“ಛಂದಸ್ಸಿನ ಮೂಲತತ್ವಗಳನ್ನು ಗುರುತಿಸುವ, ವಿವರಿಸುವ ಕಾಲ ಇನ್ನೂ ಬಂದಿಲ್ಲ. ಅವಶ್ಯಕ ಪರಿಕರಗಳು ಸಾಲದಿರುವುದು, ಸರಿಯಾಗಿ ಪ್ರಾಥಮಿಕ ಅಭ್ಯಾಸ ನಡೆಯದಿರುವುದು, ಮಿಗಿಲಾಗಿ ಅಭಿರುಚಿ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿರಬಹುದು”[1]

ನಮ್ಮಲ್ಲಿ ನಡೆದ ಛಂದಸ್ಸಿನ ಅಭ್ಯಾಸದ ಬಗ್ಗೆ ೧೯೬೦ರಲ್ಲಿ ಹೇಳಿದ ಮಾತಿದು. ಅಂಶಛಂದಸ್ಸಿನ ಅಭ್ಯಾಸದ ವಿಷಯವಾಗಿ ಈ ಮಾತು ಇನ್ನೂ ಸತ್ಯವಾದುದು.

ಆಧುನಿಕರಲ್ಲಿ ಅಂಶಛಂದಸ್ಸಿನ ಬಗೆಗೆ ಮೊದಲು ವಿವೇಚಿಸಿದವರು, ಬಿ.ಎಂ.ಶ್ರೀ. ಕನ್ನಡ ಛಂದಸ್ಸಿನ ತಿಳಿವಳಿಕೆ ಅಸ್ಪಷ್ಟವಾಗಿದ್ದ ಕಾಲವದು. ಆಗ ಹೇಳಿದ ಬಿ.ಎಂ.ಶ್ರೀ ಮಾತು, ಮಾರ್ಗವಾಗಿ ಪರಿಣಮಿಸಿತು. ಆಮೇಲೆ ಡಾ. ಡಿ. ಎಸ್‌. ಕರ್ಕಿ, ತೀ. ನಂ. ಶ್ರೀ., ಶಿವರಾಮ ಐತಾಳ, ಡಾ. ಟಿ. ವ್ಹಿ. ವೆಂಕಟಾಚಲಶಾಸ್ತ್ರೀ ಮೊದಲಾದವರು ಒಂದೆರಡು ಹೊಸ ಸೂಚನೆಗಳನ್ನು ಮಂಡಿಸಿದರೂ ಬಿ.ಎಂ.ಶ್ರೀ. ಮಾರ್ಗವೇ ಇವರಿಗೆ ಮೂಲಧನವಾಗಿ ನಿಂತಿದೆ. ಈಗ ಎಲ್ಲ ದ್ರಾವಿಡ ಭಾಷೆಗಳನ್ನು ಕಣ್ಣು ಮುಂದಿಟ್ಟುಕೊಂಡು ಅಂಶಛಂದಸ್ಸಿನಲ್ಲಿ ಸಂಶೋಧನೆ ನಡೆಸುವುದು ಅತ್ಯವಶ್ಯವಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ಹೊಸ ಸಂಗತಿಗಳನ್ನು ಇಲ್ಲಿ ಮಂಡಿಸಬಹುದಾಗಿದೆ.

ಪದ್ಯವನ್ನು ಲಯಬದ್ಧವಾಗಿ ಹೇಳುತ್ತ ಹೋದ ಹಾಗೆ ತಾಳಗಳು ಬೀಳುತ್ತ ಹೋಗುತ್ತವೆ. ಇಂಥ ಎರಡು ತಾಳಗಳ ಮಧ್ಯಭಾಗವೇ ಲಯ. ಈ ಲಯದಲ್ಲಿ ಮತ್ತೆ ಒಳಲಯಗಳು ಗೋಚರಿಸುತ್ತವೆ. ಉದಾ.

|ಅ. ಕ್ಕ. ತಂ| ಗೆರ. ಬ. ಣ್ಣ| ಅವ. ರಿ. ಹೂ| ವಿನ. ಬ. ಣ್ಣ|

ಇಲ್ಲಿ ಕೊರೆದ ಗೆರೆಗಳು ತಾಳ. ಎರಡು ಗೆರೆಗಳ ಮಧ್ಯಭಾಗ ಲಯ. ಈ ಲಯಗಳಲ್ಲಿ ಬಿಂದುಗಳಿಂದ ತೋರಿಸಿದ ಒಂದೊಂದು ಘಟಕ ಒಳಲಯಗಳು. ಛಂದಸ್ಸಿನ ಪರಿಭಾಷೆಯಲ್ಲಿ ಹೇಳುವುದಾದರೆ ಈ ಹೊರಲಯಗಳೇ ಗಣ, ಒಳಲಯಗಳೇ ಅಂಶ.

