“ಪುಲಿಗೆರೆಯ ಶಂಖಜಿನೋದ್ಭವ ಕಾವ್ಯ”ದ ಪದ್ಯಛಂದಸ್ಸನ್ನು ಕುರಿತು ಡಾ. ಎಂ. ಚಿದಾನಂದಮೂರ್ತಿ (ಸಾಧನೆ ೯-೧) ಮತ್ತು ಪ್ರೊ. ಎನ್‌. ಎಸ್‌. ಲಕ್ಷ್ಮೀನಾರಾಯಣಭಟ್ಟ (ಅಂಕಣ ೨-೩) ಪರ-ವಿರೋಧ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಇದೇ ಬಗೆಯ ಛಂದೋಗತಿಯುಳ್ಳ “ಮಣಿಪುರಕೆ ಬಂದವಾಗ ಗಿಣಿಗಳು…” ಎಂಬ ಪದ್ಯ ನನ್ನು ವಿದ್ಯಾರ್ಥಿ ದೆಸೆಯಿಂದಲೂ ಆಕರ್ಷಿಸಿದ್ದುದರಿಂದ, ಶಂಕಜಿನೋದ್ಭವಕಾವ್ಯದ ಪರಿಷ್ಕರಣ ಪ್ರಸಂಗದಲ್ಲಿಯೇ ಅದರ ಛಂದಸ್ಸು ನನ್ನ ಗಮನ ಸೆಳೆದಿದ್ದುದರಿಂದ, ಇತ್ತೀಚೆಗೆ ಇದೇ ಛಂದೋಗತಿಯ ಉಯ್ಯಲ ಪದವನ್ನು ನಾನು ಪ್ರಕಟಿಸಿರುವುದರಿಂದ (ಆದಯ್ಯನ ಲಘುಕೃತಿಗಳು) ಈ ವಾದದಲ್ಲಿ ಪ್ರವೇಶಿಸಲು ನನಗೆ ಮನಸ್ಸಾಗುತ್ತಿದೆ.

‘ಶಂಕಜಿನೋದ್ಭವಕಾವ್ಯ’ ನೂರನಾಲ್ವತ್ತು ಪದ್ಯಗಳ ಕೃತಿ. ಈ ಪದ್ಯಗಳನ್ನು

ಸಂಪಾದಕರು ಹೀಗೆ ಅಚ್ಚಿಸಿದ್ದಾರೆ
ತಮ್ಮೊಳು
ತಾವೆಲ್ಲರು | ಓಕುಳಿಗಳ
ಗಮ್ಮನೆ
ಆಡುತಲಿ |
ಕಮ್ಮಂಗೋಲನ
ಗೆಲಿದ | ಸ್ವಾಮಿಯ
ಹಮ್ಮೆಯಳ್ಪಲಗೊಂಡರು
|

ಈ ಪದ್ಯವನ್ನು ಡಾ. ಮೂರ್ತಿ, ಪ್ರೊ. ಭಟ್ಟ ಅವರು ಗಣದೃಷ್ಟಿಯಿಂದ ಹೀಗೆ ವಿಭಜಿಸಿದ್ದಾರೆ.

ಡಾ. ಮೂರ್ತಿ      ತಮ್ಮೊಳು | ತಾವೆಲ್ಲ | ರು [ಓಕುಳಿಗಳ]
ಗಮ್ಮನೆ | ಆಡುತ | ಲಿ

ಪ್ರೊ. ಭಟ್ಟ           ತಮ್ಮೊಳು | ತಾವೆಲ್ಲ | ರು | ಓ |ಕುಳಿಗಳ
ಗಮ್ಮನೆ ಆಡುತ | ಲಿ

೧. ಇಲ್ಲಿಯ ‘ಓಕುಳಿಗಳ’ ಎಂಬುದು ಮೊದಲನೆಯ ಚರಣಕ್ಕಾಗಲೀ, ಎರಡನೆಯ ಚರಣಕ್ಕಾಗಲೀ ಸಂಬಂಧಿಸಿದ, ಆದರೆ ಎರಡರ ಮಧ್ಯದ ಉಯ್ಯಾಲೆ ರೂಪದ ಭಾಗವೆಂದು ಡಾ. ಮೂರ್ತಿ, ಮೊದಲ ಚರಣಕ್ಕೆ ಸಂಬಂಧಿಸಿದ ಭಾಗವೆಂದು ಡಾ. ಮೂರ್ತಿ ಮೊದಲ ಚರಣಕ್ಕೆ ಸಂಬಂಧಿಸಿದ ಭಾಗವೆಂದು ಪ್ರೊ. ಭಟ್ಟ ಹೇಳುತ್ತಾರೆ. ಇರಲ್ಲಿ ಪ್ರೊ. ಭಟ್ಟರ ಅಭಿಪ್ರಾಯ ಸರಿಯಾಗಿದೆ. (ವಿವರಗಳಿಗೆ ನೋಡಿ ಅಂಕಣ ೨-೩).

೨. ಗಣವನ್ನು ಡಾ. ಮೂರ್ತಿಯವರು | ರು | ಓಕುಳಿಗಳ | ಎಂದು, ಪ್ರೊ. ಭಟ್ಟ ಅವರು | ರು-ಓ|ಕುಳಿಗಳ | ಎಂದು ವಿಭಜಿಸುತ್ತಾರೆ.

ಪ್ರೊ. ಭಟ್ಟರ ವಿಭಜನೆಯಿಂದಾಗಿ ಮಿಕ್ಕ ಪದ್ಯಗಳಿಂದ

| ಯಾ-ವಿ | ಸ್ಮಿತನಾಗಿ,      |ಗೆ –ಯೊ|ಳು ತಾವು
|ನು –ಸ್ತು|ತಿಸಿದನು,          |ನಾ –ಗೆ|ಲಿದ ದೇವ
|ನ –ಕ|ರ್ಮಗಳ,              |ದಾ –ಜಿ|ನಗೆ ಪುಷ್ಟ
|ರು –ಓ | ಕುಳಿಗಳ,           |ಬ್ರ – ಚೂ|ಡನು ತನ್ನ

ಎಂಬಂಥ ಶ್ರುತಿಸಹ್ಯವಲ್ಲದ, ಅರ್ಥರಹಿತ ಗಣಗಳೇ ಹೊರಡುವುದರಿಂದ ಈ ವಿಭಜನೆ ಸರಿಯಾದುದಲ್ಲ, ಹೀಗೆ ವಾಚಿಸುತ್ತ ಹೋದರೆ ಪದ್ಯದ ಅರ್ಥಪ್ರತೀತಿ ಉದ್ದಕ್ಕೂ ಹಾಳಾಗುತ್ತದೆ. ಆದುದರಿಂದ ಡಾ. ಮೂರ್ತಿಯವರ ಅಭಿಪ್ರಾಯದಂತೆ |ರು|ಓಕುಳಿಗಳ| ಎಂದು ಬಿಡಿಸುವುದೇ ಸರಿಯಾದುದು.

೩. ಇಲ್ಲಿ|ರು|ಎಂಬುದು ಮುಡಿಯಾಗಿ ಬಂದು ತನ್ನ ಹಿಂದಿನ ವಿಷ್ಣುಗಣದ ವ್ಯಾಪ್ತಿಗೆ ಸಮನಾಗಿ ಹಿಗ್ಗಿಕೊಳ್ಳುತ್ತದೆ. ಆದುದರಿಂದ |ರುs| ಎಂಬುದೂ ಒಂದು ವಿಷ್ಣುಗಣ.

