ತೀ.ನಂ.ಶ್ರೀ ಬದುಕಿದ್ದು ಹೊಸಗನ್ನಡ ಅನಾವರಣಗೊಂಡು, ಹೊಸಹೊಸ ಪ್ರಯೋಗಗಳು ಆಕಾರ ಪಡೆಯುತ್ತಲಿದ್ದ ಕಾಲದಲ್ಲಿ. ಈ ಸಂದರ್ಭದ ವ್ಯಕ್ತಿಗಳಿಗೆ ಅನೇಕ ಅವಕಾಶಗಳಿರುತ್ತವೆ. ಆಹ್ವಾನಗಳೂ ಇರುತ್ತವೆ. ಈ ಎರಡೂ ಆಯಾಮಗಳಿಗೆ ಸರಿಯಾಗಿ ಸ್ಪಂದಿಸಿದವರು, ತೀ.ನಂ.ಶ್ರೀ.

ಕನ್ನಡದಲ್ಲಿ ತೀ.ನಂ.ಶ್ರೀ ಮಾಡಿದ ಕೆಲಸ ಎರಡು ಬಗೆಯಾಗಿದೆ: ಹಳೆಯ ವಿಷಯವನ್ನು ಹೊಸ ದೃಷ್ಟಿಯಿಂದ ಪರಾಮರ್ಶಿಸಿದುದು, ಹೊಸ ವಿಷಯವನ್ನು ವಿದ್ವತ್‌ಲೋಕಕ್ಕೆ ಪರಿಚಯಿಸಿದುದು. ಛಂದಸ್ಸಿಗೆ ಸಂಬಂಧಪಟ್ಟಂತೆ ಇವರು ಮಾಡಿದ್ದು, ಹಳೆಯ ಶಾಸ್ತ್ರವನ್ನು ಹೊಸ ರೀತಿಯಲ್ಲಿ ಪರಾಮರ್ಶಿಸಿದ್ದು.

ವಿದ್ವಾಂಸ ತೀ.ನಂ.ಶ್ರೀ ಅವರಂತೆ ವ್ಯಕ್ತಿ ತೀ.ನಂ.ಶ್ರೀ ಅವರು ಅಷ್ಟೇ ದೊಡ್ಡವರು. ಹೀಗಾಗಿ ತಮ್ಮ ವಿದ್ವತ್ತಿನಿಂದಾಗಿ ನಮ್ಮ ಜ್ಞಾನದ ಒಂದು ಭಾಗವಾಗಿ ಬೆಳೆದ ಅವರು, ತಮ್ಮ ವ್ಯಕ್ತಿತ್ವದಿಂದಾಗಿ ನಮ್ಮ ಭಾವನೆಯ ಭಾಗವಾಗಿಯೂ ಉಳಿದಿದ್ದಾರೆ. ತೀ.ನಂ.ಶ್ರೀ ಅವರು ಪ್ರತಿಪಾದಿಸಿರುವ ಛಂದಸ್ಸಿನ ವಿಷಯವಾಗಿ ವಿಮರ್ಶೆ ಮಾಡುವಾಗ ಈ ಭಾವನಾತ್ಮಕ ಸಂಬಂಧ ಒಮ್ಮೊಮ್ಮೆ ಅಡ್ಡ ಬರುತ್ತದೆ. ಒಂದು ಮಾತು ನಿಜ, ಅವರ ಕೆಲವು ನಿಲುವುಗಳನ್ನು  ನಾವು ಒಪ್ಪಲಿಕ್ಕಿಲ್ಲ. ಆದರೆ ಅವರು ನಮಗೆ ಛಂದಸ್ಸಿನ ವಿಷಯದಲ್ಲಿ ಹೊಸ ದಾರಿ ತೋರಿದ್ದು ಸುಳ್ಳಲ್ಲ.

ಭಾರತೀಯ ಕಾವ್ಯಮೀಮಾಂಸೆಗೆ ಸಂಬಂಧಿಸಿದಂತೆ ತೀ.ನಂ.ಶ್ರೀ. ದೊಡ್ಡ ಕೆಲಸ ಮಾಡಿದ್ದಾರೆ. ಇದರೊಂದಿಗೆ ಹೋಲಿಸಿದರೆ ಅವರು ಮಾಡಿದ ಛಂದಸ್ಸಿನ ಕೆಲಸ ಪ್ರಮಾಣದಲ್ಲಿ ಸಣ್ಣದಾದರೂ ಗುಣಾತ್ಮಕವಾಗಿ ಗಮನಾರ್ಹವಾಗಿದೆ. ಬಿ.ಎಂ.ಶ್ರೀ ಅವರ ‘ಇಂಗ್ಲಿಷ್‌ಗೀತೆಗಳು’ಕೃತಿಯ ಮುನ್ನುಡಿ (೧೯೫೩), ‘ಸಮಾಲೋಕನ’ದಲ್ಲಿ ಸಂಕಲಿತವಾದ ‘ಕನ್ನಡದಲ್ಲಿ ಹೊಸ ಮಟ್ಟುಗಳಿರುವ ಅವಶ್ಯಕತೆ’,[1] ‘ಹೊಸ ಛಂದಸ್ಸಿನ ಲಯಗಳು’,[2] ‘ಮಾತ್ರೆ ಮುಡಿ ಪದ್ಮಗಣ’,[3] ‘ಅಪೂರ್ವ ಷಟ್ಪದಿಯ ಲಕ್ಷಣ’,[4] ಪುಸ್ತಕ ಪ್ರಪಂಚದಲ್ಲಿ (೧-೪) ಪ್ರಕಟವಾದ ‘ಶ್ರೀಯವರ ಕೃತಿಗಳು’-ಆ ಆರು ಲೇಖನಗಳು ಛಂದಸ್ಸಿಗೆ ತೀ.ನಂ.ಶ್ರೀ ನೀಡಿದ ಕೊಡುಗೆಗಳಾಗಿವೆ. ಇಂದು ಸಾಹಿತ್ಯಕ್ಕೆ ಸಂಬಂಧಪಟ್ಟ ಶಾಸ್ತ್ರಗಳಲ್ಲಿ ವ್ಯಾಕರಣವು ಭಾಷಾಶಾಸ್ತ್ರವಾಗಿ ಬೆಳೆದಿದೆ; ಕಾವ್ಯಮೀಮಾಂಸೆಯು ವಿಮರ್ಶಾಶಾಸ್ತ್ರದ ಹೊಳಪಿನಿಂದ ಝಳಪಿಸುತ್ತಲಿದೆ. ನಿಘಂಟುಶಾಸ್ತ್ರವು ನಿಘಂಟಿಮವಾಗಿ ಬೆಳೆಯತೊಡಗಿದೆ. ಛಂದಸ್ಸಿನ ಅಧ್ಯಯನ ಮಾತ್ರ ನವೀಕರಣಗೊಳ್ಳದೆ ಹಳೆಯ ದಾರಿಯಲ್ಲಿಯೇ ತೆವಳುತ್ತ ನಡೆದಿದೆ. ಹೀಗಿದ್ದೂ ೧೯೩೧ರಷ್ಟು ಪೂರ್ವದಲ್ಲಿ, ಅಂದರೆ ಇಂದಿಗೆ ೬೦ ವರ್ಷಗಳಷ್ಟು ಹಿಂದೆಯೂ ತೀ.ನಂ.ಶ್ರೀ ಕನ್ನಡ ಛಂದಸ್ಸಿನ ಬಗ್ಗೆ ಹೊಸ ವಿಚಾರ ಹೇಳಲು ಮನಸ್ಸು ಮಾಡಿದುದು, ಅವರ ಅನ್ವೇಷಣದೃಷ್ಟಿಗೆ ನಿದರ್ಶನಿಸಿದೆ.

