮವೇ ಮುಖ್ಯವಾಗಿದ್ದ ಈ ಪದ್ಧತಿಯು, ಜನಪದ ಸಾಹಿತ್ಯದ ಭಾಷಾನಿರ್ವಹಣೆಗೆ ಹತ್ತಿರವಾಗಿದ್ದಿತು. ಈ ರೀತಿ ಸರಳವೆಂದರೂ ವಾಚ್ಯವಲ್ಲದ “ವಾಕ್‌” ಪ್ರಧಾನವಾಗುಳ್ಳ Literatureನ್ನು “ವಾಙ್ಮಯ”ವೆಂದು ಕರೆದರೆಂದು ತೋರುತ್ತದೆ.

ಆಂಗ್ಲ ಸಾಹಿತ್ಯದಲ್ಲಿ ಮಹಾಕಾವ್ಯವನ್ನು Epic of growth ಮತ್ತು Epic of art ಎಂದು ವರ್ಗೀಕರಿಸುತ್ತಿದ್ದು, ಮೇಲೆ ಹೇಳಿದುದು Epic of growth ಜಾತಿಗೆ ಸೇರುತ್ತದೆ. Epic of growth ಮೇಲೆ ಒಬ್ಬ ಕವಿಯ ಹೆಸರಿದ್ದರೂ ಅದು ಅವನೇ “ಕಟ್ಟಿ ಮುಗಿಸಿದ ಕೃತಿ”ಯಾಗಿರುವುದಿಲ್ಲ, ಮುಂದಿನವರೂ ಕೈಕೂಡಿಸುತ್ತ ಬರುವಲ್ಲಿ ಅದು ‘‘ಕಟ್ಟುತ್ತ ಬಂದ ಕೃತಿ”ಯಾಗಿರುತ್ತದೆ. ದಂತಕಥೆ, ಜನಪದಕಥೆ ಇತ್ಯಾದಿಗಳು ಪ್ರವೇಶಪಡೆಯುವ ಮೂಲಕ, “ಬಹುಜನಪ್ರಜ್ಞೆ, ಬಹುಜನಪ್ರಯತ್ನ” ಇದರಲ್ಲಿ ಸೇರಿಕೊಂಡಿರುತ್ತವೆ. ಇದು ಕತ್ತರಿಸಿ, ಒಪ್ಪ-ಓರಣಗೊಳಿಸಿದ ಉದ್ಯಾನಸೌಂದರ್ಯವಲ್ಲ, ಅರಣ್ಯಸೌಂದರ್ಯ, ಒಂದಿಷ್ಟು ಕಲಾತ್ಮಕತೆ ಕಡಿಮೆ ಇರುವ ಬೇಂದ್ರೆ  Literatureನ್ನು ಈ “ವಾಙ್ಮಯ” ವಿಭಾಗದಲ್ಲಿ ಪರಿಗಣಿಸಬಹುದು. ಇಲ್ಲಿ ವ್ಯಷ್ಟಿಪ್ರಧಾನ “ಶೈಲಿ”ಗಿಂತ, ಸಮಷ್ಟಿಪ್ರಧಾನ “ರೀತಿ”ಯೇ ಎದ್ದು ಕಾಣುತ್ತದೆ. ಓದುವಾಗ ಇದು ಒಬ್ಬನು ಬರೆದ ಕೃತಿಗಿಂತ ಎಲ್ಲರೂ ಸೇರಿ ಬರೆದ ಕೃತಿಯೆಂಬ ಭಾವನೆ ಮೂಡುತ್ತದೆ. ಒಬ್ಬ ಕವಿಯ ಭಾಷೆಗಿಂತ ಒಂದು ದೊಡ್ಡ ಸಂಪ್ರದಾಯದ ಭಾಷೆಯೇ ಅಲ್ಲಿ ಪ್ರಧಾನವಾಗಿರುವುದರಿಂದ ಅಂತಹದನ್ನು ವಾಙ್ಮಯವೆಂದು ಕರೆಯಬಹುದಾಗಿದೆ.