೪. |ಓಕುಳಿಗಳ| ಎಂಬುದು ಡಾ. ಮೂರ್ತಿಗಳು ಹೇಳುವಂತೆ ರುದ್ರಗಣವಲ್ಲ ಮೂರು ಅಂಶಗಳಲ್ಲಿ ವ್ಯಾಪಿಸಿದ ಮಾತ್ರಾಘಟಿತ ವಿಷ್ಣುಗಣ. ಇದರ ವಿನ್ಯಾಸ ಹೀಗೆ:

È  È  È  È
|ಓ. ಕು. ಳಿ. ಗ. ಳ. |

ಇಲ್ಲಿ ಪ್ರಥಮೇತರ ಒಂದೊಂದು ಅಂಶಸ್ಥಾನಗಳಲ್ಲಿ ಬರಬೇಕಾದ ಒಂದು ಲಘು ಇಲ್ಲವೆ ಒಂದು ಗುರುವಿಗೆ ಬದಲು ಎರಡೆರಡು ಲಘುಗಳನ್ನು ಯೋಜಿಸಲಾಗಿದೆ, ಅಷ್ಟೇ (ನಮ್ಮ ವಿದ್ವಾಂಸರಿಗೆ ಮಾತ್ರಾಘಟಿತ ಅಂಶಗಳ ರಹಸ್ಯ ಇನ್ನೂ ಅರ್ಥವಾಗಿಲ್ಲ. ಇದಕ್ಕೆ ಕಾರಣ ಇವರು ಕಿವಿಯ ವಸ್ತುವಾದ ಪದ್ಯಛಂದಸ್ಸನ್ನು ಕಣ್ಣಿನಿಂದ ನೋಡಿ ವಿವೇಚಿಸುತ್ತಿರುವುದು.)ಹೀಗಾಗಿ ಈ ಪದ್ಯದ ತುಂಬ ವಿಷ್ಣುಗಣಗಳೇ ಇದ್ದು ಮೊದಲನೆಯ ಚರಣವನ್ನು ಡಾ. ಮೂರ್ತಿ ಮತ್ತು ಪ್ರೊ. ಭಟ್ಟರಿಂದ ಬೇರೆಯಾಗಿ

ವಿ                ವಿ           ವಿ          ವಿ
| ತ. ಮ್ಮೊ. ಳು | ತಾ. ವೆ. ಲ್ಲ. | ರುs| ಓ. ಕುಳಿ. ಗಳ |

ಎಂದು ಬಿಡಿಸುವುದೇ ಸರಿಯಾದ ರೀತಿಯಾಗಿದೆ. ಈ ವರೆಗಿನ ವಿವೇಚನೆಯಿಂದ ಕೆಳಗಿನ ನಿರ್ಣಯಗಳಿಗೆ ಬರಬಹುದುಃ

ಅ. ಈ ಚರಣವು ಪ್ರಾರಂಭದಲ್ಲಿ ಅಂಶಘಟಿತ ೨ ವಿಷ್ಣುಗಣ, ಆಮೇಲೆ ಮುಡಿರೂಪದ

೧. ವಿಷ್ಣುಗಣ, ಕೊನೆಗೆ ಮಾತ್ರಾಘಟಿತ ೧ ವಿಷ್ಣುಗಣಗಳಿಂದ ಕೂಡಿದ ಮಿಶ್ರಗಣಬಂಧವಾಗಿದೆ.

ಆ. ಇಲ್ಲಿಯ ಪ್ರಾರಂಭದ ಎರಡು ಗಣಗಳಲ್ಲಿ ವ್ಯತ್ಯಾಸ ತೋರಬಹುದು, ಉದಾ:

ವಿ
೧. |ಬಡ. ಮತಿ. ಯ | ನುಡಿಯಿದೆಂ | ದುs| ಈ ಕೃತಿಯೆ |-
(ಅಂಶಘಟಿತ ವಿಷ್ಣುಗಣಕ್ಕೆ ಬದಲು ಮಾತ್ರಾಘಟಿತ ವಿಷ್ಣುಗಣ)

ವಿ
೨. | ಕುಸು. ಮಾs. | ಸ್ತ್ರನ ಗೆದ್ದ | ನs |ಕರ್ಮಂಗಳ |
(ನೋಟಕ್ಕೆ ಬ್ರಹ್ಮವಾಗಿರುವ ವಿಷ್ಣುಗಣ)

