ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಹಲವಾರು ಪ್ರಶ್ನೆಗಳಲ್ಲಿ ಶಬ್ದಮಣಿದರ್ಪಣದ ವೃತ್ತಿಯೂ ಒಂದು. ಕೆಲವು ದಿನಗಳ ಹಿಂದೆ “ಶಬ್ದಮಣಿದರ್ಪಣದ ವೃತ್ತಿ ಕೇಶಿರಾಜನದಲ್ಲ”[1] ಎಂಬ ಪ್ರಶ್ನೆಯೊಂದು ಎದ್ದು ವಿದ್ವತ್‌ಪ್ರಪಂಚವನ್ನು ತಲ್ಲಣಗೊಳಿಸಿ ತನ್ನಷ್ಟಕ್ಕೆ ತಾನೇ ತಣ್ಣಗಾಯಿತು. ಆ ಬೂದಿ ಮುಚ್ಚಿದ ಕೆಂಡವನ್ನು ಈಗ ಮತ್ತೆ ಕೆರಳಿಸದೆ ದರ್ಪಣದ ವೃತ್ತಿಗಳ ಲಕ್ಷಣ ಮತ್ತು ಸ್ವರೂಪಗಳನ್ನು ಮಾತ್ರ ವಿವೇಚಿಸುವುದು ಈ ಲೇಖನದ ಉದ್ದೇಶವಾಗಿದೆ.

ಈಗ ತಿಳಿದಮಟ್ಟಿಗೆ ದರ್ಪಣಕ್ಕೆ ಬರೆಯಲಾದ ವೃತ್ತಿವ್ಯಾಖ್ಯಾನಗಳು ನಾಲ್ಕು. ಅವು:

೧. ಸೂತ್ರಕಾರನಾದ “ಕವಿಕೇಶವಂ ತಾಂ ಮಾಡಿದ ಶಬ್ದಮಣಿವೃತ್ತಿಯೊಳ್‌ಸಂಧಿದೋಷಮಕ್ಕುಮೆಂದು ತಾಂ ಬರೆದಂ” ಎಂಬ ಮದ್ರಾಸ ದರ್ಪಣದ ಆವೃತ್ತಿಯ ಹೇಳಿಕೆ ದರ್ಪಣಕ್ಕೆ ಕೇಶಿರಾಜನೇ ಒಂದು ಮೂಲವೃತ್ತಿಯನ್ನು ಬರೆದಿರುವನೆಂದು ತಿಳಿಸುತ್ತದೆ.

೨. “….ಸರೇಫಮಿದಿರಾಗೆ ದೋಷಂ ಎಂದು ಕಂxಸಪ್ಪಂ ತಾಂ ಮಾಡಿದ ಶಬ್ದಮಣಿದರ್ಪಣ ವ್ಯಾಖ್ಯಾನದೊಳ್‌ಬರೆದಂ. ಅದು ಪೊಲ್ಲ.” ಮದ್ರಾಸ ದರ್ಪಣದ ಈ ಮಾತಿನಿಂದ ಕಂxಸಪ್ಪನೆಂಬವನು ವ್ಯಾಖ್ಯಾನ ಬರೆದಿರುವನೆಂದು ಸ್ಪಷ್ಟವಾಗುತ್ತದೆ.

೩. ಶ್ರೀ ಡಿ. ಕೆ. ಭೀಮಸೇನರಾಯರಿಗೆ ಲಭಿಸಿದ ಹೈದ್ರಾಬಾದ್‌ದರ್ಪಣಕ್ಕೆ ವಿಶಿಷ್ಟರೂಪದ ವ್ಯಾಖ್ಯಾನವಿದೆ. ಈ ವ್ಯಾಖ್ಯಾನಕಾರನು ಮೇಲಣ ಕಂxಸಪ್ಪನಿಂದ ಭಿನ್ನವೆಂದು ಶ್ರೀಯುತರ ಅಭಿಪ್ರಾಯ.[2]

೪. ಮದ್ರಾಸ ದರ್ಪಣಕ್ಕೆ ಲಿಂಗಣಾರಾಧ್ಯನೆಂಬುವನು ಬೇರೊಂದು ವೃತ್ತಿ ಬರೆದಿರುವ ವಿಷಯ ಸಾಹಿತ್ಯಲೋಕಕ್ಕೆ ಚಿರಪರಚಿತವಿದೆ.

ಈ ನಾಲ್ಕು ಕಂxಸಪ್ಪನ ವ್ಯಾಖ್ಯಾನ ಉಪಲಬ್ಧವಿಲ್ಲ. ಹೈದರಾಬಾದ ದರ್ಪಣ ಇನ್ನೂ ಅಚ್ಚಾಗಿಲ್ಲ. ಅದಕ್ಕಾಗಿ ಕೇಶಿರಾಜನ ವೃತ್ತಿ ಮತ್ತು ಲಿಂಗಣಾರಾಧ್ಯನ ವೃತ್ತಿಗಳನ್ನು ಮಾತ್ರ ಇಲ್ಲಿ ಗಮನಿಸಲಾಗಿದೆ.

ಈವರೆಗೆ ಅಚ್ಚಾದ ದರ್ಪಣದ ಆವೃತ್ತಿಗಳು ಹತ್ತು. ಅವುಗಳ ಅವಲೋಕನೆಯಿಂದ ೧. ಜೆ. ಗೆರೆಟ್‌೧೮೬೮, ೨. ಕಿಟೆಲ್‌೧೮೭೨, ೩. ಕಿಟೆಲ್‌೧೮೯೯, ೪.ಪಂಜೆ-೧೯೨೦, ೫.ಪಂಜೆ-೧೯೬೫, ೬. ಸಾಹಿತ್ಯ ಪರಿಷತ್‌೧೯೨೦, ೭.ಡಿ. ಎಲ್‌. ಎನ್‌. ೧೯೫೯, ೮.ಡಿ. ಎಲ್‌. ಎನ್‌. -೧೯೬೪, ೯.ಡಿ. ಎಲ್‌. ಎನ್‌. ೧೯೬೮, ಆವೃತ್ತಿಗಳಲ್ಲಿ ಸಾಮಾನ್ಯವಾಗಿ ಕೇಶಿರಾಜನ ವೃತ್ತಿ ಇದ್ದು, ೧೦. ಮದ್ರಾಸ ಯುನಿವರ್ಸಿಟಿ – ೧೯೩೮ ಆವೃತ್ತಿಯಲ್ಲಿ ಲಿಂಗಣಾರಾಧ್ಯನ ವೃತ್ತಿ ಕಂಡುಬರುತ್ತವೆ.