‘ಇಂಗ್ಲಿಷ್‌ಗೀತೆಗಳು’ ಲೇಖನದ ಎರಡನೆಯ ಭಾಗವು, ಬಿ.ಎಂ.ಶ್ರೀ ಪೂರ್ವದಲ್ಲಿ ಎಸ್‌.ಜಿ. ನರಸಿಂಹಾಚಾರ್‌, ಪಂಜೆ, ಪೈ, ಹಟ್ಟಿಯಂಗಡಿ ನಾರಾಯಣರಯರಿಂದ ನಡೆದ ಹೊಸಗನ್ನಡ ಛಂದೋಪ್ರಯೋಗಗಳ ಪರಿಶೀಲನೆಯನ್ನೊಳಗೊಂಡಿದೆ. ಮೂರನೆಯ ಭಾಗದಲ್ಲಿ ಬಿ.ಎಂ.ಶ್ರೀ ಅನುವಾದಗಳ ಅನ್ವಯಿಕ ಛಂದೋವಿವೇಚನೆಯಿದೆ. ‘ಕನ್ನಡದಲ್ಲಿ ಹೊಸಮಟ್ಟುಗಳಿರುವ ಅವಶ್ಯತೆ’ ಲೇಖನ ನಮ್ಮ ಪ್ರಾಚೀನ ಛಂದೋಚರಿತ್ರೆಯನ್ನೂ, ಅದು ಆಧುನಿಕವಾಗಿ ಬಿಚ್ಚಿಕೊಂಡ ರೀತಿಯನ್ನೂ ತಿಳಿಸುತ್ತದೆ. ಇದರ ಮಂದುವರಿಕೆಯೆಂಬಂತೆ ‘ಹೊಸ ಛಂದಸ್ಸಿನ ಲಯಗಳು’ ಎಂಬ ಲೇಖನವಿದ್ದು, ಹೆಸರೇ ಸೂಚಿಸುವಂತೆ ಇದು ಆಧುನಿಕ ಕವನಗಳಲ್ಲಿ ಬಳಕೆಯಾದ ಲಯಗಳ ಶೋಧ, ವಿನ್ಯಾಸಗಳ ವಿವೇಚನೆಯನ್ನೋಳಗೊಂಡಿದೆ. ಈ ಲೇಖನಕ್ಕೆ ಅನುಬಂಧ ರೂಪದಲ್ಲಿರುವ ಮಾತ್ರೆ, ಮುಡಿ, ಪದ್ಮಗಣ ಎಂಬ ಲೇಖನ ಲಯಗಳಿಗೆ ಪೂರಕವೆನಿಸುವ ವಿಚಾರಗಳನ್ನು ತಿಳಿಸುತ್ತದೆ. ಹೀಗಾಗಿ ಕೊನೆಯ ಮೂರು ಲೇಖನಗಳನ್ನು  (ಕನ್ನಡದಲ್ಲಿ ಹೊಸ ಮಟ್ಟುಗಳಿರುವ ಅವಶ್ಯಕತೆ, ಹೊಸ ಛಂದಸ್ಸಿನ ಲಯಗಳು, ಮಾತ್ರೆ-ಮುಡಿ-ಪದ್ಮಗಣ) ಅಖಂಡವೆಂದು ಭಾವಿಸಬೇಕಾಗುತ್ತದೆ. ‘ಇಂಗ್ಲಿಷ್‌ಗೀತೆಗಳು’ ಲೇಖನದಂತೆ ‘ಶ್ರೀಯವರ ಕೃತಿಗಳು’, ‘ಅಪೂರ್ವ ಷಟ್ಪದಿಯ ಲಕ್ಷಣ’ ಎಂಬಿವು ಪ್ರತ್ಯೇಕ ಲೇಖನಗಳಾಗಿ ನಿಲ್ಲುತ್ತವೆ.

ತೀ.ನಂ.ಶ್ರೀ ಅವರ ಈ ಒಟ್ಟು ವಿಚಾರಗಳನ್ನು ಛಂದಸ್ಸಿಗೆ, ಪ್ರಾಚೀನ ಛಂದಸ್ಸಿಗೆ ಮತ್ತು ಹೊಸಗನ್ನಡ ಛಂದಸ್ಸಿಗೆ ಸಂಬಂಧಪಟ್ಟವು ಎಂದು ಮೂರು ವಿಧದಲ್ಲಿ ವರ್ಗೀಕರಿಸಿ ಪರಿಶೀಲಿಸಬಹುದು.

೧. “ಕವಿ ತನ್ನ ಭಾವನೆಗಳಿಗೆಲ್ಲ ಮೊದಲು ಮಾತಿನ ರೂಪ ಕೊಟ್ಟು, ಬಳಿಕ ಪಾಕವನ್ನು… ಕೆಲವು ವೃತ್ತ (Stanza)ಗಳಲ್ಲಿ ತುಂಬಿಡುವುದಿಲ್ಲ. ಕವಚಧಾರಿಯಾಗಿ ಕರ್ಣ ಜನಿಸಿದಂತೆ, ಭಾವಗಳು ಕವಿಯ ಹೃದಯದಿಂದ ಛಂದೋಬದ್ಧವಾಗಿಯೇ ರೂಪುದಳೆದು ಹೊರಬೀಳುತ್ತವೆ. ಒಂದು ಪದ್ಯಬಂಧಕ್ಕೂ ಅದರಲ್ಲಿ ವ್ಯಕ್ತಭಾವದ ಓಟ ತಡೆ ತಿರುವುಗಳು ಅನುಸರಿಸುತ್ತವೆ” (೧೭೫).. “ಚರಣ ರಚನೆಯಲ್ಲಿ ಗಮನಿಸಬೇಕಾದದ್ದು ಗಣವೇ ಹೊರತು ಮಾತ್ರೆಯಲ್ಲ” (೧೮೭)- ಎಂಬ ತೀ.ನಂ.ಶ್ರೀ ಮಾತುಗಳು ಛಂದಸ್ಸಿನ ಮೂಲಸತ್ಯಗಳಾಗಿವೆ. ಇಂಥ ಅನೇಕ ಛಂದೋ ಮೂಲಸತ್ಯಗಳನ್ನು ಅವರು ತಮ್ಮ ಲೇಖನಗಳಲ್ಲಿ ಮಂಡಿಸಿದ್ದಾರೆ.

