ಮನುಷ್ಯ “ಅವಿಭಕ್ತಪ್ರಜ್ಞೆ”ಯಿಂದ “ವಿಭಕ್ತಪ್ರಜ್ಞೆ”ಯತ್ತ ಸಾಗಿಬಂದಿದ್ದಾನೆ. ಒಂದು ಕಾಲಕ್ಕೆ, ಒಂದು ಊರಿನವರಿಗೆ ಸಾಮೂಹಿಕವಾಗಿ ದುಡಿಯುವದು-ಉಣ್ಣುವುದು, ಅಂದರೆ ಸಾಮೂಹಿಕವಾಗಿ ಬದುಕುವುದು ಸಹಜವೆನಿಸಿದ್ದಿತು. ಈ ಭೂಮಿ, ನಾವು ಬದುಕಲು ಇರುವ ಒಂದು ಅವಕಾಶವೇ ಹೊರತು ನಮ್ಮ ಅಸ್ತಿಯಲ್ಲ, ಅದೇ ರೀತಿ ಸಾಹಿತ್ಯವು ನಮ್ಮ ಅನಿಸಿಕೆಗಳ ಅಭಿವ್ಯಕ್ತಿಯ ಒಂದು ಅವಕಾಶವೇ ಹೊರತು ನಮ್ಮ ಅಸ್ತಿಯಲ್ಲವೆಂಬ ಭಾವಪಾತಳಿಯ ಕಾಲವಿದು. “ವ್ಯಷ್ಟಿ”ಎಂದರೇನು? “ಆಸ್ತಿ” ಎಂದರೇನು? ಎನ್ನುವುದು ಬದುಕಿನಲ್ಲಿ ಉದಯವಾಗದ ಆ ಕಾಲದಲ್ಲಿ ಸಾಹಿತ್ಯವೆನ್ನುವುದು ನಿರ್ದಿಷ್ಟ ವ್ಯಕ್ತಿಯ ರಚನೆಯೆಂಬಂತೆ ಹುಟ್ಟುತ್ತಿರಲಿಲ್ಲ, ನಿರ್ದಿಷ್ಟ ವ್ಯಕ್ತಿಯನ್ನು ಕುರಿತೂ ಹುಟ್ಟುತ್ತಿರಲಿಲ್ಲ; ಅದರ ರಕ್ಷಣೆಯ ಹೊಣೆಯೂ ಸಾಮೂಹಿಕ ವ್ಯಕ್ತಿಗಳದಾಗಿದ್ದಿತೇ ಹೊರತು, ನಿರ್ದಿಷ್ಟ ವ್ಯಕ್ತಿಯದಾಗಿರಲಿಲ್ಲ.

ಈ ಪ್ರಜ್ಞೆಯ ಫಲವಾಗಿ ವ್ಯಕ್ತಿಯೊಬ್ಬನು ಕೃತಿರಚಿಸಿ ಮರೆಯಾಗುತ್ತಲೇ, ಅವನ ಸಾಹಿತ್ಯಕ ಮಾತು, ಸಾಹಿತ್ಯಕ ರಚನೆ ಇತ್ಯಾದಿಗಳು ಬಳಸಿದವನ ಆಸ್ತಿಯಂತೆ ಬದುಕುತ್ತ ಬರುತ್ತಿದ್ದವು. ದಿನಬಳಕೆಯ ಮಾತುಗಳಾದ ಮುಗುಳ್ನಗೆ, ಹೂಬಿಸಿಲು, ಸುಳಿಗಾಳಿ ಇಂಥ ರೂಪಕಗಳನ್ನು ಯಾರು ಸೃಷ್ಟಿಸಿದರು? “ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ” ಎಂಬಂಥ ಪರಮಸತ್ಯಗಳನ್ನು ಸುಂದರವಾಗಿ ಹೇಳಿದವರು ಯಾರು? ಯಾವುದೇ ಜನಾಂಗದಲ್ಲಿ ಕೇಳಿಬರುವ ಜನಪದ ಕಥೆ, ಹಾಡು ಇತ್ಯಾದಿ ದೊಡಡ್ ಸಾಹಿತ್ಯರಾಶಿಯನ್ನು ಸೃಷ್ಟಿಸಿದವರು ಯಾರು? ಎಂಬಿವು ಪ್ರಶ್ನೆಯಾಗಿ ಉಳಿದುದೇ ಇದಕ್ಕೆ ನಿದರ್ಶನ. ಇದನ್ನೇ ಜನಪದತಜ್ಞರು “ಕರ್ತೃ ನಿರಪೇಕ್ಷತತ್ವ”ವೆಂದು ಕರೆಯುತ್ತಾರೆ.

ಈ ಕರ್ತೃ ನಿರಪೇಕ್ಷ ಸಾಹಿತ್ಯದ ಪಾಠವು, ಧ್ವನಿಮಾಧ್ಯಮ ಕಾರಣವಾಗಿ ಅಪ್ರಜ್ಞಾಪೂರ್ವಕ ಬದಲಾವಣೆಗೆ, ವಿಭಿನ್ನ ಪರಿಸರ ಕಾರಣವಾಗಿ ಪ್ರಜ್ಞಾಪೂರ್ವಕ ಬದಲಾವಣೆ (ಭೀಮರತಿಯೆಂಬ ಹೊಳಿ ತಂಪ>ವೇದವತಿಯೆಂಬ ಹೊಳಿ ತಂಪ ಇತ್ಯಾದಿ) ಗುರಿಯಾಗುತ್ತ ಬರುತ್ತದೆ. ಜನಪದ ಕಥಾಸಾಹಿತ್ಯವಂತೂ “ಒಂದಾನೊಂದು ಕಾಲದಲ್ಲಿ, ಒಂದು ಊರಿತ್ತು, ಊರಲ್ಲಿ ಒಬ್ಬ ರಾಜನಿದ್ದ, ರಾಜನಿಗೆ ಒಬ್ಬ ಮಗಳಿದ್ದಳು…” ಎಂಬಂತೆ ಒಂದು ನಿರ್ದಿಷ್ಟ ಕಾಲ, ವ್ಯಕ್ತಿ, ದೇಶ ಇತ್ಯಾದಿಗಳಿಗೆ ಬದ್ಧಗೊಳ್ಳದೆ ಹುಟ್ಟುತ್ತದೆ, ಬೆಳೆಯುತ್ತದೆ. ಅಂದರೆ ಇದು ಯಾವುದೇ ಕಾಲ, ಯಾವುದೇ ಊರು, ಯಾವುದೇ ರಾಜನ ಕಥೆಯಾಗಿ ಮಣಿಯುವ ಲಕ್ಷಣಗಳನ್ನು ಹೊಂದಿರುತ್ತದೆ. ಸಾಲದುದಕ್ಕೆ ಯಾವುದೇ ಕಥೆಗಾರ ತನ್ನ ಅಭಿರುಚಿಗೆ ತಕ್ಕಂತೆ ಕಥೆಯ ಉಪಾಂಗಗಳನ್ನು ವ್ಯತ್ಯಾಸಗೊಳಿಸಬಹುದಾಗಿದೆ. ಇದನ್ನೇ ಜಾನಪದ ವಿದ್ವಾಂಸರು “ಪುನಃಸೃಷ್ಟಿತತ್ವ”ವೆನ್ನುವುದು.

