ಕಾವ್ಯಶಾಸ್ತ್ರ, ಭಾಷಾಶಾಸ್ತ್ರ ವಿವೇಚನೆ ಇಂದು ಲೋಕವ್ಯಾಪಕವಾಗಿ ನಡೆಯುತ್ತಿರುವಂತೆ ಛಂದಃಶಾಸ್ತ್ರದ ವಿವೇಚನೆ ನಡೆದಿಲ್ಲ: ನಡೆಯುತ್ತಿಲ್ಲ. ಇದಕ್ಕೆ ಕಾರಣ ಪದ್ಯದ ಎರಡು ದ್ರವ್ಯಗಳಾದ ಲಯ ಮತ್ತು ಭಾಷೆಗಳ ಸಂಬಂಧದ ಸ್ಪಷ್ಟ ತಿಳಿವಳಿಕೆಯಿಲ್ಲದಿರುವುದು ಮತ್ತು ಛಂದಃಶಾಸ್ತ್ರವನ್ನು ವಿವೇಚಿಸುವ ನೆವದಲ್ಲಿ ಶೈಲಿಶಾಸ್ತ್ರ (Stylistics)ವನ್ನೂ ಪ್ರಧಾನವಾಗಿ ಅವಲೋಕಿಸುವುದು. ಈ ಸೂತಕಗಳಿಂದ ಮುಕ್ತರಾದವರು ಮಾತ್ರ ಛಂದಸ್ಸಿನ, ಕುವೆಂಪು ಛಂದಸ್ಸಿನ ಅಭ್ಯಾಸಕ್ಕೆ ನ್ಯಾಯ ಒದಗಿಸಬಲ್ಲರು. ಪದ್ಯ, ಭಾಷೆಯಲ್ಲಿ ಮೈಪಡೆಯುವ ಕಲಾವಿಶೇಷವಾಗಿರುವುದರಿಂದ ಕವಿಯಾದವನು ಭಾಷೆಯನ್ನೇ ಮೂಲದ್ರವ್ಯವನ್ನಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಭಾಷೆಯ ಅರ್ಥವತ್ತಾದ ಘಟಕ, ಪದ (Word). ಪದವು ಶಬದ (Sound), ಅರ್ಥ (Meaning) ಮತ್ತು ಪ್ರಮಾಣ (Measure)ಗಳೆಂಬ ಮೂರು ಲಕ್ಷಣಗಳಿಂದ ಕೂಡಿರುತ್ತದೆ. ಈ ಪದಗಳನ್ನು ಪ್ರಮಾಣಬದ್ಧವಾಗಿ ವಿನ್ಯಾಸಗೊಳಿಸುವಲ್ಲಿ ವಿಶಿಷ್ಟ ಲಯಪ್ರಾಪ್ತವಾಗಿ ಪದ್ಯ ರೂಪಪಡೆಯುತ್ತದೆ. ಪದ್ಯದ ಈ ರೂಪನಿರ್ಮಾಣಕ್ರಿಯೆಯಲ್ಲಿ ಪದದ ಶಬ್ದ (Sound) ಸಂಯೋಜನೆಯಿಂದ ಪದ್ಯಕ್ಕೆ ಶಬ್ದಸೌಂದರ್ಯ, ಅರ್ಥ (Meaning) ಪ್ರಕಾಶನದಿಂದ ಅರ್ಥ ಸೌಂದರ್ಯ ಪ್ರಾಪ್ತವಾಗುವಂತೆ; ಪ್ರಮಾಣ (ಲಯ) ಬದ್ಧ ವಿನ್ಯಾಸದಿಂದಾಗಿಯೂ ಒಂದು ಬಗೆಯ ಸೌಂದರ್ಯ ಪ್ರಾಪ್ತವಾಗುತ್ತದೆ. ಇದನ್ನು ಛಂದೋಸೌಂದರ್ಯವೆಂದು ಕರೆಯಬಹುದು. ಹೀಗೆ ಛಂದಸ್ಸು ಅಭಿವ್ಯಕ್ತಿಗೆ ಸೌಂದರ್ಯವನ್ನುಂಟು ಮಾಡುವುದರಿಂದ “ಶಬ್ದಾಲಂಕಾರ” “ಅರ್ಥಾಲಂಕಾರ”ಗಳಂತೆ “ಛಂದೋಲಂಕಾರ”ವೂ ಪದ್ಯಪೂರಕವಾಗಿದೆ.

ಲಯಾನುವರ್ತಿಯಾದ ಪದಪರಂಪರೆಯಿಂದ ಗಣ, ಗಣಪರಂಪರೆಯಿಂದ ಚರಣ, ಚರಣಪರಂಪರೆಯಿಂದ ಪದ್ಯ (Stanza)-ಪದ (Poem)ಗಳು ಸೃಷ್ಟಿಪಡೆಯುತ್ತವೆ. ಇವುಗಳಲ್ಲದೆ ಈ ಗಣಗಳ ನಿರಂತರ ನಡಿಗೆಯಾದ ಸರಳ ರಗಳೆ, ಇದರ ಪ್ರವರ್ಧಮಾನರೂಪವಾದ ಮಹಾಛಂದಸ್ಸು-ಇವು ಕುವೆಂಪು ಪದ್ಯಪ್ರಪಂಚದ ಪರಿಹಾರವೆನಿಸಿವೆ. ಆದುದರಿಂದ ಕುವೆಂಪು ಪದ್ಯಸಾಹಿತ್ಯವನ್ನು ಗಣ, ಚರಣ, ಪದ್ಯ-ಪದ, ಸರಳರಗಳೆ, ಮಹಾಛಂದಸ್ಸು ಎಂದು ಬಿಡಿಸಿ ನೋಡಬೇಕಾಗುತ್ತದೆ.