೨. “ದ್ರಾವಿಡ ಛಂದಸ್ಸು ಮರೆಗೊಂಡದ್ದು ಆರ್ಯ ಛಂದಸ್ಸಿನ ಪ್ರಾಬಲ್ಯದಿಂದ” (೧೭೧). “ನಮ್ಮ ಪ್ರಾಚೀನರು ಮೊದಮೊದಲು ಶ್ಲೋಕ (ಅನುಷ್ಟುಭ್‌), ಇಂದ್ರವಜ್ರ ಮೊದಲಾದ ವಿಧವಿಧದ ವೃತ್ತಗಳನ್ನೆಲ್ಲ ಕನ್ನಡಕ್ಕೆ ಒದಗಿಸಲು ಪ್ರಯತ್ನಪಟ್ಟು… ಸರಿಹೋಗದೆ ಕೈಬಿಟ್ಟರು” (೧೭೫). ‘ಇದುವರೆಗೆ ಗೊತ್ತಾಗಿರುವ ಮಟ್ಟಿಗೆ ಇವು (ಷಟ್ಪದಿ) ಹೆರವರಿಂದ ಸ್ವೀಕರಿಸಿದ ದತ್ತುಪುತ್ರರಲ್ಲ, ಕನ್ನಡಕ್ಕೆ ಮನೆಯ ಮಕ್ಕಳು. ಷಟ್ಪದಿಗಳ ತಳಹದಿ ಕನ್ನಡ ಭಾಷೆಯ ಸಹಜಗತಿಯ ಅಡಿಗಲ್ಲಿನ ಮೇಲೆ ಭದ್ರವಾಗಿ ಕುಳಿತಿದೆ” (೧೭೩). “ಕನ್ನಡ ಛಂದಸ್ಸು ವಿಸ್ತರಿಸಿದಂತೆಲ್ಲ, ಮಾರ್ಪಾಡು ಹೊಂದಿದಂತೆಲ್ಲ ಛಂದೋಂಬುಧಿಯ ಪಾಠವೂ ಬಗೆಬಗೆಯಾಗಿ ರೂಪತಳೆಯಿತು. ಛಂದೋಂಬುಧಿಯಾಗಿ ಪಾಠಭೇದಗಳ ಚರಿತ್ರೆ ಕನ್ನಡ ಛಂದಸ್ಸಿನ ಚರಿತ್ರೆ ಒಂದು ರೀತಿಯ ಪ್ರತೀಕವಾಗಿದೆ” (೨೨೩).

ಈ ಹೇಳಿಕೆಗಳು ಪ್ರಾಚೀನ ಕನ್ನಡ ಛಂದಸ್ಸಿನ ಚರಿತ್ರೆಯ ಸ್ಥಿತಿಗತಿಗಳನ್ನು ತಿಳಿಸಿಕೊಡುವ ಸೂತ್ರವಾಕ್ಯಗಳಾಗಿವೆ. ಇವುಗಳನ್ನೇ ತಳಹದಿಯಾಗಿಟ್ಟುಕೊಂಡು ಒಂದೊಂದು ಸ್ವತಂತ್ರ ಲೇಖನವನ್ನೇ ಬರೆಯಬಹುದು. ಇಲ್ಲೆಲ್ಲ ತೀ.ನಂ. ಶ್ರೀ ಅವರ ಚಾರಿತ್ರಿಕ ಪ್ರಜ್ಞೆ, ಛಂದೋಪರಿಜ್ಞಾನ ಸ್ಪುಟವಾಗಿ ವ್ಯಕ್ತಗೊಂಡಿದೆ.

೩. ಇವುಗಳಿಗಿಂತ ಹೊಸಗನ್ನಡ ಛಂದಸ್ಸಿಗೆ ಸಂಬಂಧಪಟ್ಟ ಅವರ ಶೋಧಗಳಿಗೆ ಹೆಚ್ಚಿನ ಬೆಲೆಯಿದೆ. ಪ್ರಾಚೀನ ಕಾಲದಲ್ಲಿಯೇ ಕೀರ್ತನೆ, ಹಾಡು, ಯಕ್ಷಗಾನಗಳಲ್ಲಿ “ಛಂದಶಾಸ್ತ್ರದ ಅತಿನಿಯಮದ ಕಟ್ಟುಗಳನ್ನು ಕಳಚಿ ಹೊಸ ಹೊಸ ಸಿದ್ದಿಗಳನ್ನು ಪಡೆಯುವ ಪ್ರಯತ್ನ” (೧೭೮) ಕಂಡುಬಂದರೂ, ಅಕ್ಷರವೃತ್ತ, ಕಂದಪ್ರಿಯರಾದ ವಿದ್ವತ್‌ಕವಿಗಳಿಂದ ಇಂಥ ಪ್ರಯತ್ನಗಳು ತಿರಸ್ಕೃತವಾಗಿದ್ದವು. “ಹೀಗೆ ಬಹಿಷ್ಕೃತರನ್ನು ಉದ್ಧರಿಸುವ ಕಾರ್ಯವು ನಮ್ಮ ಛಂದಸ್ಸಿನಲ್ಲಿ ಈಗ ನಡೆಯುತ್ತಿದೆ.” (೧೭೮) ಎಂದೂ, ಇದಕ್ಕೆ ಪ್ರಚೋದನೆ ನೀಡಿದುದು ಇಂಗ್ಲಿಷ್‌ಪದ್ಯಸಾಹಿತ್ಯವೆಂದೂ ‘ಕನ್ನಡದಲ್ಲಿ ಹೊಸ ಮಟ್ಟುಗಳಿರುವ ಅವಶ್ಯಕತೆ’ ಎಂಬ ಲೇಖನದಲ್ಲಿ ಸರಿಯಾಗಿಯೇ ಗುರುತಿಸಿದ್ದಾರೆ.

‘ಹೊಸ ಛಂದಸ್ಸಿನ ಲಯಗಳು’, ‘ಮಾತ್ರೆ ಮುಡಿ ಪದ್ಮಗಣ’ ಲೇಖನಗಳಲ್ಲಿಯದು ತೀರ ಹೊಸ ವಿಚಾರವಾಗಿದ್ದು, ಆ ಕಾರಣದಿಂದಾಗಿಯೇ ಅದು ಪರಿಶೀಲನಯೋಗ್ಯವಾಗಿದೆ. ಮಾತ್ರಾಛಂದಸ್ಸು ಕಿವಿಗೂ ಕಣ್ಣಿಗೂ ಒಂದೇ ರೀತಿಯಲ್ಲಿ ವ್ಯವಹರಿಸುತ್ತಿದ್ದರೆ, ಅಂಶಛಂದಸ್ಸು ಕಿವಿಗೆ ಒಂದು ರೀತಿ, ಕಣ್ಣಿಗೆ ಇನ್ನೊಂದು ರೀತಿಯಲ್ಲಿ ವ್ಯವಹರಿಸುತ್ತದೆ. ಹೀಗಾಗಿ ತೀ.ನಂ.ಶ್ರೀ ಅವರು ಇಲ್ಲಿ ಕಿವಿಯ ಛಂದಸ್ಸನ್ನು ಕುರಿತು ಚರ್ಚಿಸುತ್ತಾರೋ, ಕಣ್ಣಿನ ಛಂದಸ್ಸನ್ನು ಕುರಿತು ಚರ್ಚಿಸುತ್ತಾರೋ, ಕಿವಿಯ ಛಂದಸ್ಸನ್ನು ಕಣ್ಣಿನ ಛಂದಸ್ಸಿನ ಪಾತಳಿಗಳಿಗೆ ತಂದು ಚರ್ಚಿಸುತ್ತಾರೋ, ಒಮ್ಮೊಮ್ಮೆ ಇದನ್ನು ಮೀರಿ ಹಾಡಿನ ಗತಿಗತ್ತುಗಳನ್ನು  ಚರ್ಚಿಸುತ್ತಾರೋ ಎಂಬ ಸಂದೇಹಗಳು ಈ ಎರಡು ಲೇಖನಗಳಲ್ಲಿ ಉಳಿದುಕೊಂಡಿವೆ. ವಿದ್ಯಾರ್ಥಿಗಳಿಗೆ ಸರಿಯಾಗಿ ತಿಳಿಯಲೆಂಬ ಕಳಕಳಿಯಿಂದ, ಹೇಳಿದ್ದನ್ನೇ ಹೇಳುವ ಪ್ರಾಧ್ಯಾಪಕನಂತೆ ಈ ಲೇಖನಗಳಲ್ಲಿಯ ಪುನರುಕ್ತತೆ ಕೆಲವೊಮ್ಮೆ ಗೊಂದಲ ಹುಟ್ಟಿಸುತ್ತದೆ. ವಿಷಯದ ಗಹನೆಯಿಂದಾಗಿ ಆ ಗೊಂದಲ ಇನ್ನೂ ವರ್ಧಿಸುತ್ತದೆ. ಆದುದರಿಂದ ಈ ಎರಡೂ ಲೇಖನಗಳ ಮರುಪರಿಶೀಲನೆ, ವಿದ್ವತ್‌ವಿವೇಚನೆ ಅವಶ್ಯವೆನಿಸಿದೆ.

