ಸಾಹಿತ್ಯದ ಸಾರ್ಥಕತೆಯಿರುವುದು, ಅದರ ಸರಿಯಾದ ಸಂವಹನದಲ್ಲಿ. ಸರಿಯಾದ ಸಂವಹನವೆಂದರೆ ಪೂರ್ಣಸಂವಹನವೆಂದು ಅರ್ಥ. ಸಾಹಿತ್ಯವು ಓದುವ ಮೂಲಕ, ಕೇಳುವ ಮೂಲಕ ಗ್ರಾಹ್ಯವೆನಿಸುತ್ತದೆ. ಸಾಕ್ಷರತೆ ವರ್ಧಿಸಿದಷ್ಟು ಕೇಳುವ ಸಹೃದಯರ ಸಂಖ್ಯೆ ಕುಸಿದು, (ನಿಶ್ಯಬ್ಧವಾಗಿ) ಓದುವ ಸಹೃದಯರ ಸಂಖ್ಯೆ ಬೆಳೆಯುವುದು ಸಹಜ. ಆದರೆ ಸಾಕ್ಷರತೆ ಕಡಿಮೆಯಾಗಿದ್ದ ಪ್ರಾಚೀನಕಾಲದಲ್ಲಿ ಕೇಳುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆಂದು ಬೇರೆ ಹೇಳಬೇಕಿಲ್ಲ. ಕೇಳುವ ಸಹೃದಯನು ಗದ್ಯಕ್ಕಿಂತ ಪದ್ಯವನ್ನು ಹೆಚ್ಚು ಬಯಸುವುದರಿಂದ, ಪದ್ಯಕಾವ್ಯಗಳ ಸೃಷ್ಟಿಪ್ರಮಾಣ ನಮ್ಮಲ್ಲಿ ಅಧಿಕವಾಯಿತು. ಹೀಗಾಗಿ ನಮ್ಮಲ್ಲಿ ಸಶಬ್ದವಾಗಿ ಓದುವ ಓದುಗಬ್ಬಕಾವ್ಯ (ಚಂಪೂ) ಮತ್ತು ಸಶಬ್ದವಾಗಿ ಹಾಡುವ ಹಾಡುಗಬ್ಬಕಾವ್ಯ (ಷಟ್ಪದಿ ಇತ್ಯಾದಿ) ಪ್ರಕಾರಗಳು ವಿಫುಲ ಪ್ರಮಾಣದಲ್ಲಿ ಹುಟ್ಟಿಬಂದಿವೆ. ಇವುಗಳನ್ನು ಬಿಟ್ಟರೆ ಗದ್ಯವನ್ನು ಸಾಮಾನ್ಯವಾಗಿ ನಿಶ್ಯಬ್ದವಾಗಿಯೇ ಓದುತ್ತಿದ್ದರು.

ನಿಜವಾದ ಕವಿಗಳು ತಮ್ಮ ಸುತ್ತ ಎಂಥ ಸಹೃದಯರಿದ್ದಾರೆ? ಅವರಿಗಾಗಿ ತಮ್ಮ ಕೃತಿಯನ್ನು ಪೂರ್ಣಸಂವಹನಯೋಗ್ಯಗೊಳಿಸುವುದು ಹೇಗೆ? ಎಂಬ ಎರಡು ಅಂಶಗಳ ಕಡೆಗೆ ವಿಶೇಷ ಗಮನಕೊಡುತ್ತಾರೆ.

ಪ್ರಾಚೀನ ಕರ್ನಾಟಕದಲ್ಲಿ ಕೇಳಬಹುದಾದ ಕಾವ್ಯವನ್ನು ಓದುಗಬ್ಬ (ಚಂಪೂ), ಹಾಡಗಬ್ಬ (ಷಟ್ಪದಿ ಇತ್ಯಾದಿ)ವೆಂದು ವರ್ಗೀಕರಿಸಿದ್ದಾರೆ. ಓದುಗಬ್ಬನೇ ಇರಲಿ, ಹಾಡುಗಬ್ಬವೇ ಇರಲಿ, ಅದು ಕಬ್ಬಿನಂತಿರಬೇಕೆ ಹೊರತು ಬಿದಿರಿನಂತಿರಬಾರದು ಎನ್ನುವ ರತ್ನಾಕರವರ್ಣಿಯ ಮಾತು, ಪಠ್ಯದ ಸಂವಹನ ಗುಣವನ್ನು ಕುರಿತು ಹೇಳಿದುದಾಗಿದೆ. “ಕಟ್ಟಿಯುಮೇನೊ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ” ಎನ್ನುವ ಜನ್ನನ ಮಾತು, ಸಂವಹನಗೊಳಿಸಿಕೊಳ್ಳುವ ಸಹೃದಯನ ಮಹತ್ವವನ್ನು ಕುರಿತುದಾಗಿದೆ.