ಮೂಲತಃ ಒಂದು ಅಂಶವೆನ್ನುವುದು ಒಂದು ಗುರುವಿಗೆ[2] ಸಮಾನವಾದುದು.ಇಂಥ ಎರಡು ಅಂಶಗಳಿಂದ ಕೂಡಿದುದು ಬ್ರಹ್ಮಗಣ, ಮೂರು ಅಂಶಗಳಿಂದ ಕೂಡಿದುದು ವಿಷ್ಣುಗಣ. ಇವುಗಳನ್ನು ಹೀಗೆ ಬರೆಯಬಹುದು.

| _ . _ | ಬ್ರಹ್ಮಗಣ
| _ ._ . _| ವಿಷ್ಣುಗಣ

ನಾಲ್ಕು ಅಂಶ (_ . _ . _ . _) ಗಳ ರುದ್ರಗಣವನ್ನು ನಾಗವರ್ಮ ಮೊದಲುಮಾಡಿ ಆಧುನಿಕ ವಿದ್ವಾಂಸರು ಹೇಳುವರಾದರೂ ರುದ್ರಗಣವೆಂಬುದು ಸಾಧ್ಯವಿಲ್ಲವೆಂದು ನನ್ನ ಅನಿಸಿಕೆ. ಅದು ಚರಣ ಮಧ್ಯದಲ್ಲಿ ಬಂದರೆ ಎರಡು ಬ್ರಹ್ಮವಾಗುವುದೂ[3] ಚರಣಾಂತ್ಯದಲ್ಲಿ ಬಂದರೆ ವಿ+೧ಗು ಆಗುವುದೂ ಈ ಅನಿಸಿಕೆ ಕಾರಣ. ಕರ್ಣಾಟ ವಿಷಯಜಾತಿವೃತ್ತಿಗಳಲ್ಲಿ ರುದ್ರಗಣ ಒಮ್ಮೆಯೂ ಮಧ್ಯ ಬಂದಿಲ್ಲ. ಕ್ವಚಿತ್ತಾಗಿ ಕೊನೆಗೆ ಬಂದಿದೆ ಎಂಬುದನ್ನೂ, ಹಾಗೆ ಬಂದಾಗ ಅದು ೧ ವಿ + ೧ ಗು, ಆಗಿ ಒಡೆದುಕೊಳ್ಳುವುದೆಂಬುದನ್ನೂ ಇಲ್ಲಿ ನೆನೆಯಬಹುದು. ಒಟ್ಟಿನಲ್ಲಿ ಅಂಶಗಣಗಳು ಎರಡು ಮಾತ್ರ. ಅವು: ಬ್ರಹ್ಮಗಣ, ವಿಷ್ಣುಗಣ. ಈ ಗಣಗಳು ತಮ್ಮ ಜೀವನೇತಿಹಾಸದಲ್ಲಿ ಅನುಭವಿಸಿದ ಎರಡು ಅವಸ್ಥೆಗಳು ಹೀಗಿವೆ:

ಪ್ರಥಮ ಅವಸ್ಥೆ

ಮೂಲತಃ ಅಂಶವೆನ್ನುವುದು ‘ಗುರುವ್ಯಾಪ್ತಿ’ಯದೆಂಬ ಭಾವನೆಯಿಂದ, ಕೇವಲ ಗುರುವರ್ಣಗಳಿಂದ ಗಣ ಕಟ್ಟುವುದು ಅಸಾಧ್ಯ; ಎಲ್ಲ ಲಘುವರ್ಣ ಬಳಸಿ ಅವುಗಳನ್ನು ಎಳೆದು ಗುರುವನ್ನಾಗಿಸುವುದೂ ಅಸಾಧ್ಯ. ಈ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅರಿಯಬೇಕಾದರೆ ಗಣದ ಆದಿ, ಮಧ್ಯ, ಅಂತ್ಯ ಅಂಶಗಳ ಸ್ವರೂಪವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

. ಆದಿ ಅಂಶ: ಲಯಬದ್ಧವಾಗಿ ಪದ್ಯ ಹೇಳುವಾಗ ತಾಳವು ಗಣದ ಪ್ರಾರಂಭದಲ್ಲಿಯೇ ಬೀಳುತ್ತದೆ. ತಾಳದ ಈ ಭಾರವನ್ನು ಹೊರಬೇಕಾದುದರಿಂದ ಗಣದ ಪ್ರಥಮಾಂಶ ಗುರುವಾಗಿರಲೇಬೇಕು ಇಲ್ಲವೆ ‘ಗುರುವ್ಯಾಪ್ತಿ’ಗೆ ಸರಿಹೋಗುವ ಹಾಗೆ ಎರಡು ಲಘುವಿರಬೇಕು.[4]  ಕಡ್ಡಾಯ ಕಾರಣವಾಗಿ ಪ್ರಥಮಾಂಶದಲ್ಲಿ ಧ್ವನಿತರಂಗಕ್ಕೆ ಅವಕಾಶವಿರುವುದಿಲ್ಲ.