ವೃತ್ತಿಕಾರರ ಮಾತನ್ನವಲಂಬಿಸಿ ಹೇಳುವುದಾದರೆ ಕೇಶಿರಾಜನದು ಅರ್ಥವೃತ್ತಿ, ಲಿಂಗಣಾರಾಧ್ಯರದು ‘ಅನ್ವಯವೃತ್ತಿ’ಯೆಂದು ಕೆಳಗಣ ವಿವರಣೆಯಿಂದ ಸ್ಪಷ್ಟವಾಗುತ್ತದೆ.

ಪ್ರಾಸಚ್ಛಂದೋನ್ವಯ ವಿ |
ನ್ಯಾಸದಿನಂತಿಂತು
ಶಬ್ದಮಿರ್ಕುಂ ವೃತ್ತಿ |
ವ್ಯಾಸಂ
ತದ್ವ್ಯಾಕುಳಮೆಂ |
ದಾ
ಸೂತ್ರಕ್ಕರ್ಥವೃತ್ತಿ ವರ್ತಿಸೆ ಪೇೞ್ದೆಂ ||

ಇಲ್ಲಿ ‘ಸೂತ್ರಕ್ಕರ್ಥವೃತ್ತಿ ವರ್ತಿಸೆ ಪೇೞ್ದೆಂ’ ಎಂಬ ಮಾತಿನ ಮೂಲಕ ಕೇಶಿರಾಜ ತನ್ನದು ಅರ್ಥವೃತ್ತಿ ಎಂದು ಸ್ಪಷ್ಟಪಡಿಸಿದ್ದಾನೆ.

ಇನ್ನು “ಸಂಸ್ಕೃತ ಕರ್ನಾಟಕ ಭಾಷಾವಿಶಾರದ ಶ್ರೀ ವೀರಶೈವ ಲಿಂಗಣಾರಾಧ್ಯ ವಿರಚಿತಮಪ್ಪ ಸೂತ್ರಾನ್ವಯ. ರತ್ನಮಾಲೆಯೆನಿಪ ಶಬ್ದಮಣಿದರ್ಪಣ (ವೃತ್ತಿಯೊಳ್‌)ನಾಮಾಧ್ಯಾಯಯಂ ಸಮಾಪ್ತಂ” ಎಂಬ ಪ್ರಕರಣಾಂತ್ಯ ಗದ್ಯದಲ್ಲಿಯ ‘ಸೂತ್ರಾನ್ವಯರತ್ನಮಾಲೆಯೆನಿಪ ಶಬ್ದಮಣಿದರ್ಪಣ (ವೃತ್ತಿ)’ ಎಂಬ ಮಾತಿನ ಮೂಲಕ ಲಿಂಗಣಾರಾಧ್ಯ ತನ್ನದು ‘ಅನ್ವಯವೃತ್ತಿ’ ಎಂದು ಸೂಚಿಸಿದ್ದಾನೆ.

ಸೂತ್ರವೊಂದರ ಆಶಯವನ್ನರಿಯಲು ಅದರ ಪದಗಳನ್ನು ಮೊದಲು ಅನ್ವಯ ರೂಪದಲ್ಲಿ ಹೊಂದಿಸಿಕೊಳ್ಳಬೇಕಾಗುತ್ತದೆ. ತರುವಾಯ ಆ ಅನ್ವಯಕ್ಕೆ ಅರ್ಥರೂಪ ಕೊಡಬೇಕಾಗುತ್ತದೆ. ಈ ಎರಡರಲ್ಲಿ ಲಿಂಗಣಾರಾಧ್ಯನದು ಅನ್ವಯದೃಷ್ಟಿ; ಕೇಶಿರಾಜನದು ಅರ್ಥದೃಷ್ಟಿ. ಅದಕ್ಕಾಗಿ ಒಬ್ಬನದು ‘ಅರ್ಥವೃತ್ತಿ’ ಇನ್ನೊಬ್ಬನದು ‘ಅನ್ವಯವೃತ್ತಿ’. ಇವು ದರ್ಪಣವೃತ್ತಿಯ ಎರಡು ಲಕ್ಷಣಗಳು. ಸೂತ್ರವೊಂದಕ್ಕೆ ಇವರಿಬ್ಬರಿಂದ ಬರೆಯಲಾದ ಎರಡು ವೃತ್ತಿಗಳ ಉದಾಹರಣೆಯ ಮೂಲಕ ಈ ಭಿನ್ನತೆಯನ್ನು ಸ್ಪಷ್ಟಪಡಿಸಿಕೊಳ್ಳಬಹುದು.

ಎರಡುಂ ರೇಫೆಗಳಂ ತಂ |
ದುರವಣೆಯಿಂ
ಕೂಡಿದಂತೆವೋಲ್ಶ್ರುತಿಕಷ್ಟಂ |
ಬರೆ
ಸಂಧಿ ಮಾಡಲಾಗದು |
ಕರಡೆಯ
ಗಿರುಗಟೆಯ ದನಿವೊಲಮರವೆಂದುಂ ||

ಕೇಶಿರಾಜನ (ಅರ್ಥ)ವೃತ್ತಿ: “ಪದಂಗಳೆರಡಱಂತರಾಳ ರೇಫಂಗಳಂ ಕೂಡಿದಂತೆ ಶ್ರುತಿಕಷ್ಟವಾಗಿ ಸಂಧಿಯಂ ಮಾಡಾಗದು. ಕರಡೆಯ ಗಿರುಗಟೆ ದನಿಯಂತೆ ನೇರ್ಪಡವು” ಇದು ಅರ್ಥವೃತ್ತಿ. ಇಲ್ಲಿ ಅನ್ವಯ ಮುಖ್ಯವಲ್ಲ. ಅರ್ಥಮುಖ್ಯ.