ಸಾಮ್ರಾಟರ ಆಸ್ಥಾನದಲ್ಲಿ ಓದುಗಬ್ಬ, ಸಾಮಾನ್ಯರ ಆವರಣದಲ್ಲಿ ಹಾಡುಗಬ್ಬ ಹುಟ್ಟುತ್ತಿದ್ದು, ೧೨ನೆಯ ಶತಮಾನದ ಹೊತ್ತಿಗೆ ಕರ್ನಾಟಕದಲ್ಲಿ ಸಾಮ್ರಾಟರ ಯುಗ ಮುಗಿದು, ಸಾಮಾನ್ಯರ ಯುಗ ಆರಂಭವಾತ್ತಲೇ ಹಾಡುಗಬ್ಬ ಪರಂಪರೆಯ ರಗಳೆ, ಷಟ್ಪದಿ ಇತ್ಯಾದಿಗಳು ಹುಟ್ಟಿ, ವಿಸ್ತಾರವಾಗಿ ಬೆಳೆದುದನ್ನು ಇಲ್ಲಿ ನೆನೆಯಬೇಕು. ಇದಕ್ಕೆ ವಿರುದ್ಧವೆಂಬಂತೆ ಇಂದು ಸಾಮಾನ್ಯರೂ ಸಾಕ್ಷರರಾಗುತ್ತಲಿರುವುದರಿಂದ, ಗದ್ಯವೇ ಹೆಚ್ಚು ಹುಟ್ಟುತ್ತಲಿದೆ. ಓದುವ ಸಂವಹನ ಪ್ರಕ್ರಿಯೆ ಒಂದಿಷ್ಟು ಕಡಿಮೆಯಾಗಿ, ಕೇಳುವ ಸಂವಹನ ಪ್ರಕ್ರಿಯೆ ಬೆಳೆಯತ್ತಲಿದೆ. ಅಂದರೆ ನಿರಕ್ಷರತೆ ಕಾರಣವಾಗಿ ಅಂದು ಕೇಳುವ ಸಂವಹನ ಅಧಿಕವಾಗಿದ್ದಿತು. ಇಂದು ಜನರು ಸಾಕ್ಷರರಾಗಿದ್ದರೂ, ಬೀಝಿ ಇರುವುದರಿಂದ ಕೇಳುವ ಸಂವಹನ ಅಧಿಕವಾಗುತ್ತಲಿದೆ.

ಕನ್ನಡದ ಓದುಗಬ್ಬ (ಚಂಪೂ), ಹಾಡುಬಗ್ಗ (ಷಟ್ಪದಿ ಇತ್ಯಾದಿ)ಕವಿಗಳು ತಮ್ಮ ರಚನೆ ಸಂವಹನಯೋಗ್ಯವಾಗುವುದರ ಸಲುವಾಗಿ ರಚನೆಯ ಸಂದರ್ಭದಲ್ಲಿ ಯಾವ ವಿಶಿಷ್ಟ ಅಂಶಗಳ ಕಡೆಗೆ ಗಮನಕೊಡುತ್ತಿದ್ದರೆಂಬ ವಿಷಯವಾಗಿ ನಾವು ಅಷ್ಟಾಗಿ ಅಭ್ಯಾಸ ನಡೆಸಿಲ್ಲವೆಂದೇ ತೋರುತ್ತದೆ. ಓದುಗಬ್ಬವನ್ನು, ಅದರಲ್ಲಿಯೂ ಈ ಪ್ರಕಾರಕ್ಕೆ ಪ್ರಮಾಣಭೂತವಾಗಿರುವ ಪಂಪಭಾರತವನ್ನು ಇಲ್ಲಿ ಪರಿಶೀಲನೆಗೆ ಎತ್ತಿಕೊಳ್ಳಬಹುದು.