ಗಣ: ಪದ್ಯಪ್ರಪಂಚದಲ್ಲಿ ಗಣವೆಂಬುದು ಅರ್ಥವತ್ತಾದ ಘಟಕ; ಭಾಷಾ ಪ್ರಪಂಚದ Morphemeದಂತೆ. ಪದ್ಯ ಬರೆಯಹೊರಟ ಕವಿಯ ಕೈಯಲ್ಲಿ ಪದಗಳು ವಿಶಿಷ್ಟ ಲಯಾನುವರ್ತಿಯಾಗುವಲ್ಲಿ ಗಣಗಳು ಆಕಾರಪಡೆಯುತ್ತಿದ್ದು, ಈ ಗಣಗಳು ಮತ್ತೆ ತಮ್ಮೊಳಗೇ ಘಟಕಗಳನ್ನು ರೂಪಿಸಿಕೊಳ್ಳುತ್ತವೆ. ಈ ಘಟಕವನ್ನು ನಮ್ಮ ಪ್ರಾಚೀನರು ಅಂಶವೆಂದು ಕರೆದಿದ್ದಾರೆ. ಒಂದು ಗುರುವ್ಯಾಪ್ತಿಯುಳ್ಳ ಈ ಅಂಶವು, ಗಣದ ಪ್ರಥಮಸ್ಥಾನದಲ್ಲಿ ಒಂದು ಗುರು ಅಥವಾ ಎರಡು ಲಘು, ಪ್ರಥಮೇತರ ಸ್ಥಾನಗಳಲ್ಲಿ ಒಂದು ಗುರು ಇಲ್ಲವೆ ಒಂದು ಲಘುವಿನ ಬದಲು ಎರಡು ಲಘುಗಳನ್ನೂ ಯೋಜಿಸತೊಡಗುವಲ್ಲಿ, ಪ್ರಾಚೀನ ‘ಅಂಶ’ ಪರಿಕಲ್ಪನೆ ಸಡಿಲುಗೊಂಡುದರಿಂದ, ಇದನ್ನು ಇಂದು ‘ಘಟಕ’ ಎಂಬ ಬೇರೊಂದು ಹೆಸರಿನಿಂದ ಕರೆಯುವುದು ಸೂಕ್ತ. ಇದರಿಂದಾಗಿ ಮೊದಲ ಹನ್ನೆರಡು ಅಂಶಗಣ (ಬ್ರಹ್ಮ ೪, ವಿಷ್ಣು ೮)* ಪ್ರಪಂಚ ತನ್ನ ಸಿಡುವು ಬಿಚ್ಚಿಕೊಂಡು ಒಟ್ಟು ಮೂವತ್ತಾರು ಘಟಕಗಣಗಳನ್ನು ಸಾಧಿಸಿಕೊಂಡಿದೆ.

ಎರಡು ಘಟಕದ ಗಣಗಳು:

[ಚಿತ್ರ ೦೬]

ಮೂರು ಘಟಕದ ಗಣಗಳು

[ಚಿತ್ರ ೦೭]

೯+೨೭ ಈ ಪರಮಾವಧಿ ೩೬ ಘಟಕಗಳನ್ನು ೮ ತರರಂಗಗಣ, ೧೬ ಅರ್ಧತರಂಗಗಣ, ೧೨ ನಿಸ್ತರಂಗಗಣ ಎಂದು ಬಿಡಿಸಿ ಹೇಳಬಹುದು.[1] ಕುವೆಂಪು ಅವರ ಪದ್ಯ ಪ್ರಪಂಚದ ಈ ಮೂವತ್ತಾರು ಗಣಗಳನ್ನೂ ಬಳಸಿಕೊಂಡಿರುವ ಸಾಧ್ಯತೆಯಿದೆ. ಇದಕ್ಕೆ ಹೆಚ್ಚಿನದಾಗಿ ಎರಡಕ್ಕಿಂತ ಹೆಚ್ಚು ಮಾತ್ರೆಗಳ ಘಟಕವನ್ನೂ ರೂಪಿಸಿಕೊಂಡಿರಬಹುದು;

ಲಯದ ಏಕತಾನತೆ ಮುರಿಯಲು ಗದ್ಯತುಂಡುಗಳನ್ನೂ ಮಧ್ಯ ಮಧ್ಯ ಸೇರಿಸಿಕೊಂಡಿರಬಹುದು; ತೀ.ನಂ.ಶ್ರೀ ಸೂಚಿಸುವ ಪದ್ಮಗಣ, ಗಣಪರಿವೃತ್ತಿ, ಪ್ಲುತಗಣ, ಕಂಪಿತಗಣ, ಮೌನ, ಮುಡಿಗಳನ್ನೂ ಬಳಸಿಕೊಂಡಿರಬಹುದು.[2]