ಕಾಲಗತಿಸಿದಂತೆ ಅನ್ಯಭಾಷೆಯ ಸಂಪರ್ಕ ಅಥವಾ ಗತಾನುಗತಿಕ ಬಳಕೆಯಿಂದಾಗಿ, ಜನಭಾಷೆಯು Literatureದಲ್ಲಿ ಸುಂದರವಾಗಿ ಪ್ರಯೋಗವಾಗುವುದು ತಪ್ಪುತ್ತ ನಡೆಯಿತೆಂದು ತೋರುತ್ತದೆ. ಹೀಗೆ “ಅಪ್ರಜ್ಞಾಪೂರ್ವಕ”ವಾಗಿ ಅದರ ಅಂದ ತಪ್ಪುತ್ತ ನಡೆಯುವಲ್ಲಿ, “ಪ್ರಜ್ಞಾಪೂರ್ವಕ”ವಾಗಿ ಅದನ್ನು ಅಂದಗೊಳಿಸುವ ಪ್ರಯತ್ನ ಜಾಗೃತವಾದ ಕಾರಣ, ಸರಳ ಅಭಿವ್ಯಕ್ತಿ “ದೇಶಿಪದ್ಧತಿ”ಯನ್ನು ಸಂಕೀರ್ಣ ಅಭಿವ್ಯಕ್ತಿಯ “ಮಾರ್ಗಪದ್ಧತಿ”ಯನ್ನಾಗಿ ಬೆಳೆಸುವ ಒಲವು Literatureದಲ್ಲಿ ಬೆಳೆಯಿತು. ಇದನ್ನು ಅನುಷ್ಠಾನಗೊಳಿಸಲು ಅಂದರೆ “ಸೌಂದರ್ಯ”ದ ಮೇಲೆ ಒತ್ತು ಕೊಡಲು ಅಂದಿನ ಬರಹಗಾರರಿಗೆ ಸೂಚಿಸುವ ಸಲುವಾಗಿ, ವಾಙ್ಮಯಕ್ಕೆ ಬದಲು ಕಾವ್ಯ ಪದವನ್ನು ಬಳಸುವುದು ಆರಂಭವಾಗಿರಬಹುದು. ಕಾವ್ಯ ಪದದ ಮೂಲಪ್ರಕೃತಿ “ಕವೃ”. ಇದರ ಅರ್ಥ ವರ್ಣಿಸು, ಅಂದಗೊಳಿಸು ಎಂಬುದನ್ನು ಇಲ್ಲಿ ನೆನೆಯಬಹುದು. ಈಗ ವಾಲ್ಮೀಕಿಯಿಂದ ಕಾಳಿದಾಸನ ಕಡೆಗೆ (ರಾಮಾಯಣದಿಂದ ರಘುವಂಶದ ಕಡೆಗೆ) Literature ಹೊರಳಿತು. ಅಂದರೆ ಅದು ವಾಙ್ಮಯ, ಇದು ಕಾವ್ಯ. ಅದು ಸೃಷ್ಟಿ, ಇದು ಸಂಸೃಷ್ಟಿ. ಅಪ್ರಯತ್ನಪೂರ್ವಕವಾಗಿ ಬೆಳೆಯುತ್ತಲಿದ್ದ ಅರಣ್ಯವನ್ನು ಪ್ರಯತ್ನಪೂರ್ವಕ ಉದ್ಯಾನ ಮಾಡುವಂತೆ, ಅಪ್ರಯತ್ನ ಪೂರ್ವಕವಾಗಿ ಭಾಷೆಯಲ್ಲಿ ಆಕಾರ ಪಡೆಯುತ್ತಲಿದ್ದ Epic of growthನ್ನು ಪ್ರಯತ್ನಪೂರ್ವಕವಾಗಿ Epic of art ಮಾಡುವ ಕೆಲಸ ಇಲ್ಲಿ ನಡೆಯಿತು. ಸಾಮಾನ್ಯರೂ (Mass) ಆಸ್ಪಾದಿಸುವಂತಾಯಿತು. ಅಂದರೆ classical  ಸ್ಪರ್ಶ ನೀಡುವಲ್ಲಿ ಅದು classic (ಪರಿಣತಕೃತಿ ಅಥವಾ ಪರಿಷ್ಕೃತಕೃತಿ)ಯೆನಿಸಿಕೊಂಡಿತು. ಒಟ್ಟಾರೆ, ಕಲಾಪ್ರಜ್ಞೆಯ ಎಚ್ಚರದಿಂದ ಬರೆದುದು “ಕಾವ್ಯ”ವೆಂಬ ಅರ್ಥ ಆ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ವಿವರಣೆಯ ಬೆಳಕಿನಲ್ಲಿ ಹೇಳುವುದಾದರೆ ಕನ್ನಡದ ಪಂಪನ “ಕಥಾಪರಂಪರೆ” ವ್ಯಾಸರದಾದರೂ “ಕಾವ್ಯಪರಂಪರೆ” ಕಾಳಿದಾಸನದಾಗಿದೆ. ಪರಿಷ್ಕೃತ ಶೈಲಿಯ ಕುವೆಂಪು ಅವರೂ ಈ ಪರಂಪರೆಯ ಭಾಗವೆನಿಸುತ್ತಾರೆ. ಕನ್ನಡದಲ್ಲಿ ಪಂಪನೇ ಮೊದಲನೆಯ ಕವಿಯಾಗಿರುವುದರಿಂದ ಇಲ್ಲಿ ಮುಂದೆಯೂ ರಘುವಂಶದಂಥ “ಕಾವ್ಯ ಪರಂಪರೆ”ಯ ಕೃತಿಗಳು ಹುಟ್ಟಿದುವೇ ಹೊರತು, ವ್ಯಾಸಭಾರತದಂಥ “ವಾಙ್ಮಯ ಪರಂಪರೆ”ಯ ಕೃತಿಗಳು ಹುಟ್ಟಲಿಲ್ಲ.

ಒಟ್ಟಾರೆ “ವಾಙ್ಮಯ”ವೆನ್ನುವುದು ಪ್ರಾಕೃತಿಕ ಸೌಂದರ್ಯಕ್ಕೆ ಒತ್ತುಕೊಡುವ, “ಕಾವ್ಯ”ವೆನ್ನುವುದು ಪರಿಷ್ಕೃತ ಸೌಂದರ್ಯಕ್ಕೆ ಒತ್ತುಕೊಡುವ ಶಾಬ್ದಿಕ ಕಲೆಗಳಾಗಿವೆ. ಅದು ಕಾವ್ಯ ಹುಟ್ಟುವುದು, ಇದು ಕಾವ್ಯ ಕಟ್ಟುವುದು.

ಈ “ಕಾವ್ಯ”ಘಟ್ಟ ಸಂದರ್ಭದಲ್ಲಿ ಸೌಂದರ್ಯಕ್ಕೆ ಒತ್ತುಕೊಡುತ್ತ ನಡೆಯಲು, ಕವಿತೆಯನ್ನು ಸಿಂಗರಿಸುವ ಒಲವು ಜಾಸ್ತಿಯಾಗತೊಡಗುವಲ್ಲಿ, Literatureವು ಜನಸಹಿತವನ್ನು ಅಲಕ್ಷಿಸಿ, ಅಹಿತಕಾರಿ ರೀತಿಯಲ್ಲಿ ಬೆಳೆದು ಬರಹತ್ತಿತೆಂದು ಕಾಣುತ್ತದೆ. ಆಗ “ಪಾಪವಿದು-ಪುಣ್ಯಮಿದು, ಹಿತಮಿದು-ಅಹಿತಪ್ರಕಾರಮಿದು, ಸುಖಮಿದು-ದುಃಖೋಪಾತ್ತಮಿದು” ಎಂದು ಪರ್ಯಾಯವಾಗಿ ಸೂಚಿಸುವ ಮೂಲಕ ಬದುಕನ್ನು ಉದಾತ್ತಗೊಳಿಸುವುದನ್ನು ಬಿಟ್ಟು, “ಅಭಿವ್ಯಕ್ತಿ ಸ್ವಾತಂತ್ರ್ಯ” ಹೆಸರಿನಲ್ಲಿ ಸಾಹಿತ್ಯವನ್ನು ಅನುದಾತ್ತ ನೆಲೆಗೆ ಒಯ್ಯುವ ಕೃತಿಗಳು ಹುಟ್ಟತೊಡಗಿದವು. ಆಗ ಚೆನ್ನಾಗಿ ಬರೆಯುತ್ತಾರೆ. ಸರಿಯಾಗಿ ಬರೆಯುವುದಿಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗುತ್ತಿರಲು ಸುಂದರಕೃತಿ ಅರ್ಥದ “ಕಾವ್ಯ” ಪರಿಭಾಷೆಯ ಸ್ಥಾನದಲ್ಲಿ ಜನಹಿತಕೃತಿ ಅರ್ಥದ “ಸಾಹಿತ್ಯ” ಪರಿಭಾಷೆ ಪ್ರಚಾರಕ್ಕೆ ಬಂದಿತೆಂದು ತೋರುತ್ತದೆ.