. ಅಂತ್ಯ ಅಂಶ: ಬ್ರಹ್ಮದ ಎರಡನೆಯ ಅಂಶ, ವಿಷ್ಣುವಿನ ಮೂರನೆಯ ಅಂಶಗಳು ಗಣದ ಅಂತ್ಯ ಅಂಶಗಳೆನಿಸುತ್ತವೆ. ಇವು ಗುರುವರ್ಣವಿದ್ದರಂತೂ ಸರಿಯೇ, ಲಘುವರ್ಣವಿದ್ದರೆ ಗಣದಿಂದ ಗಣಕ್ಕೆ ದಾಟಬೇಕಾಗುವ ಕಾರಣ ನಮಗರಿಯದಂತೆ ತಂತಾನೆ ಗುರುವರ್ಣವಾಗಿಬಿಡುತ್ತವೆ. ಅಂದರೆ ಅಂತ್ಯ ಅಂಶದಲ್ಲಿ ಧ್ವನಿತರಂಗಕ್ಕೆ ಅವಕಾಶವುಂಟು.

. ಮಧ್ಯ ಅಂಶ: ಇದು ವಿಷ್ಣು ಗಣದ ಎರಡನೆಯ ಅಂಶ. ಗುರುವಿದ್ದರಂತೂ ಸರಿಯೇ, ಲಘುವಿದ್ದರೆ ಮಾತ್ರ ಅದನ್ನು ಗುರುವಿನಷ್ಟು ಹಿಗ್ಗಿಸಿ ಅಂಶ ಬೆಲೆಗೆ ಒಗ್ಗಿಸಬೇಕಾಗುತ್ತದೆ. ಉದಾ |ಹೆಸ. ರಿs.ಗಿ | ರಬ. ಕs.ವಿ | ಮೊಸ. ರಿs.ಗಿ|ನೀ. ರಿ.ಲ್ಲ|

ಇಲ್ಲಿ ರಿs, ಕs, ರಿsಗಳು ಹಿಗ್ಗಿದುದನ್ನು ಗಮನಿಸಬೇಕು ಅಂದರೆ ಮಧ್ಯ ಅಂಶದಲ್ಲಿಯೂ ಧ್ವನಿತರಂಗಕ್ಕೆ ಅವಕಾಶವಿದೆ; ಅದು ಸ್ಪಷ್ಟವಾಗಿಯೂ ಗಮನಕ್ಕೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಬ್ರಹ್ಮ, ವಿಷ್ಣು ಗಣಗಳ ಸಾಧ್ಯತೆಗಳು ಹೀಗಾಗುತ್ತವೆ.

[ಚಿತ್ರ ೦೨]

[ಚಿತ್ರ ೦೩]

ಈ ಹನ್ನೆರಡು ಮೂಲ ಅಂಶಗಣಗಳು. ಇವುಗಳಲ್ಲಿ ಎಂಟು (ಬ್ರಹ್ಮ ೨, ವಿಷ್ಣು ೬) ತರಂಗಗಣಗಳಿವೆ. ಈ ಹನ್ನೆರಡು ಗಣಗಳ ಅನೇಕ ರೀತಿಯ ಸಂಯೋಜನೆಯಿಂದ ರೂಪಗೊಳ್ಳುವ ಅನೇಕ ಉದ್ದಳತೆಯ ಚರಣಗಳನ್ನು ಎಣಿಸಿ ಹೇಳುವ ಕಾರ್ಯ ಈವರೆಗೂ ನಡೆದಿಲ್ಲ. ಗಣಿತದೃಷ್ಟಿಯಿಂದ ಹೇಳುವುದಾದರೆ ಅಂಶವೃತ್ತದ ಅತಿ ಸಣ್ಣ ಚರಣ ೧ ಗಣದ್ದು, ಅಂದರೆ ೨ ಅಂಶಗಳದ್ದು. ಒಮ್ಮೆ ಬಂದ ಗಣ ಇನ್ನೊಮ್ಮೆ ಬರದಂತೆ ಯೋಜಿಸಿದರೆ ಅತಿ ದೊಡ್ಡ ಚರಣ ೧೨ ಗಣದ್ದು, ಅಂದರೆ ೩೨ ಅಂಶ (ಬ್ರಹ್ಮದ ೮  ಅಂಶ, ವಿಷ್ಣುವಿನ ೨೪ ಅಂಶ)ಗಳದ್ದು. ಈ ೨ ಅಂಶದಿಂದ ೩೨ ಅಂಶಗಳ ವರೆಗಿನ ಅನೇಕ ರೀತಿಯ ಸಂಯೋಜನೆಯಿಂದ ಒಟ್ಟು ೧, ೩೦, ೨೦, ೬೧, ೩೪೪ ಬಗೆಯ ಚರಣಗಳಾಗುತ್ತವೆ.