ಹೀಗೆ ಇದನ್ನು ಸೃಷ್ಟಿಸಿದವರು “ನಾವು”, ಪುನಃಸೃಷ್ಟಿಸುತ್ತ ಬಂದವರೂ “ನಾವು” ಎಂಬ ಸಾಮೂಹಿಕ ಭಾವನೆಯ ಆಳದಲ್ಲಿ, ಆ ಸಾಹಿತ್ಯವನ್ನು ಸಾಮೂಹಿಕ ಆಸ್ತಿಯಂತೆ ಸಂರಕ್ಷಿಸುವ ಮುಗ್ಧ ಆಸೆಯೂ ಜೀವಂತವಾಗಿರುತ್ತದೆ. ಈ ಕಾರಣಕ್ಕಾಗಿಯೇ ಸಣ್ಣ-ಪುಟ್ಟ ರಚನೆಗಳು ಹೋಗಲಿ, ಸಾವಿರಾರು ನುಡಿಯ ಜಾನಪದ ಮಹಾಕಾವ್ಯಗಳು ಇಂದಿಗೂ ಬಾಯ ಬದುಕಾಗಿ ಉಳಿದು ಬಂದಿವೆ. ಹೀಗಾಗಿ “ಸಾಮೂಹಿಕ ಸಂರಕ್ಷಣೆ”ಯ ಹೊಣೆಯೂ ಈ ಸಾಹಿತ್ಯದ ಇನ್ನೊಂದು ಲಕ್ಷಣವಾಗಿದೆ. ಒಟ್ಟಾರೆ, ಕರ್ತೃನಿರಪೇಕ್ಷೆ, ಪುನಃಸೃಷ್ಟಿ, ಸಾಮೂಹಿಕ ಸಂರಕ್ಷಣೆ-ಇವುಗಳ ಹಿಂದೆ “ಸಾಮುದಾಯಿಕ ಪ್ರಜ್ಞೆ”ಯೇ ವ್ಯವಹರಿಸುವುದರಿಂದ ಇಂಥ ರಚನೆ ಮಾತ್ರ ನಿಜ ಅರ್ಥದಲ್ಲಿ “ಸಾಮೂಹಿಕ ಆಸ್ತಿ” ಎನಿಸಿಕೊಳ್ಳುತ್ತದೆ.

ಬೇಟೆ ಸಂಸ್ಕೃತಿ-ಪಶುಪಾಲನ ಸಂಸ್ಕೃತಿ ಘಟ್ಟದಲ್ಲಿ ಸಂಚಾರಿ ಜೀವನಕ್ಕೆ ಬದಲು ಸ್ಥಿರಸಮಾಜ ಅಸ್ತಿತ್ವಕ್ಕೆ ಬರುವಲ್ಲಿ, ತಾನು ಹೊರಲು ಸಾಧ್ಯವಿರುವಷ್ಟರ ಬದಲು, ತಾನು ರಕ್ಷಿಸಲು ಸಾಧ್ಯವಿರುವಷ್ಟನ್ನು ಸಂಗ್ರಹಿಸತೊಡಗಿದ. ಇದರಿಂದಾಗಿ ಬದುಕಿನಲ್ಲಿ “ಆಸ್ತಿ” ಕಲ್ಪನೆ ಅಸ್ತಿತ್ವಕ್ಕೆ ಬರತೊಡಗಿತು. ಮುಂದೆ ಅಕ್ಷರಗಳನ್ನು ಕಂಡುಹಿಡಿಯುವಲ್ಲಿ ಸಾಹಿತ್ಯವನ್ನು ಬದ್ಧಗೊಳಿಸಿ ಅದರ ಮೇಲೆ ತನ್ನ ಹಕ್ಕು ಸ್ಥಾಪಿಸುವ ಮನೋಭಾವ ಬೆಳೆಸಿಕೊಳ್ಳತೊಡಗಿದನು. ಈ ಎರಡು ಮನೋಭಾವಗಳಿಂದಾಗಿ (ಆಸ್ತಿಸಂಗ್ರಹ, ಅಕ್ಷರಕಲಿಕೆ) ಸಾಹಿತ್ಯವು ಮೇಲೆ ಹೇಳಿದ ಸಾಮೂಹಿಕ ಆಸ್ತಿಯ ಲಕ್ಷಣಗಳನ್ನು ಒಂದೊಂದಾಗಿ ಕಳಚಿಕೊಳ್ಳುತ್ತ ಅರೆಖಾಸಗಿಯಾಗಿ, ಕೊನೆಯಲ್ಲಿ ಖಾಸಗಿ ಸ್ವರೂಪಕ್ಕೆ ಹೊರಳಿಬಿಟ್ಟಿತು.