ತನ್ನ ರಚನೆಯ ಮುಖ್ಯಲಕ್ಷಣವೇನು? ಅದನ್ನು ಸಂವಹನಯೋಗ್ಯವಾಗಿಸುವ ರೀತಿಗಳಾವುವು? ಈ ಕಡೆಗೆ ಪಂಪ ಮೈತುಂಬ ಕಣ್ಣಾಗಿ ಕೆಲಸ ಮಾಡಿದ್ದಾರೆ. ಈತ ಬರೆದುದು “ಚಂಪು”ವೆಂದು ಭಾವಿಸಿ, ಈವರೆಗೆ ವಿದ್ವಾಂಸರು ಚಂಪುವಿನ ಮೂಲವನ್ನು ಸಂಸ್ಕೃತದಲ್ಲಿ ಹುಡುಕುವ ಪ್ರಯತ್ನಮಾಡಿ ವಿಫಲರಾಗಿದ್ದಾರೆ. ಏಕೆಂದರೆ ಪಂಪ ಬಳಸಿದ ಕಾವ್ಯಪ್ರಕಾರವು ಸಂಸ್ಕೃತಮೂಲದ ಚಂಪೂವನ್ನಲ್ಲ, ಕನ್ನಡ ಮೂಲದ ಪ್ರಬಂಧವನ್ನು ೧೩ನೆಯ ಶತಮಾನದಷ್ಟು ಇತ್ತೀಚಿನ “ನಳಚಂಪೂ” ಹಸರನ್ನು ಬಿಟ್ಟರೆ ಪ್ರಾಚೀನ ಕವಿಗಳು ತಮ್ಮ ಕೃತಿಗಳನ್ನು ಚಂಪೂವೆಂದು ಕರೆದೇ ಇಲ್ಲ. ಪಂಪನನ್ನೇ ಕೇಳಿದರೆ “ಪೇಳಲೊಡರ್ಚಿದೆನೀ ಪ್ರಬಂಧಮಂ” ಎಂದು ಹೇಳಿ ‘ಪ್ರಬಂಧ’ ಪದವನ್ನು ಇಲ್ಲಿ ಮತ್ತು ಬೇರೆಡೆಗಳಲ್ಲಿ ಬಳಸಿದ್ದಾನೆ. ಹರಿಹರನ ಗಿರಿಜಾಕಲ್ಯಾಣ ಮಹಾಪ್ರಬಂಧ, ನೇಮಿಚಂದ್ರನ ಲೀಲಾವತಿ ಪ್ರಬಂಧ ಇತ್ಯಾದಿ ಶೀರ್ಷಿಕೆಗಳಲ್ಲಿ ಪ್ರಬಂಧ ಪದವೇ ಬಳಕೆಯಾದುದನ್ನು ಇಲ್ಲಿ ನೆನೆಯಬಹುದು. ಇದೆಲ್ಲವನ್ನು ಗಮನಿಸಿದರೆ ಪಂಪಭಾರತದಂಥ ಕೃತಿಗಳ ಪ್ರಕಾರದ ಮೂಲವನ್ನು ಸಂಸ್ಕೃತದ “ಚಂಪು”ವಿನಲ್ಲಿ ಹುಡುಕದೆ, ಕನ್ನಡದ “ಪ್ರಬಂಧ”ದಲ್ಲಿ ಹುಡುಕಬೇಕೆನಿಸುತ್ತದೆ. ಸಂಸ್ಕೃತದಲ್ಲಿ “ಗದ್ಯಪದ್ಯಮಯೀ ಕಾಚಿತ್‌ಚಂಪೂ” ಎಂದು ಮೊದಲಬಾರಿಗೆ ದಂಡಿ ಚಂಪುವಿನ ಲಕ್ಷಣ ಹೇಳಿದ. ಗದ್ಯ ಮತ್ತು ಪದ್ಯಗಳ ಮಿಶ್ರಣವು ಈ ಪ್ರಕಾರದ ಲಕ್ಷಣವೆಂದು ಅವನ ಅಭಿಪ್ರಾಯ. ಇಲ್ಲಿ ಈ ಮಿಶ್ರಣದ ಪ್ರಮಾಣವನ್ನಾಗಲೀ, ಉದ್ದೇಶವನ್ನಾಗಲೀ ಆತ ಸ್ಪಷ್ಟಪಡಿಸಿಲ್ಲ. ಲಭ್ಯ ಸಂಸ್ಕೃತ ಚಂಪೂಕೃತಿಗಳನ್ನು ನೋಡಿದರೆ ಅಲ್ಲಿ ಏಕತಾನತೆ ಮುರಿಯಲು ಗದ್ಯ, ಪದ್ಯ ಬಳಸಿರುವುದು ಸ್ಪಷ್ಟವಾಗುತ್ತದೆ. ನಾವು ಚಂಪೂವೆಂದು ಕರೆಯುತ್ತಲಿರುವ ಕನ್ನಡ ಕೃತಿಗಳನ್ನು (ಪಂಪಭಾರತ, ಗದಾಯುದ್ಧ) ನೋಡಿದರೆ, ಇವುಗಳ ರಚನೆಯಲ್ಲಿ ಏಕತಾನತೆ ಮುರಿಯುವ ಏಕೈಕ ಉದ್ದೇಶವಿರದೆ, ಬೇರೊಂದು ಮುಖ್ಯ ಉದ್ದೇಶವಿರುವಂತೆ ತೋರುತ್ತದೆ. ಅದು: ಯಕ್ಷಗಾನವೆಂದ ಪ್ರದರ್ಶನರೂಪದ ರಂಗಕಲೆಯು ಈಗಲೂ ಕರಾವಳಿ ಕರ್ನಾಟಕದಲ್ಲಿ ರೂಢಿಯಲ್ಲಿದ್ದು, ಅದನ್ನೇ ಮನೆಯಲ್ಲಿ ಕುಳಿತು ಸಾಹಿತ್ಯಾಸಕ್ತರು ಪಾತ್ರಗಳನ್ನು ಆರೋಪಿಸಿಕೊಂಡು ಸಂವಾದರೂಪದಲ್ಲಿ ಮುನ್ನಡೆಸಿದರೆ, ಅದು “ಪ್ರಸಂಗ” (ತಾಳಮದ್ದಳೆ)ವೆನಿಸಿಕೊಳ್ಳುತ್ತದೆ. ಅಂದರೆ ವೀಕ್ಷಣ ಪಾತಳಿಯ “ಪ್ರದರ್ಶನ”ವು ಶ್ರವಣಪಾತಳಿಯಲ್ಲಿ “ಪ್ರಸಂಗ”ವೆನಿಸಿಕೊಳ್ಳುತ್ತದೆ. ಇದನ್ನೇ ಒಂದಿಷ್ಟು ವಾಚನ ಪಾತಳಿಗೆ ತಂದು “ಪ್ರಬಂಧ”ವನ್ನಾಗಿಸಿದರು, ಪಂಪ ಮೊದಲಾದ ಕನ್ನಡ ಕವಿಗಳು. ಆದುದರಿಂದ ಪಂಪ-ರನ್ನರ ಕೃತಿಗಳ ಚಂಪೂ ಮೂಲವನ್ನು ಸಂಸ್ಕೃತದಲ್ಲಿ ಹುಡುಕಿದುದು ಈವರೆಗೆ ಸಹಜವಾಗಿಯೇ ವ್ಯರ್ಥ ಪ್ರಯತ್ನವೆನಿಸಿತು. ಅಂದರೆ ಕನ್ನಡದ “ಪ್ರಸಂಗ” (ತಾಳಮದ್ಧಳೆ)ದಲ್ಲಿ ಚಂಪೂವಿನ ಮೂಲವಿದೆಯೆಂದು ಇನ್ನು ಮೇಲೆ ಹೇಳಬಹುದಾಗಿದೆ.