ಕುವೆಂಪು ಅವರು ಸ್ವಾತಂತ್ರ್ಯವಹಿಸಿ ಇಂಥ ಗಣರಚನೆ, ಈ ಗಣಗಳಿಂದ ಚರಣ ಸಂಯೋಜನೆಗಳನ್ನು ತುಂಬ ಸಂಕೀರ್ಣ ರೀತಿಯಲ್ಲಿ ಸಾಧಿಸಿದುದು ಅದ್ಭುತ ಸಿದ್ಧಿಯೇ ಸರಿ. ಈ ಪ್ರಸಂಗದಲ್ಲಿ ಭಾಷೆಯ ಅರ್ಥಕ್ಕೂ ಪೆಟ್ಟು ತಾಗದಂತೆ ಛಂದಸ್ಸಿನ ಲಯಕ್ಕೂ ಪೆಟ್ಟು ತಾಗದಂತೆ ಕವಿಯಾದವನು ಎಚ್ಚರವಹಿಸಿ ಪದ್ಯ ನಿರ್ಮಿಸಬೇಕಾಗುತ್ತದೆ. ಅಂದರೆ ಭಾಷೆಯನ್ನು ಲಯದಲ್ಲಿ ಹೇಗೆ ದುಡಿಸಿಕೊಳ್ಳುತ್ತಾರೆ ಎನ್ನುವಲ್ಲಿಯೇ ಕವಿಗಳ ಛಂದೋಸಿದ್ಧಿಯಿರುವುದು. ಆದರೆ ಭಾಷೆಗಾಗಿ ಲಯವನ್ನು, ಲಯಕ್ಕಾಗಿ ಭಾಷೆಯನ್ನು ಅಲಕ್ಷಿಸುವುದು ಯಾವುದೇ ಕವಿಯ ವೈಫಲ್ಯವನ್ನು ಸೂಚಿಸುತ್ತದೆ. ಶ್ರೀ ಕುವೆಂಪು ಅವರು ಇಂಥಲ್ಲಿ ತುಂಬ ಎಚ್ಚರ ವಹಿಸುತ್ತಿದ್ದರೂ ಕ್ವಚಿತ್ತಾಗಿ “ನನ್ನಯ್ಯ | ಫಿರ್ದೂಷಿ | ಕಂಬಾರ | ವಿಂದರಿಗೆ” ಎಂಬಲ್ಲಿಯ “ಕಂಬಾರ’’ ಮತ್ತು “ಮಾಧವ | ಮಧುಸೂ | ದನರವ | ತರಿಸಿದ” ಎಂಬಲ್ಲಿಯ ‘ಕಂಬಾರ’ ‘ದನ’ ಇತ್ಯಾದಿಗಳು ಭಾಷೆಯ ಅರ್ಥವನ್ನು ಅಲಕ್ಷಿಸಿದುದರ ಪರಿಣಾಮಗಳೆನಿಸಿವೆ.

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ
ದೇವಿ ನಮಗಿಂದು ಪೂಜಿಸು ಬಾರ

ಇಲ್ಲಿ ಏನು ಮಾಡಿದರೂ ಲಯಕ್ಕೆ ಹೊಂದದ “ನಮಗಿಂದು” ಎಂಬುದು ಛಂದಸ್ಸನ್ನು ಅಲಕ್ಷಿಸಿದುದರ ಪರಿಣಾಮವೆನಿಸಿದೆ. ಇಂಥಲ್ಲಿ ಪದ್ಯವು ಲಯಗತಿಗೆ ಎರವಾಗಿ ಗದ್ಯಗತಿಗೆ ಉರುಳುತ್ತದೆ. ಹೀಗೆ ಕುವೆಂಪು ಅವರು ಛಂದಸ್ಸಿನ ಲಯವನ್ನು ಕ್ವಚಿತ್ತಾಗಿ ಅಲಕ್ಷಿಸುತ್ತಾರೆ. ಇಂಥ ಪ್ರಯೋಗಗಳು ‘ಗಪದ್ಯ’ವಾಗಿ ಬಿಡುತ್ತವೆ.

ಚರಣ: ಚರಣಗಳು ರೂಪಗೊಳ್ಳುವುದು ಗಣಗಳ ವಿನ್ಯಾಸದಿಂದ. ಪದ್ಯರಚನೆಗಾಗಿ ಕೇವಲ ಎರಡು ಘಟಕದ ೯ ಗಣಗಳಲ್ಲಿ ಕೆಲವನ್ನು, ಮೂರು ಘಟಕದ ೨೭ ಗಣಗಳಲ್ಲಿ ಕೆಲವನ್ನು ಕವಿ ಬಳಸಬಹುದು. ಇಲ್ಲವೆ ಇವುಗಳನ್ನು ಮಿಶ್ರಗೊಳಿಸಬಹುದು.