ಅ. “ಹೊಸ ಛಂದಸ್ಸಿನಲ್ಲಿ ಅನಾಯಕತೆ ತಾಂಡವಾಡುತ್ತಿರುವಂತೆ ಭಾಸವಾಗಬಹುದು. ಆದರೆ ಒಳಹೊಕ್ಕು ಪರಿಶೀಲಿಸಿದರೆ ಇಲ್ಲಿರುವುದು ವೈವಿಧ್ಯವೇ ಹೊರತು ಸ್ವಚ್ಛಂದತೆಯಲ್ಲವೆಂದು ಸ್ಪಷ್ಟವಾಗುತ್ತದೆ.” (೧೮೦) ಎನ್ನುತ್ತ, ಆಧುನಿಕ ಕವಿಗಳು ೩ ಮಾತ್ರೆ, ೪ ಮಾತ್ರೆ, ೫ ಮಾತ್ರೆ, ೬ ಮಾತ್ರೆ, ೩+೪ ಮಾತ್ರೆ, ೩+೫ ಮಾತ್ರೆಯ ಗಣಗಳನ್ನು ರೂಪಿಸಿಕೊಂಡಿದ್ದಾರೆ ಎಂಬು ವಿಚಾರವನ್ನು ತೀ.ನಂ.ಶ್ರೀ ನಮ್ಮ ಮುಂದಿಡುತ್ತಾರೆ. ಮುಂದುವರಿದು ೩+೪ ರದು ೭ ಮಾತ್ರೆಯ ಗಣ, ೩+೫ ರದು ೮ ಮಾತ್ರೆಯ ಗಣ ಎನ್ನುತ್ತ, ಆ ಕಡೆ ೨ ಮಾತ್ರೆ ಗಣ, ಈ ಕಡೆ ೯ ಮಾತ್ರೆಯ ಗಣಗಳೂ ಸಾಧ್ಯವೆಂದು ಹೇಳುತ್ತಾರೆ. ಆದರೆ ನಮ್ಮ ಪ್ರಾಚೀನರು ಹೇಳಿರುವ ೩ ಅಂಶಗಳ ವಿಷ್ಣುಗಣ ಅಂದರೆ ೬ ಮಾತ್ರೆಯ ಗಣ, ೪ ಅಂಶಗಳ ರುದ್ರಗಣ ಅಂದರೆ ೮ ಮಾತ್ರೆಯ ಗಣಗಳ ಅಸ್ತಿತ್ವವೇ ನಮಗೆ ಸಂದೇಹ ಹುಟ್ಟಿಸುತ್ತಿರುವಾಗ ೯ ಮಾತ್ರೆಗಳ ಗಣ ಬಗೆಗಿನ[5] ತೀ.ನಂ.ಶ್ರೀ ವಿಚಾರ ಇನ್ನೂ ಸಂದೇಹ ಹುಟ್ಟಿಸುತ್ತದೆ.

ಆ. ಒಂದು ಲಘುವಿನ ಮುಂದೆ ಒಂದು ಗುರು ಬರುವಿಕೆಯಿಂದ ಆರಂಭವಾಗುವುದು ‘ವಿಷಯ ಗಣ’. ಇಂಥ ಶ್ರಾವ್ಯವಲ್ಲವೆಂದು ತೀ.ನಂ.ಶ್ರೀ ಹೇಳುವರಾದರೂ ಇದು ಅವರ ಹೊಸ ವಿಚಾರವಲ್ಲ. ನಮ್ಮ ಪ್ರಾಚೀನರು ತ್ಯಾಜ್ಯವೆನ್ನುವ ‘ಜಗಣ’ವನ್ನೇ ಇವರು ‘ವಿಷಮಗಣ’ ಎಂದು ಕರೆದಿದ್ದಾರೆ. ಆದರೆ ಈ ಗಣ ಕೆಲವೊಮ್ಮೆ ಬಳಕೆಯಾದುದಕ್ಕೆ

ಪ್ರಾಚೀನ ಮತ್ತು ಆಧುನಿಕ ಕಾವ್ಯಗಳಿಂದ ಉದಾಹರಣೆ ಕೊಟ್ಟಿದ್ದಾರೆ. ಇಂಥಲ್ಲಿ ಮೊದಲ ಲಘುವನ್ನು ಪ್ರತ್ಯೇಕಿಸಿ “ಕು+ಮಾರವ್ಯಾಸನು ಹಾಡಿದನೆಂದರೆ” ಎಂಬಂತೆ ಓದಿ ಶ್ರಾವ್ಯತೆಯನ್ನು ಉಳಿಸಿಕೊಳ್ಳಬಹುದೆಂಬುದು ಹೊಸ ವಿಚಾರವಾಗಿದೆ.