ಈ ಸಂದರ್ಭದಲ್ಲಿ ಮೊದಲು ನಮ್ಮ ಗಮನ ಸೆಳೆಯುವುವೆಂದರೆ ವೇದಗಳು ಋಷಿಗಳ ದೈವೀಚಿಂತನೆಯ ಸೃಷ್ಟಿಯೆನಿಸಿರುವ ಇವು ಯಾರ ಹೆಸರೂ ಇಲ್ಲದೆ “ಕರ್ತೃ ನಿರಪೇಕ್ಷ”ನೆಲೆಯಲ್ಲಿ ಬೆಳೆದುಕಂಡವು. ಮುಂದಿನ ದಿನಗಳಲ್ಲಿ ಇವುಗಳನ್ನು ಹಾಳಾಗಲು ಬಿಡಬಾರದೆಂಬ ಪ್ರಜ್ಞೆಯಿಂದ, ಸೃಷ್ಟಿಸಿದ ಋಷಿಗಳ ಹೆಸರು ಬಿಡಲಿ, ಕಷ್ಟಪಟ್ಟು ಸಂಗ್ರಹಿಸಿದ ತಮ್ಮ ಹೆಸರನ್ನೂ ದಾಖಲಿಸದಿರುವುದು, “ಸಾಮೂಹಿಕ ಸಂರಕ್ಷಣೆ”ಗೆ ನಿದರ್ಶನವೆನಿಸಿದೆ. ಆದರೆ ಮೌಖಿಕ ಪರಂಪರೆಯಲ್ಲಿ ಮುಂದುವರಿದಿದ್ದರೂ ಪಾಠಾಂತರಕ್ಕೆ ಗುರಿಯಾಗದೆ ಸಾಗಿಬಂದ ಕಾರಣ, ಇಷ್ಟರಮಟ್ಟಿಗೆ ಇದು ಜಾನಪದದ “ಪುನಃಸೃಷ್ಟಿತತ್ವ”ಕ್ಕೆ ಹೊರತಾಯಿತು.

ಈ ಸಂದರ್ಭದಲ್ಲಿ ತಮಿಳು ಸಂಘಂ ಸಾಹಿತ್ಯ ನೆನಪಾಗುತ್ತದೆ. ಕವಿಗಳು ಬರೆದಿದ್ದ ಪ್ರಾಚೀನ ಬಿಡಿ ಕವಿತೆಗಳು ಹಾಳಾಗುತ್ತಿರುವುದನ್ನು ಗಮನಿಸಿ, ಪ್ರಜ್ಞೆಗಳ ರಕ್ಷಣೆಯಂತೆ ಇವುಗಳ ರಕ್ಷಣೆಯೂ ತಮ್ಮ ಹೊಣೆಯೆಂಬುದನ್ನು, ಇದು ರಾಜ್ಯದ ಆಸ್ತಿಯೆಂಬುದನ್ನು ಅರ್ಥಮಾಡಿಕೊಂಡ ತಮಿಳು ಅರಸರು, ಮದುರೈಯಲ್ಲಿ ವಿದ್ವಾಂಸರ ಸಮಿತಿಯನ್ನು ಸಂಘಟಿಸಿ, ಅವರ ನೆರವಿನಿಂದ ಸಂಘಂ ಸಾಹಿತ್ಯದ ಸಂಕಲನಕಾರ್ಯವನ್ನು ಮಾಡಿಸಿದರು. ಇಲ್ಲಿ ಜನಪದ ಸಾಹಿತ್ಯದ ಮಿಕ್ಕ ಲಕ್ಷಣಗಳಿಲ್ಲವಾದರೂ “ಸಾಮೂಹಿಕ ಸಂರಕ್ಷಣಾಪ್ರಜ್ಞೆ” ವಿಶೇಷವಾಗಿರುವುದನ್ನು ಗಮನಿಸಬೇಕು. ಇಂಥ ಪ್ರಯತ್ನ ಕರ್ನಾಟಕದಲ್ಲಿಯೂ “ಇಡುಕುಂಗಬ್ಬ” ಹೆಸರಿನಲ್ಲಿ ನಡೆದಿರುವ ಸಾಧ್ಯತೆಯಿದೆ.

ಈ ಸಂದರ್ಭದಲ್ಲಿ ಕವಿರಾಜಮಾರ್ಗದ ಸೃಷ್ಟಿ ನಮ್ಮ ಗಮನ ಸೆಳೆಯುತ್ತದೆ. ಅಂದು ಕನ್ನಡ ಭಾಷೆ-ಸಾಹಿತ್ಯಗಳು ಅನ್ಯಭಾಷೆ-ಸಾಹಿತ್ಯಗಳ ಪ್ರವೇಶ ಮತ್ತು ಪ್ರಭಾವಗಳಿಂದಾಗಿ ಹೊಸದಾರಿ ಕಾಣದೆ ತೊಳಲುತ್ತಿದ್ದವು. ಈಗ ಪ್ರಜೆಗಳ ಭೌತಿಕ ಬದುಕಿನ ಜೊತೆ, ಸಾಂಸ್ಕೃತಿಕ ಬದುಕಿನ ಭಾಗವಾಗಿರುವ ಸಾಹಿತ್ಯಕ್ಕೂ ಸರಿಯಾದ ದಾರಿ ತೋರುವುದೂ ರಾಜನ ಕರ್ತೃತ್ವವೆಂದು ನೃಪತುಂಗ ಭಾವಿಸಿದ. ಭಾಷೆ-ಸಾಹಿತ್ಯಗಳನ್ನು ಕವಿಗಳು ತಮತಮಗೆ ತಿಳಿದತ್ತ ಎಳೆದೊಯ್ಯುವುದೆಂದರೆ, ದೇಶವನ್ನೇ ತಮತಮಗೆ ತಿಳಿದತ್ತ ಎಳೆಯದೊಯ್ಯುವುದಾಗಿದೆ ಎಂಬ ನಿಜವನ್ನು ಅರ್ಥಮಾಡಿಕೊಂಡು, “ಪರಮಸರಸ್ವತಿ ತೀರ್ಥಾವತಾರ”ನೆನಿಸಿದ್ದ ತನ್ನ ಅಧ್ಯಕ್ಷತೆಯಲ್ಲಿ ವಿದ್ವಾಂಸರ ಸಮಿತಿಯನ್ನು ಸಂಘಟಿಸಿದ.