ಅಂದರೆ ಆತ್ಮಪಾತಳಿ ಮತ್ತು ಮನೋಪಾತಳಿಯ ಸಂಯುಕ್ತ ಬರವಣಿಗೆಯು, “ಕಾವ್ಯ” ಕಾಲಘಟ್ಟದಲ್ಲಿ ಕೇವಲ ಮನೋಪಾತಳಿಗೆ ಸರಿಯತೊಡಗಿ, ಆಗಮಿಕವು ಉಪೇಕ್ಷಿತವಾಗಿ ಲೌಕಿಕವು ಪ್ರಧಾನವೆನಿಸಿತು. ಈ ಸಂದರ್ಭದಲ್ಲಿ ಪಂಪನ “ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಮಂ” ಎಂಬ ವಾಕ್ಯ ನೆನಪಾಗುತ್ತದೆ. ಲೌಕಿಕ ಕಾವ್ಯ ಅಥವಾ ಮನೋಪಾತಳಿಯ ಕಾವ್ಯವೆಂದರೆ ಎಂಟು ರಸಗಳಿಗೆ ಅವಕಾಶ ಮಾಡಿಕೊಡುವ ಬರವಣಿಗೆ. ಆಗಮಿಕಕಾವ್ಯ ಅಥವಾ ಆತ್ಮಪಾತಳಿಯ ಕಾವ್ಯವೆಂದರೆ ಎಂಟು ರಸಗಳನ್ನು ಉದ್ರೇಕಿಸಿ, ಅಂತಿಮವಾಗಿ ಅವುಗಳನ್ನು ಶಾಂತವೆಂಬ ಒಂಬತ್ತನೆಯ ರಸದಿಂದ ಉಪಶಮನಗೊಳಿಸುವ ಬರೆವಣಿಗೆ. ಆದುದರಿಂದ ಎಂಟು ರಸಗಳನ್ನು ಲೋಹಗಳೆಂದೂ ಅವುಗಳನ್ನು ಸುವರ್ಣಗೊಳಿಸುವ ಶಾಂತರಸವನ್ನು ಸಿದ್ಧರಸವೆಂದೂ ನಾಗಚಂದ್ರ ಕರೆದಿದ್ದಾನೆ. ಇವುಗಳಲ್ಲಿ ಒಂದು ಸಂತೋಷವನ್ನು ಇನ್ನೊಂದು ಆನಂದವನ್ನುಂಟು ಮಾಡುತ್ತವೆ. ಉದ್ರೇಕ ಸಂಸ್ಕಾರದ ಕವಿಮನಸ್ಸು ಸಮಾಜಕ್ಕೆ ಅಹಿತವನ್ನು, ಉಪಶಮನ ಸಂಸ್ಕಾರದ ಕವಿಮನಸ್ಸು ಸಮಾಜಕ್ಕೆ ಹಿತವನ್ನುಂಟುಮಾಡುತ್ತವೆ. ಕನ್ನಡದಲ್ಲಿ ಪಂಪ ಈ ಎರಡೂ ಬಗೆಯ ಕಾವ್ಯ ಬರೆದು, ಒಂದು ಹೊಸ ಕವಲನ್ನೇ ನಿರ್ಮಿಸಿದ. ಆದರೆ ೫೦ ವರ್ಷ ಕಳೆಯುವಷ್ಟರಲ್ಲಿ ನಾಗಚಂದ್ರ ಹುಟ್ಟಿ ಬಂದು, ಇವುಗಳಲ್ಲಿ ಒಂದು ಬಗೆಯ ಕಾವ್ಯವನ್ನೇ ಅಂದರೆ “ಆಗಮಿಕ” ಕಾವ್ಯವನ್ನೇ ಕವಿಯು ಲೋಕಕ್ಕೆ ನೀಡಬೇಕೆಂದು ಹೀಗೆ ಸಾರಿದ.