ಇ. ಒಂದು ಚರಣದ ಗಣವಿಭಜನೆಯನ್ನು ಬೇರೆ ಬೇರೆಯಾಗಿ ಮಾಡಬಹುದಾದಲ್ಲಿ ಅದನ್ನು ‘ಗಣ ಪರಿವೃತ್ತಿ’ ಎಂದು ಕರೆದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ೪ + ೪ ಇಲ್ಲವೆ ೩ + ೫ ಇಲ್ಲವೆ ೩ + ೩ +೨ ಮಾತ್ರೆಗಳಂತೆ, ೩ + ೩ ಇಲ್ಲವೆ ೨ + ೪ ಇಲ್ಲವೆ ೪ + ೨ ಮಾತ್ರೆಗಳಂತೆ, ೫ + ೫ ಇಲ್ಲವೆ ೩ + ೪ + ೩ ಇಲ್ಲವೆ ೪ + ೩ + ೩ ಮಾತ್ರೆಗಳಂತೆ ಗಣವಿಭಜಿಸಲು ಬರುವ ಪದ್ಯಗಳನ್ನು ಉದಾಹರಣೆಯಾಗಿ ಕೊಟ್ಟಿರುವರು. ಮಾತ್ರಾ ಛಂದಸ್ಸಿನಲ್ಲಿ ಕಣ್ಣು ಚರಣಗಳನ್ನು ಅನೇಕ ಬಗೆಗಳಲ್ಲಿ ಗಣಗಳಾಗಿ ವಿಭಜಿಸಬಹುದು. ಇದಕ್ಕೆ ಕಿವಿ ಒಪ್ಪುತ್ತದೆಯೇ? ಎಂಬುದು ಮುಖ್ಯ. ಇಲ್ಲಿಯ ಉದಾಹರಣೆಗಳನ್ನು ಕಿವಿ ಒಪ್ಪಲಾರದೆಂದೇ ನನ್ನ ಅನಿಸಿಕೆ. ಇದಲ್ಲದೆ ಇಲ್ಲಿ ಗಣಪರಿವೃತ್ತಿಗೆ ಪ್ರಭುದೇವರ ರಗಳೆ ಮತ್ತು ಜೈಮಿನಿ ಭಾರತಗಳಿಂದ ಕೊಟ್ಟ ಪ್ರಾಚೀನ ಉದಾಹರಣೆಗಳೂ (೨೦೩ ಅ. ಟಿ.) ಸೂಕ್ತವೆನಿಸುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಪಂಪನ “ಅಲ್ಲಿ ಸೊ|ಗಯಿಸುವ|ಕೃತಕಗಿ | ರಿಗಳಿಂ” ಎಂಬುದನ್ನು “ಅಲ್ಲಿ | ಸೊಗಯಿಸುವ | ಕೃತ | ಗಿರಿಗಳಿಂ” ಎಂಬಂತೆಯೂ ವಿಭಜಿಸಬಹುದಾಗಿದ್ದು, ಈ ಉದಾಹರಣೆ ಸೂಕ್ತವೆನಿಸುತ್ತದೆ. ರಾಘವಾಂಕನ ‘ವೀರೇಶ ಚರಿತೆ’ಯ  ಎಲ್ಲ ಪದ್ಯಗಳನ್ನು ೪|೪|೪|೪ ಮಾತ್ರೆಯಂತೆ ಇಲ್ಲವೆ ೪|೬|೪|೬ ಮಾತ್ರೆಯಂತೆ ಗಣವಿಭಜನೆ ಮಾಡಬಹುದಾಗಿದೆ. ಹೀಗಾಗಿ ವೀರೇಶಚರಿತೆ ಇಡಿಯಾಗಿ ‘ಗಣಪರಿವೃತ್ತಿ’ ತತ್ವಕ್ಕೆ ಕೊಡಬಹುದಾದ ಅಪರೂಪದ ಉದಾಹರಣೆಯಾಗಿದೆ. ಆದರೆ ಇಲ್ಲಿ ೬ ಮಾತ್ರೆಯ ಗಣ ಸಾಧ್ಯವೇ? ಎಂಬುದು ಸಂದೇಹ.

ಈ. ಮಾತ್ರೆಗಳ ಬಗ್ಗೆ ಹೇಳುತ್ತ ತೀ.ನಂ.ಶ್ರೀ. ಪ್ಲುತ, ಕಂಪಿತಗಳನ್ನು ಪ್ರಸ್ತಾಪಿಸುತ್ತಾರೆ.

ಹಡೆದ | ಕೂಸು |
ಬಾಳ್ವು | ದೆಂತು |

೩        ೩        ೩
ಎನುತ  | ತs    | ಲ್ಲಣಿಸು | ತ

ಎಂಬಲ್ಲಿ ‘ತs’ ಎಂಬುದು ದೀರ್ಘವನ್ನೂ ಮೀರಿ ೩ ಮಾತ್ರೆಯ ವ್ಯಾಪ್ತಿ ಪಡೆಯುವುದರಿಂದ, ಇದು ‘ಪ್ಲುತ’ವೆನ್ನುತ್ತಾರೆ. ಆದರೆ ಈ ಪದ್ಯದಲ್ಲಿ ಎಲ್ಲವೂ ೩ ಮಾತ್ರೆಯ ಗಣಗಳೇ ಇರುವುದರಿಂದ ‘ತs’ ಎಂಬುದೂ ೩ ಮಾತ್ರೆಗೆ ಹಿಗ್ಗಿದೆ ಎಂದು ಹೇಳುವುದೆ ಸರಿಯಾದ ಕ್ರಮ. ಒಂದು ವೇಳೆ ಇಲ್ಲಿ ೪ ಮಾತ್ರೆ ಗಣಗಳಿದ್ದ ಪಕ್ಷದಲ್ಲಿ ‘ತs’ ಎಂಬುದು ೪ ಮಾತ್ರೆಗಳಿಗೆ ಹಿಗ್ಗುತ್ತಿತ್ತು. ಇದು ಅಂಶಗಣದಲ್ಲಿ ಸಹಜ. ಇಷ್ಟೇ ಏಕೆ, ಇದನ್ನು “ಹಡೆದ | ಕೂಸು | ಬಾಳ್ವು | ದೆಂತು | ಎನುತ | ತಲ್ಲ | ಣಿಸುತ” ಎಂದು  ೩ | ೩ ಮಾತ್ರೆಯ ಗಣದಂತೆ ಓದಲೂ ಬರುತ್ತದೆ. ಆದುದರಿಂದ ಇಲ್ಲಿಯ ಪ್ಲುತವಿಚಾರ ಅಷ್ಟಾಗಿ ಸಮಂಜಸವೆನಿಸುವುದಿಲ್ಲ. ಇನ್ನು

ನಿನ್ನ | ಬೆಳ್ಳಿಯ | ಕೂದ | ಲಂದ
ನನ್ನ | ಕಣ್ಣಿಗ | ದೇನು | ಚಂದ
ಮೂಡ | ಬೆಳ್ಳಿಯ | ಥಳಕು | ಮಂದ
೩         ೪
ನನ್ನ | ಮೇs | ರಿ

ಇಲ್ಲಿ ‘ಮೇs’ ಎಂಬುದಕ್ಕೆ ೩ಕ್ಕಿಂತಲೂ ಹೆಚ್ಚು ಮಾತ್ರೆಯ ಬೆಲೆಯಿದೆಯೆಂದೂ, ಇದನ್ನು ‘ಕಂಪಿತ’ವೆಂದು ಕರೆಯಬೇಕೆಂದೂ ತೀ.ನಂ.ಶ್ರೀ ಹೇಳುತ್ತಾರೆ. ಆದರೆ ಈ ಪದ್ಯದಲ್ಲಿ ೩|೪ ಮಾತ್ರೆಗಳ ಗಣ ನಡಿಗೆಯಿದೆ. ‘ನನ್ನ ಮೇರಿ’ ಎಂಬಲ್ಲಿ ‘ನನ್ನ’ ಎಂಬುದು ೩ ಮಾತ್ರೆಯ ಗಣಸ್ಥಾನ, ಇದರ ಮುಂದಿನದು ೪ ಮಾತ್ರೆಯ ಗಣಸ್ಥಾನ. ಈ ೪ ಮಾತ್ರೆಯ ಗಣಸ್ಥಾನದಲ್ಲಿ ಬಂದಿರುವ ‘ಮೇ’ ಸಹಜವಾಗಿಯೇ ೪ ಮಾತ್ರೆಗೆ ಹಿಗ್ಗಿದಿಯೆಂದು ಹೇಳುವುದೇ ಸರಿಯಾದ ಕ್ರಮ. ಒಂದು ವೇಳೆ ಇಲ್ಲಿ ೫ ಮಾತ್ರೆಯ ಗಣಗಳಿದ್ದ ಪಕ್ಷದಲ್ಲಿ  ‘ಮೇ’ ಎಂಬುದು ೫ ಮಾತ್ರೆಗಳಿಗೆ ಹಿಗ್ಗುತ್ತಿತ್ತು. ಇದು ಅಂಶಗಣದಲ್ಲಿ ಸಹಜ. ಇಷ್ಟೇ ಏಕೆ, ಇದನ್ನು ನನ್ನ | ಮೇರಿs | ಎಂದೂ ಓದಬಹುದಾಗಿದೆ. ಆದುದರಿಂದ ಇದನ್ನು ‘ಕಂಪಿತ’ವೆಂದು ಕರೆಯುವಲ್ಲಿ ಅಂಥ ವಿಶೇಷತೆ ಕಂಡುಬರುವುದಿಲ್ಲ.