ಈಗ ಶ್ರೀವಿಜಯ ರಚಿಸಿದ್ದ “ಕವಿರಾಜಮಾರ್ಗ”ವು ಈ ಆಸ್ಥಾನ ವಿದ್ವಾಂಸರ ಸಾಮೂಹಿಕ ಚರ್ಚೆಯಲ್ಲಿ ಪರಿಷ್ಕೃತಗೊಂಡು, ಕೊನೆಯಲ್ಲಿ ಅರಸನ ಅಧಿಕೃತ “ಅನುಮತಿ”ಯ ಮುದ್ರೆ ಪಡೆದು, “ನೃಪತುಂಗಾನುಮತಮಪ್ಪ ಕವಿರಾಜಮಾರ್ಗ”ವೆಂದು ಮರುನಾಮಕರಣ ಹೊತ್ತು, ಬಿಡುಗಡೆ ಹೊಂದಿತು. ಅದಕ್ಕಾಗಿಯೇ ಕವಿರಾಜಮಾರ್ಗದ ಕರ್ತೃವಿಚಾರ ಇಂದಿಗೂ ಚರ್ಚೆಯ ವಿಷಯವಾಗಿ ಉಳಿದಿದೆ. ಕವಿಗಳೂ ರಾಜನೂ ಸೇರಿ ರೂಪಿಸಿದ (ಕವಿಗಳ+ರಾಜನ-ಮಾರ್ಗ) ಕೃತಿಯೆಂಬುದೇ ಇದಕ್ಕೆ ಸರಿಯಾದ ಉತ್ತರವಾಗಿದೆ. ಇದೇ ರೀತಿ ಬಹುಶಃ ಕರ್ನಾಟಕದ ಒಂದು ಕಾಲಘಟ್ಟದಲ್ಲಿ ಆಸ್ಥಾನದ “ಅನುಮತಿ” ಪಡೆದು ಹೊರಬೀಳುತ್ತಲಿದ್ದ ಗ್ರಂಥಗಳ ಒಂದು ಪರಂಪರೆಯೇ ಅಸ್ತಿತ್ವದಲ್ಲಿದ್ದುದಕ್ಕೆ ಸೂಚನೆಗಳಿವೆ. ೯ನೆಯ ಶತಮಾನದ “ಗಜಾಷ್ಟಕ”ಕ್ಕೆ “ಶಿವಮಾರಮತ”ವೆಂದು, ಋತುಮಾನಶಾಸ್ತ್ರಕ್ಕೆ “ರಟ್ಟಮತ”ವೆಂದು ಕರೆಯಲಾಗಿದೆ. ಇಲ್ಲಿಯ ಶಿವಮಾರ, ರಟ್ಟ (ರಾಷ್ಟ್ರಕೂಟ)ಎಂಬಿವು ನೃಪತುಂಗನಂತೆ ರಾಜರ ಹೆಸರಾಗಿರುವುದನ್ನು ಗಮನಿಸಬೇಕು. ಅಂದರೆ ಶಿವಮಾರಮತ, ರಟ್ಟಮತಗಳಂತೆ ರಾಜರ ಕವಿರಾಜಮಾರ್ಗದ ಇನ್ನೊಂದು ಹೆಸರು “ನೃಪತುಂಗದೇವ (ಅನು)ಮತ”ವೆಂದು ಹೇಳಬಹುದಾಗಿದೆ. ಜನಪದಸಾಹಿತ್ಯದಂತೆ ಶಿಷ್ಟಸಾಹಿತ್ಯದಲ್ಲಿ ಅಂದು ಸಮೂಹಸೃಷ್ಟಿಗೆ ಅವಕಾಶವಿರದಿದ್ದರೂ, ಈ ರೀತಿ ಸಮೂಹ ಪರಿಷ್ಕರಣಕ್ಕೆ ಅವಕಾಶವಿದ್ದಿತೆಂದು ಹೇಳಬಹುದಾಗಿದೆ. ಸಾಹಿತ್ಯವು “ಸಮೂಹ ಆಸ್ತಿ”ಯೆಂಬ ಅಂದಿನ ಭಾವನೆಯೇ ಇದಕ್ಕೆ ಕಾರಣವಾಗಿದೆ.