ಲಿಂಗಣಾರಾಧ್ಯನ (ಅನ್ವಯ)ವೃತ್ತಿ: “ಉರವಣೆಯಿಂ ಎರಡುಂ ರೇಫೆಗಳಂ ಕೂಡಿದಂತೆವೋಲ್‌ಶ್ರುತಿಕಷ್ಟಂ ಬರೆದ ಸಂಧಿ ಮಾಡಲಾಗದು. ಅವು ಕರಡೆಯ ಗಿರುಗಟೆಯ ದನಿಯವೋಲ್‌ಎಂದುಂ ಅಮರವು.” ಇದು ಅನ್ವಯ ವೃತ್ತಿ. ಸೂತ್ರದ ಅನ್ವಯ ಕ್ರಮವೇ ಇಲ್ಲಿ ವೃತ್ತಿಯಾಗಿ ನಿಂತಿದೆ. ಲಿಂಗಣಾರಾಧ್ಯನದಲ್ಲಿ ಇಂಥ ವೃತ್ತಿಗಳು ೧೦೦ಕ್ಕೆ ೮೫ರಷ್ಟು ಕಂಡುಬರುತ್ತವೆ. ವೃತ್ತಿ ಬರವಣಿಗೆಯಲ್ಲಿ ಆತನು ಇಟ್ಟುಕೊಂಡ ಉದ್ದೇಶವೇ ಇದಕ್ಕೆ ಕಾರಣ.

ಈ ವೈಲಕ್ಷಣ್ಯಗಳನ್ನು ಅಭಿವ್ಯಕ್ತಮಾಡುವ ವೃತ್ತಿಗೆ ಒಂದು ಸ್ವರೂಪ (Form) ಅತ್ಯವಶ್ಯ. ಈ ದೃಷ್ಟಿಯಿಂದ ನೋಡಿದರೆ ಕೇಶಿರಾಜ ಮತ್ತು ಲಿಂಗಣಾರಾಧ್ಯರ ದರ್ಪಣಗಳಲ್ಲಿ ವೃತ್ತಿಗಳು ಹಲವು ಸ್ವರೂಪಗಳಲ್ಲಿ ಕಂಡುಬರುತ್ತವೆ. ಆ ಸ್ವರೂಪಗಳನ್ನು ಇಲ್ಲಿ ವಿವೇಚಿಸಬಹುದು.

ಅರ್ಥವೃತ್ತಿಯ ಸ್ವರೂಪ

ವಿದಿತ ಸ್ವರದಿನನಾದೇ |
ಶದ
ಸಹಜ ವ್ಯಂಜನಗಳಿಂ ಪರದ ಪವ |
ರ್ಗದ
ನೆಲೆಗಕ್ಕುಂ ವತ್ವಂ |
ಪದವಿಧಿಯೊಳ್
ಬಹುಳವೃತ್ತಿಯಿಂ ವಾಕ್ಯದೊಳಂ ||

ವೃತ್ತಿ: ಸ್ವರಂಗಳಿರ್ದೊಡಂ ಆದೇಶರಹಿತಮಪ್ಪ ವ್ಯಂಜನಗಳಿಂರ್ದೊಡಂ ಪರದೊಳಿರ್ದ ಪವರ್ಗಕ್ಕೆ ಸಮಾಸವಿಷಯದೊಳ್‌ವತ್ವಮಕ್ಕುಂ. ಬಹುಳತೆಯಿಂ ವಾಕ್ಯದೊಳಮಕ್ಕುಂ.”

೨. “ಸಮಾಸಂಗಳೊಳ್‌ಪ್ರಸಿದ್ಧಿಯಿಂ ಪೂರ್ವಪದಾಂತ್ಯದೊಳಿರ್ದ ಸಹಜ ಸ್ವರಂಗಳ್ಗೆಯುಂ, ಆದೇಶಮಂ ಬೇರ್ಕೆಯ್ದು ತೊಲಗಿನಿಂದ ಸಹಜ ವ್ಯಂಜನಂಗಳ್ಗೆಯುಂ, ಪರವಾಗಿ ಪರಪದ ಪೂರ್ವದೊಳ್‌ನಿಂದ ಕಕಾರಕ್ಕೆ ಪರದೊಳಿರ್ದ ಕ್ರಿಯಾವಾಚಕಂಗಳ ಮೊದಲೊಳಿರ್ದ ಪಕಾರಕ್ಕೆ ವತ್ವಾದೇಶಂ ಪ್ರಚುರತೆಯಿಂ ಸವನಿಸುವುದು.”

ಒಂದೇ ಸೂತ್ರಕ್ಕೆ ಬರೆದ ಈ ಅರ್ಥವೃತ್ತಿಗಳು ಸ್ವರೂಪದಲ್ಲಿ ಎರಡು ಬಗೆಯಾಗಿವೆ. ಒಂದು ಸಂಗ್ರಹ ಇನ್ನೊಂದು ವಿಸ್ತೃತ. ಈಗ ಇನ್ನೊಂದು ಸೂತ್ರಕ್ಕೆ ಬರೆದ ಎರಡು ವೃತ್ತಿಗಳನ್ನು ನೋಡಬಹುದು.