ಅಥವಾ

ವಿ
|ಕುಸು. ಮಾ. ಸ್ತ್ರ | ನ ಗೆ. ದ್ದ | ನs | ಕರ್ಮಗಳ |
(ಛಂದೋವ್ಯತ್ಯದ ವಿಷ್ಣುಗಣ)

ಇ. ಮುಡಿರೂಪದ ವಿಷ್ಣುಗಣ ಇಲ್ಲಿ ಕಡ್ಡಾಯ. ಅಕ್ಷರಗಳ ಕೊರತೆಯಿಂದಾಗಿ ಉಯ್ಯಾಲೆಸ್ಥಿತಿಯಿರುವುದು ಈ ಗಣದಲ್ಲಿಯೇ ಹೊರತು ಡಾ. ಮೂರ್ತಿ ಹೇಳುವಂತೆ ಇದರ ಮುಂದಿನ ಗಣದಲ್ಲಲ್ಲ. ಇಂಥ ಲಯದ ಹಾಡುಗಳನ್ನು ಪ್ರಾಚೀನರು ‘ಉಯ್ಯಲಪದ’ವೆಂದು ಕರೆದಿದುರಿಂದ ಈ ಗಣವನ್ನು ಉಯ್ಯಾಲೆ ಗಣವೆಂದು ಕರೆಯಬಹುದಾದರೂ ಇಲ್ಲಿಯ ತೆರವಾದ ಭಾಗದಲ್ಲಿ ಅಕ್ಷರಗಳು ಸೇರಿಕೊಂಡಾಗ ಈ ಉಯ್ಯಾಲೆ ಅಥವಾ ತರಂಗ ನಿಂತ ನಿಸ್ತರಂಗವಾಗುವ ಕಾರಣ ಇದನ್ನು ‘ತರಂಗಗಣ’ವೆಂದು ಕರೆಯುವುದೇ ಯೋಗ್ಯವೆನಿಸುತ್ತದೆ. ಈ ಹಿಂದೆ ಇಂಥ ಗಣವನ್ನು ನಾನು ‘ತರಂಗಗಣ’ವೆಂದೇ ಕರೆದಿದ್ದೇನೆ[1] (ತರಂಗ-ನಿಸ್ತರಂಗದಂತೆ, ಉಯ್ಯಾಲೆಗೆ ಸರಿಯಾದ ವಿರುದ್ಧ ಶಬ್ದ ಸಿಗುವುದಿಲ್ಲ.)

ವಿ
ಈ. ಕೊನೆಯ ಗಣ | ಓ. ಕುಳಿ. ಗಳ. | ಎಂಬಂತೆ ಮಾತ್ರಾಘಟಿತ ವಿಷ್ಣುಗಣವಾಗಿರುತ್ತದೆ.

ವಿ
ಇಲ್ಲವೆ ಕಮ್ಮಂಗೋಲನ ಗೆಲಿ|ದs|ಸ್ವಾ. ಮಿ. ಯ | ಎಂಬಲ್ಲಿಯಂತೆ ಅಂಶಘಟಿತ ವಿಷ್ಣುಗಣವಾಗಿರುತ್ತದೆ.