ಈ ಕರ್ತೃನಿರಪೇಕ್ಷ ಪ್ರಜ್ಞೆಗೆ ಕನ್ನಡದಲ್ಲಿ ಮತ್ತೆ ನಾಂದಿ ಹಾಡಿದವರು ಶರಣರು. ಅವರ ರಚನೆಗಳಿಗೆ ಮುದ್ರಿಕೆಗಳಿವೆಯೇ ಹೊರತು, ಹೆಸರಿಲ್ಲ. ಇವು ಯಾರ ವಚನಗಳೆಂಬುದಕ್ಕೆ ಪಾರಂಪರಿಕವಾಗಿ ಹೇಳುತ್ತ ಬಂದಿರುವುದೆ ಆಧಾರ. ೫೪ ಮುದ್ರಿಕೆಗಳಲ್ಲಿ ಸಿಗುವ ನೂರಾರು ವಚನಗಳ ಕರ್ತೃಯಾರೆಂಬುದು ಇಂದಿಗೂ ನಿಗೂಢವಾಗಿರುವುದನ್ನು ಇಲ್ಲಿ ನೆನೆಯಬೇಕು. ಈ ಪದ್ಧತಿ ಹರಿಹರನಲ್ಲಿ ಮುಂದುವರಿಯಿತು. ಆತ ಯಾವುದೇ ರಗಳೆಗೂ ತನ್ನ ಹೆಸರನ್ನು ಬಳಸಿಲ್ಲ (ನಂಬಿಯಣ್ಣ ರಗಳೆಯನ್ನು ಹೊರತುಪಡಿಸಿ). ಬಸವರಾಜದೇವರ ರಗಳೆಯ ಕರ್ತೃ ಯಾರು? ಎಂಬ ವಿಷಯವಾಗಿ ಪ್ರೊ. ವೆಂಕಣ್ಣಯ್ಯನವರು ನಡೆಸಿದ ಚರ್ಚೆ, ನೀಡಿದ ತೀರ್ಮಾನವನ್ನು ಇಲ್ಲಿ ನೆನೆಯಬಹುದು. ಹಂಪಿಯು ವಿರೂಪಾಕ್ಷನ ರಾಜ್ಯ. ಅಲ್ಲಿ ಯಾರೇ ರಾಜ್ಯವಾಳಲಿ, ಕಾವ್ಯ ಬರೆಯಲಿ, ಅದಕ್ಕೆ ವಿರೂಪಾಕ್ಷನೇ ಒಡೆಯ, ಕರ್ತೃ. ಹೀಗಾಗಿ ವಿಜಯನಗರ ಅರಸರು ತಮ್ಮ ಆದೇಶಗಳ ಕೊನೆಗೆ “ವಿರೂಪಾಕ್ಷ” ಎಂದು ರುಜು ಹಾಕುತ್ತಿದ್ದರು. ಇದೇ ಅರ್ಥದಲ್ಲಿ ಹರಿಹರನು ರಗಳೆಗಳ ಕೊನೆಯ ಕಂದವನ್ನು “ವಿರೂಪಾಕ್ಷ” ಶಬ್ದದೊಂದಿಗೆ ಮುಗಿಸುವ ಉಪಕ್ರಮ ಅನುಸರಿಸಿದ. ಇದು ಅವನ ಮುದ್ರಿಕೆಯೂ ಹೌದು, ನಾಮವೂ ಹೌದು. ಇದನ್ನೇ ದಾಸರು ಕೀರ್ತನ ಸಾಹಿತ್ಯದಲ್ಲಿ ಮುಂದುವರಿಸಿದರು. ಬಳಿಕ “ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ” ಎನ್ನುತ್ತ ಕುಮಾರವ್ಯಾಸನು ವ್ಯಕ್ತಿನಾಮವನ್ನು ಕೈಬಿಟ್ಟು ಕಾವ್ಯನಾಮವನ್ನು ಬಳಸಿದುದಾಗಲೀ, “ವಿವರಿಸುವೋಡಿ ಲೀಲೆಯನು ಹೇಳುವನು ದಿಟ ನಾನಲ್ಲ” ಎನ್ನುತ್ತ ಚಾಮರಸೆನು ವ್ಯಕ್ತಿನಾಮವೇಕೆ ಕಾವ್ಯನಾಮವನ್ನೂ ಕೈಬಿಟ್ಟುದಾಗಲೀ, ಸಾಹಿತ್ಯದ ಮೇಲಿನ ವೈಯಕ್ತಿಕ ಹಕ್ಕನ್ನು ಬಿಟ್ಟುಕೊಡುವ ಉಪಕ್ರಮಗಳೆನಿಸಿವೆ.

ಆಧುನಿಕ ಕಾಲಕ್ಕೆ ಬಂದರೆ ಬೆಟಗೇರಿ ಕೃಷ್ಣಶರ್ಮ ಅವರು “ಆನಂದಕಂದ”, ಸಿದ್ಧಯ್ಯ ಪುರಾಣಿಕ ಅವು “ಕಾವ್ಯಾನಂದ” ಇತ್ಯಾದಿ ಕಾವ್ಯಾನಾಮ ಬಳಸುವುದು, ಈ ನಾಮನಿರಪೇಕ್ಷತೆಯ ಇನ್ನೊಂದು ಬಗೆಯಾಗಿದೆ. ಆದರೆ ಹೆಸರನ್ನು ಮರೆಮಾಚುವ ಈ ಧೋರಣೆಯಲ್ಲಿ ಒಂದು ನಿರ್ದಿಷ್ಟತೆ ಕಂಡುಬರುವುದಿಲ್ಲ. ಏಕೆಂದರೆ “ಅಂಬಿಕಾತನದತ್ತ” ದಲ್ಲಿ ತಾಯಿಯ ಹೆಸರಿನೊಂದಿಗೆ ಕವಿನಾಮ ಮೇಳವಿಸಿದೆ. “ಕುವೆಂಪು” ಎಂಬುದು ಅವರ ಪೂರ್ಣನಾಮದ ಸಂಕ್ಷಿಪ್ತರೂಪವಾಗಿದೆ.

ಹೀಗೆ ಸಾಹಿತ್ಯವೆಂಬುದು ಒಬ್ಬ ಕವಿಯ ಸೃಷ್ಟಿಯಲ್ಲ, ಒಂದು ಸಮಾಜದ ಸೃಷ್ಟಿ. ಇದರ ರಕ್ಷಣೆಯ ಹೊಣೆ ಒಬ್ಬನದಲ್ಲ, ಎಲ್ಲರದು-ಎಂಬ ಧೋರಣೆ ಕ್ರಮೇಣ ಸಡಿಲುತ್ತ ಬಂದಿತು. “ಅಹಂ” ಪ್ರಜ್ಞೆ ಜಾಗೃತವಾಗುತ್ತ ನಡೆಯಿತು. ಆಗ ಇದು ನನ್ನ ರಚನೆಯೆಂಬ ಹಕ್ಕನ್ನು ಇಟ್ಟುಕೊಂಡು, ಮಿಕ್ಕ ಧೋರಣೆಗಳ ವಿಷಯದಲ್ಲಿ ಔದಾರ್ಯ ತೋರುವ ಇನ್ನೊಂದು ಪರಂಪರೆ ನಮ್ಮ ಸಾಹಿತ್ಯದಲ್ಲಿ ಬಹಳ ಹಿಂದೆಯೇ ಬೆಳೆದು ಬಂದಿತು. ಉದಾ. ವ್ಯಾಸಭಾರತ.