ಸಾಮಾನ್ಯವಾಗಿ ಪ್ರಸಂಗದಲ್ಲಿ ಭಾಗವತನು ಕೊಂಡಿಯಾಗಿ ಗದ್ಯದ ಕೆಲಸ ಮಾಡಿದರೆ, ಪಾತ್ರದಾರಿಗಳು ಗದ್ಯಪದ್ಯಬಳಸುತ್ತಾರೆ. ಇದರ ಜೊತೆ ಪಂಪ, ರನ್ನರ ಕೃತಿಗಳನ್ನು ಇಟ್ಟು ನೋಡಿದರೆ ಇವು ಪ್ರಸಂಗದ ಪ್ರತಿಬಿಂಬವೆಂಬಂತೆ ಕಾಣುತ್ತವೆ. “ಕಾವ್ಯೇಷು ನಾಟಕಂ ರಮ್ಯಂ”. ಹೀಗೆ ಕಣ್ಣಿನಿಂದ ನೋಡುವ ರಮ್ಯಸೃಷ್ಟಿಯಾದ ನಾಟಕವನ್ನು, ಕಿವಿಯಿಂದ ಕೇಳಿಸಿಕೊಳ್ಳುವಂತೆ ಪಂಪಾದಿಗಳು ಮಾಡಿದ ಪ್ರಯೋಗದ ಫಲವಾಗಿದೆ, “ಪ್ರಬಂಧ” ಪಂಪಭಾರತ, ಅದಕ್ಕಿಂತ ಗದಾಯುದ್ಧ ಹೆಚ್ಚು ನಾಟಕೀಯವಾಗಿರುವುದನ್ನು ಇಲ್ಲಿ ಗಮನಿಸಬೇಕು. ಗದಾಯುದ್ಧದಲ್ಲಿ ನಾಟಕದ ಭಾಗವಾಗಿರುವ ಕಂಚುಕಿ, ನರ್ಮಸಚಿವ, ಮೇಳದ ಕೆಳದಿ ಪಾತ್ರಗಳು ಬರುವುದನ್ನೂ ಇಲ್ಲಿ ವಿಶೇಷ ಗಮನಿಸಬೇಕು. ಮುಂದಿನ ಕವಿಗಳು ಈ ಪ್ರಕಾರದ ಸಂವಾದತತ್ವವನ್ನು ಕೈಬಿಟ್ಟು ಗದ್ಯಪದ್ಯಗಳ ಮಿಶ್ರಣಕ್ಕೇ ಒತ್ತುಕೊಟ್ಟು, ಅದನ್ನು ಮುಂದುವರಿಸಿದರು. ಇದರಿಂದಾಗಿ ಮೂಲ ಆಶಯವೇ ನಾಶವಾಯಿತು. ಅದೇನೇ ಇದ್ದರೂ ಪಂಪ ಮೊದಲಾದವರು ತಮ್ಮ ಓದುಗಬ್ಬ ರಚನೆಯಲ್ಲಿ ಸಂವಾದವೆಂಬ ಸಂವಹನಗುಣವನ್ನು ದೃಷ್ಟಿಯಲ್ಲಿಟ್ಟುಕೊಂಡರು. ಮುಂದಿನವರು ಮರೆತುಬಿಟ್ಟರು.

ಈ ಪ್ರಸಂಗದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ತಮ್ಮ ಕೃತಿ ಪದ್ಯದಂತೆ ಕೇಳಿಸದೆ, ನಾಟಕದ ಸಂವಾದದಂತೆ ಕೇಳಿಸಬೇಕೆಂಬ ಎಚ್ಚರ. ಹೀಗೆ ಕೇಳಿಸಬೇಕೆಂದರೆ ಪದ್ಯದ ಗೇಯಾಂಶ ಕಡಿಮೆ ಮಾಡಬೇಕಾಗುತ್ತದೆ. ಆದುದರಿಂದ ಇವರು ಹಾಡುಲಯ ಪ್ರಧಾನವಾದ ಅಂಶವೃತ್ತ ಮಾತ್ರಾವೃತ್ತ ಬಳಸದೆ, ಆಡುಲಯ ಪ್ರಧಾನವಾದ ಅಕ್ಷರವೃತ್ತ ಬಳಸಿದರು. ಉದಾ.

ಕುಲಮನೆ ಮುನ್ನಮುಗ್ಗಡಿಪಿರೇಂ ಗಳ,
ನಿಮ್ಮ
ಕುಲಂಗಳ್ಅಂತು ಮಾರ್ಮಲೆವರಂ ಅಟ್ಟೆ ತಿಂಬುವೆ?
ಕುಲಂ
ಕುಲುಮಲ್ತು,
ಚಲಂ
ಕುಲಂ, ಗುಣಂ ಕುಲಂ, ಅಣ್ಮು ಕುಲಂ, ಅಭಿಮಾನಮೊಂದೆ ಕುಲಂ.
ಬಗೆವಾಗಳ್
‌, ಈಗಳ್‌, ಕಲಹದೊಳ್
ಅಣ್ಣ
, ನಿಮ್ಮ ಕುಲಂ ಆಕುಲಮಂ ನಿಮಗುಂಟು ಮಾಡುಗುಂ.