ಉದಾ:

೨. ಘಟಕಗಣದ ಚರಣ
| ಹಾ. ಲನು | ಮಾ. ರಿ. | ಹರಿ. ಯನು | ಕೊ. ಳ್ಳುವ |

೩.ಘಟಕಗಣದ ಚರಣ
| ಕವ. ನಗ. ಳೆ | ಮಂ. ತ್ರಗ. ಳೆ | ರಸ. ಯೋ. ಗಿ | ಕವಿ. ಋಷಿ. ಗೆ |

೨ ಘಟಕಗಣ ೩ ಘಟಕಗಣಗಳ ಮಿಶ್ರಚರಣ :
|ಇ. ಲ್ಲಿ | ಹು. ಲಿ. ಲ್ಲ | ನಿನ. ಗೆ | ಓ. ಬಿಯ. ದ |

ಇದಕ್ಕೆ ಹೆಚ್ಚಿನದಾಗಿ ಕಂಪಿತಗಣ, ಮುಡಿ ಇತ್ಯಾದಿ ವಿಶೇಷತೆಗಳು ಅನೇಕ ಸಲ ಚರಣ ಮಧ್ಯ ಹೆಣೆದುಕೊಂಡು ನಿಲ್ಲುತ್ತವೆ, ಕುವೆಂಪುವಿನಲ್ಲಿ.

ಕುವೆಂಪು ಪದ್ಯದಲ್ಲಿ ಒಂದು ಚರಣವು ಕಡಿಮೆಯೆಂದರೆ |ಓ|, |ಹೇ| ಎಂಬ ಏಕಾಕ್ಷರಿಗಣವಾಗಿ ಮುಗಿಯಬಹುದು. ಹೆಚ್ಚೆಂದರೆ “ಸೃಷ್ಟಿಯ | ಹೃದಯಕೆ | ಪ್ರಾಣಾ | ಗ್ನಿಯ ಹೊಳೆ | ಹರಿಯಿಸಿ | ರವಿ ದಯ | ಮಾಡುವನು” ಎಂಬಂತೆ ಏಳು ಗಣಗಳ ವಿಸ್ತಾರ ಪಡೆಯಬಹುದು. ಈ ಮಧ್ಯದ ಯಾವುದೇ ಉದ್ದಳತೆಯ ಚರಣವನ್ನು ಇವರು ಕಟ್ಟುತ್ತಾರೆ. ಹಾಗೆ ನೋಡಿದರೆ ಲಯದ ನಿರಂತರ ಗತಿಯಾಗಿರುವ ಪದ್ಯದಲ್ಲಿ ಚರಣವೆಂಬುದಕ್ಕೆ ಅರ್ಥವೇ ಇಲ್ಲ. ಕುವೆಂಪು ಅವರ ಸರಳಗಳೆ, ಮಹಾಛಂದಸ್ಸುಗಳು ಅದಕ್ಕೆ ನಿದರ್ಶನ (ಛಂದಸ್ಸಿನ ನಿಜವಾದ ಅರ್ಥದಲ್ಲಿ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಅನೇಕ ಸಾಲುಗಳ ಕಾವ್ಯವಲ್ಲ, ತರಂಗ ತರಂಗವಾಗಿ ಮುಂದುವರಿದ ಒಂದೇ ಸಾಲಿನ ಕಾವ್ಯ).

ಪದ್ಯಪದ: ಆಧುನಿಕರಲ್ಲಿ ಕಾವ್ಯಕಟ್ಟಡ ರೂಪಪಡೆಯುವುದು ೨ ಬಗೆಯಿಂದ. ಒಂದು: “ಏಕರೀತಿಯ ಗಣ” ಇಲ್ಲವೆ “ಮಿಶ್ರಗಣ”ದ ಚರಣಗಳಿಂದ ನಿರ್ದಿಷ್ಟ ಪದ್ಯವನ್ನು (Stanza) ರೂಪಿಸಿಕೊಂಡು, ಆ ಪದ್ಯಗಳನ್ನು ಅಡಕಿಲೇರಿಸುವುದು. ಇದು “ಪದ್ಯಶ್ರೇಣಿ”. ಕುವೆಂಪುರಚಿತ “ಪದ್ಯಶ್ರೇಣಿ”ಯಲ್ಲಿ ಎರಡು, ಮೂರು ಇಲ್ಲವೆ ನಾಲ್ಕು ಚರಣದ ಪದ್ಯಗಳನ್ನು ರೂಪಿಸಿಕೊಂಡ ಸಾಕಷ್ಟು ಪ್ರಯೋಗಗಳು ಸಿಗುತ್ತವೆ. ಎರಡು: ಪದ್ಯಗಳನ್ನು ರೂಪಿಸಿಕೊಳ್ಳದೆ ಇಡೀ ಪದ (Poem)ವನ್ನು ನವ್ಯಕಾವ್ಯದ ಮಾದರಿಯಲ್ಲಿ  ಭಾವಕ್ಕೆ ತಕ್ಕಂತೆ ಬೆಳೆಸಿಕೊಂಡು ಹೋಗುವುದು. ಇದು “ಪದಶ್ರೇಣಿ”. ಭಾವಕ್ಕೆ ತಕ್ಕಂತೆ ಗಣ ಕಟ್ಟಿಕೊಂಡು ಬೆಳೆಯುವ ಸಾನೆಟ್‌, ಪ್ರಗಾಥ, ವಚನ ಇತ್ಯಾದಿ ರೂಪದ “ಪದಶ್ರೇಣಿ” ವಿಧಾನ ಕುವೆಂಪುವಿನಲ್ಲಿ ವೈಭವ, ವೈವಿಧ್ಯಗಳಿಂದ ಶೋಭಿಸುತ್ತದೆ. ಉದಾ.