ಎಳದು ಪೞದೆಂಬ ಶಬ್ದಂ |
ಗಳ
ಮಧ್ಯಕ್ಕುಂಟೆಕಾರಮುತ್ವಂ ಬಱೆದೆಂ |
ದೊಳಱುವ
ಱೆಕಾರದೊಳ್ನೀಂ |
ತಿಳಿ
ಪೊಸತಱ ಕಡೆಗೆ ಬಿಂದುವೆರಸು ಬಕಾರಂ ||

ವೃತ್ತಿ : “ಎಳದು, ಪೞದು ಎಂಬ ಶಬ್ದಂಗಳ್ಗೆ ಪುಲ್ಲಿಂಗದಕಾರಂ ಬರೆ ಮಧ್ಯಕ್ಕೆ ಹೃಸ್ವಮತ್ವಮಕ್ಕುಂ, ಬಱೆದೆಂಬ ಶುದ್ಧ ಱೆಕಾರಕ್ಕೆ ಉಕಾರಾದೇಶಂ, ಪೊಸತೆಂಬುದಱ ತುಕಾರಕ್ಕೆ ಬಿಂದುವರೆಸು ಬಕಾರಾದೇಶಮಕ್ಕುಂ.”

೨. “ಎಳೆದು, ಪಳದಿವಂಬುದಕ್ಕೆ ಪುಲ್ಲಿಂಗದಕಾರಂ ಬರೆ ಮಧ್ಯಾಕ್ಷರಕ್ಕೆ ಹ್ರಸ್ವೇತ್ವಮಕ್ಕುಂ. ಎಳೆಯಂ | ಪಳೆಯಂ | ಪಳಯರೆಂದು ಸ್ತ್ರೀಲಿಂಗದಳ್‌ಎಂಬುದು ಪರಮಾದೊಡಕ್ಕುಂ |ಎಳೆಯಳ್‌ಎಳೆಯಳಿರುತೆನ್ನ ಪಕ್ಕದೊಳೆಳಸಿ ಮನೋಜಾತರೂಪತಾನೆ | ಅದಲ್ಲದೆಯುಂ ಸ್ತ್ರೀಲಿಂಗದಳ್‌ಪಱಮಾದೊಡೆ ಗುಣವಚನದುಕಾರದೊಳೆ ತದ್ಧಿತದೊಳ್‌ಲೋಪಮುಂಟಾಗಿ ಕಿಱೆಯಳ್‌|ಪಿರಿಯಳ್‌|ಅಸಿಯಳ್‌|ನಿಡಿಯಳೆಂದುಂಟು | ಬಱಿದುಯೆಂಬ ಶಬ್ದದ ಱೆಕಾರಕ್ಕುಕಾರಾದೇಶವಾಗಿ ಬಱುವನೆಂದಾಯ್ತು | ಪೊಸತೆಂಬುದಱ ತುಕಾರಕ್ಕೆ ಬಿಂದುವರೆಸು ಬಕಾರಾದೇಶಂ |ಪೊಸಬನೆಂದು ಪ್ರಯೋಗಂ |ವಿಚಾರಿಸದುದಿಂತೆ ಪೊಸಂಬರೊತ್ತೆಯಂ ಕೊಳ್ವುದು ತಕ್ಕುದಲ್ತು | ಬಹುಳಗ್ರಹಣದಿಂ ಪೊಸಬನೆಂದುಂಟು. ಪೊಸಬನಿದಾವನಾದಪನೊ ಕಂಡಱೆದಂತೆ ವೊಲೆಂದು ಕಂಡೆನೀ |”

ಒಂದೇ ಸೂತ್ರಕ್ಕೆ ಬರೆದ ಈ ಅರ್ಥವೃತ್ತಿಗಳೂ ಎರಡು ಬಗೆಯಾಗಿವೆ. ಒಂದು ಸಂಗ್ರಹ; ಇನ್ನೊಂದು (ಪ್ರಯೋಗ)ಮಿಶ್ರಣ. ಇದರಿಂದ ಅರ್ಥವೃತ್ತಿಗಳು ಮೂರು ಭಿನ್ನ ಸ್ವರೂಪಗಳಲ್ಲಿ ದೊರೆಯುತ್ತವೆ. ಎಂದಂತಾಯಿತು. ಅವು:

೧. ಸಂಗ್ರಹವೃತ್ತಿ
೨. ವಿಸ್ತೃತವೃತ್ತಿ
೩. ಮಿಶ್ರಣವೃತ್ತಿ

ಈ ಒಂದೊಂದು ಬಗೆಯ ವೃತ್ತಿಗಳ್ಲಲಿಯೇ ಸಣ್ಣಪುಟ್ಟ ಪಾಠವ್ಯತ್ಯಾಸಗಳು ಕಂಡುಬರುತ್ತಿದ್ದರೂ ಸ್ಥೂಲವಾಗಿ ಈ ಮೂರು ಸ್ವರೂಪಗಳನ್ನೇ ಇಟ್ಟುಕೊಳ್ಳಬಹುದು. ಇದು ಅರ್ಥವೃತ್ತಿಯ ಸ್ವರೂಪವಿಚಾರ. ಇನ್ನು ಅನ್ವಯವೃತ್ತಿಯ ಸ್ವರೂಪವನ್ನು ನೋಡಬಹುದು.

ಅನ್ವಯವೃತ್ತಿಯ ಸ್ವರೂಪ

ಲಿಂಗಣಾರಾಧ್ಯನು ಸೂತ್ರಗಳಿಗೆ ಅನ್ವಯರೂಪ ಕೊಡುವ ಉದ್ದೇಶವಿಟ್ಟುಕೊಂಡಿರುವುದರಿಂದ ಆತನ ವೃತ್ತಿಗಳು ಸ್ವರೂಪ (Form) ದೃಷ್ಟಿಯಿಂದ ಸಾಮಾನ್ಯವಾಗಿ ಸಂಗ್ರಹವೃತ್ತಿಗಳೇ ಆಗಿವೆ. ಹೀಗಿದ್ದರೂ ಕೆಲವು ಸಲ ಮಿಶ್ರಣ ವೃತ್ತಿಗಳು ಆತನಲ್ಲಿ ಕಂಡುಬರುತ್ತವೆ. ಉದಾ.