“ವ್ಯಾಸ ಮಹರ್ಷಿಕೃತ ಭಾರತ ಮೂಲತಃ ಒಂದು ಸಾವಿರ ಶ್ಲೋಕಗಳ” ಕೃತಿಯಾಗಿದ್ದಿತು. ಈ ಪಠ್ಯ ಕಾಲಕಾಲಕ್ಕೆ ಬೆಳೆಯುತ್ತಲೇ ಹೋಗಿ, ಒಂದು ಲಕ್ಷ ಶ್ಲೋಕ ಮುಟ್ಟಿತು. ಇಲ್ಲಿ ಪಠ್ಯವನ್ನು ಬೆಳೆಸಲು ಸಾರ್ವಜನಿಕರಿಗೆ ಸಮ್ಮತಿ ನೀಡಿ, “ವ್ಯಾಸಕೃತ”ವೆಂದು ಹೆಸರಿನ ಅಧಿಕಾರ ಉಳಿಸಿಕೊಳ್ಳಲಾಗಿದೆ. ಹೀಗೆ ಎಲ್ಲರೂ ಸೇರಿಸುತ್ತ ಬಂದ ಕಾರಣ ಇದು ಸಮಷ್ಟಿಧ್ವನಿಯ ಲಕ್ಷಣ ಪಡೆದಿದೆ. ಇಂಥವುಗಳನ್ನೇ ಪಾಶ್ಚಾತ್ಯ ಕಾವ್ಯ ಮೀಮಾಂಸೆಯಲ್ಲಿ ಎಪಿಕ್‌ಆಫ್‌ಗ್ರೋಥ್‌ಎಂದು ಕರೆಯುವುದು. ಈ ಸಮಷ್ಟಿಪ್ರಜ್ಞೆ ಕಾಲಕ್ರಮದಲ್ಲಿ ವ್ಯಷ್ಟಿಪ್ರಜ್ಞೆಗೆ ತಿರುಗಿದರೂ, ಆಗಾಗ ಅದು ಉಳಿದುಕೊಂಡುದಕ್ಕೆ ಸರ್ವಜ್ಞನ ವಚನಗಳು ಇತ್ತೀಚಿನ ನಿದರ್ಶನವೆನಿಸಿವೆ. ಅವನ ವಚನಕೃತಿ, ಅನ್ಯರು ಪದ್ಯ ಸೇರಿಸುವ ಮೂಲಕ ಬೆಳೆಯುತ್ತ ಬಂದಿತು. ಆದರೆ “ಸರ್ವಜ್ಞ” ಮುದ್ರಿಕೆಯ ಹಕ್ಕನ್ನು ಮಾತ್ರ ಕವಿ ಉಳಿಸಿಕೊಂಡಿದ್ದಾನೆ. ಇಂಥ ಕೃತಿಗಳು (ವ್ಯಾಸಭಾರತ, ಸರ್ವಜ್ಞನ ವಚನ ಇತ್ಯಾದಿ) ಅರೆಖಾಸಗಿ ಆಸ್ತಿಗಳೆಂದೇ ಹೇಳಬಹುದು. ಅಂದರೆ ಇವು ಏಕಕಾಲಕ್ಕೆ ಕರ್ತೃವಿನ ಆಸ್ತಿಯೂ ಹೌದು, ವಾಚಕನ ಆಸ್ತಿಯೂ ಹೌದು. ಇದನ್ನು ಗಮನಿಸಿಯೇ ವ್ಯಾಸ ಒಬ್ಬ ಕವಿಯಲ್ಲ, ಒಂದು ಪರಂಪರೆ. ಸರ್ವಜ್ಞ ಒಬ್ಬ ಕವಿಯಲ್ಲ, ಒಂದು ಪರಂಪರೆ ಎಂದು ವಿದ್ವಾಂಸರು ಹೇಳುವುದು. ಕನ್ನಡದಲ್ಲಿ ಹಕ್ಕುಬಿಟ್ಟುಕೊಡುವ ಇನ್ನೊಂದು ಪದ್ಧತಿಯಿದೆ. ಉದಾ. ಶೂನ್ಯಸಂಪಾದನೆ. ಶರಣರ ವಚನಗಳನ್ನು ಸೃಜನಶೀಲರಾಗಿ ಸಂಯೋಜಿಸಿದ ಪ್ರಥಮಕೃತಿ ಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆ. ಇಲ್ಲಿಯ ಎಲ್ಲ ವಚನಗಳು ಶರಣವು ಮುದ್ರಿಕೆಗೆ ಧಕ್ಕೆ ತರದೆ ಅಂದರೆ ಶರಣರ ಹಕ್ಕು ಉಳಿಸಿಯೇ ಈತ ವಚನಗಳನ್ನು ಬಳಸಿಕೊಂಡು, ಕೃತಿರಚಿಸಿ, ತನ್ನ ಹೆಸರು ಅಂಟಿಸಿದ. ಇದು ಹೋಗಲಿ, ಈ ಮಹಾದೇವಯ್ಯನ ಕೃತಿಯನ್ನು ಮುಕ್ಕಾಲು ಭಾಗ ಬಳಸಿಕೊಂಡು, ಕಾಲುಭಾಗದಷ್ಟು ಶರಣರ ಬೇರೆ ವಚನಗಳನ್ನು ಸೇರಿಸಿ, ಎರಡನೆಯ ಶೂನ್ಯಸಂಪಾದನೆಯನ್ನು ಹಲಗೆಯಾರ್ಯ ರೂಪಿಸಿದ. ಇವನ ಮಾದರಿಯಲ್ಲಿ ಗುಮ್ಮಳಾಪುರ ಸಿದ್ಧಲಿಂಗ, ಇವನ ಮಾದರಿಯಲ್ಲಿ ಗುಳೂರು ಸಿದ್ಧವೀರಣ್ಣ ೩ ಮತ್ತು ೪ನೆಯ ಶೂನ್ಯಸಂಪಾದನೆಯನ್ನು ಸಂಯೋಜಿಸಿದರು. ಇಲ್ಲಿ ಮೊದಲನೆಯ ಶೂನ್ಯ ಸಂಪಾದನೆಕಾರ ತನ್ನ ಪಠ್ಯವನ್ನು ಪರಿಷ್ಕರಿಸಿಕೊಳ್ಳಲು ಸಮ್ಮತಿಸಿದುದಲ್ಲದೆ, ತನ್ನ ಹೆಸರಿನ ಅಧಿಕಾರವನ್ನು ಇಡಿಯಾಗಿ ಬಿಟ್ಟುಕೊಟ್ಟಿದ್ದಾನೆ. ಇವೆಲ್ಲ ಅರೆಖಾಸಗಿ ಆಸ್ತಿ ರೀತಿಯ ರಚನೆಗಳಾಗಿವೆ. ಸಂಸ್ಕೃತದ ರಾಮಾಯಣ>ಕಿಂಚಿತ್‌ರಾಮಾಯಣ, ಕನ್ನಡದ ಏಕೋತ್ತರ ಶತಸ್ಥಲ>ಏಕೋತ್ತರ ಶತಸ್ಥಲಸಾರಾಮೃತಗಳಂಥ ಸಂಗ್ರಹಗಳನ್ನು ಅರೆಖಾಸಗಿ ಆಸ್ತಿಯಲ್ಲಿ ಪರಿಗಣಿಸಬಹುದು.