ಪಕ್ಷಿ?
ಅಲ್ತಲ್ತಾ
ತರುಚೇತನ, ಚೈತ್ಯಾಕ್ಷಿ
ಗರಿ
ತಳೆದಿದೆ ಸಸ್ಯಪ್ರಜ್ಞೆಗೆ ಸೇಂದ್ರಿಯ ಸಾಕ್ಷಿ!

ಹೀಗೆ ಭಾವದೊಂದಿಗೆ ಬೆಳೆದುಕೊಂಡು ಪ್ರವಹಿಸುವ ಈ ಸಣ್ಣ ದೊಡ್ಡ ಲಯಗಳು ಮಾಸ್ರಗ್ಧರೆ ಮೊದಲಾದವುಗಳ ಅಸ್ಪಷ್ಟ ಲಯಪ್ರವಹನವನ್ನು ನೆನಪಿಸುತ್ತವೆ. ಕುವೆಂಪು ಅವರಲ್ಲಿ ಸಂಖ್ಯೆ ಮತ್ತು ಸತ್ವದೃಷ್ಟಿಯಿಂದ ಇಂಥ ರಚನೆಗಳೇ ಪ್ರಧಾನವಾಗಿರುವುದರಿಂದ ಅವರ ಮನಸ್ಸು ‘ಗೇಯತೆ’ಗಿಂತ ‘ಗದ್ಯತೆ’ಗೆ ಹೆಚ್ಚು ವಾಲುವುದೆಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಅವರ ಭಾಷೆಯೂ ಗೇಯತೆಗೆ ಭಾರವೆನಿಸುತ್ತದೆ; ಗದ್ಯತೆಗೆ ಸಹಜಗಂಭೀರವೆನಿಸುತ್ತದೆ. ಈ ಕಾರಣಕ್ಕಾಗಿಯೇ ಅವರು ಗೇಯಗುಣದ ಭಾವಗೀತೆಗಳಿಗಿಂತ ಗದ್ಯಗುಣದ ಪದ, ಪ್ರಗಾಥ, ಸರಳಗಳೆ, ಮಹಾಛಂದಸ್ಸುಗಳನ್ನು ಸಮರ್ಥವಾಗಿ ಬರೆಯಬಲ್ಲರು. ಅವರ ಈ ಬಲ ಮತ್ತು ದೌರ್ಬಲ್ಯಗಳು ಅವರಿಗೇ ಮನವರಿಕೆಯಾಗಿರುವುವೆಂಬಂತೆ, ತನ್ನ ದಾರಿಯನ್ನು ತಾನು ಹುಡುಕಿಕೊಂಡು ಹರಿಯುವ ನೀರಿನ ಹಾಗೆ ಅವರು ಗೇಯಗುಣದ ಭಾವಗೀತೆಯನ್ನು ಕೈಬಿಡುತ್ತ ಗದ್ಯಗುಣದ ಸರಳರಗಳೆ, ಮಹಾಛಂದಸ್ಸುಗಳನ್ನು ಆಶ್ರಯಿಸುತ್ತ ನಡೆದಿರುವರು. ಒಟ್ಟಿನಲ್ಲಿ ಬೇಂದ್ರೆಯವರುಗೇಯಗುಣದ ಭಾವಗೀತೆಯತ್ತ, ಕುವೆಂಪು ಅವರು ಗದ್ಯಗುಣದ ಸರಳರಗಳೆ ಮಹಾಛಂದಸ್ಸುಗಳತ್ತ ಲೇಸಾಗಿ ನಡೆಯುತ್ತಾರೆ. ಅಂದರೆ ಪದ್ಯವನ್ನು ಬೇಂದ್ರೆಯವರು ಸಂಗೀತದ ಸಮೀಪ ನಿಲ್ಲಿಸುತ್ತಾರೆ. ಸಂಗೀತಕೂಪಕ್ಕೆ ಬೀಳದಂತೆ; ಕುವೆಂಪು ಅವರು ಗದ್ಯದ ಸಮೀಪ ನಿಲ್ಲಿಸುತ್ತಾರೆ-ಗದ್ಯಕೂಪಕ್ಕೆ ಬೀಳದಂತೆ. ಅದಕ್ಕಾಗಿಯೇ ಬೇಂದ್ರೆಯವರ ಪದ್ಯವನ್ನು ಗೇಯಸೌಂದರ್ಯಕ್ಕಾಗಿ ಒಮ್ಮೆ, ಅರ್ಥಸೌಂದರ್ಯಕ್ಕಾಗಿ ಒಮ್ಮೆ ಓದಬೇಕಾಗುವಂತೆ, ಕುವೆಂಪು ಅವರ ಪದ್ಯವನ್ನು ಭಾಷಾಸೌಂದರ್ಯಕ್ಕಾಗಿ ಒಮ್ಮೆ ಓದಬೇಕಾಗುವಂತೆ, ಕುವೆಂಪು ಅವರ ಪದ್ಯವನ್ನು ಭಾಷಾಸೌಂದರ್ಯಕ್ಕಾಗಿ ಒಮ್ಮೆ, ಅರ್ಥಸೌಂದರ್ಯಕ್ಕಾಗಿ ಒಮ್ಮೆ ಓದಬೇಕಾಗುತ್ತದೆ. ಇದು ಕುವೆಂಪು ಅವರ ಛಂದಸ್ಸಿನ ಗುಟ್ಟೂ ಹೌದು; ಕವಿತ್ವದ ಗುಟ್ಟೂ ಹೌದು.