ಇದು ಚಂಪಕಮಾಲಾವೃತ್ತ. ಇಲ್ಲಿಯ ಕಾಕು, ಪ್ರಶ್ನೆ, ಉದ್ಗಾರ ಇತ್ಯಾದಿಗಳಿಂದ ಕೂಡಿದ ಗದ್ಯಲಯವನ್ನು ಗಮನಿಸಬೇಕು. ಈ ಕೃತಿಗಳಲ್ಲಿಯ ಇಂಥ ಪದ್ಯಗಳನ್ನು ಓದುತ್ತಹೋದರೆ ರಾಜಗಾಂಭೀರ್ಯದ ಮಾತುಗಳನ್ನು ಕೇಳುತ್ತ, ರಾಜಕೀಯ ಚಟುವಟಿಕೆಗಳನ್ನೊಳಗೊಂಡ ನಾಟಕವನ್ನು ನೋಡುತ್ತ ಕುಳಿತ ಅನುಭವ ಉಂಟಾಗುತ್ತದೆ. ಇಲ್ಲಿ ದೃಶ್ಯದ ಶ್ರವ್ಯೀಕರಣವೇ ಸಂವಹನದ ಮೂಲತತ್ವವಾಗಿದೆ.

ಈ ದೃಶ್ಯನಿಷ್ಠ ಅಕ್ಷರವೃತ್ತಗಳ ಜೊತೆ ಮಾತ್ರಾವೃತ್ತಗಳಾದ ಕಂದಗಳನ್ನೂ ಅಧಿಕ ಪ್ರಮಾಣದಲ್ಲಿ ಸೃಷ್ಟಿಸಿಕೊಳ್ಳಲಾಗಿದೆ. ಇವುಗಳ ಸೃಷ್ಟಿಯ ಹಿಂದೆ ಎರಡು ಉದ್ದೇಶಗಳಿವೆ. ಒಂದು; ಕಂದ ಗಾತ್ರದಲ್ಲಿ ಸಣ್ಣ ವೃತ್ತವಾಗಿದ್ದು, ಪಾತ್ರ-ಪ್ರತಿಪಾತ್ರಗಳ ವಾದ-ಸಂವಾದಗಳಿಗೆ ವೇಗವನ್ನು ಪೂರೈಸುತ್ತದೆ. ಎರಡು; ಮಾತ್ರಾಛಂದಸ್ಸಿನಲ್ಲಿ ೫ ಮಾತ್ರೆಯ ಗಣವು ಲಯಪ್ರಧಾನ, ೩ ಮಾತ್ರೆಯ ಗಣವು ತಾಳಪ್ರಧಾನವಾಗಿದ್ದರೆ, ಕಂದದ ೪ ಮಾತ್ರೆಯ ಗಣವು ಆಡುಮಾತಿಗೆ ಸಮೀಪವಾಗಿದೆ. ಆದುದರಿಂದ ಇದರ ಸೃಷ್ಟಿಗೆ ಹೆಚ್ಚು ಅವಕಾಶ ಕೊಡಲಾಯಿತು.

ಹೀಗೆ ಪದ್ಯಪ್ರಸಂಗದಲ್ಲಿ ಗದ್ಯಕ್ಕೂ ಉರುಳದ “ಗಪದ್ಯ” ಶೈಲಿಯನ್ನು ಬಳಸಿದ ಈ ಕವಿಗಳು,. ಪಾತ್ರಗಳ ಮಾತಿನ ಕೊಂಡಿರೂಪದ ಗದ್ಯ ಪ್ರಸಂಗದಲ್ಲಿಯೂ ಅಂಥ “ ಗಪದ್ಯ” ಶೈಲಿಯನ್ನು ಬಳಸಿದರು.[1] ಅಂದರೆ ಪದ್ಯದಿಂದ ಗದ್ಯಕ್ಕೆ ಬಂದರೆ ನೀರಸವೆನಿಸಬಾರದೆಂದೂ, ಅವುಗಳ ಅಂತರ ಅಧಿಕವೆನಿಸಿ ಸಂವಹನ ದೃಷ್ಟಿಯಿಂದ ಆಭಾಸವೆನಿಸಬಾರದೆಂದೂ ಬಯಸಿ, ಪದ್ಯವನ್ನು ಗದ್ಯದ ಹತ್ತಿರ ತಂದ ಅವರು, ಗದ್ಯವನ್ನು ಪದ್ಯದ ಹತ್ತಿರ ಒಯ್ದರು. ಎಷ್ಟೋ ಸಲ ಪದ್ಯವೋ, ಗದ್ಯವೋ ಎಂಬ ಸಂದೇಹ ಬರುವಷ್ಟು, ಎರಡನ್ನೂ ಹತ್ತಿರ ತಂದು ಲಯದಲ್ಲಿ ಸಮತೋಲನವನ್ನು ಕಾಯ್ದುಕೊಂಡರು. ಆದಿಪುರಾಣ(೧೬-೭೫)ದ

ಭರತಯತಿಪತಿಯ ತದನಂ
ತರದೊಳ್
ತದ್ವೃಷಭೆಸೇನಗಣನಾಥ ಪುರ |
ಸ್ಸರ
ಪುರತನಯರ್ಕ್ರಮದೊಳ್
ಪರಮಸುಖಾಸ್ಪದಮನನಿಬರುಂ
ಕೈಕೊಂಡರ್‌||

ಈ ಪದ್ಯವನ್ನು ಕೆಲವು ಹಸ್ತಪ್ರತಿಗಳಲ್ಲಿ “ವಚನ”ವೆಂದೂ, ಕೆಲವು ಹಸ್ತಪ್ರತಿಗಳಲ್ಲಿ “ಕಂದ”ವೆಂದೂ ಹೆಸರಿಸಿದುದನ್ನು ಇಲ್ಲಿ ಗಮನಿಸಬೇಕು. ಇದೆಲ್ಲ “ಓದುಗಬ್ಬ”ವು ಸಂವಹನವಾಗುವಂತೆ ಅವರು ಮಾಡಿದ ತಂತ್ರವಾಗಿದೆ. ಇದಕ್ಕೆ ಹೆಚ್ಚಿನದಾಗಿ “ದೇಸಿಯೊಳ್‌ಪುಗುವುದು” ಎಂಬ ಪ್ರಜ್ಞೆಯಿಂದ ಕಾವ್ಯವನ್ನು ದೇಶದ ಹತ್ತಿರ ಇನ್ನೂ ಒಯ್ಯುವುದರ ಸಲುವಾಗ ಈ ಕವಿಗಳು ಕಾಕು, ಪ್ರಶ್ನೆ ಉದ್ಗಾರಗಳಿಂದ ಕೂಡಿದ ಆಡುಮಾತಿನ