ಪುದಿಗುಂ ನಿರ್ಧಾರಣದ |
ಲ್ಲದೆಯೆಂಬ
ದೆಕಾರದೆಡೆಗೆ ಪಿರಿದುಂ ಲೋಪಂ |
ಪುದಿಯದು
ಲೋಪಂ ಪ್ರತಿಷೇ |
ಧದೊಳಲ್ಲದುವೆಂಬ
ಪದನನಲ್ತೆನಲಕ್ಕುಂ ||

ವೃತ್ತಿ: ನಿರ್ಧಾರಣಾರ್ಥಮಂ ಪೇೞ್ವ ಅಲ್ಲದೆಯೆಂಬ ದೆಕಾರದೆಡೆಗೆ ಲೋಪಂ ಪಿರಿದುಂ ಪುದಿಗುಂ.

ಪ್ರಯೋಗಂ: ದೇವರನಲ್ಲದೆ ಪೊಗೞೆಂ ಎಂಬಲ್ಲಿ ದೇವನಲ್ಲ ಪೊಗೞೆಂ ಎಂಬ ಪ್ರಯೋಗಮುಂಟು.

ವೃತ್ತಿ: ಅಲ್ಲದುವೆಂಬ ಪ್ರತಿಷೇಧದ ದಕಾರಕ್ಕೆ ಲೋಪಮಿಲ್ಲಾಗಿ ಅಲ್ಲೆನಲಾಗದು. ಅಲ್ಲದೆಂಬುದನಲ್ತೆಂದು ವಿಕಲ್ಪದಿನೆನಲಕ್ಕುಂ. ಅದರ್ಕೆ ಲಿಂಗವಚನದಿಂದ ವಿಶೇಷ ಭಾವವಿಲ್ಲ. (ಆದ)ರ್ಕೆ ಲಕ್ಷಂ ಅವನಲ್ತು, ಅವಳಲ್ತು, ಅದಲ್ತು. ಅವರ್ಕೆ ಪ್ರಯೋಗಂ

. ಓರ್ವನೆ ಗಂಡನಲ್ತೆ ಜಗತೀತದೊಳ್
. ಇರ್ಬರೆ ತೋಳ್ಗಳ್ತೆ ನೃಪತಿಗೆ ರಣದೊಳ್
.ಕಂ || ತೇಜೋಧಿಕ ಕವಿ |
(ನಿ)ಳಯದೊಳೀಷತ್ಪ್ರಭರ್ಮಹಾಪ್ರಭರಲ್ತೆ |

ಒಂದಕ್ಕಿಂತ ಹೆಚ್ಚು ವ್ಯಾಕರಣ ವಿಚಾರಗಳನ್ನೊಳಗೊಂಡ ಈ ವೃತ್ತಿಯು ಪ್ರಯೋಗದೊಂದಿಗೆ ಮಿಶ್ರಣವಾಗುತ್ತ ಹೋಗಿ ಪೂರ್ಣವಾಗಿದೆ. ಆದರೆ ಕಿಟೆಲ್‌ಪರಿಷ್ಕರಣದಲ್ಲಿ ಈ ವೃತ್ತಿ ಪ್ರಯೋಗದೊಂದಿಗೆ ಮಿಶ್ರಣ ಹೊಂದದೆ ತನ್ನ ಸ್ಥಾನದಲ್ಲಿ ಸ್ವತಂತ್ರವಾಗಿ ನಿಂತುಕೊಂಡಿದೆ. ಇಂಥ ಮಿಶ್ರಣವೃತ್ತಿಗಳು ಲಿಂಗಣಾರಾಧ್ಯನಲ್ಲಿ ಹಲವಾರು ದೊರೆಯುತ್ತವೆ. ಉದಾಹರಣೆಗೆಂದು ಸೂ. ೧೪, ೨೬, ೧೦೮, ೨೦೬, ೨೦೮, ೨೬೮, ಮತ್ತು ೨೬೯ ಇತ್ಯಾದಿ ನೋಡಬಹುದು.

ಹೀಗೆ ಸಂಗ್ರಹ, ಮಿಶ್ರಣ ಸ್ವರೂಪಗಳಲ್ಲಿ ತೋರಿಬರುವ ಅನ್ವಯವೃತ್ತಿ ವಿಸ್ತೃತರೂಪದಲ್ಲಿ ಕಂಡುಬರುವುದಿಲ್ಲ. ಆದರೆ ಆಗಾಗ “ಅವಂ ವಿನುತಕ್ರಿಯಾತ್ಮಂಕಗಳೆನಿಸುವ ಸಂಸ್ಕೃತದ ಭಾವಾಚನಂಗಳಂ ಆಯ್ದು ಅನಿತರ್ಕಂ ಇಸು ಪ್ರತ್ಯಯಮನೆ ಪತ್ತಿಸಿ ನಿಱಿಸೆ ಅಲ್ಲಿ ಕೃಲ್ಲಿಂಗಂ ಬರ್ಕುಂ” ಎಂದು ಕೇವಲ ಅನ್ವಯವೃತ್ತಿಯನ್ನು ಬರೆದು, ಪ್ರಯೋಗ ಕೊಟ್ಟ ತರುವಾಗಯ ಸಂಸ್ಕೃತಭಾವಕ್ಕೆ,

ಶ್ಲೋಕಸನ್ಮಾತಂ ಭಾವಲಿಂಗಂ ಸ್ಯಾದಸ್ಪೃಷ್ಟಂ ಯಚ್ಚಾಕಾರಕ್ಕೆ  |
ಧಾತ್ವರ್ಥಃ
ಕೇವಲ ಶುದ್ಧಭಾವ ಇತ್ಯಭಿದೀಯತೇ ||