ಉ. ಸ್ವರ ಎಸೆದು ಪ್ಲುತ, ಕಂಪಿತ ಮಾಡಿಕೊಳ್ಳುತ್ತಿದ್ದರೆ ಸರಿ. ಹಾಗೆ ಮಾಡಿಕೊಳ್ಳದೆ ತಟ್ಟನೆ ಅಷ್ಟುಕಾಲ ನಿಂತು ಮುಂದಿನ ಗಣಕ್ಕೆ ಸಾಗಲೂ ಬುರುತ್ತದೆ. ಹಾಗೆ ನಿಂತ ನೆಲೆಯೇ ಮೌನ ಎನ್ನುತ್ತಾರೆ, ತೀ.ನಂ.ಶ್ರೀ ಇಂಥ ಪದ್ಯ, ಶಿಷ್ಟಪದ, ಜನಪದಗಳಲ್ಲಿಯೂ ಇವೆ. ಈ ಮೌನವನ್ನು ಶೋಧಿಸಿ ಹೇಳಿದುದು ಹೊಸ ವಿಚಾರವಾಗಿದೆ.

ಊ. ತೀ.ನಂ.ಶ್ರೀ ಮಂಡಿಸುವ ಇನ್ನೆರಡು ವಿಚಾರಗಳೆಂದರೆ ಮುಡಿ ಮತ್ತು ಪದ್ಮಗುಣ. ಚರಣದಲ್ಲಿ ಕೊನೆಯ ಗಣದ ಆಚೆಗೆ ನಿಲ್ಲುವ ಅಕ್ಷರವೇ ಮುಡಿ. ಉದಾ: ಸಾಯ್ವರು | ಶಾಪದ | ಲಿ

ಇಲ್ಲಿ ‘ಲಿ’ ಎಂಬುದು ಮುಡಿ. ಮುಡಿಯೇ ಆಗಿದ್ದಿರೂ ಅಕ್ಷರ ಪ್ರಮಾಣದಲ್ಲಿ ಅದಕ್ಕಿಂತ ಉದ್ದವಾಗಿ, ಮುಕ್ತಾಯದ ಭಾವವನ್ನು ಸಾವಕಾಶವಾಗಿ ತರುವುದೇ ಪದ್ಮಗಣ. ಉದಾ.

ಸಿರಿಗೌರಿ | ಯಂತೆ ಬಂ | ದರು ತಾಯಿ | ಹಸೆಮಣೆ | ಗೆ
ಸೆರಗಿನಲಿ  | ಕಣ್ಣೀರ | ನೊರಸಿ

ಇಲ್ಲಿ ನೊಸಿ ಎಂಬುದು ಪದ್ಮಗಣ. ತೀ.ನಂ.ಶ್ರೀ ಇಷ್ಟು ಹೇಳುವರೇ ಹೊರತು ಇವು ಹುಟ್ಟಿಕೊಳ್ಳಲು ಏನು ಕಾರಣ? ತಿಳಿಸುವುದಿಲ್ಲ. ಇದಕ್ಕೆ ಸಮಾಧಾನ ಹೀಗಿರಬಹುದು. ಇಲ್ಲಿ ಮುಡಿಯಾಗಲೀ, ಪದ್ಮಗಣವಾಗಲೀ, ಪಾದದ ಕೊನೆಗೇ ಬಂದಿವೆ. ಪಾದದ ಕೊನೆಯನ್ನು ಸೂಚಿಸುವುದಕ್ಕಾಗಿ ಅಂತ್ಯಗಣದ ಮೇಲೊಂದು ಅಕ್ಷರ ಬರಬೇಕು. ಅಥವಾ ಅಂತ್ಯಗಣದ ಒಂದು ಅಕ್ಷರವನ್ನಾದರೂ ಕಡಿಮೆ ಮಾಡಬೇಕು. ಲಯಬದ್ಧವಾಗಿ ಉಚ್ಚರಿಸುವಾಗ ಮೇಲೆ ಬಂದ ಅಕ್ಷರವೂ ತನ್ನ ಗಣವ್ಯಾಪ್ತಿಗೆ ಹಿಗ್ಗುತ್ತದೆ. ಅಕ್ಷರದ ಕೊರತೆಯಿಂದ ಕೂಡಿದ ಗಣವೂ ತನ್ನ ಗಣದ ವ್ಯಾಪ್ತಿಗೆ ಕುಗ್ಗುತ್ತದೆ. ಇವುಗಳಲ್ಲಿ ಮೇಲೆ ಬಂದ ಅಕ್ಷರ ‘ಮುಡಿ ಅಕ್ಷರ’. ಕೊರತೆಯಿಂದ ಕೂಡಿದ  ಗಣ ‘ಪದ್ಮಗಣ’ ಎಂದು ವ್ಯಾಖ್ಯಾನಿಸುವುದೇ ವೈಜ್ಞಾನಿಕವೆನಿಸುತ್ತದೆ. ತೀ.ನಂ.ಶ್ರೀ ವ್ಯಾಖ್ಯಾನಿಸುವ ರೀತಿ ಸರಿಯೆನಿಸುವುದಿಲ್ಲ.

ಮುಡಿಗಿಂತ ಪದ್ಮಗಣ ದೊಡ್ಡದು ಎಂದು ತೀ. ನಂ. ಶ್ರೀ ತಿಳಿಸಿದ್ದಾರೆ. ಆದರೆ ಇದಕ್ಕೆ ಕಾರಣ ಹೇಳುವುದಿಲ್ಲ. ಗಣದ ಆಚೆಗೆ ನಿಲ್ಲುವ ಒಂದು ಅಕ್ಷರವ್ಯಾಪ್ತಿಯ ಮುಡಿಗಿಂತ, ಒಂದು ಅಕ್ಷರ ಕೊರತೆಯ ಪದ್ಮಗಣ ಸ್ವಾಭಾವಿಕವಾಗಿಯೇ ನೋಡಲು ದೊಡ್ಡದು ಕಾಣುತ್ತದೆ. ಆದರೆ ಉಚ್ಚಾರ ಸಂದರ್ಭದಲ್ಲಿ ಅವು ತಮ್ಮ ಗಣಸ್ಥಾನದಷ್ಟು ಹಿಗ್ಗಿಕೊಳ್ಳುವುದರಿಂದ ಒಂದು ದೊಡ್ಡದು, ಒಂದು ಸಣ್ಣದು ಎಂದು ಹೇಳುವುದೂ ತಪ್ಪಾಗುತ್ತದೆ. ಏಕೆಂದರೆ ಮೂರು ಮಾತ್ರಾವ್ಯಾಪ್ತಿಗೆ ಹಿಗ್ಗುವ ಪದ್ಮಗಣವಿರಬಹುದು, ನಾಲ್ಕು ಮಾತ್ರಾ ವ್ಯಾಪ್ತಿಗೆ ಹಿಗ್ಗುವ ಮುಡಿ ಇರಬಹುದು. ಹೀಗಾಗಿ ಇಲ್ಲಿಯೂ ತೀ.ನಂ.ಶ್ರೀ ವಾದ ಸೋತುಹೋಗುತ್ತದೆ.