ಮನುಷ್ಯ ಕ್ರಮೇಣ ಸಮಷ್ಟಿಪ್ರಜ್ಞೆಯಿಂದ ವ್ಯಷ್ಟಿಪ್ರಜ್ಞೆಯ ಪಾತಳಿಗೆ ಸರಿಯುತ್ತ ಬಂದು, ತನ್ನ ಕೃತಿಯು ಇಡಿಯಾಗಿ ತನ್ನ ಖಾಸಗಿ ಆಸ್ತಿಯೆಂದು ಭಾವಿಸತೊಡಗಿದ. ಕಾಳಿದಾಸ, ಪಂಪ, ಕಾರಂತ, ಕುವೆಂಪು, ಬೇಂದ್ರೆ, ಅಡಿಗ, ಭೈರಪ್ಪ ಇತ್ಯಾದಿ ಲೇಖಕರು ತಮ್ಮ ಕೃತಿಗಳ ಸ್ವಾಮ್ಯವನ್ನು ಜಾನಪದ ಕವಿಗಳಂತೆ ಸಮಾಜಕ್ಕೆ ಇಡಿಯಾಗಿ ಬಿಟ್ಟುಕೊಡಲಿಲ್ಲ, ಸರ್ವಜ್ಞನಂತೆ ಅರೆ ಅಧಿಕಾರವನ್ನೂ ಬಿಟ್ಟುಕೊಡಲಿಲ್ಲ. ಇವರೆಲ್ಲ ಕಾವ್ಯ ರಚಿಸುತ್ತಲೇ ಅದರ ಮೇಲೆ ತಮ್ಮ ಹೆಸರು ದಾಖಲಿಸಿದರು. ಕಾಲಗತಿಸಿದಂತೆ ವಸಾಹತುಶಾಹಿ ಕಾಲದಲ್ಲಿ ಅವುಗಳನ್ನು ಸಂಪಾದಾಸಿದರೂ ಕಾಪಿರೈಟ್‌ಮುದ್ರಿಸಿ, ಮೂಲ ಕವಿಗಳ ಕೃತಿ ಹಕ್ಕನ್ನು ತಾವು ಉಳಿಸಿಕೊಂಡು, ವಾಚಕರಿಗೆ ಓದಲು ಮಾತ್ರ ಅವಕಾಶ ಬಿಟ್ಟುಕೊಟ್ಟರು. ಅವುಗಳನ್ನು ಬೇರೆಯವರು ತಿದ್ದುಪಡಿ ಮಾಡುವುದಾಗಲೀ, ತಮ್ಮ ತಮ್ಮ ಹೆಸರಿನಲ್ಲಿ ಭಾಗಶಃ ಅಚ್ಚಿಸಿಕೊಳ್ಳುವುದಾಗಲೀ ಅಪರಾಧವೆಂಬಂಥ ಕಾನೂನುಬದ್ಧ ಕೃತಿಸ್ವಾಮ್ಯ (Copyright) ಉಳಿಸಿಕೊಂಡರು. ಅಂದರೆ ತಾವು ಸಂಪಾದಿಸಿದ ಪ್ರಾಚೀನರ ಕೃತಿ ಹಾಗೂ ತಾವು ರಚಿಸಿದ ಕೃತಿಗಳ ಮೇಲೆ “ಖಾಸಗಿ ಆಸ್ತಿ” ಎಂಬ ಅಧಿಕಾರ ಸ್ಥಾಪಿಸಿಕೊಂಡರು.

ಬಹಳ ಹಿಂದೆಯೆ ಈ ಧೋರಣೆ ಬೆಳೆಯುತ್ತ ಬಂದು, ಸಾಹಿತ್ಯಕ್ಕೆ ಖಾಸಗಿ ಆಸ್ತಿ ಎಲ್ಲ ಲಕ್ಷಣಗಳು ಅಂಟಿಕೊಂಡವು. ಇದು ಬಹಿರಂಗವಾಗಿ ಮಾರಾಟಮಾಡುವ ಖಾಸಗಿ ಆಸ್ತಿಯಲ್ಲವಾಗಿ, ರಹಸ್ಯವಾಗಿ ಖರೀದಿಸುವುದೂ, ಮಾರಾಟಮಾಡುವುದೂ ಕದಿಯುವುದೂ ಜರುಗುತೊಡಗಿತು. ಕನ್ನಡಕ್ಕೆ ಖರೀದಿಸುವುದೂ, ಮಾರಾಟ ಮಾಡುವುದೂ, ಕದಿಯುವುದೂ ಜರುಗತೊಡಗಿತು. ಕನ್ನಡಕ್ಕೆ ಬಂದರೆ ರಾಜರ, ರಾಜಕೀಯ ವ್ಯಕ್ತಿಗಳ ಹೆಸರಿನಲ್ಲಿ ಸಿಗುವ ಚಾವುಂಡರಾಯನ ಚಾವುಂಡರಾಯಪುರಾಣ (ರನ್ನಕೃತ?), ಚಿಕದೇವರಾಯನ ಗೀತಗೋಪಾಲ (ತಿರುಮಲಾರ್ಯ ಕೃತ?)ಇತ್ಯಾದಿಗಳೆಲ್ಲ ಬಹುಶಃ ಕವಿಗಳಿಂದ ಖರೀದಿಸಿದುದಕ್ಕೆ ಉದಾಹರಣೆಗಳಾಗಿವೆ. ಯಾವುದೋ ಲಾಭಕ್ಕಾಗಿ (ರಾಜಋಣ, ಹಣ ಇತ್ಯಾದಿ) ಕವಿಗಳು ರಹಸ್ಯವಾಗಿ ಮಾರಾಟ ಮಾಡಿದ ನಿದರ್ಶನಗಳೆನಿಸಿವೆ. ಕಾವ್ಯದ ವಸ್ತು, ಘಟನೆ, ಪಠ್ಯಭಾಗ, ವಿಚಾರ ಎತ್ತಿಕೊಂಡ ಕೃತಿಚೌರ್ಯಕ್ಕೆ ಅನೇಕ ಉದಾಹರಣೆಗಳು ಇತಿಹಾಸದುದ್ದಕ್ಕೂ ಸಿಗುತ್ತವೆ. ಇಂದಿಗೂ ಸಾಹಿತ್ಯ ಈ ಮೂರು ರಹಸ್ಯ ಕ್ರಿಯೆಗಳಿಗೆ (ಖರೀದಿ, ಮಾರಾಟ, ಕಳವು) ಗುರಿಯಾಗುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಪಿಎಚ್‌.ಡಿ. ಪ್ರಬಂಧಗಳಂಥ ರಚನೆಗಳನ್ನು ಆಸ್ತಿಯಂತೆ ಮಾರಾಟ ಮಾಡುವ –ಖರೀದಿಸುವ ಕ್ರಿಯೆ ಒಂದು ವ್ಯವಸ್ಥೆಯಾಗಿಯೇ ಬೆಳೆಯುತ್ತಲಿವೆ. ಸ್ವಭಾಷೆಗಿಂತ, ಅನ್ಯಭಾಷೆಯಿಂದ ವಸ್ತು ಕದಿಯುವ ವಿಷಯವಾಗಿ ಆಗಾಗ ಕೇಳಿಬರುವ ಸುದ್ದಿಗಳನ್ನು ಇಲ್ಲಿ ನೆನೆಯಬಹುದು. ಪ್ರಸಿದ್ಧ ಲೇಖಕರ ಮರಣೋತ್ತರ ಕಾಲದಲ್ಲಿ, ಅವರ ಸಾಹಿತ್ಯವು ತಮ್ಮ ಆಸ್ತಿಯೆಂಬಂತೆ ಅವರ ಕುಟುಂಬದ ಸದಸ್ಯರು ವರ್ತಿಸುವುದು, ಅಭ್ಯಾಸಿಗಳಿಗೆ ಕಿರಿಕಿರಿ ನೀಡುವುದು, ಇಂದು ತಿಳಿದ ವಿಷಯವೇ ಆಗಿದೆ.