ಗದ್ಯಗಂಧಿಯಾಗಿಯೇ ನಡೆವ ಕುವೆಂಪು ಅವರ ಪದ್ಯಗಳ ಅಸ್ಪಷ್ಟ ಲಯಗಳು ಇನ್ನೂ ಅಸ್ಪಷ್ಟತೆಗೆ ಇಳಿಯುವಲ್ಲಿ ಸ್ವಾಭಾವಿಕವಾಗಿಯೇ ಅವು ನವ್ಯಕಾವ್ಯಕ್ಕೆ ಹೊರಳುತ್ತವೆ. ಉದಾ;

ದಿಗಂತದಿಂದ ದಿಗಂತಕೆ ಹಬ್ಬಿದೆ
ವಿಶ್ವವ
ತಬ್ಬಿದೆ
ರುಂದ್ರ
ರಾತ್ರಿ!
ಸಾಂದ್ರ
ತಮಂಧದಿ ಮುಳುಮುಳುಂಗುತ ಕರಂಗಿದೋಲಿದೆ ಧಾತ್ರಿ
ವಿಶಾಲವ್ಯೋಮದಿ
ತಾರೆಗಳಿಲ್ಲ
ಶಶಿಯಿಲ್ಲ
ಕಾಂತಿಯ
ಕಣವಿಲ್ಲ
ಜಗತ್ತು
ಪ್ರಜ್ಞೆಯಿಲ್ಲದ
ಶೂನ್ಯಮಹಾಶವ ಬಿದ್ದವೊಲಿದ್ದತ್ತು.

ಈ ರಚನೆ ಗೇಯತೆಯ ಕಾಟವನ್ನು ತಪ್ಪಿಸಿಕೊಂಡು ಗದ್ಯಗಂಧಿಯ ನವ್ಯಕಾವ್ಯಕ್ಕೆ ಹೊರಳಿದುದನ್ನು ಕಾಣಬಹುದು. ಇನ್ನಷ್ಟು ಹೊರಳಿದರೆ ಇದು ಗದ್ಯವೇ ಆಗಿ ಬಿಡುತ್ತದೆ.

ಸರಳರಗಳೆಮಹಾಛಂದಸ್ಸು:

ಕನ್ನಡದ ಲಲಿತರಗಳೆಯೇ ಪ್ರತಿಚರಣದ ಆದಿಪ್ರಾಸ, ಯತಿರೂಪದ ಅಂತ್ಯಪ್ರಾಸಗಳನ್ನು ಕಳಚಿಕೊಂಡು ತಡೆಯಿಲ್ಲದೆ ಹರಿಯುವ ‘ಸರಳರಗಳೆ’ಯಾಯಿತೆಂದು ಸಾಮಾನ್ಯವಾಗಿ ಎಲ್ಲರ ಹೇಳಿಕೆ. ಆದರೆ ನಾಗವರ್ಮನ ಪ್ರಕಾರ ಲಲಿತರಗಳೆಗೆ ಮೂಲವಾದುದು ಸರಳರಗಳೆ, ಹೆಸರು ಮಾತ್ರ ದಂಡಕ.[3] ಹರಿಹರ ತನಗೆ ಹಿಂದೆ ಇದ್ದ ಲಯಾತ್ಮಕ ಗದ್ಯವಾದ ಈ ದಂಡಕವನ್ನು ೨೦ ಮಾತ್ರೆಯ ಚರಣಗಳನ್ನಾಗಿ ತುಂಡರಿಸಿ, ಆದ್ಯಂತಪ್ರಾಸ, ಅಂತ್ಯಯತಿ, ಚರಣದ್ವಯ ಚೌಕಟ್ಟಿನಿಂದ ಬಂಧಿಸಿ ಲಲಿತರಗಳೆಯನ್ನಾಗಿಸಿಕೊಂಡನು. ಆದರೆ ಇಂಗ್ಲಿಷ್‌ಬ್ಲಾಂಕ್‌ವ್ಹರ್ಸನ್ನು ಕಾಣುತ್ತಲೇ ಹರಿಹರ ತೊಡಿಸಿದ್ದ ಆ ಬಂಧನಗಳನ್ನು ಹರಿದುಕೊಂಡು, ಆದರೆ ೨೦ ಮಾತ್ರೆಯ ಚರಣವ್ಯಾಪ್ತಿಯನ್ನು ಒಪ್ಪಿ, ಸರಳರಗಳೆ ಹೆಸರಿನಿಂದ ಮತ್ತೆ ಹೊರಬಂದಿತು, ದಂಡಕ. ಇದಲ್ಲದೆ ಐದುಮಾತ್ರೆಯ ೮ ಗಣಗಳಿಗೆ ಹೆಚ್ಚಿನದಾಗಿ ÈS. ÈS. ÈÈ;ÈÈ.ÈS. ÈÈ;ÈS. ÈÈ.-;ÈS. ÈÈ.ÈÈ ಎಂಬ ಮೂರು ಘಟಕದ ಈ ನಾಲ್ಕು ಹೊಸಗಣಗಳನ್ನು ಯೋಜಿಸಿಕೊಂಡು ತನ್ನ ಏಕತಾನತೆಯನ್ನು ಕಡಿಮೆಮಾಡಿಕೊಂಡಿತು. ಲಲಿತ ರಗಳೆಯಾಗಿದ್ದ ದಂಡಕವು ಭಾವನಿರ್ಭರತೆಯ ಕುವೆಂಪು ಅವರಿಗೆ ಸರಳರಗಳೆಯಾಗಿ ಲಭಿಸಿದುದು ಒಂದು ವರವೇ ಸರಿ. ತಮ್ಮ ಮೊದಲಿನ ನಾಟಕಗಳಲ್ಲಿ ಗಣಗಳನ್ನು ಕ್ರಮವಾಗಿ ಜೋಡಿಸಿದ, ಆಮೇಲಿನ ನಾಟಕಗಳಲ್ಲಿ ಗಣಗಳನ್ನು ತುಂಡುತುಂಡಾಗಿ ಕತ್ತರಿಸಿದ-ಹೊಂದಿಸಿದ ಚಟುವಟಿಕೆಗಳು ಸರಳರಗಳೆಯ ಅಪೂರ್ವಸಿದ್ಧಿಯಾಗಿರುವಂತೆ, ಮಹಾಛಂದಸ್ಸಿನ ಪೂರ್ವಸಿದ್ಧತೆಯೂ ಆಗಿವೆ.

ಸರಳರಗಳೆಯ ಸರ್ವತೋಭದ್ರರೂಪ ಮಹಾಛಂದಸ್ಸು, ಇಲ್ಲಿ ಕುವೆಂಪು ಅವರು ಗಣವ್ಯಾಪ್ತಿ, ಗಣಸಂಯೋಜನೆ, ಯತಿಬಳಕೆ, ಖಂಡ (Para) ಯಧಜನೆಗಳಲ್ಲಿ ತುಂಬ ಮುಕ್ತವಾಗಿ ಸಮುದ್ರಸಾಹಸ ಮರೆಯುತ್ತಾರೆ. ಆದರೆ ಇಷ್ಟರಿಂದಲೇ ಇದನ್ನು ಸರಳರಗಳೆಯಿಂದ ಭಿನ್ನವಾಗಿಸಿ ಮಹಾಛಂದಸ್ಸು ಎಂದು ಕರೆಯಬಹುದೇ? ಎಂಬುದು ಪ್ರಶ್ನೆ. ಇದಕ್ಕೆ ವಿದ್ವಾಂಸರಿಂದ ‘ಬಹುದು’ ‘ಬಾರದು’ ಎಂಬ ಎರಡು ಉತ್ತರಗಳು ಈವರೆಗೆ ಬಂದಿವೆ. ನನಗೆ ಮಾತ್ರ ಇದು ಹೆಚ್ಚಿನದಾಗಿ ಮೂರು ಘಟಕದ ನಾಲ್ಕುಗಣ ಮತ್ತು ಮಹಾಶೈಲಿಗಳನ್ನು ಮೈಗೂಡಿಸಿಕೊಂಡು, ಚರಣಗಳಾಗಿ ನಿಂತ ಪ್ರಾಚೀನ ದಂಡಕವೇ ಆಗಿದೆಯೆನಿಸುತ್ತದೆ. ಆದುದರಿಂದ ಸರಳರಗಳೆ (Blank Verse) ಮತ್ತು ಮಹಾಶೈಲಿ (Grand Style)ಗಳ “ಅನಲಾನಿಲ ಸಂಯೋಗ”ದಂಥ ಪ್ರಬುದ್ಧ ಪ್ರಯೋಗವಾದ ಇದನ್ನು “ಸಂಕೀರ್ಣರಗಳೆ”ಯೆಂದು ಕರೆಯುವುದು ಲೇಸು. ಇಲ್ಲಿಯ “ಸಂಕೀರ್ಣ” ಎಂಬ ಪದ ಅದರ ಸಂಕ್ಲಿಷ್ಟಗುಣವನ್ನು ತಿಳಿಸಿಕೊಟ್ಟರೆ, ರಗಳೆ ಎಂಬ ಪದ ಅದರ ಮೈ ಮೂಲಗಳನ್ನು  ತಿಳಿಸಿಕೊಡುತ್ತದೆ ಎಂಬುದನ್ನು ನೆನೆಯಬೇಕು. ಒಟ್ಟಿನಲ್ಲಿ ಕುವೆಂಪು ಛಂದಸ್ಸು ಪದ್ಯ-ಪದಗಳಲ್ಲಿ ಸಾಧನೆಯ, ಸರಳರಗಳೆಗಳಲ್ಲಿ ಸಿದ್ಧಿಯ, ಸಂಕೀರ್ಣರಗಳೆಯಲ್ಲಿ ಅತ್ಯಂತಿಕ ಸಿದ್ಧಿಯ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ, ಛಂದಸ್ಸಿನ ತೊಡಕನ್ನು ಬಿಡಿಸಿಕೊಳ್ಳುತ್ತ ನಡೆದುಬಂದಿದೆ. ಹೀಗೆ ಛಂದಸ್ಸಿನ ಬಂದವನ್ನು ಬಿಡಿಸಿಕೊಳ್ಳುತ್ತ ನಡೆದು ಕೊನೆಗೆ ಛಂದಸ್ಸನ್ನೂ ಮೀರಿ ಬೆಳೆಯುವುದು ಮಹಾಕವಿಯ ಲಕ್ಷಣ. ಹರಿಹರ ರಗಳೆಯಲ್ಲಿ ಮೀರಿ ಬೆಳೆದುದು ಹೀಗೆ, ಕುಮಾರವ್ಯಾಸ ಷಟ್ಪದಿಯಲ್ಲಿ ಮೀರಿ ಬೆಳೆದುದು ಹೀಗೆ, ಕುವೆಂಪು ಸಂಕೀರ್ಣರಗಳೆಯಲ್ಲಿ ಮೀರಿ ಬೆಳೆದುದು ಹೀಗೆ. ಆದುದರಿಂದ ಕುವೆಂಪುವಿನ ಕೈಯಲ್ಲಿ ಅದು ಸರಳರಗಳೆಯೆಂಬ ಛಂದೋಪ್ರಕಾರವಾಗಿ ಉಳಿಯದೆ, ಸಂಕೀರ್ಣರಗಳೆಯೆಂಬ ಸಾಹಿತ್ಯಪ್ರಕಾರವಾಗಿ ಬೆಳೆಯಿತು.