ಒಂದು ವೇಳೆ ಇಲ್ಲಿಯ ಪ್ರತಿಯೊಂದು ಚರಣದ ಕೊನೆಗೆ ಒಂದು ಅಂಶವನ್ನು ಹೆಚ್ಚಿಗೆ ಸೇರಿಸಿದರೆ ಈ ಚರಣಸಂಖ್ಯೆ ದ್ವಿಗುಣಿತಗೊಂಡು ೨೬೦, ೪೧, ೨೨, ೬೮೮ ಆಗುತ್ತದೆ. ಒಮ್ಮೆ ಬಂದ ಗಣ ಇನ್ನೊಮ್ಮೆ ಬರಲು ಅವಕಾಶ ಕೊಟ್ಟರೆ ಈ ಸಂಖ್ಯೆ ೨, ೨೯, ೬೬, ೩೬, ೧೪, ೮೬, ೪೨೮ನ್ನು ತಲುಪುತ್ತದೆ. ಇಲ್ಲಿಯೂ ಪ್ರತಿಯೊಂದು ಚರಣದ ಕೊನೆಗೆ ಒಂದು ಅಂಶವನ್ನು ಹೆಚ್ಚಿಗೆ ಸೇರಿಸಿದರೆ ಈ ಚರಣಸಂಖ್ಯೆಯೂ ದ್ವಿಗುಣಿತಗೊಂಡು ೪, ೫೯, ೩೨, ೨೯, ೭೨, ೮೫೬ ಆಗುತ್ತದೆ.[5]

ಹೀಗೆ ಮೂಲದ ೪ ಬ್ರಹ್ಮಗಣ, ೮ ವಿಷ್ಣುಗಣಗಳನ್ನು ಪುನರುಕ್ತವಾಗದಂತೆ, ಪುನರುಕ್ತವಾಗುವಂತೆ ಬಳಸಿಕೊಂಡು, ಬೇಕಿದ್ದರೆ ಚರಣಾಂತ್ಯದಲ್ಲಿ ಒಂದು ಅಂಶವನ್ನು ಹೊಂದಿಸಿಕೊಂಡು ಅನೇಕ ಉದ್ದಳತೆಯ ಚರಣಗಳು ರೂಪಗೊಳ್ಳುತ್ತಿದ್ದ ಕಾಲವೊಂದಿತ್ತು.[6] ಆಗ ಅಂಶವೃತ್ತಗಳು ತರಂಗದಿಂದ ತೊನೆಯುತ್ತಿದ್ದವು. ಇದು ಅಂಶಗಣಗಳ ಬಳಕೆಯ ಪ್ರಥಮ ಅವಸ್ಥೆ.

ದ್ವಿತೀಯ ಅವಸ್ಥೆ

ಈ ರೀತಿ ಮೂಲ ಅಂಶಗಣಗಳು ವ್ಯವಹರಿಸುತ್ತಿರುವಾಗ ಸಂಸ್ಕೃತದ ಅಕ್ಷರಗಣ ಮತ್ತು ಪ್ರಾಕೃತದ ಮಾತ್ರಾಗಣಗಳು ನಮ್ಮ ನಾಡನ್ನು ಪ್ರವೇಶಿಸಿದವು. ಇವುಗಳಲ್ಲಿ ಅಕ್ಷರಗಣದ ಪ್ರಭಾವಕ್ಕೆ ಪಕ್ಕಾಗದ ಅಂಶಗಣಗಳು, ಅನಿವಾರ್ಯವಾಗಿ ಮಾತ್ರಾಗಣದ ಪ್ರಭಾವಕ್ಕೆ ಗುರಿಯಾದವು. ಇದಕ್ಕೆ ಕಾರಣ, ಅಂಶಛಂದಸ್ಸಿನಂತೆ ಮಾತ್ರ ಛಂದಸ್ಸೂ ಲಯಾನುವರ್ತಿಯಾಗಿರುವುದು.

ಈಗ ತರಂಗಗುಣವಿಲ್ಲದ ಪ್ರಥಮಾಂಶ ಹಾಗೆಯೇ ಉಳಿದು ತರಂಗಗುಣವುಳ್ಳ ಪ್ರಥಮೇತರ ಅಂಶಗಳಲ್ಲಿ ಮಾತ್ರಾ ಛಂದಸ್ಸಿನ ಪ್ರಭಾವ ಪ್ರವೇಶ ಮಾಡಿತು. ಅಂದರೆ ಪ್ರಥಮೇತರಾಂಶಗಳಲ್ಲಿ ಒಂದು ಗುರುವಿನ (=ಗುರು ಅಂಶದ) ಬದಲು ಎರಡು ಲಘು ಬರುವುದು, ಒಂದು ಲಘುವಿನ (=ಲಘು ಅಂಶದ)ಬದಲು ಎರಡು ಲಘು ಬರುವುದು ರೂಢಿಗೊಂಡಿತು.[7] ಇದರಿಂದ ಮೂಲ ಅಂಶಗುಣಗಳು ಮಾತ್ರಾನಿಷ್ಠ ಅಂಶಗಣಗಳಾಗಿ ಬ್ರಹ್ಮ, ವಿಷ್ಣುಗಳ ಗಣಸಾಧ್ಯತೆಗಳು ಕೆಳಗಿನಂತೆ ಬೆಳೆದುನಿಂತವು.