ಗುಣವನ್ನು ಭಾಷೆಯಲ್ಲಿ ಉಳಿಸಿಕೊಂಡರು. ಇದಕ್ಕೆ “ಮೃಗಯಾವ್ಯಾಜದಿನೊರ್ಮೆ…..”, “ಕೇಳಿದರೆ ಕಂಕಭಟ್ಟನೆ ವಲಂ”, “ಕಟ್ಟಿದ ಪಟ್ಟಮೆ ನೆಟ್ಟನೆ ಸರವಿಗೆ ದೊರೆ….” ಇತ್ಯಾದಿ ಪದ್ಯಗಳನ್ನು ಗಮನಿಸಬೇಕು.

* * *

ಇನ್ನು“ಹಾಡುಗಬ್ಬ”ಕ್ಕೆ ಬಂದರೆ, ಇಲ್ಲಿಯೂ ಪ್ರಶ್ನೆ, ಉದ್ಗಾರ, ಸಂವಾದ ಇತ್ಯಾದಿಗಳು, ಹೆಚ್ಚಿನದಾಗಿ ಸಂಗೀತದ ಸಹಯೋಗವು ಅದಕ್ಕೆ ಇನ್ನೂ ದೊಡ್ಡ “ಸಂವಹನಯೋಗ್ಯ” ಅವಕಾಶವಾಗಿ ದಕ್ಕಿತು. ಷಟ್ಪದಿಗೆ ಬಂದರೆ ವಾರ್ಧಕದ ವಿಷಯದಲ್ಲಿ ರಾಘವಾಂಕನ ಶೈಲಿಗಿಂತ ಲಕ್ಷ್ಮೀಶನ ಶೈಲಿ, ಭಾಮಿನಿಯ ವಿಷಯದಲ್ಲಿ ಕುಮಾರವ್ಯಾಸನ ಶೈಲಿಗಿಂತ ಚಾಮರಸನ ಶೈಲಿಗಳು ತುಂಬ ಲಲಿತವಾಗಿವೆ. ಈ ಲಾಲಿಲತ್ಯಕ್ಕೆ ಯೋಗ್ಯವಾಗುವಂತೆ ಗಣರಚನೆ, ಗಣಸಂಯೋಜನೆ ಮಾಡಿದ ಶ್ರೇಯಸ್ಸು ಇವರದಾಗಿದೆ. ಹೀಗಾಗಿ ಇವರ ಕೃತಿಗಳು ಸಂಗೀತದ ನಾದಗುಣದಿಂದ ತುಳುಕುತ್ತವೆ. ಲಕ್ಷ್ಮೀಶನ

ಶ್ರೀಮಧುವಿ | ನಂಬಕ | ಕೋರಕಂ | ಪೊರೆಯೆ |
ಕ್ತಾವಳಿಯ
| ಹೃತ್ಕುಮುದ | ಕೋರಕಂ | ಬಿರಿಯೆ  ಜಗ |
ತೀವಲಯ
| ದಮಲಸಾ | ಭಾಗ್ಯರ | ತ್ನಾಕರಂ | ಪೆರ್ಚಿನಿಂ | ಮೇರೆವರಿ ||ಯೆ||

ಈ ಅರ್ಧಪದ್ಯದಲ್ಲಿ- ೭೨ ಮಾತ್ರೆಗಳಲ್ಲಿದ್ದು ಇವುಗಳಲ್ಲಿ ೩೨ ಮಾತ್ರೆಗಳಷ್ಟು ೧೬ ದೀರ್ಘಗಳಿವೆ. ಅಂದರೆ ೩ ಚರಣಗಳಲ್ಲಿ ೧೬ ದೀರ್ಘಗಳಿವೆ. ಇನ್ನೂ ವಿಶೇಷವೆಂದರೆ ಸಾಮಾನ್ಯವಾಗಿ ಎಲ್ಲ ಗಣಗಳು ದೀರ್ಘದಿಂದ ಆರಂಭವಾಗಿವೆ. ಇದರಿಂದಾಗಿ ಲಾಲಿತ್ಯ ಸಾಧ್ಯವಾಗಿದೆ. ಕವಿಗೆ ತನ್ನ ಮುಂದೆ ಓದುವ ಕಣ್ಣುಗಳಿಲ್ಲ, ಕೇಳುವ ಕಿವಿಗಳಿವೆಯೆಂಬ ಎಚ್ಚರ ಕಾರಣವಾಗಿ, ಇಂಥ ಪದ್ಯಗಳನ್ನೇ ಹೆಚ್ಚು ಕಟ್ಟಿದ್ದಾನೆ. ಹೀಗೆ ಹಾಡಲು ಯೋಗ್ಯವಾದ ರಚನೆಗಳಾಗಿರುವುದರಿಂದ, ಕನ್ನಡದ ಎಲ್ಲ ಷಟ್ಪದಿಕಾವ್ಯಗಳ ಪ್ರತಿಯೊಂದು ಸಂಧಿಯ ತಲೆಯ ಮೇಲೆ ರಾಗ, ತಾಳ ಸೂಚನೆ ಕಂಡುಬರುತ್ತದೆ. ಆ ಕಾಲದಲ್ಲಿ ಕಾವ್ಯದ ಬೇರೆ ಬೇರೆ ಸಂಧಿಗಳನ್ನು ಅವುಗಳ ಸನ್ನಿವೇಶಕ್ಕೆ ತಕ್ಕಂತೆ ಬೇರೆ ಬೇರೆ ರಾಗಗಳಲ್ಲಿ ಹಾಡುತ್ತಿದ್ದರೆಂದು ಇದರಿಂದ ವ್ಯಕ್ತವಾಗುತ್ತದೆ. ಇಂಥ ಪದ್ಯಗಳನ್ನು ಪೂರ್ಣಸಂವಹನಗೊಳಿಸುವುದೆಂದರೆ ಅವುಗಳ ಅರ್ಥ ಕೇಳುಗನಿಗೆ ಪೂರ್ಣ ಹೃದ್ಯಗೊಳಿಸುವುದು. ಅಂದರೆ ಹಾಡುವ ಮೂಲಕ ಅದನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವುದು. ಹೀಗೆ ಮಾಡದೆ ಕೇವಲ ಮೌನವಾಗಿ ಓದಿದರೆ, ವೇದಮಂತ್ರ ನಮಾಜಗಳನ್ನು ಕಿವಿಯಾರೆ ಕೇಳದೆ; ಮೌನವಾಗಿ ಓದಿದಂತಾಗುತ್ತದೆ.