ಈ ರೀತಿ ಕುವೆಂಪು ಅವರು ಛಂದಸ್ಸನ್ನು ಅಲಕ್ಷಿಸಿದ ಕವಿಯಲ್ಲ, ಆಶ್ರಯಿಸಿನಿಂತ ಕವಿಯೂ ಅಲ್ಲ, ಅರಗಿಸಿಕೊಂಡು ಅರಗಿಸಿಕೊಂಡು ಬೆಳೆದ ಕವಿಯಾಗಿ ತೋರುತ್ತಾರೆ.

ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ
ಕಬ್ಬವೆಣ್ಣಂ
ಕಟ್ಟುವೆಗ್ಗತನಮಂ ಬಿಟ್ಟು
ಹೃದಯದಾವೇಶಮನೆ
ನೆಚ್ಚುವ ಮಹಾಕವಿಯ
ಮಾರ್ಗದಿಂ
…..”
ಹೆಜ್ಜೆ
ಹಾಕುವ ಕವಿಯಾಗಿ ಕಾಣುತ್ತಾರೆ.[4]

* ರುದ್ರಗುಣವೆನ್ನುವುದು ಇರುವ ಬಗ್ಗೆ ನನಗೆ ಸಂದೇಹವಿರುವುದರಿಂದ ಅದನ್ನು ಇಲ್ಲಿ ಕೈಬಿಡಲಾಗಿದೆ.

[1] ನೋಡಿ. ಡಾ. ಎಂ. ಎಂ. ಕಲಬುರ್ಗಿ, ಅಂಶಗಣದ ಇತಿಹಾಸ, (ಕರ್ನಾಟಕ ಭಾರತಿ, ೮.೨)

[2] ನೋಡಿ. ತೀ.ನಂ.ಶ್ರೀ. – ಸಮಾಲೋಕನದಲ್ಲಿಯ ಛಂದಸ್ಸಿನ ಲೇಖನಗಳು.

[3] ಶ್ರೀ ಕುಕ್ಕಿಲ ಕೃಷ್ಣಭಟ್ಟ, ಛಂದೋಂಬುಧಿ, (೧೯೭೫), ಪೀಠಿಕೆ xxx ಮತ್ತು ಪು. ೫೮

[4] ಇಲ್ಲಿ ಕುವೆಂಪು ಪದ್ಯಪ್ರಪಂಚದ ಥಿಯಾರಿಟಿಕಲ್‌ಛಂದಸ್ಸಿನ ವಿವೇಚನೆಯೇ ಪ್ರಧಾನವಾಗಿದೆ; ಅಪ್ಲಾಯಿಡ್‌ಛಂದಸ್ಸಿನ ವಿವೇಚನೆ ಬೇರೊಂದು ಲೇಖನದ ವಿಷಯ. ಅವರ ಪದ್ಯಗಳಲ್ಲಿಯ ಪ್ರಾಸ ಯತಿಗಳ ವಿಷಯವನ್ನೂ ಇಲ್ಲಿ ವಿವೇಚಿಸಿಲ್ಲ.