[ಚಿತ್ರ ೦೪]

ಹೀಗೆ ೪ ಮೂಲಬ್ರಹ್ಮಗಣಗಳ ಜೊತೆಗೆ ೨ ಮಾತ್ರಾನಿಷ್ಠ ಬ್ರಹ್ಮಗಣಗಳು ಹೊಸದಾಗಿ ಹುಟ್ಟಿ, ಬ್ರಹ್ಮಗಣದ ಸಂಖ್ಯೆ ೪ ರಿಂದ ೬ಕ್ಕೇರಿತು. ಇಲ್ಲಿ ಮೂಲದ ಎರಡೂ ತರಂಗಗಣಗಳು ನಿಸ್ತರಂಗವಾದವು. ಇದೇ ರೀತಿ ಮೂಲದ ವಿಷ್ಣುಗಣಗಳು ಕೆಳಗಿನಂತೆ ಬೆಳೆದುನಿಂತವು.

[ಚಿತ್ರ ೦೫]
*

ಹೀಗೆ ೮ ಮೂಲ ವಿಷ್ಣುಗಣಗಳ ಜೊತೆ ೧೦ ಮಾತ್ರಾನಿಷ್ಠ ವಿಷ್ಣುಗಣಗಳು ಹೊಸದಾಗಿ ಹುಟ್ಟಿ, ವಿಷ್ಣುಗಣದ ಸಂಖ್ಯೆ ೮ ರಿಂದ ೧೮ಕ್ಕೇರಿತು. ಇಲ್ಲಿ ಮೂಲದ ೬ ತರಂಗಗಣಗಳು ನಿಸ್ತರಂಗವಾದವು.

ಒಟ್ಟಿನಲ್ಲಿ ಮೂಲದ ಬ್ರಹ್ಮ, ವಿಷ್ಣುವೆಂಬ ಎಲ್ಲ ೧೨ ಗಣಗಳಿಗೆ ಬದಲಾಗಿ ಮೂಲ ಮತ್ತು ಮಾತ್ರಾನಿಷ್ಠ ಬ್ರಹ್ಮ ವಿಷ್ಣುವೆಂಬ ೨೪ ಗಣಗಳು ವ್ಯವಹರಿಸತೊಡಗಿದವು. ಈಗ ಎಲ್ಲ ೮ ತರಂಗಗಳು ನಿಸ್ತರಂಗವಾದವು.

ಗಣಿತ ದೃಷ್ಟಿಯಿಂದ ಹೇಳುವುದಾದರೆ ಮೂಲ ಮತ್ತು ಮಾತ್ರಾನಿಷ್ಠ ಅಂಶ ವೃತ್ತದ ಅತಿ ಸಣ್ಣ ಚರಣ ೧ ಗಣದ್ದು, ಅಂದರೆ ೨ ಅಂಶದ್ದು. ಒಮ್ಮೆ ಬಂದ ಗಣ ಇನ್ನೊಮ್ಮೆ ಬರದಂತೆ ಯೋಜಿಸಿದರೆ ಅತಿ ದೊಡ್ಡ ಚರಣ ೨೪ ಗಣದ್ದು, ಅಂದರೆ ೬೬ ಅಂಶದ್ದು (ಬ್ರಹ್ಮದ ೧೨ ಅಂಶ, ವಿಷ್ಣುವಿನ ೫೪ ಅಂಶ).ಈ ೨ ಅಂಶ, ೬೬ ಅಂಶಗಳ ಸಂಯೋಜನೆಯಿಂದ ಅಗಣಿತ ಬಗೆಯ ಚರಣಗಳಾಗುತ್ತವೆ. ಒಂದು ವೇಳೆ ಇಲ್ಲಿಯ ಪ್ರತಿಯೊಂದು ಚರಣದ ಕೊನೆಗೆ ೧ ಅಂಶವನ್ನು ಹೆಚ್ಚಿಗೆ ಸೇರಿಸಿದರೆ ಈ ಸಂಖ್ಯೆ ದ್ವಿಗುಣಿತಗೊಳ್ಳುತ್ತದೆ. ಒಮ್ಮೆ ಬಂದ ಗಣ ಇನ್ನೊಮ್ಮೆ ಬರಲು ಅವಕಾಶ ಮಾಡಿಕೊಟ್ಟರೆ ಈ ಸಂಖ್ಯೆ ಅಗಣಿತದಿಂದ ಅನಂತಕ್ಕೇರುತ್ತದೆ. ಇಲ್ಲಿಯೂ ಪ್ರತಿಯೊಂದು ಚರಣದ ಕೊನೆಗೆ ಒಂದು ಅಂಶವನ್ನು ಹೆಚ್ಚಿಗೆ ಸೇರಿಸಿದರೆ ಈ ಅನಂತ ಸಂಖ್ಯೆ ದ್ವಿಗುಣಗೊಳ್ಳುತ್ತದೆ.