ವೃತ್ತಿ-ತ್‌=ಆವುದು,ಕಾರಕೆಃ=ಷಟ್ಕಾರಕಂಗಳಿಂದ,ಅಸ್ಪೃಷ್ಟಂ=ಮುಟ್ಟಲ್ಪಡದುದುಂ,ಸನ್ಮಾತ್ರಂಚ=ಉಂಟೆಂಬನಿತುಳ್ಳುದು (ಅಪ್ಪುದೋ ಅದು), ಭಾವಲಿಂಗಸ್ಯಾತ್‌=ಭಾವಲಿಂಗಮಪ್ಪುದು, ಶುದ್ಧಃ=ಶುದ್ಧವಾದುದು? ಕೇವಲ ಧಾತ್ವರ್ಥಃ=ಏನುಂ ಹೊದ್ದದ ಧಾತ್ವರ್ಥಃ ಭಾವಃ | [ಇತ್ಯಭಿಧೀಯತೇ=ಭಾವ ಎಂದು ಹೇಳಲ್ಪಡುತ್ತದೆ] ಎಂಬ ವ್ಯಾಖ್ಯಾನ ಜೋಡಿಸಲ್ಪಟ್ಟಿದೆ. ಇಂಥ ವ್ಯಾಖ್ಯಾನಂತ್ರಿಗಳು ಲಿಂಗಣಾರಾಧ್ಯನಲ್ಲಿ ೮-೧೦ ಮಾತ್ರ ಲಭಿಸುತ್ತವೆ. ಉದಾಹರಣೆಗಾಗಿ ಸೂತ್ರ ೧೮, ೩೩, ೮೪, ೮೫, ೧೮೫ ಮತ್ತು ೨೨೮ ನೋಡಬಹುದು.

ಒಟ್ಟಿನಲ್ಲಿ ಲಿಂಗಣಾರಾಧ್ಯನ ಅನ್ವಯವೃತ್ತಿಗಳು ಮೂರು ಭಿನ್ನಸ್ವರೂಪ (Form)ಗಳಲ್ಲಿ ದೊರೆಯುತ್ತವೆಯೆಂದಾಯಿತು. ಅವು

೧. ಸಂಗ್ರಹವೃತ್ತಿ
೨. ಮಿಶ್ರಣವೃತ್ತಿ
೩. ವ್ಯಾಖ್ಯಾನವೃತ್ತಿ

ಲಿಂಗಣಾರಾಧ್ಯನು ತಾನು ಬರೆಯುತ್ತಿರುವ ‘ಅನ್ವಯವೃತ್ತಿ’ಯು ಅರ್ಥಸ್ಪಷ್ಟತೆಗೆ ಅಸಮರ್ಪಕವೆನಿಸುತ್ತಿದ್ದರೆ ಕೆಲವು ಸಲ ‘ಅರ್ಥವೃತ್ತಿ’ಯನ್ನು ಬಳಸುತ್ತಾನೆ. ಇಂಥ ಅರ್ಥವೃತ್ತಿಗಳು ಆತನಲ್ಲಿ ಎರಡು ಬಗೆಯಾಗಿವೆ. ಒಂದು ಸ್ವರಚಿತ, ಇನ್ನೊಂದು ಕೇಶಿರಾಜನಿಂದ ಸ್ವೀಕೃತ.

ಸ್ವರಚಿತ ಅರ್ಥವೃತ್ತಿ: “ದೇಶೀಯುಮುಮಯ್ದು ನೀಂ ತಿಳಿ. ಱ, ಱ, (ಕು)ಳ, ಎ, ಒ ಇವು ದೇಶೀಯಂಗಳ್‌. ಇವಂ ಕೂಡಿದಡೆ ೫೭ ಅಕ್ಕರಂಗಳ್‌, ಋ, ಇ ವರ್ಣ, ಶ, ಷ, ವಿಸರ್ಗ, x, ಕ್ಷಳನಂ ನೀಂ ಕಳೆ. ಅಚ್ಚಗನ್ನಡಕ್ಕೆ ಯೀಕ್ರಮದಿಂ ಶುದ್ಧಗೆ ನಾಲ್ವತ್ತೇಱಾಯ್ತೆಂದಳೆ” ಇದು ಲಿಂಗಣಾರಾಧ್ಯ ವಿರಚಿತ ಅರ್ಥವೃತ್ತಿ.

“ಕನ್ನಡದೊಳ್ದೇಶೀಯಮೈದು ತೆರಂ. ಪಿಂತಣೈವತ್ತೆರಡಕ್ಕರಂಗಳ್ಕೂಡೆ ಐವತ್ತೇಳಕ್ಕರಂಗಳ್‌. ಅವಱೊಳಗೆ ಋ, ೠ, ಇ, ಇ, ಶ, ಷ, ವಿಸರ್ಗ, ಕ್ಷಳಂಗಳೆಂಬ ಪತ್ತಂ ಕಳೆಯಲಚ್ಚಗನ್ನಡದೊಳ್ಯುದ್ಧಗೆ ನಾಲ್ವತ್ತೇೞು ವಿಧಂ. ನಿಸರ್ಗಮಾಗಿ ವಿಸರ್ಗಮಿಲ್ಲ.” ಇದು ಕೇಶಿರಾಜವಿರಚಿತ ಅರ್ಥವೃತ್ತಿ.

ಒಂದೇ ಸೂತ್ರಕ್ಕೆ ಬರೆದ ಈ ಎರಡು ವೃತ್ತಿಗಳನ್ನು ನೋಡಿದರೆ ಕೇಶಿರಾಜನ ಅರ್ಥವೃತ್ತಿಯಿಂದ ಲಿಂಗಣಾರಾಧ್ಯನ ಅರ್ಥವೃತ್ತಿ ಭಿನ್ನವಾಗಿರುವ ಕಲ್ಪನೆ ಬರುತ್ತದೆ. ಇಂಥ ಸ್ವರಚಿತ ಅರ್ಥವೃತ್ತಿಗಳು ಲಿಂಗಾರಾಧ್ಯನಲ್ಲಿ ಇನ್ನೂ ಕೆಲವು ಕಂಡುಬರುತ್ತವೆ. ಉದಾಹರಣೆಗಾಗಿ, ಸೂತ್ರ ೩೮,  ೫೧ರ ವೃತ್ತಿಗಳನ್ನು ನೋಡಬಹುದು.