ಷಟ್ಪದಿ ಕವಿಗಳಲ್ಲಿ ರಾಘವಾಂಕ, ಕುಮಾರವ್ಯಾಸರದು ವಾಕ್ಯನಿಷ್ಠಶೈಲಿ. ಕುಮಾರವ್ಯಾಸನ “ಅರಸುಗಳಿಗಿದು ವೀರ, ದ್ವಿಜರಿಗೆ ಪರಮವೇದದ ಸಾರ” ಎಂಬ ಪದ್ಯ ಆರು ಚರಣಗಳಲ್ಲಿ ವಿನ್ಯಾಸಗೊಂಡಿದ್ದರೂ, ಇಲ್ಲಿ ಎಂಟು ವಾಕ್ಯಗಳಿವೆ. ಗಮಕ ಸಂದರ್ಭದಲ್ಲಿ ಎಂಟು ಸಲ ನಿಲ್ಲುವುದು ತುಂಬ ಪರಿಣಾಮಕಾರಿಯೆನಿಸುತ್ತದೆ. ರಾಘವಾಂಕನಂತೂ ತಾನು ಹಿಂದೆ ಸರಿದು, ಮಾತನಾಡಲು ಪಾತ್ರಗಳನ್ನೇ ಮುಂದೆ ಬಿಟ್ಟು, ಏರ್ಪಡಿಸುವ ಸಂವಾದಶೈಲಿ ಗಮಕಕ್ಕೆ ಹೇಳಿ ಮಾಡಿಸಿದಂತಿದೆ. ಇವೆಲ್ಲ ತಮ್ಮ ರಚನೆಗಳನ್ನು ಸಂವಹನಯೋಗ್ಯಗೊಳಿಸುವೆ ಉಪಕ್ರಮಗಳಾಗಿವೆ.

ಕಳೆದ ಅನೇಕ ಶತಮಾನಗಳಿಂದ ಈ ಕಾವ್ಯಗಳನ್ನು “ಸಂಗೀತ” “ಗಮಕ” ಮಾಧ್ಯಮಗಳಿಂದ ಸಂವಹನಗೊಳಿಸುತ್ತ ಬರುತ್ತಿದ್ದರು. ಕಾವ್ಯಕ್ಕೂ, ಸಹೃದಯರಿಗೂ ನ್ಯಾಯ ಒದಗಿಸುವ ರೀತಿಯಲ್ಲಿ ಸಂವಹನಕ್ರಿಯೆ ಜರುಗುತ್ತಲಿದ್ದಿತು. ಕವಿಯ ಉದ್ದೇಶಕ್ಕೆ, ಸಹೃದಯನ ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಈ ಕ್ರಿಯೆ ಈ ಕ್ರಿಯೆ ನಡೆಯುತ್ತಲಿದ್ದಿತು. ಇದಕ್ಕೆ ಗಮಕಿ ಅಥವಾ ಸಂಗೀತಜ್ಞನ ಮುಖದ ಹಾವ-ಭಾವ (ಸಾತ್ವಿಕ). ಕರ-ಶರೀರಗಳ ವಿನ್ಯಾಸ (ಆಂಗಿಕ), ವೇದಿಕೆಯ ವ್ಯವಸ್ಥೆ-ಗಮಕಿ ಮತ್ತು ಸಂಗೀತಜ್ಞರ ವೇಷಭೂಷಣ (ಆಹಾರ್ಯ)ಗಳು ಪೂರಕವಾಗಿ, ಮುಖಾಮುಖಿಯಲ್ಲಿ ಸಂವಹನದ ಪರಿಣಾಮ ವರ್ಧಿಸುತ್ತಿದ್ದಿತು.