ಹೀಗೆ ೬ ಬ್ರಹ್ಮಗಣ ೧೮ ವಿಷ್ಣುಗಳಗಳನ್ನು ಪುನರುಕ್ತವಾಗದಂತೆ, ಪುನರುಕ್ತವಾಗುವಂತೆ ಯೋಜಿಸಿಕೊಂಡು, ಬೇಕಿದ್ದರೆ ಚರಣಾಂತ್ಯದಲ್ಲಿ ಒಂದು ಗುರುವನ್ನು ಹೊಂದಿಸಿಕೊಂಡು, ಅನೇಕ ಉದ್ದಳೆಯ ಚರಣಗಳನ್ನು ರೂಪಿಸಿಕೊಳ್ಳಲು ಪ್ರಾರಂಭ ಮಾಡಿದರು.

ಈ ಗಣಗಳ ಬಳಕೆ ವರ್ಧಿಸಿದಂತೆ ಅಂಶಗಣಗಳ ಶರೀರದಲ್ಲಿ ಈ ಕೆಳಗಿನ ಕೆಲವು ವ್ಯತ್ಯಾಸಗಳು ತಲೆದೋರಿದವು.

೧. ವೃತ್ತಗಳಲ್ಲಿಯ ಮೂಲ ಅಂಶಗಣಗಳು ಪಾಠಾಂತರ ಮಾಡಿಕೊಂಡು ಮಾತ್ರಾನಿಷ್ಠ ಅಂಶಗಣಗಳಾಗತೊಡಗಿದವು. ಉದಾ.

È             —             È               —
ಅಂಶಛಂದಸ್ಸು: | ಅ. ನ್ನs. ವ | ನೀ.ಡೂ.ದು | ನ.ನ್ನಿs. ಯ | ನುಡಿ. ವೂ.ದು|[8]

ÈÈ         ÈÈ             ÈÈ                 ÈÈ
ಮಾತ್ರಾ ಛಂದಸ್ಸು: | ಅ. ನ್ನವ,ನು | ನೀ. ಡುವು.ದ | ನ. ನಿನ್ನಿಯ.ನು | ನುಡಿ. ಯುವು. ದು |

ಇಲ್ಲಿ ಮಧ್ಯದ ಒಂದು ಲಘು ಅಂಶಕ್ಕೆ ಬದಲು ೨ ಲಘು, ಒಂದು ಗುರು ಅಂಶಕ್ಕೆ ಬದಲು ೨ ಲಘು ಬಂದಿರುವುದು ಗಮನಿಸಬೇಕು.

೨. ವೃತ್ತಗಳು ಸೃಷ್ಟಿಯಾಗುವಾಗ ಅಂಶಗಣಗಳ ಮಧ್ಯೆ ಕಣ್ಣು ತಪ್ಪಿಸಿ ಮಾತ್ರಾನಿಷ್ಠ ಅಂಶಗಣಗಳೂ ಅಲ್ಲಲ್ಲಿ ಸೇರತೊಡಗಿದವು. ಉದಾ.

|ಸ. ತ್ಯ. ರ |ನುಡಿ. ತೀ. ರ್ಥ | ನಿ. ತ್ಯ. ರ. |ನಡೆ. ತೀ. ರ್ಥ|
|ಉ. ತ್ತಮ. ರ. |ಸಂ. ಗ|ವದು. ತೀ. ರ್ಥ |ಹರಿ, ವ. ನೀ|
|ರೆ. ತ್ತಣ. |ದು. ತೀ. ರ್ಥ|ಸ.ರ್ವ. ಜ್ಞ|

ಇಲ್ಲಿ ಎಲ್ಲವೂ ಮೂಲಂಶಗಣಗಳಾಗಿದ್ದರೆ. “ಉ. ತ್ತಮ. ರ” ಮತ್ತು “ರೆ. ತ್ತಣ.ದು.” ಮಾತ್ರಾನಿಷ್ಠ ಅಂಶಗಣಗಳಾಗಿವೆ.

೩. ಮೂಲ ಅಂಶಛಂದಸ್ಸಿನ ಪದ್ಯವನ್ನು ಮಾತ್ರಾನಿಷ್ಠ ಅಂಶಛಂದಸ್ಸಿನ ದೃಷ್ಟಿಯಿಂದ ಹೇಳುವುದು ಪ್ರಾರಂಭವಾಯಿತು. ಅಂದರೆ ಪ್ರಥಮೇತರ ಸ್ಥಾನದ ಲಘುರೂಪದ ಎರಡು ಸ್ವತಂತ್ರ ಅಂಶಗಳನ್ನು ಒಂದು ಅಂಶವನ್ನಾಗಿ ಭಾವಿಸುವುದು ರೂಢವಾಯಿತು. ಉದಾ.