ಹೀಗೆ ಸಾಹಿತ್ಯವು ಸಾಮೂಹಿಕ ಸೃಷ್ಟಿ-ಅರೆಸಾಮೂಹಿಕ ಸೃಷ್ಟಿ-ವೈಯಕ್ತಿಕ ಸೃಷ್ಟಿಯೆಂಬ ಧೋರಣೆಯಲ್ಲಿ ನಿರ್ಮಾಣವಾಗುತ್ತ, ಸಾಮೂಹಿಕ ಆಸ್ತಿ-ಅರೆಖಾಸಗಿ ಆಸ್ತಿ-ಖಾಸಗಿ ಆಸ್ತಿಯೆಂಬಂತೆ ಕ್ರಮೇಣ ಲೇಖನ ಸ್ವಾಮಿತ್ವಕ್ಕೆ ಒಳಗಾಗುತ್ತ ಬಂದಿದೆ.[1]

ಇದರಿಂದಾಗಿ ಅಭಿವ್ಯಕ್ತಿ ಕ್ರಮದಲ್ಲಿಯೂ ಒಂದು ಬಗೆಯ ವ್ಯತ್ಯಾಸ ತಲೆದೋರುತ್ತ ಬಂದಿತು. ಸಮೂಹಸೃಷ್ಟಿಯಾದ ಜನಪದಸಾಹಿತ್ಯದಲ್ಲಿ ಕೇಳಿಬರುತ್ತಲಿದ್ದ ಇಡೀ ಪ್ರದೇಶವೇ ಮಾತಾನಾಡುವಂಥ ಧಾಟಿ-ಧ್ವನಿ ವ್ಯಾಸಭಾರತದಲ್ಲಿ ಇನ್ನೂ ಉಳಿದಿದ್ದಿತಾದರೂ, ಅದು ಕಾಳಿದಾಸನ ಹೊತ್ತಿಗೆ ವ್ಯಕ್ತಿಮಾತಿನ ಧಾಟಿ-ಧ್ವನಿಯಾಗಿ ಕೇಳಿಸತೊಡಗಿತು. ಇವುಗಳನ್ನೇ “ರೀತಿ”ಯಿಂದ “ಶೈಲಿ”ಗೆ ಸರಿದ ಅಭಿವ್ಯಕ್ತಿಕ್ರಮವೆಂದು ಕರೆಯಬಹುದು. ನಮ್ಮ ಪ್ರಾಚೀನ ಕಾವ್ಯ ಮೀಮಾಂಸಕರು ರೀತಿಯನ್ನು ವೈದರ್ಭಿ, ಗೌಡಿ, ಪಾಂಚಾಲಿ ಇತ್ಯಾದಿ ಪ್ರದೇಶನಿಷ್ಠ ನಾಮಗಳಿಂದ ಕರೆದುದು ಇದೇ ಅರ್ಥದಲ್ಲಿ ಎಂದು ಕಾಣುತ್ತದೆ. ಹೀಗೆ “ರೀತಿ”ಯಲ್ಲಿ ದೇಶ-ಕಾಲನಿಷ್ಠ ಸಂದರ್ಭ (Contxt)ವು ನಮ್ಮ ಅನುಭವಕ್ಕೆ ಬರುತ್ತಿದ್ದರೆ, “ಶೈಲಿ”ಯಲ್ಲಿ ಅದು ಮಯವಾಗಿ ಕೇವಲ ಪಠ್ಯ (Text)ಉಳಿದುಬಿಟ್ಟಿರುತ್ತದೆ.

[1] ನಮ್ಮ ಶಿಲ್ಪಜಗತ್ತಿನ ಗೊಮ್ಮಟನಂಥ ವಿಗ್ರಹ, ಮೇಣಬಸದಿಯಂಥ ಗವಿ, ಗೋಳಗುಮ್ಮಟದಂಥ ವಾಸ್ತು ಇತ್ಯಾದಿ ಸಾವಿರಾರು ನಿರ್ಮಾತೃವಿನ ಹೆಸರಿನಲ್ಲದುದು “ಸಮೂಹಪ್ರಜ್ಞೆ”ಯ ದ್ಯೋಕವೇನೋ ಎನಿಸುತ್ತದೆ.