ಕೇಶಿರಾಜನಿಂದ ಸ್ವೀಕೃತ ಅರ್ಥವೃತ್ತಿ: ‘ಅನ್ವಯವೃತ್ತಿ’ ಬರೆಯುವ ಉದ್ದೇಶದಿಂದ ಹೊರಟಿರುವ ಲಿಂಗಣಾರಾಧ್ಯನು ಮೇಲೆ ಹೇಳಿದಂತೆ ಕೆಲವುಸಲ ‘ಅರ್ಥವೃತ್ತಿ’ಗಳನ್ನು ತಾನೇ ನಿರ್ಮಿಸುವನಲ್ಲದೆ, ಇನ್ನು ಕೆಲವು ಸಲ ನೆರವಾಗಿ ಕೇಶಿರಾಜನಿಂದಲೇ ಸ್ವೀಕರಿಸುತ್ತಾನೆ.

“ಕುಳ ಪ್ರಾಸವಾಗಿ ಪೇೞ್ದ ಕಬ್ಬಂ ಕ್ಷಳನಂ ಸೆಱೆಗೆಯ್ವುದಾಗಿ ಲಕಾರಮಂ ವಿಕಲ್ಪಂ ಮಾಡಬಾರದು. ಲಕಾರ ಪ್ರಾಸಮಾಗಿ ಪೇೞ್ದ ಕನ್ನಡ ಕಬ್ಬದೊಳ್‌ಕ್ಷಳನಂ ವಿಕಲ್ಪದಿಂದಿರಸಲ್ಬಾರ(ದ)ದಾಗಿಯದು(ವು)ಮಾಗದು. ಕ್ಷಳನೆಂಬುದಿಲ್ಲದೆ ಸಂಸ್ಕೃತ ಪದದ ಲಕಾರಕ್ಕೆ ವಿಕಲ್ಪಂ ಪೇೞಲ್ಬಾರದು(ದಾ)ಗಿ ಕ್ಷಳನನಿದರೊೞೆ ಬೆರಸಿ ಪೇೞೆಂ.” ಲಿಂಗಣಾರಾಧ್ಯನಲ್ಲಿ ಕಾಣುವ ಈ ವೃತ್ತಿ ಕೊಂಚ ಪಾಠಾಂತರಗಳಿಂದ ಕೂಡಿದ್ದರೂ ಕೇಶಿರಾಜನದೇ ಆಗಿದೆ. ಇದರಂತೆ “ಪಿರಿಯಲ್‌ಸಲಿಪರ್‌….” ಮುಂತಾದ ಸೂತ್ರಗಳ ಅರ್ಥವೃತ್ತಿಗಳು ಕೇಶಿರಾಜನಿಂದಲೇ ಸ್ವೀಕರಿಸಲ್ಪಟ್ಟಿವೆ. ಇದರಿಂದ ಕೇಶಿರಾಜನ ವೃತ್ತಿಯುಕ್ತ ದರ್ಪಣ ಲಿಂಗಣಾರಾಧ್ಯನ ಕೈಯಲ್ಲಿದ್ದುದು ಸ್ಪಷ್ಟವಾಗುತ್ತದೆ. ಲಿಂಗಣಾರಾಧ್ಯದಲ್ಲಿ ಈ ಅರ್ಥವೃತ್ತಿ (ಸ್ವರಚಿತ ಮತ್ತು ಕೇಶಿರಾಜನಿಂದ ಸ್ವೀಕೃತ)ಗಳು ಕೆಲವೇ ಇದ್ದ ಕಾರಣ ಅವುಗಳ ಸ್ವರೂಪ ವಿವೇಚನೆಯನ್ನು ಇಲ್ಲಿ ಮಾಡಲಾಗಿಲ್ಲ. ಒಟ್ಟಿನಲ್ಲಿ ಲಿಂಗಣಾರಾಧ್ಯನ ವೃತ್ತಿಗಳನ್ನು ಲಕ್ಷಣ ಮತ್ತು ಸ್ವರೂಪದೃಷ್ಟಿಯಿಂದ ಹೀಗೆ ರೇಖಿಸಬಹುದು.

[ಚಿತ್ರ ೦೧]

ಇಲ್ಲಿ ಕೇಶಿರಾಜನಿಂದ ಸ್ವೀಕೃತವಾದ ಅರ್ಥವೃತ್ತಿಗಳನ್ನು ಬಿಟ್ಟರೆ ಮಿಕ್ಕ ಸ್ವರಚಿತ ಅರ್ಥವೃತ್ತಿ ಮತ್ತು ಅನ್ವಯವೃತ್ತಿಗಳಲ್ಲಿ ಬಿಟ್ಟರೆ ಮಿಕ್ಕ ಸ್ವರಚಿತ ಅರ್ಥವೃತ್ತಿ ಮತ್ತು ಅನ್ವಯವೃತ್ತಿಗಳಲ್ಲಿ ಲಿಂಗಣಾರಾಧ್ಯನ ಸ್ವಂತಿಕೆಯನ್ನು ಕಾಣಬಹುದಾಗಿದೆ.