ವಿ        ಬ್ರ            ವಿ          ಬ್ರ          ವಿ               ವಿ     ಗು
ಮುರ. ರಿs.ಪು|ಬೊ.ಮ್ಮಂ|ಮುರ.ರಿs.ಪು|ಬೊ.ಮ್ಮಂ|ಮುರ.ರಿs. ಪು.|ಶೂ. ಲs.ಧ|ರಂ
ನಾಗವರ್ಮನ ಪ್ರಕಾರ ಮೇಲಿನಂತೆ ಇದರ ಪ್ರಸ್ತಾರ. ಆದರೆ ಇಂದು

ಬ್ರ            ಬ್ರ       ಬ್ರ            ಬ್ರ        ಬ್ರ          ಬ್ರ   ಗು
|ಮುರ.ರಿಪು|ಬೊ.ಮ್ಮಂ|ಮುರ. ರಿಪು|ಬೊ.ಮ್ಮಂ|ಮುರ. ರಿಪು|ಶೂ.ಲಧ|ರಂ

ಹೀಗೆ ಸರ್ವ ಬ್ರಹ್ಮಲಯದಲ್ಲಿ ಹೇಲುತ್ತಾರೆ. ಮೂಲತಃ ಸ್ವತಂತ್ರವಾಗಿದ್ದ ರಿs, ಪು. ಎಂಬ ಎರಡು ತರಂಗ ಅಂಶಗಳು ಹೊಂದಿಕೊಂಡು ಒಂದು ನಿಸ್ತರಂಗ ಅಂಶವು ರೂಪತಾಳಿದೆ. ಹಾಗೆಯೇ ಲs, ಧ, ಎಂಬ ಎರಡು ಸ್ವತಂತ್ರ ತರಂಗ ಅಂಶಗಳು ಹೊಂದಿಕೊಂಡು ಒಂದು ನಿಸ್ತರಂಗ ಅಂಶವು ರೂಪತಾಳಿದೆ.

೪. ಮಾತ್ರಾನಿಷ್ಠ ಅಂಶಛಂದಸ್ಸಿನ ಪದ್ಯವನ್ನು ಮೂಲ ಅಂಶಛಂದಸ್ಸಿನ ದೃಷ್ಟಿಯಿಂದ ನೋಡುವುದೂ ಪ್ರಾರಂಭವಾಯಿತು. ಉದಾ.

ವಿ               ವಿ              ವಿ            ಬ್ರ
|ಹಗ.ಲೆ.ನ್ನದೆ | ಇರು.ಳೆ.ನ್ನದೆ|ಗಗ.ನಾಂ.ಗಣ|ದ.ಲ್ಲಿ|

ಈ ಪದ್ಯದ ನಿಜವಾದ ಪ್ರಸ್ತಾರವಿದು. ಆದರೆ ಪ್ರಥಮೇತರ ಸ್ಥಾನದಲ್ಲಿ ಗುರುವಿದ್ದರೂ ಒಂದು ಅಂಶ, ಲಘುವಿದ್ದರೂ ಒಂದು ಅಂಶವೆಂದು ನಂಬಿದ ಕನ್ನಡ ಕೈಪಿಡಿನಿಷ್ಠರು.

ರು        ರು                 ರು       ಬ್ರ
|ಹಗ.ಲೆ.ನ್ನ.ದೆ|ಇರು.ಳೆ.ನ್ನ.ದೆ|ಗಗ.ನಾಂ.ಗ.ಣ|ದ.ಲ್ಲಿ|

ಎಂದು ಈ ಪದ್ಯದ ಛಂದಸ್ಸನ್ನು ತಪ್ಪಾಗಿ ಭಾವಿಸುತ್ತಾರೆ. ಕಿವಿಯ ಛಂದಸ್ಸು ಕಣ್ಣಿನ ಛಂದಸ್ಸಾದುದರ ಫಲವಿದು.

ಮಾತ್ರಾ ಛಂದಸ್ಸಿನ ಆಗಮನದಿಂದ ಹೀಗೆ ಅಂಶ ಛಂದಸ್ಸು ತನ್ನ ಮೂಲ ಲಯ ವಿನ್ಯಾಸವನ್ನು ಬದಲಿಸಿಕೊಂಡಿತು. ಇದರಿಂದ ತರಂಗಗಣಗಳೆಲ್ಲ ನಿಸ್ತರಂಗಗೊಂಡು ಲಯದ ಮೇಲಿನ ಒತ್ತು ತಾಳದ ಮೇಲೆ ಬಂದಿತು. ಅಂಶಛಂದಸ್ಸು ‘ನಾದಯುಕ್ತಾ, ತಾಲಮುಕ್ತಾ’ ಎಂಬ ಮಾತು, ‘ನಾದಮುಕ್ತಾ, ತಾಳಯುಕ್ತಾ’ ಎಂದು ತಿರುವು ಮುರುವಾಯಿತು.