ಇಲ್ಲಿ ತೀ. ನಂ. ಶ್ರೀ ಇನ್ನೂ ಎರಡು ತಪ್ಪುಗಳನ್ನು ಮಂಡಿಸಿದಂತಿದೆ. ಮುಡಿಯಾಗಲೀ ಪದ್ಮಗಣವಾಗಲೀ ತಮ್ಮ ಹಿಂದಿನ ಗಣವ್ಯಾಪ್ತಿಯಷ್ಟು ಹಿಗ್ಗುತ್ತವೆ ಎನ್ನುತ್ತಾರೆ. ಹಿಂದಿನ ಗಣ ಮತ್ತು ಮುಂದಿನ ಮುಡಿ/ಪದ್ಮಗಣ ಪ್ರಮಾಣ ಭಿನ್ನವಾಗಿದ್ದರೆ ಮುಡಿ ಮತ್ತು ಪದ್ಮಗಣಗಳು ತಮ್ಮ ಹಿಂದಿನ ಗಣವ್ಯಾಪ್ತಿಯಷ್ಟು ಹಿಗ್ಗದೆ ತಮ್ಮ ಗಣವ್ಯಾಪ್ತಿಯಷ್ಟು ಮಾತ್ರ ಹಿಗ್ಗುತ್ತವೆ. ಎರಡು ಉದಾಹರಣೆಗಳಿಂದ ಈ ಅಭಿಪ್ರಾಯವನ್ನು ಸ್ಪಷ್ಟಪಡಿಸಿಕೊಳ್ಳಬಹುದು.

೪          ೪           ೪            ೪
ನಿನ್ನಾ | ಮೋಹದ | ನಡುವನು | ಬಳಸುವ
೪        ೪           ೪         ೪
ಚಿನ್ನದ | ಕಟ್ಟಾ | ಗಲು ಬಯ | ಕೆ

ಇಲ್ಲಿ ನಾಲ್ಕು  ಮಾತ್ರೆಯ ಗಣಗಳೇ ಇರುವುದರಿಂದ ‘ಕೆ’ ಎಂಬ ಮುಡಿಯು ನಾಲ್ಕು ಮಾತ್ರೆಗಳನ್ನು (ಅಂದರೆ ತನ್ನ ಸ್ಥಾನದಷ್ಟು) ಹಿಗ್ಗುತ್ತದೆ. ಆದರೆ

೩       ೪
ಹರುಷ | ವೆನ್ನೊಳು |

೩             ೪             ೩       ೪
ತೊರೆದೆ | ಹೋಯಿತೊ | ಹೋಯಿ | ತೋ

ಇಲ್ಲಿ ೩/೪ ಮಾತ್ರೆಗಳ ಗಣಯೋಜನೆಯಿರುವುದರಿಂದ ‘ತೋ’ ಎಂಬ ಮುಡಿ ತೀ.ನಂ.ಶ್ರೀ ಹೇಳುವಂತೆ ಹಿಂದಿನ ಗಣ ‘ಹೋಯಿ’ಯಷ್ಟು ೩ ಮಾತ್ರೆಗೆ ಹಿಗ್ಗುವುದಿಲ್ಲ, ತನ್ನ ಗಣ ವ್ಯಾಪ್ತಿಗೆ ತಕ್ಕಂತೆ ೪ ಮಾತ್ರೆಗೆ ಹಿಗ್ಗುತ್ತದೆ. ಆದುದರಿಂದ ತೀ.ನಂ.ಶ್ರೀ ಇವರ ಈ ವಾದ ಸಮ್ಮತವೆನಿಸುವುದಿಲ್ಲ.

ಚರಣದ ಕೊನೆಯಲ್ಲಿ ‘ಮುಡಿ’, ‘ಪದ್ಮಗಣ’ ಬರುತ್ತವೆ ಎನ್ನುತ್ತಾರೆ. ತೀ. ನಂ. ಶ್ರೀ. ಇದು ಇವರೇ ಹೇಳಿದ ಹೊಸ ವಿಚಾರವೇನಲ್ಲ. ಅಕ್ಷರವೃತ್ತದ ಚರಣಗಳ ಕೊನೆಯಲ್ಲಿ ಕೆಲವೊಮ್ಮೆ ಒಂದು ಗುರುವಿರುವುದನ್ನು, ಷಟ್ಪದಿಯ ೩-೬ನೆಯ ಪಾದಗಳ ಕೊನೆಗೆ ಒಂದು ಗುರು ಬರುವುದನ್ನು ನಮ್ಮ ಪ್ರಾಚೀನ ಛಾಂದಸಿಗರು ಹೇಳಿಯೇ ಇದ್ದಾರೆ. ಇದಕ್ಕೆ ತೀ.ನಂ.ಶ್ರೀ ‘ಮುಡಿ’ ಎಂಬ ಹೆಸರನ್ನು ಕೊಟ್ಟಿದ್ದಾರೆ, ಅಷ್ಟೇ.

ಚರಣದ ಕೊನೆಗೆ ಬರಬೇಕಾದ ಮುಡಿ, ಪದ್ಮಗಣಗಳು ಚರಣ ಮಧ್ಯದಲ್ಲಿಯೂ ಬರಬಹುದೆನ್ನುತ್ತಾರೆ, ತೀ.ನಂ.ಶ್ರೀ. ಇವುಗಳನ್ನು ಚರಣಮಧ್ಯದಲ್ಲಿಟ್ಟು ಮುದ್ರಿಸಿದುದನ್ನು ನೋಡಿ ಈ ಲಕ್ಷಣ ಹೇಳಿದ್ದಾರೆಯೇ ಹೊರತು, ವಾಸ್ತವವಾಗಿ ಇವು ಚರಣದ ಕೊನೆಗೇ ಬರುತ್ತವೆ. ಉದಾ:

ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇ | ಕೆ | ಎನ್ನರಸ
ಸುಮ್ಮನಿರಿ ಎಂದಳಾ | ಕೆ