ಆದರೆ ಇಂಗ್ಲಿಷ್‌ರ ಸಂಪರ್ಕದಿಂದಾಗಿ ಕರ್ನಾಟಕದಲ್ಲಿ ಸಾಕ್ಷರತೆ ವರ್ಧಿಸುತ್ತ ಹೋಗುವಲ್ಲಿ, ಕವಿಗಳು ಶ್ರವಣಪಾತಳಿಗಾಗಿ ಬರೆದ ಈ ಕೃತಿಗಳು ಕ್ರಮೇಣ ವಾಚನಪಾತಳಿಯ ವಸ್ತುಗಳಾದವು. ಈ ಪಾತಳಿಪಲ್ಲಟ ಕಾರಣವಾಗಿ ಕೃತಿಗಳ ಆಸ್ವಾದನೆಯ ಪರಿಣಾಮದಲ್ಲಿಯೂ ಪಲ್ಲಟ ಸಂಭವಿಸಿತು. ಹೀಗೆ ಒಂದು ಪಾತಳಿಯಲ್ಲಿ ಹುಟ್ಟಿದ ಸಾಹಿತ್ಯವನ್ನು ಇನ್ನೊಂದು ಪಾತಳಿಯಲ್ಲಿಟ್ಟು ಆಸ್ಪಾದಿಸುವುದಾಗಲೀ, ವಿಮರ್ಶಿಸುವುದಾಗಲೀ ಅವುಗಳಿಗೆ ಮಾಡುವ ಅನ್ಯಾಯವೇ ಸರಿ. ಈ ಅನ್ಯಾಯದಿಂದ ನಮ್ಮ ಕೃತಿಗಳನ್ನು ಮುಕ್ತಮಾಡುವುದೆಂದರೆ, ಇವುಗಳನ್ನು ಮತ್ತೆ ಶ್ರವಣಮಾಧ್ಯಮದಲ್ಲಿಯೇ ಸಂವಹನಗೊಳಿಸುವುದು. ಹೀಗೆ ಮಾಡದಿದ್ದರೆ ಯಕ್ಷಗಾನ ಕೃತಿಗಳನ್ನು ರಂಗದ ಮೇಲೆ ನೋಡಿ ವಿಮರ್ಶೆಮಾಡುವುದನ್ನು ಬಿಟ್ಟು, ಪುಸ್ತಕದಲ್ಲಿ ಓದಿ ವಿಮರ್ಶೆ ಮಾಡಿದಂತೆ, ಜನಪದ ಹಾಡುಗಳನ್ನು ಕೇಳಿ ವಿಮರ್ಶೆ ಮಾಡುವುದನ್ನು ಬಿಟ್ಟು, ಓದಿ ವಿಮರ್ಶೆಮಾಡಿದಂತಾಗುತ್ತದೆ. ಆದುದರಿಂದ ನಾವು ಕಳೆದುಕೊಂಡ ಶ್ರವಣಪಾತಳಿಯನ್ನು ಪುನರುಜ್ಜೀವನಗೊಳಿಸಿದರೆ, ನಮ್ಮ ಕಾವ್ಯಗಳಿಗೆ, ಅದರಲ್ಲಿಯೂ ಹಾಡುಗಬ್ಬ ಕಾವ್ಯಗಳಿಗೆ ಆಗುತ್ತಲಿರುವ ಅನ್ಯಾಯವನ್ನು ನಿವಾರಿಸಿದಂತಾಗುತ್ತದೆ.

ಇಲ್ಲಿ ಹೇಳಬೇಕಾದ ಇನ್ನೊಂದು ಅಂಶವೆಂದರೆ, ವಾಚನಾಸಂಸ್ಕೃತಿಯ ಆಂಗ್ಲ ವಿದ್ವಾಂಸರಾದ ಮೊಗ್ಲಿಂಗ್‌ಮೊದಲಾದವರು ಹಾಡುಗಬ್ಬಗಳನ್ನು ಪರಿಷ್ಕರಿಸಿ ಪ್ರಕಟಿಸುವಲ್ಲಿ ಶ್ರಣವಸಂಸ್ಕೃತಿಯ ಸೂಚಕಗಳಾದ, ಪ್ರತಿಯೊಂದು ಸಂಧಿಯ ತಲೆಯ ಮೇಲಿನ ರಾಗ, ತಾಳಗಳನ್ನು ತೆಗೆದು ಹಾಕಿದರು. ಅವರನ್ನು ನಾವು ಕಣ್ಣುಮುಚ್ಚಿ ಅನುಸರಿಸುವ ತಪ್ಪು ಮಾಡಿದೆವು. ಈ ತಪ್ಪನ್ನು ತಿದ್ದಿಕೊಳ್ಳುವ ರೀತಿಯಲ್ಲಿ ಇನ್ನು ಮುಂದೆ ಷಟ್ಪದಿ, ಸಾಂಗತ್ಯಗಳಂತಹ ಹಾಡುಗಬ್ಬಗಳ ಸಂಧಿಯ ಆರಂಭದ ರಾಗ, ತಾಳಗಳನ್ನು ಉಳಿಸಿಕೊಂಡು ಪರಿಷ್ಕರಣ ಮಾಡಬೇಕು. ಆಯಾ ಕವಿಗಳ ಅಪೇಕ್ಷೆಗೆ ತಕ್ಕಂತೆ ತಾಳಬದ್ಧವಾಗಿ, ಗಮಕಬದ್ಧವಾಗಿ ಸಂವಹನಗೊಳಿಸಬೇಕು.

[1] ಇದನ್ನು ಗದ್ಯವೆಂದು ಕರೆಯೆ, ವಚನವೆಂದು ಕರೆದುದು ಬಹುಶಃ ಆಡುಮಾತು ಅರ್ಥದಲ್ಲಿ.