ಅರ್ಥವೃತ್ತಿಯು ಸ್ವರೂಪದಲ್ಲಿ ಸಂಗ್ರಹ, ವಿಸ್ತೃ ಮತ್ತು ಮಿಶ್ರಣವಾಗಿರಬಹುದು ಎಂದು ನೋಡಿದ್ದೇವೆ. ಈ ಮೂರರಲ್ಲಿ ಕೇಶಿರಾಜನಿಗೆ ಸಂಬಂಧಿಸಿದುದು ಯಾವುದು? ಇದು ಮಾತ್ರ ತೊಡಕಿನ ಪ್ರಶ್ನೆ. ಆದರೆ ಕಿಟೆಲ್‌ಅವರು “Another sign of its originality and probably antiquity is that, at least often the different rules of the grosss, unlike those of the grosses of the other manuscripts (Except M and B )are not compressed into one sentence, but given separately as heading to the instances” ಎಂದು ಕ್ರಿ.ಶ. ೧೮೭೨ರ ಪ್ರಕಟಣೆಯ ಮುನ್ನುಡಿಯಲ್ಲಿ ಹೇಳಿದುದರಿಂದ ಮಿಶ್ರಣವೃತ್ತಿಯೇ ಪ್ರಾಚೀನತಮವೆಂದೂ ಮೂಲವೆಂದು ಅವರ ಅಭಿಪ್ರಾಯವಿದ್ದಂತೆ ತೋರುತ್ತದೆ. ಈ ಮಾತಿಗೆ ಹೇಳಿಕೊಳ್ಳುವಂತಹ ಆಧಾರವಿಲ್ಲ. ಒಂದು ವೇಳೆ ಒಂದು ಪ್ರತಿಯಲ್ಲಿ ಕೇವಲ ಸಂಗ್ರಹ, ಇನ್ನೊಂದು ಪ್ರತಿಯಲ್ಲಿ ಕೇವಲ ಮಿಶ್ರಣ, ಮತ್ತೊಂದು ಪ್ರತಿಯಲ್ಲಿ ಕೇವಲ ವಿಸ್ತೃತ ವೃತ್ತಿಗಳೇ ಕಂಡುಬರುತ್ತಿದ್ದರೆ ಮಾತ್ರ ಮೂವರು ಭಿನ್ನವ್ಯಕ್ತಿಗಳಿಂದ ಮೂರು ಭಿನ್ನವೃತ್ತಿ ಪರಂಪರೆಗಳೇ ಬೆಳೆದುಬಂದಿವೆಯೆಂದೂ ಇವುಗಳಲ್ಲಿ ಒಂದು ಪರಂಪರೆ ಮಾತ್ರ ಕೇಶಿರಾಜನದೆಂದೂ ಹೇಳಬಹುದಿತ್ತು. ವಸ್ತುಸ್ಥಿತಿ ಹಾಗಿರದೆ ಒಂದೇ ಪ್ರತಿಯಲ್ಲಿ ಈ ಮೂರು ಸ್ವರೂಪದ ವೃತ್ತಿಗಳು ತೋರಿಬರುತ್ತವೆ. ಇದಕ್ಕೆ ಹೊಣೆ ಕೇಶಿರಾಜನೋ, ಮುಂದಣ ದರ್ಪಣಾಭ್ಯಾಸಿಗಳೋ ಹೇಳಲು ಬರುವಂತಿಲ್ಲ. ಆದರೂ ಯಾವುದೇ ಹಸ್ತಪ್ರತಿಯನ್ನು ತೆಗೆದುಕೊಂಡರೂ ಅಲ್ಲಿಯ ಬಹುಸಂಖ್ಯಾತ ಸೂತ್ರಗಳಿಗೆ ಸಂಗ್ರಹವೃತ್ತಿಗಳು ಕಂಡುಬರುವುದರಿಂದಲೂ, ಇಂಥ ಹಸ್ತಪ್ರತಿಗಳೇ ಅಧಿಕಸಂಖ್ಯೆಯಲ್ಲಿ ಲಭಿಸುವುದರಿಂದಲೂ ಕೇಶಿರಾಜನ ವೃತ್ತಿಸ್ವರೂಪ ಸಾಮಾನ್ಯವಾಗಿ ಸಂಗ್ರಹವೆನ್ನಬೇಕಾಗುತ್ತದೆ. ಅದಕ್ಕಾಗಿ ಯಾವುದೇ ಒಂದು ಸೂತ್ರಕ್ಕೆ ಸಂಗ್ರಹ, ಮಿಶ್ರಣ, ವಿಸ್ತೃತ ಈ ಮೂರು ಬಗೆಯ ವೃತ್ತಿಗಳು ಲಭಿಸುತ್ತಿದ್ದರೆ ಸಂಗ್ರಹ ವೃತ್ತಿಯೇ ಕೇಶಿರಾಜನೆಂದು ಸಂಪಾದಕರು ಈಗಿನ ಮಟ್ಟಿಗೆ ಇಟ್ಟುಕೊಳ್ಳಬಹುದು. ಒಂದುವೇಳೆ ಕೆಲವು ಸೂತ್ರಗಳಿಗೆ ಸಂಗ್ರಹವೃತ್ತಿ ಸಿಗದೆ ಕೇವಲ ಮಿಶ್ರಣ ಇಲ್ಲವೆ ವಿಸ್ತೃತವೃತ್ತಿ ಎಲ್ಲ ಹಸ್ತಪ್ರತಿಗಳಲ್ಲಿ ಲಭಿಸುತ್ತಿದ್ದರೆ ಅನಿವಾರ್ಯವಾಗಿ ಅವುಗಳನ್ನೇ ಕೇಶಿರಾಜನ ವೃತ್ತಿ ಎನ್ನಬೇಕಾಗುತ್ತದೆ.

[1] ಶಬ್ದಮಣಿದರ್ಪನದ ವೃತ್ತಿ ಕೇಶಿರಾಜನದಲ್ಲ. ವಿ. ರಾಮಶರ್ಮಾ, ಸಾ. ಪ. ೨೬-೧ (೧೪೧)

[2] ಶಬ್ದಮಣಿದರ್ಪಣದ ಪಾಠಾಂತರಗಳು, ಪ.೬೫