ಇಲ್ಲಿ ಮೊದಲಿನ ‘ಕೆ’ ಮುಡಿ. ನಿಜವಾಗಿ ಇಲ್ಲಿಗೆ ಚರಣ ಮುಕ್ತಾಯವಾಗಿದೆ. ‘ಎನ್ನರಸ’ ಎಂಬುದನ್ನು ಕೆಳಗೆ ಮುದ್ರಿಸಿದ್ದರೆ ತೀ.ನಂ.ಶ್ರೀ ಈ ನಿಯಮ ಕಟ್ಟುತ್ತಿರಲಿಲ್ಲವೇನೋ. ಈ ಮಾತನ್ನು ಪದ್ಮಗಣಕ್ಕೂ ಹೇಳಬಹುದು. ಒಟ್ಟಾರೆ, ಕೆಲವೊಮ್ಮೆ ಅಂಶವೃತ್ತಗಳ ಚರಣಮಧ್ಯದಲ್ಲಿ ಅಕ್ಷರ ಕೊರತೆಯ ಗಣ ಬರಬಹುದು. ನೋಡಲು ಅಕ್ಷರ ಕೊರತೆ ಕಂಡುಬಂದರೂ ಉಚ್ಚಾರದಲ್ಲಿ ಅದು ತನ್ನ ಗಣವ್ಯಾಪ್ತಿಗೆ ಹಿಗ್ಗುತ್ತದೆ. ನಿರಂತರತೆಯ ಭಾಗವೆಂಬಂತೆ ಚರಮಧ್ಯದಲ್ಲಿ ಬಂದ ಇಂಥವುಗಳನ್ನು ಮುಡಿ, ಪದ್ಮಗಣವೆಂದು ಕರೆಯಬಾರದು, ಬೇರೆ ಹೆಸರಿನಿಂದ ಕರೆಯಬಹುದು. ಅಂದರೆ ಚರಣ ಮುಕ್ತಾಯದ ಸೂಚನೆಯಂಬಂತೆ ಬಂದುವುಗಳನ್ನು ಮಾತ್ರ ಮುಡಿ, ಪದ್ಮಗಣಗಳೆಂದು ಕರೆಯಬೇಕು. ಈ ಹಿನ್ನೆಲೆಯಲ್ಲಿ ಮುಕ್ತಾಯವನ್ನು ಸೂಚಿಸುವ ಮೇಲಿನ ಪದ್ಯದ ಮೊದಲ ‘ಕೆ’ ಎಂಬುದನ್ನು ‘ಚರಣ ಮಧ್ಯದ ಮುಡಿ’ಯೆನ್ನುವುದು ತಪ್ಪಾಗುತ್ತದೆ.

ಒಟ್ಟಿನಲ್ಲಿ ಪ್ಲುತ-ಕಂಪಿತ, ಮುಡಿ-ಪದ್ಮಗಣಗಳ ಅರ್ಥ, ಇವುಗಳ ಮಾತ್ರಾಮೌಲ್ಯ ಮತ್ತು ಚರಣದಲ್ಲಿ ಇವು ಬರಬೇಕಾದ ಸ್ಥಾನಗಳ ಬಗ್ಗೆ ತೀ.ನಂ.ಶ್ರೀ ನೀಡಿದ ನಿರ್ಣಯ ವೈಜ್ಞಾನಿಕವೆನಿಸುವುದಿಲ್ಲ. ಕಿವಿಯಿಂದ ಕೇಳಿ ಗಣಮೌಲ್ಯವನ್ನು ನಿರ್ಧರಿಸಬೇಕಾದ ತರಂಗಯುಕ್ತ ಬ್ರಹ್ಮಗಣ, ವಿಷ್ಣುಗಣಗಳನ್ನು ಕಣ್ಣಿನಿಂದ ನೋಡಿದ ಕಾರಣವಾಗಿ ಈ ದೋಷ ಘಟಿಸಿದೆ.

ತೀ.ನಂ.ಶ್ರೀ ನಮ್ಮ ಮುಂದೆ ಬಿಚ್ಚಿ ಇಟ್ಟಿರುವ ಛಂದೋವಿಚಾರಗಳು ಹೀಗೆ ಪರಿಷ್ಕರಣಕ್ಕೆ ಗುರಿಯಾಗುತ್ತಿದ್ದರೂ, ಅವುಗಳಲ್ಲಿ ಕೆಲವಾದರೂ ನಮಗಿದ್ದ ಹಳಗನ್ನಡ, ಹೊಸಗನ್ನಡ ಛಂದಸ್ಸಿನ ತಿಳುವಳಿಕೆಯನ್ನು ಹೆಚ್ಚಿಸಿವೆಯೆಂಬುದನ್ನು ಮರೆಯಲಾಗದು. ಈ ಸಂದರ್ಭದಲ್ಲಿ ತೀ. ನಂ. ಶ್ರೀ ಬಳಸಿದ ಪ್ಲುತ, ಕಂಪಿತ, ಮೌನ, ಮುಡಿ, ಪದ್ಮಗಣ, ವಿಷಮಗಣ, ಗಣಪರಿವೃತ್ತಿಯೆಂಬ ಹೊಸ ಪಾರಿಭಾಷಿಕ ಪದಗಳು ನಮ್ಮ ಛಂದೋಭಂಡಾರಕ್ಕೆ ಸೇರಿದ ಹೊಸ ನಾಣ್ಯಗಳಾಗಿವೆ. ಈ ಎಲ್ಲ ವಿಚಾರಗಳ ಕಡೆಗೆ ತೀ.ನಂ.ಶ್ರೀ ಗಮನ ಸೆಳೆದಿರದಿದ್ದರೆ ನಮ್ಮ ಹೊಸಗನ್ನಡ ಪದ್ಯಪ್ರವೇಶದ ದಾರಿ ಎಷ್ಟು ದುರ್ಗಮವಾಗುತ್ತಿತ್ತು! ಎಂಬ ಅಂಶ ನಮಗೆ ಭಯಹುಟ್ಟಿಸುತ್ತದೆ. ಆಮೇಲೆ ನಾವು ಏನು ಮಾಡಿದ್ದೇವೆ? ಎಂಬ ಅಂಶ ನಾಚಿಕೆ ಹುಟ್ಟಿಸುತ್ತದೆ.

“ತಾವು ಬಹಳ ಬರೆಯಲಿಲ್ಲ” ಎಂದು ತೀ.ನಂ.ಶ್ರೀ ಪದೇ ಪದೇ ಹೇಳಿಕೊಳ್ಳುತ್ತಾರೆ. ಆದರೆ ಅವರು ಬರೆದದ್ದೆಲ್ಲ ‘ಸೂತ್ರವಾಗಿದ್ದು, ಅದಕ್ಕೆ ನಾವು ಬರೆಯಬೇಕಾದ ವ್ಯಾಖ್ಯಾನ ಬಹಳಷ್ಟಿದೆ.

[1] ‘ಕರ್ನಾಟಕದ ಸಾಹಿತ್ಯ ಪರಿಷತ್ಪತ್ರಿಕೆ’, ೧೫-೪, (೧೯೩೧)

[2] ‘ಸಂಭಾವನೆ’, ೧೯೪೧

[3] ಈ ಲೇಖನ ಪ್ರಥಮ ಸಲ ‘ಸಮಾಲೋಕನ’ (೧೯೫೮)ದಲ್ಲಿ ಪ್ರಕಟವಾದರೂ ಇದರ ಅರ್ಧಭಾಗ ಸಿದ್ಧವಾದುದು ೧೯೪೧ರಲ್ಲಿ.

[4] ‘ಕನ್ನಡು ನುಡಿ’, ೧೫-೩ ಮತ್ತು ೪ (೧೯೪೨)

[5] ಕನ್ನಡದಲ್ಲಿ ರುದ್ರಗಣವಿರುವ ಬಗ್ಗೆ ಸಂದೇಹವಿದೆ. ನೋಡಿ. ‘ಮಾರ್ಗ’ ||: ಅಂಶಗಣದ ಇತಿಹಾಸ