ರಾಗದ್ವೇಷ ನಿಬದ್ಧಮಪ್ಪ ಕೃತಿಯಂ ನಿರ್ಬಂಧದಿಂ ಬಂಧಮಿಂ
ಬಾಗರ್ಥಂ
ಪೊಸತಾಗಿ ಪೇಳ್ದಖಿಳಮಂ ರಾಗಾವಿಳಂ ಮಾಳ್ಪ ವಿ
ದ್ಯಾಗರ್ವಗ್ರಹ
ಪೀಡಿತರ್ಸ್ವಪರಬಾಧಾ ಹೇತುವಂ ದುಸ್ತರೋ
ದ್ಯೋಗ
ಕ್ಲೇಶಿತರಾಗಿ ಬಿತ್ತಿಬೆಳೆವಂತಕ್ಕುಂ ವಿಷೋದ್ಯಾನಮಂ ||

ಎಂದು ಪಂಪನ ಲೌಕಿಕ ಕಾವ್ಯ ಪರಂಪರೆಯನ್ನೇ ಪ್ರತಿಭಟಿಸಿದ. ಇದಲ್ಲದೆ ಅರಿಕೇಸರಿಯಂಥ ಸಾಮಾನ್ಯನನ್ನು ವಸ್ತುಮಾಡಿಕೊಳ್ಳುವುದೆಂದರೆ ಭಾಷೆಯ ದುರ್ಬಳಕೆಯೇ ಆಗಿದೆಯೆಂಬ ಅರ್ಥದಲ್ಲಿ “ನಾಯಕನನ್ಯನಾಗೆ ಕೃತಿ ವಿಶ್ರುತಮಾಗದು” ಎಂದು ಕಥಾನಾಯಕ ತತ್ವದಲ್ಲಿಯೂ ಪಂಪನನ್ನು ಪ್ರತಿಭಟಿಸಿದ. ಅವನು ಒಂದು ಬಗೆಯ ಮಾರ್ಗ ಸ್ಥಾಪಿಸಿ “ಆದಿಪಂಪ”ನೆನಿಸಿದರೆ, ಇವನು ಇನ್ನೊಂದು ಬಗೆಯ ಮಾರ್ಗ ಸ್ಥಾಪಿಸಿ “ಅಭಿನವ ಪಂಪ”ನೆಂದು ಕರೆದುಕೊಂಡ. ಇಂಥ ಮನೋಧರ್ಮ ಜಾಗೃತವಾದ ಯಾವುದೋ ಪ್ರಾಚೀನತಮ ಸಂದರ್ಭದಲ್ಲಿ “ಕಾವ್ಯ” ಪರಿಭಾಷೆಗೆ ಬದಲು ಸಾಮಾಜಿಕ ಹಿತ ಅರ್ಥದ “ಸಾಹಿತ್ಯ”. ಪರಿಭಾಷೆ ಹುಟ್ಟಿಕೊಂಡಿಬಹುದು. ಸೌಂದರ್ಯದ ತೀವ್ರ ಆಸಕ್ತಿಯು ಸಾಮಾಜಿಕ ಜವಾಬ್ದಾರಿಯನ್ನು ಮರೆಯುವಂತೆ ಮಾಡಿದಾಗ, ರಸೋದ್ರೇಕದ ಮೇಲೆ ಹೆಚ್ಚು ಒತ್ತುಕೊಟ್ಟು ತಾನು ಏನು ಬರೆಯುತ್ತಿದ್ದೇನೆಂಬ ಹೊಣೆಯನ್ನು ಬರಹಗಾರ ಮರೆತಾಗ, “ಸಾಹಿತ್ಯ”ವೆಂಬ ಪರಿಭಾಷೆ ಎಚ್ಚರಿಕೆ ರೂಪದಲ್ಲಿ ಬಳಕೆಗೆ ಬಂದಂತಿದೆ. ಬಸವಣ್ಣನವರು “ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಎನ್ನುವುದೂ ಇದೇ ಅರ್ಥದಲ್ಲಿಯೇ. ನಿನಗೆ ಕೇಡಿಲ್ಲವಾಗಿ ಎಂದರೆ ಸಾಮಾಜಿಕ ನ್ಯಾಯಕ್ಕೆ ಕೇಡಿಲ್ಲದಂತೆಯೂ, ಅದೇ ವೇಳೆಗೆ ನಾನು ಲಿದಂತೆ ಅಂದರೆ ನನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆಯೂ ಬರವಣಿಗೆ ಮಾಡಬೇಕೆನ್ನುವ ಅವರ ಈ ಮಾತು, ಸ್ವಾತಂತ್ರ್ಯದ ಹೆಸರಿನಲ್ಲಿ ಏನೇನನ್ನೊ ಬರೆದು ಸಮಾಜವನ್ನು ವಿಕಾರಗೊಳಿಸುವವರಿಗೆ ನೀಡಿದ ಎಚ್ಚರವಾಗಿದೆ. ಅಂದರೆ ಬರಹಗಾರ ವೈಯಕ್ತಿಕ ಸ್ವಾತಂತ್ರ್ಯ ಉಳಿಸಿಕೊಂಡು ಸಾಮಾಜಿಕ ನ್ಯಾಯವನ್ನು ಕಾಪಾಡಬೇಕೆಂಬ ಈ ಹೇಳಿಕೆ, ಜಾಗತಿಕ ಮನ್ನಣೆ ಪಡೆಯುವಂತಹದ್ದಾಗಿದೆ.

ಕನ್ನಡದಲ್ಲಿ ಈ “ಆಗಮಿಕ ಪ್ರಜ್ಞೆ”ಯ ಕವಿಗಳು ಕ್ರಮೇಣ ಮತಭ್ರಾಂತರಾಗುವಲ್ಲಿ ಆ ಪರಂಪರೆ ತನ್ನ ಅರ್ಥಕಳೆದುಕೊಂಡರೂ, ಆತ್ಮದ ಪಿಸುಮಾತು ನಮ್ಮಲ್ಲಿ ನವೋದಯದವರೆಗೆ ಉಳಿದುಕೊಂಡು ಬಂದಿತು. ಬೇಂದ್ರೆ, ಕುವೆಂಪು, ಮಾಸ್ತಿ ಅವರ ಬರೆವಣಿಗೆಯಲ್ಲಿ ಈ ಆಗಮಿಕ ಪ್ರಜ್ಞೆ (ಆತ್ಮಪ್ರಜ್ಞೆ) ಸಶಬ್ಧವಾಗಿ, ನಿಶ್ಯಬ್ದವಾಗಿ ಆಗಾಗ ಕೇಳಿಸುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಬಳಿಕ “ಪ್ರಗತಿಶೀಲ” ಸಾಹಿತಿಗಳು ಬರುತ್ತಲೇ ಸಾಹಿತ್ಯದಲ್ಲಿ ಆತ್ಮಪ್ರಜ್ಞೆಯ “ಅಭೌತಿಕ” ಅಂಶ ಕಳೆದು ಹೋಗಿ ಮನೋಪ್ರಜ್ಞೆಯ “ಭೌತಿಕ” ಅಂಶ ಪ್ರಧಾನವಾಯಿತು. ಆತ್ಮದ ಪಿಸುಮಾತು ನಿಶ್ಯಬ್ದವಾಯಿತು.