ಒಟ್ಟಿನಲ್ಲಿ ಶಂಖಜಿನೋದ್ಭವಕಾವ್ಯ ಮೂಲತಃ ಅಂಶವೃತ್ತಯುಕ್ತ ಶಿಷ್ಟಪದ ಕೃತಿಯಾಗಿದ್ದರೂ ಜಾನಪದ ಸೀಮೆಯತ್ತಲೂ ವಾಲಿದೆ. ಇಂಥ ಕೃತಿಗಳ ಛಂದಸ್ಸಿನಲ್ಲಿ ಒಂದು ಬಗೆಯ ಶಿಥಿಲ ಧೋರಣೆ ಕಂಡುಬರುವುದು ಸ್ವಾಭಾವಿಕ. ಅಂದರೆ ಗಣದ ಚೌಕಟ್ಟಿಗೆ ಧಕ್ಕೆ ಬರದಂತೆ ಅದರ ಒಳಗಿನ ಅಂಶಘಟಕಗಳು ವಿರಳ-ಸಾಂಧ್ರವಾಗಿರುವುದುಂಟು; ಆಗಾಗ ಅಂಶಗಣಗಳು ಮಾತ್ರಾಮುಖಿಯಾಗಿರುವುದೂ ಉಂಟು. ಈ ಗುಟ್ಟನ್ನು ಅರಿಯದಿದ್ದರೆ ಹಾಡುವ ಪದ್ಯವನ್ನು ಓದುವ ಪದ್ಯದ ಛಂದೋಮಾನದಿಂದ ಅಳೆದಂತಾಗುತ್ತದೆ; ಕೆಲವರಿಂದ ಅಳೆಯಲಾಗಿದೆ. ಆದುದರಿಂದ ಈವರೆಗೆ ಅಂಶಛಂದಸ್ಸನ್ನು ಕುರಿತು ಬಂದ ಎಲ್ಲಾ ಲೇಖನಗಳನ್ನು ಅದರಲ್ಲಿಯೂ ತೀ. ನಂ. ಶ್ರೀ ಅವರ ಲೇಖನಗಳನ್ನು ಇಂದು ವಿದ್ವಾಂಸರು ಮತ್ತೆ ವಿವೇಚಿಸಬೇಕಾಗುತ್ತದೆ.

ಅನುಬಂಧ

ಕನ್ನಡದಲ್ಲಿ ಸಿಗುವ ಇನ್ನೆರಡು ಉಯ್ಯಲಪದದ ಪದ್ಯಗಳು ಹೀಗಿವೆ

೧. ನಿಲ್ಲದ ಧರೆಯ ನೆಟ್ಟವೆರ
ಡಾಲಿ ಕಲ್ಲಿನ ಕಂಭವು
(ಮೇಲೆ) ಮಾಣಿಕದ ತೊಲೆ[2] ಕೀಲಿಟ್ಟು[3]
ಜಾಣನಾಡಿದನುಯ್ಯಲ |
(ಶಿವದಾಸ ಗೀತಾಂಜಲಿ-ತೂಗಿದೆನು ನಿಜದುಯ್ಯಲ ಪು.೧೭೪)

೨. ಸೀಮೆಯಿಲ್ಲದ ಉಯ್ಯಲ ಸೌರಾಷ್ಟ್ರ
ಸೋಮೇಶ ನಿಮ್ಮ ಶರಣ
ನಾಮವಿಲ್ಲದ ನಾಮದಿಂದೊಲಿದಾಡು
ವಾ ಮಹಾಮಹದಂಗದಿಂ |
(ಆದಯ್ಯನ ಲಘುಕೃತಿಗಳು – ಉಯ್ಯಲಪದ ಪು.೩೩)

[1] ಡಾ. ಎಂ.ಎಂ. ಕಲಬುರ್ಗಿ, ಅಂಶಗಣದ ಇತಿಹಾಸ, ಕರ್ನಾಟಕ ಭಾರತಿ, ೮-೨

[2] ಈ ಪದವನ್ನು ಸಂಪಾದಕರು ತಪ್ಪಾಗಿ ನಾಲ್ಕನೆಯ ಚರಣದ ಆದಿಗೆ ಜೋಡಿಸಿದ್ದಾರೆ. ಇಲ್ಲಿ ಮೂರನೆಯ ಚರಣದ ಅಂತ್ಯಕ್ಕೆ ಹೊಂದಿಸಿಕೊಂಡಿದ್ದೇವೆ.

[3] ಈ ಪದವನ್ನು ಸಂಪಾದಕರು ತಪ್ಪಾಗಿ ನಾಲ್ಕನೆಯ ಚರಣದ ಆದಿಗೆ ಜೋಡಿಸಿದ್ದಾರೆ. ಇಲ್ಲಿ ಮೂರನೆಯ ಚರಣದ ಅಂತ್ಯಕ್ಕೆ ಹೊಂದಿಸಿಕೊಂಡಿದ್ದೇವೆ.