[1] ಕೆ. ಶಿವರಾಮ ಐತಾಳ, ಅಂಶಲಯ ವಿಚಾರ, (ಹೊಸ ಬೆಳಕು, ಪು. ೧೩೧)

ಅ. ಪ್ರಥಮಾಂಶದಲ್ಲಿ ಒಂದು ಗುರು ಇಲ್ಲವೆ ಎರಡು ಲಘು ಬರಬೇಕು. ಪ್ರಥಮೇತರಾಂಶಗಳಲ್ಲಿ ಒಂದು ಗುರು ಇಲ್ಲವೆ ಒಂದು ಲಘು ಬರಬೇಕು. ಈ ಎರಡು ನಿಯಮಗಳ ಪರಿಷ್ಕರಣ ಕಾರ್ಯ ನಡೆಯಬೇಕಾಗಿದೆ.

ಆ. ಮಾತ್ರಾ ಛಂದಸ್ಸಿನ ಪರಿಭಾಷೆಯಿಂದ ಅಂಶಛಂದಸ್ಸನ್ನು ಬೋಧಿಸುವುದು ಎಷ್ಟರಮಟ್ಟಿಗೆ ಸಾಧುವೆಂಬುದನ್ನು ವಿವೇಚಿಸಬೇಕಾಗಿದೆ.

[2] ಇಲ್ಲಿ ‘ಗುರು’ ಶಬ್ದಕ್ಕೆ ಬದಲು ದೀರ್ಘ ಶಬ್ದವನ್ನು ಬಳಸುವುದು ಹೆಚ್ಚು ಶಾಸ್ತ್ರೀಯ.

[3] ಚರಣಮಧ್ಯದಲ್ಲಿ ‘೧ವಿ+೧ಗು’ ಬಂದಿದ್ದರೆ ವಾಸ್ತವವಾಗಿ ಅಲ್ಲಿ ಚರಣ ಮುಗಿದಿರುತ್ತದೆ.

[4] ಪ್ರಥಮೇತರಾಂಶದಂತೆ ಪ್ರಥಮಾಂಶವೂ ಒಂದು ಗುರುವಾಗಿರಬಹುದು ಇಲ್ಲವೆ ಒಂದು ಲಘುವಾಗಿರಬಹುದು ಎಂಬ ನಿಯಮ ತೀರ ಪ್ರಾಚೀನ ಕಾಲದಲ್ಲಿದ್ದಿತೇನೋ. ತಮಿಳು ಛಂದೋಗ್ರಂಥಗಳ್ಲಿ ಇದಕ್ಕೆ ಮನ್ನಣೆಯಿದೆ. ಕನ್ನಡ ಜನಪದ ಸಾಹಿತ್ಯದಲ್ಲಿಯೂ ಇದಕ್ಕೆ ನಿದರ್ಶನಗಳು ಸಿಗುತ್ತವೆ.

ಉದಾ: |ಕಡ. ಲಿs. ಕಾ |ಳs.ತಿಂ. ದು|ಮಡ. ದs. ನೀ|ರ.ಕು.ಡ್ಡು|

[5] ಶ್ರಮವಹಿಸಿ ಈ ಲೆಕ್ಕ ಮಾಡಿಕೊಟ್ಟವರು ಕರ್ನಾಟಕ ವಿಶ್ವವಿದ್ಯಾಲಯದ ಗಣಿತ ವಿಭಾಗದ  ಪ್ರಾಧ್ಯಾಪಕರಾದ ಸ್ನೇಹಿತ ಡಾ. ವ್ಹಿ. ಎನ್‌. ಕುಲಕರ್ಣಿಯವರು.

[6] ನಮಗೆ ಗೊತ್ತಿರುವಂತೆ ಇವುಗಳಲ್ಲಿ ಈಗ ಶುದ್ಧ ಅಂಶನಿಷ್ಠವಾಗಿರುವುದೆಂದರೆ ಸಾಂಗತ್ಯವೃತ್ತ. ಆದರೆ ಕೆಲವರು ಇಲ್ಲಿಯೂ ಅಂಶನಿಯಮ ಮೀರಿದ್ದಾರೆ.

[7] ಈ ಸಂಗತಿಯನ್ನು ಕೈಪಿಡಿಕಾರರು, ಡಾ. ಡಿ. ಎಸ್‌. ಕರ್ಕಿ ಅವರು ಗುರುತಿಸಿದ್ದಾರೆ. ನೋಡಿರಿ. ಕನ್ನಡ ಕೈಪಿಡಿ (೧೯೫೫), ಪು. ೯೯, ಕನ್ನಡ ಛಂದೋವಿಕಾಸ ೧೯೫೬, ಪು. ೬೬-೬೭

* ಈ ನಾಲ್ಕು, ಮಾತ್ರಾನಿಷ್ಠ ಅಂಶಗಣಗಳಾಗಿದ್ದರೂ ಇಲ್ಲಿ ಲಘು ಅಂಶಗಳು ಉಳಿದುಕೊಂಡ ಕಾರಣ ತರಂಗಕ್ಕೆ ಅವಕಾಶವುಂಟು.

[8] ಸರ್ವಜ್ಞನು ಶುದ್ಧ ಅಂಶಛಂದಸ್ಸಿನಲ್ಲಿ ಬರೆದಿದ್ದರೆ ಇದ್ದಿರಬಹುದಾದ ಚರಣವಿದು.