ಇದೂ ಸಾಲದೆಂಬಂತೆ ಅವಿಭಕ್ತ ಕುಟುಂಬಗಳು ಒಡೆದು ಹೋಗಿ “ಸದಸ್ಯ”ರು “ವ್ಯಕ್ತಿ”ಯಾಗುವಲ್ಲಿ, ವ್ಯಕ್ತಿಕೇಂದ್ರಿತಪ್ರಜ್ಞೆ ಬೆಳೆಯುತ್ತಲೇ ಸಾಹಿತ್ಯದಲ್ಲಿ ಸಾಮಾಜಿಕ ಹಿತವೂ ಮಾಯವಾಗಿ, ನವ್ಯಸಾಹಿತ್ಯ ನಿರ್ಮಾಣವಾಯಿತು.

ದಲಿತ ಬಂಡಾಯದವರು ಬರುತ್ತಲೇ “ಕಾವ್ಯ”ದ ಕಲಾತ್ಮಕತೆಯೂ ಕಡಿಮೆಯಾಯಿತು. “ಕಾವ್ಯವಾಗಲಿ ಖಡ್ಗ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ” ಎಂಬ ಧ್ಯೇಯವಾಕ್ಯ ಹುಟ್ಟಿಕೊಂಡಿತು. ಖಡ್ಗ ಕೈಗೆ ಬಂದಾಗ ಸಂಯಮ ಕಡಿಮೆಯಾಗುವುದು, ಸಂಯಮ ಕಡಿಮೆಯಾದಾಗ ಕಲಾತ್ಮಕತೆ ಕಡಿಮೆಯಾಗುವುದು ಸಹಜ. ಆದುದರಿಂದ “ಕಾವ್ಯವಾಗಲಿ ಖಡ್ಗ”ದ ಜೊತೆ “ಕಾವ್ಯವಾಗಲಿ ಕಲೆ” ಎಂಬ ಕಿವಿಮಾತನ್ನೂ ಇಂದು ದಲಿತ-ಬಂಡಾಯದವರಿಗೆ ಹೇಳಬೇಕಾಗಿದೆ.

ಕೊನೆಯದಾಗಿ, ಸಾಹಿತ್ಯವು ಆತ್ಮ ಮುಖಿಯಾದರೆ ಶಾಂತಿ-ನೆಮ್ಮದಿ, ಸಮಾಜಮುಖಿಯಾದರೆ ಸಿಟ್ಟು-ಹಿಂಸೆ ಕಾಣಿಸಿಕೊಳ್ಳುತ್ತದೆ. ಆಶ್ಚರ್ಯದ ಸಂಗತಿಯೆಂದರೆ ಬಸವಣ್ಣ ಸಮಾಜಮುಖಿ ಸಾಹಿತ್ಯ ಬರೆದರೂ : “ವೇದಕ್ಕೆ ಒರೆಯ ಕಟ್ಟುವೆ… ” ಎಂದು ಮುಂತಾಗಿ ಸಿಟ್ಟಿಗೆದ್ದರೂ ತನ್ನ ವಚನರಚನೆಯಲ್ಲಿ ಕಲೆಗಾರಿಕೆ ಉಳಿಸಿಕೊಂಡನು. ಏಕೆಂದರೆ ಅವನ ಸಿಟ್ಟಿನಲ್ಲಿ ಗಾಂಧೀಜಿಯವರ ಸಿಟ್ಟಿನಂತೆ ಸಂಯಮವಿದೆ, ಸತ್ವವಿದೆ. ಇಂದಿನ ದಲಿತ-ಬಂಡಾಯದವರು ಬಸವಣ್ಣ-ಗಾಂಧೀಜಿಯವರಂತೆ ಸಿಟ್ಟಿಗೇಳುವುದು,“ಖಡ್ಗ”ವಾಗುವ ಜೊತೆಗೆ, ಸಾಹಿತ್ಯಿಕ ಸೌಂದರ್ಯದ “ಕಲೆ”ಯೂ ಆಗುತ್ತದೆ.

[1] ಈ ವಿವರಗಳನ್ನು ಭಾರತೀಯ ಕಾವ್ಯಮೀಮಾಂಸೆ (ತೀ.ನಂ.ಶ್ರೀ. ೧೯೬೧, ಪು. ೧೩೭)ಯಿಂದ ಸ್ವೀಕರಿಸಲಾಗಿದೆ.